User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 ಸಾಕ್ಷಿಪ್ರಜ್ಞೆ
"ಉ. ಕರ್ನಾಟಕದ ಜನತೆ, ಜನಪ್ರತಿನಿಧಿಗಳಿಬ್ಬರಿಗೂ ಎಚ್ಚರವಿಲ್ಲ"

‘ಬೀಜ’, ’ತಮಂಧದ ಕೇಡು’, ’ಧರೆ ಉರಿದರೆ’ಯಂತಹ ಮಹತ್ವದ ಕಥೆಗಳನ್ನು ಬರೆದ ಅಮರೇಶ ನುಗಡೋಣಿ ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಹೈದರಾಬಾದ್ ಕರ್ನಾಟಕ ಭಾಗದ ಬದುಕನ್ನು ಹಲವು ಮಗ್ಗುಲುಗಳಲ್ಲಿ ನಿಷ್ಠುರವಾಗಿ ಕಟ್ಟಿಕೊಡುವ ನುಗಡೋಣಿ ಅವರ ’ಸವಾರಿ’ ಬಹುಚರ್ಚಿತ ಕಥೆ. ಸಾಕ್ಷಿಪ್ರಜ್ಞೆಗಾಗಿ ಅವರೊಂದಿಗೆ ಬಿ.ಎಸ್. ನಾರಾಯಣ ಸ್ವಾಮಿ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ

ಸಮಗ್ರ ಕರ್ನಾಟಕ ರಚನೆಯಾದಾಗಿನಿಂದಲೂ ಉತ್ತರ ಕರ್ನಾಟಕ ಭಾಗ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಇದೆ. ಸರ್ಕಾರಗಳೂ ಉತ್ತರ ಕರ್ನಾಟಕದ ಬಗ್ಗೆ ಬರೀ ಕಣ್ಣೀರು ಒರೆಸುವ ಕೆಲಸವನ್ನಷ್ಟೇ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಆ ಭಾಗದ ಲೇಖಕರು, ಕಲಾವಿದರ ಪಾತ್ರ ಏನು?

ಉತ್ತರ ಕರ್ನಾಟಕದ ಒಳಗೆ ಒಂದು ಹೈದರಾಬಾದ್ ಕರ್ನಾಟಕ ಪ್ರಾಂತ್ಯವಿದೆ. ಉತ್ತರ ಕರ್ನಾಟಕ ಎಂದು ಕರೆಯುವವರ ಗಮನದಲ್ಲಿ ಈ ಹೈದರಾಬಾದ್ ಕರ್ನಾಟಕ ಪ್ರಾಂತ್ಯ ಇರುವುದಿಲ್ಲ. ಇದು ದುರಂತವೇ ಸರಿ. ದುಂಡಾಗಿ ಉತ್ತರ ಕರ್ನಾಟಕ ಎಂದು ಕರೆದು, ಅದರ ಅಭಿವೃದ್ಧಿ ಪ್ರಶ್ನೆ ಬಂದಾಗ ಧಾರವಾಡ, ಬೆಳಗಾವಿ ಕಡೆ ಗಮನ ಹೋಗುವ ಸಾಧ್ಯತೆ ಹೆಚ್ಚು. ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಬೀದರ್, ರಾಯಚೂರು, ಗುಲ್ಬರ್ಗಾ, ಕೊಪ್ಪಳ, ಬಳ್ಳಾರಿ... ಈ ಜಿಲ್ಲೆಗಳ ಅಭಿವೃದ್ಧಿ ತೀರಾ ಕಡಿಮೆ. ಈ ಭಾಗದಲ್ಲಿ ವಿದ್ಯಾವಂತರೇ ಕಮ್ಮಿ. ಅಂದರೆ ಸಾಕ್ಷರ ಪ್ರಮಾಣ ಶೇ. 50ರಷ್ಟು ಕೂಡಾ ಇಲ್ಲ. ಇಲ್ಲಿ ಭೂಮಾಲೀಕರ ಹಿಡಿತ ಇದೆ. ಭೂಮಿ ಎಲ್ಲರಿಗೂ ಇಲ್ಲ. ಹೀಗಾಗಿ ಜನ ಸಮುದಾಯಕ್ಕೆ ಎಚ್ಚರವೇ ಇಲ್ಲ. ಒಂದೋ ಜನಸಮುದಾಯಕ್ಕೆ ಎಚ್ಚರವಿರಬೇಕು, ಇಲ್ಲವೇ ಜನಪ್ರತಿನಿಧಿಗಳಿಗೆ ಇರಬೇಕು. ಇಬ್ಬರಿಗೂ ಎಚ್ಚರ ಇಲ್ಲದ ಪರಿಣಾಮವಾಗಿ ಈ ಪ್ರಾಂತ್ಯ ಅಧೋಗತಿಗೆ ಇಳಿದಿದೆ. ವಿದ್ಯೆ ಕೇಳುವುದು ನಮ್ಮ ಹಕ್ಕು, ಅನ್ನ-ನೀರು ಕೇಳುವುದು ನಮ್ಮ ಹಕ್ಕು, ಕೆಲಸ ಕೇಳುವುದು ನಮ್ಮ ಹಕ್ಕು, ಒಳ್ಳೆಯ ರಸ್ತೆ, ಸಾರಿಗೆ ಸಂಪರ್ಕ, ಇಂಥ ಮೂಲ ಸೌಕರ್ಯಗಳನ್ನು ಪಡೆಯುವುದು ನಮ್ಮ ಹಕ್ಕು ಎಂದು ಈ ಪ್ರಾಂತ್ಯದ ಜನಕ್ಕೆ ಇನ್ನೂ ತಿಳಿದಿಲ್ಲ. ತಿಳಿಸುವ ಎಚ್ಚರದ ಚಳವಳಿಯನ್ನು ಈ ಪ್ರಾಂತ್ಯದ ಲೇಖಕರು, ಕಲಾವಿದರು ಮಾಡಬೇಕು. ಈ ದಿಸೆಯಲ್ಲಿ ಲೇಖಕರು-ಕಲಾವಿದರು ತಕ್ಕಮಟ್ಟಿಗೆ ಕ್ರಿಯಾಶೀಲರಾಗಿದ್ದಾರೆ.

ಬರ, ಪ್ರವಾಹದಂತಹ ಮನ ಕಲಕುವ ಅವಘಡ ನಡೆದಾಗ; ಸಾವು-ನೋವು ಸಂಭವಿಸಿದಾಗಲೂ ಅಧಿಕಾರಶಾಹಿಯ ನಿರ್ಲಕ್ಷ್ಯ ಬದಲಾಗುವುದಿಲ್ಲ...

ಹೌದು. ಅನುದಾನ ದುರ್ಬಳಕೆ, ಗಂಜಿ ಕೇಂದ್ರಗಳ ಅವ್ಯವಸ್ಥೆಯಂಥ ಸಂಗತಿಗಳೆಲ್ಲಾ ತೀರಾ ಸಾಮಾನ್ಯ. ಅವರು ಕೊಡುವ ಪರಿಹಾರಧನ ’ಟಿಫನ್’ಗೂ ಸಾಕಾಗುವುದಿಲ್ಲ. ಇನ್ನು ಸಂತ್ರಸ್ತರಿಗೆ ಅವರು ಕಟ್ಟಿಸಿಕೊಡುವ ಮನೆಗಳೆಲ್ಲಾ ಹಂದಿಗೂಡುಗಳಂತಿರುತ್ತವೆ. ಇದನ್ನೆಲ್ಲಾ ಹೇಗೆ ಪ್ರತಿಭಟಿಸುವುದು? ಈಗ ಚಳವಳಿಗಳೂ ಸತ್ತುಹೋಗಿವೆ. ಹಿಂದೆ ಚಳವಳಿ ಮಾಡುತ್ತಿದ್ದ ಎಡಪಂಥೀಯರೂ ಈಗ ಹಿನ್ನೆಲೆಗೆ ಸರಿದಿದ್ದಾರೆ. ಈಗ ಪ್ರತಿಭಟನೆ ಎಂಬುದು ’ವಾಚಕರ ವಾಣಿ’ಗೆ ಒಂದು ಪತ್ರ ಬರೆಯುವ ಮಟ್ಟಕ್ಕೆ ಬಂದು ನಿಂತಿದೆ.

ಗಡಿನಾಡ ಕನ್ನಡಿಗರ ಇಂದಿನ ಪ್ರಮುಖ ಸಮಸ್ಯೆ ಯಾವುದು?

ಜಾಗತೀಕರಣ ಹೆಚ್ಚಾದಂತೆ ಗಡಿನಾಡ ಕನ್ನಡಿಗರ ಸಮಸ್ಯೆಗಳಿಗೆ ಬೇರೆ ರೀತಿಯ ಪರಿಹಾರಗಳು ದೊರೆಯುತ್ತಿರಬಹುದು. ಭಾಷೆ ಮತ್ತು ಸಂಸ್ಕೃತಿ ಉಳಿಸಿಕೊಳ್ಳುವ ಹಂಬಲ ಜಾಗತೀಕರಣದ ಸಂದರ್ಭದಲ್ಲಿ ಹಿನ್ನೆಲೆಗೆ ಸರಿಯುತ್ತಿದೆ. ಗಡಿನಾಡುಗಳಲ್ಲಿ ರಾಜ್ಯಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಸರಿಯಾಗಿ ಒದಗಿಸಬೇಕು. ರಾಜಧಾನಿಯಿಂದ ದೂರ ಇರುವ ಕೊರಗು ಈ ಗಡಿ ಪ್ರಾಂತ್ಯಗಳಿಗೆ ಇರುತ್ತದೆ. ಸೊಲ್ಲಾಪುರ-ಗುಲ್ಬರ್ಗಾ, ಕೊಲ್ಲಾಪುರ-ಗೋಕಾಕ, ರಾಯಚೂರು-ಹೈದರಾಬಾದ್, ಮಂಗಳೂರು-ಕಾಸರಗೋಡು ಇವುಗಳಿಗೆ ಗಡಿ ಇದ್ದರೂ ಸಾಂಸ್ಕೃತಿಕವಾಗಿ ಬಾಂಧವ್ಯಗಳಿವೆ.

ರಾಜ್ಯ ರಾಜಕಾರಣದಲ್ಲಿ ಇಂದು ಹಣಬಲ, ತೋಳ್ಬಲವೇ ಮೇಳೈಸುತ್ತಿದೆ...

ನಿಜ. ನಾನಿರುವ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಜನರನ್ನು ಭ್ರಷ್ಟರನ್ನಾಗಿ ಮಾಡುವ ಪ್ರಯತ್ನ ಸರ್ಕಾರಗಳಿಂದಲೇ ನಡೆಯುತ್ತಿದೆ. ಆದರೂ ಜನರು ಯೋಚಿಸುತ್ತಾರೆ. ನಮ್ಮ ಜಿಲ್ಲೆಯಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ವೋಟುಗಳನ್ನು ಖರೀದಿಸಲಾಯಿತು. ವೋಟು ಮಾರಿಕೊಂಡವರು ನಂತರ ಒದ್ದಾಡಿದರು. ಆ ಚುನಾವಣೆಯಾದ ಮೇಲೆ ನಡೆದ ಲೋಕಸಭೆ ಚುನಾವಣೆಯಲ್ಲಿ ಹಿಂದಿನಂತೆಯೇ ವೋಟು ಕೊಂಡುಕೊಳ್ಳಲು ಯತ್ನಿಸಿದರು. ಆದರೆ ಜನರು ಬಗ್ಗಲಿಲ್ಲ. ತಮಗೆ ಸರಿ ಅನ್ನಿಸಿದ್ದನ್ನು ಮಾಡಿದರು. ವೋಟು ಕೊಳ್ಳುವುದು ಸುಲಭ ಎಂದುಕೊಂಡಿದ್ದ ರಾಜಕಾರಣಿಗಳು ತತ್ತರಿಸಿದರು. ಹೀಗಾಗಿ ಪ್ರಜಾಪ್ರಭುತ್ವದ ಅರ್ಥದಲ್ಲಿ ಏರುಪೇರಾಗಬಹುದು. ಆದರೆ ಅದು ನಮಗೆ ಬೇಕು. ಜಾಗತೀಕರಣ, ಖಾಸಗೀಕರಣಗಳ ವ್ಯವಸ್ಥೆಯಲ್ಲಿ ಸರ್ಕಾರಗಳೇ ದುರ್ಬಲವಾಗುತ್ತಿವೆ. ಜನರ ಆಶೋತ್ತರಗಳನ್ನು ಪೂರೈಸುವುದಕ್ಕೆ ಅಸಹಾಯಕತೆ ತಲೆದೋರಿದೆ ಎಂದು ಕಾಣುತ್ತದೆ.

ರಾಷ್ಟ್ರಿಯವಾದ ಮತ್ತು ಧರ್ಮ ಸಂರಕ್ಷಣೆಯ ಹೆಸರಿನಲ್ಲಿ ಕೋಮು ಶಕ್ತಿಗಳು ರಾಜ್ಯದಲ್ಲಿ ಪ್ರಬಲವಾಗುತ್ತಾ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಮುಂದಾಗಿವೆ. ಕರ್ನಾಟಕದ ಶಾಂತಿಪ್ರಿಯತೆಯನ್ನು ಮರುಸ್ಥಾಪಿಸುವಲ್ಲಿ ಪ್ರಜ್ಞಾವಂತರ ಮತ್ತು ಯುವ ಲೇಖಕರ ಪಾತ್ರವೇನು?

ಕೆಡಿಸುವ ಕೆಲಸಗಳು ಮತ್ತು ಕೂಡಿಸುವ ಕೆಲಸಗಳು ಒಟ್ಟೊಟ್ಟ್ಟಿಗೇ ನಡೆಯುತ್ತಿವೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ, ಸಂಸ್ಕೃತಿ ಪರಂಪರೆಯಲ್ಲಿ ಕೂಡಿ ಬದುಕುವುದಕ್ಕೆ ಪ್ರಾಮುಖ್ಯತೆ ಇದೆ. ಕೂಡಿ ಬದುಕುವುದನ್ನು ಒಂದು ಮಾದರಿಯಾಗಿ ತೋರಿಸಬಾರದು. ಅದು ಸಹಜವಾಗಿ ಇರಬೇಕು. ’ಓಂ ಶ್ರೀ ಹೈಂಸಿ ಹಜಾರ್, ಪಾಂಚೋಪೀರ್ ಪೈಗಂಬರ್ ಮೌನೋದ್ದೀನ್ ಕಾಶಿಪತಿ ಗಂಗಾಧರ ಹರಹರ ಮಹಾದೇವ’ ಎಂದು ಅತ್ಯಂತ ಸಹಜವಾಗಿ ಮಂತ್ರ ಹೇಳಿದ ನಾಡು ನಮ್ಮದು. ಯುವ ಲೇಖಕರು ಇಂಥ ಬದುಕನ್ನು ಚಿತ್ರಿಸಬೇಕು.

ಬಹುದೀರ್ಘ ಕಾಲ ಆಳಿದ ಕಾಂಗ್ರೆಸ್ ದಲಿತ ಸಮುದಾಯಕ್ಕೆ ಮೀಸಲಾತಿ ಒದಗಿಸಿತೇ ವಿನಾ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಿಲ್ಲ. ಆ ಸಮುದಾಯದಲ್ಲಿ ಒಂದೊಮ್ಮೆ ಆತ್ಮವಿಶ್ವಾಸದ ಭರವಸೆ ಮೂಡಿಸಿದ ಬಿಎಸ್‌ಪಿ ಬಗ್ಗೆಯೇ ಈಗ ಭ್ರಮ ನಿರಸನವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ದಲಿತ ಸಮುದಾಯದ ಆಯ್ಕೆ ಏನು?

ದಲಿತ ಸಮುದಾಯವು ಪಕ್ಷದ ಮುಖೇನ ಚುನಾವಣೆ ಎದುರಿಸಿ ಆಳುವ ಪಕ್ಷವಾಗಿ ನಿಲ್ಲುವ ಕನಸನ್ನು ಕರ್ನಾಟಕದಲ್ಲಿ ಕಾಣುವುದಕ್ಕೆ ಕಾಲ ಇನ್ನೂ ಪಕ್ವವಾಗಿಲ್ಲ. ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕಾಗಿದೆ. ವಿರೋಧ ಪಕ್ಷವಾಗಿ ಬಲಗೊಳ್ಳುವ ದಾರಿಯಲ್ಲಿ ಸಾಗಬೇಕು. ಅಂದರೆ ದಲಿತ ಸಮುದಾಯ ಒಟ್ಟಾಗಿ ನಿಲ್ಲುವ ಗುಣವನ್ನು ಬೆಳೆಸಿಕೊಳ್ಳಬೇಕು.

ಇತ್ತೀಚೆಗಿನ ಕೆಲವು ದಶಕಗಳಿಂದ ದಲಿತ ಸಮುದಾಯ ’ಸಾಂಸ್ಕೃತಿಕ ಆತ್ಮವಿಶ್ವಾಸ’ವನ್ನು ಗಳಿಸಿಕೊಳ್ಳುವತ್ತ ದಾಪುಗಾಲಿಕ್ಕುತ್ತಿದೆ. ಅದರ ಜೊತೆಯಲ್ಲಿಯೇ ’ದಲಿತ್ ಫಂಡಮೆಂಟಲಿಸಂ’ ಕೂಡ ವ್ಯಾಪಕವಾಗುತ್ತಿದೆ. ಇದನ್ನು ನಿರ್ವಹಿಸುವ ಬಗೆಯಾದರೂ ಹೇಗೆ?

ಎಲ್ಲ ಸಮುದಾಯದಲ್ಲಿ ಈ ಗುಣ ಇರುತ್ತದೆ. ಅಂದರೆ ಒಂದು ಸಮುದಾಯ ಆರ್ಥಿಕವಾಗಿ ಸಬಲವಾಗುತ್ತ ನಡೆದಂತೆ ಅದರ ಮೂಲಭೂತವಾದವು ಚಿಗುರತೊಡಗುತ್ತದೆ. ’ಸಾಂಸ್ಕೃತಿಕ ಆತ್ಮವಿಶ್ವಾಸ’ ಇರಬೇಕು. ಆದರೆ ಅದು ಆಯುಧವಾಗಬಾರದು. ಬಡತನವಿದ್ದಲ್ಲಿ ಕೂಡಿ ಬಾಳುವ ಗುಣವಿರುತ್ತದೆ, ಹಾಗೆಂದು ಬಡತನ ಕಾಯ್ದುಕೊಳ್ಳಬೇಕೆ? ಇಲ್ಲ. ಅಗತ್ಯಕ್ಕಿಂತ ಹೆಚ್ಚು ಬಯಸುವುದನ್ನು ತಡೆಯಬೇಕು. ಇದು ಮನುಷ್ಯ ಸಮುದಾಯದ ನೀತಿಯಾಗಬೇಕು.

ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆ ಈಗ ಅಗತ್ಯವಿದೆಯೇ? ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಇದೇ ಅಡ್ಡಿಯಾಗಿದೆಯೇ? ಅಂತರ್ಜಾತಿ ವಿವಾಹಗಳು ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡುವಲ್ಲಿ ಸಹಕಾರಿಯೇ?

ಅಂತರ್ಜಾತಿ ವಿವಾಹಗಳು ಜಾತಿ ವ್ಯವಸ್ಥೆಯ ನಿರ್ಮೂಲನ ಮಾಡಬಹುದು ಎಂದು ಅಂದು ಕೊಂಡಿದ್ದೆವು. ಬಸವಣ್ಣನ ಕಾಲದಲ್ಲಿ ಈ ಪ್ರಯೋಗ ನಡೆಯಿತು. ನಂತರ ಲೋಹಿಯಾ ಪ್ರಯತ್ನಿಸಿದರು. ಆದರೆ ಈಗ ಏನಾಗಿದೆ ಅಂದರೆ ಅಂತರ್ಜಾತಿ ವಿವಾಹಗಳು ನಡೆದರೂ ಹುಟ್ಟುವ ಮಕ್ಕಳು ತಂದೆಯ ಜಾತಿ ಸಮುದಾಯದಲ್ಲಿ ಸೇರಿ ಬೆಳೆಯುತ್ತವೆ. ಏಕೆಂದರೆ, ಜಾತಿ ಆಧಾರಿತ ಮೀಸಲಾತಿ ಇರುವುದರಿಂದ ಹೀಗಾಗುತ್ತಿದೆ. ಮೀಸಲಾತಿ ತೆಗೆದರೆ ಹಿಂದುಳಿದ ಸಮುದಾಯಗಳಿಗೆ ಕಷ್ಟವಾಗಬಹುದು. ಆದರೆ ಸಮಸ್ಯೆ ಸರಳವಿಲ್ಲ. ಜಾತಿಗಳು ತಮ್ಮೊಳಗೆ ಬಲಗೊಳ್ಳುತ್ತಾ ದಾಪುಗಾಲು ಹಾಕುವುದನ್ನು ಕಂಡರೆ ಭಯವಾಗುತ್ತದೆ.

ಶೋಷಿತ ಸಮುದಾಯದಲ್ಲಿ ಆತ್ಮವಿಶ್ವಾಸ ಮೂಡಿಸಲು ಇಂಗ್ಲಿಷ್ ಮಾಧ್ಯಮ ಶಿಕ್ಷಣ ಅಗತ್ಯವೇ? ಅಥವಾ ಪ್ರಾಥಮಿಕ ಮಟ್ಟದಲ್ಲಿ ಮಾತೃಭಾಷೆ/ಪ್ರಾದೇಶಿಕ ಭಾಷಾ ಶಿಕ್ಷಣ ಕಡ್ಡಾಯಗೊಳಿಸುವುದು ಸೂಕ್ತವೇ?

ತಾಯಿಭಾಷೆಯಲ್ಲೇ ಆಗಲಿ ಪ್ರಾದೇಶಿಕ ಭಾಷೆಯಲ್ಲೇ ಆಗಲಿ ಪಡೆದ ಶಿಕ್ಷಣದ ಆತ್ಮವಿಶ್ವಾಸದಿಂದ ಬದುಕುವ ವಾತಾವರಣ ಇರಬೇಕು. ಇದು ಇಲ್ಲ ಎಂದಾಗ ಏನು ಮಾಡಬೇಕು? ಜಾಗತೀಕರಣ ಸಂದರ್ಭದಲ್ಲಿ ಇಂಗ್ಲಿಷ್ ಮುಖ್ಯವಾಗಿದೆ. ಅದು ಬಿಟ್ಟರೆ ಗತಿಯಿಲ್ಲ ಎಂಬ ವಾತಾವರಣವನ್ನು ಹುಟ್ಟು ಹಾಕಲಾಗಿದೆ. ಅಂದಾಗ ಎಲ್ಲ ಸಮುದಾಯಗಳು ಇಂಗ್ಲಿಷಿಗೆ ಮೊರೆಹೋಗುತ್ತಿವೆ. ಸರ್ಕಾರವೂ ಇಂಗ್ಲಿಷ್ ಅನ್ನು ಒಳಗೆ ಬಿಟ್ಟುಕೊಂಡಿದೆ. ಅದೇ ಗತಿ ಎಂಬಂತೆ ಭಾವಿಸುತ್ತಿದೆ. ಜೊತೆಗೆ ’ಮಾತೃಭಾಷೆ’ಯಲ್ಲಿ ಶಿಕ್ಷಣ ಕಡ್ಡಾಯ ಎಂದು ಹೇಳುತ್ತಿರುವಾಗಲೇ ಅದು ಹುಸಿ ಎಂದು ಗೊತ್ತಾಗುತ್ತಿದೆ.

ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿ, ದೇಶಾದ್ಯಂತ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಗೆ ತರುವುದು ಶೈಕ್ಷಣಿಕ/ ಪ್ರಾದೇಶಿಕ ಅಸಮತೋಲನಕ್ಕೆ ಪರಿಹಾರ ಆಗಬಲ್ಲುದೇ?

ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಆಗುತ್ತದೆ. ಖಾಸಗೀಕರಣಕ್ಕೆ ದಾರಿ ಮಾಡಿಕೊಟ್ಟಿರುವುದು ಇದಕ್ಕೆ ಅಡ್ಡಗಾಲಾಗುತ್ತದೆ. ಸರ್ಕಾರಕ್ಕೆ ಒಂದು ನೀತಿ, ಖಾಸಗಿ ವಲಯಕ್ಕೇ ಒಂದು ನೀತಿ ಆಗಿದೆ. ಇದು ಬದಲಾಗಬೇಕು.

ಕನ್ನಡ, ತೆಲುಗುವಿನಂತಹ ಭಾಷೆಗಳು ಸಾಕಷ್ಟು ಸತ್ವಯುತವಾಗಿದ್ದರೂ ಅವುಗಳ ಬಳಕೆ ಗಮನಿಸಿದರೆ ಮುಂದಿನ ಒಂದು ಶತಮಾನದಲ್ಲಿ ಈ ಭಾಷೆಗಳು ಉಳಿಯಲಿವೆಯೇ ಎಂಬ ಅನುಮಾನ ವಿದ್ವಾಂಸರ ವಲಯದಲ್ಲಿ ಕಾಡುತ್ತಿದೆ. ನಿಮ್ಮ ಅಭಿಪ್ರಾಯವೇನು?

ಈ ಭಾಷೆಗಳನ್ನು ಬಳಸಿ ಬದುಕುವ ಅವಕಾಶಗಳು ಮನುಷ್ಯನಿಗೆ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಉಳಿಯುತ್ತವೆ. ದೇಶ ಭಾಷೆಗಳಲ್ಲಿ ಜ್ಞಾನದ ಉತ್ಪನ್ನವನ್ನು ಅಭಿವೃದ್ಧಿಪಡಿಸಬೇಕೆಂದು ತೋರುತ್ತದೆ. ಭಾಷೆಗಳ ಬಳಕೆ ಕಮ್ಮಿಯಾದರೆ ಭಾಷೆ ಹಿನ್ನೆಲೆಗೆ ಸರಿಯುತ್ತಿರುವುದು ಈಗ ನಮ್ಮ ಅರಿವಿಗೆ ಬಂದಿದೆ. ಆಯಾ ರಾಜ್ಯಗಳು ತಮ್ಮ ಭಾಷೆಗಳನ್ನು ಬಳಸಿ ಬದುಕುವಂತೆ ಯೋಜನೆಗಳನ್ನು ರೂಪಿಸಿ ಕ್ರಿಯಾಶೀಲಗೊಳಿಸಬೇಕು. ಆದರೀಗ ತಾಯಿ ಭಾಷೆಯನ್ನು ಕಲಿತು ಬದುಕುತ್ತೇನೆ ಎಂಬ ಭರವಸೆಯೇ ನಾಶವಾಗುತ್ತಿದೆ. ತಾಯಿ ಭಾಷೆಯಲ್ಲಿ ಮಾತನಾಡುವುದು, ಬದುಕುವುದನ್ನು ಕಲಿಯುವುದು ಸ್ವಾಭಿಮಾನದ ಸಂಗತಿಯಾಗಬೇಕಿದೆ. ಇದಕ್ಕೆ ಸರ್ಕಾರ ಮತ್ತು ಜನತೆ ಸಿದ್ಧವಾಗಬೇಕು.

ಕನ್ನಡ ಸಂಸ್ಕೃತಿ ಮತ್ತು ಅಕಾಡೆಮಿಕ್ ವಲಯದಲ್ಲಿ ’ಹಂಪಿ ವಿಶ್ವವಿದ್ಯಾಲಯ’ದ ಪ್ರಾಮುಖ್ಯತೆ ಏನು? ಅದರ ಸ್ಥಾಪನೆಯ ಮೂಲ ಉದ್ದೇಶ ಈಗ ’ಡೈವರ್ಟ್’ ಆಗಿದೆ ಎನ್ನಿಸುತ್ತಿದೆಯೇ? ಇಂಥ ಇನ್ನಷ್ಟು ವಿಶ್ವವಿದ್ಯಾಲಯಗಳ ಅಗತ್ಯ ರಾಜ್ಯಕ್ಕೆ ಇದೆಯೇ?

ಈ ವಿಶ್ವವಿದ್ಯಾಲಯದ ಹೆಸರು ’ಕನ್ನಡ ವಿಶ್ವವಿದ್ಯಾಲಯ, ಹಂಪಿ’ ಎಂದು. ಅನೇಕರು ’ಹಂಪಿ ವಿಶ್ವವಿದ್ಯಾಲಯ’ ಎಂದುಬಿಡುತ್ತಾರೆ. ಇದು ಇಲ್ಲಿರುವ ನಮಗೆ ಚೂರು ಮುಜುಗರದ ವಿಷಯ. ಕನ್ನಡ ಅಧ್ಯಯನವೇ ಈ ವಿಶ್ವವಿದ್ಯಾಲಯದ ಪ್ರಮುಖ ಉದ್ದೇಶ. ತಕ್ಕ ಮಟ್ಟಿಗೆ ಈ ಉದ್ದೇಶ ಕೈಗೂಡಿದೆ. ’ಮೂಲ ಉದ್ದೇಶ’ ಅನ್ನುವುದೇ ಸರಿಯಾದುದಲ್ಲ. ಕನ್ನಡದ ಸಮಸ್ಯೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತವೆ. ಅವುಗಳ ಅಧ್ಯಯನದ ದಾರಿಗಳೂ ಭಿನ್ನವಾಗುತ್ತದೆ. ಮೂಲ ಉದ್ದೇಶ ಸಾಮಾಜಿಕ-ಆರ್ಥಿಕ ಬೆಳವಣಿಗೆಗಳನ್ನು ಇಟ್ಟುಕೊಂಡರೆ ಸಾಮಾಜಿಕ ಬೆಳವಣಿಗೆಗಳನ್ನು ಕಡೆಗಣಿಸಿದಂತಾಗುವುದಿಲ್ಲವೇ? ಇಂಥ ವಿಶ್ವವಿದ್ಯಾಲಯಗಳು ಬೇಕೆ, ಬೇಡವೇ? ಎಂಬುದು ಚರ್ಚೆಯ ವಿಷಯವಾಗುತ್ತದೆ. ಆದರೆ ವಿಶ್ವವಿದ್ಯಾಲಯಗಳು ಬೇಕು. ಅಷ್ಟೇ ಮುಖ್ಯವಾದುದು ಅತ್ಯುತ್ತಮ ಬೌದ್ಧಿಕ ಮನಸ್ಸಿನ ಕುಲಪತಿಗಳು ಬೇಕೆಂಬುದು. ಅತ್ಯುತ್ತಮ ಕುಲಪತಿಗಳಾಗುವವರ ಸಂಖ್ಯೆಯೇನೊ ಬಹಳವಿದೆ. ಆದರೆ ಅಂಥವರಿಗೆ ರಾಜಕೀಯ ಬೆಂಬಲವಿರುವುದಿಲ್ಲ.

ಜ್ಞಾನದ ಆಗರವಾಗಬೇಕಾದ ವಿಶ್ವವಿದ್ಯಾಲಯಗಳು ಇಂದು ಹಗರಣಗಳ ಕೊಂಪೆಯಾಗುತ್ತಿವೆ. ಇದಕ್ಕೆ ದೂಷಿಸಬೇಕಿರುವುದು ಸರ್ಕಾರವನ್ನೇ, ಆಡಳಿತ ಮಂಡಳಿಯನ್ನೇ ಅಥವಾ ಉಪನ್ಯಾಸಕರನ್ನೇ?... ಮುಖ್ಯವಾಗಿ ತಪ್ಪಿರುವುದು ಎಲ್ಲಿ?

ಈ ಪ್ರಶ್ನೆಗೆ ಉತ್ತರಿಸುವ ಶಕ್ತಿ ನನಗಿಲ್ಲ. ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೇ ಒಂದು ವಿಶ್ವವಿದ್ಯಾಲಯದ ಹೆಸರು ಇಲ್ಲದಿರುವುದನ್ನು ಓದಿದಾಗ ಮನಸ್ಸು ಕುಂದುತ್ತದೆ. ವಿಶ್ವವಿದ್ಯಾಲಯಗಳು ಜ್ಞಾನದ ಕೇಂದ್ರವಾಗಲು ಸರ್ಕಾರ, ಆಡಳಿತ ಮಂಡಳಿ, ಅಲ್ಲಿರುವ ಅಧ್ಯಾಪಕರು ಒಟ್ಟಾಗಿ ದುಡಿಯಬೇಕು. ಎಲ್ಲರಿಗೂ ದಾಹ ಇರಬೇಕು. ವಿಶ್ವವಿದ್ಯಾಲಯಗಳಲ್ಲಿ ಅಧಿಕಾರ, ಹಣ ಪೋಲಾಗುವುದನ್ನು ನೋಡಿದರೆ ವಿಪರೀತ ಬೇಸರ ಬರುತ್ತದೆ. ಅಧ್ಯಾಪಕರು ಪಡೆಯುವ ಸಂಬಳಕ್ಕೆ ತಕ್ಕಂತೆ ಕನಿಷ್ಠ ಮಟ್ಟದಲ್ಲಾದರೂ ದುಡಿಯಬೇಕು. ಇದನ್ನು ಹೇಳಬೇಕೆ? ಹೇಳಿಸಿಕೊಳ್ಳುವ ಸ್ಥಿತಿಯಲ್ಲಿ ನಾವಿದ್ದೇವೆ. ವಿಶ್ವವಿದ್ಯಾಲಯಗಳು ಜ್ಞಾನದ ಚಿಲುಮೆಯಾಗಿರಲು ದೊಡ್ಡಮಟ್ಟದಲ್ಲಿ ಚಿಂತನೆ ನಡೆಯಬೇಕು.

ಕಥೆ, ಕಾವ್ಯ ಮತ್ತು ಕಾದಂಬರಿ ಪ್ರಕಾರಗಳಲ್ಲಿ ವೈವಿಧ್ಯಮಯ ಕ್ಷೇತ್ರದ, ಹೊಸ ತಲೆಮಾರಿನ ಯುವ ಲೇಖಕರು ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ವಿಮರ್ಶೆ ಕ್ಷೇತ್ರದಲ್ಲಿ ಹೊಸ ತಲೆಮಾರಿನ ಲೇಖಕರ ಬರಹಗಳನ್ನು ಹೊಸ ನೆಲೆಯಲ್ಲಿ ಒರೆಹಚ್ಚುವ ಕೆಲಸ ಆಗುತ್ತಿಲ್ಲ ಅಲ್ಲವೇ?

ಬರವಣಿಗೆ ಮಾಡಲು ತೊಡಗುವ ಯುವಕ-ಯುವತಿಯರು ಸಾಮಾನ್ಯವಾಗಿ ಕಾವ್ಯ-ಕಥೆ ಪ್ರಕಾರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ವಿಚಾರ ಮತ್ತು ಅನುಭವಗಳನ್ನು ಆಧರಿಸಿ ಬರೆಯಲು ಈ ಪ್ರಕಾರ ಅನುಕೂಲವಾಗುತ್ತದೆ ಎಂದು ಕಾಣುತ್ತದೆ. ಹೀಗಾಗಿ ಬಹುಸಂಖ್ಯೆಯಲ್ಲಿ ಯುವ ಮನಸ್ಸುಗಳು ಕಾವ್ಯ-ಕಥೆ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟಾಗಿ ಯುವ ರಚನೆಗಳನ್ನು ಕುರಿತು ವಿಮರ್ಶೆ ಸಾಧ್ಯವಾಗಬಹುದು. ಬಿಡಿ ಬಿಡಿಯಾಗಿ ಒಬ್ಬೊಬ್ಬರನ್ನು ಕುರಿತು ವಿಮರ್ಶೆ ಬರೆಯಲು ಕಷ್ಟವಿದೆ. ಏಕೆಂದರೆ, ಒಬ್ಬರು ಒಂದು ಸಂಕಲನ ಅಥವಾ ಎರಡು ಸಂಕಲನ ಪ್ರಕಟಿಸಿದ್ದರೆ, ಅದನ್ನು ಸೈದ್ಧಾಂತಿಕ ನೆಲೆಯಲ್ಲಿ ಒರೆಹಚ್ಚಿದರೆ ಅದು ತಡೆದುಕೊಳ್ಳಲು ಕಷ್ಟವಾಗುತ್ತದೆ. ಹೊಸ ವಿಮರ್ಶಾ ನೆಲೆಯಲ್ಲಿ ಹಳಬರ ಸಾಹಿತ್ಯವನ್ನು ಒರೆಹಚ್ಚಲು ಸಾಧ್ಯವಾದೀತು. ಯುವಕ-ಯುವತಿಯರ ಸಾಹಿತ್ಯ ರಚನೆಗಳನ್ನು ಕುರಿತು ಒಂದೋ ಎರಡೋ ವಿಮರ್ಶಾ ಲೇಖನಗಳನ್ನು ಬರೆಯಬಹುದು. ಅದರ ಆಚೆ ವಿಮರ್ಶೆಗೆ ಹೇಳಲು ಏನೂ ಉಳಿದಿರುವುದಿಲ್ಲ. ಇದು ಎಲ್ಲದಕ್ಕೂ ಅನ್ವಯವಾಗುವುದಿಲ್ಲ. ಕನ್ನಡ ವಿಮರ್ಶೆ ಕ್ಷೇತ್ರ ಖಂಡಿತ ನಿಂತ ನೀರಾಗಿಲ್ಲ. ಪ್ರಬುದ್ಧವಾಗಿ ಬೆಳೆಯುತ್ತಿದೆ. ಪುಸ್ತಕ ವಿಮರ್ಶೆಗಳು ಕಮ್ಮಿಯಾಗಿರಬಹುದು. ಜಾಗತೀಕರಣ, ಖಾಸಗೀಕರಣ, ಉದಾರೀಕರಣ, ಕೋಮುವಾದ, ಪರಿಸರ ಕಾಳಜಿ, ಅಧ್ಯಾತ್ಮ ಮುಂತಾದ ವಿಷಯಗಳನ್ನು ಕುರಿತು ಕನ್ನಡ ವಿಮರ್ಶಕರೇ ಹೆಚ್ಚು ಬರೆಯುತ್ತಿದ್ದಾರೆ.

ಸಾಮಾಜಿಕ ಸಮಸ್ಯೆಗಳನ್ನೇ ವಸ್ತುವಾಗಿಟ್ಟುಕೊಂಡು ನವೋದಯದಿಂದ ಇಲ್ಲಿಯವರೆಗೆ ಬಹಳಷ್ಟು ಲೇಖಕರು ಕೃತಿಗಳನ್ನು ರಚಿಸುತ್ತಲೇ ಬಂದಿದ್ದಾರೆ. ಅವು ನಮ್ಮ ಸಮಾಜ ಪರಿವರ್ತನೆಯಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಿವೆ?

ಸಾಹಿತ್ಯ ರಚನೆಗೆ ಸಮಾಜವೇ ಬೀಜ ಅಥವಾ ಬೆನ್ನೆಲುಬು ಎನ್ನಬಹುದು. ಆಯಾ ಕಾಲದಲ್ಲಿ ಕಾಲಕ್ಕೆ ತಕ್ಕಂಥ ಸಮಾಜದಲ್ಲಿ ಸಮಸ್ಯೆಗಳು, ಬಿಕ್ಕಟ್ಟುಗಳು, ತಲ್ಲಣಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಸಮಾಜದ ಜನರು ಅವುಗಳನ್ನು ಅನುಭವಿಸುತ್ತ, ಎದುರಿಸುತ್ತ, ಪಾರಾಗುತ್ತ ಬಂದಿರುತ್ತಾರೆ. ಇಂಥ ಸಾಮಾಜಿಕ ಸಮಸ್ಯೆಗಳನ್ನು ಸಾಹಿತ್ಯ ತನ್ನದೇ ಆದ ನೆಲೆಯಲ್ಲಿ ಗ್ರಹಿಸುತ್ತದೆ. ಸಾಹಿತ್ಯದ ಈ ಗ್ರಹಿಕೆಗಳನ್ನು ಸಮಾಜ ತನ್ನದೇ ಆದ ರೀತಿಯಲ್ಲಿ ಅರಿಯಲು ಯತ್ನಿಸುತ್ತದೆ. ’ಸಾಹಿತ್ಯದಿಂದ ಕ್ರಾಂತಿಯಾಗುವುದಿಲ್ಲ’ ಎಂಬುವವರಿದ್ದಾರೆ. ಅವರ ನಂಬಿಕೆ ಅವರಿಗಿರಲಿ. ವಚನ ಸಾಹಿತ್ಯದಿಂದ, ದಾಸ ಸಾಹಿತ್ಯದಿಂದ, ತತ್ವಪದ ಸಾಹಿತ್ಯದಿಂದ, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ದೊರಕಿದೆ. ವಚನಕಾರರ ಕಾಯಕ ತತ್ವ, ದಾಸರ ತಂಬೂರಿ, ಗಾಂಧೀಜಿ ಅವರ ಚರಕ, ಕುವೆಂಪು, ಲೋಹಿಯಾ ಅವರ ವೈಚಾರಿಕತೆ, ಲಂಕೇಶರ ಲಂಕೇಶ್ ಪತ್ರಿಕೆ ಇವು ಸಮಾಜವನ್ನು ಪರಿವರ್ತಿಸಿ ಪರಿಣಾಮ ಬೀರಿಲ್ಲವೆ?

ಹೊಸ ತಲೆಮಾರಿನ ಸತ್ವಯುತ ಲೇಖಕರನ್ನು ಗುರುತಿಸುವಲ್ಲಿ ಇಂದಿನ ಮಾಧ್ಯಮ ಹಿಂದೆ ಬಿದ್ದಿದೆಯೇ?

ಪತ್ರಿಕಾ ಮಾಧ್ಯಮ ಮಾತ್ರ ಹೊಸ ತಲೆಮಾರಿನ ಸತ್ವಯುತ ಬರಹಗಾರರನ್ನು ಗುರುತಿಸುವಲ್ಲಿ ಮುಂಚೂಣಿಯಲ್ಲಿದೆ. ಅನೇಕ ಪತ್ರಿಕೆಗಳು ಹೊಸ ಲೇಖಕರಿಗೆ ವೇದಿಕೆಯಾಗಿ ನಿಲ್ಲುತ್ತ ಬಂದಿವೆ. ಆದರೆ ಟಿ.ವಿ. ಮಾಧ್ಯಮ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿಲ್ಲ. ಧಾರಾವಾಹಿಗಳು ಸಾಹಿತ್ಯಕ್ಕೆ ಆಸರೆಯಾಗಿರಬಹುದು. ಅಂಥ ಸಾಹಿತ್ಯ ರಚಿಸುವವರು ಬರಹಗಾರರಾಗಿ ಗುರುತಿಸಿಕೊಳ್ಳುವುದು ಕಷ್ಟ.

ಹೊಸ ತಲೆಮಾರಿನ ಬಹುತೇಕ ಯುವ ಲೇಖಕರು ಮೂಲಭೂತವಾದಿ ಚಿಂತನೆಯತ್ತ ವಾಲುತ್ತಿದ್ದಾರೆಯೇ?

ಸಮಾಜದಲ್ಲಿ ಕೆಲ ಯುವ ಗುಂಪುಗಳಲ್ಲಿ ಈ ಗುಣ ಕಾಣಿಸಿಕೊಂಡಿರಬಹುದು. ಬರಹಗಾರರಲ್ಲಿ ಈ ಗುಣ ಬರಬಾರದು. ಲೇಖಕ ಅಂದರೆ ಜವಾಬ್ದಾರಿ ಇರುತ್ತದೆ. ಇದನ್ನು ಅರಿತರೆ ಈ ಗುಣ ಮಾಯವಾಗುತ್ತದೆ. ಸಾಮಾಜಿಕ ಜವಾಬ್ದಾರಿ ಯುವ ಲೇಖಕರಲ್ಲಿ ಮಾಯವಾದರೆ ಸಮಾಜ ಆರೋಗ್ಯವಾಗಿರಲು ಸಾಧ್ಯವೇ?

ಟಿಆರ್‌ಪಿ ರೇಟ್ ಹೆಚ್ಚಿಸುವ ಭರದಲ್ಲಿನ ಟಿ.ವಿ. ವಾಹಿನಿಗಳು ಮತ್ತು ಜಾಹೀರಾತಿನ ಕಪಿಮುಷ್ಟಿಯಲ್ಲಿನ ಪತ್ರಿಕೆಗಳು... ಒಟ್ಟಾರೆ ಇಂದು ಜನರ ಅಸಲಿ ಸಮಸ್ಯೆಗಳತ್ತ ಗಮನ ಸೆಳೆಯುವಲ್ಲಿ ಮಾಧ್ಯಮಗಳು ವಿಫಲವಾಗುತ್ತಿವೆಯೇ?

ಹೌದು, ಮಾಧ್ಯಮಗಳನ್ನು ಕೊಳ್ಳುವ ಶಕ್ತಿ ಉತ್ಪಾದಕ ಕಂಪನಿಗಳಿಗೆ ಇದೆ. ಟಿ.ವಿ, ಪತ್ರಿಕೆ ಮಾಧ್ಯಮಗಳನ್ನು ಜಾಹೀರಾತುಗಳೇ ಆಳುವ ಹಂತ ತಲುಪಿವೆ. ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ಆಗಾಗ ಪತ್ರಿಕೆಗಳಲ್ಲಿ ಗಣಿಧಣಿಗಳ ಜಾಹೀರಾತುಗಳು ಪುಟಗಳನ್ನು ತುಂಬಿಕೊಂಡಿರುತ್ತವೆ. ಸುದ್ದಿಗಳ ಜಾಗವನ್ನು ಈ ಜಾಹೀರಾತುಗಳೇ ತುಂಬಿಕೊಂಡಿರುತ್ತವೆ. ಯಾರಿಗಾಗಿ ಇವನ್ನು ಮುದ್ರಿಸಲಾಗುತ್ತಿದೆ? ಟ್ರಾಫಿಕ್ ಜಾಮ್, ಕೊಳವೆ ಬಾವಿಗೆ ಬಿದ್ದ ಮಗುವನ್ನು ತೋರಿಸುವುದರ ಹಿಂದೆ ಯಾವ ಹಿತಾಸಕ್ತಿ ಇದೆ? ದುರಂತಗಳನ್ನು ತೋರಿಸುವ ಟಿ.ವಿ.ಗಳು ನಡುನಡುವೆ ಜಾಹೀರಾತುಗಳಿಗೂ ಅವಕಾಶ ನೀಡುತ್ತವೆ. ಇದರ ಅರ್ಥವಾದರೂ ಏನು? ನಿಜವಾದ ಸಮಸ್ಯೆಗಳನ್ನು ತೋರಿಸುವಲ್ಲಿ ಮಾಧ್ಯಮಗಳು ಸೋತಿವೆ. ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಗುಳೆ ಹೋಗುವ ಕಷ್ಟ ನಿರಂತರ. ನೆರೆ ಬಂದಾಗ ಅದಕ್ಕೆ ಸಿಲುಕಿದವರ ಕಷ್ಟವನ್ನೂ ನೋಡುತ್ತೇವೆ. ಆದರೆ ಈ ಬಗೆಯ ಕಷ್ಟಗಳು ಊರೂರುಗಳ ಓಣಿ-ಸಂದಿಗಳಲ್ಲಿ ನಡೆಯುತ್ತಲೇ ಇರುತ್ತವೆ. ಇವುಗಳಿಗೆ ಯಾವ ಪರಿಹಾರವೂ ಇರುವುದಿಲ್ಲ. ನೆರೆ ಹಾವಳಿಯಿಂದ ಬೆಳೆ ಹಾನಿಯಾಗಿದೆ. ಇದು ಕಣ್ಣಿಗೆ ಕಾಣುತ್ತದೆ. ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗದೆ ಗೋಳಾಡುವ ರೈತರ ಸಮಸ್ಯೆ ನಿರಂತರವಾಗಿ ಜೀವಂತವಾಗಿದೆ. ಇದಕ್ಕೆ ಪರಿಹಾರ ಎಲ್ಲಿದೆ? ಮಾಧ್ಯಮಗಳು ತಮ್ಮ ಶಕ್ತಿಯಿಂದ ಜನರಿಗೆ ನೆರವಾಗಬೇಕು. ವಿರೋಧ ಪಕ್ಷದ ಕೆಲಸಗಳನ್ನು ಮಾಧ್ಯಮಗಳು ಮಾಡುವಂತಾಗಬೇಕು. ರಾಜಕಾರಣಿಗಳು ಸಾಧಾರಣ ಸಭೆ-ಸಮಾರಂಭಗಳಲ್ಲಿ ಭಾಗಿಯಾದದ್ದನ್ನು ಸುದ್ದಿ ಮಾಡುವ ಕೆಲಸಕ್ಕೆ ನಿಂತರೆ ಹೇಗೆ? ಜನರಿಗೆ ಹತ್ತಿರವಾಗಬೇಕು ಮಾಧ್ಯಮಗಳು.

ಟಿಎಸ್‌ಐ

ಮುಂದಿನ ಸಂಚಿಕೆಯಲ್ಲಿ:ಖ್ಯಾತ ಕವಿ ಡಾ. ಸಿದ್ದಲಿಂಗಯ್ಯ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .