|

ಮುಗಿಲು ಹರಿದು ಬಿದ್ದದ್ದು ಆರು ದಿನಗಳು.
ಬಲಿಯಾದದ್ದು 221 ಮಂದಿ. ಸತ್ತ ಜಾನುವಾರುಗಳ ಸಂಖ್ಯೆ 5235. ನೀರುಪಾಲಾದ
ಹಳ್ಳಿಗಳು 4148, ಮುಳುಗಿದ ಮನೆಗಳು 3.68 ಲಕ್ಷ... ಇವೆಲ್ಲಾ ಬರೀ ಅಧಿಕೃತ
ಅಂಕಿ-ಸಂಖ್ಯೆಗಳಷ್ಟೇ. ಆದರೆ ಉಕ್ಕಿ ಹರಿದ ಕೃಷ್ಣೆ, ತುಂಗಭದ್ರೆಯರ
ಆಕ್ರೋಶಕ್ಕೆ ಸಿಕ್ಕಿದವರ ನೋವಿನ ಆಳ ಅಂಕೆಗೆ ಸಿಗದು... ಸದಾ ಬಿಸಿಲು,
ಬರಗಾಲವನ್ನೇ ಅನುಭವಿಸುತ್ತಾ ಅದಕ್ಕೆ ತಕ್ಕಂತಹ ಜೀವನಶೈಲಿಯನ್ನೇ
ರೂಢಿಸಿಕೊಂಡಿರುವ ಈ ಬಯಲುಸೀಮೆ ಮಂದಿಗೆ ಒಮ್ಮಿಂದೊಮ್ಮೆಲೇ ಕುಂಭದ್ರೋಣ
ವರ್ಷಧಾರೆಯಾದರೆ ಏನಾಗಬೇಡ?
ಆದರೆ ನಮ್ಮ ನೆನಪಿನ ಶಕ್ತಿ ನೋಡಿ; ಪ್ರವಾಹದ
ರುದ್ರ ನರ್ತನವಾಗಿ ಕೇವಲ ಎರಡೇ ವಾರಗಳ ನಂತರ ಬಿಜೆಪಿ ಭಿನ್ನಮತದ
ಮಹಾಸುದ್ದಿಯ ನಡುವೆ ಪ್ರವಾಹ ಸಂತ್ರಸ್ತರು ಮರೆತೇ ಹೋಗಿದ್ದಾರೆ. ಹೆಸರಿಗೆ
ಪ್ರವಾಹ ಸಂತ್ರಸ್ತರನ್ನು ನೆಪ ಮಾಡಿಕೊಂಡು ಹೊಲಸು ರಾಜಕೀಯಕ್ಕಿಳಿದಿದ್ದಾರೆ
ಬಿಜೆಪಿ ಮುಖಂಡರು.
ರಾಜಕಾರಣಿಗಳು ಬಿಡಿ; ಬರ ಇರಲಿ, ನೆರೆ ಬರಲಿ...
ತಮ್ಮ ಪಟ್ಟ ಭದ್ರಪಡಿಸಿಕೊಳ್ಳುವುದರ ಮುಂದೆ ಅವರಿಗೆ ಬೇರಾವುದೂ ದೊಡ್ಡದಲ್ಲ.
ನೆರೆಗೆ ಸಿಲುಕಿದವರ ಸಂಕಷ್ಟದಲ್ಲಿ ಭಾಗಿಯಾಗುವುದಕ್ಕಿಂತ ಭಿನ್ನಮತೀಯರ
ಸಭೆಯಲ್ಲಿ ಭಾಗವಹಿಸುವುದು, ಆ ಮೂಲಕ ಮುಂದೆ ತಮಗೆ ಸಿಗಬಹುದಾದ ಸ್ಥಾನ-ಮಾನಗಳೇ
ನಮ್ಮ ಜನಪ್ರತಿನಿಧಿಗಳಿಗೆ ಮುಖ್ಯವಾಗುತ್ತದೆ. ಆದರೆ ನಮ್ಮ ಮಾಧ್ಯಮಗಳಿಗೂ
ಭಿನ್ನಮತ ರಾಜಕಾರಣವೇ ಅತಿಮುಖ್ಯವಾಗುತ್ತದಲ್ಲಾ?! ಇರಲಿ; ಸನ್ಮಾನ್ಯ
ಮುಖ್ಯಮಂತ್ರಿಗಳು ತಮಗೆ ಒದಗಿಬಂದ ಸಂಕಟ ನೆನೆದು ಸಾರ್ವಜನಿಕ ಸಮಾರಂಭದಲ್ಲಿ
ಕಣ್ಣೀರು ಸುರಿಸಲಿ ಅಥವಾ ಮಾನ್ಯ ಆರೋಗ್ಯ ಸಚಿವರು ನೆರೆ ಸಂತ್ರಸ್ತರ ನೋವಿನ
ನಡುವೆಯೂ 'ಮನಸಾರೆ' ಸಿನಿಮಾ ವೀಕ್ಷಿಸಲಿ. ಹೊಲಸು ರಾಜಕೀಯದ ಬಗ್ಗೆ ಹೆಚ್ಚು
ಮಾತನಾಡುವುದು ಬೇಡ.
ನಾವೀಗ ಹೇಳ ಹೊರಟಿರುವುದು ಸಂಕಷ್ಟವನ್ನು
ಹೆಗಲಮೇಲೆ ಹೊತ್ತೇ ಬದುಕು ಸಾಗಿಸುವ ಉತ್ತರ ಕರ್ನಾಟಕ ಮಂದಿಯ ಜೀವನ ಪ್ರೀತಿಯ
ಬಗ್ಗೆ. ನೆರೆ ನೀರಿಗೆ ದಿಕ್ಕಾಪಾಲಾಗಿ ಗಂಜಿ ಕೇಂದ್ರದಲ್ಲಿರುವ ರಾಯಚೂರಿನ
ಮಂದಿಯನ್ನೋ, ಮುರಿದ ಸೂರು ಸರಿಪಡಿಸುವ ಗದಗದ ಮಂದಿಯನ್ನೋ ಮಾತನಾಡಿಸಿ ನೋಡಿ.
"...ಇವೆಲ್ಲಾ ಇರ‍್ತಾವು. ಬನ್ರೀ ಸಾಹೇಬರ ಚಾ ಕುಡ್ಯೂರಿ...' ಎಂದು ನಗುತ್ತಾ
ಅವರು ಆಮಂತ್ರಿಸದಿದ್ದರೆ ಕೇಳಿ. ಇದು ಆ ಜವಾರಿ ನೆಲದ ಮಂದಿಯ ಹುಟ್ಟುಗುಣ.
ಮಾತು ಒರಟಾದರೂ, ಮನಸು ಮಲ್ಲಿಗೆಯದು. ಅದೆಷ್ಟೇ ಬರ-ನೆರೆ, ರೋಗ-ರುಜಿನ,
ಸಾವು-ನೋವು ಬಂದರೂ ಬದುಕಿನತ್ತಲೇ ಹರಿಯುವ ಜೀವ ಸೆಲೆ ಆ ನೆಲದ ಸಹಜ ಗುಣ.
ಇಂಥ ಅಪ್ರತಿಮ ಉತ್ತರ ಕರ್ನಾಟಕಕ್ಕೆ 54ನೇ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ಸಲಾಮು ಹೇಳಲು 'ದ ಸಂಡೆ ಇಂಡಿಯನ್'
ಮುಂದಾಗಿದೆ. ವಿಸ್ಮಯಕಾರಿ ಉತ್ತರ ಕರ್ನಾಟಕದ ವಿಶೇಷತೆಗಳನ್ನು ಓದುಗರಿಗೆ
ನೆನಪು ಮಾಡಿಕೊಡುವ ಸಣ್ಣ ಪ್ರಯತ್ನ ಇದು. ಉತ್ತರ ಕರ್ನಾಟಕವೆಂದರೆ
ತುಂಗಭದ್ರೆಯ ಮೇಲ್ಭಾಗಕ್ಕಿರುವ (ಬಳ್ಳಾರಿಯನ್ನೊಳಗೊಂಡು) 11 ಜಿಲ್ಲೆಗಳನ್ನು
ನಾವಿಲ್ಲಿ ಪರಿಗಣಿಸಿದ್ದು, ಸಾಂಕೇತಿಕವಾಗಿ 54 ವಿಶೇಷಗಳನ್ನು
ಚರ್ಚಿಸಿದ್ದೇವೆ. ಆದರೆ ಹಳ್ಳಿ ಹಳ್ಳಿಯಲ್ಲೂ ಹತ್ತಾರು ವಿಶೇಷತೆಗಳಿರುವ
ಉತ್ತರ ಕರ್ನಾಟಕವನ್ನು ಸಮಗ್ರವಾಗಿ ಹಿಡಿದಿಡುತ್ತೇವೆಂಬುದು ತಮಾಷೆಯ
ಮಾತಾದೀತಷ್ಟೇ. ನಮ್ಮ ಪಟ್ಟಿಯಲ್ಲಿ ಕಾಣಿಸಿಕೊಳ್ಳದ ವಿಶೇಷಗಳು ನೂರಾರಿವೆ
ಎಂಬುದು ನಮಗೆ ಗೊತ್ತಿದೆ. ಹಾಗೇ ಈ 54 ವಿಶೇಷಗಳನ್ನು ಅನುಕ್ರಮವಾಗಿ ಹೇಳುವ
ಸಾಹಸಕ್ಕೂ ನಾವು ಕೈಹಾಕಿಲ್ಲ. ಬಗೆಬಗೆಯ ನೆಲೆಯಲ್ಲಿ, ನೂರಾರು ಮುಖಗಳಲ್ಲಿ
ತೆರೆದುಕೊಳ್ಳುವ ಉತ್ತರ ಕರ್ನಾಟಕವನ್ನು ಹಾಗೆ ಹೇಳುವುದೂ ಸಾಧ್ಯವಿಲ್ಲ. ಇದು
ವಿಶಿಷ್ಟ ಉತ್ತರ ಕರ್ನಾಟಕವನ್ನು ಮನನ ಮಾಡಿಕೊಳ್ಳುವ ದಿಕ್ಕಿನಲ್ಲಿ ಒಂದು
ಪುಟ್ಟ ಪ್ರಯತ್ನವಷ್ಟೆ. ಈ ಪ್ರಯತ್ನ ಓದುಗರಿಗೆ ಮೆಚ್ಚುಗೆಯಾದೀತೆಂಬ ನಂಬುಗೆ
ನಮ್ಮದು.
ಆದರೆ, ಇದೇ ಕೊನೆಯಲ್ಲ. ಇದು ಉತ್ತರ
ಕರ್ನಾಟಕದ ಮೇಲೆ ನಾವು ಕಣ್ಣೋಟ ಹರಿಸಿದಾಗ ಕಂಡ ವಿಶಿಷ್ಟಗಳ ದಾಖಲೆ ಅಷ್ಟೆ.
ನಿರಂತರವಾಗಿ ಬರದ ಅಬ್ಬರಕ್ಕೆ ಬಲಿಯಾಗುತ್ತಿದ್ದ ಅಲ್ಲಿನ ಜನರು ಇಂದು ನೆರೆಯ
ರುದ್ರ ನರ್ತನಕ್ಕೆ ತತ್ತರಿಸಿ ಹೋಗಿದ್ದಾರೆ. ನೆರೆಯ ಹೆಸರಲ್ಲಿ ರಾಜಕೀಯ ಮಾಡಿ,
ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸಿ ಸಂತ್ರಸ್ತರ ಪುನರುತ್ಥಾನ
ಮಾಡುವುದಾಗಿ ಆಡಳಿತಾರೂಢ ಸರ್ಕಾರದಿಂದ ಹಿಡಿದು ಎಲ್ಲರೂ ಪಣ ತೊಟ್ಟಾಗಿದೆ.
ಹಾಗೆ ಸಂಗ್ರಹಿಸಿದ ಹಣ ಮತ್ತು ಘೋಷಿಸಿದ ಹಲವಾರು ಯೋಜನೆಗಳ ಗತಿ ಏನಾಯಿತು? ಈ
ಪ್ರಶ್ನೆಗೆ ಕೂಡ ನಾವೇ ಸ್ವತಃ ಉತ್ತರ ಹುಡುಕಿ ನಿಮ್ಮ ಮುಂದಿಡಲಿದ್ದೇವೆ.
ಅಲ್ಲಿಯವರೆಗೆ ಉತ್ತರ ಕರ್ನಾಟಕ ಎಂಬ ಜೀವನ್ಮುಖಿ ನೆಲದ ಕೆಲವು ವಿಶೇಷಗಳ
ಸವಿಯುಣ್ಣಿ.
ಟಿಎಸ್‌ಐ |