User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ದೇಸಿ ದನಿ
 
 

ಕೇರಳ: ಸಂದಿಗ್ಧತೆ

ನಿವೃತ್ತಿ ತಂದ ತಲೆ ಬಿಸಿ

ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ನೌಕರರ ನಿವೃತ್ತಿ

ಇದೇ ಏಪ್ರಿಲ್ನಲ್ಲಿ ಕೇರಳದ ಶೇ. 10ರಷ್ಟು ಸರ್ಕಾರಿ ನೌಕರರು ನಿವೃತ್ತರಾಗಲಿದ್ದಾರೆ. ಸರ್ಕಾರ ಈಗಾಗಲೇ ಹೊರಡಿಸಿರುವ ಆದೇಶದಂತೆ ಸರ್ಕಾರಿ ನೌಕರರು ನಿರ್ದಿಷ್ಟ ತಿಂಗಳಲ್ಲಿ ಅಂದರೆ ಏಪ್ರಿಲ್ನಲ್ಲಿ ಮಾತ್ರ ನಿವೃತ್ತರಾಗಬೇಕು. ನೌಕರರ ನಿವೃತ್ತಿಯಿಂದ ಲೋಕಸೇವಾ ಆಯೋಗ ಮತ್ತು ಅಕೌಂಟೆಂಟ್ ಜನರಲ್ ಕಚೇರಿಯ ಹಿರಿಯ ಅಧಿಕಾರಿಗಳು ಎದುರಿಸುವ ಸಮಸ್ಯೆ ನಿವಾರಿಸಲು ಈ ಆದೇಶ ಹೊರಡಿಸಲಾಗಿದೆ.

ಆದರೆ ಭಾರೀ ಸಂಖ್ಯೆಯ ನೌಕರರ ನಿವೃತ್ತಿ ಸಂಕಷ್ಟಗಳ ಸಂಕೋಲೆಯನ್ನೇ ಹೊತ್ತುತಂದಿದೆ. ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇದ್ದಾಗ್ಯೂ ಸಕಾಲಕ್ಕೆ ನೇಮಕಾತಿ ನಡೆಸುವುದಿಲ್ಲ ಎಂಬ ಬಹುದೊಡ್ಡ ಆರೋಪ ಲೋಕಸೇವಾ ಆಯೋಗದ ಮೇಲೆ ಇದೆ. ಇನ್ನು ಈ ಏಪ್ರಿಲ್ನಲ್ಲಿ ನಿವೃತ್ತರಾಗಲಿರುವ ಸುಮಾರು 21,000 ನೌಕರರಿಗೆ ನಿವೃತ್ತಿವೇತನ ಮತ್ತಿತರ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ಸುಮಾರು ರೂ. 1600 ಕೋಟಿ ಅಗತ್ಯವಿದೆ. ಈಗಾಗಲೇ ಆರ್ಥಿಕ ಸಂಕಷ್ಟದಿಂದ ಜರ್ಝರಿತವಾಗಿರುವ ಸರ್ಕಾರಕ್ಕೆ ಇದು ಭಾರೀ ಮೊತ್ತವೇ ಹೌದು.

ಈ ಮಧ್ಯೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಜನಪ್ರಿಯ ಬಜೆಟ್ ಮಂಡಿಸುವ ಒತ್ತಡಕ್ಕೆ ಸರ್ಕಾರ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಉದ್ಭವಿಸುವ ದೊಡ್ಡ ಪ್ರಶ್ನೆ ಎಂದರೆ ಇಷ್ಟು ದೊಡ್ಡ ಮೊತ್ತವನ್ನು ಹಣಕಾಸು ಸಚಿವ ಥಾಮಸ್ ಐಸಾಕ್ ಎಲ್ಲಿಂದ ತರುತ್ತಾರೆ ಎಂಬುದು.

ತಮ್ಮ ಅಧೀನದಲ್ಲಿರುವ ನಿಗಮ-ಮಂಡಳಿಗಳಿಂದ ನಿಧಿ ಸಂಗ್ರಹಿಸಲು ಆಡಳಿತ ಪಕ್ಷ ಸಿಪಿಐಎಂ ಕೂಡಾ ಈಗಾಗಲೇ ಹಸಿರು ನಿಶಾನೆ ತೋರಿದೆ. ಅಲ್ಲದೆ ನಿಗಮ ಮಂಡಳಿಗಳು ಹಲವು ಬ್ಯಾಂಕ್ಗಳಲ್ಲಿಟ್ಟಿರುವ ಠೇವಣಿ ಹಣವನ್ನೂ ರಾಜ್ಯ ಬೊಕ್ಕಸಕ್ಕೆ ಹಿಂದಿರುಗಿಸುವಂತೆ ಸರ್ಕಾರ ಕೇಳಿಕೊಳ್ಳಲಿದೆ. ಸರ್ಕಾರಿ ಆದೇಶದಂತೆ ಬ್ಯಾಂಕ್ಗಳಲ್ಲಿರುವ ಸುಮಾರು ರೂ. 3000 ಕೋಟಿಗಿಂತಲೂ ಹೆಚ್ಚಿನ ಠೇವಣಿ ಹಣವನ್ನು ನಿಗಮ-ಮಂಡಳಿಗಳು ಹಿಂತೆಗೆದಲ್ಲಿ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕಲಿವೆ. ಒಮ್ಮೆಗೇ ನಿವೃತ್ತರಾದ ಅಷ್ಟು ಮಂದಿ ಸರ್ಕಾರಿ ನೌಕರರ ಸ್ಥಾನದಲ್ಲಿ ಹೊಸಬರನ್ನು ಆಯ್ಕೆ ಮಾಡಿ ಕೂರಿಸುವುದು ಲೋಕಸೇವಾ ಆಯೋಗಕ್ಕೂ ಅಷ್ಟು ಸುಲಭವಲ್ಲ.

ಪ್ರಸಕ್ತ ವರ್ಷ ನಿವೃತ್ತರಾಗುತ್ತಿರುವ ನೌಕರರ ನಿವೃತ್ತಿವೇತನ ಲೆಕ್ಕಪತ್ರವನ್ನು ತಪಾಸಣೆ ಮಾಡಲು ಮಹಾ ಲೆಕ್ಕಾಧಿಕಾರಿ ಕಚೇರಿ ಹಗಲು ರಾತ್ರಿ ದುಡಿಯುತ್ತಿದೆ. ಕನಿಷ್ಠ ಪಕ್ಷ ಅರ್ಧದಷ್ಟಾದರೂ ನೌಕರರಿಗೆ ಸಕಾಲದಲ್ಲಿ ನಿವೃತ್ತಿವೇತನ ಸಿಗುವುದು ಅಸಂಭವ ಎಂಬ ಶಂಕೆ ಕಾಡುತ್ತಿದೆ. ಸಮಾಜಶಾಸ್ತ್ರಜ್ಞರ ಪ್ರಕಾರ ಇದು ಹಿರಿಯ ನಾಗರಿಕರ ಜೀವನದ ಮೇಲೆ ದುಷ್ಪರಿಣಾಮ ಬೀರಲಿದೆ. ಆದರೂ ನಿವೃತ್ತರಾಗುತ್ತಿರುವ ಎಲ್ಲಾ ನೌಕರರಿಗೆ ಸಕಾಲಕ್ಕೆ ನಿವೃತ್ತಿವೇತನ ಮತ್ತಿತರ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಶಕ್ತಿಮೀರಿ ಯತ್ನಿಸುತ್ತಿದೆ.

ಟಿಎಸ್

ಕಾವಲಂ ಶಶಿಕುಮಾರ್

ಗುಜರಾತ್: ಭೂಸ್ವಾಧೀನ

ಅಂತೂ ರೈತರ ಹೋರಾಟಕ್ಕೆ ಸಂದ ಜಯ

ರೈತರ ಉಗ್ರ ಪ್ರತಿಭಟನೆಗೆ ಬೆಚ್ಚಿ ಸ್ವಾಧೀನ ಪ್ರಕ್ರಿಯೆಯಿಂದ ಹಿಂದಕ್ಕೆ ಸರಿದ ಸರ್ಕಾರ

ನ್ಯಾನೋ ಕಾರು ಘಟಕದ ಬೃಹತ್ ಯಶಸ್ಸಿನ ನಂತರ, ಕೈಗಾರಿಕಾ ಉದ್ದೇಶಕ್ಕಾಗಿ ರೈತರ ಮನವೊಲಿಸಿ ಕೃಷಿ ಭೂಮಿ ಪಡೆಯುವುದು ಸುಲಭದ ಮಾತು ಎಂದು ಗುಜರಾತ್ ಸರ್ಕಾರ ಭಾವಿಸಿತ್ತು. ರೈತರ ತೀವ್ರ ಪ್ರತಿಭಟನೆಯ ಕಾರಣ ಈ ಬಾರಿ ಸರ್ಕಾರದ ಲೆಕ್ಕಾಚಾರ ತಲೆ ಕೆಳಗಾಗಿದೆ.

ಕೈಗಾರಿಕಾ ವಲಯಗಳನ್ನು ರೂಪಿಸುವುದಕ್ಕಾಗಿ, ಎರಡು ತಿಂಗಳುಗಳ ಹಿಂದೆ ಗುಜರಾತ್ ಸರ್ಕಾರವು ಸಾನಂದ್ ತಾಲೂಕಿನ 8000 ಹೆಕ್ಟೇರ್ ಕೃಷಿ ಭೂಮಿಯನ್ನು ಸ್ವಾಧೀನಪಡಿಸಲು ಮುಂದಾಯಿತು. ಆದರೆ ರೈತರು ತಮ್ಮ ಭೂಮಿ ನೀಡಲು ಒಪ್ಪಲಿಲ್ಲ. ಈ ಯೋಜನೆ ವಿರುದ್ಧ ಪ್ರತಿ ರೈತರು ಚಳವಳಿಗೆ ಧುಮುಕಿದರು. ಚಳವಳಿಯ ಅಂಗವಾಗಿ ರೈತರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಹಿಂದಕ್ಕೆ ಪಡೆದದ್ದು ಮಾತ್ರವಲ್ಲದೆ ಪೋಲಿಯೊ ಲಸಿಕೆ ಕಾರ್ಯಕ್ರಮವನ್ನೂ ಬಹಿಷ್ಕರಿಸಿದರು. ವಿಚಲಿತಗೊಂಡ ಗುಜರಾತ್ ಸರ್ಕಾರ ಸ್ವಾಧೀನತೆ ಪ್ರಕ್ರಿಯೆಯಿಂದ ಹಿಂದಕ್ಕೆ ಸರಿಯಬೇಕಾದುದು ಅನಿವಾರ್ಯವಾಯಿತು.

ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಕುರಿತು 1984ರಿಂದಲೇ ರಾಜ್ಯ ಸರ್ಕಾರ ಮತ್ತು ರೈತರ ನಡುವೆ ಘರ್ಷಣೆ ನಡೆಯುತ್ತಲೇ ಬಂದಿದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ರಾಜ್ಯ ಸರ್ಕಾರಗಳೇ ಗೆದ್ದಿವೆ. ಕಳೆದ ವರ್ಷ ಮಹುವಾದಲ್ಲಿ (ಸೌರಾಷ್ಟ್ರದಲ್ಲಿ) ನಿರ್ಮಾ ಕಂಪನಿಗಾಗಿ ಸರ್ಕಾರವು ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿತು. ಇದರ ವಿರುದ್ಧ ರೈತರು ಇಂದಿಗೂ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಾರಿ ಸಾನಂದ್ನ ಏಳು ಗ್ರಾಮಗಳು ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದು, ತಮ್ಮ ಭೂಮಿಯನ್ನು ಉಳಿಸಲು ಹರಸಾಹಸ ಪಡುತ್ತಿವೆ.

ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಕೃಷಿ ಅವಲಂಬಿಸಿರುವ ಶೇ. 50ರಷ್ಟು ರೈತರು ಅಭಿವೃದ್ಧಿಗೆ ಶೇ. 16ರಷ್ಟು ಕೊಡುಗೆ ನೀಡುತ್ತಾರೆ. ಆದರೆ ಶೇ. 16ರಷ್ಟಿರುವ ಕೈಗಾರಿಕೆಗಳು ಶೇ. 32ರಷ್ಟು ಕೊಡುಗೆ ನೀಡುತ್ತಿವೆ. ಹೀಗಾಗಿ ಕೈಗಾರಿಕೆಗೆ ಹೆಚ್ಚು ಪ್ರೋತ್ಸಾಹ ಅಗತ್ಯ.

ಆದರೆ ರೈತರು ಮಾತ್ರ ಕೈಗಾರಿಕಾ ಉದ್ದೇಶಕ್ಕಾಗಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕ್ರಮವನ್ನು ಒಪ್ಪುವುದಿಲ್ಲ. ಸಾನಂದ್ನ ಹೀರಾಪುರ ಗ್ರಾಮದ ದಿಲೀಪ್ ರಾಠೋಡ್, “ನನ್ನ ಬಳಿ 70 ಎಕರೆ ಕೃಷಿ ಭೂಮಿ ಇದೆ. ಇಲ್ಲಿ ಹೆಚ್ಚಿನ ರೈತರು ಗೋಧಿ ಮತ್ತು ಅಕ್ಕಿ ಬೆಳೆಯುತ್ತಾರೆ. ಕೈಗಾರಿಕಾ ವಲಯಕ್ಕಾಗಿ ನನ್ನ ಕೃಷಿ ಭೂಮಿಯನ್ನು ಸ್ವಾಧೀನಪಡಿಸಲು ಸರ್ಕಾರ ಆಜ್ಞೆ ಹೊರಡಿಸಿದೆ. ಭೂಮಿಯನ್ನು ಕಳೆದು ಕೊಂಡೆನೆಂದರೆ ಜೀವನಾಧಾರವನ್ನೇ ಕಳೆದುಕೊಂಡಂತೆ” ಎಂದು ಗೋಳಿಡುತ್ತಾರೆ. ಇದು ದಿಲೀಪ್ ರಾಠೋಡ್ ಒಬ್ಬರ ಕಥೆಯಲ್ಲ; ಬದಲಾಗಿ ಹೀರಾಪುರ, ಕುನ್ವಾರ್, ಗೋಕುಲಪುರ, ರಾಸಿಲಪುರ, ಬೋದ್, ಸಿಯವಾಡ ಮತ್ತು ಚರಲ್ನ ಸುಮಾರು 22000 ರೈತರು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ತಮ್ಮ ಭೂಮಿಯನ್ನು ಸರ್ಕಾರದ ವಶಕ್ಕೆ ಒಪ್ಪಿಸದಿರಲು ಈ ರೈತರು ದೃಢ ನಿರ್ಧಾರ ತಳೆದಿದ್ದಾರೆ. ರೈತರು ಜಮೀನು ನೀಡಲು ಒಪ್ಪದಿದ್ದಲ್ಲಿ ಆಡಳಿತವು ಈ ವಿಚಾರದಲ್ಲಿ ಮುಂದುವರಿಯುವುದಿಲ್ಲ ಎಂದು ಸಾನಂದ್ ಜಿಲ್ಲಾಧಿಕಾರಿ ಹರಿತ್ ಶುಕ್ಲಾ ಭರವಸೆ ನೀಡಿದ್ದರೂ, ರೈತರ ಮನದಲ್ಲಿ ಅಚ್ಚೊತ್ತಿರುವ ಭೀತಿ ಇನ್ನೂ ಮರೆಯಾಗಿಲ್ಲ. ಸಾಮಾಜಿಕ ಕಾರ್ಯಕರ್ತರಾದ ಭರತ್ ಸಿಂಗ್ ಝಾಲಾ ಹೇಳುವಂತೆ, “ರಾಜ್ಯದ ಶೇ. 70ರಷ್ಟು ಕೈಗಾರಿಕಾಭಿವೃದ್ಧಿ ಪ್ರದೇಶ ನಿರುಪಯುಕ್ತವಾಗಿದೆ. ನರೋದ ಮತ್ತು ವಾಟ್ವಾ ಕೈಗಾರಿಕಾ ಪ್ರದೇಶಗಳು ಮರುಭೂಮಿಯಂತಾಗಿವೆ. ಅಲ್ಲಿ ಉದ್ಯೋಗವೇ ಇಲ್ಲ. ಈ ಕುರಿತು ಗಮನ ಹರಿಸುವುದನ್ನು ಬಿಟ್ಟು, ಕೇವಲ ರೈತರನ್ನು ನಿರುದ್ಯೋಗಿಗಳನ್ನಾಗಿಸುವ ಉದ್ದೇಶದಿಂದ ಸರ್ಕಾರವು ಇನ್ನೊಂದು ಕೈಗಾರಿಕಾ ತಾಣವನ್ನು ರೂಪಿಸಲು ಹೊರಟಿದೆ

ಇದೇ ಸಂದರ್ಭದಲ್ಲಿ ಮಹುವಾದಲ್ಲಿಯೂ ಸರ್ಕಾರ ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಬಗ್ಗೆ ಅನೇಕರಿಗೆ ಸಂದೇಹಗಳಿವೆ. ಹಿರಿಯ ಮಾನವ ಹಕ್ಕು ಕಾರ್ಯಕರ್ತ ಜಿಗಣೇಶ್ ಮೇವಾನಿ ಹೇಳುವಂತೆ, “ಫಲವತ್ತಾದ ಭೂಮಿಯ ಸವೆತ ತಪ್ಪಿಸಲು ಸರ್ಕಾರವೇ ಆರ್ಸಿಸಿ ತಡೆಗಳನ್ನು (ಗುಜರಾತಿ ಭಾಷೆಯಲ್ಲಿ ’ಬಂಧಾರಾ’) ನಿರ್ಮಿಸಿದೆ. ಇದು ರೈತರಿಗೆ ಮತ್ತು ಕೃಷಿಗೆ ಪೂರಕವಾಗಿದೆ. ಇನ್ನೊಂದೆಡೆ ಕಲ್ಸರ್, ನಾಯಿಪ್, ವಂಗರ್, ಪಥಿಯರ್ಕ, ಗುಂಜಾರ್ದ, ದೋಡಿಯಾ, ಮಾಧಿಯಾ, ದೂಧೇರಿ ಮತ್ತು ದುಧಾರ ಗ್ರಾಮಗಳಲ್ಲಿ ರೈತರ ಜೊತೆ ಚರ್ಚಿಸದೆ ಫಲವತ್ತಾದ ಕೃಷಿಭೂಮಿಯನ್ನು ಸರ್ಕಾರ ನಿರ್ಮಾ ಕಾರ್ಖಾನೆಗೆ ನೀಡಿದೆ”.

ಪರಿಸ್ಥಿತಿಯ ಅವಲೋಕನಕ್ಕಾಗಿ ಸರ್ಕಾರವು ಮೂರು ತಿಂಗಳುಗಳ ಹಿಂದೆ ವಜುಭಾಯಿ ವಾಲಾ ಸಮಿತಿ ನೇಮಿಸಿತು. ನಿರ್ಮಾ ಘಟಕದಿಂದ ರೈತರಿಗೆ ಮತ್ತು ಫಲವತ್ತಾದ ಕೃಷಿ ಭೂಮಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಈ ಸಮಿತಿ ಈಗಾಗಲೇ ವರದಿ ನೀಡಿದೆ. ಸರ್ಕಾರವೇ ನೇಮಿಸಿದ ಸಮಿತಿಯಿಂದ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ.

ಟಿಎಸ್‌ಐ

ಹಿತೇಶ್ ಅಂಕಲೇಶ್ವರಿಯಾ

ಪಶ್ಚಿಮ ಬಂಗಾಳ: ವಿವಾದ

ಚರಿತ್ರೆಯ ಕತ್ತಲ ಅಧ್ಯಾಯ

ಬೋಸ್ ಸಾವಿನ ಕುರಿತ ನ್ಯಾ. ಮುಖರ್ಜಿ ಅನಿಸಿಕೆ ಈಗ ವಿವಾದದ ಸುಳಿಯಲ್ಲಿ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತಂತೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮನೋಜ್ ಕುಮಾರ್ ಮುಖರ್ಜಿ ಖಾಸಗಿಯಾಗಿ ಮಾತನಾಡಿ ವಿವಾದ ಹುಟ್ಟುಹಾಕಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವಿನ ವಿವಾದ ಕುರಿತು ತನಿಖೆ ನಡೆಸಲು 1999ರಲ್ಲಿ ನ್ಯಾಯಮೂರ್ತಿ ಮುಖರ್ಜಿ ನೇತೃತ್ವದ ಏಕಸದಸ್ಯ ಆಯೋಗ ರಚಿಸಲಾಗಿತ್ತು.

ಸುಭಾಷ್ ಬೋಸ್ ಕುರಿತ ‘ಬ್ಲ್ಯಾಕ್ ಬಾಕ್ಸ್ ಆಫ್ ಹಿಸ್ಟರಿ’ ಎನ್ನುವ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಮುಖರ್ಜಿ ಅವರು ಸಂದರ್ಶಕ ಅಮ್ಲನ್‌ಕುಶುಮ್ ಘೋಷ್ ಜೊತೆ ಖಾಸಗಿಯಾಗಿ ಮಾತನಾಡಿ, ಫೈಜಾಬಾದ್‌ನ ಅನಾಮಿಕ ಸನ್ಯಾಸಿ ‘ಗುಮ್‌ನಾಮಿ ಬಾಬಾ’ ಅವರೇ ಸುಭಾಷ್ ಬೋಸ್ ಎನ್ನುವ ದೃಢ ನಂಬಿಕೆ ತಮಗಿರುವುದಾಗಿ ಹೇಳಿದ್ದರು. ಈ ಮಾತುಕತೆ ಖಾಸಗಿಯಾಗಿದ್ದರೂ ಘೋಷ್ ಅವರು ನ್ಯಾಯಮೂರ್ತಿಗಳ ವಿವಾದಾಸ್ಪದ ಹೇಳಿಕೆಯನ್ನು ತಮ್ಮ ಚಿತ್ರದಲ್ಲಿ ಬಳಸಿಕೊಂಡರು.

ಅಚ್ಚರಿಯ ಸಂಗತಿ ಎಂದರೆ 2005ರಲ್ಲಿ ಮಂಡಿಸಲಾದ ವರದಿಯಲ್ಲಿ ಅಪರಿಚಿತ ಬಾಬಾ ಅವರೇ ಬೋಸ್ ಎನ್ನುವ ಸಂದೇಹ ಅರ್ಥವಿಲ್ಲದ್ದು ಎಂದು ಸ್ವತಃ ಮುಖರ್ಜಿ ತಳ್ಳಿ ಹಾಕಿದ್ದರು. ಹಾಗೆಯೇ ನೇತಾಜಿ ಕುರಿತ ತೈಪೆ ವಿಮಾನ ಪತನ ಸಿದ್ಧಾಂತವನ್ನೂ ಅವರೂ ಅಲ್ಲಗಳೆದಿದ್ದರು. ಹೀಗಾಗಿ ತಮ್ಮ ಖಾಸಗಿ ಹೇಳಿಕೆಯಿಂದ ಅವರಿಗೆ ಈಗ ಇರಿಸು-ಮುರಿಸು ಉಂಟಾಗಿದೆ.

ಟಿಎಸ್‌ಐ ಜೊತೆ ಮಾತನಾಡಿದ ನ್ಯಾಯಮೂರ್ತಿ ಮುಖರ್ಜಿ, “ನಾನು ನನ್ನ ತಲೆಗೇ ಚಪ್ಪಡಿ ಎಳೆದುಕೊಂಡೆ. ಆಫ್ ದ ರೆಕಾರ್ಡ್ ಮಾತನ್ನು ಹೀಗೆ ಬಳಸಿಕೊಳ್ಳುವುದು ಖಂಡಿತಾ ಅನೈತಿಕ. ಹಾಗಿದ್ದರೂ ನಾನು ಸರ್ಕಾರಕ್ಕೆ ಸಲ್ಲಿಸಿದ ವರದಿಯನ್ನೇ ಅಧಿಕೃತ ಎನ್ನುತ್ತೇನೆ. ಅದರಲ್ಲಿ ಕೆಲವು ಉದ್ದೇಶಿತ ಗುರಿಗಳಿವೆ. ಘೋಷ್‌ಗೆ ಹೇಳಿದ ಮಾತು ತಮ್ಮ ವೈಯಕ್ತಿಕ ಅನಿಸಿಕೆ" ಎನ್ನುತ್ತಾರೆ.

ಬೋಸ್ ಕುಟುಂಬದ ಸದಸ್ಯರು ಈ ಹೇಳಿಕೆಯಿಂದ ಸಿಟ್ಟಾಗಿದ್ದಾರೆ. ತೃಣಮೂಲ ಕಾಂಗ್ರೆಸ್ ಮಾಜಿ ಸಂಸದ ಮತ್ತು ನೇತಾಜಿ ಸಂಶೋಧನಾ ಬ್ಯೂರೋ ಮುಖ್ಯಸ್ಥ ಕೃಷ್ಣ ಬೋಸ್ ಅವರೂ ಮುಖರ್ಜಿ ವೈಯಕ್ತಿಕ ಅನಿಸಿಕೆಯನ್ನು ತಿರಸ್ಕರಿಸಿದ್ದಾರೆ. ಹಸ್ತಾಕ್ಷರ ತಜ್ಞರು ಸುಭಾಷ್ ಬೋಸ್ ಮತ್ತು ಗುಮ್‌ನಾಮಿ ಬಾಬಾ ಇಬ್ಬರ ಕೈಬರಹಗಳನ್ನು ಪರೀಕ್ಷಿಸಿದ ನಂತರ ಇಬ್ಬರೂ ಒಬ್ಬರೇ ಎಂಬ ಮಾತು ಸುಳ್ಳೆಂದು ಸಾಧಿಸಿದ್ದಾರೆ. ಹಾಗೆಯೇ, ಬೋಸ್ ಕುಟುಂಬದ ಐವರು ಸದಸ್ಯರ ಡಿಎನ್‌ಎ ಕೂಡಾ ಗುಮ್‌ನಾಮಿ ಬಾಬ ಡಿಎನ್‌ಎಗೆ ಸರಿಹೊಂದುತ್ತಿಲ್ಲ.

ಸಂಶೋಧಕಿ ಪೂರಬಿ ರಾಯ್ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ರಿಟನ್ ಮತ್ತು ರಷ್ಯಾಗಳ ದಾಖಲೆಗಳನ್ನು ಪರಿಶೀಲಿಸಿದ ರಾಯ್ ಅವರು ನೇತಾಜಿ ತಮ್ಮ ಕೊನೆ ದಿನಗಳನ್ನು ಸ್ಟಾಲಿನ್ ಆಡಳಿತದ ಸೈಬೀರಿಯಾ ಯಾತನಾ ಶಿಬಿರಗಳಲ್ಲಿ ಕಳೆದರು ಎಂದು ವಾದ ಮಂಡಿಸಿದ್ದರು.

ಈ ನಡುವೆ ನಿರ್ದೇಶಕ ಘೋಷ್ ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. “ಆಫ್ ದ ರೆಕಾರ್ಡ್ ಮಾತನ್ನು ಹೀಗೆ ಬಳಸಿಕೊಂಡಿರುವುದು ಅನೈತಿಕ ಇರಬಹುದು. ಆದರೆ ವಿಷಯದ ರಾಷ್ಟ್ರೀಯ ಪ್ರಾಮುಖ್ಯತೆ ಗಮನಿಸಿದರೆ ಇದನ್ನು ನ್ಯಾಯಮೂರ್ತಿಗಳ ವೈಯಕ್ತಿಕ ಅನಿಸಿಕೆ ಎಂದು ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ. ನೇತಾಜಿ ಅವರ ಕುರಿತಂತೆ ಸತ್ಯವನ್ನು ತಿಳಿಯುವ ಹಕ್ಕು ಜನರಿಗಿದೆ” ಎನ್ನುತ್ತಾರೆ ಘೋಷ್. ಅವರ ಚಿತ್ರ ಫೆಬ್ರುವರಿ 18ರಂದು ಕೋಲ್ಕತ್ತಾದಲ್ಲಿ ಪ್ರದರ್ಶನಗೊಳ್ಳಲಿದೆ.

ಟಿಎಸ್‌ಐ

ಚಂದ್ರಶೇಖರ ಭಟ್ಟಾಚಾರ್ಜಿ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .