|
'ದ
ಸಂಡೆ ಇಂಡಿಯನ್' ಹಾಗೂ 'ಸಿ ವೋಟರ್' ಸಂಸ್ಥೆ ಜಂಟಿಯಾಗಿ ನಡೆಸಿದ ದೇಶವ್ಯಾಪಿ
ಸಮೀಕ್ಷೆಯಲ್ಲಿ ಕೆಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ಭಾರತದ ದೊಡ್ಡ
ರಾಜ್ಯಗಳ ವಿಭಾಗದಲ್ಲಿ ಅತ್ಯಂತ ದಕ್ಷ ಆಡಳಿತಾತ್ಮಕ ರಾಜ್ಯ ಗುಜರಾತ್. ನಂತರದ
ಸ್ಥಾನಗಳು ಒರಿಸ್ಸಾ ಹಾಗೂ ಬಿಹಾರ ಪಾಲಾಗಿವೆ. ಇನ್ನು ಸಣ್ಣ ರಾಜ್ಯಗಳ
ಮಟ್ಟಿಗೆ ಪ್ರಥಮ ಸ್ಥಾನವನ್ನು ಹರಿಯಾಣ ಬಾಚಿಕೊಂಡರೆ ಛತ್ತೀಸ್‌ಗಢ ಹಾಗೂ
ದೆಹಲಿ ಆ ನಂತರದ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ತಮ್ಮ ರಾಜ್ಯದ ಗಡಿಯನ್ನೂ
ಮೀರಿ ಪ್ರಭಾವ ಬೀರಿದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿಯವರದ್ದು
ಪ್ರಥಮ ಸ್ಥಾನವಾದರೆ ಶೀಲಾ ದೀಕ್ಷಿತ್ ಹಾಗೂ ನಿತೀಶ್ ಕುಮಾರ್ ಅವರದ್ದು
ಕ್ರಮವಾಗಿ ಎರಡನೆಯ ಹಾಗೂ ಮೂರನೆಯ ಸ್ಥಾನ.
ಈ ಸಮೀಕ್ಷೆಯಲ್ಲಿ ಒಂದು ಸಂಗತಿ ಸ್ಪಷ್ಟ.
ರಾಜ್ಯ ಸರ್ಕಾರಗಳನ್ನು ಹಾಗೂ ಮುಖ್ಯಮಂತ್ರಿಗಳ ದಕ್ಷತೆಯನ್ನು ಅಳೆಯುವಾಗ
ಸಾಮಾನ್ಯ ಜನತೆ ಮಾನದಂಡವನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಅವರ ಆಡಳಿತ ಕ್ರಮ
ಹಾಗೂ ಅವರು ಕೈಗೊಂಡಿರುವ ಪ್ರಾಥಮಿಕ ಅಭಿವೃದ್ಧಿಯ ಕಾರ್ಯಕ್ರಮಗಳು. ಅದೂ
ಅಲ್ಲದೇ, ಭಾರತೀಯ ಪ್ರಜಾಪ್ರಭುತ್ವದಲ್ಲಿ ಚುನಾವಣಾ ರಾಜಕಾರಣವೆನ್ನುವುದು
ಜಾತಿ, ಭಾಷೆ, ಪ್ರಾಂತವೆಂಬ ಕ್ಷುಲ್ಲಕ 'ಅಸ್ತಿತ್ವ ರಾಜಕಾರಣ'ವನ್ನೂ ಮೀರಿ
ಬೆಳೆಯುತ್ತಿರುವುದಕ್ಕೆ ಈ ಸಮೀಕ್ಷೆಯಲ್ಲಿ ಜನತೆ ನೀಡಿದ ತೀರ್ಪಿನಲ್ಲಿ
ಸಾಕಷ್ಟು ಪುರಾವೆಗಳು ದೊರೆಯುತ್ತವೆ. ರಾಜಕಾರಣಿಗಳು ಎಷ್ಟೇ 'ಗಿಮಿಕ್'
ಮಾಡಲಿ ಪ್ರಜ್ಞಾವಂತ ಮತದಾರನಿಗೆ ಕೊನೆಗೂ ಮುಖ್ಯವಾಗುವುದು, ಆಡಳಿತದ
ಚುಕ್ಕಾಣಿ ಹಿಡಿದ ಪಕ್ಷ ಹಾಗೂ ವ್ಯಕ್ತಿ ಎಷ್ಟರ ಮಟ್ಟಿಗೆ ಆರೋಗ್ಯ, ಶಿಕ್ಷಣ,
ನೈರ್ಮಲ್ಯ, ನೀರಾವರಿ, ಸಾರಿಗೆ ಕ್ಷೇತ್ರಗಳನ್ನು ಜೀವಂತವಾಗಿಟ್ಟಿದ್ದಾನೆ
ಎಂಬುದು. ಹಾಗೆಯೇ ಆತನ ಆಡಳಿತದಲ್ಲಿ ಎಷ್ಟು ಪ್ರಮಾಣದಲ್ಲಿ ಉದ್ಯೋಗ
ಸೃಷ್ಟಿಯಾಗಿದೆ, ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಕ್ರಿಯಾಶೀಲವಾಗಿದೆ,
ಭ್ರಷ್ಟಾಚಾರವನ್ನು ಎಷ್ಟರ ಮಟ್ಟಿಗೆ ಮಟ್ಟ ಹಾಕಿದ್ದಾನೆ ಎಂಬುದು ಇಂದಿನ
ಮತದಾರರ ಕಾಳಜಿಯಾಗುತ್ತಿದೆಯೇ ಹೊರತು ಆಡಳಿತದಲ್ಲಿರುವ ಪಕ್ಷ ಯಾವುದು,
ಅಧಿಕಾರದಲ್ಲಿರುವ ವ್ಯಕ್ತಿ ಯಾವ ಜಾತಿಗೆ ಸೇರಿದವನು, ಆತನ ಭಾಷೆ ಯಾವುದು
ಎಂಬುದಲ್ಲ.
ಹಾಗೆಯೇ, ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು
20 ಸಾವಿರಕ್ಕೂ ಹೆಚ್ಚಿನ ಪ್ರಜ್ಞಾವಂತ ಪ್ರಜೆಗಳ ಅಭಿಪ್ರಾಯ
ಕ್ರೋಡೀಕರಣದಲ್ಲಿ ವ್ಯಕ್ತವಾದ ಕೆಲವು ಅಂಶಗಳು ಅಧಿಕಾರದಲ್ಲಿರುವವರಿಗೆ
ಎಚ್ಚರಿಕೆ ನೀಡುವಂತಿದ್ದವು. ಇಷ್ಟು ಜನ ಮುಖ್ಯಮಂತ್ರಿಗಳಲ್ಲಿ ಯಾರೊಬ್ಬರೂ
ಶೇ.40ಕ್ಕೂ ಮೀರಿ ಅಂಕಗಳನ್ನು ಪಡೆದಿಲ್ಲ.
ಇದರರ್ಥ, ಇನ್ನಷ್ಟು ತ್ವರಿತಗತಿಯಲ್ಲಿ ಆಳುವ ವರ್ಗ ತನ್ನ ಸಾಮರ್ಥ್ಯವನ್ನು
ಸಾಬೀತುಪಡಿಸಬೇಕಿದೆ. ಮತದಾರರ ನಿರೀಕ್ಷೆಗೆ ತಕ್ಕಂತೆ ಕಾರ್ಯ
ನಿರ್ವಹಿಸಬೇಕಿದೆ. ಆಳುವ ವರ್ಗದಲ್ಲಿನ್ನು ನಿರ್ಲಿಪ್ತತೆ ಹಾಗೂ
ನಿಶ್ಚಿಂತತೆಗೆ ಜಾಗವಿಲ್ಲ.
ಮುಖ್ಯಮಂತ್ರಿಗಳ ರಾಜಕಾರಣ ಹಾಗೂ ಅವರ
ಅಧಿಕಾರದ ವ್ಯಾಪ್ತಿ ತಮ್ಮ ತಮ್ಮ ರಾಜ್ಯಕ್ಕೆ ಸೀಮಿತವಾಗಿರುತ್ತದೆಯಾದರೂ
ನರೇಂದ್ರ ಮೋದಿ, ಶೀಲಾ ದೀಕ್ಷಿತ್ ಹಾಗೂ ನಿತೀಶ್ ಕುಮಾರ್ ಅವರ ಜನಪ್ರಿಯತೆಗೆ
ಈ ಯಾವ ಗಡಿಯೂ ಇದ್ದಂತಿಲ್ಲ. ಈ ಮೂರು ಮಂದಿಯಲ್ಲಿ ನಿತೀಶ್ ಕುಮಾರ್ ಅವರ
ಸಾಧನೆ ಕೊಂಚ ಹೆಚ್ಚಿನದೇ. ಲಾಲೂ ಪ್ರಸಾದ್ ಆಳ್ವಿಕೆಯಲ್ಲಿ ತಳ ಕಚ್ಚಿದ್ದ
ಬಿಹಾರದಂಥ ರಾಜ್ಯವನ್ನು ಮೊದಲ ಬಾರಿಯ ಅಧಿಕಾರಾವಧಿಯಲ್ಲೇ ಮೇಲೆತ್ತುವುದು
ಅಷ್ಟು ಸುಲಭದ ಮಾತೇ? ಮೋದಿ ಹಾಗೂ ಶೀಲಾ ದೀಕ್ಷಿತ್ ಅವರಿಗಾದರೂ ಈ ಮುನ್ನ
ಮುಖ್ಯಮಂತ್ರಿಯಾದ ಅನುಭವವಿದೆ.
ಮೋದಿ ಅವರ ವಿಚಾರಕ್ಕೆ ಬಂದರೆ ಎಲ್ಲಾ
ಕ್ಷೇತ್ರಗಳಲ್ಲೂ ಅವರದ್ದು 'ಫಸ್ಟ್ ರ‍್ಯಾಂಕ್'! ವಿದ್ಯುತ್, ರಸ್ತೆ,
ಆರೋಗ್ಯ, ಪ್ರಾಥಮಿಕ ಶಿಕ್ಷಣ, ಸಾರಿಗೆ, ಸಂವಹನ, ಯಾವುದೇ ಕ್ಷೇತ್ರವನ್ನು
ಉದಾಹರಣೆಯಾಗಿ ತೆಗೆದುಕೊಂಡರೂ ಮೋದಿ ಅವರ ಗುಜರಾತ್ ನಿಜಕ್ಕೂ
'ಪ್ರಕಾಶಿಸುತ್ತಿದೆ'. ಹಾಗಿದ್ದೂ ಮೋದಿ ಅವರ ಅಂಕಪಟ್ಟಿ ಕೆಂಪು ಶಾಯಿಯಿಂದ
ಹೊರತಾಗಿಲ್ಲ. ಗುಜರಾತ್‌ನ ನಾಗರಿಕ ಸೇವೆ ಹಾಗೂ ಆಡಳಿತದಲ್ಲಿ
ವ್ಯಾಪಕವಾಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದರಲ್ಲಿ ಮೋದಿ ಅವರು
ತೋರಿದ ದಕ್ಷತೆ ಕುರಿತು ಕೇವಲ ಶೇ.6ರಷ್ಟು ಮತದಾರರು ಮಾತ್ರ ತೃಪ್ತಿ
ವ್ಯಕ್ತಪಡಿಸುತ್ತಾರೆ. ಕಾನೂನು ಸುವ್ಯವಸ್ಥೆ, ಸಾಮಾಜಿಕ ಹಾಗೂ ಕೋಮು
ಸೌಹಾರ್ದತೆಯಲ್ಲೂ ಮೋದಿಯವರ ಗುಜರಾತ್ ಸಾಧನೆ ಅಷ್ಟಕ್ಕಷ್ಟೇ.
ಇಲ್ಲಿ ರಮಣ್ ಸಿಂಗ್ ಅವರ ಜನಪ್ರಿಯತೆಯನ್ನು
ಗಮನಿಸಬೇಕು. ಗಾತ್ರದಲ್ಲಿ ಚಿಕ್ಕದಾದ, ಅದರಲ್ಲೂ ಮಾವೋವಾದಿಗಳ ಉಪಟಳಕ್ಕೆ
ಹೆಸರುವಾಸಿಯಾದ ಛತ್ತೀಸ್‌ಗಢದಲ್ಲಿ ರಮಣ್ ಸಿಂಗ್ ಅವರ ಸರ್ಕಾರ ಕೈಗೊಂಡಿರುವ
ಕಾರ್ಯಕ್ರಮಗಳ ಕುರಿತು ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ದೇಶದ ಐದು
ಅತ್ಯುತ್ತಮ ಚಿಕ್ಕ ರಾಜ್ಯಗಳ ವಿಭಾಗದಲ್ಲಿ ಛತ್ತೀಸ್‌ಗಢಕ್ಕೆ ಎರಡನೇ ಸ್ಥಾನ.
ಹಾಗೆಯೇ ಸಮರ್ಪಕ ಆಡಳಿತ ನೀಡಿದ
ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಒರಿಸ್ಸಾದ ನವೀನ್ ಪಟ್ನಾಯಕ್ ಎರಡನೇ
ಸ್ಥಾನದಲ್ಲಿದ್ದರೂ ಅವರ ನೇತೃತ್ವದ ರಾಜ್ಯ ಮಾತ್ರ ಆಡಳಿತದ ವಿಚಾರದಲ್ಲಿ
ದೇಶದ ಐದು ದೊಡ್ಡ ರಾಜ್ಯಗಳಲ್ಲಿ ಕೊನೆಯ ಸ್ಥಾನದಲ್ಲಿದೆ. ಅಲ್ಲಿನ ಪ್ರಜೆಗಳ
ಜೀವನ ಮಟ್ಟದಲ್ಲಂತೂ ಒರಿಸ್ಸಾ ಚಿಂತಾಜನಕ ಸ್ಥಿತಿಯಲ್ಲಿದೆ.
ಟಿಎಸ್‌ಐ
ಸಮೀಕ್ಷೆಯ ಹಾದಿ
ಇದು ರಾಜ್ಯ ಸರ್ಕಾರಗಳ ಆಡಳಿತ,
ಮುಖ್ಯಮಂತ್ರಿಗಳ ಸಾಧನೆಯ ಮಟ್ಟ ಹಾಗೂ ಸ್ಥಾನವನ್ನು ಮತದಾರರ ನಿರ್ಣಯದ
ಮೂಲಕವೇ ನಿರ್ಧರಿಸುವ ಅತ್ಯಂತ ವಿಸ್ತೃತ ಸಮೀಕ್ಷೆ. ಸಮೀಕ್ಷೆಗೆ ದೇಶದಾದ್ಯಂತ
26,432 ಮತದಾರರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಪ್ರತಿಯೊಂದು ರಾಜ್ಯ
ಹೊಂದಿರುವ ವಿಧಾನಸಭಾ ಹಾಗೂ ಲೋಕಸಭಾ ಸ್ಥಾನಗಳ ಸಂಖ್ಯೆಯ ಆಧಾರದ ಮೇಲೆ ಅಷ್ಟೇ
ಪ್ರಮಾಣದ ಮತದಾರರನ್ನು ಆರಿಸಲಾಯಿತು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ
ವಾಸಿಸುತ್ತಿರುವ ಮತದಾರರ ಶೇಕಡಾವಾರು ಸಂಖ್ಯೆಯ ಆಧಾರದ ಮೇಲೆ ಸಮೀಕ್ಷೆಗಾಗಿ
ತೆಗೆದುಕೊಳ್ಳುವ ಗ್ರಾಮೀಣ ಹಾಗೂ ನಗರದ ಮತದಾರರ ಅನುಪಾತವನ್ನು
ನಿರ್ಧರಿಸಿಕೊಳ್ಳಲಾಯಿತು. ಉದಾಹರಣೆಗೆ, ಒರಿಸ್ಸಾದಲ್ಲಿ ಆಯ್ಕೆ ಮಾಡಲಾದ ನಗರ
ಮತದಾರರ ಪ್ರಮಾಣಕ್ಕೆ ಹೋಲಿಸಿದರೆ ಹೋಲಿಸಿದರೆ ಗುಜರಾತ್‌ನಲ್ಲಿ ಆಯ್ಕೆ
ಮಾಡಲಾದ ನಗರ ಕೇಂದ್ರಿತ ಮತದಾರರ ಸಂಖ್ಯೆ ಸ್ವಲ್ಪ ಹೆಚ್ಚು. ನಮ್ಮ ಈ
ಸಮೀಕ್ಷೆಯಲ್ಲಿ ಎಲ್ಲಾ ಬಗೆಯ ಸಾಮಾಜಿಕ-ಆರ್ಥಿಕ ಸ್ತರಗಳು, ಪ್ರತಿಯೊಂದು
ಜಾತಿ ಹಾಗೂ ಧರ್ಮಗಳಿಗೂ ಪ್ರಾತಿನಿಧ್ಯ ದೊರೆಯುವಂತೆ ನೋಡಲಾಗಿದೆ.
ಸಮೀಕ್ಷೆಗೆ ಆಯ್ಕೆಯಾಗಿದ್ದ ಪ್ರತಿಯೊಬ್ಬ
'ಮತದಾರ'ನಿಗೂ ಪ್ರಶ್ನಾವಳಿ ನೀಡಲಾಗಿತ್ತು. ಅಂಥ ಮತದಾರನಿಗೆ ತಮ್ಮ ರಾಜ್ಯದ
ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಸಾಧನೆಯನ್ನು ನಿರ್ಧರಿಸಲು 'ಸಿ ವೋಟರ್' ತಂಡ
ಅವರ ಎದುರು 15 ಮಾನದಂಡಗಳನ್ನು ಇರಿಸಿತ್ತು. ಪ್ರತಿಯೊಂದು ಮಾನದಂಡಗಳ
ಕುರಿತು ಅವರಿಂದ ವ್ಯಕ್ತವಾದ ಧನಾತ್ಮಕ ಉತ್ತರಗಳನ್ನು ಕ್ರೋಡೀಕರಿಸಲಾಯಿತು.
ನಂತರ ಅದನ್ನೇ ಆಧರಿಸಿ ಒಂದು ಸರ್ಕಾರ ಅಥವಾ ಮುಖ್ಯಮಂತ್ರಿಯ ಸಾಧನೆಗಳನ್ನು
ಅಂದಾಜು ಮಾಡಲಾಯಿತು. ಇದು ಒಬ್ಬ ಮುಖ್ಯಮಂತ್ರಿಯ ಅಥವಾ ಸರ್ಕಾರದ ಸಾಧನೆ
ಕುರಿತು ಸಾಮಾನ್ಯ ಮತದಾರನೊಬ್ಬನ ಗ್ರಹಿಕೆಯ ಆಧಾರದ ಮೇಲೆ ನಡೆಸಿದ ಸಮೀಕ್ಷೆ.
ಈ ಗ್ರಹಿಕೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ವಿಶೇಷ ಎಂದರೆ,
ಅತ್ಯುತ್ತಮ ಮುಖ್ಯಮಂತ್ರಿಗಳನ್ನು ಆರಿಸಲು ಪ್ರತಿ ರಾಜ್ಯದ ಮತದಾರ ತನ್ನ
ರಾಜ್ಯದ ಮುಖ್ಯಮಂತ್ರಿಯನ್ನು ಹೊರತುಪಡಿಸಿ ಇತರರಿಗೆ ಮತ ಚಲಾಯಿಸಬೇಕೆಂಬ
ನಿಯಮ ಹಾಕಿದ್ದೆವು.
'ದ ಸಂಡೆ ಇಂಡಿಯನ್' ಪತ್ರಿಕೆ 'ಸಿ ವೋಟರ್'
ತಂಡದೊಂದಿಗೆ ಸೇರಿ ನಡೆಸಿದ ಈ ಸಮೀಕ್ಷೆ ಇಲ್ಲಿಗೇ ಕೊನೆಗೊಳ್ಳದು. ಇದೇ
ರೀತಿಯ ಸಮೀಕ್ಷೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಿ ಅದರ
ಫಲಿತಾಂಶಗಳನ್ನು ಓದುಗರೊಂದಿಗೆ ಹಂಚಿಕೊಳ್ಳಲಿದ್ದೇವೆ.
ಟಿಎಸ್‌ಐ
ನರೇಂದ್ರ ಮೋದಿ,
ಗುಜರಾತ್‌ನ ಮುಖ್ಯಮಂತ್ರಿ
"ಕೇಂದ್ರದಿಂದ
ಬೆಂಬಲ!ಹಾಗೆಂದರೇನು?"
"'ಸಿವೋಟರ್' ಸಮೀಕ್ಷೆಯಲ್ಲಿ ಅತ್ಯಂತ
ಉತ್ಕೃಷ್ಟ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾದ ಗುಜರಾತ್ ಮುಖ್ಯಮಂತ್ರಿ
ನರೇಂದ್ರ ಮೋದಿ ಜೊತೆ ಪ್ರಿಯಾಂಕ ರಾಯ್ ಮಾತುಕತೆ ನಡೆಸಿದ್ದಾರೆ.
ರಾಷ್ಟ್ರದಾದ್ಯಂತ 'ಸಿವೋಟರ್' ಸಂಸ್ಥೆ ಸುಮಾರು
20,000ಕ್ಕಿಂತಲೂ ಅಧಿಕ ಮಂದಿಯ ಅಭಿಪ್ರಾಯ ಸಂಗ್ರಹಿಸಿ ನಡೆಸಿದ
ಸಮೀಕ್ಷೆಯಲ್ಲಿ ದೊರತ ಪ್ರತಿಕ್ರೆಯೆ ಏನೆಂದರೆ; 'ಭಾರತದ ಅತ್ಯಂತ ಉತ್ತಮ
ಮುಖ್ಯಮಂತ್ರಿ ನರೇಂದ್ರ ಮೋದಿ' ಎಂಬುದು. ಉತ್ತಮ ಆಡಳಿತ ವ್ಯವಸ್ಥೆಯಲ್ಲೂ
ನಿಮ್ಮ ರಾಜ್ಯ ಮೊದಲನೇ ಸ್ಥಾನದಲ್ಲಿದೆ. ನಿಮ್ಮ ಪ್ರತಿಕ್ರಿಯೆ ಏನು?
ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಎಲ್ಲಾ ಜನರಿಗೂ
ನಾನು ಆಭಾರಿಯಾಗಿದ್ದೇನೆ; ಅವರಿಗೆ ಧನ್ಯವಾದಗಳು. ಹಾಗೆ ನೋಡಿದರೆ ಕಳೆದ ಆರು
ವರ್ಷಗಳಿಂದ ನಡೆಯುತ್ತಿರುವ ಎಲ್ಲಾ ಸಮೀಕ್ಷೆಯಲ್ಲಿ ನಾನು 'ಟಾಪ್ ಫೈವ್'ನಲ್ಲಿ
ಸ್ಥಾನ ಪಡೆದಿದ್ದೇನೆ. ಯಾವಾಗಲಾದರೂ ಜನರು ನಿಮಗೆ 'ಉತ್ಕೃಷ್ಟ' ಎಂದು
ಶಹಬ್ಬಾಸ್ ಗಿರಿ ನೀಡಿದರೆ, ಅವರು ನಮ್ಮಿಂದ ಇನ್ನಷ್ಟು ಉತ್ಕೃಷ್ಟತೆಯನ್ನು
ನಿರೀಕ್ಷಿಸುತ್ತಾರೆ ಎಂದೇ ಅರ್ಥ. ನನ್ನ ಮೇಲೆ ಜನರಿಗೆ ವಿಶ್ವಾಸವಿದೆ
ಎಂಬುದಕ್ಕೆ ನಾನು ನಿಜಕ್ಕೂ ಸಂತೋಷ ಪಡುತ್ತೇನೆ.
ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು,
'ನೀವೊಬ್ಬ ಸರ್ವಾಧಿಕಾರಿ. ಉತ್ತಮ ಆಡಳಿತಗಾರ ಅಷ್ಟೇ, ಆದರೆ ಉತ್ತಮ
ಮುಖ್ಯಮಂತ್ರಿ ಅಲ್ಲ' ಎಂದಿದ್ದಾರಲ್ಲ? "ಒಬ್ಬ ಮುಖ್ಯಮಂತ್ರಿ ಎಲ್ಲಾ
ನೆಲೆಯಲ್ಲೂ ಉತ್ತಮನಾಗಿರಬೇಕು, ಆದರೆ ಮೋದಿ ಅವರು ಗುಜರಾತ್‌ನಲ್ಲಿ ನಡೆಸಿದ
ಕೃತ್ಯಗಳನ್ನು ಯಾರೊಬ್ಬನ ಮನದಿಂದಲೂ ಅಳಿಸಲು ಸಾಧ್ಯವಿಲ್ಲ. ಹಾಗೆ ನೋಡಿದರೆ
ನಿತೀಶ್ ಅವರು ಸಮಗ್ರ ಅಭಿವೃದ್ಧಿ ಕಾರ್ಯ ನಡೆಸುತ್ತಾ ಬಂದಿದ್ದಾರೆ..."
ಎನ್ನುತ್ತಾರಲ್ಲ?
ಶೀಲಾಜಿ ಅವರು ನನ್ನನ್ನು ಒಬ್ಬ ಉತ್ತಮ
ಆಡಳಿತಗಾರ ಎಂದದ್ದಕ್ಕೆ ಧನ್ಯವಾದಗಳು. ಅವರು ನನಗಿಂತಾ ತುಂಬಾ ಹಿರಿಯರು.
ಅವರ ಮಾತುಗಳಿಗೆ ನಾನು ಹೆಚ್ಚೇನು ಪ್ರತಿಕ್ರಿಯಿಸಲು ಬಯಸುವುದಿಲ್ಲ.
'ಗುಜರಾತ್ ಗೌರವ'ದ ಬಗ್ಗೆ ನಿಮಗಿರುವಷ್ಟು
ಪ್ರೀತಿ, ಉತ್ಸಾಹ 'ರಾಷ್ಟ್ರ ಗೌರವ'ದ ಮೇಲಿಲ್ಲ ಎಂದು ಹಲವರು ಆರೋಪಿಸುತ್ತಾರೆ.
ಏನನ್ನುತ್ತೀರಿ?
ನಾನು ಕೇವಲ ಗುಜರಾತ್ ಬಗ್ಗೆ ಎಂದಿಗೂ
ಮಾತನಾಡಿಲ್ಲ. ಭಾರತದ ಅಭಿವೃದ್ಧಿಗೆ ಗುಜರಾತ್ ಪ್ರಗತಿ ಬಹುಮುಖ್ಯ ಎಂದೇ ನಾನು
ವಾದಿಸುತ್ತಾ ಬಂದಿದ್ದೇನೆ.
ಗುಜರಾತ್
ಅಭಿವೃದ್ಧಿ ಹಿಂದಿನ ರಹಸ್ಯ ಏನು? ಅಧಿಕಾರದ ಗಾದಿಯನ್ನು
ಕಾಯ್ದಿರಿಸಿಕೊಳ್ಳುವಲ್ಲಿ ಹೇಗೆ ಸಫಲರಾದಿರಿ?
ಎಲ್ಲವೂ ಸಾಧ್ಯವಾಗಿದ್ದು ಗುಜರಾತ್ ಜನತೆಯಿಂದ.
ರಾಜ್ಯದ ಜನರಿಂದ ನಿಮಗೆ ಬೆಂಬಲ ದೊರಕಿಲ್ಲ ಎಂದಾದರೆ ನೀವು ಯಾವುದೇ ರೀತಿಯ
ಕಾರ್ಯ ನಿರ್ವಹಿಸಲು ಸಾಧ್ಯವೇ ಇಲ್ಲ. ನಾನು ನನ್ನ ಜನರೊಂದಿಗೇ ಕೆಲಸ
ಮಾಡುತ್ತಿದ್ದೇನೆ ಮತ್ತು ನಾನು ಎಲ್ಲೆಲ್ಲಿಗೆ ಹೋಗುತ್ತೇನೋ ಅಲ್ಲಿಗೆ
ಅವರನ್ನೂ ಕರೆದೊಯ್ಯುತ್ತೇನೆ.
ನಿಮ್ಮನ್ನು ಭಯದ ಕರಿನೆರಳಿಗೆ ತಳ್ಳಿ, ಸವಾಲು
ಒಡ್ಡಿದ ಘಟನೆ ಯಾವುದು?
2001ರಲ್ಲಿ ಸಂಭವಿಸಿದ ಭೂಕಂಪ. ಭಾರತದ
ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಭೀಕರವಾದ ಭಾರಿ ಪ್ರಮಾಣದ ಭೂಕಂಪ ಅದು. ಆ
ದುರಂತದ ಬಳಿಕವೂ ಗುಜರಾತ್ ಶೀಘ್ರ ಚೇತರಿಕೆ ಕಂಡುಕೊಳ್ಳಲು ಸಾಧ್ಯವಾಯಿತು.
ಮೂರೇ ವರ್ಷದಲ್ಲಿ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿತ್ತು. ಆ ಪರಿಯ
ಭೂಕಂಪಗಳಿಂದ ಚೇತರಿಸಿಕೊಳ್ಳಲು ಯಾವುದೇ ದೇಶಕ್ಕೆ ಯುಗಗಳೇ ಬೇಕು ಎಂದು
ವಿಶ್ವಬ್ಯಾಂಕ್ ವರದಿ ನೀಡಿದ್ದನ್ನು ಗಮನಿಸಿದರೆ ನಮ್ಮ ಅಭಿವೃದ್ಧಿ ಯಾವ
ಮಟ್ಟದಲ್ಲಿದೆ ಎಂಬುದು ನಿಮಗೆ ಅರ್ಥವಾಗುತ್ತದೆ.
ಇಂದು ಬಿಜೆಪಿ ದಿನದಿಂದ ದಿನಕ್ಕೆ ತನ್ನ
ಸಾಮರ್ಥ್ಯ ಕಳೆದುಕೊಳ್ಳುತ್ತಿದೆ. ಹಾಗಾಗಿ ಇಡೀ ಪಕ್ಷವನ್ನು ಸಂಪೂರ್ಣವಾಗಿ
ಮತ್ತೆ ಕಟ್ಟಬೇಕಿದೆ ಎಂದು ನಿಮಗನಿಸುತ್ತದೆಯೇ?
ಲೋಕ ಸಭೆಯಲ್ಲಿ 116 ಸದಸ್ಯರು, ರಾಜ್ಯ
ಸಭೆಯಲ್ಲಿ 53 ಸದಸ್ಯರು ಮತ್ತು ಐದು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ
ಬಿಜೆಪಿ ಪಕ್ಷ ನೆಲಕಚ್ಚುತ್ತಿದೆ ಎಂದು ನೀವು ಹೇಗೆ ವಿಶ್ಲೇಷಿಸುತ್ತೀರಿ?
ನೀವು ಹೇಳಿದಂತೆ ಪಕ್ಷಕ್ಕೇನೂ ಸಮಸ್ಯೆ ಎದುರಾಗಿಲ್ಲ.
ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್
ಗಡ್ಕರಿ ಅವರು ನಿಮ್ಮನ್ನು ಮಹಾತ್ಮ ಗಾಂಧಿಗೆ ಹೋಲಿಸಿದ್ದಾರೆ...
ಇಲ್ಲ, ಅದು ಸರಿ ಅಲ್ಲ. ನನ್ನನ್ನು ಅವರು
ಎಂದಿಗೂ ಮಹಾತ್ಮ ಗಾಂಧೀಜಿ ಅವರಿಗೆ ಹೋಲಿಸಿಯೇ ಇಲ್ಲ. ನೀವು ಅವರ ಭಾಷಣವನ್ನು
ಸರಿಯಾಗಿ ಗಮನಿಸಿದರೆ, ವಾಸ್ತವದಲ್ಲಿ ಅವರು ಹೇಳಿದ್ದೇನು ಎಂಬುದು ನಿಮಗೆ
ಮನವರಿಕೆಯಾಗುತ್ತಿತ್ತು. ಮಾಹಾತ್ಮ ಗಾಂಧಿಯವರಂತೆ ಉತ್ತಮ ಕೆಲಸ ಮಾಡಲು ಮೋದಿ
ಬಯಸಿದ್ದಾರೆ ಎಂದಷ್ಟೇ ಅವರು ಹೇಳಿದ್ದರು. ಉದಾಹರಣೆಗೆ, ನಾನು ವಿವೇಕಾನಂದ
ಅವರನ್ನು ಗೌರವಿಸಿ ಅವರ ಆದರ್ಶವನ್ನು ಪರಿಪಾಲಿಸುತ್ತಿದ್ದೇನೆ ಎಂದು ಹೇಳಿದರೆ
ನನ್ನನ್ನು ವಿವೇಕಾನಂದ ಅವರಿಗೆ ಹೋಲಿಸಿಕೊಳ್ಳುತ್ತಿದ್ದೇನೆ ಎಂದರ್ಥವಲ್ಲ.
ಸುದ್ದಿಯ ಸೃಷ್ಟಿಕರ್ತರು ಸದಾ ಸುಳ್ಳು ವದಂತಿ ಹಬ್ಬಿಸಲು ಬಯಸುತ್ತಾರೆ.
ಕೆಲವು ದಿನಗಳ ಹಿಂದೆ ನೀವು ಕೇಂದ್ರ
ಸರ್ಕಾರಕ್ಕೆ ಇಟಲಿ ಭಾಷೆಯಲ್ಲಿ ಕಾಗದ ಬರೆಯುತ್ತೇನೆ ಎಂದು
ವ್ಯಂಗ್ಯವಾಡಿದ್ದಿರಿ...
ನೀವು ಆ ಭಾಷಣವನ್ನು ಖಂಡಿತಾ ಮತ್ತೊಮ್ಮೆ
ಕೇಳಬೇಕು. ಅಧಿಕಾರಕ್ಕೆ ಬಂದ ಕೇವಲ ನೂರು ದಿನಗಳೊಳಗಾಗಿ ಆಹಾರ ಉತ್ಪನ್ನಗಳ
ಬೆಲೆ ಇಳಿಸುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು.
ಆದರೆ ಅಧಿಕಾರ ಹಿಡಿದು 200 ದಿನಗಳು ಕಳೆದಿವೆ. ನಾನು ಕೇಂದ್ರ ಸರ್ಕಾರಕ್ಕೆ
ಸಾಕಷ್ಟು ಬಾರಿ ಈ ವಿಚಾರವಾಗಿ ಪತ್ರ ಬರೆದಿದ್ದೇನೆ. ಆದರೆ ಒಮ್ಮೆಯೂ
ಪ್ರತಿಕ್ರಿಯೆ ದೊರೆತಿಲ್ಲ. ಹಾಗಾಗಿ ಒಂದೋ ಅವರಿಗೆ ಬೆಲೆ ಏರಿಕೆ
ನಿಯಂತ್ರಣಕ್ಕೆ ತರಲು ಇಚ್ಛಾಶಕ್ತಿ ಕೊರತೆ ಇದೆ ಅಥವಾ ನಮ್ಮ ಭಾಷೆ ಅವರಿಗೆ
ಅರ್ಥವಾಗುತ್ತಿಲ್ಲ ಎಂದೇ ಅರ್ಥ.
ಈ ವಿಚಾರ ಹೊರತುಪಡಿಸಿ, ನಿಮಗೆ ಕೇಂದ್ರ
ಸರ್ಕಾರದಿಂದ ಬೆಂಬಲ ದೊರೆಯುತ್ತಿದೆಯೇ?
ಬೆಂಬಲ?! ಹಾಗೆಂದರೇನು? ನಮಗೆ ಮಹಾರಾಷ್ಟ್ರದ
ನಾಗಪುರದಿಂದ ಕಲ್ಲಿದ್ದಲು ಸರಬರಾಜು ಅಗತ್ಯವಿದೆ. ಅದು ಗುಜರಾತ್‌ನ
ಸನಿಹದಲ್ಲೇ ಇರುವುದರಿಂದ ಅಲ್ಲಿಂದ ಕಲ್ಲಿದ್ದಲು ದೊರಕುವುದಾದರೆ ನಮ್ಮ
ವಿದ್ಯುತ್ ದರವೂ ಕಡಿಮೆಯಾಗುತ್ತದೆ. ಆದರೆ ಅವರು ಧನ್‌ಬಾದ್‌ನಿಂದ
ಕಲ್ಲಿದ್ದಲು ತೆಗೆದುಕೊಳ್ಳಿ ಎಂದು ಸಲಹೆ ನೀಡುತ್ತಾರೆ. ದೇಶಾದ್ಯಂತ ಇಂದು
ಉಪ್ಪು ಅತ್ಯಂತ ದುಬಾರಿಯಾಗಿ ಪರಿಣಮಿಸುತ್ತಿದೆ. ಗುಜರಾತ್ ಸುಮಾರು ಏಳು
ಮಿಲಿಯನ್ ಟನ್‌ಗಳಷ್ಟು ಉಪ್ಪನ್ನು ಉತ್ಪಾದಿಸುತ್ತಿದ್ದು, ಭಾರತದ ಶೇಕಡಾ
70ರಷ್ಟು ಅಗತ್ಯತೆಯನ್ನು ನಮ್ಮ ರಾಜ್ಯವೊಂದೇ ಭರಿಸುತ್ತಿದೆ. ಆದರೆ
ಪ್ರಸ್ತುತ ನಮ್ಮಲ್ಲಿ 9 ಲಕ್ಷ ಟನ್‌ಗಳಷ್ಟು ಉಪ್ಪು ಉಪಯೋಗವಾಗದೇ ಬಿದ್ದಿದೆ.
ಏಕೆ? ಉಪ್ಪು ಸಾಗಿಸಲು ಗೂಡ್ಸ್ ರೈಲುಗಳಲ್ಲಿ ನಮಗೆ ಸ್ಥಳಾವಕಾಶ ಇಲ್ಲ. ನಾವು
ಐದು ಬೋಗಿಗಳಿಗೆ ಮನವಿ ಸಲ್ಲಿಸಿದರೆ ಸಿಕ್ಕುವುದು ಕೇವಲ ಒಂದು ಬೋಗಿ ಮಾತ್ರ!
ಇನ್ನು ಕೇಂದ್ರ ಸರ್ಕಾರ ಹುಲಿ ಸಂರಕ್ಷಣೆಗೆ ರೂ. 200 ಕೋಟಿ ಹಣ ಘೋಷಿಸುತ್ತದೆ.
ಆದರೆ ಸಿಂಹವೂ ಅವಸಾನದಲ್ಲಿದೆ ಎಂಬುದು ತಿಳಿದಿಲ್ಲವೇ? ಸಿಂಹ ಸಂತತಿ
ರಕ್ಷಣೆಗೆ ಕೇಂದ್ರ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಏಕೆ? ಸಿಂಹಗಳು
ಇರುವುದು ಗುಜರಾತ್‌ನಲ್ಲಿ ಮಾತ್ರ ಎಂಬ ಕಾರಣದಿಂದ ಸರ್ಕಾರ ಹಣ ಬಿಡುಗಡೆ
ಮಾಡಿಲ್ಲವೇ?
ಎನ್‌ಡಿಎ ಅಧಿಕಾರದಲ್ಲಿದ್ದಾಗ ನೀವು ಇಂತಹಾ
ಸಮಸ್ಯೆಗಳನ್ನು ಎದುರಿಸಿರಲಿಲ್ಲವೇ?
ಕೇವಲ ನಾವಲ್ಲ. ಯಾರೂ ಕೂಡ ಅಂದು ಈ ಪರಿಯ
ಸಮಸ್ಯೆಯನ್ನು ಎದುರಿಸಿರಲಿಲ್ಲ. ಹಾಗೆ ನೋಡಿದರೆ, ಇಂದು ದೇಶದ ಪ್ರತಿಯೊಂದು
ರಾಜ್ಯವೂ ಒಂದಲ್ಲಾ ಒಂದು ಸಮಸ್ಯೆ ಅನುಭವಿಸುತ್ತಲೇ ಇದೆ.
ಹಾಗಾದರೆ ಪ್ರಧಾನಿ ಮನಮೋಹನ್ ಸಿಂಗ್ ದೊಡ್ಡ
ಸಮಸ್ಯೆಯಾಗಿ ಪರಿಣಮಿಸಿದ್ದಾರೆ ಎನ್ನುತ್ತೀರಾ?
ಇಲ್ಲಿ ನಾನು ಯಾರನ್ನೂ ವೈಯಕ್ತಿಕವಾಗಿ
ಟೀಕಿಸಲು ಬಯಸುವುದಿಲ್ಲ. ನಾನು ಹೇಳುವುದೇನೆಂದರೆ ಪಕ್ಷ ರಾಜಕೀಯದ ಕೀಳು
ಉದ್ದೇಶದಿಂದ ಯಾರೊಬ್ಬರೂ ಒಕ್ಕೂಟ ವ್ಯವಸ್ಥೆಗೆ ಅಡ್ಡಿ ಮಾಡಬಾರದು.
ನಿಮ್ಮ ಪ್ರಕಾರ ಉತ್ತಮ ಮುಖ್ಯಮಂತ್ರಿ ಯಾರು?
ಎಲ್ಲರೂ ಉತ್ತಮ ಮುಖ್ಯಮಂತ್ರಿಗಳೇ. ಕೆಟ್ಟ
ಕೆಲಸ ಮಾಡಬೇಕೆಂಬ ಉದ್ದೇಶದಿಂದ ಯಾರೂ ಮುಖ್ಯಮಂತ್ರಿ ಹುದ್ದೆ ಬಯಸಿ
ಬರುವುದಿಲ್ಲ. ಎಲ್ಲರೂ ಅಭಿವೃದ್ಧಿಪರ ಕೆಲಸ ಮಾಡಲು ಬಯಸುತ್ತಾರೆ. ಆದರೆ
ಕೆಲವೊಮ್ಮೆ ಯಶಸ್ವಿಯಾಗುತ್ತಾರೆ, ಇನ್ನು ಕೆಲವೊಮ್ಮೆ ವಿಫಲರಾಗುತ್ತಾರೆ.
ಟಿಎಸ್‌ಐ
ನಿತೀಶ್ ಕುಮಾರ್,
ಬಿಹಾರದ ಮುಖ್ಯಮಂತ್ರಿ
'' ಅಭಿವೃದ್ಧಿಯ ಪಥಕ್ಕೆ ಮರಳಿದ
ಬಿಹಾರ"
ಟಿಎಸ್ಐ
ಜೊತೆ ಔಪಚಾರಿಕವಾಗಿ ಮಾತುಕತೆಗೆ ತೊಡಗಿದ ಬಿಹಾರದ ಮುಖ್ಯಮಂತ್ರಿ ನಿತೀಶ್
ಕುಮಾರ್ ತಮ್ಮ ಯಶಸ್ಸಿನ ಹಿಂದಿನ ಪ್ರೇರಣೆಗಳನ್ನು ಓದುಗರೊಂದಿಗೆ
ಹಂಚಿಕೊಂಡಿದ್ದಾರೆ.
ಈ ಸಾಲಿನ 'ಬ್ಯುಸಿನೆಸ್ ರಿಫಾರ್ಮರ್'
ಪುರಸ್ಕಾರಕ್ಕೆ ಭಾಜನರಾಗಿದ್ದೀರಿ. ಅಭಿನಂದನೆಗಳು.
ರಾಜ್ಯದ ಜನರೆಲ್ಲರಿಗೂ ಧನ್ಯವಾದ ಹೇಳಬೇಕು. ಆ
ಪ್ರಶಸ್ತಿ ರಾಜ್ಯದ ಜನತೆಯ ಪರಿಶ್ರಮಕ್ಕೆ ಸಂದ ಫಲ. ಲಾಲೂ ಹಾಗೂ ರಾಬ್ಡೀದೇವಿ
ಅವರ ದುರಾಡಳಿತದಲ್ಲಿ ಹಳಿ ತಪ್ಪಿದಂತಿದ್ದ ರಾಜ್ಯವನ್ನು ಮತ್ತೆ ಸರಿಯಾದ
ದಾರಿಗೆ ತರುವ ನಿಟ್ಟಿನಲ್ಲಿ ನಾನು ಮಗ್ನನಾಗಿದ್ದೇನೆ. ಅಧಿಕಾರಕ್ಕೆ ಬಂದ
ಪ್ರಾರಂಭದಲ್ಲಿ ರಾಜ್ಯದ ಜನತೆಗೆ ನಾನು ಬಿಹಾರವನ್ನು ಮರಳಿ ಅಭಿವೃದ್ಧಿಯ
ಪಥಕ್ಕೆ ತರುವುದಾಗಿ ಭರವಸೆ ನೀಡಿದ್ದೆ. ಆ ನಿಟ್ಟಿನಲ್ಲಿ ನಾವು ಸಾಕಷ್ಟು
ಸಾಧಿಸಿದ್ದೇವೆ ಕೂಡ. ಆದರೆ ನಾವೀಗ 2015ಕ್ಕೆ ಯೋಜನೆ ಹಾಕಬೇಕಿದೆ. ಮುಂದಿನ
ಐದು ವರ್ಷಗಳಲ್ಲಿ ಬಿಹಾರವನ್ನು ರಾಷ್ಟ್ರದ ಅತ್ಯಂತ ಅಭಿವೃದ್ಧಿ ಹೊಂದಿದ
ರಾಜ್ಯವನ್ನಾಗಿ ನೋಡುವ ಹಂಬಲ ನಮ್ಮದು.
ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಗಮನಾರ್ಹ
ಹೆಚ್ಚಳ ಕಂಡು ಬಂದಿದೆಯಾದರೂ ಕೆಲವು ಕ್ಷೇತ್ರಗಳು ಇನ್ನೂ
ಅಭಿವೃದ್ಧಿಯಾಗಬೇಕಿವೆ...
ಹೌದು,
ಇನ್ನೂ ಹಲವಾರು ಕ್ಷೇತ್ರಗಳು ಹಿಂದುಳಿದಿವೆ. ಅವು ಕೂಡ ನಮ್ಮ ನಿರೀಕ್ಷೆಗೆ
ತಕ್ಕಂತೆ ಅಭಿವೃದ್ಧಿ ಸಾಧಿಸಿದರೆ ನಮ್ಮ ಅಭಿವೃದ್ಧಿಯ ಸೂಚ್ಯಂಕ
ಶೇ.20ರಷ್ಟಾಗುತ್ತಿತ್ತು. ಕೃಷಿ ಹಾಗೂ ವಿದ್ಯುಚ್ಛಕ್ತಿ ಈ ಎರಡು ವಿಭಾಗಗಳ
ಸಾಧನೆ ಅಷ್ಟು ಸಮಾಧಾನಕರವಾಗಿಲ್ಲ. ಅದಕ್ಕೆ ಕಾರಣವೂ ಇದೆ. ಕೇಂದ್ರ ಸರ್ಕಾರದ
ನೀತಿಗಳಿಂದಾಗಿಯೇ ಅವು ಅಂಗವಿಕಲಗೊಂಡಿವೆ. ಕೇಂದ್ರಕ್ಕೆ ಇಚ್ಛಾಶಕ್ತಿ
ಇದ್ದಿದ್ದರೆ ಇವೆರಡೂ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ
ಸಾಧ್ಯವಾಗಬಹುದಿತ್ತು. ಆದರೆ ಕೇಂದ್ರ ಅವಕಾಶವನ್ನೇ ನೀಡಲಿಲ್ಲ. ಉಷ್ಣ
ವಿದ್ಯುತ್ ಘಟಕಕ್ಕಾಗಿ ಬಂಡವಾಳ ಹರಿದು ಬರುವ ವೇಳೆಗೆ ಸರಿಯಾಗಿ ಕೇಂದ್ರ
ಸರ್ಕಾರ ಕಲ್ಲಿದ್ದಲು ಸರಬರಾಜಿಗೆ ಅವಕಾಶ ನೀಡದೇ ಸತಾಯಿಸಿತು. ಅದೂ
ಸಾಲದೆಂಬಂತೆ ಗಂಗಾ ನದಿಯಿಂದ ನೀರನ್ನು ಬಳಸಿಕೊಳ್ಳುವನ್ನೂ ನಿಷೇಧಿಸಿತು.
ಬಕ್ಸಾರ್ ನಗರದ ಬಳಿ ಗಂಗಾ ನದಿಗೆ ಸುಮಾರು 400 ಕ್ಯೂಸೆಕ್ ನೀರು
ಸೇರ್ಪಡೆಯಾಗುತ್ತದೆ. ಮುಂದೆ ಫರಕಾ ಅಣೆಕಟ್ಟಿನಲ್ಲಿ ಸುಮಾರು 1500 ಕ್ಯೂಸೆಕ್
ನೀರಿನ ಹೆಚ್ಚಳ ಕಂಡುಬರುತ್ತದೆ. ಹೀಗೆ ಹೆಚ್ಚಾಗುವ ನೀರು ಬಿಹಾರದ ಆಸ್ತಿ.
ಆದರೆ ನಮ್ಮದೇ ಆಸ್ತಿಯನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳುವ ಅವಕಾಶವೂ
ನಮಗಿಲ್ಲ. ಹಾಗೆಯೇ, ರಾಜ್ಯದಲ್ಲಿ ಹೇರಳವಾಗಿ ದೊರೆಯುವ ಎಥೆನಾಲ್
ಉತ್ಪಾದನೆಯನ್ನೂ ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ವಿದ್ಯುತ್ ಅಭಾವ ಇದ್ದರೆ
ಉದ್ಯಮ ಸ್ಥಾಪಿಸುವುದು ಹೇಗೆ? ಡೀಸೆಲ್ ಬಳಸಿಕೊಂಡು ಕೈಗಾರಿಕೆಗಳನ್ನು
ನಡೆಸುವುದು ವೃಥಾ ಖರ್ಚಿಗೆ ದಾರಿಯಷ್ಟೇ. ಪರಿಸ್ಥಿತಿ ಹಾಗಿದ್ದಾಗ ಯಾರು ತಾನೇ
ಬಂಡವಾಳ ಹೂಡಲು ಮುಂದೆ ಬರುತ್ತಾರೆ? ಹಾಗೆಯೇ, ವಿದ್ಯುತ್ಚಾಲಿತ ನೀರಿನ
ಪಂಪುಗಳಿದ್ದರೆ ಕೃಷಿಕರಿಂದ ಇನ್ನಷ್ಟು ಹೆಚ್ಚಿನ ಸಾಧನೆಯನ್ನು,
ಉತ್ಪಾದನೆಯನ್ನು ನಿರೀಕ್ಷಿಸಬಹುದು. ಯಾವುದಕ್ಕೂ ನಮ್ಮಲ್ಲಿ ವಿದ್ಯುತ್ನ
ಅಭಾವವಿದೆ. ಮೇಲೆ ಪ್ರಸ್ತಾಪಿಸಿರುವ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಸಿರು
ನಿಶಾನೆ ತೋರಿಸಿದರೆ ಈ ಎಲ್ಲಾ ಸಮಸ್ಯೆಗಳೂ ಒಂದೇ ಏಟಿಗೆ ಪರಿಹಾರವಾಗುತ್ತವೆ.
'3 ಈಡಿಯಟ್ಸ್' ಧಾಟಿಯಲ್ಲಿ ನೀವು ಬಿಹಾರದಲ್ಲಿ
'ಎಲ್ಲವೂ ಸರಿಯಾಗಿದೆ' (ಆಲ್ ಈಸ್ ವೆಲ್ ಇನ್ ಬಿಹಾರ್) ಎಂದು ಹೇಳಿದ್ದಿರಿ...
ನಾನು ಅಧಿಕಾರಕ್ಕೆ ಬಂದ ತಕ್ಷಣ ಮಾಡಿದ ಮೊದಲ
ಕೆಲಸವೆಂದರೆ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸಿದ್ದು. ಜನರಲ್ಲಿ
ಮನೆಮಾಡಿದ್ದ ಆತಂಕ, ಭಯ ಕೆಲವೇ ದಿನಗಳಲ್ಲಿ ದೂರವಾಯಿತು.
ಸಂಜೆಯಾಗುವುದಕ್ಕಿಂತ ಮೊದಲೇ ಮನೆ ಸೇರಿಕೊಂಡು ಮುಚ್ಚಿದ ಬಾಗಿಲ ಹಿಂದೆ
ಭಯದಲ್ಲಿ ಕಾಲ ತಳ್ಳುವ ಸಂದರ್ಭ ಈಗ ಇಲ್ಲ. ಪಾಟ್ನಾ ಸೇರಿದಂತೆ ರಾಜ್ಯದ
ಎಲ್ಲೆಡೆ ಜನ ಈಗ ನಿರಾತಂಕವಾಗಿ, ನಿರ್ಭಯವಾಗಿ ಸಂಚರಿಸುತ್ತಾರೆ. ಅಭಿವೃದ್ಧಿ
ಮೇಲ್ನೋಟಕ್ಕೇ ಗೋಚರವಾಗುತ್ತಿದೆ. ವಿದೇಶಗಳಲ್ಲೂ ಬಿಹಾರದ 'ಇಮೇಜ್'
ಬದಲಾಗುತ್ತಿದೆ. ಈ ನಿಟ್ಟಿನಲ್ಲಿ ಅನಿವಾಸಿ ಭಾರತೀಯರ ಸಹಕಾರ ದೊಡ್ಡದು.
ತಮ್ಮ ಹುಟ್ಟೂರಿನಲ್ಲಿ ಜರುಗುತ್ತಿರುವ ಧನಾತ್ಮಕ ಬದಲಾವಣೆಗಳ ಕುರಿತು
ಅನಿವಾಸಿ ಭಾರತೀಯರಲ್ಲಿ ಎಲ್ಲಿಲ್ಲದ ಹೆಮ್ಮೆ.
ಟಿಎಸ್ಐ
ಬಿ.ಎಸ್.
ಯಡಿಯೂರಪ್ಪ, ಕರ್ನಾಟಕದ ಮುಖ್ಯಮಂತ್ರಿ
"ಅಲ್ಪಸಂಖ್ಯಾತರ
ಹಿತರಕ್ಷಣೆಗೆ ಸರ್ಕಾರ ಬದ್ಧ"
ಒಟ್ಟಾರೆ ಅತ್ಯುತ್ತಮ ಆಡಳಿತ ನಿರ್ವಹಣೆಗೆ
ಸಂಬಂಧಿಸಿದಂತೆ, ಸಿ-ವೋಟರ್ ಜನಮತ ಸಂಗ್ರಹಣೆಯಲ್ಲಿ ಕರ್ನಾಟಕ ದೇಶದಲ್ಲಿಯೇ
ಎರಡನೇ ಸ್ಥಾನಗಳಿಸಿದೆ. ಕರ್ನಾಟಕ ಸರ್ಕಾರದ ಮುಂದಾಳತ್ವ ವಹಿಸಿರುವ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳ
ಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿದ್ದಾರೆ. ಆ ಹಿನ್ನಲೆಯಲ್ಲಿ ಮುಖ್ಯಮಂತ್ರಿ
ಯಡಿಯೂರಪ್ಪ ಜೊತೆ ಸತೀಶ್ ಚಪ್ಪರಿಕೆ ನಡೆಸಿದ ವಿಶೇಷ ಸಂದರ್ಶನದ ಆಯ್ದ ಭಾಗ
ಇಪ್ಪತ್ತು ತಿಂಗಳ ನಿಮ್ಮ ಸರ್ಕಾರದ ಸಾಧನೆಯ
ಬಗ್ಗೆ ನಿಮ್ಮ ವೈಯಕ್ತಿಕ ಅಭಿಪ್ರಾಯ ಏನು?
ಆಡಳಿತ ನಿರ್ವಹಣೆಯ ಎಲ್ಲ ವಿಭಾಗಗಳಲ್ಲಿ ನಾವು
ಅತ್ಯುತ್ತಮ ಸಾಧನೆ ಮಾಡಿದ್ದೇವೆ ಎಂದು ನಾನು ಹೇಳುವುದಿಲ್ಲ. ಆದರೆ
ಮೂರ್ನಾಲ್ಕು ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ಸರ್ಕಾರ ಮಾಡಿರುವ
ಸಾಧನೆಯನ್ನು ದೇಶದ ಯಾವುದೇ ರಾಜ್ಯ ಸರ್ಕಾರ ಮಾಡಿಲ್ಲ ಎಂದು ನಾನು ಹೇಳಬಲ್ಲೆ.
ಮೊದಲನೇಯದಾಗಿ ನಮ್ಮ ಸರ್ಕಾರದ ಬಡವರ ಪರವಾಗಿನ ನಿಲುವಿನಿಂದ ಇಪ್ಪತ್ತು
ತಿಂಗಳ ಅವಧಿಯಲ್ಲಿ ಸುಮಾರು 10 ಲಕ್ಷ ಮಂದಿ ಹೆಚ್ಚಿನ ಉಪಯೋಗ
ಪಡೆದುಕೊಂಡಿದ್ದಾರೆ. ಇನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರಿಗೆ
ಶೇಕಡಾ 3ರಷ್ಟರ ಬಡ್ಡಿಯಲ್ಲಿ ಸಾಲ ದೊರಕುತ್ತಿರುವುದು ನಮ್ಮ ರಾಜ್ಯದಲ್ಲಿ
ಮಾತ್ರ. ಸಮಾಜ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನಾವು
ಹಾಕಿಕೊಂಡಿರುವ ಯೋಜನೆಗಳು ದೇಶಕ್ಕೇ ಮಾದರಿಯಾಗಿವೆ. ಉದಾಹರಣೆಗೆ ಎಸ್‌ಎಸ್‌ಎಲ್‌ಸಿಯಲ್ಲಿ
ಶೇಕಡಾ 70ಕ್ಕಿಂತ ಹೆಚ್ಚು ಅಂಕಗಳಿಸಿ ತೇರ್ಗಡೆ ಹೊಂದುವ ಪರಿಶಿಷ್ಟ ಜಾತಿ/
ಪಂಗಡದ ಪ್ರತಿಯೊಬ್ಬ ವಿದ್ಯಾರ್ಥಿಗೂ ನಮ್ಮ ಸರ್ಕಾರ ತಲಾ ರೂ.10,000 ಸ್ಕಾಲರ್‌ಷಿಪ್
ನೀಡಲಾರಂಭಿಸಿದೆ. ಇದು ದೇಶಕ್ಕೇ ಮಾದರಿಯಾದ ಒಂದು ಯೋಜನೆ.
ಆದರೂ, ಆಡಳಿತ ನಿರ್ವಹಣೆಗೆ ಸಂಬಂಧಿಸಿದಂತೆ
ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಅವಕಾಶ ಇದೆ ಎಂದೆನ್ನಿಸುತ್ತಿಲ್ಲವೇ?
ಮೇಲಿನ ವಿಷಯಗಳಿಗೆ ಸಂಬಂಧಿಸಿದಂತೆ ನನಗೆ
ಸಂಪೂರ್ಣ ತೃಪ್ತಿಯಿದೆ. ಇನ್ನೂ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ನಾವಿನ್ನೂ
ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡಲು ಅವಕಾಶ ಇದೆ ಎನ್ನುವುದನ್ನೂ ನಾನು
ಒಪ್ಪಿಕೊಳ್ಳುತ್ತೇನೆ. ಮುಂಬರುವ ಬಜೆಟ್‌ನಲ್ಲಿ ಅಂತಹ ಯೋಜನೆಗಳಿಗೆ ಹೆಚ್ಚಿನ
ಆದ್ಯತೆ ನೀಡುವ ತೀರ್ಮಾನ ಕೈಗೊಂಡಿದ್ದೇನೆ. ಉದಾಹರಣೆಗೆ ಇತ್ತೀಚೆಗೆ ನಾನೇ
ಉದ್ಘಾಟನೆ ಮಾಡಿದ 'ಆರೋಗ್ಯ ಶ್ರೀ' ಯೋಜನೆ ಕೂಡ ಅದರಲ್ಲಿ ಒಂದು. ಉತ್ತರ
ಕರ್ನಾಟಕದ ಐದು ಜಿಲ್ಲೆಗಳಲ್ಲಿ ಆ ಯೋಜನೆ ಜಾರಿಗೆ ಬಂದಿದೆ. ಆ ಜಿಲ್ಲೆಗಳ
ಬಡವರಲ್ಲಿನ ಅತಿ ಬಡವ ಕೂಡ ರಾಜ್ಯದ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ
1.5 ಲಕ್ಷ ರೂಪಾಯಿವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಲು ಸರ್ಕಾರ ಅವಕಾಶ
ಮಾಡಿಕೊಡಲಿದೆ.
ಆದರೂ, ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ
ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಸಂಪೂರ್ಣವಾಗಿ ಸಫಲವಾಗಿದೆ
ಎಂದೆನ್ನಿಸುತ್ತಿಲ್ಲ. ಮುಖ್ಯವಾಗಿ ರಸ್ತೆಗಳ ಸ್ಥಿತಿ-ಗತಿ ಕಂಡಾಗ...
ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ
ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯ ಸರಿಯಿರಬಹುದು. ಗ್ರಾಮೀಣ ಪ್ರದೇಶಗಳಲ್ಲಿನ
ಮೂಲಸೌಲಭ್ಯಗಳ ಅಭಿವೃದ್ಧಿ ತ್ವರಿತಗತಿಯಲ್ಲಿ ಆಗಬೇಕು ಎನ್ನುವ ಅಭಿಪ್ರಾಯ
ನನ್ನದು ಕೂಡ. ಆದರೆ, ಹೆಚ್ಚಿನೆಲ್ಲ ನಗರ ಹಾಗೂ ನಗರದ ಸುತ್ತಮುತ್ತಲಿನ
ಪ್ರದೇಶದಲ್ಲಿ ಸಾಕಷ್ಟು ಮೂಲಸೌಲಭ್ಯಗಳ ಅಭಿವೃದ್ಧಿಯಾಗಿದೆ. ಮೂಲಸೌಲಭ್ಯಗಳ
ಅಭಿವೃದ್ಧಿಗೆ ನಾವು ಸಾಕಷ್ಟು ಆದ್ಯತೆ ನೀಡಿದ್ದೇವೆ ಹಾಗೂ ಭಾರಿ
ಪ್ರಮಾಣದಲ್ಲಿ ಹಣ ವಿನಿಯೋಗಿಸುತ್ತಿದ್ದೇವೆ. ಆ ಕಾರಣದಿಂದಾಗಿಯೇ ಕರ್ನಾಟಕ
ಐಟಿ-ಬಿಟಿ ಉದ್ಯಮದಲ್ಲಿ ಮುಂಚೂಣಿಯಲ್ಲಿರುವುದು.
ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಕರ್ನಾಟಕ
ಸರ್ಕಾರ ಇತ್ತೀಚೆಗೆ ಲಕ್ಷ್ಮೀ ಮಿತ್ತಲ್ ಅವರನ್ನು ಒಳಗೊಂಡು ಹಲವಾರು
ಬಹುರಾಷ್ಟ್ರೀಯ ಕಂಪನಿಗಳ ಮಾಲೀಕರ ಜೊತೆ ಒಪ್ಪಂದ ಮಾಡಿಕೊಂಡಿದೆ. ಆ ಎಲ್ಲ
ಒಪ್ಪಂದಗಳು ನಿಜವಾಗಿಯೂ ಕಾರ್ಯರೂಪಕ್ಕೆ ಬರುತ್ತವೆಯೇ?
ಖಂಡಿತವಾಗಿ ಆ ಎಲ್ಲ ಯೋಜನೆಗಳು
ನಿರೀಕ್ಷೆಯಂತೆಯೇ ಜಾರಿಗೆ ಬರಲಿವೆ. ಜಾಗತಿಕ ಬಂಡವಾಳ ಹೂಡಿಕೆದಾರರು
ಕರ್ನಾಟಕ ಸರ್ಕಾರದ ಔದ್ಯಮಿಕ ನೀತಿಯ ಬಗ್ಗೆ ಸಂತುಷ್ಟರಾಗಿದ್ದಾರೆ. ನಮ್ಮ
ಔದ್ಯೋಗಿಕ ನೀತಿ ಬಂಡವಾಳ ಹೂಡುವವರ ಪರವಾಗಿದೆ. ಔದ್ಯೋಗೀಕರಣಕ್ಕೆ
ಸಂಬಂಧಿಸಿದಂತೆ ಇನ್ನು ಕೆಲವೇ ವರ್ಷಗಳಲ್ಲಿ ಕರ್ನಾಟಕ ದೇಶದಲ್ಲಿಯೇ
ಅಗ್ರಸ್ಥಾನಗಳಿಸಲಿದೆ.
ಆರ್ಥಿಕ ಹಿಂಜರಿತ ಆ ಎಲ್ಲ ಯೋಜನೆಗಳಿಗೆ
ಅಡ್ಡಗಾಲಾಗುವ ಸಾಧ್ಯತೆಯಿದೆಯಲ್ಲಾ?
ಹಾಗಾಗಲು ಸಾಧ್ಯವೇ ಇಲ್ಲ. ಆರ್ಥಿಕ
ಹಿಂಜರಿತದಿಂದ ಇಡೀ ಜಗತ್ತೇ ಕಂಗಾಲಾಗಿದ್ದರೂ, ನಮ್ಮ ರಾಜ್ಯದ ಐಟಿ-ಬಿಟಿ
ವಲಯದಿಂದ ಆಗುತ್ತಿರುವ ರಫ್ತಿನ ಮೇಲೆ ವ್ಯತಿರಿಕ್ತ ಪ್ರಭಾವ ಉಂಟಾಗಿಲ್ಲ.
2008-09ರ ಸಾಲಿನಲ್ಲಿ ಐಟಿ-ಬಿಟಿ ವಲಯದಿಂದ 60,000 ಕೋಟಿ ರೂಪಾಯಿ ಮೌಲ್ಯದ
ರಫ್ತಾಗಿದೆ. ಈ ಮೊತ್ತ 2009-10ರಲ್ಲಿ 75,000 ಕೋಟಿ ರೂಪಾಯಿಯಾಗಲಿದೆ.
2010-11ರಲ್ಲಿ ಈ ಮೊತ್ತ 1,00,000 ಕೋಟಿ ರೂಪಾಯಿ ಮೀರುವ ಭರವಸೆ ನಮಗಿದೆ.
ಈ ನಡುವೆ ರಾಜ್ಯ ಸರ್ಕಾರ ದೇವನಹಳ್ಳಿ ಬಳಿ 1,00,000 ಕೋಟಿ ರೂಪಾಯಿ ಬಂಡವಾಳ
ಹೂಡಿ ಐಟಿ ಪಾರ್ಕ್ ಒಂದನ್ನು ಸ್ಥಾಪಿಸಲಿದೆ. ಆ ಐಟಿ ಪಾರ್ಕ್‌ನಲ್ಲಿ ನೇರವಾಗಿ
2,00,000 ಉದ್ಯೋಗ ಸೃಷ್ಟಿ ಮಾಡುವ ಇಚ್ಛೆ ನಮ್ಮದಾಗಿದೆ. ಇನ್ನು ವಿರೋಧ
ಪಕ್ಷಗಳು ಹೇಳುವಂತೆ ನಮ್ಮ ರಾಜ್ಯದ ಆರ್ಥಿಕ ಸ್ಥಿತಿಗೆ ಯಾವುದೇ ಹಿಂಜರಿತ
ಉಂಟಾಗಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಭದ್ರವಾಗಿಯೇ ಇದೆ ಹಾಗೂ ದಿನದಿಂದ
ದಿನಕ್ಕೆ ಅದು ಉತ್ತಮಗೊಳ್ಳುತ್ತಿದೆ.
ಕರ್ನಾಟಕ ಸರ್ಕಾರ ಹಲವಾರು ರೈತಪರ
ಯೋಜನೆಗಳನ್ನು ಜಾರಿ ಮಾಡಿದ್ದರೂ, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ
ಹೆಚ್ಚುತ್ತಲೇ ಸಾಗಿದೆಯಲ್ಲಾ?
ಅದು ಸುಳ್ಳು. ನಮ್ಮ ಸರ್ಕಾರ ಬಂದ ಮೇಲೆ ನಾವು
ಹಲವಾರು ರೈತ ಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅದರ ಪರಿಣಾಮವಾಗಿ
ರೈತರ ಆತ್ಮಹತ್ಯೆಯ ಸಂಖ್ಯೆ ಗಣನೀಯವಾಗಿ ಇಳಿದಿದೆ. ನಮ್ಮಿಂದ ರೈತರ ಎಲ್ಲ
ಸಮಸ್ಯೆಗಳು ಪರಿಹಾರವಾಗಿವೆ ಎಂದು ನಾನು ಹೇಳುತ್ತಿಲ್ಲ. ಆದರೂ, ದೇಶದ ಬೇರೆ
ರಾಜ್ಯಗಳಲ್ಲಿನ ರೈತ ಸಮುದಾಯಕ್ಕೆ ಹೋಲಿಸಿದಲ್ಲಿ ನಮ್ಮ ರಾಜ್ಯದ ಅನ್ನದಾತ
ಸಾಕಷ್ಟು ಸುಖಿಯಾಗಿಯೇ ಇದ್ದಾನೆ. ರೈತರ ಸಮಸ್ಯೆಗೆ ಸಂಬಂಧಿಸಿದಂತೆ ನಾವು
ಸಾಕಷ್ಟು ಸೂಕ್ಷ್ಮವಾಗಿ ಸ್ಪಂದಿಸುತ್ತಿದ್ದೇವೆ. ರೈತರ ಸಮಸ್ಯೆಗಳು
ಕಡಿಮೆಯಾಗಬೇಕು ಎಂದಾದಲ್ಲಿ ಆತನಿಗೆ ಅತಿ ಕಡಿಮೆ ಬಡ್ಡಿಯಲ್ಲಿ ಹಾಗೂ ಅತಿ
ಸುಲಭವಾಗಿ ಸಾಲ ಸಿಗಬೇಕು. ಆ ನಿಟ್ಟಿನಲ್ಲಿ ನಾವು ಮಹತ್ತರ ಸಾಧನೆ
ಮಾಡಿದ್ದೇವೆ. ಜೊತೆಗೆ ಅವನು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ
ಸಿಗಬೇಕು. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲಿ ರೈತರ
ಬವಣೆ ನೀಗಲು ಗಂಭೀರ ಯತ್ನ ನಡೆಯಬೇಕಿದೆ. ಇಲ್ಲವಾದಲ್ಲಿ ನಮ್ಮ ದೇಶದ ಆಹಾರ
ಭದ್ರತೆಗೆ ಧಕ್ಕೆಯಾದರೂ ಅಚ್ಚರಿ ಪಡಬೇಕಾಗಿಲ್ಲ.
ರಾಜ್ಯದಲ್ಲಿ ಚರ್ಚ್ ಹಾಗೂ ಇನ್ನಿತರ
ಪ್ರಾರ್ಥನಾ ಮಂದಿರಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆಯಲ್ಲಾ?
ಇತ್ತೀಚೆಗೆ ಚರ್ಚ್‌ಗಳ ಮೇಲೆ ನಡೆದ ದಾಳಿಯ
ಹಿಂದೆ ಯಾರದೋ ಕೈವಾಡವಿದೆ. ಬಿಜೆಪಿ ಆಡಳಿತದ ಸಂದರ್ಭದಲ್ಲಿ ಎಲ್ಲವೂ
ಶಾಂತಿಯುತವಾಗಿರುವುದು ಕೆಲವರಿಗೆ ಬೇಕಿಲ್ಲ. ರಾಜ್ಯ ಅಭಿವೃದ್ಧಿಯ ಪಥದಲ್ಲಿ
ಸಾಗುತ್ತಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ನಮ್ಮ ಸರ್ಕಾರದ ಮುಖಕ್ಕೆ
ಮಸಿ ಬಳಿಯುವ ಯತ್ನಕ್ಕೆ ಕೆಲವು ಕೈಹಾಕುತ್ತಿದ್ದಾರೆ. ಅದಕ್ಕೆ ಹೇಗೆ ಕಡಿವಾಣ
ಹಾಕಬೇಕು ಎನ್ನುವುದು ನಮಗೆ ಗೊತ್ತು. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ
ಕಾಪಾಡಲು ಹಾಗೂ ಅಲ್ಪಸಂಖ್ಯಾತರ ಹಿತರಕ್ಷಣೆಗೆ ನಾವು ಬದ್ಧರಾಗಿದ್ದೇವೆ.
ಸಿ-ವೋಟರ್ ಜನಮತ ಸಂಗ್ರಹದ ಪ್ರಕಾರ
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಶೇಕಡಾ 65ರಷ್ಟು ಮಂದಿ
ಅತೃಪ್ತರಾಗಿದ್ದಾರೆ. ಈ ಬಗ್ಗೆ ನೀವು ಏನು ಹೇಳುತ್ತೀರಿ?
ಭ್ರಷ್ಟಾಚಾರ ಒಂದು ಬೆಂಬಿಡದ ಭೂತವಾಗಿ
ಬೆಳೆಯುತ್ತಿದೆ. ಗ್ರಾಮ ಪಂಚಾಯ್ತಿಯಿಂದ ವಿಧಾನಸೌಧದವರೆಗೆ ಅದು ಸರ್ಕಾರವನ್ನು
ಕಾಡಿಸುತ್ತಲೇ ಇದೆ. ಚುನಾಯಿತ ಪ್ರತಿನಿಧಿಗಳಿಂದ ಹಿಡಿದು ಸರ್ಕಾರಿ
ಅಧಿಕಾರಿಗಳವರೆಗೆ ಎಲ್ಲರೂ ಅದರಲ್ಲಿ ಭಾಗಿಯಾಗಿರುವುದು ದುರದೃಷ್ಟಕರ. ಆ
ಹಿನ್ನೆಲೆಯಲ್ಲಿ ನಾವು ಕೆಲವು ಕಠಿಣ ಕ್ರಮ ಕೈಗೊಂಡಿದ್ದೇವೆ. ಮುಖ್ಯವಾಗಿ
ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಚೆಕ್ ಮೂಲಕ ಸಂತ್ರಸ್ತರಿಗೆ ತಲುಪಿಸುವ
ಹೊಸ ಪದ್ಧತಿ ಜಾರಿಗೆ ಮಾಡಿದ್ದೇವೆ. ಇನ್ನು ಮೂಲಭೂತ ಸೌಕರ್ಯಗಳನ್ನು
ಕಲ್ಪಿಸುವಾಗ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಭ್ರಷ್ಟಾಚಾರ ವಿರೋಧಿ
ಸಮಿತಿಯೊಂದನ್ನು ಸ್ಥಾಪಿಸಿದ್ದೇವೆ. ಈ ಸಮಿತಿ ಮೂಲಭೂತ ಸೌಕರ್ಯ ಯೋಜನೆಗಳ
ಗುಣಮಟ್ಟದ ಮೇಲೆ ಕಣ್ಣಿಡಲಿದೆ. ಇನ್ನು ಲೋಕಾಯುಕ್ತರ ಆದೇಶವನ್ನು ನಾವು
ಗಂಭೀರವಾಗಿಯೇ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ
ಕೈಗೊಳ್ಳುತ್ತಿದ್ದೇವೆ.
ಪಕ್ಷದೊಳಗಿನ ಆಂತರಿಕ ಗೊಂದಲ ನಿಮ್ಮ ಕೈಯನ್ನು
ಕಟ್ಟಿಹಾಕಿಲ್ಲವೇ?
ಆರಂಭದಲ್ಲಿ ಹಾಗೂ ನಡುವೆ ಕೆಲವೊಂದು
ಸನ್ನಿವೇಶಗಳಲ್ಲಿ ಅಂತಹ ವಾತಾವರಣ ಸೃಷ್ಟಿಯಾಗಿ ನಮ್ಮ ವೇಗ ಕುಂಠಿತಗೊಂಡಿತ್ತು.
ಈಗ ಬಿಜೆಪಿ ಹೈಕಮಾಂಡ್ ಹಾಗೂ ನೂತನ ಅಧ್ಯಕ್ಷ ನಿತಿನ್ ಗಡ್ಕರಿ ಅವರು
ಎಲ್ಲವನ್ನೂ ಸ್ಪಷ್ಟ ಪಡಿಸಿದ್ದಾರೆ. ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.
ನಮ್ಮಲ್ಲಿ ಯಾವುದೇ ಆಂತರಿಕ ಗೊಂದಲ ಉಳಿದುಕೊಂಡಿಲ್ಲ. ಒಟ್ಟಾರೆ ರಾಜ್ಯವನ್ನು
ಅಭಿವೃದ್ಧಿಯ ಪಥದಲ್ಲಿ ಮುನ್ನುಗ್ಗಿಸಿಕೊಂಡು ಹೋಗಲು ನಾವೆಲ್ಲ ಒಂದಾಗಿ,
ವೇಗವಾಗಿ ಕೆಲಸ ಮಾಡುತ್ತೇವೆ. ಅದಕ್ಕೆ ಕೇಂದ್ರ ಸರ್ಕಾರ ಸೂಕ್ತ ಬೆಂಬಲ
ನೀಡಬೇಕು ಅಷ್ಟೆ. ಹೋದ ಬಾರಿಗೆ ಹೋಲಿಸಿದಲ್ಲಿ ಪ್ರಧಾನಿ ಮನಮೋಹನ್ ಸಿಂಗ್
ಅವರ ನೇತೃತ್ವದ ಈಗಿನ ಯುಪಿಎ ಸರ್ಕಾರ ನಮಗೆ ಉತ್ತಮ ಬೆಂಬಲ ನೀಡುತ್ತಿದೆ.
ಆದರೆ, ಕೇಂದ್ರ ಸರ್ಕಾರದಿಂದ ನಾವು ಇನ್ನೂ ಹೆಚ್ಚಿನದನ್ನು
ನಿರೀಕ್ಷಿಸುತ್ತಿದ್ದೇವೆ.
ಇದೇ ಅಭಿವೃದ್ಧಿಯ ಮಂತ್ರವನ್ನೇ ಆಧರಿಸಿ
ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಂಬಿಕೆ ನಿಮಗಿದೆಯೇ?
ಆ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ.
ವಿರೋಧ ಪಕ್ಷಗಳು ನಮ್ಮ ಸರ್ಕಾರದ ಸಾಧನೆಗಳನ್ನು ಮರೆಮಾಚಿ, ರಾಜ್ಯದ ಜನರನ್ನು
ಹಾದಿ ತಪ್ಪಿಸುವ ಯತ್ನ ಮಾಡುತ್ತಿವೆ. ಆದರೂ, ಜನಪರ ನಿಲುವುಗಳಿಂದ ನಾವು
ರಾಜ್ಯದ ಜನಸಾಮಾನ್ಯನ ಹೃದಯ ಗೆದ್ದಿದ್ದೇವೆ. ಅದರ ಆಧಾರದ ಮೇಲೆ ಮುಂದಿನ
ಚುನಾವಣೆಯಲ್ಲಿ ಕೂಡ ನಮ್ಮ ಗೆಲುವು ಶತಃಸಿದ್ಧ.
ಟಿಎಸ್‌ಐ
ಶೀಲಾ ದೀಕ್ಷಿತ್,
ದೆಹಲಿಯ ಮುಖ್ಯಮಂತ್ರಿ
"ದೆಹಲಿಗೆ
ವ್ಯಾಪ್ತಿ ಮೀರಿ ಬೆಳೆಯುವ ಅವಕಾಶ ಇಲ್ಲ"
ಟಿಎಸ್‌ಐ-ಸಿ ವೋಟರ್ ಸಮೀಕ್ಷೆಯಲ್ಲಿ ದ್ವಿತೀಯ
ಸ್ಥಾನದಲ್ಲಿರುವ ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಖುರ್ರಮ್
ರಾಜಾ ಜೊತೆ ಮಾತನಾಡಿದ್ದಾರೆ
ದೇಶಾದ್ಯಂತ ಟಿಎಸ್‌ಐ ನಡೆಸಿದ ಸಮೀಕ್ಷೆಯಲ್ಲಿ
ನರೇಂದ್ರ ಮೋದಿ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ನಿಮ್ಮ
ಅಭಿಪ್ರಾಯ?
ಅವರು ತುಂಬ ಒಳ್ಳೆಯ ಆಡಳಿತಗಾರ ಎಂಬುದರಲ್ಲಿ
ಎರಡು ಮಾತಿಲ್ಲ. ಆದರೆ ಅವರು ಅತ್ಯುತ್ತಮ ಮುಖ್ಯಮಂತ್ರಿ ಎಂಬುದನ್ನು ನಾನು
ಒಪ್ಪುವುದಿಲ್ಲ. ಏಕೆಂದರೆ, ಅತ್ಯುತ್ತಮ ಮುಖ್ಯಮಂತ್ರಿ
ಎನ್ನಿಸಿಕೊಳ್ಳಬೇಕಾದರೆ ಆತ ಪ್ರತಿಯೊಂದು ವಿಷಯದಲ್ಲೂ
ಉತ್ತಮನಾಗಿರಬೇಕಾಗುತ್ತದೆ. ಮೋದಿ ನಡವಳಿಕೆಯಲ್ಲಿಯೇ ಸರ್ವಾಧಿಕಾರಿಯ ಧೋರಣೆ
ಇದೆ. ಅವರು ಗುಜರಾತ್‌ನ ಜನತೆಗೆ ಸಾಮಾಜಿಕ ಹಾಗೂ ಮಾನಸಿಕವಾಗಿ ನೀಡಿದ
ಹಿಂಸೆಯನ್ನು ಕ್ಷಮಿಸಲು ಸಾಧ್ಯವಿಲ್ಲ. ನಾನು ಎರಡನೇ ಸ್ಥಾನದಲ್ಲಿದ್ದೇನೆ
ಎಂಬ ಕಾರಣಕ್ಕೆ ನಾನು ಈ ಮಾತು ಹೇಳುತ್ತಿಲ್ಲ. ಹಾಗೆ ನೋಡಿದರೆ ಬಿಹಾರದಲ್ಲಿ
ನಿತೀಶ್ ಕುಮಾರ್ ನಿಜಕ್ಕೂ ಅತ್ಯುತ್ತಮ ರೀತಿಯಲ್ಲಿ ಕೆಲಸ
ನಿರ್ವಹಿಸುತ್ತಿದ್ದಾರೆ. ಬಿಹಾರದ ಸಮಗ್ರ ಬದಲಾವಣೆಗೆ ಅವರು
ಅಳವಡಿಸಿಕೊಂಡಿರುವ ಕ್ರಮಗಳೇನಿವೆ ಅವು ನಿಜಕ್ಕೂ ವಿಸ್ಮಯ ಮೂಡಿಸುತ್ತವೆ.
ನೀವು ಎರಡನೇಯ ಅತ್ಯುತ್ತಮ ಮುಖ್ಯಮಂತ್ರಿಯಾಗಿ
ಆಯ್ಕೆಯಾಗಿದ್ದೀರಿ. ಆದರೆ ನೀವು ಪ್ರಥಮ ಸ್ಥಾನಕ್ಕೆ ಅರ್ಹ ಎನಿಸುತ್ತಿಲ್ಲವೇ?
ಅದನ್ನು ನಾನು ಹೇಗೆ ಹೇಳಲಿ? ನನಗೇನು
ದಿವ್ಯದೃಷ್ಟಿ ಇದೆಯೇ? ಬೇರೊಬ್ಬರು ನನ್ನ ಕುರಿತು ಹೇಗೆ ಭಾವಿಸುತ್ತಾರೆ
ಎಂಬುದನ್ನು ಅವರ ಮನಸ್ಸು ಹೊಕ್ಕು ಅರಿಯುವ ಸಾಮರ್ಥ್ಯ ನನಗಿಲ್ಲ. ಯಾರಿಗೆ
ಗೊತ್ತು? ಮುಂದೊಂದು ದಿನ ನಾನು ಮೂರನೇ ಸ್ಥಾನಕ್ಕೆ ಇಳಿಯಬಹುದು, ಇಲ್ಲವೇ
ಪ್ರಥಮ ಸ್ಥಾನಕ್ಕೇ ಏರಬಹುದು.
ದೆಹಲಿಯಲ್ಲಿನ ಆಡಳಿತದ ಕುರಿತು ಅಭಿಪ್ರಾಯವೇನು?
ದೆಹಲಿಗೆ ಅದರದ್ದೇ ಆದ ಒಂದು ಮಿತಿಯಿದೆ.
ಅದೇನೆಂದರೆ ನಗರದ ವ್ಯಾಪ್ತಿ. ಬೇರೆಲ್ಲಾ ನಗರಗಳು ಮನಸೋ ಇಚ್ಛೆ ಬೆಳೆಯಬಹುದು
ಆದರೆ ದೆಹಲಿಗೆ ಆ ಅವಕಾಶವಿಲ್ಲ. ಹಾಗೆಂದು ನಾವು ಕೈಕಟ್ಟಿಕೊಂಡು ಕುಳಿತಿಲ್ಲ.
ನಗರದ ಬೆಳವಣಿಗೆಗೆ ನಮ್ಮದೇ ಆದ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದೇವೆ.
ಪ್ರಸಕ್ತ ದೆಹಲಿ ಸರ್ಕಾರದಲ್ಲಿ ನಿಮ್ಮ
ಅಧಿಕಾರಾವಧಿಯ ಮೊದಲ ಎರಡು ಅವಧಿಯಲ್ಲಿದ್ದಷ್ಟು ದಕ್ಷತೆ ಈಗ ಇಲ್ಲ ಎಂಬ ಮಾತು
ಕೇಳಿ ಬರುತ್ತಿದೆ. ನಿಮ್ಮ ಅಭಿಪ್ರಾಯ?
ಮೂಲಭೂತವಾಗಿ, ಇಲ್ಲಿ ದಕ್ಷತೆ ಒಂದು
ಪ್ರಶ್ನೆಯೇ ಅಲ್ಲ. ಆಡಳಿತ ನಡೆಸುವ ಕ್ರಮವನ್ನು ಸಂಪೂರ್ಣವಾಗಿ ಅರ್ಥ
ಮಾಡಿಕೊಂಡಿರುವ ಸರ್ಕಾರ ಮೊದಲಿಗಿಂತ ಹೆಚ್ಚಿನ ದಕ್ಷತೆಯಲ್ಲಿ ಕಾರ್ಯ
ನಿರ್ವಹಿಸುತ್ತಿದೆ. ಹಾಗೆಯೇ ಜನರ ನಿರೀಕ್ಷೆ ಕೂಡ ಮೊದಲಿಗಿಂತ ಈಗ ಹೆಚ್ಚಿದೆ.
ಅದಲ್ಲದೇ, ಜನಸಾಮಾನ್ಯರಿಗೆ ನೇರವಾಗಿ ಸಂಬಂಧಿಸಿದ್ದ ವಿದ್ಯುತ್ ರೀತಿಯ
ಸಮಸ್ಯೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳಲಾಗಿದೆ. ಮೇಲಾಗಿ, ಈಗ ಸರ್ಕಾರದ
ಸಂಪೂರ್ಣ ಗಮನ ಮುಂಬರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಮೇಲೆ
ಕೇಂದ್ರೀಕೃತವಾಗಿದೆ.
ಬಿಆರ್‌ಟಿ (ಬಸ್ ರ‍್ಯಾಪಿಡ್ ಟ್ರಾನ್ಸಿಟ್)
ಕಾರಿಡಾರ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟ ಯೋಜನೆಗಳ ವಿಳಂಬದ ಕುರಿತು
ಜನರಲ್ಲಿ ಪ್ರಶ್ನೆಗಳಿವೆ...
ನಮ್ಮ ಬಿಆರ್‌ಟಿ ಕಾರಿಡಾರ್ ಯೋಜನೆ ಇತರ
ರಾಜ್ಯಗಳಿಗೆ ಮಾದರಿಯಾಗಿದೆ. ಇನ್ನು ಕಾಮನ್‌ವೆಲ್ತ್ ಕ್ರೀಡಾಕೂಟದ ಯೋಜನೆಗಳು
ಜಾರಿಯಲ್ಲಿದ್ದು ಸಕಾಲಕ್ಕೆ ಅದನ್ನು ಪೂರೈಸುತ್ತೇವೆ.
ನಿಮ್ಮ ಅವಧಿಯಲ್ಲಿ ನೀವು ಎದುರಿಸಿದ ಅತ್ಯಂತ
ಸಂಕೀರ್ಣ ಸಮಸ್ಯೆಗಳಾವುವು?
ದೆಹಲಿಯ ಮಟ್ಟಿಗೆ ಹೇಳುವುದಾದರೆ, ಇಲ್ಲಿನ
ಬಹು-ಆಡಳಿತ ಹಾಗೂ ವಲಸೆ ಸಮಸ್ಯೆಗಳು ಸದ್ಯದ ದೊಡ್ಡ ತಲೆನೋವುಗಳು.
ಟಿಎಸ್‌ಐ
ರಮೇಶ್
ಪೊಖ್ರಿಯಾಲ್ ನಿಶಾಂಕ್, ಉತ್ತರಖಂಡದ ಮುಖ್ಯಮಂತ್ರಿ
ಅಭಿವೃದ್ಧಿ
ಸಾಧಿಸಲು 'ವಿಷನ್ 2020'
ಮುಖ್ಯಮಂತ್ರಿಯಾಗಿ ಕೇವಲ ಏಳು ತಿಂಗಳಾಗಿದ್ದರೂ
ಉತ್ತರಖಂಡದ ಅಭಿವೃದ್ಧಿಯ ತಮ್ಮ ಕನಸುಗಳನ್ನೆಲ್ಲಾ ಅನಿಲ್ ಪಾಂಡೆ ಎದುರು
ಬಿಚ್ಚಿಟ್ಟಿದ್ದಾರೆ ಉತ್ತರಖಂಡದ ಮುಖ್ಯಮಂತ್ರಿ ರಮೇಶ್ ಪೊಖ್ರಿಯಾಲ್ ನಿಶಾಂಕ್
ಉತ್ತರಖಂಡದ ಅಭಿವೃದ್ಧಿಯ ಕುರಿತ ತಮ್ಮ
ಯೋಜನೆಗಳೇನಿವೆ?
ಉತ್ತರಖಂಡವನ್ನು ಸಂಪದ್ಭರಿತಗೊಳಿಸಲು,
ಅಭಿವೃದ್ಧಿಯ ಮಾದರಿ ರಾಜ್ಯವನ್ನಾಗಿಸಲು 'ವಿಷನ್ 2020' ಎಂಬ ಪರಿಕಲ್ಪನೆ
ಸಿದ್ಧಪಡಿಸಿದ್ದೇವೆ. ದೇಶದಲ್ಲಿಯೇ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯಗಳ
ಪಟ್ಟಿಯಲ್ಲಿ ಉತ್ತರಖಂಡವನ್ನು ಕಾಣುವ ಹಂಬಲ ನಮ್ಮದು. ವಿದ್ಯುತ್, ಆರೋಗ್ಯ
ತಪಾಸಣೆ, ರಸ್ತೆಗಳು, ಕುಡಿಯುವ ನೀರು, ಮುಂತಾದ ಮೂಲ ಸೌಕರ್ಯಗಳನ್ನು ರಾಜ್ಯದ
ಮೂಲೆ ಮೂಲೆಗೂ ತಲುಪಿಸುತ್ತಿದ್ದೇವೆ. ಇದು ಜನತೆಯ ಜೀವನ ಮಟ್ಟದಲ್ಲಿ
ಗಮನಾರ್ಹ ಬದಲಾವಣೆ ತರುವುದು ಖಚಿತ. ಇದರೊಂದಿಗೆ ನಮ್ಮ ರಾಜ್ಯ ಜಗತ್ತಿನ
ಆಧ್ಯಾತ್ಮಿಕ ರಾಜ್ಯಧಾನಿಯಾಗಿ ಹೊರಹೊಮ್ಮಿದೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ
ನಮಗೆ ಬಂಡವಾಳ ಹೂಡಿಕೆ ಕಷ್ಟವಾಗಿಲಿಕ್ಕಿಲ್ಲ. ದೇಶ ವಿದೇಶದ ಹೂಡಿಕೆದಾರರಿಗೆ
ಆಹ್ವಾನಿಸುತ್ತಿದ್ದೇವೆ.
ನಿಮ್ಮ 'ವಾಟರ್ ಅಂಡ್ ಯೂತ್ ಆಫ್ ದ ಹಿಲ್ಸ್'
ಯೋಜನೆಯನ್ನು ವಿಸ್ತರಿಸಿ.
ಜಲ ವಿದ್ಯುತ್ ಯೋಜನೆಯ ಮೂಲಕ ಕನಿಷ್ಠ 40
ಸಾವಿರ ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸುವ ಸಾಮರ್ಥ್ಯ ರಾಜ್ಯಕ್ಕಿದೆ.
ಆದ್ದರಿಂದ ಇನ್ನಷ್ಟು ಜಲವಿದ್ಯುತ್ ಘಟಕಗಳನ್ನು ಪ್ರಾರಂಭಿಸುವ ಕುರಿತು
ಚಿಂತನೆ ನಡೆಸುತ್ತಿದ್ದೇವೆ. ಇದರಿಂದ ರಾಜ್ಯದ ವಿದ್ಯುತ್ ಅಭಾವ
ನೀಗುವುದಲ್ಲದೇ ಹೆಚ್ಚುವರಿ ವಿದ್ಯುತ್ ಅನ್ನು ಬೇರೆ ರಾಜ್ಯಕ್ಕೆ ಮಾರಾಟ
ಮಾಡುವುದರಿಂದ ರಾಜ್ಯದ ಬೊಕ್ಕಸಕ್ಕೂ ಲಾಭವಾಗುತ್ತದೆ. ಜೊತೆಗೆ ಉದ್ಯೋಗಗಳೂ
ಸೃಷ್ಟಿಯಾಗುತ್ತವೆ. ಸ್ಥಳೀಯ ಪ್ರತಿಭೆಗಳಿಗೆ ಮನ್ನಣೆ ನೀಡಬೇಕು ಎಂಬ
ಕಾರಣಕ್ಕೆ ಜಲವಿದ್ಯುತ್ ಸ್ಥಾವರಗಳಲ್ಲಿ ಸ್ಥಳೀಯ ಯುವಕರಿಗೆ ನೌಕರಿ
ನೀಡುತ್ತಿದ್ದೇವೆ.
ಆದರೆ ಇದ್ಯಾವುದೂ ವಲಸೆಯನ್ನು
ತಡೆಗಟ್ಟುವುದರಲ್ಲಿ ಯಶಸ್ವಿಯಾಗಿಲ್ಲ ಏಕೆ?
ಇಲ್ಲ, ವಲಸೆಯ ಪ್ರಮಾಣದಲ್ಲಿ ಇತ್ತೀಚೆಗೆ
ಗಮನಾರ್ಹ ಇಳಿಕೆ ಕಂಡುಬಂದಿದೆ. ಒಂದು ರಾಷ್ಟ್ರದ ಬೆಳವಣಿಗೆಗೆ ಅಲ್ಲಿನ ಮಾನವ
ಸಂಪನ್ಮೂಲ ಎಷ್ಟರ ಮಟ್ಟಿಗೆ ಅನಿವಾರ್ಯ ಎಂಬ ಅರಿವು ನಮಗಿದೆ. ಆದ್ದರಿಂದ,
ಇಲ್ಲಿಯೇ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಿ ಪ್ರತಿಭಾ ಪಲಾಯನಕ್ಕೆ ತಡೆ
ಹಾಕುವ ನಿಟ್ಟಿನಲ್ಲಿ ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ. ಕೈಗಾರೀಕರಣ
ಇದಕ್ಕೆ ಸೂಕ್ತ ಮದ್ದು ಎಂಬುದೂ ನಮಗೆ ಗೊತ್ತು.
ಆರೋಗ್ಯ ಕ್ಷೇತ್ರದ ಸ್ಥಿತಿ ಹೇಗಿದೆ? ಚಿಕ್ಕ
ಪುಟ್ಟ ಹಳ್ಳಿಗಳಿಗೆ ಸಂಪರ್ಕ ಕಷ್ಟ ಸಾಧ್ಯ ಹಾಗೆಯೇ ಅಂಥ ಹಳ್ಳಿಗಳಿಗೆ
ಮೂಲಭೂತ ಸೌಕರ್ಯಗಳೂ ಇಲ್ಲ.
ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ
ಕುಟುಂಬಗಳಿಗೆ ರಾಜ್ಯ ಸರ್ಕಾರ ನಡೆಸುತ್ತಿರುವ ಆಸ್ಪತ್ರೆಗಳಲ್ಲಿ ಉಚಿತ
ಚಿಕಿತ್ಸೆ ದೊರೆಯುತ್ತದೆ. ಗುಡ್ಡಗಾಡು ಪ್ರದೇಶಗಳ ಜನತೆಯ ಸಮಸ್ಯೆಗಳನ್ನು
ಗಮನದಲ್ಲಿಟ್ಟುಕೊಂಡೇ 'ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಉಚಿತ ಆರೋಗ್ಯ
ತಪಾಸಣೆ' ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದು ರಾಜ್ಯದ 90 ಕೇಂದ್ರಗಳಲ್ಲಿ
ಕ್ರಿಯಾಶೀಲವಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಉಚಿತ ಅಂಬುಲೆನ್ಸ್
ವ್ಯವಸ್ಥೆಯನ್ನೂ ಮಾಡಲಾಗಿದೆ. ಅತ್ಯಗತ್ಯ ಉಪಕರಣಗಳನ್ನೆಲ್ಲಾ ಹೊಂದಿರುವ ಈ
ಅಂಬ್ಯುಲೆನ್ಸ್ಗಳು 'ಮೊಬೈಲ್ ಆಸ್ಪತ್ರೆ' ರೀತಿಯೇ ಕಾರ್ಯನಿರ್ವಹಿಸುತ್ತವೆ.
ಈ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 82 ಸಾವಿರ ಜೀವಗಳನ್ನು ಬದುಕಿಸಿದ
ಸಾರ್ಥಕತೆ ನಮ್ಮದು. ಹಾಗೆಯೇ ಈ ಮೊಬೈಲ್ ಆಸ್ಪತ್ರೆಯಲ್ಲಿ 913
ಹೆರಿಗೆಗಳಾಗಿವೆ.
ಪ್ರವಾಸೋದ್ಯಮ ರಾಜ್ಯ ಆರ್ಥಿಕತೆಯ ಬೆನ್ನೆಲುಬು
ಎಂದರೆ ತಪ್ಪಾಗಲಾರದು. ಈ ಕ್ಷೇತ್ರದ ಅಭಿವೃದ್ಧಿಗೆ ಯಾವ ಯೋಜನೆ
ಹಾಕಿಕೊಂಡಿದ್ದೀರಿ?
ಹೌದು, ನಮ್ಮ ರಾಜ್ಯದ ಆದಾಯದ ಪ್ರಮುಖ
ಮೂಲವೆಂದರೆ ಪ್ರವಾಸೋದ್ಯಮ. ಅದರ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡೇ
ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದರ ಜೊತೆ ಪರಿಸರ ರಕ್ಷಣೆಯ
ಕುರಿತೂ ಗಮನ ಕೊಡುತ್ತಿದ್ದೇವೆ. ಅಂತರ್ ರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆಯ
ಸಲಹೆಯೊಂದಿಗೆ ನಮ್ಮ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಜಲಪಾತಗಳು ಹಾಗೂ
ಪರ್ವತ ಪ್ರದೇಶಗಳನ್ನು ಹೇರಳವಾಗಿ ಹೊಂದಿರುವ ರಾಜ್ಯ ಭವಿಷ್ಯದಲ್ಲಿ
ಜಗತ್ಪ್ರಸಿದ್ಧ ಪ್ರವಾಸಿ ಸ್ಥಳವಾಗಿ ಹೊರಹೊಮ್ಮುವ ಎಲ್ಲಾ ಸಾಮರ್ಥ್ಯಗಳನ್ನೂ
ಹೊಂದಿದೆ. ಹಾಗೆಯೇ ನಮ್ಮಲ್ಲಿ ಭೇಟಿ ನೀಡುವ ಪ್ರವಾಸಿಗಳ ಸಂಖ್ಯೆಯಲ್ಲಿ
ಶೇ.6ರಷ್ಟು ಹೆಚ್ಚಳ ಕಂಡು ಬಂದಿದೆ. ಮುಂದಿನ ವರ್ಷ ಅದು ಶೇ.10 ತಲುಪುವಂತೆ
ಮಾಡುವುದು ನಮ್ಮ ಸದ್ಯದ ಗುರಿ.
ಟಿಎಸ್ಐ
ಭೂಪಿಂದರ್
ಸಿಂಗ್ ಹೂಡಾ, ಹರಿಯಾಣದ ಮುಖ್ಯಮಂತ್ರಿ
"ತಲಾದಾಯದಲ್ಲಿ
ದ್ವಿತೀಯ ಸ್ಥಾನ"
ಹರಿಯಾಣದ ಮುಖ್ಯಮಂತ್ರಿ ಭುಪಿಂದರ್ ಸಿಂಗ್
ಹೂಡಾ ತಮ್ಮ ಸರ್ಕಾರದ ಯಶಸ್ಸಿನ ಕುರಿತು ಪ್ರಮೋದ್ ಕುಮಾರ್ ಜೊತೆ
ಮಾತನಾಡಿದ್ದಾರೆ
ಗ್ರಾಮೀಣ ಭಾಗ ಸೇರಿದಂತೆ ರಾಜ್ಯದ ಜನತೆಗೆ
ವಿದ್ಯುತ್ ಸೌಲಭ್ಯ ಒದಗಿಸಲು ನಿಮ್ಮ ಸರ್ಕಾರ ಯಾವ ಕ್ರಮ ಕೈಗೊಂಡಿದೆ?
ರಾಜ್ಯದ ಅತ್ಯಂತ ಮಹತ್ವದ ಕ್ಷೇತ್ರಗಳಲ್ಲಿ
ವಿದ್ಯುತ್ ಕೂಡ ಒಂದು. ದವಸ-ಧಾನ್ಯಗಳ ಉತ್ಪಾದನೆಯಲ್ಲಿ ಹರಿಯಾಣದ್ದು ಮಹತ್ವದ
ಪಾತ್ರ. ರೈತ ಸಮುದಾಯಕ್ಕೆ ತೊಂದರೆಯಾಗದಂತೆ ಗ್ರಾಮೀಣ ಭಾಗಗಳಿಗೆ ನಿಯಮಿತವಾಗಿ
ವಿದ್ಯುತ್ ನೀಡುವುದು ನಮ್ಮ ಪ್ರಮುಖ ಆದ್ಯತೆ.
ಹೊಸ ರಸ್ತೆ ಹಾಗೂ ಹೆದ್ದಾರಿಗಳ ನಿರ್ಮಾಣದಲ್ಲಿ
ಹರಿಯಾಣ ಸರ್ಕಾರದ ಸಾಧನೆ ಏನು?
ಪ್ರತಿಯೊಂದು ಗ್ರಾಮಕ್ಕೂ ರಸ್ತೆ ಸಂಪರ್ಕ
ಕಲ್ಪಿಸುವುದು ನಮ್ಮ ಕನಸು. ರಸ್ತೆ ನಿರ್ಮಾಣ ರಾಜ್ಯದ ಪ್ರವಾಸೋದ್ಯಮಕ್ಕೆ,
ಸರಕು ಸಾಗಾಣಿಕೆಗೆ ಪೂರಕವಾಗಿರುವುದರಿಂದ ರಾಜ್ಯದ ಅಭಿವೃದ್ಧಿಗೆ ಸುಸಜ್ಜಿತ
ರಸ್ತೆಗಳು ನಿಜಕ್ಕೂ ಬೆನ್ನೆಲುಬಿದ್ದಂತೆ.
ಕುಡಿಯುವ ನೀರಿನ ವಿಚಾರದಲ್ಲಿ ಹರಿಯಾಣ ಯಾವ
ಹಂತದಲ್ಲಿದೆ?
ಹರಿಯಾಣದಲ್ಲಿರುವ 6759 ಗ್ರಾಮಗಳು ಹಾಗೂ 78
ನಗರಗಳಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಚೆನ್ನಾಗಿದೆ.
ರಾಜ್ಯದ ಕಾನೂನು-ಸುವ್ಯವಸ್ಥೆಯ ಕುರಿತು ನಿಮಗೆ
ತೃಪ್ತಿ ಇದೆಯೇ?
ಹರಿಯಾಣದಲ್ಲಿ ಶಾಂತಿ ನೆಲೆಸಿದೆ. ಗುಪ್ತಚರ
ಇಲಾಖೆಯ ವರದಿಗೆ ವ್ಯತಿರಿಕ್ತವೆಂಬಂತೆ ಯಾವುದೇ ಭಯೋತ್ಪಾದಕ ದಾಳಿ,
ವಿಧ್ವಂಸಕ ಕೃತ್ಯಗಳು ಹರಿಯಾಣದಲ್ಲಿ ಈವರೆಗೆ ನಡೆದಿಲ್ಲ.
ಭ್ರಷ್ಟಾಚಾರ ನಿರ್ಮೂಲನೆಗೆ ಕೈಗೊಂಡಿರುವ
ಕ್ರಮಗಳೇನು?
ಭ್ರಷ್ಟಾಚಾರವನ್ನು ನಮ್ಮ ರಾಜ್ಯದ ನೆಲದಿಂದ
ಬುಡಸಮೇತ ಕಿತ್ತೊಗೆಯುವುದು ನನ್ನ ಹೆಗ್ಗುರಿ. ರಾಥೋಡ್ ಪ್ರಕರಣದಲ್ಲಿ ರಾಜ್ಯ
ಸರ್ಕಾರ ಎಷ್ಟು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿತು ಎಂಬುದು ನಿಮಗೆ
ತಿಳಿದೇ ಇದೆ. ನೊಂದ ಕುಟುಂಬಕ್ಕೆ ಸಾಧ್ಯವಾದ ಮಟ್ಟಿಗೆ ನ್ಯಾಯ ಒದಗಿಸಲು ನಾವು
ಪ್ರಯತ್ನಿಸಿದ್ದೇವೆ.
ಜೀವನ ಮಟ್ಟ ಸುಧಾರಣೆಗೆ ಯಾವ ಕ್ರಮ
ಕೈಗೊಂಡಿದ್ದೀರಿ?
ಶಿಕ್ಷಣ, ಆರೋಗ್ಯ ಹಾಗೂ ರಸ್ತೆ ನಿರ್ಮಾಣಕ್ಕೆ
ಪ್ರಾಮುಖ್ಯತೆ ನೀಡಲಾಗಿದೆ. ಆರೋಗ್ಯ ತಪಾಸಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ
ಹಾಗೆಯೇ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಿಗೆ ಮೂಲಸೌಕರ್ಯಗಳನ್ನು
ಒದಗಿಸಲಾಗಿದೆ. ರಸ್ತೆಗಳ ಸಂಪರ್ಕದ ಜೊತೆಗೆ, ರೈಲು ಹಾಗೂ ವಿಮಾನ
ಸೌಕರ್ಯವನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸಿದ್ದೇವೆ.
2006-07ರಲ್ಲಿ ರೂ. 35,779ರಷ್ಟಿದ್ದ ಹರಿಯಾಣದ ಜನತೆಯ ತಲಾ ಆದಾಯ
2007-08ರಲ್ಲಿ ರೂ.38,720ರಷ್ಟು ಹೆಚ್ಚಿದೆ. ಆದ್ದರಿಂದ, ಹರಿಯಾಣ ದೇಶದ
ಅತ್ಯುತ್ತಮ ರಾಜ್ಯಗಳಲ್ಲಿ ಒಂದು ಎಂದು ಯೋಜನಾ ಆಯೋಗ ಹಾಗೂ 12ನೇ ಹಣಕಾಸು
ಆಯೋಗಗಳು ಅಭಿಪ್ರಾಯಪಟ್ಟಿವೆ. ತಲಾ ಆದಾಯದಲ್ಲಿ ಗೋವಾ ಪ್ರಥಮ
ಸ್ಥಾನದಲ್ಲಿದ್ದರೆ ಹರಿಯಾಣ ದ್ವಿತೀಯ ಸ್ಥಾನದಲ್ಲಿದೆ.
ಟಿಎಸ್ಐ
ರಮಣ್ ಸಿಂಗ್,
ಛತ್ತೀಸ್ಗಢದ ಮುಖ್ಯಮಂತ್ರಿ
'ಭರವಸೆಗಳೆಲ್ಲವನ್ನೂ
ಈಡೇರಿಸಿದ್ದೇವೆ'
ಛತ್ತೀಸ್ಗಢದ ಮುಖ್ಯಮಂತ್ರಿಗಳಾದ ರಮಣ್ಸಿಂಗ್
ಟಿಎಸ್ಐನ ಅನಿಲ್ ದ್ವಿವೇದಿ ಜೊತೆ ಸಮಕಾಲೀನ ರಾಜಕೀಯ ಕುರಿತು ಮಾತನಾಡಿದ್ದಾರೆ
ನೀವು ರಾಷ್ಟ್ರದ ನಾಲ್ಕನೇಯ ಅತ್ಯುತ್ತಮ
ಮಂತ್ರಿಯಾಗಿ ಹೊರಹೊಮ್ಮಿದ್ದೀರಿ. ಮತದಾರರ ಈ ತೀರ್ಪನ್ನು ಹೇಗೆ
ವ್ಯಾಖ್ಯಾನಿಸುತ್ತೀರಿ?
ನಮ್ಮ ಕಾರ್ಯವನ್ನು ಗುರುತಿಸಿ ಬೆನ್ನು
ತಟ್ಟಿದಾಗ ಸಂತೋಷವಾಗುವುದು ಸಹಜ. ನನ್ನನ್ನು ಎರಡನೇ ಬಾರಿಗೆ
ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದಾಗಲೇ ಜನತೆ ನನ್ನ ಕೆಲಸವನ್ನು
ಗುರುತಿಸಿದ್ದರು. ಹಾಗೆಯೇ ನಮ್ಮ ಸಾಮರ್ಥ್ಯ ಮೀರಿ ಜನಪರ ಕಾರ್ಯದಲ್ಲಿ
ತೊಡಗಿದ್ದೇವೆ. ಅದಕ್ಕೆ ಪುರಾವೆಯೇ ಈ ಹೆಗ್ಗಳಿಕೆ.
ಅತ್ಯುತ್ತಮ ಆಡಳಿತ ಹೊಂದಿದ ಸಣ್ಣ ರಾಷ್ಟ್ರಗಳ
ಪಟ್ಟಿಯಲ್ಲಿ ನಿಮ್ಮದು ಎರಡನೇಯ ಸ್ಥಾನದಲ್ಲಿದೆ. ಈ ಯಶೋಗಾಥೆ ಹೀಗೆಯೇ
ಮುಂದುವರಿಯುತ್ತದೆಯೇ?
ಹಲವು ರೀತಿಯಲ್ಲಿ ನಾವು ಮೊದಲಿಗರಾಗಿದ್ದೇವೆ.
ತಲಾ ಆದಾಯವನ್ನೇ ತೆಗೆದುಕೊಂಡರೆ, ಈ ಶತಮಾನದ ಪ್ರಾರಂಭದಲ್ಲಿ ರೂ. 10
ಸಾವಿರದಷ್ಟಿದ್ದ ತಲಾ ಆದಾಯ ಈಗ 29 ಸಾವಿರ ಮೀರಿದೆ. ಒಟ್ಟು ರಾಷ್ಟ್ರೀಯ
ಉತ್ಪನ್ನ ಶೇ. 18.16 ಅಷ್ಟು ಹೆಚ್ಚಿದೆ. ಸಿಮೆಂಟ್ ಅಲ್ಲದೇ, ರಾಜ್ಯ ಉಕ್ಕು,
ಅಲ್ಯುಮಿನಿಯಂ ಹಾಗೂ ಇಂಧನ ಉತ್ಪಾದನೆಯಲ್ಲೂ ದಾಖಲೆಯ ಹೆಜ್ಜೆ ಇಡುತ್ತಿದೆ.
ನಮ್ಮ ನಂತರದ ಯೋಜನೆ ಎಂದರೆ, ಮೆಟ್ರೋ. ದೇಶದಲ್ಲಿಯೇ ಅತ್ಯಂತ ದೊಡ್ಡ
ವಿದ್ಯುತ್ ಸರಬರಾಜು ವ್ಯವಸ್ಥೆ ನಮ್ಮದು ಎಂದು ಹೇಳಿಕೊಳ್ಳಲು ಹೆಮ್ಮೆ
ಪಡುತ್ತೇನೆ.
ಸಮಾಜದ ಕೆಳಸ್ತರದ ಮಂದಿಗೆ ನಿಮ್ಮ ಸರ್ಕಾರ
ಯಾವ ಸೌಲಭ್ಯ ಒದಗಿಸಿದೆ?
ಅಕ್ಕಿಗೆ ಕನಿಷ್ಠ ಬೆಂಬಲಬೆಲೆ ನೀಡಲಾಗುತ್ತಿದೆ.
ಈ ಬಾರಿ ನಾವು ರೈತ ಸಮುದಾಯಕ್ಕೆ ರೂ.200 ಕೋಟಿಗಳಷ್ಟು ಬೋನಸ್ ನೀಡಲು ಚಿಂತನೆ
ನಡೆಸಿದ್ದೇವೆ. ಇದರ ಜೊತೆಗೆ 1300 ಕೋಟಿಯಷ್ಟು ಕೃಷಿ ಸಾಲವನ್ನು ಶೇ.3ರ
ಬಡ್ಡಿಯಲ್ಲಿ ನಮ್ಮ ರೈತರಿಗೆ ನೀಡಲಿದ್ದೇವೆ. ಈಗಾಗಲೇ 1 ಲಕ್ಷದ 60 ಸಾವಿರ
ನೀರಾವರಿ ಪಂಪುಗಳನ್ನು ಅಳವಡಿಸಲಾಗಿದೆ. ಹಾಗೆಯೇ, ರೈತರಿಗೆ ಉಚಿತ ವಿದ್ಯುತ್
ನೀಡುವುದರ ಜೊತೆಗೆ ಕೃಷಿ ಉಪಕರಣಗಳನ್ನೂ ಉಚಿತವಾಗಿ ವಿತರಿಸಲಾಗಿದೆ.
'ಆಹಾರ ಹಕ್ಕು ಕಾಯ್ದೆ' ಕುರಿತ ನಿಮ್ಮ
ಯೋಜನೆಗಳೇನು?
'ಮುಖ್ಯಮಂತ್ರಿಗಳ ಆಹಾರ ಸಹಕಾರ ಯೋಜನೆ'ಯನ್ನು
ಜಾರಿಗೆ ತಂದು ಕೇವಲ ಒಂದು ಅಥವಾ ಎರಡು ರುಪಾಯಿಗಳಲ್ಲಿ 3.5 ಮಿಲಿಯನ್
ಕುಟುಂಬಗಳಿಗೆ ಅಕ್ಕಿ ವಿತರಿಸಲಾಗಿದೆ. ಹಾಗೆಯೇ ಎರಡು ಕೆ.ಜಿ ಉಚಿತ ಉಪ್ಪನ್ನೂ
ನೀಡುತ್ತಿದ್ದೇವೆ.
ರಾಜ್ಯದಲ್ಲಿ ನಕ್ಸಲಿಸಂ
ರುದ್ರತಾಂಡವವಾಡುತ್ತಿದೆ. ದಿವಸಕ್ಕೊಬ್ಬರಂತೆ ಬಲಿಯಾಗುತ್ತಿದ್ದಾರೆ. ಅದರ
ಕುರಿತು ಗಂಭೀರವಾದ ಚರ್ಚೆ ಸರ್ಕಾರದ ಮಟ್ಟದಲ್ಲಾಗಿಲ್ಲ...
ಈ ಸಮಸ್ಯೆ ಛತ್ತೀಸ್ಗಢಕ್ಕೆ ಸೀಮಿತವಾದ
ಸಂಗತಿಯಲ್ಲ. ನಕ್ಸಲರನ್ನು ಬಗ್ಗು ಬಡಿಯಲು ಕೇಂದ್ರ ಸರ್ಕಾರವೂ
ಕೈಜೋಡಿಸುತ್ತಿದೆ. ಜಂಟಿ ಕಾರ್ಯಾಚರಣೆಗಳಾಗುತ್ತಿವೆ. ನಮ್ಮಲ್ಲಿ ಭರವಸೆ
ಬತ್ತಿ ಹೋಗಿಲ್ಲ. ಸ್ವಲ್ಪ ಕಾಲಾವಕಾಶ ಕೊಡಿ. ಎಲ್ಲದಕ್ಕೂ ಪರಿಹಾರ ಕಂಡು
ಹಿಡಿಯುತ್ತೇವೆ.
ಟಿಎಸ್ಐ
ಪ್ರೊ. ಪ್ರೇಮ್
ಕುಮಾರ್ ಧುಮಲ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ
"ಪ್ರತಿ
ಹಳ್ಳಿಗೂ ವಿದ್ಯುತ್ ನೀಡಿದ ಪರ್ವತಗಳ ನಾಡು"
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಪ್ರೇಮ್
ಕುಮಾರ್ ಧುಮಲ್ ತಮ್ಮ ರಾಜ್ಯದ ಸ್ಥಿತಿ-ಗತಿ ಕುರಿತು ಪ್ರಮೋದ್ ಕುಮಾರ್ ಜೊತೆ
ಮಾತನಾಡಿದ್ದಾರೆ
ಗ್ರಾಮೀಣ ಭಾಗ ಸೇರಿದಂತೆ ರಾಜ್ಯದ ಜನತೆಗೆ
ವಿದ್ಯುತ್ ಸೌಲಭ್ಯ ಒದಗಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ?
ರಾಜ್ಯದ ಪ್ರತಿಯೊಂದು ಹಳ್ಳಿಗಳಿಗೂ ವಿದ್ಯುತ್
ಸಂಪರ್ಕ ಕಲ್ಪಿಸಿದ ದೇಶದ ಕೆಲವೇ ರಾಜ್ಯಗಳಲ್ಲಿ ಹಿಮಾಚಲ ಪ್ರದೇಶ ಕೂಡ ಒಂದು.
ಪರಿಶಿಷ್ಟ ಜಾತಿಯ ಪ್ರತಿಯೊಂದು ಮನೆಗೂ ಶೇಕಡಾ ಒಂದರಷ್ಟು ಉಚಿತ ವಿದ್ಯುತ್
ವ್ಯವಸ್ಥೆ ಕಲ್ಪಿಸಿದ್ದೇವೆ. ಕಳೆದ ಬಾರಿ ಅಟಲ್ ಬಿಜಲೀ ಬಚತ್ ಯೋಜನಾ ಮೂಲಕ
ಪ್ರತಿಯೊಂದು ಮನೆಗೂ ಸಿಎಫ್ಎಲ್ ಬಲ್ಬುಗಳನ್ನು ಉಚಿತವಾಗಿ ವಿತರಿಸಿದ್ದೆವು.
ಇದರಿಂದ ಗ್ರಾಹಕರ ಹಣದಲ್ಲಿ ಶೇ. 50ರಷ್ಟು ಉಳಿತಾಯವಾಗುತ್ತದೆ.
ಹೊಸ ರಸ್ತೆ ಹಾಗೂ ಹೆದ್ದಾರಿ ನಿರ್ಮಾಣದಲ್ಲಿ
ಹಿಮಾಚಲ ಪ್ರದೇಶ ಸರ್ಕಾರದ ಸಾಧನೆ ಏನು?
ಪ್ರತಿಯೊಂದು ಹಳ್ಳಿಗೂ ರಸ್ತೆಯ ಸೌಲಭ್ಯ
ಕಲ್ಪಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 200 ಕಿ.ಮೀಗೂ ಹೆಚ್ಚು
ರಸ್ತೆಯನ್ನು ನಿರ್ಮಿಸಲಾಗಿದೆ. ಒಟ್ಟಿನಲ್ಲಿ ಹಿಮಾಚಲ ಪ್ರದೇಶ ಸುಮಾರು 31
ಸಾವಿರ ಕಿ.ಮೀನಷ್ಟು ಉದ್ದದ ರಸ್ತೆಗಳನ್ನು ಹೊಂದಿದೆ. ಹಾಗೆಯೇ,
ಪರ್ವಾನೂ-ಸೋಲನ್-ಶಿಮ್ಲಾ ಸೇರಿದಂತೆ ನಮ್ಮ ಕೆಲವು ರಾಜ್ಯ ಹೆದ್ದಾರಿ ಮತ್ತು
ರಾಷ್ಟ್ರೀಯ ಹೆದ್ದಾರಿಗಳನ್ನು ಎಕ್ಸ್ಪ್ರೆಸ್ ಹೆದ್ದಾರಿಗಳನ್ನಾಗಿ
ಪರಿವರ್ತಿಸುತ್ತಿದ್ದೇವೆ.
ಕುಡಿಯುವ ನೀರಿನ ವಿಚಾರದಲ್ಲಿ ಹಿಮಾಚಲ
ಪ್ರದೇಶ ಯಾವ ಹಂತದಲ್ಲಿದೆ?
ರಾಜ್ಯದ ಪ್ರತಿಯೊಂದು ಹಳ್ಳಿಗೂ ಶುದ್ಧ
ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಶೇ.90ರಷ್ಟು ಪ್ರದೇಶಗಳಿಗೆ
ಈಗಾಗಲೇ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ.
ರಾಜ್ಯದ ಕಾನೂನು-ಸುವ್ಯವಸ್ಥೆಯ ಕುರಿತು
ತೃಪ್ತಿ ಇದೆಯೇ?
ರಾಷ್ಟ್ರದ ಅತ್ಯಂತ ಸುರಕ್ಷಿತ, ಕಾನೂನು
ಸುವ್ಯವಸ್ಥೆ ಕಾಪಾಡಿಕೊಂಡ ರಾಜ್ಯಗಳಲ್ಲಿ ಹಿಮಾಚಲ ಪ್ರದೇಶವೂ ಒಂದು.
ರಾಜ್ಯದಲ್ಲಿ ಸಂಪೂರ್ಣ ಶಾಂತಿ ನೆಲೆಸಿದೆ.
ಭ್ರಷ್ಟಾಚಾರ ನಿರ್ಮೂಲನೆಗೆ ನಿಮ್ಮ ಸರ್ಕಾರ
ಕೈಗೊಂಡಿರುವ ಕ್ರಮಗಳ ಬಗ್ಗೆ ಏನು ಹೇಳುತ್ತೀರಿ?
ಹೌದು. ಮುಖ್ಯಮಂತ್ರಿಯಾಗಿ ಅಧಿಕಾರ
ಸ್ವೀಕರಿಸಿದ ಕ್ಷಣದಲ್ಲಿಯೇ ನಾನು ಭ್ರಷ್ಟಾಚಾರದೊಂದಿಗೆ ಯಾವ ರಾಜಿಯೂ ಇಲ್ಲ
ಎಂದು ಸ್ಪಷ್ಟಪಡಿಸಿದ್ದೆ. ಮಾತು ಕೊಟ್ಟಂತೆ, ಪಾರದರ್ಶಕ, ನೇರ ಹಾಗೂ
ಕಳಂಕರಹಿತ ಆಡಳಿತಕ್ಕೆ ನಾನು ಬದ್ಧನಾಗಿದ್ದೇನೆ. ಇ-ಆಡಳಿತಕ್ಕೆ ಪ್ರಾಮುಖ್ಯತೆ
ನೀಡಿದ್ದೆವೆ. ಈ ನಿಟ್ಟಿನಲ್ಲಿ ನಾವು ಕೈಗೊಂಡಿರುವ ಕ್ರಮಗಳ ಕುರಿತು
ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಜನರ ಕಣ್ಣೀರು ಒರೆಸುವ
ನಿಟ್ಟಿನಲ್ಲಿ ಇ-ಸಮಾಧಾನ್ ಎಂಬ ಕಾರ್ಯಕ್ರಮವನ್ನೂ ಜಾರಿಗೆ ತಂದಿದ್ದೇವೆ.
ಅದರ ಮೂಲಕ ಸಾಮಾನ್ಯ ಜನತೆ ನೇರವಾಗಿ ಮುಖ್ಯಮಂತ್ರಿಗಳಲ್ಲಿ ತಮ್ಮ ನೋವನ್ನು
ಹಂಚಿಕೊಳ್ಳಬಹುದು.
ರೈತರ ಕಲ್ಯಾಣಕ್ಕೆ ಒಂದು ಸರ್ಕಾರವಾಗಿ ನೀವು
ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ?
ಹಿಮಾಚಲ ಪ್ರದೇಶ ಮೂಲತಃ ಗ್ರಾಮೀಣ ಪ್ರದೇಶ.
ಶೇ.90ಕ್ಕಿಂತ ಹೆಚ್ಚು ಜನತೆ ಗ್ರಾಮೀಣ ಭಾಗದಲ್ಲಿಯೇ ವಾಸಿಸುತ್ತಿದ್ದಾರೆ
ಹಾಗೂ ಅದರಲ್ಲಿ ಶೇ.70ರಷ್ಟು ಮಂದಿ ವ್ಯವಸಾಯವನ್ನೇ ತಮ್ಮ ಬದುಕಿನ
ಹಾದಿಯನ್ನಾಗಿಸಿಕೊಂಡಿದ್ದಾರೆ. ರಾಜ್ಯದ ಕೃಷಿ ಆರ್ಥಿಕತೆ
ಪುನರುಜ್ಜೀವಗೊಳಿಸುವ ನಿಟ್ಟಿನಲ್ಲಿ ಯಾವ್ಯಾವ ಕ್ರಮಗಳನ್ನು ಕೈಗೊಳ್ಳಲು
ಸಾಧ್ಯವೋ ಅದೆಲ್ಲವನ್ನೂ ಹಿಮಾಚಲ ಸರ್ಕಾರ ಕೈಗೊಂಡಿದೆ. ಕಳೆದ ಬಾರಿ 353 ಕೋಟಿ
ವೆಚ್ಚದಲ್ಲಿ ಮಹತ್ವಾಕಾಂಕ್ಷೆಯ 'ಪಂಡಿತ್ ದೀನ್ ದಯಾಳ್ ಕಿಸಾನ್ ಭಗವಾನ್
ಸಮೃದ್ಧಿ' ಯೋಜನೆಯನ್ನು ಜಾರಿಗೆ ತರಲಾಗಿತ್ತು. ಹಾಗೆಯೇ ರೈತರು ಕೊಳ್ಳುವ
ಸ್ಪ್ರಿಂಕ್ಲರ್ಗಳು ಹಾಗೂ ಸಣ್ಣ ನೀರಾವರಿಗೆ ನಾವು ಶೇ.80ರಷ್ಟು ಸಹಾಯಧನ
ನಿಡುತ್ತಿದ್ದೇವೆ. ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಣ್ಣ ಪ್ರಮಾಣದ
ಜಮೀನಿನಲ್ಲಿ ಹೆಚ್ಚು ಇಳುವರಿ ಪಡೆಯುವ ಕುರಿತು ರೈತರಿಗೆ ಮಾಹಿತಿ
ನೀಡುತ್ತಿದ್ದೇವೆ. 300 ಕೋಟಿ ವೆಚ್ಚದ "ದೂದ್ ಗಂಗಾ" ಎಂಬ ಯೋಜನೆಗೂ ಚಾಲನೆ
ನೀಡಲಾಗಿದೆ. ಹೈನುಗಾರಿಕೆಯನ್ನು ಪ್ರೋತ್ಸಾಹಿಸುವುದರ ಮೂಲಕ ಗ್ರಾಮೀಣ ಭಾಗದ
ರೈತರ ವರಮಾನವನ್ನು ಹೆಚ್ಚಿಸುವುದು ಈ ಯೋಜನೆಯ ಹಿಂದಿನ ಉದ್ದೇಶ.
ರಾಜ್ಯದ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣದ
ಸ್ಥಿತಿ-ಗತಿ ಹೇಗಿದೆ? ಆ ಕ್ಷೇತ್ರದ ಸಾಧನೆ ಕುರಿತು ಸಂತೃಪ್ತಿ ಇದೆಯೇ?
ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ
ದೇಶದಲ್ಲಿಯೇ 'ಮಾದರಿ ರಾಜ್ಯ' ಎಂದು ಪ್ರತಿಷ್ಠಿತ ನಿಯತಕಾಲಿಕೆಯೊಂದು ತಾನು
ನಡೆಸಿದ ಸಮೀಕ್ಷೆಯಲ್ಲಿ ಅಭಿಪ್ರಾಯಪಟ್ಟಿತ್ತು. ರಾಜ್ಯ ಶೇ.84ರಷ್ಟು
ಸಾಕ್ಷರತೆಯನ್ನು ಹೊಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ಹೋಲಿಸಿದರೆ ಅದು
ನಿಜಕ್ಕೂ ದೊಡ್ಡ ಪ್ರಮಾಣವೇ. ಮುಂದಿನ ಕೆಲವೇ ವರ್ಷಗಳಲ್ಲಿ ಹಿಮಾಚಲ ದೇಶದ
'ಅತಿ ಹೆಚ್ಚು ಸಾಕ್ಷರತೆ' ಸಾಧಿಸಿದ ರಾಜ್ಯ ಎಂಬ ಹೆಗ್ಗಳಿಗೆ ಪಾತ್ರವಾಗಲಿದೆ.
ಜಾಗತಿಕ ಮಟ್ಟದಲ್ಲಿ ಹಿಮಾಚಲ ಪ್ರದೇಶವನ್ನು ಅತೀ ದೊಡ್ಡ ಶೈಕ್ಷಣಿಕ
ಕ್ಷೇತ್ರವನ್ನಾಗಿಸುವುದು ನಮ್ಮ ಗುರಿ.
ಮುಖ್ಯಮಂತ್ರಿಯಾಗಿ ನಿಮಗೆ ನೀವು ಎಷ್ಟು ಅಂಕ
ಕೊಟ್ಟುಕೊಳ್ಳುತ್ತೀರಿ?
ಅದನ್ನು ಜನತೆ ನಿರ್ಧರಿಸಬೇಕು. ಎಲ್ಲಿಯವರೆಗೆ
ಸಾಧ್ಯವೋ ಅಲ್ಲಿಯವರೆಗೆ ಜನಸೇವೆ ಮಾಡುವ ಆಕಾಂಕ್ಷೆ ನನಗಿದೆ. ಜನಸೇವೆಗೆ
ರಾಜಕೀಯಕ್ಕಿಂತ ಅತ್ಯುತ್ತಮ ಮಾರ್ಗ ಬೇರೆ ಯಾವುದಿದೆ?
ಟಿಎಸ್ಐ
ಒಮರ್ ಅಬ್ದುಲ್ಲಾ,
ಜಮ್ಮು ಕಾಶ್ಮೀರದ ಮುಖ್ಯಮಂತ್ರಿ
"ಭ್ರಷ್ಟಾಚಾರದ
ಕೂಪದಲ್ಲಿ ರಾಜ್ಯ ಸಿಲುಕಿರುವುದು ನಿಜ"
ಮುಂಬರುವ ಮಾರ್ಚ್ ತಿಂಗಳಲ್ಲಿ 40ರ ಹರೆಯಕ್ಕೆ
ಕಾಲಿಡಲಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಆ
ರಾಜ್ಯ ಕಂಡ ಅತಿ ಕಿರಿಯ ಮುಖ್ಯಮಂತ್ರಿ. ನಿರ್ದಾಕ್ಷಿಣ್ಯ ಮಾತಿಗೆ
ಹೆಸರುವಾಸಿಯಾಗಿರುವ ಒಮರ್ ಅಬ್ದುಲ್ಲಾ ಅವರು ಹರೂನ್ ರೇಶಿ ಜೊತೆ ಸರ್ಕಾರದ
ಸಾಧನೆ, ಧ್ಯೇಯೋದ್ದೇಶಗಳ ಕುರಿತು ಮಾತನಾಡಿದ್ದಾರೆ.
'ಸಿ-ವೋಟರ್' ಸಮೀಕ್ಷೆ ನಿಮ್ಮ ಸರ್ಕಾರವನ್ನು
ರಾಷ್ಟ್ರದ ಕೆಲವು ಉತ್ಕೃಷ್ಟ ಸರ್ಕಾರಗಳಲ್ಲಿ ಒಂದು ಎಂದು ಪರಿಗಣಿಸಿದೆ.
ನಿಮ್ಮ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ಪ್ರಾಮಾಣಿಕವಾಗಿ ತೃಪ್ತಿ ಇದೆಯೇ?
ನನ್ನ ನಿರ್ವಹಣೆ ಬಗ್ಗೆ ತೃಪ್ತಿ ಇಲ್ಲ.
ಏಕೆಂದರೆ ಒಮ್ಮೆ ಯಾರಿಗಾದರೂ ಸಂಪೂರ್ಣ ತೃಪ್ತಿ ಎಂದೆನಿಸಿಬಿಟ್ಟರೆ ಇನ್ನಷ್ಟು
ಹೆಚ್ಚಿನ ಸಾಧನೆ ಮಾಡುವ ಯತ್ನವನ್ನೇ ಬಿಟ್ಟು ಬಿಡುವ ಸಂಭವ ಇದೆ. ಹಲವು
ಕ್ಷೇತ್ರಗಳಲ್ಲಿ ನಾವು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸಲು
ಸೋತಿದ್ದೇವೆ ಎಂದು ನನಗನಿಸಿದೆ. ವಿದ್ಯುತ್ ವಲಯದಲ್ಲಿ ಉತ್ತಮ ಪ್ರಸರಣ ಹಾಗೂ
ವಿತರಣೆ ಸಮಸ್ಯೆ ನಮಗೆ ಇಂದಿಗೂ ಬೆಂಬಿಡದೆ ಕಾಡುತ್ತಿದೆ. ಇದರ ಜೊತೆಗೆ
ಭಷ್ಟಾಚಾರದ ಕೂಪದಲ್ಲೂ ರಾಜ್ಯ ಸಿಲುಕಿದೆ. ಹಾಗಾಗಿ ನಾವು ಇನ್ನೂ ಬಹುದೂರ
ಸಾಗಬೇಕಿದೆ.
ಸರ್ಕಾರ ರಚನೆಯಾದ ಒಂದೇ ವರ್ಷದಲ್ಲಿ ಕಾರ್ಯ
ನಿರ್ವಹಣೆ ಬಗ್ಗೆ ತೀರ್ಪು ನೀಡುವುದು ಸರಿಯಲ್ಲ ಎನ್ನುತ್ತೀರಾ?
ಸರ್ಕಾರ ನಿಗದಿತ ಅವಧಿಗೆ ಆಯ್ಕೆಯಾಗಿರುತ್ತದೆ.
ನನಗೆ ಇನ್ನೂ ಆರು ವರ್ಷ ಕಾಲಾವಕಾಶ ಇದೆ. ಹಾಗಾಗಿ ನಮ್ಮ ಅವಧಿ ಮುಗಿಯುವ
ವೇಳೆಗೆ ಜನರು ನಮ್ಮ ನಿರ್ವಹಣೆ ಬಗ್ಗೆ ತೀರ್ಪು ನೀಡಬೇಕು. ನಾನು ಉತ್ತಮ
ಆಡಳಿತ ನೀಡುತ್ತೇನೆ ಎಂದು ಭರವಸೆ ನೀಡಿದ್ದೇನೆ ಮತ್ತು ಆ ನಿಟ್ಟಿನಲ್ಲಿ
ಪ್ರಾಮಾಣಿಕವಾಗಿ ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸಲಿದ್ದೇನೆ.
ರಾಜ್ಯ ಅಭಿವೃದ್ಧಿ ನಿಟ್ಟಿನಲ್ಲಿ ನಿಮ್ಮ ಗುರಿ
ಹಾಗೂ ಆಶೋತ್ತರಗಳೇನು?
ಮೂಲಭೂತ ಅಗತ್ಯಗಳ ಬಗ್ಗೆ ನಾವು ಹೆಚ್ಚಿನ ಗಮನ
ನೀಡಿದ್ದೇವೆ. ವಿದ್ಯುತ್, ನೀರು, ರಸ್ತೆ, ಆರೋಗ್ಯ ಹಾಗೂ ಶಿಕ್ಷಣ
ಒದಗಿಸುವತ್ತ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ. ನನ್ನ ಪ್ರಕಾರ ಈ
ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುವ ಮೂಲಕ ನಮ್ಮ ಸಾಮರ್ಥ್ಯವನ್ನು
ಸಾಬೀತುಪಡಿಸಬೇಕು ಹಾಗೂ ಆ ದಿಕ್ಕಿನಲ್ಲೇ ನಾವು ಮುನ್ನಡೆಯುತ್ತಿದ್ದೇವೆ.
ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆಯನ್ನು
ನೀಡುತ್ತೇವೆ ಎಂಬ ನಿಮ್ಮ ಭರವಸೆ ಇನ್ನೂ ವಾಸ್ತವಕ್ಕಿಳಿದಿಲ್ಲ?
ಭ್ರಷ್ಟಾಚಾರ ನಿರ್ಮೂಲನಾ ವ್ಯವಸ್ಥೆ ಹಾಗೂ
ಸಂಸ್ಥೆಗಳು ಇನ್ನಷ್ಟು ಪ್ರಬಲರಾಗಬೇಕಾದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ
ಪ್ರಬಲ ಕಾನೂನುಗಳನ್ನು ರಚಿಸುವ ಅಗತ್ಯವಿದೆ. ಆ ಮೂಲಕ ಭ್ರಷ್ಟಾಚಾರದ
ವಿರುದ್ಧ ಹೋರಾಟ ನಡೆಸಲು ಸಂಸ್ಥೆಗಳಿಗೂ ಹೆಚ್ಚಿನ ಶಕ್ತಿ
ಒದಗಿಸಿದಂತಾಗುತ್ತದೆ. ಭ್ರಷ್ಟಾಚಾರದ ಮೂಲೋತ್ಪಾಟನೆ ನನ್ನ ಪ್ರಮುಖ ಗುರಿ.
ಆರ್ಟಿಐ ಕಾಯ್ದೆ ರಾಜ್ಯದಲ್ಲಿ ಸಮರ್ಪಕವಾಗಿ
ಜಾರಿಗೊಂಡಿಲ್ಲ. ಸಿಐಸಿ (ಮುಖ್ಯ ಮಾಹಿತಿ ಅಧಿಕಾರಿ) ಅವರು ಯಾವಾಗ ಅಧಿಕಾರ
ವಹಿಸಿಕೊಳ್ಳಲಿದ್ದಾರೆ?
ಸಿಐಸಿ ಅಧಿಕಾರಿಯನ್ನು ನೇಮಿಸುವಲ್ಲಿನ ವಿಳಂಬ
ಕೇಂದ್ರದ ವೈಫಲ್ಯ. ವಜಾಹತ್ ಹಬೀಬುಲ್ಲಾ ಅವರು ಸಿಐಸಿ ಆಗಬೇಕೆಂಬ
ಅಭಿಲಾಶೆಯನ್ನು ನಾವು ವ್ಯಕ್ತಪಡಿಸಿ, ಆ ಮೂಲಕ ಅವರ ಅಭಿಪ್ರಾಯದಂತೆ
ಇನ್ನಿಬ್ಬರು ಮಾಹಿತಿ ಅಧಿಕಾರಿಗಳನ್ನು ನೇಮಿಸಬೇಕೆಂದು ಯೋಜನೆ ಹಾಕಿದ್ದೆವು.
ಆದರೆ ಈಗ ಅನಿರೀಕ್ಷಿತವಾಗಿ ಸಿಐಸಿ ನೇಮಕ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಸದ್ಯ ನಾನು ಆಯ್ಕೆ ಸಮಿತಿ ಸಭೆ ಕರೆದಿದ್ದು, ಬಳಿಕ ಇಬ್ಬರು ಮಾಹಿತಿ
ಅಧಿಕಾರಿಗಳನ್ನು ನೇಮಕ ಮಾಡಿ, ಆರ್ಟಿಐ ಕಾಯ್ದೆ ಸೂಕ್ತವಾಗಿ ಜಾರಿಗೊಳ್ಳುವಂತೆ
ಎಚ್ಚರವಹಿಸಲಿದ್ದೇವೆ.
ಕಾನೂನು ಹಾಗೂ ಸುವ್ಯವಸ್ಥೆ ವಿಚಾರದಲ್ಲಿ
ಸುಧಾರಣೆ ಇನ್ನೂ ಸಾಧಿಸಿಲ್ಲ ಎಂಬ ವಾದಕ್ಕೆ ಏನು ಹೇಳುತ್ತೀರಿ?
ಜನರ ದೈನಂದಿನ ಬದುಕಿಗೆ ಹಾನಿಯುಂಟು ಮಾಡುವಂಥ
ಹಾಗೂ ಆಡಳಿತ ವ್ಯವಸ್ಥೆಗೆ ಧಕ್ಕೆಯುಂಟಾಗುವಂತಹ ಘಟನೆಗಳು ನಡೆಯಬಾರದು
ಎಂಬುದನ್ನು ನಾವೂ ಬಯಸುತ್ತೇವೆ. ಆದರೆ ಸಾಮಾನ್ಯ ಸ್ಥಿತಿ ಮರಳದಂತೆ ಕೆಲವು
ಉದ್ರಿಕ್ತ ಗುಂಪುಗಳು ಕಾರ್ಯನಿರ್ವಹಿಸುತ್ತಿದ್ದು, ದುಷ್ಕೃತ್ಯಗಳಿಗೆ ತೆರೆಯ
ಹಿಂದೆ ಬೆಂಬಲ ನೀಡುತ್ತಿವೆ. ಹಣ, ರಾಜಕೀಯ ಪ್ರಭಾವ ಹಾಗೂ ಧಾರ್ಮಿಕ
ಸಂಘಟನೆಗಳ ನೆರವನ್ನು ಪಡೆದು ದುಷ್ಕೃತ್ಯಗಳನ್ನು ಎಸಗುತ್ತಲೇ ಇವೆ. ಆದರೆ
ದಕ್ಷ ಅಧಿಕಾರಿಗಳ ಮೂಲಕ ಸರ್ಕಾರ ಆ ಸಮಸ್ಯೆಗಳನ್ನು ಹತ್ತಿಕ್ಕಲು ಇನ್ನಿಲ್ಲದೆ
ಪ್ರಯತ್ನಿಸುತ್ತಿದೆ ಎಂಬುದೂ ಸತ್ಯ.
ರಾಜ್ಯಕ್ಕೆ ಹೆಚ್ಚಿನ ಸ್ವಾಯತ್ತ ನೀಡಬೇಕು
ಎಂದು ನ್ಯಾಷನಲ್ ಕಾನ್ಫರೆನ್ಸ್ ಬೇಡಿಕೆಯಿಟ್ಟಿದೆ. ಅಭಿವೃದ್ಧಿ ನಿಟ್ಟಿನಲ್ಲಿ
ಇದು ರಾಜ್ಯಕ್ಕೆ ಪೂರಕವಾಗಿ ಪರಿಣಮಿಸಲಿದೆಯೇ?
ಸ್ವಾಯತ್ತ ಎಂಬುದು ರಾಜ್ಯವನ್ನು ಎಲ್ಲಾ
ವಿಭಾಗದಲ್ಲೂ ಪ್ರಗತಿಯ ದೆಸೆಯಲ್ಲಿ ಕೊಂಡೊಯ್ಯಲು ಸಾಧ್ಯವಿಲ್ಲ. ರಾಜಕೀಯವಾಗಿ,
ಆರ್ಥಿಕವಾಗಿ ಹಾಗೂ 20 ವರ್ಷಗಳ ಬಿಕ್ಕಟ್ಟಿನ ಕರಾಳ ಛಾಯೆಯಿಂದ ಅದು ನಮ್ಮನ್ನು
ಭವ್ಯ ಬೆಳಕಿನತ್ತ ಕೊಂಡೊಯ್ಯಲಿದೆ.
'ಸೇನಾ ಪಡೆಯ ವಿಶೇಷ ಅಧಿಕಾರ ಕಾಯ್ದೆ' (ಎಎಫ್ಎಸ್ಪಿಎ)ಯನ್ನು
ರದ್ದು ಪಡಿಸಬೇಕೆಂದು ನೀವು ಕೂಡ ವಾದಿಸಿದ್ದೀರಿ. ಮುಂದಿನ ದಿನಗಳಲ್ಲಿ ಈ
ಕಾಯ್ದೆಯನ್ನು ರದ್ದುಪಡಿಸುವ ಸಾಧ್ಯತೆಗಳಿವೆಯೇ?
ಈಗಿನ ಪರಿಸ್ಥಿತಿ ಸುಧಾರಣೆ ಕಂಡರೆ
ಕಾಯ್ದೆಯನ್ನು ರದ್ದುಪಡಿಸಬೇಕೆಂದು ನಾನು ಹೇಳಿದ್ದೆ. ಆದರೆ ದುರದೃಷ್ಟವಶಾತ್
ಇತ್ತೀಚಿನ ಅಕ್ರಮ ನುಸುಳುವಿಕೆ ಪ್ರಕರಣಗಳು ಆತಂಕಕ್ಕೆ ಕಾರಣವಾಗಿವೆ.
ಹಾಗಿದ್ದರೂ ಒಟ್ಟಾರೆ ಪರಿಸ್ಥಿತಿ ಸುಧಾರಣಾ ಮಟ್ಟದಲ್ಲಿದೆ ಎಂದು ನಾನು
ಹೇಳಬಲ್ಲೆ. ಹಾಗೇ ಭಾರತ-ಪಾಕ್ ಮಾತುಕತೆ ಮೂಲಕ ಇನ್ನೂ ಸುಧಾರಿತ ಸ್ಥಿತಿ
ನಿರ್ಮಾಣವಾದಲ್ಲಿ ಈ ಕಾಯ್ದೆಯ ರದ್ದತಿಗೆ ಹೆಚ್ಚಿನ ಆದ್ಯತೆ ದೊರೆಯಲಿದೆ.
ಜಮ್ಮು ಕಾಶ್ಮೀರದ ಜಲವಿದ್ಯುತ್
ಸಾಮರ್ಥ್ಯವನ್ನು 'ರಾಷ್ಟ್ರೀಯ ಜಲವಿದ್ಯುತ್ ನಿಗಮ' (ಎನ್ಎಚ್ಪಿಸಿ) ಹಾಳು
ಮಾಡಿದೆ ಎಂದು ಮುಖ್ಯವಾಹಿನಿ ನಾಯಕರು ಸೇರಿದಂತೆ ಹಲವು ಮಂದಿ ಆರೋಪ
ಮಾಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ರಾಜ್ಯದಲ್ಲಿದ್ದ ಪರಿಸ್ಥಿತಿಯನ್ನು
ಎನ್ಎಚ್ಪಿಸಿ ಸದುಪಯೋಗಪಡಿಸಿಕೊಂಡಿದೆ. ನಮ್ಮಲ್ಲಿ ಸಂಪನ್ಮೂಲದ ಕೊರತೆ ಇದೆ.
ಅವರು ತಮ್ಮ ಕೆಲಸವನ್ನು ಮಾಡಿದ್ದಾರೆ, ಆದರೆ ಎನ್ಎಚ್ಪಿಸಿ ವಿರುದ್ಧ ಆರೋಪ
ಹೊರಿಸುತ್ತಿರುವ ಮಂದಿ ಅಧಿಕಾರದಲ್ಲಿದ್ದಾಗ ಅದೆಷ್ಟು ವಿದ್ಯುತ್ ಯೋಜನೆಗಳಿಗೆ
ನಾಂದಿ ಹಾಡಿದ್ದರು ಎಂಬ ಪ್ರಶ್ನೆಗೆ ಉತ್ತರಿಸಿಕೊಳ್ಳಲಿ. ಉತ್ತರ ಶೂನ್ಯವೇ
ಆಗಿರುತ್ತದೆ.
ಟಿಎಸ್ಐ |