User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ವಿಶೇಷ ವರದಿ
ಅಸಹನೆಯ ಅಗ್ನಿಕುಂಡದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ

ಧರ್ಮಕ್ಕೆ ಸಂಬಂಧಪಟ್ಟ ಸಣ್ಣ ವಿಷಯ ಕೂಡಾ ತೀರಾ ವಿಕೋಪಕ್ಕೆ ಕಾರಣವಾಗುವ ಪರಿಪಾಠ ಭಾರತಕ್ಕೆ ಅಪಾಯಕಾರಿ ಎನ್ನುತ್ತಾರೆ ಬಿ.ಎಸ್. ನಾರಾಯಣ ಸ್ವಾಮಿ

ಕಳೆದ ವಾರ ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರು ವಿಶ್ವವಿಖ್ಯಾತ ವ್ಯಕ್ತಿಗಳು ಭಾರತೀಯ ಮಾಧ್ಯಮಗಳ ತುಂಬಾ ರಾರಾಜಿಸಿದರು. ಒಬ್ಬರು ವಿಶಿಷ್ಟ ಶೈಲಿಯ ಚಿತ್ರ ಕಲಾವಿದ ಎಂ.ಎಫ್. ಹುಸೇನ್; ಮತ್ತೊಬ್ಬರು ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್. ಒಬ್ಬರು ಹಿಂದೂ ಧಾರ್ಮಿಕ ಸಂಘಟನೆಗಳ ಅಸಹನೆಗೆ ತುತ್ತಾಗಿ ಭಾರತ ತ್ಯಜಿಸಿದವರು; ಮತ್ತೊಬ್ಬರು ತಮ್ಮದೇ ಮುಸ್ಲಿಂ ಧಾರ್ಮಿಕ ಸಂಘಟನೆಗಳ ಅಸಹನೆಗೆ ಗುರಿಯಾಗಿ ಆಶ್ರಯ ಬಯಸಿ ಭಾರತ ಪ್ರವೇಶಿಸಿದವರು. ಈ ಎರಡೂ ಸಂಗತಿಗಳಲ್ಲಿದ್ದ ಸಾಮಾನ್ಯ ಅಂಶ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟಿದ್ದೇ.

ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿದರೆಂಬ ಕಾರಣಕ್ಕೆ ಕೆಲ ಹಿಂದೂ ಸಂಘಟನೆಗಳು ನಡೆಸಿದ ವ್ಯಾಪಕ ಪ್ರತಿಭಟನೆ, ಒಡ್ಡಿದ ಬೆದರಿಕೆಗಳಿಂದ ಹುಸೇನ್ ಎಂಬ ಹಿರಿಯಜ್ಜ ಸಾಕಷ್ಟು ನೊಂದಿದ್ದರು. ಅವರು ದೇಶದ ಗಡಿ ದಾಟಿ ದಶಕದ ಮೇಲಾಯಿತು. ಇತ್ತೀಚೆಗೆ ಕತಾರ್ ರಾಷ್ಟ್ರ ಈ ಹಿರಿಯ ಕಲಾವಿದನಿಗೆ ಪೌರತ್ವ ನೀಡಲು ಮುಂದಾಗಿದ್ದು ಮುಖ್ಯ ಸುದ್ದಿಯಾಯಿತು. ಹುಸೇನ್‌ರನ್ನು ಬಹುತೇಕ ಮರೆತೇಬಿಟ್ಟಿದ್ದ, ಅವರ ಮೇಲೆ ದಾಳಿಗಳಾಗುತ್ತಿದ್ದ ಸಂದರ್ಭದಲ್ಲಿ ತಣ್ಣಗೆ ಸಿಂಪಥಿ ವ್ಯಕ್ತಪಡಿಸುತ್ತಿದ್ದವರೆಲ್ಲಾ ಹುಸೇನ್ ಭಾರತೀಯ ಪೌರತ್ವ ತ್ಯಜಿಸಿ ಕತಾರ್ ಪೌರತ್ವ ಪಡೆಯಲು ಮುಂದಾಗುವ ಸಂದರ್ಭ ಬಂದಾಗ ಮಾತ್ರ ಬಾಯಿಬಿಚ್ಚತೊಡಗಿದರು. ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಕೂಡಾ ಹುಸೇನ್ ಭಾರತಕ್ಕೆ ಹಿಂದಿರುಗುವುದಾದರೆ ಸೂಕ್ತ ರಕ್ಷಣೆ ಒದಗಿಸುವುದಾಗಿ ಭರವಸೆ ನೀಡಿದರು. ಆದರೆ ತನಗೆ ಒಲಿದ ಕಲೆಯಲ್ಲಿ ಅಭಿವ್ಯಕ್ತಿಪಡಿಸಿದ ತಪ್ಪಿಗೆ ಪ್ರಾಣಬೆದರಿಕೆ ಎದುರಿಸಿದಾಗ ಆ ಕಲಾವಿದ ಅನುಭವಿಸಿದ ನೋವು ಮಾತ್ರ ಯಾರಿಗೂ ನೆನಪಾಗಲಿಲ್ಲ.

ಇನ್ನು ಎರಡನೇ ಪ್ರಕರಣಕ್ಕೆ ಬಂದರೆ ಕನ್ನಡ ದಿನಪತ್ರಿಕೆಯೊಂದರಲ್ಲಿ ಭಾಷಾಂತರಗೊಂಡು ಪ್ರಕಟವಾದ ತಸ್ಲೀಮಾ ನಸ್ರೀನ್ ಅವರ ಲೇಖನದ ವಿರುದ್ಧ ನಡೆದ ಹಿಂಸಾಚಾರ ಶಾಂತಿಪ್ರಿಯ ಕರ್ನಾಟಕದ ಮಟ್ಟಿಗೆ ಹೊಸದೇ. ಶಿವಮೊಗ್ಗ, ಹಾಸನದಲ್ಲಿ ಮುಸ್ಲಿಂ ಸಮುದಾಯದ ಪ್ರತಿಭಟನೆ, ಕಲ್ಲು ತೂರಾಟ, ನಡೆದು ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿಬಿಟ್ಟಿತು. ನಿಷೇಧಾಜ್ಞೆಯ ಬಂದೂಕಿನ ನಡುವೆ ರುದ್ರಮೌನ ಮಡುಗಟ್ಟಿತು. ಅದೇ ವೇಳೆ ಮಂಗಳೂರಿನ ಎರಡು ಪತ್ರಿಕಾ ಕಚೇರಿಯ ಮೇಲೂ ದಾಳಿ ನಡೆದವು. ಒಟ್ಟಾರೆ ಗಲಭೆಯಲ್ಲಿ ಇಬ್ಬರು ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡರು. ಕೋಟ್ಯಂತರ ಮೌಲ್ಯದ ಖಾಸಗಿ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿ ಭಸ್ಮವಾಯಿತು. ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆಗಳು ಮುಂದೆ ಹೋದವು; ರಾಜ್ಯದ ವಿದ್ಯುತ್ ಸಮಸ್ಯೆ, ನೈಸ್ ವಿವಾದ, ಬಜೆಟ್ ಬಿಸಿ... ಇತ್ಯಾದಿ ಪ್ರಮುಖ ವಿಷಯಗಳ ಬದಲಿಗೆ 'ಪರ್ದಾ' ಸುದ್ದಿಯೇ ವಿಧಾನಮಂಡಲದಿಂದ ಹಿಡಿದು ಪಡಸಾಲೆವರೆಗೆ ರಾರಾಜಿಸಿತು. ಅದರಲ್ಲೂ ಸೌಹಾರ್ದತೆಯ ಸಂಕೇತವಾದ ಹೋಳಿ ಹಬ್ಬದಂದೇ ಗಲಭೆ ನಡೆದದ್ದು ವಿಪರ್ಯಾಸ. ಪತ್ರಿಕೆಯ ಲೇಖನವೊಂದು ಧಾರ್ಮಿಕ ನೆಲೆಯಲ್ಲಿ ಈ ಮಟ್ಟದ ಹಿಂಸಾಚಾರಕ್ಕೆ ಕಾರಣವಾದದ್ದು ರಾಜ್ಯದ ಪಾಲಿಗೆ ಇದೇ ಮೊದಲು.

ಹಾಗೆ ನೋಡಿದರೆ ಪರ್ದಾ ಕುರಿತಂತೆ ತಸ್ಲೀಮಾ ತುಂಬಾ ಹಿಂದಿನಿಂದಲೂ ಮಾತನಾಡಿದ್ದಾರೆ. ಅವರ ಪ್ರತಿ ಲೇಖನವನ್ನೂ ಮುಸ್ಲಿಂ ಮೂಲಭೂತವಾದಿಗಳು ಖಂಡಿಸುತ್ತಾ ಅದರ ಮೇಲೆ ನಿಷೇಧ ಹೇರುತ್ತಲೇ ಬಂದಿದ್ದಾರೆ. ಧಾರ್ಮಿಕವಾಗಿ ತುಂಬಾ ಸೂಕ್ಷ್ಮವಾಗಿರುವ ಆ ಹಳೆಯ ಲೇಖನವನ್ನು ಈಗ ಅನುವಾದ ಮಾಡಿ ಪ್ರಕಟಿಸಲು ಯಾವುದೇ ಸಕಾರಣ ಇರಲಿಲ್ಲ. ಅದಕ್ಕೂ ಮುನ್ನ ಆ ಪತ್ರಿಕೆ ಮೂಲ ಲೇಖಕಿಯಿಂದ ಅನುಮತಿಯನ್ನೂ ಪಡೆದುಕೊಂಡಂತೆ ಕಾಣುವುದಿಲ್ಲ. ತನಗೇ ಅರಿವಿಲ್ಲದೆ ಹೀಗೆ ಕನ್ನಡದಲ್ಲಿ ತನ್ನ ಹೆಸರಿನ ಲೇಖನ ಪ್ರಕಟವಾದ ಬಗ್ಗೆ ತಸ್ಲೀಮಾ ಕೂಡಾ ಆಕ್ಷೇಪಿಸಿದ್ದಾರೆ. ಇದು ತನ್ನ ವಿರುದ್ಧದ ದುರುದ್ದೇಶಪೂರಿತ ಸಂಚು ಎಂದೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ವಿಪರ್ಯಾಸವೆಂದರೆ ತನ್ನ ದೇಶದಿಂದ ಗಡೀಪಾರಾಗಿ ಜಾತ್ಯತೀತ ಭಾರತದಲ್ಲಿ ಆಶ್ರಯ ಪಡೆದ ಆ ಲೇಖಕಿ ಇಲ್ಲಿಯೂ ತನ್ನ ಧರ್ಮದ ಮೂಲಭೂತವಾದಿಗಳ ಆಕ್ರೋಶಕ್ಕೆ ತುತ್ತಾಗಬೇಕಾಯಿತು. ಇಂಥ ಸಂದರ್ಭವನ್ನೇ ರಾಜಕೀಯಕ್ಕೆ ಬಳಸಿಕೊಳ್ಳುವ ಕೆಲ ರಾಜಕಾರಣಿಗಳು ತಸ್ಲೀಮಾಗೆ ಭಾರತ ಆಶ್ರಯ ನೀಡಬಾರದು ಎಂಬಂಥ ಹೇಳಿಕೆ ನೀಡಿದ್ದು ಕೂಡಾ ವಿಪರ್ಯಾಸ ಎನ್ನದೆ ವಿಧಿಯಿಲ್ಲ. ಇದೇ ವೇಳೆ ಸೂಕ್ಷ ವಿಷಯಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳು ಕೂಡಾ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದು ಏನೇ ಇರಲಿ, (ಅನುವಾದ ಅಬದ್ಧ ಎಂಬ ಮಾತನ್ನೂ ಒಳಗೊಂಡಂತೆ). ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಧರ್ಮಕ್ಕೆ (ಹಿಂದೂ ಅಥವಾ ಇಸ್ಲಾಂ) ಸಂಬಂಧಪಟ್ಟ ಯಾವುದೇ ಸಣ್ಣ ವಿಷಯ ಕೂಡಾ ಭಾರತದಲ್ಲಿ ತೀರಾ ವಿಕೋಪಕ್ಕೆ, ಹಿಂಸಾಚಾರಕ್ಕೆ ಕಾರಣವಾಗುತ್ತಿರುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಅಂದರೆ ಧರ್ಮದ ಬಗ್ಗೆ ಯಾರೂ ಏನನ್ನೂ, ವೈಚಾರಿಕವಾಗಿ ಪ್ರಶ್ನಿಸುವಂತಿಲ್ಲ. ಕರ್ನಾಟಕವನ್ನೂ ಒಳಗೊಂಡಂತೆ ದೇಶಾದ್ಯಂತ ಈ ಮನೋಧರ್ಮ ಬೆಳೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇತರೆಲ್ಲಾ ಕ್ಷೇತ್ರಗಳಲ್ಲಿ ಕಾಲಚಕ್ರ ಮುಂದೆ ಉರುಳುತ್ತಿದ್ದರೆ ಧರ್ಮದ ವಿಷಯದಲ್ಲಿ ಮಾತ್ರ ಹಿಂದಕ್ಕೆ ಚಲಿಸುತ್ತಿದೆ ಎಂಬ ಅನುಮಾನ ಬಾರದಿರದು.

ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ತನ್ನ ಧರ್ಮದ ಬಗ್ಗೆ ಬೇರೊಂದು ಧರ್ಮಕ್ಕೆ ಸೇರಿದ ವ್ಯಕ್ತಿ ಮಾಡುವ ವಿಶ್ಲೇಷಣೆಗಿಂತ ತನ್ನದೇ ಧರ್ಮಕ್ಕೆ ಸೇರಿದ ವ್ಯಕ್ತಿ ಮಾಡುವ ವಿಶ್ಲೇಷಣೆ ಆಯಾ ಧರ್ಮದ ಮೂಲಭೂತವಾದಿಗಳಿಗೆ ನುಂಗಲಾರದ ತುತ್ತು. ಹೀಗಾಗಿಯೇ ದೀಪಾ ಮೆಹ್ತಾ ಅವರ 'ಫೈರ್', 'ವಾಟರ್'ನಂಥ ಚಿತ್ರಗಳಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ. ಧರ್ಮವನ್ನು ವಿಮರ್ಶಿಸುವ ದಿಕ್ಕಿನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮೂಲಭೂತವಾದಿಗಳಿಂದ ವಿರೋಧ ವ್ಯಕ್ತವಾಗುವುದು ಹಿಂದಿನಿಂದ ನಡೆದೇ ಇದೆ. ಮಹಾಚೈತ್ರ, ಆನುದೇವ ಹೊರಗಣವನು... ಇತ್ಯಾದಿ ಪುಸ್ತಕಗಳ ಬಗೆಗಿನ ಅಸಹನೆ, ಆ ಪುಸ್ತಕಗಳ ನಿಷೇಧಕ್ಕೆ ಒತ್ತಾಯ ಮಾಡಿದ ಉದಾಹರಣೆಗಳು ನಮ್ಮಲ್ಲೇ ಇವೆ.

ಆದರೆ ಯಾವುದೇ ವ್ಯಕ್ತಿ ತನ್ನ ಧರ್ಮವನ್ನು ವಿಮರ್ಶಿಸುವ, ಕಾಲಕ್ಕೆ ತಕ್ಕಂತೆ ಅದನ್ನು ವೈಯಕ್ತಿಕ ನೆಲೆಯಲ್ಲಿ ಬದಲಾಯಿಸಿಕೊಳ್ಳುವ ಅವಕಾಶ ಇದ್ದಾಗ ಮಾತ್ರವೇ ಆ ಧರ್ಮ ಆತನಿಗೆ ಆಪ್ತವಾಗುತ್ತದೆ. ಆಗ ಮಾತ್ರ ಧರ್ಮಕ್ಕೆ ಉಳಿಗಾಲ. ಅದರಲ್ಲೂ ಎಲ್ಲವನ್ನೂ ಒಳಗೊಳ್ಳುವುದು ಹಿಂದೂ ಧರ್ಮದ ಮೂಲ ತಿರುಳು. ಇಲ್ಲಿನ 'ನಿಂದಾಸ್ತುತಿ'ಯ ಪರಿಕಲ್ಪನೆ ಕೂಡಾ ವಿಶಿಷ್ಟವಾದುದೇ. ಅಷ್ಟೇ ಏಕೆ, ಬಗೆಬಗೆಯ ರೂಪ, ಬಗೆಬಗೆಯ ತಮಾಷೆಗೆ ವಸ್ತುವಾದ ಗಣೇಶ ಹಿಂದೂ ಧರ್ಮದ ವೈಶಾಲ್ಯತೆಗೆ ಅತ್ಯುತ್ತಮ ಉದಾಹರಣೆ (ಲಂಬೋದರ ಎಂಬ ವಿಶೇಷಣವೇ ಇದೆಯಲ್ಲ).

ಹಾಗೇ ಬುರ್ಖಾ ಬಗ್ಗೆ ಮತ್ತೊಮ್ಮೆ ಚಿಂತಿಸುವ, ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಎಲ್ಲಾ ಹಕ್ಕು, ಸ್ವಾತಂತ್ರ್ಯ ಒಬ್ಬ ಮುಸ್ಲಿಂ ಹೆಣ್ಣು ಮಗಳಿಗೆ ಇದ್ದೇ ಇದೆ. ಅಂಥ ಲೇಖನ ಪ್ರಕಟವಾದ ಮಾತ್ರಕ್ಕೆ ಹಿಂಸಾಚಾರ ಭುಗಿಲೇಳಬೇಕಿಲ್ಲ. ಇಂಥ ಹಿಂಸಾಚಾರ, ಬೆದರಿಕೆಗಳನ್ನು ಆಯಾ ಧರ್ಮದ ವಿಚಾರವಂತರು, ಪ್ರಾಜ್ಞರು, ಮುಖಂಡರೇ ಖಂಡಿಸಬೇಕು. ಅಸಹನೆ ದೇಶಾದ್ಯಂತ ವ್ಯಾಪಿಸದಂತೆ ಮೊಳಕೆಯಲ್ಲೇ ಚಿವುಟಬೇಕು.

ಈ ದಿಸೆಯಲ್ಲಿ ಕಲಾವಿದ ಎಂ.ಎಂ. ಹುಸೇನ್ ಅವರು ಹೇಳಿದ ಮಾತು ಮೆಲುಕು ಹಾಕುವಂಥದ್ದೇ. "ಭಾರತ ನನ್ನ ತಾಯ್ನಾಡು. ಅದನ್ನು ನಾನು ದ್ವೇಷಿಸಲು ಸಾಧ್ಯವೇ ಇಲ್ಲ. ಆದರೆ ಅದು ನನ್ನನ್ನು ತಿರಸ್ಕರಿಸಿಬಿಟ್ಟಿತು. ಸಂಘ ಪರಿವಾರದವರು ನನ್ನ ಮೇಲೆ ದಾಳಿ ನಡೆಸುವಾಗ ರಾಜಕಾರಣಿಗಳು, ಕಲಾವಿದರೂ ಯಾರೊಬ್ಬರೂ ನನ್ನ ಪರ ಮಾತನಾಡಲಿಲ್ಲ. ಹೀಗಾಗಿ ನಾನು ಭಾರತದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಆದರೆ ನನಗೆ ಗೊತ್ತು ಶೇ. 90 ಮಂದಿ ಭಾರತೀಯರು ನನ್ನನ್ನು ಪ್ರೀತಿಸುತ್ತಾರೆ. ಅವರು ನನ್ನೊಂದಿಗಿದ್ದಾರೆ...".

ಈ ಶೇ. 90 ಮಂದಿಯೇ ಸೌಹಾರ್ದ ಭಾರತದ ನಿಜವಾದ ಭವಿಷ್ಯ. ಅವರ ಸಂಖ್ಯೆ ಶೇ. 100 ಆಗುವಂಥ ವಾತಾವರಣ ನಿರ್ಮಾಣವಾಗಬೇಕು. ಆ ದಿಸೆಯಲ್ಲಿ ವ್ಯಕ್ತಿಯ ಸಂವೈಧಾನಿಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧರ್ಮದ ನೆವದಲ್ಲಿ ತಡೆ ಒಡ್ಡುವ ಪ್ರಸಕ್ತ ಪರಿಪಾಠದ ಬಗ್ಗೆ ಜನಜಾಗೃತಿ ಮೂಡಲು ಇದು ಸಕಾಲ. ಎಲ್ಲಕ್ಕಿಂತ ಮುಖ್ಯವಾಗಿ ಧರ್ಮದ ಹೆಸರಲ್ಲಿ ಹೆಣ ಉರುಳಿಸಲು ಯಾರೂ ಮುಂದಾಗಬಾರದು. ಏಕೆಂದರೆ ಎಲ್ಲಕ್ಕಿಂತ ದೊಡ್ಡ ಧರ್ಮ ಮಾನವ ಧರ್ಮ.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .