User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 

ನಕ್ಸಲ್‌ವಾದ

 

ಸೇನಾ ಕಾರ್ಯಾಚರಣೆ ಉತ್ತರವಲ್ಲ

ರಕ್ತ ಹಾಗೂ ಮಾಂಸದ ಬುನಾದಿಯ ಮೇಲೆ ಸುಖಿ ಸಾಮ್ರಾಜ್ಯ ಕಟ್ಟಲು ಸಾಧ್ಯವೇ ಇಲ್ಲ

 

ಪ್ರೊ. ಎನ್. ಮನು ಚಕ್ರವರ್ತಿ

ಲೇಖಕರು ಮತ್ತು ಚಿಂತಕರು ಬೆಂಗಳೂರು

ನಕ್ಸಲ್‌ವಾದದ ಕುರಿತು ಚರ್ಚೆ ನಡೆಸುವಾಗಲೆಲ್ಲಾ ಒಂದು ಪ್ರಶ್ನೆ ಆಗಾಗ್ಗೆ ತೂರಿ ಬರುತ್ತಿರುತ್ತದೆ . ನಕ್ಸಲ್‌ವಾದವನ್ನು ವ್ಯಾಖ್ಯಾನಿಸುವುದಾದರೂ ಹೇಗೆ ? ಅದೇನು ಸಾಮಾಜಿಕ ಸಮಸ್ಯೆಯೋ ಅಥವಾ ಕೇವಲ ' ಕಾನೂನು ಹಾಗೂ ಸುವ್ಯವಸ್ಥೆ ' ಗೆ ಸಂಬಂಧಿಸಿದ ಸಮಸ್ಯೆಯೋ ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೊದಲು ಈಗ ಎಲ್ಲೆಡೆ ವ್ಯಾಪಕವಾಗಿ ಬಳಕೆಯಾಗುತ್ತಿರುವ ' ಕಾನೂನು ಹಾಗೂ ಸುವ್ಯವಸ್ಥೆ ' ಎಂಬ ಶಬ್ದಗಳನ್ನು ಸರಿಯಾಗಿ ಅರಿತುಕೊಳ್ಳದ ಹೊರತು ಸೂಕ್ತ ಉತ್ತರ ಕಂಡುಕೊಳ್ಳುವುದು ಅಸಾಧ್ಯ . ' ಕಾನೂನು ಹಾಗೂ ಸುವ್ಯವಸ್ಥೆ ' ಎಂಬ ಶಬ್ದಗಳನ್ನು ಬಳಸಿದಾಗ ಅದು ತನ್ನೊಡನೆ ಅದನ್ನು ಬಳಸುತ್ತಿರುವ ವ್ಯಕ್ತಿಗಳ ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನಗಳನ್ನೂ ಹೊತ್ತು ತರುತ್ತದೆ . ಹಾಗಾದರೆ ನಮ್ಮಲ್ಲೀಗ ' ಕಾನೂನು ಹಾಗೂ ಸುವ್ಯವಸ್ಥೆ ' ಯ ಪರಿಭಾಷೆಯನ್ನು ಬಳಸುತ್ತಿರುವವರಾದರೂ ಯಾರು ? ಕೋರ್ಟ್‌ಗಳಲ್ಲಿ , ಪೊಲೀಸ್ ಠಾಣೆಗಳಲ್ಲಿ , ಅಧಿಕಾರಶಾಹಿಯ ದರ್ಬಾರ್‌ನಲ್ಲಿ ಹಾಗೂ ಸ್ವಲ್ಪ ಮಟ್ಟಿಗೆ , ಮಧ್ಯಮ ವರ್ಗದ ಚಾವಡಿಗಳಲ್ಲಿ ಈ ಪದಗಳ ಬಳಕೆ ವ್ಯಾಪಕವಾಗಿ ಆಗುತ್ತಿರುತ್ತದೆ . ಅದರಲ್ಲೂ ಅಸಮಾನತೆಯ ಬುನಾದಿಯ ಮೇಲೆಯೇ ತನ್ನ ಸುಖದ ಸೌಧ ಕಟ್ಟಿಕೊಂಡಿರುವ ನಮ್ಮ ಇಂದಿನ ಸಮಾಜದಲ್ಲಿ ಸ್ಥಾಪಿತ ಶಕ್ತಿಗಳ ಹಿತಾಸಕ್ತಿಗಳ ರಕ್ಷಣೆಗೇ ಇಂಥ ಪದಗಳು ಹೆಚ್ಚು ಬಳಕೆಯಾಗುವುದಿದೆ . ಇಂಥ ಪ್ರಶ್ನೆಗಳ ಜಾಡನ್ನು ಅರಸುತ್ತಾ ಹೊರಟರೆ ' ಕಾನೂನು ಹಾಗೂ ಸುವ್ಯವಸ್ಥೆ ' ಎಂಬುದು ನಮ್ಮ ಸಮಾಜದ ಮನಸ್ಥಿತಿಯಲ್ಲಿಯೇ ಅಂತರ್ಗತವಾಗಿರುವ ಒಂದು ಬಗೆಯ ' ಶ್ರೇಣಿ ವ್ಯವಸ್ಥೆ ' ಯ ಪ್ರಾತಿನಿಧಿಕ ಶಬ್ದಗಳೆಂಬಂತೆ ಭಾಸವಾಗುತ್ತದೆ . ಅಷ್ಟಕ್ಕೂ ನಾವು ' ಕಾನೂನು ಹಾಗೂ ಸುವ್ಯವಸ್ಥೆ ' ಎಂಬ ಶಬ್ದಗಳನ್ನು ' ನ್ಯಾಯ ಹಾಗೂ ಸಮಾನತೆ ' ಎಂಬರ್ಥದಲ್ಲಿ ಅರ್ಥೈಸಿಕೊಳ್ಳುವ ಮಟ್ಟಿಗಾದರೂ ವಾತಾವರಣವನ್ನು ಹದಗೊಳಿಸಿದ್ದೇವೆಯೇ ? ' ಕಾನೂನು ಹಾಗೂ ಸುವ್ಯವಸ್ಥೆ ' ಎಂಬ ಶಬ್ದಗಳನ್ನು ' ಸಾಮಾಜಿಕ ನ್ಯಾಯ ಹಾಗೂ ಸಮಾನತೆ ' ಎಂದು ಅರ್ಥೈಸಿಕೊಳ್ಳುವುದರಲ್ಲಿ ವಿಫಲವಾದ ಕ್ಷಣದಲ್ಲಿಯೇ ನಾವು " ನಕ್ಸಲ್‌ವಾದ ಒಂದು ಯಃಕಶ್ಚಿತ್ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ " ಎಂದು ತೀರ್ಪು ನೀಡುವ ನೈತಿಕ ಹಕ್ಕನ್ನೂ ಕಳೆದುಕೊಳ್ಳುತ್ತೇವೆ .

ನನ್ನ ಪ್ರಕಾರ ' ನಕ್ಸಲ್‌ವಾದ ' ನಮ್ಮ ವ್ಯವಸ್ಥೆಯ ಸಂವೈಧಾನಿಕ ಹಾಗೂ ನ್ಯಾಯ ವ್ಯವಸ್ಥೆಯ ಸೋಲಿನ ಫಲ . ಸಮಾಜದ ಮುಖ್ಯವಾಹಿನಿಯಿಂದ ಹೊರತಾಗಿ ಧ್ವನಿ ಕಳೆದುಕೊಂಡ ಹತಾಶೆಯಲ್ಲಿ ಬದುಕುವ ಜನಸಾಮಾನ್ಯರ ಆಶೋತ್ತರಗಳನ್ನು ಹಾಗೂ ಅವರ ಸಂವೈಧಾನಿಕ ಅವಶ್ಯಕತೆಗಳನ್ನು ಈಡೇರಿಸುವಲ್ಲಿ ವಿಫಲವಾಗುವ ವ್ಯವಸ್ಥೆಯೊಂದರ ಕೂಸು ಈ ' ನಕ್ಸಲ್‌ವಾದ '. ಇದನ್ನು ಕೆಲವೊಮ್ಮೆ ' ಪಿಡುಗು ' ಎಂದು ಕರೆಯುತ್ತಾರಾದರೂ ಅದನ್ನು ಸಾಮಾಜಿಕವಾಗಿ ಪರಿತ್ಯಕ್ತವಾದ ಸಮುದಾಯವೊಂದರ ಹತಾಶ ಅಭಿವ್ಯಕ್ತಿ ಎಂದು ಅರ್ಥೈಸಿಕೊಳ್ಳಲು ನಾನು ಬಯಸುತ್ತೇನೆ . ಅಂದರೆ ಸಂವಿಧಾನ ಒದಗಿಸುವ ಮೂಲಭೂತ ಹಕ್ಕುಗಳಿಂದ ವಂಚಿತವಾದ ಮುಗ್ಧ ಸಮುದಾಯವೊಂದು ತನ್ನ ಅಳಲಿನ ಅಭಿವ್ಯಕ್ತಿಗೆ ಶಸ್ತ್ರದ ಮೊರೆ ಹೋಗುವ ಸನ್ನಿವೇಶವನ್ನು ನಾವೇ ಸೃಷ್ಟಿಸಿದ್ದೇವೆ . ನಮ್ಮ ವರ್ತಮಾನಕ್ಕೆ ಎಂಥ ಕ್ರ್ರೌರ್ಯವನ್ನು ಆರೋಪಿಸಿದ್ದೇವೆಂದರೆ ನಮ್ಮದೇ ಸಮಾಜದ ಕೆಲವು ಸಮುದಾಯಗಳಿಗೆ ಹಿಂಸೆಯನ್ನು ಅವಲಂಭಿಸುವುದಲ್ಲದೇ ಬೇರೆ ಆಯ್ಕೆಗಳೇ ಇಲ್ಲದಂತಾಗಿ ಹೋಗಿದೆ . ಹಾಗೆಂದ ಮಾತ್ರಕ್ಕೆ , ಸಮಾಜದಲ್ಲಿ ವ್ಯಾಪಕವಾಗುತ್ತಿರುವ ಅಸಮಾನತೆಯನ್ನು ಹೋಗಲಾಡಿಸಲು ನಕ್ಸಲ್‌ವಾದದಂಥ ಪ್ರತಿಗಾಮಿ ಹೆಜ್ಜೆ ಅನಿವಾರ್ಯವೇ ? ಖಂಡಿತ ಅಲ್ಲ .

ರಕ್ತಕ್ರಾಂತಿ ಮಾಡುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಯಾರಾದರೂ ಭಾವಿಸಿದ್ದರೆ ಅದು ಅವರ ಮೂರ್ಖತನವಷ್ಟೇ . ರಕ್ತ ಹಾಗೂ ಮಾಂಸದ ಬುನಾದಿಯ ಮೇಲೆ ಸುಖಿ ಸಾಮ್ರಾಜ್ಯ ಕಟ್ಟಲು ಸಾಧ್ಯವೇ ಇಲ್ಲ . ಹಿಂಸೆಯನ್ನು ಬಳಸಿಕೊಂಡು ಸ್ಥಾಪನೆಯಾದ ಸಾಮ್ರಾಜ್ಯಕ್ಕೆ ಹಿಂಸೆಯನ್ನೇ ಸೇವಿಸಿ ಬದುಕುವ ಅನಿವಾರ್ಯತೆ ಇರುತ್ತದೆ . ಆಳುವ ವರ್ಗದ ನಿಷ್ಕರುಣೆ ಹಾಗೂ ಅಮಾನವೀಯತೆಯ ಫಲವಾಗಿಯೇ ನಕ್ಸಲ್‌ವಾದ ಸೃಷ್ಟಿಯಾಗಿದೆ ಎಂಬುದನ್ನು ಒಪ್ಪಿಕೊಂಡಂತೆ ನಕ್ಸಲ್‌ವಾದ ಅಪ್ಪಿಕೊಂಡಿರುವ ಹಿಂಸೆಯನ್ನೂ ವಿರೋಧಿಸುವ ಸಮಚಿತ್ತತೆ ನಮ್ಮದಾಗಿರಬೇಕು . ನಕ್ಸಲರ ಇಂಥ ರಕ್ತದಾಹಿ ಕ್ರಾಂತಿ ಮತ್ತೊಂದು ರಕ್ತದಾಹಿ ಸಾಮ್ರಾಜ್ಯವನ್ನು ನಿರ್ಮಾಣ ಮಾಡುತ್ತದೆಯಷ್ಟೇ . ಬೇಕಾದರೆ ಜಗತ್ತಿನ ಇತಿಹಾಸದಲ್ಲಿ ಆಗಿ ಹೋದ ರಷ್ಯನ್ ಕ್ರಾಂತಿ , ಚೀನಾ ಕ್ರಾಂತಿಗಳ ಪುಟಗಳನ್ನೊಮ್ಮೆ ತಿರುವಿ ಹಾಕಿ ಕೈಗೆ ನೆತ್ತರು ಅಂಟಿಕೊಳ್ಳದಿದ್ದರೆ ಕೇಳಿ .

ಆಳುವ ವರ್ಗದ ಹಿಂಸಾಚಾರವನ್ನು ತಹಬದಿಗೆ ತರದೇ ನಕ್ಸಲ್ ರೀತಿಯ ಪ್ರತಿಗಾಮಿತನವನ್ನು ಮಟ್ಟ ಹಾಕುವುದು ಅಸಾಧ್ಯ . ನಕ್ಸಲ್‌ವಾದದ ಹುಟ್ಟಿಗೆ ಆಳುವ ವರ್ಗದ ಹಿಂಸಾಚಾರ ಎಷ್ಟು ಮಹತ್ವದ ಕೊಡುಗೆ ಸಲ್ಲಿಸಿದೆಯೋ ಮಧ್ಯಮ ವರ್ಗದ ಸೋಗಲಾಡಿತನ ಕೂಡ ಅಷ್ಟೇ ಕೊಡುಗೆ ಸಲ್ಲಿಸಿದೆ . ಸಮಾಜದ ಇನ್ನಿತರ ವರ್ಗಗಳ ಬಲಿಕೊಟ್ಟು ತನ್ನ ಸುಖ ಕಂಡುಕೊಳ್ಳುವ ಮಧ್ಯಮ ವರ್ಗ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ . ಕೇವಲ ನಕ್ಸಲರನ್ನು ದೂರಿದರೆ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ . ನಮ್ಮದೇ ನಡುವಿನ ವ್ಯಕ್ತಿಗಳು ನಕ್ಸಲರಾಗಿ ಬಂದೂಕು ಹಿಡಿಯುತ್ತಾರೆಂದರೆ ಅದಕ್ಕೆ ಪ್ರೇರಣೆಯಾಗುವ ಸಾಮಾಜಿಕ ಕಾರಣಗಳನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನವನ್ನು ಒಂದು ಸಮಾಜವಾಗಿ ನಾವು ಬೆಳೆಸಿಕೊಳ್ಳಬೇಕಿದೆ . ಬಂದೂಕು ಹಿಡಿದು ಕಾಡಿಗೆ ನಡೆದು ಹೋಗುವ ಆ ಹುಡುಗರ ಮನದ ತುಮುಲಗಳನ್ನು ಅರ್ಥ ಮಾಡಿಕೊಳ್ಳಲು ನಾವೆಂದಾದರೂ ಪ್ರಯತ್ನಿಸಿದ್ದೇವೆಯೇ ? ಅಥವಾ ನಕ್ಸಲರನ್ನು ದೂರುವಷ್ಟೇ ಆಸ್ಥೆಯಿಂದ ಸಕಲ ಸಮುದಾಯವನ್ನೂ ಒಳಗೊಳ್ಳುವ ರಾಜಕೀಯ ಪರ್ಯಾಯವೊಂದನ್ನು ಹುಟ್ಟುಹಾಕಲು ಮುಂದಾಗಿದ್ದೇವೆಯೇ ? ಆ ' ಲೋಕನಿಂದಿತ ' ರ ನೋವಿಗೆ ಮಿಡಿಯುವ ಬದಲು ಅವರ ನಿರ್ಧಾರವನ್ನು ಟೀಕಿಸುತ್ತಾ ಕೂರುವುದರಲ್ಲಿ ಯಾವ ಪುರಷಾರ್ಥ ಸಾಧನೆಯಾಗುತ್ತದೆ ? ನಕ್ಸಲ್‌ವಾದವನ್ನು ಕ್ಯಾನ್ಸ್‌ರ್ ಎಂದಾದರೂ ಕರೆಯಿರಿ , ರೇಬಿಸ್ ಎಂದಾದರೂ ಕರೆಯಿರಿ . ಹಾಗೆಂದು ಕರೆದ ಮಾತ್ರಕ್ಕೆ ' ಕ್ಯಾನ್ಸರ್ ' ಗೆ ಕಾರಣವಾಗುವ ಸಾಮಾಜಿಕ ಸನ್ನಿವೇಶಗಳಿಗೆ ಮದ್ದು ಹುಡುಕಿದಂತಾದೀತೇ ?

ಸೈನಿಕರನ್ನು , ಬಂದೂಕುಗಳನ್ನು ಬಳಸಿಕೊಂಡು ನಕ್ಸಲ್‌ವಾದಕ್ಕೆ ಉತ್ತರ ಹುಡುಕುತ್ತಿರುವ ಪಿ . ಚಿದಂಬರಂ ಅವರಿಗೆ ಇತಿಹಾಸ ಪ್ರಜ್ಞೆ ಇದ್ದಂತಿಲ್ಲ . ತೆಲಂಗಾಣದಂಥ ಸಮಸ್ಯೆಗೆ ರಾತ್ರೋ ರಾತ್ರಿ ನಿದ್ದೆಗೆಟ್ಟು ಪರಿಹಾರ ಕಂಡು ಹಿಡಿಯುವಾಗ ಇರುವ ವ್ಯವಧಾನ ಇದೇ ರಾಜಕಾರಣಿಗಳಿಗೆ ನಕ್ಸಲ್‌ವಾದದ ಕುರಿತು ವಿಚಾರ ಮಾಡುವಾಗ ಇರುವುದಿಲ್ಲ . ಮನುಷ್ಯನ ಇತಿಹಾಸವನ್ನೊಮ್ಮೆ ನೋಡಿ ಸೈನಿಕರು , ಬಂದೂಕುಗಳಿಂದ ಒಂದೇ ಒಂದು ಸಭ್ಯ ಸಂಸ್ಕೃತಿಯೂ ಈವರೆಗೆ ಜನ್ಮ ತಳೆದಿಲ್ಲ . ' ಆಪರೇಷನ್ ಗ್ರೀನ್ ಹಂಟ್ ' ಹೆಸರಿನಲ್ಲಿ ಮುಗ್ಧ ಬುಡಕಟ್ಟು ಸಮುದಾಯಗಳನ್ನು ಅವುಗಳ ಸಾಂಸ್ಕೃತಿಕ ಬೇರುಗಳ ಸಮೇತ ನಾಶಗೊಳಿಸಲಾಗುತ್ತಿದೆ . ಇಂಥ ಚಿದಂಬರಂ ರೀತಿಯ ಮನಸ್ಥಿತಿಯ ವ್ಯಕ್ತಿಗಳಿಂದಾಗಿಯೇ ಈಶಾನ್ಯ ಭಾರತ ಇಂದು ರಕ್ತ ಸಿಕ್ತವಾಗಿದೆ . ಬಂದೂಕು , ಬಾಂಬ್‌ಗಳಿಂದ ಅವರೇನು ಮಿಲಿಟರಿ ರಾಜ್ಯವನ್ನು ಕಟ್ಟಬೇಕೆಂದಿದ್ದಾರೆಯೇ ? ಕಟ್ಟುವ ಇರಾದೆ ಅವರಿಗಿರಬಹುದೇನೋ . ಆದರೆ ನಮಗೆ ಬೇಕಿರುವುದು ಪ್ರಜಾಪ್ರಭುತ್ವವಾದಿ ರಾಜ್ಯ . ಆರೋಗ್ಯವಂತ ಮನಸ್ಥಿತಿಯ ಪ್ರತಿಯೊಬ್ಬ ವ್ಯಕ್ತಿಯ ಕಾಳಜಿಯೂ ಅದೇ .

ಟಿಎಸ್‌ಐ

ನಿರೂಪಣೆ : ಕೆ . ಆರ್ . ಅರುಣ ಕುಮಾರ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .