|
ಮತ್ತೆ ಮೊಳೆಯಲಿ ಮಾನವೀಯತೆ
ಈಗಷ್ಟೆ ಜನಾಂಗೀಯ ಸಮರದ ನೆರಳಿನಿಂದ ಹೊರಬಂದ ಶ್ರೀಲಂಕಾದಲ್ಲಿ 'ಕಾರ್ಯಕಾರಿ ಅಧ್ಯಕ್ಷತೆ' ಪದ್ಧತಿಗೆ ಸಾಕಷ್ಟು ವಿರೋಧವಿದೆ ಎಂದು ವವುನಿಯಾದಿಂದ ವರದಿ ಮಾಡುತ್ತಾರೆ ಸೌರಭ್ ಕುಮಾರ್ ಶಾಹಿ

ಪೊನ್ನಂಬಲಂ ರಾಮನಾಥನ್ ಶ್ರೀಲಂಕಾದ ದುರಂತಮಯ ಯುದ್ಧದ ಅವಿಭಾಜ್ಯ
ಅಂಗವಾಗಿದ್ದರು . ಇದು ತುಂಬಾ ಹಿಂದಿನ ಕಥೆ.
ಆದರೆ ಅದೇ ರಾಮನಾಥನ್ ಈಗ ಶಾಂತಿದೂತನಾಗಿ ಬಿಟ್ಟಿದ್ದಾರೆ.
ನಾಲ್ಕು ವರ್ಷಗಳ ಹಿಂದೆ , ಅವರು
27ನೇ ವರ್ಷಕ್ಕೆ ಕಾಲಿಟ್ಟಿದ್ದ ಸಂದರ್ಭದಲ್ಲಿ (ಅದಾಗಲೇ
ಎಲ್ಟಿಟಿಇಯಲ್ಲಿ 10 ವರ್ಷ ಪೂರೈಸಿದ್ದರು)
ಸಣ್ಣ ಪಡೆ ಕಟ್ಟಿಕೊಂಡು ಕೊಲಂಬೊ ಹೊರವಲಯದಲ್ಲಿರುವ ರಾಜಕೀಯ ಪಕ್ಷವೊಂದರ ಕಚೇರಿಯೊಳಗೆ
ಬಾಂಬ್ ಸಿಡಿಸಿದ್ದರು. ಆ ಪಕ್ಷ ಅಂದಿನ ಸಮ್ಮಿಶ್ರ ಸರ್ಕಾರದ ಮಿತ್ರ
ಪಕ್ಷವಾಗಿತ್ತು. ಆ ಘಟನೆಯಲ್ಲಿ ಒಟ್ಟು ಎಷ್ಟು ಜನರನ್ನು
ಕೊಲ್ಲಲಾಗಿತ್ತು ಎನ್ನುವುದು ರಾಮನಾಥನ್ಗೆ ನೆನಪಿಲ್ಲ.
"ಆರು ಅಥವಾ ಎಂಟು ಎನಿಸುತ್ತದೆ. ಆದರೆ ಯಾರೂ ಉಳಿದಿಲ್ಲ
ಎನ್ನುವುದು ಮಾತ್ರ ಗ್ಯಾರಂಟಿ" ಎನ್ನುತ್ತಾರೆ ರಾಮನಾಥನ್.
ಬದುಕುಳಿದವರನ್ನು ನೇರವಾಗಿ ಗುಂಡು ಹೊಡೆದು ಕೊಲ್ಲಲಾಯಿತು, "ಹಾಗೆ
ನಾನು ಇಬ್ಬರನ್ನು ಗುಂಡಿಕ್ಕಿ ಕೊಂದೆ".
ಕೊಲಂಬೊ ಸಮೀಪದ ಪುನರ್ವಸತಿ ಶಿಬಿರವೊಂದರಲ್ಲಿ ಕುಳಿತ ರಾಮನಾಥನ್ ಗೆ
ಹಳೆಯ ದಿನಗಳನ್ನು ಮೆಲುಕುಹಾಕಲು ಸುತಾರಾಂ ಇಷ್ಟವಿಲ್ಲ. 2006ರಲ್ಲಿ
ವವುನಿಯಾ ಜಿಲ್ಲೆಯ ಹೊರಭಾಗದಲ್ಲಿ ಶರಣಾಗತರಾದ ಅವರು ತನ್ನಲ್ಲಿದ್ದ ಸಯನೈಡ್ ಮಾತ್ರೆಗಳನ್ನು
ಎಸೆದುಬಿಟ್ಟರು. ಬಂಧನಕ್ಕೊಳಗಾಗುವಾಗ ಕೈಯಲ್ಲಿರುವ ಸಯನೈಡ್ ಬಾಯಿಗೆ
ಹಾಕಿಕೊಳ್ಳುವುದು ಎಲ್ಟಿಟಿಇನ ಟ್ರೇಡ್ ಮಾರ್ಕ್!
ಈಗ ಬಡಗಿ ಕೆಲಸವನ್ನು ಕಲಿಯುತ್ತಿರುವ ರಾಮನಾಥನ್
ನಿರ್ಭಾವುಕರಾಗಿದ್ದಾರೆ . ಆದರೆ ಹಿಂದಿನ ಬದುಕಿನ ಬಗ್ಗೆ
ಹೇಳತೀರದಷ್ಟು ಪಶ್ಚಾತಾಪವಿದೆ. "ಅದರಿಂದ ಏನನ್ನೂ ಸಾಧಿಸಲು ಆಗಿಲ್ಲ"
ಎನ್ನುವ ಅವರು "ಈಗಲಾದರೂ ಅಲ್ಲಿ ಸಾಮರಸ್ಯ ನೆಲೆಸುತ್ತದೆ ಎಂಬ
ಆಶಾಭಾವನೆ ಹೊಂದಿದ್ದೇನೆ" ಎನ್ನುತ್ತಾರೆ.
ಆದರೆ ಇಂತಹ ಆಶಾಭಾವನೆ ಇಂದಿನ ಶ್ರೀಲಂಕಾದಲ್ಲಿ ಹಾದಿ ತಪ್ಪಿದಂತಿದೆ .
ಶ್ರೀಲಂಕಾ ಸೇನೆ ಎಲ್ಟಿಟಿಯನ್ನು ಸದೆಬಡಿಯಲು ತನ್ನ ಶತ್ರುಗಳ
ಬಳಿ ಇದ್ದ ಯುದ್ಧಾಸ್ತ್ರಗಳಿಗಿಂತಲೂ ಭೀಕರವಾದ ಅಸ್ತ್ರಗಳನ್ನು ಬಳಸಿತ್ತು.
ಇದೀಗ ಯುದ್ಧಾನಂತರದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅದು ನಿರತವಾಗಿದೆ.
ಮಾನವ ಹಕ್ಕುಗಳ ಉಲ್ಲಂಘನೆ ಆಪಾದನೆಯನ್ನು ಎದುರಿಸುತ್ತಿರುವ ಜೊತೆಗೇ,
ಸುಮಾರು 30 ವರ್ಷಗಳ ಸುದೀರ್ಘ ಯುದ್ಧದ ನಂತರ ತಮಿಳು
ಜನಾಂಗೀಯರಲ್ಲಿ ಉದ್ಭವಿಸಿರುವ ಅಪನಂಬಿಕೆ ಮತ್ತು ಅನಿಶ್ಚಿತತೆಯನ್ನು ಹೋಗಲಾಡಿಸುವಲ್ಲಿ ಸರ್ಕಾರ
ನಿರತವಾಗಿದೆ.
ಹೀಗಾಗಿಯೇ , ಸಾಮರಸ್ಯ
ಸ್ಥಾಪಿಸುವ ಹಾದಿಯಲ್ಲಿ ಅಧ್ಯಕ್ಷರ ಎದುರು ಬೆಟ್ಟದಷ್ಟು ಕೆಲಸಗಳಿವೆ.
ಆ ಎಲ್ಲಾ ಕೆಲಸಗಳು ಸಮರೋಪಾದಿಯಲ್ಲಿ ಜರುಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.
ಉತ್ತರದಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಅನೇಕ ತಮಿಳರು ಬದುಕಿಗಾಗಿ ಹೋರಾಟ
ನಡೆಸುತ್ತಿದ್ದಾರೆ. ಯಾರನ್ನು ನಂಬುವುದು ಎಂಬ ಗೊಂದಲದಲ್ಲಿಯೇ ಸುಮಾರು
3,00,000ದಷ್ಟು ನಿರಾಶ್ರಿತರು ಇಲ್ಲಿ ಜೀವನ ಕಳೆಯುತ್ತಾರೆ.
ಯುದ್ಧದ ಕೊನೆಯ ಘಟ್ಟದಲ್ಲಿ ಅವರು ಹೇಗೋ ಬದುಕುಳಿದರು. ಆದರೂ,
ಯುದ್ಧದ ಮೋಡ ತಿಳಿಯಾದ ನಂತರ, ಬಹುಸಂಖ್ಯಾತ ಸಿಂಹಳೀಯರು
ಮತ್ತು ತಮಿಳು ಅಲ್ಪಸಂಖ್ಯಾತರ ನಡುವಿನ ಸಾಮರಸ್ಯ ಮತ್ತು ಅವರ ಭವಿಷ್ಯದ ಬಗ್ಗೆ ಈಗ ಪ್ರಶ್ನೆಗಳು
ಉದ್ಭವಿಸಿವೆ.
" ಮೊದಲು ಶಿಬಿರದಲ್ಲಿರುವ ನಿರಾಶ್ರಿತರನ್ನು ಅವರ
ಮನೆಗೆ ಹೋಗಲು ಅನುಮತಿ ನೀಡುವ ಕೆಲಸ ಆಗಬೇಕಿದೆ. ಈ ಕೆಲಸ ಆಗದೆ,
ಸಾಮರಸ್ಯದ ಯಾವ ಯತ್ನಕ್ಕೂ ಅರ್ಥ ಬರದು. ಈಗಾಗಲೇ ಶಿಬಿರದಲ್ಲಿ
ಸುಮಾರು 10,000 ಮಂದಿಯನ್ನು ಬಂಡುಕೋರರೆಂದು ಗುರುತಿಸಲಾಗಿದ್ದು
ಅವರನ್ನು ಶಿಬಿರದಿಂದ ತೆಗೆದುಹಾಕಲಾಗಿದೆ ಎನ್ನುವುದನ್ನು ಸರ್ಕಾರ ಒತ್ತಿ ಹೇಳಿದೆ.
ಹೀಗಾಗಿ ಶಿಬಿರದ ಅಗತ್ಯವೇನು? ಜನರು ಹಿಂದಕ್ಕೆ ಮರಳಲಿ ಮತ್ತು
ಶಾಂತಿ ಪ್ರಕ್ರಿಯೆಯಲ್ಲಿ ಭಾಗವಹಿಸಲಿ" ಎನ್ನುತ್ತಾರೆ ಟಿಎಸ್ಐ
ಜೊತೆ ಮಾತನಾಡಿದ 'ನ್ಯೂ ಲೆಫ್ಟ್ ಫ್ರಂಟ್'
ನಾಯಕ ವಿಕ್ರಮಬಾಹು ಕರುಣರತ್ನೆ.
ಸರ್ಕಾರಕ್ಕೂ ಇದರ ಅರಿವಿದೆ .
ಆದ್ಯತೆಯ ಪಟ್ಟಿಯಲ್ಲಿ ಇದಕ್ಕೆ ಮೊದಲ ಪ್ರಾಶಸ್ತ್ಯವೂ ಲಭ್ಯವಾಗಿದೆ.
ಆದರೆ ಇವೆಲ್ಲವೂ ಆಮೆಗತಿಯಲ್ಲಿ ಸಾಗುತ್ತಿದೆ ಎನ್ನುವುದು ದುರಂತ.
ಉತ್ತರ ಮತ್ತು ಪೂರ್ವ ಭಾಗದ ಅಭಿವೃದ್ಧಿ, ಆ ಭಾಗವನ್ನು ಪುನರ್ ರಚಿಸುವ
ಸರ್ಕಾರದ ನೀತಿಯಲ್ಲಿ ಸ್ಪಷ್ಟತೆ ಇಲ್ಲದೆ ಇರುವುದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಿವೆ.
ಚುನಾವಣಾ ಪ್ರಕ್ರಿಯೆ ಮುಗಿದಿರುವುದರಿಂದ, ಪುನರ್ ರಚನೆಗೆ
ಮೊದಲು ಸ್ಥಳೀಯ ಸಮುದಾಯಗಳು ಮತ್ತು ರಾಜಕೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸರ್ಕಾರ
ಮುಂದಾಗಬೇಕಾಗುತ್ತದೆ. "ರಾಜಕೀಯ ನೀತಿ ಮೇಲೆ ಸೇನೆಯ ಪ್ರಭಾವ ಕಡಿಮೆ
ಮಾಡಬೇಕು; ಹಾಗೂ ಜನರ ಮೇಲಿನ ಸೇನೆಯ ನಿಯಂತ್ರಣವನ್ನು
ಕಡಿಮೆಗೊಳಿಸಬೇಕು. ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳುವ ಕೆಲಸ
ಮಾತ್ರ ಜನರಲ್ಲಿ ವಿಶ್ವಾಸ ತುಂಬಲಿದೆ" ಎನ್ನುತ್ತಾರೆ ಕೊಲಂಬೊ ನಗರದ
ರಾಜಕೀಯ ವಿಶ್ಲೇಷಕ ಕೆ. ಸರ್ವೇಶ್ವರನ್.
ಭೌಗೋಳಿಕ ಬದಲಾವಣೆಗಳು ಉತ್ತರದ ತಮಿಳು ಸ್ವರೂಪವನ್ನು ಬದಲಾಯಿಸಲಿರುವ ಸಾಧ್ಯತೆಗಳ ಕುರಿತೂ ಜನತೆಗೆ
ಮಾಹಿತಿ ನೀಡಬೇಕಿದೆ.
ಇದರ ಜೊತೆಗೆ ಜಮೀನು ವಾಪಸು ಮಾಡುವ ಕೆಲಸವೂ ಆಗಬೇಕಿದೆ .
ಶಿಬಿರದಿಂದ ಹಿಂದಕ್ಕೆ ಕಳುಹಿಸಿದ ತಮಿಳರಲ್ಲಿ ಬಹುಪಾಲು ಜನರು ಅವರ ಮನೆಗಳಿಗೆ
ಹಿಂತಿರುಗಿಯೂ ಇಲ್ಲ, ಪುನರ್ ವಸತಿ ಸೌಲಭ್ಯವೂ ಲಭಿಸಿಲ್ಲ.
ಬದಲಾಗಿ ಅವರನ್ನು ಆಯಾ ಜಿಲ್ಲೆಗಳ ತಾತ್ಕಾಲಿಕ ವಸತಿ ಕೇಂದ್ರಗಳಿಗೆ ಕಳುಹಿಸಲಾಗಿದೆ.
ಶಾಲೆಗಳು, ಸರ್ಕಾರಿ ಕಟ್ಟಡಗಳು ಅಥವಾ ಪ್ರಾರ್ಥನಾ
ಸ್ಥಳಗಳಲ್ಲಿ ಕಲ್ಪಿಸಲಾಗಿರುವ ಈ ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿ ಜೀವನೋಪಾಯಕ್ಕೆ ಯಾವ ಮಾರ್ಗವೂ
ಇಲ್ಲ. ಯುದ್ಧ ಕಾಲದಲ್ಲಿ ಈ ನಿರಾಶ್ರಿತರ ಮನೆಗಳು ಒಂದೋ ಸಂಪೂರ್ಣವಾಗಿ
ಕುಸಿದು ಬಿದ್ದಿವೆ, ಇಲ್ಲವೇ ಭಾಗಶಃ ಹಾನಿಗೊಳಗಾಗಿವೆ.
ಹೆಚ್ಚಿನ ಮನೆಗಳಲ್ಲಿ ಗೃಹ ಬಳಕೆಯ ವಸ್ತುಗಳಾವುವೂ ಉಳಿದಿಲ್ಲ.
ಬದುಕನ್ನು ಹೊಸದಾಗಿ ಆರಂಭಿಸಬೇಕಾಗಿರುವ ಈ ನಿರಾಶ್ರಿತರಿಗೆ ಸರ್ಕಾರದ ಬೆಂಬಲ ಬೇಕೇ ಬೇಕು.
ಅವರ ಕೃಷಿ ಭೂಮಿಯನ್ನು ಮರಳಿಸುವುದು ಇನ್ನೊಂದು ಪ್ರಮುಖ
ಹೆಜ್ಜೆಯಾಗಬೇಕು . ಆದರೆ ಇಲ್ಲಿ ಸಮಸ್ಯೆಗಳೂ ಅಸಂಖ್ಯಾತ.
ಕೃಷಿ ಭೂಮಿಯ ಹೆಚ್ಚಿನ ಪ್ರದೇಶದಲ್ಲಿ ಎಲ್ಟಿಟಿಇ ನೆಟ್ಟಿರುವ
ನೆಲಬಾಂಬ್ಗಳಿದ್ದು, ಅವುಗಳನ್ನು
ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವ ಕಾರ್ಯ ಆಗಬೇಕಿದೆ. ಅಲ್ಲಿಯವರೆಗೆ ಈ
ಪ್ರದೇಶಗಳಲ್ಲಿ ಕೃಷಿ ಕೆಲಸ ಕಷ್ಟದ ಮಾತೇ ಸರಿ. ಇಲ್ಲಿಯವರೆಗೆ
ನೆಲಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯ 'ಯುದ್ಧ ಭೂಮಿಯ ಪರಿಹಾರ
ಕಾರ್ಯದಂತೆ' ನಡೆದಿದೆಯೇ ವಿನಾ ಅಲ್ಲಿ, 'ಮಾನವೀಯತೆ'ಗೆ
ಸ್ಥಾನವಿರಲಿಲ್ಲ.
ಬಹುಸಂಖ್ಯಾತ ಸಿಂಹಳೀಯರು ಮತ್ತು ತಮಿಳರ ನಡುವೆ ಸ್ನೇಹದ ಸೇತುವೆ
ನಿರ್ಮಿಸುವ ಉದ್ದೇಶದಿಂದ ಶ್ರೀಲಂಕಾ ಸರ್ಕಾರ ಕೆಲವೊಂದು ಕಾರ್ಯಗಳನ್ನು ಕೈಗೊಂಡಿದೆ .
ಉದಾಹರಣೆಗೆ ಉತ್ತರ ಮತ್ತು ಪೂರ್ವ ಪ್ರದೇಶಗಳಿಗೆ ಅಕ್ಕಿ ವಿತರಣೆಯನ್ನು ಹೆಚ್ಚಿಸಲಾಗಿದೆ.
ಕೃಷಿ ಕೆಲಸ ಎಲ್ಲಿಯವರೆಗೆ ಸಾಧ್ಯವಿಲ್ಲವೋ, ಅಲ್ಲಿಯವರೆಗೆ
ಆಹಾರ ಧಾನ್ಯ ವಿತರಣೆ ಮುಂದುವರಿಯಲಿದೆ. ಅಲ್ಲದೆ,
ಸರ್ಕಾರ ಮತ್ತು ಹಣಕಾಸು ಸಂಸ್ಥೆಗಳು, ಈ ಪ್ರದೇಶಗಳ ಜನರು
ಪಡೆದಿರುವ ಸಾಲದ ಮೇಲಿನ ಬಡ್ಡಿ ಮತ್ತು ತೆರಿಗೆ ದರವನ್ನು ಕಡಿತಗೊಳಿಸಿವೆ.
ಇದು ಬಂಡವಾಳ ಹೂಡಿಕೆದಾರರನ್ನು ಉತ್ತೇಜಿಸಲಿದೆಯಲ್ಲದೆ, ಈ
ಪ್ರದೇಶಗಳ ಮೂಲಸೌಕರ್ಯ ಕ್ಷೇತ್ರದಲ್ಲಿ ಅತ್ಯಗತ್ಯ ಬದಲಾವಣೆ ತರಲಿದೆ.
ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಬಲಪಡಿಸುವುದು ಸಹ ತೀರಾ ಅಗತ್ಯದ
ಕೆಲಸ . ಭೂಮಿ ಮತ್ತು ಕೃಷಿ ಸುಧಾರಣೆ ಚಳವಳಿಯ ಸಮನ್ವಯಕಾರರಾದ
ಸರತ್ ಫೆರ್ನಾಂಡೊ ಟಿಎಸ್‌ಐ ಜೊತೆ ಮಾತನಾಡಿ, "ಯಾವುದೇ ದೇಶದಲ್ಲಿ ಜನರ
ವಿಶ್ವಾಸವೃದ್ಧಿಗಾಗಿ ಪ್ರಜಾತಾಂತ್ರಿಕ ವ್ಯವಸ್ಥೆ ಸಮರ್ಥವಾಗಿರುವುದು ತೀರಾ ಅಗತ್ಯ.
ನಮ್ಮ ದೇಶವೂ ಇದಕ್ಕೆ ಹೊರತಲ್ಲ" ಎಂದರು.
ಖಂಡಿತವಾಗಿಯೂ ಪ್ರಜಾತಾಂತ್ರಿಕ ಪ್ರಕ್ರಿಯೆಗೆ ಚಾಲನೆ ನೀಡಬೇಕಾದ ಸವಾಲಿನ ಕೆಲಸಕ್ಕೆ
ಸರ್ಕಾರ ಕೈಹಾಕಬೇಕಿದೆ. ಈ ಮೂಲಕ ಎಲ್ಲಾ ಜನರಿಗೆ ಸಮಾನ ಹಕ್ಕನ್ನು
ನೀಡಿ, ವಿವಿಧ ಜನಾಂಗಗಳ ನಡುವೆ ಇರುವ ವೈಮನಸ್ಸನ್ನು ತೊಡೆದು
ಹಾಕಬೇಕಿದೆ.
ಮಾಧ್ಯಮ ಸ್ವಾತಂತ್ರ್ಯದ ಅಗತ್ಯತೆಯೂ ಇಲ್ಲಿ ಎದ್ದುಕಾಣುತ್ತಿದೆ .
ಎರಡೂ ಬಣಗಳನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸುತ್ತಿದ್ದ ಮಾಧ್ಯಮಗಳು ಸಹ ಈ ಸಮರದ
ಬಲಿಪಶುಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಒಂದೆಡೆ
ರಾಜಪಕ್ಸೆ ರಾಜಕೀಯ ಕುಟುಂಬ ಇನ್ನೊಂದೆಡೆ ಎಲ್‌ಟಿಟಿಇಯ ಹಿಂಸಾಚಾರ,
ಬೆದರಿಕೆಗೆ ಬಲಿಯಾಗಿರುವುದರಿಂದ, ಇಲ್ಲಿನ ಮಾಧ್ಯಮ ಸ್ವಾತಂತ್ರ್ಯದ
ಸೂಚ್ಯಂಕ ಬಹಳಷ್ಟು ಇಳಿದಿದೆ.
ಆದರೆ ಈ ಬಾರಿಯ ಚುನಾವಣಾ ಪ್ರಚಾರ ಒಂದಷ್ಟು ಆಶಾಭಾವನೆಯನ್ನು
ಹುಟ್ಟುಹಾಕಿದೆ . ಈ ಹಿಂದೆ ಸದಾ ಸಮರಾಸಕ್ತರಾಗಿದ್ದ ರಾಜಕೀಯ
ಪಕ್ಷಗಳು ಈ ಬಾರಿ ಸಂಧಾನದ ಕುರಿತು ಮಾತನಾಡುತ್ತಿವೆ. ಆದರೆ
ಚುನಾವಣೆಯಲ್ಲಿ ಗೆಲ್ಲುವ ವ್ಯಕ್ತಿ ನಂತರ ತನ್ನ ಕಚೇರಿಯಲ್ಲಿ ಏನು ಮಾಡುತ್ತಾರೆ ಎಂಬುದರ ಮೇಲೆ
ರಾಜಿ ಸೂತ್ರಗಳ ಯಶಸ್ಸು ಅವಲಂಬಿಸಿದೆ. ಆದರೆ ಸದಾ
ನಿರ್ಲಕ್ಷ್ಯಕ್ಕೊಳಗಾದವರನ್ನು ಮೇಲೆತ್ತಲು ಆಗಿಬೇಕಿರುವ ಸಂವೈಧಾನಿಕ ಸುಧಾರಣೆಗಳು ಇನ್ನೂ
ಮರೀಚಿಕೆಯಾಗಿ ಇರುವಂತೆ ಕಾಣುತ್ತಿವೆ. "ಸಾಮರಸ್ಯಕ್ಕೆ ಬೇಕಿರುವುದು
ರಾಜಿ ಸೂತ್ರ. ಸಮರ್ಥ ಮತ್ತು ವಿವೇಚನಾಶೀಲ ಸರ್ಕಾರ ಮಾತ್ರ ಇದನ್ನು
ಸಾಧಿಸಬಲ್ಲುದು" ಎನ್ನುತ್ತಾರೆ ಸರ್ವೇಶ್ವರನ್.
ದಶಕಗಳ ಇತಿಹಾಸ ಇರುವ ಈ ಸಮರಕ್ಕೆ ಕಾರಣವಾದ ಸಾಮಾಜಿಕ ,
ಆರ್ಥಿಕ ಮತ್ತು ರಾಜಕೀಯ ಅಸಮಾನತೆಯನ್ನು ಹೋಗಲಾಡಿಸಬೇಕಿದೆ.
ಇದನ್ನು ಹೀಗೆಯೇ ಬಿಟ್ಟಲ್ಲಿ, ತಮಿಳರ ಶೋಷಣೆ ಮತ್ತು ನಿರಾಶೆ
ಇನ್ನೊಮ್ಮೆ ಭಯೋತ್ಪಾದನೆಯತ್ತ ಮುಖ ಮಾಡಿದರೆ ಅಚ್ಚರಿಯಿಲ್ಲ.
ಶ್ರೀಲಂಕಾದಲ್ಲಿ ಹಲವಾರು ತಿಂಗಳುಗಳಿಂದ ದುಡಿಯುತ್ತಿರುವ 'ಇಂಟರ್‌ನ್ಯಾಷನಲ್
ಕ್ರೈಸಿಸ್ ಗ್ರೂಪ್'ನ ಸಹ ಅಧ್ಯಕ್ಷರಾದ ಕ್ರಿಸ್ ಪ್ಯಾಟನ್ ಹೇಳುವಂತೆ,
"ಸಿಂಹಳೀಯರ ಹಿಡಿತದಲ್ಲಿರುವ ರಾಜಕೀಯ ಪಕ್ಷಗಳು ಪ್ರಜಾತಾಂತ್ರಿಕ ರಾಜ್ಯ ಸ್ಥಾಪನೆಗಾಗಿ
ಹೆಜ್ಜೆ ಹಾಕಬೇಕು. ಈ ದಿಸೆಯಲ್ಲಿ ತಮಿಳು ಪಕ್ಷಗಳಿಗೂ ಜವಾಬ್ದಾರಿ ಇದೆ.
ಆದರೂ, ಯಾವುದೇ ಪ್ರಜಾತಾಂತ್ರಿಕತೆಯಲ್ಲಿ ಬಹುಸಂಖ್ಯಾತರು
ಮೊದಲ ಹೆಜ್ಜೆ ಹಾಕಬೇಕು. ಕೊನೆಯದಾಗಿ,
ಪೊನ್ನಂಬಲಂ ರಾಮನಾಥನ್ ವವುನಿಯಾಕ್ಕೆ ಮರಳಿ ಯಾವುದೇ ಅಡೆತಡೆ ಇಲ್ಲದೆ ಬಡಗಿ ಕೆಲಸ ಯಶಸ್ವಿಯಾಗಿ
ಮುಂದುವರಿಸುತ್ತಾರೆಯೇ ಎನ್ನುವುದು ಕುತೂಹಲಕರ ಸಂಗತಿ. ರಾಮನಾಥನ್
ಹಿನ್ನೆಲೆ ಗಮನಿಸಿದರೆ ಅವರಿಗೆ ಶತ್ರುಗಳ ಸಂಖ್ಯೆಯೇನೂ ಕಡಿಮೆ ಇಲ್ಲ.
ಟಿಎಸ್‌ಐ
" ನಿರಾಶ್ರಿತರ ಪುನರ್ವಸತಿ ತಕ್ಷಣದ ಅಗತ್ಯ"
ರಾಜವರೋತಿಯಂ
ಸಂಪಂತನ್ ಶ್ರೀಲಂಕಾದ ಹಿರಿಯ ತಮಿಳು ರಾಜಕಾರಣಿ. ಪ್ರಸ್ತುತ ಜಾಫ್ನಾ
ತಮಿಳರೆಂದು ಕರೆಯಲಾಗುವ ಉತ್ತರ ಮತ್ತು ಪೂರ್ವ ಭಾಗದ ತಮಿಳರನ್ನು ಪ್ರತಿನಿಧಿಸುವ ತಮಿಳ್ ನ್ಯಾಷನಲ್
ಅಲಯನ್ಸ್ (ಟಿಎನ್‌ಎ)ನ ನಾಯಕರಾಗಿದ್ದಾರೆ.
ವಕೀಲರೂ ಆದ ಅವರು, ರಾಜಿ ಸೂತ್ರದ ಕುರಿತು ಟಿಎಸ್‌ಐ ಜೊತೆ
ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಸರ್ಕಾರ ಯಾವ ರೀತಿಯ ಬದಲಾವಣೆ ತರಬೇಕು ಎಂದು ನೀವು ಇಚ್ಛಿಸುತ್ತೀರಿ?
ಸರ್ಕಾರ ಎಲ್ಲರಿಗೂ ಸ್ವೀಕಾರಾರ್ಹವಾಗಿರಬೇಕು ಮತ್ತು
ಸ್ಥಿರವಾಗಿರಬೇಕು ; ಜೊತೆಗೆ ಸಮಸ್ಯೆಗಳಿಗೆ ರಾಜಕೀಯ ಪರಿಹಾರ
ಕಂಡುಕೊಳ್ಳಲು ಆಸಕ್ತಿ ತೋರಬೇಕು. ಸ್ವಾಯತ್ತತೆಯ ಬೇಡಿಕೆಯನ್ನು
ಸರ್ಕಾರ ಗಂಭೀರವಾಗಿ ಪರಿಗಣಿಸಿ ಜನರಲ್ಲಿ ವಿಶ್ವಾಸ ವೃದ್ಧಿಸುವ ಕೆಲಸವನ್ನು ಮಾಡಬೇಕು.
ಅಷ್ಟೇ ಅಲ್ಲದೆ, ಅಲ್ಪಸಂಖ್ಯಾತ ತಮಿಳರು ಮತ್ತು ಮುಸ್ಲಿಮರ
ಜೊತೆ ಅಧಿಕಾರ ಹಂಚಿಕೊಳ್ಳುವ ಮೂಲಕ ದೀರ್ಘಕಾಲೀನ ಶಾಂತಿ ಮತ್ತು ಸ್ಥಿರತೆಗೆ ಅಡಿಪಾಯ ಹಾಕಬಹುದು.
ಈ ಪ್ರಕ್ರಿಯೆಯಲ್ಲಿ ಕಾರ್ಯಕಾರಿ ಅಧ್ಯಕ್ಷತೆಯ
ಪಾತ್ರವೇನು?
ಈ ವ್ಯವಸ್ಥೆ ಒಬ್ಬ ವ್ಯಕ್ತಿಯ ಬಳಿ ಅಧಿಕಾರ ಕೇಂದ್ರೀಕರಿಸುವುದರಿಂದ
ನಾವು 'ಕಾರ್ಯಕಾರಿ ಅಧ್ಯಕ್ಷತೆ'
ಪದ್ಧತಿಯನ್ನು ವಿರೋಧಿಸುತ್ತೇವೆ. ಈ ವ್ಯವಸ್ಥೆಯಿಂದಾಗಿ ಜನರ
ಹಕ್ಕುಗಳನ್ನು ತುಳಿಯಲಾಗುತ್ತದೆ. ಹೀಗಾಗಿಯೇ ಎಲ್ಲಾ ವಿರೋಧ ಪಕ್ಷಗಳು
ಈ ಪದ್ಧತಿಯನ್ನು ತೊಡೆದು ಹಾಕುವುದರ ಪರ ನಿಂತಿವೆ.
ಸರ್ಕಾರದಿಂದ ನೀವು ಯಾವ ರೀತಿಯ ಪರಿಹಾರ ಪ್ಯಾಕೇಜ್
ಕೇಳುತ್ತಿದ್ದೀರಿ?
ನಿರಾಶ್ರಿತರ ಶಿಬಿರದಲ್ಲಿರುವ ಜನರನ್ನು ತಕ್ಷಣವೇ ಹಿಂದಿರುಗಿಸಲು
ನಾವು ಕೇಳಿಕೊಳ್ಳುತ್ತಿದ್ದೇವೆ . ಕೇವಲ ಹಿಂದುರಿಗಿಸಿದರೆ
ಸಾಲದು; ಅವರ ಜಮೀನು ಹಿಂದಿರುಗಿಸಬೇಕು ಮತ್ತು ಜೀವನೋಪಾಯ
ಕಲ್ಪಿಸಿಕೊಡಬೇಕು. ಕಟ್ಟಡ ನಿರ್ಮಾಣ,
ಮೀನುಗಾರಿಕೆ, ಕೃಷಿ ಮತ್ತು ಹೈನುಗಾರಿಕೆ ಉದ್ಯೋಗಗಳು ಇವರ ಬದುಕು
ಮತ್ತೆ ಆರಂಭಿಸಲು ಸಹಕಾರಿಯಾಗಬಲ್ಲವು. ಹಳೆ ಶಿಬಿರಗಳಲ್ಲಿರುವ
ಮುಸ್ಲಿಮರಿಗೂ ಈ ಬೇಡಿಕೆ ಅನ್ವಯವಾಗುತ್ತದೆ.
ಆದರೆ ಕೃಷಿ ಭೂಮಿ ನೆಲಬಾಂಬ್‌ಗಳಿಂದ
ಮುಕ್ತವಾಗಿಲ್ಲ ಅಲ್ಲವೇ?
ಹೌದು . ಕೃಷಿ ಜಮೀನನ್ನು
ನೆಲಬಾಂಬ್‌ಗಳಿಂದ ಮುಕ್ತಗೊಳಿಸಬೇಕೆಂದು ನಾವು ವಿನಂತಿಸುತ್ತೇವೆ.
ತಕ್ಷಣವೇ ಇಲ್ಲಿನ ಗರಿಷ್ಠ ಭದ್ರತಾ ವಲಯವನ್ನು ತೊಡೆದು ಹಾಕಿ ಸೇನೆಯನ್ನು ಹಿಂದಕ್ಕೆ ಪಡೆಯಬೇಕು.
ಟಿಎಸ್ಐ |