|
ಜಗತ್ತು: ಜಲಸಂಪನ್ಮೂಲ ಹನಿ ನೀರಿಗಾಗಿ ಹಾಹಾಕಾರ
ಈ ಶತಮಾನದಲ್ಲಿ ನೀರಿಗಾಗಿ ಯುದ್ಧ ಸಂಭವಿಸಿದರೆ ಯಾವುದೇ ಅಚ್ಚರಿಯಿಲ್ಲ

ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರದೇಶಗಳಲ್ಲಿ ಜಲ ಮೂಲ
ಗಣನೀಯವಾಗಿ ಬತ್ತಿಹೋಗುತ್ತಿದೆ. ಜಗತ್ತಿನ ಶೇ. 5ರಷ್ಟು
ಜನಸಂಖ್ಯೆ ಹೊಂದಿರುವ ಈ ಪ್ರದೇಶಗಳಲ್ಲಿರುವ ಕುಡಿಯುವ ನೀರಿನ ಮೂಲ ಮಾತ್ರ ಜಗತ್ತಿನ
ಶೇ. 0.9ರಷ್ಟು.
ಈ ಪ್ರದೇಶದಲ್ಲಿ ನೀರಿನ ಕೊರತೆ ಅನುಭವಿಸುತ್ತಿರುವ ರಾಷ್ಟ್ರಗಳ ಸಂಖ್ಯೆ ಏರುತ್ತಲೇ ಇದೆ.
1955ರಲ್ಲಿ ಕೇವಲ ಮೂರು ರಾಷ್ಟ್ರಗಳು (ಬಹರೇನ್,
ಜೋರ್ಡನ್ ಮತ್ತು ಕುವೈತ್) ನೀರಿನ ಅಭಾವ ಅನುಭವಿಸುತ್ತಿದ್ದವು;
ಆದರೆ 1990ರ ವೇಳೆಗೆ ಆ ಸಂಖ್ಯೆ 11ಕ್ಕೆ
(ಈ ಪಟ್ಟಿಗೆ ಸೇರ್ಪಡೆಯಾಗಿದ್ದು ಅಲ್ಜೀರಿಯಾ,
ಇಸ್ರೇಲ್, ಸೌದಿ ಅರೇಬಿಯಾ,
ಕತಾರ್, ಯುಎಇ, ಯೆಮೆನ್,
ಟುನೀಸಿಯಾ ಮತ್ತು ಸೊಮಾಲಿಯಾ) ಏರಿತ್ತು.
2025ರ ವೇಳೆಗೆ ಈ ಪಟ್ಟಿಗೆ ಮತ್ತೆ 7 ರಾಷ್ಟ್ರಗಳು ಸೇರುವ
ಎಲ್ಲಾ ಲಕ್ಷಣಗಳೂ ಇವೆ.
ಮಧ್ಯಪ್ರಾಚ್ಯ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವುದು
ಯೂಫ್ರಟೀಸ್, ಟೈಗ್ರಿಸ್, ನೈಲ್ ಮತ್ತು
ಜೋರ್ಡನ್ ನದಿ ಜಾಲ. ಈ ಪ್ರದೇಶಗಳಲ್ಲಿ ಆಗಾಗ ಕಂಡುಬರುವ ಬಿಕ್ಕಟ್ಟಿಗೆ
ಪ್ರಮುಖ ಕಾರಣವೂ ನೀರೇ ಎಂಬುದರಲ್ಲಿ ಅನುಮಾನವಿಲ್ಲ. ನೀರಿನ ಅಭಾವ
ಅನುಭವಿಸುವ ರಾಷ್ಟ್ರಗಳ ಸಂಖ್ಯೆ ಹೆಚ್ಚಾದಂತೆ ನೀರಿಗಾಗಿ ನಡೆಯುವ ಯುದ್ಧ,
ಒಪ್ಪಂದಗಳ ಸಂಖ್ಯೆಯೂ ಹೆಚ್ಚಾಗುತ್ತಲಿದೆ. 1967ರಲ್ಲಿ
ಸಿರಿಯಾ ಹಾಗೂ ಇಸ್ರೇಲ್ ನಡುವಿನ ಯುದ್ಧಕ್ಕೆ ಕಾರಣವೂ ನೀರೇ. ಆಗ
ನೀರಿನ ಹರಿವು ಬದಲಿಸಿದ ಸಿರಿಯಾ, ಇಸ್ರೇಲ್ಗೆ
ನ್ಯಾಯಯುತವಾಗಿ ಸಲ್ಲಬೇಕಾಗಿದ್ದ ನೀರಿನ ಪಾಲನ್ನು ವಂಚಿತಗೊಳಿಸಿತ್ತು.
ಹಲವು ಜಾಗತಿಕ ಸಂಧಾನಗಳಿಗೆ, ದ್ವಿಪಕ್ಷೀಯ ಒಪ್ಪಂದಗಳಿಗೆ ಪ್ರಮುಖ
ಕಾರಣ ನೀರಿನ ಅಭಾವ. 1953-55ರಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ
ಜಾನ್ಸನ್ ಒಡಂಬಡಿಕೆ ಅಥವಾ 1959ರ 'ಫುಲ್
ಯುಟಿಲೈಸೇಷನ್ ಆಫ್ ನೈಲ್' ಒಪ್ಪಂದ, 1994ರಲ್ಲಿ
ನಡೆದ ಇಸ್ರೇಲಿ-ಜೋರ್ಡನ್ ಒಪ್ಪಂದ ಅದಕ್ಕೆ ಸಾಕ್ಷಿ.
ಹೆಚ್ಚುತ್ತಲೇ ಇರುವ ಜನಸಂಖ್ಯೆ ಹಾಗೂ ಕುಸಿಯುತ್ತಿರುವ ನೀರಿನ ಮೂಲಗಳು ರಾಷ್ಟ್ರ-ರಾಷ್ಟ್ರಗಳ
ನಡುವಿನ ಸಂಬಂಧದಲ್ಲಿ ಹುಳಿ ಹಿಂಡಿ ಹಲವು ಬಿಕ್ಕಟ್ಟುಗಳಿಗೆ ನಾಂದಿ ಹಾಡುತ್ತಿವೆ.
ಜೋರ್ಡನ್ ನದಿ ಪಾತ್ರದ ವಿಷಯದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಬಿಕ್ಕಟ್ಟು
ಏರ್ಪಟ್ಟಿದರೆ, ಟೈಗ್ರಿಸ್ ಮತ್ತು ಯೂಫ್ರಟೀಸ್ ನದಿ ನೀರಿಗಾಗಿ ಟರ್ಕಿ
ಮತ್ತು ಸಿರಿಯಾ ಕಚ್ಚಾಡುತ್ತಿವೆ ಹಾಗೂ ನೈಲ್ಗಾಗಿ ಇಥಿಯೋಪಿಯಾ ಮತ್ತು
ಸೂಡಾನ್ ಪರಸ್ಪರ ಬೆಂಕಿ ಕಾರುತ್ತಿವೆ.
ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಪರಿಸರ ಮಾಲಿನ್ಯದಿಂದ ದಕ್ಷಿಣ
ಏಷ್ಯಾದಲ್ಲಿಯೂ ನೀರಿನ ಮೂಲಗಳು ಬಿಕ್ಕಟ್ಟುಗಳಿಗೆ ಕಾರಣವಾಗುತ್ತಿವೆ.
ರಾಜಕೀಯ ಹಾಗೂ ಆರ್ಥಿಕ ಭಿನ್ನತೆಗಳೇನೇ ಇದ್ದರೂ ದಕ್ಷಿಣ ಏಷ್ಯಾ ರಾಷ್ಟ್ರಗಳು ನೀರಿನ ಹಂಚಿಕೆಯ
ವಿಚಾರವನ್ನು ಬಹು ಪ್ರಬುದ್ಧವಾಗೇ ಪರಿಹರಿಸಿಕೊಳ್ಳುತ್ತವೆ. ಭಾರತ
ಮತ್ತು ಪಾಕಿಸ್ತಾನ 1960ರಲ್ಲಿ 'ಇಂಡಸ್
ವಾಟರ್' ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ
ಒಪ್ಪಂದದ ಪ್ರಕಾರ ಪೂರ್ವದಲ್ಲಿರುವ ರಾವಿ, ಸಟ್ಲೆಜ್ ಮತ್ತು ಬಿಯಾಸ್
ಭಾರತಕ್ಕೆ ಸೇರಿದರೆ ಪಶ್ಚಿಮದಲ್ಲಿರುವ ಸಿಂಧೂ, ಝೇಲಮ್ ಮತ್ತು ಚೀನಾಬ್
ನದಿಗಳು ಪಾಕಿಸ್ತಾನಕ್ಕೆ ಮೀಸಲು. ಎರಡು ರಾಷ್ಟ್ರಗಳ ನಡುವೆ
ಭಿನ್ನಮತಗಳಿದ್ದರೂ (ಭಾರತ ಝೇಲಮ್ಗೆ
ಅಡ್ಡಲಾಗಿ 9 ಹಾಗೂ ಚೀನಾಬ್ಗೆ ಅಡ್ಡಲಾಗಿ
2 ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ ಎಂಬಂಥ ಆರೋಪಗಳು)
'ಇಂಡಸ್ ವಾಟರ್ ಅಗ್ರಿಮೆಂಟ್'ನ್ನು ಎರಡೂ ರಾಷ್ಟ್ರಗಳು ಚಾಚೂ
ತಪ್ಪದೆ ಪಾಲಿಸುತ್ತಾ ಬಂದಿವೆ. ಅದೇ ರೀತಿ 1996ರಲ್ಲಿ
ಬಾಂಗ್ಲಾ ಮತ್ತು ಭಾರತದ ನಡುವೆ ನಡೆದ 'ಗಂಗಾ ನದಿ ನೀರು ಹಂಚಿಕೆ'
ಒಪ್ಪಂದ ಹಲವು ವರ್ಷಗಳ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಮಾದರಿ ಎನಿಸಿಕೊಂಡಿತು.
ಹಾಗೇ ಮಧ್ಯ ಏಷ್ಯಾ ರಾಷ್ಟ್ರಗಳಲ್ಲೂ ನೀರಿನ ಅಭಾವ ಹಲವು
ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ನದಿಯ ಮೇಲ್ದಂಡೆ ಪ್ರದೇಶಗಳಲ್ಲಿರುವ
ಕಿರ್ಗಿಸ್ತಾನ್, ತಜಕಿಸ್ತಾನ್ಗಳು
ಜಲವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿರುವುದರಿಂದ ನದಿಯ ಕೊನೆ ಭಾಗದಲ್ಲಿರುವ ಉಜ್ಬೆಕಿಸ್ತಾನ್,
ಕಜಕ್ಸ್ತಾನ್ ಮತ್ತು ತುರ್ಕ್ಮೆನಿಸ್ತಾನ್
ರಾಷ್ಟ್ರಗಳು ಬಣಗುಡುತ್ತಿವೆ. ಅರ್ಧದಲ್ಲೇ ನಿಂತಿರುವ ಕಿರ್ಗಿಸ್ತಾನ್ನದ
ಕಂಬರ್ ಅತಾ ಮತ್ತು ತಜಕಿಸ್ತಾನ್ನ ರೋಘುಮ್ ಸ್ಥಾವರಗಳ ವಿರುದ್ಧ
ಉಜ್ಬೆಕಿಸ್ತಾನ್ ಸಮರ ಸಾರಿದೆ. ಕುತೂಹಲಕಾರಿ ವಿಷಯವೆಂದರೆ ನದಿಯ ಕೊನೆ
ಭಾಗದ ರಾಷ್ಟ್ರಗಳಂತೆ ಅಲ್ಲದೆ (ಭಾರಿ ತೈಲ ನಿಕ್ಷೇಪ,
ನೈಸರ್ಗಿಕ ಅನಿಲ ಸಂಪನ್ಮೂಲಗಳು ನದಿಯ ಕೊನೆಭಾಗದ ರಾಷ್ಟ್ರಗಳಲ್ಲಿಯೇ ಹೆಚ್ಚಾಗಿ
ಕಂಡುಬರುತ್ತದೆ) ಮೇಲ್ದಂಡೆಯ ರಾಷ್ಟ್ರಗಳು ಇಂಧನ ಹಾಗೂ ವಿದ್ಯುತ್
ಕೊರತೆ ಅನುಭವಿಸುತ್ತವೆ. ಈ ರಾಷ್ಟ್ರಗಳು ತಮ್ಮ ಜಲ ವಿದ್ಯುತ್
ನೀತಿಯನ್ನು ಸಮರ್ಥಿಸಿಕೊಂಡರೂ ಕೊನೆಭಾಗದ ರಾಷ್ಟ್ರಗಳಿಗೆ ನೀರಿನ ಅಭಾವವಿದೆ ಎಂಬುದನ್ನು
ಒಪ್ಪಿಕೊಳ್ಳುವುದಿಲ್ಲ. ಕಳೆದ ಶತಮಾನದಲ್ಲಿ ತೈಲಕ್ಕಾಗಿ ಯುದ್ಧ
ನಡೆದರೆ ಈ ಶತಮಾನದಲ್ಲಿ ನೀರೇ ಯುದ್ಧಕ್ಕೆ ಕಾರಣವಾಗಬಹುದು ಎಂಬ ಸಿದ್ಧಾಂತದಲ್ಲಿ ಹುರುಳಿಲ್ಲದೇ
ಇಲ್ಲ!
ಐಐಪಿಎಂ
'ಥಿಂಕ್ ಟ್ಯಾಂಕ್'
ಸಯಾನ್ ಘೋಷ್
ಭಾರತ-ಚೀನಾ: ಅಭಿವೃದ್ಧಿ
ಪ್ರಗತಿಗೆ ಸಿಂಗಾಪುರ ಸೂತ್ರ
ಭಾರತ ಹಾಗೂ ಚೀನಾ ರಾಷ್ಟ್ರಗಳು ಜೊತೆಗೂಡಿದಲ್ಲಿ ಎಂಥಾ ಅದ್ಭುತ ಘಟಿಸಬಹುದು!

ತನ್ನ ಅಮೋಘ ಅಭಿವೃದ್ಧಿ ಮಂತ್ರದ ಮೂಲಕ
ಸಿಂಗಾಪುರ ಜಗತನ್ನೇ ನಿಬ್ಬೆರಗಾಗಿಸಿದೆ .
ಈ ಪುಟ್ಟ ದ್ವೀಪ ರಾಷ್ಟ್ರ ಜಗತ್ತಿನ ಅತಿ ಶ್ರೀಮಂತ ರಾಷ್ಟ್ರಗಳಲ್ಲಿ
ಒಂದು (ಜಗತ್ತಿನ ನಾಲ್ಕನೇ ಅತಿ ಹೆಚ್ಚಿನ
ತಲಾದಾಯ, ಒಟ್ಟು ರಾಷ್ಟ್ರೀಯ ಉತ್ಪನ್ನ ಮತ್ತು
ಕೊಳ್ಳುವ ಸಾಮರ್ಥ್ಯ ಹೊಂದಿರುವ ರಾಷ್ಟ್ರ).
ಅಷ್ಟೇ ಅಲ್ಲದೆ ವೃತ್ತಿಪರ ಕಾರ್ಯವೈಖರಿಯಿಂದ ನಗರಗಳನ್ನು ಹೇಗೆ
ಅತ್ಯುತ್ತಮವಾಗಿ ನಿರ್ವಹಿಸಬಹುದು ಎಂಬುದಕ್ಕೂ ಸಿಂಗಾಪುರ ಮಾದರಿ.
ಯಾವುದೇ ರಾಷ್ಟ್ರ ಸಮೃದ್ಧಿ ಹೊಂದಲು ಮಾನವ ಚಿಂತನೆಗಳಿಗಿಂತ
ಹೆಚ್ಚಿನದೇನೂ ಬೇಕಿಲ್ಲ ಎಂಬುದನ್ನು ಸಾಬೀತುಪಡಿಸಿದ ರಾಷ್ಟ್ರ ಕೂಡಾ
ಸಿಂಗಾಪುರ. ನೈಸರ್ಗಿಕ
ಸಂಪನ್ಮೂಲಗಳಿಲ್ಲದಿದ್ದರೂ ಅತ್ಯುತ್ತಮ ಚಿಂತನೆ ಮತ್ತು ಕಾರ್ಯ
ನಿರ್ವಹಣೆಯಿಂದ ರಾಷ್ಟ್ರವೊಂದು ಸಮೃದ್ಧಿಯತ್ತ ಹೆಜ್ಜೆ ಹಾಕಬಹುದು
ಎಂಬುದಕ್ಕೂ ಸಿಂಗಾಪುರ ಮಾದರಿ. ಮಾನವ
ಅಭಿವೃದ್ಧಿ ಸೂಚ್ಯಂಕದಲ್ಲೂ ಸಿಂಗಾಪುರಕ್ಕೆ ಉತ್ತಮ (22ನೇ
ಸ್ಥಾನ) ಸ್ಥಾನವಿದೆ.
ಆದರೂ ಪರಸ್ಪರ ಬೆಂಕಿ ಕಾರುತ್ತಿರುವ ಏಷ್ಯಾದ ಎರಡು ದೈತ್ಯ
ರಾಷ್ಟ್ರಗಳಿಗೆ ಜೀವಂತ ಉದಾಹರಣೆಯಾಗಬಲ್ಲ ಈ ರಾಷ್ಟ್ರದ ಬಹು ಮುಖ್ಯ
ಗುಣಲಕ್ಷಣವೊಂದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
ಭಾರತ ಹಾಗೂ ಚೀನಾ ಕೈಜೋಡಿಸಿದರೆ ಸಾಧ್ಯವಾಗಬಲ್ಲ ಅದ್ಭುತವೊಂದರ
ತುಣುಕು ಈ ಸಿಂಗಾಪುರ ಎಂದು ಕೆಲವೊಮ್ಮೆ ಎನಿಸುತ್ತದೆ.
ಸಿಂಗಾಪುರದಲ್ಲಿ ಶೇ. 75ರಷ್ಟು ಚೀನಾ
ಮೂಲದ ಜನತೆಯಿದ್ದರೆ, ಉಳಿದ ಶೇ.
25ರಲ್ಲಿ ಭಾರತೀಯ ಮೂಲದ ಜನತೆ ಹೆಚ್ಚಿದ್ದಾರೆ.
ಈ ಎರಡೂ ಜನಾಂಗಗಳು ಹಲವು ಶತಮಾನಗಳಿಂದ ಸಾಮರಸ್ಯದ ಬದುಕು
ಕಂಡುಕೊಂಡಿದ್ದಾರೆ; ಮಾತ್ರವಲ್ಲದೆ ಜಗತ್ತೇ
ನಿಬ್ಬೆರಗಾಗುವಂತಹ ಆರ್ಥಿಕ ಪ್ರಗತಿಗೂ ಕಾರಣವಾಗಿದ್ದಾರೆ.
ಭಾರತ ಮತ್ತು ಚೀನಾ ಆರ್ಥಿಕ ಶಕ್ತಿ
ಕೇಂದ್ರಗಳಾಗಿ ಬೆಳೆಯುತ್ತಿದ್ದಂತೆ ಭವಿಷ್ಯದಲ್ಲಿ ಈ ಎರಡು ದೈತ್ಯ
ರಾಷ್ಟ್ರಗಳ ನಡುವೆ ಸಂಭವಿಸಬಹುದಾದ ಬಿಕ್ಕಟ್ಟಿನ ಬಗ್ಗೆ ಇಡೀ ಜಗತ್ತಿಗೇ
ಅನುಮಾನಗಳಿವೆ . ಅಮೆರಿಕದಲ್ಲಿ ದೈತ್ಯ
ಬ್ಯಾಂಕುಗಳು ಉರುಳಿ ಇಡೀ ಜಗತ್ತೇ ಆರ್ಥಿಕ ಕುಸಿತದ ಮಾರಕ ಪರಿಣಾಮಗಳನ್ನು
ಎದುರಿಸುತ್ತಿರುವಾಗ ಈ ಎರಡು ರಾಷ್ಟ್ರಗಳು ಮಾತ್ರ ದೃಢವಾಗಿ ನಿಂತಿವೆ.
ಆದರೆ ಈ ಬಗ್ಗೆ ಸಂತಸ ವ್ಯಕ್ತಪಡಿಸುವ ಬದಲು ಅನುಮಾನಗಳ ಮೂಟೆಯನ್ನೇ
ಹೊತ್ತಿರುವ ಕೆಲವು ವಿಶ್ಲೇಷಕರು ಮಧ್ಯ ಏಷ್ಯಾ ಹಾಗೂ ಆಫ್ರಿಕಾದಲ್ಲಿ ಈ ಎರಡು
ರಾಷ್ಟ್ರಗಳು ಬೀರುತ್ತಿರುವ ಪ್ರಭಾವ ಹಾಗೂ ತೈಲ ಸಂಪನ್ಮೂಲಕ್ಕಾಗಿ ಈ ಎರಡು
ರಾಷ್ಟ್ರಗಳ ನಡುವೆ ಏರ್ಪಟ್ಟಿರುವ ಸ್ಫರ್ಧೆಯೇ ಇಂಧನ ಕೊರತೆ
ಅನುಭವಿಸುತ್ತಿರುವ ಈ ಎರಡು ರಾಷ್ಟ್ರಗಳ ನಡುವಿನ ಬಿಕ್ಕಟ್ಟಿಗೆ
ಕಾರಣವಾಗಲಿವೆ ಎಂದು ಶಂಕಿಸುತ್ತಾರೆ.
ಇಂಧನವಿಲ್ಲದಿದ್ದರೆ ಈ ಎರಡು ರಾಷ್ಟ್ರಗಳ ಆರ್ಥಿಕ ಪ್ರಗತಿ
ಸ್ತಬ್ಧವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಜೊತೆಗೆ ಈ ಎರಡೂ ರಾಷ್ಟ್ರಗಳು ವಿನಾಕಾರಣ ಆತಂಕಕ್ಕೊಳಗಾಗಿವೆ.
ಭವಿಷ್ಯದಲ್ಲಿ ಸಂಭವಿಸಬಹುದಾದ ಬಿಕ್ಕಟ್ಟನ್ನು ಎದುರಿಸಲು ಈ ಎರಡೂ
ರಾಷ್ಟ್ರಗಳೂ ಪರಸ್ಪರ ಜಿದ್ದಿಗೆ ಬಿದ್ದು ಶಸ್ತ್ರಾಸ್ತ್ರ ಶೇಖರಿಸಿ ಭವಿಷ್ಯದ
ಬಿಕ್ಕಟ್ಟಿಗೆ ಸಜ್ಜಾಗುತ್ತಿವೆ. ಜಾಗತಿಕ
ಮಾಧ್ಯಮದಲ್ಲಿ ಬಿತ್ತರವಾಗುವ ಸುದ್ದಿಯನ್ನಾಧರಿಸಿ ಎರಡೂ ರಾಷ್ಟ್ರಗಳೂ
ಪರಸ್ಪರ ಪೂರ್ವಗ್ರಹ ಪೀಡಿತ ಭಾವನೆಗಳನ್ನು ಬೆಳೆಸಿಕೊಳ್ಳುತ್ತಿವೆ.
ಚೀನಾ ಮತ್ತು ಭಾರತ ಮುಂದುವರಿದ ರಾಷ್ಟ್ರಗಳಿಗೆ ಅಗತ್ಯವಿರುವ ಎಲ್ಲಾ
ವಸ್ತುಗಳು ಹಾಗೂ ಸೇವೆಗಳನ್ನು ಒದಗಿಸುವ ಉತ್ಪಾದನಾ ಕೇಂದ್ರಗಳಾಗಿ
ಬೆಳೆದಿದ್ದರೂ ಈ ಎರಡು ರಾಷ್ಟ್ರಗಳ ನಡುವೆ ಮಾತ್ರ ಇನ್ನೂ ಮುಕ್ತ ವ್ಯಾಪಾರ
ಏರ್ಪಟ್ಟಿಲ್ಲ. ಜಗತ್ತಿನ ಮೂರನೇ ಎರಡರಷ್ಟು
ಜನತೆಯ ದುಡಿಮೆಯ ಸವಿಯುಣ್ಣುವವರು ಮಾತ್ರ ಬೇರಾರೋ!
ಆದರೂ ಈ ಎರಡು ರಾಷ್ಟ್ರಗಳು ಅಥವಾ ಜಗತ್ತಿನ
ಮೂರನೇ ಎರಡರಷ್ಟು ಜನತೆ ತಮ್ಮ ನಡುವಿನ ವೈಮನಸ್ಯವನ್ನು ತೊಡೆದು ಒಂದಾದರೆ
ಅದ್ಭುತಗಳನ್ನು ಸೃಷ್ಟಿಸಬಹುದು .
ಇದರಿಂದ ಆರ್ಥಿಕ ಅಸಾಧ್ಯಗಳನ್ನೂ ಸಾಧಿಸಬಹುದು ಮಾತ್ರವಲ್ಲದೆ ಏಷ್ಯಾಕ್ಕೆ
ಮತ್ತೆಂದೂ ಪಾಶ್ಚಿಮಾತ್ಯ ರಾಷ್ಟ್ರಗಳ ಅಗತ್ಯ ಬರದು.
ಎರಡೂ ರಾಷ್ಟ್ರಗಳಿಗೆ ತಮ್ಮದೇ ಆದ ವೈಶಿಷ್ಟ್ಯಗಳಿದ್ದು ಇದರಿಂದ
ಪರಸ್ಪರ ಲಾಭ ಕಂಡುಕೊಳ್ಳಬಹುದಾಗಿದೆ.
ಸಾಮಾನ್ಯವಾಗಿ ಚೀನಾ ಜನತೆ ಸಂಪ್ರದಾಯವಾದಿಗಳು,
ಪರಿಪೂರ್ಣತೆಗೆ ಹಂಬಲಿಸುವರು ಹಾಗೂ ಪರಿಪಕ್ವತೆಗೆ ತುಡಿಯುವವರು.
ಇವೆಲ್ಲವೂ ಉತ್ಪಾದನಾ ಕ್ಷೇತ್ರಕ್ಕೆ ಅತ್ಯಗತ್ಯವಾದ ಗುಣಗಳೇ.
ಅದೇ ರೀತಿ ತಮ್ಮ ನವೀನ ಪರಿಕಲ್ಪನೆಗಳಿಗೆ ಹೆಸರುವಾಸಿಯಾಗಿರುವ ಭಾರತ
ತನ್ನ ಅಸಾಂಪ್ರದಾಯಿಕ ನಿಲುವಿನ ಮೂಲಕ ಹೊರಗುತ್ತಿಗೆ,
ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರವಾಗಿ ಬೆಳೆಯಿತು.
ಹಾಗೆ ಒಂದು ರಾಷ್ಟ್ರ ಉತ್ಪನ್ನವೊಂದನ್ನು
ತಯಾರಿಸಿದರೆ ಮತ್ತೊಂದು ರಾಷ್ಟ್ರ ಸೇವಾ ಸೌಲಭ್ಯ ನೀಡುತ್ತದೆ .
ಒಂದು ರಾಷ್ಟ್ರ ಪರಿಪಕ್ವ್ವವಾಗಿ ಉತ್ಪನ್ನವೊಂದನ್ನು ತಯಾರಿಸಿದರೆ
ಮತ್ತೊಂದು ಭವಿಷ್ಯದ ಯೋಜನೆಗಳ ರೂಪು ರೇಷೆ ಸಿದ್ಧಪಡಿಸುತ್ತದೆ.
ಸಿಂಗಾಪುರದಲ್ಲಿ ಭಾರತ ಹಾಗೂ ಚೀನಾ ಮೂಲದ
4.2 ಮಿಲಿಯನ್ ಜನತೆ ಅದ್ಭುತವನ್ನು
ಸಾಧಿಸಲು ಸಾಧ್ಯವಾದರೆ ಜಗತ್ತಿನ ಮೂರನೇ ಎರಡರಷ್ಟು ಜನಸಂಖ್ಯೆ ಹೊಂದಿರುವ
ಭಾರತ ಹಾಗೂ ಚೀನಾ ರಾಷ್ಟ್ರಗಳು ಜೊತೆಗೂಡಿದಲ್ಲಿ ಎಂಥಾ ಅದ್ಭುತ ಘಟಿಸಬಹುದು!
ಅಭಿವೃದ್ಧಿಯ ಹಾದಿಯಲ್ಲಿ ಜಗತ್ತಿಗೇ ಮಾದರಿಯೆನಿಸಿರುವ ಸಿಂಗಪುರ
ಏಷ್ಯಾದ ಈ ಎರಡು ದೈತ್ಯ ರಾಷ್ಟ್ರಗಳಿಗೆ ಒಮ್ಮೆಯಾದರೂ ಪ್ರಗತಿಪಥ ತೋರಲಿ.
ಐಐಪಿಎಂ
'ಥಿಂಕ್ ಟ್ಯಾಂಕ್'
ಪಥಿಕೃತ್ ಪಾಯ್ನೆ
|