|
| ಪ್ರಶಾಂತೊ ಬ್ಯಾನರ್ಜಿ |
ನುಡಿಚಿತ್ರ ಸಂಪಾದಕ
ದ ಸಂಡೆ ಇಂಡಿಯನ್
|
ಬೆಳಗಿನ ಸೂರ್ಯನ ಸ್ವರ್ಣ ಕಿರಣಗಳು
ನಾನಿದ್ದ ಟೆಂಟ್‌ನೊಳಗೆ ಮಲ್ಲನೆ ಪ್ರವೇಶಿಸಿ, ದಿಂಬಿನ ಮೇಲೆ ಒಂದು ರೂಪಾಯಿ
ನಾಣ್ಯ ಗಾತ್ರದ ವೃತ್ತವೊಂದನ್ನು ನಿರ್ಮಿಸಿದ್ದವು. ಹೊಸ ದಿನವೊಂದು
ಪ್ರಾರಂಭವಾದ ಸಂಕೇತವೆಂಬಂತೆ ಮರದ ಟೊಂಗೆಗಳಿಂದ ಹಕ್ಕಿಗಳ ಕಲರವ ಇಂಪಾಗಿ
ಕೇಳಿ ಬರುತ್ತಿತ್ತು. ಕತ್ತೆಕಿರುಬ ಒಂದು ನನ್ನನ್ನು ಕಚ್ಚಿ-ತಿನ್ನಲು
ಬರುತ್ತಿರುವಂತೆ, ನನ್ನ ಕೈಗಡಿಯಾರ ಕಳ್ಳತನವಾಗುತ್ತಿರುವಂತೆ ಕೆಟ್ಟ
ಕನಸುಗಳು ಬಿದ್ದದ್ದು ಬಿಟ್ಟರೆ ರಾತ್ರಿ ನೆಮ್ಮದಿಯ ನಿದ್ರೆಯನ್ನೇ
ಮಾಡಿದ್ದೆ.
ನನ್ನ ಟೆಂಟ್ ಪಕ್ಕದಲ್ಲಿ ಯಾವುದೋ
ಗಜಗಾತ್ರದ ಜೀವಿ ಸಂಚರಿಸಿದಂತೆ ಕೇಳಿಬಂದ ದಡಬಡಿಕೆ ಮತ್ತು ಮರ್ಮರದಿಂದ
ಕೂಡಿದ್ದ ಶಬ್ದ, ತಣ್ಣನೆಯ ಮುಂಜಾವಿನಲ್ಲಿ ಹಾಸಿಗೆಯಿಂದ ಮೇಲೇಳಲು ಬಿಡದ
ನನ್ನ ಆಲಸ್ಯವನ್ನು ತಟ್ಟನೆ ಬಡಿದೋಡಿಸಿತು. ಕತ್ತೆಕಿರುಬ, ಸಿಂಹ ಗರ್ಜನೆಯ
ಬಗ್ಗೆ ಕಳೆದ ರಾತ್ರಿಯಷ್ಟೇ ಮಾತನಾಡಿದ್ದು ನೆನಪಿಗೆ ಬಂತು. ಕ್ಯಾಂಪ್‌ನೊಳಕ್ಕೆ
ಸಿಂಹ ನುಗ್ಗಿರಬಹುದೇ? ಕೆಲವೊಮ್ಮೆ ಆಫ್ರಿಕಾದ ಕ್ಯಾಂಪ್ ಮತ್ತು
ರೆಸ್ಟೊರೆಂಟ್‌ಗಳ ಒಳಗೆ ನುಗ್ಗಿ ಬರುವ ಕಾಡಾನೆಗಳ ಗುಂಪು, ಸಿಂಹಗಳ ಬಗ್ಗೆ
ಸಾಕ್ಷಚಿತ್ರಗಳನ್ನು ನೋಡಿದ್ದೆ. ಜೊತೆಗೇ ಅಂಥ ಪರಿಸ್ಥಿತಿಯಲ್ಲೂ ಯಾರಿಗೂ
ಅಪಾಯ ಉಂಟಾಗದಂತೆ ಅವುಗಳನ್ನು ಕಾಡಿಗಟ್ಟಿದ ಸಂಗತಿಯನ್ನು ನೋಡಿದ್ದೆ.
ಟೆಂಟ್‌ನಿಂದ ಹೊರಬಂದು ಸುತ್ತಲೂ ಪರೀಕ್ಷಿಸುವ ಸಾಹಸ ಮಾಡಿದೆ. ಎರಡು ಟೆಂಟ್‌ಗಳ
ನಡುವಿನ ಸ್ಥಳಾಂತರದಲ್ಲಿ ಪೊದೆಯೊಂದರೆಡೆಗೆ ದೃಷ್ಟಿ ನೆಟ್ಟು ಕುಳಿತಿದ್ದ
ಬೂದು-ಬಿಳಿ ಬಣ್ಣದ ಮಂಗಗಳ ಗುಂಪೊಂದು ಕಣ್ಣಿಗೆ ಬಿತ್ತು. ಯುದ್ಧಕ್ಕೆ
ಸಿದ್ಧವಾಗಿ ನಿಂತಿರುವಂತೆ ಕಾಣುತ್ತಿದ್ದ ಮಂಗಗಳನ್ನು ನೋಡಿ, ಅಷ್ಟು
ಪುಟ್ಟ ಶರೀರ ಹೊಂದಿರುವ ಅವುಗಳೇ ಧೈರ್ಯವಾಗಿ ನಿಂತಿರುವಾಗ ನಾನು ಅಂಜುವುದು
ಅರ್ಥಹೀನ ಎಂದು ತೀರ್ಮಾನಿಸಿದೆ. ಪೊದೆಯ ಸಮೀಪ ನಡೆಯುತ್ತಿದ್ದಂತೆ
ಕೆಳಮುಖವಾಗಿ ಬಿದ್ದಿದ್ದ ಕಸದ ಬುಟ್ಟಿಯೊಂದರ ಬಳಿ, ಭಾರಿ ಗಾತ್ರದ, ಉದ್ದ
ಕೇಸರವಿದ್ದ ಗಂಡು ಆಲಿವ್ ಬಬೂನ್ (ದೊಡ್ಡ ಮಂಗ) ಕಣ್ಣಿಗೆ ಬಿತ್ತು.
ನೀವು ಬಬೂನ್ ಅನ್ನು ನೋಡಿಲ್ಲವಾದರೆ ಅವು
ಮನೆಯಲ್ಲಿ ಸಾಕುವ ಚಿಕ್ಕ ಬಾಲದ ಮಕ್ಯಾಕು ಜಾತಿಯ ಕಪಿ (ಗಿಡ್ಡಗೆ
ದಪ್ಪವಾಗಿರುವ, ಕಂದು ಬಣ್ಣದ ಕೂತಿ) ಅಥವಾ ಲಂಗೂರ್‌ಗಳಿಗೆ (ಕೃಶಕಾಯದ,
ಉದ್ದನೇ ಬಾಲದ ಕಪ್ಪು ಮುಸಡಿಯ ಕೋತಿ) ಇವು ಹೋಲುತ್ತವೆ. ಆದರೆ ಬಲಿಷ್ಠವಾಗಿ
ಬೆಳೆಯುವ ಬಬೂನ್‌ಗಳು ರಾತ್ರಿ ಕ್ಲಬ್‌ಗಳಲ್ಲಿ ಬಾಗಿಲು ಕಾಯುವ ಧಡೂತಿ
ಮನುಷ್ಯನಂತಿರುತ್ತವೆ. ಚಿರತೆಗಳೂ ಇವನ್ನು ಕಂಡು ಭಯ ಪಡುವಷ್ಟು
ಬಲಿಷ್ಠವಾಗಿರುತ್ತವೆ. ಚುರುಕಾದ ವರ್ವಿಟ್ ಮತ್ತು ದೈತ್ಯಾಕಾರದ ಬಬೂನ್‌ಗಳ
ನಡುವೆ ನಿಂತಿದ್ದ ನನಗೆ ಸಹಾಯಕರಿಲ್ಲದೆ ಅಥವಾ ಆ ಪ್ರಾಣಿಗಳನ್ನು ಹೇಗಾದರೂ
ಅಲ್ಲಿಂದ ಹೊರಗಟ್ಟುವ ಪ್ರಯತ್ನ ಮಾಡದ ಹೊರತು ಅಪಾಯದಿಂದ ಪಾರಾಗಲಾರೆ
ಎನ್ನುವುದು ಸ್ಪಷ್ಟವಾಯಿತು. ಬಬೂನ್‌ಗಳು ಅಗಲವಾಗಿ ಬಾಯಿತೆರೆದು ತಮ್ಮ
ದೈತ್ಯ ಸ್ವರೂಪದ ಕೋರೆ ಹಲ್ಲುಗಳನ್ನು ತೋರುತ್ತಾ ನಿಮ್ಮೆಡೆಗೆ ನೋಡುತ್ತಿವೆ
ಎಂದರೆ ಅಪಾಯದ ಮುನ್ಸೂಚನೆ ಸ್ಪಷ್ಟ... ಆ ಹಲ್ಲುಗಳ ಅಡಕತ್ತರಿಗೆ
ಸಿಲುಕಿದರಂತೂ ಮುಗಿದೇ ಹೋಯಿತು. ಬಬೂನ್ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ
ಪಾರಾದ ನನ್ನನ್ನು ನೋಡಿದ ವಾಹನ ಚಾಲಕ ದಿಕ್ಕು ತೋಚದವನಂತೆ ಒಮ್ಮೆ ಚೀರಿದ...
ಸೂರ್ಯನ ಕಿರಣಗಳು ತಾಕಿ ಚೂಪಾದ ಅಲಗಿನಂತೆ ಮಿಂಚಿ ಮರೆಯಾದ ಆ
ಕೋರೆಹಲ್ಲುಗಳು ಮಾರಾ ಪ್ರದೇಶದ ಮೊದಲ ಮುಂಜಾವಿನಲ್ಲೇ ನನಗೊಂದು
ಎಚ್ಚರಿಕೆಯ ಕರೆಗಂಟೆ ನೀಡಿತು.
ಎರಡು ಗಂಟೆಯ ಬಳಿಕ ಅವೆಕಾಡೋ ಸ್ಯಾಲೆಡ್
ರುಚಿಯನ್ನು ಆಸ್ವಾದಿಸಿ, ಕೆನ್ಯಾ ಮತ್ತು ಟಾಂಜೇನಿಯಾ ಗಡಿ ಪ್ರದೇಶದಲ್ಲಿನ
ಮಸೈಮಾರ ಬಯಲು ಪ್ರದೇಶದ ಯಾನಕ್ಕೆ ಸಜ್ಜುಗೊಂಡೆವು. ಪ್ರಕೃತಿಯ ನೈಜರೂಪ
ದರ್ಶನಕ್ಕೆ ಮಾರ ಸಮತಲ ಪ್ರದೇಶ ಕೈಗನ್ನಡಿ ಇದ್ದಂತೆ. ಸೆಪ್ಟೆಂಬರ್‌ನ
ಆರಂಭಿಕ ದಿನಗಳಲ್ಲಿ, ಟಾಂಜೇನಿಯಾ ಗಡಿ ಭಾಗದ ಹೇಮವರ್ಣದ ಹುಲ್ಲುಗಾವಲು
ವಿಚಿತ್ರ ದನಿ ಮೂಡಿಸುತ್ತದೆ. ಆ ಜೀವಿ ಎಲ್ಲೋ ಎತ್ತರದ ಹುಲ್ಲುಗಳ ನಡುವೆ
ಅವಿತು ಶಬ್ದ ಹೊರಡಿಸುತ್ತಿದ್ದರೆ, ನೀವು ಅದನ್ನು ನೋಡುವ ಮೊದಲೇ ಅವುಗಳ
ಧ್ವನಿ ನಿಮ್ಮ ಕಿವಿದುಂಬಿರುತ್ತದೆ... ನೂ, ನ್ಯೂ ಶಬ್ದ...
ಕ್ಷಣಾರ್ಧದಲ್ಲಿ ಅವು ನಿಮ್ಮ ಕಣ್ಣ ಮುಂದೆ... ಹಸುಗಳನ್ನು ಹೋಲುವ ನೂರಾರು
ಚಿಗರೆಗಳು... ಅಂತ್ಯವೇ ಕಾಣದ ಸಾವಿರಾರು ಮೈಲಿಯ ಭೂಪ್ರದೇಶದಲ್ಲಿ ಅವುಗಳು
ಸಾಲು. ಕೇವಲ ಅಲ್ಲಿನ ಆ ದೃಶ್ಯ.. ನೈಸರ್ಗಿಕ ಚಿತ್ರಣ, ಸಾವಿರ ಮೈಲು
ಹರಡಿದ ಆ ಭೂ-ಪ್ರದೇಶದ ಉದ್ದಗಲದಲ್ಲೂ ಅಲೆಯಾಗಿ ತೇಲಿಬರುತ್ತಿದ್ದ
ಮೆಲುಧ್ವನಿ, ಮೇವು ಮೆಲ್ಲುತ್ತಾ, ಅತ್ತಿತ್ತ ಓಡಾಡುತ್ತಾ, ಅಲೆದಾಡುತ್ತಾ,
ತಮ್ಮ-ತಮ್ಮೊಳಗೇ ಜಗಳವಾಡುವುದರಲ್ಲಿ ನಿರತವಾಗಿರುವ ಅಸಂಖ್ಯಾತ ವನ್ಯ
ಮೃಗಗಳು... ಆ ದೃಶ್ಯವೇ ಮನಸೂರೆಗೊಳ್ಳುವಂತಿತ್ತು. ಆದರೆ ಕತೆ ಆಗತಾನೆ
ಪ್ರಾರಂಭಗೊಂಡಿತ್ತು...
ಈ ಕಾಲದಲ್ಲಿ, ನೈಸರ್ಗಿಕ ಬದಲಾವಣೆಗೆ
ಹೊಂದಿಕೊಳ್ಳಲು ಪ್ರಾಣಿಗಳ ದೊಡ್ಡ ಗುಂಪು, ರಣಕಹಳೆ ಕೇಳಿ ಯುದ್ಧಕ್ಕೆ
ಹೊರಡುವ ಸೈನಿಕರಂತೆ ಸಾಲುಗಟ್ಟಿ ಕೆನ್ಯಾದ ಮಾರ ಬಯಲು ಭೂ ಪ್ರದೇಶದತ್ತ
ವಲಸೆಹೊರಡುತ್ತವೆ. ಮಾರ ಬಯಲು ಪ್ರದೇಶ ಮತ್ತು ಸೆರೆನ್ಗೆಟಿ ಬಯಲು
ಪ್ರದೇಶದ ನಡುವೆ ಹರಿಯುವ ಮಾರ ನದಿ ಈ ಪಯಣಕ್ಕೆ ತೊಡಕು ಉಂಟುಮಾಡುತ್ತದೆ.
ಈ ಸಮಯದಲ್ಲಿ ನದಿ ಶಾಂತವಾಗಿರುವುದಿಲ್ಲ. ಇತ್ತ ಪ್ರಾಣಿಗಳ ಗುಂಪು ಅತ್ತ
ಹಸಿರು ಹುಲ್ಲುಗಾವಲು, ಮಧ್ಯ ರುದ್ರಾವತಾರದ ನದಿ. ಪ್ರವಾಹದ ಜೊತೆಗೆ,
ವಿಶ್ವದ ಅತ್ಯಂತ ಅಪಾಯಕಾರಿ ನೈಲ್ ಮೊಸಳೆಗಳಿಗೆ ಮಾರ ನದಿ ಆವಾಸ ಸ್ಥಳ!
ಅಡಿಯಿಂದ ಮುಡಿವರೆಗೆ ಅಳೆದರೆ ಸುಮಾರು 16 ಅಡಿ ಉದ್ದವಿರುವ ಈ ಮೊಸಳೆಗಳ
ಚೂಪಾದ ಹಲ್ಲು ಒಬ್ಬ ದಷ್ಟಪುಷ್ಟ ಮನುಷ್ಯನನ್ನೇ ಇಬ್ಭಾಗ ಮಾಡುವ ಸಾಮರ್ಥ್ಯ
ಹೊಂದಿರುತ್ತವೆ. ಮಬ್ಬು ಬಣ್ಣದ ನೀರಿನಲ್ಲಿ ಅವಿತು ಕುಳಿತ ಈ ಮೊಸಳೆಗಳು,
ಅರಿವಿಲ್ಲದೆ ಬರುವ ಮುಗ್ಧ ಪ್ರಾಣಿಗಳನ್ನು ಕ್ಷಣ ಮಾತ್ರದಲ್ಲಿ ಹಿಡಿದು
ಕೊಂಡಿರುತ್ತದೆ. ಒಮ್ಮೆ ಆ ಮೃತ್ಯು ರೂಪಿ ಕೋರೆಹಲ್ಲುಗಳ ನಡುವೆ ಸಿಲುಕಿದ
ಪ್ರಾಣಿಯನ್ನು ನೀರಿನಾಳಕ್ಕೆ ಎಳೆದೊಯ್ದು ಛಿದ್ರಗೊಳಿಸಿ ಬಿಡುತ್ತದೆ.
ತಮ್ಮ ರಕ್ತ ಹೀರಲು ಮೊಸಳೆಗಳು ಕಾದು
ಕುಳಿತಿವೆ ಎಂಬುದರ ಅರಿವಿದ್ದರೂ, ನದಿ ತೀರದಲ್ಲಿ ಬಂದು ನಿಲ್ಲುವ
ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ, ಮುಂದಿನ ಸಾಲಿನಲ್ಲಿ
ನಿಂತಿರುವ ಪ್ರಾಣಿಗಳ ಮೇಲೆ ಒತ್ತಡ ಹೆಚ್ಚಾಗುತ್ತಾ ಹೋಗುತ್ತದೆ. ಶಾಲಾ
ಆವರಣವನ್ನು ಸ್ವಚ್ಛಗೊಳಿಸಲು ಆಜ್ಞೆ ನೀಡುತ್ತಿರುವ ಶಿಕ್ಷಕನ ಮುಂದೆ
ಮಕ್ಕಳು ನೀನು-ತಾನು ಎಂದು ನೂಕಾಟ ನಡೆಸುವಂತೆ, ಸಾವಿನ ಬಾಯಿಗೆ
ಆಹುತಿಯಾಗಲು ಪ್ರಾಣಿಗಳು ದೂಕಾಟ ನಡೆಸುತ್ತವೆ. ಒತ್ತಡ ಹೆಚ್ಚಾದಂತೆ
ನಿಗ್ರಹಿಸುವ ಶಕ್ತಿ ಮೀರಿ ಮೊದಲ ಸಾಲಿನ ಪ್ರಾಣಿಗಳು ನದಿಗೆ
ದೂಡಲ್ಪಡುತ್ತಿದ್ದಂತೆ, ಅದರ ಹಿಂದೇ ಸಾಲು ಸಾಲು ಪ್ರಾಣಿಗಳು ನೀರಿಗೆ
ಇಳಿಯುತ್ತವೆ. ಇದಕ್ಕೇ ಕಾದುಕುಳಿತ ಮೊಸಳೆಗಳ ಆಕ್ರಮಣಕ್ಕೆ ಬಲಿಯಾಗುವ
ಜೀವಿಗಳೆಷ್ಟೋ... ವಲಸೆ ಹೊರಟ ಪ್ರಾಣಿ ಸಮೂಹದ ಕಡೆಯ ಪ್ರಾಣಿ ನದಿ ದಾಟುವ
ವೇಳೆಗೆ ಈ ಮೊಸಳೆಗಳು ತಮ್ಮ ಇಡಿಯ ಜೀವಮಾನಕ್ಕೆ ಸಾಕಾಗುವಷ್ಟು ಆಹಾರ ಸೇವನೆ
ಮಾಡಿಕೊಂಡಿರುತ್ತವೆ. ಮೊಸಳೆಯ ಬಾಯಿಗೆ ಸಿಲುಕಿಯೋ ಅಥವಾ ಹಿಂದಿನಿಂದ
ದೂಡಲ್ಪಟ್ಟೋ ಸಾವಿಗೀಡಾದ ಪ್ರಾಣಿಗಳ ಮೃತ ಶರೀರ ನದಿ ತೀರದಲ್ಲಿ
ತೇಲುತ್ತಿರುತ್ತವೆ. ಈ ಹೋರಾಟದ ನಡುವೆಯೂ ಸಾಕಷ್ಟು ಪ್ರಾಣಿಗಳು ನದಿ
ದಾಟುವಲ್ಲಿ ಯಶಸ್ವಿ ಆಗಿರುತ್ತವೆ. ಆದರೆ ಅವುಗಳಲ್ಲಿ ಕೆಲವು ಮೊಸಳೆಯ
ಬಾಯಿಗೆ ಸಿಲುಕಿ ತೀವ್ರ ಗಾಯಗೊಂಡಿರುತ್ತವೆ. ಗಾಯಗೊಂಡ ಪ್ರಾಣಿಗಳಿಗೆ
ಹೆಚ್ಚು ಕಾಲ ಬದುಕುಳಿಯಲು ಸಾಧ್ಯವಾಗುವುದಿಲ್ಲ. ಸಿಂಹ, ಚಿರತೆ ಅಥವಾ
ಮತ್ತಿನ್ಯಾವುದಾದರೂ ಪ್ರಾಣಿಗಳ ಆಕ್ರಮಣಕ್ಕೆ ಬಲಿಯಾಗಿ ಅಸುನೀಗುತ್ತವೆ.
ಇತ್ತ ಸಂತತಿ ಅಭಿವೃದ್ಧಿ, ಹೊಸಾ ಪೀಳಿಗೆಯ ಜನನ, ಮರಿಗಳನ್ನು ರಕ್ಷಿಸುವ
ತಾಯಿಯ ಹೋರಾಟ... ಜೀವನ-ಮರಣದ ಬಯಲಾಟ ನಿರಂತರವಾಗಿ ಸಾಗುತ್ತಿರುತ್ತದೆ.
ಆಶಯ- ನಿರಾಶಯ, ರೌದ್ರ-ಸೌಮ್ಯ, ಸಾವು-ಬದುಕಿನ ವೈವಿಧ್ಯತೆಯಿಂದ ಕೂಡಿದ
ಸೃಷ್ಟಿಯ ಈ ವೈಚಿತ್ರವನ್ನು ಮೂಕ ಪ್ರೇಕ್ಷಕನಂತೆ ನಿಂತು ನೋಡುವುದಷ್ಟೇ
ಮಾನವನ ಕೆಲಸ...
ಈ ಅವಿಸ್ಮರಣೀಯ ನೆನಪಿಗೆ ಮತ್ತೊಂದು
ಸೇರ್ಪಡೆ ಸುಂದರ ಸೂರ್ಯೋದಯ. ಅಂದು ಮುಂಜಾನೆಯ ಪ್ರಶಾಂತತೆ ನನ್ನಲ್ಲಿ
ಕೊಂಚ ಬೇಸರ ಹುಟ್ಟಿಸಿತು. ಅಕೇಶಿಯಾ ಮರದಡಿ ನಿಂತು ನನ್ನ ದುರ್ಬೀನಿನಲ್ಲಿ
ದೃಷ್ಟಿ ಹೊಕ್ಕಿಸಿ ದಿಗಂತದತ್ತ ಅವಲೋಕಿಸಿದೆ. ಅತ್ತಿತ್ತ ಯಾವ ಜೀವಿಯ
ಸುಳಿವೂ ಇರಲಿಲ್ಲ. ಆದರೆ ನನ್ನ ದೃಷ್ಟಿಗೆ ಹತ್ತಿರದಲ್ಲೇ ಯಾವುದೋ ಪ್ರಾಣಿ
ಕಂಡಂತಾಗಿ ದುರ್ಬೀನ್ ಸರಿಸಿ ನೋಡಿದೆ. ನನ್ನಿಂದ ಕೆಲವೇ ಮೀಟರ್ ಅಂತರದಲ್ಲಿ
ಮೂರು ಜಿರಾಫೆಗಳು ನಿಂತಿದ್ದವು. ಸುಮಾರು ಇಪತ್ತು ಅಡಿ ಎತ್ತರದ, ಅತಿ
ಎತ್ತರ ಇರುವ ಸಸ್ತನಿಯಾದ ಜಿರಾಫೆಗಳ ಮಂದ್ರ ನಡುಗೆಯತ್ತ ಚಿತ್ತಹರಿಸಿ
ನಿಂತೆ. 'ಜುರಾಸಿಕ್ ಪಾರ್ಕ್' ಚಿತ್ರದ ಪ್ರಾರಂಭಿಕ ದೃಶ್ಯದಂತಿದ್ದ ಆ
ಸನ್ನಿವೇಶದಲ್ಲಿ, ಜೀವಮಾನದಲ್ಲೇ ಮೊದಲ ಡೈನೋಸಾರ್, ಆಗಸದೆತ್ತರದಲ್ಲಿ ಶಿರ
ಹೊಂದಿರುವ ಬರಚಿಯೋಸರಸ್‌ಗಳನ್ನು ನೋಡುವ ಮನುಷ್ಯನಂತೆ ನಾನು ಆ
ಜಿರಾಫೆಗಳನ್ನು ನೋಡುತ್ತಿದ್ದೆ... ನೈಜ ಪ್ರಕೃತಿಯ ವಿಶ್ವರೂಪವನ್ನು
ಹಿಂದೆಂದೂ ನೋಡಿರದ... ಮತ್ತೆ ಇನ್ನೆಲ್ಲೂ ಕಾಣಲು ಸಾಧ್ಯವಿರದ ಆ ದಿವ್ಯ
ಅನುಭೂತಿಗೆ ನಾನು ಸಾಕ್ಷಿಯಾದೆ.
ದಿಗಂತದ ಆಚೆಗೆ ಸರಿದು ನಡೆದ ಜಿರಾಫೆಗಳು
ಮತ್ತೆ ಬಯಲನ್ನು ಏಕಾಂತಗೊಳಿಸಿದವು. ನನ್ನ ಜೀವಮಾನದಲ್ಲೇ ಮರೆಯಲಾರದ ಕೆಲವು
ಘಟನೆಗಳನ್ನು ಮುಂದಿನ, ಕಡೆಯ ಸಂಚಿಕೆಯಲ್ಲಿ ತಿಳಿಸುತ್ತೇನೆ. ಅಲ್ಲಿಯವರೆಗೂ...
ಐಐಪಿಎಂ
ಥಿಂಕ್ ಟ್ಯಾಂಕ್\
|