User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
 
ಪತ್ರ ಚರಿತ್ರೆ
ಇಂದಿರಾ ಗಾಂಧಿಗೆ ಭಿಂದ್ರನ್‌ವಾಲೆ ಪತ್ರ
 

ಕೆಲವರ ಪಾಲಿಗೆ ಪ್ರವಾದಿ, ಇನ್ನು ಕೆಲವರ ಪಾಲಿಗೆ ದ್ವೇಷದ ಹರಿಕಾರ. ಅದೇನಾದರೂ ಆತನೊಬ್ಬ ದಂತಕತೆ. ೧೯೮೪ ಜೂನ್ ೬ರಂದು ಅಕಾಲ್ ತಖ್ತ್ತ್‌ನ ಅವಶೇಷಗಳ ನಡುವೆ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಮೃತ ಶರೀರ ದೊರೆತಾಗ ಅವರ ಸಾವನ್ನು ನಂಬುವ ಸ್ಥಿತಿಯಲ್ಲಿ ಅವರ ಅನುಯಾಯಿಗಳು ಇರಲಿಲ್ಲ. ಭಿಂದ್ರನ್‌ವಾಲೆ ಮತ್ತೆ ಖಾಲಿಸ್ತಾನ ಚಳವಳಿಯ ಚುಕ್ಕಾಣಿ ಹಿಡಿಯುತ್ತಾರೆ ಎಂಬ ನಂಬಿಕೆ ಇತ್ತ್ತು. ಈ ಪತ್ರವನ್ನು ಭಿಂದ್ರನ್‌ವಾಲೆ ಬ್ಲೂ ಸ್ಟಾರ್ ಕಾರ್ಯಾಚರಣೆ ಮೊದಲು ಇಂದಿರಾ ಗಾಂಧಿ ಅವರಿಗೆ ಬರೆದಿದ್ದು.

೧೯೮೩ ಫೆಬ್ರುವರಿ ೧೯, ಅಮೃತಸರ

 

ರಾಜಕೀಯ ದೃಷ್ಟಿಯಲ್ಲಿ ಭಾರತದ ಪ್ರಮುಖ ಸೇವಕರಾದ, ಬೀಬಿ ಇಂದಿರಾಜೀ,

ನಿಮ್ಮ ಕಿವುಡು ಕಿವಿಗಳಿಗೆ ನನ್ನ ಆಲೋಚನೆಗಳನ್ನು ತಲುಪಿಸುತ್ತಿದ್ದೇನೆ. ಸಿಖ್ ಸಮುದಾಯದ ವಿರುದ್ಧ ನೀವು ತೋರುತ್ತಿರುವ ತಾರತಮ್ಯ ಹಾಗೂ ಅದರಿಂದ ಅವರ ಭಾವನೆಗಳಿಗಾದ ಘಾಸಿಯನ್ನು ನಿಮ್ಮ ಗಮನಕ್ಕೆ ತರುವುದು ನನ್ನ ಉದ್ದೇಶ. ಇದರಿಂದಾಗಿಯಾದರೂ ಬಳಕೆಯಾಗಿರುವ ಭಾಷೆಯ ಕಾಠಿಣ್ಯವನ್ನು ನಿಮ್ಮ ಕಿವುಡು ಕಿವಿ ಅರಿಯಲಿ. ನಿಮ್ಮ ಕಿವುಡುತನವನ್ನು ಹೋಗಲಾಡಿಸಲು ನಾನು ಈ ಪತ್ರದ ಮೂಲಕ ನನ್ನ ಭಾವನೆಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಬೇಕಿದೆ. ಹಾಗಾಗಿ ನೀವು ಈ ಪತ್ರವನ್ನು ಬಹಳ ಸಾವಧಾನದಿಂದ ಓದಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

ಹಿಂದೂಗಳೊಂದಿಗೆ ಗುರುತಿಸಿಕೊಂಡಿದ್ದ ಲಾಲಾ ಜಗತ್ ನಾರಾಯಣ್ ಅವರ ಸಾವಿನ ತನಿಖೆಯನ್ನು ಕೇವಲ ಮೂರೇ ದಿನಗಳಲ್ಲಿ ಪೂರ್ಣಗೊಳಿಸಲಾಗಿತ್ತು. ನನ್ನ ವಿರುದ್ಧ ಜಾರಿಯಾದ ಬಂಧನ ವಾರೆಂಟ್‌ಗಳೇ ಅದಕ್ಕೆ ಸಾಕ್ಷಿ. ಆದರೆ, ಸರ್ಕಾರಿ ಅಧಿಕಾರಿಗಳು ರಿಟ್ ಅರ್ಜಿ ಸಲ್ಲಿಸಿ, ನ್ಯಾಯಾಧೀಶರು ಸಿಖ್ ಧರ್ಮೀಯರು ಎಂಬ ಕಾರಣ ಮುಂದೊಡ್ಡಿ ಸಿಖ್ ಧರ್ಮ ಗುರುಗಳ ಸಾವಿನ ತನಿಖೆ, ಸಿಖ್ಖರ ಸಂಪತ್ತನ್ನು ಧ್ವಂಸ ಹಾಗೂ ಚಂದೋ ಕಲನ್‌ನಲ್ಲಿ ಮೂರು ಲಕ್ಷದಷ್ಟು ಸಿಖ್ಖರ ಸಂಪತ್ತನ್ನು ದೋಚಿದ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸಿದ್ದಾರೆ. ನನ್ನ ಪ್ರಕರಣವನ್ನು ಮಾತ್ರ ಹಿಂದೂ ಧರ್ಮೀಯ ನ್ಯಾಯಾಧೀಶರ ಕೈಗೆ ನೀಡಿದ್ದಾರೆ. ಇದು ನಿಮ್ಮ ಕಿವುಡುತನಕ್ಕೆ ಒಂದು ನಿದರ್ಶನವಷ್ಟೆ, ಏಕೆಂದರೆ ನನ್ನ ವಿಚಾರಣೆಯನ್ನು ಒಬ್ಬ ಹಿಂದೂ ನ್ಯಾಯಾಧೀಶನಿಗೆ ವಹಿಸಿಕೊಟ್ಟ ಕುರಿತು ಈವರೆಗೆ ಯಾವೊಬ್ಬ ಸಿಖ್‌ನೂ ತಕರಾರು ಎತ್ತಿಲ್ಲ.

ರೈಲೊಂದಕ್ಕೆ ಹಿಂದೂ ದೇವಾಲಯದ ನಾಮಕರಣ ಮಾಡಿದ್ದಕ್ಕಾಗಿ ಈವರೆಗೆ ಯಾವ ಹಿಂದೂವನ್ನೂ ಬಂಧಿಸಲಾಗಿಲ್ಲ. ಹಿಂದೂ ನಗರವೊಂದನ್ನು ಪವಿತ್ರವೆಂದು ಪರಿಗಣಿಸಿದ್ದಕ್ಕಾಗಿ, ಆ ನಗರಕ್ಕೆ ರೈಲು ನಿಲ್ದಾಣ ಪಡೆದಿದ್ದಕ್ಕಾಗಿ ಈವರೆಗೆ ಯಾವ ಹಿಂದೂವೂ ಜೈಲುವಾಸ ಅನುಭವಿಸಿಲ್ಲ. ಹಿಂದೂ ಸಂಕೇತದ ಉಳಿವಿಗಾಗಿ ಈವರೆಗೆ ಯಾವ ಹಿಂದೂ ಧರ್ಮೀಯನೂ ತ್ಯಾಗಕ್ಕೆ ಮುಂದಾಗಿಲ್ಲ. ಸ್ವಾತಂತ್ರ್ಯದ ನಂತರ ಹಿಂದೂಗಳು ಬಯಸಿದ್ದೆಲ್ಲಾ ಅವರು ಕೇಳದೆಯೇ ಪ್ರಾಪ್ತವಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಸ್ವಾತಂತ್ರ್ಯಾನಂತರ ಒಂದು ಲಕ್ಷಕ್ಕೂ ಹೆಚ್ಚು ಸಿಖ್ಖರನ್ನು ಬಂಧಿಸಲಾಗಿದೆ. ಪಂಜಾಬಿ ಭಾಷೆ ಮಾತನಾಡುವವರಿಗೆಂದೇ ಪ್ರತ್ಯೇಕ ರಾಜ್ಯ ಕೇಳಿದ ತಪ್ಪಿಗೆ, ಸ್ವರ್ಣ ಮಂದಿರದಲ್ಲಿ ಟ್ರಾನ್ಸ್‌ಮೀಟರ್ ಅಳವಡಿಸಿದ ತಪ್ಪಿಗೆ, ಪ್ರತ್ಯೇಕ ರಾಷ್ಟ್ರದ ಸ್ಥಾನದ ಬೇಡಿಕೆ ಇಟ್ಟಿದ್ದಕ್ಕೆ, ಅಮೃತಸರವನ್ನು ಪವಿತ್ರ ನಗರ ಎಂದು ಪರಿಗಣಿಸಿದ್ದಕ್ಕೆ ಹಾಗೂ ಸಿಖ್ ಸಂಕೇತಗಳನ್ನು ಉಳಿಸಿಕೊಳ್ಳುವ ಇರಾದೆ ತೋರಿದ್ದಕ್ಕೆ ಹೀಗೆ ಪ್ರತಿಯೊಂದಕ್ಕೂ ಸಹಸ್ರಾರು ಸಿಖ್ಖರು ಪ್ರಾಣತ್ಯಾಗ ಮಾಡಿದ್ದಾರೆ. ಆಗಲೂ ನಿಮ್ಮ ಕಿವುಡು ಕಿವಿಗೆ ಏನೂ ಕೇಳಿಸಲಿಲ್ಲ.

ಸಿಖ್ಖರು ತಮ್ಮ ಮೇಲಾಗುವ ದೌರ್ಜನ್ಯಗಳನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದಾರೆ. ಅವರ ಸಹನೆ ಹೇಡಿತನವಲ್ಲ. ಸಹನೆ ಮೀರಿದಾಗ ಸಶಸ್ತ್ರ ಹೋರಾಟಕ್ಕಿಳಿಯುವುದೂ ಸಿಖ್ಖರಿಗೆ ಗೊತ್ತಿದೆ. ಈ ಕುರಿತು ಗುರು ಗೋವಿಂದ ಸಿಂಗ್ ಜಿ ಅವರೇ ಹೇಳುವಂತೆ- ಶಾಂತಿಯುತ ಪರಿಹಾರದ ಎಲ್ಲಾ ದಾರಿಗಳೂ ಮುಚ್ಚಿ ಹೋದಾಗ ಶಸ್ತ್ರಗಳ ಮೊರೆ ಹೋಗುವುದು ಅನಿವಾರ್ಯ. ಅದಕ್ಕೆ ಧರ್ಮದ ಸಮ್ಮತಿಯೂ ಇದೆ (ಜಾಫರ್‌ನಾಮ).

ಆದರೆ ನಾವು ಈವರೆಗೆ ಅಂಥ ದುಸ್ಸಾಹಸಕ್ಕೆ ಕೈ ಹಾಕಿಲ್ಲ. ಆದರೆ ಅಧಿಕಾರದ ಅಮಲು ತಲೆಗೇರಿ ಸಿಖ್ಖರ ವಿರುದ್ಧ ಇದೇ ರೀತಿಯ ಅನ್ಯಾಯಗಳನ್ನು ಮುಂದುವರಿಸಿದರೆ ನಾವದನ್ನು ಸಹಿಸುವುದಿಲ್ಲ. ಸಹಿಸುವುದೆಲ್ಲಾ ಸಹಿಸಿಯಾಗಿದೆ. ನಮ್ಮ ಕೋರಿಕೆಗಳನ್ನು ಸಮ್ಮತಿಸುವಂತೆ ಸರ್ಕಾರಕ್ಕೆ ಅಹವಾಲು ಸಲ್ಲಿಸುವ ಸಂದರ್ಭದಲ್ಲೆಲ್ಲಾ ನಾವು, ಹಿಂದೂ ಧರ್ಮೀಯ ತನ್ನ ಧಾರ್ಮಿಕ ಸಂಕೇತಗಳ ಕುರಿತು ಖಚಿತ ನಿಲುವು ಹೊಂದಿರಬೇಕು ಎಂಬುದನ್ನು ಸಾರಿ ಹೇಳುತ್ತಿದ್ದೇವೆ. ಅಂಥ ಧರ್ಮಬೀರು ನಮ್ಮ ಸಹೋದರನಿದ್ದಂತೆ. ಅಂತಯೇ ಒಬ್ಬ ಸಿಖ್ ಹಾಗೂ ಮುಸ್ಲಿಂ ತಂತಮ್ಮ ಧಾರ್ಮಿಕ ಸಂಕೇತಗಳ ಕುರಿತು ಗೌರವ ಹಾಗೂ ಸೂಕ್ತ ಜ್ಞಾನ ಹೊಂದಿರಬೇಕು. ನಾವು ಹೇಳುತ್ತಿರುವುದೂ ಅದನ್ನೇ. ಹೀಗೆ ನಿಷ್ಠುರವಾಗಿ ಹೇಳುವ ವ್ಯಕ್ತಿ ನಿಮ್ಮ ದೃಷ್ಟಿಯಲ್ಲಿ ಉಗ್ರವಾದಿ. ಅಲ್ಲವೇ?

ಅಧಿಕಾರದ ಹಮ್ಮಿನಲ್ಲಿ ಸಿಖ್‌ರನ್ನು ನಾಶಗೊಳಿಸಲು ಹೊರಟವರೆಲ್ಲಾ ಇತಿಹಾಸ ಕಸದಬುಟ್ಟಿ ಸೇರಿದ್ದಾರೆ. ನೀವು ಹೀಗೆಯೇ ನಿಮ್ಮ ಅಮಾನವೀಯ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಮುಂದುವರಿಸಿಕೊಂಡು ಹೋಗಿದ್ದಾದರೆ ಮುಂದೆ ನಿಮಗೂ ಅದೇ ಅಂತ್ಯ ಪ್ರಾಪ್ತವಾಗುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಅಧಿಕಾರ ಮತ್ತು ಸಂಪತ್ತು ಎರಡೂ ಯಾರ ಬಳಿಯೂ ಶಾಶ್ವತವಾಗಿ ಉಳಿಯುವುದಿಲ್ಲ.

ಸಿಖ್ ಯುವತಿಯರನ್ನು ಬೆತ್ತಲೆಗೊಳಿಸಿ ಜನ್ಮ ನೀಡಿದ ತಂದೆಯೊಂದಿಗೇ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸುವುದು, ಸಿಖ್‌ರ ಬಾಯಿಗೆ ತಂಬಾಕು ತುರುಕುವುದು, ಅತನ ಬಾಯಿಯಲ್ಲಿ ಉಗಿಯುವುದು, ತೊಡೆಯ ಮೇಲೆ ಗಾಯ ಮಾಡಿ, ಆ ಗಾಯದ ಮೇಲೆ ಉಪ್ಪು ಸುರಿಯುವುದು, ಸಿಖ್ಖರ ಮನೆಯನ್ನು ಬೆಂಕಿಗೆ ಆಹುತಿಮಾಡುವುದು, ಸಿಖ್ ಯುವತಿಯರ ಮೇಲೆ ಸುಳ್ಳು ಆರೋಪ ಹೊರೆಸುವುದು, ಸಿಖ್ ವಿದ್ಯಾರ್ಥಿಗಳನ್ನು ಬಂಧಿಸುವುದು, ನಕಲಿ ಎನ್‌ಕೌಂಟರ್‌ಗಳ ಹೆಸರಿನಲ್ಲಿ ಅವರನ್ನು ಕೊಲ್ಲುವುದು ಮತ್ತು ಗುರು ಗ್ರಂಥ ಸಾಹಿಬ್ ಜಿಗೆ ಅಪಮಾನಗೈದವರನ್ನು ರಕ್ಷಿಸುವುದು... ಇವು ಉದಾಹರಣೆಗಳಷ್ಟೇ.

ಇಲ್ಲಿ ಎಲ್ಲವನ್ನೂ ಸಂಕ್ಷಿಪ್ತವಾಗಿ ತಿಳಿಸಲಾಗಿದೆ. ಸೂಕ್ತ ಸಮಯ ಬಂದಾಗ ನಾನು ನಿಮಗೆ ಸಿಖ್‌ರ ಮೇಲೆ ನಡೆಯುತ್ತಿರುವ ಸಕಲ ದೌರ್ಜನ್ಯಗಳ ಕುರಿತು ಸುದೀರ್ಘ ಮಾಹಿತಿ ನೀಡುತ್ತೇನೆ.

ಜರ್ನೈಲ್ ಸಿಂಗ್ ಖಾಲ್ಸಾ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .