User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
 

ನ್ಯಾಯದ ದಾರಿ ದೂರ

ಕಳೆದ ವರ್ಷದ ಫೆಬ್ರುವರಿ 19ರಂದು ಮದ್ರಾಸ್ ಹೈಕೋರ್ಟ್ ಆವರಣದಲ್ಲಿ ಪೊಲೀಸ್ ಹಾಗೂ ವಕೀಲರ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಆ ಹಿನ್ನೆಲೆಯಲ್ಲಿ ಸಿಬಿಐ ವಕೀಲರ ವಿರುದ್ಧ ವಿವಾದಾತ್ಮಕ ಆರೋಪಪಟ್ಟಿ ಕೂಡ ಸಲ್ಲಿಸಿತ್ತು. ಆದರೆ ಪ್ರಕರಣಕ್ಕೆ ಒಂದು ವರ್ಷ ತುಂಬಿದರೂ ನಿಜವಾದ ಆರೋಪಿಗಳು ಯಾರೆಂಬುದು ಬೆಳಕಿಗೆ ಬಂದಿಲ್ಲ ಎನ್ನುತ್ತಾರೆ ಎನ್. ಅಶೋಕನ್

 

ಪೊಲೀಸ್ ಮತ್ತು ವಕೀಲರ ನಡುವಿನ ಮಾರಾಮಾರಿಯಿಂದ ಹೈಕೋರ್ಟ್ ಆವರಣ ರಣರಂಗವಾದ ಘಟನೆ ನಡೆದು ಫೆಬ್ರುವರಿ 19ಕ್ಕೆ ಒಂದು ವರ್ಷವಾಗಿದೆ. ಇದೀಗ ವಿವಾದದಲ್ಲಿ ಸಿಬಿಐ ಪ್ರವೇಶಿಸಿದೆ.

ಗಲಭೆ ಸಂಬಂಧ ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ವಕೀಲೆ ಕೆ. ಅಂಗಯರ್‌ಕಣ್ಣಿ ಹೆಸರೂ ಇದೆ. "ಘಟನೆ ವೇಳೆ ಪೊಲೀಸ್ ಕಾರ್ಯಾಚರಣೆಯಿಂದ ನನಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದೆ. ಆದರೆ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲಾಗಿದೆ. ಬದಲಿಗೆ ಘಟನೆಯಲ್ಲಿ ಭಾಗಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರನ್ನು ಕೈಬಿಡಲಾಗಿದೆ" ಎಂದು ಅವರು ಟೀಕಿಸುತ್ತಾರೆ. ಇದು ಆಕೆಯೊಬ್ಬಳ ಸಂಕಟವಲ್ಲ. ಘಟನೆ ಸಂಬಂಧ ಜನವರಿ 12ರಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿದಾಗ ಚೆನ್ನೈನ ಬಹುತೇಕ ವಕೀಲರಿಗೆ ಇದೇ ಆತಂಕ ಕಾಡಿತ್ತು.

ಕಳೆದ ವರ್ಷ ಫೆಬ್ರುವರಿ 19ರಂದು ನಡೆದ ಪೊಲೀಸ್ ಮತ್ತು ವಕೀಲ ಸಮುದಾಯದ ನಡುವಿನ ಗಲಭೆಯಲ್ಲಿ ಬಹಳಷ್ಟು ವಕೀಲರು ಪೊಲೀಸರ ಲಾಠಿ ಪ್ರಹಾರ ಎದುರಿಸಿದ್ದರು. ಘಟನೆಯಲ್ಲಿ ಹೈಕೋರ್ಟ್ ಆವರಣದ ಒಳಗಿನ ಪೊಲೀಸ್ ಠಾಣೆಗೆ ಅಗ್ನಿಸ್ಪರ್ಶ ಮಾಡಲಾಗಿತ್ತು. ಈ ಗಲಭೆಯ ಕಿಡಿ ನ್ಯಾಯಾಧೀಶರನ್ನೂ ತಟ್ಟದೆ ಇರಲಿಲ್ಲ. ಹಾಲಿ

ಹೈಕೋರ್ಟ್ ನ್ಯಾಯಾಧೀಶ ಎ.ಪಿ. ಆದಿತ್ಯನ್ ಅವರು ಗಲಭೆಯಲ್ಲಿ ಗಾಯಗೊಂಡಿದ್ದರು. ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಇವೆಲ್ಲವೂ ಟಿವಿ ಕ್ಯಾಮರಾಗಳ ಮುಂದೆಯೇ ನಡೆದಿದ್ದು, ಕೆಲವು ಪತ್ರಕರ್ತರೂ ಪೊಲೀಸರ ದಾಳಿಗೆ ಗುರಿಯಾಗಿದ್ದರು.

ಇಷ್ಟಕ್ಕೆಲ್ಲಾ ಕಾರಣ ಒಂದು ಸಣ್ಣ ಘಟನೆ. ಕಳೆದ ಫೆಬ್ರುವರಿಯಲ್ಲಿ ನ್ಯಾಯಾಲಯದಲ್ಲಿ, ನ್ಯಾಯಾಧೀಶರ ಸಮ್ಮುಖದಲ್ಲೇ ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿ ಅವರ ಮೇಲೆ ಮೊಟ್ಟೆ ಎಸೆಯಲಾಯಿತು. ಶ್ರೀಲಂಕಾ ವಿಚಾರದಲ್ಲಿ ಅವರು ತಮಿಳು ವಿರೋಧಿ ನೀತಿ ಅನುಸರಿಸಿದರೆಂದು ಸಿಟ್ಟಿಗೆದ್ದ ಕೆಲವು ವಕೀಲರು ಮೊಟ್ಟೆ ಎಸೆದಿದ್ದರು. ಆದರೆ ಈ ಘಟನೆ ಮುಂದಿನ ಕೆಲ ದಿನಗಳಲ್ಲಿ ನ್ಯಾಯಾಲಯದ ಅತಿ ದೊಡ್ಡ ಗಲಭೆಗೆ ಕಾರಣವಾಗಲಿದೆ ಎನ್ನುವುದು ಮೊಟ್ಟೆ ಎಸೆದವರಿಗೇ ಗೊತ್ತಿರಲಿಲ್ಲ. ಮೊಟ್ಟೆ ಎಸೆದ ವಕೀಲರನ್ನು ಬಂಧಿಸಲು ಪೊಲೀಸರು ಧಾವಿಸಿದಾಗ ಗಲಭೆ ಆರಂಭವಾಗಿತ್ತು.

ಆಗಿನ ತಾತ್ಕಾಲಿಕ ಮುಖ್ಯ ನ್ಯಾಯಮೂರ್ತಿ ಮುಖ್ಯೋಪಾಧ್ಯಾಯ್ ನೇತೃತ್ವದ ತ್ರಿಸದಸ್ಯ ವಿಭಾಗೀಯ ಪೀಠ ಘಟನೆ ಕುರಿತು ಸಿಬಿಐ ತನಿಖೆಗೆ ಆದೇಶಿಸಿದರು. ಗಲಭೆ ಬೃಹತ್ ಸ್ವರೂಪ ತಾಳಿದಾಗ ಮುಖ್ಯಮಂತ್ರಿ ಕರುಣಾನಿಧಿ ಅನಾರೋಗ್ಯದ ನಡುವೆಯೂ ನೊಂದವರ ಬಳಿ ಕ್ಷಮೆ ಯಾಚಿಸಿದರು. ಈ ಸಂಬಂಧ ವಕೀಲರು ಹೈಕೋರ್ಟ್‌ನಲ್ಲಿ ಅಸಂಖ್ಯಾತ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಲು ಅಕ್ಟೋಬರ್ 29ರಂದು ನ್ಯಾಯಮೂರ್ತಿ ಎಫ್.ಎಂ. ಇಬ್ರಾಹಿಂ ಖಲೀಫುಲ್ಲಾ ಮತ್ತು ನ್ಯಾಯಮೂರ್ತಿ ಆರ್. ಭಾನುಮತಿ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠ ರಚಿಸಲಾಯಿತು. ಪೀಠವು ಅಂದಿನ ಪೊಲೀಸ್ ಕಮಿಷನರ್ ಕೆ. ರಾಧಾಕೃಷ್ಣನ್, ಎಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎ.ಕೆ. ವಿಶ್ವನಾಥನ್, ಜಂಟಿ ಪೊಲೀಸ್ ಆಯುಕ್ತ (ಉತ್ತರ) ರಾಮಸುಬ್ರಮಣಿ ಹಾಗೂ ಫ್ಲವರ್ ಬಜಾರ್ ಪೊಲೀಸ್ ಠಾಣೆಯ ಡಿಸಿಪಿ ಪ್ರೇಮ್ ಆನಂದ್ ಸಿನ್ಹಾ ಅವರನ್ನು ಆರೋಪಿಗಳೆಂದು ಹೆಸರಿಸಿತ್ತು. ಅಲ್ಲದೆ ಈ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲು ಸೂಚನೆ ನೀಡಿತ್ತು. ಆದರೆ ತಮಿಳುನಾಡು ಸರ್ಕಾರ ಈ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತು. ಈ ಅಧಿಕಾರಿಗಳ ವಿಶೇಷ ರಜಾ ಅರ್ಜಿ ಇನ್ನೂ ನ್ಯಾಯಾಲಯದಲ್ಲಿದೆ.

ಈ ನಡುವೆ ಘಟನೆ ಕುರಿತು ವಿಶೇಷ ತನಿಖಾ ತಂಡ ರಚಿಸಿರುವ ಸಿಬಿಐ ಚೆನ್ನೈನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ನಲ್ಲಿ ಆರು ಆರೋಪ ಪಟ್ಟಿ ಸಲ್ಲಿಸಿದೆ. ಪಟ್ಟಿಯಲ್ಲಿ 31 ವಕೀಲರು, ಒಬ್ಬ ಕಾನೂನು ವಿದ್ಯಾರ್ಥಿ ಮತ್ತು 27 ಮಂದಿ ಪೊಲೀಸ್ ಸಿಬ್ಬಂದಿಯನ್ನು ಆರೋಪಿ ಸ್ಥಾನದಲ್ಲಿರಿಸಲಾಗಿದೆ.

ಆದರೆ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂಬ ವಕೀಲರ ಆಗ್ರಹಕ್ಕೆ ಮನ್ನಣೆ ಸಿಗಲಿಲ್ಲ. ಈ ಅಧಿಕಾರಗಳ ವಿರುದ್ಧದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಸಿಬಿಐ ಅವರ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಮುಷ್ಕರನಿರತ ವಕೀಲರು ಈ ಆರೋಪಪಟ್ಟಿಯನ್ನು ತಿರಸ್ಕರಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಮ್ಯಾಜಿಸ್ಟ್ರೇಟ್ ಆರೋಪಪಟ್ಟಿಯನ್ನು ಅಂಗೀಕರಿಸಿದ್ದು ಇನ್ನಷ್ಟು ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದ್ದಾರೆ. ಇದರ ವಿರುದ್ಧ ವಕೀಲರು ಒಂದು ದಿನದ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.

ಸಿಬಿಐ ಆರೋಪಪಟ್ಟಿಯನ್ನು ತಿರಸ್ಕರಿಸಬೇಕು ಎಂಬ ವಕೀಲೆ ಕೆ. ಅಂಗಯಾರ್‌ಕಣ್ಣಿ ಅವರ ಅರ್ಜಿಗೆ ಪ್ರತ್ಯುತ್ತರ ನೀಡಲು ಸಿಬಿಐಗೆ ಎಂಟು ವಾರಗಳ ಅವಕಾಶ ನೀಡಲಾಗಿದೆ. ಈ ನಡುವೆ ತನಿಖೆಯಲ್ಲಿ ವಕೀಲರು ಸಹಕರಿಸುತ್ತಿಲ್ಲ ಎಂದು ಸಿಬಿಐ ದೂರು ನೀಡಿದೆ. ವಕೀಲರು ಸೂಕ್ತ ಸಾಕ್ಷ್ಯ ನೀಡದಿದ್ದಲ್ಲಿ ಇನ್ನಷ್ಟು ಪೊಲೀಸ್ ಸಿಬ್ಬಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ ಸಿಬಿಐ ವಕ್ತಾರ ಹರ್ಷ ಬಲ್. "ಘಟನೆ ಸಂಬಂಧ ಪೊಲೀಸರ ವಿರುದ್ಧ ನಿಮ್ಮಲ್ಲಿರುವ ಸಾಕ್ಷ್ಯಗಳನ್ನು ಒದಗಿಸಿ ಎಂದು ನಾವು ಸಾಕಷ್ಟು ವಕೀಲರ ಸಂಘಗಳಲ್ಲಿ ವಿನಂತಿಸಿದ್ದೇವೆ. ನಾವು ಬಹಿರಂಗ ತನಿಖೆ ನಡೆಸಿದ್ದಲ್ಲದೆ, ಪ್ರತಿಯೊಬ್ಬರಿಗೂ ಸಾಕ್ಷ್ಯ ಒದಗಿಸುವ ಅವಕಾಶವನ್ನು ನೀಡಿದ್ದೆವು. ಆದರೆ ಯಾರೂ ಅಗತ್ಯ ಸಾಕ್ಷ್ಯ ಒದಗಿಸಲಿಲ್ಲ" ಎನ್ನುತ್ತಾರೆ ಅವರು.

ವಕೀಲರ ಆಕ್ರೋಶಕ್ಕೆ ಕಾರಣವಾದ ವಿಚಾರವೆಂದರೆ ಆರೋಪ ಪಟ್ಟಿಯಲ್ಲಿ ಸಿಬಿಐ ಕೇವಲ ಐವರು ಪೊಲೀಸ್ ಸಿಬ್ಬಂದಿ ಘಟನೆಯಲ್ಲಿ ಭಾಗಿಯಾಗಿರುವುದಾಗಿ ಹೇಳಿದೆ. 22 ಪೊಲೀಸರ ವಿರುದ್ಧ ಇಲಾಖೆ ಕ್ರಮವನ್ನಷ್ಟೇ ಜರುಗಿಸಲು ಸೂಚಿಸಿದೆ. ಇನ್ನು ಐವರು ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿರುವ ನೆಪ ಒಡ್ಡಿ ಅವರನ್ನು ಆರೋಪಪಟ್ಟಿಯಿಂದ ಕೈಬಿಟ್ಟಿದೆ.

ಸಿಬಿಐ ಆರೋಪ ಪಟ್ಟಿಯಲ್ಲಿ ಮದ್ರಾಸ್ ಹೈ ಕೋರ್ಟ್ ವಕೀಲರ ಸಂಘದ ಕಾರ್ಯದರ್ಶಿ ಜಿ. ಮೋಹನಕೃಷ್ಣನ್ ಅವರ ಹೆಸರೂ ಇದೆ. ವಕೀಲ ಸಮುದಾಯ ಸಿಬಿಐ ಮೇಲೆ ನಂಬಿಕೆ ಕಳೆದುಕೊಂಡಿದೆ ಎನ್ನುತ್ತಾರೆ ಮೋಹನ್‌ಕೃಷ್ಣನ್. "ಸಾಮಾನ್ಯವಾಗಿ ತಾರತಮ್ಯರಹಿತ ತನಿಖೆಗೆ ಸಿಬಿಐ ಉತ್ತಮ ಎಂದು ನಾವು ನಂಬಿದ್ದೆವು. ಆದರೆ ಅದು ನಿಜವಲ್ಲ ಎಂಬುದನ್ನು ಸಿಬಿಐ ಸಾಬೀತುಪಡಿಸಿದೆ. ಅದು ಆರಂಭದಿಂದಲೂ ತನಿಖೆಯನ್ನು ವಿಳಂಬ ಮಾಡುತ್ತಾ ಬಂದಿದೆ. ಆ ದಿನ 28 ಮಂದಿ ಪೊಲೀಸರು ನನ್ನ ಮೇಲೆ ದಾಳಿ ನಡೆಸಿದರು. ನಾನು ಅಗತ್ಯ ಸಾಕ್ಷ್ಯಗಳನ್ನು ಸಿಬಿಐಗೆ ಸಲ್ಲಿಸಿದ್ದರೂ ಅವರು ಪೊಲೀಸರಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ. ಈಗ ಸಿಬಿಐ ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದೆ. ಸಿಬಿಐ ಆರೋಪಪಟ್ಟಿಯಲ್ಲಿ ಹೆಸರಿಸಿರುವ ಹಲವು ವಕೀಲರು ಘಟನೆ ಸ್ಥಳದಲ್ಲಿ ಉಪಸ್ಥಿತಿಯಲ್ಲೇ ಇರಲಿಲ್ಲ. ಸಿಬಿಐ ವಿರುದ್ಧ ನಮ್ಮ ಬಳಿ ಬಲವಾದ ಸಾಕ್ಷ್ಯಾಧಾರಗಳಿದ್ದು ಅದು ಸಲ್ಲಿಸಿದ ಆರೋಪ ಪಟ್ಟಿ ಖಂಡಿತ ತಿರಸ್ಕೃತವಾಗಲಿದೆ" ಎಂದು ಅವರು ಟಿಎಸ್‌ಐಗೆ ಹೇಳಿದರು.

ಭಾರತೀಯ ನ್ಯಾಯವ್ಯವಸ್ಥೆಯ ಮೂಲಗುಣದಂತೆ ಈ ಪ್ರಕರಣ ಕೂಡಾ ವಿಳಂಬವಾಗುತ್ತಲೇ ಇದೆ. ಬರುವ ಫೆಬ್ರುವರಿ 19ಕ್ಕೆ ಘಟನೆ ನಡೆದು ಒಂದು ವರ್ಷ ಪೂರ್ಣಗೊಳ್ಳಲಿದೆ. ಆದರೆ ವಕೀಲರ ಮೇಲೆ ದಾಳಿ ಎಸಗಿದವರು ಯಾರು ಎನ್ನುವ ಪ್ರಶ್ನೆ ಮಾತ್ರ ರಹಸ್ಯವಾಗೇ ಉಳಿದಿದೆ. ಸದ್ಯದ ಭವಿಷ್ಯದಲ್ಲಿ ಈ ದಾಳಿಗೆ ಯಾವುದೇ ಒಬ್ಬ ಅಧಿಕಾರಿಯನ್ನು ಜವಾಬ್ದಾರಿಯಾಗಿಸುವುದು ಕಷ್ಟಸಾಧ್ಯ ವಿಚಾರ.

ಪೂರಕ ಮಾಹಿತಿ ಬಿ. ಸೇತುರಾಮನ್

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .