ಮತ್ತಿಹಳ್ಳಿ ಮದನ್ ಮೋಹನ್, ಹಿರಿಯ ಪತ್ರಕರ್ತ
ಹಾಗೂ ಅಂಕಣಕಾರರು
ನೂರು ಚಾಟಿ ಏಟು ಅಥವಾ ನೂರು ಚಪ್ಪಲಿ ಏಟು ಅಥವಾ ನೂರು ಈರುಳ್ಳಿಗಳನ್ನು
ತಿನ್ನುವುದು
. ರಾಜನೊಬ್ಬ ಅಪರಾಧಿಯೊಬ್ಬನಿಗೆ ನೀಡಿದ ಶಿಕ್ಷೆ ಇದು. ಈ ಪೈಕಿ ಯಾವ ಶಿಕ್ಷೆಯನ್ನು ಆಯ್ಕೆ ಮಾಡುವುದು
ಎಂಬ ಸಂದಿಗ್ಧತೆಗೆ ಬಿದ್ದ ಆರೋಪಿ ಮುಜುಗರಕ್ಕೊಳಗಾಗಿ ಮೂರು ಶಿಕ್ಷೆಗಳ ರುಚಿ
ನೋಡಬಯಸುತ್ತಾನೆ.
ಸುಮಾರು ಇಪ್ಪತ್ತು ತಿಂಗಳು ಪ್ರಾಯದ ದಕ್ಷಿಣ ಭಾರತದ ಮೊದಲ ಬಿಜೆಪಿ
ಸರ್ಕಾರದ ಮನೋಭಾವಕ್ಕೆ ಈ ಕಥೆ ಸರಿಹೊಂದುತ್ತದೆ. ಕೇಸರಿ ಪಕ್ಷ ದಕ್ಷಿಣ ಭಾರತದಲ್ಲಿಯೇ ಮೊದಲ
ಬಾರಿಗೆ ಅಧಿಕಾರ ಹಿಡಿದಾಗ ಜನ ಇದರಿಂದ ಬಹಳಷ್ಟನ್ನು ನಿರೀಕ್ಷಿಸಿದ್ದರು. ಆದರೆ, ಆರಂಭದಿಂದಲೂ ಯಡಿಯೂರಪ್ಪ ನೇತೃತ್ವದ ಬಿಜೆಪಿ
ಸರ್ಕಾರ ತನ್ನ ಬಲಹೀನತೆಯನ್ನು ಹಲವು ಸಂದರ್ಭಗಳಲ್ಲಿ ಜಾಹೀರು ಮಾಡುತ್ತಲೇ
ಬಂದಿದೆ. ಸಮಸ್ಯೆ ಅಥವಾ ಪ್ರಕರಣವೊಂದನ್ನು ಮೊದಮೊದಲು ಗಣನೆಗೆ
ತೆಗೆದುಕೊಳ್ಳದ ಈ ಸರ್ಕಾರ ಕೊನೆಗೆ ಒತ್ತಡಕ್ಕೆ ಮಣಿದು ಕಠಿಣ ನಿಲುವು
ತಳೆದುಬಿಡುತ್ತದೆ. ಈ ಮನೋಭಾವವನ್ನು ತೋರ್ಪಡಿಸುವ ಸರಣಿ ಪ್ರಕರಣಗಳು ಸರ್ಕಾರ
ಹಾಗೂ ಮುಖ್ಯಮಂತ್ರಿಗಳ ವರ್ಚಸ್ಸಿಗೇ ಧಕ್ಕೆ ತರುತ್ತಿವೆ. ಸರ್ಕಾರದ ವಿಶ್ವಾಸಾರ್ಹತೆ ಎಂಥಾ ಕಂದಕ
ಸೃಷ್ಟಿಸಿದೆ ಎಂದರೆ ಗ್ರಾಮೀಣರಿಂದ ಹಿಡಿದು ನಗರವಾಸಿಗಳವರೆಗೆ ಯಾರೂ
ಯಡಿಯೂರಪ್ಪ ಉತ್ತಮ ಆಡಳಿತ ನೀಡಬಲ್ಲರು ಎಂಬ ಭರವಸೆ ಇಟ್ಟುಕೊಂಡಿಲ್ಲ.
ಮುಖ್ಯಮಂತ್ರಿಗಳನ್ನು ಒಳಗೊಂಡು ಬಿಜೆಪಿ ಸಚಿವರು ಮತ್ತು ಹಲವಾರು
ಮುಖಂಡರು ತಮ್ಮ ಸರ್ಕಾರದ ಸಾಧನೆಯ ಬಗ್ಗೆ ರೋಮಾಂಚಕಾರಿಯಾದ ಚಿತ್ರಣ ನೀಡುವ
ಯತ್ನ ನಡೆಸುತ್ತಲೇ ಇದ್ದಾರೆ. ಈ ನಡುವೆ ಕೂಡ ಹಲವು ಬಾರಿ ಬಿಜೆಪಿ ಸರ್ಕಾರ
ಅನಿಶ್ಚಿತತೆಯ ಖೈದಿಯಂತೆ ಕಾಣುತ್ತದೆ. ಆಂತರಿಕ ಗೊಂದಲದಿಂದಾಗಿ ಉದ್ವೇಗ ಹಾಗೂ
ಹಿಂಜರಿಕೆಗೆ ಒಳಗಾಗಿರುವ ಸರ್ಕಾರ ಗೊಂದಲಪುರದೊಳಗೆ ಕಳೆದುಹೋದಂತೆ
ಕಾಣುತ್ತಿದೆ. ಒಮ್ಮೆ ಅಧಿಕಾರ ನಡೆಸಲು ಅವಕಾಶ ಕೊಡಿ ಎಂದು ಚುನಾವಣೆಗೆ
ನಿಂತು ಜಯಭೇರಿ ಬಾರಿಸಿದ ಪಕ್ಷವೊಂದು ಆಡಳಿತ ಚುಕ್ಕಾಣಿ ಹಿಡಿದ ನಂತರ
ಗೆಲುವಿನ ದಾರಿ ಕ್ರಮಿಸಲು ಸೋತಿರುವುದು ನಿಜಕ್ಕೂ ದುರಂತ. ಬಿಜೆಪಿ ಆರಂಭದ ಹಂತದಲ್ಲಿ ಆಪರೇಷನ್ ಕಮಲದಂಥ
ಪ್ರಶ್ನಾರ್ಹ ಹೆಜ್ಜೆಗಳನ್ನಿಡುವ ಮೂಲಕ ಪಕ್ಷ ಅಧಿಕಾರದಲ್ಲಿರುವುದನ್ನು
ಖಚಿತಪಡಿಸಿಕೊಂಡಿತು.
ಆಪರೇಷನ್ ಕಮಲವೇ ಬಿಜೆಪಿ ಇಟ್ಟ ಮೊದಲ ತಪ್ಪು ಹೆಜ್ಜೆ ಇರಬೇಕು. ಮೊದಲಿನಿಂದಲೇ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ
ಸರಿಯಿರಲಿಲ್ಲ. ಉತ್ತಮ ಆಡಳಿತ ಜಾರಿಗೆ ತರುವ ಬದಲು ಸರ್ಕಾರ ಒಂದಲ್ಲಾ
ಒಂದು ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಾ ಸಾಗುತ್ತಿತ್ತು. ಆಪರೇಷನ್ ಕಮಲದ ಪರಿಣಾಮವಾಗಿ ಖಾಲಿ ಬಿದ್ದ
ಸ್ಥಾನಗಳಿಗೆ ನಡೆದ ಉಪಚುನಾವಣೆ, ವಿಧಾನ ಪರಿಷತ್ ಚುನಾವಣೆ ಹಾಗೂ ಲೋಕಸಭಾ ಚುನಾವಣೆ
ಎಂಬ ಸರಣಿ ಚುನಾವಣೆಗಳು ಒಂದರ ಹಿಂದೆ ಒಂದರಂತೆ ಬಂದ ಕಾರಣ ಮೊದಲ ಆರು
ತಿಂಗಳಲ್ಲಿ ಸರ್ಕಾರ ರಾಜ್ಯಕ್ಕೆ ನೀಡಿದ್ದು ಬರೀ ಶೂನ್ಯ. ಕೆಲವು ಸಚಿವ ಸಹದ್ಯೋಗಿಗಳೊಂದಿಗಿನ ಆಂತರಿಕ ಕಲಹ
ಮುಖ್ಯಮಂತ್ರಿಗಳ ವಿರುದ್ಧ ಪಕ್ಷದೊಳಗೆ ಭಿನ್ನಮತವೆಬ್ಬಿಸಿದ್ದು ನಂತರದ ಆರು
ತಿಂಗಳನ್ನು ಅಕ್ಷರಶಃ ಕಬಳಿಸಿಬಿಟ್ಟಿತು.
ಉತ್ತಮ ಆಡಳಿತದ ಭರವಸೆ ನೀಡುತ್ತಾ ಮತ ಯಾಚಿಸಿದ ಬಿಜೆಪಿ ಅಧಿಕಾರದ
ಗದ್ದುಗೆ ಏರಿದ ನಂತರ ತದ್ವಿರುದ್ಧ ಹೆಜ್ಜೆಗಳನ್ನಿಡುತ್ತಾ ಸಾಗಿದ್ದು
ಜನತೆಯಲ್ಲಿ ಅಪನಂಬಿಕೆಯ ಬೀಜ ಬಿತ್ತಿತು. ಅಭಿವೃದ್ಧಿ ಮಂತ್ರ ಜಪಿಸುತ್ತಾ ದೃಢ ನಿರ್ಧಾರದ
ಮೂಲಕ ಮುಂದೆ ಸಾಗಬೇಕಾಗಿದ್ದ ಸರ್ಕಾರವೊಂದು ತೊದಲುತ್ತಾ, ಎಡುವುತ್ತಾ ಮುಂದೆ ಸಾಗಿದ್ದಷ್ಟೇ ಜನತೆಗೆ ಸಿಕ್ಕ
ಪ್ರತಿಫಲ.
ರಾಜಕೀಯ ವಿರೋಧಿಗಳು ಮೀಸೆಯಡಿಯಲ್ಲೇ ನಗಲು ಅನುವು ಮಾಡಿಕೊಟ್ಟಿದ್ದು
ಸರ್ಕಾರದ ನಿರ್ಣಯಗಳ ದೌರ್ಬಲ್ಯ ಅಥವಾ ಗೈರನ್ನು ಸಾಬೀತುಪಡಿಸುತ್ತದೆ. ಹಾಗೆ ಸರ್ಕಾರ ಉತ್ತಮ ಆಡಳಿತ ನೀಡುವುದರಲ್ಲಿ
ವಿಫಲವಾಗುವುದರ ಜೊತೆಗೆ ರಾಜಕೀಯ ವಿಷಯಗಳಲ್ಲಿ ದುರ್ಬಲವೆನಿಸಿಕೊಂಡಿತು.
ಬೆಂಗಳೂರು-ಮೈಸೂರು
ಹೆದ್ದಾರಿ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ ಹಾಗೂ ಅದಕ್ಕೆ
ಜೆಡಿ (ಎಸ್) ವರಿಷ್ಠ ಎಚ್.ಡಿ. ದೇವೇಗೌಡ ನೀಡಿದ ಬೆಂಬಲದ ಪ್ರಕರಣವನ್ನು ಗಮನಿಸಿ. ದೇವೇಗೌಡರು ಯಾವುದಾದರೂ ವಿಷಯಕ್ಕೆ ಕೈ ಹಾಕಿದರೂ
ಅಥವಾ ಏನೂ ಹೇಳದೆ ಸುಮ್ಮನಿದ್ದರೂ ಅದಕ್ಕೊಂದು ರಾಜಕೀಯ
ದೃಷ್ಟಿಕೋನವಿರುತ್ತದೆ ಎಂಬುದು ರಾಜಕೀಯ ಕ್ಷೇತ್ರದಲ್ಲಿ ಸರ್ವವೇದ್ಯ. ನೈಸ್ ವಿರುದ್ಧ ನಡೆಸಿದ ಕಾನೂನು ಸಮರದಲ್ಲಿ
ಹಿನ್ನಡೆ ಅನುಭವಿಸಿದರೂ ಪ್ರತಿಭಟನೆ ಮುಂದುವರಿಸಿದ್ದ ಗೌಡರ ವಿರುದ್ಧ
ಮೊದಲಿಗೆ ಕಟುವಾಗಿ ಮಾತನಾಡಿದರೂ ಆನಂತರ ಗೌಡರ ನಿಲುವಿನ ವಿರುದ್ಧ
ಆಕ್ರಮಣಕ್ಕೇ ಮುಂದಾಗಿದ್ದರು ಯಡಿಯೂರಪ್ಪ. ಇಬ್ಬರ ನಡುವಿನ ವೈಷಮ್ಯ ಕೊನೆಗೆ ಗೌಡರು
ಸಾರ್ವಜನಿಕವಾಗಿ ಮುಖ್ಯಮಂತ್ರಿಗಳ ವಿರುದ್ಧ ಅಶ್ಲೀಲ ಪದಗಳನ್ನು ಬಳಸುವ
ಹಂತಕ್ಕೂ ಸಾಗಿತು. ಕೊನೆಗೆ ದೇವೇಗೌಡ ಹಾಗೂ ರೈತರ ಜೊತೆ ಮಾತುಕತೆಗೆ
ಮುಖ್ಯಮಂತ್ರಿಗಳು ಒಪ್ಪಿದರು. ಈ ಕೆಲಸವನ್ನು ಮೊದಲೇ ಮಾಡಿದ್ದರೆ ಬಹುಶಃ
ಯಡಿಯೂರಪ್ಪ ಅವಮಾನವನ್ನೂ, ಆ ಮೂಲಕ ಗೌಡರು ಪಡೆದುಕೊಂಡ ರಾಜಕೀಯ ಲಾಭವನ್ನೂ
ತಡೆಯಬಹುದಿತ್ತು.
ಎಲ್ಲಾ ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ತಮ್ಮದು ರೈತಪರ ಸರ್ಕಾರ
ಎನ್ನುತ್ತಿದ್ದ ಯಡಿಯೂರಪ್ಪ ಸರ್ಕಾರ, ಕೊಟ್ಟ ಭರವಸೆಗಳನ್ನೆಲ್ಲಾ
ಮರೀಚಿಕೆಯಾಗಿಸಿಬಿಟ್ಟಿತು. ಪಕ್ಷ ಅಧಿಕಾರ ಗದ್ದುಗೆ ಏರಿದ ಅಂದಿನಿಂದ
ಪ್ರಾರಂಭವಾದ ರೈತರ ಸಮಸ್ಯೆ ಅಂದಿನಿಂದ ಇಂದಿನವರೆಗೆ ಸರ್ಕಾರವನ್ನು ಒಂದಲ್ಲಾ
ಒಂದು ರೀತಿಯಲ್ಲಿ ಕಾಡುತ್ತಿದ್ದು ರಾಜ್ಯದ ರೈತರನ್ನು ಭ್ರಮನಿರಸನಗೊಳಿಸಿದೆ.
ಎಲ್ಲೆಡೆಗಳಿಂದಲೂ ಸಮಸ್ಯೆಗಳು ಅಪ್ಪಳಿಸುತ್ತಿದ್ದರೂ ಸರ್ಕಾರಕ್ಕೆ ಕೊಂಚ
ಕರುಣೆ ತೋರಿಸಿದ್ದೆಂದರೆ ವಿರೋಧಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿ (ಎಸ್). ಕಾಂಗ್ರೆಸ್‌ನ ನಿಲುವಿನಲ್ಲಿ ನಿಸ್ವಾರ್ಥತೆಯೇನೂ
ಇರಲಿಲ್ಲ. ಎಂಭತ್ತರ ದಶಕದಿಂದ ಇಲ್ಲಿಯವರೆಗೆ ದುರ್ಬಲ ವಿರೋಧ
ಪಕ್ಷವೆನಿಸಿಕೊಂಡ ಇತಿಹಾಸ ಕಾಂಗ್ರೆಸ್ ಬೆನ್ನಿಗೇ ಇದೆ. ಕಾಂಗ್ರೆಸ್‌ನ ಕಾರ್ಯವೈಖರಿಯನ್ನು ದುರಂತವೆಂದೇ
ಹೇಳಬೇಕು. ಇದನ್ನು ಕರ್ನಾಟಕ ರಾಜ್ಯದ ದುರಂತ ಎಂದೂ ಭಾವಿಸಬಹುದು. ಏಕೆಂದರೆ ಪ್ರಬಲವಾದ ವಿರೋಧ ಪಕ್ಷ ಕೂಡ ರಾಜ್ಯದ
ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದುರಂತವೆಂದರೆ ಆ ಅದೃಷ್ಟ ಕರ್ನಾಟಕಕ್ಕೆ ಈಗಿಲ್ಲ. ತುಲನಾತ್ಮಕವಾಗಿ ನೋಡಿದರೆ ಜೆಡಿ (ಎಸ್) ಕಾರ್ಯವೈಖರಿಯನ್ನು ಮೆಚ್ಚಬೇಕು; ಆದರೆ ಹಲ್ಲಿಲ್ಲದ ಹುಲಿಯ ಅವಸ್ಥೆ ಜೆಡಿ (ಎಸ್)ನದ್ದು. ರಾಜ್ಯ ಹಿಂದೆಂದೂ ಕಾಣದಂಥ ಅಕಾಲಿಕ ಪ್ರವಾಹಕ್ಕೆ
ತುತ್ತಾದ ಸಂದರ್ಭದ ಪುರ್ನವಸತಿ ಹಾಗೂ ರಕ್ಷಣೆ ಕಾರ್ಯದ ವೇಳೆಯಲ್ಲಿ
ಸಂತ್ರಸ್ತರನ್ನು ಅವರ ಪಾಡಿಗೇ ಬಿಟ್ಟ ಕಾಂಗ್ರೆಸ್ ಜಡವಾಗಿತ್ತು. ಇತ್ತ ಆಡಳಿತಾರೂಢ ಪಕ್ಷದ ಮುಖ್ಯಮಂತ್ರಿಗಳು ಹಾಗೂ
ಶಾಸಕರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ರಾಜಕೀಯ ಚದುರಂಗದಾಟದಲ್ಲಿ
ನಿರತರಾಗಿದ್ದರು. ಅಲ್ಲಿ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮನೆ-ಮಠ
ಕಳೆದುಕೊಂಡ ಜನರು ಅಕ್ಷರಶಃ ಬೀದಿ ಪಾಲಾಗಿದ್ದರು. ಇಲ್ಲಿ ರಾಜಕೀಯ ಕಣದಲ್ಲಿ ಅಧಿಕಾರ ಉಳಿಸಿಕೊಳ್ಳಲು
ಸರ್ಕಸ್ ನಡೆಯುತ್ತಿತ್ತು. ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವರ್ಚಸ್ಸಿಗೆ
ಕುಂದುಂಟು ಮಾಡುವಂಥ ಪಕ್ಷದ ದೌರ್ಬಲ್ಯ ಬಿಜೆಪಿಯ ಸಹಜ ಗುಣ. ಸಮರ್ಥ ನಾಯಕತ್ವ ನೀಡುವಲ್ಲಿ ಯಡಿಯೂರಪ್ಪ
ವಿಫಲರಾಗಿದ್ದು ಪ್ರಕರಣವನ್ನು ಮತ್ತಷ್ಟು ಗೊಂದಲಮಯವಾಗಿಸಿತು.
ಇದಕ್ಕೆ ಪ್ರಬಲವಾದ ಕಾರಣವೂ ಇದೆ. ಮೊದಲನೆಯದಾಗಿ ಹಾಲಿ ಬಿಜೆಪಿ ಸರ್ಕಾರದಲ್ಲಿರುವ
ಸಚಿವವರೆಲ್ಲರೂ ಅನನುಭವಿಗಳು. ಸಚಿವ ಸ್ಥಾನಕ್ಕೇರುವ ಮುನ್ನ ಸಾರ್ವಜನಿಕ ಜೀವನದ
ಅನುಭವ ಇಲ್ಲದ ಬಹುತೇಕ ಸಚಿವರಿಗೆ ಇದೊಂದು ಹೊಸ ಅನುಭವವಾಗಿತ್ತು. ಆ ಪೈಕಿ ಕೆಲವರಿಗೆ ಸಾರ್ವಜನಿಕ ಜೀವನದ ಅನುಭವ
ಇದ್ದರೂ, ಅಧಿಕಾರದ ಸವಿರುಚಿಯನ್ನು ಅವರು ಎಂದೂ ಅನುಭವಿಸಿದವರಲ್ಲ. ಸಚಿವಾಲಯದ ಅನುಭವದ ಕೊರತೆ ಅಂಗೈ ಹುಣ್ಣಿನಂತೆ. ಅಧಿಕಾರದ ಅನುಭವವಿದ್ದಿದ್ದು ಬಿಜೆಪಿ- ಜೆಡಿ
(ಎಸ್) ಸಮ್ಮಿಶ್ರ ಸರ್ಕಾರದಲ್ಲಿದ್ದ ಸಚಿವರಿಗಷ್ಟೇ. ಆದರೆ ಅದರಲ್ಲಿ ಬಹುತೇಕರು ಯಶಸ್ವಿ ಸಚಿವರಾಗಿ
ಕಾರ್ಯನಿರ್ವಹಿಸಿರಲಿಲ್ಲ ಎಂಬುದನ್ನು ಉಲ್ಲೇಖಿಸಲೇ ಬೇಕು.
ಎರಡನೆಯದಾಗಿ ಯಡಿಯೂರಪ್ಪ ಏಕಕಾಲಕ್ಕೇ ಪಕ್ಷ ಮತ್ತು ಸರ್ಕಾರದ ಆಸ್ತಿ
ಹಾಗೂ ಹೊರೆ ಎನಿಸಿರುವ ವ್ಯಕ್ತಿ. ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಡುವ
ಮೂಲಕ ಯಡಿಯೂರಪ್ಪ ತಾನು ಪಕ್ಷದ ಆಸ್ತಿ ಎಂದು ಸಾಬೀತುಪಡಿಸಿದ್ದರು. ತಂಡವೊಂದರ ನಾಯಕನೆನಿಸಿಕೊಳ್ಳದೆ ವ್ಯಕ್ತಿ
ಸ್ವಾತಂತ್ರ್ಯವಾದಿಯಂತೆ ಎಲ್ಲೆಡೆ ತಾವೊಬ್ಬರೇ ಇರಬಯಸಿದ್ದ ಯಡಿಯೂರಪ್ಪ
ಕ್ಯಾಬಿನೆಟ್ ಸಚಿವರುಗೆಳನ್ನೆಲ್ಲಾ ದೂರವೇ ಇಟ್ಟು, ಅವರ ಇರುವಿಕೆ ಕೇವಲ ನಾಮಕಾವಸ್ತೆಗಷ್ಟೇ
ಮೀಸಲಾಗಿಸಿ, ಕೆಲವು ಹೊಗಳುಭಟ ಸಚಿವರು ಹಾಗೂ ಆಯ್ದ ಅಧಿಕಾರಿಗಳ
ಸಮಾನಾಸಕ್ತರ ತಂಡ ಕಟ್ಟಿಕೊಂಡು ಕಾರ್ಯ ನಿರ್ವಹಿಸತೊಡಗಿದರು. ಚುನಾವಣಾ ಪೂರ್ವದಲ್ಲಿ
ಪ್ರಮುಖರೆನಿಸಿದ್ದವರೆಲ್ಲನ್ನೂ ದೂರ ಮಾಡಿದ ಯಡಿಯೂರಪ್ಪ, ಚುನಾವಣಾ ನಂತರ 'ಜಾತಿ'ಗೆ
ಅಂಟಿಕೊಂಡಿದ್ದು ಸ್ಪಷ್ಟ. ಇದೆಲ್ಲದರ ಪರಿಣಾಮವಾಗಿ ಬಿಜೆಪಿ ಸಚಿವಾಲಯ 'ವನ್
ಮ್ಯಾನ್ ಆರ್ಮಿ'ಯಂತೆ
ಕಂಗೊಳಿಸತೊಡಗಿತು. ಎಲ್ಲಾ ಸಚಿವರು ಯಡಿಯೂರಪ್ಪ ವ್ಯಕ್ತಿತ್ವದ ಮುಂದೆ
ಕುಬ್ಜರೆನಿಸಿಬಿಟ್ಟರು. ನೆಹರು ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ, ಸಂಗೀತ ಕಚೇರಿಯೊಂದರಲ್ಲಿ ಎಲ್ಲಾ ಸಂಗೀತ
ವಾದ್ಯಗಳನ್ನು ನೆಹರೂ ಒಬ್ಬರೇ ಏಕಕಾಲಕ್ಕೆ ನುಡಿಸುವ
ವ್ಯಂಗ್ಯಚಿತ್ರವೊಂದನ್ನು ಜನಪ್ರಿಯ ವಾರಪತ್ರಿಕೆಯೊಂದು ಪ್ರಕಟಿಸಿತ್ತು. ಕರ್ನಾಟಕದ ಬಿಜೆಪಿ ಸರ್ಕಾರದ ಅವಸ್ಥೆಗೆ ಇದೊಂದು
ಉತ್ತಮ ನಿದರ್ಶನ.
ಇವೆಲ್ಲವೂ ಸುದೀರ್ಘಕಾಲ ಸಾರ್ವಜನಿಕ ಬದುಕು ಸಾಗಿಸಿ ಹಲವು
ಜವಾಬ್ದಾರಿಗಳನ್ನು ನಿರ್ವಹಿಸಿ ವಿಚಿತ್ರ ಕಾರ್ಯಶೈಲಿ ಬೆಳೆಸಿಕೊಂಡಿದ್ದ
ಯಡಿಯೂರಪ್ಪನವರ ವ್ಯಕ್ತಿತ್ವದ ಪರಿಣಾಮಗಳು. ಅವರಿಗೆ ಕೆಲಸಮಾಡುವ ಚಟ ಹೆಚ್ಚು. ಸಿಡುಕು ಸ್ವಭಾವದ ಯಡಿಯೂರಪ್ಪ ಅವರ ಕೋಪ ಹಲವು
ಬಾರಿ ಎಲ್ಲೆ ಮೀರಿ ಸಾಗುವುದುಂಟು. ಅವರು ಆವೇಗಕ್ಕೊಳಗಾಗಿ ಪ್ರತಿಕ್ರಿಯೆ
ನೀಡುತ್ತಾರೆಯೇ ವಿನಾ ಅನುಮೋದನೆ ಅಥವಾ ಸಮಾಲೋಚನೆಯ ಮೂಲಕವಲ್ಲ. ಚರ್ಚೆಗೆ ತೆರೆದುಕೊಳ್ಳದ ಅವರು ತಮ್ಮದೇ
ಇಚ್ಛೆಯಂತೆ ಸಾಗಬಯಸುತ್ತಾರೆ. ಸಂಸ್ಥೆಯೊಂದರ ಮುಖ್ಯಸ್ಥನಾಗಿದ್ದರೆ ಈ ನಿಲುವು
ಯಡಿಯೂರಪ್ಪನವರಿಗೆ ಲಾಭ ತಂದುಕೊಡುತ್ತಿತ್ತೇನೋ; ಆದರೆ ಮುಖ್ಯಮಂತ್ರಿಯಾಗಿ ಹಾಗೂ ಪಕ್ಷವೊಂದರ
ನಾಯಕನಾಗಿ ಈ ಗುಣ ಅವರಿಗೆ ಶೋಭೆ ತರಲಾರದು. ಇದರ ಪರಿಣಾಮವಾಗಿ ಕ್ಯಾಬಿನೆಟ್ ಏಕರೂಪವಾಗಿಲ್ಲ
ಹಾಗೂ ಇಲ್ಲಿ ಸಚಿವರು ತಮ್ಮಗೊಪ್ಪಿಸಿದ ಜವಾಬ್ದಾರಿಯನ್ನು ನಿರ್ವಹಿಸುವತ್ತ
ಗಮನಿಸುತ್ತಿರುವುದಾಗಲಿ ಅಥವಾ ಮುಖ್ಯಮಂತ್ರಿ ಸ್ಥಾನದಲ್ಲಿರುವವರು
ಸಹದ್ಯೋಗಿಗಳ ಮಿತ್ರ, ಮಾರ್ಗದರ್ಶಕನಂತೆ ಕಾರ್ಯನಿರ್ವಹಿಸುವುದಾಗಲಿ
ಕಂಡುಬರುವುದಿಲ್ಲ.
ಬಿಜೆಪಿ ಸರ್ಕಾರದ ಸಚಿವರ ಪಡೆ ಹಾಗೂ ಮುಖ್ಯಮಂತ್ರಿಗಳು ಪ್ರವಾಹದ
ಕಾಲದಲ್ಲಿ ಪ್ರತಿಕ್ರಿಯಿಸಿದ ರೀತಿ ಇದಕ್ಕೆ ಉತ್ತಮ ನಿದರ್ಶನ. ಜಿಲ್ಲೆಯ ಜವಾಬ್ದಾರಿ ಹೊತ್ತಿರುವ ಸಚಿವರು ಹಾಗೂ
ಆಯಾ ಪ್ರದೇಶದ ಶಾಸಕರು ರಕ್ಷಣೆ ಹಾಗೂ ಪುನರ್ವಸತಿ ಕಾರ್ಯಗಳತ್ತ ಜಾಣ ಕುರುಡು
ತೋರುತ್ತಾ ಸಂತ್ರಸ್ತರ ಸಮಸ್ಯೆಗಳಿಗಿಂತ ತಮ್ಮ ಸ್ಥಾನ
ಭದ್ರಪಡಿಸಿಕೊಳ್ಳುವುದರ ಕುರಿತು ತಲೆಕೆಡಿಸಿಕೊಳ್ಳುತ್ತಾ ರಾಜ್ಯದ ಹೊರಗೆ
ಅದ್ದೂರಿ ರೆಸಾರ್ಟ್‌ಗಳಲ್ಲಿ ಕಾಲ ಕಳೆದರು. ನೆರೆಪೀಡಿತ ಪ್ರದೇಶಗಳಿಗೆ
ಮುಖ್ಯಮಂತ್ರಿಗಳೊಬ್ಬರೇ ಭೇಟಿ ನೀಡಿದರು. ತಮ್ಮ ಅಧಿಕಾರ ವ್ಯಾಪ್ತಿಗೆ ಬರುವ ಜಿಲ್ಲೆಗಳ
ಜವಾಬ್ದಾರಿ ಹೊರುವಲ್ಲೂ ಸಚಿವರು ಹೀನಾಯವಾಗಿ ಸೋತರು.
ನಾಯಕತ್ವ ಬದಲಾವಣೆಯ ಬೇಡಿಕೆ ಮುಂದಿಡುತ್ತಾ ರೆಡ್ಡಿ ಸಹೋದರರು
ಬಂಡಾಯವೆದ್ದಿದ್ದು ಸಮಸ್ಯೆಗಳನ್ನು ಮತ್ತಷ್ಟು ಬಿಗಡಾಯಿಸಿತು. ಎರಡು ಬಣಗಳ ನಡುವಿನ ವೈಷಮ್ಯ ಯಾವ ಅತಿಗೆ
ಹೋಯಿತೆಂದರೆ ಭಿನ್ನಮತೀಯರು ಯಡಿಯೂರಪ್ಪ ಒಬ್ಬ 'ಕಂಸ' ಆತನನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎನ್ನುವ
ಕಟು ಟೀಕಾಪ್ರಹಾರವನ್ನೂ ನಡೆಸಿದರು. ಒಂದಷ್ಟು ಕಾಲ ತಮ್ಮ ನಿಲುವಿಗೆ ಬದ್ಧರಾಗಿದ್ದ
ಯಡಿಯೂರಪ್ಪ ಆನಂತರ ತಮ್ಮ ವಿಶ್ವಾಸಾರ್ಹ ಸಚಿವರನ್ನು ಅಧಿಕಾರದಿಂದ
ಕೆಳಗಿಳಿಸಿ, ಅಧಿಕಾರಿಗಳನ್ನು ವರ್ಗಾಯಿಸಿ, ವರ್ಗಾವಣೆಗೊಂಡಿದ್ದ ರೆಡ್ಡಿ ಬಣದ
ಅಧಿಕಾರಿಗಳನ್ನು ಮತ್ತೆ ವಾಪಸು ಕರೆಸಿಕೊಳ್ಳುವ ಮೂಲಕ ರೆಡ್ಡಿಗಳ ಎಲ್ಲಾ
ಬೇಡಿಕೆಗಳನ್ನೂ ಮನ್ನಿಸಿದರು. ಮಾಧ್ಯಮಗಳ ಎದುರು ಮುಖ್ಯಮಂತ್ರಿಗಳು
ಕಣ್ಣೀರುಗರೆಯುತ್ತಾ ಸಾಗುತ್ತಿದ್ದರೆ ಭಿನ್ನಮತೀಯರು ಎದೆಯುಬ್ಬಿಸಿ
ನಡೆಯುತ್ತಾ ಸಾಗಿದ್ದು ಮತ್ತಷ್ಟು ಅಪಮಾನಕ್ಕೆ ಕಾರಣವಾಯಿತು. ಮಾಧ್ಯಮಗಳಲ್ಲಿ ಬಿತ್ತರಗೊಂಡ ದುಃಖತಪ್ತ
ಯಡಿಯೂರಪ್ಪ ಪ್ರಕರಣ ಹೇವರಿಕೆ ಹುಟ್ಟಿಸಿದ್ದು ಮಾತ್ರವಲ್ಲ ಜನತೆಯ ಮುಂದೆ
ಮುಖ್ಯಮಂತ್ರಿ ದುರ್ಬಲರೆನಿಸಿಬಿಟ್ಟರು. ಅಧಿಕಾರ ಕೈಬಿಡಬಾರದು ಎಂಬ ಒಂದೇ ಒಂದು
ಉದ್ದೇಶದಿಂದ ಸಾರ್ವಜನಿಕವಾಗಿ ತಮ್ಮನ್ನು ಆಶ್ಲೀಲವಾಗಿ ಟೀಕಿಸಿದವರನ್ನೂ
ಸಹಿಸಿಕೊಂಡ ಯಡಿಯೂರಪ್ಪ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ
ಸೋತರು. ಜನತೆಯ ಮುಂದೆ ಯಡಿಯೂರಪ್ಪ ತಮ್ಮ ಎಲ್ಲಾ ಗೌರವಗಳನ್ನೂ
ಕಳೆದುಕೊಂಡರು.
ಭರವಸೆ ನೀಡುವುದರಲ್ಲಿ ಉದಾರನೆನಿಸಿಕೊಂಡು ಹತ್ತು ಹಲವು ಅನುದಾನಗಳನ್ನು
ನೀಡುವ ಮಾತು ನೀಡಿದರೂ ಒಳ್ಳೆಯ ಹೆಸರು ಸಂಪಾದಿಸುವುದರಲ್ಲಿ
ಯಡಿಯೂರಪ್ಪನವರಿಗೆ ಅವ್ಯಾವುವೂ ನೆರವಿಗೆ ಬರಲಿಲ್ಲ. ಏಕೆಂದರೆ ಆ ಭರವಸೆಗಳಲ್ಲಿ ಬಹುತೇಕವೂ ಕಾಗದ
ಪತ್ರಗಳಿಗಷ್ಟೇ ಮೀಸಲಾಗಿ, ಭರವಸೆಗಳ ಪಟ್ಟಿ ದಿನದಿಂದ ದಿನಕ್ಕೆ
ಬೆಳೆಯುತ್ತಲೇ ಸಾಗಿತು. ಬಿಜೆಪಿ ನಾಯಕತ್ವ ಕರ್ನಾಟದಲ್ಲಿ ಅಧಿಕಾರ ನಿರ್ವಹಿಸುವ
ರೀತಿಯನ್ನು ಗಮನಿಸಿದರೆ ಇದು ದಕ್ಷಿಣ ಭಾರತದ ಮೊದಲ ಹಾಗೂ ಕೊನೆಯ ಬಿಜೆಪಿ
ಸರ್ಕಾರವೆನ್ನದೆ ವಿಧಿಯಿಲ್ಲ.
ಟಿಎಸ್‌ಐ