User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಮುಖಪುಟ ಲೇಖನ

ಸಾಹಿತ್ಯ ಸಮ್ಮೇಳನ ವಿಶೇಷಾಂಕ

ಮನೆ-ಮನೆ, ಮನ-ಮನದಲಿ ಪುಸ್ತಕ ಪ್ರೀತಿಯ ದೀವಿಗೆ ಹಚ್ಚಿ

ಸತೀಶ್ ಚಪ್ಪರಿಕೆ

ತೊಂಬತ್ತೈದು ವರ್ಷಗಳ ಹಿಂದೆ ಎಚ್.ವಿ. ನಂಜುಂಡಯ್ಯ ಅಧ್ಯಕ್ಷತೆಯಲ್ಲಿ ನಡೆದ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕಳೆದ ಬಾರಿ ಹಿರಿಯ ಜೀವ ಎಲ್. ಬಸವರಾಜು ಅವರ ಸಮ್ಮುಖದಲ್ಲಿ ನಡೆದ ವಾರ್ಷಿಕ ಜಾತ್ರೆಯ ನಡುವೆ ಕನ್ನಡ ಸಾಹಿತ್ಯ ಜೀವಧಾರೆಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಬೆಂಗಳೂರು (1915) ಮತ್ತು ಚಿತ್ರದುರ್ಗ (2009) ಸಮ್ಮೇಳನದ ನಡುವೆ, ನಾಡಿನ ವಿವಿಧ ಗಣ್ಯ ಸಾಹಿತಿಗಳ ಅಧ್ಯಕ್ಷತೆಯಲ್ಲಿ ಎಪ್ಪತ್ತೈದು ಬಾರಿ ಸಾಹಿತ್ಯ ಜಾತ್ರೆ ನಡೆದಿದೆ. ಈಗ ಕುಮಾರವ್ಯಾಸನ ನೆಲೆಯಲ್ಲಿ 76ನೇ ಸಾಹಿತ್ಯ ಸಮ್ಮೇಳನದ ಸಂಭ್ರಮ!

ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಸಂಭ್ರಮ ಎಂಬ ಪದವನ್ನು ಬಳಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಒಮ್ಮೊಮ್ಮೆ ಜಿಜ್ಞಾಸೆ ಮೂಡುತ್ತದೆ. ಸುಮಾರು ಮೂರು ದಶಕಗಳ ಹಿಂದೆ, ಕನ್ನಡ ಸಾಹಿತ್ಯ ಸಮ್ಮೇಳನ ಎಂದರೆ ನಾಡಿನೆಲ್ಲ ಸಾಹಿತ್ಯ ಸಾಮ್ರಾಟರು ಒಂದೆಡೆ ಸೇರುತ್ತಿದ್ದರು. ಸಾಹಿತ್ಯ ಪ್ರೇಮಿಗಳು ತಮ್ಮ ಆರಾಧ್ಯ ದೈವಗಳ ದರ್ಶನ ಮಾಡುವ ತಾಣವಾಗಿ ಸಮ್ಮೇಳನ ಪರಿವರ್ತನೆಗೊಳ್ಳುತ್ತಿದ್ದವು. ಆದರೀಗ ಕಾಲ ಬದಲಾಗಿದೆ. ವರ್ಷಕ್ಕೊಮ್ಮೆ ಸರ್ಕಾರಿ ದುಡ್ಡನ್ನು ಖರ್ಚು ಮಾಡುವ, ನೆಪಮಾತ್ರದ ಜಾತ್ರೆಯಾಗಿ ಸಾಹಿತ್ಯ ಸಮ್ಮೇಳನಗಳು ಬದಲಾಗಿವೆ. ಈ ಬದಲಾದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸನ್ನಿವೇಶದಲ್ಲಿ ಸಾಹಿತ್ಯ ಸಮ್ಮೇಳನದ ಪ್ರಸ್ತುತತೆಯ ಮೇಲೆಯೇ ಪ್ರಶ್ನೆಯ ಬರೆ ಬಿದ್ದಿದೆ. 'ವರ್ಷಕ್ಕೊಮ್ಮೆ ಈ ರೀತಿ ಬೇಕಾಬಿಟ್ಟಿ ಸಮ್ಮೇಳನ ನಡೆಸುವ ಬದಲು, ನಾಲ್ಕು ವರ್ಷಗಳಿಗೊಮ್ಮೆ ಇನ್ನೂ ಅಚ್ಚುಕಟ್ಟಾಗಿ- ಅರ್ಥಪೂರ್ಣವಾಗಿ ನಡೆಸುವುದು ಸೂಕ್ತ' ಎಂಬ ಅಭಿಪ್ರಾಯ ಒಡಮೂಡುತ್ತಿದೆ.

ಈ ನಡುವೆ 'ಕವಿರಾಜಮಾರ್ಗ'ದಿಂದ ಆರಂಭವಾದ ಕನ್ನಡ ಸಾಹಿತ್ಯ ಪರ್ವ ಇಂದು ಯಾವ ಘಟ್ಟದಲ್ಲಿ ನಿಂತಿದೆ ಎನ್ನುವುದನ್ನು ವಿಶ್ಲೇಷಿಸಬೇಕಾದ ಅಗತ್ಯ ಕೂಡ ಇದೆ. ಹೊಸಗನ್ನಡವನ್ನೇ ಮಾನದಂಡವಾಗಿ ಇಟ್ಟುಕೊಂಡಲ್ಲಿ ನವೋದಯದ ನಂತರ ಕನ್ನಡ ಸಾಹಿತ್ಯ ಲೋಕ ಹಲವು ಸುಗ್ಗಿಗಳನ್ನು ಕಂಡಿದೆ. ಜಗತ್ತಿನ ಯಾವುದೇ ಭಾಷೆಯ ಶ್ರೇಷ್ಠ ಸಾಹಿತ್ಯ ಕೃತಿಗಳಿಗೆ ಸೆಡ್ಡು ಹೊಡೆದು ನಿಲ್ಲಬಲ್ಲಂತಹ ನೂರಾರು ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಪ್ರಕಟವಾಗಿವೆ. ಆದರೀಗ, ಅಂತಹ ಸುಗ್ಗಿ ಕೂಡ ಇಲ್ಲವಾಗಿದೆ. ಈಗ ಕೂಡ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಕಟವಾಗುವ ಕೃತಿಗಳ ಸಂಖ್ಯೆಗೆ ಕೊರತೆಯೇನೂ ಇಲ್ಲ. ಕೆಲವು ಲೇಖಕರಂತೂ ತಿಂಗಳಿಗೆ ಮೂರ್ನಾಲ್ಕು ಕೃತಿಗಳನ್ನು ಪ್ರಕಟಿಸುವಷ್ಟು ಸಮೃದ್ಧರಾಗಿ 'ಸಾಹಿತ್ಯದ ಫ್ಯಾಕ್ಟರಿ'ಗಳಂತೆ ಕೆಲಸ ಮಾಡುತ್ತಿದ್ದಾರೆ. ಇಂತಹ ಫ್ಯಾಕ್ಟರಿ ಪ್ರಾಡಕ್ಟ್‌ಗಳಲ್ಲಿ ಕಾಳಿಗಿಂತ ಜೊಳ್ಳೇ ಹೆಚ್ಚು. ಆದರೂ, ಕನ್ನಡದ ಪ್ರಖ್ಯಾತ ಪ್ರಕಾಶನ ಸಂಸ್ಥೆಗಳು ಇಂತಹ 'ಸಾಹಿತ್ಯದ ಫ್ಯಾಕ್ಟರಿ'ಗಳ ಸೇವೆಗಾಗಿಯೇ ತಮ್ಮನ್ನು ತಾವು ಸಮರ್ಪಿಸಿಕೊಂಡಂತೆ ವರ್ತಿಸುತ್ತಿವೆ. ಹೀಗೆ ಎಡೆಬಿಡದ ಸಾಹಿತ್ಯ ಸಮಾರಾಧನೆ ನಡೆಯುತ್ತಿದ್ದರೂ, ಕನ್ನಡದಲ್ಲಿ ಓದುವ ಸಂಸ್ಕೃತಿ ನಶಿಸಿಹೋಗುತ್ತಿದೆ ಎಂಬ ಬೊಬ್ಬೆ ಎಲ್ಲೆಡೆ ಇದೆ. ಇದು ಪುಸ್ತಕ ಪ್ರಕಾಶನ ವಲಯದ ದುಸ್ಥಿತಿ ಮತ್ತು ಸಾಹಿತ್ಯ ಲೋಕದೊಳಗಿನ ಕರಾಳ ಚಿತ್ರ.

ಇನ್ನು ಒಂದು ಕಾಲದಲ್ಲಿ ನಾಡಿನ ಹೆಸರಾಂತ ದಿನಪತ್ರಿಕೆಗಳು ಓದುಗ ಸಂಸ್ಕೃತಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದವು. ಆದರಿಂದು ಅಂತಹ ಪರಿಸ್ಥಿತಿ ಕೂಡ ಉಳಿದುಕೊಂಡಿಲ್ಲ. ಇಂತಹ ಸನ್ನಿವೇಶದಲ್ಲಿ ಕನ್ನಡದ ಮನೆ-ಮನಗಳಲ್ಲಿ ಓದುಗ ಸಂಸ್ಕೃತಿಯ ಪುನರುಜ್ಜೀವನದ ಜವಾಬ್ದಾರಿಯನ್ನು ಯಾರು ಹೊರಬೇಕು? ಆ ಮೂಲಕ ಕನ್ನಡ ಭಾಷೆಯನ್ನು ಉಳಿಸುವ ಯತ್ನಕ್ಕೆ ಯಾರು ಕೈಹಾಕಬೇಕು? ಈ ಪ್ರಶ್ನೆಗೆ ಇರುವ ಒಂದೇ ಒಂದು ಉತ್ತರ... ಪ್ರತಿಯೊಬ್ಬ ಕನ್ನಡಿಗ.

ವಯಸ್ಸಿನಲ್ಲಿ ದೊಡ್ಡವರಾದ ನೀವು ಓದುವ ಸಂಸ್ಕೃತಿಯಿಂದ ದೂರ ಸರಿದಿದ್ದರೂ ಪರವಾಗಿಲ್ಲ. ಕನಿಷ್ಠ ನಿಮ್ಮ ಮುಂದಿನ ಪೀಳಿಗೆಯಾದರೂ ಓದುವ ಸಂಸ್ಕೃತಿಗೆ ಮೈಯೊಡ್ಡುವಂತಹ ವಾತಾವರಣದ ಸೃಷ್ಟಿ ಮಾಡಿ. ಅದೇ ಉದ್ದೇಶವಿಟ್ಟುಕೊಂಡು ಕನ್ನಡದ ಮನೆ-ಮನೆಯಲ್ಲೂ ಇರಲೇಬೇಕಾದ ನೂರು ಸಾಹಿತ್ಯ ಕೃತಿಗಳನ್ನು ನಾವಿಲ್ಲಿ ಪರಿಚಯ ಮಾಡಿಕೊಟ್ಟಿದ್ದೇವೆ. ಇದರರ್ಥ ಕನ್ನಡದಲ್ಲಿ ಇರುವುದು ನೂರೇ ನೂರು ಶ್ರೇಷ್ಠ ಸಾಹಿತ್ಯ ಕೃತಿಗಳು ಎಂದಲ್ಲ. ಹಾಗೆ ಪಟ್ಟಿ ಮಾಡುತ್ತಾ ಸಾಗಿದರೆ ಸಾವಿರಾರು ಶ್ರೇಷ್ಠ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಇವೆ. ಆದರೆ, ಜನಸಾಮಾನ್ಯರ ಮನೆ-ಮನದಂಗಣದಲ್ಲಿ ಇರಬಹುದಾದ ಕೃತಿಗಳಲ್ಲಿ ಕೆಲವನ್ನು ಆಯ್ಕೆ ಮಾಡಿ ನಿಮ್ಮ ಮುಂದೆ ಇಟ್ಟಿದ್ದೇವೆ. ಇದು 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕನ್ನಡಿಗರಿಗೆ 'ದ ಸಂಡೆ ಇಂಡಿಯನ್' ಸುದ್ದಿ ಪತ್ರಿಕೆ ನೀಡುತ್ತಿರುವ ಪುಟ್ಟ ಕಾಣಿಕೆ. ಇಲ್ಲಿ ಪರಿಚಯ ಮಾಡಿಕೊಡಲಾದ ಪುಸ್ತಕಗಳನ್ನು ಹುಡುಕಿ ಖರೀದಿಸಿ. ನಿಮ್ಮ ಮನೆಯಲ್ಲಿ ಈ ಪುಸ್ತಕಗಳನ್ನು ಜೋಡಿಸಿಡಿ. ಅವು ನಿಮ್ಮ ಮನೆಯಲ್ಲಿರುವ ಮಕ್ಕಳು- ಯುವಕರ ಕೈಗೆಟುಕುವಂತೆ ಮಾಡಿ. ಅವರಲ್ಲಿ ಪುಸ್ತಕ ಪ್ರೀತಿ ಹುಟ್ಟುವಂತೆ ಮಾಡಿ. ಕನ್ನಡ ಭಾಷೆ-ಸಂಸ್ಕೃತಿ ಉಳಿವಿನ ನಿಟ್ಟಿನಲ್ಲಿ ನಿಮ್ಮ ಈ ಹೆಜ್ಜೆ ಮಹತ್ವದ್ದು. ಕನ್ನಡ ಓದಿಗೆ, ಓದಿನ ಪ್ರೀತಿಗೆ ಅದಕ್ಕಿಂತ ಪ್ರೇರಣೆ ಇನ್ನೇನು ಬೇಕು ಅಲ್ಲವೆ?

ಟಿಎಸ್ಐ

ಪುಸ್ತಕ ಮಾಹಿತಿ: ಕೆ. ಆರ್. ಅರುಣ ಕುಮಾರ್, ಶಶಿ ಸಂಪಳ್ಳಿ, ಬಿ.ಎಸ್. ನಾರಾಯಣಸ್ವಾಮಿ ಮತ್ತು ಕೆ. ದಿವ್ಯದರ್ಶಿನಿ

ಕಾನೂರು ಹೆಗ್ಗಡಿತಿ

ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯಂತೆ 'ಕಾನೂರು ಹೆಗ್ಗಡಿತಿ' ಕೂಡ ಮಲೆನಾಡಿನ ತವರು, ತೀರ್ಥಹಳ್ಳಿಯ ಸುತ್ತಮುತ್ತ ಘಟಿಸುವ ಕಥಾನಿಕೆ. ಕಾದಂಬರಿ ಎಂದಾಕ್ಷಣ ಮನಸ್ಸಿನಲ್ಲಿ ಮೂಡುವ ಕಥನಕುತೂಹಲವನ್ನು ಬದಿಗಿಟ್ಟು ಸುಮ್ಮನೇ ಒಂದು ಸುತ್ತು ಕೃತಿಯ ತುಂಬಾ ಓಡಾಡಿ ಬಿಡಿ ಸಾಕು. ಇಡೀ ಮಲೆನಾಡು ಅಕ್ಷರ ರೂಪದಲ್ಲಿ ನಿಮ್ಮ ಮುಂದೆ ಪವಡಿಸಿಬಿಡುತ್ತದೆ. ಭಾವುಕ ಜಗತ್ತಿನ ನಿತ್ಯವಿಲಾಸಿ ಹೂವಯ್ಯ, ದರ್ಪದ ಚಂದ್ರಯ್ಯ ಗೌಡ್ರು, ಆತನ ಮೂರನೇ ಹೆಂಡತಿ ಸುಬ್ಬಮ್ಮ, ಮಗ ರಾಮಯ್ಯ, ಮುಗ್ಧತೆಯೇ ಎರಕ ಹೊಯ್ದಂತಿರುವ ಸೀತೆ, ಹಳೇಪೈಕದ ತಿಮ್ಮ, ಘಟ್ಟದ ಕೆಳಗಿನ ಸೇರೇಗಾರ ಹೀಗೆ ಪ್ರತಿ ಪಾತ್ರವೂ ನಿಮ್ಮ ಜೀವನಾನುಭವವನ್ನು ಶ್ರೀಮಂತಗೊಳಿಸುತ್ತದೆ. ಇನ್ನೇಕೆ ತಡ, 'ಕಾನೂರು ಹೆಗ್ಗಡಿತಿ'ಯನ್ನು ಕೈಗೆತ್ತಿಕೊಳ್ಳಿ! ಮಲೆನಾಡಿನ ಗುಡ್ಡ- ತಪ್ಪಲುಗಳಲ್ಲಿ ಒಮ್ಮೆ ಹೆಜ್ಜೆ ಹಾಕಿ. ಅಲ್ಲಿನ ಮಲೆನಾಡಿನ ವಿಶ್ವದರ್ಶನ ಕಂಡು ನೀವು ಬೆರಗಾಗದ್ದಿದ್ದರೆ ಕೇಳಿ!

ಟಿಎಸ್ಐ

ಮಲೆಗಳಲ್ಲಿ ಮದುಮಗಳು

ಕುವೆಂಪು ಅವರ ಈ ಕೃತಿ ನಿಜಕ್ಕೂ ಕನ್ನಡ ಸಾಹಿತ್ಯದ ಅಕ್ಷರ ಸಂಭ್ರಮವೇ ಸರಿ. ಇಡೀ ಮಲೆನಾಡು, ಅಲ್ಲಿನ ಸಂಸ್ಕೃತಿ ತನ್ನೆಲ್ಲಾ ಸೃಜನಶೀಲ ಸಾಧ್ಯತೆಗಳೊಂದಿಗೆ ಈ ಕೃತಿಯಲ್ಲಿ ಗರಿಬಿಚ್ಚಿದೆ. ಈ ಕೃತಿಯ ಶ್ರೇಷ್ಠತೆ ಇರುವುದು ಆ ಕಾಲದ ಕಟುವಾಸ್ತವವನ್ನು, ನೈಜತೆಯನ್ನು ಕಟ್ಟಿಕೊಟ್ಟಿರುವ ರೀತಿಯಲ್ಲಿ. ಅಕ್ಷರಗಳಲ್ಲಿಯೇ ಮಲೆನಾಡಿನ ಸಂಸ್ಕೃತಿಯನ್ನು ಅದರ ಮಣ್ಣಿನ ವಾಸನೆಯ ಸಮೇತ ಓದುಗರ ಅನುಭವಕ್ಕೆ ತಂದ ಕುವೆಂಪು ಅವರ ಸೃಜನಶೀಲ ಸಾಮರ್ಥ್ಯಕ್ಕೆ ಅತ್ಯುತ್ತಮ ನಿದರ್ಶನ ಈ ಕಾದಂಬರಿ. ಸಿಂಬಾವಿ ಭರಮೈ ಹೆಗ್ಗಡೆಯವರ ವಿಶಾಲವಾದ ಚೌಕಿ ಮನೆಯ ಅಂಗಳದಿಂದ ಪ್ರಾರಂಭವಾಗುವ ಕಥಾಪ್ರವಾಹ ಹೂವಳ್ಳಿ ಚಿನ್ನಮ್ಮ ಹಾಗೂ ಮುಕುಂದಯ್ಯನವರು ಒಂದಾಗುವ ಸಂಕೇತದೊಂದಿಗೆ ನಿಲುಗಡೆಗೆ ಬಂದಂತೆ ಭಾಸವಾದರೂ ಓದುಗರ ಚಿತ್ತಭಿತ್ತಿಯಲ್ಲಿ ಹೊಸದಾಗಿ ಚಿಗುರುತ್ತಲೇ ಹೋಗುತ್ತದೆ. ಕುವೆಂಪು ಅವರೇ ಮುನ್ನುಡಿಯಲ್ಲಿ ಬರೆದಂತೆ, "ಎಲ್ಲಿಯೂ ನಿಲ್ಲುವುದೂ ಇಲ್ಲ, ಕೊನೆ ಮುಟ್ಟುವುದೂ ಇಲ್ಲ". ಕೊನೆಯ ಪುಟ ತಿರುವಿ ಹಾಕಿದರೂ ಸಿಂಬಾವಿ ಭರಮೈ ಹೆಗ್ಗಡೆ, ಹೂವಳ್ಳಿ ವೆಂಕಟಣ್ಣ, ಹಳೆಮನೆ ಸುಬ್ಬಣ್ಣ ಹೆಗ್ಗಡೆ, ಬೆಟ್ಟಳ್ಳಿ ಕಲ್ಲೇಗೌಡ್ರು, ಮುಕುಂದಯ್ಯ, ಐತ, ಪಿಂಚಲು, ಚಿನ್ನಮ್ಮ, ಗುತ್ತಿ ಹಾಗೂ ಹುಲಿಯಂಥ ಆತನ ನಾಯಿ ಓದುಗರನ್ನು ಎಡೆಬಿಡದೇ ಕಾಡುತ್ತಾರೆ. ಕಾಡುತ್ತಲೇ ಹೊಸ ಲೋಕದೃಷ್ಟಿಗೆ ನೀರೆರೆಯುತ್ತಾರೆ. ಒಟ್ಟಿನಲ್ಲಿ, ಕುವೆಂಪು ಅವರ ಈ ಕೃತಿಯನ್ನು ಹೊರತುಪಡಿಸಿ ಕನ್ನಡ ಸಾಹಿತ್ಯದ ಕುರಿತ ಯಾವುದೇ ಮಾತೂ ಅಪೂರ್ಣವೇ ಸರಿ.

ಟಿಎಸ್ಐ

ಮರಳಿ ಮಣ್ಣಿಗೆ

ಡಾ. ಕೆ. ಶಿವರಾಮ ಕಾರಂತರ ಈ ಕೃತಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನವಿದೆ. ಐತಾಳರ ಮನೆತನದ ನಾಲ್ಕು ತಲೆಮಾರುಗಳ ಏಳು- ಬೀಳಿನ ಕಥೆ ಇದು. ಕೋದಂಡರಾಮ ಐತಾಳರ ಮಗನ 'ಮಳೆಗಾಲ'ದ ಮದುವೆಯ ವಿವರಣೆಯಿಂದ ಆರಂಭವಾಗುವ ಕಥೆ ಮುಂದಿನ ಮೂರು ತಲೆಮಾರುಗಳ ಜೀವನ ವೃತ್ತಾಂತವನ್ನು ಚಿತ್ರಿಸುತ್ತಾ ಸಾಗುತ್ತದೆ. ಹೀಗೆ ಮನೆತನವೊಂದರ ಏಳು- ಬೀಳನ್ನು ಹೇಳುತ್ತಲೇ ಆ ಕಾಲದ ಮೌಲ್ಯ- ಚಿಂತನೆಗಳನ್ನೂ ಓರೆಗೆ ಹಚ್ಚುತ್ತದೆ ಕೃತಿ. ನಗರಗಳಲ್ಲಿ ತನ್ನ ಭವಿಷ್ಯ ಅರಸುತ್ತಾ, ಅದು ಬಳುವಳಿಯಾಗಿ ನೀಡಿದ ಕಹಿ ಅನುಭವಗಳ ಮೂಟೆ ಹೊತ್ತು ಕೊನೆಗೆ ತನ್ನದೇ ಮಣ್ಣಿಗೆ ಮರಳುವ ಐತಾಳರ ಮನೆತನದ ಕೊನೆಯ ಕುಡಿ ರಾಮ ಐತಾಳ ಆ ಕಾಲದಲ್ಲಿ ಪ್ರಬಲವಾಗಿದ್ದ ಗಾಂಧಿ ಪ್ರಣೀತ 'ಗ್ರಾಮಕೇಂದ್ರಿತ' ನಾಗರಿಕತೆಯ ಪ್ರತಿನಿಧಿಯಾಗುತ್ತಾನೆ. 'ಇರದುದರೆಡೆಗೆ ತುಡಿದ' ನಾಗರಿಕತೆಯೊಂದು ಮರಳಿ ತನ್ನ ಬೇರುಗಳನ್ನು ಅನ್ವೇಷಿಸಿಕೊಳ್ಳುತ್ತಿರುವುದರ ಸೂಚನೆಯಾಗುತ್ತಾನೆ. ಇಂದು ನಗರಗಳ ಹಣ ಮತ್ತು ಮೋಜಿನ ಮೋಹಕ್ಕೆ ಬಿದ್ದು ಗ್ರಾಮೀಣ ಯುವಕರ ದಂಡು ಅಲ್ಲಿಗೆ ವಲಸೆ ಹೊರಟಿರುವ ಸಂದರ್ಭದಲ್ಲಿ 'ಮರಳಿ ಮಣ್ಣಿಗೆ' ಹೊಸ ಓದನ್ನು ನೀಡಬಲ್ಲದು.

ಟಿಎಸ್ಐ

ಚೋಮನ ದುಡಿ

ಸಾಮಾಜಿಕ ಪರಿಭಾಷೆಯಲ್ಲಿ ವಿವರಿಸುವುದಾದರೆ ಆತ 'ಅಸ್ಪೃಶ್ಯ'. 'ಉತ್ತಮ'ರ ಸೇವೆಯಲ್ಲಿಯೇ ತನ್ನ ಶಾಪಗ್ರಸ್ತ ಬದುಕನ್ನು ತೇಯಬೇಕಾದವನು. ಹೀಗೆ ಸವರ್ಣೀಯರ ಕಾಲೊರಸಾಗಬೇಕಾದವನು ಸ್ವಂತ ಭೂಮಿಯ ಕನಸು ಕಾಣುವುದಾದರೂ ಉಂಟೆ? ಇಂಥದ್ದೊಂದು 'ಧರ್ಮ ಸಂಕರ'ವಾಗಬಲ್ಲ ಸಂಗತಿಯನ್ನೇ ಶಿವರಾಮ ಕಾರಂತರ 'ಚೋಮನ ದುಡಿ' ಚರ್ಚಿಸುತ್ತದೆ. ಧಣಿ ಸಂಕಪ್ಪಯ್ಯನ ಜೀತದಾಳಾದ ಚೋಮನಿಗೆ ತನ್ನ ವಾಸ್ತವವನ್ನು ಮೀರಿದ ಕನಸು. ತನ್ನದೇ ಜಮೀನು ಮಾಡಿಕೊಳ್ಳಬೇಕು, ಅದನ್ನು ತಾನೇ ಹಸನು ಮಾಡಿ ಬೆಳೆ ತೆಗೆಯಬೇಕು ಇತ್ಯಾದಿ. ಆದರೆ, ವಾಸ್ತವದಲ್ಲಿ ಅದಕ್ಕೆ ಅನುಮೋದನೆ ಇಲ್ಲ. ಭೂಮಿಗಾಗಿ ಹಂಬಲಿಸುವ ಚೋಮ ತನ್ನ ಕುಟುಂಬದ ಒಬ್ಬಬ್ಬರನ್ನೇ ಕಳೆದುಕೊಳ್ಳುತ್ತಾ ಏಕಾಂಗಿಯಾಗುತ್ತಾ ಹೋಗುತ್ತಾನೆ. ಆತ ಹಂಬಲಿಸಿದಷ್ಟೂ ಭೂಮಿ-ಕಾಣಿ ಆತನಿಂದ ದೂರವಾಗುತ್ತಲೇ ಹೋಗುತ್ತದೆ. ಮತಾಂತರ ಆತನ ಕನಸನ್ನು ನನಸು ಮಾಡಬಹುದಾದರೂ ಚೋಮನಿಗೆ ಅದರಲ್ಲಿ ಆಸ್ಥೆ ಇಲ್ಲ. ಆತನೊಳಗಿನ ಅಸಹಾಯಕತೆ ಆಕ್ರೋಶವಾಗಿ ಕೊನೆಗೆ ದುಡಿಯ ಸದ್ದಾಗಿ ಹೊರಹೊಮ್ಮುತ್ತದೆ. ಕೇವಲ ನೂರು ಪುಟಗಳ ಈ ಕೃತಿ ನಮ್ಮೊಳಗಿನ ಶತಮಾನಗಳ ಕ್ರೌರ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಸ್ವಾಭಿಮಾನದ, ಸ್ವಾವಲಂಬನೆಯ ತುಡಿತ ಮತ್ತು ಆ ತುಡಿತವನ್ನು ನಿಜವಾಗಿಸುವಷ್ಟು ಪಕ್ವವಾಗಿರದ ವಾಸ್ತವಿಕತೆ ಎದುರು ಹೇಗೆ ಶೋಷಿತ ಸಮುದಾಯ ಅಸಹಾಯಕವಾಗುತ್ತದೆ ಎಂಬುದನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಚಿತ್ರಿಸಿರುವ ಕಾರಂತರು ಬದಲಾವಣೆಗೆ ವ್ಯಕ್ತಿಯ ಶ್ರಮವಷ್ಟೇ ಇದ್ದರೆ ಸಾಲದು, ಕಾಲದ ಪಕ್ವತೆಯೂ ಬೇಕು ಎನ್ನುತ್ತಾರೆಯೇ? ಕಾದಂಬರಿಯನ್ನು ಓದಿಯೇ ಹೇಳಿ..!

ಟಿಎಸ್ಐ

ಚಿಕವೀರ ರಾಜೇಂದ್ರ

ಕೊಡಗಿನ ಕೊನೆಯ ರಾಜ ಚಿಕವೀರ ರಾಜೇಂದ್ರನ ವೃತ್ತಾಂತವನ್ನು ಬಣ್ಣಿಸುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಈ ಕೃತಿಯನ್ನು 'ಐತಿಹಾಸಿಕ ಕಾದಂಬರಿ' ಎನ್ನುವುದಕ್ಕಿಂತ ರಾಜಕೀಯ ಕಾದಂಬರಿ ಎನ್ನುವುದೇ ಲೇಸು. ಕಥಾ ನಾಯಕ ಚಿಕವೀರ ರಾಜೇಂದ್ರ ಅತಿ ಕಾಮಿ, ದುಷ್ಟ. 'ದುಷ್ಟ ಶಿಕ್ಷಣ, ಶಿಷ್ಟ ಪಾಲನೆ' ಎಂಬ ರಾಜನ ಕರ್ತವ್ಯವನ್ನು ಗಾಳಿಗೆ ತೂರಿ ಗೆಳೆಯ ಹಾಗೂ ಆತನ ಸಲಹೆಗಾರ ಕುಂಟ ಬಸವನ ಜೊತೆಗೂಡಿ ತನ್ನ ಪ್ರಜೆಗಳನ್ನೇ ಗೋಳು ಹೊಯ್ದುಕೊಳ್ಳುವಾತ. ಅರಮನೆಯ ಒಳರಾಜಕಾರಣ, ಕೊಡಗನ್ನು ಕಬಳಿಸಲು ಹಲ್ಲು ಮಸೆಯುತ್ತಾ ಸೂಕ್ತ ಸಮಯಕ್ಕಾಗಿ ಕಾದು ಕುಳಿತ ಬ್ರಿಟಿಷರು ಹಾಗೂ ಅವರ ಮಸಲತ್ತಿಗೆ ಪೂರಕವೆಂಬಂತೆ ಅನೈತಿಕ ಚಟುವಟಿಕೆಗಳಲ್ಲಿ ಮುಳುಗಿ ತನ್ನ ಸರ್ವನಾಶಕ್ಕೆ ತಾನೇ ಮುನ್ನುಡಿ ಬರೆದ ಚಿಕವೀರ ರಾಜೇಂದ್ರ... ಹೀಗೆ ಅರಸೊತ್ತಿಗೆಯೊಂದು ತನ್ನ ಒಳಗಿನ ಲೋಪ ಹೊರಗಿನ ಷಡ್ಯಂತ್ರಗಳಿಗೆ ಕುಸಿಯುವುದನ್ನು, ಆ ಮೂಲಕ ಮನುಷ್ಯನ ಮೂಲಭೂತ ವಿಕೃತಿ ಮತ್ತು ಪತನವನ್ನು ಮಾಸ್ತಿ ಸೂಚ್ಯವಾಗಿ ವಿವರಿಸುತ್ತಾರೆ. ಚಿಕವೀರ ರಾಜೇಂದ್ರನ ಪತ್ನಿ ಗೌರಮ್ಮ, ಭಗವತಿ, ಚಿಕ್ಕ ಪಾತ್ರವಾಗಿ ಒಂದರೆಕ್ಷಣ ಹಾದು ಹೋಗುವ ಚಿಕವೀರ ರಾಜೇಂದ್ರನ ಅಜ್ಜಿ ಹೀಗೆ ಕೆಲವು ಪಾತ್ರಗಳು ಓದುಗರನ್ನು ಬಹುಕಾಲ ಕಾಡುತ್ತವೆ. ಮಾಸ್ತಿಯವರಲ್ಲಿ ಮಾತ್ರ ಕಾಣಬಹುದಾದ ಜೀವನ ಪ್ರೀತಿ ಮತ್ತು ಒಳನೋಟ ಈ ಕೃತಿಯ ಹೆಚ್ಚುಗಾರಿಕೆ.

ಟಿಎಸ್ಐ

ಮೂಕಜ್ಜಿಯ ಕನಸುಗಳು

ಕಲಾವಿದರು ಹಾಗೂ ಲೇಖಕರ ಸೃಜನಶೀಲತೆಯನ್ನು ಇನ್ನಿಲ್ಲದಂತೆ ಪ್ರಭಾವಿಸಿದ 'ಮನುಕುಲದ ಸೃಷ್ಟಿ'ಯಿಂದ ಪ್ರೇರಣೆಯನ್ನು ಪಡೆದುಕೊಂಡು ಅರಳಿದ್ದು ಶಿವರಾಮ ಕಾರಂತರ ಈ ಕೃತಿ. ಕಾರಂತರಿಗೆ ಜ್ಞಾನಪೀಠ ತಂದುಕೊಟ್ಟ ಈ ಕೃತಿ ಮನುಕುಲದ 'ಸೃಷ್ಟಿ ಸಮಸ್ಯೆ'ಯೊಂದನ್ನು ಮಥಿಸಲು ಅತಿಮಾನುಷ ಸಾಮರ್ಥ್ಯ ಹೊಂದಿದ ಮೂಕಜ್ಜಿ ಹಾಗೂ ಆಕೆಯ ಮೊಮ್ಮಗ ಇಬ್ಬರೂ ಸೇರಿ ನಡೆಸುವ ಯತ್ನ ಹಾಗೂ ಅದರಿಂದ ಹೊರಹೊಮ್ಮುವ ಒಳನೋಟಗಳನ್ನು ಚಿತ್ರಿಸುತ್ತದೆ. ಹೊರನೋಟಕ್ಕೆ ಅವಾಸ್ತವಿಕಳೆನಿಸುವ ಮೂಕಜ್ಜಿ ತನ್ನ 'ದಿವ್ಯ ದೃಷ್ಟಿ'ಯಿಂದ ಅನೇಕ ವಾಸ್ತವಿಕ ಅಂಶಗಳನ್ನು ಹೊರಗೆಡವುತ್ತಾಳೆ. ಹಾಗೆ ಹೊರಗೆಡವುತ್ತಲೇ ಕಾಮ, ಲೈಂಗಿಕತೆ ಮುಂತಾದವುಗಳ ಕುರಿತು ನಮ್ಮಲ್ಲಿರುವ ಮಡಿವಂತಿಕೆಯನ್ನು ನೇರವಾಗಿ ಪ್ರಶ್ನಿಸುತ್ತಾಳೆ. "ಹೆಣ್ಣು-ಗಂಡು-ಕಾಮ ಇವೆಲ್ಲಾ ಅಸಹ್ಯದ ಕೆಲಸಗಳಾದರೆ ಅವುಗಳನ್ನು ಕೊಟ್ಟಿರುವವನಿಗೆ ತಾನೇಕೆ ಅವುಗಳನ್ನು ಕೊಟ್ಟೆ ಎಂಬುದು ಗೊತ್ತಿರಬೇಕು. ಅವುಗಳು ಅಸಹ್ಯವಾಗಿದ್ದರೆ ಗಂಡು-ಹೆಣ್ಣು-ಹೂಗಳನ್ನು ಆತ ಸೃಷ್ಟಿಸುತ್ತಲೇ ಇರಲಿಲ್ಲ" ಎಂಬ ಮೂಕಜ್ಜಿಯ ಆಧುನಿಕ ಮನೋಭಾವ ಎಲ್ಲಾ ಕಾಲಕ್ಕೂ ಸಲ್ಲುವಂಥದ್ದು. ಮೂಕಜ್ಜಿಯಂತೆ ಕಾರಂತರ ಈ ಕೃತಿ ಕೂಡ ಸರ್ವಕಾಲದಲ್ಲೂ ಸಮಕಾಲೀನ!

ಟಿಎಸ್ಐ

ಬೆಟ್ಟದ ಜೀವ

"ನನ್ನದು ಕಥೆಗಾಗಿ ಕಥೆ ಹೇಳುವ ಜಾಯಮಾನವಲ್ಲ" ಶಿವರಾಮ ಕಾರಂತರ ನಿಷ್ಠುರ ಮಾತಿದು. ಒಂದು ಸಾಮಾಜಿಕ ಸ್ಥಿತಿಯ ನಡುವೆ ಪ್ರಕಟಗೊಳ್ಳುವ ಮನುಷ್ಯನೊಬ್ಬನ ರಾಗ, ದ್ವೇಷ, ಮತ್ಸರ, ಕ್ರೌರ್ಯ, ಇವೆಲ್ಲವುಗಳ ನಡುವೆಯೇ ಜೀವನ್ಮುಖಿಯಾಗಬಲ್ಲ ಪ್ರೀತಿಯ ಸೆಲೆ ಇವೆಲ್ಲವನ್ನೂ ಶೋಧಿಸುವುದು ಕಾರಂತರ ಲೇಖನಿಯ ಉದ್ದೇಶ. ಮನುಷ್ಯನ ಮನೋಬಲ ಹಾಗೂ ಆತ್ಮಸ್ಥೈರ್ಯದ ಕುರಿತು ಕಾರಂತರಿಗಿರುವ ಅದಮ್ಯ ನಂಬಿಕೆಯ ಪ್ರತೀಕವಾಗಿ 'ಬೆಟ್ಟದ ಜೀವ'ದ ಗೋಪಾಲಯ್ಯ ಮೂಡಿ ಬರುತ್ತಾನೆ. ಕೃತಿಯ ಕೇಂದ್ರ ಪಾತ್ರ ಕೃಷಿಕ ಗೋಪಾಲಯ್ಯ ತನ್ನೆಲ್ಲಾ ಸೋಲುಗಳ ನಡುವೆಯೂ ಆತ್ಮಶಕ್ತಿ ಬತ್ತಿ ಹೋಗದಂತೆ ಕಾಯ್ದುಕೊಂಡ 'ಬೆಟ್ಟದಂಥ ಜೀವ'. ತನ್ನ ದುರ್ವಿಧಿಗೇ ಸವಾಲು ಹಾಕುವಂತೆ ಬದುಕುವ ಹಾಗೂ ಪ್ರಕೃತಿಯ ವಿರುದ್ಧವೇ ಈಜುವ ಮನೋಸ್ಥೈರ್ಯದ ಗೋಪಾಲಯ್ಯ ಕನ್ನಡದ ಸದ್ಯದ ಮನಸ್ಸುಗಳಿಗೆ ಅತ್ಯವಶ್ಯಕ. ಅಕ್ಷರಸ್ಥ ಕನ್ನಡಿಗರು ಹೊಂದಿರಲೇಬೇಕಾದ ಕೃತಿ ಇದು.

ಟಿಎಸ್ಐ

 

ಮಹಾಬ್ರಾಹ್ಮಣ

ಬ್ರಹ್ಮ ತತ್ವ ಹಾಗೂ ಬ್ರಹ್ಮ ಜಿಜ್ಞಾಸೆ ಏನಿದ್ದರೂ ಜನ್ಮತಃ ಬ್ರಾಹ್ಮಣರಾದವರಿಗೆ ಮಾತ್ರ ಮೀಸಲು ಎಂಬ ನಂಬಿಕೆ ಪ್ರಚಲಿತದಲ್ಲಿದ್ದ ಸಂದರ್ಭದಲ್ಲಿ ಅದನ್ನು ಸುಳ್ಳಾಗಿಸಿ ಕಠಿಣ ಸಾಧನೆಯ ಮೂಲಕವೇ ಬ್ರಾಹ್ಮಣ ಪಾರಮ್ಯವನ್ನು ಮೆರೆದ ಕ್ಷತ್ರಿಯ ವಿಶ್ವಾಮಿತ್ರನ ಕಥೆ ಇದು. ಬ್ರಾಹ್ಮಣನಾಗಿ 'ಹುಟ್ಟು'ವುದಲ್ಲ ಬದಲಿಗೆ ಸತತ ಸಾಧನೆಯ ಮುಖಾಂತರ 'ಆಗುವುದು' ಎಂಬುದು ಸಾಬೀತುಪಡಿಸುವುದು ದೇವುಡು ನರಸಿಂಹ ಶಾಸ್ತ್ರಿಗಳ 'ಮಹಾಬ್ರಾಹ್ಮಣ'ದ ಬಹುಮುಖ್ಯ ಕಾಳಜಿ. ಕ್ಷತ್ರಿಯನಾಗಿ ಹುಟ್ಟಿದರೂ ಸ್ವರ್ಗಕ್ಕೇ ಪರ್ಯಾಯವಾದ 'ತ್ರಿಶಂಕು ಸ್ವರ್ಗ'ವನ್ನು ಸೃಷ್ಟಿಸುವ ಮಟ್ಟಿಗೆ 'ಮಹಾಬ್ರಾಹ್ಮಣ'ನಾಗಿ ಬೆಳೆಯುವ ದೇವುಡು ಅವರ ವಿಶ್ವಾಮಿತ್ರ ನಮ್ಮಲ್ಲಿ ಹುದುಗಿರಬಹುದಾದ ಅಂತಃಶಕ್ತಿಯ ಸೂಚಕವಾಗುತ್ತಾನೆ. ಆಧ್ಯಾತ್ಮಿಕ ಒಳನೋಟಗಳ ಮೂಲಕ ತಮ್ಮ ದೃಷ್ಟಿಕೋನವನ್ನು ಸಮರ್ಥಿಸಿಕೊಳ್ಳುವ 'ಮಹಾಬ್ರಾಹ್ಮಣ' ಯಾವ ಕಾಲದಲ್ಲೂ ತನ್ನ ಪ್ರಸ್ತುತತೆ ಕಳೆದುಕೊಳ್ಳಲಾರದು. ಪುರಾಣವನ್ನು ಹೊಸ ಬೆಳಕಿನಲ್ಲಿ ಹೆಣೆದ ಈ ಕೃತಿ ಕನ್ನಡಿಗರು ಓದಲೇಬೇಕಾದದ್ದು.

ಟಿಎಸ್ಐ

ಸಂಧ್ಯಾರಾಗ

ಪ್ರಗತಿಶೀಲ ಚಳವಳಿಯ ಮುಂಚೂಣಿಯಲ್ಲಿದ್ದು ಬರೆಯುವುದಷ್ಟೇ ಅಲ್ಲ, ಬದುಕನ್ನೂ ಬದಲಿಸಬೇಕು ಎಂದು ಶ್ರಮಿಸಿದವರು ಅ.ನ. ಕೃಷ್ಣರಾಯರು. ಕನ್ನಡ ಸಾಹಿತ್ಯ ಲೋಕಕ್ಕೆ ಅನಕೃ ನೀಡಿದ ಅಮೂಲ್ಯ ಕೃತಿಗಳಲ್ಲಿ 'ಸಂಧ್ಯಾರಾಗ' ಖಂಡಿತವಾಗಿಯೂ ಮಹತ್ವದ್ದು. ವ್ಯಕ್ತಿಯೊಬ್ಬನ ಪರಿಪೂರ್ಣತೆಯ ಹುಡುಕಾಟದಲ್ಲಿ ಆತ ಎದುರಿಸುವ ಸವಾಲು- ಸಂಕಷ್ಟಗಳ ಜೊತೆಗೆ ದುರ್ಬಲವಾದ ಮಾನವ ಜೀವನ ತಾನು ಕನಸಿದ ಪ್ರಗತಿ ನಿಜವಾದಾಗ ಅದರ ವೇಗಕ್ಕೆ ಜರ್ಜರಿತವಾಗುವುದನ್ನು ಚಿತ್ರಿಸುತ್ತದೆ. ಸಾರ್ಥಕ ಸಾಧನೆಯ ಶಿಖರಕ್ಕೇರುವ ಕಲಾವಿದನೊಬ್ಬನ ಸಾಧನೆಯ ಹಾದಿ ಮತ್ತು ಸಮಾಜ ಅಂತಹ ವ್ಯಕ್ತಿಯನ್ನು ಸ್ವೀಕರಿಸುವ ಬಗೆಯನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಅನಕೃ. ಕನ್ನಡದ ಅತ್ಯಂತ ಜನಪ್ರಿಯ ಕೃತಿಗಳಲ್ಲಿ ಒಂದಾದ 'ಸಂಧ್ಯಾರಾಗ' ಖಂಡಿತವಾಗಿಯೂ ನಿಮ್ಮ ಪುಸ್ತಕದ ಕಪಾಟಿಗೆ ಮೆರುಗು.

ಟಿಎಸ್ಐ

ದುರ್ಗಾಸ್ತಮಾನ

ತಮ್ಮ ಮಹತ್ವಾಕಾಂಕ್ಷೆಯ ಈ ಕೃತಿಯ ಮುನ್ನುಡಿಯಲ್ಲಿ ತ.ರಾ. ಸುಬ್ಬರಾವ್ ಅವರು, "ದುರ್ಗ ಎಂದರೆ ಮದಕರಿ, ಮದಕರಿ ಎಂದರೆ ದುರ್ಗ" ಎನ್ನುತ್ತಾರೆ. ಇದೇ ಮಾತುಗಳು ಮುನ್ನುಡಿಯ ಹೊಸ್ತಿಲನ್ನು ದಾಟಿ ಅಕ್ಷರಗಳ ಮೆಟ್ಟಿಲೇರುವ ಪ್ರತಿಯೊಬ್ಬ ಓದುಗನ ಅನುಭವವಾಗುತ್ತವೆ. ಪುಟಗಳು ಮಗ್ಗುಲು ಬದಲಿಸಿದಂತೆ ದುರ್ಗದ ಕೋಟೆ, ಮದಕರಿ ನಾಯಕ, ಓಬವ್ವ ನಾಗತಿ, ಕಳ್ಳಿ ನರಸಪ್ಪಯ್ಯ ಮನಸ್ಸನ್ನು ಆವರಿಸತೊಡಗುತ್ತಾರೆ. ದುರಂತ ನಾಯಕ ಮದಕರಿಯ ಭಾವತೀವ್ರತೆ, ಉತ್ಕಟತೆ ಆಪ್ತವಾಗುತ್ತದೆ. ದುರ್ಗದ ಕಲ್ಲಿನ ಕೋಟೆ ಕೇವಲ ಒಂದು 'ಕೋಟೆ' ಎನಿಸದೆ ಕನ್ನಡಿಗರ ಆಶೋತ್ತರಗಳ, ಜೀವಂತಿಕೆಯ ಪ್ರತಿನಿಧಿಯಂತೆ ಭಾಸವಾಗುತ್ತದೆ. ದುರ್ಗದ ರಕ್ತದಲ್ಲಿ ಮದಕರಿ ನಾಯಕ ಪ್ರವಹಿಸುವ ರೀತಿಯನ್ನು ಓದಿಯೇ ಅನುಭವಿಸಬೇಕು! ತರಾಸು ತಮ್ಮೆಲ್ಲಾ ಸೃಜನಶೀಲತೆಯನ್ನೂ ಈ ಕೃತಿಯ ಮೂಲಕ ಓದುಗರ ಮುಂದೆ ಹರವಿಟ್ಟಿದ್ದಾರೆ. ಚರಿತ್ರೆಯಲ್ಲಿ ಘಟಿಸಿದ ಸಂಗತಿಗಳಿಗೆ ಈ ಕೃತಿ ನೀಡುವ ಹೊಳವುಗಳು ಅಪಾರ.

ಟಿಎಸ್ಐ

ಗ್ರಾಮಾಯಣ

ರಾವ್ ಬಹದ್ದೂರರ ಈ ಕೃತಿ ಕನ್ನಡ ಸಾಹಿತ್ಯದ ಮಟ್ಟಿಗೆ 'ದಂತಕತೆ'. ಕೃಷ್ಣಾ ನದಿಯ ದಂಡೆಯ ಮೇಲಿರುವ 'ಪಾದಳ್ಳಿ' ಎಂಬ ಗ್ರಾಮದ ಬೀದಿಯ ಗುಂಟ ಸಾಗುವ ಈ ಕಾದಂಬರಿ ಹಲವು ರೀತಿಯಲ್ಲಿ ಮಹತ್ವದ ಕೃತಿ. ಪಾದಳ್ಳಿಯ ಸ್ಥಿತಿ, ಗತಿ ಅವನತಿಗಳೇ ಕಾದಂಬರಿಯ ಜೀವವಾಗಿ ಮಿಡಿಯುತ್ತವೆ. ಸ್ವಾತಂತ್ರ್ಯಪೂರ್ವ ಭಾರತ ಸ್ವಾತಂತ್ರ್ಯೋತ್ತರ ಭಾರತವಾಗುವ ಸಂದರ್ಭದಲ್ಲಿ ಗ್ರಾಮ್ಯ ಬದುಕಿನಲ್ಲಾದ ಪಲ್ಲಟಗಳನ್ನು ಕಾದಂಬರಿ ಚಿತ್ರಿಸುತ್ತದೆ. ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ 'ಸ್ಥಳೀಯ' ಪರಿಕಲ್ಪನೆಯಲ್ಲುಂಟಾಗುವ ಬದಲಾವಣೆಗಳೂ ಈ ಕೃತಿಗೆ ಸಂಪನ್ಮೂಲ ಒದಗಿಸಿವೆ. ಒಂದು 'ರಾಷ್ಟ್ರ'ವಾಗುವ ಸಂಭ್ರಮದಲ್ಲಿ 'ಗ್ರಾಮೀಣ ಸಂಸ್ಕೃತಿಯೊಂದು ತನ್ನಿಂದ ತಾನೇ ಕಟ್ಟಿಕೊಳ್ಳುವ ಕೆಡುಕುಗಳು, ಮೌಲ್ಯಗಳಲ್ಲಾಗುವ ಬದಲಾವಣೆಗಳು ಹೀಗೆ ಸಾಮಾಜಿಕ ಜೀವನವನ್ನು ಸಮಗ್ರದಲ್ಲಿ ಗ್ರಹಿಸುವ ಯತ್ನಕ್ಕೆ ರಾವ್ ಬಹದ್ದೂರರು ಕೈ ಹಾಕಿದ್ದಾರೆ. ಕ್ಲಿಷ್ಟತೆ, ಶಾಬ್ದಿಕ ಚಮತ್ಕಾರಗಳೇನೂ ಇಲ್ಲದೆ, ಅತ್ಯಂತ ಸರಳ ರೀತಿಯಲ್ಲಿ ನಿರೂಪಿತಗೊಂಡಿರುವ 'ಗ್ರಾಮಾಯಣ' ಕನ್ನಡ ಮೇರು ಕೃತಿಗಳ ಸಾಲಿನಲ್ಲಿ ಒಂದು. ಮನುಷ್ಯ ಬದುಕಿನ ಕುರಿತು ಆಸಕ್ತಿಯಿರುವ ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ.

ಟಿಎಸ್ಐ

ಶಾಂತಲಾ

ಇತಿಹಾಸದ ಕಸದ ತೊಟ್ಟಿಯಲ್ಲಿ ಕಳೆದು ಹೋಗಿದ್ದ ಅನರ್ಘ್ಯ ರತ್ನ 'ಶಾಂತಲಾ'ಳನ್ನು ಮತ್ತೊಮ್ಮೆ ಅನ್ವೇಷಿಸಿ ಕನ್ನಡಿಗರ ಮುಂದಿಟ್ಟವರು ಸಾಹಿತ್ಯ ಲೋಕದ ದಿಗ್ಗಜ ಕೆ.ವಿ. ಅಯ್ಯರ್. ಇತಿಹಾಸದ ಪುಟಗಳ ಮೂಲೆಯಲ್ಲೆಲ್ಲೋ 'ಹೊಯ್ಸಳ ಸಾಮ್ರಾಜ್ಯದ ಚಕ್ರವರ್ತಿ ವಿಷ್ಣುವರ್ಧನನ ಹೆಂಡತಿ' ಎಂಬ ಚಿಕ್ಕ ಪ್ರಸ್ತಾಪಕ್ಕೆ ಸೀಮಿತವಾಗಿದ್ದ ಶಾಂತಲಾಳ ವ್ಯಕ್ತಿತ್ವದ ಉದಾತ್ತತೆಯನ್ನು ನೆನಪು ಮಾಡಿಕೊಟ್ಟದ್ದು 'ಶಾಂತಲಾ' ಕೃತಿ. ಪತಿ ವಿಷ್ಣುವರ್ಧನ ವೈಷ್ಣವನಾದರೂ ತಾನು ಮಾತ್ರ ಜಿನ ಧರ್ಮಕ್ಕೆ ನಿಷ್ಠಳಾಗಿರುವ ಶಾಂತಲಾ ತನ್ಮೂಲಕ ಧಾರ್ಮಿಕ ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯವನ್ನು ಒಳಗೊಂಡ ದಾಂಪತ್ಯಕ್ಕೆ ನಿದರ್ಶನಳಾಗುತ್ತಾಳೆ. ಆ ದಾಂಪತ್ಯದ ಉದಾತ್ತತೆಯನ್ನು ಎತ್ತಿ ಹಿಡಿಯುವುದು ಕೃತಿಯ ಪ್ರಮುಖ ಕಾಳಜಿಯೂ ಹೌದು. ಇತಿಹಾಸವನ್ನು ಆಧಾರವಾಗಿಟ್ಟುಕೊಂಡು ಐತಿಹಾಸಿಕ ಕೃತಿ ರಚಿಸುವ ಪರಿಪಾಠ ನಮ್ಮಲ್ಲಿದೆ. ಆದರೆ ಇಲ್ಲಿ ಮಾತ್ರ ತದ್ವಿರುದ್ಧ. ಹೊಯ್ಸಳ ಸಾಮ್ರಾಜ್ಯದ ಕುರಿತು ಅಧ್ಯಯನ ನಡೆಸಿದ ಕೆಲವು ಇತಿಹಾಸಕಾರರು ಶಾಂತಲಾಳ ಕುರಿತ ತಮ್ಮ ಅಧ್ಯಯನಕ್ಕೆ ಕೆ.ವಿ. ಅಯ್ಯರ್ ಅವರ ಹೊಳವುಗಳನ್ನು ಎರವಲು ಪಡೆದದ್ದೂ ಇದೆ! ಅದು ಈ ಕೃತಿಯ ಪ್ರಾಮಾಣಿಕತೆಗೆ ಸಾಕ್ಷಿ.

ಟಿಎಸ್ಐ

ಸಂಸ್ಕಾರ

ಸಂಪ್ರದಾಯ ಮತ್ತು ಮೌಢ್ಯಗಳ ಕೂಪದಲ್ಲಿ ಕೊಳೆಯುವ ಸಮಾಜ ಹಾಗೂ ಸ್ವಂತಿಕೆಯ ಹುಡುಕಾಟದಲ್ಲಿರುವ ಆಧುನಿಕ ಮನುಷ್ಯನ ನಡುವಿನ ಸಂಘರ್ಷವನ್ನು ಮಾನವನ ಮೂಲಭೂತ ಮಿತಿಗಳಾದ ಹಸಿವು, ಕಾಮ ಮತ್ತು ರೋಗದ ಸಂದರ್ಭದಲ್ಲಿ ಇಟ್ಟು ನೋಡುವ ಕಾದಂಬರಿ 'ಸಂಸ್ಕಾರ'.

27ರ ಹರೆಯದ ಯು.ಆರ್. ಅನಂತಮೂರ್ತಿ ದೂರದ ಬರ್ಮಿಂಗ್‌ಹ್ಯಾಮ್‌ನಲ್ಲಿ ಕುಳಿತು, ಭಾರತೀಯ ಸಮಾಜದ ಕಟ್ಟುಕಟ್ಟಳೆ, ಮುಕ್ತಿ, ಸಂಸ್ಕಾರ ಮುಂತಾದ ಸಾಂಪ್ರದಾಯಿಕ ವಾಸ್ತವಕ್ಕೂ ಹೊಸ ಶಿಕ್ಷಣ- ತಿಳಿವಳಿಕೆಯ ಮೂಲಕ ಆ ನಂಬಿಕೆಗಳನ್ನು ಬುಡಮೇಲು ಮಾಡುತ್ತಿರುವ ಆಧುನಿಕತೆಯ ಬಗ್ಗೆ ಮಾಡಿದ ಅವಲೋಕನದ ಫಲ ಈ ಕಾದಂಬರಿ. ಬ್ರಾಹ್ಮಣ್ಯವನ್ನು ಧಿಕ್ಕರಿಸಿ, ಅಗ್ರಹಾರದವರ ವಿರೋಧ ಕಟ್ಟಿಕೊಂಡು ಬದುಕಿದ ನಾರಾಣಪ್ಪ 'ಪ್ಲೇಗ್' ರೋಗಕ್ಕೆ ಬಲಿಯಾಗುವುದರೊಂದಿಗೆ ಆರಂಭವಾಗುವ ಸಂಸ್ಕಾರದ ಕಥೆ, ಪ್ರಾಣೇಶಾಚಾರ್ಯನ ನಂಬಿಕೆ ಮತ್ತು ವಾಸ್ತವದ ನಡುವಿನ ತೊಳಲಾಟ, ಚಂದ್ರಿಯ ಅಸಹಾಯಕತೆ, ಮಾಲೇರಪುಟ್ಟನ ನಿರುಮ್ಮಳ ಬದುಕುಗಳ ಮೂಲಕ ಬೆಳೆಯುತ್ತಾ, ಭಾರತೀಯ ಸಂಸ್ಕೃತಿ ಹಾಗೂ ಭಾರತೀಯರ ಮನಸ್ಥಿತಿಯೊಳಗೆ ಪಾಪಾಸುಕಳ್ಳಿಯಂತೆ ಹಬ್ಬಿರುವ ಕಂದಾಚಾರವನ್ನು ಇಂಚಿಂಚಾಗಿ ಬೆತ್ತಲೆಗೊಳಿಸುತ್ತದೆ.

ಟಿಎಸ್ಐ

ಗಂಗವ್ವ ಮತ್ತು ಗಂಗಾಮಾಯಿ

ಕನ್ನಡದ ಮೇರು ಕೃತಿಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಗಳಿಸಿದ 'ಗಂಗವ್ವ ಮತ್ತು ಗಂಗಾಮಾಯಿ' ಶಂಕರ ಮೊಕಾಶಿ ಪುಣೇಕರ ಅವರ ಚೊಚ್ಚಲ ಕಾದಂಬರಿ. ಈ ಕಾದಂಬರಿಯ ಪ್ರಮುಖ ಆಕರ್ಷಣೆ ಎಂದರೆ ಪಾತ್ರಸೃಷ್ಟಿ ಹಾಗೂ ಸಂಭಾಷಣೆ. ತುಂಬಿ ತುಳುಕುವ ಜೀವಂತಿಕೆ, ಸ್ವಭಾವ ವಿಲಕ್ಷಣತೆಯ ಇಲ್ಲಿನ ಪಾತ್ರಗಳು ಯಾವುದೇ ಕಾಲದ ಮನುಷ್ಯನ ಮನಸ್ಥಿತಿಯ ಪ್ರತಿಬಿಂಬವಾಗಬಲ್ಲಂಥವು. ಕುರ್ತಕೋಟಿ ಅವರ ಮಾತುಗಳನ್ನೇ ಉದ್ಧರಿಸುವುದಾದರೆ, "ಕಾದಂಬರಿಯ ಹೊರಗೂ ಜೀವಿಸಿರಬಲ್ಲವು". ಗಂಗವ್ವ- ರಾಘಪ್ಪರ ಶೀತಲ ಸಮರ, ರಾಘಪ್ಪ ಹಾಗೂ ದೇಸಾಯಿಯರ ನಡುವೆ ನಡೆಯುವ ಮಾತುಗಳ ಚದುರಂಗದಾಟ, ಇವರ ಅಹಮ್ಮುಗಳ ನಡುವೆ ಸಿಲುಕಿ ಅರೆಜೀವವಾಗುವ ಎಳೆ ಮನಸ್ಸುಗಳು, ಇವೆಲ್ಲವನ್ನೂ ಕಟ್ಟಿಕೊಡುವ ಉತ್ತರ ಕರ್ನಾಟಕದ ಸಂಭಾಷಣಾ ಶೈಲಿ ಈ ಕೃತಿಯ ವೈಶಿಷ್ಟ್ಯ. ಮೊಕಾಶಿ ಅವರ ಮತ್ತೊಂದು ಕೃತಿ 'ಅವಧೇಶ್ವರಿ' ಓದುವ ಮೊದಲು ಗಂಗವ್ವನ ಹೋರಾಟವನ್ನೊಮ್ಮೆ ನೋಡಿ ಬಿಡಿ.

ಟಿಎಸ್ಐ

ಗೃಹಭಂಗ

ಬಹುತೇಕ ಭಾರತದ ಎಲ್ಲಾ ಭಾಷೆಗಳಿಗೂ ಅನುವಾದಗೊಂಡ ಎಸ್.ಎಲ್. ಭೈರಪ್ಪನವರ ಈ ಕೃತಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನವಿದೆ. ಕೌಟುಂಬಿಕ ನೆಲೆಯಲ್ಲಿ ಅರಾಜಕತೆ ಎಂಬುದು ಹೇಗೆ ಬದುಕನ್ನೇ ಸರ್ವನಾಶಗೊಳಿಸುತ್ತದೆ ಎಂಬುದರ ಚಿತ್ರಣವನ್ನು ಈ ಕೃತಿ ನೀಡುತ್ತದೆ. ಒಂದು ಮನೆಯ ಸರ್ವನಾಶಕ್ಕೆ ಏನೆಲ್ಲಾ ಬೇಕೋ ಎಲ್ಲವೂ ಒಂದೇ ಸೂರಿನಡಿಯಲ್ಲಿ ಲಭ್ಯವಾದರೆ ಏನಾಗಬಹುದು ಎಂಬುದನ್ನು ನಂಜಮ್ಮನ ಸಂಸಾರಕ್ಕೆ ಒದಗಿದ ಗತಿಯೇ ಸಾಬೀತು ಪಡಿಸುತ್ತದೆ. ರಂಗಮ್ಮ, ಅವಳ ಪುತ್ರೋತ್ತಮರಾದ ಚೆನ್ನಿಗರಾಯ, ಅಪ್ಪಣ್ಣಯ್ಯ ಈ ಮನೆಗೆ ಸೊಸೆಯಾಗಿ ಬರುವ ನತದೃಷ್ಟೆ ನಂಜಮ್ಮ.. ಹೀಗೆ ಈ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ಸರ್ವಶಕ್ತವಾಗಿ ಮೂಡಿ ಬಂದಿವೆ.

ಟಿಎಸ್ಐ

ಮುಕ್ತಿ

"ಕೊನೆಗೆ! ಕೊನೆಗೊಮ್ಮೆ- ನನ್ನ ಭೂತಕಾಲದ ಭೂತದಿಂದ ಒಮ್ಮೆ ಮುಕ್ತನಾಗುವೆ!" - ಹೀಗೆ ಶಾಂತಿನಾಥ ದೇಸಾಯಿ ಅವರ 'ಮುಕ್ತಿ' ಕಾದಂಬರಿ ಪ್ರಾರಂಭವಾಗುವುದೇ ಹೊಸತಿನ ನಿರೀಕ್ಷೆಯಲ್ಲಿ. ಭೂತದಿಂದ ಕಳಚಿಕೊಳ್ಳುವ ಧಾವಂತದಲ್ಲಿ. ಸದ್ಯದ 'ವಾಸ್ತವ'ದಿಂದ ದೂರಾಗಿ ಇನ್ನೆಲ್ಲೋ ಫಲವತ್ತಾದ 'ಭವಿಷ್ಯದಲ್ಲಿ' ಚಿಗುರುವ ಹಂಬಲದಲ್ಲಿ. ಕೀಳರಿಮೆಯಲ್ಲಿ ತೊಳಲಾಡುತ್ತಾ, ತನ್ನತನದ ಹುಡುಕಾಟದಲ್ಲಿದ್ದ ಕೇಂದ್ರ ಪಾತ್ರ ಗೌರೀಶ ತನ್ನ ಕೊಳೆಯುವ ಸ್ಥಿತಿಯಿಂದ ಹೊರಬಂದು ಹೊಸದಾಗಿ ಚಿಗುರುವ, ಆ ಮೂಲಕ ಹೊಸ ಬದುಕನ್ನು ತನ್ನದಾಗಿಸಿಕೊಳ್ಳುವ ಹಂಬಲ ಕೃತಿಯ ಕಥೆಯ ಚಾಲನೆಗೆ ಇಂಧನವಾಗುತ್ತದೆ. ನವ್ಯದ ಪ್ರಜ್ಞೆಯ ಪಡಿಯಚ್ಚಿನ ಪಾತ್ರಗಳ ಮೂಲಕ ತಮ್ಮ ಸಮಕಾಲೀನ ಆಧುನಿಕ ವ್ಯಕ್ತಿತ್ವಗಳ ತಮ್ಮತನದ ಹುಡುಕಾಟವನ್ನು ದೇಸಾಯಿ ಇಲ್ಲಿ ಸಮರ್ಥವಾಗಿ ಚಿತ್ರಿಸಿದ್ದಾರೆ. ಅಪ್ರಬುದ್ಧ ಭಾವನೆಗಳ ಅಲೆಗಳಿಗೆ ಸುಲಭವಾಗಿ ಪಕ್ಕಾಗುವ ಗೌರೀಶನ ಅಪ್ರಬುದ್ಧತೆಗೆ ವ್ಯತಿರಿಕ್ತವಾಗಿ ಸಾವಿನ ಮಗ್ಗುಲಲ್ಲಿ ಕೂತೂ ಉದಾತ್ತತೆಯನ್ನು ಧೇನಿಸುವ ಬುದ್ಧಿಜೀವಿ ಶ್ರೀಕಾಂತ ಓದುಗರ ಮನ ಮುಟ್ಟುತ್ತಾನೆ. ಶಾಂತಿನಾಥರ ಈ ಕೃತಿಯನ್ನು ಓದಿದ ಬಳಿಕ ಬಹುಶಃ ಸಾಹಿತ್ಯಾಸಕ್ತರ ಪಾಲಿಗೆ ಸಾಹಿತ್ಯ ಕೇವಲ ರಂಜನೆಯ ಸರಕಾಗಲಾರದು. ವ್ಯಕ್ತಿತ್ವವನ್ನೇ ಕಳೆದುಕೊಂಡು ಗಾಢಾಂಧಕಾರದಲ್ಲಿ ತಡಬಡಾಯಿಸುವ ಪ್ರತಿಯೊಬ್ಬರಿಗೂ ಅದು ಕೈದೀವಿಗೆಯಾದೀತು. ನಮ್ಮೊಳಗಿನ ಕ್ಷುದ್ರತೆಯನ್ನು, ಸಣ್ಣತನವನ್ನು ಮೀರುವ ಪ್ರೇರಣೆಯಾದೀತು.

ಟಿಎಸ್ಐ

ವೈಶಾಖ

ಕಥೆ ದರುಮನಹಳ್ಳಿಯ ಹಾದಿಯ ಗುಂಟ ಸಾಗುತ್ತದೆ. ಕಥೆ ಕಟ್ಟುತ್ತಲೇ ಚದುರಂಗರು ವ್ಯಕ್ತಿಯೊಬ್ಬನ ಸಾಮಾಜಿಕ ಬದುಕಿಗೆ ಆತನ ಪ್ರಜ್ಞೆ ವ್ಯಕ್ತಪಡಿಸುವ ಪ್ರತಿಕ್ರಿಯೆಗಳನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಾರೆ. ಈ ಕಾದಂಬರಿಯ ಕಥಾಸಂಪನ್ಮೂಲವೆಂದರೆ ಹೆರವರ ಕೆಲಸಗಳನ್ನು ಮಾಡಿಕೊಡುತ್ತಾ, ಅವರು ತೋರುವ 'ಕರುಣೆ'ಯಿಂದಲೇ ತುತ್ತಿನ ಚೀಲ ತುಂಬಿಸಿಕೊಳ್ಳುವ ಹರಿಜನ ಬಾಲಕ ಲಕ್ಕ ಹಾಗೂ ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ಮಾವನ ಆಶ್ರಯದಲ್ಲಿರುವ ಬ್ರಾಹ್ಮಣ ವಿಧವೆ ರುಕ್ಮಿಣಿ ಅವರ ಬದುಕಿನ ಅನುಭವಗಳು. ಇವರಿಬ್ಬರ ಬದುಕಿನ ಚಿತ್ರಣ ನೀಡುತ್ತಲೇ ಸಮಾಜವೆಂಬ ಚೌಕಟ್ಟಿನಲ್ಲಿ ವ್ಯಕ್ತಿವಿಶಿಷ್ಟ ಅನುಭವಗಳು ವ್ಯಾಖ್ಯಾನಗೊಳ್ಳುವ ರೀತಿಯನ್ನು ಚದುರಂಗ ವಿವರಿಸುತ್ತಾರೆ. ಕಾದಂಬರಿಯ ಹಲವು ಘಟ್ಟಗಳಲ್ಲಿ 'ಲೈಂಗಿಕತೆ' ತುಸು ಹೆಚ್ಚು ಎಂಬಂತೆ ಹಣಕಿ ಹಾಕಿದ್ದರೂ ಅದೆಲ್ಲೂ ವೈಭವೀಕರಣಗೊಂಡಿಲ್ಲ. ಲಕ್ಷ್ಮಣತೀರ್ಥ ಕಾವೇರಿ ನದಿ ಬಯಲಿನ ಸಂಸ್ಕೃತಿಯನ್ನು ಅರಿಯುವ ಹಂಬಲವುಳ್ಳವರಿಗೆ ವೈಶಾಖ ಕಾದಂಬರಿ ಉತ್ತಮ ಆಕರ ಗ್ರಂಥವಾಗಬಲ್ಲದು, ಹಾಗೆಯೇ ಗ್ರಾಮೀಣ ಭಾಷೆಯ ಅಧ್ಯಯನಕಾರರಿಗೂ 'ವೈಶಾಖ' ಭರಪೂರ ಸಂಪನ್ಮೂಲ ಒದಗಿಸುತ್ತದೆ. ಈ ದೃಷ್ಟಿಯಲ್ಲಿ ವೈಶಾಖ ಉತ್ತಮ ಪ್ರಾದೇಶಿಕ ಕಾದಂಬರಿಯೂ ಹೌದು.

ಟಿಎಸ್ಐ

ಮೃತ್ಯುಂಜಯ

ಸಾಮಾಜಿಕ ಬದಲಾವಣೆ ಹಾಗೂ ಶೋಷಿತರ ನೋವಿಗೆ ದನಿಯಾಗುವ ತಮ್ಮ ಜೀವಮಾನದ ಆಶಯವನ್ನೇ ಬರವಣಿಗೆಯ ದ್ರವ್ಯವನ್ನಾಗಿಸಿಕೊಂಡಿರುವ ಲೇಖಕ 'ನಿರಂಜನ' ಅವರ ಸಾಹಿತ್ಯಿಕ ಪ್ರತಿಭೆಯ ಮೈಲಿಗಲ್ಲು ಮೃತ್ಯುಂಜಯ ಕಾದಂಬರಿ. ಈಜಿಪ್ಟ್ ನಾಗರಿಕತೆಯ ಭೂತಕಾಲವನ್ನು ಕೆದಕುತ್ತಲೇ ಇಡೀ ಮನುಕುಲದ ಇತಿಹಾಸದ ನಾಡಿಮಿಡಿತವನ್ನು ಗ್ರಹಿಸುವ ಚಿಕಿತ್ಸಕ ಮನಸ್ಸು ನಿರಂಜನರದ್ದು. ಪ್ರಾಚೀನ ಈಜಿಪ್ಟ್‌ನ ನಾಗರಿಕತೆಯ ಯಾವುದೋ ಘಟ್ಟದಲ್ಲಿ ನಡೆದ ಜೀತದಾಳುಗಳ ದಂಗೆಯ ಜಾಡು ಅರಸಿ ಹೊರಟ 'ನಿರಂಜನ'ರ ಸರ್ವಗ್ರಾಹಿ ಲೇಖನಿಯಿಂದ ಮೂಡಿಬಂದ ಅಪರೂಪದ ಕೃತಿ ಇದು. ಯಜಮಾನ ಸಂಸ್ಕೃತಿ ತಾನು ನಡೆಸುವ ಶೋಷಣೆ, ದೌರ್ಜನ್ಯಗಳಿಗೆ ಸಮರ್ಥನೆಯಾಗಿ ಧರ್ಮವನ್ನು ಬಳಸಿಕೊಳ್ಳುವ ರೀತಿ ಈ ಕೃತಿಯಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಯಾವುದೇ ನಾಗರಿಕತೆ ಇರಲಿ ಅದರ ಬೆಳವಣಿಗೆಯನ್ನು ನಿರ್ಧರಿಸುವುದು ಅದರೊಳಗಿನ ತಾಕಲಾಟ ಹಾಗೂ ಘರ್ಷಣೆಗಳು ಎಂಬ ನಿರಂಜನರ ನಂಬಿಕೆ ಕೃತಿಯ ಪುಟ- ಪುಟಗಳಲ್ಲೂ ಪ್ರತಿಫಲಿತವಾಗಿದೆ. ಒಟ್ಟಾರೆಯಾಗಿ, ನಾಗರಿಕತೆಯ ಕಥನಗಳ ಕುರಿತು ಕುತೂಹಲ ಹೊಂದಿರುವ ಪ್ರತಿಯೊಬ್ಬರೂ ಹೊಂದಿರಲೇಬೇಕಾದ ಕೃತಿ, ನಿರಂಜನ ಅವರ 'ಮೃತ್ಯುಂಜಯ'.

ಟಿಎಸ್ಐ

ಚಿರಸ್ಮರಣೆ

ತೇಜಸ್ವಿನಿ ನದಿಯ ದಂಡೆಯಲ್ಲಿರುವ 'ಕಯ್ಯೂರು' ಎಂಬ ಕರ್ನಾಟಕದ ಗಡಿನಾಡಿನ ಗ್ರಾಮದಲ್ಲಿ ನಡೆಯುವ ರೈತ ಬಂಡಾಯದ ಹಾಗೂ ಸ್ವಾತಂತ್ರ್ಯ ಹೋರಾಟದ ಅಂತಃಸತ್ವವನ್ನು ಅದರ ಕಾಲಾವಧಿಯ ಚೇತನವನ್ನು ಕಲೆಯಲ್ಲಿ ಸೆರೆ ಹಿಡಿಯುವ ಯತ್ನ ನಿರಂಜನ ಅವರ 'ಚಿರಸ್ಮರಣೆ' ಕಾದಂಬರಿ. ಹೆಪ್ಪುಗಟ್ಟಿದ ಊಳಿಗಮಾನ್ಯ ಸಂದರ್ಭದಲ್ಲಿ ರೈತರ ಸ್ವಾಭಿಮಾನವನ್ನು ಉದ್ದೀಪಿಸುತ್ತಾ ಅದರ ಜೊತೆಗೇ, ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ತೊಡೆತಟ್ಟುವ ಅಪ್ಪು, ಚಿರಕುಂಡ, ಕುಙಂಬು, ಅಬೂಬಕರ್ ಮುಂತಾದ ಯುವಚೇತನಗಳ ತ್ಯಾಗ ಬಲಿದಾನದ ನಿರೂಪಣೆ ಈ ಕೃತಿಯ ಜೀವಾಳ. ಕ್ರಾಂತಿವೀರರ ಕ್ರಾಂತಿದಾಹಕ್ಕೆ ನೀರೆರೆಯುವ ಮೇಷ್ಟ್ರು, ಅವರಿಗೆ ಒತ್ತಾಸೆಯಾಗುವ ಜಾನಕಿ, ಬೂಬಮ್ಮ, ಕಯ್ಯೂರಿನ ಜನತೆ, ಇವರೆಲ್ಲರ ಸ್ವಾಭಿಮಾನವನ್ನು ಮುರುಟಿಸಲು ಯತ್ನಿಸುವ ಜಮೀನ್ದಾರ ನಂಬೂದಿರಿ; ಪ್ರತಿ ಪಾತ್ರಗಳೂ ಓದುಗರ ಮನದಲ್ಲಿ ಬಹುಕಾಲ ನೆಲೆಸುತ್ತವೆ. 'ಮೃತ್ಯುಂಜಯ'ದಂಥ ಮೇರು ಕೃತಿ ನೀಡಿದ ನಿರಂಜನರು ನೀಡಿದ ಮತ್ತೊಂದು ಬಳುವಳಿ ಈ 'ಚಿರಸ್ಮರಣೆ'.

ಟಿಎಸ್ಐ

ಶಿಕಾರಿ

ಕಳೆದು ಹೋಗಿದ್ದ ತನ್ನ ಅಣ್ಣ ಹಾಗೂ ತಂಗಿಯನ್ನು ಹುಡುಕಿ ಹೊರಟ ನಾಯಕ ನಾಗಪ್ಪನ ಅನುಭವದ ಅಭಿವ್ಯಕ್ತಿಯೇ 'ಶಿಕಾರಿ'. ನಾಗಪ್ಪನ ಅನ್ವೇಷಣೆಯ ಹಾದಿಯಲ್ಲಿ ಎದುರಾಗುವ ಸಂಬಂಧಗಳ ಪೊಳ್ಳುತನಗಳು, ಕಪಟತನಗಳು ಆತನಲ್ಲಿ ದಿಗಿಲು ಹುಟ್ಟಿಸುತ್ತವೆ. ಮುಖ್ಯಪಾತ್ರದ ಆತ್ಮವಿಶ್ಲೇಷಣೆಯಲ್ಲಿಯೇ ತನ್ನ ಹರಿವು ಕಂಡುಕೊಳ್ಳುವ ಕೃತಿ ಪ್ರಜ್ಞಾಪ್ರವಾಹ ನಿರೂಪಣಾ ತಂತ್ರದ ಮೂಲಕ ಸಾಗುತ್ತಾ ಓದುಗರನ್ನು ವಿಭ್ರಮೆಗೊಳಿಸುವಷ್ಟು ಪ್ರಭಾವಶಾಲಿ. ಮನುಷ್ಯನೊಬ್ಬನ ಯಾತನೆಗೆ ಮನುಷ್ಯನೇ ಕಾರಣವಾಗುವುದರ ಹಿಂದೆ ಅಡಗಿರುವ ರಾಜಕೀಯ, ಸಾಮಾಜಿಕ ಕಾರಣಗಳ ಮೇಲೆ ಈ ಕಾದಂಬರಿ ಬೆಳಕು ಚೆಲ್ಲುತ್ತದೆ. ಒಟ್ಟಿನಲ್ಲಿ ಮನೋವೈಜ್ಞಾನಿಕ ನೆಲೆಯ ಮೇಲೆ ವ್ಯಕ್ತಿಯೊಬ್ಬನ ಬದುಕನ್ನು, ಆತನ ಅನಿಸಿಕೆಯನ್ನು ದಾಖಲಿಸುವ ಪ್ರಯತ್ನಕ್ಕೆ ಇಲ್ಲಿ ಲೇಖಕ ಯಶವಂತ ಚಿತ್ತಾಲ ಕೈ ಹಾಕಿದ್ದಾರೆ. ಓದುತ್ತಾ ಹೋದಂತೆ ಓದುಗನಿಗೆ ಕಾದಂಬರಿಯ ನಾಯಕ 'ನಾಗಪ್ಪ' ತನ್ನದೇ ವ್ಯಕ್ತಿತ್ವದ ಒಂದು ಅವಿಭಾಜ್ಯ ಅಂಗ ಎಂಬಂತೆ ಭಾಸವಾಗುತ್ತದೆ. 'ಮುಂಬೈ ನಗರ' ಮತ್ತು 'ಹನೇಹಳ್ಳಿ' ನಡುವೆ ಹೊಯ್ದಾಡುವ ನಾಗಪ್ಪನ ವಿಕ್ಷಿಪ್ತ ವ್ಯಕ್ತಿತ್ವದ ಮೂಲಕ ಚಿತ್ತಾಲರು, ರಾಜಕಾರಣ ಮತ್ತು ಅಧಿಕಾರ ಕೇಂದ್ರಿತ ವ್ಯವಸ್ಥೆಯೊಂದರಲ್ಲಿ ಭಾವನಾತ್ಮಕ ವ್ಯಕ್ತಿ ಹೇಗೆ ಬಲಿಪಶುವಾಗುತ್ತಾನೆ ಎಂಬುದನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.

ಟಿಎಸ್ಐ

ಮಾಡಿದ್ದುಣ್ಣೋ ಮಹಾರಾಯ

ಎಂ.ಎಸ್. ಪುಟ್ಟಣ್ಣಯ್ಯನವರ ಈ ಕೃತಿಯ ರಚನಾ ಕ್ರಮದಲ್ಲಿಯೇ ಒಂದು ವೈಶಿಷ್ಟ್ಯವಿದೆ. ಪಾಶ್ಚಿಮಾತ್ಯ ಶೈಲಿಯ ಬರವಣಿಗೆಯೆಡೆಗೆ ಕನ್ನಡದ ಮನಸ್ಸು ಜಾರುತ್ತಿದ್ದ ಸಂದರ್ಭದಲ್ಲಿ ಮೂಡಿ ಬಂದ ಕೃತಿ ಇದು. ನಮ್ಮ ಕನ್ನಡದ ಖಾಸಗಿ ಅಭಿವ್ಯಕ್ತಿಗೂ ಪಶ್ಚಿಮದ ಪರಿಭಾಷೆಗಳು ಬಳಕೆಯಾಗುವ ಸಂದರ್ಭದಲ್ಲಿ ಅಪ್ಪಟ ದೇಸೀ ಶೈಲಿಯಲ್ಲಿ 'ಮಾಡಿದ್ದುಣ್ಣೋ ಮಹಾರಾಯ' ಕೃತಿ ರಚಿಸಿದವರು ಎಂ.ಎಸ್. ಪುಟ್ಟಣ್ಣಯ್ಯ. ಕೃತಿಯ ಆರಂಭದಲ್ಲಿಯೇ ಇದೊಂದು ಪೌರಾಣಿಕ ಕೃತಿ ಎನಿಸಿಬಿಡುವ ಸಾಧ್ಯತೆ ಇದೆ. ಒಬ್ಬ ಮನುಷ್ಯ ತಾನು ಏನು ಬೆಳೆಯುತ್ತಾನೋ ಅದನ್ನೇ ಉಣ್ಣುತ್ತಾನೆ, ಮಾಡಿದ ಕಾರ್ಯಕ್ಕೆ ಅನುಗುಣವಾಗಿ ಫಲವನ್ನು ಪಡೆಯುತ್ತಾನೆ ಎನ್ನುವ ನೀತಿಯನ್ನೇ ಸಾರವಾಗಿಟ್ಟುಕೊಂಡು ಕೃತಿ ರಚಿಸಿದ್ದಾರೆ ಪುಟ್ಟಣ್ಣಯ್ಯನವರು. ಒಟ್ಟಿನಲ್ಲಿ, ಈ ಕೃತಿಗೆ ಕನ್ನಡ ಕಾದಂಬರಿ ಪ್ರಕಾರದ ಇತಿಹಾಸದಲ್ಲಿ ತನ್ನದೇ ಆದ ಸ್ಥಾನವಿದೆ. ಪುಟ್ಟಣ್ಣಯ್ಯ ಅವರ ಈ ಕೃತಿಯನ್ನು ಎಡತಾಕಿಯೇ ಕನ್ನಡದ ಆಧುನಿಕ ಸಾಹಿತ್ಯವನ್ನು ಪ್ರವೇಶಿಸಿದರೆ ಓದು ಪರಿಪೂರ್ಣವಾದೀತು.

ಟಿಎಸ್ಐ

ಕಾಡು

ಗ್ರಾಮೀಣ ಬದುಕನ್ನು ಅದರ ಮುಗ್ಧತೆ ಮತ್ತು ಕ್ರೂರತೆಯೊಂದಿಗೇ ಅನಾವರಣಗೊಳಿಸಿದ ಅದ್ಭುತ ಪ್ರತಿಭಾವಂತ ಲೇಖಕ ಶ್ರೀಕೃಷ್ಣ ಆಲನಹಳ್ಳಿ ಅವರ ಈ ಕಾದಂಬರಿ, ಹಳ್ಳಿಯೊಂದರ ಒಡಲಿನ ಬದುಕಿನ ಕತ್ತಲೆ ಮತ್ತು ಬೆಳಕಿನ ಜಗತ್ತನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. 'ಕಾಡು' ಬಾಲಕ ಕಿಟ್ಟಿಯ ಕಣ್ಣುಗಳ ಮೂಲಕ ಹಳ್ಳಿಯ ಬದುಕು, ಆಚರಣೆ, ಕಾಡು, ಮಳೆ, ಅಲ್ಲಿನ ಹಿಂಸೆ, ಕ್ರೌರ್ಯ, ಪ್ರೇಮ, ಕಾಮಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಹಾಗಾಗಿ, ಇದು ಊರ ಸುತ್ತಲಿನ 'ಕಾಡು' ಮಾತ್ರವಲ್ಲದೆ, ಸಮಾಜದೊಳಗಿನ, ಹಾಗೇ ವ್ಯಕ್ತಿಯೊಳಗಿನ 'ಕಾಡು' (ಕತ್ತಲು ಮತ್ತು ನಿಗೂಢತೆ) ಕೂಡ ಹೌದು. ಕಾಡಿನ ಬದುಕಿನ ಹಿಂಸೆ, ಸೇಡು, ಕಾಮ, ನಿಗೂಢತೆ, ಮುಗ್ಧತೆಗಳು ತಮ್ಮ ಚೆಲುವು ಮತ್ತು ವಿಕೃತಿಯೊಂದಿಗೆ ನಾಡಿನ ಬದುಕಲ್ಲಿಯೂ ಬೆಸೆದಿವೆ ಎಂಬ ಸತ್ಯವನ್ನು ತೀರಾ ಕಲಾತ್ಮಕವಾಗಿ ಕಟ್ಟಿಕೊಡುವುದೇ ಆಲನಹಳ್ಳಿಯವರ ಈ ಮಹತ್ವಾಕಾಂಕ್ಷಿ ಕಾದಂಬರಿಯ ಹೆಚ್ಚುಗಾರಿಕೆ.

ಟಿಎಸ್ಐ

ಕರ್ವಾಲೊ

ಕನ್ನಡ ಸಾಂಸ್ಕೃತಿಕ ಲೋಕದ ದೈತ್ಯ ಪ್ರತಿಭೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ 'ಕರ್ವಾಲೊ' ಕೃತಿ ಕನ್ನಡ ಸಾಹಿತ್ಯದ ಮೈಲಿಗಲ್ಲು. ಮಲೆನಾಡಿನ ಕುಗ್ರಾಮವೊಂದರ ಕಾಡಿನ ಬದುಕಿನ ನಿತ್ಯದ ವೈಚಿತ್ರ್ಯಗಳೊಂದಿಗೆ ತಿಳಿಯುವ ಹಂಬಲದ ಮಾನವ ಪ್ರಯತ್ನ ಮತ್ತು ಬಗೆದಷ್ಟೂ ಗೋಜಲಾಗುತ್ತಲೇ ಸಾಗುವ ಪ್ರಕೃತಿಯ ನಿಗೂಢತೆಯ ಕಥೆಯ 'ಕರ್ವಾಲೊ' ಕನ್ನಡ ಸಾಹಿತ್ಯ ಕಂಡ ಅತ್ಯಂತ ಜನಪ್ರಿಯ ಕೃತಿ. ಸಹಜ ಮತ್ತು ವಿಡಂಬನಾತ್ಮಕ ನಿರೂಪಣೆಯೊಂದಿಗೆ ವಸ್ತು ಆಯ್ಕೆ, ಪರಿಣಾಮದ ದೃಷ್ಟಿಯಿಂದ ಕೂಡ ಕನ್ನಡ ಸಾಹಿತ್ಯಕ್ಕೆ ಹೊಸತನ್ನು ತಂದುಕೊಟ್ಟ 'ಕರ್ವಾಲೊ' ವಿಜ್ಞಾನ ಮತ್ತು ಪರಿಸರದ ನಡುವಿನ ಕಣ್ಣಾಮುಚ್ಚಾಲೆಯಲ್ಲಿ ಸೋಲು- ಗೆಲುವು ಯಾರು-ಯಾರಿಗೆ ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದೆ. ಕೃತಿಯ ಮಂದಣ್ಣ, ವಿಜ್ಞಾನಿ ಕರ್ವಾಲೊ, ಕರಿಯಣ್ಣ, ಯಂಕ್ಟ ಜೊತೆಗೆ 'ಹಾರುವ ಓತಿ' ಕೂಡ ಒಂದು ಪಾತ್ರವೇ! ತೇಜಸ್ವಿ ಅವರ ಮಂದಣ್ಣ ಎಷ್ಟು ಮಂದಿಯ ಹೃದಯ ತಟ್ಟಿದ್ದನೆಂದರೆ ಲಂಕೇಶರೂ ಒಮ್ಮೆ, "ನಾನೂ ಕೂಡ ಕೆಲವೊಮ್ಮೆ ಈ ಮಂದಣ್ಣನಂತಿದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಂಡಿದ್ದೇನೆ" ಎಂದಿದ್ದರು!

ಟಿಎಸ್ಐ

ಬಂಡಾಯ

ಮಾಯಾ ನಗರಿ ಮುಂಬೈನ ಸಂಕೀರ್ಣ ಬದುಕಿನ ಚಿತ್ರಣ ಈ ಕೃತಿಯ ವಿಶೇಷ. ಅದರಲ್ಲೂ ಅನುಕ್ಷಣವೂ ಏದುಸಿರು ಬಿಡುತ್ತಾ ಕಾಲನ ಬೆನ್ನಟ್ಟಿ ಓಡುವ ಈ ನಗರಿಯ ರಭಸಕ್ಕೆ ಸಿಕ್ಕ ಕಾರ್ಮಿಕ ವರ್ಗದ ನೋವು- ನಲಿವು, ಕಾಲ ಬದಲಾದಂತೆ ಕಾರ್ಮಿಕ ಹಾಗೂ ಮಾಲಿಕ ವರ್ಗಗಳ ನಡುವಿನ ಸಂಬಂಧದಲ್ಲಾಗುವ ಬದಲಾವಣೆ ಹಾಗೂ ಅದರ ಫಲವಾಗಿ ಮೊಳಕೆಯೊಡೆಯುವ ಬಂಡಾಯ ಪ್ರವೃತ್ತಿ, ಈ ಪ್ರವೃತ್ತಿಯ ಒಡಲಲ್ಲಿರುವ ಹಿಂಸೆಯ ನಾನಾ ಮುಖಗಳು ವ್ಯಾಸರಾಯ ಬಲ್ಲಾಳರ ಈ ಮಹತ್ವಾಕಾಂಕ್ಷಿ ಕಾದಂಬರಿಯಲ್ಲಿ ಮಾರ್ಮಿಕವಾಗಿ ಅಭಿವ್ಯಕ್ತಗೊಂಡಿದೆ. ತಾವು ಹತ್ತಿರದಿಂದ ಕಂಡ ಕಾರ್ಮಿಕ ಹೋರಾಟ, ಮಾಲೀಕರ ಶೋಷಣೆ, ಬದಲಾಗುವ ಕಾಲದಲ್ಲಿ ಹೊಸ- ಹೊಸ ತಿರುವ ಪಡೆಯುವ ಉದ್ಯಮ ಮತ್ತು ಸಂಬಂಧಗಳನ್ನು ಬಲ್ಲಾಳರು, ವಾಸ್ತವಿಕ ನೆಲೆಯಲ್ಲಿ ಅನಾವರಣಗೊಳಿಸಿದ್ದಾರೆ.

ಟಿಎಸ್ಐ

ತೇರು

ಇತಿಹಾಸ ಹಾಗೂ ಪುರಾಣಗಳೆರಡರ ಎರಕ ಹೊಯ್ದ, ಜಾನಪದದ ಭಾಷೆ, ಸೊಗಡನ್ನು ಹೀರಿಕೊಂಡಂತೆ ರಚಿತವಾಗಿರುವ ರಾಘವೇಂದ್ರ ಪಾಟೀಲರ 'ತೇರು' ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದು. ಕಾಲ- ಕಾಲಕ್ಕೆ ಜರುಗುವ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಪಲ್ಲಟಗಳನ್ನು ದಾಖಲಿಸುತ್ತಲೇ ಮನುಷ್ಯನ ಬದುಕಿನ ಮೇಲೆ ಪ್ರಭಾವ ಬೀರುವ ಗುಣಾತ್ಮಕ ಅಂಶಗಳನ್ನು ರೂಪಕಾತ್ಮಕವಾಗಿ ಕಟ್ಟಿಕೊಡುವುದು 'ತೇರು' ಕಾದಂಬರಿಯ ವೈಶಿಷ್ಟ್ಯ. ಸಮುದಾಯದ ಸಾಮಾಜಿಕ ಹಾಗೂ ನೈತಿಕ ಪ್ರಜ್ಞೆಯಂತೆ ಭಾಸವಾಗುವ ಸ್ವಾವಂಜ್ಜ, ಎಂಟು ಎಕರೆ ಆಸ್ತಿ ಪಡೆದು ಬಡತನದ ಬೇಗೆಯಿಂದ ಪಾರಾಗಲು ತನ್ನ ಮಗನನ್ನೇ ಬಲಿ ಕೊಡಲು ಒಪ್ಪಿದ ನತದೃಷ್ಟ ಮೂಲ ದ್ಯಾವಪ್ಪ, ಪತ್ರಕರ್ತ ಪಾಟೀಲ ಹೀಗೆ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ಒಂದೊಂದು ಲೋಕದೃಷ್ಟಿಯನ್ನು ಹೊತ್ತು ತಂದಿದೆ. ಚಿತ್ತಾಲರಿಂದ 'ಆಧುನಿಕ ಪುರಾಣ' ಎಂಬ ಬಿರುದು ಗಳಿಸಿದ, ಕನ್ನಡದ ಒಂದು ಪ್ರಾದೇಶಿಕ ಸೊಗಡಿಗೆ ಅಕ್ಷರ ವೇದಿಕೆಯಾದ 'ತೇರು' ಕನ್ನಡದ ಪ್ರೀತಿಯಿರುವ ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ.

ಟಿಎಸ್ಐ

ದ್ಯಾವನೂರು

ಶ್ರೇಣೀಕೃತ ಸಮಾಜದ 'ರಥ'ದ ಗಾಲಿಗೆ ಸಿಕ್ಕು ನುಜ್ಜುಗುಜ್ಜಾದ ಆತ್ಮವಂತರು 'ನನಗೂ ಅಂಥದೊಂದನ್ನು ಬರೆಯಲಿಕ್ಕಿದೆ' ಎನ್ನಿಸುವಂತೆ ಮಾಡಿದ ಕೃತಿ ದೇವನೂರು ಮಹಾದೇವ ಅವರ 'ಕುಸುಮಬಾಲೆ, 'ಒಡಲಾಳ' ಹಾಗೂ ಸಮಗ್ರ ಕಥೆಗಳನ್ನು ಒಳಗೊಂಡ 'ದ್ಯಾವನೂರು'. ಕನ್ನಡ ಸಾಹಿತ್ಯದ ಹರಿವಿಗೆ ಹೊಸ ತೊರೆಯಾಗಿ ಬಂದು ಸೇರಿದ 'ಕುಸುಮಬಾಲೆ' ಕಾದಂಬರಿ, ದಲಿತ ಪ್ರಪಂಚದ ಬೇಗುದಿಗಳ ಜೊತೆಗೆ ಸೃಜನಶೀಲತೆಯನ್ನೂ, ಕ್ರಿಯಾಶೀಲತೆಯನ್ನೂ, ಹಾಗೇ ಜಡ್ಡುಗಟ್ಟಿದ ವ್ಯವಸ್ಥೆ ಎದುರಿನ ನಿರಂತರ ಹೋರಾಟವನ್ನು ಕಟ್ಟಿಕೊಟ್ಟದ್ದು. ಭಾಷೆ, ನಿರೂಪಣೆ, ವಸ್ತು ಆಯ್ಕೆಯ ವಿಷಯದಲ್ಲಿ ಹೇಗೋ ಹಾಗೇ ಅದು ಕಟ್ಟಿಕೊಡುವ ಜೀವನದೃಷ್ಟಿ ಮತ್ತು ಮಾನವೀಯತೆ ದೃಷ್ಟಿಯಿಂದಲೂ ಕುಸುಮಬಾಲೆ ಅದ್ವಿತೀಯ. ಹಾಗೇ, ಆ ಸಂಕಲನದ 'ಒಡಲಾಳ' ಕಿರು ಕಾದಂಬರಿ ಕೂಡ, ಎಲ್ಲ ವೈಪರೀತ್ಯಗಳ ನಡುವೆಯೂ ತನ್ನ ಜೀವನಪ್ರೀತಿ ಮತ್ತು ಕ್ರಿಯಾಶೀಲತೆಯನ್ನು ಕಳೆದುಕೊಳ್ಳದ ದಲಿತ ಬದುಕನ್ನು ವ್ಯಂಗ್ಯ-ವಿಡಂಬನೆಗಳ ಮೂಲಕವೇ ನಿರೂಪಿಸುತ್ತದೆ. ಕಾವ್ಯದಂತೆ ಓದಿಸಿಕೊಳ್ಳುವ ಗುಣವುಳ್ಳ ಈ ಗದ್ಯ ಬಿಚ್ಚಿಡುವ ಬೆಚ್ಚಿ ಬೀಳಿಸುವ ಅನುಭವಗಳಿಗೆ ಪಕ್ಕಾಗದ ಕನ್ನಡದ ಮನಸ್ಸು ಯಾವುದಿದ್ದೀತು?

ಟಿಎಸ್ಐ

ಚಂದ್ರಗಿರಿಯ ತೀರದಲ್ಲಿ

ಮನುಕುಲದ ಉದ್ಧಾರಕ್ಕಾಗಿ ಬಳಕೆಯಾಗಬೇಕಾದ ಧರ್ಮ ಹೇಗೆ ಹೆಣ್ಣಿನ ಕನಸುಗಳ ಭ್ರೂಣಹತ್ಯೆಗೆ ಬಳಕೆಯಾಗುತ್ತದೆ ಎಂಬುದನ್ನು ಮನಮುಟ್ಟುವಂತೆ ಚಿತ್ರಿಸಿದ, ಹಾಗೆಯೇ ಅಂತಹ ಸತ್ಯ ಹೇಳಿದ್ದಕ್ಕಾಗಿಯೇ ವಿವಾದಕ್ಕೀಡಾದ ಅಪರೂಪದ ಲೇಖಕಿ ಸಾರಾ ಅಬೂಬಕ್ಕರ್. 'ಚಂದ್ರಗಿರಿ ತೀರ'ದಲ್ಲಿನ ದುರಂತ ನಾಯಕಿ ನಾದಿರ್‌ನಂಥ ಸಾವಿರಾರು ಹೆಣ್ಣು ಮಕ್ಕಳ ಇಡೀ ಬದುಕಿಗೆ 'ತಲಾಖ್' ಎಂಬ ಒಂದೇ ಶಬ್ದ ಗೋರಿ ತೋಡುವ ವಿಪರ್ಯಾಸ ಈ ಕೃತಿಯಲ್ಲಿ ಮೂಡಿಬಂದಿದೆ. ಪವಿತ್ರ 'ಖುರಾನ್'ನ ಅರ್ಥವನ್ನು ತಿರುಚಿ ತಮ್ಮ ಹಿತಾಸಕ್ತಿಗೆ ಪೂರಕವಾಗಿ ಬಳಕೆ ಮಾಡಿಕೊಂಡ ಮುಸ್ಲಿಂ ಪುರುಷ ಪ್ರಧಾನ ಸಮಾಜವನ್ನು ವಿಡಂಬನೆಗೊಳಪಡಿಸುತ್ತಲೇ ಧರ್ಮವನ್ನು ಹತ್ಯಾರವನ್ನಾಗಿಸಿಕೊಂಡಿರುವ ಧಾರ್ಮಿಕ ಪಟ್ಟಭದ್ರಹಿತಾಸಕ್ತಿಗಳನ್ನು ಓದುಗರ ಎದುರು ಬೆತ್ತಲೆಗೊಳಿಸುತ್ತಾರೆ ಸಾರಾ ಅಬೂಬಕ್ಕರ್. 1984ರಲ್ಲಿ ಮುದ್ರಣ ಕಂಡಿದ್ದರೂ ಧರ್ಮಾಂಧತೆ ಎಲ್ಲೆಡೆ ವ್ಯಾಪಿಸುತ್ತಿರುವ ಇಂದಿನ ಸಂದರ್ಭದಲ್ಲೂ ಸಾರಾ ಅವರ 'ಚಂದ್ರಗಿರಿ ತೀರದಲ್ಲಿ' ತನ್ನ ಪ್ರಸ್ತುತತೆ ಕಾಯ್ದುಕೊಂಡಿದೆ.

ಟಿಎಸ್ಐ

ಇಜ್ಜೋಡು

1931ರಲ್ಲಿ ಪ್ರಕಟಣೆಯಾದ ಈ ಕೃತಿ ಆಗಿನ ಸಾಮಾಜಿಕ ಸಂದರ್ಭದ ಅತ್ಯುತ್ತಮ ದಾಖಲಾತಿ. ವಿವೇಚನೆ ರಹಿತ ಸಾಂಪ್ರದಾಯಿಕತೆ ತಂದಿಡಬಹುದಾದ ದುರಂತವನ್ನು ಕಟ್ಟಿಕೊಡುವ ವಿ.ಕೃ. ಗೋಕಾಕ್ ಅವರ ಈ ಕೃತಿ ಓದಲೇಬೇಕಾದ ಹಲವು ಕೃತಿಗಳಲ್ಲಿ ಒಂದು. ಕಾದಂಬರಿಯ ಮೊದಲಾರ್ಧದಲ್ಲಿ ನಾಯಕಿಯಾಗುವ ಪದ್ಮಾವತಿ ಸಾಂಪ್ರದಾಯಿಕತೆಯ ಅಗ್ನಿಕುಂಡದಲ್ಲಿ ನೊಂದು ಬೆಂದವಳು. ತನ್ನೆಲ್ಲಾ ಜೀವನಪ್ರೀತಿಯನ್ನೂ ಕಳೆದುಕೊಂಡು ಜೀವಚ್ಛವವಾದವಳು. ನಂತರ ಆಕೆಯ ತಮ್ಮ ನರಹರಿ ತನ್ನಕ್ಕನ ನುಚ್ಚುನೂರಾದ ಬದುಕನ್ನು ನೋಡುತ್ತಲೇ ಬಾಳುವೆಯನ್ನು ಬೌದ್ಧಿಕ ಜಿಜ್ಞಾಸೆಯ ಮೂಸೆಗೆ ಒಡ್ಡಿದವನು. ಒಟ್ಟಾರೆಯಾಗಿ ಕಾದಂಬರಿ, ವ್ಯಕ್ತಿ- ಕುಟುಂಬ, ಸಮಾಜ- ದೇಶ, ಚೇತನ- ದೇಹ ಮುಂತಾದವುಗಳ ಸಮತೋಲಿತ ಹೊಂದಾಣಿಕೆ ಸಾಧ್ಯವಾಗದೇ ಬದುಕು ಅಸಾಧ್ಯ ಎಂಬ ಸಂದೇಶವನ್ನು ಒಳಗೊಂಡಿದೆ. ಸ್ವಾತಂತ್ರ್ಯಪೂರ್ವ ಭಾರತದ ಸಾಮಾಜಿಕ ಸ್ಥಿತಿ- ಗತಿ ಹಾಗೂ ಮನಸ್ಥಿತಿಯನ್ನು ಸಶಕ್ತವಾಗಿ ಬಿಂಬಿಸಿದ ಇದು ಸಾಮಾಜಿಕ ಹಾಗೂ ಪ್ರಾದೇಶಿಕ ಕಾದಂಬರಿಗಳೆರಡರ ಗುಣಲಕ್ಷಣಗಳನ್ನೂ ಒಳಗೊಂಡಿದೆ.

ಟಿಎಸ್ಐ

ಬದುಕು

ಈ ಕಾದಂಬರಿ, ಲೇಖಕಿ ಗೀತಾ ನಾಗಭೂಷಣ ಅವರ ಮಾತುಗಳಲ್ಲಿಯೇ ಹೇಳುವುದಾದರೆ, "ನನ್ನ ಹಾಗೂ ನನ್ನಂಥವರು ಹುಟ್ಟಿ ಬೆಳೆದ, ಅನುಭವಿಸಿದ ಬದುಕಿನ ಹತ್ತು ಹಲವು ಮುಖವಾಡಗಳನ್ನು ಕಿತ್ತೆಸೆದು ಅವುಗಳ ಹಿಂದಿರುವ ಪ್ರಾಮಾಣಿಕ, ಮೇಕಪ್ ಇಲ್ಲದ ಮಾರಿಗಳಿಗೆ ಭೂತಗನ್ನಡಿ ಹಿಡಿಯುವ ಸಾಚಾ ಕಳಕಳಿಯ ಪ್ರಾಮಾಣಿಕ ಪ್ರಯತ್ನ". ಈ ಕೃತಿಯಲ್ಲಿ ಏನಿಲ್ಲ? ಸಾಬಯ್ಯನ ಸೇಂದಿಯ ಕಮಟು ವಾಸನೆ, ಶಿವಳ್ಳಿಯ ತರುಣರ ಮೋರಂ ಕುಣಿತದ ಸಂಭ್ರಮ, ಒತ್ತಾಯಕ್ಕೆ ಜೋಗಿಣಿಯಾಗುವ ಭರಮ್ಯಾನ ಮಗಳು ನೀಲವ್ವಳ ಆಕ್ರಂದನ ಇವೆಲ್ಲವುಗಳನ್ನೂ ಒಳಗೊಂಡ ಹೈದ್ರಾಬಾದ್ ಕರ್ನಾಟಕದ ಕೊಳೆಗೇರಿ ಇಲ್ಲಿದೆ. ಅಲ್ಲಿನ ನೋವು, ನಲಿವುಗಳು, ನಿಡುಸುಯ್ಯುವಿಕೆಗಳು, ಆಕ್ರಂದನಗಳು ಇಲ್ಲಿ ಅಕ್ಷರಗಳ ರೂಪ ಧರಿಸಿ, ಒಡಲಲ್ಲಿ ಅಗ್ಗಿಷ್ಟಿಕೆಯನ್ನಿಟ್ಟುಕೊಂಡು ಕೂತಿವೆ. ಈ ಎಲ್ಲಾ ತಲ್ಲಣಗಳ ನಡುವೆಯೇ ಹೃದಯಂಗಮ ಚಿತ್ರಣವನ್ನೂ 'ಬದುಕು' ಒದಗಿಸುತ್ತದೆ. ಇಲ್ಲಿನ ಪ್ರತಿಯೊಂದು ಅಕ್ಷರಗಳಲ್ಲೂ ಅಸಹಾಯಕ ಹೆಣ್ಣುಗಳ ಕಣ್ಣೀರಿನ ಪಸೆ ಇದೆ. ದೇವರಿಗೆ 'ಮೀಸಲಾಗುವ', ಹೀಗೆ ಮೀಸಲಾಗುವ ಹೆಣ್ಣಿನ ಕನಸುಗಳೆಲ್ಲವನ್ನೂ ತಮ್ಮ ತೆವಲಿನ ಪಲ್ಲಂಗವಾಗಿಸಿಕೊಳ್ಳುವ ಸಮಾಜದ ಕ್ರೌರ್ಯಕ್ಕೆ ಈ ಕೃತಿ ಕನ್ನಡಿ ಹಿಡಿಯುತ್ತದೆ.

ಟಿಎಸ್ಐ

ಮಾಧವ ಕರುಣಾ ವಿಲಾಸ

ಕನ್ನಡ ಕಾದಂಬರಿ ಪ್ರಕಾರದ 'ಪಿತಾಮಹ' ಎಂದೇ ಪರಿಗಣಿಸಲಾಗುವ ಗಳಗನಾಥರ 'ಮಾಧವ ಕರುಣಾ ವಿಲಾಸ' ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಕುರಿತದ್ದು. ಕರ್ನಾಟಕ ಹಾಗೂ ಕನ್ನಡಿಗರ ಮಾನ ಮುಸಲ್ಮಾನ ರಾಜರ ಕಾಲಡಿಯಲ್ಲಿ ನಲುಗಿ ಹೋಗುತ್ತಿರುವ ಸಂದರ್ಭದಲ್ಲಿ ಮಾಧವಾಚಾರ್ಯರೆಂಬ ಯತಿಗಳು 'ವಿದ್ಯಾರಣ್ಯ'ರಾಗಿ ಲೋಕೋದ್ಧಾರಕ್ಕಾಗಿ ರಾಜಕೀಯವೆಂಬ ಸಂಕೀರ್ಣ ಕಾರ್ಯದೊಳಗೆ ತಮ್ಮನ್ನು ತಾವು ತೊಡಗಿಸಿಕೊಂಡು ಅದರಲ್ಲಿ ಯಶಗಳಿಸಿದ್ದು ಈ ಕೃತಿಯ ತಿರುಳು. ಸರ್ವಜ್ಞ ವಿಷ್ಣುಶರ್ಮರ ಆಶ್ರಮದಲ್ಲಿ ನೆರೆದ ಹಲವಾರು ಗಣ್ಯರು ಹಾಗೂ ಯತಿಗಳು ಸನಾತನ ಧರ್ಮದ ಅವನತಿಯ ಕುರಿತು ಕಳವಳ ವ್ಯಕ್ತಪಡಿಸುತ್ತಾರೆ ಎಂಬುವಲ್ಲಿಗೆ ಪ್ರಾರಂಭವಾಗುವ 'ಮಾಧವ ಕರುಣಾ ವಿಲಾಸ' ಕಾದಂಬರಿ ನಂತರ ವಿಷ್ಣುಶರ್ಮರ ಪ್ರಿಯ ಶಿಷ್ಯ ಮಾಧವಾಚಾರ್ಯರು ಸಂಗಮ, ಹಕ್ಕ ಹಾಗೂ ಬುಕ್ಕ ಎಂಬ ಮೂವರು ರಾಜರೊಂದಿಗೆ ಸೇರಿ ಕನ್ನಡಿಗರ ಸ್ವಾಭಿಮಾನ ಸಂಪಾದನೆಗೆ ನಾಂದಿ ಹಾಡುವುದರೊಂದಿಗೆ ಕೊನೆಗೊಳ್ಳುತ್ತದೆ. ವಿಜಯನಗರ ಸಾಮ್ರಾಜ್ಯ ವೈಭವದ ಪ್ರಾರಂಭದ ದಿನಗಳ ದಾಖಲಾತಿ ಈ ಕೃತಿ. ಇತಿಹಾಸವೆಂದರೆ ಕೇವಲ 'ದಿನಾಂಕ'ಗಳು ಎಂಬ ಭಾವನೆ ಬರುವ ಇಂದಿನ ಸಂದರ್ಭದಲ್ಲಿ ಗಳಗನಾಥರ ಈ ಕೃತಿ ಇತಿಹಾಸಕ್ಕೆ ಸೃಜನಶೀಲತೆಯ ಮೇಲ್ವಸ್ತ್ರ ಹೊದಿಸುತ್ತದೆ.

ಟಿಎಸ್ಐ

ಬೆಕ್ಕಿನ ಕಣ್ಣು

ಅರಾಜಕತೆಯೇ ತುಂಬಿ ತುಳುಕುವ ಸಂಸಾರವೊಂದರ ಕಥೆಯನ್ನು ಹೇಳುತ್ತಲೇ ಅದಕ್ಕೆ ಬಲಿಯಾಗುವ ಕೋಮಲ ಮನಸ್ಸಿನ ತುಮುಲಗಳನ್ನು ಚಿತ್ರಿಸುವ 'ಬೆಕ್ಕಿನ ಕಣ್ಣು' ಕಾದಂಬರಿ ತ್ರಿವೇಣಿ ಅವರ ಮಹತ್ವದ ಕೃತಿ. ಕುಸುಮಳ ಸುತ್ತಲೇ ಗಿರಕಿ ಹಾಕುವ ಕಾದಂಬರಿ, ಅವಳ ಅವಿವೇಕಿ ಅಪ್ಪ, ಕ್ರೂರಿ ಮಲತಾಯಿ, ಅವರಿಬ್ಬರ ನಡುವೆ ಸಿಲುಕಿ ತನ್ನ ಮನಸ್ವಾಸ್ಥ್ಯವನ್ನೇ ಕಳೆದುಕೊಳ್ಳುವ ಕುಸುಮ... ಹೀಗೆ ಸಾಂಸಾರಿಕ ಚೌಕಟ್ಟಿನಲ್ಲಿ ವ್ಯಕ್ತವಾಗುವ ಹಿಂಸೆಗೆ ಈ ಕೃತಿ ಕನ್ನಡಿ ಹಿಡಿದಿದೆ. ಸಮಾಜದ ಮೂರ್ತ ಹಾಗೂ ಅಮೂರ್ತ ಹಿಂಸೆಗಳು ಹೆಣ್ಣಿನ ಮನಸ್ಸುಗಳು ಹೇಗೆ ಘಾಸಿಗೊಳಿಸುತ್ತವೆ ಎಂಬುದನ್ನು 'ಶರಪಂಜರ'ದಲ್ಲೂ ವಿಷದವಾಗಿ ಚರ್ಚಿಸಿರುವ ತ್ರಿವೇಣಿ, ಅಂಥದೇ ಪ್ರಯತ್ನವನ್ನು 'ಬೆಕ್ಕಿನ ಕಣ್ಣು' ಕೃತಿಯಲ್ಲೂ ಮಾಡಿದ್ದಾರೆ. ತ್ರಿವೇಣಿ ಅವರ ಸೃಜನಶೀಲತೆಯೊಂದಿಗೆ ಅವರ ಸೂಕ್ಷ್ಮ ಗ್ರಹಿಕೆ ಕೂಡ ಈ ಕೃತಿಯಲ್ಲಿ ಗಮನ ಸೆಳೆಯುತ್ತದೆ.

ಟಿಎಸ್ಐ

ಮುಸ್ಸಂಜೆಯ ಕಥಾ ಪ್ರಸಂಗ

ಪಿ. ಲಂಕೇಶರ ಈ ಕಾದಂಬರಿ ಅವರ ಸಾಹಿತ್ಯಿಕ ಪ್ರಯೋಗಶೀಲತೆಗೆ ಅತ್ಯುತ್ತಮ ನಿದರ್ಶನ. ಒಂದು ಕೇಂದ್ರ ಕಥಾ ಹಂದರವೇ ಇಲ್ಲದ ಕಾದಂಬರಿ ಹಳ್ಳಿಯ ಬದುಕನ್ನು ತೀರಾ ಹಸಿ- ಹಸಿಯಾಗಿಯೇ ಹರವಿಡುತ್ತದೆ. ಮಂಜ ಬೇಲಿ ಹಾರುವಾಗ, ಸಾವಂತ್ರಿಯ ಕೆನ್ನೆಗೆ ಮುತ್ತು ಕೊಡುವಾಗ, ಇಕ್ಬಾಲ್ ಸಾವಂತ್ರಿಯ ಮೇಲೆ ಕಣ್ಣು ಹಾಕುವಾಗ, ಹಿಟ್ಟಿನ ಗಿರಣಿಯ ಕರಿಯ ಕದ್ದು ಮುಚ್ಚಿ ಮಿಲನ ಮಹೋತ್ಸವ ಆಚರಿಸಿ 'ಗಂಡಸ್ಥನ' ಮೆರೆಯುವಾಗ... ಪ್ರತಿಯೊಂದರಲ್ಲೂ ಲಂಕೇಶರ ಲೇಖನಿಯ ಚಮತ್ಕಾರ ಎದ್ದು ಕಾಣುತ್ತದೆ. ಸಾಮಾಜಿಕ ಹಾಗೂ ಸಾಂಸಾರಿಕ ಪದ್ಧತಿಗಳು 'ಮುಸ್ಸಂಜೆ'ಯ ಕತ್ತಲಲ್ಲಿವೆ, ಅವಸಾನದ ಅಂಚಿನಲ್ಲಿವೆ ಎಂಬ ಪ್ರಗತಿಶೀಲ ಧೋರಣೆಗೆ ವಿರುದ್ಧವಾಗಿ ಸಾಮಾಜಿಕ ಬದುಕಿನ ಹರಿವನ್ನು ಯಾವುದೇ ಸಮಾಜಶಾಸ್ತ್ರೀಯ ಸಿದ್ಧಾಂತಗಳ ಚೌಕಟ್ಟಿಗೆ ಒಳಪಡಿಸಲಾಗುವುದಿಲ್ಲ ಎಂಬ ಸತ್ಯವನ್ನು ಮನಗಾಣಿಸುವುದು ಕೃತಿಯ ಇಂಗಿತ. ಸಾಮಾಜಿಕ ಪರಿವರ್ತನೆಯ ಕುರಿತು ಪ್ರಗತಿಶೀಲ ಲೆಕ್ಚರರ್ ಒಬ್ಬ ಓತಪ್ರೋತವಾಗಿ ಮಾತನಾಡುತ್ತಿದ್ದರೆ ಅದನ್ನೇ ವ್ಯಂಗ್ಯ ಮಾಡುವಂತೆ 'ಅಕ್ಯಾಡೆಮಿಕ್ ಸಿದ್ಧಾಂತ'ಗಳ ಗಂಧ-ಗಾಳಿ ಇಲ್ಲದ ಬ್ಯಾಡರ ಮಂಜ ಲಿಂಗಾಯ್ತ ಕನ್ಯೆ ಸಾವಂತ್ರಿಯನ್ನು ಮೋಹಿಸುತ್ತಾನೆ. ಶಿವಮೊಗ್ಗ ಸೀಮೆಯ ಗ್ರಾಮವೊಂದರ ಶಿಥಿಲ ವ್ಯವಸ್ಥೆಯ ಬದಲಾವಣೆಯ ಚಿತ್ರಣವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಕಟ್ಟಿಕೊಡುವ ಮಹತ್ವದ ಕಾದಂಬರಿ ಇದು.

ಟಿಎಸ್ಐ

ಮಾಡಿ ಮಡಿದವರು

'ಮಾಡಿ ಮಡಿದವರು' ಕಾದಂಬರಿ ಬಸವರಾಜ ಕಟ್ಟೀಮನಿ ಅವರ ಪ್ರಾತಿನಿಧಿಕ ಕೃತಿಯೇನೂ ಅಲ್ಲ. ಹಾಗೆ ನೋಡಿದರೆ, ಕಟ್ಟೀಮನಿ ಅವರ ಕಥನ ಪ್ರತಿಭೆ ಸಂಪೂರ್ಣವಾಗಿ ವಿನಿಯೋಗವಾಗಿರುವುದು 'ಖಾನಾವಳಿ ಲೀಲಾ' ಕಾದಂಬರಿಯಲ್ಲಿ. ಆದರೂ 'ಮಾಡಿ ಮಡಿದವರು' ಕೃತಿಯ ಪ್ರಸ್ತಾಪಕ್ಕೆ ಕಾರಣವಿದೆ. ಸ್ವಾತಂತ್ರ್ಯ ಹೋರಾಟವನ್ನೇ ಮೂಲ ಕೇಂದ್ರವಾಗಿಟ್ಟುಕೊಂಡು ರಚನೆಯಾದ ಕನ್ನಡದ ಏಕೈಕ ಕೃತಿ ಬಸವರಾಜ ಕಟ್ಟೀಮನಿ ಅವರ 'ಮಾಡಿ ಮಡಿದವರು' ಕಾದಂಬರಿ. ಇದರ ಜೊತೆಗೆ, ಉತ್ತರ ಕರ್ನಾಟಕದ ಮಂದಿಯ ಸ್ವಾತಂತ್ರ್ಯ ಹೋರಾಟ ನಮ್ಮಲ್ಲಿ ದಾಖಲಾಗಿಯೇ ಇಲ್ಲವೇನೋ ಅನ್ನುವಷ್ಟು ಅಪರೂಪ. ಅವೆಲ್ಲವನ್ನೂ ಒಳಗೊಂಡ ಅಪರೂಪದ 'ಮಾಡಿ ಮಡಿದವರು' ಪ್ರತಿಯೊಬ್ಬ ಕನ್ನಡಿಗನೂ ಓದಲೇಬೇಕಾದ, ಸಂಗ್ರಹದಲ್ಲಿ ಇಟ್ಟುಕೊಳ್ಳಬೇಕಾದ ಕೃತಿ ಎಂದರೆ ಖಂಡಿತಾ ಉತ್ಪ್ರೇಕ್ಷೆಯಲ್ಲ.

ಟಿಎಸ್ಐ

ಅನ್ನ

ಭಾರತದ ಸ್ವಾತಂತ್ರ್ಯಕ್ಕೂ ಪೂರ್ವದ ಕೆಲ ವರ್ಷಗಳಲ್ಲಿ ಬಂಗಾಳ ಮತ್ತು ಕರ್ನಾಟಕದಲ್ಲಿ ತಲೆದೋರಿದ್ದ ಭೀಕರ ಬರಗಾಲದ ಹಿನ್ನೆಲೆಯನ್ನಿಟ್ಟುಕೊಂಡು, ರಂ.ಶ್ರೀ. ಮುಗಳಿ ಅವರು 'ಅನ್ನ'ದ ಮೂಲಕ ಹಸಿವಿನಂತಹ ದುರ್ಬರತೆಯ ಎದುರು ಹೇಗೆ ಸಂಸ್ಕೃತಿ, ಸಂಪ್ರದಾಯ, ಮಾನವೀಯತೆ ಮುಂತಾದ ಸಮಾಜದ ಹೆಚ್ಚುಗಾರಿಕೆಗಳ ಮುಖವಾಡ ಕಳಚಿಬೀಳುತ್ತದೆ ಎಂಬುದನ್ನು ಚಿತ್ರಿಸಿದ್ದಾರೆ. ಭಾರತಿ, ಸಾಕ್ಷಿಪುರುಷ, ಅಮೃತ, ವೀಣೆ ಮುಂತಾದ ಪಾತ್ರಗಳ ಮೂಲಕ ದೇಶದ ಬರಗಾಲ ಮತ್ತು ಆ ಸಂದರ್ಭದಲ್ಲಿ ಸಮಾಜದ ನೇತಾರರು, ಅಧಿಕಾರಶಾಹಿ, ಧಾರ್ಮಿಕ ಪುರುಷರು, ಹೀಗೆ ಪ್ರತಿಯೊಬ್ಬರೂ ವರ್ತಿಸುವ ರೀತಿ-ನೀತಿಗಳನ್ನು ಪ್ರಗತಿಪರ ಧೋರಣೆಯಿಂದ ಮಂಡಿಸಿದ್ದಾರೆ ಮುಗಳಿ. ಹಸಿವು ಮುಕ್ತ ದೇಶ ಕಟ್ಟಲು ನಮ್ಮ ಸಂಸ್ಕೃತಿ- ದರ್ಶನವನ್ನು ಬರಿ ಜಪಿಸಿದರೆ ಸಾಲದು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರ್ವರಿಗೂ ಹಿತ ಬಯಸುವ ಮನಸ್ಸು ಬೇಕು ಎಂಬ ಸಂದೇಶ ಕಾದಂಬರಿಯದು. ಮುಗಳಿ ಅವರು ಸಾಹಿತ್ಯ ವಿಮರ್ಶೆ ಮತ್ತು ಚರಿತ್ರೆಗಷ್ಟೇ ಅಲ್ಲ, ಕಾದಂಬರಿಕಾರರಾಗಿಯೂ ಮುಖ್ಯರು ಎಂಬುದನ್ನು ಈ ಕೃತಿ ತೋರಿಸಿಕೊಟ್ಟಿದೆ.

ಟಿಎಸ್ಐ

ಮೋಹಿನಿ

ವಿ. ಎಂ. ಇನಾಂದಾರ್ ಅವರ ತ್ರಿವಳಿ ಕೃತಿಗಳಾದ 'ಕನಸಿನ ಮನೆ', 'ಗಾಜಿನ ಮನೆ' ಹಾಗೂ 'ಮೋಹಿನಿ'ಗಳಲ್ಲಿ ಮೊದಲ ಭಾಗವಾದ 'ಮೋಹಿನಿ' 40-50ರ ದಶಕದ ಸಾಮಾಜಿಕ ಸನ್ನಿವೇಶವನ್ನು ಪ್ರತಿನಿಧಿಸುತ್ತದೆ. ರಾಜಕೀಯ ಸ್ವಾತಂತ್ರ್ಯದ ಹೊಸ್ತಿಲಲ್ಲಿದ್ದರೂ 'ಪರಂಪರೆ'ಯ ಭಾರದಿಂದ ನಲುಗುತ್ತಿರುವ ಸಾಮಾಜಿಕ ಸಂದರ್ಭವೊಂದರ ಉದಾಹರಣೆ ಈ 'ಮೋಹಿನಿ' ಕೃತಿ. ವಿನಾಕಾರಣ ಕಿರುಕುಳ ನೀಡುವ ಗಂಡನ ಮನೆಯವರು ಒಂದು ಕಡೆಯಾದರೆ ಸ್ವಭಾವತಃ ಒಳ್ಳೆಯವನಾಗಿದ್ದೂ ಚಿತ್ತಸ್ಥೈರ್ಯವಿಲ್ಲದ ಪತಿರಾಯ ಇನ್ನೊಂದು ಕಡೆ. ನಿತ್ಯ ಬದುಕಿನ ಅವಮಾನಗಳ ನಡುವೆಯೇ ತನಗೆ ನೈತಿಕ ಬೆಂಬಲವಾಗಬಲ್ಲ 'ಆತ್ಮಸಖ'ನೊಬ್ಬನ ನಿರೀಕ್ಷೆಯಲ್ಲಿರುವ ಮೋಹಿನಿ ಈ ಕೃತಿಯ ಕಥಾ ನಾಯಕಿ. ಮೈಲಿಗೆ ಮನಸ್ಸುಗಳ ನಡುವೆಯೇ ಅವಳು ಕಂಡುಕೊಳ್ಳುವ ಸ್ವಾತಂತ್ರ್ಯ ಹಾಗೂ ಆ ಸ್ವಾತಂತ್ರ್ಯದ ಸಾಧಕ-ಬಾಧಕಗಳನ್ನು ವಿ.ಎಂ. ಇನಾಂದಾರ್ ವಸ್ತುನಿಷ್ಠವಾಗಿ ಚಿತ್ರಿಸಿದ್ದಾರೆ. ರಾಗ-ದ್ವೇಷಗಳಿಗೆ ವಿವೇಕ ಬಲಿಯಾಗುವ ಹಾಗೂ ಆರೋಗ್ಯಕರ ಸಂಬಂಧವೊಂದು ಕಲ್ಮಶಗೊಳ್ಳುವ ರೀತಿಯನ್ನೂ ಈ ಕೃತಿಯಲ್ಲಿ ಕಾಣಬಹುದು. ವ್ಯಕ್ತಿ ಸ್ವಾತಂತ್ರ್ಯದ ನಾನಾ ಮಜಲು ಈ ಕೃತಿಯಲ್ಲಿ ಅನಾವರಣಗೊಳ್ಳುತ್ತದೆ. ಮಾನವ ಸಂಬಂಧಗಳ ಸಂಕೀರ್ಣತೆ ಮತ್ತು ಸಾಮಾಜಿಕ ಕಟ್ಟುಪಾಡುಗಳ ನಡುವೆ ಸೊರಗುವ ಮಾನವೀಯತೆಯನ್ನು ಕೃತಿ ಪರಿಣಾಮಕಾರಿಯಾಗಿ ಹೇಳುತ್ತದೆ.

ಟಿಎಸ್ಐ

ಚಿದಂಬರ ರಹಸ್ಯ

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಕಣಜದಲ್ಲಿ ಚಿದಂಬರ ರಹಸ್ಯ ಕಾದಂಬರಿಗೆ ಎಲ್ಲಿಲ್ಲದ ಮಹತ್ವ ಉಂಟು. ಭಾರತದ ರೋಗಗ್ರಸ್ತ ಸಮಾಜವನ್ನು 'ಕೆಸರೂರು' ಎಂಬ ಲಂಟಾನದಿಂದ ಸುತ್ತುವರಿದ ಗ್ರಾಮದಲ್ಲಿ ಇಡಿಯಾಗಿ ಕಂಡುಕೊಳ್ಳುವ ತೇಜಸ್ವಿ ಅವರ ಸಾಹಿತ್ಯಿಕ ನೋಟ ಅಪೂರ್ವವಾದದ್ದು. ಏಲಕ್ಕಿ ಬೆಳೆ, ವಹಿವಾಟು, ಕಾಳ ದಂಧೆ, ವಿಚಾರ ಕ್ರಾಂತಿಯ ಹಂಬಲ, ಢಾಂಬಿಕ ಭಕ್ತರ ಗುಂಪು... ಇವೆಲ್ಲವುಗಳ ವಿಷಚಕ್ರದಲ್ಲಿ ಸಿಲುಕುವ ಕೆಸರೂರು; ಪ್ರತಿಯೊಂದನ್ನೂ ತೇಜಸ್ವಿ ಅವರ ಲೇಖನಿ ಗ್ರಹಿಸಿರುವ ರೀತಿ ಸ್ತುತ್ಯಾರ್ಹ. ಏಲಕ್ಕಿ ಬೆಳೆಯ ಅವನತಿಯನ್ನು ತನಿಖೆ ಮಾಡಲು ಬರುವ ಶ್ಯಾಮನಂದನ ಅಂಗಾಡಿ, ಸಂಶೋಧನಾ ಕೇಂದ್ರದ 'ತಪಸ್ವಿ' ಪ್ರೊ. ಜೋಗಿಹಾಳರು, ಕೆಸರೂರಿನ ಕ್ರಾಂತಿಕಾರಿಗಳು, ಅವರ 'ಗುರುವರ್ಯ' ರಾಮಚಂದ್ರರ ಮೂಲಕ ಸಾಗುವ ಕಥೆ, ಜಯಂತಿ ಮತ್ತು ರಫೀಕರ ಪ್ರೇಮ ಮತ್ತು ಅದರ ಸಾಫಲ್ಯದ ಮೂಲಕ ಕೊನೆಗೊಳ್ಳುತ್ತದೆ. ಸನ್ನಿವೇಶಕ್ಕೆ ದಾಸರಾಗಿ ದ್ವೇಷ, ಅಸೂಯೆ ಹಾಗೂ ಅಪನಂಬಿಕೆಗಳಲ್ಲಿ ಅಂಧರಾಗುವ ಮಂದಿ ತಮ್ಮದೇ ಕೆಸರೂರಿನ ಸರ್ವನಾಶಕ್ಕೆ ಮುನ್ನುಡಿ ಬರೆಯುತ್ತಾರೆ. ಒಂದೆಡೆ, ಕೆಸರೂರು ಯಾರೋ ಹೊತ್ತಿಸಿದ ಬೆಂಕಿಯಲ್ಲಿ ಸುಟ್ಟು ಬೂದಿಯಾಗುತ್ತಿದ್ದರೆ, ಬೆಟ್ಟ ಹತ್ತಿ ಬೆಂಕಿಯಿಂದ ಪಾರಾಗುವ ರಫಿ ಹಾಗೂ ಜಯಂತಿ ಭವಿಷ್ಯದ ಬದುಕಿನ ರೂಪಕಗಳಾಗಿ ನಿಲ್ಲುತ್ತಾರೆ. ಪತ್ತೇದಾರಿ ಗುಣದೊಂದಿಗೆ ಬದುಕಿನ ಗಂಭೀರ ವಿಶ್ಲೇಷಣೆಗೆ ಒಡ್ಡುವ ಈ ಕೃತಿ ಏಕಕಾಲಕ್ಕೆ ಜನಪ್ರಿಯತೆಯನ್ನೂ, ಅಕಾಡೆಮಿಕ್ ಗಾಂಭೀರ್ಯವನ್ನೂ ಪಡೆದ ವಿರಳ ಕಾದಂಬರಿ.

ಟಿಎಸ್ಐ

ಮಾಸ್ತಿ ಅವರ ಸಮಗ್ರ ಕತೆಗಳು

ಮೆಲು ಮಾತುಗಳಲ್ಲಿಯೇ ಜೀವನದ ಅನನ್ಯ ಅನುಭವಗಳಿಗೆ ಧ್ವನಿಯಾಗುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಎಲ್ಲಾ ಕಥೆಗಳೂ ಈ ಸಂಕಲನದಲ್ಲಿವೆ. ಇಲ್ಲಿನ ಕಥೆಗಳನ್ನು ಓದುತ್ತಾ ಹೋದಂತೆ, "ಪ್ರಾಯಕ್ಕೆ ಬರುತ್ತಿರುವ ಮಕ್ಕಳಿಗೆ ಯಾವನಾದರೂ ಒಬ್ಬ ಕನ್ನಡ ಲೇಖಕನನ್ನು ಓದಲು ಕೊಡಬೇಕೆಂದು ಅನಿಸುವುದಾದರೆ ಅದು ಮಾಸ್ತಿ ಎಂದು ನನ್ನ ಭಾವನೆ. ನಮ್ಮ ಭಾವನಾ ಪ್ರಪಂಚವನ್ನು ಪಕ್ವವಾಗಿಸಬಲ್ಲ ಶಿಕ್ಷಣ ಅವರ ಕಥೆಗಳಿಂದ ಖಂಡಿತ ಸಿಗುತ್ತದೆ", ಎಂಬ ಲೇಖಕ ಮಾವಿನಕೆರೆ ರಂಗನಾಥ್ ಅವರ ಮಾತುಗಳು ಎಷ್ಟು ಸತ್ಯ ಎನಿಸದೇ ಇರದು. ಭಾವಾವೇಷ, ಗಟ್ಟಿ ದನಿಯ ಘೋಷಣೆ, ಸಿದ್ಧಾಂತದ ಅಮಲು ಯಾವುದೂ ಇಲ್ಲದೇನೇ ಬದುಕಿನ ಕುರಿತ ವಿನಮ್ರ ಗ್ರಹಿಕೆ, ಆಸಕ್ತಿ ಮತ್ತು ಅಗಾಧ ಜೀವನ ಪ್ರೀತಿ ಕಲಿಯುವುದು ಸಾಧ್ಯವಾಗುವುದಾದರೆ ಅದಕ್ಕೆ ಮಾಸ್ತಿ ಕಥೆಗಳೇ ಪ್ರಯೋಗಶಾಲೆ. ಕನ್ನಡದ 'ಸಣ್ಣ ಕಥೆಗಳ ಜನಕ' ಎನಿಸಿಕೊಂಡ ಈ ಪ್ರೀತಿಯ ಕಡಲಿನಂತಹ ಅಜ್ಜನ ಕಥಾ ಪ್ರಪಂಚಗಳು ಜೊತೆಗಿದ್ದರೆ ಬದುಕಿನ ಸಂಕಷ್ಟ- ಸಂದಿಗ್ಧತೆಗಳೆದುರು ಎದೆಗುಂದುವ ಭಯ ದೂರ ಎಂಬುದು ಸುಳ್ಳಲ್ಲ.

ಟಿಎಸ್ಐ

ನೇಮಿಚಂದ್ರರ ಕಥೆಗಳು

'ನಮ್ಮ ಕನಸುಗಳಲ್ಲಿ ನೀವಿದ್ದೀರಿ' ಕಥಾ ಸಂಕಲನದ ಮೂಲಕ ಕನ್ನಡದ ಸಾಹಿತ್ಯ ಲೋಕದ ಗಮನ ಸೆಳೆದ ನೇಮಿಚಂದ್ರ ನಮ್ಮ ನಡುವಿನ ಸಂವೇದನಾಶೀಲ ಬರಹಗಾರ್ತಿಯರಲ್ಲಿ ಒಬ್ಬರು. ಹೆಣ್ಣಿನ ಅಂತರಂಗವನ್ನು ಓದುಗರ ಮುಂದೆ ಹರವಿಟ್ಟರೂ ಎಲ್ಲಿಯೂ ಅವರ ಬರವಣಿಗೆ ಪುರುಷ ವಿರೋಧಿ ಘೋಷಣೆಗಳಲ್ಲಿ ಕಳೆದು ಹೋಗಿಲ್ಲದಿರುವುದು ನೇಮಿಚಂದ್ರ ಅವರ ಬರವಣಿಗೆಯ ವೈಶಿಷ್ಟ್ಯ. ಜ್ಞಾಲಾಮುಖಿಯಂತಹ ಆಕ್ರೋಶವನ್ನೂ ನಿರುದ್ವಿಗ್ನವಾಗಿ ಮಂಡಿಸುವ ನೇಮಿಚಂದ್ರ ಅವರ ಕಲೆ ಅವರ 'ಕಪ್ಪು ಮೋಡ ಬೆಳ್ಳಿ ಅಂಚು', 'ಏನೊಂದೂ ಆಗದವರು', 'ಮತ್ತೆ ಬರೆದ ಕವನಗಳು' ಮುಂತಾದ ಕಥೆಗಳಲ್ಲಿ ಎದ್ದು ಕಾಣುತ್ತದೆ. ತಮ್ಮ ಕಥೆಗಳ ಮೂಲಕ ದಾಂಪತ್ಯದ ಚೌಕಟ್ಟಿನಲ್ಲಿ ಮಾನವೀಯ ಸಂಬಂಧಗಳು ಪಡೆದುಕೊಳ್ಳುವ ನಾನಾ ಆಕಾರಗಳನ್ನು ತಮ್ಮ ನವಿರು ಭಾಷೆಯಲ್ಲಿ ಓದುಗರ ಮುಂದಿಡುತ್ತದೆ 'ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು'.

ಟಿಎಸ್ಐ

ಕಲ್ಲು ಕರಗುವ ಸಮಯ

ಕನ್ನಡದ ಸಾಹಿತ್ಯ ಪ್ರೇಮಿಗಳನ್ನು ನಿದ್ದೆಯಿಂದೆಬ್ಬಿಸಿ ಯಾವುದಾದರೂ 10 ಅತ್ಯುತ್ತಮ ಕಥಾ ಸಂಕಲನಗಳನ್ನು ಹೆಸರಿಸಲು ಹೇಳಿದರೆ ಅವರು ತಮ್ಮ ನಿದ್ದೆಗಣ್ಣಲ್ಲೂ ಲಂಕೇಶರ 'ಕಲ್ಲು ಕರಗುವ ಸಮಯ'ವನ್ನು ಮರೆಯಲಿಕ್ಕಿಲ್ಲ. ಅಂಥ ಪ್ರಭಾವ ಪಿ. ಲಂಕೇಶರ ಈ ಕೃತಿಗಿದೆ. ಭಾಷೆ, ವಸ್ತು, ನಿರೂಪಣೆ ಪ್ರತಿಯೊಂದರಲ್ಲೂ ತಮ್ಮ ಪ್ರತಿಭೆ ಛಾಪಿಸಿದ ಲಂಕೇಶರ ಆಳದ ತಹತಹಿಕೆಗಳೆಲ್ಲಾ ಈ ಸಂಕಲನದಲ್ಲಿ ಅಡಗಿ ಕೂತಿವೆ. 'ದಾಹ', 'ಒಂದು ಬಾಗಿಲು', 'ಮುಟ್ಟಿಸಿಕೊಂಡವನು' 'ಸಹಪಾಠಿ' ಕಥೆಗಳು ಸಭ್ಯತೆಯ ಸೋಗಿನಲ್ಲಿರುವ ನಮ್ಮ ಬೋಳೆತನ, ನಮ್ಮಲ್ಲಿ ಅಡಗಿರುವ ಕಪಟತನಗಳನ್ನು, ಕ್ಷುದ್ರತೆಗಳನ್ನು ಮುಖಕ್ಕೆ ರಾಚುತ್ತವೆ. ಇದೇ ಸಂಕಲನದಲ್ಲಿರುವ 'ಕಣ್ಮರೆ', 'ದೇವಿ', 'ಕಲ್ಲು ಕರಗುವ ಸಮಯ' ಕಥೆಗಳು ಮಾನವೀಯ ಸಂಬಂಧಗಳ ಆಂತರ್ಯವನ್ನು ಬಿಚ್ಚಿಡುತ್ತಲೇ ಸಮಾಜ ಹೆಣ್ಣನ್ನು ಹೇಗೆ ಕಾಣುತ್ತದೆ ಮತ್ತು ಆಧುನಿಕತೆ ಹೇಗೆ ಆಕೆಯ ಬಿಡುಗಡೆಯ ದಾರಿಯಾಗಬಲ್ಲದು ಎಂಬುದನ್ನು ಚಿತ್ರಿಸುತ್ತವೆ. ಎಲ್ಲ ಮನುಷ್ಯರ ಸಣ್ಣತನ, ಪ್ರೀತಿ ಮತ್ತು ಸಂಬಂಧಗಳ ಗಟ್ಟಿತನದ ಪರಿಚಯಕ್ಕೆ 'ಕಲ್ಲು ಕರಗುವ ಸಮಯ' ಅಮೂಲ್ಯ ಓದು.

ಟಿಎಸ್ಐ

ಅಮೃತಬಳ್ಳಿ ಕಷಾಯ

ಕನ್ನಡದ ಸೂಕ್ಷ್ಮ ಹಾಗೂ ಸಂವೇದನಾಶೀಲ ಬರಹಗಾರರಲ್ಲಿ ಒಬ್ಬರಾದ ಜಯಂತ ಕಾಯ್ಕಿಣಿ ಅವರ ಕಥನ ಪ್ರತಿಭೆಯ ಒಂದು ಝಲಕ್, 'ಅಮೃತಬಳ್ಳಿ ಕಷಾಯ'. 14 ಕಥೆಗಳ ಈ ಕಥಾಗುಚ್ಛದ 'ತನ್ಮಯಿಯ ಸೂಟಿ', 'ಮಿಥುನ್ ನಂಬರ್ ಟೂ', 'ಸುಮಿತ್ರೆಗೊಂದು ಸುದ್ದಿ' ರೀತಿಯ ಕಥೆಗಳು ನಮ್ಮ ನಡುವಿನ ನಿರ್ಲಕ್ಷಿತ ವ್ಯಕ್ತಿತ್ವ- ಸಂಬಂಧಗಳ ಮೇಲೆ ಬೆಳಕು ಚೆಲ್ಲುತ್ತವೆ. ನಾವೆಲ್ಲಾ ನಿತ್ಯ ಕಾಣುವ- ಮುಖಾಮುಖಿಯಾಗುವ ಬದುಕಿನ ವಿವಿಧ ಚಿತ್ರಣಗಳಿಗೆ ಮಾನವೀಯ ಪ್ರೀತಿಯ ಭೂತಗನ್ನಡಿ ಹಿಡಿಯವ ಜಯಂತರ ಸಂವೇದನಾಶೀಲತೆ ಈ ಇಡೀ ಸಂಕಲನ ಓದುಗನಿಗೆ ಅಪ್ಯಾಯಮಾನವಾಗುವಂತೆ ಮಾಡುತ್ತದೆ. ಇಲ್ಲಿನ ಕಥೆಗಳ ತನ್ಮಯಿ, ಕುಶೀಕಾಕಿ, ಸುಮಿತ್ರೆ, ಚಂದು ಮುಂತಾದವು ಕೇವಲ ಕಥೆಯೊಂದರ ಯಃಕಶ್ಚಿತ್ ಪಾತ್ರಗಳಾಗದೆ ನಮ್ಮ ನಡುವಿನ ವ್ಯಕ್ತಿಗಳಂತೆಯೇ ಭಾಸವಾಗುತ್ತಾರೆ. ವೇಗದ ಬದುಕಿನ ಜಂಜಡದ ನಡುವೆ ಸುಲಭವಾಗಿ ಮುರುಟಿ ಹೋಗುವ ಸಂವೇದನೆಗಳಿಗೆ ಜಯಂತರ 'ಅಮೃತಬಳ್ಳಿ ಕಷಾಯ'ದ ಜರೂರಿದೆ.

ಟಿಎಸ್ಐ

ಹುಲಿ ಸವಾರಿ

ಜಾಗತೀಕರಣದ 'ಹಗಲುವೇಷ' ತೊಟ್ಟ ಬಹುರಾಷ್ಟ್ರೀಯ ಕಂಪನಿಗಳು ಮತ್ತೊಮ್ಮೆ ನಮ್ಮೆಲ್ಲಾ ಸ್ವಾತಂತ್ರಗಳನ್ನೂ ಮೊಟಕುಗೊಳಿಸುತ್ತಿರುವ ವರ್ತಮಾನದಲ್ಲಿ ವಿವೇಕ ಶಾನುಭಾಗರ 'ಹುಲಿ ಸವಾರಿ' ಕಥಾ ಸಂಕಲನ ಒಂದು ಸಾಂದರ್ಭಿಕ ಅನಿವಾರ್ಯತೆ ಎನಿಸದಿರಲಾರದು. ಕಥಾಗುಚ್ಛದ 'ಹುಲಿ ಸವಾರಿ' ಕಥೆ ಇಂಥದ್ದೊಂದು ತಲ್ಲಣವನ್ನು ಚಿತ್ರಿಸುವಂಥದ್ದು. ಕಥೆಯಲ್ಲಿ ಬರುವ 'ಉಚೆ' ಪಾತ್ರ ಎತ್ತುವ ಪ್ರಶ್ನೆಗಳು ನವವಸಹಾತುಶಾಹಿಗಳ ತೆಕ್ಕೆಗೆ ಸಿಕ್ಕ ಪ್ರತಿಯೊಂದು ದೇಶದ ಪ್ರಜೆಯ ಪ್ರಶ್ನೆಯೂ ಹೌದು. 'ಕಂತು' ಕಥೆ ಹಣ ಮತ್ತು ಮೌಢ್ಯದ ಕಾರಣದಿಂದ ಹಳ್ಳಿಯೊಂದು ತನ್ನ ಚಹರೆಯನ್ನೇ ಕಳೆದುಕೊಂಡು, ಜೀವನಶೈಲಿಯೇ ಬುಡಮೇಲಾಗುವ ಅನಾಹುತಕ್ಕೆ ಧ್ವನಿಯಾಗುತ್ತದೆ. 'ಜಾಮೀನು ಸಾಹೇಬ' ಹೊಟ್ಟೆ ಪಾಡಿಗೆ ವಿಲಕ್ಷಣ ವೃತ್ತಿಯೊಂದಕ್ಕೆ ಕೈ ಹಾಕಿದ ಯುವಕನ ಕಥೆಯಾದರೆ, 'ನೂಲಿನ ಏಣಿ' ಹಾಗೂ 'ಸಶೇಷ' ಕಥೆಗಳಲ್ಲಿ ನಮ್ಮೊಳಗೆ ಆಳವಾಗಿ ಬೇರು ಬಿಡುತ್ತಿರುವ ಅಭಿವೃದ್ಧಿ ಪರಿಕಲ್ಪನೆಯ ವಿಡಂಬನೆ ಇದೆ. ಹೊಸತನ್ನು ಹಂಬಲಿಸುತ್ತಿರುವ ಸ್ವತಂತ್ರ್ಯೋತ್ತರ ಭಾರತದ ಮನೋಭಿಲಾಷೆಯ ಸಾಧಕ-ಬಾಧಕ ವಿಮರ್ಶೆ ಈ ಕೃತಿಯ ಪ್ರಾಥಮಿಕ ಕಾಳಜಿ. ಕನ್ನಡದ ಇತ್ತೀಚಿನ ಲೇಖಕರಲ್ಲಿ ಆಳದ ಧ್ಯಾನದಿಂದ ಬರೆಯುತ್ತಿರುವ ವಿವೇಕರ 'ಹುಲಿಸವಾರಿ'ಯನ್ನು ಓದದಿದ್ದರೆ ಹೊಸ ತಲೆಮಾರಿನ ಓದು ಅಪೂರ್ಣವೇ ಸರಿ.

ಟಿಎಸ್ಐ

ಬುಗುರಿ

ದಲಿತರನ್ನು ದೈನ್ಯದಲ್ಲಿ, ಆಕ್ರೋಶದಲ್ಲಿ ಹಾಗೂ ಅವೆರಡನ್ನೂ ಹೊರತುಪಡಿಸಿದ ನಿರುದ್ವಿಗ್ನ ನೆಲೆಯೊಂದರಲ್ಲಿ ಗ್ರಹಿಸುವ ಪರಿಪಾಠಕ್ಕೆ ವ್ಯತಿರಿಕ್ತವಾದ ಮೊಗಳ್ಳಿ ಗಣೇಶ್ ಅವರ 'ಬುಗುರಿ' ಕಥಾ ಸಂಕಲನಕ್ಕೆ ಕನ್ನಡ ಕಥಾ ಪರಂಪರೆಯಲ್ಲಿ ಮಹತ್ವದ ಸ್ಥಾನವಿದೆ. ದಲಿತರ ಲೋಕದ ಒಳತಿರುಳನ್ನು, ಆ ಸಮುದಾಯದ ತಬ್ಬಲಿತನವನ್ನು ಭಾವತೀವ್ರತೆಯಲ್ಲಿ ಅಕ್ಷರಸ್ಥರ ಎದುರು ಮಂಡಿಸಿದವರು ಮೊಗಳ್ಳಿ. 'ಬುಗುರಿ' ಕಥೆಯಲ್ಲಿನ ಹುಡುಗ ಚೆಲುವ, ಕಕ್ಕಸ್ಸು ಗುಂಡಿಯಲ್ಲಿ ಬಿದ್ದ ಆತನ ಬುಗುರಿ, ಅದೇ ಗುಂಡಿಯಲ್ಲಿ ಬಿದ್ದ ಹಂದಿ, ಅದನ್ನು ಹೊರ ತೆಗೆಯಲು ಗುಂಡಿಗಿಳಿದ ದಲಿತರು, ಇವರೆಲ್ಲರ ಪಡಿಪಾಟಲನ್ನೂ ಚೆಲುವನ ದೃಷ್ಟಿಯಲ್ಲಿಯೇ ಚಿತ್ರಿಸುತ್ತಾ ಮೊಗಳ್ಳಿಯವರು ವ್ಯವಸ್ಥೆಯ ಕಕ್ಕಸ್ಸು ಗುಂಡಿಯಲ್ಲಿ ಬಿದ್ದಿರುವ ದಲಿತ ಸಮುದಾಯ ಎಂದು ಮೇಲೆದ್ದು ಬಂದೀತೋ ಎಂದು ಕನಸುತ್ತಾರೆ. ಹಾಗೆಯೇ, ದುರ್ಬರ ಬದುಕಿನ ನಡುವೆಯೂ ಜೀವಂತಿಕೆಯನ್ನು ಕಾಪಾಡಿಕೊಳ್ಳುವ ದಲಿತರ ಪ್ರಯತ್ನವೇ ಮೇಲ್ವರ್ಗದ ಮಂದಿಯ ಕಣ್ಣಲ್ಲಿ ಅಪರಾಧವಾಗುವ ದುರಂತವನ್ನು 'ಒಂದು ಹಳೇ ಚಡ್ಡಿ' ನಿರೂಪಿಸುತ್ತದೆ. 8 ಕಥೆಗಳನ್ನೊಳಗೊಂಡ ಕಥಾ ಸಂಕಲನ ಗಣೇಶ್ ಅವರ ಗಾಢ ಅನುಭವವನ್ನೂ ಹೊತ್ತು ತಂದಿದೆ.

ಟಿಎಸ್ಐ

ತಮಂಧದ ಕೇಡು

ಅಮರೇಶ ನುಗುಡೋಣಿಯವರ ಕಥೆಗಳಿಗೆ ಉತ್ತರ ಕರ್ನಾಟಕದ ಮಣ್ಣಿನ ವಾಸನೆ ಇದೆ. ಕಥಾ ಸಂಕಲನದಲ್ಲಿರುವ 'ತಮಂಧದ ಕೇಡು', 'ಕಾಗೀಕೂಟ', 'ಧರೆ ಉರಿದರೆ' 'ಮಹಾನದಿಯು ಜೀವನದಿಯು' ಮುಂತಾದ ಕಥೆಗಳು ಅಪ್ಪಟ ಉತ್ತರ ಕರ್ನಾಟಕದ ಮಣ್ಣಿನಿಂದಲೇ ಉದ್ಭವಿಸಿದವು. ಆ ಭಾಗದ ದಲಿತರ ನೋವು- ನಲಿವು, ಶಿಕ್ಷಣದ ಕುರಿತು ಅವರಿಗಿರುವ ಅದಮ್ಯ ಹಂಬಲವನ್ನು ಈ ಕೃತಿ ಸಮರ್ಥವಾಗಿ ಪ್ರತಿನಿಧಿಸಿದೆ. ಇದರ ಜೊತೆಗೆ ಈ ಕೃತಿಯಲ್ಲಿ ಗಮನ ಸೆಳೆಯುವ ಅಂಶವೆಂದರೆ, ಇಲ್ಲಿ ಬಳಕೆಯಾಗಿರುವ ಭಾಷೆ. 'ತಮಂಧದ ಕೇಡು' ಕಥೆಯ ಹೂರಣದ್ದೇ ಒಂದು ತೂಕವಾದರೆ ಅದರ ನಿರೂಪಣೆಗೆ ಬಳಸಿರುವ ಭಾಷೆಯದ್ದೇ ಒಂದು ತೂಕ. ಉತ್ತರ ಕರ್ನಾಟಕದ ಈ ಭಾಷೆ ತನ್ನ ನೈಜತೆಯೊಂದಿಗೆ, ಅಲ್ಲಿನ ಜನಪದದ ಲೋಕದೃಷ್ಟಿಯನ್ನೂ ಹೊತ್ತು ತಂದಿದೆ. ಹಲವು ಸ್ತರದಲ್ಲಿ ಮಾನವೀಯ ಸಂಬಂಧಗಳ ಸಂಕೀರ್ಣತೆಯನ್ನು ಅನಾವರಣಗೊಳಿಸುವ 'ತಮಂಧದ ಕೇಡು' ಕನ್ನಡದ ಕಥಾ ಪರಂಪರೆಯ ಪ್ರಮುಖ ಕೃತಿ.

ಟಿಎಸ್ಐ

ಅನಂತಮೂರ್ತಿ: ಐದು ದಶಕದ ಕಥೆಗಳು

ಯು.ಆರ್. ಅನಂತಮೂರ್ತಿ ಅವರ ಕಥನ ಪ್ರತಿಭೆಯ ಸಾಂಧ್ರ ರೂಪ 'ಐದು ದಶಕದ ಕಥೆಗಳು' ಕಥಾ ಸಂಕಲನ. ಆಧುನಿಕತೆ ಮತ್ತು ಸಂಪ್ರದಾಯದ ಮುಖಾಮುಖಿಯಲ್ಲಿ ಮನುಷ್ಯನ ಬದುಕು ಎದುರಿಸುವ ಬದಲಾವಣೆ ಮತ್ತು ಸಂದಿಗ್ಧತೆಯನ್ನು ಒಳನೋಟದಿಂದ ಚಿತ್ರಿಸುವ ಇಲ್ಲಿನ ಬಹುತೇಕ ಕಥೆಗಳು ಓದುಗನ ವ್ಯಕ್ತಿತ್ವಕ್ಕೆ ಹೊಸ ಆಯಾಮ ಒದಗಿಸಬಲ್ಲವು. ಎರಡು ಸಂಸ್ಕೃತಿಗಳ ನಡುವಿನ ತಿಕ್ಕಾಟವನ್ನು ಒರೆಗೆ ಹಚ್ಚುವ 'ಕ್ಲಿಪ್ ಜಾಯಿಂಟ್'ನಂತಹ ಕಥೆಯಿಂದ ಆರಂಭವಾಗಿ ನಗರ ಮತ್ತು ಗ್ರಾಮ ಭಾರತಗಳ ಮುಖಾಮುಖಿಯ 'ಸೂರ್ಯನ ಕುದುರೆ'ಯವರೆಗೆ ಹಲವು ಸ್ತರದ ಕಥೆಗಳು ಇಲ್ಲಿವೆ. ಸೋಲು ಹಾಗೂ ಗೆಲುವು ಪರಿಕಲ್ಪನೆಗಳ ಅರ್ಥಹೀನತೆ, ಅಸಂಗತತೆಯನ್ನು ಚಿತ್ರಿಸುವ 'ಮೌನಿ', ಕಪಟತನ, ಸಂಪ್ರದಾಯಗಳ ಹೆಸರಿನಲ್ಲಿ ರೂಢಿಸಿಕೊಂಡಿರುವ ಕ್ರೌರ್ಯವನ್ನು ಬೆತ್ತಲೆಗೊಳಿಸುವ 'ಘಟಶ್ರಾದ್ಧ', 'ಕಾರ್ತೀಕ', ಹೀಗೆ ಇಲ್ಲಿನ ಕಥೆಗಳ ವಿಷಯ- ವಿಸ್ತಾರಗಳು ಎಲ್ಲರ ಬದುಕಿನ ಗ್ರಹಿಕೆಯನ್ನೂ ವಿಸ್ತರಿಸಿ, 'ಎಂದೆಂದೂ ಮಗಿಯದ ಕಥೆ'ಯಾಗಬಲ್ಲವು.

ಟಿಎಸ್ಐ

ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು

ಸಾಹಿತ್ಯ ಲೋಕದ 'ಮೌನಿ' ಎಂದೇ ಹೆಸರಾಗಿರುವ ಜಿ.ಎಸ್. ಸದಾಶಿವ ಅವರು ಹೆಚ್ಚು ಮಾತನಾಡಿದ್ದು ತಮ್ಮ ಕಥೆಗಳ ಮೂಲಕ. ಆಧುನಿಕ ಗ್ರಹಿಕೆಯ ವ್ಯಕ್ತಿ ಮತ್ತು ಸಾಂಪ್ರದಾಯಿಕ ಸಮಾಜದ ನಡುವಿನ ಸಂಘರ್ಷ ಮತ್ತು ಬಿಕ್ಕಟ್ಟುಗಳನ್ನು ನಗರಪ್ರಜ್ಞೆಯ ಚೌಕಟ್ಟಿನಲ್ಲಿಟ್ಟು ನೋಡುವ ಅಪ್ಪಟ ನವ್ಯದ ಕತೆಗಾರರಾದ ಸದಾಶಿವ ಅವರು, ಆಧುನಿಕ ಮನುಷ್ಯನ ಸಂದಿಗ್ಧತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದವರು. ಸಮಾಜದ ಒಪ್ಪಿತ ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳ ಎದುರು ಮಾನವೀಯತೆ ಮತ್ತು ಆಧುನಿಕ ಪ್ರಜ್ಞೆಯನ್ನು ಮುಖಾಮುಖಿಯಾಗಿಸುವುದು ಸದಾಶಿವ ಅವರ ವೈಶಿಷ್ಟ್ಯ. 'ಆ ಕೊನೆಯ ಮನೆ' ಕಥೆಯ ಮೂಲಕ ಮಾನವ ಸಂಬಂಧದ ಸೂಕ್ಷ್ಮಗಳನ್ನು ಅದರ ಸಂಕೀರ್ಣ ಸ್ವರೂಪವನ್ನು ಅನಾವರಣ ಮಾಡುವ ಸದಾಶಿವ ಅವರು 'ವ್ಯೂಹ' ಹಾಗೂ 'ಸಿಕ್ಕು' ಕಥೆಗಳ ಮೂಲಕ ಮನಸ್ಸು, ಬುದ್ದಿ, ಅಂತಸ್ತು, ಪರಿಸರ, ಸಂಬಂಧ ಮುಂತಾದವುಗಳ ಜಾಲದಲ್ಲಿ ಸಿಲುಕಿ ನವೆಯುವ ಬದುಕನ್ನು ಚಿತ್ರಿಸುತ್ತಾರೆ. ಆ ದೃಷ್ಟಿಯಿಂದ ಸದಾಶಿವ ಅವರು ಕನ್ನಡದ ಆರಂಭಿಕ ಘಟ್ಟದ ಆಧುನಿಕ ಪ್ರಜ್ಞೆಯ ಕಥೆಗಾರರಲ್ಲಿ ಮುಖ್ಯವೆನಿಸುತ್ತಾರೆ.

ಟಿಎಸ್ಐ

ಖಾಸನೀಸರ ಕಥೆಗಳು

ಸಾಹಿತ್ಯದ ವಿವಾದ- ಚರ್ಚೆ- ಗದ್ದಲಗಳಿಂದ ಸದಾ ದೂರವೇ ಇರುತ್ತಿದ್ದ ಖಾಸನೀಸ ಅವರಿಂದ ಬರೆಸಿಕೊಂಡ ಕಥೆಗಳು ಪ್ರಮಾಣದಲ್ಲಿ ಕಡಿಮೆ ಇದ್ದರೂ ಓದುಗರನ್ನು ಆಳವಾಗಿ ಕಲಕಬಲ್ಲ ಸಾಮರ್ಥ್ಯ ಅವಕ್ಕಿದೆ. 'ಅಲ್ಲಾವುದ್ದೀನನ ಅದ್ಭುತ ದೀಪ' ರಾಘವೇಂದ್ರ ಖಾಸನೀಸರ ಪ್ರತಿಭೆಯ ಪ್ರಾತಿನಿಧಿಕ ಕಥೆ ಎಂದರೆ ತಪ್ಪಾಗಲಿಕ್ಕಿಲ್ಲ. ತಮ್ಮ ಕಥೆಗಳ ಮೂಲಕ ಪಾಪ- ಪುಣ್ಯ, ಬದುಕು- ಸಾವು ಹಾಗೂ ಇವೆಲ್ಲವುಗಳನ್ನೂ ಒಳಗೊಂಡ ಮಾನವನ ಬದುಕಿನ ಅಸಂಗತೆಯನ್ನು ಕುರಿತು ಖಾಸನೀಸರು ಧ್ಯಾನಿಸಿ ಬರೆದ ಕಥೆಗಳಿವು ಎನಿಸಿದರೆ ಅದು ಅವರ ಕಥೆಗಳ ಕುರಿತ ಪ್ರಾಮಾಣಿಕ ಮಾತಾದೀತು. ಯುವ ಲೇಖಕರನ್ನು, ಅವರ ಲೇಖನಿಯನ್ನು ಗಾಢವಾಗಿ ಪ್ರಭಾವಿಸಿದ ಕಥೆಗಳನ್ನು ನೀಡಿದ ಖಾಸನೀಸರು ಇನ್ನಷ್ಟು ಕಥೆಗಳನ್ನು ಕನಸುತ್ತಲೇ ಗಮ್ಯಕ್ಕೆ ಮರಳಿದವರು. ಅಲ್ಪ ಕಥೆಗಳ ಮೂಲಕವೇ ಅಜರಾಮರರಾದ ಜಿ.ಎಸ್. ಸದಾಶಿವ ಅವರಂತೆ ರಾಘವೇಂದ್ರ ಖಾಸನೀಸ ಕೂಡ ನಮ್ಮ ಮನೆಯೊಳಗಿನ ಅಕ್ಷರ ಸಂಸ್ಕೃತಿಗೆ ಅನಿವಾರ್ಯ.

ಟಿಎಸ್ಐ

ಕೆ. ಸದಾಶಿವ ಸಮಗ್ರ ಕತೆಗಳು

'ಮತ್ತೆ ಮಳೆ ಹೊಯ್ಯುತಿದೆ... ಎಲ್ಲ ನೆನಪಾಗುತಿದೆ' ಎಂದು ಕಥೆ ಹೇಳಲು ಕುಳಿತವರು ಕೆ. ಸದಾಶಿವ. ಅಡಿಗರೇ ಹೇಳುವಂತೆ ಸದಾಶಿವ 'ತನ್ನೆದೆಯ ಖಂಡ ಖಂಡ ಕತ್ತರಿಸಿ ಕತ್ತು ಹಿಡಿದು ಹಿಂಡಿ ಹಿಂಡಿ ಭಟ್ಟಿ ಇಳಿಸಿದ ತೊಟ್ಟು ತೊಟ್ಟು' ಕತೆಗಳು ಈ ಸಂಕಲನದಲ್ಲಿವೆ. 'ರಾಮನ ಸವಾರಿ ಸಂತೆಗೆ ಹೋಗಿದ್ದು', 'ನಲ್ಲಿಯಲ್ಲಿ ನೀರು ಬಂತು', 'ನೋಡಿದೆಯಾ ಅಮ್ಮ ಅವಳ ಧಿಮಾಕು' ಮುಂತಾದ ಕಥೆಗಳು ಕಟ್ಟಿಕೊಡುವ ಭಾವಪ್ರಪಂಚ ಅಪರೂಪದ್ದು! 'ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ' ಕಥೆಯಲ್ಲಿ ಸುಲಭದ ಗ್ರಹಿಕೆಗೆ ನಿಲುಕಲಾರದ ಬದುಕಿನ ದುರಂತವೊಂದನ್ನು ಚಿತ್ರಿಸುವ ಸದಾಶಿವ, 'ಪೆಂಡ್ಯುಲಮ್' ಕಥೆಯಲ್ಲಿ ನಾವು ಹೆಸರಿಟ್ಟು ಸಂಭ್ರಮಿಸುವ ಸಂಬಂಧಗಳು ಹೇಗೆ ಕೆಲವೊಮ್ಮೆ ತಮ್ಮ ಅರ್ಥ ಕಳೆದುಕೊಂಡು ಬೆತ್ತಲಾಗುತ್ತವೆ, ಹಾಗೆ ಬೆತ್ತಲಾಗುತ್ತಲೇ ನಮ್ಮನ್ನು ಕಲಕುತ್ತವೆ ಎಂಬುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಜಿ.ಎಸ್. ಸದಾಶಿವರಂತೆ ಬಹು ಬೇಗ ಜನಮಾನಸದಿಂದ ದೂರವಾದ ಕೆ. ಸದಾಶಿವ ಅವರ ಸೃಜನಶೀಲತೆಯ ವೈಭವ ಈ ಕೃತಿಯಲ್ಲಿ ತಾನೇ ತಾನಾಗಿದೆ. ಪ್ರೀತಿಯಿಂದ ಓದಿಸಿಕೊಳ್ಳುವ ಪ್ರತಿಯೊಂದು ಕತೆಗಳೂ ಕನ್ನಡದ ಸಾಹಿತ್ಯಕ್ಕೆ ದೊರೆತ ಅತ್ಯಮೂಲ್ಯ ಕೊಡುಗೆಗಳೇ ಸರಿ.

ಟಿಎಸ್ಐ

ಭಳಾರೆ ವಿಚಿತ್ರಂ

ಮೊನಚು ವ್ಯಂಗ್ಯ ಹಾಗೂ ವಿಡಂಬನೆಯ ಮೂಲಕವೇ ಬದುಕಿನ ಕ್ರೌರ್ಯಗಳನ್ನು ಬೆತ್ತಲಾಗಿಸುವ ಕುಂ.ವೀ ನಮ್ಮ ನಡುವಿನ ಮಹತ್ವದ ಲೇಖಕರು. ಅವರ ಕಥಾ ಸಂಕಲನ 'ಭಳಾರೆ ವಿಚಿತ್ರಂ' ಅಂತಹ ವಿಲಕ್ಷಣ ಹಾಸ್ಯಪ್ರಜ್ಞೆ, ವ್ಯಂಗ್ಯ, ಕುಚೋದ್ಯದ ಜೊತೆಗೆ ಅಪಾರ ಜೀವನಪ್ರೀತಿಯಿಂದ ಓದುಗರನ್ನು ಸೆಳೆಯುತ್ತದೆ. 'ಕಥೆ ಹೇಳೋ ಕರಿಯಜ್ಜ' ಕಥೆಯಲ್ಲಿ ಬರುವ ಕರಿಯಜ್ಜ ತನ್ನ ಕಥೆಗಳ ಮೂಲಕವೇ ಜಡ್ಡುಗಟ್ಟಿದ ಸಮಾಜದ ಅಂತಃಸಾಕ್ಷಿಯಾಗಿ ಮೂಡಿ ಬರುತ್ತಾನೆ. ಕೊನೆಗೊಮ್ಮೆ ಆತನಿಂದ ಹೊರಬರಲೇ ಇಷ್ಟವಿಲ್ಲದ ಕಥೆಗಳು ನಿಷ್ಠುರ ಅಂತಃಸಾಕ್ಷಿಯೂ ಮೌನ ಧಾರಣೆ ಮಾಡಿದ ನಮ್ಮ ಸಂದರ್ಭದ ದುರಂತಕ್ಕೆ ರೂಪಕಾತ್ಮಕ ಅಭಿವ್ಯಕ್ತಿಯಾಗುತ್ತವೆ. 'ಹತ್ಯೆ'ಯ ಕಥೆ ಕೂಡ ಹತ್ತಾರು ಜೀವ ತೆಗೆದ ಬಾಕುವೊಂದು ಅಂತಿಮವಾಗಿ ಹೊಸ ಜೀವವೊಂದರ ಕರುಳುಬಳ್ಳಿ ಕತ್ತರಿಸಲು ಬಳಕೆಯಾದ ಹೃದಯಂಗಮ ಚಿತ್ರಣ ನೀಡುತ್ತದೆ. ಹಾಗೆಯೇ 'ಕುಬುಸ' ಕಥೆ ನಾಗರಿಕತೆ ಹಾಗೂ ಅನಾಗರಿಕತೆಯ ನಡುವಿನ ಸಂಘರ್ಷವನ್ನು ಹಾಗೂ ನಿರ್ಮಲ ಮನಸ್ಸಿನ ಅನಾಗರಿಕತೆ ಕೂಡ ದುಷ್ಟ ಮನಸ್ಸಿನ ನಾಗರಿಕತೆಗೆ ನೈತಿಕ ಸವಾಲಾಗಬಹುದಾದ ವಿಪರ್ಯಾಸವನ್ನು ಚಿತ್ರಿಸುತ್ತದೆ. ಕನ್ನಡದ ಕಥೆಗಾರಿಕೆ ಕುಂ.ವೀರಭದ್ರಪ್ಪ ಕೈಯಲ್ಲಿ ಪಡೆದುಕೊಂಡಿರುವ ಸಾಧ್ಯತೆಯನ್ನು 'ಭಳಾರೆ ವಿಚಿತ್ರಂ' ಕಥಾ ಸಂಕಲನ ಓದಿಯೇ ಅರ್ಥ ಮಾಡಿಕೊಳ್ಳಬೇಕು.

ಟಿಎಸ್ಐ

ಪಾವೆಂ ಹೇಳಿದ ಕಥೆ

ಪತ್ರಕರ್ತ ಹಾಗೂ ಸಾಹಿತಿ ರವಿ ಬೆಳಗೆರೆ ಪತ್ರಿಕೋದ್ಯಮದ 'ನಿತ್ಯಸಂತೆ'ಯಲ್ಲಿ ಕುಳಿತೇ ಕಂಡ ಕನಸು 'ಪಾವೆಂ ಹೇಳಿದ ಕಥೆ'. ಈ ಸಂಕಲನ ತನ್ನ ನಿರೂಪಣಾ ವೈಶಿಷ್ಟ್ಯತೆ ಹಾಗೂ ವಿಲಕ್ಷಣ ವಸ್ತುಗಳಿಂದ ಗಮನ ಸೆಳೆಯುತ್ತದೆ. 'ಮೆಟಾಮಾರ್ಫಸಿಸ್' ಶೈಲಿಯ 'ವಂಧ್ಯಾ' ಬ್ರಾಹ್ಮಣ ಮನೆತನದ ಪೂರ್ಣಮ್ಮ ಹದ್ದುಗಳೊಂದಿಗೆ ಮಾತನಾಡುತ್ತಾ ತಾನೇ ಹದ್ದಾಗಿ ಮಾಂಸ ಮೆಲ್ಲುವ 'ದುಃಸ್ವಪ್ನದಂಥ' ಕಥೆ. ಹಾಗೆಯೇ, ಪ್ರೇಮಕ್ಕೆ ಹೊಸ ಭಾಷ್ಯ ಬರೆಯುವ 'ಮಿನಾರುಗಳ ಊರಿನಲ್ಲಿ, ಒಂಟಿ ಹೆಣ್ಣೊಂದರ ಅಂತರಂಗದ ಕಾವ್ಯ 'ಪಾವೆಂ ಹೇಳಿದ ಕಥೆ' ಹೀಗೆ ವಾಸ್ತವದಲ್ಲಿ ಅಸಂಗತವಾಗಬಹುದಾದರೂ ಮನೋರಂಗದಲ್ಲಿ ಸತ್ಯವಾಗಬಲ್ಲ ಹಾಗೂ ಸತ್ಯವಾಗುತ್ತಲೇ ಹೊಸದೊಂದು ಲೋಕದೃಷ್ಟಿಗೆ ಜೀವಸೆಲೆಯಾಗಬಲ್ಲ ಕನಸು, ಭ್ರಮೆ, ಕಲ್ಪನೆಗಳಿಗೆ ಕಥೆಯ ಬಟ್ಟೆ ತೊಡಿಸಿ ಓದುಗರ ಮಂದಿಟ್ಟಿದ್ದಾರೆ ರವಿ ಬೆಳಗೆರೆ.

ಟಿಎಸ್ಐ

ಮಾಯಿಯ ಮುಖಗಳು

ರಾಘವೇಂದ್ರ ಪಾಟೀಲರ ಕಥೆಗಾರಿಕೆಯ ಅನಾವರಣ 'ಮಾಯಿಯ ಮುಖಗಳು'. ಪ್ರತಿಯೊಂದನ್ನೂ ಅನುಮಾನದಿಂದ ನೋಡುವ ಇಂದಿನ ಆಧುನಿಕೋತ್ತರ ವಿದ್ಯಮಾನವನ್ನೇ ಅನುಮಾನಿಸುವ ರಾಘವೇಂದ್ರ ಪಾಟೀಲರ ಅಪ್ಪಟ ದೇಸಿ ಮಣ್ಣಿನ ಮನಸ್ಸು ಸಂಕಲನದ ಮೂರೂ ಕಥೆಗಳಲ್ಲಿ ಅನುರಣಿಸುತ್ತದೆ. 'ಮಾಯಿಯ ಮೂರು ಮುಖಗಳು' ಕಥೆ ಸಂಗೀತ ಪ್ರೀತಿಯ ಮೂವರು ಹೆಣ್ಣುಮಕ್ಕಳು ತೀರಾ ಅಸಂಗತವಾಗಿ ತಮ್ಮ ಬದುಕಿಗೆ ಅರ್ಥ ಕಂಡುಕೊಳ್ಳುವ ಸಂಗತಿಯನ್ನು ವಿವರಿಸಿದರೆ 'ತುದಿಯೆಂಬೋ ತುದಿಯಿಲ್ಲ' ಹಾಗೂ 'ದೀಬರ ದಿಂಡೀ ದೀಬರ ದಿಂಡೀ ಕುಬುಸಾ ಎಲ್ಲಿಟ್ಟೇ...!" ಕಥೆಗಳು ಬದುಕಿನ ವಿಲಕ್ಷಣೆಯನ್ನು ಕಟ್ಟಿಕೊಡಲು ಪ್ರಯತ್ನಿಸುತ್ತವೆ. 'ಫಿಲಾಸಫಿ'ಯ ಸಾಧ್ಯತೆಗಳೆಲ್ಲವನ್ನೂ ಒಡಲಲ್ಲಿಟ್ಟುಕೊಂಡ ಕಥೆಗಳಿವು. 'ಮಾಯಿಯ ಮುಖ'ಗಳು ನಿಮ್ಮ ಪುಸ್ತಕ ಸಂಗ್ರಹದಲ್ಲಿದ್ದರೆ ನಿಮ್ಮ ಓದಿಗೂ ಹೊಸ ಕಳೆ ಬಂದೀತು!

ಟಿಎಸ್ಐ

ಚಿತ್ತಾಲರ ಕತೆಗಳು

'ಒಗ್ಗರಣೆ ಹಾಕಿದರೆ ಅದರಿಂದ ಹೊಮ್ಮುವ ಸಮ್ಮಿಶ್ರ ವಾಸನೆಯನ್ನು, ಆ ಕ್ಷಣದ ಭಾವನೆಯನ್ನು ಅದ್ಭುತವಾಗಿ ಬರವಣಿಗೆಯಲ್ಲಿ ಸೆರೆ ಹಿಡಿಯುವ ಸಾಮರ್ಥ್ಯ ಹಾಗೂ ಸೂಕ್ಷ್ಮತೆ ಚಿತ್ತಾಲರಿಗಿದೆ' ಎಂದಿದ್ದರು ವಿಮರ್ಶಕರೊಬ್ಬರು. ನಿಜ, ಯಶವಂತ ಚಿತ್ತಾಲರ ಕಥೆಗಳನ್ನು ಓದುತ್ತಾ ಹೋದಂತೆ ಆ ಮಾತು ಖಂಡಿತ ಉತ್ಪ್ರೇಕ್ಷೆಯದ್ದಲ್ಲ ಎನ್ನಿಸುತ್ತದೆ. ಅವರ ಮೊದಲ ಕಥೆ 'ಬೊಮ್ಮಿಯ ಹುಲ್ಲು ಹೊರೆ'ಯಿಂದ ಹಿಡಿದು ಅವರ ಒಂದೊಂದು ಕಥೆಯೂ ಒಂದೊಂದು ಪ್ರಪಂಚವೇ. 'ಪೀಜಿ', 'ಪಯಣ'ಗಳು ಕಥೆಗಳು ಅಸ್ತಿತ್ವವಾದಿ ನೆಲೆಗಟ್ಟಿನ ಮೇಲೆ ರೂಪುಗೊಂಡ ಕಥೆಗಳು. ಸಿಗ್ಮಂಡ್ ಫ್ರಾಯ್ಡ್‌ನ ವಿಚಾರಧಾರೆ ಚಿತ್ತಾಲರ ಕಥೆಗಳಲ್ಲೂ ಅಲ್ಲಲ್ಲಿ ಹಣಕು ಹಾಕುವುದಿದೆ. 'ಅಬೊಲಿನಾ', 'ಕತೆಯಾದಳು ಹುಡುಗಿ' 'ಆಟ' 'ಬೇನ್ಯಾ' ಈ ಐದು ಕಥಾ ಸಂಗ್ರಹಗಳಲ್ಲಿ ಚಿತ್ತಾಲರು ಗ್ರಾಮ (ಹನೇಹಳ್ಳಿ) ಮತ್ತು ನಗರ (ಮುಂಬೈ) ಬದುಕಿನ ನಡುವೆ ಹಬ್ಬುವ ಮನುಷ್ಯನ ಬದುಕನ್ನು ಅನಾವರಣಗೊಳಿಸಿದ್ದಾರೆ. ಪ್ರತಿಯೊಬ್ಬ ಸಂವೇದನಾಶೀಲ ಲೇಖಕನಲ್ಲಿ ಕಾಣುವ ಮಾನವೀಯ ಜಗತ್ತಿನ ನಿರ್ಮಾಣದ ಹಂಬಲ ಚಿತ್ತಾಲರ ಪ್ರತಿಯೊಂದು ಕಥೆಗಳಲ್ಲೂ ಗೋಚರಿಸುತ್ತದೆ.

ಟಿಎಸ್ಐ

ದಜ್ಜಾಲ

ಇಸ್ಲಾಂನ 'ಮಿಥ್'ಗಳನ್ನು ಸಶಕ್ತವಾಗಿ ಬಳಸಿಕೊಂಡು ಅವುಗಳ ಪರಿಭಾಷೆಯಲ್ಲಿಯೇ ವರ್ತಮಾನದ ಕ್ರೌರ್ಯವನ್ನು ಚಿತ್ರಿಸಿದ ಕೃತಿ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ 'ದಜ್ಜಾಲ'. ಸಂಪ್ರದಾಯ ಶರಣತೆಗೆ ಸೆಡ್ಡು ಹೊಡೆಯುತ್ತಲೇ ಅವುಗಳೊಂದಿಗೆ ಆರೋಗ್ಯವಂತ ಅನುಸಂಧಾನ ಸಾಧ್ಯವಾಗಿಸಿಕೊಂಡ ಅಪರೂಪದ ಕೃತಿ 'ದಜ್ಜಾಲ'. 'ದಜ್ಜಾಲ', 'ಕೋಮು', 'ಬುರ್ಖಾ' ಕಥೆಗಳು ಸಮಾಜದಲ್ಲಿ ಹೆಪ್ಪುಗಟ್ಟುತ್ತಿರುವ ಮಾನವದ್ವೇಷ ಹಾಗೂ ಅಪನಂಬಿಕೆಗಳನ್ನು ಪ್ರಾಮಾಣಿಕವಾಗಿ ಚಿತ್ರಿಸಿದರೆ, 'ಒಸರು' ಅಪ್ಪಟ ಮಾನವೀಯ ಸಂಬಂಧವೊಂದರ 'ಮಹಾಕಾವ್ಯ'. ಹಾಗೆಯೇ 'ಸೈತಾನ ಹಿಡಿದ ಹೆಂಡತಿ' ನಮ್ಮೊಳಗಿನ ಕ್ಷುಲ್ಲಕತನ ಹಾಗೂ ಅಹಮಿಕೆಗೆ ಹೇಗೆ ಬದುಕನ್ನೇ ಆಪೋಷನ ತೆಗೆದುಕೊಳ್ಳುವ ಸಾಮರ್ಥ್ಯವಿದೆ ಎಂದು ಎತ್ತಿ ತೋರಿಸಿ ಬೆಚ್ಚಿ ಬೀಳಿಸುತ್ತದೆ. ಕೊಳಕು ರಾಜಕಾರಣ ಹೇಗೆ ವ್ಯಕ್ತಿಯ ಖಾಸಗಿತನವನ್ನೂ ಕಬಳಿಸುತ್ತಿರುವ ಇಂದಿನ ಸಂದರ್ಭಕ್ಕೆ ಉತ್ತರದಂತಿದೆ 'ದಜ್ಜಾಲ'. ಜಾತಿ, ಕೋಮುಗಳ ಹೆಸರಿನಲ್ಲಿ ಮುರಿದು ಹೋಗಿರುವ ಮನಸ್ಸುಗಳನ್ನು ಒಂದುಗೂಡಿಸುವ ಸಾಮರ್ಥ್ಯವನ್ನು, ನೈತಿಕ ಬಲವನ್ನು ರಾಜಕಾರಣ ಕಳೆದುಕೊಂಡಿರುವಾಗ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ 'ದಜ್ಜಾಲ'ದಂಥ ಕೃತಿಗಳು ಭರವಸೆಯ ಬೆಳ್ಳಿ ದೀಪವಾಗಬಲವು, ಘಾಸಿಗೊಳಗಾದ ವಿವೇಚನೆಗೆ ಮಾನವೀಯತೆಯ ಮೂಲಾಮು ಆಗಬಹುದು.

ಟಿಎಸ್ಐ

ಕನ್ನಂಬಾಡಿ

ಮನುಷ್ಯನ ವ್ಯಾಧಿಗಳನ್ನು ಗುಣಪಡಿಸುತ್ತಲೇ ಸಮಾಜದ ವ್ಯಾಧಿಗಳಿಗೆ ತಮ್ಮ ಕಥೆಯ ಮೂಲಕ ಔಷಧಿ ನೀಡಿದವರು ಡಾ. ಬೆಸಗರಹಳ್ಳಿ ರಾಮಣ್ಣ. ಬದಲಾವಣೆಯ ಗಾಳಿಗೆ ಮೈಯೊಡ್ಡಿಕೊಂಡ ಗ್ರಾಮ ಸಮುದಾಯ ಅನುಭವಿಸಬಹುದಾದ ತಲ್ಲಣಗಳ ಸಂಕಲನವೇ 'ಕನ್ನಂಬಾಡಿ' ಕಥಾಗುಚ್ಛ. ಬಯಲುಸೀಮೆಯ ಬಿಸಿಲಿನ ಬದುಕು 'ಕನ್ನಂಬಾಡಿ'ಯಲ್ಲಿ ಅಕ್ಷರ ರೂಪ ಪಡೆದ ರೀತಿ ಅನನ್ಯ. ಹೊಟ್ಟೆಗಿಲ್ಲದಿರುವ ಮಂದಿಯ ದೇಶಪ್ರೇಮವನ್ನು ವಿವರಿಸುವ ಮೂಲಕ ಮನುಷ್ಯನ ಸ್ವಾತಂತ್ರ್ಯಪ್ರಿಯತೆ ಹಾಗೂ ಹಸಿವುಗಳ ನಡುವೆ ಇರುವ ಅಜಗಜಾಂತರ 'ಕನ್ನಂಬಾಡಿ'ಯಲ್ಲಿ ಚಿತ್ರಿಸಲಾಗಿದೆ. ದಲಿತರ ಕುರಿತು ಅತಿಹೆಚ್ಚು ಕಥೆಗಳನ್ನು ಬರೆದ ದಲಿತೇತರ ಲೇಖಕರೆಂದರೆ ಬೆಸಗರಹಳ್ಳಿ ರಾಮಣ್ಣ. ಆ ಹೆಗ್ಗಳಿಕೆಗೆ ಪುರಾವೆ ಎಂಬಂತೆ ದಲಿತ ಕೇಂದ್ರಿತ ಕಥೆಗಳ ಕಣಜವೇ ಈ ಕೃತಿ. ಜೊತೆಗೆ, ಶೋಷಿತರ, ನೋವುಂಡವರ, ದನಿ ಹೀನರ ಕುರಿತು ಬರೆಯುವಾಗ ಬೆಸಗರಹಳ್ಳಿ ರಾಮಣ್ಣ ಬಳಸುವ ಮೊನಚಿನ ಭಾಷೆಯ ರುಚಿಯನ್ನೂ ಈ ಕೃತಿಯಲ್ಲಿ ಓದುಗ ಆಸ್ವಾದಿಸಬಹುದು. ಮನುಷ್ಯತ್ವದಲ್ಲಿ ರಾಮಣ್ಣ ಅವರಿಗಿದ್ದ ಅಗಾಧ ನಂಬಿಕೆ, ಭರವಸೆ ಅವರ ಸಮಾನತೆಯ ಸಮಾಜ ನಿರ್ಮಾಣದ ಬಗೆಗಿನ ಅವರ ಕನಸು ಈ ಕೃತಿಯ ಪುಟ- ಪುಟದಲ್ಲೂ ಅನುರಣಿಸುತ್ತದೆ.

ಟಿಎಸ್ಐ

ಅಮ್ಮಚ್ಚಿಯೆಂಬ ನೆನೆಪು

ಅಡುಗೆ ಮನೆಯ ಕತ್ತಲ ಜಗತ್ತಿಗೆ ಬೆಳಕು ಚೆಲ್ಲಿದ ಲೇಖಕಿಯರಲ್ಲಿ ವೈದೇಹಿ ಪ್ರಮುಖರು. ಅವರ 'ಅಮ್ಮಚ್ಚಿಯೆಂಬ ನೆನಪು' ಅಂಥ ಕತ್ತಲ ಜಗತ್ತಿನ ಬೆಳಕಿನ ಕಥೆಗಳ ಗುಚ್ಛ. 21 ಕಥೆಗಳನ್ನೊಳಗೊಂಡ ಈ ಸಂಕಲನ ಹೆಣ್ಣಿನ ಖಾಸಗಿ ಅನಿಸಿಕೆಗಳ, ಕನಸುಗಳ, ಗೊಣಗುವಿಕೆಗಳ, ಹನಿದ ಕಣ್ಣೀರುಗಳ, ಕೊಸರುವಿಕೆ, ನಿಡುಸುಯ್ಯುಗಳ, ವ್ಯಂಗ್ಯದ ಕಣಜ. 'ಅಮ್ಮಚ್ಚಿಯೆಂಬ ನೆನಪು' ಕಥೆ ಮುಗ್ಧ ಹೆಣ್ಣೊಬ್ಬಳು ತನ್ನದೇ ಮಿತಿಯಲ್ಲಿ ವ್ಯವಸ್ಥೆಯ ಸಿದ್ಧಮಾದರಿಗಳಿಗೆ ಪ್ರತಿರೋಧ ಒಡ್ಡುವ ಕಥೆಯಾದರೆ, ಸಂಕಲನದಲ್ಲಿರುವ ಇನ್ನೊಂದು ಕಥೆ, 'ಮರೆಯಾದವರು' ಬಸ್ ಪ್ರಯಾಣದಲ್ಲಿ ಕ್ಷಣಾರ್ಧದಲ್ಲಿ ಜನ್ಮತಳೆದ, ಹೆಸರೇ ಇಲ್ಲದ ಮಾನವೀಯ ಸಂಬಂಧವೊಂದನ್ನು ಚಿತ್ರಿಸುತ್ತದೆ. ಕಥಾ ಸಂಕಲನದಲ್ಲಿರುವ 'ಆಭಾ', 'ಅವಳು ಮತ್ತು ಮಳೆ', 'ಬಾಬುಲಿ, ತಾಯಿ ಮತ್ತು ನಸೀಬು' ಕಥೆಗಳು ಕೂಡ ವೈದೇಹಿಯವರಿಗೇ ವಿಶಿಷ್ಟವಾದ ದಟ್ಟ ಜೀವನಾನುಭವ, ಪ್ರಬುದ್ಧತೆ ಮತ್ತು ಜೀವನ ಪ್ರೀತಿಯನ್ನು ಉಕ್ಕಿಸುವ ಪಾತ್ರ ಮತ್ತು ಸನ್ನಿವೇಶಗಳಿಂದ ಗಮನಸೆಳೆಯುತ್ತವೆ. ಈ ಕೃತಿಯ ಓದು ಬದುಕಿನ ಗ್ರಹಿಕೆಗೆ ಹೊಸ ಆಯಾಮವನ್ನೇ ಕೊಡಬಲ್ಲದು ಎಂದರೆ ಅದು ಅತಿಶಯೋಕ್ತಿಯಾಗದು.

ಟಿಎಸ್ಐ

ಔದುಂಬರಗಾಥೆ

"ಬೇಂದ್ರೆಯವರ ಕಾವ್ಯ ನಮ್ಮ ಸಂಸ್ಕೃತಿಯ ಅಂಗವಾಗಿದೆ ಮಾತ್ರವಲ್ಲ, ನಮ್ಮ ಸತ್ವಗಳಲ್ಲಿ ಒಂದಾಗಿದೆ. ಅದನ್ನು ಧಿಕ್ಕರಿಸುವುದೆಂದರೆ ನಮ್ಮನ್ನು ನಾವೇ ಧಿಕ್ಕರಿಸಿಕೊಂಡಂತೆ" ಎನ್ನುತ್ತಾರೆ ಗೋಪಾಲಕೃಷ್ಣ ಅಡಿಗರು. ನಮ್ಮ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ಬೇಂದ್ರೆ ಅವರ ಅನಿವಾರ್ಯತೆ ಎಷ್ಟಿದೆ ಎಂಬುದನ್ನು ಅರಿಯಲು ಮೇಲಿನ ಮಾತುಗಳೇ ಸಾಕು. ತಮ್ಮ ಸಂಸ್ಕೃತದ ಪ್ರಜ್ಞೆಯನ್ನು ಜಾನಪದದ ಸ್ವಾದದೊಂದಿಗೆ ಕಾವ್ಯದ ರೂಪದಲ್ಲಿ ಜಗಕ್ಕೆ ಹಂಚಿದ ಬೇಂದ್ರೆ ಆಧುನಿಕ ಯುಗದ ಕಾವ್ಯಧ್ವನಿಯಾಗಿ, ತನ್ಮೂಲಕ ಯುಗದ ಧ್ವನಿಯೂ ಆದವರು. 'ಉಯ್ಯಾಲೆ', 'ನಾದ ಲೀಲೆ', 'ಗಂಗಾವತರಣ', 'ನಾಕು ತಂತಿ', 'ಸಖೀಗೀತ' ಮುಂತಾದ ತಮ್ಮ ಕೃತಿಗಳ ಮೂಲಕ ಶಬ್ದಗಳ ನಾಡಿ ಮಿಡಿದು ಜನಮಾನಸದ ನಾಲಗೆಯಾದವರು. ದಾಸ್ಯದ ನೋವಿಗೆ ಮಿಡಿಯುತ್ತಲೇ ಸ್ವಾತಂತ್ರ್ಯದ ಕನಸು ಹಂಚಿದವರು. ಪಟ್ಟ ಪಾಡನ್ನೆಲ್ಲ ಹಾಡಾಗಿಸಿದ ಈ ನಾದಬ್ರಹ್ಮನ ಕಾವ್ಯವೆಂದರೆ ಅದು 'ಭುವನದ ಭಾಗ್ಯ'.

ಟಿಎಸ್‌ಐ

ಸಮಗ್ರ ಕಾವ್ಯ ಗೋಪಾಲಕೃಷ್ಣ ಅಡಿಗ

ಪರಂಪರೆ ಹಾಗೂ ಸಮಕಾಲೀನ ಸಂದರ್ಭದ ನಡುವೆ ಅನುಸಂಧಾನ ನಡೆಸುತ್ತಲೇ ಅವುಗಳ ನಡುವಿನ ಸಂಘರ್ಷವನ್ನು ಜೀರ್ಣಿಸಿಕೊಂಡು ಕಾವ್ಯ ರಚಿಸಿದವರು ಅಡಿಗರು. ತಮ್ಮ 'ಕಟ್ಟುವೆವು ನಾವು', 'ನಡೆದು ಬಂದ ದಾರಿ', 'ಚಂಡೆ ಮದ್ದಳೆ' 'ಬತ್ತಲಾರದ ಗಂಗೆ' ಕವನ ಸಂಕಲನಗಳ ಮೂಲಕ ಕನ್ನಡದ ಸಂವೇದನೆ ತನ್ನ ಮೊನಚು ಕಳೆದುಕೊಳ್ಳದಂತೆ ಕಾಯ್ದ ಅಡಿಗರು ತನ್ಮೂಲಕ ಕಾವ್ಯ ಪರಂಪರೆಯೊಂದಕ್ಕೆ ದಾರಿದೀಪವಾದವರು. ಕಂದಾಚಾರದಿಂದ ಕಲ್ಮಶಗೊಂಡ ಸಾಮಾಜಿಕ ಮನಸ್ಥಿತಿಯನ್ನು 'ಬತ್ತಲಾರದ ಗಂಗೆ' ಎಂದು ವಿಷಾದಿಸುತ್ತಲೇ "ಇದು ಸನಾತನ ವೃಕ್ಷವಣ್ಣ. ನೇಣಿಗೆ ಬೇರೆ/ಆಧಾರ ಬೇಕೆ ಈ ಕೊಂಬೆಗಿಂತ?" ಎಂಬ ತೀಕ್ಷ್ಣ ವ್ಯಂಗ್ಯದ ಆಧುನಿಕ ಪ್ರಜ್ಞೆಯ ಅಡಿಗರ ಕಾವ್ಯವನ್ನು ಅದರ 'ಸಮಗ್ರ'ದಲ್ಲಿ ಆಸ್ವಾದಿಸುವುದೆಂದರೆ ಅದು ಕಾಲಘಟ್ಟವೊಂದರ ಜಾಗೃತ ಪ್ರಜ್ಞೆಯೊಂದಿಗೆ ಸಂವಾದಿಸಿದಂತೆ.

ಟಿಎಸ್‌ಐ

ಹೊಂಬೆಳಕು: ಚೆನ್ನವೀರ ಕಣವಿ

ಚೆಂಬೆಳಕಿನ ಕವಿ ಎಂದೇ ಹೆಸರಾಗಿರುವ ಚನ್ನವೀರ ಕಣವಿ ಅವರು ತಮ್ಮ ಸಮಕಾಲೀನ ಯಾವ ಚಳವಳಿ- ಪಂಥಗಳಿಗೂ ತಮ್ಮನ್ನು ಇಡಿಯಾಗಿ ಒಪ್ಪಿಸಿಕೊಳ್ಳದವರು. ವಿಮರ್ಶಕರು ಕಣವಿ ಅವರ ಕಾವ್ಯಮನೋಧರ್ಮವನ್ನು 'ರೋಮ್ಯಾಂಟಿಕ್' ಎಂದು ಗುರುತಿಸಿದರೂ ಅವರ ಮೊದಲ ಕಾವ್ಯ ಸಂಗ್ರಹ 'ಕಾವ್ಯಾಕ್ಷಿ'ಯಿಂದ ಈವರೆಗಿನ ಎಲ್ಲಾ ಕವಿತೆಗಳಲ್ಲೂ ನಿಸರ್ಗ ಪ್ರೇಮ, ಭಾವನಿಷ್ಠೆ, ಆದರ್ಶವಾದಗಳ ಹೊರತಾಗಿಯೂ ಸಮದರ್ಶನ, ಸಮಭಾವ, ಸ್ವೀಕೃತಿಗಳಿಂದ ಮೌಲ್ಯಗಳ ಬಗೆಗಿನ ಅವರ ನಂಬುಗೆ ಪ್ರತಿಧ್ವನಿಸುತ್ತದೆ. ಕಣವಿ ಅವರನ್ನು ಕುರಿತು ಮಾತನಾಡುತ್ತಾ ವಿಮರ್ಶಕ ಡಿ.ಆರ್. ನಾಗರಾಜ, "ಜೀವನದ ಸಮಸ್ತ ಸವಾಲುಗಳಿಗೆ ಪ್ರತಿಸ್ಪಂದಿಸುತ್ತಲೇ ತಮ್ಮ ಸೃಜನಶೀಲತೆಯನ್ನು ಉಳಿಸಿಕೊಳ್ಳಬೇಕಾದ ಭಾರತದ ಇಂದಿನ ಚಾರಿತ್ರಿಕ ಸಂದರ್ಭದಲ್ಲಿ ಕಣವಿ ಅವರ ಕಾವ್ಯ ಮಾರ್ಗ ಉದಾರವಾದಿ ಮನವತಾಧೋರಣೆಯನ್ನು ಹೊಂದಿಯೂ ಅರ್ಥಪೂರ್ಣ ಕಾವ್ಯ ರಚಿಸಬಲ್ಲ ಸಾಧ್ಯತೆಯನ್ನು ತೋರುತ್ತದೆ" ಎಂದು ಭಾವಿಸುತ್ತಾರೆ.

ಟಿಎಸ್‌ಐ

ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು

ಅಕ್ಷರಗಳ ಮೂಲಕವೇ ಪ್ರೀತಿಯ 'ಮಲ್ಲಿಗೆ ಮಾಲೆ' ಕಟ್ಟಿದವರು ಕೆ.ಎಸ್. ನರಸಿಂಹಸ್ವಾಮಿ. "ನೊಂದ ನೋವನ್ನಷ್ಟೆ ಹಾಡಲೇ ಬೇಕೇನು?/ ಬೇಡವೇ ಯಾರಿಗೂ ಸಿರಿ ಮಲ್ಲಿಗೆ" ಎನ್ನುತ್ತಾ ಕಣ್ಣೀರ ಬದುಕಿನ ನಡುವೆಯೂ ಕೋಮಲ, ಸುಮಧುರವಾದದ್ದರ ಕುರಿತು ಧ್ಯಾನಿಸಿದವರು ಈ ಪ್ರೇಮ ಕವಿ. ಅವರ ಆಯ್ದ ಕವಿತೆಗಳ ಸಂಕಲನ 'ಹಾಡು-ಹಸೆ'ಯ ಮೂಲಕ ನಾಡಿನಾದ್ಯಂತ ಪ್ರೀತಿಯ ಸಿಂಚನಗೈದ 'ಮೈಸೂರ ಮಲ್ಲಿಗೆ', 'ಐರಾವತ', 'ದೀಪದ ಮಲ್ಲಿ', 'ಉಂಗುರ' 'ಇರುವಂತಿಗೆ' 'ಶಿಲಾಲತೆ' ಮುಂತಾದ ಪ್ರಸಿದ್ಧ ಕವನ ಸಂಕಲನಗಳನ್ನು ಒಂದೇ ತುತ್ತಿನಲ್ಲಿ ಓದುಗರಿಗೆ ಉಣಬಡಿಸಲಾಗಿದೆ. 'ಒಡಕಲು ಬಿಂಬ'ವಾದಂತಿರುವ ನಮ್ಮ ವಾಸ್ತವಕ್ಕೆ ಸಂವೇದನೆಗಳನ್ನು ಶ್ರೀಮಂತಗೊಳಿಸಿ, ಪ್ರತಿನಿತ್ಯದ ಬದುಕನ್ನೇ ತೀವ್ರವಾಗಿ ಪ್ರೀತಿಸುವಂತೆ ಮಾಡುವ ನರಸಿಂಹಸ್ವಾಮಿ ಅವರ ಈ ಕವಿತೆಗಳ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಿದೆ.

ಟಿಎಸ್‌ಐ

ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ

ನವೋದಯ ಹಾಗೂ ನವ್ಯದ ಸಾರವನ್ನು ಹೀರಿಯೂ ಜಿ.ಎಸ್. ಶಿವರುದ್ರಪ್ಪ ಭಿನ್ನವಾಗಿ ಕಾಣುವುದು ಅವರ ವಾಸ್ತವ ಪ್ರಜ್ಞೆಯ ಮೂಲಕ. ಈ ವಿವೇಕನಿಷ್ಠವಾದ ಸಾಹಿತ್ಯಿಕ ಪ್ರಜ್ಞೆಯೇ ಶಿವರುದ್ರಪ್ಪ ಅವರನ್ನು ಚಳವಳಿಗಳ ಅತಿರೇಕದಿಂದ ರಕ್ಷಿಸಿದೆ. ಅಂಥ ಪ್ರಜ್ಞೆಯೊಂದರ ಪರಿಚಯಕ್ಕೆ ಅವರ 'ಸಮಗ್ರ ಕಾವ್ಯ'ವನ್ನು ಕೈಗೆತ್ತಿಕೊಳ್ಳಬೇಕು. ಭಾವುಕತೆಗಿಂತ ವೈಚಾರಿಕತೆಯೇ ಮೇಲುಗೈ ಸಾಧಿಸುವ ಜಿ.ಎಸ್.ಎಸ್ ಅವರ ಕಾವ್ಯ ಕೆಲವೊಮ್ಮೆ ಪರಿಚಿತವಿರುವ ಚಿಂತನೆ, ಆಲೋಚನೆಗಳನ್ನು ಅಭಿವ್ಯಕ್ತಿಸಿಯೂ ಶೈಲಿಯ ಲಾಲಿತ್ಯದಿಂದ ಆಪ್ತವಾಗುತ್ತದೆ. ಒಳಗಣ್ಣು ತೆರೆಸುತ್ತದೆ. ಅವರ 'ಮಬ್ಬಿನಿಂದ ಮಬ್ಬಿಗೆ', 'ಮುಂಬೈ ಜಾತಕ', 'ಜಡೆ', 'ಕವಿತೆ', 'ಹಳೆಯ ಹಾಡು', 'ರಾಗಾನ್ವೇಷಣೆ', 'ಇರುಳ ಮೌನಗಳಲ್ಲಿ' ಕವನಗಳಲ್ಲಿ ಪ್ರತಿಯೊಂದು ಕವಿ ಮನಸ್ಸೂ ಪಡೆಯಬಹುದಾದ ಹೊಳವುಗಳ ಸೆಲೆಯಿದೆ. 'ಎಲ್ಲೋ ಹುಡುಕಿದ ಇಲ್ಲದ ದೇವರ ಕಲ್ಲುಮುಳ್ಳುಗಳ ಗುಡಿಯೊಳಗೆ/ ಇಲ್ಲೇ ಇರುವ ಪ್ರೀತಿ-ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ...' ನಂತಹ ಕವಿತೆಗಳು ದೇವರು- ಧರ್ಮದ ಅಮಲೇರಿರುವ ಸಮಾಜಕ್ಕೆ ಮದ್ದಾಗಬಲ್ಲವು.

ಟಿಎಸ್ಐ

ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು

ತಮ್ಮ ಚೊಚ್ಚಲ ಕವನ ಸಂಕಲನ 'ಮನಸು ಗಾಂಧಿ ಬಜಾರು' ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಧಿಕೃತವಾಗಿ ಕಾಲಿಟ್ಟ ನಿಸಾರ್ ಅಹಮದ್ ನಂತರದ ತಮ್ಮ ಕವಿತೆಗಳ ಮೂಲಕ ಕನ್ನಡದ 'ನಿತ್ಯೋತ್ಸವ' ಆಚರಿಸಿದವರು. ನಿಸಾರ್ ಅವರ ಕಾವ್ಯದೃಷ್ಟಿ ಅವರ 'ಸಮಗ್ರ ಕವಿತೆಗಳು' ಸಂಕಲನದಲ್ಲಿ ಮೈದುಂಬಿಕೊಂಡಿದೆ. 'ಕಾರವಾರದ ಕಡಲ ದಂಡೆಯಲ್ಲಿ', 'ನಿತ್ಯೋತ್ಸವ', ಕವಿತೆಗಳಲ್ಲಿ ಧ್ಯಾನಸ್ಥರಾಗುವ ನಿಸಾರ್ 'ಅಮ್ಮ, ಆಚಾರ, ನಾನು', 'ರಂಗೋಲಿ ಮತ್ತು ಮಗ' ರೀತಿಯ ಕವಿತೆಗಳ ಮೂಲಕ ಮನುಷ್ಯತ್ವ ಹಾಗೂ ಸಂಸ್ಕೃತಿ-ಸಂಪ್ರದಾಯಗಳ ನಡುವಿನ ತಿಕ್ಕಾಟವನ್ನು ಅದರ ಎಲ್ಲಾ ವಿಪರ್ಯಾಸದೊಂದಿಗೆ ಗ್ರಹಿಸಬಲ್ಲವರು. 'ನಾನಿಷ್ಟೇ ಲೋಕಕ್ಕೆ: ತೇದಂತೆ ಕರಗುವ ಗಂಧದೊಂದು ಚೆಕ್ಕೆ' ಎಂಬಂಥ ವಿನಯವಂತಿಕೆಯಲ್ಲಿಯೇ ತಮ್ಮೆಲ್ಲಾ ಅನುಭವವನ್ನೂ ಕಾವ್ಯವನ್ನಾಗಿಸಿದ ನಿಸಾರ್ ಅವರ ಕಾವ್ಯಕ್ಕೆ ಮುಪ್ಪೆಂಬುದಿಲ್ಲ.

ಟಿಎಸ್ಐ

ಮೂವತ್ತು ಮಳೆಗಾಲ

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಹೆಣ್ಣು/ ನನಗೋ ಅವಳು ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು... ಹೀಗೆ ಪ್ರೀತಿ- ಕೃಷ್ಣ- ರಾಧೆಯ ಅನುರಣದ ಹಾಡುಗಳೇ ಎಚ್.ಎಸ್. ವೆಂಕಟೇಶಮೂರ್ತಿ ಅವರ ಕಾವ್ಯದ ಮುಖ್ಯಧಾರೆ. ಪ್ರೀತಿ ಮತ್ತು ಮಾನವೀಯತೆಯ ಪಾಕವಾಗಿರುವ ಈ ಸಂಕಲನದ ಕವಿತೆಗಳಲ್ಲಿ ಬಹಳಷ್ಟು ಭಾವಗೀತೆಗಳಾಗಿ ನಾಡಿನುದ್ದಕ್ಕೂ ಮಾರ್ದನಿಸುತ್ತವೆ. ಹಾಗೇ ಓದುಗರನ್ನು ಚಕಿತಗೊಳಿಸುವಂತೆ ಭಾಷೆಯೊಂದಿಗೆ ಆಟವಾಡುವ ಎಚ್ಚೆಸ್ವಿಯವರ ಕವಿತೆಗಳ ಲಯ ಮತ್ತು ಗೇಯತೆ ಕೂಡ ಮತ್ತೆ- ಮತ್ತೆ ಓದುವಂತೆ ಮಾಡುತ್ತದೆ. 'ಕವಿತೆಯ ನೆಲೆ ಅಖಂಡ ಸೃಷ್ಟಿಯ ಪ್ರೀತಿ' ಎಂದು ನಂಬಿರುವ ಎಚ್ಚೆಸ್ವಿಯವರ ಸಮಗ್ರ ಕವಿತೆಗಳನ್ನೊಳಗೊಂಡ 'ಮೂವತ್ತು ಮಳೆಗಾಲ' ಮೂರೂ ಸಂಪುಟಗಳು ಕಾವ್ಯವಷ್ಟೇ ಅಲ್ಲ, ಜೀವನ ಪ್ರೀತಿಯೂ ಎಲ್ಲರ ಮನೆದುಂಬಬೇಕು.

ಟಿಎಸ್ಐ

ಮೆರವಣಿಗೆ

'ಇಕ್ರಲಾ ವದೀರ್‍ಲಾ/ ಈ ನನ್ ಮಕ್ಕಳ ಚರ್ಮ ಎಬ್ರಲಾ' ಎನ್ನುತ್ತಾ ದಲಿತ ಅಬ್ಬರದೊಂದಿಗೆ ಕನ್ನಡ ಸಾಹಿತ್ಯಕ್ಕೆ ಧಾಂಗುಡಿ ಇಟ್ಟವರು 'ಈ ಶತಮಾನದ ದಲಿತರ ಆದಿಕವಿ' ಡಾ. ಸಿದ್ಧಲಿಂಗಯ್ಯ. 'ಹೊಲೆಮಾದಿಗರ ಹಾಡು', 'ಸಾವಿರಾರು ನದಿಗಳು', 'ಕಪ್ಪು ಕಾಡಿನ ಹಾಡು' ಸಂಕಲನಗಳ ಕವಿತೆಗಳನ್ನು ಒಳಗೊಂಡ 'ಮೆರವಣಿಗೆ' ಕವನ ಸಂಕಲನ ಒಂದರ್ಥದಲ್ಲಿ ನೊಂದವರ ಸ್ವಾಭಿಮಾನದ ಹಾಡಿನ ಗುಚ್ಛ. 'ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತ್ವಾರಣ/ ನಮ್ಮ ಜನಗಳ ಕಾಲು-ಕೈಯ್ಯಿ ಕಂಬ ಅವರ ಹಟ್ಟಿಗೆ' ಎಂದು ಬೆಂಕಿಯುಗುಳಿದ ಈ ಕ್ರಾಂತಿಕವಿಯ 'ಹೊಲೆಮಾದಿಗರ ಹಾಡು' ಕವನ ಸಂಕಲನ ದಲಿತ ಚಳವಳಿಯ ಪ್ರಣಾಳಿಕೆಯಾಗಿತ್ತು. ದಲಿತ ಯುವಕರ ಕ್ರಾಂತಿಗೀತೆಯಾಗಿತ್ತು. ಸಂಕಲನದಲ್ಲಿರುವ 'ನನ್ನ ಜನಗಳು', 'ಒಂದು ಮೂಳೆಯ ಹಾಡು', 'ಕ್ರಾಂತಿಪದ' ಪದ್ಯಗಳು ಶೋಷಿತರಿಗೆ ನೀಡಿದ ಆತ್ಮವಿಶ್ವಾಸ ಪದಗಳಿಗೆ ನಿಲುಕದ್ದು.

ಟಿಎಸ್ಐ

ಬೆಳ್ಳಕ್ಕಿ ಹಿಂಡು

ಕನ್ನಡದ ಬಡವರ ಕವಿ ಎಂದೇ ಹೇಳಬಹುದಾದ ಸುಬ್ಬಣ ರಂಗನಾಥ ಎಕ್ಕುಂಡಿ ಅವರ ಸಮಗ್ರ ಕವನಗಳ ಸಂಕಲನ ಇದು. ಸಮಾನತೆಯ ಸಮಾಜದ ಕನಸು ಮತ್ತು ದೈವಿಕ ಒಳಿತನ್ನು ಹಂಬಲಿಸುವ ಇಲ್ಲಿನ ಕವಿತೆಗಳಲ್ಲಿ ಮಾರ್ಕ್ಸ್ ಮತ್ತು ಮಾಧ್ವರ ಪ್ರಭಾವ ಕಾಣಬಹುದು. ತಮ್ಮ ಕಣ್ಣೆದುರಿನ ಜಗತ್ತಿನ ಬಡತನ, ದಾರಿದ್ರ್ಯ, ಹಸಿವುಗಳ ಜೊತೆಗೆ ಢಾಂಬಿಕತೆ, ಪಟ್ಟಭದ್ರ ವ್ಯವಸ್ಥೆಯನ್ನು ತಮ್ಮ ವಿಶಿಷ್ಟ ಕಥನ ಕವನಗಳ ಮೂಲಕ ಬಿಚ್ಚಿಟ್ಟವರು ಸು.ರಂ. ಎಕ್ಕುಂಡಿ. 'ಬಕುಳದ ಹೂಗಳು', 'ಮತ್ಸ್ಯಗಂದಿ', 'ಬೆಳ್ಳಕ್ಕಿ ಹಿಂಡು' ಸೇರಿದಂತೆ ಅವರ ಎಲ್ಲ ಸಂಕಲನಗಳ ಕವಿತೆಗಳು ಇಲ್ಲಿ ಸೇರಿವೆ. ಗಟ್ಟಿ ಗಂಟಲಿನ ಒಣ ಪ್ರತಿಷ್ಠೆಯಾಗಲೀ, ಭೌದ್ಧಿಕ ಕಸರತ್ತಾಗಲೀ ಇಲ್ಲದೆ ಮೃದು ದನಿಯ ಮತ್ತು ಕಥನ ಶೈಲಿಯ ಕವಿತೆಗಳು ಅಪ್ಪಟ ಮಾನವೀಯತೆಯ ಪ್ರೇರಣೆಗಳು ಎಂದರೆ ಅತಿಶಯೋಕ್ತಿಯಾಗದು.

ಟಿಎಸ್ಐ

ತಟ್ಟು ಚಪ್ಪಾಳೆ ಪುಟ್ಟ ಮಗು

ಶತಮಾನದ ಆದಿಯಿಂದ ಎಪ್ಪತ್ತರ ದಶಕದ ಮೊದಲಾರ್ಧದವರೆಗೆ ಕನ್ನಡದಲ್ಲಿ ಬಂದಿರುವ ಮಕ್ಕಳ ಪದ್ಯಗಳಲ್ಲಿ ಪ್ರಾತಿನಿಧಿಕ ಎನ್ನಬಹುದಾದ ನೂರಾರು ಪದ್ಯಗಳನ್ನು ಬೊಳುವಾರು ಮಹಮದ್ ಕುಂಞಿ ಅವರ ಈ ಸಂಕಲನ ಒಳಗೊಂಡಿದೆ. 'ಚಿಗುರು' 'ಮುಗುಳು' ಹಾಗೂ 'ಅರಳು' ಎಂಬ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿರುವ ಈ ಸಂಕಲನದಲ್ಲಿ 'ಗೋವಿನ ಹಾಡು' 'ತಿರುಕನ ಕನಸು', 'ಮಂಗಗಳ ಉಪವಾಸ', 'ಮರಳುಕಾಗೆ', 'ಚಂದಿರನೇತಕೆ', 'ನಾಯಿಮರಿ', 'ತುತ್ತೂರಿ', 'ಹಿಂದಿನ ಸಾಲಿನ ಹುಡುಗರು' ಮುಂತಾದ ಜನಪ್ರಿಯ ಪದ್ಯಗಳು ಸೇರಿವೆ. ಹೇಳಬೇಕಾದ್ದೆಲ್ಲವನ್ನೂ ಮಕ್ಕಳ ಎಟುಕಿನಲ್ಲಿಯೇ ವಿವರಿಸುವ ಈ ಪದ್ಯಗಳನ್ನು ಒಳಗೊಂಡ ಈ ಸಂಕಲನ ಬೊಳುವಾರು ಅವರ ಮಕ್ಕಳ ಪ್ರೀತಿಯ ಜೊತೆಗೆ ಅವರ ಸಂಶೋಧಕ ದೃಷ್ಟಿಯನ್ನೂ ಓದುಗರ ಗಮನಕ್ಕೆ ತರುತ್ತದೆ. ಮಕ್ಕಳ ಮನೋವಿಕಾಸ, ಆರೋಗ್ಯಪೂರ್ಣ ಮನಸ್ಸಿಗೆ ಈ ಪುಸ್ತಕ ಮನೆಯಲ್ಲಿದ್ದರೆ ಸೊಗಸು.

ಟಿಎಸ್ಐ

ಕುವೆಂಪು ಸಮಗ್ರ ಕಾವ್ಯ

ಕನ್ನಡದ ರಸಋಷಿ ಎಂದೇ ಜನಪ್ರಿಯರಾದ ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕವಿತೆಗಳ ಎರಡು ಸಂಪುಟಗಳು ಕೂಡ ಕನ್ನಡ ಕಾವ್ಯ ರಸಿಕನ ಮನೆಗೆ ಶೋಭೆ ತರಬಲ್ಲವು. ಗೊಬ್ಬರದಿಂದ ಅನಿಕೇತನ-ವಿಶ್ವಮಾನವ ಗೀತೆವರೆಗೆ ಕುವೆಂಪು ಅವರ ಅದ್ವಿತೀಯ ಕಾವ್ಯ ಪ್ರತಿಭೆಯ ಪರಿಚಯದೊಂದಿಗೆ ಅವರು ಆರಂಭದ ಘಟ್ಟದಲ್ಲಿ ರಚಿಸಿದ ಇಂಗ್ಲಿಷ್ ಕವಿತೆಗಳು ಕೂಡ ಇಲ್ಲಿವೆ. ಹೋಗುವೆನು ನಾ ಹೋಗುವೆನು... ನಂತಹ ಸರಳ ಕವಿತೆಗಳಿಂದ ಹಿಡಿದು ಕುವೆಂಪು ಅವರು ಕನ್ನಡ, ಕರ್ನಾಟಕದ ಕುರಿತು ವಿವಿಧ ಸಂದರ್ಭದಲ್ಲಿ ಬರೆದ ಕವಿತೆಗಳು, ಅಧ್ಯಾತ್ಮ ಗೀತೆಗಳು, ಭಾವಗೀತೆಗಳು, ಮಕ್ಕಳ ಕವಿತೆಗಳು, 'ದ್ರೌಪದಿಯ ಸಿರಿಮುಡಿ'ಯಂತಹ ಸಂಕೀರ್ಣ ಕವಿತೆಗಳು ಕೂಡ ಇಲ್ಲಿವೆ. ಹಾಗಾಗಿ ಈ ಮಲೆಕವಿಯ ಈ ಸಂಪುಟಗಳು ಮಲೆನಾಡಿನ ಕಾಡಿನಷ್ಟೇ ವೈವಿಧ್ಯಮಯವೂ, ಶ್ರೀಮಂತವೂ ಹೌದು. ಅಜ್ಜನಿಂದ ಮೊಮ್ಮಕ್ಕಳವರೆಗೆ ಎಲ್ಲರೂ ಓದಬಹುದಾದ, ಹಾಡಬಹುದಾದ ಪದ್ಯಗಳಿಗೆ ಇದು ಕಣಜ.

ಟಿಎಸ್ಐ

ಕ್ಯಾಮೆರಾ ಕಣ್ಣು: ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ

ಒಂದು ಕವನ ಸಂಕಲನವನ್ನೂ ಪ್ರಕಟಿಸದಿದ್ದರೂ ಲಂಕೇಶರ 'ಅಕ್ಷರ ಹೊಸ ಕಾವ್ಯ'ದಲ್ಲಿ ಜಾಗ ಗಿಟ್ಟಸಿಕೊಂಡು ಕವಿಲೋಕ ದಲ್ಲಿ ಅಚ್ಚರಿ ಮೂಡಿಸಿದ್ದರೂ ಬಿ.ಆರ್. ಲಕ್ಷ್ಮಣ ರಾವ್ ಅವರ ಒಳಗಿನ ಪರಿಪಕ್ವ ಕವಿ ಪ್ರಕಟವಾಗಿದ್ದು ಅವರ ಪ್ರಥಮ ಸಂಕಲನ 'ಗೋಪಿ ಮತ್ತು ಗಾಂಡಲೀನ'ದ ಮೂಲಕ. ಆರಂಭದಿಂದಲೇ ಅತ್ಯಂತ ಲವಲವಿಕೆಯಿಂದ, ಉತ್ಸಾಹದಿಂದ ಕಾವ್ಯ ರಚನೆಗೆ ಕೈ ಹಾಕಿದ ಬಿ.ಆರ್.ಎಲ್ ಯಾವುದೇ ಚಳವಳಿಯ ಅಬ್ಬರಕ್ಕೆ ಬಲಿಯಾಗದೇ, 'ಟುವಾಟಾರ', 'ಲಿಲ್ಲಿಪುಟ್ಟಿಯ ಹಂಬಲ', 'ಶಾಂಗ್ರಿ-ಲಾ' ಮುಂತಾದ ಕವನ ಸಂಕಲನಗಳ ಮೂಲಕ ಕನ್ನಡದ ತರುಣ ಮನಸ್ಸಿನ ಪ್ರತಿನಿಧಿಯಾಗಿ ಹೊರಹೊಮ್ಮಿದವರು. ವ್ಯಂಗ್ಯ, ವಿಡಂಬನೆ ಮತ್ತು ಪನ್ ಮೂಲಕವೇ ವಿಶಿಷ್ಟ ಕಾವ್ಯ ಹಾಗೂ ಜನಪ್ರಿಯ ಭಾವಗೀತೆಗಳನ್ನು ಕೊಟ್ಟ ಅವರ 'ಕ್ಯಾಮೆರಾ ಕಣ್ಣು' ಸಮಗ್ರ ಕಾವ್ಯ ಪ್ರತಿಭೆಯ ಅನಾವರಣ ಮಾಡದಿರದು.

ಟಿಎಸ್ಐ

ರತ್ನನ ಪದಗಳು,ನಾಗನ ಪದಗಳು

ಕುಡುಕನ ಬಾಯಲ್ಲಿ ಜೀವನೋತ್ಸಾಹ ಸಾರುವಂಥ ತತ್ವದ ಪದಗಳನ್ನು ಹೇಳಿಸಿದವರು ಜಿ.ಪಿ. ರಾಜರತ್ನಂ. 77 ರತ್ನಗಳನ್ನು ಒಳಗೊಂಡ 'ರತ್ನನ ಪದಗಳು' ಕೃತಿಯಲ್ಲಿ ಬಳಕೆಯಾಗಿರುವ ಶೈಲಿ ಹಾಗೂ ಅಪ್ಪಟ ಗ್ರಾಮೀಣ ಸೊಗಡಿನ ಭಾಷೆ ಓದುಗರ ಮನಮುಟ್ಟುವಂತಿದೆ. 'ನನಗೂನೆ ಯೆಂಡಕ್ಕು ಬಲ್‌ಬಲೆ ದೋಸ್ತಿ' ಎನ್ನುತ್ತಾ 'ರತ್ನನ ಮೊಕಾಬಿಲೆ' ಮೂಲಕ ಓದುಗನ ಪ್ರಜ್ಞೆಗೆ ದಾಳಿ ಮಾಡುವ ರತ್ನ ತನ್ನ ವಿನೋದಭರಿತ ಮಾತುಗಳಲ್ಲಿ ತನ್ನೆಲ್ಲಾ ಬದುಕನ್ನೂ ಓದುಗನೆದುರು ಬಿಚ್ಚಿ ಹರಡುತ್ತಾನೆ. ಆ ಮೂಲಕ ಹೊಸದೊಂದು ಜೀವನ ಸಂದೇಶವನ್ನು ಕೊಡುವ ಇರಾದೆಯೂ ಆತನಿಗಿದ್ದಂತಿದೆ. ರಾಜರತ್ನಂ ಪ್ರಣೀತ ಈ ರತ್ನನ ಪ್ರಪಂಚದಲ್ಲಿ ರತ್ನ ಅಲ್ಲದೇ, ನಾಗ, ಪುಟ್ನಂಜಿ ಹಾಗೂ ರತ್ನ ಕುಡಿದಾಗ ಉದುರಿಸುವ ಅಣಿಮುತ್ತುಗಳನ್ನು ಬರೆದುಕೊಳ್ಳುವ ಬೇವರ್ಸಿ ಕೂಡಾ ಇದ್ದಾರೆ.

ಟಿಎಸ್ಐ

ಪಾಂಚಾಲಿ: ಆಯ್ದ ಕವನಗಳು

ಶೇಕ್ಸ್‌ಪಿಯರ್‌ನ ಸಾನೆಟ್ಟುಗಳನ್ನು ಕನ್ನಡದ ಮಡಿಲಿಗೆ ಹಾಕಿದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಆಯ್ದ ಕವನಗಳ ಸಂಕಲನ 'ಪಾಂಚಾಲಿ' ಕನ್ನಡ ಕಾವ್ಯಲೋಕದ ಹಲವು ಮಾಣಿಕ್ಯಗಳಲ್ಲಿ ಒಂದು. ನವೋದಯ ಹಾಗೂ ನವ್ಯಕಾವ್ಯ ಪರಂಪರೆಗಳ ಸತ್ವವನ್ನು ಹೀರಿಕೊಂಡೇ ಲಕ್ಷ್ಮೀನಾರಾಯಣ ಭಟ್ಟರ ಕಾವ್ಯಕ್ಕೆ ಕನ್ನಡ ಕಾವ್ಯ ಪರಂಪರೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. 'ಊರ ಹೊರಗೆ' ಕವಿತೆಯಲ್ಲಿ ಪ್ರಕೃತಿಗೆ ಸಂಬಂಧಿಸಿದ ಚಿಕ್ಕ ಚಿಕ್ಕ ವಿವರಗಳನ್ನೂ ಸುಂದರವಾಗಿ ಹೆಣೆಯುವ ಎನ್.ಎಸ್.ಎಲ್ ಅವರ ಕಾವ್ಯಪ್ರತಿಭೆ 'ಶಿವಮೊಗ್ಗೆಯಲ್ಲಿ ಮಳೆ' ಕವಿತೆಯಲ್ಲಿ ಮಹಾಪೂರಕ್ಕೆ ಎದುರಾದ ಜನಸಮುದಾಯವೊಂದರ ತೊಳಲಾಟವನ್ನು ವಿನೋದಪೂರ್ಣವಾಗಿ ಚಿತ್ರಿಸುತ್ತದೆ. 'ಪಾಂಚಾಲಿ' ಅವರ ಐದು ಕವನ ಸಂಕಲನಗಳನ್ನು ಒಳಗೊಂಡಿದೆ.

ಟಿಎಸ್ಐ

ಹೊಂಗನಸು

ಇಂಗ್ಲಿಷ್ ಸುನಾಮಿಯ ನಡುವೆ ಬುಡಕಚ್ಚಿ ನಿಂತಿದ್ದ ಕನ್ನಡದ ಕಲ್ಪವೃಕ್ಷದ ಬೇರುಗಳಿಗೆ ತಮ್ಮ 'ಹೊಂಗನಸು' ಕವನ ಸಂಕಲನದ ಮೂಲಕ ಕಸುವು ನೀಡಿದವರು ಬಿಎಂಶ್ರೀ. 'ಇಂಗ್ಲಿಷ್ ಗೀತೆಗಳು' ಸಂಕಲನದಲ್ಲಿ ಇಂಗ್ಲಿಷ್ ಸಾಹಿತ್ಯಕ್ಕೆ ಕನ್ನಡದ ಉಪನಯನ ಮಾಡಿದ ಬಿಎಂಶ್ರೀ ತಮ್ಮ 'ಹೊಂಗನಸು' ಕವನ ಸಂಕಲನದ ಮೂಲಕ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡದ ಶಕ್ತಿಯನ್ನು ಸಾದರಪಡಿಸಿದರು. ಆ ಮೂಲಕ ಕನ್ನಡಕ್ಕೆ ಹೊಸ ಜೀವ ತುಂಬಿದರು. ಕನ್ನಡ ನಾಡು, ನುಡಿ, ಪ್ರಕೃತಿಯ ಜೀವ ಮಿಡಿತದ ಸದ್ದು 'ಹೊಂಗನಸು' ಸಂಕಲನದ ಪ್ರತಿಯೊಂದು ಕವಿತೆಯಲ್ಲೂ ಕೇಳಿ ಬರುತ್ತದೆ. "ಕನ್ನಡದ ಶಕ್ತಿಯ ಅರಿವಾಗಬೇಕೆಂದರೆ ಬಿಎಂಶ್ರೀ ಅವರನ್ನು ಓದಬೇಕು" ಎಂದ ರಾಷ್ಟ್ರಕವಿ ಕುವೆಂಪು ಅವರ ಮಾತಿನಲ್ಲಿ ತಥ್ಯವಿಲ್ಲದೇ ಇಲ್ಲ.

ಟಿಎಸ್ಐ

ನಾವು ಹುಡುಗಿಯರೇ ಹೀಗೆ

ಕನ್ನಡದ ಕವಯತ್ರಿಯರಲ್ಲಿ ತಮ್ಮದೇ ಆದ ಭಾಷೆ ಮತ್ತು ಧೋರಣೆಗಳ ಮೂಲಕ ಹೊಸತನದ ಕಾವ್ಯವನ್ನು ನೀಡಿದವರು ಪ್ರತಿಭಾ ನಂದಕುಮಾರ್. 'ನಾವು ಹುಡುಗಿಯರೇ ಹೀಗೆ' ಎಂಬ ಮೊದಲ ಕವನ ಸಂಕಲನ ಪ್ರತಿಭಾ ಅವರು ಮುಂದೆ ದಶಕಗಳ ಕಾಲ ಬರೆದ ಕವಿತೆಗಳಿಗೆಲ್ಲ ಮುನ್ನುಡಿಯಂತಿದೆ. ಗಂಡು-ಹೆಣ್ಣಿನ ಸಂಬಂಧ ಮತ್ತು ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಾನ-ಮಾನದ ಕುರಿತೇ ಪ್ರತಿಭಾ ಹೆಚ್ಚು ಕವಿತೆ ಬರೆದಿದ್ದರೂ ಪ್ರತಿಭಟನೆಯನ್ನೇ ಕಾವ್ಯದ ದನಿಯಾಗಿಸಿಕೊಂಡೂ ಅದು ಕ್ಲೀಷೆಯಾಗದಂತೆ ಅಭಿವ್ಯಕ್ತಿಸಿದ್ದಾರೆ. ಆಧುನಿಕ ಹೆಣ್ಣೊಬ್ಬಳ ಸ್ವಾಭಿಮಾನ ಮತ್ತು ಪ್ರತಿರೋಧದ ದನಿಯಾಗಿ 'ನಾವು ಹುಡುಗಿಯರೇ ಹೀಗೆ' ವಿಶಿಷ್ಟ ಕಾವ್ಯ ಸಂಗ್ರಹ.

ಟಿಎಸ್ಐ

ಗಜಲ್ ಮತ್ತು ದ್ವಿಪದಿಗಳು: ಶಾಂತರಸ

ಭಾವತೀವ್ರತೆ ಮತ್ತು ಬದುಕಿನ ವ್ಯಾಖ್ಯಾನದ ಪಾಕದಂತಿರುವ ಗಜಲ್‌ಗಳನ್ನು ಮೊಟ್ಟಮೊದಲ ಬಾರಿಗೆ ಕನ್ನಡ ಭಾಷೆಗೆ ಒಗ್ಗಿಸಿದವರು ಶಾಂತರಸರು. ದಶಕಗಳ ಕಾಲ ಮೂಲ ಉರ್ದುವಿನ ಗಜಲುಗಳನ್ನು ಅಧ್ಯಯನ ಮಾಡಿದ ಅವರು, ಕನ್ನಡದ್ದೇ ಆದ ಗಜಲ್‌ಗಳನ್ನು ರಚಿಸುವ ಮೂಲಕ ಕನ್ನಡ ಗಜಲ್ ಪಿತಾಮಹನೆನಿಸಿಕೊಂಡವರು. ಕಥೆ, ಕಾವ್ಯ, ನಾಟಕ ಮುಂತಾದ ಪ್ರಕಾರಗಳಲ್ಲಿ ಕೂಡ ಕೃತಿಗಳನ್ನು ರಚಿಸಿದ್ದರೂ ಕನ್ನಡಕ್ಕೆ ಶಾಂತರಸರ ಅಮೂಲ್ಯ ಕೊಡುಗೆಯಾದ ಗಜಲ್‌ಗಳ ಈ ಸಂಕಲನ ಮನೆಯಲ್ಲಿದ್ದರೆ ಓದುವ ಮನಕ್ಕೆ ಇನ್ನಿಲ್ಲದ ಹಿತ.

ಟಿಎಸ್ಐ

ಗೌರೀಶ್ ಕಾಯ್ಕಿಣಿ ಕಾವ್ಯ

ಕನ್ನಡದ ಸಾಹಿತ್ಯ ಹಾಗೂ ಬದುಕಿನ ಮೇಲೆ ಅಗಾಧ ಪ್ರಭಾವ ಬೀರಿದ ಚಿಂತಕ ಗೌರೀಶ್ ಕಾಯ್ಕಿಣಿ ಭಾವುಕವಲ್ಲದ, ಎಳಸು ಕನಸುಗಾರಿಕೆಯಿಂದ ಹೊರತಾದ ಸಮತೋಲಿತ ಕಾವ್ಯ ರಚನೆಯಲ್ಲಿ ತೊಡಗಿದವರು. ಮನುಷ್ಯತ್ವದ ಅರಳುವಿಕೆಗೆ ಪೂರಕವಾಗಬಲ್ಲ ಪ್ರತಿಯೊಂದರ ಕುರಿತೂ ಗೌರೀಶ್ ಕಾಯ್ಕಿಣಿ ಅವರಿಗೆ ಆಸ್ಥೆ. ಅದು ಅವರ ಪ್ರತಿಯೊಂದು ಕವನದಲ್ಲೂ ಅನುರಣಿಸುತ್ತದೆ. ಮನುಷ್ಯತ್ವ, ನಿಸರ್ಗ- ಮನುಷ್ಯರ ನಡುವಿನ ದ್ವಂದ್ವ ವಿನ್ಯಾಸವೇ ಗೌರೀಶ್ ಕಾಯ್ಕಿಣಿ ಅವರ ಕವಿತೆಗಳ ಕೇಂದ್ರಬಿಂದು. ಮನುಷ್ಯಪರವಾದ ಸಕಲವನ್ನೂ ತಮ್ಮ ಸಾಹಿತ್ಯಕ್ಕೆ ಆಹಾರವನ್ನಾಗಿಸಿ ಕೊಳ್ಳುತ್ತಿದ್ದ ಅವರ ಕುತೂಹಲ ಹಾಗೂ ಜೀವನ ಪ್ರೀತಿಯೇ ಅವರ ಸಾಹಿತ್ಯದ ನಾಡಿ ಮಿಡಿತವೂ ಹೌದು.

ಟಿಎಸ್ಐ

ಮಂಕುತಿಮ್ಮನ ಕಗ್ಗ

ರಸಿಕತೆ, ವಿದ್ವತ್ತು ಎರಡೂ ಸಮಪ್ರಮಾಣದಲ್ಲಿ ಹದವಾಗಿ ಬೆರೆತ ಕನ್ನಡದ ದೈತ್ಯ ಪ್ರತಿಭೆ ಡಿ.ವಿ. ಗುಂಡಪ್ಪನವರದು. 'ಜೀವನ ಧರ್ಮಯೋಗ', 'ಜ್ಞಾಪಕ ಚಿತ್ರಶಾಲೆ' ರೀತಿಯ ಅಮೂಲ್ಯ ಸಾಹಿತ್ಯಿಕ ರತ್ನಗಳನ್ನು ಕನ್ನಡ ಸಾಹಿತ್ಯ ಖಜಾನೆಗೆ ಸೇರ್ಪಡೆ ಮಾಡಿದ ಡಿ.ವಿ.ಜಿ, ಭಾರತೀಯ ಪರಂಪರೆಯಲ್ಲಿ ಆಗಿಹೋದ ವೇದ-ಶಾಸ್ತ್ರಗಳು, ಮಹಾಕಾವ್ಯಗಳು ಹಾಗೂ ವೇದಾಂತಿಗಳು, ಋಷಿಗಳು, ಸಾಧು ಸಂತರು ಬಿತ್ತರಿಸಿದ ಧರ್ಮಸಾಕ್ಷಾತ್ಕಾರದ ಸತ್ವವನ್ನು ಹೀರಿ ಅದನ್ನು ಸರಳವಾಗಿ, ಸ್ಫುಟವಾಗಿ ಓದುಗರ ಮನಮುಟ್ಟುವ ರೀತಿಯಲ್ಲಿ 'ಮಂಕುತಿಮ್ಮನ ಕಗ್ಗ' ಹೆಣೆದಿದ್ದಾರೆ. ಮನುಷ್ಯ ನಾಗರಿಕತೆ ಯಾವತ್ತೂ ಸಾಧಿಸಬೇಕಾದ ಹಾಗೂ ಉಳಿಸಿಕೊಳ್ಳಬೇಕಾದ ಮೌಲ್ಯಗಳ ಸಂಗ್ರಹ ಸಾರದಂತಿರುವ ಹಾಗೂ ಆತ್ಮಸಾಕ್ಷಾತ್ಕಾರದ ಮೆಟ್ಟಿಲುಗಳಂತಿರುವ ಇಲ್ಲಿನ ಕಗ್ಗಗಳು ಗೆದ್ದಾಗ- ಬಿದ್ದಾಗ ಬದುಕಿನ ದಾರಿಗೆ ಸಂಗಾತಿಗಳಾಗಬಲ್ಲವು.

ಟಿಎಸ್‌ಐ

ಈವರೆಗಿನ ಹೇಳತೇನ ಕೇಳ

ಬೇಂದ್ರೆ ನಂತರ ಕನ್ನಡದಲ್ಲಿ ಜಾನಪದ ಭಾಷೆ-ನುಡಿಗಟ್ಟನ್ನು ತಮ್ಮ ಅಭಿವ್ಯಕ್ತಿ ದ್ರವ್ಯವಾಗಿಸಿಕೊಂಡ ಮತ್ತೊಬ್ಬ ಕವಿ ಡಾ.ಚಂದ್ರಶೇಖರ ಕಂಬಾರರ ಮೂರು ದಶಕಗಳ ಕವಿತೆಗಳನ್ನು ಒಳಗೊಂಡ ಸಮಗ್ರ ಸಂಕಲನ 'ಈವರೆಗಿನ ಹೇಳತೇನ ಕೇಳ'. ಅಪ್ಪಟ ಆಧುನಿಕ ಪ್ರಜ್ಞೆಯ ಕಂಬಾರರು ತಮ್ಮ ಆಧುನಿಕ ಗ್ರಹಿಕೆ ಮತ್ತು ಚಿಂತನೆಗಳನ್ನು ಅಭಿವ್ಯಕ್ತಿಸಲು ಆರಿಸಿಕೊಳ್ಳುವುದು ಮಾತ್ರ ಜಾನಪದ ಭಾಷೆ ಮತ್ತು ಪಾತ್ರಗಳನ್ನು ಎಂಬುದು ಅವರ ಕಾವ್ಯಕ್ಕೆ ಗೇಯತೆಯನ್ನು ತಂದುಕೊಟ್ಟಿದೆ. 'ಗಂಗಾಮಾಯಿ', 'ಮರೆತೇನೆಂದರ ಮರೆಯಲಿ ಹೆಂಗಾ', 'ನವಿಲೇ ನವಿಲೇ', 'ಆ ಮರ ಈ ಮರ', 'ಕರಿಹೈದ', 'ಮಾವೋತ್ಸೆ ತುಂಗನಿಗೆ', 'ಶಬ್ದದ ಲಜ್ಜೆಯ ನೋಡಾ...' ಮುಂತಾದ ಹಲವು ಕವಿತೆಗಳಲ್ಲಿ ನಾದ ಮತ್ತು ಕಂಬಾರರ ಜೀವನದರ್ಶನ ಗಮನಸೆಳೆಯುತ್ತದೆ. ಇಲ್ಲಿನ ಹಲವು ಕವಿತೆಗಳು ಲಾವಣಿಗಳೂ, ಹಾಡುಗಳೂ ಆಗಿರುವುದರಿಂದ ಓದು ಮತ್ತು ಹಾಡುವ ಖುಷಿ ಕೂಡ ಬೋನಸ್!

ಟಿಎಸ್‌ಐ

ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು

ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ಗೀತರೂಪಕಗಳನ್ನು ಬರೆದ ಮೊದಲಿಗರು ಪು.ತಿ. ನರಸಿಂಹಾಚಾರ್. ಅವರ ಗೇಯ ನಾಟಕಗಳಲ್ಲಿ 'ಗೋಕುಲ ನಿರ್ಗಮನ' ಮತ್ತು 'ಅಹಲ್ಯೆ' ಅದ್ಭುತ ಕೃತಿಗಳು. ಅಲ್ಲಿನ ಪದಗಳು ಒಂದಕ್ಕಿಂತ ಒಂದು ಸೊಗಸು. ಶಬ್ದದ ಸೊಬಗು, ಅರ್ಥದ ವಿಸ್ತಾರ ಮಾತ್ರವಲ್ಲ ಸಂಗೀತ-ಲಯ ಮಾಧುರ್ಯದ ದೃಷ್ಟಿಯಿಂದಲೂ ಈ ನಾಟಕಗಳನ್ನು ಓದಿಯೇ ಸವಿಯಬೇಕು. ಮಾತು-ಧಾತು ಎರಡರ ಹಿತಮಿತ ಮಿಶ್ರಣ ಈ ಗೇಯ ನಾಟಕಗಳ ಹೆಗ್ಗಳಿಕೆ. ಮನೋಭೂಮಿಕೆಯಲ್ಲಿ ಚಿಮ್ಮುತ್ತಿದ್ದ ನಾದವನ್ನು ಪದ ಎಸೆದು ಹಿಡಿಯುತ್ತಿದ್ದೆ ಎಂಬ ಪುತಿನ ಅವರ ಮಾತು, ಗೋಕುಲ ನಿರ್ಗಮನ ಓದಿದ ನಂತರ 'ಅಹುದಹುದು' ಎನಿಸದಿದ್ದರೆ ಕೇಳಿ.

ಟಿಎಸ್‌ಐ

ಕೈಲಾಸಂ ಕನ್ನಡ ನಾಟಕಗಳು

ಕನ್ನಡದಲ್ಲಿ ಹವ್ಯಾಸಿ ರಂಗಭೂಮಿಯ ಅಗತ್ಯಕ್ಕೆ ತಕ್ಕಂತೆ ಸಾಮಾಜಿಕ ನಾಟಕಗಳ ಪರಂಪರೆ ಆರಂಭಿಸಿದವರು ಪ್ರಹಸನ ಪ್ರಪಿತಾಮಹ ಟಿ.ಪಿ. ಕೈಲಾಸಂ. ಅವರ ನಾಟಕಗಳಲ್ಲಿ ರಂಗತಂತ್ರಗಳು, ರಂಗಸಾಧ್ಯತೆಗಳ ವಿಸ್ತಾರ ಇತಿಮಿತಿಯಲ್ಲಿದ್ದು ಸಂಭಾಷಣೆಯೇ ಪ್ರಧಾನವಾದರೂ ಅವರು ಸೃಷ್ಟಿಸಿದ ಪಾತ್ರಗಳು ಮಾತ್ರ ಅಜರಾಮರ. ಕಿಟ್ಟಿ, ಅಹೋಬ್ಲು, ಸಾತು-ಪಾತು, ಮಾಧೂ... ಇತ್ಯಾದಿ ಪಾತ್ರಗಳು ಇಂದಿಗೂ ಮಾನವ ಸ್ವಭಾವದ ಒಂದೊಂದು ಶಿಲ್ಪಗಳಾಗಿ ನಿಲ್ಲುತ್ತವೆ. ಇಂಗ್ಲಿಷ್ ಶಿಕ್ಷಣದ ಹೊಸಗಾಳಿ ಬೀಸುತ್ತಿದ್ದ ಸಂದರ್ಭದಲ್ಲಿ 'ಕನ್ನಡಾಂಗ್ಲೋ' ಭಾಷೆಯನ್ನು ತಮ್ಮದೇ ಶೈಲಿಯಲ್ಲಿ ವಿಡಂಬನಾತ್ಮಕವಾಗಿ ಬಳಸಿದವರು ಕೈಲಾಸಂ. ಅವರ 'ಟೊಳ್ಳು-ಗಟ್ಟಿ', 'ಪೋಲಿಕಿಟ್ಟಿ', 'ಅಮ್ಮಾವ್ರ ಗಂಡ', 'ತಾಳಿಕಟ್ಟೋಕ್‌ಕೂಲಿನೇ', 'ಹೋಂರೂಲು...' ಇತ್ಯಾದಿ ನಾಟಕಗಳಲ್ಲಿ ಸಾಮಾಜಿಕ ಅನಿಷ್ಟ, ಜಾತಿಪದ್ಧತಿ, ಶಿಕ್ಷಣ, ಸ್ತ್ರೀ ಸಮಾನತೆ ಮುಂತಾದ ಸಮಸ್ಯೆಗಳ ಚರ್ಚೆಯಾಗುತ್ತದೆ. ಪಾತ್ರಗಳು ಮತ್ತು ರಂಗ ಎರಡು ದೃಷ್ಟಿಯಿಂದಲೂ ಜನಸಾಮಾನ್ಯರಿಗೆ ಹತ್ತಿರವಾದ ನಾಟಕಗಳನ್ನು ಕೊಟ್ಟ ಕೈಲಾಸಂ ರಂಗಭೂಮಿಯನ್ನು ಅರಮನೆಯಿಂದ ನೆರೆಮನೆಗೆ ತಂದವರು. ಅಂದ ಹಾಗೆ ಒಂದೆರಡು ಪುಟ ಓದಿ 'ಕಲಸುಮೇಲೋಗರ ಭಾಷೆ' ತುಸು ಕಷ್ಟ ಎಂದು ಪುಸ್ತಕ ಬದಿಗಿಡಬೇಡಿ. ಓದುತ್ತಾ ಹೋದಂತೆ ಆ ಭಾಷಾ ಶೈಲಿಯೇ ಆಪ್ಯಾಯಮಾನ ವಾಗುವುದು ಖಂಡಿತ.

ಟಿಎಸ್‌ಐ

ಶೋಕಚಕ್ರ

ಶ್ರೀರಂಗರ ನಾಟಕಗಳಲ್ಲಿ ಸಂಭಾಷಣೆಗಿಂತ 'ಬ್ರ್ಯಾಕೆಟ್ಸ್'ಗಳೇ ಹೆಚ್ಚು (ನಾಟಕ ಆಡ ಬಯಸುವವರಿಗೆ ಸಲಹೆ ಸೂಚನೆಗಳು) ಎಂಬ ಸಾಮಾನ್ಯ ದೂರು ಇದೆ. ಹವ್ಯಾಸಿ ರಂಗಭೂಮಿ ಬಲಗೊಳ್ಳುತ್ತಿದ್ದ ಕಾಲದಲ್ಲಿ ಒಂದು ರಂಗಕೃತಿಯಾಗಿ ನಾಟಕ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರಬೇಕೆನ್ನುವ ಉದ್ದೇಶದಿಂದ ಹಾಗೆ ಸುದೀರ್ಘ ವಿವರಣೆ ನೀಡುತ್ತಿದ್ದರು ಶ್ರೀರಂಗರು. ಹೀಗಾಗಿ ಅವರ ನಾಟಕ ಕೃತಿಗಳ ಓದು ಕೇವಲ ಸಾಹಿತ್ಯದ ದೃಷ್ಟಿಯಿಂದಲ್ಲದೆ ರಂಗಸಾಧ್ಯತೆಯ ದೃಷ್ಟಿಯಿಂದಲೂ ಮಹತ್ವದ್ದು. ಏಕಾಂಕಗಳೂ ಸೇರಿದಂತೆ ನೂರಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ ಶ್ರೀರಂಗರು ಪ್ರತಿ ನಾಟಕದಲ್ಲೂ ಭಾರತೀಯ ಸಾಂಸ್ಕೃತಿಕ ಮೌಲ್ಯ ಮತ್ತು ಸತ್ವಗಳನ್ನು ಹಲವು ಆಯಾಮಗಳಲ್ಲಿ ವಿಶ್ಲೇಷಿಸುತ್ತಾರೆ. ಶೋಕಚಕ್ರ ಅವರ ಪ್ರಾತಿನಿಧಿಕ ಕೃತಿ ಎನ್ನಬಹುದು. ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಹೊಸ್ತಿಲಲ್ಲೇ ರಚನೆಯಾದ ಈ ಕೃತಿಯಲ್ಲಿ ಗಾಂಧಿವಾದದ ಸೋಲು, ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣವನ್ನು ವಿಷಾದದಿಂದ ಚಿತ್ರಿಸಲಾಗಿದೆ.

ಟಿಎಸ್‌ಐ

ಕಾಕನಕೋಟೆ

ಸರಳತೆ, ಮಾನವೀಯ ಮೌಲ್ಯಗಳು, ಜೀವನಪ್ರೀತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ರವರ ಎಲ್ಲಾ ಕೃತಿಗಳಲ್ಲಿ ಹರಿಯುವ ಮುಖ್ಯದ್ರವ್ಯ. ನಾಟಕದ ಕಥಾವಸ್ತು ಕಾಡುಕುರುಬರ ಬೂಡೊಂದು ಪಾಳೆಗಾರಿಕೆ ಆಡಳಿತದಿಂದ ರಾಜಪ್ರಭುತ್ವದ ಅಡಿ ಸೇರಿಹೋಗುವ ಸಂಧಿಕಾಲದ್ದು. ಕಾಡುಕುರುಬರ ಉಪಸಂಸ್ಕೃತಿಯ ಚಿತ್ರಣ ಸೊಗಸಾಗಿ ಒಡಮೂಡಿದೆ. ಪ್ರಧಾನ ಸಂಸ್ಕೃತಿಯ ಪ್ರವಾಹದಲ್ಲಿ ಉಪಸಂಸ್ಕೃತಿ ಲೀನವಾಗುವ ಬಗೆಯನ್ನು ನಾಟಕದಲ್ಲಿ ತುಂಬಾ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ. ಮೈಸೂರು ಅರಸು ರಣಧೀರ ಕಂಠೀರವನ ಪಾತ್ರ ಕೂಡಾ ಬರುವುದರಿಂದ ನಾಟಕಕ್ಕೆ ಐತಿಹಾಸಿಕ ಚೌಕಟ್ಟು ಲಭ್ಯವಾಗಿದೆ. ಕಾಡುಕುರುಬರನ್ನು ಕಾಡಿನಿಂದ 'ಹಾಡಿ'ಗೆ ಕರೆತಂದವ ಅವರ ಪೌರಾಣಿಕ ಮೂಲಪುರುಷ ಕರಿಹೈದ; ಅವರನ್ನು ಹಾಡಿಯಿಂದ ಊರಿಗೆ ತಂದವ ಕಾಕ (ಕಾಚ); ಊರಿನಿಂದ ನಗರಕ್ಕೆ ಕರೆತಂದವ ರಣಧೀರ ಕಂಠೀರವ. ವಿಕಾಸದ ಸಂಭ್ರಮದ ಜೊತೆಗೆ ಅಸ್ತಿತ್ವ ಕಳೆದುಕೊಳ್ಳುವ ದುರಂತವೂ ಮಿಳಿತವಾಗಿದೆ. ಪಾಳೆಗಾರ ಹೆಗ್ಗಡೆಯ ಪುತ್ರ ಚಿಕ್ಕಯ್ಯ ಮತ್ತು ಕುರುಬರ ಮೊಲ್ಲೆ ನಡುವಿನ ನವಿರು ಪ್ರೇಮಪ್ರಕರಣ ಮದುವೆಯಲ್ಲಿ ಪರ್ಯಾವಸಾನವಾಗುವ ಮಧುರ ಎಳೆಯೂ ನಾಟಕದ ಸವಿ ಹೆಚ್ಚಿಸುತ್ತದೆ. ಕಾಕನಕೋಟೆ ಖಂಡಿತ ನಿಮ್ಮಲ್ಲಿ ವಿವಿಧ ಆಯಾಮದ ಚಿಂತನೆಗೆ ಹಚ್ಚುತ್ತದೆ.

ಟಿಎಸ್‌ಐ

ಸತ್ತವರ ನೆರಳು

ಧಾರ್ಮಿಕ ಮಠದ ಡಾಂಭಿಕತೆ, ಮಠಾಧೀಶರ ಪಟ್ಟಭದ್ರ ಹಿತಾಸಕ್ತಿ, ರಾಜಕೀಯ ಇತ್ಯಾದಿಗಳನ್ನು ದಿಟ್ಟವಾಗಿ ಟೀಕಿಸುವ ಈ ಕೃತಿ ಭಾರತೀಯ ನಾಟಕ ಸಾಹಿತ್ಯದ ಮುಖ್ಯ ಕೃತಿಗಳಲ್ಲೊಂದು. ಜಡ್ಡುಗಟ್ಟಿದ ಮಠ-ಮಾನ್ಯ ವ್ಯವಸ್ಥೆಯನ್ನು ಈ ಮಟ್ಟಿಗೆ ವಿಡಂಬಿಸುವ ಕೃತಿ ಬೇರೊಂದಿಲ್ಲವೇನೋ. ಜಿ.ಬಿ. ಜೋಶಿಯವರ ಕೃತಿ ಬಿ.ವಿ. ಕಾರಂತ ನಿರ್ದೇಶನದಲ್ಲಿ ಪುರಂದರ ದಾಸರ ಕೀರ್ತನೆಗಳ ಸಹಿತ ರಂಗದ ಮೇಲೆ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿಬಂದುದು ರಂಗ ಭೂಮಿ ಇತಿಹಾಸದ ಮರೆಯಲಾರದ ಘಟನೆ.

ಟಿಎಸ್‌ಐ

ತುಘಲಕ್

ಭಾರತೀಯ ರಂಗಭೂಮಿಯನ್ನು 'ತುಘಲಕ್ ನಾಟಕದ ಮುನ್ನ ಹಾಗೂ ತುಘಲಕ್ ನಂತರ' ಎಂದು ವರ್ಗೀಕರಿಸುವ ವಿಮರ್ಶಕರ ಬಗೆಯಿಂದಲೇ ತುಘಲಕ್ ನಾಟಕದ ಮಹತ್ವ ಅರಿಯಬಹುದು. ಆಧುನಿಕ ನಾಟಕ ಸಾಹಿತ್ಯದ ಜಾಡು ಬದಲಿಸಿದ ಮಹತ್ವದ ಕೃತಿಗಳಲ್ಲಿ ಗಿರೀಶ ಕಾರ್ನಾಡರ ತುಘಲಕ್ ಮೊದಲ ಸಾಲಿನದು. ಈ ನಾಟಕದ ಕಥಾವಸ್ತು ಐತಿಹಾಸಿಕವಾದರೂ ಅದರ ಉದ್ದೇಶ ಇತಿಹಾಸದ ಚಿತ್ರಣವಲ್ಲ. 'ದೈವತ್ವದ ಕನಸು ಕಾಣುವ ಮನುಷ್ಯ ಪಶುತ್ವಕ್ಕೆ ಅಂಟಿಕೊಂಡಿರುವುದೇ ಇಲ್ಲಿಯ ಮೂಲ ಸಮಸ್ಯೆ. ಈ ಸಮಸ್ಯೆ ಹುಟ್ಟಿಸುವ ಹಲವು ಮಾನವೀಯ ಅನರ್ಥಗಳಿಗೆ ತುಘಲಕ್ ಪ್ರಳಯಕೇಂದ್ರವಾಗಿದ್ದಾನೆ. ರಾಜಕಾರಣವನ್ನು ದೇವರ ಕಾರ್ಯವೆಂದು ಭ್ರಮಿಸಿದ ಧರ್ಮಗುರುಗಳು, ಕೊಲೆ ಮಾಡಲು ಪ್ರಾರ್ಥನೆಯ ಹೊತ್ತನ್ನು ಆಯ್ಕೆ ಮಾಡಿಕೊಳ್ಳುವ ಸರದಾರರು, ಇಂಥ ವ್ಯಕ್ತಿಗಳ ದುರ್ದೈವಕ್ಕೆ ಸೂತ್ರಧಾರನಾಗುವ ಮುಹಮ್ಮದ್ -ಹೀಗೆ ನಾಟಕದ ಮಾನುಷ ಪ್ರಪಂಚ ಜಟಿಲವಾಗಿದೆ. ಕಾವ್ಯ, ಧರ್ಮ, ರಾಜಕಾರಣ ಮೊದಲಾದ ತನ್ನ ಸಂಸ್ಕಾರಗಳಿಗೆ ತಾನೇ ಪರಕೀಯನಾಗುವ ಸುಲ್ತಾನ 'ಆತ್ಮಹತ್ಯೆ' ಮಾಡಿಕೊಂಡೂ ಜೀವಂತವಾಗಿ ಉಳಿಯುತ್ತಾನೆ. ಇದು ಇಲ್ಲಿಯ ದುರಂತ'. ಮನುಷ್ಯನ ದ್ವಂದ್ವ-ವೈರುಧ್ಯಗಳನ್ನು ಹಲವು ಆಯಾಮಗಳಲ್ಲಿ ಕಟ್ಟಿಕೊಡುವ ಈ ಕೃತಿ ಹಲವು ಬಾರಿಯ ಓದಿಗೆ ಅರ್ಹ.

ಟಿಎಸ್‌ಐ

ಸಂಸ ನಾಟಕಗಳು

ಸಾಹಿತ್ಯ ಲೋಕದಲ್ಲಿ ಸಂಸರ ನಾಟಕಗಳಿಗಿಂತ ಅವರ ವಿಕ್ಷಿಪ್ತ ಮನಸ್ಥಿತಿಯ ಚರ್ಚೆ ನಡೆದುದೇ ಹೆಚ್ಚು. ಸಂಸರ ಎಲ್ಲಾ ಕೃತಿಗಳೂ ಲಭ್ಯವಿಲ್ಲ, ಕೆಲವನ್ನು ಅವರೇ ನಾಶಪಡಿಸಿದರಂತೆ. ಲಭ್ಯವಿರುವ ಸಂಸರ ಆರೂ ನಾಟಕಗಳ (ಸುಗುಣ ಗಂಭೀರ, ಬಿರುದಂತೆಂಬರ ಗಂಡ, ಬೆಟ್ಟದ ಅರಸು, ವಿಗಡ ವಿಕ್ರಮರಾಯ, ವಿಜಯನಾರಸಿಂಹ ಮತ್ತು ಮಂತ್ರಶಕ್ತಿ) ಕಥಾವಸ್ತು ಮೈಸೂರು ಅರಸು ಮನೆತನದ ಏಳು-ಬೀಳು. ಅವುಗಳಲ್ಲಿ ನಾಲ್ಕು ನಾಟಕಗಳ ಕೇಂದ್ರ ಪಾತ್ರ ರಣಧೀರ ಕಂಠೀರವ. ಕಥಾವಸ್ತು ಐತಿಹಾಸಿಕವಾದರೂ ನಾಟಕ ಸಮಕಾಲೀನ ಜೀವನವನ್ನೂ ಚಿತ್ರಿಸುತ್ತದೆ. ಅಧಿಕಾರಕ್ಕೆ ನಡೆಯುವ ಪೈಪೋಟಿ, ಕುತಂತ್ರಗಳು, ಒಳಜಗಳ, ಗಂಡು-ಹೆಣ್ಣಿನ ಸಂಬಂಧ, ಶತ್ರುವನ್ನು ಮುಗಿಸಲು ಹೆಣ್ಣನ್ನು ಅಸ್ತ್ರದಂತೆ ಬಳಸಿಕೊಳ್ಳುವುದು ಇತ್ಯಾದಿ ತಂತ್ರಗಳ ಚಿತ್ರಣ ಅದ್ಭುತವಾಗಿದೆ. ಪಾತ್ರ ಕಡೆಯುವುದರಲ್ಲಂತೂ ಸಂಸರಿಗೆ ಸಂಸರೇ ಸಾಟಿ. ವೀರರು-ದುಷ್ಟರುಗಳ ಪಾತ್ರ ಕಡೆಯುವಿಕೆಯಲ್ಲಿ ಪಳಗಿದ ಶಿಲ್ಪಿಯ ಕೈವಾಡ ಕಾಣಬಹುದು. ಪಾತ್ರಗಳು ಇತಿಹಾಸಕ್ಕೆ ಸೇರಿದವಾದರೂ ಸಮಾಜದ ಪ್ರತಿಯೊಬ್ಬರೂ ಸಂಸರ ಒಂದೊಂದು ಪಾತ್ರಗಳ ಜೊತೆ ಗುರುತಿಸಿಕೊಳ್ಳಬಹುದು. ಹಾಗೇ ಸಂಸರ ಚುರುಕು ಸಂಭಾಷಣೆ ಕೂಡ ವಿಶಿಷ್ಟವಾದದ್ದು. ಹೀಗಾಗಿಯೇ ಸಮಕಾಲೀನ ಇತರ ನಾಟಕಕಾರರಿಗಿಂತ ಅವರು ಗಮನಾರ್ಹವಾಗುತ್ತಾರೆ. ಹಾಗೇ ಇನ್ನೊಂದು ಶತಮಾನದ ನಂತರವೂ ಸಂಸರ ನಾಟಕಗಳು ಈಗನಷ್ಟೇ ಪ್ರಸ್ತುತವಾಗುತ್ತವೆ ಎಂಬ ವಿಮರ್ಶಕರ ನುಡಿ ಅತಿಶಯೋಕ್ತಿಯದಲ್ಲ.

ಟಿಎಸ್‌ಐ

ಮಹಾಚೈತ್ರ

ತುಂಬಾ ವಿವಾದಕ್ಕೆ ಈಡಾದ ಮಹಾಚೈತ್ರ ನಾಟಕ ಕೂಡಾ 12ನೇ ಶತಮಾನದ ವಸ್ತು ಕುರಿತದ್ದೇ. ಆದರೆ ಇಲ್ಲಿ 'ನಗೆಯ ಮಾರಿತಂದೆ, ಬಹುರೂಪಿ ಚೌಡಯ್ಯ, ಕಲಕೇತಯ್ಯ ಇವರ ಆಟದ ಚೌಕಟ್ಟು ನಾಟಕಕ್ಕೆ ಆಕರ್ಷಕ ರೂಪ ನೀಡುತ್ತದೆ. ವ್ಯವಸ್ಥೆಯ ವಿರುದ್ಧದ ಕೆಳವರ್ಗದವರ ಬಂಡಾಯ, ಚಳವಳಿ ಹಲವು ಬಗೆಯಲ್ಲಿ ವ್ಯಕ್ತವಾಗುತ್ತದೆ. ವ್ಯವಸ್ಥೆಯ ಕ್ರೌರ್ಯ ಹಲವು ಮುಖಗಳಲ್ಲಿ ತೆರೆದುಕೊಳ್ಳುತ್ತದೆ. ದುಡಿಮೆಯ ಶೋಷಣೆ, ಸಾಮಾಜಿಕ ಸ್ಥಾನ-ಮಾನ, ಜಾತಿ-ವೃತ್ತಿಗಳ ನೆಪದಲ್ಲಿ ನಡೆಯುವ ದಮನ, ಮಾನವೀಯ ಮೌಲ್ಯಗಳ ಪತನ ಮುಂತಾದವು ಆ ಕಾಲದ ಅನುಭವಗಳಿಗೆ ಮಾತ್ರವಲ್ಲದೆ ಇತಿಹಾಸದ ಕಾಲಘಟ್ಟ ಮೀರಿ ಹಲವು ಕಾಲಗಳ ಅನುಭವಗಳಿಗೂ ಸ್ಪಂದಿಸುತ್ತಾ ನಿಲ್ಲುತ್ತವೆ'.

ಆ ಕಾಲದ ಇತಿಹಾಸದ ಮರುವ್ಯಾಖ್ಯಾನವಾದ ಈ ನಾಟಕ ದೀರ್ಘಕಾಲ ಚಿಂತನೆಗೆ ಹಚ್ಚುತ್ತದೆ.

ಟಿಎಸ್‌ಐ

ಸಿರಿಸಂಪಿಗೆ

ಪಾರಂಪರಿಕ ಜನಪದ ರೂಪಕಗಳನ್ನು ಆಧುನಿಕ ರಂಗಭೂಮಿಗೆ ಅಳವಡಿಸುವ ದಿಕ್ಕಿನಲ್ಲಿ ಬಂದ ಮಹತ್ವದ ನಾಟಕ ಸಿರಿಸಂಪಿಗೆ. ಗ್ರೀಕ್ ವಾಙ್ಮಯದ ನಾರ್ಸಿಸಸ್ (ತನ್ನ ರೂಪವನ್ನೇ ಮೋಹಿಸುವ) ಕಥೆಯನ್ನು ಹೋಲುವ, ನಮ್ಮ ನೆಲದ ಜನಪದ ಕಥೆಯೊಂದರ ಚೌಕಟ್ಟಿನಲ್ಲಿ ಮನುಷ್ಯ ಜೀವನದ ರಹಸ್ಯಮಯ ಸತ್ಯವನ್ನು ಹಲವು ಆಯಾಮಗಳಲ್ಲಿ ವಿಶ್ಲೇಷಿಸುತ್ತಾರೆ ಚಂದ್ರಶೇಖರ ಕಂಬಾರ. 'ತನ್ನನ್ನೇ ತಾನು ಸೀಳಿಕೊಳ್ಳುವ ರಾಜನ ಸತಿ ಸಿರಿಸಂಪಿಗೆ 'ಅರ್ಧವಿಧವೆ'ಯಾಗುವ ಸಂದರ್ಭ ಬಹುಅರ್ಥ ಹೊರಡಿಸುತ್ತದೆ. ರಾಜ ಶಿವನಾಗದೇವ, ಅವಳಿ ಮತ್ತು ಜವಳಿ ಕಂಡು ಕೊಳ್ಳುವ ಸತ್ಯವೇ ಆ ಮೂವರ ಅವನತಿಗೆ ಕಾರಣವಾಗುವುದು; ಕನ್ನಡಿ, ನೀರು ಮತ್ತು ಕಾಳಿಂಗ ಸತ್ಯದ ಮಾಧ್ಯಮಗಳಾಗುವುದು ಇಲ್ಲಿನ ವಿಶಿಷ್ಟತೆ. ಕಂಬಾರರ ವಿಶಿಷ್ಟ ಭಾಷೆ ಮತ್ತು ಚಂದದ ಪದ್ಯಗಳೂ ಮತ್ತೆ ಮತ್ತೆ ಮೆಲುಕು ಹಾಕಿಸಿಕೊಳ್ಳುತ್ತವೆ.

ಟಿಎಸ್‌ಐ

ಸಂಕ್ರಾಂತಿ

12ನೇ ಶತಮಾನದ ಕಲ್ಯಾಣ ಕ್ರಾಂತಿ ಸಾಹಿತ್ಯ ಲೋಕದಲ್ಲಿ ಬಹುಚರ್ಚಿತ ವಸ್ತು. ಪಿ. ಲಂಕೇಶರ ಸಂಕ್ರ್ರಾಂತಿ ಅದೇ ಕಥಾವಸ್ತುವಿನ ಚೌಕಟ್ಟು ಹೊಂದಿದ್ದರೂ ಅದರ ಐತಿಹಾಸಿಕ ಹಿನ್ನೆಲೆ ಕೇವಲ ನೆಪಮಾತ್ರ. ವರ್ಣಸಂಕರದ ಘೋರ ಆಪಾದನೆಗೆ ಬಲಿಯಾದ ಹರಳಯ್ಯ, ಮಧುವರಸರ ಪ್ರಸಂಗವನ್ನು ನಾಟಕ ಹಲವು ಆಯಾಮಗಳಲ್ಲಿ ಚರ್ಚಿಸುತ್ತದೆ. 'ಬಸವಣ್ಣ-ಬಿಜ್ಜಳರ ಸಂಘರ್ಷವು ಸ್ನೇಹ-ಕರ್ತವ್ಯ ಮತ್ತು ಧರ್ಮ-ರಾಜಕಾರಣದ ಹೊಯ್ದಾಟವೂ ಆಗುತ್ತದೆ. ಐತಿಹ್ಯ-ಪುರಾಣಗಳಾಚೆಗಿನ ಅಗೋಚರ ಮುಖವನ್ನು ನಾಟಕ ಒದಗಿಸುತ್ತದೆ'. ಹೊಲೆಯರ ಹಟ್ಟಿಯ ಉಜ್ಜ ಮತ್ತು ಇತರ ವ್ಯಕ್ತಿಗಳ ಮಾತಿನಿಂದ ಆರಂಭವಾಗುವ ವಿಡಂಬನಾತ್ಮಕ ದೃಶ್ಯ ಶರಣ ಚಳವಳಿಯ ಸೋಲಿನ ಹೊಸ ಒಳನೋಟ ಬೀರುತ್ತದೆ.

ಟಿಎಸ್‌ಐ

ಜ್ಞಾಪಕ ಚಿತ್ರಶಾಲೆ

ಮೈಸೂರು ಸಂಸ್ಥಾನದ ಧೀಮಂತ ವ್ಯಕ್ತಿಗಳ, ಜನಸಾಮಾನ್ಯರ ವ್ಯಕ್ತಿಚಿತ್ರಣ ಗುಚ್ಛ 'ಜ್ಞಾಪಕ ಚಿತ್ರಶಾಲೆ'. ತಮ್ಮ ನೆನಪಿನಾಳದಿಂದ ಎಂದೂ ಮರೆಯಲಾಗದ ಮಾನವೀಯ ಮುಖಗಳು, ಸಂಗತಿಗಳನ್ನು ತುಂಬಾ ಸರಳ, ಸುಂದರ ಶೈಲಿಯಲ್ಲಿ ಕಟ್ಟಿಕೊಡುತ್ತಾರೆ ಡಿವಿಜಿ. ಅಂದಿನ ದಿವಾನ್ ಸರ್ ಕೆ.ಪಿ. ಪುಟ್ಟಣ್ಣ ಚೆಟ್ಟಿ ಅವರ ವಿಚಾರ ಹೇಳುವಷ್ಟೇ ಉತ್ಸಾಹದಲ್ಲಿ ಬೆಲ್ಲ ಮಾರುವ ಒಬ್ಬ ಶೆಟ್ಟಿಯ ವಿಚಾರವನ್ನೂ ಹೇಳುವ ಬಗೆ ಇಲ್ಲಿನ ವಿಶೇಷ. ಹೀಗಾಗಿ ಇದು ಅಂದಿನ ಮೈಸೂರು ಪ್ರಾಂತದ ಸಾಮಾಜಿಕ ಇತಿಹಾಸವಾಗಿ ಅಷ್ಟೇ ಅಲ್ಲ, ಸಮಾಜದಲ್ಲಿ ಮಾನವೀಯ ಮೌಲ್ಯ ಹಾಸುಹೊಕ್ಕಾಗಿದ್ದ ಬಗೆ ಅರಿಯುವ ದೃಷ್ಟಿಯಿಂದಲೂ ಮಹತ್ವದ ಕೃತಿ.

ಟಿಎಸ್‌ಐ

ಮೂರು ತಲೆಮಾರು

'ಮೂರು ತಲೆಮಾರು' ಕೃತಿಯ ಮೂಲಕ ತಮ್ಮದೇ ಕುಟುಂಬದ ಮೂವರು ದಿಗ್ಗಜರ ಜೀವನ ಚರಿತ್ರೆಯನ್ನು ಸಾದರ ಪಡಿಸುವ ಪ್ರಯತ್ನ ತ.ಸು. ಶಾಮರಾಯರದ್ದು. ಅವರ ಮಾತುಗಳಲ್ಲಿಯೇ ಹೇಳುವುದಾದರೆ, ಇದು ಕಾದಂಬರಿಯಲ್ಲ, ಸ್ವಕಪೋಲ ಕಲ್ಪಿತವಾದುದೇನೂ ಅಲ್ಲ, ಯಾವ ಊಹಾಪೋಹಗಳಿಗೂ ಎಡೆ ಮಾಡಿಕೊಟ್ಟಿಲ್ಲ. ಇದೊಂದು ಕಾದಂಬರಿಯಂತೆ ತೋರಬಹುದಾದ ಸತ್ಯಕಥೆ. ಶಾಮರಾಯರ ತಾತ ವೆಂಕಣ್ಣಯ್ಯ, ತಂದೆ ದೊಡ್ಡ ಸುಬ್ಬಣ್ಣ ಹಾಗೂ ಸಹೋದರ ಪ್ರೊ.ಟಿ.ಎಸ್. ವೆಂಕಣ್ಣಯ್ಯ ಎಲ್ಲರೂ ಈ ಕೃತಿಯ ಮೂಲಕ ಓದುಗರೊಂದಿಗೆ ಒಡನಾಡುತ್ತಾರೆ. ಮೂರು ತಲೆಮಾರುಗಳ ಜೀವನಶೈಲಿ, ಮೌಲ್ಯ ವ್ಯವಸ್ಥೆಗಳನ್ನು ಚಿತ್ರಿಸುವ ಈ ಕೃತಿಯ ಒಂದು ಬಗೆಯ ಸಮಾಜಶಾಸ್ತ್ರೀಯ ಅಧ್ಯಯನವೂ ಆಗಬಲ್ಲ ಸಾಧ್ಯತೆಯನ್ನು ಹೊಂದಿದೆ.

ಟಿಎಸ್‌ಐ

ಮರೆಯಲಾದೀತೆ?

ಬೆಳಗೆರೆ ಕೃಷ್ಣಶಾಸ್ತ್ರಿಗಳ ನೆನಪಿನ ಪಲಕುಗಳ ಮೇಲೆ ನೆಲೆನಿಂತ ಅದ್ಭುತ ವ್ಯಕ್ತಿತ್ವಗಳ ಚಿತ್ರಣ. ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಪಸರಿಸಿದ್ದ ತಮ್ಮ ಕಂಬಳಿ ಕಾರ್ಖಾನೆ, ಜಮೀನು, ಮನೆ ಎಲ್ಲವನ್ನೂ ಮಹಾತ್ಮಾ ಗಾಂಧಿ ಹೆಸರಿಗೆ ಬರೆದ ಸೇವಾಶ್ರಮದ ಲಿಂಗಣ್ಣ ಇರಬಹುದು ಅಥವಾ ಎಂಟು ವರ್ಷಕ್ಕೇ ಮದುವೆಯಾಗಿ ಒಂಭತ್ತೇ ವರ್ಷಕ್ಕೆ ವಿಧವೆ ಪಟ್ಟ ಏರಿದ ಗಿರಿಯಜ್ಜಿ ಇಲ್ಲವೇ ಭಾರತದ ಐನ್‌ಸ್ಟೈನ್ ಎಂದು ಊರವರಿಂದ ಕರೆಯಿಸಿಕೊಂಡ ಕೃಷ್ಣಶಾಸ್ತ್ರಿಗಳ ತಂದೆ ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳೇ ಆಗಿರಬಹುದು ಒಟ್ಟಾರೆ ಅಪರೂಪದ ವ್ಯಕ್ತಿಗಳ ಚಿತ್ರಣ ಕಟ್ಟಿಕೊಡುವುದಷ್ಟೇ ಅಲ್ಲದೆ ಒಂದು ಕಾಲಘಟ್ಟದ ಬದುಕಿನ ಮೌಲ್ಯಗಳನ್ನೂ ಮುಂದಿಡುವ ಕೃತಿ. ಕೃಷ್ಣ ಶಾಸ್ತ್ರಿಗಳ ಮಾತನ್ನು ಕ್ಯಾಸೆಟ್‌ನಲ್ಲಿ ರೆಕಾರ್ಡ್ ಮಾಡಿ ಅದಕ್ಕೆ ಅಕ್ಷರದ ರೂಪ ಕೊಟ್ಟ ನ. ರವಿಕುಮಾರ ಅವರ ಭಾಷೆ ಎಲ್ಲೂ ಕೃತಕವೆನಿಸುವುದಿಲ್ಲ. ಯಾವುದೇ ಆಡಂಬರವಿಲ್ಲದೆ ಸರಳವಾಗಿ ಒಂದೊಂದು ವ್ಯಕ್ತಿಯ ಚಿತ್ರಣವನ್ನು ಅನಾವರಣಗೊಳಿಸುವ ಈ ಕೃತಿ ಆಧುನಿಕತೆಯ ಜಂಜಾಟಕ್ಕೆ ಸಿಕ್ಕು ಮನುಷತ್ವವನ್ನೇ ಕಳೆದುಕೊಳ್ಳುವ ಹಂತದಲ್ಲಿರುವ ಪ್ರಸ್ತುತ ಪರಿಸ್ಥಿತಿಗೆ ಹೆಚ್ಚು ಸಕಾಲಿಕ ಓದನ್ನು ಒದಗಿಸಬಲ್ಲದು.

ಟಿಎ್‌ಐ

ದೇವರು

ನನಗೆ ಪ್ರಚಾರ ಮಾಡುವ ಚಪಲವೂ ಇಲ್ಲ, ನನ್ನ ನಿಲುವನ್ನು ಬಚ್ಚಿಡುವ ಹಿಂಜರಿಕೆಯೂ ಇಲ್ಲ ಎನ್ನುವ ಕಟ್ಟಾ ನಿರೀಶ್ವರವಾದಿ ಎ.ಎನ್. ಮೂರ್ತಿರಾವ್ ಅವರ 'ದೇವರು' ಕೃತಿ ಕನ್ನಡದ ಮಹತ್ವದ ವೈಚಾರಿಕ ಸಾಹಿತ್ಯ ಕೃತಿಗಳಲ್ಲೊಂದು. ಎಲ್ಲಾ ಮತಗಳು, 'ದೇವರುಗಳ' ಕುರಿತ ಅತ್ಯಂತ ತಾರ್ಕಿಕ ಮತ್ತು ವಿಚಾರಪೂರ್ಣ ಪರಿಶೀಲನೆ ಇಲ್ಲಿ ಕಂಡುಬರುತ್ತದೆಯೇ ಹೊರತು ಹೀಯಾಳಿಕೆ ಖಂಡಿತಾ ಅಲ್ಲ. ಹಲವು ಸಾವಿರ ವರ್ಷಗಳಿಂದ ಮನುಕುಲ ಎದೆಗವಚಿಕೊಂಡು ಬಂದ ನಂಬಿಕೆಗಳನ್ನು ಮೂರ್ತಿರಾಯರು ಬಿಡಿ-ಬಿಡಿಯಾಗಿ ತೆರೆದಿಡುವುದು ಹಾಗೂ ಅವುಗಳ ಕುರಿತ ತಾರ್ಕಿಕ ಪ್ರಶ್ನೆಗಳನ್ನು ಎತ್ತುವ ರೀತಿ ಹಲವು ದಿನಗಳ ಕಾಲ ಓದುಗನನ್ನು ಕಾಡುವುದಂತೂ ನಿಜ. ಕೃತಿಯಲ್ಲಿ ಬರುವ ದೇವರು ಇಲ್ಲ ಎಂದುಕೊಳ್ಳುವಾಗ ನನ್ನ ಮನಸ್ಸಿನಲ್ಲಿರುವುದು ಸಂತೋಷವಲ್ಲ... ಅದನ್ನು ವಿಷಾದ ಎಂದೇ ಕರೆಯಬಹುದೇನೋ! ಜೀವ ಕೋಟಿಯ ಸಂಕಟವನ್ನು ಪರಿಹರಿಸಬಲ್ಲ ದೇವರು- ಅಂಥ ದೇವರಿದ್ದರೆ ಯಾರು 'ಬೇಡ' ಎನ್ನುತ್ತಾರೆ ಎಂಬ ವಾಕ್ಯ ಮೂರ್ತಿ ರಾಯರ ದೇವರ ಕುರಿತ ಸ್ಪಷ್ಟ ನಿಲುವನ್ನು ತೋರುತ್ತದೆ. ಯಾವುದೇ ಪೂರ್ವಾಗ್ರಹ ಪೀಡಿತ ಭಾವನೆಗಳಿಲ್ಲದ ಓದಿಗೆ ಮಾತ್ರ ಈ ಕೃತಿ ಮುದ ನೀಡುತ್ತದೆ. ಮೂಢನಂಬಿಕೆ ಬಿತ್ತುವುದೇ ದೊಡ್ಡ ಉದ್ಯಮವಾಗಿರುವಾಗ ಇದು ಪ್ರತಿ ಮನೆ-ಮಂದಿ ಓದಲೇಬೇಕಾದ ಕೃತಿ 'ದೇವರು'.

ಟಿಎಸ್‌ಐ

ಇರುವುದೊಂದೇ ಭೂಮಿ

ವೈಜ್ಞಾನಿಕ ಲೇಖನಗಳನ್ನು ಸರಳವಾದ ಭಾಷೆಯಲ್ಲಿ ಶ್ರೀಸಾಮಾನ್ಯನೊಬ್ಬನೂ ಅರಗಿಸಿಕೊಳ್ಳುವಂತೆ ಬರೆಯುವುದು ನಾಗೇಶ ಹೆಗಡೆಯವರ ವೈಶಿಷ್ಟ್ಯ. ಪ್ರಸ್ತುತ ಪರಿಸರದ ಆಗು- ಹೋಗುಗಳು, ಬಿಗಡಾಯಿಸಲಿರುವ ಪರಿಸ್ಥಿತಿಯ ಕುರಿತ ಕರಾರುವಕ್ಕಾದ ಲೇಖನ ಗುಚ್ಚವನ್ನು ಮನಕ್ಕೆ ನಾಟುವಂತೆ ಚಿತ್ರಿಸುತ್ತಾ ಹೋಗುವ 'ಇರುವುದೊಂದೇ ಭೂಮಿ' ಪರಿಸರದ ಬಗ್ಗೆ ಕಿಂಚಿತ್ತಾದರೂ ಆಸ್ಥೆಯಿರುವ ಕನ್ನಡಿಗನೊಬ್ಬ ಓದಲೇ ಬೇಕಾದ ಸೃಜನಶೀಲ ಕೃತಿ. ಈ ಕೃತಿಯಲ್ಲಿರುವ ಜಲ, ನೆಲದಿಂದ ಹಿಡಿದು ಬಾಹ್ಯಾಕಾಶದವರೆಗೆ ವಿವಿಧ ವೈಜ್ಞಾನಿಕ ಆಗು-ಹೋಗುಗಳ ಕುರಿತ ಲೇಖನಗಳು ಓದುಗನಿಗೆ ಪರಿಸರ ಜ್ಞಾನವನ್ನು ನೀಡುವುದಷ್ಟೇ ಅಲ್ಲದೆ 'ಇರುವ ಒಂದೇ ಭೂಮಿಯ' ರಕ್ಷಣೆಗೂ ಟೊಂಕಕಟ್ಟಿ ನಿಲ್ಲುವಂತೆ ಮಾಡುತ್ತದೆ. ಭೂಗೋಳದ ಜೀವ ಸಂಕುಲದ ಸಮಸ್ಯೆಯನ್ನು ಅರಿಯುವುದಕ್ಕೂ, ಪ್ರಪಂಚದ ಉಳಿವಿಗೆ ಮನುಕುಲದ ಮೇಲಿರುವ ಅಗಾಧ ಜವಾಬ್ದಾರಿ ಹಾಗೂ ಅದನ್ನು ಕಾರ್ಯಸಾಧುವಾಗಿಸುವ ಮಾರ್ಗಗಳನ್ನೂ 'ಇರುವುದೊಂದೇ ಭೂಮಿ' ಪರಿಣಾಮಕಾರಿಯಾಗಿ ತಿಳಿಸುತ್ತದೆ.

ಟಿಎಸ್‌ಐ

ಅಣ್ಣನ ನೆನಪು

ಕನ್ನಡ ಸಾಹಿತ್ಯದಲ್ಲಿ ಮೈಲಿಗಲ್ಲು ಎನಿಸಿಕೊಂಡ ಇಬ್ಬರು ಸಾಹಿತಿಗಳ ಜೀವನ ಪರಿಚಯಕ್ಕೆ 'ಅಣ್ಣನ ನೆನಪುಗಳು' ಉತ್ತಮ ವೇದಿಕೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಚಿಕ್ಕಂದಿನಿಂದ ಓದು ಮುಗಿಯುವವರೆಗಿನ ತಮ್ಮ ತಂದೆ ಕುವೆಂಪು ಅವರ ನೆನಪನ್ನು ಚಿತ್ರಿಸುತ್ತಾ ಸಾಗಿದರೆ, ಓದುಗ ಅದರ ಜೊತೆಗೇ ತೇಜಸ್ವಿ ಅವರ ಜೀವನದ ಪರಿಚಯವನ್ನೂ ಪಡೆಯುತ್ತಾ ಸಾಗುತ್ತಾನೆ. ಇದನ್ನು ತೇಜಸ್ವಿ ಕಂಡ ಕುವೆಂಪು ಕಥೆ ಎಂದರೆ ಪೂರ್ಣವಾಗಲಾದರು. ಏಕೆಂದರೆ, ಕೃತಿಯಲ್ಲಿ ತೇಜಸ್ವಿ ಅವರ ಜೀವನದ ಹಲವು ಮಹತ್ವದ ಅಧ್ಯಾಯಗಳೂ ಬಂದು ಹೋಗುತ್ತವೆ. ಕನ್ನಡ ಸಾಹಿತ್ಯದ ಇತಿಹಾಸದ ಒಂದು ನಿರೂಪಣೆಯ ಜೊತೆಗೆ ಕರ್ನಾಟಕದ ಅತ್ಯಂತ ಕ್ರಿಯಾಶೀಲ ದಶಕಗಳ ಒಂದು ದಾಖಲೆ ಕೂಡ ಹೌದು. ತೇಜಸ್ವಿ ಅವರ ಇತರ ಬರಹಗಳಂತೆ ಸರಳವಾಗೇ ಸಾಗುವ ಈ ಕೃತಿ ಅಲ್ಲಲ್ಲಿ ಸಾಮಾಜಿಕ ಜಿಜ್ಞಾಸೆ, ಕರ್ನಾಟಕ ಸಂಸ್ಕೃತಿ ಅವಲೋಕನ, ಸಾಹಿತ್ಯ ಮೀಮಾಂಸೆ, ತತ್ವ ಚಿಂತನೆ, ರಾಜಕೀಯ ಮೀಮಾಂಸೆ ಎಲ್ಲವನ್ನೂ ಒಳಗೊಳ್ಳುತ್ತದೆ. ರಾಷ್ಟ್ರಕವಿ ಕುವೆಂಪು ಅವರ ವ್ಯಕ್ತಿತ್ವದ ಮಾನವೀಯ ಮುಖವನ್ನು ಹೆಚ್ಚು ದಟ್ಟವಾಗಿ ಕಟ್ಟಿಕೊಡುವ ಕೃತಿ ಕನ್ನಡ ಸಾಹಿತ್ಯಾಸಕ್ತರ ಮೆಚ್ಚಿನ ಕೃತಿಗಳಲ್ಲೊಂದು.

ಟಿಎಸ್‌ಐ

ನಮ್ಮ ಊರಿನ ರಸಿಕರು

ಮಲೆನಾಡಿನ ಸೆರಗಿನಲ್ಲಿರುವ ಗ್ರಾಮವೊಂದರ (ಗೊರೂರು) ಚಿತ್ರಣವನ್ನು 'ನಮ್ಮ ಊರಿನ ರಸಿಕರು' ತುಂಬಾ ಸೊಗಸಾಗಿ ಕಟ್ಟಿ ಕೊಡುತ್ತದೆ. ಇಡೀ ಊರು ಒಂದು ಕುಟುಂಬದಂತೆ ವರ್ತಿಸುವುದು, ಅಲ್ಲಿನ ಜನರ ಪರಸ್ಪರ ಸಹಕಾರ ಮನೋಭಾವ, ಹಾಸ್ಯಪ್ರಜ್ಞೆ, ಮಾನವೀಯ ಕಳಕಳಿಯನ್ನು ತುಂಬಾ ರಮ್ಯ ಶೈಲಿಯಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ವಿಷದಪಡಿಸುತ್ತಾರೆ. ಹಳ್ಳಿಯೊಂದರ ಬದುಕಿನಲ್ಲಿ ಆಗುವ ಬದಲಾವಣೆಗಳ ದಾಖಲೆಯಾಗುತ್ತಲೇ, ಅಗಾಧ ಜೀವನ ಪ್ರೀತಿಯ ವ್ಯಕ್ತಿಯೊಬ್ಬರ ಕಣ್ಣಲ್ಲಿ ಅಂತಹ ಬದಲಾವಣೆ- ಅಲ್ಲಿನ ವ್ಯಕ್ತಿಗಳು ಹೇಗೆ ಕಾಣುತ್ತಾರೆ ಎಂಬುದು ಕೂಡ ಕೃತಿಯ ವೈಶಿಷ್ಟ್ಯ. ಗೊರೂರು ಅವರ ಬರವಣಿಗೆ ಸವಿಯನ್ನು ಸವಿಯಬೇಕೆಂದರೆ ಈ ಕೃತಿಯನ್ನು ಓದಲೇಬೇಕು.

ಟಿಎಸ್‌ಐ

ಹಸುರು ಹೊನ್ನು

ತಿಳಿ ಹಾಸ್ಯ ಮತ್ತು ಲವಲವಿಕೆಯ ಲೇಪದೊಂದಿಗೆ ಸಾಗುವ 'ಬಟಾನಿಕಲ್ ಟೂರ್' ಒಂದರ ನಿರೂಪಣೆಯ ಮೂಲಕ ಪಶ್ಚಿಮಘಟ್ಟದ ನೂರಾರು ಬಗೆಯ ಗಿಡ-ಮೂಲಿಕೆಗಳ ಪರಿಚಯ ಮಾಡಿಸುವ ಬಿ.ಜಿ.ಎಲ್. ಸ್ವಾಮಿ ಅವರ ಈ ಕೃತಿ ಯಾವುದೇ ಪುಟದಲ್ಲೂ ನಿಮನ್ನು ಬೋರ್ ಹೊಡೆಸಲಾರದು. ಕವಿಗಳು, ಪುರಾಣಗಳು, ಆಚರಣೆಗಳು, ಔಷಧಿ... ಹೀಗೆ ಹತ್ತು ಹಲವು ಆಯಾಮಗಳಲ್ಲಿ ಬಿ.ಜಿ.ಎಲ್. ಸ್ವಾಮಿ ವಸ್ತುವೊಂದನ್ನು ಚಿತ್ರಿಸುತ್ತಾ ಸಾಗುವಾಗ ಅಲ್ಲಲ್ಲಿ ಧುತ್ತೆನ್ನುವ ಹಾಸ್ಯ ನಗು ಚಿಮ್ಮಿಸುತ್ತದೆ. ಜೀವಂತಿಕೆ ಪುಟಿಯುವ ಅವರ ಬರವಣಿಗೆಯ ಶೈಲಿಗಾಗಿ ಮಾತ್ರವಲ್ಲ ಸಸ್ಯ ಲೋಕದ ಬಗ್ಗೆ ಮಹತ್ವಪೂರ್ಣ ಮಾಹಿತಿಯನ್ನು ಕೊಡುತ್ತಾ ಸಾಗುವ ಕೃತಿಗೆ ಸೃಜನಶೀಲ ಸಾಹಿತ್ಯ ಪ್ರಕಾರದಲ್ಲಿ ಅದರದೇ ಆದ ವೈಶಿಷ್ಟ್ಯವಿದೆ. ವಿನೋದ ವಾತಾವರಣದೊಳಗೇ ಸಾಗುವ ಗಿಡ ಮರ ಬಳ್ಳಿಗಳ ಕಥೆಯನ್ನು ಓದಿ ಮುಗಿಸುವ ವೇಳೆಗೆ ಹಲಸು, ಗೌರಿ ಹೂವಿನಿಂದ ಹಿಡಿದು ಸಪ್ತವರ್ಣಿ, ಡ್ರೈನೇರಿಯಾವರೆಗೆ ಜಾಪಾಳದಿಂದ ಸಮುದ್ರ ಸೌತೆಯವರೆಗೆ ಎಲ್ಲವೂ ನಿಮಗೆ ಆಪ್ತವೆನಿಸಿಬಿಡುತ್ತವೆ!

ಟಿಎಸ್‌ಐ

ಊರುಕೇರಿ

ಡಾ. ಸಿದ್ದಲಿಂಗಯ್ಯ ಅವರ ಈ ಆತ್ಮಕಥೆಯಲ್ಲಿ ದಲಿತ ಲೇಖನಗಳಲ್ಲಿ ಎದ್ದು ಕಾಣುವ ಬಡತನ, ರೊಚ್ಚು ಹಾಗೂ ಅವಮಾನದ ಮಿಶ್ರಣವಿದೆ. ಆದರೆ, ಹಿಂಸೆ ಮತ್ತು ಬಡತನದ ಅನುಭವಗಳನ್ನು ಕೂಡ ತಿಳಿಹಾಸ್ಯ ಮತ್ತು ವಿಡಂಬನೆಯ ಮೂಲಕ ಹೇಳುವುದರಿಂದ ಈ ಆತ್ಮಕಥೆ ಭಿನ್ನವಾಗಿ ನಿಲ್ಲುತ್ತದೆ. ಬಡತನ, ಜಾತಿ ಅವಮಾನದ ಭೀತಿಯಿಲ್ಲದ ದಲಿತಕಥೆಗಳು ಹುಟ್ಟುವುದು ಬಹುಶಃ ಅಸಾಧ್ಯ. ಆ ಆತ್ಮಕಥನದಲ್ಲಿ ನಿರೂಪಣೆಯಾಗಿರುವ ಹಲವು ಘಟನೆ- ಪ್ರಕರಣಗಳು ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಕಂಡರೂ ಸರಳವಾಗೇ ಶೋಷಣೆಯ ಮೇಲೆ ನಿಂತಿರುವ ಸಾಮಾಜಿಕ ವ್ಯವಸ್ಥೆಯೊಂದನ್ನು ನಗ್ನವಾಗಿ ಓದುಗನ ಮುಂದಿಡುತ್ತದೆ. ಬಡತನ ಹಾಗೂ ಹೋರಾಟದಲ್ಲೇ ತುಂಬಿದ ಬದುಕನ್ನು ವ್ಯಂಗ್ಯ ಹಾಗೂ ತುಂಟತನಗಳ ಮೂಲಕ ಕಟ್ಟಿಕೊಡುವ ಸಿದ್ದಲಿಂಗಯ್ಯ, ತಮ್ಮ ಬದುಕಿನ ಬಗ್ಗೆ ತಾವೇ ಹಾಸ್ಯ ಮಾಡಿಕೊಳ್ಳುವುದು ಇಲ್ಲಿನ ವಿಶೇಷ. ಭಾಷೆಯ ಆಡಂಬರವಿಲ್ಲದೆ, ಮಾರುದ್ದ ವಾಕ್ಯಗಳ ಜೋಡಣೆಯಿಲ್ಲದೆ ಸರಳವಾಗೇ ಸಾಗುವ ಈ ಕೃತಿ ಸುಲಭವಾಗಿ ಓದಿಸಿಕೊಂಡೇ ಸಾಗುತ್ತದೆ. ಪ್ರತಿಭೆಯೊಂದಿದ್ದರೆ ಬಡತನವನ್ನು ಮೀರಿ ಬೆಳೆಯಬಹುದು ಎಂಬ ಹುರುಪು ತುಂಬುವ ಕೃತಿ ಊರು ಕೇರಿ. ಅದಕ್ಕೆ ಡಾ.ಡಿ.ಆರ್. ನಾಗರಾಜ್ ಅವರು ಬರೆದಿರುವ ಬೆನ್ನುಡಿ ಕೂಡ ಅಷ್ಟೇ ಅರ್ಥಪೂರ್ಣವಾಗಿದೆ.

ಟಿಎಸ್‌ಐ

ಯಂತ್ರಗಳನ್ನು ಕಳಚೋಣ ಬನ್ನಿ

ಮುಂಜಾನೆಯಿಂದ ತಡ ರಾತ್ರಿಯವೆರಗಿನ ಎಲ್ಲಾ ಕಾರ್ಯಕ್ಕೂ ಒಂದಲ್ಲಾ ಒಂದು ಯಂತ್ರವನ್ನು ಅವಲಂಬಿಸಿರುವ ಈ ಸಂದರ್ಭದಲ್ಲಿ ಪ್ರಸನ್ನ ಅವರ 'ಯಂತ್ರಗಳನ್ನು ಕಳಚೋಣ ಬನ್ನಿ' ಎಂಬ ಈ ಕೃತಿ ಓದುಗನೊಬ್ಬನನ್ನು ಗಾಢವಾದ ಚಿಂತನೆಗೆ ಹಚ್ಚುತ್ತದೆ. ಮೊದಮೊದಲು ಮಾನವನ ಸೇವಕನಾಗಿದ್ದ ಯಂತ್ರಗಳು ಕ್ರಮೇಣ ಮಾನವನನ್ನೇ ತಮ್ಮ ಸೇವಕನನ್ನಾಗಿಸಿಕೊಂಡ ಬಗೆಯನ್ನು ಪ್ರಸನ್ನ ಅವರ ಮಾತುಗಳಲ್ಲೇ ಕೇಳಬೇಕು. ಮಾನವ ಯಂತ್ರಗಳ ಬಂಧನದಿಂದ ಬಿಡಿಸಿಕೊಳ್ಳಬೇಕು ಎನ್ನುವಂತೆಯೇ ಸಂಪೂರ್ಣವಾಗಿ ಯಂತ್ರಗಳ ಪಾಶಕ್ಕೆ ಸಿಕ್ಕಿರುವ ಮನುಕುಲವನ್ನು ಅದರಿಂದ ಬಿಡಿಸುವುದು ಅಷ್ಟು ಸುಲಭವಲ್ಲ ಎಂಬ ವಾಸ್ತವವನ್ನೂ ಪ್ರಸನ್ನ ಓದುಗರಿಗೆ ತಿಳಿಸುತ್ತಾರೆ. ಯಂತ್ರ ನಾಗರಿಕತೆ ಹುಟ್ಟಿದ ಬಗೆ, ಅದು ಬೆಳೆದು ಯಮಪಾಶವಾದ ಕಥೆಯನ್ನೂ ಪ್ರಸನ್ನ ಮನಮುಟ್ಟುವಂತೆ ಚಿತ್ರಿಸುತ್ತಾರೆ. ಯಂತ್ರಗಳನ್ನು ಕಳಚಿ ಸರಳ ಜೀವನದ ಪಾಠ ಹೇಳುವ ಬರಹವೂ ಅಷ್ಟೇ ಸರಳ. ಶಬ್ದಾಡಂಬರಗಳಿಲ್ಲದ ಈ ಕೃತಿ ಅತ್ಯುತ್ತಮ ಸಮಕಾಲೀನ ಸಂಸ್ಕೃತಿ ವಿಮರ್ಶೆಗಳಲ್ಲೊಂದು.

ಟಿಎಸ್‌ಐ

ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್

ಅಪರೂಪವೆನಿಸುವಂತ ಪ್ರವಾಸ ಕಥನ. ಪ್ರಯಾಣದೊಂದಿಗೆ ಅನುಭವ ಹಾಗೂ ಸುತ್ತಲಿನ ಪರಿಸರವನ್ನು ಪರಿಚಯಿಸುತ್ತಾ ಸಾಗುವ 'ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್' ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅತ್ಯುತ್ತಮ ಕೃತಿಗಳಲ್ಲೊಂದು. ಎಲ್ಲೂ ಏಕತಾನತೆ ಕಾಡದೆ ಕೃತಿಯ ಕೊನೆಯವರೆಗೂ ಒಂದೇ ಓಘದಲ್ಲಿ ಸಾಗುವ ಇದು, ಅದರ ಜೊತೆಗೇ ತೆರೆದುಕೊಳ್ಳುತ್ತಾ ಸಾಗುವ ಅನುಭವದ ಖಜಾನೆ, ಆಫ್ರಿಕಾ ಎನ್ನುವ ಮಾಯಾಲೋಕದ ವಿಚಿತ್ರಗಳು, ಮತ್ತಷ್ಟು ವಿಚಿತ್ರವೆನಿಸುವ ಅಲ್ಲಿನ ಜನರು... ಇವೆಲ್ಲವನ್ನೂ ತನ್ನೊಡಲಲ್ಲಿ ಬಚ್ಚಿಟ್ಟು ಮೌನವಾಗೇ ಹರಿಯುವ ನೈಲ್ ನದಿಯಂತೆ ಆಗಾಗ ಕಾಡುತ್ತಲೇ ಇರುತ್ತದೆ. ಕಣ್ಣಿಗೆ ಕಂಡದ್ದರ ಸರಳ ನಿರೂಪಣೆಯಾಗುವ ಸಾಮಾನ್ಯ ಪ್ರವಾಸ ಕಥನಗಳಿಗಿಂಥ ಭಿನ್ನವೆನಿಸುವ ಈ ಕೃತಿ ಅಂಡಮಾನ್ ಹಾಗೂ ಆಫ್ರಿಕಾದ ವಿವರಣೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾ ಸಾಗುತ್ತದೆ.

ಟಿಎಸ್‌ಐ

ಅರೆ ಶತಮಾನದ ಅಲೆ ಬರಹಗಳು

ಹೆಸರೇ ಸೂಚಿಸುವಂತೆ 50 ವರ್ಷಗಳಲ್ಲಿ (1954-2004) ಕೆ.ವಿ. ಸುಬ್ಬಣ್ಣ ಬರೆದ ಲೇಖನಗಳ ಸಂಗ್ರಹ ಈ ಕೃತಿ. ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ವಿವಿಧ ವಿಷಯಗಳ ಕುರಿತ ಸುಬ್ಬಣ್ಣನವರ ಲೇಖನಗಳು 'ಅರೆ ಶತಮಾನದ ಅಲೆ ಬರಹಗಳು' ಎಂಬ ಶೀರ್ಷಿಕೆಯಡಿ ಪುಸ್ತಕದ ರೂಪದಲ್ಲಿ ಹೊರಬಂದಿದೆ. ಸಾಹಿತ್ಯ, ರಂಗಭೂಮಿ, ಕಾವ್ಯ, ನೃತ್ಯ, ಅನುವಾದ ಎಲ್ಲದರಲ್ಲೂ ತೊಡಗಿಸಿಕೊಂಡಿದ್ದ ಸುಬ್ಬಣ್ಣನವರ ಲೇಖನಗಳ ಹರವು ಕೂಡಾ ವಿಸ್ತಾರವಾದದ್ದು. ಸುಬ್ಬಣ್ಣ ಆತ್ಮಕಥೆಯನ್ನು ಬರೆಯದೇ ಇದ್ದರೂ ಈ ಕೃತಿಯಲ್ಲಿ ಅಲ್ಲಲ್ಲಿ ಇಣುಕು ಹಾಕುವ ಸುಬ್ಬಣ್ಣ ಅವರ ದೃಷ್ಟಿಕೋನ ಸುಬ್ಬಣ್ಣ ವ್ಯಕ್ತಿತ್ವದ ಕಿರುಪರಿಚಯ ಮಾಡಿಸಿಕೊಡುತ್ತದೆ. ಸಮಾಜ, ಸಂಸ್ಕೃತಿ, ಸಾಹಿತ್ಯ, ಕಲೆ ಹಾಗೂ ವ್ಯಕ್ತಿಗಳು ಎಂಬ ವಿಭಾಗಗಳ ಅಡಿಯಲ್ಲಿ ಲೇಖನಗಳು ಅಚ್ಚಾದರೂ ಖ್ಯಾತ ವಿಮರ್ಶಕ ಟಿ.ಪಿ. ಅಶೋಕ ಹೇಳುವಂತೆ ಸಂಪುಟದ ಯಾವುದೇ ಪುಟದಿಂದ ಓದನ್ನು ಪ್ರಾರಂಭಿಸಬಹುದಾದ ಅಪೂರ್ವ ಪುಸ್ತಕ. ಕರ್ನಾಟಕದ ಅರ್ಧ ದಶಕದ ಸಂಸ್ಕೃತಿ, ಕಲೆ, ಸಾಹಿತ್ಯ, ಸಿನಿಮಾ, ರಾಜಕೀಯ, ಪರಿಸರ ಮುಂತಾದ ಎಲ್ಲ ವಲಯಗಳ ಆಗು-ಹೋಗುಗಳಿಗೆ ಸುಬ್ಬಣ್ಣ ಅವರ ಸ್ಪಂದನೆಯ ಮೂಲಕ ಇದು ಅರ್ಧ ದಶಕದ ಪರ್ಯಾಯ ಚರಿತ್ರೆಯಂತೆಯೂ ಓದಿಸಿಕೊಳ್ಳಬಲ್ಲ ಕೃತಿ.

ಟಿಎಸ್‌ಐ

ಶಕ್ತಿಶಾರದೆಯ ಮೇಳ

ಆಧುನಿಕ ಕನ್ನಡ ಕಾವ್ಯದ ಬಗ್ಗೆ ಆಸಕ್ತಿ ಇರುವವರಿಗೆ ಈ ಕೃತಿಯೊಂದು ಅದ್ಭುತ ಕೈಪಿಡಿ. ಎಲ್ಲೂ ಸಮೀಕ್ಷಾತ್ಮಕವೆನಿಸದ ಈ ಕೃತಿ ಆಧುನಿಕ ಕನ್ನಡ ಕಾವ್ಯವನ್ನು ಅತ್ಯಂತ ಆಳ ಅಧ್ಯಯನಕ್ಕೆ ಒಳಪಡಿಸುತ್ತದೆ. ಕನ್ನಡ ಕಂಡ ಅತ್ಯಂತ ಪ್ರಖರ ಚಿಂತಕ ಡಾ.ಡಿ.ಆರ್. ನಾಗರಾಜರ ಅಧ್ಯಯನದ ಆಳ- ಹರವು, ನೀಡಿರುವ ವಿವರಣೆಗಳು ಮತ್ತು ತಾತ್ವಿಕ ವಿಮರ್ಶೆ ಈ ಕೃತಿಯನ್ನು ಅದ್ವಿತೀಯವಾಗಿಸಿವೆ. ಭೂಮಿ ಮತ್ತು ಮನುಷ್ಯ, ಕಾಲ ಮತ್ತು ಮನುಷ್ಯ, ಸಮಾಜ ಮತ್ತು ಮನುಷ್ಯ ಹೀಗೆ ನಾಲ್ಕು ಭಾಗಗಳಾಗಿ ತೆರೆದುಕೊಳ್ಳುವ ಈ ಪ್ರಬಂಧ ಕನ್ನಡ ಕಾವ್ಯವನ್ನು ಪರಿಶೀಲಿಸುವುದರ ಜೊತೆಗೇ ಪ್ರಮುಖ ಕವಿಗಳ ಪ್ರಮುಖ ಕೃತಿಗಳೆಲ್ಲರ ಕುರಿತೂ ಚರ್ಚಿಸುತ್ತದೆ. 1981ರಲ್ಲಿ ನಾಗರಾಜರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ 'ಆಧುನಿಕ ಕನ್ನಡ ಕಾವ್ಯದ ನಾಲ್ಕು ವಸ್ತುಗಳು: ಒಂದು ಪರಿಶೀಲನೆ' ಎಂಬ ಮಹಾಪ್ರಬಂಧದ ಪರಿಷ್ಕೃತ ರೂಪ ಇದು. 'ಮೊದಲ ಓದಿಗೆ' ಕೊಂಚ ಕಠಿಣವೆನಿಸಿದರೂ ಕನ್ನಡ ಸಾಹಿತ್ಯದ ಸ್ಪಷ್ಟ ಪರಿಚಯವಾದ ಬಳಿಕ ಓದಲೇಬೇಕಾದರ ಕೃತಿ 'ಶಕ್ತಿ ಶಾರದೆಯ ಮೇಳ'.

ಟಿಎಸ್‌ಐ

ಹುಳಿಮಾವಿನ ಮರ

ಹಳ್ಳಿಯ ಕುಡುಮಿ ಹುಡುಗನೊಬ್ಬ ತನ್ನ ಸುತ್ತಲಿನ ಜನರ ವರ್ತನೆ, ಬಡತನ, ರೋಗ-ರುಜಿನ, ಆಚರಣೆ, ಮನರಂಜನೆ, ಕಾಮ-ಪ್ರೇಮಗಳನ್ನು ಕಾಣುತ್ತಲೇ ಹಳ್ಳಿಯನ್ನು ದಾಟಿ ನಗರದತ್ತ ಸಾಗುವುದನ್ನು ಸಹಜ ಮತ್ತು ನೇರವಾಗಿ ದಾಖಲಿಸುವ 'ಹುಳಿ ಮಾವಿನ ಮರ' ಪಿ. ಲಂಕೇಶರ ಆತ್ಮಕಥೆ. ಮುಂಗೋಪ, ಹೊಟ್ಟೆಕಿಚ್ಚು, ಕುಡುಮಿತನ, ನಿಷ್ಠುರತೆ, ಮಾನವ ಸಹಜ ಪೋಲಿತನł