|
| ಅರಿಂದಮ್ ಚೌಧುರಿ, |
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್
|
150 ದಶಲಕ್ಷ ಗ್ರಾಮೀಣ ಉದ್ಯೋಗದ ಕೊರತೆ ;
25 ದಶಲಕ್ಷ ನಗರ ಉದ್ಯೋಗಾವಕಾಶದ ಕೊರತೆ ;
ನಗರದ ಕೊಳಚೆ ಪ್ರದೇಶವನ್ನು ಸ್ಥಳಾಂತರಿಸಲು
ಹೆಚ್ಚುವರಿಯಾಗಿ ಒಂದು ಲಕ್ಷ ಕೋಟಿ ರೂ. ಅಗತ್ಯ. ನ್ಯಾಯಾಂಗವನ್ನು
ಚುರುಕುಗೊಳಿಸಿ ಪ್ರತಿ ಭಾರತೀಯನಿಗೂ ನ್ಯಾಯ ಒದಗಿಸಲು ಮುಂದಿನ ಐದು
ವರ್ಷಗಳ ಕಾಲಾವಧಿಗೆ ಪ್ರತಿ ವರ್ಷವೂ 10 , 000
ಕೋಟಿ ರೂ ಅಗತ್ಯ ;
ಸಮಾನ ಶಿಕ್ಷಣಾವಕಾಶ ಕಲ್ಪಿಸಲು ಮತ್ತು ಪ್ರಾಥಮಿಕ
ಶಿಕ್ಷಣವನ್ನು ಸಾರ್ವತ್ರಿಕಗೊಳಿಸಲು ವರ್ಷಕ್ಕೆ 20 , 000
ಕೋಟಿ ರೂ. ಅಗತ್ಯ. ಮತ್ತು ಪ್ರಾಥಮಿಕ ಆರೋಗ್ಯ ಸೌಲಭ್ಯ ಕಲ್ಪಿಸಲು
ಹೆಚ್ಚುವರಿಯಾಗಿ 10 , 000
ಕೋಟಿ ರೂ. ಅಗತ್ಯ...
ಭಾರತಕ್ಕೆ ಸ್ವಾಗತ. ಈ ದೇಶದಲ್ಲಿ
ಆಸ್ಪತ್ರೆಯ ಒಬ್ಬ ರೋಗಿಯ ಸ್ಥಳಾವಕಾಶ ಮತ್ತು ಜನಸಂಖ್ಯೆಯ ಅನುಪಾತ 1:1422
ಇದೆ. ವಿಶ್ವಸಂಸ್ಥೆಯ ನಿರ್ದೇಶನದಂತೆ ಈ ಅನುಪಾತದ ಮಾದರಿ 1:333 ಇರಬೇಕು.
ಹೀಗಾಗಿ ಭಾರತ ಈ ವಿಷಯದಲ್ಲಿ ಆಫ್ರಿಕಾದ ದೇಶಗಳ ಸಾಲಿನಲ್ಲಿ ನಿಂತು 161ನೇ
ಶ್ರೇಯಾಂಕ ಪಡೆದುಕೊಂಡಿದೆ. 2.4 ದಶಲಕ್ಷ ದೇವಾಲಯಗಳಿರುವ ಈ ದೇಶದಲ್ಲಿ
ಶಾಲೆಗಳ ಸಂಖ್ಯೆ ಕೇವಲ 1.4 ದಶಲಕ್ಷ. ದೇಶದ ನ್ಯಾಯಾಲಯಗಳಲ್ಲಿ ಒಟ್ಟಾರೆ
30 ದಶಲಕ್ಷ ಪ್ರಕರಣಗಳು ಇತ್ಯರ್ಥವಾಗದೇ ಕೊಳೆಯುತ್ತಿವೆ ;
ಆ ಮೂಲಕ ನ್ಯಾಯಕ್ಕಾಗಿ ಕಾದು ಕುಳಿತ
ಭಾರತೀಯನಿಗೆ ಕಾಯುವುದೇ ಬದುಕಾಗಿಬಿಟ್ಟಿದೆ. ಈ ವಿಳಂಬಕ್ಕೆ ಕಾರಣ
ಭಾರತದಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ ಕೇವಲ 12 ಮಂದಿ
ನ್ಯಾಯಾಧೀಶರಿರುವುದು. ಅಭಿವೃದ್ಧ ದೇಶಗಳಲ್ಲಿ ಈ ಸಂಖ್ಯೆ 120.
ಇಂಥ ವಾತಾವರಣದಲ್ಲಿ ಕೇಂದ್ರದ ವಾರ್ಷಿಕ
ಬಜೆಟ್‌ನ ಪಾತ್ರವೇನು ?
ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದೇ ?
ಅಥವಾ ದೇಶದ ಜನರ (ಅದರಲ್ಲೂ ದಿನಕ್ಕೆ ಕೇವಲ
1.25 ಡಾಲರ್ ಸಂಪಾದಿಸುವ 45 ಕೋಟಿ ಬಡ ಜನರ) ಜೀವನ ಮಟ್ಟ ಸುಧಾರಿಸಲು
ನಾವು ಬದ್ಧರಾಗಿದ್ದೇವೆ ಎಂಬ ಸಂದೇಶವನ್ನು ಜಗತ್ತಿಗೆ ಸಾರುವುದೇ ?
ಫಿಕ್ಕಿ ,
ಸಿಐಐ ,
ಅಸೋಕಾಮ್ ಇತ್ಯಾದಿ ವಾಣಿಜ್ಯ ಸಂಘಟನೆಗಳ ಪಾಲಿಗಂತೂ
ಇದು ಸಮರ್ಪಕ ಬಜೆಟ್. ವಾಣಿಜ್ಯ ವ್ಯವಹಾರಗಳಿಗೆ ಈ ಮುನ್ನ ನೀಡಲಾದ
ಪ್ರೋತ್ಸಾಹದಾಯಕ ಕ್ರಮಗಳನ್ನು ಹಿಂಪಡೆಯದಿದ್ದುದರಿಂದ ಈ ಸಂಘಟನೆಗಳು
ತುಂಬಾ ಸಂತಸಪಟ್ಟವು. ಏಕೆಂದರೆ ವಾಣಿಜ್ಯ ಸಂಘಟನೆಗಳ ವಕ್ತಾರರು ಸ್ವತಂತ್ರ
ಬುದ್ಧಿಜೀವಿಗಳಲ್ಲ ;
ಪಕ್ಕಾ ಉದ್ದಿಮೆದಾರರು. ಅವರು ಅದೆಷ್ಟೇ
ಶ್ರೀಮಂತರಾದರೂ ,
ಸರ್ಕಾರದ ವಿರುದ್ಧ ದನಿ ತೆಗೆದರೆ ತಮ್ಮ ಉದ್ಯಮಕ್ಕೇ ಸಂಚಕಾರ ಎಂಬುದನ್ನು
ಎಂದೂ ಮರೆತವರಲ್ಲ. ಬಹಳಷ್ಟು ಬಾರಿ ಅವರು ಬಜೆಟ್ ಬಗ್ಗೆ ಪ್ರತಿಕ್ರಿಯೆ
ನೀಡಲೂ ಅರ್ಹರಾಗಿರುವುದಿಲ್ಲ. ಬಜೆಟ್ ಅರ್ಥೈಸಿಕೊಳ್ಳುವ ಅವರ ಜ್ಞಾನ
ಅಷ್ಟು ಕೆಳಮಟ್ಟದಲ್ಲಿರುತ್ತದೆ. ಆದರೂ ಟಿವಿ ವಾಹಿನಿಗಳಲ್ಲಿ ಅವರ
ಪ್ರತಿಕ್ರಿಯೆಗಳೇ ರಾರಾಜಿಸುತ್ತವೆ. ಇಂಥ ಉದ್ಯಮಿಗಳ ಪ್ರತ್ಯಕ್ಷ ಅಥವಾ
ಪರೋಕ್ಷ ಒಡೆತನದಲ್ಲಿರುವ ಪತ್ರಿಕೆಗಳಲ್ಲೂ ಇವರದೇ ಪ್ರತಿಕ್ರಿಯೆಗಳ
ಅಬ್ಬರ. ಹೀಗಾಗಿ ಬಜೆಟ್‌ಗೆ ಒಟ್ಟಾರೆ ಶ್ಲಾಘನೆಯ ಭರಪೂರ...
ಬೀದಿಯಲ್ಲಿರುವ ಒಬ್ಬ ಬಡವ ಅಥವಾ ಮಧ್ಯಮ
ವರ್ಗದ ವ್ಯಕ್ತಿಯ ಪ್ರತಿಕ್ರಿಯೆ ಯಾರಿಗೂ ಬೇಕಿಲ್ಲ. ಬಡ ಜನರ ಬದುಕಲ್ಲಿ
ಬದಲಾವಣೆ ತರುವ ನಿಟ್ಟಿನಲ್ಲಿ ಮಾಧ್ಯಮಗಳಿಗೆ ಯಾವುದೇ ಪರಿಣಾಮಕಾರಿ
ದೂರದೃಷ್ಟಿ ಇರುವುದು ಕಾಣುವುದಿಲ್ಲ. ಅವುಗಳಿಗೆ ಅತ್ಯಾಚಾರ ,
ಕೊಲೆ ಮತ್ತು ಲೈಂಗಿಕ ವಿಷಯಗಳತ್ತಲೇ ಹೆಚ್ಚು
ಆಸಕ್ತಿ.
ಆದರೆ ವಾಸ್ತವವಾಗಿ ದಿನಕ್ಕೆ ಕೇವಲ 1.25
ಡಾಲರ್ ಸಂಪಾದಿಸುವ 45 ಕೋಟಿ ಜನರು ಮತ್ತು ಅವರಿಗಿಂತ ಸ್ವಲ್ಪವೇ ಸುಧಾರಿತ
ಜೀವನ ನಡೆಸುವ 35 ಕೋಟಿ ಜನರ ದೃಷ್ಟಿಯಿಂದ ನೋಡಿದರೆ ಪ್ರಸಕ್ತ ಬಜೆಟ್
ತೀರಾ ನಿರಾಶಾದಾಯಕ. ' ಸೋನಿಯಾ
ನೇತೃತ್ವ ' ದ
ಸರ್ಕಾರದ ಅಥವಾ ಭಾರತದ ಯಾವುದೇ ಸರ್ಕಾರದ ಅತ್ಯುತ್ತಮ ಯೋಜನೆ ಎನ್ನಬಹುದಾದ
ಎನ್‌ಆರ್‌ಇಜಿಎ ಯೋಜನೆಗೆ ಹಣದುಬ್ಬರ ಸರಿದೂಗಿಸುವಷ್ಟರ ಹೆಚ್ಚುವರಿ ಹಣ
ಮೀಸಲಿಡಲೇ ಇಲ್ಲ. ಹಿಂದಿನ 39 , 000
ಕೋಟಿಯಿಂದ ಕೇವಲ 41 , 000
ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ ಅಷ್ಟೇ. ಸಾಮಾನ್ಯ ನಾಗರಿಕರು ಕೆ.ಜಿ.
ಸಕ್ಕರೆಗೆ 50 ರೂ. ಮತ್ತು ಕೆ.ಜಿ. ಬೇಳೆಗೆ 100 ರೂ. ತೆರಬೇಕಾದ
ಸ್ಥಿತಿಗೆ ಇಳಿದಿದ್ದರೂ ಆಹಾರ ಸಾಮಗ್ರಿಗಳ ಬೆಲೆ ಏರಿಕೆಯನ್ನು
ನಿಯಂತ್ರಿಸುವ ಯಾವುದೇ ಯೋಜನೆ ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ.
ತತ್ಕಾಲದ ಕ್ರಮಗಳನ್ನು ಬಿಡಿ ,
ದೂರಗಾಮಿ ಯೋಜನೆಗಳು ಕೂಡಾ ಇಲ್ಲ. ಆಹಾರ ಸಾಮಗ್ರಿಗಳ
ಬೆಲೆ ಅನಿಶ್ಚಿತತೆಯನ್ನು ತಹಬದಿಗೆ ತರಲು ಬಾಯುಪಚಾರದ ಮಾತುಗಳು ಕೂಡಾ
ಇಲ್ಲ. ಕಳ್ಳದಾಸ್ತಾನು ಮಾಡಿ ,
ಆಹಾರ ಸಾಮಗ್ರಿಗಳ ಬೆಲೆ ಏರಿಕೆಗೆ ಕಾರಣವಾಗುವ
ದಲ್ಲಾಳಿಗಳ ಮತ್ತು ಮಧ್ಯವರ್ತಿಗಳ ನಿಯಂತ್ರಿಣಕ್ಕೆ ಯಾವುದೇ ಯೋಜನೆಗಳಿಲ್ಲ ;
ಅಥವಾ ದೇಶದಲ್ಲಿ ಸಾಕಷ್ಟಿರುವ ವಿದೇಶಿ
ವಿನಿಮಯ ಠೇವಣಿ ಹಣದಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಮೂಲಕ
ಪೂರೈಕೆ ಹೆಚ್ಚಿಸಿ ಬೆಲೆ ಕಡಿತಗೊಳಿಸುವ ಕ್ರಮವೂ ಪ್ರಸ್ತಾಪವಾಗಿಲ್ಲ. ನಿಜ
ಹೇಳಬೇಕೆಂದರೆ ಕೇಂದ್ರದ ಬಜೆಟ್ ಶಾಕ್ ಉಂಟು ಮಾಡಿದೆ ಎನ್ನದೇ ವಿಧಿ ಇಲ್ಲ.
ಶ್ರೀಸಾಮಾನ್ಯನನ್ನು ವಿತ್ತ ಸಚಿವರು ಸಂಪೂರ್ಣ ಮರೆತೇಬಿಟ್ಟಂತೆ
ತೋರುತ್ತದೆ. ಇದು ' ಇಂಡಿಯಾ ' ದಲ್ಲಿ
ವಾಸಿಸುವ ಶ್ರೀಮಂತ ವರ್ಗಕ್ಕೆ ಸಿದ್ಧಪಡಿಸಿದ ಬಜೆಟ್ ವಿನಾ
' ಭಾರತ ' ದಲ್ಲಿ
ವಾಸಿಸುವ ಬಡಜನರಿಗಲ್ಲ.
ನವೀನ ಹಸಿರು ಕ್ರಾಂತಿಯ ಮೂಲಕ ಕೃಷಿ
ಪ್ರಗತಿ ಸಾಧಿಸುವತ್ತ ಹೆಜ್ಜೆ ಇಡಲು ಸಾಂಕೇತಿಕವಾಗಿ 400 ಕೋಟಿ ರೂ.
ಮೀಸಲಿಟ್ಟಿರುವುದು ಬಿಟ್ಟರೆ ಕೃಷಿಗೆ ಹೆಚ್ಚೇನನ್ನೂ ನೀಡಿಲ್ಲ. ಇನ್ನು
ಎನ್‌ಬಿಎಫ್‌ಸಿಗಳು (ಬ್ಯಾಂಕೇತರ ಹಣಕಾಸು ಸಂಸ್ಥೆಗಳು) ಬ್ಯಾಂಕ್‌ಗಳನ್ನೂ
ತೆರೆಯಬಹುದಾಗಿದ್ದು ಇದಕ್ಕೆ ಲಾಬಿ ಮಾಡಿದ್ದ ರಾಹುಲ್ ಬಜಾಜ್‌ಗೆ ತುಂಬಾ
ಖುಷಿ ತಂದಿರಬಹುದು. ಆದರೆ ಪ್ರಸ್ತುತ ಕೇವಲ 200 ದಶಲಕ್ಷ ಜನರನ್ನು
ತಲುಪುತ್ತಿರುವ ಹಣಕಾಸು ಸಂಸ್ಥೆಗಳನ್ನು ,
ಉಳಿದ 900 ದಶಲಕ್ಷ ಜನರಿಗೆ ತಲುಪುವಂತೆ
ಮಾಡುವ ಸವಾಲು ಹಾಗೇ ಉಳಿಯಿತು. ಹಾಗೆ ನೋಡಿದರೆ ಆಹಾರ ಧಾನ್ಯಗಳ
ಬೆಲೆಏರಿಕೆಯಿಂದ ಹೆಚ್ಚು ಘಾತ ಅನುಭವಿಸಿದವರು ಬಡತನ ರೇಖೆಗಿಂತ
ಕೆಳಗಿನವರು. ಆದರೆ ಸರ್ಕಾರ ಹೊಸ ತೆರಿಗೆ ನೀತಿಯ ಮೂಲಕ ಮಧ್ಯಮ ಮತ್ತು
ಶ್ರೀಮಂತ ಜನರಿಗೆ ಒಟ್ಟು 26 , 000
ಕೋಟಿ ರೂ. ಕೊಡುಗೆ ನೀಡಿದಂತಾಗಿದೆ. ಅಂದರೆ ವಿತ್ತ ಸಚಿವರು ತೆರಿಗೆ
ಸಲ್ಲಿಸುವ ಕೇವಲ ಶೇ. 2ರಷ್ಟು ಜನರಿಗೆ ಖುಷಿ ನೀಡಿದ್ದಾರೆಯೇ ವಿನಾ
ಬಡಜನರಿಗಲ್ಲ. ತೆರಿಗೆದಾರರ ವ್ಯಾಪ್ತಿ ಹಿಗ್ಗಿಸುವ ಕಾರಣದಿಂದ ತೆರಿಗೆ
ಕಡಿತ ಘೋಷಣೆ ಮಾಡುವುದನ್ನು ನಾನು ಸದಾ ಸ್ವಾಗತಿಸುತ್ತೇನೆ. ಆದರೆ ಬೆಲೆ
ಏರಿಕೆಯಂಥಾ ದಿನಗಳಲ್ಲಿ ,
ಅದರಲ್ಲೂ ಶೇ. 70ರಷ್ಟು ಜನರತ್ತ ಗಮನವೇ ಕೊಡದ
ಸಂದರ್ಭದಲ್ಲಿ ಇಂಥದನ್ನು ಒಪ್ಪಲು ಸಾಧ್ಯವೇ ಇಲ್ಲ.
ರಾಷ್ಟ್ರೀಯ ಗ್ರಾಮೀಣ ಆರೋಗ್ಯಕ್ಕೆ 22 , 300
ಕೋಟಿ ರೂ. ನಿಗದಿಪಡಿಸುವ ಮೂಲಕ ಹಣದಲ್ಲಿ ಕೇವಲ ಅಲ್ಪಪ್ರಮಾಣದ ಏರಿಕೆ
ಮಾಡಲಾಗಿದೆ. ಆದರೆ ದೇಶದ ಶೇ. 85 ಮಂದಿ ಯಾವುದೇ ಆರೋಗ್ಯ ವಿಮೆ ಹೊಂದಿಲ್ಲ
ಎಂಬ ವಾಸ್ತವ ಅರಿತಾಗ ಈ ಹಣ ತೀರಾ ಕಡಿಮೆ. ಹಾಗಾದರೆ ಬಜೆಟ್ ಸಾರಾಸಗಟಾಗಿ
ತಿರಸ್ಕಾರಕ್ಕೆ ಯೋಗ್ಯವೇ ?
ಇಲ್ಲ ಬಿಡಿ ,
ನಾವೀಗ ಡಾಲರ್ ಅಥವಾ ಯೂರೋ ಕರೆನ್ಸಿಯಂತೆ ನಮ್ಮ
ರೂಪಾಯಿಗೆ ಸಂಕೇತವೊಂದನ್ನು ಪಡೆಯಲಿದ್ದೇವೆ. ಇಂಥ ಸಂಕೇತ ರೂಪಿಸುವ
ಸಂಸ್ಥೆ ತುಂಬಾ ಹಣ ಪಡೆಯಲಿದೆ. ನಮ್ಮ ಬಹುಪಾಲು ಜನರ ಜೀವನ
ಸಂಕಷ್ಟದಲ್ಲಿದ್ದರೂ ನಮ್ಮ ಕರೆನ್ಸಿಗೆ ಸಂಕೇತವೊಂದನ್ನು ಪಡೆದರೆ
ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರತವನ್ನು ಗೌರವಿಸಲಿವೆ ಎಂಬ
ಆಶಾವಾದವೂ ಇದೆ!
ಅಂದ ಹಾಗೆ ಈ ಬಜೆಟ್ ಮಂಡನೆ ಏಕೆ ಎಂಬ ಹಳೆಯ
ಪ್ರಶ್ನೆ ಈಗ ಮತ್ತೆ ನನ್ನನ್ನು ಕಾಡುತ್ತದೆ. ಹೇಗಿದ್ದರೂ ಸರ್ಕಾರ
ವರ್ಷಪೂರ್ತಿ ಹಲವು ಯೋಜನೆ ,
ಕಾರ್ಯಕ್ರಮಗಳನ್ನು ಘೋಷಿಸುತ್ತಲೇ ಇರುತ್ತದೆ. ಬಜೆಟ್
ಕೇವಲ ಫಲಿತಾಂಶಗಳ ಒಂದು ಲೆಕ್ಕಪತ್ರ ಮಾತ್ರ. ಹೀಗಾಗಿ ನನ್ನ ಪಾಲಿಗೆ
ಇದೊಂದು ಉದ್ದೇಶರಹಿತವಾಗಿ ಮಂಡಿಸಲಾದ ಟೈಮ್‌ಪಾಸ್ ಬಜೆಟ್ ಅಷ್ಟೇ... |