User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 

ಉತ್ತರ ಕರ್ನಾಟಕ ವಿಶೇಷ

ಸುಡುವ ಬದುಕು

`ಬರ'ದ ಬಾಂಧವರು

ಈಗ ಉತ್ತರ ಕರ್ನಾಟಕ ನೀರಿನಲ್ಲಿ ಮಿಂದೆದ್ದಿರಬಹುದು. ಆದರೆ ಬಿಸಿಲು ಮತ್ತು ಬರ ಉತ್ತರ ಕರ್ನಾಟಕದ ಅನ್ವರ್ಥ ನಾಮಗಳು. 30ರ ದಶಕದಲ್ಲಿ ಇಡೀ ಉತ್ತರ ಕರ್ನಾಟಕವನ್ನು ಅಕ್ಷರಶಃ ಸ್ಮಶಾನ ಸದೃಶವನ್ನಾಗಿಸಿದ್ದ 'ಡೌಗಿ ಬರ'ದ ನೆನಪಾದರೆ ಅಲ್ಲಿನ ಮಂದಿ ಈಗಲೂ ಬೆವರುತ್ತಾರೆ. (ಡೌಗಿ ಎಂದರೆ ತಲೆಬುರುಡೆ. ಬರಗಾಲದಲ್ಲಿ ಜನರಿಗೆ ತಿನ್ನಲು ಏನೂ ಸಿಗದೆ ಕೈಕಾಲು ಕೃಶವಾಗಿ ಬರೀ ತಲೆಬುರುಡೆ ಕಾಣುತ್ತಿತ್ತಂತೆ!) ಉತ್ತರ ಕರ್ನಾಟಕದ ನಕಾಶೆಯಲ್ಲಿ ಹರಿಯುವ ನದಿಗಳ ದೊಡ್ಡ ಪಟ್ಟಿಯೇ ಇದೆ. ಆದರೆ, ಕಂಕುಳಲ್ಲೇ ತುಂಗಭದ್ರಾ ಅಣೆಕಟ್ಟಿದ್ದರೂ ನೀರು ಕಾಣದ ಕೊಪ್ಪಳ, ಮಾಜಿ ಪಂಚನದಿಗಳ ಬೀಡಿನ ಹೆಮ್ಮೆಯಿದ್ದರೂ ತಿಂಗಳಿಗೆ ಎರಡು ಬಾರಿ ನೀರು ಸರಬರಾಜು ಕಾಣುವ ಬಿಜಾಪುರದಂತಹ ನಗರಗಳು ಉತ್ತರ ಕರ್ನಾಟಕದಲ್ಲಿ ತೀರಾ ಸಾಮಾನ್ಯ. ಹೊರೆ ಸೌದೆಗಾಗಿ ಮೈಲುಗಟ್ಟಲೆ ಅಲೆಯುವ ಮಹಿಳೆಯರು, ಸುಡುಬಿಸಿಲಿನಲ್ಲಿ ಮೈಯನ್ನಷ್ಟೇ ಅಲ್ಲದೆ ಬದುಕನ್ನೂ ಸುಟ್ಟುಕೊಂಡ ಜನರನ್ನು ಉತ್ತರ ಕರ್ನಾಟಕದ ಯಾವುದೇ ಭಾಗಕ್ಕೆ ಭೇಟಿ ನೀಡಿದರೂ ಕಾಣಬಹುದು.

ಗೋಲಗುಮ್ಮಟ

ಬೆಡಗಿನ ಬಿಜಾಪುರ

ತಾಜ್ ಮಹಲ್‌ನ ಅದ್ಭುತ ಸೌಂದರ್ಯಕ್ಕೆ ಮರುಳಾಗಿ 'ವಾಹ್ ತಾಜ್' ಎಂಬುವವರು ತಪ್ಪದೇ ಬಿಜಾಪುರದ ಆದಿಲ್‌ಶಾಹಿಗಳಿಗೂ ಒಂದು ಸಲಾಮು ಹಾಕಬೇಕು. ಏಕೆಂದರೆ ತಾಜ್‌ಮಹಲ್ ವಿನ್ಯಾಸಕ್ಕೆ ಪ್ರೇರಣೆ ನೀಡಿದ್ದೇ ನಮ್ಮ ಬಿಜಾಪುರದಲ್ಲಿರುವ ಇಬ್ರಾಹಿಂ ರೋಜಾ. ಇನ್ನು ಗೋಲಗುಮ್ಮಟವಂತೂ ಜಗತ್ತಿನ ಅತ್ಯದ್ಭುತ ವಾಸ್ತು ವಿನ್ಯಾಸಗಳಲ್ಲೊಂದು. 39 ಮೀಟರ್ (ಸುಮಾರು 125 ಅಡಿ) ವ್ಯಾಸ ಹೊಂದಿರುವ ಬೃಹತ್ ಗುಮ್ಮಟ ಕಳೆದ 350 ವರ್ಷಗಳಿಂದ ಅಲುಗಾಡದೆ ನಿಂತಿದೆ. ರೋಮ್‌ನ ಸಂತ ಪೀಟರ್ ಬಾಸಿಲಿಕಾದ ನಂತರ ಜಗತ್ತಿನ ಅತಿ ದೊಡ್ಡ ಗುಮ್ಮಟ ಇದು. ಒಮ್ಮೆ ಕೂಗಿದರೆ ಏಳುಬಾರಿ ಪ್ರತಿಧ್ವನಿಸುವ ವೃತ್ತಾಕಾರದ ಗ್ಯಾಲರಿ, ಚಚ್ಚೌಕಾಕಾರದ ಆ ಮಹಲಿನ ಯಾವುದೇ ಒಂದು ಗೋಡೆಯಲ್ಲಿ ಪಿಸುಗುಟ್ಟಿದರೆ ಎದುರಿನ ಗೋಡೆಗೆ ಕಿವಿಗೊಟ್ಟು ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದಾದ ತಂತ್ರ ಇಂದಿನ ಎಂಜಿನಿಯರ್ ಮಹಾಶಯರಿಗೇ ಅಚ್ಚರಿ ಹುಟ್ಟಿಸುತ್ತವೆ. ಗೋಲ ಗುಮ್ಮಟದ ಪಿಸುಗುಟ್ಟುವ ಗ್ಯಾಲರಿಯಲ್ಲೇ ಸಂಗೀತಗಾರರು ಹಾಡುತ್ತಿದ್ದರೆ ಉಳಿದವರು ಹೊರಗೆ ಕುಳಿತು ಆಸ್ವಾದಿಸುತ್ತಿದ್ದರಂತೆ. ಸಾಂಪ್ರದಾಯಿಕ ಇಸ್ಲಾಮಿಕ್ ಹಾಗೂ ಪರ್ಷಿಯಾದ ಈ ಅದ್ಭುತ ಜ್ಞಾನ ಇಂದಿನ ಎಂಜಿನಿಯರ್‌ಗಳಿಗೆ ದಕ್ಕೀತೇ?

ವಿಶ್ವ ಪಾರಂಪರಿಕ ತಾಣ

ಕಾಲಿದ್ದವರು ಹಂಪಿ ನೋಡಬೇಕು

"ಇಂಥ ನಗರಿಯನ್ನು ನನ್ನ ಕಣ್ಣುಗಳು ಕಂಡಿಲ್ಲ, ಕಿವಿ ಕೇಳಿಲ್ಲ..."; "ರಸ್ತೆ ಬದೆಯಲ್ಲಿ ಚಿನ್ನ, ಬೆಳ್ಳಿ, ಮುತ್ತು-ರತ್ನದ ರಾಶಿ ಹೇರಿಕೊಂಡು ಸೇರಿನಲ್ಲಿ ಅಳೆದು ಮಾರುತ್ತಿದ್ದುದು ಈ ನಗರಿಯಲ್ಲಿ ಬಿಟ್ಟರೆ ಬೇರೆಲ್ಲೂ ಇಲ್ಲ..." ಮಧ್ಯಕಾಲದ ವೈಭವೋಪೇತ ಸಾಮ್ರಾಜ್ಯ 'ವಿಜಯನಗರ'ದ ರಾಜಧಾನಿಯಾದ ಹಂಪಿಯ ಬಗೆಗಿನ ಈ ಮಾತುಗಳನ್ನು ಕೇಳಿ ಕೇಳಿ ನೀವು ರೋಸೆದ್ದು ಹೋಗಿರಬಹುದು. ಆದರೆ ಈ ಮಾತುಗಳನ್ನು ಹೇಳದಿದ್ದರೆ ಹಂಪಿ ವಿವರ ಅಪೂರ್ಣವಾದೀತು. ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕೀಳರಿಮೆ ಕಾಡಿದಾಗಲೆಲ್ಲಾ ರಾಜ್ಯದ ಸಮಷ್ಠಿ ಪ್ರಜ್ಞೆಗೆ, ಕೆಚ್ಚಿಗೆ ಪ್ರೇರಣೆಯಾಗುವುದು ವಿಜಯನಗರದ ಸ್ವರ್ಣಯುಗ. ಜಗತ್ತಿನ ಅತ್ಯಂತ ಸಮೃದ್ಧ ಸಾಮ್ರಾಜ್ಯಗಳಲ್ಲಿ ಒಂದಾಗಿದ್ದ ವಿಜಯನಗರದ ರಾಜಧಾನಿ ಹಂಪಿಗೆ ಈಗ ವೃದ್ಧಾಪ್ಯ ಯೋಗ. ಹಂಪಿ ಇಂದು ವಿದೇಶಿ ಪ್ರವಾಸಿಗರ ನೆಚ್ಚಿನ ತಾಣ. ಹಾಗೇ ಕುಡುಕರ, 'ಅಮಲು'ದಾರರ ವಿಕೃತಿಗಳ ಆಡುಂಬೊಲ. ಅಂದಹಾಗೆ ಹೊಸಪೇಟೆ ಭಾಗದ ಅದಿರು ಮಣ್ಣಿಗೆ ಚಿನ್ನದ ಬೆಲೆ ಬಂದ ಕೂಡಲೇ ಮಣ್ಣಿನ ಗುಡ್ಡಗಳು ಕರಗುತ್ತಾ, ಹಂಪಿಯ ಸುತ್ತಾ ಕೆಂದೂಳು ಹೊಮ್ಮಿಸುತ್ತಾ, ಚೀನಾಕ್ಕೆ ರವಾನೆಯಾಗತೊಡಗಿದವು. ಆ ಭಾಗದ ಜನ ಕೂಡಾ ಸೇರಿನಲ್ಲಿ ಚಿನ್ನ ಅಳೆಯುವ ಮಟ್ಟಕ್ಕೆ ಬಂದು ನಿಂತದ್ದು ಸುಳ್ಳಲ್ಲ!

ಖ್ವಾಜಾ ಬಂದೇನವಾಜ್-ಬಸವೇಶ್ವರ ಬೆಸುಗೆ

ಭಾವೈಕ್ಯ ಸಂಸ್ಕೃತಿಯ ಪ್ರತೀಕ

ಗುಲ್ಬರ್ಗಾದ ಖ್ವಾಜಾ ಬಂದೇ ನವಾಜ್ ದರ್ಗಾದಲ್ಲಿ ಹಿಂದೂ ಸಮುದಾಯದವರು ಹರಕೆ ಸಲ್ಲಿಸುವುದುನ್ನು, ದರ್ಗಾದ ಹೊರಗೆ ಥೇಟು ಹಿಂದೂ ದೇವಾಲಯಗಳಂತೆ ಹೂವು-ಕರ್ಪೂರ-ಗಂಧದ ಕಡ್ಡಿಯ ವ್ಯಾಪಾರ ನಡೆಯುವುದನ್ನು ಕಂಡರೆ ನೀವು ಅಚ್ಚರಿಪಡಬೇಕಿಲ್ಲ. ಬಂದೇ ನವಾಜರ ಉರುಸು ಶುರುವಾಗಲು ಶರಣಬಸವೇಶ್ವರ ಗುಡಿಯಿಂದ ಗಂಧ ಬರಲೇಬೇಕು! ಹಾಗೆಯೇ ಶರಣ ಬಸವೇಶ್ವರ ಜಾತ್ರೆ ಶುರುವಾಗಬೇಕೆಂದರೆ ಬಂದೇನವಾಜ್ ದರ್ಗಾದಿಂದ ದೀವಟಿಗೆಗಳು ಬರಬೇಕು! ಬಂದೇನವಾಜ ಪ್ರಮುಖ ಮುಸ್ಲಿಂ ಸೂಫಿ ಸಂತರು. ಶರಣ ಬಸವೇಶ್ವರ ಹಾಗೂ ಬಂದೇನವಾಜ ನಡುವಿನ ಸ್ನೇಹ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಹೀಗೆ ಸಾಮರಸ್ಯಕ್ಕೆ ಹೆಸರಾದ ಇನ್ನೂ ಹಲವು ದರ್ಗಾಗಳು ಮತ್ತು ಗುಡಿಗಳು ಗುಲ್ಬರ್ಗಾ ಪ್ರಾಂತದಲ್ಲಿ ಇವೆ.

ಏಕೀಕರಣ ಚಳವಳಿ

ಹೋರಾಡಿದ ನೆಲಕ್ಕೆ ನಿರ್ಲಕ್ಷ್ಯದ ಉಡುಗೊರೆ

ಕರ್ನಾಟಕದ ಏಕೀಕರಣಕ್ಕೆ ತನು-ಮನ-ಧನ ತ್ಯಾಗ ಮಾಡಿ ಹೋರಾಟ ನಡೆಸಿದ್ದೇ ಉತ್ತರ ಕರ್ನಾಟಕದ ಜನರು. ಸಮಗ್ರ ಕರ್ನಾಟಕ ರಚನೆಯಾದರೆ ಜಾತಿವಾರು ಲೆಕ್ಕದಲ್ಲಿ ದಕ್ಷಿಣದ ಬಲಿಷ್ಠ ಸಮುದಾಯದ ರಾಜಕೀಯ ಪ್ರಾಬಲ್ಯ ಮಸುಕಾಗುತ್ತದೆಂದು ಏಕೀಕರಣ ಚಳವಳಿಗೆ ದಕ್ಷಿಣ ಕರ್ನಾಟಕದಲ್ಲಿ ಹೇಳಿಕೊಳ್ಳುವಂಥ ಪ್ರತಿಕ್ರಿಯೆ ಇರಲಿಲ್ಲ. ಈ ಮಾತನ್ನು ದಕ್ಷಿಣ ಕರ್ನಾಟಕದವರೇ ಹೇಳುತ್ತಾರೆ. ಈಗ 29 ಜಿಲ್ಲೆಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು 53 ವರ್ಷಗಳ ಹಿಂದೆ 20 ವಿವಿಧ ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿತ್ತು. ಏಕೀಕರಣ ಹೋರಾಟಕ್ಕೆ ಹೊಸ ಓಘ ನೀಡಿದ್ದು ಮಾತ್ರ ಹುಬ್ಬಳ್ಳಿಯಲ್ಲಿ ನಡೆದ ಗೋಲೀಬಾರ್ ಪ್ರಕರಣ. ಆಂಧ್ರದಲ್ಲಿ ಪೊಟ್ಟಿ ಶ್ರೀರಾಮುಲು ನಿಧನರಾಗಿ ಆಂಧ್ರಪ್ರದೇಶ ಭಾಷಾವಾರು ರಾಜ್ಯ ರಚನೆಯಾದ ಮೇಲಂತೂ ಕರ್ನಾಟಕದ ಹೋರಾಟ ಇನ್ನೂ ಹೆಚ್ಚಾಯಿತು. ಅಂತೂ 1956ರಲ್ಲಿ ಎಸ್. ನಿಜಲಿಂಗಪ್ಪ ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾದರು. ವಿಪರ್ಯಾಸವೆಂದರೆ ಅರ್ಧ ಶತಮಾನದ ನಂತರ ಕರ್ನಾಟಕವನ್ನು ಒಂದುಗೂಡಿಸಿ ಸಂಭ್ರಮಿಸಿದ್ದ ಉತ್ತರ ಕರ್ನಾಟಕದಲ್ಲಿ ಈಗಲೂ ಅಭಿವೃದ್ಧಿ ಮರೀಚಿಕೆಯೇ.

ಬ್ಯಾಡಗಿ ಮೆಣಸಿನಕಾಯಿ

ನಿನ್ನಾ ಹೆಸರೇ ಖಾರಾ ಬಾಯಿ...

ಆಂಧ್ರಪ್ರದೇಶದ ಗುಂಟೂರು ಮೆಣಸಿನಕಾಯಿಯಷ್ಟು ಖಾರವಲ್ಲವಾದರೂ ಬ್ಯಾಡಗಿ ಮೆಣಸಿನಕಾಯಿಗೆ ಫಳಫಳ ಹೊಳೆಯುವ ಕೆಂಬಣ್ಣವಿದೆ; ಖಾರಕ್ಕೆ ಒಂದು ವಿಶಿಷ್ಟ ರುಚಿ ಇದೆ. ಕಡ್ಡಿ ಮೆಣಸಿನಕಾಯಿ ಎಂದೂ ಕರೆಯಲಾಗುವ ಬ್ಯಾಡಗಿ ಮೆಣಸಿನಕಾಯಿ ಹೆಸರೇ ಸೂಚಿಸುವಂತೆ ಹಾವೇರಿಯ ಬ್ಯಾಡಗಿ ಅಲ್ಲದೆ ಧಾರವಾಡ, ಹಾವೇರಿ, ಗದಗ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ದೇಶದಲ್ಲಿ ಎರಡನೇ ಅತಿ ಹೆಚ್ಚು ಬೇಡಿಕೆ ಇರುವುದು ಬ್ಯಾಡಗಿ ಮೆಣಸಿನಕಾಯಿಗೆ. ಇದರಿಂದ ತೆಗೆಯುವ ಅಲೆಯೊರೆಸಿನ್ ಎಣ್ಣೆಯನ್ನು ಉಗುರು ಬಣ್ಣ ಮತ್ತು ಲಿಪ್‌ಸ್ಟಿಕ್ ಉತ್ಪಾದನೆಯಲ್ಲಿ ಬಳಸುವುದರಿಂದ ಬ್ಯಾಡಗಿಗೆ ಹೊರದೇಶದಲ್ಲೂ ಭಾರಿ ಬೇಡಿಕೆ. ರಾಜ್ಯದಲ್ಲಿ ಸುಮಾರು ಐವತ್ತು ಸಾವಿರ ಟನ್ ವಾರ್ಷಿಕ ಇಳುವರಿ ಇದ್ದು ಅದರಲ್ಲಿ ಶೇ. 15ರಷ್ಟನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ಬಾರಿಯ ಪ್ರವಾಹದಲ್ಲಿ ನೀರುಪಾಲಾಗಿದ್ದು 1.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬ್ಯಾಡಗಿ ಮೆಣಸಿನಕಾಯಿ.

 

ಹಿಂದೂಸ್ತಾನಿ ಸಂಗೀತ

ನಾದಸುಧೆ ಹರಿವ ನೆಲ...

ಹಿಂದೂಸ್ತಾನಿ ಸಂಗೀತ ಪರಂಪರೆಯ ನಕಾಶೆಯಲ್ಲಿ ಧಾರವಾಡಕ್ಕೆ ಮಹತ್ವದ ಸ್ಥಾನ. ಉತ್ತರಾದಿ (ಹಿಂದೂಸ್ತಾನಿ)ಯ ಪ್ರಮುಖ ಶೈಲಿಗಳಲ್ಲೊಂದಾದ ಕಿರಾನ ಘರಾನದ ದಿಗ್ಗಜರು ಪ್ರವರ್ಧಮಾನಕ್ಕೆ ಬಂದಿದ್ದು ಇದೇ ನೆಲದಲ್ಲಿ. ಸವಾಯಿ ಗಂಧರ್ವ ಮತ್ತವರ ಶಿಷ್ಯರಾದ ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಫೆರೋಜ್ ದಸ್ತೂರ್, ನಾಕೋಡ ಕುಟುಂಬ ಮುಂತಾಗಿ ಈ ಭಾಗದ ಅಸಂಖ್ಯಾತ ಕುಟುಂಬಗಳು ಹಿಂದುಸ್ತಾನಿ ಸಂಗೀತವನ್ನೇ ತಮ್ಮ ಜೀವಾಳವಾಗಿಸಿಕೊಂಡಿವೆ. ಗಾಯನ ಮಾತ್ರವಲ್ಲದೆ ಸಿತಾರ್, ಶೆಹನಾಯ್, ಸಾರಂಗಿ, ತಬಲ, ಬಾನ್ಸುರಿ, ಹಾರ್ಮೊನಿಯಂನಂತಹ ವಾದ್ಯಸಂಗೀತದಲ್ಲೂ ಉತ್ತರ ಕರ್ನಾಟಕ ಭಾಗದ ಕಲಾವಿದರ ಕೊಡುಗೆ ಅಪಾರ.

ಗಾಂಧಿ ಟೋಪಿ-ಪೈಜಾಮ

ಪ್ರತಿಷ್ಠೆಯ ಸಂಕೇತ

ಗಾಂಧಿ ಟೋಪಿ-ಪೈಜಾಮ ಧರಿಸಿದ ಹುಡುಗರು ಕಾಣುತ್ತಲೇ ನೀವು ಉತ್ತರ ಕರ್ನಾಟಕ ಪ್ರವೇಶಿಸಿದ್ದೀರೆಂದು ತಿಳಿಯಬಹುದು. ಹಿರಿಯರು ಪಗಡಿ (ಪಟಗ) ಮತ್ತು ಧೋತಿ (ಧೋತ್ರಿ) ಧರಿಸುತ್ತಾರೆ. ಒಂಬತ್ತು ಗಜದ ಬಿಳಿ ಅಥವಾ ಹಳದಿ ವರ್ಣದ ರುಮಾಲಿನ ಪಟಗ ಮತ್ತು ಬಿಳಿ ಧೋತ್ರಿ ಅಥವ ಕಚ್ಚೆ ಪಂಚೆ, ಖಾದಿ ಜುಬ್ಬ ತೊಡುವುದೇ ಹಿಂದೆಲ್ಲಾ ಹುಬ್ಬಳ್ಳಿ ಸೀಮೆಯಲ್ಲಿ ಪುರುಷನೊಬ್ಬನ ಪ್ರತಿಷ್ಠೆಯ ಸಂಕೇತ ಎಂದು ಭಾವಿಸಲಾಗುತ್ತಿತ್ತು. ಈ ಪೋಷಾಕಿಗೆ ಕಳಸವಿಟ್ಟಂತೆ ಹುರಿಮೀಸೆ! ಆದರೀಗ 9 ಗಜದ ಪಟಗ ಮಾಯವಾಗುತ್ತಿವೆ. ಈಚೆಗೆ ಹಿರಿಯರೂ ಪಗಡಿ ಮತ್ತು ಧೋತಿ ಬದಲಿಗೆ ಟೋಪಿ ಮತ್ತು ಪೈಜಾಮ ಧರಿಸುತ್ತಾರೆ.

ಕನ್ನಡ ಗಜಲ್

ಭಾವನೆಗಳ ಕ್ಯಾಪ್ಸೂಲ್...

"ಹೂಗಳ ಹೃದಯದಲ್ಲಿ ಮಧುರ ವೇದನೆ ಅಡಗಿದೆ... ನಯನಗಳ ಆಗರದಲ್ಲಿ ಕನಸುಗಳ ಖಜಾನೆ ಅಡಗಿದೆ... ಯಾರ ಬರವಿಗಾಗಿ ಚಂದಿರ ರಾತ್ರಿ ಇಡೀ ಕಾದಿರುವನೋ.. ತಣ್ಣನೆಯ ಚಂದಿರನಲ್ಲೂ ವಿರಹದ ಬೇಗೆ ಕುದಿಯುತಿದೆ..." ಆಡುಮಾತಿನ ಸಾಹಿತ್ಯವನ್ನೇ ಬಳಸಿ ಪ್ರೇಮ, ವಿರಹ, ಭಕ್ತಿ, ದೇಶ ಪ್ರೇಮಗಳಾಂಥಾ ಭಾವಗಳನ್ನು ಪೋಣಿಸಿಕೊಂಡ ಗಜಲ್ ಕೇಳಿದವರು "ವಾಹ್" ಎನ್ನದೆ ಇರಲಾರರು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕನ್ನಡ ಗಜಲ್ ಸಮೃದ್ಧವಾಗಿದೆ. ಹೈದರಾಬಾದ್ ನಿಜಾಮರ ಆಡಳಿತ, ಬಹುಭಾಷಾ ಕವಿ ಸಮ್ಮೇಳನ, ಮುಷಾಹಿರಾಗಳು ಗಜಲ್ ಸಂಪ್ರದಾಯಕ್ಕೆ ಇಂಬು ನೀಡಿವೆ. ಮೂಲತಃ ಉರ್ದುವಿನಲ್ಲಿ ಹೆಚ್ಚು ಜನಪ್ರಿಯವಾಗಿರುವ ಗಜಲ್ ಶೈಲಿಯನ್ನೂ ಕನ್ನಡದಲ್ಲೂ ಪ್ರಯೋಗಗೊಳಿಸಿದವರು ಕವಿಗಳಾದ ಮುಕ್ತಾಯಕ್ಕ, ಶಾಂತರಸ, ಜಂಬಣ್ಣ ಅಮರಚಿಂತ, ಚಿದಾನಂದ ಸಾಲಿ ಮುಂತಾದವರು. ಗದಗದ ರವೀಂದ್ರ ಹಂದಿಗನೂರುರಂತಹ ಗಾಯಕರ ಗಾಯನ, ಕರ್ನಾಟಕ ಗಜಲ್ ಪರಂಪರೆಗೆ ಮತ್ತಷ್ಟು ಕಸುವು ನೀಡಿದೆ.

ದಖ್ಖನಿ ಪ್ರಭಾವ

ಭಾಷಾ ವೈಭವ

"ಅಂವ ಇಳೀಲಿಕ್ ಹತ್ಯಾನ...', 'ಸೂ... ಮಗಾ ಚಾ ಏನ್ ಚೊಲೋ ಮಾಡ್ಯಾನ...' ಎಂಬಂತಹ ಖಡಕ್ ಮಾತುಗಳು ಕೇಳಿ ಬಂದರೆ ಯಾರೂ ಪದದ ಅಕ್ಷರಶಃ ಅರ್ಥ ಹುಡುಕಬೇಕಿಲ್ಲ. ದಕ್ಷಿಣದವರಿಗೆ ಉತ್ತರ ಕರ್ನಾಟಕದ ಮಾತು ಸ್ವಲ್ಪ ಒರಟೆನಿಸಬಹುದು, ಸರಾಗವಾಗಿ ಹರಿಯುವ ಬೈಗಳ ಪದಗಳು ಅಶ್ಲೀಲ ಎನಿಸಬಹುದು; ಆದರೆ ಮಾತಿನ ಓಘ, ಭಾಷೆಯ ಕಸುವು, ಆತ್ಮೀಯತೆಯನ್ನು ಮೆಚ್ಚದಿರಲು ಸಾಧ್ಯವಿಲ್ಲ. ಹಾಗೇ ಅಲ್ಲಿನವರು ಪ್ರತಿಯೊಬ್ಬರಿಗೂ 'ರೀ' ಹಚ್ಚಿ ಗೌರವಯುತವಾಗಿ ಮಾತನಾಡಿಸುವುದನ್ನೂ ಮರೆಯುವಂತಿಲ್ಲ. ಇದು ಧಾರವಾಡ ಭಾಗದ ಕನ್ನಡವಾದರೆ, ಬಳ್ಳಾರಿ ಭಾಗದ ತೆಲುಗು ಮಿಶ್ರಿತ 'ಭೇಷ್ ಕನ್ನಡ'ವಂತೂ ಭಾರಿ ಕಸುವುಳ್ಳದ್ದು. ಇನ್ನು ಬೀದರ್ ಭಾಗದಲ್ಲಿ ಉರ್ದು, ದಖ್ಖನಿ ಮಿಶ್ರಿತ ಕನ್ನಡ ಅರ್ಥ ಮಾಡಿಕೊಳ್ಳಲು ಸ್ವಲ್ಪಕಾಲ ಅಲ್ಲಿಗೆ ಪಳಗಬೇಕು.

ಬಸವ ಕಲ್ಯಾಣ

ವಚನ ಪರಂಪರೆ

ಜಗತ್ತಿನಲ್ಲೇ ವಿಶಿಷ್ಟ ಎನಿಸುವ 12ನೇ ಶತಮಾನದ ಕಲ್ಯಾಣ ಕ್ರಾಂತಿಗೆ ಕೇಂದ್ರವಾಗಿದ್ದು ಈಗ ಬೀದರ್ ಜಿಲ್ಲೆಯಲ್ಲಿರುವ ಬಸವ ಕಲ್ಯಾಣ. ಶ್ರೇಷ್ಠ ವಚನಗಳ ಮೂಲಕ ಅಧ್ಯಾತ್ಮ, ಸಾಮಾಜಿಕ ಜನಜೀವನ ಮಾತ್ರವಲ್ಲದೆ ಸಾಹಿತ್ಯಕ್ಕೂ ಕೊಡುಗೆ ನೀಡಿದ ವಚನಕಾರರನ್ನು ಭಾರತ ಎಂದೂ ಮರೆಯುವಂತಿಲ್ಲ. ಬಸವಣ್ಣನ ಜೊತೆಗೆ ಅಲ್ಲಮ, ಮಹಾದೇವಿ ಅಕ್ಕ, ಚನ್ನಬಸವಣ್ಣ, ದೇವರ ದಾಸಿಮಯ್ಯ, ಅಂಬಿಗರ ಚೌಡಯ್ಯ ಹೀಗೆ ನೂರಾರು ಶರಣರು ವಚನ ತತ್ವ ನುಡಿದ ನೆಲ ಅದು. ಆದರೆ ಕಲ್ಯಾಣ ಪಟ್ಟಣ ಮತ್ತು ಕೋಟೆಯ ಇಂದಿನ ಸ್ಥಿತಿಯಂತೂ ತೀರಾ ಶೋಚನೀಯವಾಗಿದೆ. ಈಗ ನಡೆಯುತ್ತಿರುವ ಪುನರುಜ್ಜೀವನ ಕಾರ್ಯ ಪೂರ್ಣಗೊಂಡ ಮೇಲೆ ಹೇಗಾಗುತ್ತದೋ ನೋಡಬೇಕು.

ಗದುಗಿನ ಭಾರತ

ಕಾವ್ಯಕೆ ಗುರು

ಗಮಕ ಸಂಸ್ಕೃತಿಯನ್ನು ತನ್ನ ಕೃತಿಯಿಂದ ಶ್ರೀಮಂತಗೊಳಿಸಿದ ಕುಮಾರವ್ಯಾಸನನ್ನು ವಾಚಿಸುವ ಹಾಗೂ ವ್ಯಾಖ್ಯಾನಿಸುವ ಗಮಕ ಪರಂಪರೆ ಉತ್ತರ ಕರ್ನಾಟಕದಲ್ಲಿ ಅಷ್ಟಾಗಿಲ್ಲದಿದ್ದರೂ ಹಳೇ ಮೈಸೂರು ಹಾಗೂ ಮಲೆನಾಡಿನ ಪ್ರಾಂತದಲ್ಲಿ ಹಾಸುಹೊಕ್ಕಾಗಿದೆ. ಇಂತಹ ಅಪ್ರತಿಮ ಕಾವ್ಯ 'ಕರ್ಣಾಟ ಭಾರತ ಕಥಾಮಂಜರಿ' ರಚನೆಗೆ ವೇದಿಕೆಯಾಗಿದ್ದು ಗದುಗಿನ ವೀರನಾರಾಯಣ ದೇಗುಲ. ರಚನೆಯಾದಂದಿನಿಂದ ಇಂದಿನವರೆಗೆ ಪಂಡಿತ-ಪಾಮರರಿಬ್ಬರಿಗೂ ಅಚ್ಚುಮೆಚ್ಚಾಗಿ, ಗಮಕಿಗಳ ಪಾಲಿನ ದೈವವಾಗಿರುವ ಈ ಕೃತಿ ಕನ್ನಡದ 'ಮ್ಯಾಗ್ನಮ್ ಒಪಸ್'. ಗದುಗಿನ ನಾರಣಪ್ಪ ಅರ್ಥಾತ್ ಕುಮಾರವ್ಯಾಸ ನೀರಿನಲ್ಲಿ ಮಿಂದು, ತೇವ ಆರುವವರೆಗೆ ವೀರನಾರಾಯಣ ದೇವಾಲಯದ ಕಂಬಕ್ಕೊರಗಿ ಭಾಮಿನಿ ಷಟ್ಪದಿಯಲ್ಲಿ 'ಪದವಿಟ್ಟಳುಪದಂತೆ' ಕಾವ್ಯ ಹೊಸೆಯುತ್ತಿದ್ದ ಕಥೆ ಕೂಡಾ ಅಷ್ಟೇ ಜನಪ್ರಿಯ. ಕುಮಾರವ್ಯಾಸನಿಗೂ ಮುನ್ನ ಪಂಪ, ರನ್ನರ ಮಾರ್ಗ ಕಾವ್ಯ, ಶರಣರ ವಚನಗಳಿಗೂ ವೇದಿಕೆಯಾದ ಉತ್ತರ ಕರ್ನಾಟಕದ ನೆಲದ ಕಾವ್ಯ ಸೊಗಡಿಗೆ ಸುದೀರ್ಘ ಪರಂಪರೆಯೇ ಇದೆ.

ಛೋಟಾ ಮುಂಬೈ

ವಾಣಿಜ್ಯ ಕೇಂದ್ರ ಹುಬ್ಬಳ್ಳಿ

ಅವಳಿ ನಗರಗಳಲ್ಲಿ ಧಾರವಾಡ ಸಾಂಸ್ಕೃತಿಕ ಕೇಂದ್ರವಾದರೆ, ಹುಬ್ಬಳ್ಳಿ ವ್ಯಾಪಾರ ಕೇಂದ್ರ. ಸಮುದ್ರ ತೀರದಲ್ಲಿಲ್ಲ ಎಂಬುದನ್ನು ಹೊರತುಪಡಿಸಿದರೆ, ದೇಶದ ವಾಣಿಜ್ಯ ವಹಿವಾಟುಗಳ ಕೇಂದ್ರ ಮುಂಬೈ ನಗರಿ ವಹಿಸುವ ಪಾತ್ರವನ್ನು ರಾಜ್ಯದಲ್ಲಿ ಹುಬ್ಬಳ್ಳಿ ನಿರ್ವಹಿಸುತ್ತದೆ. ಮುಂಬೈ-ಚೆನ್ನೈ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-4ರ ಮಗ್ಗುಲಲ್ಲೇ ಇರುವ ಹುಬ್ಬಳ್ಳಿಯನ್ನು 'ಛೋಟಾ ಮುಂಬೈ' ಎನ್ನಬಹುದು. ಒಂದೊಮ್ಮೆ ಜವಳಿ ಉದ್ಯಮದ ಜೊತೆಗೆ ಆಟೊಮೊಬೈಲ್ ಉದ್ಯಮಕ್ಕೂ ಆಶ್ರಯ ನೀಡಿದ್ದ ಹುಬ್ಬಳ್ಳಿ ಆ ಕಾರಣದಿಂದಾಗಿಯೇ ದೇಶದೆಲ್ಲೆಡೆಯ ಉದ್ಯಮಿಗಳನ್ನು ಕೈಬೀಸಿ ಕರೆದಿತ್ತು. ಕರ್ನಾಟಕದಿಂದ ರಫ್ತಾಗುವ ಜವಳಿ, ಬೆಲ್ಲ, ಹೊಸಪೇಟೆಯ ಭತ್ತ, ಕಲಘಟಕಿಯ ಹತ್ತಿ, ಹಾವೇರಿಯ ಮೆಣಸು ಹಾಗೂ ಸಾಂಬಾರ ಪದಾರ್ಥಗಳು ಹುಬ್ಬಳ್ಳಿಯ ಮೂಲಕವೇ ಸಾಗಣೆಯಾಗುತ್ತವೆಯಾದ ಕಾರಣ ಹುಬ್ಬಳ್ಳಿ ವಾಣಿಜ್ಯ ಕೇಂದ್ರವಾಗಿ ಬೆಳೆಯಲು ಸಾಧ್ಯವಾಯಿತು. ವರ್ಷದ 12 ತಿಂಗಳೂ ವಾಣಿಜ್ಯ ಚಟುವಟಿಕೆಯಿಂದ ಕೂಡಿರುವ ಹುಬ್ಬಳ್ಳಿಯ ವಾಣಿಜ್ಯ-ವ್ಯವಹಾರ ಈ ಮೊದಲು ರಾಜಸ್ಥಾನ ಹಾಗೂ ಗುಜರಾತ್ ಮೂಲದ ಮಾರ್ವಾಡಿಗಳ ಸುಪರ್ದಿಯಲ್ಲಿತ್ತು. ಆದರೆ ಈಗ ಜಾತಿ-ಮತಗಳ ಎಲ್ಲೆ ಮೀರಿ ಜನತೆ ವಾಣಿಜ್ಯೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಕಿಡಿಗೇಡಿಗಳ 'ಧ್ವಜ ಗಲಾಟೆ' ಹೊರತುಪಡಿಸಿದರೆ ಹುಬ್ಬಳ್ಳಿ ಸದಾ ಸೌಹಾರ್ದ ನಗರಿ. ನೈರುತ್ಯ ರೈಲ್ವೆ ಕೇಂದ್ರ ಕಚೇರಿಯನ್ನೂ ಹೊಂದಿರುವ ಹುಬ್ಬಳ್ಳಿ ಸಾರಿಗೆ-ಸಂಪರ್ಕ ದೃಷ್ಟಿಯಿಂದಲೂ ಆಯಕಟ್ಟಿನ ಸ್ಥಳ.

ವರಕವಿ

ಗಾರುಡಿಗ ಬೇಂದ್ರೆ

"ಧಾರವಾಡದಲ್ಲಿ ಎಲ್ಲೇ ಆದರೂ ಕಣ್ಣು ಮುಚ್ಚಿ ಒಂದು ಕಲ್ಲು ಬೀಸಿದರೆ ಅದು ಯಾವುದಾದರೊಬ್ಬ ಕವಿಗೆ ಬೀಳುತ್ತದೆ..." ಎಂಬ ಮಾತು ತೀರಾ ಅತಿಶಯೋಕ್ತಿಯದೇನಲ್ಲ. ಆ ಭಾಗದಲ್ಲಿ ಕವಿಗಳು, ಸಾಹಿತಿಗಳು ಅಷ್ಟಿದ್ದಾರೆ. ಹಾಗೆ ನೋಡಿದರೆ ಉತ್ತರ ಕರ್ನಾಟಕದ ಆಡುಮಾತಿನಲ್ಲಿಯೇ ಒಂದು ಲಾಲಿತ್ಯವಿದೆ, ಚಂದದ ಸಾಹಿತ್ಯವಿದೆ. ಇಂತಹ ಕವಿ ಬಾಂಧವರ ಮುಕುಟಮಣಿ ವರಕವಿ ಬೇಂದ್ರೆ. ದ.ರಾ. ಬೇಂದ್ರೆ ಎಂದರೂ ಸರಿ, ಅಂಬಿಕಾತನಯದತ್ತ ಎಂದರೂ ಸರಿ, ಘಮ ಘಮ ಘಮಾಡಸ್ತಾ ದೇಸಿ ಸೊಗಡಿನ ನೂರಾರು ಪದ್ಯಗಳು ಕಿವಿಯಲ್ಲಿ ಗುಂಯ್‌ಗುಡುತ್ತವೆ. ಸಂಸ್ಕೃತದ ಸಾರ ಹೀರಿಕೊಂಡು ಜನಪದ ಶೈಲಿಯಲ್ಲಿ ಅರಳಿದ ಕಾವ್ಯ ಪ್ರತಿಭೆ ದ.ರಾ. ಬೇಂದ್ರೆ ಅವರದ್ದು. ಜನ ಸಾಮಾನ್ಯರ ಶಬ್ದಲೋಕದೊಳಗಿಂದ ಅವತರಿಸುತ್ತಿದ್ದ ಅವರ ಕಾವ್ಯ ಕ್ರಮೇಣ ಬದುಕಿನ ಮೂಲಭೂತ ಅಸಂಗತತೆಗೆ ಧ್ವನಿಯಾಗುತ್ತಿತ್ತು. ಬರೀ ಸಾಹಿತ್ಯಕ್ಕಷ್ಟೇ ಅಲ್ಲದೆ ತಮ್ಮ ಜಗಳಗಂಟತನ ಹಾಗೂ ಜಿಗುಟುತನಗಳ ವಿಚಾರದಲ್ಲೂ ಬೇಂದ್ರೆ ಒಂದು ದಂತಕತೆ. ಶಂ.ಬಾ. ಜೋಶಿ ಹಾಗೂ ಚಂಪಾ ಅವರ ಜೊತೆಗಿನ ಬೇಂದ್ರೆ ಅವರ ಜಗಳ ಹಾಗೂ ರಂಪ-ರಾಮಾಯಣಗಳಿಗೆ ದಶಕಗಳು ಸಂದಿದ್ದರೂ ಸಾಹಿತ್ಯವಲಯದ ಲೋಕಾಭಿರಾಮದ ಮಾತುಕತೆಗಳಲ್ಲಿ ಅವುಗಳಿನ್ನೂ ಮೊನಚು ಕಳೆದುಕೊಂಡಿಲ್ಲ. ಕಾಲ ಕಾಲಕ್ಕೆ ತಮ್ಮ ಸಮಕಾಲೀನ ಕವಿಗಳೆಡೆಗೆ ತಮ್ಮ ಉರಿಯ ನಾಲಗೆಯನ್ನು ಛಳಪಿಸುತ್ತಿದ್ದ ಬೇಂದ್ರೆ ಅಜ್ಜ ಕೆಲವು ಸಂದರ್ಭಗಳಲ್ಲಿ ತನ್ನ ಕೈಯಲ್ಲಿದ್ದ ಛತ್ರಿಯನ್ನೇ ಆಯುಧವನ್ನಾಗಿಸಿಕೊಂಡು ಹೋರಾಟಕ್ಕೆ ಇಳಿದದ್ದೂ ಉಂಟು! ಬೇಂದ್ರೆ ಅವರ ಕಾವ್ಯ ಪರಂಪರೆ ಉತ್ತರ ಕರ್ನಾಟಕದಲ್ಲಿ ಹಾಗೇ ಮುಂದುವರಿಯುತ್ತಿದೆ. ಅಲ್ಲಿನ ಭಾಷಾ ಶೈಲಿಯಲ್ಲಿ ಕೂಡಾ.

ಇಳಕಲ್ ಸೀರೆ

ಚೌಕಳಿ ಸೀರೆಯ ಮೋಡಿ

ಇಳಕಲ್ ಸೀರೆ, ತಲೆಯ ಮೇಲೆ ಸೆರಗು, ಮೊಣಕೈವರೆಗಿನ ಕುಪ್ಪಸ, ಕೈ ತುಂಬಾ ಹಸಿರು ಗಾಜಿನ ಬಳೆ, ಹಣೆಯ ತುಂಬಾ ಕುಂಕುಮ ತೊಟ್ಟ ಉತ್ತರ ಕರ್ನಾಟಕದ ನಾರಿಗೆ ಸಾಟಿ ಯಾರು? ಹತ್ತಿ ಮತ್ತು ರೇಶ್ಮೆ ಬಳಸಿ ನೇಯಲಾಗುವ ಇಳಕಲ್ ಸೀರೆಗಳಿಗೆ ಸಾವಿರಾರು ವರ್ಷ ಇತಿಹಾಸವಿದೆ. ನೀಲಿ, ಹಸಿರು, ಬೂದು, ಕಪ್ಪು ಬಣ್ಣದ ಸೀರೆಗೆ ಕೆಂಪು ಅಂಚು; ಅಂಚಿನ ಮೇಲೆ ಕಸೂತಿ, ಉಳಿದೆಡೆ ಸಣ್ಣ ಸಣ್ಣ ಚೌಕುಳಿ... ಇವು ಇಳಕಲ್ ಸೀರೆಯ ವಿಶೇಷತೆ. ಒಂಬತ್ತು ಗಜದ ಸೀರೆಯ ಸರಗಿನ ತುದಿಯಲ್ಲಿ ಹೆಣಿಗೆ, ತೋಪು ತೆನೆಯಂಥಾ ಅನೇಕ ಬಗೆಯ ಹೆಣಿಗೆ ಕಂಡುಬರುತ್ತದೆ. ಬಾಗಲಕೋಟೆಯ ಇಳಕಲ್‌ನಲ್ಲಿ ಸುಮಾರು 20,000 ಮಂದಿ ಈ ಸೀರೆ ನೇಯ್ಗೆಯನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ಹೀಗಾಗಿ ಇದು ಬೃಹತ್ ಮಟ್ಟದ ಉದ್ಯಮವೂ ಹೌದು.

ಸೂಫಿ ಪರಂಪರೆ

ಶಿಶುನಾಳ ಶರೀಫ

'ಕೋಡಗನ್ನ ಕೋಳಿ ನುಂಗಿತ್ತಾ...' ಎಂದ ಶರೀಫರು ಈಗ ಬದುಕಿದ್ದಿದ್ದರೆ 'ಸೌಹಾರ್ದತೆಯನ್ನ ಕೋಮು ಕಿಡಿ ನುಂಗಿತ್ತಾ, ನೆಮ್ಮದಿಯನ್ನು ರಾಜಕೀಯ ಲಾಬಿ ನುಂಗಿತ್ತಾ...' ಎಂದು ಪ್ರಶ್ನಿಸುತ್ತಿದ್ದರೇನೋ. 'ತರವಲ್ಲ ತಗಿ ನಿನ್ನ ವೋಟ್‌ಬ್ಯಾಂಕ್ ಸ್ವರ...' ಎಂದು ವ್ಯಂಗ್ಯವಾಡುತ್ತಿದ್ದರೇನೋ. ಕೋಮುವಾದ ಎಲ್ಲೆಡೆ ತನ್ನ ವಿಷದ ಕೆನ್ನಾಲಿಗೆ ಚಾಚುತ್ತಿರುವಾಗ, ಜಾತಿಯತೆ ತನ್ನ ಹೆಡೆಯೆನ್ನೆತ್ತಿ ಫೂತ್ಕರಿಸುವಾಗ ಅವುಗಳ ವಿರುದ್ಧ ಸಮರ ಸಾರಿರುವ ಪ್ರಜ್ಞಾವಂತ ಮನಸ್ಸುಗಳಿಗೆ ಕೈದೀವಿಗೆಯಾಗಿರುವುದು ಸಕಲ ಜೀವಾತ್ಮಗಳಿಗೂ ಲೇಸನ್ನು ಬಯಸಿದ ಸೂಫಿ ಪರಂಪರೆ. ಅಂಥದೊಂದು ಸೂಫಿ ಪರಂಪರೆಗೆ ನೀರೆರೆದು ಪೋಷಿಸಿದ್ದು ಉತ್ತರ ಕರ್ನಾಟಕ. ಮಠವೆಂಬ ಉದ್ಯಮ ಹಾಗೂ ಧರ್ಮವೆಂಬ ವ್ಯವಹಾರದಲ್ಲಿ ಸಹಜವಾಗಿ ಸೃಷ್ಟಿಯಾಗುವ ಆಧ್ಯಾತ್ಮಿಕಶೂನ್ಯದಲ್ಲಿ ಸೂಫಿ ಸಂತ ಶಿಶುನಾಳ ಶರೀಫರು ಆಮ್ಲಜನಕದಂತೆ ಒದಗಿ ಬರುತ್ತಾರೆ. ಮುಸ್ಲಿಂ ಸಮುದಾಯದ ಶಿಶುನಾಳ ಶರೀಫರು ಆತ್ಮೋನ್ನತಿ ಪಡೆದಿದ್ದು ಮಾತ್ರ ಗುರು ಗೋವಿಂದರ ಸನ್ನಿಧಿಯಲ್ಲಿ. ಇಸ್ಲಾಂ ಹಾಗೂ ಹಿಂದೂ ಧರ್ಮದ ಸಾರವನ್ನು ತಮ್ಮ ಆಡುಮಾತಿನ ಪದಗಳಲ್ಲಿ ಬಿತ್ತರಿಸಿದ ಶರೀಫ ಕನ್ನಡದ ಕಬೀರ್‌ದಾಸ. ಹಾಗೆಯೇ ಕನ್ನಡದ ನೆಲದಲ್ಲಿ ಸೂಫಿ ಪಂಥವನ್ನು ಇನ್ನಷ್ಟು ವಿಪುಲವಾಗಿ ಬೆಳೆಸಿದವರು ಖ್ವಾಜಾ ಬಂದೇ ನವಾಜ್ ಹಾಗೂ ಬಾಬಾಬುಡನ್.

ಗಂಗಾವತಿ ಅಕ್ಕಿ

ಕಂಗೊಳಿಸುವ ಭತ್ತದ ಕಣಜ

ಹಂಪಿ ಬಳಿ ಹರಿಯುವ ತುಂಗಭದ್ರ ದಾಟಿ ಮುಂದಕ್ಕೆ ನಡೆದರೆ ಸುತ್ತಲೂ ನಯನ ಮನೋಹರ ಕಲ್ಲುಬಂಡೆ ಪರ್ವತಗಳ ಸಾಲು ಸಾಲು... ನಡುವೆ ಸಮತಟ್ಟಾದ ನೆಲದಲ್ಲಿ ದೃಷ್ಟಿ ಹಾಯುವವರೆಗೂ ಭತ್ತದ ಗದ್ದೆ ಕಂಡರೆ ಅದು ಗಂಗಾವತಿ. ಕೊಪ್ಪಳ ತಾಲೂಕಿನ ಗಂಗಾವತಿ ಅಕ್ಕಿ ಬೆಳೆಗೆ ಜಗತ್ಪ್ರಸಿದ್ಧ. ಕೃಷಿ ಕ್ಷೇತ್ರದಲ್ಲಿ ನಡೆದ ಎಲ್ಲಾ ಅಭಿವೃದ್ಧಿಗಳ ಕೇಂದ್ರಬಿಂದು ಈ ಭತ್ತದ ಕಣಜ. ಇಲ್ಲಿ 40ಕ್ಕಿಂತಲೂ ಹೆಚ್ಚು ಅಕ್ಕಿ ಗಿರಣಿಗಳಿವೆ. ಸುಮಾರು 70 ಸಣ್ಣ ಕೈಗಾರಿಕೆಗಳಿದ್ದು, ಶೇ. 50-60ರಷ್ಟು ಅಕ್ಕಿ ಗಿರಣಿಗಳು, ಉಳಿದಂತೆ ಹತ್ತಿಯ ಗಿರಣಿಗಳು, ಬಟ್ಟೆ ಗಿರಣಿಗಳು. ಈ ಕಾರಣದಿಂದ ಈ ನಗರಕ್ಕೆ ವಲಸೆಗಾರರ ಸಂಖ್ಯೆಯೂ ಅಧಿಕ. ವಿ ಸಿದ್ಧಲಿಂಗೇಶ್ವರ ಡ್ರೈಯರ‍್ಸ್ ಆಂಡ್ ರೈಸ್ ಮಿಲ್ಸ್, ಶ್ರೀನಿವಾಸ ಇಂಡಸ್ಟ್ರೀ, ಸಂಗಮ್ ಇಂಡಸ್ಟ್ರೀ, ರಾಯಚೂರು ಶಿವಯ್ಯ ಆಂಡ್ ಇಂಡಸ್ಟ್ರೀ, ಸಿರಿಗೇರಿ ಇಂಡಸ್ಟ್ರೀ, ಶ್ರೀರಾಮಚಂದ್ರ ಇಂಡಸ್ಟ್ರೀ ಇತ್ಯಾದಿ ಪ್ರಮುಖ ಉದ್ಯಮಗಳು. ವಿದ್ಯುತ್ ಕೊರತೆ ಸಂಭವಿಸಿದಾಗ ಅಕ್ಕಿ ಹೊಟ್ಟುಗಳಿಂದಲೇ ಇಂಧನ ಉತ್ಪಾದನೆಗೆ ಇಳಿಯುವ ಸಾಹಸ ಮಾಡಿದ ಶ್ರೇಯಸ್ಸೂ ಕೊಪ್ಪಳ ಜಿಲ್ಲೆಗೇ ಸೇರಬೇಕು! ಸಿನಿಮಾ ಚಿತ್ರೀಕರಣಕ್ಕೂ ಗಂಗಾವತಿ ಭತ್ತದ ಗದ್ದೆಗಳು ಹಾಗೂ ಪೈರಿನ ರಾಶಿ ಫೇವರೇಟ್ ಸ್ಪಾಟ್!

ಹಂತಕ ಪಡೆ

ಕುಖ್ಯಾತ ಭೀಮಾ ತೀರ

ಆಂಧ್ರ ರಾಯಲಸೀಮೆಯ 'ಚಂಪೇಸ್ತಾನು' ಪರಂಪರೆಗೆ ಹೋಲಿಸಬಹುದಾದ ಕರ್ನಾಟಕ ಪ್ರದೇಶವೆಂದರೆ ನಿಸ್ಸಂಶಯವಾಗಿ ಭೀಮಾ ನದಿ ತೀರ. ಉತ್ತರ ಕರ್ನಾಟಕದ ಬಿಜಾಪುರ ಹಾಗೂ ಗುಲ್ಬರ್ಗಾ ಜಿಲ್ಲೆಗಳ ಆಸುಪಾಸಿನಲ್ಲಿ ನಡೆದ ಹತ್ಯಾಕಾಂಡ, ಹರಿದ ರಕ್ತ ಆಂಧ್ರದ ರಾಯಲಸೀಮೆಯ ಹತ್ಯಾಕಾಂಡಗಳನ್ನೂ ನಾಚಿಸುತ್ತವೆ. ನಮ್ಮ ಕಾನೂನು ಹಾಗೂ ಪೊಲೀಸ್ ವ್ಯವಸ್ಥೆಗೆ ಒಂದಿಷ್ಟೂ ಬಗ್ಗದ ಕುಖ್ಯಾತ ಹಂತಕರ ಪಡೆ ಅದು. ಅಂಥದ್ದೊಂದು ರಕ್ತಸಿಕ್ತ ಅಧ್ಯಾಯದಲ್ಲಿ ಕಂಡುಬರುವ ಹೆಸರುಗಳೆಂದರೆ ಚಂದಪ್ಪ ಹರಿಜನ, ಶಿವಾಜಿ ಬೊರಗಿ, ಕೇಶಪ್ಪ, ಚಡಚಣದ ಶ್ರೀಶೈಲ ಹಾಗೂ ಮಲ್ಲಿಕಾರ್ಜುನ ಸಹೋದರರು. ಈ ಹಂತಕರು ಕೊಲೆಗೈದ ಎಷ್ಟೋ ಮಂದಿ ನತದೃಷ್ಟರ ಶವಗಳು ಈವರೆಗೆ ಪತ್ತೆಯಾಗಿಲ್ಲ. ಅವು ಒಂದೋ ಭೀಮಾ ನದಿಯ ಪಾಲಾಗಿವೆ ಅಥವಾ ನಾಯಿ ನರಿಗಳ ಪಾಲಾಗಿವೆ. ಈ ಪಾತಕಿಗಳ ಕಾರ್ಯಾಚರಣೆಯ ಪರಿಯೇ ಅಂಥದ್ದು. ಹಂತಕರ ಮನೋವೃತ್ತಿ ಹಾಗೂ ಅವರ ಚಲನವಲನವನ್ನು ಅಭ್ಯಸಿಸಬೇಕೆನ್ನುವವರಿಗೆ ಭೀಮಾ ತೀರದ ಈ ಹಂತಕರ ಪಾತಕಚರಿತ್ರೆ ಅತ್ಯುತ್ತಮ ಆಕರ ಗ್ರಂಥವಾಗಬಲ್ಲದು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಂದಿಗೂ ಭೀಮಾ ನದಿಯ ತೀರದಲ್ಲಿ ಪುತ್ರಪ್ಪ ಬೈರಗೊಂಡ ಹಾಗೂ ಚಡಚಣ ಮಲ್ಲಿಕಾರ್ಜುನರ ನಾಡ ಬಂದೂಕುಗಳು ಆಗಾಗ್ಗೆ ಘರ್ಜಿಸುತ್ತಿರುತ್ತವೆ. ಇವರ ಕಾರ್ಯವಿಧಾನ ಪೊಲೀಸರಿಗೆ ಇನ್ನೂ ಒಂದು ಸವಾಲು. ಭೀಮೆಯಲ್ಲಿ ನೆತ್ತರ ಹರಿವು ಸದ್ಯಕ್ಕೆ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ...

ಶಿಲ್ಪಕಲೆಯ ಶಾಲೆ

ಬಾದಾಮಿ, ಐಹೊಳೆ, ಪಟ್ಟದಕಲ್ಲು

'ಐಹೊಳೆ ವಾಸ್ತುಶಿಲ್ಪದ ಶಾಲೆ, ಬಾದಾಮಿ ಪದವಿ ಕಾಲೇಜು ಮತ್ತು ಪಟ್ಟದಕಲ್ಲು ವಿಶ್ವವಿದ್ಯಾಲಯ' ಎಂಬ ಮಾತು ಅತಿಶಯೋಕ್ತಿಯದೇನಲ್ಲ. ಐಹೊಳೆಯಂತೂ ಹಿಂದೂ ದೇವಾಲಯ ಶಿಲ್ಪಕಲೆಯ ತೊಟ್ಟಿಲು. ಕನ್ನಡದ ಕೆಚ್ಚಿನ ದೊರೆ ಇಮ್ಮಡಿ ಪುಲಿಕೇಶಿಯ ಬಗೆಗಿನ ಮಾಹಿತಿಯನ್ನೊಳಗೊಂಡ ಶಾಸನವೂ ಇಲ್ಲಿದೆ. ಆರಂಭದ ಘಟ್ಟದಲ್ಲಿ ಐಹೊಳೆ ಚಾಲುಕ್ಯ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ನಂತರ ರಾಜ್ಯಧಾನಿಯಾಗಿ ಕಂಗೊಳಿಸಿದ ಬಾದಾಮಿ ವಿಶ್ವ ವಿಖ್ಯಾತ ಗುಹಾ ಶಿಲ್ಪಕಲೆಗಳ ತವರು. ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿರುವ ಪಟ್ಟದಕಲ್ಲು ದೇವಾಲಯಗಳ ಶೈಲಿಯಂತೂ ಅನನ್ಯ.

ತೊಗಲುಗೊಂಬೆ ಆಟ

ದೇಸೀ 'ಕಾರ್ಟೂನ್ ನೆಟ್‌ವರ್ಕ್'

'ಆನಿಮೇಷನ್ ಕಾರ್ಟೂನ್' ಸೃಷ್ಟಿಸಿ ವಾಲ್ಟ್ ಡಿಸ್ನಿ ಜಗದ್ವಿಖ್ಯಾತಿ ಪಡೆದಿರಬಹುದು. ಆದರೆ ಭಾರತೀಯ ದೇಸಿ 'ಆನಿಮೇಷನ್ ಕಾರ್ಟೂನ್-ಕಾಮಿಕ್ಸ್' ಅರ್ಥಾತ್ ತೊಗಲುಗೊಂಬೆ ಕಲೆಗೆ 2000 ವರ್ಷಗಳ ಸಮೃದ್ಧ ಇತಿಹಾಸವಿದೆ. ಛತ್ರಪತಿ ಶಿವಾಜಿಯ ಕಾಲದಲ್ಲಿ ಮಹಾರಾಷ್ಟ್ರದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ತೊಗಲುಗೊಂಬೆ ಆಟ ಬಳ್ಳಾರಿಯ ಮೂಲಕ ಕರ್ನಾಟಕವನ್ನು ಪ್ರವೇಶಿಸಿತು ಎಂಬ ಪ್ರತೀತಿ ಇದೆ. ಬಹುತೇಕ ತೊಗಲುಗೊಂಬೆ ಕಲಾವಿದರ ಮಾತೃಭಾಷೆಯೂ ಮರಾಠಿಯಾಗಿದ್ದು ಮೇಲಿನ ಪ್ರತೀತಿಗೆ ಪುಷ್ಟಿ ನೀಡುತ್ತದೆ. ಬಳ್ಳಾರಿಯ ಹೊಸ್ತಿಲು ದಾಟಿದ ಬಳಿಕ ತೊಗಲುಗೊಂಬೆ ಆಟ ಮಂಡ್ಯ, ಹಾಸನ, ತುಮಕೂರು ಹೀಗೆ ಬಹುತೇಕ ಕಡೆ ಫಲವತ್ತಾಗಿ ಬೆಳೆದುನಿಂತಿತ್ತು. ಕರ್ನಾಟಕದ ಈ ನೆಲದಲ್ಲಿ ತೊಗಲುಗೊಂಬೆ ಆಟ ಬೆಳೆದು ನಿಲ್ಲುವಲ್ಲಿ ಎಡ್ರಾಮನಹಳ್ಳಿ ದೊಡ್ಡ ಭರ್ಮಪ್ಪ, ಬೆಳಗಲಿ ವೀರಣ್ಣನಂಥ ಹಲವಾರು ಕಲಾವಿದರ ಕೊಡುಗೆ ಇದೆ. ದೇಶದ ಬಹುತೇಕ ಸೃಜನಶೀಲ ಕಲೆಗಳಿಗೆ ಪ್ರೇರಣೆಯಾಗಿದ್ದ ರಾಮಾಯಣ ಹಾಗೂ ಮಹಾಭಾರತ ಕಥೆಗಳೇ ಪ್ರಾರಂಭದಲ್ಲಿ ತೊಗಲುಗೊಂಬೆಯ ಜೀವಾಳವಾಗಿತ್ತು. ತದನಂತರದ ಪ್ರಯೋಗದಲ್ಲಿ ಬೆಳಗಲಿ ವೀರಣ್ಣನವರು ಮಹತ್ಮಾ ಗಾಂಧಿ, ಬಸವಣ್ಣನವರನ್ನೂ ಕಥಿಸುವ ಮೂಲಕ ತೊಗಲುಗೊಂಬೆ ಆಟಕ್ಕೆ ಸಮಕಾಲೀನ ಲೇಪ ನೀಡಿದ್ದರು. ಈಗಂತೂ ತೊಗಲುಗೊಂಬೆ ಕಲೆ ವಿನಾಶದ ಅಂಚಿನಲ್ಲಿದೆ. ಮುನ್ನೂರ ಮುವ್ವತ್ತು ಟಿವಿ ಚಾನೆಲ್‌ಗಳಿರುವಾಗ ಪರದೆ ಹಿಂದೆ ಓಡಾಡುವ ತೊಗಲುಗೊಂಬೆಯ ಬೆಡಗು ಸವಿಯುವ ಪುರಸೊತ್ತಾದರು ನಮಗೆಲ್ಲಿದೆ ಬಿಡಿ...

ಕಾರಣಿಕ

ತುಂಬಿದ ಕೊಡ ಮೂರು ಪಾಲು ಆದೀತಲೇ ಪರಾಕ್!

ಕಾರಣಿಕ ನುಡಿಯುವುದು! ದೇವರು ಮೈಮೇಲೆ ಬಂದು ಭವಿಷ್ಯ ಹೇಳುವ ಇದೊಂದು ಸಂದರ್ಭಕ್ಕೆ ಉತ್ತರ ಕರ್ನಾಟಕದ ಮಂದಿ ತುದಿಗಾಲಲ್ಲಿ ಕಾದು ನಿಲ್ಲುತ್ತಾರೆ. ತಮ್ಮ ಭವಿಷ್ಯ ನಿರ್ಧಾರವಾಗುವ ಕ್ಷಣವದು. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇ ಮೈಲಾರ ಕ್ಷೇತ್ರದಲ್ಲಿ ಪ್ರತಿ ವರ್ಷ ಫೆಬ್ರವರಿಯ ರಥಸಪ್ತಮಿಯಂದು ನಡೆಯುವ 'ಕಾರಣಿಕ' ತನ್ನ ನಿಗೂಢತೆಯಿಂದಲೇ ಹೆಸರುವಾಸಿ. ಕ್ಷೇತ್ರದ ಗುರುಗಳಿಂದ ಭಂಡಾರ ದೀಕ್ಷೆ ಪಡೆದು 'ಬಿಲ್ಲು' ಏರುವ ಕಾರಣಿಕರ ಗೊರವಯ್ಯ ಕ್ಷೇತ್ರದ ದೈವ ಮೈಲಾರ ಲಿಂಗ ನುಡಿಸುವ ಭವಿಷ್ಯವನ್ನು ತನ್ನೆದುರು ನೆರೆದ ಲಕ್ಷಾಂತರ ಮಂದಿಯೆದುರು ಅರುಹುತ್ತಾನೆ. ಕಳೆದ ಫೆಬ್ರವರಿಯಲ್ಲಿ ನುಡಿದ ಕಾರಣಿಕ, 'ತುಂಬಿದ ಕೊಡ ಮೂರು ಪಾಲು ಆದೀತಲೇ ಪರಾಕ್!' ಇದು ಉತ್ತರ ಕರ್ನಾಟಕದಲ್ಲಿ ಈಚೆಗೆ ಭೋರೆಂದು ಸುರಿದ ಕುಂಭದ್ರೋಣ ಮಳೆ ಮತ್ತು ಪ್ರಳಯಸದೃಶ ಪ್ರವಾಹದ ಸುಳಿವು. ಈ ಕಾರಣಿಕ ಸಂಸ್ಕೃತಿ ಹಿರೇ ಮೈಲಾರ ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ. ಗದುಗಿನ ಬಳಿಯ ಇಟಗಿ ಭೀಮವ್ವ ದೇವತೆಯ ಜಾತ್ರೆಯಲ್ಲೂ ಹೇಳಿಕೆಯಾಗುತ್ತದೆ. ಹಾಗೆಯೇ ನಿಪ್ಪಾಣಿ ಬಳಿಯ ಅಪ್ಪಾಚೆವಾಡಿ ಹಾಲಸಿದ್ಧನಾಥ ಕ್ಷೇತ್ರದಲ್ಲೂ ಕಾರಣಿಕ ನಡೆಯುತ್ತದೆ. ಹೀಗೆ ವರ್ತಮಾನದಲ್ಲಿಯೇ ಭವಿಷ್ಯದ ಹೊಳವು ನೀಡುವ ಇಂಥ ಪರಂಪರೆ ಉತ್ತರ ಕರ್ನಾಟಕದ ಅವಿಭಾಜ್ಯ ಅಂಗವೆಂದರೆ ತಪ್ಪಾಗಲಾರದು. "ಒಂದು ವೇಳೆ ನಮ್ಮ ಹವಾಮಾನ ವರದಿ ಸುಳ್ಳಾಗಬಹುದು. ಆದರೆ ಕಾರಣಿಕ ಮಾತ್ರ ಕರಾರುವಾಕ್ಕು" ಎಂಬ ನಂಬಿಕೆ ಅಲ್ಲಿನ ಭಕ್ತರದು.

ರೊಟ್ಟಿ ಊಟ

ಜೋಳದ ರೊಟ್ಟಿ, ಗುರೆಳ್ಳು ಚಟ್ನಿ

ಒಮ್ಮೆ ಜೋಳದ ರೊಟ್ಟಿ, ಗುರೆಳ್ಳು ಚಟ್ನಿ, ಎಣ್ಣೆಗಾಯಿ ಬದನೆ ರುಚಿಗೆ ಬಿದ್ದು ಬೇರಾವುದೇ ತಿನಿಸು ನಿಮಗೆ ಅಪಥ್ಯವಾದರೆ ಅದು ನಿಮ್ಮ ತಪ್ಪಲ್ಲ. ಜೋಳದ ರೊಟ್ಟಿ ಅಥವಾ ಭಕ್ರಿ ಊಟದ ರುಚಿಯೇ ಅಂಥದು. ಮೆದುವಾದ ಬಿಸಿ ರೊಟ್ಟಿಯಾಗಲಿ, ಹಪ್ಪಳದಂಥ ಖಡಕ್ ರೊಟ್ಟಿಯಾಗಲಿ ರುಚಿಗೆ ಸಾಟಿಯಿಲ್ಲ. ಭಕ್ರಿ ಜೊತೆಗೆ ನೆಂಜಿಕೊಳ್ಳಲು ಗುರೆಳ್ಳು ಚಟ್ನಿ ಹಾಗೂ ಎಣ್ಣೆಗಾಯಿ ಇರಲೇಬೇಕು. ಗುರೆಳ್ಳು ಮತ್ತು ಖಾರವನ್ನು ಒರಳಲ್ಲಿ ಹಾಕಿ ಕುಟ್ಟಿದರೆ ಗುರೆಳ್ಳು ಚಟ್ನಿ ಸಿದ್ಧ. ಬದನೆಕಾಯಿಯನ್ನು ಮಧ್ಯೆ ಸೀಳಿ ಮಸಾಲೆ ಹಾಕಿ ಎಣ್ಣೆಯಲ್ಲಿ ಕಾಯಿಸಿದರೆ ಸಿದ್ಧವಾಗೋದೇ ಎಣ್ಣೆಗಾಯಿ ಬದನೆಕಾಯಿ. ಇಂಥ ರೊಟ್ಟಿ ತಿಂದು ಗಟ್ಟಿಗರಾದವರು ಉತ್ತರದ ಮಂದಿ.

ಆಲಮಟ್ಟಿ ಅಣೆಕಟ್ಟು

ಮುಳುಗಿದ ಬಾಗಲಕೋಟೆ

ಭಾರತದ ಬೃಹತ್ ಅಣೆಕಟ್ಟುಗಳಲ್ಲೊಂದಾದ ಆಲಮಟ್ಟಿ ಯೋಜನೆ ಪೂರ್ಣಗೊಳ್ಳಲು ಒಟ್ಟು ನಾಲ್ಕು ದಶಕದಷ್ಟು ಸಮಯ ಬೇಕಾಯಿತು. 2006ರಲ್ಲಿ ಉದ್ಘಾಟನೆಯಾದ ಆಲಮಟ್ಟಿ ಅಣೆಕಟ್ಟು ಹನಿ ನೀರಿಗಾಗಿ ಬಾಯಾರಿ ನಿಂತಿದ್ದ ಉತ್ತರ ಕರ್ನಾಟಕದ ಬರಡು ಭೂಮಿಯಲ್ಲಿ ಕನಿಷ್ಠ ಎರಡು ಬೆಳೆ ಬೆಳೆಯುವ ರೈತನ ಕನಸು ನನಸಾಗಿಸುವ ಯೋಜನೆ. ಆದರೆ ಬಾಗಲಕೋಟೆ ಪಾಲಿಗೆ ಸಂಕಷ್ಟದ ಆಗರ. ಹಿನ್ನೀರಿನಿಂದಾಗಿ ಸ್ಥಳಾಂತರಗೊಂಡ (ಏಷ್ಯಾದಲ್ಲಿ) ಏಕೈಕ ನಗರ ಅದು. ಆಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟೆಗಳಿಂದಾಗಿ ಸುಮಾರು 180 ಹಳ್ಳಿಗಳ ಜನ ಸಂತ್ರಸ್ತರಾಗಬೇಕಾಯಿತು. ಭಾರತದ ಇನ್ಯಾವ ಅಣೆಕಟ್ಟು ಯೋಜನೆಗೂ ಇಷ್ಟೊಂದು ದೊಡ್ಡ ಪ್ರಮಾಣದ ಸಂತ್ರಸ್ತರು ಸ್ಥಳಾಂತರಗೊಂಡ ಉದಾಹರಣೆಯಿಲ್ಲ. ಈ ಯೋಜನೆಯ ಮತ್ತೊಂದು ಕೊರತೆಯೆಂದರೆ ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟೆಯಿಂದ ನೀರು ಬಿಟ್ಟರೆ ಮಾತ್ರ ಅಲಮಟ್ಟಿ ತುಂಬಿಕೊಳ್ಳುತ್ತದೆ. ಆಲಮಟ್ಟಿಯಿಂದ ಉತ್ತರ ಕರ್ನಾಟಕದ 18 ನಗರ ಮತ್ತು ನೂರಕ್ಕೂ ಅಧಿಕ ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ನೀರಾವರಿ ಮಾತ್ರವಲ್ಲ, ಕೆಪಿಟಿಸಿಎಲ್‌ನ ಜಲವಿದ್ಯುತ್ ಘಟಕವೂ ಇಲ್ಲಿದೆ.

ತತ್ವ ಪದ, ರಿವಾಯತ್ ಪದ

ಸರಳ ಬದುಕಿನ ನೀತಿಪಾಠ

ಸಮಾಜ, ಸಂಸಾರ ಮತ್ತು ನೈತಿಕತೆಯನ್ನು ಎತ್ತಿ ಹಿಡುವ, ಆಡು ಮಾತಿನ ಲಾಲಿತ್ಯವನ್ನೊಳಗೊಂಡ ತತ್ವಪದಗಳು ಉತ್ತರ ಕರ್ನಾಟಕದಲ್ಲಿ ಸಮೃದ್ಧವಾಗಿ ರಚನೆಯಾಗಿವೆ. ಅದು ಶರೀಫರ 'ಸೋರುತಿಹುದು ಮನೆಯ ಮಾಳಿಗೆ' ಇರಬಹುದು ಅಥವಾ ಕಡಕೋಳ ಮಡಿವಾಳಪ್ಪ ಅವರ 'ಊರ ನರಕವ ತಿಂದು ಬೋರಾಡಿ ಹಿಂಡುವ ಎಮ್ಮೆ ಹಾಲಿನ ಸವಿ ನೀ ನೋಡಣ್ಣ' ಪದ ಇರಬಹುದು. ನೈತಿಕ ಮೌಲ್ಯ, ಸರಳ ತತ್ವವೇ ಅವುಗಳ ಜೀವಾಳ. ಹೇರೂರು ಇರುಪಾವ ದೂತರು, ಮೋಟ್ನಳ್ಳಿ ಹಸನ್ ಸಾಬ, ಬಡಿಕೆಪ್ಪ ತಾತ, ಕೈನೂರು ಕೃಷ್ಣಪ್ಪ, ಆದಿ ಅಮಾತ್ಯಪ್ಪ, ಬಿಜಲಿ ವಸ್ತಾದಿ, ಖಾದ್ರಿ ಪೀರ, ನೀರ್ಲಕೇರಿ ಬಸವಲಿಂಗ ತಾತ... ಹೀಗೆ ತತ್ವಪದಗಳ ಪರಂಪರೆಯನ್ನು ಶ್ರೀಮಂತಗೊಳಿಸಿದವರು ಹಲವರು. ಗುಲ್ಬರ್ಗಾ ಪ್ರಾಂತದಲ್ಲಿ ಬಹು ಜನಪ್ರಿಯವಾಗಿರುವ ರಿವಾಯತ್ ಪದಗಳು ಅಥವಾ ರುಬಾಯಿಗಳು ಧಾರ್ಮಿಕ ಹಿನ್ನೆಲೆಯಲ್ಲಿ ರಚನೆಯಾದವು. ಮುಸ್ಲಿಂ ಸಮುದಾಯದವರ ಮೊಹರಂ ಹಬ್ಬದ (ಈ ಕಡೆ ಅಲಾಯಿ ಹಬ್ಬ ಎನ್ನಲಾಗುತ್ತದೆ) ಸಂದರ್ಭಗಳಲ್ಲಿ ರಾತ್ರಿ ಪೂರಾ ಅಲಾಯಿ ದೇವರನ್ನು ಕುರಿತು ರಿವಾಯತ್ ಪದಗಳನ್ನು ಕಟ್ಟಲಾಗುತ್ತದೆ. ಮೊಹರಂ ಹಬ್ಬದ ಕುರಿತಾಗಿ ಅಥವಾ ಸಾಂದರ್ಭಿಕವಾಗಿ ರುಬಾಯಿಗಳು ವಿವಿಧ ರೂಪಗಳನ್ನು ಪಡೆದುಕೊಳ್ಳುತ್ತವೆ. ಶಾಂತರಸ, ಜಂಬಣ್ಣ ಅಮರಚಿಂತ ಮೊದಲಾದ ಸಾಹಿತಿಗಳು ರುಬಾಯಿಗಳನ್ನು ಉರ್ದುವಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ ಎನ್ನುವುದು ವಿಶೇಷ.

ಸಿಹಿ ತಿನಿಸು

ಕುಂದ, ಕರದಂಟು, ಪೇಡಾ-ಚೂಡಾ

ನೂರಾರು ವರ್ಷಗಳ ಇತಿಹಾಸ ಇರುವ 'ಕುಂದ' ಸಿಹಿ ತಿನಿಸಿನಿಂದಾಗಿಯೇ ಬೆಳಗಾವಿ ಮುಕುಟಕ್ಕೆ 'ಕುಂದ ನಗರಿ' ಎಂಬ ಗರಿ. ಬೆಳಗಾವಿ ಮಂದಿ ಎಲ್ಲೇ ಹೋಗಲಿ 'ಕುಂದ' ಉಡುಗೊರೆಯಾಗಿ ಕೊಂಡು ಹೋಗೇ ಹೋಗುತ್ತಾರೆ. ಹಾಲು ಕಾಯಿಸಿ ಹದಕ್ಕೆ ಬಂದ ಮೇಲೆ ಅದಕ್ಕೆ ಸಕ್ಕರೆ- ಏಲಕ್ಕಿ ಬೆರಿಸಿ ಮಾಡುವ ಈ ವಿಶಿಷ್ಟ ಖಾದ್ಯಕ್ಕೆ ವಿದೇಶಗಳಲ್ಲೂ ಬೇಡಿಕೆ ಇದೆ. ಇನ್ನು ಗೋಕಾಕ ಮತ್ತು ಅಮೀನಗಡದ ಕರದಂಟು ಭಾರಿ ಜನಪ್ರಿಯ. ಮರದ ಅಂಟಿನಿಂದ ತಯಾರಾಗುವ ಈ ತಿನಿಸು ಬೆಲ್ಲ, ಕೊಬ್ಬರಿ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಖರ್ಜೂರ, ಪಿಸ್ತಾಗಳ ಅತ್ಯದ್ಭುತ ಮಿಶ್ರಣ. ಇನ್ನು ಧಾರವಾಡ ಪೇಡಾವಂತೂ ಲೋಕವಿಖ್ಯಾತ. ಠಾಕೂರ್ ಪೇಡಾ ಅಂಗಡಿ ಎದುರು ಮುಂಜಾನೆಯಿಂದ ಗ್ರಾಹಕರು ಸರತಿ ಸಾಲಿನಲ್ಲಿ ನಿಲ್ಲುವ ಸಂಗತಿ ಕೂಡಾ ಅಷ್ಟೇ ವಿಖ್ಯಾತ. ಇತ್ತೀಚೆಗೆ ಈ ತಿನಿಸಿಗೆ ಪೇಟೆಂಟ್ ಕೂಡ ಸಿಕ್ಕಿದೆ. ಇನ್ನು ಸವಣೂರು ಚೂಡಾ (ಖಾರ)ಕ್ಕೆ ಬಾಯಿ ಚಪ್ಪರಿಸದವರೇ ಇಲ್ಲ. ಅದಕ್ಕೇ ಅಲ್ಲವೆ ಕವಿವಾಣಿ ಇರುವುದು "ಚಹಾದ ಜೋಡಿ ಚೂಡ್ಹಾದಂಗ" ಅಂತ.

ಸಂಗ್ಯಾಬಾಳ್ಯಾ

ಜಾನಪದ ಶ್ರೀಮಂತಿಕೆ

ಮೌಖಿಕ ಪರಂಪರೆಗೆ ಉತ್ತರ ಕರ್ನಾಟಕ ನೀಡಿದ ಕೊಡುಗೆ ಅತ್ಯಂತ ಮಹತ್ವದ್ದು. ಶ್ರೀಕೃಷ್ಣ ಪಾರಿಜಾತ, ರಾಧಾನಾಟ, ನಬಿ ಆಟ ಮುಂತಾದ ನಾಟಕಗಳು, ಜನಪದ ಪ್ರಕಾರಗಳು ಇಲ್ಲಿ ಸಮೃದ್ಧ. ಅದರಲ್ಲೂ 'ಸಂಗ್ಯಾಬಾಳ್ಯಾ' ಈ ಭಾಗದ 'ದೇಸಿ ಬ್ರಾಂಡ್' ಎನಿಸಿದ ಆಟ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಪತ್ತಾರ ರಾಯಪ್ಪ ಮಾಸ್ತರ ರಚಿಸಿದ್ದು ಎನ್ನಲಾದ ಈ ನಾಟಕ ಕೃತಿಕಾರನನ್ನೂ ಮೀರಿ ಜನಸಮುದಾಯದ ಪ್ರಜ್ಞೆಯಲ್ಲಿ ಬೆಳೆದು ಬಂದಿದೆ. ನಾಟಕದ ಕಥಾನಾಯಕಿ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಳೋ ಅಥವಾ ಇಲ್ಲವೋ; ಆದರೆ ವಿವಾಹೇತರ ಬಾಂಧವ್ಯವಷ್ಟೇ ನಾಟಕದ ಜನಪ್ರಿಯತೆಗೆ ಕಾರಣವಾಗಿರಲಿಲ್ಲ ಎಂಬುದು ನಿಜ. ಹಾಗೇ ಮಹಾರಾಷ್ಟ್ರದ 'ತಮಾಷಾ' ಪ್ರೇರಣೆ ಪಡೆದುಕೊಂಡು ಅಪ್ಪಟ ಉತ್ತರ ಕರ್ನಾಟಕದ ಸೊಗಡಿನ 'ಶ್ರೀಕೃಷ್ಣ ಪಾರಿಜಾತ' ಇಂದು ಕಾಶಿಬಾಯಿ ದಾದಾನಟ್ಟಿ ಅವರಂತಹ ಕೆಲವೇ ಕಲಾವಿದರಲ್ಲಿ ಉಳಿದಿದೆ. ಇವು ಮಾತ್ರವಲ್ಲ, ಪುರವಂತರಾಟ, ದಾಸರಾಟ, ರೂಪಸಿಂಗರಾಟ ಹೀಗೆ ಜಾನಪದ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಶ್ರೇಯಸ್ಸು ಉತ್ತರ ಕರ್ನಾಟಕಕ್ಕೆ ಸಲ್ಲಬೇಕು. ಜಾನಪದ ಸಂಗೀತ ಕ್ಷೇತ್ರಕ್ಕೆ ಅಪ್ಪಟ ಉತ್ತರ ಕರ್ನಾಟಕ ಪ್ರತಿಭೆ ಹುಕ್ಕೇರಿ ಬಾಳಪ್ಪ ನೀಡಿದ ಕೊಡುಗೆಯನ್ನು ಮರೆಯುವುದಾದರೂ ಹೇಗೆ?

ಕುಲನಾಮ

ಹೆಸರಿನೊಳಗ ಏನೈತಿ?

ಉಳ್ಳಾಗಡ್ಡಿ, ಮೆಣಸಿನಕಾಯಿ, ಬದ್ನೇಕಾಯಿ, ಬಾಲಿಕಾಯಿ, ತೆಂಗಿನಕಾಯಿ... ದಕ್ಷಿಣ ಕರ್ನಾಟಕದವರ ಪಾಲಿಗೆ ತರಕಾರಿ ಹೆಸರುಗಳಾದ ಇವು ಉ.ಕರ್ನಾಟಕದಲ್ಲಿ ವ್ಯಕ್ತಿಯ ನಾಮಧೇಯವಾಗಿಯೂ ಕಂಗೊಳಿಸುವುದು ವಿಶೇಷ. ತರಕಾರಿಗಳಲ್ಲದೆ ಹೊಗೆಸೊಪ್ಪಿನವರ್, ಸಾಲಗಾರ್, ಹೂಗಾರ್, ಚಿತ್ರಾಗಾರ್, ಕಣಜನವರ್... ಹೀಗೆ ವೃತ್ತಿ ಆಧಾರಿತ ಹೆಸರುಗಳೂ ಇಲ್ಲಿ ಸಾಮಾನ್ಯ. ಕೆಲವೊಮ್ಮೆ ಅವು ದಕ್ಷಿಣದವರ ಪಾಲಿಗೆ ತಮಾಷೆಯ ಸಂಗತಿಗಳಾಗುವುದೂ ಉಂಟು. ದೊಡ್ಡಮನಿ, ಚಿಕ್ಕಮನಿ, ದೇವರಮನಿ, ಕಟ್ಟೀಮನಿ, ಕಳ್ಳಿಮನಿ, ಹಳ್ಳಿಗುಡಿ, ಕಾಚಪ್ಪನವರ್, ಧೂಳಪ್ಪನವರ್... ಹೀಗೆ ವೈವಿಧ್ಯಮಯ ಕುಲನಾಮಗಳೂ ಇಲ್ಲಿ ಸಿಗುತ್ತವೆ.

ಹೆಳವರು

ಬೆರಳ ತುದಿಯಲ್ಲಿ ವಂಶವೃಕ್ಷ ವಿವರ

"ತೂಗು ತೊಟ್ಟಿಲಾಗಲಿ, ಬೆಳ್ಳಿ ಬಟ್ಟಲಾಗಿ, ಬಂಗಾರದ ಹೊಗೆಯಾಗಿ, ಮನೆ ತುಂಬ ಮಕ್ಕಳಾಗಲಿ, ಬದುಕೆಲ್ಲ ಬೆಳಗಲಿ" ಎಂದು ಮನೆತನಗಳಿಗೆ ಒಳ್ಳೆಯದನ್ನೇ ಬಯಸುವ ಹೆಳವರು (ಹೇಳುವವರು ಪದದ ಅಪಭ್ರಂಶ) ವಂಶವೃಕ್ಷ ಇತಿಹಾಸ ಹಿಡಿದು ಅಲೆದಾಡುವ ಗ್ರಂಥ ಭಂಡಾರ. ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರ ಕಂಡು ಬರುವ ವಿಶಿಷ್ಟ ಜನಾಂಗವಿದು. ತಮ್ಮಲ್ಲಿರುವ ವಂಶವೃಕ್ಷ ಇತಿಹಾಸದ ರಹಸ್ಯವನ್ನು ಆಯಾ ವಂಶಸ್ಥರೇ ಕೇಳಿದರೂ ಹೊರಗೆಡಹದೆ ತಮ್ಮಲೇ ಅಡಗಿಸಿಟ್ಟುಕೊಳ್ಳುವ ನಿಷ್ಠಾವಂತ ಸಮುದಾಯವಿದು. 20 ವರ್ಷಗಳಿಗೊಮ್ಮೆ ಆ ಭಾಗದ ಮನೆತನಗಳ ಇತಿಹಾಸ, ಹೊಸ ಹುಟ್ಟು- ಸಾವುಗಳ ವಿವರವನ್ನು ಪಡೆದುಕೊಂಡು ತಮ್ಮ ಮಾಹಿತಿಯನ್ನು ಅಪ್‌ಡೇಟ್ ಮಾಡಿಕೊಳ್ಳುವ ಹೆಳವ ಜನಾಂಗಗಳು ಸಾಮಾನ್ಯವಾಗಿ ಸಂಚಾರಿಗಳು. ತಮಗೆ ಬೇಕಾದ ಮಾಹಿತಿ ಪಡೆದು, ಆ ಮನೆತನಗಳ ಹಿಂದಿನ ತಲೆಗಳ ಬಗ್ಗೆ ಮಾಹಿತಿ ಅರುಹಿ ಆಯಾ ಕುಟುಂಬಗಳು ನೀಡಿದ ದಾನವನ್ನು ಸ್ವೀಕರಿಸಿ ಮುಂದೆ ಹೋಗುವುದು ಇವರ ಜೀವನ. ಯಾವುದೇ ಕುಟುಂಬದ ವಂಶವೃಕ್ಷವೂ ಇವರಲ್ಲಿ ಲಭ್ಯ! 'ಮೋಡಿ' ಲಿಪಿಯಲ್ಲೇ ದಾಖಲೆಗಳನ್ನು ಸಂಗ್ರಹಿಸುವ ಇವರು ಶಿಕ್ಷಣ ಬಾರದೆ ಇದ್ದರೂ ತಲೆತಲಾಂತರದಿಂದ 'ಮೋಡಿ' ಭಾಷೆಯನ್ನು ಕಲಿಯುತ್ತಾ ಬಂದವರು. ಇವರಲ್ಲಿ ನಂದಿ ಹೆಳವರು ಎತ್ತಿನ ಮೇಲೆ ಕುಳಿತು ವಂಶಾವಳಿಗಳನ್ನು ಸಾರಿದರೆ, ಗರುಡ ಹೆಳವರು ಮನೆ ಮನೆಗೆ ತೆರಳಿ ಕುಲ-ಗೋತ್ರಗಳನ್ನು ತಿಳಿಸುತ್ತಾರೆ. ಇವರ ಪ್ರಮುಖ ಉಡುಗೆ ಅಂಗಿ-ಧೋತರ, ಕರಿ ಕೋಟು, ಕೆಂಪು ರುಮಾಲು, ಹೆಗಲ ಮೇಲೆ ಶಲ್ಯ ಮತ್ತು ಹಣೆ ಮೇಲೆ ವಿಭೂತಿ. ಆದರೆ ಈಗ ಕಾಲದ ದಾಳಿಗೆ ಸಿಕ್ಕಿ ವಂಶಾವಳಿ ಹೇಳುವ ಯುವಕರು ಬೆರಳೆಣಿಕೆಯಷ್ಟೇ ಇದ್ದಾರೆ.

ದ್ರಾಕ್ಷಿ ಕಣಜ

ನಷ್ಟವಾದ ದ್ರಾಕ್ಷಿ ಮೌಲ್ಯ ರೂ. 250 ಕೋಟಿ

ನೀವು ಗೋಲಗುಂಬಜ್‌ನ ಪಿಸುಗುಡುವ ಗ್ಯಾಲರಿಯಲ್ಲಿ ಪ್ರಿಯತಮೆಯೊಂದಿಗೆ ಪಿಸುಮಾತನ್ನಾಡುವ ಮುನ್ನ ರುಚಿಕರ ವೈನ್ ಸವಿಯಬಹುದು. ಏಕೆಂದರೆ ದಕ್ಷಿಣ ಭಾರತದಲ್ಲೇ ಅತ್ಯಧಿಕ ದ್ರಾಕ್ಷಿ ಬೆಳೆಯುವ ಪ್ರದೇಶ ಬಿಜಾಪುರ. ಆ ಜಿಲ್ಲೆಯಲ್ಲಿ ವಾರ್ಷಿಕ 30,000 ಟನ್ ಒಣ ದ್ರಾಕ್ಷಿ ಉತ್ಪಾದನೆಯಾಗುತ್ತದೆ. ಇಲ್ಲಿ ಸುಮಾರು 15,000 ಎಕರೆ ದ್ರಾಕ್ಷಿ ತೋಟಗಳು ಮತ್ತು 1,000 ಎಕರೆ ವೈನ್ ದ್ರಾಕ್ಷಿ ತೋಟಗಳಿವೆ. ಹಂಪಿ ಹೆರಿಟೇಜ್ ಎಂಬ ವೈನ್ ತಯಾರಿಕಾ ಘಟಕವಿದೆ. ಆದರೆ ಈ ಬಾರಿ ಪ್ರವಾಹದಿಂದಾಗಿ ಅಂದಾಜು ರೂ. 250 ಕೋಟಿ ಬೆಳೆ ನಷ್ಟವಾಗಿದೆ.

ಬೆಳಗಾವಿ

ಗಡಿ-ಭಾನಗಡಿ

ಬೆಳಗಾವಿ ಗಡಿ ವಿವಾದ ಎಂದಾಕ್ಷಣ ಮಹಾರಾಷ್ಟ್ರದ ಉದ್ಧಟತನ, ಕನ್ನಡ ಪರ ಹೋರಾಟಗಾರರು ಬೆಳಗಾವಿ ಮೇಯರ್‌ಗೆ ಮಸಿ ಬಳಿದದ್ದು ನೆನಪಾಗುತ್ತದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವಿನ ಗಡಿ ಸಮಸ್ಯೆಯ ಮೂಲ ಹುಡುಕಿಕೊಂಡು ಹೊರಟರೆ ಅದು ನಮ್ಮನ್ನು 1956ರಲ್ಲಿ ರಾಜ್ಯಗಳ ಪುನರ್‌ವಿಂಗಡನೆಯ ಸಂದರ್ಭಕ್ಕೆ ಕೊಂಡೊಯ್ಯುತ್ತದೆ. ಭಾಷಾವಾರು ವಿಂಗಡನೆಯ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯನ್ನು ಕರ್ನಾಟಕದಲ್ಲಿ ವಿಲೀನಗೊಳಿಸಿದ್ದನ್ನು ವಿರೋಧಿಸಿದ ಮಹಾರಾಷ್ಟ್ರ ರೋದನೆ ಇಂದಿಗೂ ಕೊನೆಗೊಂಡಿಲ್ಲ. "ಬೆಳಗಾವಿ ಗಡಿ ವಿವಾದ ಈಗ ಮುಗಿದ ವಿಷಯ. 1960ರಲ್ಲಿ ಕೇಂದ್ರ ಸರ್ಕಾರ ಮಹಾಜನ್ ನೇತೃತ್ವದ ಆಯೋಗವನ್ನು ರಚಿಸುವಾಗ ಅದರ ವರದಿಗೆ ಬದ್ಧವಾಗಿರುವುದಾಗಿ ವಾಗ್ದಾನ ನೀಡಿದ್ದ ಮಹಾರಾಷ್ಟ್ರ ಕೊನೆಗೆ ಮಾತು ಬದಲಿಸಿದ್ದಾದರೂ ಏಕೆ? ಮೇಲಾಗಿ, ಬೆಳಗಾವಿ ತಮ್ಮದೆನ್ನುವ ಅವರ ವಾದಕ್ಕೆ ಸ್ಥಳೀಯರ ಒಪ್ಪಿಗೆ ಇಲ್ಲ. ಅದೂ ಅಲ್ಲದೇ, ಸಿ.ಎನ್. ರಾಜಗೋಪಾಲಾಚಾರಿ, ಮೊರಾರ್ಜಿ ದೇಸಾಯಿ ಸೇರಿದಂತೆ ಈವರೆಗೆ ಬೆಳಗಾವಿಗೆ ಭೇಟಿ ನೀಡಿದ್ದ ಬಹುತೇಕ ರಾಷ್ಟ್ರ ನಾಯಕರು ಬೆಳಗಾವಿಯನ್ನು ಕರ್ನಾಟಕದ ಒಂದು ಭಾಗ ಎಂದೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಮಹಾರಾಷ್ಟ್ರದ ಆರೋಪ ಹುರುಳಿಲ್ಲದ್ದು" ಎಂದು ಗುಡುಗುತ್ತಾರೆ ಕನ್ನಡದ ಕಟ್ಟಾಳು ಪಾಟೀಲ್ ಪುಟ್ಟಪ್ಪ. ಇತ್ತೀಚೆಗಂತೂ ಗಡಿ ವಿವಾದಕ್ಕೆ ರಾಜಕೀಯ ಆಯಾಮವೂ ದೊರೆತು ಅದೀಗ ಎರಡೂ ರಾಜ್ಯಗಳಲ್ಲಿ ಚುನಾವಣೆಯ ಸಂದರ್ಭದಲ್ಲಿ ಮತಬ್ಯಾಂಕ್ ತಂತ್ರವಾಗಿ ಬಳಕೆಯಾಗುತ್ತಿರುವುದು ನಿಜಕ್ಕೂ ದುರಂತ. ಯಾವುದೇ ಗೊಂದಲವಿಲ್ಲದೇ ಬದುಕು ಸಾಗಿಸುತ್ತಿದ್ದ ಗಡಿನಾಡ ಜನರು ಈ ಎಲ್ಲಾ ರಾಜಕೀಯ ದೊಂಬರಾಟದಿಂದ ಬೇಸತ್ತಿರುವುದಂತೂ ಸತ್ಯ.

ಬಿದರಿ ಕಲೆ, ಕಿನ್ನಾಳ ಗೊಂಬೆ

ಕಲಾ ಕೌಶಲದ ಆಡುಂಬೊಲ

ಬೀದರ್ ನಗರಕ್ಕೆ ಹೆಸರು ನೀಡಿದ ಬಿದರಿ ಕಲೆ ಪರ್ಷಿಯನ್ ಮತ್ತು ಅರಬ್ ದೇಶಗಳಿಂದ ಭಾರತಕ್ಕೆ ಬಂದು ಭಾರತೀಯ ಶೈಲಿ ಪಡೆಯಿತು. ತಾಮ್ರ ಮತ್ತು ಸತುವಿನ ಧಾತುಗಳ ಮಿಶ್ರಣವನ್ನು ಜೇಡಿ ಮಣ್ಣಿನಲ್ಲಿ ಬೆರೆಸಿ, ನಂತರ ತಾಮ್ರದ ಸಲ್ಫೇಟ್ ಸೇರಿಸಿ ಮೇಲ್ಮೈಯನ್ನು ಕಪ್ಪು ಬಣ್ಣಕ್ಕೆ ತಿರುಗಿಸಲಾಗುತ್ತದೆ. ಆನಂತರ ಮೇಲ್ಪದರವನ್ನು ನುಣ್ಣಗೆ ಕೊರೆದು ಬೆಳ್ಳಿಯ ತಂತಿಗಳನ್ನು ಕೂರಿಸಲಾಗುತ್ತದೆ. ಮುಸ್ಲಿಂ ಕುಟುಂಬಗಳೇ ಹೆಚ್ಚಾಗಿ ತೊಡಗಿಸಿಕೊಂಡಿರುವ ಈ ಕೆಲಸಕ್ಕೆ ಸಾಕಷ್ಟು ತಾಳ್ಮೆ ಮತ್ತು ಕೌಶಲ್ಯ ಅಗತ್ಯ. ಬಿದರಿ ಕಲೆಯ ಸ್ಪರ್ಶ ಪಡೆದ ಪ್ರತಿಮೆಗಳು, ಹೂಜಿಗಳು ಅಥವಾ ಇನ್ನಿತರ ಪರಿಕರಗಳಿಗೆ ವಿದೇಶದಲ್ಲೂ ಬೇಡಿಕೆ ಇದೆ. ಹಾಗೆಯೇ ಕೊಪ್ಪಳದ ವಿಶಿಷ್ಟ ಕಲೆ ಕಿನ್ನಾಳ. ವಿಶಿಷ್ಟ ಜೇಡಿ ಮಣ್ಣಿನ ಜಗತ್ಪ್ರಸಿದ್ಧ ಬೊಂಬೆಗಳಿವು. ಈಗ ಬೇಡಿಕೆ ಕಡಿಮೆಯಾಗಿದ್ದು, ಕಿನ್ನಾಳ ಬೊಂಬೆಗಳಿಗೆ ಹೊಸ ರೂಪ ಕೊಟ್ಟು ಮಾರುಕಟ್ಟೆ ಸೃಷ್ಟಿಸುವ ಸಂಬಂಧ ಯತ್ನಗಳು ನಡೆಯುತ್ತಿವೆ.

ಕೊಬ್ರಿ ಹೋರಿ ಓಟ

ರಮ್ಯ ಭಯಂಕರ

ದೀಪಾವಳಿ ಪಾಡ್ಯದಂದು ಹಾವೇರಿ ಜಿಲ್ಲೆಯಾದ್ಯಂತ ಕೊಬ್ರಿ ಹೋರಿಯದೇ ಮೆರೆದಾಟ. ಕೊಂಬಿಗೆ ಕೊಬ್ಬರಿಯನ್ನು ಸಿಕ್ಕಿಸಿ ಸಿಂಗಾರಗೊಂಡ ಹೋರಿಗಳನ್ನು ನಾಲ್ಕೈದು ಜನ ಓಡಿಸಿಕೊಂಡು ಹೋಗುತ್ತಿದ್ದಂತೆ ಎದುರುಗಡೆಯಿಂದ ಓಡಿ ಬರುವ ಯುವಕರ ಗುಂಪು ಅವುಗಳನ್ನು ಬೆದರಿಸಿ ಕೊಬ್ಬರಿ ಕೀಳಲು ಪ್ರಯತ್ನಿಸುವ ದೃಶ್ಯವಂತೂ ಮೈ ಜುಂ ಎನ್ನಿಸುವಂತಹದು. ಹೋರಿಗಳು ಹೆದರಿ ಜನಸ್ತೋಮದ ಕಡೆ ಹೋದಾಗ ಎಲ್ಲರೂ ಬೆದರಿ ದೂರ ಓಡುವ ದೃಶ್ಯ ರಮ್ಯ ಮನೋಹರ. ನೂರಾರು ಪುರುಷರು ಶೌರ್ಯ ಪ್ರದರ್ಶಿಸ ಹೋಗಿ ಮೈ ಮೂಳೆ ಮುರಿದುಕೊಳುವುದು ಸಾಮಾನ್ಯ; ಕೆಲವರು ಪ್ರಾಣ ಕಳೆದುಕೊಳ್ಳುವುದೂ ಉಂಟು! ಹಾವೇರಿಯ ವೀರಭದ್ರಸ್ವಾಮಿ ದೇವಸ್ಥಾನದ ಬಳಿ ನಡೆಯುವ ಈ ಸ್ಪರ್ಧೆಯಲ್ಲಿ 300ಕ್ಕೂ ಅಧಿಕ ಹೋರಿಗಳು ಭಾಗವಹಿಸುತ್ತವೆ. ಜಿಲ್ಲೆಯ ಹಾವೇರಿ, ಹಾನಗಲ್, ಬಂಕಾಪುರ, ವರದಾಹಳ್ಳಿ, ಕಬ್ಬೂರ, ಕೆರೆಮತ್ತಿಹಳ್ಳಿ, ಹಿರೇಕರೂರ, ಕಳ್ಳಿಹಾಳ, ಬ್ಯಾಡಗಿ ಹೀಗೆ ಅನೇಕ ಹಳ್ಳಿಗಳಲ್ಲಿ ಕೊಬ್ರಿ ಹೋರಿ ಓಟದ ಸ್ಪರ್ಧೆ ನಡೆಯುತ್ತವೆ. ಬೆಳ್ಳಂಬೆಳಗ್ಗೆಯೇ ಹೋರಿಗಳ ಮೈ ತೊಳೆದು ಅಲಂಕರಿಸಲಾಗುತ್ತದೆ. ಬಣ್ಣ ಬಣ್ಣದ ಮಿಂಚುವ ಬಟ್ಟೆಯ ಜೂಲಗಳು, ಝರಿಗಳು, ಗೊಂಡೆಗಳು, ನವಿಲುಗರಿಗಳಿಂದ ಸಿಂಗಾರಗೊಂಡ ಹೋರಿಗಳನ್ನು ನೋಡುವುದೇ ಒಂದು ಸಂಭ್ರಮ.

ಟಂ ಟಂ

ಟಾಪ್ ಪ್ರಯಾಣ

ಬಸ್ಸು, ಲಾರಿ, ಎತ್ತಿನಗಾಡಿ ಏನೇ ಬರಲಿ ಹತ್ತಿಕೊಂಡು ಹೋಗುವ, ಟಂ ಟಂ ಮೇಲೆ, ಕೆಳಗೆ, ಮಧ್ಯೆ, ಚಾಲಕನ ಪಕ್ಕ, ಹಿಂದೆ-ಮುಂದೆ ಜೋತು ಬಿದ್ದ; 'ಟಾಪ್ ಮೇಲೆ' ಕಿಕ್ಕಿರಿದು ಕುಳಿತು ಪ್ರಯಾಣ ಮಾಡುವವರನ್ನು ವಿಶಾಲ ಉತ್ತರ ಕರ್ನಾಟಕದ ಯಾವುದೇ ರಸ್ತೆಯಲ್ಲಿ ಕಾಣಬಹುದು. ಬೆಂಗಳೂರಿನಲ್ಲಿ ಬಳಸಿ 'ವೇಸ್ಟ್' ಎನಿಸಿದ ಸಾರಿಗೆ ವಾಹನಗಳನ್ನೇ ಉತ್ತರ ಕರ್ನಾಟಕಕ್ಕೆ ತಳ್ಳುವ ಸಂಪ್ರದಾಯ ಇರುವುದರಿಂದ ಆ ಡಕೋಟ ಗಾಡಿಗಳು ಕುಂಟುತ್ತಾ, ದೂಳೆಬ್ಬಿಸುತ್ತಾ ಸಾಗುವುದು ತೀರಾ ಸಾಮಾನ್ಯ. ಇಂಥ ಪ್ರದೇಶಕ್ಕೆ ಟಂ ಟಂ ಹೇಳಿ ಮಾಡಿಸಿದ ಸಾರಿಗೆ ವಾಹನ. ಇತರ ಕಡೆ ಟಂ ಟಂಗಳನ್ನು ಸಾಮಾನು ಸರಂಜಾಮು ಸಾಗಿಸಲು ಬಳಸಿದರೆ ಉ. ಕರ್ನಾಟಕದ ಮಂದಿ ಅದರಲ್ಲೂ ತಮ್ಮ ಕೈಚಳಕ ತೋರಿಸಿದ್ದಾರೆ. ಟಂ ಟಂಗಳಿಗೆ ಒಂದು ಮರದ ಹಲಗೆ ಜೋಡಿಸಿ ಪ್ರಯಾಣಿಕರ ಸಾರಿಗೆ ವಾಹನವನ್ನಾಗಿಸಿದ್ದಾರೆ. ಪ್ರಯಾಣಿಕರಿಗೂ ಇದು ಅಗ್ಗದ ಪ್ರಯಾಣ. ಆರು ಕಿ.ಮೀ. ದೂರ ಪ್ರಯಾಣಿಸಲು ನಾಲ್ಕು ರೂಪಾಯಿ ತೆತ್ತರೆ ಸಾಕು! ಒಂದು ಟಂ ಟಂನಲ್ಲಿ ಇಪ್ಪತ್ತಕ್ಕೂ ಅಧಿಕ ಪ್ರಯಾಣಿಕರು ಇರುವ ಕಾರಣ ಚಾಲಕನ ಆದಾಯಕ್ಕೂ ಯಾವುದೇ ಮೋಸವಿಲ್ಲ.

ಗರಗ

ಏರುತಿಹುದು ನಮ್ಮ ಬಾವುಟ...

ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ, ಗುಜರಾತ್‌ನಿಂದ ಅರುಣಾಚಲ ಪ್ರದೇಶದವರೆಗೆ ಹಬ್ಬಿರುವ ಬೃಹತ್ ಭಾರತದ ರಾಷ್ಟ್ರಧ್ವಜ ತಯಾರಿಸುವ ಹೊಣೆಗಾರಿಕೆ ಮಾತ್ರ ಗರಗದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ್ದು. ಇದು ಪರವಾನಗಿ ಪಡೆದ ರಾಷ್ಟ್ರದ ಏಕೈಕ ಧ್ವಜ ತಯಾರಿಕಾ ಕೇಂದ್ರ. ಈ ಹಿಂದೆ ಧಾರವಾಡ ಬಳಿಯ ಗರಗ ಮಾತ್ರ ರಾಷ್ಟ್ರಧ್ವಜ ತಯಾರಿಕೆಯಲ್ಲಿ ಗುರುತಿಸಿಕೊಂಡಿತ್ತು, ಆದರೆ ಈಗ ಸಂಘದ ಅಧೀನದಲ್ಲಿ ಬಾಗಲಕೋಟೆ ಜಿಲ್ಲೆ ಕೂಡಾ ರಾಷ್ಟ್ರಧ್ವಜ ತಯಾರಿಕೆಯಲ್ಲಿ ನಿರತವಾಗಿದೆ. ಗರಗದ ಸುಮಾರು 250 ಕುಟುಂಬಗಳ ಪಾಲಿಗೆ ಖಾದಿ ವಸ್ತ್ರ ತಯಾರಿಯೇ ಆದಾಯದ ಮೂಲ. ಕೆಲವು ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವದಲ್ಲಿ ಗರಗದ ಮೊದಲ ಖಾದಿ ಕೇಂದ್ರ ಸ್ಥಾಪನೆಯಾಗಿದ್ದು 1954ರಲ್ಲಿ. ರಾಷ್ಟ್ರಧ್ವಜ ತಯಾರಿಕೆಯಲ್ಲಿ ಗರಗ ತನ್ನನ್ನು ಗುರುತಿಸಿಕೊಂಡಿದ್ದು 1975ರಲ್ಲಿ. ರಾಷ್ಟ್ರಧ್ವಜಕ್ಕೆ ಬಳಸುವ ಬಟ್ಟೆಗೆ ಐಎಸ್‌ಐ ಮುದ್ರೆ ಇರಬೇಕು ಹಾಗೂ ಐಎಸ್‌ಐ ಮಾನದಂಡಕ್ಕೆ ಅನುಗುಣವಾಗಿಯೇ ಧ್ವಜವಿರಬೇಕೆಂಬ ನಿಯಮವಿದೆ. ಪ್ರತಿ ಚದರ ಸೆಂಟಿ ಮೀಟರ್‌ನಲ್ಲಿ 44 ಅಡ್ಡ ಮತ್ತು 44 ಉದ್ದ ಎಳೆಗಳಿರಬೇಕು; 20 ಚದರ ಸೆಂ.ಮೀ. ಬಟ್ಟೆಯ ತೂಕ 250 ಗ್ರಾಂ ಇರಬೇಕು ಮುಂತಾದ ನಿಯಮವಿದೆ. ರಾಷ್ಟ್ರ ಧ್ವಜಕ್ಕಾಗಿ ಬಳಸುವ ಬಣ್ಣಕ್ಕೂ ನಿಯಮಗಳ ನಿರ್ಬಂಧವಿದೆ. ನೇಯ್ದ ಬಳಿಕ ಬಟ್ಟೆಯನ್ನು ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್) ಪ್ರಯೋಗಶಾಲೆ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಯಾವುದೇ ನಿಯಮದ ಉಲ್ಲಂಘನೆಯಾಗಿದ್ದಲ್ಲಿ ಆ ರಾಷ್ಟ್ರಧ್ವಜ ತಯಾರಿಕಾ ಘಟಕದ ಪರವಾನಗಿಯನ್ನು ರದ್ದು ಮಾಡುವ ಎಲ್ಲಾ ಅಧಿಕಾರವೂ ಬಿಐಎಸ್‌ಗಿದೆ. ಈ ಎಲ್ಲಾ ನಿಯಮಗಳನ್ನು ಪಾಲಿಸುತ್ತಾ ತಯಾರಾಗುವ ರಾಷ್ಟ್ರಧ್ವಜಗಳು ದೆಹಲಿಯ ಕೆಂಪು ಕೋಟೆಯಿಂದ ಹಿಡಿದು, ಅಂಗನವಾಡಿ ಕೇಂದ್ರಗಳ ಮುಂದೆಯೂ ರಾರಾಜಿಸುತ್ತಿರುತ್ತವೆ. ಈ ಸಂಘ 294 ಚದರ ಅಡಿಗಳ ಬೃಹತ್ ಬಾವುಟವನ್ನೂ ತಯಾರಿಸಲಾಗಿದೆ. ಪ್ರತಿ ವರ್ಷವೂ ಇಲ್ಲಿಂದ 70-75 ಲಕ್ಷದಷ್ಟು ರಾಷ್ಟ್ರ ಧ್ವಜಗಳು ಮಾರಾಟವಾಗುತ್ತವಂತೆ. ವಿವಿಧ ರಾಜ್ಯಗಳ ಖಾದಿ ಭವನಗಳು ಸಾಲ ಬಾಕಿ ಉಳಿಸಿಕೊಂಡ ಕಾರಣ ಗರಗದಲ್ಲಿ ಚರಕಗಳು ಒಂದಿಷ್ಟು ಕಾಲ ಸ್ತಬ್ಧಗೊಂಡಿದ್ದವು!

ಲಂಬಾಣಿ ತಾಂಡಾ

ಸದಾ ಸೌಂದರ್ಯ ಪ್ರಜ್ಞೆ

ಮಳೆ ಕೊರತೆ ಜೊತೆಗೆ ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಕೆಲಸ ಅರಸುತ್ತಾ ವಲಸೆ ಹೋಗುವುದು ಉತ್ತರ ಕರ್ನಾಟಕದವರ ಹಣೆಬರಹ. ಕೃಷಿಯನ್ನೂ ನೆಚ್ಚುವಂತಿಲ್ಲ; ಹೇಳಿಕೊಳ್ಳುವಂಥಾ ದೊಡ್ಡ ಕಾರ್ಖಾನೆಗಳು ಅಲ್ಲಿಲ್ಲ. ಹೀಗಾಗಿ ಗ್ರಾಮಕ್ಕೆ ಗ್ರಾಮವೇ ವಲಸೆ ಹೋಗಿಬಿಡುವುದು ಅಲ್ಲಿ ಸಾಮಾನ್ಯ. ಅದರಲ್ಲೂ ಅಲೆಮಾರಿಗಳಾದ ಲಂಬಾಣಿ ಸಮುದಾಯ ಗುಳೆ ಹೋಗಿಬಿಟ್ಟರೆ ತಾಂಡಾದಲ್ಲಿ ಉಳಿಯುವುದು ಕೈಲಾಗದ ವೃದ್ಧರು ಮತ್ತು ಸಣ್ಣ ಮಕ್ಕಳು ಮಾತ್ರ! ರಾಜಸ್ಥಾನ ಮೂಲದ ಈ ಲಂಬಾಣಿ ಸಮುದಾಯ ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳ ವಿವಿಧ ಭಾಗಗಳಲ್ಲಿ ಚದುರಿ ಹೋಗಿದ್ದಾರೆ. ಇವರ ಮುಖ್ಯ ನೆಲ ತುಂಗಭದ್ರೆಯಾಚೆಗೆ. ಹಿಂದೆ ಗಂಡು ಮಗು ಹುಟ್ಟಿದರೆ ಡೋಲು, ಹೆಣ್ಣು ಹುಟ್ಟಿದರೆ ಕಂಚಿನ ತಟ್ಟೆಯನ್ನು ಬಡಿಯುತ್ತಿದ್ದರು. ಲಂಬಾಣಿ ಜನಾಂಗದ ಮದುವೆ ಸಮಾರಂಭಗಳು ಒಂದು ತಿಂಗಳವರೆಗೂ ನಡೆಯುತ್ತಿದ್ದವಂತೆ. ಮಿರಿ- ಮಿರಿ ಮಿನುಗುವ ವೇಷ ಭೂಷಣ, ಕನ್ನಡಿ ಚೂರು, ನಾಣ್ಯಗಳ ಕಸೂತಿಕಲೆಗಳಿಂದ ಭಾರವಾದ ಉದ್ದನೆಯ ಲಂಗ (ಫೇಟಿಯಾ), ಮಾಟವಾದ ಸೊಂಟ ತೋರುವಂಥ ಕುಪ್ಪಸ (ಕಾಂಚಾಳಿ), ತಲೆಯ ಮೇಲಿಂದ ಮೊಣಕಾಲವರೆಗೆ ಇಳಿಬಿದ್ದ ದಾವಣಿ (ಛಾಟಿಯಾ), ತಲೆಗೆ ಬೆಳ್ಳಿಯ ಜಡೆ ಕುಚ್ಚು (ಗಗ್ಗುರಿ) ಮೊಣಕೈಯನ್ನೂ ಆವರಿಸುವ ಪ್ಲಾಸ್ಟಿಕ್ ಅಥವಾ ಜಿಂಕೆ-ಸಾರಂಗಗಳ ಕೊಂಬಿನ ಬಳೆಗಳು (ಬಲಿಯಾ), ಹೆಜ್ಜೆಯಿಟ್ಟಂತೆ ಘಲ್‌ಗುಟ್ಟುವ ಹಿತ್ತಾಳೆಯ ಒಡವೆಗಳು (ಕಸ್, ಅಂಗುತ್ಲ, ಚಟಕಿ)... ಅಂತೂ ಲಂಬಾಣಿ ಸ್ತ್ರೀಯರು ನಖಶಿಖಾಂತ ಆಭರಣದಿಂದ ಕಂಗೊಳಿಸುವ ಸುಂದರಾಂಗಿಯರು. ಆದರೆ ಸಾದಾ ಪಂಚೆ (ಜಗಲಾ) ತಲೆಗೆ ಕೆಂಪು ಇಲ್ಲವೇ ಬಿಳಿಯ ರುಮಾಲು (ಪಗಡಿ) ಕಟ್ಟುವ ಲಂಬಾಣಿ ಪುರುಷರದ್ದು ಮಾತ್ರ ಸರಳ ವೇಷ.

ದೇವದುರ್ಗ

ಏಷ್ಯಾದ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊತ್ತ ರಾಯಚೂರಿನ ಈ ತಾಲ್ಲೂಕಿನಲ್ಲಿ ಓಡಾಡಲು ಯೋಗ್ಯ ರಸ್ತೆಗಳಾಗಲೀ, ಮೂಲ ಸೌಕರ್ಯಗಳಾಗಲೀ ಇಲ್ಲ. ಆದರೆ ರೋಗ-ರುಜಿನಗಳಿಗೇನೂ ಬರವಿಲ್ಲ.

ಕುರಿಗಾಹಿಗಳು

ಅಲೆವುದೇ ಬದುಕು

ರಾಷ್ಟ್ರಪ್ರಶಸ್ತಿ ಪಡೆದ ಕೊಪ್ಪಳ ತಾಲೂಕಿನ ಕುರಿಗಾಹಿ ಲಿಂಗಪ್ಪನನ್ನು ಮಾತನಾಡಿಸಿದರೆ ತನಗೆ ಪ್ರಶಸ್ತಿ ಸಿಕ್ಕಿದ್ದೇಕೆ ಎಂದು ವಿವರಿಸುವ ಜ್ಞಾನವೂ ಆತನಿಗಿಲ್ಲ! "ದೆಹಲಿಗೆ ಕರೆದುಕೊಂಡು ಹೋಗಿ ಹಣ ಕೊಟ್ಟಿದ್ದಾರೆ" ಎಂದಷ್ಟೇ ಹೇಳುತ್ತಾನೆ. ತನ್ನ 70 ವರ್ಷದ ಜೀವನದ ತುಂಬಾ ಇತರರ ಕುರಿ, ದನಗಳನ್ನು ಮೇಯಿಸುವುದರಲ್ಲೇ ಕಳೆದ ಲಿಂಗಪ್ಪ ಇದೀಗ ಕುರಿ ಮೇಯಿಸುವುದಕ್ಕಾಗಿಯೇ ಪ್ರಶಸ್ತಿ ಬಂದ ಹಣದಲ್ಲಿ ಮೂರು ಕುರಿ ಖರೀದಿಸಿದ್ದಾನಂತೆ. ಹಿಂಡು ಕುರಿಗಳೊಂದಿಗೆ ಸಾಗುವ ಈ ನಿತ್ಯ ಸಂಚಾರಿಗಳನ್ನು ಉತ್ತರ ಕರ್ನಾಟಕದ ಯಾವುದೇ ಹೆದ್ದಾರಿಯಲ್ಲಿ ನೀವು ಕಾಣಬಹುದು. ಕುರಿಗಳನ್ನು ಮೇಯಿಸಲು ಯಾವುದಾದರೂ ಹೊಲದಲ್ಲಿ ತಂಗಿದರೆಂದರೆ ಅವರ ಊಟ-ಉಪಚಾರಗಳೆಲ್ಲ ಆ ಹೊಲದ ಮಾಲೀಕನಿಗೇ ಸೇರಿದ್ದು. ಸ್ವಲ್ಪ ಸಮಯ ಆ ಹೊಲದಲ್ಲಿ ತಂಗಿ ನಂತರ ಮುಂದಿನ ಹೊಲದೆಡೆಗೆ ಸಾಗುತ್ತಾರೆ. ನೂರಾರು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ಕುರಿಗಾಹಿಗಳಿಗೆ ಇತ್ತೀಚೆಗೆ ವನಪಾಲಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇವರು ಸಂಘಟಿತ ಹೋರಾಟಕ್ಕೂ ಇಳಿದಿದ್ದಾರೆ.

ಸಿಂಧನೂರು

ಎಲ್ನೋಡಿದ್ರೂ ಟ್ರ್ಯಾಕ್ಟರ್...

ಸಿಂಧನೂರು- ಏಷ್ಯಾದಲ್ಲೇ ಟ್ರ್ಯಾಕ್ಟರ್ ಮಾರಾಟದಲ್ಲಿ ನಂಬರ್ ವನ್ ತಾಣ. ಜಗತ್ತಿನ ಬಹುತೇಕ ಎಲ್ಲಾ ಪ್ರಮುಖ ಟ್ರ್ಯಾಕ್ಟರ್ ನಿರ್ಮಾಣ ಕಂಪನಿಗಳೂ ಇಲ್ಲಿವೆ ಎನ್ನುವುದು ವಿಶೇಷ. ತುಂಬಭದ್ರೆಯಿಂದ ಫಲವತ್ತಾದ ಈ ಪ್ರಾಂತದ ಶೇ. 60ರಷ್ಟು ಪ್ರದೇಶ ಅಂದರೆ ಸುಮಾರು 2 ಲಕ್ಷ ಎಕರೆ ಕೃಷಿ ಭೂಮಿ ನೀರಾವರಿಯಿಂದ ಕೂಡಿರುವುದೂ ಟ್ರ್ಯಾಕ್ಟರ್ ಮಾರಾಟ ಹೆಚ್ಚಲು ಕಾರಣ. ಇಲ್ಲಿನ ಜನ ಉಳುಮೆಗೆ ಮಾತ್ರವಲ್ಲ, ಓಡಾಟ ಮತ್ತಿತರ ಕೆಲಸ-ಕಾರ್ಯಗಳಿಗೂ ಟ್ರ್ಯಾಕ್ಟರ್‌ಗಳನ್ನೇ ಅವಲಂಬಿಸಿದ್ದಾರೆ.

ರಾಜ ಮನೆತನ

ಮುಂದುವರಿದ ರಾಜಕೀಯ ಪರಂಪರೆ

ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯನ ವಂಶಸ್ಥರು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಭಾಗಗಳನ್ನು ಆಳಿದ ಅರಸು ಮನೆತನಗಳು ಆಧುನಿಕ ಪ್ರಜಾಪ್ರಭುತ್ವದ ಅಡಿಯೂ ತಮ್ಮ ಪರಂಪರೆ ಮುಂದುವರಿಸಿವೆ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಪ್ರಾಬಲ್ಯ ಹೊಂದಿದ್ದ ಘೋರ್ಪಡೆ ರಾಜವಂಶಸ್ಥರಲ್ಲಿ ರಾಜಕೀಯವಾಗಿ ಹೆಸರು ಮಾಡಿದವರೆಂದರೆ ಮುರಾರಿ ರಾವ್ ಯಶವಂತರಾವ್ ಘೋರ್ಪಡೆ (ಎಂ.ವೈ. ಘೋರ್ಪಡೆ). ಘೋರ್ಪಡೆ ವಂಶದ ಕೊನೆಯ ಅರಸು ಯಶವಂತರಾವ್ ಇಂದುರಾವ್ ಘೋರ್ಪಡೆ ಅವರ ಏಳು ಮಂದಿ ಮಕ್ಕಳಲ್ಲಿ ಎಂ.ವೈ. ಘೋರ್ಪಡೆ ಹಿರಿಯರು. ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದ ಇವರು ರಾಜ್ಯದ ಹಣಕಾಸು, ಪಂಚಾಯತ್‌ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರೂ ಆಗಿದ್ದವರು. ವೀರೇಂದ್ರ ಪಾಟೀಲ್, ವೀರಪ್ಪ ಮೊಯಿಲಿ, ಎಸ್.ಎಂ. ಕೃಷ್ಣ ಸರ್ಕಾರಗಳ ಮೇಲೆ ಭಾರೀ ಪ್ರಭಾವ ಬೀರಿದ್ದೂ ಹೌದು. ಈಗ 'ಸಂಡೂರು ರೆಸಿಡೆನ್ಷಿಯನ್ ಸ್ಕೂಲ್'ನಲ್ಲಿ ಶಿಕ್ಷಕರಾಗಿದ್ದಾರೆ. ರಾಜಕೀಯದಲ್ಲಿ ಅದೃಷ್ಟ ಅರಸುತ್ತಿರುವ ಅವರ ಸಹೋದರ ವೆಂಕಟೇಶ್ ರಾವ್ ಘೋರ್ಪಡೆ ಈ ಹಿಂದೆ ಬಳ್ಳಾರಿ ಜಿಲ್ಲಾ ಪಂಚಾಯತ್ ಅಧ್ಯಕ್ಷರೂ ಆಗಿದ್ದರು. ಅಂದ ಹಾಗೆ, 'ಲಾಡ್' ವಂಶಸ್ಥರು ಘೋರ್ಪಡೆಗಳ ಆಸ್ಥಾನದಲ್ಲಿ ವಿದೂಷಕರಾಗಿದ್ದರಂತೆ!

ವಿಜಯನಗರದ ತುಳುವ ದೊರೆ ಶ್ರೀಕೃಷ್ಣದೇವರಾಯನ ವಂಶಸ್ಥರು ಇನ್ನೂ ಆನೆಗೊಂದಿಯ ಸುತ್ತಮುತ್ತ ಇದ್ದಾರೆ. ಆಗಾಗ ಸಕ್ರಿಯ ರಾಜಕೀಯಕ್ಕೂ ಧುಮುಕುತ್ತಾ ಮುಖ್ಯವಾಹಿನಿಯಲ್ಲೇ ಇದ್ದಾರೆ. ಅವರಲ್ಲಿ ತಿರುಮಲೈ ದೇವರಾಯಲು ಹಿಂದಿನ ಕನಕಗಿರಿ-ಗಂಗಾವತಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರೆ ಅವರ ಮಗ ಶ್ರೀರಂಗ ದೇವರಾಯಲು ಕನಕಗಿರಿ ಕ್ಷೇತ್ರದಿಂದ ಎರಡು ಬಾರಿ ಹಾಗೂ ಗಂಗಾವತಿಯಿಂದ ಮೂರು ಬಾರಿ ಗೆಲ್ಲುವ ಮೂಲಕ ಸತತ 5 ಬಾರಿ ಶಾಸಕರಾಗಿದ್ದಾರೆ. "ಕೂಡು ಕುಟುಂಬವಲ್ಲದಿದ್ದರೂ ನಾವೆಲ್ಲಾ ಅಕ್ಕ ಪಕ್ಕದಲ್ಲೇ ವಾಸಿಸುತ್ತಿದ್ದೇವೆ. ಸಾಮ್ರಾಜ್ಯ ಪತನವಾದ ನಂತರ ಮನೆತನದವರೆಲ್ಲಾ ಆನೆಗೊಂದಿಗೆ ಬಂದರು. ಅಂದಿನಿಂದ ಇಂದಿನವರೆಗೆ ನಾವು ಆನೆಗೊಂದಿ ಹಾಗೂ ಗಂಗಾವತಿಯಲ್ಲೇ ಇದ್ದೇವೆ. ಕುಟುಂಬದ ಪ್ರಮುಖ ಆದಾಯದ ಮೂಲವೂ ಇಲ್ಲಿರುವ ಜಮೀನೇ..." ಎನ್ನುತ್ತಾರೆ ಶ್ರೀರಂಗ ದೇವರಾಯಲು ಅವರ ಪತ್ನಿ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಲಲಿತಾ ರಾಣಿ.

ಹಾಗೇ ಸುರಪುರ ನಾಯಕ ವಂಶಸ್ಥರು 1958ರಿಂದ ಇಂದಿನವೆರಗೂ ಸಕ್ರಿಯ ರಾಜಕೀಯದಲ್ಲಿರುವ ಮೂಲಕ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದಾರೆ. ರಾಜಾ ಕುಮಾರ ನಾಯಕರು 1958-1962ರವರೆಗೆ ಸತತ ಎರಡು ಬಾರಿ ಸುರಪುರ ಶಾಸಕರಾಗಿದ್ದರೆ ಅವರ ಸೋದರ ಮಾವ ರಾಜಾ ಪಿಡ್ನಾಯಕ ಸತತ ಮೂರು ಬಾರಿ, 1962-78ರವರೆಗೆ ಶಾಸಕರಾಗಿದ್ದರು. ಪಿಡ್ನಾಯಕರ ಸೋದರ ರಾಜಾ ವೆಂಕಟಪ್ಪ ನಾಯಕರು 1967ರಲ್ಲಿ ಸಂಸದರಾಗಿದ್ದವರು. ರಾಜಾ ಕುಮಾರ ನಾಯಕರ ಹಿರಿಯ ಮಗ ರಾಜಾ ವೆಂಕಟಪ್ಪ ನಾಯಕರೂ ಎರಡು ಬಾರಿ (1994ರಿಂದ 2004) ಶಾಸಕರಾಗಿದ್ದರು. ಅವರ ಸೋದರ ರಾಜಾ ರಂಗಪ್ಪ ನಾಯಕರು 1996ರಲ್ಲಿ ಸಂಸದರಾಗಿದ್ದರು. "ರಾಯಚೂರಿನ ಅಭಿವೃದ್ಧಿಗಾಗಿ ಸಂಸತ್ತಿನಲ್ಲಿ ದನಿಯನ್ನೂ ಎತ್ತಿದ್ದೇವೆ. ನೀರಾವರಿ, ರಸ್ತೆ ಸೌಲಭ್ಯ, ದೂರ ಸಂಪರ್ಕ ಈ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದೆ. ಆಗಿನ ರಾಜಾಡಳಿತಕ್ಕೂ ಇಂದಿನ ಪ್ರಜಾಪ್ರಭುತ್ವಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಆದರೂ ಜನ ನಮ್ಮನ್ನು ಹಾಗೂ ನಮ್ಮ ಅಭಿವೃದ್ಧಿಪರ ನಿಲುವನ್ನು ಗೌರವಿಸುತ್ತಾರೆ" ಎನ್ನುತ್ತಾರೆ ಜೊತೆ ಮಾತನಾಡಿದ ರಾಜಾ ರಂಗಪ್ಪ ನಾಯಕರು. ಒಂದು ಕಾಲದಲ್ಲಿ ಗುಲ್ಬರ್ಗಾ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳನ್ನು ಆಳಿದ್ದ ನವಾಬರ ಸಂತತಿ ಈಗ ಕರ್ನಾಟಕದಲ್ಲಿ ಇಲ್ಲ. ನವಾಬರ ಹೊಸ ತಲೆಮಾರು ಈಗ ಆಂಧ್ರಪ್ರದೇಶದ ಬಂಜಾರಾ ಹಿಲ್ಸ್‌ನಲ್ಲಿದೆ. ಬಿಜಾಪುರದ ಆದಿಲ್ ಶಾಹಿ ಮನೆತನದ ಬಹುತೇಕರು ಈಗ ಪುಣೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ಬ್ರಿಟಿಷರ ವಿರದ್ಧ ಬಂಡೆದ್ದ ದೇಶದ ಪ್ರಪ್ರಥಮ ಮಹಿಳೆ ಕಿತ್ತೂರು ಚೆನ್ನಮ್ಮ. ಆಕೆ 1824ರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿ ಹಚ್ಚಿದ್ದಳು. ಈಗ ಕಿತ್ತೂರಿನಲ್ಲೇ ಭತ್ತದ ವ್ಯಾಪಾರ ನಡೆಸುತ್ತಿರುವ ರಾಣಿ ಚೆನ್ನಮ್ಮ ವಂಶಸ್ಥರು ರಾಜಕೀಯದಿಂದ ಮಾರು ದೂರವೇ ಉಳಿದುಕೊಂಡಿದ್ದಾರೆ. "ಇಂಥ ವೀರ ಮಹಿಳೆ ಹುಟ್ಟಿದ ಕಾಕತಿ ದೇಸಾಯಿಗಳ ವಾಡೆಯ ಅವಸ್ಥೆ ಮಾತ್ರ ತೀರಾ ಶೋಚನೀಯವಾಗಿದೆ" ಎನ್ನುತ್ತಾರೆ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ. "ಇನ್ನು ಕನಕಗಿರಿ ಪಾಳೇಗಾರರು, ಗುರಗುಂಟ ಪಾಳೇಗಾರರೆಲ್ಲಾ ತೆರೆಮರೆಗೆ ಸರಿದು ಅದೆಷ್ಟೋ ವರ್ಷಗಳೇ ಉರುಳಿವೆ" ಎನ್ನುತ್ತಾರೆ ಕೆಎಸ್‌ಸಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಶರಣಬಸಪ್ಪ ಕೋಲ್ಕಾರ್.

ಚಿತ್ತಾಪುರ ಕಲ್ಲು

ಕಾಗಿನ ಪಾತ್ರದ ಸಿಮೆಂಟ್ ಕಲ್ಲು

ಗುಲ್ಬರ್ಗ ಜಿಲ್ಲೆಯ ಚಿತ್ತಾಪುರದಲ್ಲಿ ಸಿಗುವ ವಿಶೇಷ ಬಗೆಯ ಸುಣ್ಣದ ಕಲ್ಲುಗಳು ಸಿಮೆಂಟ್ ತಯಾರಿಕೆಗೆ ಹೇಳಿ ಮಾಡಿಸಿದಂಥದ್ದು. ಕಾಗಿನ ನದಿ ಪಾತ್ರದಲ್ಲಿ ಸಿಗುವ ಈ ವಿಶೇಷ ಕಲ್ಲುಗಳು ಭಾರತದ ಇತರೆ ಭಾಗದಲ್ಲಿ ಸಿಗುವ ಸುಣ್ಣದ ಕಲ್ಲಿಗಿಂತ ಶೇ.50ರಷ್ಟು ಉತ್ತಮ ಗುಣಮಟ್ಟದವು.

ಮುಧೋಳ ನಾಯಿ

ಪರ್ಷಿಯಾದಿಂದ ಇಂಗ್ಲೆಂಡ್‌ವರೆಗೆ...

ಉದ್ದನೆಯ ಕಾಲುಗಳ, ಸಣಕಲು ದೇಹದ, ಉದ್ದ ಮೂತಿಯ ಈ ನಾಯಿಗಳನ್ನು ನೋಡಿದೊಡನೆಯೇ 'ಇವು ಮುಧೋಳ ನಾಯಿಗಳು' ಎಂದು ಹೇಳಿಬಿಡಬಹುದು. ಇವುಗಳ ದವಡೆಯ ರಚನೆಯಂತೂ ಕತ್ತರಿಯ ಬಾಯನ್ನು ನೆನಪಿಸುವಂತಿರುತ್ತವೆ! ಸ್ಥಳೀಯರ ಪ್ರಕಾರ ಈ ನಾಯಿಗಳ ಮೂಲ ಪರ್ಷಿಯಾ. ಬಿಜಾಪುರದ ಆದಿಲ್ ಶಾಹಿ ಸುಲ್ತಾನನೊಬ್ಬ ಪರ್ಷಿಯಾಕ್ಕೆ ತೆರಳಿದ್ದಾಗ ಅಲ್ಲಿಂದ ಉಡುಗೊರೆಯಾಗಿ ಸಿಕ್ಕ ಈ ನಾಯಿಮರಿಗಳು ಕರ್ನಾಟಕದ ಮುಧೋಳಕ್ಕೆ ಬಂದವು. ಆನಂತರ ಘೋರ್ಪಡೆಗಳ ಕೈ ಸೇರಿದ ಇವು 'ಮುದುವೊಳಲಿ'ನ ಗಡಸು ವಾತಾವರಣಕ್ಕೆ ಹೊಂದಿಕೊಳ್ಳುತ್ತಾ ಬೆಳೆದವು. ಆನಂತರ ಬಿಜಾಪುರದ ಶ್ರೀಮಂತ ರಾಜ ಮಾಲೋಜಿರಾವ್ ಘೋರ್ಪಡೆ ಒಂದಿಷ್ಟು ಮುಧೋಳ ನಾಯಿಮರಿಗಳನ್ನು ಇಂಗ್ಲೆಂಡ್ ದೊರೆ ಐದನೇ ಜಾರ್ಜ್‌ಗೆ ಉಡುಗೊರೆಯಾಗಿ ನೀಡಿದ್ದರಂತೆ. ಆ ನಾಯಿಮರಿಗಳನ್ನು ಕಂಡು ಮೆಚ್ಚಿದ ದೊರೆ ಇವನ್ನು 'ಮುಧೋಳದ ನಾಯಿಗಳು' ಎಂದು ಕರೆದರಂತೆ. ನಂತರದ ದಿನಗಳಲ್ಲಿ ಮಾಲೋಜಿರಾವ್ ಘೋರ್ಪಡೆ ತನ್ನಲ್ಲಿದ್ದ ನಾಯಿಗಳ ಉಸಾಬರಿಯನ್ನು ತನ್ನ ಸೇನಾಧಿಪತಿ ಚಂದನ ಶಿವ ಅವರಿಗೆ ವಹಿಸಿದ್ದರು; ಅಂದಿನಿಂದ ಇಂದಿನವರೆಗೂ ಚಂದನಶಿವ ವಂಶಸ್ಥರು ಮುಧೋಳ ನಾಯಿಗಳ ಪರಿಪಾಲನೆಯಲ್ಲಿ ತೊಡಗಿದ್ದಾರೆ.

ಹಟ್ಟಿ ಚಿನ್ನದ ಗಣಿ

ಐತಿಹಾಸಿಕ ಹಿನ್ನೆಲೆ

ಪ್ರಪಂಚದ ಅತ್ಯಂತ ಪ್ರಾಚೀನ ಲೋಹ ಆಧಾರಿತ ಗಣಿಗಳಲ್ಲಿ ರಾಯಚೂರಿನ ಹಟ್ಟಿ ಚಿನ್ನದ ಗಣಿಯೂ ಒಂದು. ಮೌರ್ಯ ದೊರೆ ಅಶೋಕನ ಕಾಲದಲ್ಲೂ ಅಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿತ್ತು. ಕೋಲಾರ ಚಿನ್ನದ ಗಣಿ ಮುಚ್ಚಿದ ನಂತರ ಪ್ರಸ್ತುತ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏಕೈಕ ಚಿನ್ನದ ಗಣಿ ಹಟ್ಟಿ. ಈ ಹಿಂದೆ ಇದ್ದ ಹೈದ್ರಾಬಾದ್ ಗೋಲ್ಡ್ ಕಂಪನಿಗೆ 1956ರ ಕರ್ನಾಟಕ ಏಕೀಕರಣದ ನಂತರ 'ಹಟ್ಟಿ ಚಿನ್ನದ ಗಣಿ' ಎಂದು ಹೆಸರಿಸಲಾಯಿತು. ಪ್ರತಿದಿನ ಇಲ್ಲಿ ಸುಮಾರು 1,500 ಟನ್ ಚಿನ್ನದ ಅದಿರು ತೆಗೆದು ಏಳೆಂಟು ಕೆ.ಜಿ. ಬಂಗಾರ ತಯಾರು ಮಾಡಲಾಗುತ್ತಿದೆ. 2007-08 ಸಾಲಿನಲ್ಲಿ ಹಟ್ಟಿ ಚಿನ್ನದ ಗಣಿ ಪಡೆದ ಲಾಭ 145 ಕೋಟಿ ರೂ. ಸುಮಾರು 25,000 ಅಡಿ ಆಳದ ಈ ಗಣಿಗಾರಿಕೆ ಸುಮಾರು 10,000 ಜನರಿಗೆ ಉದ್ಯೋಗ ನೀಡಿದೆ.

ಕೊಲ್ಲಾಪುರಿ ಚಪ್ಪಲಿ

ಚಿತ್ತಾಕರ್ಷಕ ಪಾದರಕ್ಷೆ

ಕೊಲ್ಲಾಪುರ ಇರುವುದು ಮಹಾರಾಷ್ಟ್ರ ಗಡಿಯೊಳಗಾದರೂ, ಕೊಲ್ಲಾಪುರಿ ಚಪ್ಪಲಿ ತಯಾರು ಮಾಡುವ ನುರಿತ ಕುಶಲಕರ್ಮಿಗಳಿರುವುದು ಅಥಣಿಯಲ್ಲಿ. ಅಥಣಿಯ ಸುತ್ತಮುತ್ತ ನಾನೂರಕ್ಕೂ ಅಧಿಕ ಕುಟುಂಬಗಳ ಜೀವನ ನಡೆಯುವುದು ಕೊಲ್ಲಾಪುರಿ ಚಪ್ಪಲಿ ತಯಾರಿಯಿಂದಲೇ. ನೈಸರ್ಗಿಕ ಸಾಮಗ್ರಿ ಬಳಸಿ 2,000ಕ್ಕೂ ಅಧಿಕ ವಿನ್ಯಾಸಗಳ, ಚಿತ್ತಾಕರ್ಷಕ ಚಪ್ಪಲಿಗಳು ಇಲ್ಲಿ ತಯಾರಾಗುತ್ತವೆ. ಬ್ರಿಟನ್, ಆಸ್ಟ್ರೇಲಿಯ, ಜರ್ಮನಿ, ಜಪಾನ್‌ಗಳಲ್ಲೂ ಈ ಚಪ್ಪಲಿಗಳಿಗೆ ಬಹು ಬೇಡಿಕೆ ಇದೆ.

ಸಂಗನಕಲ್ಲು

ಶಿಲಾಯುಗದ ಬಳುವಳಿ

ಬಳ್ಳಾರಿ ಸಮೀಪದ ಸಂಗನಕಲ್ಲು ಗ್ರಾಮವನ್ನು ನಾವು ಮರೆತಿರಬಹುದು. ಆದರೆ ವಿದೇಶಿ ಇತಿಹಾಸಕಾರರು, ವಿದ್ವಾಂಸರು ಸದಾ ಇಲ್ಲಿಗೆ ಬರುತ್ತಲೇ ಇರುತ್ತಾರೆ. ಕರ್ನಾಟಕ ನೆಲದ ಇತಿಹಾಸವನ್ನು ಶಿಲಾಯುಗಕ್ಕೆ ಕೊಂಡೊಯ್ಯುವ ಸಂಗನಕಲ್ಲಿನಲ್ಲಿ ಆ ಕಾಲದ ಮಾನವ ಕಲ್ಲಿನಲ್ಲಿ ಉಜ್ಜಿ ನಿರ್ಮಿಸಿದ ಕಲಾಕೃತಿಗಳಿವೆ; ಆ ಕಾಲದ ವಾಸ್ತುಶಿಲ್ಪದ ಕುರುಹೂ ಇದೆ. ಆದರೆ ಕಲ್ಲು ಗಣಿಗಾರಿಕೆಯಿಂದ ಅವೆಲ್ಲಾ ಕರಗುತ್ತಿವೆ.

ಮರಗೆಲಸ

ಹೊಳೆಆಲೂರು ಕೆತ್ತನೆ

ಹೊಳೆಆಲೂರು ರೈಲ್ವೆ ನಿಲ್ದಾಣದಿಂದ ಊರ ಕಡೆಗೆ ಪ್ರಯಾಣಿಸುವ ಹಾದಿಯ ಎರಡೂ ಕಡೆ ಮರಗೆಲಸದ ಗಿರಣಿಗಳೇ ಕಾಣ ಸಿಗುತ್ತವೆ. ಮರದ ಕೆತ್ತನೆಗಳಿಗೆ ಹೊಳೆಆಲೂರು ಸುಪ್ರಸಿದ್ಧ. ಬೃಹತ್ ಬಾಗಿಲುಗಳಿಂದ ಲಟ್ಟಣಿಗೆಗಳವರೆಗೆ ವೈವಿಧ್ಯಮಯ ಮರದ ಸಲಕರಣೆಗಳು ಇಲ್ಲಿ ಸಿದ್ಧವಾಗುತ್ತವೆ. ನಮ್ಮ ವಿಧಾನಸೌಧದ ಹೆಬ್ಬಾಗಿಲು ಕೂಡ ಹೊಳೆಆಲೂರು ಕೆತ್ತನೆಯೇ!

ವನ್ಯ ಜೀವಿ ಸಂಸಾರ

ದರೋಜಿ ಕರಡಿ ಧಾಮ, ಹಾವೇರಿ ನವಿಲು ಧಾಮ

ಜಗದ್ವಿಖ್ಯಾತ ಹಂಪಿಗೆ ಕೂಗಳತೆ ದೂರದಲ್ಲಿರುವ ದರೋಜಿ ಕರಡಿ ಧಾಮ ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾದ ಏಕೈಕ ಕರಡಿ ಧಾಮ. ಸುಮಾರು ಐದು ಸಾವಿರ ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಕಪ್ಪು ಕರಡಿಗಳಿವೆ. ಇನ್ನು ಹಾವೇರಿ ಸಮೀಪದ ಬಂಕಾಪುರ ನವಿಲು ಧಾಮ ಭಾರತದಲ್ಲಿರುವ ಎರಡೇ ನವಿಲು ಧಾಮಗಳಲ್ಲಿ ಒಂದು (ಮತ್ತೊಂದು ರಾಜಸ್ಥಾನದಲ್ಲಿದೆ). ಇಲ್ಲಿನ ಸುಮಾರು 140 ಎಕರೆ ಪ್ರದೇಶದಲ್ಲಿ 1000ಕ್ಕೂ ಹೆಚ್ಚು ನವಿಲುಗಳು ಆಶ್ರಯ ಪಡೆದಿವೆ.

ಚೊಂಡಿ ಮುಖೇಡ್

ಮೊದಲು ಭಾರತೀಯನಾಗು

ಚೊಂಡಿ ಮುಖೇಡ್ ಗ್ರಾಮವನ್ನು ಒಂದು ಬಗೆಯ ದ್ವೀಪ ಎನ್ನಬಹುದು. ಮಹಾರಾಷ್ಟ್ರ ಗಡಿಭಾಗದೊಳಗಿರುವ ಈ ಹಳ್ಳಿಯ ಸುತ್ತ-ಮುತ್ತಲಿನ ಪ್ರದೇಶಗಳೆಲ್ಲಾ ಮಹಾರಾಷ್ಟ್ರಕ್ಕೆ ಸೇರಿದ್ದು. ಈ ಗ್ರಾಮದ ಯಾವುದೇ ಭಾಗವೂ ಕರ್ನಾಟಕದ ಗಡಿಯನ್ನು ಸ್ಪರ್ಶಿಸುವುದಿಲ್ಲ. ಆದರೂ ಇದು ಅಧಿಕೃತವಾಗಿ ಕರ್ನಾಟಕಕ್ಕೆ ಸೇರಿದ ಹಳ್ಳಿ! ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನಲ್ಲಿರುವ ಈ ಗ್ರಾಮ ದೂರವಾಣಿಯಿಂದ ಹಿಡಿದು ಹಲವಾರು ವಿಚಿತ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಹಳ್ಳಿಯಲ್ಲಿ ಸರ್ಕಾರಿ ಕನ್ನಡ- ಮರಾಠಿ ಮಾಧ್ಯಮ ಶಾಲೆ ಇದ್ದರೂ ಅಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕನ್ನಡ ಶಿಕ್ಷಕರಿಲ್ಲ! ಕರ್ನಾಟಕಕ್ಕೆ ಸೇರಿದ ಹಳ್ಳಿಯೊಂದು ಹೇಗೆ ಮಹಾರಾಷ್ಟ್ರದ ಮಡಿಲಲ್ಲಿ ಉಳಿದುಕೊಂಡಿತು ಎಂಬ ಪ್ರಶ್ನೆಗೆ ಮಾತ್ರ ಯಾರಲ್ಲು ಉತ್ತರವಿಲ್ಲ. ಕನ್ನಡಪರ ಕಾಳಜಿಯನ್ನು ಮೆರೆಯುವ ಈ ಹಳ್ಳಿಯ ಜನತೆಯ ಭಾವನೆಯನ್ನು ಸುತ್ತಲಿನ ಮರಾಠರೂ ಸ್ವಾಗತಿಸುತ್ತಾರೆ. ಕೋಮು ವೈಷಮ್ಯ ತೊರೆದು ಮೊದಲು ಭಾರತೀಯನಾಗು ಎಂಬ ಸಂದೇಶ ಸಾರುವ ಈ ಪುಟ್ಟ ಹಳ್ಳಿಯಿಂದ ಕಲಿಯಬೇಕಾದ್ದು ಸಾಕಷ್ಟಿದೆ.

ವಿಶಿಷ್ಟ ಏಲಕ್ಕಿ ಬಾವಿ

ಏನಾದವು ಈ ಬಾವಿಗಳು?

ತೀರಾ ಇತ್ತೀಚಿನವರೆಗೆ ಹಾವೇರಿ ಬಾವಿಗಳು ಏಲಕ್ಕಿ ನೆನೆ ಹಾಕುವುದಕ್ಕೇ ವಿಶೇಷವಾಗಿದ್ದವು. ಹಾವೇರಿ ನಗರದ ಸುತ್ತಮುತ್ತಲ ಬಾವಿಗಳ ನೀರಿನಲ್ಲಿ ಇರುವ ವಿಶಿಷ್ಟ ಲವಣಾಂಶಗಳು ಏಲಕ್ಕಿ ಸಂಸ್ಕರಿಸಲು ಅತ್ಯುತ್ತಮ ಎಂಬ ನಂಬಿಕೆ ಇತ್ತು. ನಿಜಕ್ಕೂ ಅಲ್ಲಿನ ನೀರು ವಿಶೇಷವೋ ಅಥವಾ ಬಾಯಿ ಮಾತಿನಿಂದ ಪ್ರಚಾರ ಪಡೆದಿತ್ತೋ ಅಂತೂ ಸಕಲೇಶಪುರ ಮತ್ತು ಮಲೆನಾಡು ಭಾಗದಲ್ಲಿ ಬೆಳೆಯಲಾದ ರಾಶಿ ರಾಶಿ ಏಲಕ್ಕಿ ಹಾವೇರಿಗೆ ಬಂದು ಬೀಳುತ್ತಿದ್ದವು. ಆದರೆ ಕೇರಳ ಭಾಗದ ವಿಶಿಷ್ಟ ಸುವಾಸನೆ, ರುಚಿಯ ಏಲಕ್ಕಿಗಳು ಮಾರುಕಟ್ಟೆ ಆಕ್ರಮಿಸಿಕೊಂಡ ಮೇಲೆ ಕರ್ನಾಟಕದ ಏಲಕ್ಕಿಗಳು ಹಿಂದೆ ಸರಿದವು. ಹಾಗೇ ಏಲಕ್ಕಿ ಮಾರುಕಟ್ಟೆಯಲ್ಲಿ ಪವಾಡ ಸೃಷ್ಟಿಸಿದ್ದ ಹಾವೇರಿ ಬಾವಿಗಳು ಇಂದು ಹುಡುಕಿದರೂ ಸಿಗವು.

ದೇವದಾಸಿ

ಕಳಂಕಕ್ಕೆ ಕೊನೆ ಎಂದು?

"ಬೆಳಗಾವಿ, ಹಾವೇರಿ, ಕೊಪ್ಪಳ, ಬಿಜಾಪುರ, ರಾಯಚೂರು ಮುಂತಾದ ಭಾಗಗಳಲ್ಲಿ ಭರತ ಹುಣ್ಣಿಮೆ, ರಂಡಿ ಹುಣ್ಣಿಮೆ (ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ) ಜಾತ್ರೆಗಳು ನಡೆಯುತ್ತವೆ. ಈ ಸಂದರ್ಭಗಳಲ್ಲಿ ಪೂರ್ಣ ಬೆತ್ತಲೆ ಸೇವೆ ಇಲ್ಲವೇ ಬೇವಿನ ಸೊಪ್ಪ್ಪು ಧರಿಸಿ ಅರೆಬೆತ್ತಲೆ ಸೇವೆ, ಓಕುಳಿಯಾಟ ನಡೆಸುವ ಸಂಪ್ರದಾಯ ಇದೆ. ಕ್ರಿಯಾತ್ಮಕ ಮಾಧ್ಯಮಗಳಿಂದಾಗಿ ಸಾರ್ವಜನಿಕವಾಗಿ ಈ ಆಚರಣೆಗಳು ಕಡಿಮೆಯಾಗಿದ್ದರೂ ನಾಲ್ಕು ಗೋಡೆಗಳ ನಡುವೆ -ಅರ್ಚಕರ ಮನೆಯಲ್ಲೋ, ಊರ ಮುಖಂಡರ ಮನೆಯಲ್ಲೋ- ನಡೆಯುತ್ತಲೇ ಇವೆ" ಎನ್ನುತ್ತಾರೆ ಕರ್ನಾಟಕ ದೇವದಾಸಿಯರ ಸಂಘದ ಅಧ್ಯಕ್ಷೆ ಪರಿಮಳ ವಿಜಯಕುಮಾರ್ ಹೇಳುತ್ತಾರೆ.

1982ರಲ್ಲೇ ದೇವದಾಸಿ ಪದ್ಧತಿ ರದ್ದಾಗಿದ್ದರೂ ಈಗಲೂ ಸರ್ಕಾರಿ ಅಧಿಕೃತ ದಾಖಲೆ ಪ್ರಕಾರವೇ ಉತ್ತರ ಕರ್ನಾಟಕದಾದ್ಯಂತ 23,000 ದೇವದಾಸಿಯರಿದ್ದಾರೆ. ದೇವದಾಸಿ, ಜೋಗತಿ, ಬಸವಿ, ಮಾತಂಗಿ, ವೆಂಕಟಸಾನಿ, ಕಲಾವಂತಿ ಮುಂತಾಗಿ ಕರೆಯಲಾಗುವ ದೇವದಾಸಿ ಪದ್ಧತಿಯ ಪೌರಾಣಿಕ ಮೂಲ ರೇಣುಕಾ ಯಲ್ಲಮ್ಮದೇವಿಯತ್ತ ಸಾಗುತ್ತದೆ. ಸವದತ್ತಿ ಯಲ್ಲಮ್ಮನಿಗೆ ನಡೆದುಕೊಳ್ಳುವ ದೇವದಾಸಿಯರ ಸಂಖ್ಯೆ ತುಂಬಾ ಇದೆ. 'ವಿಕೇಂದ್ರೀಕರಣ'ವೋ ಎಂಬಂತೆ ಉತ್ತರ ಕರ್ನಾಟಕದ ಬಹುತೇಕ ಗ್ರಾಮದೇವತೆಗೂ ದೇವದಾಸಿಯರನ್ನು ಅರ್ಪಿಸಲಾಗುತ್ತದೆ. ಅಲ್ಲದೆ ತಿರುಪತಿಯ ವೆಂಕಟೇಶ, ಆಂಜನೇಯ ಮುಂತಾದ ಗಂಡು ದೇವತೆಗೂ ನಡೆದುಕೊಳ್ಳುವ ದೇವದಾಸಿಯರಿದ್ದಾರೆ. ಹೆಣ್ಣು ದೇವತೆಗೆ ನಡೆದುಕೊಳ್ಳುವ ದೇವದಾಸಿಯರು ಮುತ್ತು ಕಟ್ಟಿಸಿಕೊಳ್ಳುವ ಮೂಲಕ ಅಧಿಕೃತವಾಗಿ ದೇವದಾಸಿಯಾದರೆ, ಗಂಡು ದೇವತೆಗಳಿಗೆ ನಡೆದುಕೊಳ್ಳುವವರು ಭುಜದ ಮೇಲೆ ಮುದ್ರೆ ಹಾಕಿಸಿಕೊಳ್ಳುವ ಮೂಲಕ ದೇವರಿಗೆ ಅರ್ಪಿಸಿಕೊಳ್ಳುತ್ತಾರೆ.

ಒಂದು ಮನೆತನದಲ್ಲಿ ದೇವದಾಸಿಯಾದ ಮಹಿಳೆ ಮೃತಪಟ್ಟರೆ ಅದೇ ಮನೆತನದ ಹೆಣ್ಣುಮಗಳೊಬ್ಬಳನ್ನು, ಸಾಮಾನ್ಯವಾಗಿ ಹತ್ತರ ವಯಸ್ಸನ್ನೂ ಮೀರದ ಅತಿ ಕಿರಿಯ ಹೆಣ್ಣು ಕೂಸನ್ನು ದೇವದಾಸಿಯನ್ನಾಗಿ ಮಾಡಲಾಗುತ್ತದೆ. ಆಕೆಗೆ ತಲೆತುಂಬ ಹೂವುಗಳನ್ನು ಮುಡಿಸಿ, ಕೈತುಂಬ ಬಳೆಗಳು, ಪುಟ್ಟ ದೇಹಕ್ಕೆ ಭಾರೀ ಸೀರೆ, ಹಣೆಗೆ ಹರಿಶಿನ-ಕುಂಕುಮದ ಅಲಂಕಾರ, ನಾನಾ ನಮೂನೆಯ ಒಡವೆಗಳ ಅಲಂಕಾರ ಮಾಡಲಾಗುತ್ತದೆ. ದೇವರಿಗೆ ಮದುವೆ ಮಾಡಿಸುವ ಮೂಲಕ ಮುತ್ತೈದೆಯಾಗುವ ಆಕೆ ಕೊನೆವರೆಗೆ 'ಅಖಂಡ ಸುಮಂಗಲಿ'ಯ ಹಾಗೇ ಉಳಿಯುತ್ತಾಳೆ. ಆಕೆ 'ದೊಡ್ಡವಳಾದ' ಮೇಲೆ 'ಉಳ್ಳವರ' ವಲಯದ ಆಸಕ್ತ ಪುರುಷನೊಬ್ಬನನ್ನು ಈಕೆಯೊಂದಿಗೆ 'ಜೊತೆ' ಮಾಡುತ್ತಾರೆ. ಆತ ಕೊನೆಯವರೆಗೆ ಜೊತೆಯಾಗೇ ಉಳಿಯಬಹುದು ಅಥವಾ ಯಾವಾಗಬೇಕಾದರೂ ಬಿಡಬಹುದು! ಇಲ್ಲವೇ ತಮ್ಮದೇ ಸಂಬಂಧಿಯ ಪುರುಷನೊಬ್ಬನೊಂದಿಗೆ ವಿವಾಹವನ್ನೂ ನೆರವೇರಿಸಬಹುದು. ಆದರೂ ಆಕೆ ಒಂದು ತೆರದಲ್ಲಿ 'ಸಾರ್ವಜನಿಕ ಸಂಪತ್ತು' ಆಗಿಯೇ ಉಳಿಯುತ್ತಾಳೆ!

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಪರಿಸ್ಥಿತಿ ಭಿನ್ನ. ಇಲ್ಲಿ 'ಆಜನ್ಮ ಬ್ರಹ್ಮಚಾರಿ ಆಂಜನೇಯಸ್ವಾಮಿ'ಗೆ ನಡೆದುಕೊಳ್ಳುವ ಮಹಿಳೆಯರು ತಮ್ಮನ್ನು ದೇವದಾಸಿಯರೆಂದು ಕರೆದುಕೊಳ್ಳುತ್ತಾರಾದರೂ ದೇವದಾಸಿ ಧಾರ್ಮಿಕ ಆಚರಣೆಗಳನ್ನು ಅನುಸರಿಸುವುದಿಲ್ಲ. ಬದಲಿಗೆ ಬಡತನದ ಬೇಗೆಯಿಂದಾಗಿ ವೇಶ್ಯಾವೃತ್ತಿಯನ್ನೇ ಅವಲಂಬಿಸಿಕೊಂಡಿದ್ದಾರೆ.

ವಾಡೆಗಳು

ಕೂಡು ಕುಟುಂಬದ ಈ ಪರಿ...

ವಾಡೆಗಳು ಹಾಗೂ ಅವಿಭಕ್ತ ಕುಟುಂಬದ ಸಂಭ್ರಮ ಕಾಣಬೇಕೆಂದರೆ ಅದು ಉತ್ತರ ಕರ್ನಾಟಕದಲ್ಲೇ. ನೂರಿನ್ನೂರು ಎಕರೆ ಜಮೀನು ಇಟ್ಟುಕೊಂಡ ಊರಿನ ಶ್ರೀಮಂತ ಗೌಡ ಅಥವಾ ದೇಸಾಯಿಗಳ ದೊಡ್ಡ ಮನೆಗಳೇ ವಾಡೆಗಳು. ಇಂಥ ವಾಡೆ ಮಾಲೀಕರ ದರ್ಬಾರು ಇತ್ತೀಚೆಗೆ ಕಡಿಮೆಯಾಗಿರುವುದೇನೋ ನಿಜ. ಆದರೂ ದೇಸಾಯಿ ವಾಡೆ, ಹಂದಿನಗೂರು ವಾಡೆ, ಗಜೇಂದ್ರಗಢ ವಾಡೆಗಳು ಇಂದಿಗೂ ಸುಪ್ರಸಿದ್ಧ. ಇವುಗಳ ವಾಸ್ತುಶಿಲ್ಪ ಕೌಶಲ, ಕಿಟಕಿ-ಬಾಗಿಲುಗಳ ಕುಸುರಿ ಕೆತ್ತನೆಗಳು ಮನಮೋಹಕ. ಬಯಲು ಸೀಮೆಯ ಬಿರುಬಿಸಿಲಿನಲ್ಲೂ ಈ ವಾಡೆಗಳು ತಂಪಾಗಿರುವುದೇ ವಿಶೇಷ. ಇಂಥ ಮನೆಗಳಲ್ಲಿ ನೂರಾರು ಮಂದಿ ಕುಟುಂಬ ಸದಸ್ಯರು-ಆಳುಕಾಳುಗಳು ಬಾಳಿ ಬದುಕುತ್ತಿದ್ದುದು ತೀರಾ ಸಾಮಾನ್ಯವಾಗಿತ್ತು.

ಈಗಲೂ ಧಾರವಾಡದಿಂದ ಸುಮಾರು 30 ಕಿ.ಮೀ. ದೂರದ ಲೋಕಾಪುರದಲ್ಲಿ ಜಗತ್ತಿನ ಅತಿ ದೊಡ್ಡ ಅವಿಭಕ್ತ ಕುಟುಂಬ ಇದೆ. (ನರಸಿಂಗನವರ್ ಕುಟುಂಬ) ಆ ಕುಟುಂಬದ ಸದಸ್ಯರ ಸಂಖ್ಯೆ ಬರೋಬ್ಬರಿ 140. ಅಂದಾಜು 300 ಎಕರೆ ಕೃಷಿಯೋಗ್ಯ ಜಮೀನು ಇರುವ ಈ ಕುಟುಂಬದ ಆದಾಯ ಮೂಲ ಕೃಷಿ.

ಬಿಟಿ ಹತ್ತಿ

ಕುಲಾಂತರಿ ಬೀಜದ ಮಾಯೆ

ದೆಶದಲ್ಲೇ ಕುಲಾಂತರಿ (ಬಿಟಿ) ಹತ್ತಿ ವಿರುದ್ಧ ಪ್ರತಿಭಟನೆ ನಡೆಸಿದ ಪ್ರಥಮ ಜಿಲ್ಲೆ ಎನ್ನುವ ಹಿರಿಮೆ ಹಾವೇರಿಯದು. 2004-05ರಲ್ಲಿ ಕುಲಾಂತರಿ ಹತ್ತಿ ವಿರುದ್ಧ ನಡೆದ ಬಹುದೊಡ್ಡ ಹೋರಾಟ ಹಾಗೂ ಪ್ರತಿಭಟನೆಗಳ ಕೇಂದ್ರ ಈ ಜಿಲ್ಲೆ. ಆದರೆ ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲೇ ಅತಿ ಹೆಚ್ಚು ಕುಲಾಂತರಿ ಹತ್ತಿಯನ್ನು ಇದೇ ಹಾವೇರಿಯಲ್ಲಿ ಬೆಳೆಯಲಾಗಿದೆ. ನಾಡಿನ 2ನೇ ಅತಿದೊಡ್ಡ ಹತ್ತಿ ಮಾರುಕಟ್ಟೆಯೂ ರಾಣೆಬೆನ್ನೂರಿನಲ್ಲಿದೆ. ಕುಲಾಂತರಿ ಹತ್ತಿ ಬೆಳೆದರೆ ಲಾಭವೂ ಅಧಿಕ ಮತ್ತು ರೋಗಬಾಧೆಯೂ ಕಡಿಮೆ ಎನ್ನುವ ಅಂಶವೇ ಈ ಪ್ರಾಂತದಲ್ಲಿ ವರ್ಷ ವರ್ಷವೂ ಕುಲಾಂತರಿ ಹತ್ತಿ ಬೆಳೆಯುವವರ ಸಂಖ್ಯೆ ಏರಲು ಕಾರಣ. ಕುಲಾಂತರಿ ಹತ್ತಿ ನಿಧಾನವಾಗಿ ಗುಲ್ಬರ್ಗಾ, ರಾಯಚೂರು, ಬೆಳಗಾವಿ ಮತ್ತಿತರ ಜಿಲ್ಲೆಗಳಿಗೂ ವಿಸ್ತರಿಸಿತು. ಅಲ್ಲದೆ ಖಾಸಗಿ ಸಂಸ್ಥೆಗಳು ಸಮರೋಪಾದಿಯಲ್ಲಿ ನಡೆಸಿದ ಮಾರುಕಟ್ಟೆ ವಿಸ್ತರಣಾ ಚಟುವಟಿಕೆಗಳೂ ರೈತರು ಕುಲಾಂತರಿ ಹತ್ತಿಯ ಕಡೆ ವಾಲಲು ಕಾರಣವಾಗಿದೆ. ಇದೀಗ ಬಿಟಿ ಬದನೆಗೆ ಕಾದಿದೆಯೇ ಉತ್ತರ ಕರ್ನಾಟಕ?

ಗುಲಾಂ ಮುಂತಾಕ್

ಕ್ಯಾಮರಾ ಹಿಂದೆ ಏಳು ದಶಕ

ಬೀದರ್‌ನ ಗುಲಾಂ ಮುಂತಾಕ್ ಕ್ಯಾಮರಾ ಹಿಡಿದಿದ್ದು ಆರನೇ ವಯಸ್ಸಿನಲ್ಲಿ. ಈಗ 76 ಆಗಿದ್ದರೂ ಕ್ಯಾಮರಾ ಬಿಟ್ಟಿಲ್ಲ. ಗ್ಲಾಸ್ ನೆಗೆಟಿವ್ ಇದ್ದ ಕಾಲದಿಂದಲೂ ತಾವೇ ನೆಗೆಟಿವ್ ಮಾಡುತ್ತಿದ್ದು ಮರದ ಕ್ಯಾಮರಾವನ್ನೂ ಸಿದ್ಧಪಡಿಸಿದ್ದಾರೆ. ಕಳೆದ ಏಳು ದಶಕಗಳಲ್ಲಿ ಛಾಯಾಚಿತ್ರ ಲೋಕದಲ್ಲಿ ಆದ ಬೆಳವಣಿಗೆಗಳಿಗೆ ಸಾಕ್ಷಿ ಇವರು. 200ಕ್ಕೂ ಅಧಿಕ ಕ್ಯಾಮರಾಗಳ ಒಡೆಯರಾಗಿರುವ ಬೀದರ್‌ನ ಈ ಫೋಟೋಗ್ರಾಫರ್ ಅಜ್ಜ ಗುಲಾಂ ಹೊಸ ಕ್ಯಾಮರಾ ಕೊಂಡುಕೊಂಡರೆಂದರೆ ಮೊತ್ತಮೊದಲಿಗೆ ಮಾಡುವ ಕೆಲಸ ಅದನ್ನು ಬಿಚ್ಚಿ ಪರಿಕರಗಳನ್ನು ಒಂದೊಂದಾಗಿ ಬೇರ್ಪಡಿಸುವುದು! ನಂತರ ತಮ್ಮದೇ ವಿನ್ಯಾಸದ ಕ್ಯಾಮರಾ ರೂಪಿಸುವುದು. ಅವರ ವೈಡ್‌ಲೆನ್ಸ್‌ನ ವಿಶೇಷತೆಯೆಂದರೆ ವಿಧಾನಸೌಧ ಮತ್ತು ಹೈಕೋರ್ಟ್ ಕಟ್ಟಡಗಳನ್ನು ಒಂದೇ ಫ್ರೇಮ್‌ನಲ್ಲಿ ಸೆರೆ ಹಿಡಿಯುತ್ತಿದ್ದುದು. ಲೋಕಸಭೆಯ ಎಲ್ಲಾ ಸದಸ್ಯರನ್ನೂ ಒಂದೇ ಫ್ರೇಮ್‌ನಲ್ಲಿ ತೆಗೆಯಲೆಂದೇ ಒಂದು ಕ್ಯಾಮರಾ ಸಿದ್ಧಪಡಿಸಿದ ಅವರು, ತಾವೇ ತಯಾರಿಸಿದ ಒಂದಡಿ ಎತ್ತರ ಹಾಗೂ ಎಂಟೂವರೆ ಅಡಿ ಉದ್ದದ ನೆಗೆಟಿವ್‌ನಲ್ಲಿ ಸೆರೆ ಹಿಡಿಯುತ್ತಿದ್ದರಂತೆ!

ಬೀದರ್ ಕೋಟೆ

ಬೆಳದಿಂಗಳು ಸವಿಯಲು ಬೃಹತ್ ಕೋಟೆ

ಮೂರು ಕಂದಕಗಳುಳ್ಳ ಕೋಟೆಗಳು ಪ್ರಪಂಚದಲ್ಲಿರುವುದು ಕೇವಲ ಎರಡೇ. ಅವುಗಳಲ್ಲಿ ಒಂದು ರೋಮ್‌ನಲ್ಲಿದ್ದರೆ ಇನ್ನೊಂದು ನಮ್ಮ ಉತ್ತರ ಕರ್ನಾಟಕದ ಬೀದರ್‌ನಲ್ಲಿ. ದಕ್ಷಿಣ ಭಾರತದ ಅತ್ಯಂತ ದೊಡ್ಡ ಕೋಟೆ ಎಂಬ ಹೆಗ್ಗಳಿಕೆ ಹೊಂದಿರುವ ಈ ಬೀದರ್ ಕೋಟೆಗೆ ಬುನಾದಿ ಹಾಕಿದವರು 12ನೇ ಶತಮಾನದ ಆದಿ ಭಾಗದಲ್ಲಿ ಬೀದರನ್ನು ತಮ್ಮ ರಾಜ್ಯಧಾನಿಯಾಗಿಸಿಕೊಂಡಿದ್ದ ಕಾಕತೀಯರು. ನಂತರ ಆ ಕೋಟೆಯ ಬಹುಮುಖ್ಯ ಕಟ್ಟಡಗಳನ್ನು ನಿರ್ಮಿಸಿದವರು ಬಹಮನಿ ಸಾಮ್ರಾಜ್ಯದವರು. ಕೋಟೆಯ ಒಳಗಿರುವ ರಂಗೀನ್ ಮಹಲ್, ತರ್ಕಿಷ್ ಮಹಲ್, 16 ಕಂಭಗಳ ಮಸೀದಿ ಆಂದಿನ ಸಾಮ್ರಾಟರ ರಸಿಕತೆಗೆ ಸಾಕ್ಷಿ. ಸೂರ್ಯೋದಯ ಹಾಗೂ ಸೂರ್ಯಾಸ್ತಗಳನ್ನು ನೋಡಲು ಸಾಕಷ್ಟು ಸ್ಥಳಗಳಿರಬಹುದು. ಆದರೆ ಚಂದ್ರೋದಯ ಹಾಗೂ ಬೆಳದಿಂಗಳನ್ನು ಸವಿಯಲು ಅಂದಿನ ಸಾಮ್ರಾಟರು 'ಚಾಂದಿನಿ ಚಬೂತರ್' ಅನ್ನು ನಿರ್ಮಿಸಿದ್ದರು ಎಂದರೆ ಅವರ ಸೌಂದರ್ಯೋಪಾಸನೆ ಮಟ್ಟ ಏನಿರಬಹುದು?

 

ಏಣಗಿ ಬಾಳಪ್ಪ

ದಣಿವರಿಯದ ರಂಗತಪಸ್ವಿ

"ವೃತ್ತಿ ರಂಗಭೂಮಿ ಹೃದಯದ ಭಾಷೆಯಾದರೆ, ಆಧುನಿಕ ರಂಗಭೂಮಿ ಬೌದ್ಧಿಕ ಭಾಷೆ..." ಏಣಗಿ ಬಾಳಪ್ಪನವರು ಸಮಗ್ರ ರಂಗಭೂಮಿಯ ಸಾರವನ್ನು ಎರಡೇ ವಾಕ್ಯದಲ್ಲಿ ಸೆರೆ ಹಿಡಿಯುವ ಪರಿ ಇದು. ಕನ್ನಡ ರಂಗಭೂಮಿಗೆ ಅವಿರತ ಕೊಡುಗೆ ಸಲ್ಲಿಸಿದ 97 ವರ್ಷದ ಈ 'ರಂಗಜಂಗಮ' ನಡೆದಾಡುವ 'ರಂಗಭೂಮಿಯ ವಿಶ್ವಕೋಶ' ಎಂದರೆ ತಪ್ಪಾಗಲಾರದು. ಆಧುನಿಕತೆಯ ಭರಾಟೆಯಲ್ಲಿ ರಂಗಗೀತೆಗಳು ಜನಮಾನಸದಿಂದ ಮಾಸಿ ಹೋಗುತ್ತಿರುವ ಸಂದರ್ಭದಲ್ಲಿ ನಮ್ಮ ಪಾಲಿಗಿರುವ ರಂಗಗೀತೆಗಳ ಅತಿ ದೊಡ್ಡ ಭಂಡಾರ ಎಂದರೆ ಏಣಗಿ ಬಾಳಪ್ಪನವರು. ಅವರ 'ಜಗಜ್ಯೋತಿ ಬಸವೇಶ್ವರ' ನಾಟಕದ ಬಸವೇಶ್ವರರ ಪಾತ್ರ ಇಂದಿಗೂ ಮನೆಮಾತಾಗಿದೆ. ರಾತ್ರಿಯ ರಂಗ ಪ್ರದರ್ಶನದಲ್ಲಿ 'ಜಗಜ್ಯೋತಿ ಬಸವೇಶ್ವರ'ನನ್ನೇ ಮೈಮೇಲೆ ಅವಾಹಿಸಿಕೊಂಡಂತೆ ನಟಿಸುತ್ತಿದ್ದ ಏಣಗಿ ಬಾಳಪ್ಪನವರನ್ನು ಮುಂಜಾನೆ ಮಾರ್ಗಮಧ್ಯದಲ್ಲಿ ಕಂಡರೆ ಕಾಲಿಗೆ ಬೀಳದ ಗ್ರಾಮಸ್ಥರಿರಲಿಲ್ಲ. ಅಷ್ಟೊಂದು ತನ್ಮಯ ನಟನೆಯ ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆ ಬಾಳಪ್ಪನವರು. ರಂಗತಪಸ್ಸಿನ ಮತ್ತೊಂದು ಅಧ್ಯಾಯವೆಂಬಂತೆ ಬಾಳಪ್ಪನವರು 1940ರ ದಶಕದಲ್ಲಿ 'ಕಲಾವೈಭವ ನಾಟ್ಯ ಸಂಘ' ಸ್ಥಾಪಿಸಿ ಕನ್ನಡ ವೃತ್ತಿ ರಂಗಭೂಮಿಯನ್ನು ಇನ್ನಷ್ಟು ಫಲತ್ತಾಗಿಸಿದರು. ಸುಮಾರು 45 ವರ್ಷಗಳ ಕಾಲ ರಂಗಾಸಕ್ತರ ದಾಹ ತಣಿಸಿದ ಬಾಳಪ್ಪನವರ ಈ ನಾಟಕ ಕಂಪನಿ ದುರದೃಷ್ಟವಶಾತ್ ಪ್ರೇಕ್ಷಕರ ನಿರಾಸಕ್ತಿ ಹಾಗೂ ಕಲಾವಿದರ ಬದ್ಧತೆಯ ಕೊರತೆಯಿಂದಾಗಿ ಮುಚ್ಚಿಹೋಯಿತು. ಆದರೆ ಬಾಳಪ್ಪನವರ ಕಂಠಸಿರಿ ಮಾತ್ರ ಇನ್ನೂ ಕುಗ್ಗಿಲ್ಲ. ಅವರು ನಟ ಮಾತ್ರ ಅಲ್ಲ, ಅತ್ಯುತ್ತಮ ವಾಗ್ಮಿಯೂ ಹೌದು. ಆಧುನಿಕ ರಂಗಭೂಮಿ ಹಾಗೂ ವೃತ್ತಿ ರಂಗಭೂಮಿಯ ಕುರಿತು ಅಸ್ಖಲಿತವಾಗಿ ಮಾತನಾಡುವ ಸಾಮರ್ಥ್ಯ ಇವರಿಗಿದೆ.

ಟಿಎಸ್‌ಐ

 
 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .