User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಇಂದಿರಾ-ಮೊರಾರ್ಜಿ
 
ಸಾವಿನಲ್ಲೂ ರಾಜಕೀಯ ಹಣಾಹಣಿ
 

11 ವರ್ಷ ಮುನ್ನ ಹುತಾತ್ಮರಾಗುವ ಮೂಲಕ ಇಂದಿರಾ ಗಾಂಧಿ ಸಾವಿನಲ್ಲೂ ಮೊರಾರ್ಜಿ ಅವರನ್ನು ಹಿಂದಿಕ್ಕಿದರು!

 
ಯಶವಂತ್ ಮೆಹ್ತಾ  

ಖ್ಯಾತ ಪತ್ರಕರ್ತರು ಹಾಗೂ ಅಂಕಣಕಾರರು

೧೯೪೬ರ ನಂತರ ದೆಹಲಿ ಗದ್ದುಗೆ ಏರಿದವರಿಗೆ ಪ್ರಬಲ ಪೈಪೋಟಿ ನೀಡಿದ ಹಾಗೂ ಅವರ ನಿದ್ದೆಗೆಡಿಸಿದ ನಾಯಕರಲ್ಲಿ ಮೂವರು ಗುಜರಾತ್‌ನವರು. ಮೊದಲನೆಯವರು, ಸರ್ದಾರ್ ವಲ್ಲಭ ಭಾಯ್ ಪಟೇಲ್. ಪ್ರಧಾನಿಯಾಗಬೇಕೆಂಬ ಜವಾಹರ ಲಾಲ್ ನೆಹರೂ ಅವರಲ್ಲಿ ಅಭದ್ರತಾ ಭಾವನೆ ಮೂಡಿಸಿದ್ದರೆ ಅದು ಸರ್ದಾರ್ ವಲ್ಲಭ ಭಾಯ್ ಪಟೇಲ್. ಹಾಗೆಯೇ ಇತ್ತೀಚೆಗಿನ ದಿನಗಳಲ್ಲಿ ಪ್ರಧಾನಿ ಹುದ್ದೆಗೆ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಹೆಸರು ಕೇಳಿ ಬರುತ್ತಿದೆ. ಆದರೆ, ರಾಜಕೀಯ ವಿಶ್ಲೇಷಕರು ಹೇಳುವಂತೆ, ಮೋದಿ ಪ್ರಧಾನಿಯಾಗುವುದು ಅವರದೇ ಪಕ್ಷದ ಬಹುತೇಕ ಮಂದಿಗೆ ಇಷ್ಟವಿಲ್ಲ.

ಹಾಗೆ ನೋಡಿದರೆ, ರಾಜಕೀಯ ಜೀವನದುದ್ದಕ್ಕೂ ಕೇಂದ್ರಕ್ಕೆ ಕಂಟಕರಾಗಿದ್ದ ಗುಜರಾತ್‌ನ ನಾಯಕರೆಂದರೆ ಮೊರಾರ್ಜಿ ದೇಸಾಯಿಯವರು ಮಾತ್ರ. ಅವರು ಭಾರತೀಯ ರಾಜಕೀಯ ಇತಿಹಾಸದಲ್ಲಿ ನೆಹರು ಪುತ್ರಿ ಇಂದಿರಾ ಗಾಂಧಿ ಅವರ ರಾಜಕೀಯ ಶತ್ರುವೆಂದೇ ಚಿರಪರಿಚಿತ. ಒಮ್ಮೆ 'ಉಕ್ಕಿನ ಮಹಿಳೆ' ಇಂದಿರಾ ಗಾಂಧಿ ಅವರನ್ನೇ ಬದಿಗೆ ಸರಿಸಿ, ಕೊಂಚ ಸಮಯವಾದರೂ, ಪ್ರಧಾನಿ ಹುದ್ದೆಯ ರುಚಿ ನೋಡಿದ ಹಠವಾದಿ ಮೊರಾರ್ಜಿ ದೇಸಾಯಿ ಅವರು.

ಮೊರಾರ್ಜಿ ದೇಸಾಯಿ- ಇಂದಿರಾ ಗಾಂಧಿ ಅವರ ಹಗೆತನ ಸಾರ್ವಜನಿಕವಾಗಿ ಪ್ರಕಟಗೊಂಡಿದ್ದು ೧೯೫೮ರಲ್ಲಿ. ದೇಬರ್ ಭಾಯ್ ಎಂದೇ ಚಿರಪರಿಚಿತರಾಗಿದ್ದ ಗುಜರಾತ್‌ನ ಸೌಮ್ಯ ಸ್ವಭಾವದ ರಾಜಕಾರಣಿ ಉಚ್ಚಂಗ್ ರೈ ದೇಬರ್ ಅವರನ್ನು ಕಡೆಗಣಿಸಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗುವುದರೊಂದಿಗೆ ಪ್ರಾರಂಭವಾದ ರಾಜಕೀಯ ಜಿದ್ದಾಜಿದ್ದು ಇಂದಿರಾ ಗಾಂಧಿ ಹತ್ಯೆಯ ಕ್ಷಣದವರೆಗೂ ಮುಂದುವರಿಯಿತು.

೧೮೯೬ ಫೆಬ್ರವರಿ ೨೯ರಂದು ಗುಜರಾತ್‌ನ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮೊರಾರ್ಜಿ ದೇಸಾಯಿ ತಮ್ಮ ೨೨ನೇ ವಯಸ್ಸಿನಲ್ಲಿಯೇ ಸಾರ್ವಜನಿಕ ಸೇವೆಯಲ್ಲಿ ವೃತ್ತಿಬದುಕು ಆರಂಭಿಸಿದರು. ವಿಪರ್ಯಾಸವೆಂದರೆ, ನರೇಂದ್ರ ಮೋದಿಗೆ ಇನ್ನಿಲ್ಲದ ರಾಜಕೀಯ ವರ್ಚಸ್ಸು ತಂದುಕೊಟ್ಟ ಗೋದ್ರಾ ಘಟನೆಯೇ ಮೊರಾರ್ಜಿ ದೇಸಾಯಿ ಅವರ ರಾಜಕೀಯ ಬದುಕಿಗೂ ನಾಂದಿ ಹಾಡಿತ್ತು! ಹೌದು, ೧೯೩೦ರಂದು ನಡೆದ ಗೋದ್ರಾ ಗಲಭೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು ಎಂಬ ಕಾರಣಕ್ಕೆ ಬ್ರಿಟಿಷ್ ಸರ್ಕಾರ ಮೊರಾರ್ಜಿ ದೇಸಾಯಿ ಅವರ ಮೇಲೆ ಒತ್ತಡ ಹೇರಿ ಡೆಪ್ಯೂಟಿ ಕಲೆಕ್ಟರ್ ಹುದ್ದೆಗೆ ರಾಜಿನಾಮೆ ನೀಡುವಂತೆ ಮಾಡಿತ್ತು. ನಂತರ ಮೊರಾರ್ಜಿ ದೇಸಾಯಿ ಅವರು ರಾಜಕೀಯಕ್ಕೆ ಕಾಲಿಟ್ಟರು. ೧೯೩೭ರಲ್ಲಿ ಬಾಂಬೆ ಪ್ರಾಂತ್ಯದ ವಿಧಾನ ಸಭೆಗೆ ಆಯ್ಕೆಯಾದ ಮೊರಾರ್ಜಿ ದೇಸಾಯಿ ಅವರನ್ನು ಮಂತ್ರಿಗಿರಿ ಅರಸಿಕೊಂಡು ಬಂದಿತ್ತು. ನಂತರ ಅವರು ಹಿಂತಿರುಗಿ ನೋಡಿದ್ದಿಲ್ಲ. ೧೯೪೬ರ ಚುನಾವಣೆಯಲ್ಲಿ ಎರಡನೇ ಬಾರಿ ಆಯ್ಕೆಯಾದ ಮೊರಾರ್ಜಿ ದೇಸಾಯಿ ಅವರು ಗೃಹಸಚಿವರಾಗಿ ಹಾಗೂ ೧೯೫೨ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ನೆಹರೂ ಸಂಪುಟದಲ್ಲಿ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. ಮೊರಾರ್ಜಿ ದೇಸಾಯಿ ಅವರ ವಿರೋಧದ ನಡುವೆಯೂ ೧೯೬೦ರಲ್ಲಿ ಬಾಂಬೆ ಸಂಸ್ಥಾನ ಭಾಷೆಯ ಆಧಾರದ ಮೇಲೆ ಇಬ್ಭಾಗವಾಯಿತು. ಇದು ಮೊರಾರ್ಜಿ ದೇಸಾಯಿ ಅವರ ನೈತಿಕ ಸೋಲು.

ಆದರೆ, ಅತ್ಯದ್ಭುತ ನಾಯಕತ್ವ ಗುಣ ಹೊಂದಿದ್ದ ಹಾಗೂ ಜನತೆಯ ನಾಡಿಮಿಡಿತ ಬಲ್ಲ ಜನನಾಯಕರಾಗಿದ್ದ ಮೊರಾರ್ಜಿ ರಾಜಕೀಯ ಪ್ರವೇಶಿಸಿದ ಅತ್ಯಲ್ಪ ವೇಳೆಯಲ್ಲಿಯೇ ಗುಜರಾತ್ ರಾಜ್ಯ ಕಾಂಗ್ರೆಸ್‌ನ ಸರ್ವೋಚ್ಛ ನಾಯಕರೆನಿಸಿಕೊಂಡರು. ಇಷ್ಟೆಲ್ಲಾ ಆತ್ಮವಿಶ್ವಾಸ ಸಂಪಾದಿಸಿಕೊಂಡ ಮೇಲೆ ದೇಶದ ಮಹತ್ವದ 'ಪ್ರಧಾನ ಮಂತ್ರಿ' ಹುದ್ದೆಯ ಮೇಲೆ ಕಣ್ಣಿಡಲಾಗದೇ ಇರಲಾದೀತೆ? ಅದೂ ನೆಹರೂ ನೇಪಥ್ಯಕ್ಕೆ ಸರಿವ ಹೊತ್ತಿನಲ್ಲಿ? ಮೊರಾರ್ಜಿ ಅವರ ಮನದಲ್ಲಿದ್ದ ಹಂಬಲ ಮೊದಲ ಬಾರಿಗೆ ಅಭಿವ್ಯಕ್ತವಾದದ್ದು ಅವರ ಅಮೆರಿಕ ಭೇಟಿಯಲ್ಲಿ. ಅವರ ಮನದಾಸೆಯ ಸುಳಿವು ದೊರೆತದ್ದೇ ತಡ ನೆಹರೂ ಪಾಳೆಯದಲ್ಲಿ ಎಲ್ಲಿಲ್ಲದ 'ಸಮರ ಸಿದ್ಧತೆ' ಕಂಡುಬಂತು. ನೆಹರೂ ನಂತರ ಪ್ರಧಾನಿ ಹುದ್ದೆಗೆ ಅವರ ಪುತ್ರಿ ಇಂದಿರಾ ಗಾಂಧಿ ಅವರನ್ನೇ ಆಯ್ಕೆ ಮಾಡುವ ಇರಾದೆ ಅವರ ಬೆಂಬಲಿಗರದ್ದಾಗಿತ್ತು. ಇವರೆಲ್ಲರ ಹುನ್ನಾರದ ಪ್ರಥಮ ಅಧ್ಯಾಯವೆಂಬಂತೆ ೧೯೬೩ರ ಜೂನ್‌ನಲ್ಲಿ ೬೦ ವರ್ಷ ಮೇಲ್ಪಟ್ಟ ಸಚಿವರು ತಾವಾಗಿಯೇ ರಾಜೀನಾಮೆ ನೀಡುವಂತೆ ಮಾಡಲಾಯಿತು. (ಇದನ್ನು 'ಕಾಮರಾಜ್ ಪ್ಲ್ಯಾನ್' ಎನ್ನುತ್ತಾರೆ). ಇದ್ಯಾವುದರ ಸುಳಿವಿಲ್ಲದ ಮೊರಾರ್ಜಿ ದೇಸಾಯಿ ಕೂಡ ಇನ್ನಿತರ ಸಚಿವರೊಂದಿಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆದರೆ, ಇದು ತಮ್ಮನ್ನು ಕೆಡವಲು ಇಂದಿರಾ ಪಾಳೆಯ ಸಿದ್ಧಪಡಿಸಿದ್ದ ಖೆಡ್ಡಾ ಎಂಬುದು ಅರ್ಥವಾಗುವುದರೊಳಗೆ ಕಾಲ ಮಿಂಚಿತ್ತು.

೧೯೬೪ ಮೇ ೨೭ರಂದು ನೆಹರೂ ಮರಣ ಹೊಂದಿದರು. ಗಾಯಗೊಂಡ ಹುಲಿಯಂತಾಗಿದ್ದ ಮೊರಾರ್ಜಿ ಈ ಅವಕಾಶವನ್ನು ಕೈಚೆಲ್ಲಲು ಸಿದ್ಧರಿರಲಿಲ್ಲ. ನೆಹರೂ ಮರಣ ಹೊಂದಿದ್ದೇ ಮೊರಾರ್ಜಿ ತಮ್ಮ ತಂತ್ರಗಳನ್ನು ಹೆಣೆಯತೊಡಗಿದರು. ಆದರೆ, ಪ್ರಧಾನಿಯಾಗಿದ್ದು ಮಾತ್ರ 'ಪುಣ್ಯಕೋಟಿ'ಯಂಥ ಲಾಲ್ ಬಹದ್ದೂರ್ ಶಾಸ್ತ್ರಿ! ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಅಕಾಲಿಕ ಮರಣದ ನಂತರ ತೆರವಾದ ಪ್ರಧಾನಿ ಹುದ್ದೆಗೆ ಮತ್ತೊಮ್ಮೆ ಸೂಕ್ತ ನಾಯಕನ ಹುಡುಕಾಟ ಪ್ರಾರಂಭವಾಯಿತು. ಆದರೆ ಪಕ್ಷದ ಆಂತರಿಕ ಚುನಾವಣೆಯಲ್ಲಿ ಇಂದಿರಾ ಗೆಲ್ಲುವುದರೊಂದಿಗೆ ಮತ್ತೊಂದು ಸೋಲು ಮೊರಾರ್ಜಿ ಅವರಿಗೆ ಕಾದು ಕುಳಿತಿತ್ತು.

ಅದು ಪ್ರಕ್ಷುಬ್ಧತೆಯ ಕಾಲ. ೧೯೬೭ರ ಚುನಾವಣೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲದಿಂದ ಸೊರಗಿತ್ತು. ಬಹುಮತ ಗಳಿಸಿಕೊಳ್ಳುವ ಆತುರದಲ್ಲಿ ಹಿರಿಯ ನಾಯಕರು ಮೊರಾರ್ಜಿ ದೇಸಾಯಿ ಅವರಿಗೆ ಪ್ರಧಾನಿ ಹುದ್ದೆಯ ಭರವಸೆಯನ್ನೂ ನೀಡಿದ್ದರು. ಬ್ಯಾಂಕುಗಳ ರಾಷ್ಟ್ರೀಕರಣ ಹಾಗೂ ಹಿಂದಿನ ದೊರೆಗಳಿಗೆ ನೀಡಲಾಗುತ್ತಿದ್ದ ರಾಯಧನದ ರದ್ದತಿ ಮುಂತಾದ ಜನಪ್ರಿಯ ಕಾನೂನು ಜಾರಿಗೆ ಬಂದದ್ದು ಆಗಲೇ. ಇವರೆಡಕ್ಕೂ ಮೊರಾರ್ಜಿ ಅವರ ವಿರೋಧವಿತ್ತು. ಇದರಿಂದ ಕೆರಳಿದ ಇಂದಿರಾ ೧೯೬೯ ಜುಲೈ ೧೬ರಂದು ಮೊರಾರ್ಜಿ ಅವರ ಬಳಿ ಇದ್ದ ಕೇಂದ್ರ ಹಣಕಾಸು ಖಾತೆಯನ್ನು ಹಿಂತೆಗೆದುಕೊಂಡರು. ಇದರ ಬೆನ್ನಲ್ಲೇ ಇಂದಿರಾ ೧೪ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದರು.

ತಾತ್ಕಾಲಿಕ ಹಿನ್ನಡೆ ಅನುಭವಿಸಿದ್ದರೂ ಮೊರಾರ್ಜಿ ಅವರ ಪ್ರಧಾನಿ ಹುದ್ದೆಯ ಕನಸು ಮುರುಟಿ ಹೋಗಿರಲಿಲ್ಲ. ೧೯೭೪ರಲ್ಲಿ ರಾಜಕೀಯ ಹಾಗೂ ಆರ್ಥಿಕ ಕಾರಣಗಳನ್ನು ಮುಂದೊಡ್ಡಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಮೇಲೆ ಪರಿಸ್ಥಿತಿಯನ್ನು ತಮ್ಮ ಪರವಾಗಿ ಬಳಸಿಕೊಳ್ಳುವಲ್ಲಿ ಮೊರಾರ್ಜಿ ಸಫಲರಾದರು. ದೇಶಾದ್ಯಂತ ಸೃಷ್ಟಿಯಾಗಿದ್ದ ಇಂದಿರಾ ವಿರೋಧಿ ಅಲೆ ಇಂದಿರಾ ಅವರ ಸೋಲಿನಲ್ಲಿ ಪರ್ಯಾವಸಾನಗೊಂಡಿತು. ನಂತರ ಜನತಾ ಪಕ್ಷದ ಸರ್ಕಾರವನ್ನು ರಚಿಸಿ ಕೊನೆಗೂ ಮೊರಾರ್ಜಿ ದೇಸಾಯಿ ಅವರು ಭಾರತದ ಪ್ರಧಾನಿಯಾದರು. ಆನಂತರ ಇಲ್ಲ ಸಲ್ಲದ ಅಪಾದನೆಗಳನ್ನು ಹೊರಿಸಿ ತಮ್ಮ ರಾಜಕೀಯ ವೈರಿ ಇಂದಿರಾ ಗಾಂಧಿ ಅವರನ್ನು ಗೋಳುಹೊಯ್ದುಕೊಂಡಿದ್ದೊಂದೇ ಮೊರಾರ್ಜಿ ಅವರ ಸಾಧನೆ. ಏಕೆಂದರೆ, ಅವರು ಪ್ರಧಾನಿಯಾದ ಎರಡೇ ವರ್ಷದಲ್ಲಿ ಜನತಾ ಪಕ್ಷ ಇಬ್ಭಾಗವಾಗಿ ೧೯೭೯ ಜುಲೈ ೧೫ರಂದು ಮೊರಾರ್ಜಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಆ ಕ್ಷಣದಿಂದಲೇ ಸಕ್ರಿಯ ರಾಜಕಾರಣಕ್ಕೆ ಮೊರಾರ್ಜಿ ವಿದಾಯ ಹೇಳಿದರು. ಅವರಿಬ್ಬರ ನಡುವಿನ ಪೈಪೋಟಿ ಅವರ ಸಾವಿನಲ್ಲೂ ಮುಂದುವರಿಯಿತು. ಮೊರಾರ್ಜಿ ಅವರು ೯೯ ವರ್ಷ ಬಾಳಿ ಬದುಕಿ ೧೯೯೫ ಏಪ್ರಿಲ್ ೧೧ರಂದು ಕೊನೆಯುಸಿರೆಳೆದರೆ, ಅದಕ್ಕೂ ಮುನ್ನ ೧೯೮೪ರಲ್ಲಿ ತಮ್ಮ ಅಂಗರಕ್ಷಕರಿಂದಲೇ ಹತ್ಯೆಗೀಡಾಗುವ ಮೂಲಕ ಇಂದಿರಾ ಅವರು ಸಾವಿನಲ್ಲೂ ಮೊರಾರ್ಜಿ ಅವರನ್ನು ಹಿಂದಿಕ್ಕಿದರು! ದೇಶದ ಒಳಿತಿಗೆ ಪ್ರಾಣ ನೀಡಿದ 'ಹುತಾತ್ಮ' ಪಟ್ಟ ಇಂದಿರಾ ಅವರಿಗೆ ಒದಗಿ ಬಂದರೆ, ಮೊರಾರ್ಜಿ ಅವರು ಪ್ರಥಮ ಕಾಂಗ್ರೇಸ್ಸೇತರ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಯೊಂದನ್ನೇ ನೆಚ್ಚಿಕೊಳ್ಳಬೇಕಾಯಿತು.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .