User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಬಿಚ್ಚುಮಾತು
ಗುಬ್ಬಚ್ಚಿಯ ಗರಿ ಬಿಚ್ಚಿದ ಸಿಂಹ ನಾದ

ಚೊಚ್ಚಲ ನಿರ್ದೇಶನದ ಚಿತ್ರಕ್ಕೇ ಸ್ವರ್ಣ ಕಮಲ ಬಾಚಿದ ಅಭಯ ಸಿಂಹ ಕನ್ನಡ ಚಿತ್ರ ಲೋಕದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಎನ್.ಕೆ. ಸುಪ್ರಭಾ ಜೊತೆ ಮಾತನಾಡಿದ ಅವರು ’ಗುಬ್ಬಚ್ಚಿಗಳು’ ಚಿತ್ರೀಕರಣದ ಅನುಭವ ಹಾಗೂ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ವಿವರಿಸಿದ್ದಾರೆ

 

ಚೊಚ್ಚಲ ಚಿತ್ರಕ್ಕೇ ರಾಷ್ಟ್ರಪ್ರಶಸ್ತಿ ಸಿಕ್ಕಿತಲ್ಲಾ...

ತುಂಬಾ ಸಂತೋಷ ಆಗಿದೆ.

‘ಗುಬ್ಬಚ್ಚಿಗಳು’ ಚಿತ್ರ ನಿರ್ಮಾಣದ ಹಿಂದಿನ ಉದ್ದೇಶ?

ಕಥೆಯಿಂದ ಪ್ರೇರಣೆ ಪಡೆದು ಈ ಚಿತ್ರ ನಿರ್ದೇಶಿಸಿದೆ. ಗುಬ್ಬಚ್ಚಿಗಳ ಸಂಖ್ಯೆ ತುಂಬಾ ಕಡಿಮೆಯಾಗಿರುವ ಬಗ್ಗೆ ನನ್ನ ಗೆಳೆಯರೊಬ್ಬರು ವಿವರ ನೀಡಿದರು. ನನಗೂ ಈ ವಿಚಾರದ ಮೇಲೆ ಆಸಕ್ತಿ ಬೆಳೆಯಿತು. 5-6 ವರ್ಷಗಳಿಂದ ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿದ್ದು, ಹುಡುಕಿದರೂ ಸಿಗದ ಪರಿಸ್ಥಿತಿ ಉಂಟಾಗಿದೆ. ಇಂಥ ಸಂದರ್ಭದಲ್ಲಿ ಈ ಚಿತ್ರದ ಕಥೆ ನನಗೆ ಬಹಳ ಹಿಡಿಸಿತು. ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ ಕಥೆ ಸರಿಯಾದದ್ದು ಎಂದು ನಿರ್ಧರಿಸಿದೆ.

ಗುಬ್ಬಚ್ಚಿಗಳು ಚಿತ್ರ ನಿರ್ದೇಶನದ ಅನುಭವ?

ಮೊದಲ ಚಿತ್ರವಾಗಿದ್ದರಿಂದ ಒಳ್ಳೆಯ ಅನುಭವ. ಚಿತ್ರ ಹೇಗೆ ಬರುತ್ತೆ, ಯಾವ ರೀತಿ ಚಿತ್ರ ನಿರ್ದೇಶಿಸಬೇಕು ಮೊದಲಾದ ಸಮಸ್ಯೆಗಳು ಕಾಡಿದ್ದು ನಿಜ. ಒಮ್ಮೆ ನಿರ್ದೇಶನದಲ್ಲಿ ತೊಡಗಿದ ಮೇಲೆ ಚಿತ್ರ ಚೆನ್ನಾಗಿ ಮೂಡಿ ಬರುತ್ತಿದೆ ಎಂದು ಅನಿಸಿತು. ಮಕ್ಕಳ ಸಿನಿಮಾ ನಿರ್ದೇಶಿಸುವುದು ಒಂದು ಸವಾಲೇ ಆಗಿತ್ತು. ಮಕ್ಕಳ ಚಿಂತನಾ ಲಹರಿಯನ್ನು ಅನುಸರಿಸಿ ನಿರ್ದೇಶನದಲ್ಲಿ ತೊಡಗಿಸಿಕೊಳ್ಳುವುದು ಸುಲಭದ ಕೆಲಸ ಅಲ್ಲ. ಹಾಗೆಯೇ ಸಣ್ಣ ಬಜೆಟ್ ಚಿತ್ರವಾಗಿದ್ದರಿಂದ, ಪ್ರೊಡಕ್ಷನ್ ಸಮಯದಲ್ಲಿ ಕೆಲವು ಸಮಸ್ಯೆಗಳನ್ನೂ ಎದುರಿಸಿದ್ದೆವು. ಒಟ್ಟಾರೆ ಜುಲೈನಿಂದ ಮಾರ್ಚ್‌ವರೆಗೆ ನಡೆದ ಚಿತ್ರ ನಿರ್ಮಾಣದ ಅನುಭವ ಸೊಗಸಾಗೇ ಇತ್ತು.

ಸಿನಿಮಾ ನಿರ್ದೇಶನದ ಸಂದರ್ಭದಲ್ಲಿ ಪ್ರಶಸ್ತಿ ನಿರೀಕ್ಷಿಸಿದ್ದೀರೇನು?

ಇಲ್ಲ. ಈ ಚಿತ್ರ ಪ್ರೇಕ್ಷಕರಿಗೆ ರುಚಿಸುತ್ತದೆ ಎನ್ನುವ ನಿರೀಕ್ಷೆ ಇತ್ತು. ಹೆಚ್ಚಿನ ಪ್ರಶಂಸೆಗಳು ಸಿಗುತ್ತೆ ಎನ್ನುವ ನಿರೀಕ್ಷೆ ನನಗಿರಲಿಲ್ಲ.

ನಿರ್ದೇಶನದಲ್ಲಿ ಆಸಕ್ತಿ ಹೇಗೆ ಬಂತು? ಆಕಸ್ಮಿಕವಾಗೇ ಬಂದಿದ್ದೆ ಅಥವಾ ಇದು ನಿಮ್ಮ ಕನಸಾಗಿತ್ತೆ?

ನಾನು ಚಿತ್ರ ನಿರ್ದೇಶನಾ ಕ್ಷೇತ್ರಕ್ಕೆ ಬಂದದ್ದು ಮಾತ್ರ ಆಕಸ್ಮಿಕವಾಗಿಯೇ. ಮುಖ್ಯವಾಗಿ ಮಂಗಳೂರಿನ ಸೇಂಟ್ ಅಲೋಶಿಯಸ್‌ನಲ್ಲಿ ಕಲಿತ ಕಾಲೇಜು ದಿನಗಳ ಸಂದರ್ಭದಲ್ಲೇ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಿದ್ದೆ. ಸಿನಿಮಾಗಳ ಬಗ್ಗೆ ಕುತೂಹಲ ಬೆಳೆಸಿಕೊಂಡದ್ದು ಆಗಲೇ. ಸಿನಿಮಾ ಹಿನ್ನೆಲೆ ಏನೂ ಇರಲಿಲ್ಲ. ಪುಣೆಯ ‘ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’ದಲ್ಲಿ ಮೂರು ವರ್ಷಗಳ ತರಬೇತಿ ಪಡೆದೆ. ಈ ಸಂದರ್ಭದಲ್ಲಿ ಚಿತ್ರ ನಿರ್ದೇಶನ, ಮ್ಯೂಸಿಕ್ ವಿಡಿಯೋ, ಸಾಕ್ಷ್ಯಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದೆ. ಜೊತೆಗೆ ಹನ್ನೊಂದು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೆ.

ನಿರ್ದೇಶಕರಾದ ಮೇಲೆ ನಿಮ್ಮಲ್ಲಾದ ಪರಿವರ್ತನೆ?

ಪರಿವರ್ತನೆ ಎಂದರೆ ಹೊಸತನ್ನು ಕಲಿಯುವ ಅವಕಾಶ ಸಿಕ್ಕಿತು ಎನ್ನಬಹುದು. ಹಿಂದೆ ಮಾಡಿದ ತಪ್ಪುಗಳು ಗೊತ್ತಾದವು. ಹೊಸತನ್ನು ಕಲಿಯುತ್ತಾ ಹೋದೆ.

ನಿಮ್ಮ ಮುಂದಿನ ನಿರ್ದೇಶನ? ಮಕ್ಕಳ ಚಿತ್ರವನ್ನೇ ನಿರ್ದೇಶಿಸಬೇಕೆಂದಿದ್ದೀರಾ ಅಥವಾ ಮನೋರಂಜನೆ ಆಧರಿತ ಚಿತ್ರವನ್ನೂ ನಿರ್ದೇಶಿಸುವ ಆಸಕ್ತಿ ಇದೆಯೆ?

ಎಲ್ಲಾ ರೀತಿಯ ಚಿತ್ರಗಳನ್ನೂ ನಿರ್ದೇಶಿಸುವ ಆಸಕ್ತಿ ಇದೆ. ಮಕ್ಕಳ ಚಿತ್ರಗಳನ್ನೇ ನಿರ್ದೇಶಿಸಬೇಕು ಎನ್ನುವ ಮಿತಿಯನ್ನೇನೂ ಹಾಕಿಕೊಂಡಿಲ್ಲ. ಒಂದು ಸಿನಿಮಾ ನಿರ್ದೇಶಿಸಬೇಕೆಂದರೆ ನಿರ್ಮಾಪಕರ ಅಗತ್ಯವಿದೆ. ಮೊದಲ ಚಿತ್ರಕ್ಕೆ ನನಗೆ ಆ ತೊಂದರೆ ಇರಲಿಲ್ಲ. ಬಿ. ಸುರೇಶ್ ಮತ್ತು ಶೈಲಜಾ ನಾಗ್ ನಿರ್ಮಾಪಕರಾಗಲು ಮುಂದೆ ಬಂದರು.

ಹೊಸ ಚಿತ್ರಗಳ ನಿರ್ದೇಶನದ ಬಗ್ಗೆ ಆಲೋಚಿಸಿದ್ದೀರೇನು?

‘ಶಿಕಾರಿ’ ಎನ್ನುವ ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಇದರಲ್ಲಿ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಕಥೆ ಇದೆ. ಸಾಫ್ಟ್‌ವೇರ್ ವಸಾಹತುಶಾಹಿ ಶಕೆಯನ್ನು ಆಧರಿಸಿದ ಕಥೆ ಇದು. ಮಾನವರು ದೈಹಿಕವಾಗಿ ಮತ್ತು ಮಾನಸಿಕವಾಗಿ ವಸಾಹತುಶಾಹಿಗಳಾಗುತ್ತಿರುವ ಕುರಿತಾಗಿ ಈ ಚಿತ್ರಕಥೆಯನ್ನು ರೂಪಿಸಲಾಗಿದೆ.

ಇತ್ತೀಚೆಗೆ ಕನ್ನಡದಲ್ಲಿ ಮಕ್ಕಳ ಸಿನಿಮಾಗಳು ಕಡಿಮೆಯಾಗುತ್ತಿವೆಯಲ್ಲ ಏಕೆ?

ಕನ್ನಡದಲ್ಲಿ ಮಕ್ಕಳ ಚಿತ್ರಗಳು ಬಂದಿವೆ. ಆದರೆ ಈಗಿನ ತಲೆಮಾರಿನ ಯೋಚನಾ ಸರಣಿಯೇ ಬದಲಾಗಿದೆ. ಕಾರ್ಟೂನ್ ನೆಟ್‌ವರ್ಕ್ ಅಥವಾ ಉಳಿದ ಕೆಲವು ಮಾಧ್ಯಮಗಳು ಅವರ ಯೋಚನಾ ಸರಣಿಯನ್ನೇ ಬದಲಾಯಿಸಿವೆ. ನಾವಿಂದು ಮಕ್ಕಳನ್ನು ದೊಡ್ಡವರ ಥರಾ ನಡೆಸಿಕೊಳ್ಳುತ್ತಿದ್ದೇವೆ. ಹಾಗಿರುವಾಗ ಮಕ್ಕಳ ಸಿನಿಮಾದಲ್ಲಿ ಹೊಡೆದಾಟ, ಬಡಿದಾಟ ಮತ್ತು ಇನ್ನಿತರ ಮನೋರಂಜನಾ ಅಂಶಗಳು ಸೇರಿಕೊಂಡಿವೆ. ಈಗಿನ ಟ್ರೆಂಡೇ ಬದಲಾಗಿದೆ.

ಹಿಂದೆಲ್ಲಾ ಕನ್ನಡದಲ್ಲಿ ಬಿಡುಗಡೆಯಾಗಿರುವ ಮಕ್ಕಳ ಸಿನಿಮಾಗಳು ಜನಪ್ರಿಯವಾಗಿರುತ್ತಿದ್ದವು. ಮಕ್ಕಳ ಸಿನಿಮಾಗಳಿಗೆ ಪ್ರೇಕ್ಷಕರು ಇದ್ದರು. ಆದರೆ ಈಗ ಹಾಗಿಲ್ಲ...

ಒಂದು ಕಾಲಘಟ್ಟದಲ್ಲಿ ಇಟ್ಟು ನೋಡಿದಾಗ ಆಗಿನ ಪ್ರಸ್ತುತ ಸಿನಿಮಾಗಳು ಈಗ ಅತ್ಯುತ್ತಮ ಎನಿಸಿಕೊಳ್ಳುತ್ತವೆ. ಇಂದಿನ ಚಿತ್ರಗಳು ಹತ್ತು ವರ್ಷ ಬಿಟ್ಟು ನೋಡಿದರೆ ಆ ಕಾಲಘಟ್ಟಕ್ಕೆ ವಿಭಿನ್ನವಾಗಿ ಕಾಣಬಹುದು. ಹಾಗಾಗಿ ನಾವು ಚಿತ್ರಗಳನ್ನು ಆಯಾಯ ಕಾಲಘಟ್ಟಕ್ಕೆ ಅನುಗುಣವಾಗಿ ನೋಡಬೇಕು.

ಮನೋರಂಜನೆ ಮತ್ತು ಕಲಾತ್ಮಕತೆ ಎರಡೂ ಜೊತೆಯಾಗಿರುವ ಚಿತ್ರಗಳನ್ನು ನೀಡಲು ಸಾಧ್ಯವಿಲ್ಲವೆ?

ಸಾಧ್ಯವಿದೆ. ಅದೇ ಆಗಬೇಕು. ಮಾರುಕಟ್ಟೆಯನ್ನೂ ದೃಷ್ಟಿಯಲ್ಲಿಟ್ಟುಕೊಂಡು ಚಿತ್ರ ನಿರ್ಮಿಸಬೇಕಾಗುತ್ತದೆ. ಹಾಕಿದ ಹಣ ವಾಪಸ್ಸು ಸಿಗಬೇಕಲ್ಲವೆ? ಅಂತಿಮವಾಗಿ ನಾವು ನಿರ್ಮಿಸುತ್ತಿರುವುದು ಒಂದು ಉತ್ಪನ್ನ ಅಷ್ಟೇ. ರೂ. 30-35 ಲಕ್ಷಗಳಷ್ಟು ಸುರಿದು ಚಿತ್ರ ನಿರ್ಮಿಸಿದ ಮೇಲೆ ಆ ಹಣವನ್ನು ವಾಪಾಸು ತೆಗೀಬೇಕು ಎಂದರೆ ಕಲಾತ್ಮಕ ಮತ್ತು ಮನೋರಂಜನೆ ಎರಡೂ ಇರುವ ಸಂವೇದನಾಶೀಲ ಚಿತ್ರಗಳು ಬರಬೇಕು.

ಜನ ಮೆಚ್ಚುವ ಚಿತ್ರಗಳು ಮತ್ತು ಕಲಾತ್ಮಕ ಚಿತ್ರಗಳು ಎನ್ನುವ ವರ್ಗೀಕರಣ ಅಗತ್ಯವೆ? ಚಿತ್ರ ನಿರ್ಮಾಣಕ್ಕೆ ಇಳಿಯುವ ಸಂದರ್ಭದಲ್ಲಿ ಇಂಥ ದ್ವಂದ್ವಗಳು ನಿಮ್ಮನ್ನು ಕಾಡಿದ್ದಿದೆಯೆ?

ಆರಂಭದಲ್ಲಿ ದ್ವಂದ್ವಗಳು ಕಾಡಿದ್ದಿದೆ. ಕಲಾತ್ಮಕತೆ ಅಥವಾ ಮಕ್ಕಳ ಸಿನಿಮಾ ಹೀಗೆ ಯಾವುದಾದರೊಂದು ಪ್ರಕಾರಕ್ಕೆ ಸೀಮಿತವಾಗಿ ಬಿಡುತ್ತೇನೇನೋ ಎಂದು ಭಯವಾಗಿತ್ತು. ಹಾಗಾದಲ್ಲಿ ನನ್ನ ಸಿನಿಮಾ ಕ್ಷೇತ್ರದ ನಿರೀಕ್ಷೆಗಳೆಲ್ಲ ಒಂದು ಪರಿಧಿಯಲ್ಲಿ ಉಳಿದುಬಿಡುತ್ತವೇನೋ ಎನ್ನುವ ಭಯವೂ ಇತ್ತು. ಮುಖ್ಯವಾಗಿ ನಾವು ಒಂದು ಸಿನಿಮಾ ನಿರ್ದೇಶಿಸುವಾಗ ಕಥೆಗೆ ಬದ್ಧರಾಗಿರಬೇಕು.

ಮಕ್ಕಳ ಚಿತ್ರಗಳಿಗೆ ಪ್ರೋತ್ಸಾಹ ಹೇಗಿದೆ?

ಹಣ ಹಾಕಿದ ನಿರ್ಮಾಪಕನಿಗೆ ಲಾಭ ಬರುವುದೂ ಮುಖ್ಯವಾಗುತ್ತದೆ. ಆದರೆ ‘ಗುಬ್ಬಚ್ಚಿಗಳು’ನಂಥ ಚಿತ್ರಗಳನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದಲ್ಲಿ ಪ್ರೇಕ್ಷಕರು ಬರುವುದಿಲ್ಲ. ಆದರೆ ಇಂಥ ಚಿತ್ರಗಳು ತಯಾರಾಗಬೇಕು ಎಂದು ಜನ ಬಯಸುತ್ತಾರೆ. ಉತ್ತಮ ಚಿತ್ರಗಳಿಗೆ ಪ್ರೇಕ್ಷಕರ ಪ್ರೋತ್ಸಾಹ ಸಿಗುವುದೂ ಅಗತ್ಯ. ನಾವು ‘ಗುಬ್ಬಚ್ಚಿಗಳು’ ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದಾಗ ಅದನ್ನು ನೋಡಲು ಜನರು ಪಾಸ್ ಕೇಳುತ್ತಿದ್ದರು. ಒಳ್ಳೇ ಚಿತ್ರಗಳು ಬಿಡುಗಡೆಯಾದಾಗ ಜನರು ನೋಡುವುದಿಲ್ಲ ಎಂದು ಬೇಸರವಾಗಿದ್ದೂ ಇದೆ. ಅಂಥ ನಿರಾಶೆಗಳು ಸಾಕಷ್ಟು ಆಗಿವೆ. ಅವೆಲ್ಲ ಒಂದು ಯೋಜನೆಯನ್ನು ಕಾರ್ಯರೂಪಕ್ಕೆ ತರುವಾಗ ಎದುರಿಸಲೇಬೇಕಾಗುತ್ತದೆ. ಸಿನಿಮಾ ಮಾಡುವಾಗ ನಮಗೆ ಜವಾಬ್ದಾರಿ ಹೇಗಿರುತ್ತದೋ, ಹಾಗೆಯೇ ಪ್ರೇಕ್ಷಕನ ಬದ್ಧತೆಯೂ ಮುಖ್ಯವಾಗುತ್ತದೆ. ಒಳ್ಳೇ ಸಿನಿಮಾ ಕೊಡಲ್ಲ ಎನ್ನುತ್ತಾರೆ. ಆದರೆ ಜನರು ನೋಡುವುದೂ ಲಾಂಗ್-ಮಚ್ಚು ಸಿನಿಮಾಗಳನ್ನೇ. ಪ್ರೇಕ್ಷಕ ಶಿಕ್ಷಿತನಾಗುವವರೆಗೂ ಒಳ್ಳೇ ಸಿನಿಮಾಗಳಿಗೆ ಬೆಲೆ ಇರುವುದಿಲ್ಲ.

ನಿಮ್ಮ ಮಹತ್ಸಾಧನೆ ಏನಾಗಿರುತ್ತದೆ?

ಗೊತ್ತಿಲ್ಲ.

ಇದೇ ವೃತ್ತಿಯಲ್ಲಿ ಮುಂದುವರಿಯಲು ನಿಮಗೆ ಪ್ರೇರಣೆ ಏನು?

ಕಥೆ ಹೇಳುವ ಸ್ವಾರಸ್ಯವೇ ಸಿನಿಮಾಗೆ ಪ್ರೇರಣೆ.

ನಿಮ್ಮ ಕನಸು?

ಪ್ರತೀ ಸಿನಿಮಾನೂ ಒಂದು ಕನಸು. ಒಂದು ಕನಸಿನಿಂದ ಮತ್ತೊಂದು ಕನಸಿಗೆ ಹೋಗುವುದು.

ದೇವರು ಮೂರು ವರಗಳನ್ನು ಕರುಣಿಸಿದರೆ ಏನು ಕೇಳುವಿರಿ?

ದೇವರನ್ನೇ ನಂಬಲ್ಲ. ಅಂದ ಮೇಲೆ ಅಂಥ ನಿರೀಕ್ಷೆಗಳೂ ಇಲ್ಲ.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .