User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಚಿಲುಮೆ

ತಿಪ್ಪೆಗುಂಡಿಯಾದ ಭಾರತ

 
ಜಾಗತಿಕ ಮಟ್ಟದಲ್ಲಿ ಭಾರತ ಹೊಸ ಚಳವಳಿಯೊಂದಕ್ಕೆ ನಾಂದಿ ಹಾಡಬೇಕಿದೆ
Prasoon
ಪ್ರಸೂನ್ ಮಜುಂದಾರ್
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್

`ತ್ಯಾಜ್ಯ ವಸ್ತುಗಳ' ಉದ್ಯಮ ಬೃಹತ್ತಾಗೇ ಬೆಳೆದಿದೆ. ಈ ಉದ್ಯಮದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತ್ಯಾಜ್ಯವಸ್ತುಗಳ ಉತ್ಪಾದಕರೂ, ಮಾರಾಟಗಾರರೂ ಆಗಿದ್ದರೆ ಮುಂದುವರಿಯುತ್ತಿರುವ ರಾಷ್ಟ್ರಗಳಿಗೆ ಇಲ್ಲಿ ಗ್ರಾಹಕನ ಪಾತ್ರ. ಇಲ್ಲಿನ ಲೆಕ್ಕಾಚಾರಗಳು ಬಲು ಸರಳ, ಬೃಹತ್ ನಗರ ಪಾಲಿಕೆಗಳು ವೆಚ್ಚವನ್ನು (ಪರಿಸರ ರಕ್ಷಣೆ ಹಾಗೂ ಪುನರ್ಬಳಕೆಗೆ ಖರ್ಚಾಗುವ ಮೊತ್ತ) ಕಡಿಮೆಗೊಳಿಸಲು ತಮ್ಮಲ್ಲಿನ ತ್ಯಾಜ್ಯವನ್ನು ಬಡ ರಾಷ್ಟ್ರಗಳಿಗೆ ಸಾಗಹಾಕುತ್ತಾರೆ; ಮುಂದುವರಿಯುತ್ತಿರುವ ರಾಷ್ಟ್ರಗಳ ಆರ್ಥಿಕತೆಗೆ ಕಳಪೆ ಕಚ್ಚಾ ವಸ್ತುಗಳ ಅಗತ್ಯವೂ ಇರುತ್ತದೆ.

`ಯುರೋಪಿಯನ್ ಎನ್‌ವಿರಾನ್‌ಮೆಂಟಲ್ ಏಜೆನ್ಸಿ' ಪ್ರಕಟಿಸಿದ ವರದಿ ಪ್ರಕಾರ ಯೂರೋಪ್‌ನಿಂದ ಹೊರ ದೇಶಗಳಿಗೆ ರವಾನೆಯಾಗುವ ಕಾಗದ, ಪ್ಲಾಸ್ಟಿಕ್ ಮತ್ತು ಲೋಹದ ತ್ಯಾಜ್ಯಗಳು 1995ರಿಂದ 2007ರ ಅವಧಿಯಲ್ಲಿ ಹತ್ತು ಪಟ್ಟು ಹೆಚ್ಚಳ ಕಂಡಿದೆ. ಅದರಲ್ಲಿ ಪ್ರತಿ ವರ್ಷ ಕಾನೂನು ಬಾಹಿರವಾಗಿ ರವಾನೆಯಾಗುವ ತ್ಯಾಜ್ಯ ತುಂಬಿದ 20 ಮಿಲಿಯನ್ ಕಂಟೇನರ್‌ಗಳೂ ಸೇರಿವೆ. ನ್ಯೂಯಾರ್ಕ್‌ನಿಂದ 'ತ್ಯಾಜ್ಯ ಕಾಗದ' ಎಂಬ ಹಣೆಪಟ್ಟಿ ಲಗತ್ತಿಸಿಕೊಂಡು ಭಾರತಕ್ಕೆ ಬಂದಿಳಿದ ಮುನ್ಸಿಪಲ್ ತ್ಯಾಜ್ಯದ ಮೂರು ಕಂಟೇನರ್‌ಗಳನ್ನು ಕೊಚ್ಚಿ ಬಂದರಿನ ಸುಂಕ ಅಧಿಕಾರಿಗಳು 2007ರ ಅಕ್ಟೋಬರ್‌ನಲ್ಲಿ ವಶಪಡಿಸಿಕೊಂಡಿದ್ದರು. ಮೂರು ತಿಂಗಳ ತರುವಾಯ ಅವನ್ನು ಅಮೆರಿಕಕ್ಕೆ ಹಿಂತಿರುಗಿಸಲಾಯಿತು. ಅದೇ ಸಮಯದಲ್ಲಿ 'ತ್ಯಾಜ್ಯ ಕಾಗದ' ಎಂಬ ಮುಸುಕಿನಡಿ ಇತರೆ ಕಸಗಳು ತುಂಬಿದ್ದ 35 ಕಂಟೇನರ್‌ಗಳು ಟುಟಿಕೋರನ್ ಬಂದರಿಗೂ ಬಂದಿಳಿದಿದ್ದವು. ನ್ಯಾಯಾಲಯದ ಆದೇಶವಿದ್ದಾಗ್ಯೂ ಈ ಕಂಟೇನರ್‌ಗಳು ಇಂದಿಗೂ ತಮಿಳುನಾಡಿನ ಆ ಬಂದರಿನಲ್ಲಿ ಕೊಳೆಯುತ್ತಲೇ ಇವೆ.

ಅಧ್ಯಯನಗಳ ಪ್ರಕಾರ 2005-06ರ ಅವಧಿಯಲ್ಲಿ ಆಮದು ಮಾಡಿಕೊಳ್ಳಲಾದ 'ಅಧಿಕೃತ' ತ್ಯಾಜ್ಯದ ಪ್ರಮಾಣ 1,34,400 ಟನ್‌ಗಿಂತಲೂ ಅಧಿಕ. ಇನ್ನು ಕಾನೂನು ಬಾಹಿರವಾಗಿ ಭಾರತದ ನೆಲ ಸೇರುವ ತ್ಯಾಜ್ಯಕ್ಕೂ ಕೊರತೆಯೇನಿಲ್ಲ. ಭಾರತದ ಬೃಹತ್ತಾದ ಹಾಗೂ ಹಲವು ಕಳ್ಳಗಿಂಡಿಗಳನ್ನು ತನ್ನಲ್ಲಿ ಹುದುಗಿಸಿಟ್ಟಿರುವ ಕರಾವಳಿ ತೀರವೇ ಇಂಥ ಅಭಾಸಕ್ಕೆ ಬಹುಮುಖ್ಯ ಕಾರಣ. ಬೆರಳೆಣಿಕೆಯಷ್ಟು ವಿಲೇವಾರಿ ಅಧಿಕಾರಿಗಳ ನಿರ್ವಹಣೆಯಲ್ಲಿರುವ ಗಣಕೀಕೃತವಲ್ಲದ ಸುಮಾರು 1000 ಬಂದರುಗಳು ಅವ್ಯವಹಾರಕ್ಕೆ ಮತ್ತೊಂದು ಕಾರಣ. ಸಾವಿರಕ್ಕೂ ಅಧಿಕ ಸಣ್ಣ ಸುಂಕ ವಿಲೇವಾರಿ ನಿಲ್ದಾಣಗಳು (ಅದಲ್ಲದೆ 7 ಬೃಹತ್ ನಿಲ್ದಾಣಗಳು) ದೇಶದೆಲ್ಲೆಡೆ ಹರಡಿರುವ ಕಾರಣ ಅಧಿಕಾರಿಗಳ ಕಣ್ತಪ್ಪಿಸಿ, 'ಅಧಿಕೃತ ತ್ಯಾಜ್ಯಗಳ' ಹೆಸರಿನಲ್ಲಿ ಬೇರೆ ಕಸಗಳನ್ನು ದೇಶದೊಳಕ್ಕೆ ಸಾಗಿಸುವುದು ಬಲು ಸುಲಭ! ಅವ್ಯವಹಾರಗಳಿಗೆ ಮತ್ತೊಂದು ಮುಖ್ಯ ಕಾರಣ ಜಡ್ಡುಗಟ್ಟಿದ ವ್ಯವಸ್ಥೆಯೊಳಗಿನ ಭ್ರಷ್ಟಾಚಾರ. ಹಾಗಾಗಿ ಸೀಸ, ಸತುವಿನ ಬೂದಿಯಿಂದ ಹಿಡಿದು ಬ್ಯಾಟರಿ ಮತ್ತಿತರ ಅಪಾಯಕಾರಿ ತ್ಯಾಜ್ಯಗಳೂ ಸುಲಭವಾಗಿ ಭಾರತದ ಕಡಲ ತೀರಕ್ಕೆ ಬಂದು ಬೀಳುತ್ತವೆ.

'ಐಆರ್‌ಜಿ ಸಿಸ್ಟಮ್ಸ್' ನಡೆಸಿದ ಸಮೀಕ್ಷೆಯ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ ಸೃಷ್ಟಿಯಾಗುವ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ತ್ಯಾಜ್ಯದ ಪ್ರಮಾಣ ಸುಮಾರು 1,46,180 ಟನ್‌ಗಳು. ದೆಹಲಿ ಮೂಲದ ಸರ್ಕಾರೇತರ ಸಂಸ್ಥೆ, 'ಟಾಕ್ಸಿಕ್ ಲಿಂಕ್' ನಡಸಿದ ಸಮೀಕ್ಷೆಯ ಪ್ರಕಾರ ಪ್ರತಿ ವರ್ಷ ಭಾರತ ಸುಮಾರು 1.5 ಮಿಲಿಯನ್ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ ತ್ಯಾಜ್ಯ ಸೃಷ್ಟಿಸುತ್ತದೆ. ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆ 'ಸಾಹಸ್' ಪ್ರಕಾರ ವರ್ಷವೊಂದಕ್ಕೆ ಬೆಂಗಳೂರು ನಗರವೊಂದೇ 8,000 ಟನ್‌ಗಳಷ್ಟು ಎಲೆಕ್ಟ್ರಾನಿಕ್ ತ್ಯಾಜ್ಯ ಉತ್ಪಾದಿಸುತ್ತದೆ. ಅಲ್ಲದೆ, ಈ ವರ್ಷದ ಅಂತ್ಯಕ್ಕೆ ಭಾರತ ಆಮದು ಮಾಡಿಕೊಳ್ಳುತ್ತಿರುವ ಎಲೆಕ್ಟ್ರಾನಿಕ್ ತ್ಯಾಜ್ಯದ ಪ್ರಮಾಣ 4,34,000 ಮೆಟ್ರಿಕ್ ಟನ್‌ಗಳನ್ನೂ ಮೀರುತ್ತದೆ ಎಂದು ಅಂದಾಜಿಲಾಗಿದೆ.

ಈ ಸಮಸ್ಯೆ ಭಾರತಕ್ಕೆ ಮಾತ್ರ ಸೀಮಿತವಲ್ಲ. 'ಗ್ರೀನ್‌ಪೀಸ್ ಇಂಟರ್‌ನ್ಯಾಷನಲ್'ನ ಜೊ ಕೂಪರ್ ಮತ್ತು ಮಾರ್ಟಿನ್ ಹೋಜ್‌ಸಿಕ್ ತಮ್ಮ 'ಇನ್ ಪಾಯ್ಸನಿಂಗ್ ದ ಪೂರ್' ಪತ್ರಿಕೆಯಲ್ಲಿ ಪ್ರಕಟಿಸಿದ ಒಂದು ಲೇಖನದಲ್ಲಿ "ಬಡ ಮತ್ತು ಶ್ರೀಮಂತ ರಾಷ್ಟ್ರಗಳ ನಡುವಿನ 'ಡಿಜಿಟಲ್ ಕಂದಕ'ವನ್ನು ತುಂಬುವ ಸಲುವಾಗಿ ಬಡ ರಾಷ್ಟ್ರಗಳಿಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಳುಹಿಸಲಾಗುತ್ತದೆ. ಆದರೆ ಒಂದು ಅಂದಾಜಿನ ಪ್ರಕಾರ ಆಫ್ರಿಕಾಗೆ ರವಾನೆಯಾಗುವ ಸೆಕೆಂಡ್ ಹ್ಯಾಂಡ್ ಸರಕುಗಳಲ್ಲಿ ಶೇ. 25-75ರಷ್ಟು ಉಪಕರಣಗಳು ಉಪಯೋಗಕ್ಕೆ ಬಾರದವು" ಎಂದಿದ್ದಾರೆ. ಅಮೆರಿಕದಲ್ಲಿ ಸೃಷ್ಟಿಯಾಗುವ ಶೇ. 80ರಷ್ಟು ತ್ಯಾಜ್ಯ ಭಾರತ, ಚೀನಾ ಹಾಗೂ ಪಾಕಿಸ್ತಾನದ ಹಾದಿ ಹಿಡಿಯುತ್ತವೆ. ಹಾಂಕಾಂಗ್, ಲ್ಯಾಟಿನ್ ಅಮೆರಿಕ, ಘಾನಾ, ಈಜಿಪ್ಟ್, ನೈಜೀರಿಯಾ ಮುಂತಾದ ರಾಷ್ಟ್ರಗಳ ಅವಸ್ಥೆಯೂ ಇದೇ.

ಭಾರತ ಮೊದಲು ತನ್ನ ಕರಾವಳಿಯನ್ನು ಬಲಪಡಿಸಬೇಕಿದೆ. ಆನಂತರ ತ್ಯಾಜ್ಯ ಆಮದಾಗುವ ಎಲ್ಲಾ ರಾಷ್ಟ್ರಗಳನ್ನೂ ಒಗ್ಗೂಡಿಸಿ ಭಾರತ ಜಾಗತಿಕ ಮಟ್ಟದಲ್ಲಿ ಈ ಬಗ್ಗೆ ದನಿಯೆತ್ತಬೇಕಿದೆ. ಕೆಲವು ನಗರ ಪಾಲಿಕೆಗಳ ಹಿತಾಸಕ್ತಿಗೆ ಸಾಮಾಜಿಕ ಸ್ವಾಸ್ಥ್ಯ ಬಲಿಯಾಗುತ್ತಿದೆ ಎಂಬುದನ್ನು ಭಾರತ ಮನಗಾಣಬೇಕಿದೆ.

ಐಐಪಿಎಂ
'ಥಿಂಕ್ ಟ್ಯಾಂಕ್'

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .