User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಹೆಜ್ಜೆಗಳು
 

ಮನ ಕಲಕುವ ನರಕದ ನರಳಾಟ...

 
Prashantho Banerjee
ಪ್ರಶಾಂತೊ ಬ್ಯಾನರ್ಜಿ
ನುಡಿಚಿತ್ರ ಸಂಪಾದಕ
ದ ಸಂಡೆ ಇಂಡಿಯನ್

ಚೆನ್ನೈಗೆ ವಿಮಾನದಲ್ಲಿ ಮೂರು ಗಂಟೆಗಳ ಹಾದಿ. ಎಷ್ಟೋ ದಿನಗಳ ಹಿಂದೆ ಖರೀದಿಸಿ ಓದಲು ಪುರುಸೊತ್ತು ಸಿಗದೇ ಮೂಲೆಯಲ್ಲಿಟ್ಟಿದ್ದ ಇಲೀ ವೀಸೆಲ್ ಅವರ 'ನೈಟ್' ಪುಸ್ತಕ ಅಂದು ಕೈಗೆ ಸೇರಿತ್ತು. ವಿಮಾನಯಾನದ ಕಾಲಯಾಪನೆಗೆ ಅತ್ಯುತ್ತಮ ಅಸ್ತ್ರ ದೊರೆತಂತಾಗಿತ್ತು. ಚೆನ್ನೈ ಅನ್ನೇ ಗುರಿಯಾಗಿಟ್ಟುಕೊಂಡು ವಿಮಾನ ಗಾಳಿಯನ್ನು ಸೀಳುತ್ತಾ ಮುನ್ನುಗ್ಗುತ್ತಿದ್ದರೆ ಇಲ್ಲಿ ನಾನು ಇಂಚಿಂಚಾಗಿ ವೀಸೆಲ್ ಸೃಷ್ಟಿಸಿದ್ದ ನರಕದೊಳಗೆ ಇಳಿದು ಹೋಗುತ್ತಿದ್ದೆ. ಎಂಥ ಯಾತನಾದಾಯಕ ಕೃತಿಯದು... ತಣ್ಣಗೆ ಕೊರೆಯುವ ಕೈಯೊಂದು ನಿಮ್ಮ ಬೆರಳನ್ನು ಹಿಡಿದುಕೊಂಡು ನಿಮ್ಮನ್ನು ನರಕದಂಥ ಗಾಢಾಂಧಕಾರದ ಲೋಕಕ್ಕೆ ಎಳೆದೊಯ್ಯುವ ಅನುಭವ. ಮೊದಲ ಪುಟದಲ್ಲಿಯೇ ರಪ್ಪನೆ ಮೂಗಿಗೆ ರಾಚುವ ಹಸಿ ಮಾಂಸ ಸುಟ್ಟ ಕಮಟು ವಾಸನೆ, ತಣ್ಣಗೆ ಕೊರೆಯುವ ಹಿಮ... ಪುಸ್ತಕ ನಿಮ್ಮನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಅಸಹನೀಯವೆನಿಸಿ ಕೈಯಲ್ಲಿನ ಪುಸ್ತಕವನ್ನು ಕೆಳಗೆಸೆದು, ಕಣ್ಮುಚ್ಚಿ ಕೂತರೂ ಆ ಮಾಂಸದ ವಾಸನೆ ನಿಮ್ಮ ಮನದಲ್ಲಿ ಶಾಶ್ವತವಾಗಿ ಉಳಿದು ಬಿಡುತ್ತದೆ. ಇದು ನಿಜವೇ? ಇದು ನಿಜಕ್ಕೂ ನಡೆದ ಘಟನೆಯೇ ಎಂಬ ಅನುಮಾನ ಮೂಡದಿದ್ದರೆ ಕೇಳಿ.

ಹಾಗೆಯೇ ನಿಧಾನವಾಗಿ ದೃಶ್ಯಗಳ ಮೆರವಣಿಗೆ ಕಣ್ಣ ಮುಂದೆ ಸಾಗುತ್ತದೆ. ಮುಳ್ಳು ತಂತಿಯ ಬೇಲಿ, ಹೊಗೆ ಸೂಸುವ ಕೊಳವೆ, ಬೆತ್ತಲೆ ದೇಹಗಳು, ಚೀರಾಟ, ಒದರಾಟ, ಊನಗೊಂಡ ಅವಯವಗಳ ಸೋರಗಿದ ದೇಹಗಳು, ಬೆಂಕಿಗೆ ಆಹುತಿಯಾಗುವ ಮಕ್ಕಳ ಕೋಮಲ ಶರೀರಗಳು... ಒಂದೇ ಎರಡೇ? ಇಷ್ಟೆಲ್ಲಾ ಆದ ಮೇಲೆ ಸಾಕು ಇದರಿಂದ ಬಿಡುಗಡೆ ಹೊಂದೋಣ ಎಂದು ಯೋಚಿಸಿದರೆ, ಬೆರಳು ಹಿಡಿದ ಕೈ ಅಲ್ಲಿಗೇ ನಿಲ್ಲುವುದಿಲ್ಲ. ಪ್ರಾರಂಭದಲ್ಲಿ ಮಗುವಿನ ಮುಗ್ಧತೆಯಲ್ಲಿ ಬೆರಳು ಹಿಡಿದ ಕೈ ಈಗ ಕೈಗೆ ಸರಪಣಿ ಹಾಕಿದಂತೆ ಎಳೆಯುತ್ತದೆ. ಕಾನ್ಸಂಟ್ರೇಷನ್ ಕ್ಯಾಂಪ್ ಎಂಬ ನಾಜೀಗಳ ನರಕದೊಳಗೆ ಕರೆದೊಯ್ಯುತ್ತದೆ. ಅಲ್ಲಿ ಬೆತ್ತಲೆ ಮೈಗಳ ಮೇಲೆ ಛಾಟಿ ಮನಸೋಇಚ್ಛೆ ಹರಿದಾಡುತ್ತದೆ, ಹಾಗೆ ಹರಿದಾಡಿದ ಸದ್ದು ಕಿವಿಗೆ ಅಪ್ಪಳಿಸುತ್ತದೆ. ಅಲ್ಲಿ ಅಪ್ಪನೊಬ್ಬ ಬಂಧಿಗಳ ಕಾಲ್ತುಳಿತಕ್ಕೆ ಸಿಲುಕದಂತೆ ತನ್ನ ಮಗನನ್ನು ಹಕ್ಕಿಯಂತೆ ಅವಚಿಟ್ಟುಕೊಂಡಿದ್ದಾನೆ. ಸಾವು ಅಕ್ಕ ಪಕ್ಕದಲ್ಲಿಯೇ ಸುಳಿದಾಡುತ್ತದೆ. ಅಲ್ಲಿ ನೆರೆದವರ ಮೈಮೇಲಿನ ಬಟ್ಟೆಯ ಜೊತೆ ಅವರ ಘನತೆ, ಮರ್ಯಾದೆ, ಮನಷ್ಯರ ಮೇಲಿನ ನಂಬಿಕೆ ಪ್ರತಿಯೊಂದನ್ನೂ ಸೆಳೆದು ತೆಗೆಯಲಾಗಿದೆ. ಮೃದು, ಕೋಮಲ ಚರ್ಮದ ಮಕ್ಕಳು ಹರಿದ ಬಾಳೆ ಎಲೆಯಂತಾಗಿದ್ದಾರೆ. ಎಲುಬುಗಳನ್ನು ಹೊಂದಿದ ಹಸಿವಿನ ಚೀಲದಂತಾಗಿದ್ದಾರೆ. ಸಾವೆಂಬುದು ಪ್ರತಿ ದಿನ ಪಕ್ಕದವನ ಕಂಗಳಲ್ಲಿ ಠಳಾಯಿಸುತ್ತಾ ಇಲ್ಲವೇ ಕಾವಲುಗಾರನ ವಿಕೃತಿಯಲ್ಲಿ ಪ್ರಕಟವಾಗುತ್ತಲೇ ಕಣ್ಣೆದುರೇ ಹಾದು ಹೋಗುತ್ತಿರುತ್ತದೆ.

ನರಕಕ್ಕೆ ನಡೆಸಿಕೊಂಡು ಬಂದ ಕೈ ಹಾಗೆಯೇ ನೆಲದ ಮೇಲೆ ಬಿದ್ದಿದ್ದ ಹಿಮವನ್ನು ಮುಖಕ್ಕೆ ರಾಚುತ್ತದೆ. ಹೀಗೆ ಮುಖದ ಮೇಲೆ ಬಿದ್ದ ಹಿಮ ತಣ್ಣಗೆ ಕೊರೆಯುತ್ತಿರುತ್ತದೆ. ಆದರೆ ನಿಮಗೆ ಗೊತ್ತಿಲ್ಲ. ಅಲ್ಲಿರುವ ಬಹುತೇಕ ಮಂದಿ ಅದನ್ನೇ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿರುತ್ತಾರೆ!

ಬೆರಳು ಹಿಡಿದ ಕೈ ನಿಧಾನವಾಗಿ ಪೊಲೀಸರ ಬೂಟಾಗುತ್ತದೆ; ಸಂದರ್ಭ ಬಂದಾಗ ಲಾಠಿಯಾಗುತ್ತದೆ. ಸಿಕ್ಕ ಸಿಕ್ಕವರ ಮೇಲೆ ಪ್ರಹಾರ ಮಾಡುತ್ತದೆ. ಸಾಯುವ ಹಾಗೆ ಹೊಡೆಯುತ್ತದೆ. ಇದೇ ನಿಧಾನವಾಗಿ ತನ್ನದೇ ಹೃದಯನ್ನು ಎತ್ತಿ ತೋರಿಸುತ್ತದೆ, ಅದರೊಳಗೆ ಮಡುಗಟ್ಟಿರುವ ಮಾನವೀಯ ಭಾವನೆಗಳನ್ನು ತೆರೆದು ತೋರಿಸುತ್ತಲೇ ನಿಮ್ಮನ್ನು ಬೆಚ್ಚಿ ಬೀಳುವಂತೆ ಮಾಡುತ್ತದೆ. ಆ ಹೃದಯ ಒಂದು ಕಾಲದಲ್ಲಿ ತಂಗಿಯೆಡೆಗೆ ವಾತ್ಸಲ್ಯ ತೋರಿತ್ತು, ಅಮ್ಮನೆಡೆಗೆ ಪ್ರೀತಿ ತೋರಿತ್ತು. ಇಷ್ಟು ದಿವಸ ಸಾವಿನ ಸೈನಿಕರಿಂದ ತಪ್ಪಿಸಿಕೊಳ್ಳುತ್ತಿದ್ದ ಅಪ್ಪನನ್ನು ಭಯಮಿಶ್ರಿತ ಕಂಗಳಿಂದ ನೋಡುತ್ತಿತ್ತು. ಕೊನೆಗೊಮ್ಮೆ ಅಪ್ಪ ಸಾವಿನ ಸೈನಿಕರ ಬೂಟಿನಡಿಗೆ ಸಿಲುಕಿ ಕರುಣಾಜನಕವಾಗಿ ಚೀರುತ್ತಿದ್ದಾಗಲೂ ಏನೂ ಮಾಡಲಾಗದೆ ಅಸಹಾಯಕತೆಯಿಂದ ನಿಂತಿತ್ತು. ವೃದ್ಧ ತಂದೆ ಮಗನನ್ನು ಪುನಃ ಕೂಗುತ್ತಾನೆ, ಹೀಗೆ ಕೂಗುತ್ತಲೇ ಅಸುನೀಗುತ್ತಾನೆ. ತಂದೆಯ ಸಾವನ್ನು ನೋಡುತ್ತಾ ನಿಂತವನ ಮನದಲ್ಲಿ ಯಾವುದೇ ಭಾವನೆಗಳಿರಲಿಲ್ಲ. ನೋವಿಲ್ಲ, ಪಶ್ಚಾತ್ತಾಪವಿಲ್ಲ, ಕೊನೆಗೆ ಖಾಲಿತನವೂ ಇಲ್ಲ. ಯಾವ ಭಾವನೆಯೂ ಇಲ್ಲದ ನಿರ್ವಾತ ಸ್ಥಿತಿ. ನಿಧಾನವಾಗಿ ಮೈ ಮನಸ್ಸುಗಳು ಹಗುರಾದಂತೆ ಭಾಸವಾಗುತ್ತದೆ. ತಲೆಯ ಮೇಲಿನ ದೊಡ್ಡ ಭಾರ ಕೆಳಗಿಳಿದಂತೆ ಭಾಸವಾಗುತ್ತದೆ. ಏಕೆಂದರೆ ಬದುಕಿರುವ ವ್ಯಕ್ತಿಯೇ ಮುಂದಿನ ಕ್ಷಣ ಬದುಕಿರುತ್ತಾನೆ ಎಂಬುದಕ್ಕೆ ಯಾವ ಖಾತ್ರಿ ಇದೆ ಆ ನರಕದಲ್ಲಿ? ಯಾವುದೇ ಭಾವನೆಗಳನ್ನು ತೋರ್ಪಡಿಸದೇ ನಿರ್ಲಿಪ್ತವಾಗಿ ನಿಂತಿದ್ದ ಹೃದಯ ಒಮ್ಮೆಲೇ ಕಾಲ ಕೆಳಗೆ ಬೀಳುತ್ತದೆ. ಬೀಳುವುದೇ ತಡ ಅದೆಲ್ಲಿದ್ದವೋ ಪಾಪಪ್ರಜ್ಞೆ, ನೋವು, ಪಶ್ಚಾತ್ತಾಪ ಪ್ರತಿಯೊಂದೂ ಅಕ್ಷರಗಳ ನದಿಯಾಗಿ ಹರಿಯತೊಡಗುತ್ತವೆ. ಅಂತ್ಯದಲ್ಲಿ ನನ್ನ ಕೈಯಲ್ಲಿನ ಪುಸ್ತಕದ ರೂಪ ಧರಿಸುತ್ತದೆ.

ಇಲೀ ವೀಸೆಲ್ ಸಾವಿನ ಕಂದಕದಿಂದ ಜೀವಂತವಾಗಿ ಎದ್ದು ಬಂದವರು. 'ನೈಟ್' ಕೃತಿಯಲ್ಲಿ ವೀಸೆಲ್ ಬಣ್ಣಿಸಿದ ಅವರ ಹರೆಯದಲ್ಲಿ ಕಂಡ ನರಕದ ಕಥೆ ನಂತರ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ಸಂಪಾದಿಸಿಕೊಟ್ಟಿತ್ತು. ಈ ಕೃತಿಗೆ ನಿಮ್ಮ ಆಂತರ್ಯವನ್ನು ಕದಡುವ ಶಕ್ತಿ ಮಾತ್ರ ಇಲ; ಇದರಲ್ಲಿ ಅಮೂಲ್ಯ ಸಂದೇಶವಿದೆ. ಮೊದಲಿನ ಕೆಲವು ಪುಟಗಳಲ್ಲಿ ಇಲೀ ಟ್ರಾನ್ಸ್ಲ್ವೇನಿಯಾದಲ್ಲಿ ಕಳೆದ ಕೆಲವು ದಿನಗಳ ಬಣ್ಣನೆ ಇದೆ. 1944ರ ಬೇಸಿಗೆ ಕಾಲ. ದಿನಗಳು ಎಂದಿನಂತೆ ಸಾಗುತ್ತಿದ್ದವು. ಹಿಟ್ಲರ್ನ ರಕ್ತದಾಹಿತನ, ಆತನ ಕಾನ್ಸಂಟ್ರೇಷನ್ ಕ್ಯಾಂಪ್ಗಳೆಂಬ ನರಕಗಳ ಸಂಗತಿ ಇಲ್ಲಿನ ಜನರಿಗೆ ತಿಳಿದಿರಲಿಲ್ಲವೆಂದೇನಿಲ್ಲ. ಆದರೆ ಅದ್ಯಾವುದನ್ನೂ ಅವರು ಅಷ್ಟೊಂದು ಗಂಭೀರವಾಗಿ ಪರಿಗಣಿಸಲೇ ಇರಲಿಲ್ಲ. ಆದರೆ ಕೇವಲ ಮಾತಿಗೆ ಮೀಸಲಾಗಿದ್ದ ಹಿಟ್ಲರ್ ಹಾಗೂ ಆತನ ಸೈನ್ಯ ಮನೆ ಬಾಗಿಲಿಗೆ ಬಂದು ನಿಂತಾಗಲೇ ಗೊತ್ತಾಗಿದ್ದು ತಾವೆಂಥ ಕ್ರೌರ್ಯಕ್ಕೆ ಬಲಿಯಾಗಲಿದ್ದೇವೆ ಎಂಬುದು. ಅವರ ಬದುಕಿನ ದುಃಸ್ವಪ್ನ ಅಲ್ಲಿಂದಲೇ ಪ್ರಾರಂಭವಾಗುತ್ತದೆ. ಹಿಟ್ಲರ್ನನ್ನು ಪ್ರಪಂಚ ಮೊದಲ ಬಾರಿಗೆ ಭಯ ಬೆರೆತ ವಿಸ್ಮಯದಲ್ಲಿ ನೋಡಿದ್ದು ಆಗಲೇ.

1986ರ ನೊಬೆಲ್ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಚಿಕ್ಕ ಭಾಷಣ ಮಾಡಿದ ವೀಸೆಲ್, "ನೀವು ಯಾವುದಾದರೂ ಒಂದು ಕಡೆ ಗುರುತಿಸಿಕೊಳ್ಳಲೇ ಬೇಕು. ಏಕೆಂದರೆ ನಿರ್ಲಿಪ್ತತೆ ದೌರ್ಜನ್ಯವೆಸಗುವವನಿಗೆ ಮತ್ತೊಂದು ಅಸ್ತ್ರವಾದೀತು. ಜಾತಿ, ಜನಾಂಗ ಹಾಗೂ ಭಾಷೆಯ ವಿಚಾರದಲ್ಲಿ ಯಾವಾಗ ಮಾನವನ ಜೀವ ತೊಂದರೆಯಲ್ಲಿರುತ್ತದೋ, ಅವನ ಘನತೆ-ಗೌರವ ಮಣ್ಣುಪಾಲಾಗುತ್ತದೋ ಆಗ ನಾವು ಮುನ್ನುಗ್ಗಲೇ ಬೇಕು. ಒಂದು ವೇಳೆ ಅದನ್ನೆಲ್ಲಾ ನಾವು ಮರೆತರೆ ಪಾಪಿಗಳು ನಾವಾಗುತ್ತೇವೆ, ಕೊಲೆಗಡುಕರ ಪ್ರತಿನಿಧಿಗಳಾಗುತ್ತೇವೆ, ಅಷ್ಟೇ." ಆದರೆ ನಾವು ಎಲ್ಲವನ್ನೂ ಮರೆತುಬಿಟ್ಟಿದ್ದೇವೆ, ಕಾಂಬೋಡಿಯಾದಲ್ಲಿ ಮರೆತಿದ್ದೇವೆ, ಅಫ್ಘಾನಿಸ್ತಾನದಲ್ಲೂ ಮರೆತಿದ್ದೇವೆ, ಇರಾಕ್ನಲ್ಲೂ ಮರೆತಿದ್ದೇವೆ. ಚಿಕ್ಕ ಕಿಡಿಯಾಗಿರುವಂಥದ್ದು ನಮ್ಮ ಮೌನದ ಪ್ರೇರಣೆಯಲ್ಲಿ ದೊಡ್ಡ ಮಟ್ಟದ ಲಾವಾರಸವಾಗಿ ಹೊರ ಹೊಮ್ಮಬಹುದು. ಆದರೆ ಇದೆಲ್ಲವೂ 'ನೈಟ್' ಕೃತಿಯಾಗಿ ಹೊರಬಂದಿದೆ.

ಗುಜರಾತ್ ಹೊತ್ತಿ ಉರಿಯುವಾಗ ನಾನು ಮೌನವಾಗಿದ್ದೆ, ಹಾಗೆಯೇ ಕಾಶ್ಮೀರಿ ಪಂಡಿತರು ಹಿಂದಿರುಗಿ ಬಾರದಂತೆ ಎದ್ದು ನಡೆದಾಗ ಸುಮ್ಮನಿದ್ದೆ; ಮಣಿಪುರದ ನೋವಿನ ಆರ್ತನಾದ ನನಗೆ ಕೇಳಲೇ ಇಲ್ಲ, 'ಸೇನೆ'ಯ ರಕ್ತಸಿಕ್ತ ಕನಸುಗಳು ಮಾರಣಾಂತಿಕ ಎಂದು ಅನ್ನಿಸಲೇ ಇಲ್ಲ.

ಹಿಟ್ಲರ್ ಮಾರಣಹೋಮ ನಡೆಸುವಾಗ ಉಡುಗಿ ಹೋಗಿದ್ದ ಧ್ವನಿ ಬಹಿರಂಗವಾಗಿ ಕೇಳಿಸಿಕೊಂಡಿದ್ದು ಆತನ ಸಾವಿನ ನಂತರವೇ. ಇಲೀ ಅವರ 'ನೈಟ್' ಹೇಳುವಂತೆ ನಮ್ಮ ಪ್ರತಿಯೊಬ್ಬರ ಹೃದಯದಲ್ಲೂ ಒಬ್ಬ ಹಿಂಸಾವಿನೋದಿ ಜಾಗೃತವಾಗಿರುತ್ತಾನೆ. ಪ್ರತಿಯೊಂದು ಹಿಂಸಾಚಾರವನ್ನು ನೋಡಿದಾಗಲೂ ಆತ ಬಲಗೊಳ್ಳುತ್ತಲೇ ಹೋಗುತ್ತಾನೆ. ಮೊದಲಿಗಿಂತ ಹೆಚ್ಚು ಅಪಾಯಕಾರಿಯಾಗುತ್ತಾನೆ. ನಮ್ಮ ಮೌನದಿಂದಲೇ ಅವುಗಳನ್ನು ಸಶಕ್ತಗೊಳಿಸುತ್ತಿದ್ದೇವೆ. ಸಮಯ ಕೈಜಾರುವ ಮುನ್ನ ಇನ್ನಾದರೂ ಧ್ವನಿ ಎತ್ತೋಣ....

ಐಐಪಿಎಂ
ಥಿಂಕ್ ಟ್ಯಾಂಕ್\

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .