|
| ಅರಿಂದಮ್ ಚೌಧುರಿ, |
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್
|
ಕಳೆದ ಹಲವು ವರ್ಷಗಳಲ್ಲಿ ನಾನು ನಡೆದು ಬಂದ
ಹಾದಿಯಲ್ಲಿ ನಿಂತು ಹಿಂತಿರುಗಿ ನೋಡಿದಾಗ, ಆರಂಭಕ್ಕೂ ಇಂದಿಗೂ ಅಜಗಜಾಂತರ
ಕಂಡುಬರುತ್ತಿದೆ. ನನ್ನ ವೃತ್ತಿ ಜೀವನವನ್ನು ಆರಂಭಿಸಿದಾಗ ಒಬ್ಬ
ಅತ್ಯುತ್ತಮ ಶಿಕ್ಷಕನಾಗಬೇಕು ಎನ್ನುವುದು ನನ್ನ ಗುರಿಯಾಗಿತ್ತು. ಅದೂ
ನಾಯಕತ್ವ ಮತ್ತು ಸ್ಫೂರ್ತಿಯ ಗುಣಗಳನ್ನು ಬೇರೆ ಜೀವಿಗಳಲ್ಲಿ
ತುಂಬಿಸುವಂತಹ ಒಬ್ಬ ಅತ್ಯುತ್ತಮ `ಮ್ಯಾನೇಜ್‌ಮೆಂಟ್' ಶಿಕ್ಷಕ. ಆದರೆ,
ನನ್ನ ತಂದೆಯವರ ಜೊತೆಯಾಗಿ `ದ ಗ್ರೇಟ್ ಇಂಡಿಯನ್ ಡ್ರೀಮ್' ಪುಸ್ತಕ ಬರೆದ
ನಂತರದ ದಿನಗಳಲ್ಲಿ ಮ್ಯಾನೇಜ್‌ಮೆಂಟ್ ವಿಷಯದ ಕುರಿತು ನಾನು ಬರೆದದ್ದು
ಬಹಳ ಕಡಿಮೆ. ಅದರಲ್ಲಂತೂ `ದ ಸಂಡೆ ಇಂಡಿಯನ್' ಆರಂಭವಾದ ಮೇಲೆ ವಾಣಿಜ್ಯ,
ರಾಜಕೀಯ, ಸಿನೆಮಾ, ಕ್ರೀಡೆ... ಹೀಗೆ ಬೇರೆ ವಿಷಯಗಳ ಕುರಿತೇ ಹೆಚ್ಚು
ಬರವಣಿಗೆ ಮಾಡಿದ್ದೇನೆ. ಈ ಬಾರಿ ನನ್ನ ಅಚ್ಚುಮೆಚ್ಚಿನ ವಿಷಯ ಮ್ಯಾನೇಜ್‌ಮೆಂಟ್
ಕುರಿತು ಸಂಪಾದಕೀಯ ಬರೆಯಬೇಕು ಎಂಬ ನಿರ್ಧಾರಕ್ಕೆ ಬಂದೆ. ಅದಕ್ಕೆ ಒಂದು
ಬಲವಾದ ಕಾರಣ ಕೂಡ ಇದೆ. ನಮ್ಮ ವ್ಯವಸ್ಥೆಗಳ ಮೇಲೆ ಕಣ್ಣು ಹಾಯಿಸಿದ ಮೇಲೆ
ನನಗನಿಸಿದ್ದು, ವೈಯಕ್ತಿಕ ನೆಲೆಯಲ್ಲಿ ಬದಲಾವಣೆಯಾದಲ್ಲಿ ಮಾತ್ರ
ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ. ಏಕೆಂದರೆ ನನ್ನ ದೃಷ್ಟಿಯಲ್ಲಿ
ಪ್ರತಿಯೊಬ್ಬ ಮನುಷ್ಯನೂ ಏನು ಬೇಕಾದರೂ ಸಾಧಿಸಬಹುದು. ಪ್ರತಿಯೊಬ್ಬ
ಮನುಷ್ಯ ಕೂಡ ವಿವಿಧ ಹಂತದಲ್ಲಿರುವ ವಜ್ರದಂತೆ. ಆ ಪೈಕಿ ಹಲವು ಬೆಳಕಿಗೆ
ಬಾರದ ವಜ್ರಗಳು. ಹಲವು ವಜ್ರಗಳನ್ನು ಸರಿಯಾದ ರೀತಿಯಲ್ಲಿ ತುಂಡರಿಸಿಲ್ಲ.
ಇನ್ನೂ ಕೆಲವನ್ನು ಹದವಾಗಿ ಸಾಣೆ ಹಿಡಿಯಬೇಕಿದೆ. ಕೆಲವು ವಜ್ರಗಳು ಫಳ, ಫಳ
ಹೊಳೆಯುವುದು ಬಾಕಿಯಿದೆ. ಕೆಲವರು ಹೊಳಪು ಕಳೆದುಕೊಂಡಿದ್ದಾರೆ. ಮತ್ತೆ
ಸಾಣೆ ಹಿಡಿದಲ್ಲಿ ಅವರು ಹೊಳೆಯಲಾರಂಭಿಸುತ್ತಾರೆ. ಆದರೆ, ಪ್ರತಿಯೊಬ್ಬರು
ವಜ್ರವೇ. ಮನುಷ್ಯರ ಸಾಮರ್ಥ್ಯದ ಬಗ್ಗೆ ನನಗೆ ಈ ನಂಬಿಕೆ ಸದಾ ಉಳಿದುಕೊಂಡು
ಬಂದಿದೆ.
ಒಂದು ವಜ್ರ ಅತ್ಯುತ್ತಮ ಎಂದು
ಪರಿಗಣಿಸಬೇಕಿದ್ದರೆ ಅದು ನಾಲ್ಕು ಅತ್ಯುತ್ತಮ ಗುಣ ಹೊಂದಿರಬೇಕು. ಆ ಪೈಕಿ
ಮೊದಲನೆಯದ್ದು, ಅದು ಎಷ್ಟು ಕ್ಯಾರೇಟ್ ವಜ್ರ ಎನ್ನುವುದು. ಮನುಷ್ಯನ
ಮಟ್ಟಿಗೆ ಹೇಳುವುದಾದರೆ ಆತ ಜೀವನದ ಬಗ್ಗೆ ಎಷ್ಟು ಆಸಕ್ತಿ
ಇಟ್ಟುಕೊಂಡಿದ್ದಾನೆ ಹಾಗೂ ಎಷ್ಟರ ಮಟ್ಟಿಗೆ ಸಕಾರಾತ್ಮಕ ಶಕ್ತಿ ಅವನಲ್ಲಿ
ಅಡಗಿದೆ ಎನ್ನುವುದು ಅತಿ ಮುಖ್ಯವಾಗುತ್ತದೆ. ಇದು ಎಷ್ಟು ಕ್ಯಾರೇಟ್‌ನ
ವಜ್ರ ಎನ್ನುವುದಕ್ಕೆ ಪರ್ಯಾಯ. ಯಾವುದೇ ಯಶಸ್ವಿ ವ್ಯಕ್ತಿಯನ್ನು
ಉದಾಹರಣೆಯಾಗಿ ತೆಗೆದುಕೊಳ್ಳಿ. ಅವರಲ್ಲಿ ಅತಿಯಾದ ಜೀವನಾಸಕ್ತಿ ಮತ್ತು
ಸಕಾರಾತ್ಮಕ ಶಕ್ತಿ ತುಡಿಯುತ್ತಿರುತ್ತದೆ. ಬಡವರ ಜೀವನ ಬೆಳಗಬೇಕು ಎನ್ನುವ
ಜೀವನಾಸಕ್ತಿಯಿದ್ದ ಕಾರಣದಿಂದಲೇ ಹೊರದೇಶದಿಂದ ಬಂದರೂ, ಭಾರತದ ಅತ್ಯಂತ
ಕೊಳಕು ನಗರದಲ್ಲಿ ಬಡಜನರ ಪಾಲಿಗೆ ಮದರ್ ಥೆರೇಸಾ ಬೆಳಕಾಗಿ ಮೂಡಿದ್ದು.
ಸಬೀರ್ ಭಾಟಿಯ ಏನೂ ಆಗದೇ ಇದ್ದ ಸಂದರ್ಭದಲ್ಲಿ ಕೂಡ ಸಕಾರಾತ್ಮಕ
ಶಕ್ತಿಯಿಂದ ತುಡಿಯುತ್ತ, ಬಹುದೊಡ್ಡ ಕನಸು ಕಾಣುತ್ತಿದ್ದರು ಎನ್ನುತ್ತಾರೆ
ಅವರ ಸ್ನೇಹಿತರು. ಆ ಗುಣವೇ ಅವರು ಮುಂದೊಂದು ದಿನ ಹಾಟ್‌ಮೇಲ್ ಅನ್ವೇಷಣೆ
ಮಾಡಲು ಪ್ರೇರೇಪಿಸಿತು.
ಅತ್ಯುತ್ತಮ ವಜ್ರದ ಮತ್ತೊಂದು ಗುಣ
ನಿರ್ಧರಿಸುವುದು ಅದರ ಬಣ್ಣ. ಮಾನವನಲ್ಲಿ ಈ ಗುಣಕ್ಕೆ ಪರ್ಯಾಯ ಅವನ ಚರ್ಮದ
ಬಣ್ಣವಲ್ಲ. ಬದಲಾಗಿ ಅವನ ವ್ಯಕ್ತಿತ್ವ ಹಾಗೂ ನಾಜೂಕುತನ. ಯಶಸ್ವಿಯಾದ
ಪ್ರತಿಯೊಬ್ಬ ವ್ಯಕ್ತಿ ಕೂಡ ಅಮೋಘ ವ್ಯಕ್ತಿತ್ವ ಹೊಂದಿರುತ್ತಾನೆ. ಒಬ್ಬ
ವ್ಯಕ್ತಿ ಏನನ್ನು ಹೇಳುತ್ತಾನೆ ಹಾಗೂ ಹೇಗೆ ನಡೆದುಕೊಳ್ಳುತ್ತಾನೆ
ಎನ್ನುವುದು ಅವನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಅಂತಹ ವ್ಯಕ್ತಿತ್ವ
ರೂಪಗೊಳ್ಳಬೇಕಿದ್ದರೆ ಸ್ಪಷ್ಟವಾದ ನಿಲುವು ಹೊಂದಿರಬೇಕು. ದೈಹಿಕವಾಗಿ ನೀನು
ಹೇಗೆ ಕಾಣಿಸಿಕೊಳ್ಳುತ್ತಿಯಾ? ಎನ್ನುವುದರ ಜೊತೆಯಲ್ಲಿಯೇ ಮಾನಸಿಕವಾಗಿ
ನೀನು ಯಾವ ಹಂತಕ್ಕೆ ಬೆಳೆದಿದ್ದೀಯಾ ಎನ್ನುವುದು ಕೂಡ ಬಹಳ ಮುಖ್ಯ. ಅಂತಹ
ವ್ಯಕ್ತಿತ್ವಕ್ಕೆ ಪ್ರಣೊಯ್ ರಾಯ್ ಅತ್ಯಂತ ಸೂಕ್ತ ಉದಾಹರಣೆ ಎನ್ನಬಹುದು.
ಅವರನ್ನು ಕಂಡ ಕೂಡಲೇ ಯಾರಿಗೆ ಆದರೂ ಗೌರವ ಉಕ್ಕಿ ಬರುತ್ತದೆ. ಒಬ್ಬ
ಯಶಸ್ವಿ ಟೆಲಿವಿಷನ್ ರೂಪಕನಾಗಿ ಅವರು ಹೇಗೆ ದೇಹದ ಅಂಗಾಂಗಗಳನ್ನು ಚಲನೆ
ಮಾಡುತ್ತಾರೆ? ಹೇಗೆ ವಿವರಗಳನ್ನು ನೀಡುತ್ತಾರೆ ಎನ್ನುವುದನ್ನು
ಗಮನಿಸಿದಾಗ ಅದನ್ನು ವಿವರಿಸಲು ಮಾತುಗಳೇ ದೊರಕುವುದಿಲ್ಲ. ಟೆಲಿವಿಷನ್
ಜಗತ್ತಿನಲ್ಲಿ ಹಲವಾರು ವರ್ಷಗಳು ಕಳೆದಿದ್ದರೂ, ಇಂದಿಗೂ ಅವರೇ ಅತ್ಯಂತ
ಜನಪ್ರಿಯ ನಿರೂಪಕ. ಇಲ್ಲಿ ಹಲವಾರು ಯಶಸ್ವಿ ಹಾಗೂ ಪೈಪೋಟಿ ನೀಡುವ ಚಾನೆಲ್‌ಗಳು
ಬಂದಿದ್ದರೂ, ಪ್ರಣೋಯ್ ರಾಯ್ ಅವರನ್ನು ಮೀರಿಸಲು ಯಾರಿಗೂ ಸಾಧ್ಯವಾಗಿಲ್ಲ.
ಜೊತೆಗೆ ನಿನ್ನ ಜೊತೆಗಿರುವ ಮಾನವ ಸಂಪನ್ಮೂಲವನ್ನು ನೀನು ಹೇಗೆ
ನಿರ್ವಹಿಸುತ್ತಿಯಾ? ಎನ್ನುವುದು ನೀನು ಎಷ್ಟರ ಮಟ್ಟಿಗೆ ಯಶಸ್ವಿ
ವ್ಯಕ್ತಿತ್ವ ಹೊಂದಿದ್ದಿಯಾ ಎನ್ನುವುದನ್ನು ನಿರ್ಧರಿಸುತ್ತದೆ.
ಏಕಾಂಗಿಯಾಗಿಯೇ ಎಲ್ಲವನ್ನೂ ಸಾಧಿಸಿಬಿಡುತ್ತೇನೆ ಎಂದುಕೊಂಡು ಏಕೈಕ ಗುರಿ
ಹೊಂದಿರುವ ಗುಂಪಿನ ಜೊತೆ ಕೆಲಸ ಮಾಡಲು ಹಿಂಜರಿಯುವ ವ್ಯಕ್ತಿ
ಯಶಸ್ವಿಯಾಗುವುದಿಲ್ಲ. ಉದಾಹರಣೆಗೆ ನಾರಾಯಣ ಮೂರ್ತಿ. ಅವರು ಅವರ ಸುತ್ತಲೂ
ಅವರಂತಹ ಅತ್ಯುತ್ತಮ ಹಾಗೂ ಸಮರ್ಥ ವ್ಯಕ್ತಿಗಳನ್ನೇ ಹೊಂದಿದ್ದರು. ಅವರು
ಸುತ್ತಲಿನ ಗೆಳೆಯರನ್ನು ಸಂಪೂರ್ಣವಾಗಿ ನಂಬಿದರು. ಪರಿಣಾಮ ಅತ್ಯಂತ ಶಾಂತಿ
ಹಾಗೂ ತೃಪ್ತಿಯಿಂದ ತಮ್ಮ ಸಂಸ್ಥೆಯ ಜವಾಬ್ದಾರಿಯನ್ನು ನಂದನ್ ನಿಲೇಕಣಿ
ಅವರಿಗೆ ಒಪ್ಪಿಸಲು ಸಾಧ್ಯವಾಯಿತು. ನಂದನ್ ನಿಲೇಕಣಿ ಕೂಡ ಸಮಯ ಬಂದಾಗ
ಜವಾಬ್ದಾರಿಯನ್ನು ಕ್ರಿಸ್ ಗೋಪಾಲಕೃಷ್ಣ ಅವರಿಗೆ ಒಪ್ಪಿಸಿ ತಾವು
ಇನ್ಫೋಸಿಸ್‌ನಿಂದ ನಿರ್ಗಮಿಸಿದರು. ಅತ್ಯುತ್ತಮ ವ್ಯಕ್ತಿ ಹಾಗೂ ಮನಸ್ಸುಗಳು
ಹೇಗೆ ಒಂದು ಅತ್ಯುತ್ತಮ ಸಂಸ್ಥೆಯನ್ನು ರೂಪಿಸಲು ಸಾಧ್ಯ ಎನ್ನುವುದಕ್ಕೆ
ಇನ್ಫೋಸಿಸ್ ಜೀವಂತ ಉದಾಹರಣೆ.
ವಜ್ರದ ಮೂರನೇ ಅತ್ಯುತ್ತಮ ಗುಣವೆಂದರೆ,
ಅದನ್ನು ಯಾವ ರೀತಿಯಲ್ಲಿ ಪರಿಪೂರ್ಣವಾಗಿ ತುಂಡರಿಸಲಾಗಿದೆ ಎನ್ನುವುದು.
ಮನುಷ್ಯನ ಮಟ್ಟಿಗೆ ಹೇಳುವುದಾದರೆ ಆತ ಎಷ್ಟು ದೃಢ ಹಾಗೂ ಕಠಿಣ ಶ್ರಮ ಪಟ್ಟು
ತನ್ನ ಜೀವನವನ್ನು ರೂಪಿಸಿಕೊಳ್ಳುತ್ತಾನೆ ಎನ್ನುವುದು ಬಹಳ ಮುಖ್ಯ.
ಪ್ರತಿಯೊಬ್ಬ ಯಶಸ್ವಿ ಮನುಷ್ಯನ ಹಿಂದೆಯೂ ಮತ್ತೊಂದು ಯಶಸ್ವಿ ಮನುಷ್ಯ
ಇರುತ್ತಾನೆ. ಉದಾಹರಣೆಗೆ ಬಾಲಿವುಡ್‌ನ ಬಾದಶಹ ಶಾರುಖ್ ಖಾನ್ ಅವರನ್ನೇ
ತೆಗೆದುಕೊಳ್ಳೋಣ. ಅವರ ಜೊತೆ ಅಭಿನಯಿಸುವ ಪ್ರತಿಯೊಬ್ಬ ಸಹನಟ- ಸಹನಟಿ ಕೂಡ
ಅವರ ಬಗ್ಗೆ ಸಾಕಷ್ಟು ಗೌರವ ಹೊಂದಿದ್ದಾರೆ. ಮಾತ್ರವಲ್ಲ ಅವರ ವೃತ್ತಿಪರ
ಮನೋಭಾವವನ್ನೇ ತಾವೂ ಅಳವಡಿಸಿಕೊಂಡು ಅವರಂತೆಯೇ ಯಶಸ್ವಿಯಾಗಲು
ಪ್ರಯತ್ನಿಸುತ್ತಾರೆ. ಅವರ ಅಭಿನಯ, ಪರಿಶ್ರಮ, ಯಶಸ್ಸು... ಎಲ್ಲವೂ
ಉಳಿದವರಿಗೆ ಸ್ಫೂರ್ತಿದಾಯಕ. ಪ್ರತಿಭೆ ಎನ್ನುವುದು ಹೇರಳವಾಗಿರಬಹುದು.
ಆದರೆ, ಆ ಪ್ರತಿಭೆ ಪಕ್ಕಾ ಆಗಲು ಪರಿಶ್ರಮದ ಅಗತ್ಯವಿದೆ. ಅದು ಮಳೆಯಾಗಲೀ,
ಬಿಸಿಲಾಗಲೀ ಜೀವನದುದ್ದಕ್ಕೂ ಎಲ್ಲವನ್ನೂ ಮೀರಿ ನಿಲ್ಲುವುದು ಮುಖ್ಯ. ಅದೇ
ಶಾರುಖ್ ಹಾಗೂ ಉಳಿದವರ ನಡುವಿನ ವ್ಯತ್ಯಾಸ. ಶಾರುಖ್ ಇಂದು ಬಾದಶಹ
ಆಗಿರಬೇಕಾದರೆ ಅದೇ ಗುಣ ಕಾರಣ.
ಇನ್ನೂ ವಜ್ರದ ಅತ್ಯಂತ ಮುಖ್ಯ ಹಾಗೂ ಕೊನೆಯ
ಗುಣವೆಂದರೆ ಪರಿಶುದ್ಧತೆ. ಮನುಷ್ಯ ಕೂಡ ಇದಕ್ಕೆ ಹೊರತಾಗಿಲ್ಲ.
ತತ್ವ-ಸಿದ್ಧಾಂತ, ಜೀವನದ ಬಗೆಗಿನ ನಿಲುವು ಹಾಗೂ ದೇಶಭಕ್ತಿ... ಇವು
ಮನುಷ್ಯನ ಪರಿಶುದ್ಧತೆಯನ್ನು ನಿರ್ಧರಿಸುತ್ತವೆ. ತಾತ್ವಿಕವಾಗಿ ನೀವು ಯಾವ
ನೆಲೆಯಲ್ಲಿ ನಿಂತಿದ್ದೀರಿ? ನಿಮ್ಮ ಬದುಕಿನ ಬಗ್ಗೆ ಯಾವ ಸೈದ್ಧಾಂತಿಕ
ನಿಲುವು ನಿಮಗಿದೆ? ಯಾವ ಗುರಿಯಿಟ್ಟುಕೊಂಡಿದ್ದೀರಿ? ಕೊನೆಯದಾಗಿ ನಿಮ್ಮ
ದೇಶದ ಬಗ್ಗೆ ನಿಮಗೆ ಯಾವ ಸದ್ಭಾವನೆಯಿದೆ ಎನ್ನುವುದು ನಿಮ್ಮ
ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಈ ಅಂಶಗಳು ನಿಮಗೆ
ಸ್ಪಷ್ಟವಾಗಿದ್ದರೆ, ನಿಮ್ಮೊಳಗಿನ ವಜ್ರಾನ್ವೇಷಣೆಗೆ ಸಿದ್ಧರಾಗಿ!!
`ಡಿಸ್ಕವರ್ ದ ಡೈಮಂಡ್ ಇನ್ ಯೂ' ಇದು ಪ್ರೊಫೆಸರ್ ಅರಿಂದಮ್ ಚೌಧುರಿ ಅವರು
ಸದ್ಯದಲ್ಲೇ ಪ್ರಕಟಿಸಲಿರುವ ಪುಸ್ತಕ. ಈ ಸಂಪಾದಕೀಯ ಆ ಪುಸ್ತಕದ ಸಾರಾಂಶ.
ಪುಸ್ತಕದ ಬಗ್ಗೆ ಇನ್ನೂ ಹೆಚ್ಚಿನ ವಿವರ ಬೇಕು ಅಥವಾ ಸಂಪಾದಕೀಯದ ಬಗ್ಗೆ
ನಿಮ್ಮ ಅನಿಸಿಕೆಯೊಂದಿಗೆ DTDIY ಎಂದು ಟೈಪ್ ಮಾಡಿ 0-9818101234 ಮೊಬೈಲ್
ಸಂಖ್ಯೆಗೆ ನೇರವಾಗಿ ಎಸ್‌ಎಂಎಸ್ ಮಾಡಬಹುದು.
|