|
ವಿಜೇತನಾಗುತ್ತಾನೆಯೇ ವಾಯುಪುತ್ರ?
ಸೋದರಳಿಯ ಚಿರಂಜೀವಿ ಸರ್ಜಾ ರಂಗಪ್ರವೇಶಕ್ಕೆ ಅರ್ಜುನ್ ಸರ್ಜಾ ಈ ವಾರ ಅದ್ದೂರಿ ವೇದಿಕೆ ಹಾಕಿಕೊಟ್ಟಿದ್ದಾರೆ! ಹೌದು, 'ಅಂಬೇಡ್ಕರ್ ಭವನ'ದಲ್ಲಿ ಏರ್ಪಡಿಸಲಾಗಿದ್ದ ಚಿರಂಜೀವಿ ಸರ್ಜಾ ಅವರ ಚೊಚ್ಚಲ ಕನ್ನಡ ಚಿತ್ರ 'ವಾಯುಪುತ್ರ'ದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಘಟಾನುಘಟಿಗಳೆಲ್ಲ ಹಾಜರಿದ್ದರು. ಚಿತ್ರದ ನಿರ್ದೇಶಕರಾದ ಅರ್ಜುನ್ ಸಹೋದರ ಕಿಶೋರ್ ಸರ್ಜಾ ಅವರ ಅಕಾಲಿಕ ಮರಣದ ದುಃಖದ ನಡುವೆಯೂ ಚಿರಂಜೀವಿ ಅವರ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ರಂಗೇರಿಸಿತ್ತು. ಆಂದ್ರಿತಾ ರೇ- ಚಿರಂಜೀವಿ ತಾರಾಗಣದ 'ವಾಯುಪುತ್ರ' ಕನ್ನಡಕ್ಕೆ ಮತ್ತೊಬ್ಬ ಹೊಸ ನಟನನ್ನು ನೀಡುತ್ತದೆಯೇ ಅಥವಾ ಮತ್ತೊಬ್ಬ ಪ್ರತಿಭಾವಂತ ನೆರೆಯ ರಾಜ್ಯಕ್ಕೆ ಬಳುವಳಿಯಾಗುತ್ತಾನೆಯೇ ಕಾಲವೇ ಉತ್ತರಿಸಬೇಕು. ಕನ್ನಡ ಪ್ರೇಕ್ಷಕರಂತೂ ನಟ ಶಕ್ತಿ ಪ್ರಸಾದ್ ಪೀಳಿಗೆ ಕನ್ನಡದಲ್ಲೇ ಮುಂದುವರಿಯುವುದನ್ನು ಕಾಣಲು ಹಾತೊರೆಯುತ್ತಿದ್ದಾರೆ.
ಸಂಜನಾ ಸಂಭ್ರಮ
ನಟಿ ಸಂಜನಾಳ ಗಂಟಲು ಕೆಟ್ಟು ಹೋಗಿದೆ. ಅರೆರೆ! ಹಂದಿ ಜ್ವರ ಎಂಬ ಭಯ ಬೇಡ. 'ಶ್ಲೋಕ' ಚಿತ್ರಕ್ಕಾಗಿ ಸಕಲೇಶಪುರದ ಕಾಡುಗಳಲ್ಲಿ ಶೂಟಿಂಗ್ ಮುಗಿಸಿರೋ ಈ ಬೆಡಗಿ ಪದೇ ಪದೇ ಕಿಟಾರನೆ ಕಿರುಚಾಡಿದ್ದೇ ಗಂಟಲು ನೋವಿಗೆ ಕಾರಣ. ಕಾಡಿನಲ್ಲಿ ಸಂಜನಾ ಭಯ ಬೀಳುವಂತಹದ್ದು ಏನಿತ್ತು ಎಂದು ಅಚ್ಚರಿಯೇ? 'ಶ್ಲೋಕ' ಒಂದು ಹಾರರ್ ಚಿತ್ರ! ಚಿತ್ರೀಕರಣದ ಸಂದರ್ಭ ರಿಟೇಕ್‌ಗಳಿಗಾಗಿ ಪದೇ ಪದೇ ಕಿರುಚಾಡಿ ಈ ಬೆಡಗಿಯ ಗಂಟಲು ಒಣಗಿದೆ. 'ಕುಣಿಯೋಣ ಬಾರಾ' ಟಿವಿ ಕಾರ್ಯಕ್ರಮದ ತೀರ್ಪುಗಾರಳಾದ ಮೇಲೆ 'ಗಂಡ ಹೆಂಡತಿ'ಯ ಮಾದಕ ನಟಿ ಇಮೇಜ್ ಕಳೆದುಕೊಂಡ ಖುಷಿಯಲ್ಲಿರೋ ಸಂಜನಾಳ 'ಈ ಸಂಜೆ' ಚಿತ್ರ ಇನ್ನೂ ಬಿಡುಗಡೆಯಾಗಬೇಕಿದೆ. ಮತ್ತೊಂದು ಹೆಸರಿಡದ ಕನ್ನಡ ಚಿತ್ರ ಹಾಗೂ ಎರಡು ತೆಲುಗು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸಂಜನಾಳ ವೃತ್ತಿ ಜೀವನದ ಗ್ರಾಫ್ ಕೊನೆಗೂ ನೇರವಾಗುತ್ತಿದೆ. ಹಾಗೇ ತೆಲುಗು ನಟ ರಾಜ ನಮ್ ಹುಡುಗೀ ಹೃದಯ ಕದ್ದಿರೋದು ಸ್ಯಾಂಡಲ್‌ವುಡ್‌ನಲ್ಲಿ ಈಗ ಬಿಸಿಬಿಸಿ ಸುದ್ದಿ.
ರಾಣಿಯ ಗ್ರಹಗತಿ ಲೆಕ್ಕಾಚಾರ
ವೃತ್ತಿ ಜೀವನದ ಕರಾಳ ಅಧ್ಯಾಯ ಮುಂದುವರಿಯುವ ಭೀತಿ ರಾಣಿ ಮುಖರ್ಜಿಯ ಆತ್ಮವಿಶ್ವಾಸವನ್ನೆಲ್ಲಾ ನೆಲಕಚ್ಚಿಸಿದೆ. ರಾಣಿಯ ಹೊಸ ಚಿತ್ರ 'ದಿಲ್ ಬೋಲೆ ಹಡಿಪ್ಪಾ' ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಗೆಲುವು ಕೈಗೆಟಕುವುದೋ ಇಲ್ಲವೋ ಎನ್ನುವ ಹಿಂಜರಿಕೆಯಿಂದಾಗಿ ಈ ಬೆಡಗಿ ಗ್ರಹಗತಿಗಳ ಲೆಕ್ಕಚಾರದಲ್ಲಿ ತೊಡಗಿದ್ದಾಳೆ! ಚಿತ್ರದ ಭಿತ್ತಿಪತ್ರಗಳು ಮತ್ತು ಪ್ರಚಾರ ಸಾಕಷ್ಟು ಜನಾಕರ್ಷಣೆ ಮೂಡಿಸಿದ್ದರೂ, "ರಾಶಿ ಫಲದ ಪ್ರಕಾರ ಈಗ ತಕ್ಕ ಸಮಯವಲ್ಲ" ಎನ್ನುವ ರಾಣಿಯ ಗೋಗರೆತದಿಂದಾಗಿ ಬಿಡುಗಡೆಯನ್ನು ಮುಂದೂಡಲಾಗಿದೆ. ರಾಣಿಯ ರಾಜಯೋಗ ಬೇಗನೇ ಮರುಕಳಿಸಲಿ ಎನ್ನುವುದು ನಮ್ಮ ಆಶಯವೂ ಹೌದು.
ಜೆನ್ನಿ ಸಂಸಾರ ಆನಂದ ಸಾಗರ
ಮಾದಕ ನಟಿ ಜೆನ್ನಿಫರ್ ಲೋಪೆಜ್ ಕಂಪ್ಯೂಟರ್ ಪಕ್ಕನೂ ಸುಳಿಯಲ್ಲ! 40ರ ಪ್ರಾಯದ ಈ ಹಾಲಿವುಡ್ ಬೆಡಗಿಗೆ ಕಂಪ್ಯೂಟರ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲ ಮತ್ತು ಜ್ಞಾನ ಪಡೆಯಲೂ ಪ್ರಯತ್ನಿಸಿಲ್ಲ. ಒಟ್ಟಾರೆ ಈಕೆ ಕಂಪ್ಯೂಟರ್ ದ್ವೇಷಿ. ವಿವಾಹ ಮತ್ತು ತಾಯ್ತನದ ಬಳಿಕ ಜೆನ್ನಿ ಬಹಳಷ್ಟು ಬದಲಾಗಿದ್ದಾಳೆ. ಆದರೆ ಕತ್ತಲೆ ಕುರಿತ ಭಯ ಇನ್ನೂ ಬಿಟ್ಟಿಲ್ಲ. ಪತಿ ಮಾರ್ಕ್ ಆಂಟನಿ ಮತ್ತು ಅವಳಿ ಹಸುಗೂಸುಗಳೊಂದಿಗೆ ಜೆನ್ನಿಯದು ಸುಖ ಸಂಸಾರ. ಹಾಲಿವುಡ್ ಇಂದು ವಿಚ್ಛೇದನೆಗಳ ಹಾಲಾಹಲವಾಗಿರುವಾಗ ಜೆನ್ನಿಯ ಸಂಸಾರ ನೌಕೆ ಉಳಿದವರಿಗೆ ಆದರ್ಶಪ್ರಾಯ.
ಎನ್.ಕೆ ಸುಪ್ರಭಾ ಮತ್ತು ಸ್ಪೃಹಾ ಶ್ರೀವಾಸ್ತವ
|