User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
 
ಪತ್ರ ಚರಿತ್ರೆ
ಸುಬ್ರಹ್ಮಣ್ಯ ಭಾರತಿ 'ದ ಹಿಂದೂ' ಪತ್ರಿಕೆಗೆ ಬರೆದ ಪತ್ರ
 

ಧುನಿಕ ತಮಿಳು ಸಾರಸ್ವತ ಲೋಕದಲ್ಲಿ ಸಿ.ಸುಬ್ರಹ್ಮಣ್ಯ ಭಾರತಿ ಅವರದ್ದು ಖಂಡಿತವಾಗಿಯೂ ದೈತ್ಯ ಪ್ರತಿಭೆ. ಬಾಲ್ಯದಲ್ಲಿಯೇ ತೋರಿದ ಅಸಾಧಾರಣ ಕಾವ್ಯ ಪ್ರತಿಭೆಗೆ ಗೌರವಸೂಚಕವಾಗಿ 'ಭಾರತಿ' ಎಂಬ ಹೆಸರು ಸುಬ್ರಹ್ಮಣ್ಯ ಅವರಿಗೆ ಬಂದಿತ್ತು. ಮಧುರೈನಲ್ಲಿ ತಕ್ಕ ಮಟ್ಟಿಗೆ ತಮಿಳು ಕಲಿತ ಸುಬ್ರಹ್ಮಣ್ಯ ಅವರು ನಂತರ ಜಿ. ಸುಬ್ರಹ್ಮಣ್ಯ ಅಯ್ಯರ್ ಅವರ 'ಸ್ವದೇಶಮಿತ್ರನ್' ಎನ್ನುವ ರಾಷ್ಟ್ರೀಯ ತಮಿಳು ದಿನ ಪತ್ರಿಕೆಯನ್ನು ಸೇರಿದರು. 1904 ಡಿಸೆಂಬರ್ 27ರಂದು 'ದ ಹಿಂದೂ' ದಿನ ಪತ್ರಿಕೆಯ 'ಸಂಪಾದಕರಿಗೆ ಬರೆದ ಪತ್ರ' ವಿಭಾಗದಲ್ಲಿ ಈ ಪತ್ರ ಪ್ರಕಟಗೊಂಡಿತ್ತು. ಸುಬ್ರಹ್ಮಣ್ಯ ಭಾರತಿ ಅವರ 22ನೇ ವಯಸ್ಸಿನಲ್ಲಿ ಬರೆಯಲಾದ ಈ ಪತ್ರ ಅವರ ಮೊದಲ ಇಂಗ್ಲಿಷ್ ಬರವಣಿಗೆ ಎಂದರೆ ತಪ್ಪಾಗಲಿಕ್ಕಿಲ್ಲ. ಸಾಮಾಜಿಕ ಸುಧಾರಣೆ ಮತ್ತು ರಾಜಕೀಯ ಸ್ವಾತಂತ್ರ್ಯ ಕುರಿತ ಶಂಕರನ್ ನಾಯರ್ ಅಭಿಪ್ರಾಯವನ್ನು ಬೆಂಬಲಿಸಿ ಸುಬ್ರಹ್ಮಣ್ಯ ಭಾರತಿ ಈ ಪತ್ರ ಬರೆದಿದ್ದರು.

ಹಿಂದೂ ಸಂಪಾದಕರು

1904 ಡಿಸೆಂಬರ್ 27, ಮದ್ರಾಸ್

ಸೂಕ್ಷ್ಮಗ್ರಾಹಿ ಹಾಗೂ ನಿರಂಕುಶಮತಿಯಾಗಿರುವ ಶಂಕರನ್ ನಾಯರ್ ಹಿಂದೂ ಪತ್ರಿಕೆಯ ಶನಿವಾರದ ಸಂಚಿಕೆಯಲ್ಲಿ ವ್ಯಕ್ತಪಡಿಸಿದ ಸಾಮಾಜಿಕ ಸುಧಾರಣೆ ಮತ್ತು ರಾಜಕೀಯ ಪುನರುತ್ಥಾನದ ಕುರಿತ ಅಭಿಪ್ರಾಯಗಳು ಸಮಂಜಸವಾಗಿಯೇ ಇವೆ. ಆದರೆ ಅವರ ಭಾವನೆಗಳಿಗೆ ಅವರು ಬಳಸಿದ ಭಾಷೆ ಪೂರಕವಾಗಿ ಒಗ್ಗಿ ಬಂದಿಲ್ಲ ಎಂಬುದು ನನ್ನ ಅಭಿಪ್ರಾಯ. ಸಮಾನತೆ ಹಾಗೂ ಭ್ರಾತೃತ್ವದಂಥ ಉದಾತ್ತ ಕಲ್ಪನೆಗಳ ಬುನಾದಿಯ ಮೇಲೆಯೇ ಬ್ರಿಟಿಷ್ ಸರ್ಕಾರ ನಿರ್ಮಾಣವಾಗಿದೆ' ಎಂಬ ಚರ್ವಿತಚರ್ವಣ ಶಂಕರನ್ ನಾಯರ್ ಅವರಲ್ಲಿ ತಿರಸ್ಕಾರ ಮೂಡಿಸಿರಬಹುದು.

ಶಂಕರನ್ ನಾಯರ್ ಅವರ ಅಭಿಪ್ರಾಯಗಳನ್ನು, ಭಾವನೆಗಳನ್ನು ಗೌರವಿಸುತ್ತೇನೆ. ಹಾಗೆಯೇ, ಹಿಂದೂ ಧರ್ಮ ಜೀವನದ ಏಕತ್ವ' ಹಾಗೂ ಮನುಕುಲದ ಭಾತೃತ್ವ'ವನ್ನು ಎತ್ತಿ ಹಿಡಿಯುತ್ತದೆ ಎಂಬ ಹಳಸಲು ಸಿದ್ಧಾಂತದ ಕುರಿತು ಯಾವುದೇ ದಲಿತ ಪ್ರಾಮಾಣಿಕವಾಗಿ ಅಸಮಾಧಾನ ಸೂಚಿಸುತ್ತಾನೆ ಎಂದಾದರೆ ಅದನ್ನೂ ನಾನು ಗೌರವಿಸುತ್ತೇನೆ.

ಜೀವನದ ಏಕತ್ವನ್ನು ಸಾರುವ, ಮನುಕುಲದ ಭ್ರಾತೃತ್ವವನ್ನು ಕುರಿತು ನಿರರ್ಗಳವಾಗಿ ಮಾತನಾಡುವ ಬ್ರಾಹ್ಮಣ, ಬ್ರಿಟಿಷರು ಎದುರಿಗೆ ಬಂದಾಗ ಮಾತ್ರ ದೇವರನ್ನೇ ಕಂಡಂತೆ ವರ್ತಿಸುತ್ತಾನೆ, ತನ್ನ ನೆರಳೇ ಬ್ರಿಟೀಷರನ್ನು ಮೈಲಿಗೆ ಮಾಡೀತು ಎಂಬಂತೆ ದೈನೇಸಿತನ ಪ್ರದರ್ಶಿಸುತ್ತಾನೆ, ಇದು ದಲಿತರ ಆಕ್ರೋಶ.

ಬ್ರಿಟಿಷ್ ಹಾಗೂ ಭಾರತೀಯರ ನಡುವಿನ ನಿರ್ಬಂಧಗಳ ವಿರೋಧಿಸಿ ಶಂಕರನ್ ನಾಯರ್ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ನಾನೂ ಬೆಂಬಲಿಸುತ್ತೇನೆ.

ಆದರೆ ಇದ್ಯಾವುದೂ ಶಂಕರನ್ ನಾಯರ್ ಅವರ ನಿಲುವಿಗೆ ಧಕ್ಕೆ ತರುವುದಿಲ್ಲ. ಸಾಮಾಜಿಕ ಕಳಕಳಿ ಹೊಂದಿರುವ ಶಂಕರನ್ ಅವರ ಮಾತಿನ ಸಾರಾಂಶವಿಷ್ಟೇ; ರಾಷ್ಟ್ರೀಯ ಭಾವನೆಯ ಅನುಪಸ್ಥಿತಿಯಲ್ಲಿ ರಾಜಕೀಯ ವಿಮೋಚನೆ ಸಾಧ್ಯವಿಲ್ಲ. ಹಾಗೆಯೇ, ಜಾತಿ ಪದ್ಧತಿ ಜೀವಂತವಾಗಿರುವ ತನಕ ರಾಷ್ಟ್ರೀಯತೆಗೆ ಅರ್ಥವಿರುವುದಿಲ್ಲ. (ಕೆಲವು ಧೂರ್ತರಂತೂ ಜಗತ್ತಿನ ಪ್ರತಿಯೊಂದು ಧರ್ಮದಲ್ಲೂ ಜಾತಿ ವ್ಯವಸ್ಥೆ ಇದೆ ಎಂದು ನಮ್ಮ ದಮನಿತರನ್ನು ನಂಬಿಸುವುದರಲ್ಲಿಯೇ ಮಗ್ನರಾಗಿದ್ದಾರೆ). ಜಾತಿ ವ್ಯವಸ್ಥೆ ಎಂಬುದು ಎಷ್ಟು ಅದ್ಭುತವಾಗಿದೆ ಎಂದರೆ ಅದಕ್ಕೆ ದಲಿತ ಸಮುದಾಯದ ಉದಾತ್ತ ವ್ಯಕ್ತಿಯೊಬ್ಬನನ್ನು ಸಂಕುಚಿತ ಮನೋಭಾವದ ಬ್ರಾಹ್ಮಣನ ಎದುರು ಹೀನಾಯವಾಗಿಸುವ ಸಾಮರ್ಥ್ಯವಿದೆ.

ಇಂಗ್ಲೆಂಡ್ನಲ್ಲಿ ಚಪ್ಪಲಿ ಹೊಲಿಯುವವನೊಬ್ಬ ರಾಷ್ಟ್ರದ ಅಧ್ಯಕ್ಷನಾಗಬಹುದು. ಆ ಸಾಧ್ಯತೆ ಇದೆ. ಅದರ ಬಗ್ಗೆ ಯಾವ ಅನುಮಾನವೂ ಇಲ್ಲ. ಆದರೆ, ಸಂಸ್ಕೃತದಲ್ಲಿ ಅಪರಿಮಿತ ಜ್ಞಾನ ಹೊಂದಿದ, ಉದಾತ್ತ ವ್ಯಕ್ತಿತ್ವದ, ದೈವ ಭಕ್ತ ಶೂದ್ರನಿಗೆ (ಪಂಚಮನ ಮಾತು ಒತ್ತಟ್ಟಿಗಿರಲಿ) ಶೃಂಗೇರಿ ಪೀಠದ ಬಳಿ ಹೋಗುವ ಸಾಧ್ಯತೆಯಾದರೂ ಇದೆಯೇ?

ಜನ ಏಕೆ ತಿಳಿದೂ ತಿಳಿದು ಕುರುಡರಾಗುತ್ತಾರೆ? ಗುಡ್ಡ ಹಾಗೂ ಹುತ್ತದ ನಡುವಿನ ವ್ಯತ್ಯಾಸ ಅವರಿಗೇಕೆ ತಿಳಿಯುವುದಿಲ್ಲ? ಎಲ್ಲಿಯ ಗ್ರೇಟ್ ಬ್ರಿಟನ್, ಎಲ್ಲಿಯ ಭಾರತ?

ಭಾರತೀಯ ಕಾಂಗ್ರೆಸ್ನಲ್ಲಿ ಭಾರತಾಂಬೆಯ ನಿಜವಾದ ಮಕ್ಕಳು ಬೆರಳೆಣಿಕೆಯಷ್ಟಾದರೂ ಇದ್ದಾರೆ. ಅವರ ಆಶಯಗಳು ಸ್ತುತ್ಯಾರ್ಹ.

ಭಾರತ ತನ್ನ ಚಿಂತನಾಧಾಟಿಯಲ್ಲಿ ಎಲ್ಲಿಯವರೆಗೆ ಬ್ರಿಟಿಷರ ಉದಾತ್ತ ಚಿಂತನೆಗಳಾದ ಭ್ರಾತೃತ್ವ ಹಾಗೂ ಸಮಾನತೆಯನ್ನು ಅಳವಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅದು ಸಾಮ್ರಾಜ್ಯಶಾಹಿಯ ಪರಿಷತ್ತಿನೊಳಗೆ ಕಾಲಿಡಲೂ ಸಾಧ್ಯವಾಗುವುದಿಲ್ಲ. ನಮ್ಮೊಳಗಿನ ಜಾತೀಯತೆ ಎಂಬ ಕಾಳೋರಗದ ವಿಷಕ್ಕೆ ಉತ್ತಮ ಮದ್ದೆಂದರೆ ಬ್ರಿಟಿಷರ ಆ ಚಿಂತನೆಗಳೇ.

ಶಂಕರನ್ ನಾಯರ್ ಅವರ ಮಾತುಗಳನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಸಾಮಾಜಿಕ ಸುಧಾರಣೆಯಾಗದೇ ರಾಜಕೀಯ ಸುಧಾರಣೆ ಒಂದು ಕನಸೇ ಸರಿ. ಸಾಮಾಜಿಕವಾಗಿ ಗುಲಾಮರಂತೆ ಬಾಳುವವರಿಗೆ ಕೊನೆಗೂ ರಾಜಕೀಯ ಸ್ವಾತಂತ್ರ ಎಂದರೇನು ಎಂಬುದೇ ಅರಿವಾಗುವುದಿಲ್ಲ. ನಮ್ಮ ಸಾಮಾಜಿಕ ಸಮ್ಮೇಳನಗಳು ಯಶಸ್ವಿಯಾಗದೆ ಕಾಂಗ್ರೆಸ್ನ ಯಾವುದೇ ಪ್ರಯತ್ನ, ಸಮ್ಮೇಳನಗಳಿಗೆ ಅರ್ಥವಿರುವುದಿಲ್ಲ.

ಸಿ. ಸುಬ್ರಹ್ಮಣ್ಯ ಭಾರತಿ

ಮದ್ರಾಸ್ ಸೋಷಿಯಲ್ ರಿಫಾರ್ಮ್ ಅಸೋಸಿಯೇಷನ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .