|
ಬೇಡವೀ ಅಮರತ್ವ...
ಟಿಎಸ್‌ಐನ ಈ ಬಾರಿಯ 'ಅಮರ ಜೀವನ' ಮುಖಪುಟ ಲೇಖನ ಓದುಗರಲ್ಲಿ
ಚರ್ಚೆಯನ್ನು ಹುಟ್ಟುಹಾಕಿದೆ. ನಾವು ಚಿರಕಾಲ ಬಾಳುವಂತಾಗುವುದರ ಸಾಧಕ-ಬಾಧಕಗಳ ಕುರಿತು ಆಲೋಚನೆಯ
ಅಲೆ ಎಬ್ಬಿಸಿದೆ. ವಿಜ್ಞಾನ ನೋವಿಗೆ ಔಷಧ ಕಂಡು ಹಿಡಿಯಿತು, ಸಾವಿನಿಂದ ಸ್ವಲ್ಪ ಸಮಯ ದೂರ ಉಳಿಯಲು
ವಿವಿಧ ಚಿಕಿತ್ಸೆಗಳನ್ನು ಕಂಡುಕೊಂಡಿತು. ಆಗೆಲ್ಲಾ ಆ ಸಾಧನೆಯನ್ನು ನಾವು ಸಂತೋಷದಿಂದಲೇ
ಸ್ವಾಗತಿಸಿದೆವು. ಆದರೆ ಸಾವನ್ನೇ ಗೆದ್ದು ಅಮರರಾಗಲು ತಂತ್ರ ಕಂಡುಹಿಡಿಯುತ್ತೇವೆ ಎನ್ನುವ
ವಿಜ್ಞಾನಿಗಳ ಮಾತು ಏಕೋ ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ. ಸಾವೇ ಇಲ್ಲದಿದ್ದರೆ ನಮ್ಮ ಆತ್ಮೀಯರು
ನಮ್ಮಿಂದ ಅಗಲಿ ಹೋಗುವ ಚಿಂತೆ ನಮ್ಮನ್ನು ಕಾಡುವುದಿಲ್ಲ ನಿಜ. ಆದರೆ ಅದರ ಜೊತೆಗೇ ಸಾವಿಲ್ಲದೆ ಜನ
ಬದುಕುವಂತಾಗುವುದರಿಂದ ಸಾಕಷ್ಟು ಸಮಸ್ಯೆ ನಮ್ಮನ್ನು ಕಾಡುವುದು ಖಚಿತ. ಅಮರತ್ವ ಗಳಿಸಲು ಮಾಡುವ
ಚಿಕಿತ್ಸೆ ದುಬಾರಿಯಾದರೆ ಆಗ ಶ್ರೀಮಂತರು ಮಾತ್ರ ಅಮರರಾಗಲು ಸಾಧ್ಯ. ಹೀಗಾದರೆ ಎಲ್ಲರೂ ಒಂದೇ
ಎನ್ನುವ ಸೃಷ್ಟಿಯ ನಿಯಮಕ್ಕೆ ಸಿಗುವ ಬೆಲೆ ಏನು? ನಾವು ಸಾಯುವುದೇ ಇಲ್ಲ ಎಂದಾಗ ನಮ್ಮಲ್ಲಿ
ಈಗಿರುವಂತೆಯೇ ಜೀವನ ಪ್ರೀತಿ ಉಳಿಯಲು ಸಾಧ್ಯವೇ? ನಾಳೆ ಇದೆಯಲ್ಲ... ಎಂಬ ಧೋರಣೆ ನಮ್ಮನ್ನು
ಜಡತ್ವದೆಡೆಗೆ ದೂಡುವುದಿಲ್ಲವೇ? ಇನ್ನು ಎಲ್ಲರೂ ಬದುಕುಳಿದರೆ ಪ್ರಪಂಚದಲ್ಲಿ ಎಲ್ಲರೂ ವಾಸಿಸಲು
ಸ್ಥಳವಾದರೂ ಎಲ್ಲಿದೆ. ಆಹಾರ ಪೂರೈಕೆ ಹೇಗೆ? ಈಗಲೇ ಮೇಲುಗೈ ಸಾಧಿಸಲು ಹೋರಾಟಕ್ಕೆ ಇಳಿದಿರುವ ಜನ
ಮುಂದೆ ಆಹಾರ, ವಾಸ ಸ್ಥಳಕ್ಕಾಗಿ ಯಾವ ಮಟ್ಟದಲ್ಲಿ ಕಚ್ಚಾಟದಲ್ಲಿ ತೊಡಗಬಹುದು? ಇವೆಲ್ಲವನ್ನೂ
ಗಮನಿಸಿದಾಗ ಅಮರತ್ವ ನಮಗೆ ಪ್ರಾಪ್ತಿಯಾಗದಿದ್ದರೇ ಒಳಿತು ಎನ್ನಿಸದಿರದು.
ಎನ್. ಸಂತೋಷ್
ಮಂಗಳೂರು
ಅಮರತ್ವ ಜಡತ್ವಕ್ಕೆ ನಾಂದಿ
ಈ ಬಾರಿಯ ಟಿಎಸ್‌ಐ ಮುಖಪುಟ ಲೇಖನದಲ್ಲಿ ಅಮರ ಜೀವನ ಕುರಿತು
ಪ್ರಕಟಗೊಂಡಿರುವ ಲೇಖನಗಳು ಜೀವನ ಕುರಿತು ಜಿಜ್ಞಾಸೆ ಹುಟ್ಟಿಸುವಂತಿದೆ. ನ್ಯಾನೋ ತಂತ್ರಜ್ಞಾನದಿಂದ
ಅಮರತ್ವ ಸಾಧ್ಯವಾಗಬಹುದು ಎಂಬ ವಿಷಯ ತಿಳಿಸಿ ಟಿಎಸ್‌ಐ, ಅಮರತ್ವ ಕುರಿತು ಜನ ಸಾಮಾನ್ಯರಲ್ಲಿ
ಚರ್ಚೆಗೆ ಅವಕಾಶ ಕಲ್ಪಿಸಿದೆ. ಸಂಪಾದಕ ಅರಿಂದಮ್ ಚೌಧುರಿ ಅವರು ಅಭಿಪ್ರಾಯ ಪಟ್ಟಿರುವಂತೆ, ಅಮರತ್ವ
ಸಾಧಿಸಿದರೆ ನಾವು ನಮ್ಮ ಕುಟುಂಬ ಮತ್ತು ಸುತ್ತಮುತ್ತಲಿನ ಆತ್ಮೀಯರೊಂದಿಗೆ ದೀರ್ಘ ಕಾಲ ಸಂತಸ
ಹಂಚಿಕೊಂಡು ಬಾಳಬಹುದಾಗಿದೆ. ಅದರಂತೆ ಚಿತ್ರ ನಿರ್ದೇಶಕ ಅಜೀಜ್ ಮಿರ್ಜಾ ಹೇಳಿರುವಂತೆ ಅಮರತ್ವ
ಸಾಧ್ಯವಾಗುವುದಾದರೆ ಚಿತ್ರರಂಗದಲ್ಲಿ ಹಳೆಯ ಮುಖಗಳನ್ನೇ ನೂರಾರು ವರ್ಷ ನೋಡಲು ಜನರಿಗೆ
ಬೇಸರವಾಗುತ್ತದೆ ಎಂದಿರುವುದೂ ಸತ್ಯ. ವಿಜ್ಞಾನದಿಂದ ಮನುಷ್ಯ ಏನೇ ಸಾಧಿಸಿದರೂ, ಬದಲಾವಣೆ ಸೃಷ್ಟಿಯ
ನಿಯಮ. ಪ್ರಕೃತಿಯನ್ನು ಮೀರಿ ನಡೆಯುವ ದುಸ್ಸಾಹಸಕ್ಕೆ ಮಾನವ ಕೈ ಹಾಕದೇ ಇರುವುದೇ ಒಳಿತು. ಅಮರತ್ವ
ಸಾಧಿಸಿದರೆ ಸೃಜನಶೀಲತೆ ಮರೆಯಾಗಿ ಜಡತ್ವ ಪ್ರಾಪ್ತಿಯಾಗುವುದು ಖಚಿತ. ಮರಣ ಜೀವನದ ರೂಪಾಂತರ. ಮರಣವೇ
ಇಲ್ಲದಾದರೆ ಜನಸಂಖ್ಯಾ ಸ್ಫೋಟ, ಆಹಾರ, ನೀರು, ವಸತಿ ಸಮಸ್ಯೆ ಹೆಚ್ಚಾಗಿ ಯುದ್ಧದಲ್ಲಿ ಎಲ್ಲವೂ
ಅಂತ್ಯ ಕಾಣುವಂತಾಗಬಹುದಷ್ಟೆ.
ರೇ.ಚ. ರೇವಡಿಗಾರ
ಸಿಂದಗಿ
ಕ್ರಾಂತಿಯೋ ಭ್ರಾಂತಿಯೋ
ವೈಜ್ಞಾನಿಕ ಕ್ರಾಂತಿಯೋ ಅಥವಾ ಬರಿ ಕಲ್ಪನೆಗಳ ಭ್ರಾಂತಿಯೋ...
ಒಟ್ಟಿನಲ್ಲಿ 'ಅಮರ ಜೀವನ' ಲೇಖನಗಳು ಮಾನವ ಜೀವಿಯನ್ನು ಅಮರಗೊಳಿಸುವ ಸಲುವಾಗಿ ನಡೆಯುತ್ತಿರುವ
ಹೋರಾಟಗಳ ಪ್ರತಿಬಿಂಬವಾಗಿತ್ತು. ಅಮರತ್ವದ ಕುರಿತು ಅರಿಂದಮ್ ಚೌಧುರಿ ಅವರ 'ಚಿರಕಾಲ ಬಾಳುವ
ಆಕಾಂಕ್ಷೆ' ಸಂಪಾದಕೀಯ ಲೇಖನ ಅದ್ಭುತವಾಗಿ ಮೂಡಿಬಂದಿದೆ. ಸಾವಿನಿಂದಾಗಿಯೇ ಜೀವನಕ್ಕೆ ಮೌಲ್ಯ, ಘನತೆ
ಬಂದಿದೆ ಎನ್ನುವ ತೂಕಬದ್ಧ ವಿಮರ್ಶೆ ಹಿಡಿಸಿತು. ಅವರ ಅಭಿಪ್ರಾಯದಲ್ಲಿ ನೈಜತೆ, ಸತ್ಯಪರತೆ,
ನಿರಾಡಂಬರತೆ, ವಿವೇಕಯುತ ಜವಾಬ್ದಾರಿಯುತ ಚಿಂತನೆಗಳು ಕಾಣುತ್ತಿದೆ. ಅಮರತ್ವ ಕುರಿತು ಸಂಪಾದಕರ
ಅಭಿಪ್ರಾಯಕ್ಕೆ ನನ್ನ ಸಮ್ಮತಿ ಇದೆ. ರೇ ಕರ್ಜ್‌ವೇಲ್ ಅವರ ಸಂಶೋಧನಾತ್ಮಕ ಅಭಿಪ್ರಾಯಕ್ಕೆ ನಾವು
ಗೌರವಿಸುತ್ತೇವೆ, ಆದರೆ ಈ ಅಮರತ್ವ ಎನ್ನುವ ಸಿದ್ಧಾಂತವನ್ನು ಒಪ್ಪಲಾಗದು. ಅಮರತ್ವ-ಸಾಧನೆಗೆ,
ನೆನಪಿಗೆ ಮತ್ತು ಇತಿಹಾಸಕ್ಕೆ ಮಾತ್ರ ಸೀಮಿತವಾಗಿರಬೇಕು. ಅದೇ ಜಗದ ನಿಯಮ. ಆಗಲೇ ಅದಕ್ಕೆ ಬೆಲೆ. ಈ
ಬಾರಿಯ ಟಿಎಸ್‌ಐ ಸಂಚಿಕೆಯಲ್ಲಿ ಖ್ಯಾತ ವಿಜ್ಞಾನಿಗಳು, ದೊಡ್ಡ ಸಂಶೋಧಕರು ಅಮರತ್ವ ಕುರಿತು ತಮ್ಮ
ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಗಾಗಿ ಇಲ್ಲಿ ವಿಮರ್ಶೆ ಎನ್ನುವ ಪದ ಬೇಡ. ಅಪರಿಮಿತ ಓದುಗರ ಮುಂದೆ
ಟಿಎಸ್‌ಐ ಅಮರತ್ವ ವಿಷಯ ಕುರಿತ 'ಸಾರ್ವಜನಿಕ ಚರ್ಚೆಗೆ' ವೇದಿಕೆ ನಿರ್ಮಿಸಿಕೊಟ್ಟಿದೆ. ಅದಕ್ಕಾಗಿ
ಟಿಎಸ್‌ಐಗೆ 'ಹ್ಯಾಟ್ಸ್ ಆಫ್'.
ಹೆಚ್. ಆನಂದ್ ಕುಮಾರ್
ಚಿತ್ರದುರ್ಗ
ಭೂಮಿ ಭಾರ ಹೊರಲಾರದು
ಅಮರತ್ವ ಕುರಿತ ಅರಿಂದಮ್ ಚೌಧುರಿ ಅವರ ಸಂಪಾದಕೀಯ ಅದ್ಭುತವಾಗಿ ಮೂಡಿ
ಬಂದಿದೆ. ನಾವು ಅಮರರಾಗಲು ಹೊರಟಿದ್ದೇವೆಯೇ ಹೊರತು ಅದರ ಅಡ್ಡ ಪರಿಣಾಮಗಳ ಕುರಿತು ಆಲೋಚನೆ
ನಡೆಸಿಲ್ಲ. ನಾವು ಸಾವೇ ಇಲ್ಲದೆ ಬದುಕುವುದಾದರೆ ಜಗತ್ತು ಜನರಿಂದ ತುಂಬಿಹೋಗುವುದಿಲ್ಲವೇ? ಭೂಮಿಗೆ
ಆ ಭಾರ ಹೊರಲಾಗುವುದೇ? ಅದರಲ್ಲೂ ಶ್ರೀಮಂತರು ಮಾತ್ರ ಅಮರರಾಗಿ ಸುದೀರ್ಘ ಜೀವನ ನಡೆಸುವಂತಾಗುತ್ತದೆ.
ಬಡವರು ಮತ್ತೂ ಶೋಷಣೆಗೆ ಒಳಗಾಗುವುದರಲ್ಲಿ ಸಂಶಯವೇ ಇಲ್ಲ. ಅಲ್ಲದೆ ನಮ್ಮ ಗ್ರಹ ಅಮರರನ್ನು ಹೊರುವ
ಸಾಮರ್ಥ್ಯ ಕಳೆದುಕೊಳ್ಳುವುದರಿಂದ ಮತ್ತೊಂದು ಗ್ರಹವನ್ನು ಅರಸಿ ಹೊರಡಬೇಕಾಗುತ್ತದೆ. ಈ ಕಾರಣಕ್ಕೇ
ದಶಕಗಳಿಂದ ತೆರೆಮರೆಯಲ್ಲಿದ್ದ ಚಂದ್ರನಲ್ಲಿ ಈಗ ಇದ್ದಕ್ಕಿದಂತೆ ನೀರಿನ ಪಸೆ ತೋರುತ್ತಿದೆಯೇನೋ...
ಕೆ.ಎಸ್. ಯತೀಶ್
ಮಡಿಕೇರಿ
ಪ್ರಶಸ್ತಿ ಒಬಾಮ ಅವರಿಗಲ್ಲ...
ಥಾಮಸ್ ಫ್ರೀಡ್ಮನ್ ಅವರ 'ಅಮೆರಿಕ ಸೇನೆಗೆ ಸಂದ ಗೌರವ' ಲೇಖನ ಬರಾಕ್
ಒಬಾಮ ಅವರಿಗೆ ನೀಡಿರುವ ನೊಬೆಲ್ ಶಾಂತಿ ಪ್ರಶಸ್ತಿಯ ಪರಾಮರ್ಶೆಯಂತೆ ಮೂಡಿಬಂದಿದೆ. ಒಬಾಮ ಅಮೆರಿಕ
ಅಧ್ಯಕ್ಷ ಸ್ಥಾನಕ್ಕೆ ಏರಿ ಇನ್ನು ಕೆಲವೇ ದಿನಗಳು ಕಳೆದಿವೆ. ಅಷ್ಟರಲ್ಲೆ ಅವರಿಗೆ ವಿಶ್ವದ
ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ನೊಬೆಲ್ ಪ್ರಶಸ್ತಿ ಅದರಲ್ಲೂ ಶಾಂತಿ ಪುರಸ್ಕಾರ ನೀಡಿದ್ದು
ಅಪಾರ ಚರ್ಚೆಗೆ ಕಾರಣವಾಗಿದೆ. ಈ ಪ್ರಶಸ್ತಿ ನೀಡಿದ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯ ಸತ್ಯ
ನಿಷ್ಠೆಯತ್ತ ಜನ ಬೊಟ್ಟು ಮಾಡಿ ತೋರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾತ್ಮ ಗಾಂಧಿ ಅವರಂಥ
ಧೀಮಂತ ವ್ಯಕ್ತಿಗೇ ಸಿಗದ ನೊಬೆಲ್ ಪ್ರಶಸ್ತಿಗೆ ಒಬಾಮ ಅರ್ಹರೇ ಎಂಬ ಪ್ರಶ್ನೆ ಹುಟ್ಟಿದೆ.
ಮೇಧಾವಿಗಳಿಗೆ ನೀಡಿ ಗೌರವಿಸುವ ನೊಬೆಲ್ ಪ್ರಶಸ್ತಿ ಗಳಿಸುವಂತಹ ಯಾವುದೇ ಮಹತ್ತರ ಕಾರ್ಯ ಅಥವಾ
ಸಾಧನೆ ಒಬಾಮ ವ್ಯಕ್ತಿಗತವಾಗಿ ಮಾಡಿಲ್ಲ. ಹಾಗಾಗಿ ಈ ಪ್ರಶಸ್ತಿಯನ್ನು ಅವರ ವೈಯಕ್ತಿಕ ಸಾಧನೆಗೆ
ನೀಡುವುದು ಸೂಕ್ತವೂ ಅಲ್ಲ. ಆದರೆ ಒಂದು ದೇಶದ ಅಧ್ಯಕ್ಷ ಕೇವಲ ಒಬ್ಬ ವ್ಯಕ್ತಿ ಅಲ್ಲ. ಆತ ದೇಶದ
ಸಹಸ್ರಾರು ಪ್ರಜೆಗಳನ್ನು ಪ್ರತಿನಿಧಿಸುತ್ತಾನೆ. ಆ ದೇಶದ ಸೇನೆ, ಕಾನೂನು, ವಿದೇಶಾಂಗ ನೀತಿ ಹೀಗೆ
ಎಲ್ಲವನ್ನೂ ಆತ ಬಿಂಬಿಸುತ್ತಾನೆ. ಆತನ ಮಾತು ದೇಶದ ಜನತೆಯ ಪ್ರತಿಧ್ವನಿ. ಆ ದೃಷ್ಟಿಯಲ್ಲಿ
ಪರಾಮರ್ಶಿಸಿ ನೋಡಿದಾಗ ಒಬಾಮಗೆ ನೀಡಿದ ಶಾಂತಿ ಪ್ರಶಸ್ತಿ ಸೂಕ್ತ ಎನ್ನಿಸುತ್ತದೆ.
ಜ್ಯೋತಿ ರಮೇಶ್
ಬೆಂಗಳೂರು
ಆಶಯ ನಿಜವಾಗಲಿ
ನೊಬೆಲ್ ಶಾಂತಿ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಒಬಾಮ ಭಾಷಣ
ಹೀಗಿರಲಿ ಎಂಬ ಥಾಮಸ್ ಫ್ರೀಡ್ಮನ್ (ವಿಶ್ವದರ್ಶನ ಅಂಕಣ) ಅವರ ಆಶಯ ಸೂಕ್ತವಾಗಿದೆ. ಜಗತ್ತಿನ ಕೆಲವೇ
ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ನೊಬೆಲ್ ಪ್ರಶಸ್ತಿ ಕೂಡ ಒಂದು. ಮಹತ್ತರ ಸಾಧನೆ ಮಾಡಿ ವಿಶ್ವದ
ಮೆಚ್ಚುಗೆ ಗಳಿಸಿದವರಿಗೆ ಮಾತ್ರ ಈ ಪ್ರಶಸ್ತಿ ಸಂದಬೇಕು. ಹಾಗಿರುವಾಗ ಮೊನ್ನೆಯಷ್ಟೇ ಅಮೆರಿಕ
ಅಧ್ಯಕ್ಷ ಸ್ಥಾನಕ್ಕೇರಿದ ಒಬಾಮ ಅವರಿಗೆ ಶಾಂತಿ ಸ್ಥಾಪನೆಗಾಗಿ ಈ ಪ್ರಶಸ್ತಿ ನೀಡುವುದು ಸರಿಯಲ್ಲ.
ಆದರೆ ಒಬಾಮ ತನ್ನ ಸೇನೆಗೆ ಈ ಪ್ರಶಸ್ತಿಯನ್ನು ಮುಡಿಪಾಗಿಸಿದರೆ ಅದು ಶ್ಲಾಘನೀಯ. ಅಮೆರಿಕ
ಅಧ್ಯಕ್ಷನ ಮನ ಒಲಿಸುವ ಸಲುವಾಗಿ ಈ ಪ್ರಶಸ್ತಿ ನೀಡಿದ್ದಾದರೆ ಅದು ನೊಬೆಲ್ ಪ್ರಶಸ್ತಿಗೆ ಮಾಡಿದ
ಅವಮಾನವೇ ಸರಿ. ಫ್ರೀಡ್ಮನ್ ಅವರು ತಿಳಿಸಿರುವಂತೆ ಒಬಾಮ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ
ಮಾತನಾಡುತ್ತಾರೆ ಎಂದು ನಾವು ಆಶಿಸಬಹುದಷ್ಟೆ. ಆದರೆ ಈ ಆಶಯ ಆಶಯವಾಗಿಯೇ ಉಳಿಯದಿರಲಿ.
ಹೆಚ್.ಆರ್. ಮನೋಹರ್
ಉಡುಪಿ
ಶಾಂತಿ ಭಕ್ಷಕ ಅಮೆರಿಕ
'ಭಯೋತ್ಪಾದಕ ರಕ್ಷಕ ಅಮೆರಿಕ' ಟಿಎಸ್‌ಐನ ಅಂಕಣ ಓದಿ ಅಚ್ಚರಿಯಾಯಿತು.
ಜಗತ್ತಿಗೇ ನೀತಿ ಪಾಠ ಹೇಳುತ್ತಿರುವ ಅಮೆರಿಕ ಮಾಡುತ್ತಿರುವುದಾದರೂ ಏನು? ಭಯೋತ್ಪಾದನೆ ನಿಗ್ರಹಿಸಿ,
ಉಗ್ರರನ್ನು ಸದೆ ಬಡಿಯಿರಿ ಎಂಬಿತ್ಯಾದಿ ಭಾಷಣ ಮಾಡುವ ಅಮೆರಿಕ ತನ್ನ ಮಡಿಲಿನಲ್ಲಿ ಪೊಸಾಡರಂಥ ಎಷ್ಟು
ಹಾವುಗಳಿಗೆ ಹಾಲುಣಿಸುತ್ತಿದೆಯೋ ಬಲ್ಲವರ‍್ಯಾರು? ಬೇರೆ ರಾಷ್ಟ್ರಗಳಲ್ಲಿ ಶಾಂತಿ ಸ್ಥಾಪಿಸಲು, ದೇಶ
ಕಟ್ಟಿ ಬೆಳೆಸಲು ಶ್ರಮಿಸುತ್ತಿರುವ ಅಮೆರಿಕ ಮೊದಲು ತನ್ನ ದೇಶದಲ್ಲಿನ ಹುಳುಕುಗಳತ್ತ ಗಮನ ಹರಿಸಲಿ.
ಜನರ, ವಿಶ್ವದ ಕಣ್ಣೊರೆಸಲು ಬೂಟಾಟಿಕೆಯ ವಿಚಾರಣೆ ನಡೆಸಿ ಲೂಯಿಸ್ ಪೊಸಾಡನಂತಾ ಕೊಲೆಗಡುಕನಿಗೆ
ನೆಮ್ಮದಿಯ ಆಶ್ರಯ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಮತ್ತು ಸಿಐಎಗೆ ನೈತಿಕತೆಯ ಅರಿವಾದರೂ ಇದೆಯೆ?
ವಿಶ್ವದ ಮುಂದೆ ಶಾಂತಿ ಸ್ಥಾಪನೆಯ ಪುರಸ್ಕಾರ ಪಡೆಯಲು ನಿಂತಿರುವ ಒಬಾಮ ಇದಕ್ಕೆ ಉತ್ತರಿಸಲಿ.
ಪ್ರಕಾಶ್ ಕುಮಾರ್
ಮೈಸೂರು
ಎಲ್ಲಾ ದೈವ ಲೀಲೆ!
ಭಾರತ ಮತ್ತು ಅಮೆರಿಕಗಳ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿಸುತ್ತಾ,
ದೇವರಿಗೆ ಮತ್ತು ಮೂಲಭೂತ ವ್ಯವಸ್ಥೆಗೆ ಭಾರತದಲ್ಲಿರುವ ಪ್ರಾಧಾನ್ಯತೆ ಕುರಿತ ಲೇಖನ (ಪ್ರಸೂನ್
ಮಜುಂದಾರ್) ವಿಮರ್ಶಾತ್ಮಕವಾಗಿ ಮೂಡಿ ಬಂದಿದೆ. ಭಾರತದಲ್ಲಿ ಅಭಿವೃದ್ಧಿ ಸೂಚಕವಾದ ಆರೋಗ್ಯ
ವ್ಯವಸ್ಥೆ, ಶಾಲಾ-ಕಾಲೇಜು, ಕಾರ್ಖಾನೆಗಳಿಗಿಂತ ಭಕ್ತಿಯನ್ನು ಸೂಚಿಸುವ ದೇವಾಲಯಗಳೇ ಹೆಚ್ಚು.
ಗಲ್ಲಿಗೊಂದರಂತೆ ಭಾರತದ ಮೂಲೆ ಮೂಲೆಯಲ್ಲೂ ಮಂದಿರ, ಮಸೀದಿ, ಚರ್ಚುಗಳು ಸ್ಥಾಪಿತವಾಗಿವೆ. ಬಹುಶಃ
'ಹುಟ್ಟಿಸಿದ ದೇವರು ಹುಲ್ಲು ಮೇಯಿಸನೆ?' 'ಅನಾಥೋ ದೇವ ರಕ್ಷತಿ' ಎನ್ನುವ ನಂಬಿಕೆಗಳು ಅಸಂಖ್ಯಾತ
ಪೂಜಾ ಸ್ಥಳ ಹುಟ್ಟಿಗೆ ಕಾರಣ ಆಗಿರಬಹುದು. ಈ ಮುಗ್ಧ (ಮೂಢ) ನಂಬಿಕೆಯನ್ನೇ ತಮ್ಮ
ಬಂಡವಾಳವನ್ನಾಗಿಸಿಕೊಳ್ಳುವ ರಾಜಕಾರಣಿಗಳ ಸಂಖ್ಯೆಯೂ ಇಲ್ಲಿ ಅಪಾರ. ಪೂಜಾ ಮಂದಿರಗಳನ್ನು ವೋಟ್‌ಬ್ಯಾಂಕ್
ಆಗಿ ಪರಿವರ್ತಿಸಿಕೊಂಡು, ತಮಗೆ ಅಧಿಕ ಮತಗಳನ್ನು ನೀಡುವ ಧರ್ಮ, ಜಾತಿ, ಮತದ ಅಭಿವೃದ್ಧಿಯತ್ತ
ಮಾತ್ರ ಗಮನವಹಿಸಿ ಪ್ರಜಾಪ್ರಭುತ್ವದ ಅರ್ಥಕ್ಕೆ ಕಳಂಕ ತರುವಲ್ಲಿ ನಮ್ಮ ರಾಜಕಾರಣಿಗಳು
ನಿರತರಾಗಿದ್ದಾರೆ. ರಾಜಕಾರಣಿಗಳ ಈ ಲೀಲೆ ನಿಲ್ಲುವವರೆಗೂ ಭಾರತದಿಂದ ಜಾತಿ ರಾಜಕೀಯವನ್ನು ಹೊರಹಾಕಲು
ಸಾಧ್ಯವೇ ಇಲ್ಲ.
ಮೀನಾಕ್ಷಿ ಎನ್. ಮೂರ್ತಿ
ಶಿವಮೊಗ್ಗ
ನೆರೆ ಬಂದು ಹೋದ ಮೇಲೆ
'ನೆರೆ ಬಂದ ನಾಡಿಗೆ ನೆರವಾಗದ ಆಡಳಿತ' (ಕೆ.ಆರ್. ಅರುಣ್ ಕುಮಾರ್)
ಲೇಖನ ರಾಜ್ಯದ ಆಡಳಿತ ಅವ್ಯವಸ್ಥೆಗೆ ಕನ್ನಡಿ ಹಿಡಿದಂತಿತ್ತು. ಯುದ್ಧ ಕಾಲೇ ಶಸ್ತ್ರಾಭ್ಯಾಸ ಎಂಬ
ಮಾತಿದೆ. ಆದರೆ ನಮ್ಮ ಸರ್ಕಾರಗಳು ಯುದ್ಧ ಸಂಧಿಸಿ ಶತ್ರು ಕುತ್ತಿಗೆಯ ಮೇಲೆ ಹತ್ತಿ ಕುಳಿತರೂ ತಮ್ಮ
ನಿದ್ದೆ ಇಂದಲೇ ಮೇಲೇಳುವುದಿಲ್ಲ! ರಾಜ್ಯ ಆಳುವ ನಿಜವಾದ ಸಾಮರ್ಥ್ಯ ಇರುವ ರಾಜಕಾರಣಿಗಳು
ಅಧಿಕಾರಕ್ಕೆ ಬರುವುದು ಅಪರೂಪ ಎಂದರೆ ತಪ್ಪಾಗಲಾರದು. ನೆರೆ, ಬರ, ಆರ್ಥಿಕ ಬಿಕ್ಕಟ್ಟುಗಳಂಥಾ
ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ನಮ್ಮಲ್ಲಿ ಎಷ್ಟು ಜನ ಮಂತ್ರಿ ಮಹೋದಯರಿಗಿದೆ?
ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾವಳಿಯಿಂದ ಜನ ಜೀವನ ಸಂಪೂರ್ಣ ಅಸ್ಥವ್ಯಸ್ತವಾಗಿದೆ. ಇಂಥಾ
ಸಂದರ್ಭದಲ್ಲಿ ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಸಂತ್ರಸ್ತರಿಗೆ ಹೇಗೆ ಸಾಂತ್ವನ ಹೇಳಬೇಕು ಎಂಬ
ಕನಿಷ್ಠ ಪರಿಜ್ಞಾನವಿಲ್ಲದೆ ಹೋದರೆ ಹೇಗೆ? ಸಂಗ್ರಹವಾಗಿರುವ ಹಣದಲ್ಲಿ ಎಷ್ಟು ಭಾಗ ನಿಜವಾದ
ಸಂತ್ರಸ್ತರ ಪಾಲಿಗೆ ದೊರಕುವುದೋ ದೇವರೇ ಬಲ್ಲ.
ಟಿ.ಜಿ. ಜೋಸೆಫ್
ಬೆಂಗಳೂರು
ಅಮರತ್ವದಿಂದ ಮಾನವೀಯತೆ ನಾಶ
ಟಿಎಸ್‌ಐನ
ಸಂಚಿಕೆ ತನ್ನದೇ ಆದ ವಿಶಿಷ್ಟತೆಯನ್ನು ಹೊತ್ತು ಓದುಗರಿಗೆ ಜ್ಞಾನ ಭಂಡಾರವಾಗಿ ಹೊಸ ಹೊಸ
ವಿಚಾರದೊಂದಿಗೆ ಹೊರಹೊಮ್ಮುತ್ತಿವೆ. ಮುಖಪುಟ ಲೇಖನ 'ಅಮರ
ಜೀವನ' ಕುರಿತಾದ
ಬರವಣಿಗೆಗಳು ಒಂದಕ್ಕಿಂತ ಒಂದು ಅದ್ಭುತವಾಗಿದ್ದವು. ಒಬ್ಬ ಮನುಷ್ಯ ಯಾವಾಗ ಶಿವನ ಪಾದ ಸೇರುತ್ತಾನೆ ಎನ್ನುವುದು ಯಾರಿಗೂ
ತಿಳಿದಿರುವುದಿಲ್ಲ.
ಹಾಗಿದ್ದರೂ ಮನುಷ್ಯ ಮಾನವೀಯತೆ ಮರೆತು ಬದುಕುತ್ತಿದ್ದಾನೆ. ಸಹಬಾಳ್ವೆ ಮರೆತು ಮನುಷ್ಯ ಮನುಷ್ಯನಿಗೆ ಶತ್ರುವಾಗಿ ಬೆಳೆಯುತ್ತಿದ್ದಾನೆ. ಇದಕ್ಕೆ ದಿನನಿತ್ಯ ನಮ್ಮ ಮುಂದೆ ಜರುಗುತ್ತಿರುವ ಘಟನೆಗಳೇ ಸಾಕ್ಷಿ. ಹೀಗಿರುವಾಗ ಮನುಷ್ಯ ಏನಾದರೂ ಅಮರತ್ವ ಪಡೆದುಕೊಂಡರೆ ಅಲ್ಪ ಸ್ವಲ್ಪ
ಇರುವಂತಹ ಮಾನವೀಯತೆ-ಮನುಷ್ಯತ್ವದ
ಗುಣಗಳೂ ಸಂಪೂರ್ಣ ನಾಶವಾಗುವ ಸಾಧ್ಯತೆ ಹೆಚ್ಚಿದೆ. ಅಮರತ್ವ ಚಿಕಿತ್ಸೆಯಿಂದಾಗಿ, ಅವಕಾಶವುಳ್ಳವರು ಅವಕಾಶ ವಂಚಿತರನ್ನು ಮತ್ತಷ್ಟು ಶೋಷಣೆ ಮಾಡಲು
ಸುಗಮವಾದ ಮಾರ್ಗ ಕಲ್ಪಿಸಿದಂತಾಗುತ್ತದೆ. ಹುಟ್ಟಿದ ಜೀವಿ ಸಾಯಲೇಬೇಕು ಎನ್ನುವುದು ಸೃಷ್ಟಿಯ ನಿಯಮ. ಅಮರತ್ವ ಯಾವ ಜೀವಿಗೂ ಶೋಭೆ ತರುವಂತದ್ದಲ್ಲ. ಮನುಷ್ಯನಲ್ಲಿ ಮಾನವೀಯತೆಯ ಗುಣಗಳು ನಾಶವಾದರೆ ಮಾನವೀಯತೆಗೆ ಅರ್ಥವಾದರೂ
ಎಲ್ಲಿ ಉಳಿಯುತ್ತದೆ?
ಒಟ್ಟಿನಲ್ಲಿ ಹೇಳುವುದಾದರೆ ಅಮರತ್ವ ಒಂದು ರೀತಿಯಲ್ಲಿ ಮನುಷ್ಯ ಕುಲದ ನಾಶಕ್ಕೆ ಕಾರಣವಾಗುತ್ತದೆ.
ಪುರುಷೋತ್ತಮ್ ನಾಯ್ಕ
ಚಳ್ಳಕೆರೆ ರೂ .
3,000 ಬಹುಮಾನ ಗೆದ್ದವರು
ವಾಸ್ತವ ದರ್ಶನ
ಪ್ರಸೂನ್ ಮಜುಂದಾರ್ ಅವರ 'ಎಲ್ಲವೂ ದೇವರ ಹೆಸರಿನಲ್ಲಿ' ಅಂಕಣ,
ಜಾತ್ಯತೀತ ಭಾರತ ತನ್ನ ಮಡಿಲಿನಲ್ಲಿ 2.4 ಮಿಲಿಯನ್ ಪೂಜಾಸ್ಥಳಗಳನ್ನು ಹೊಂದಿರುವುದರ ಬಗ್ಗೆ ತಿಳಿಸಿ
ಅಚ್ಚರಿ ಮೂಡಿಸಿದೆ. ನಮ್ಮಲ್ಲಿನ ಮೂಲ ಸೌಕರ್ಯ ವ್ಯವಸ್ಥೆಗೆ ಪೂಜಾಸ್ಥಳಗಳ ಸಂಖ್ಯೆಯನ್ನು ಹೋಲಿಸಿ
ನೋಡಿದಾಗ ಕಾರ್ಖಾನೆಗಳ ಸಂಖ್ಯೆ ಶೇ. 91, ಶಾಲಾ-ಕಾಲೇಜು ಶೇ. 62.5 ಮತ್ತು ಆರೋಗ್ಯ ಕೇಂದ್ರಗಳು
ಶೇ. 25ರಷ್ಟು ಮಾತ್ರವಿದೆ! ಕೌತುಕದ ವಿಷಯವೆಂದರೆ ನೆತ್ತಿಯ ಮೇಲೆ ಸೂರಿಲ್ಲದವರೂ ದೇವರಿಗೆ
ಗುಡಿಕಟ್ಟಲು ಓಡಾಡುತ್ತಾರೆ. ವಾಸ್ತವದ ಸಂಗತಿ ಎಂದರೆ ಜಗನ್ನಾಥ, ತಿರುಪತಿ, ಕಾಶಿ ವಿಶ್ವನಾಥ,
ವೈಷ್ಣೋದೇವಿ, ಶಿರಡಿ, ಚಾಮುಂಡಿ ದೇವಿ, ಪಾಟಿಯಾಲದ ಕಾಳಿ ಮಂದಿರ, ಅಮರನಾಥ, ಬದರಿನಾಥ ಮತ್ತು
ಕೇದಾರನಾಥ ಅಕ್ಷರಧಾಮ, ಬುದ್ಧಗಯಾ, ಧರ್ಮಶಾಲ, ದಿಲ್ವಾರ ದೇವಾಲಯಗಳು, ಸಿಖ್ ಮಂದಿರಗಳು ಮತ್ತು
ಅಜ್ಮೀರದ ಶರೀಫ್‌ಗಳು ಈಗಾಗಲೇ ದೇವರ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಪೊರೇಟ್ ವ್ಯವಹಾರ ತಾಣವಾಗಿ
ಬದಲಾಗಿವೆ. ವಿಷಾದವೆಂದರೆ ಸಾಮಾಜಿಕ ಅಭಿವೃದ್ಧಿಯ ಮಂತ್ರ ಪಠಿಸುತ್ತಿರುವ ಭಾರತದಲ್ಲಿ ಮೂಲಭೂತ
ಸೌಕರ್ಯ ವಂಚಿತರಿಗೆ ಸೌಲಭ್ಯ ಒದಗಿಸುವುದಕ್ಕಿಂತ ದೇವರಿಗೆ ಆಡಂಬರದ ಗುಡಿ ಕಟ್ಟಿಸುವುದಕ್ಕೇ ಮಹತ್ವ.
ಮಂದಿರ ಕಟ್ಟಿಸುವುದು ಖಂಡಿತ ಅಪರಾಧವಲ್ಲ. ಆದರೂ ಸಮಾಜ ಅಭಿವೃದ್ಧಿಯನ್ನು ಬದಿಗೊತ್ತಿ,
ಪೂಜಾಮಂದಿರಗಳನ್ನು ನಿರ್ಮಿಸುವುದು ಅತಿರೇಕದ ಕಾರ್ಯ.
ದಿಲ್ಬಗ್ ರೈ
ಚಂಡಿಗಢ
ಒಬಾಮ ಪ್ರಶಸ್ತಿಗೆ ಅನರ್ಹ
ಒಬಾಮ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿದು ನನಗೆ
ಆಶ್ಚರ್ಯವಾಯಿತು. ಈ ರೀತಿ ಅಭಿಪ್ರಾಯ ಹೊಂದಿರುವುದು ನಾನೊಬ್ಬಳೇ ಅಲ್ಲ; ಗೂಗಲ್‌ನಲ್ಲಿ ಒಬಾಮ ಮತ್ತು
ನೊಬೆಲ್ ಪ್ರಶಸ್ತಿ ಎಂದು ಹುಡುಕಿದರೆ ನಿಮಗೆ ಇದರ ವಿರುದ್ಧ ಮಾತನಾಡಿರುವವರ ಪುಟಗಟ್ಟಲೆ ಬರಹಗಳು
ಲಭ್ಯವಾಗುತ್ತದೆ. ಇದರಲ್ಲಿ ಕೇವಲ ವಿಮರ್ಶಕರು ಮಾತ್ರವಲ್ಲ, ಒಬಾಮ ಅಭಿಮಾನಿಗಳೂ ಇರುವುದು ಗಮನಾರ್ಹ.
ಅಲ್ಲದೆ ಕೆಲವರು ಒಬಾಮ ಆ ಪ್ರಶಸ್ತಿಯನ್ನು ಹಿಂದಿರುಗಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ 11 ವಾರದಲ್ಲೇ ಒಬಾಮ ಈ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು. ಅಷ್ಟು
ಅಲ್ಪಾವಧಿಯಲ್ಲಿ ಅವರಿಂದ ಯಾವ ರೀತಿಯ ಅಭಿವೃದ್ಧಿ ಪರ ಕಾರ್ಯಗಳನ್ನೂ ನಾವು ನೋಡಿರಲಿಲ್ಲ. ಒಬಾಮ
ಈವರೆಗೂ ಸಾಧಿಸಿರುವ ಮಹತ್ತರ ಕಾರ್ಯವೆಂದರೆ ಏಕಪಕ್ಷೀಯವಾಗಿದ್ದ ಅಮೆರಿಕದ ವಿದೇಶಾಂಗ ನೀತಿಯನ್ನು
ಬದಲಿಸಿ ಬೇರೆ ರಾಷ್ಟ್ರಗಳ ಮಾತಿಗೂ ಕಿವಿ ಒಡ್ಡುವಂತೆ ಮಾಡಿದ್ದು. ಆ ದೃಷ್ಟಿಯಲ್ಲಿ ನೋಡಿದಾಗ ಬುಷ್
ಅವರ ದುರಾಡಳಿತದಿಂದ ನೊಂದಿದ್ದ ವಿಶ್ವ ಒಬಾಮ ಅವರಲ್ಲಿ ಅಪರಿಮಿತ ವಿಶ್ವಾಸ ಹೊಂದಿದೆ ಎನ್ನುವುದು
ಸ್ಪಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಫ್ರೀಡ್ಮನ್ ಅವರ ಅಂಕಣ ನಿಜಕ್ಕೂ ಟೀಕಾ ಪ್ರಹಾರದಂತೆ
ಮೂಡಿಬಂದಿದೆ. ವಿಶ್ವಶಾಂತಿ ಕಾಪಾಡುವ ಸಲುವಾಗಿ ನಿಜ ಹೋರಾಟ ನಡೆಸಿದ ಅಮೆರಿಕದ ಶಾಂತಿ ಪಾಲಕರಿಗೆ
ಸಲ್ಲುತ್ತದೆ ಈ ಪ್ರಶಸ್ತಿ. ಒಬಾಮ ಈ ಪ್ರಶಸ್ತಿಯನ್ನು ಹಿಂದಿರುಗಿಸುವುದರಿಂದ ಆತ ಅತಿ ದೊಡ್ಡ
ಸಂಘಟನೆಯೊಂದರ ಮಹಾನ್ ನಾಯಕ ಎನ್ನುವುದನ್ನು ಸೂಚಿಸುತ್ತದೆ.
ಶೋಭಾ ದಾಸ್ ಗುಪ್ತ
ಕೋಲ್ಕತ್ತಾ
ಅಮರರಾಗುವ ಮುನ್ನ ಆಲೋಚಿಸಿ
ಅರಿಂದಮ್ ಚೌಧುರಿ ಅವರ ಸಂಪಾದಕೀಯ ಓದಿ ಮುಗಿಸಿದ ನಂತರ ನನ್ನಲ್ಲಿ
ಎರಡು ಪ್ರಶ್ನೆಗಳು ಕಾಡತೊಡಗಿತು. ಮೊದಲನೆಯದಾಗಿ ನನಗೆ ಮತ್ತು ನನ್ನ ಆತ್ಮೀಯರಿಗೆ ಅಮರತ್ವ ಬೇಕೆ?
ಮತ್ತು ಹಣಕಾಸಿಗೆ ಸಂಬಂಧಿಸಿದಂತೆ ನನಗೆ ಅಮರತ್ವ ಪಡೆಯಲು ಸಾಧ್ಯವಾಗುತ್ತದೆಯೇ? ನಮ್ಮ ದೇಶದಲ್ಲಿ
ನಾವು ಬಾಂಧವ್ಯಕ್ಕೆ ಹೆಚ್ಚು ಬೆಲೆ ನೀಡುತ್ತೇವೆ ನಿಜ, ಆದರೆ ಅಮರತ್ವದ ಅತ್ಯವಶ್ಯಕತೆ ಅದಕ್ಕೆ
ಖಂಡಿತಾ ಇಲ್ಲ. ಇನ್ನು ಹಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಾನು ಅದಕ್ಕಾಗಿ ಜೀವನದುದ್ದಕ್ಕೂ
ಕಷ್ಟ ಪಡಬೇಕಾಗುತ್ತದೆ. ಹಾಗಾದಲ್ಲಿ ಅಮರತ್ವ ಪಡೆದು ನಾನು ಸಾಧಿಸುವುದಾದರೂ ಏನು?
ಸಿ. ಮನೋಜ್
ಮಹಾರಾಷ್ಟ್ರ
|