User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಸಂಗೀತ: ಪ್ರತಿಭಟನೆಯ ಅಸ್ತ್ರ
 
 

ನಾದ ಮಾಧ್ಯಮದ ಕ್ರಾಂತಿ ಕಹಳೆ

ಸಂಗೀತದಲ್ಲೂ ಹಿಂಸೆ ಪ್ರವೇಶಿಸುವ ಮುನ್ನ ಜಗತ್ತು ಅದರ ಸಂದೇಶ ಅರಿಯಬೇಕು

ಯುನೈಟೆಡ್ ಏರ್‌ಲೈನ್ಸ್ ವಿಮಾನ ಯಾನದ ಸಂದರ್ಭ ಕೆನಡಾದ ಗಾಯಕ ಡೇವ್ ಕ್ಯಾರೋಲ್‌ನ ಗಿಟಾರ್ ಮುರಿದು ಹೋಯಿತು. ಆದರೆ ಮುರಿದ ಗಿಟಾರಿಗೆ ಪರಿಹಾರ ಹಣ ನೀಡಲು ಯುನೈಟೆಡ್ ಏರ್‌ಲೈನ್ಸ್ ನಿರಾಕರಿಸಿದ ಹಿನ್ನೆಲೆಯಲ್ಲಿ, ಕ್ಯಾರೋಲ್ 'ಯುನೈಟೆಡ್ ಬ್ರೇಕ್ಸ್ ಗಿಟಾರ್' ಎಂಬ ಹಾಡು ಕಟ್ಟಿ ಯು ಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ಆ ಹಾಡು ಅದೆಷ್ಟು ಜನಪ್ರಿಯವಾಯಿತೆಂದರೆ ಹತ್ತೇ ದಿನಗಳಲ್ಲಿ ನಾಲ್ಕು ಶತಕೋಟಿ ಕೇಳುಗರನ್ನು ಸೆಳೆದು, ಯುನೈಟೆಡ್‌ನ ಷೇರು ಬೆಲೆಯಲ್ಲಿ ಶೇ. 10ರಷ್ಟು ಅಂದರೆ 180 ದಶಲಕ್ಷ ಡಾಲರ್‌ಗಳಷ್ಟು ಇಳಿಕೆ ಉಂಟಾಗುವಂತೆ ಮಾಡಿತ್ತು.

ಪ್ರತಿಭಟನೆಯ ಈ ಹೊಸ 'ಸಂಗೀತಾಸ್ತ್ರ'ಕ್ಕೆ ತನ್ನದೇ ಆದ ಪರಂಪರೆ ಇದೆ.

1960ರಲ್ಲಿ 'ಬ್ಲಾಕ್ ಪವರ್ ಮೂವ್‌ಮೆಂಟ್'ನ ಸದಸ್ಯರು ಮತ್ತು ಪ್ರತಿಪಾದಕರು, ಜನಾಂಗೀಯ ಗೌರವ, ಸ್ವಾವಲಂಬನೆ ಮತ್ತು ಆರ್ಥಿಕ ಸಶಕ್ತೀಕರಣದಂಥ ವಿಷಯಗಳೆಡೆಗೆ ಜನರ ಗಮನ ಸೆಳೆಯಲು ರ‍್ಯಾಪ್ ಮತ್ತು ಹಿಪ್-ಹಾಪ್ ಸಂಗೀತವನ್ನು ಬಳಸಿಕೊಂಡರು. ಅದಕ್ಕೂ ಮುನ್ನ 1940ರಲ್ಲಿ ಹೆಚ್ಚುತ್ತಿದ್ದ ಬ್ರಿಟಿಷ್ ದಾಳಿಯನ್ನು ಖಂಡಿಸಲು ರಾಕ್-ಅಂಡ್-ರೋಲ್ ಸಂಗೀತವನ್ನು ಬಳಸಲಾಯಿತು. ಆಗ ಅದು ಯುವ ಪ್ರತಿಭಟನಾಕಾರರ ದನಿಯಾಗಿತ್ತು.

1950ರಲ್ಲಿ ಬ್ರೆಜಿಲ್‌ನ ಬೊಸಾ ನೋವಾ ಹಲವಾರು ಸ್ಥಳೀಯ ಸಮಸ್ಯೆಗಳತ್ತ ಗಮನ ಸೆಳೆಯಲು ತನ್ನ ಸಂಗೀತ ಬಳಸಿಕೊಂಡಿತ್ತು. ವಿಯೆಟ್ನಾಂ ಯುದ್ಧ ಸಂದರ್ಭದಲ್ಲಿ 'ಎಡ್ವಿನ್ ಸ್ಟಾರ‍್ಸ್ ವಾರ್', 'ಜಿಮ್ಮಿ ಹೆಡ್ರಿಕ್ಸ್ ಆಲ್ ಅಲಾಂಗ್ ದಿ ವಾಚ್‌ಟವರ್', 'ವಾರ‍್ಸ್ ಆಫ್ ಆರ‍್ಮಗೆಡಾನ್', 'ಜಿಮ್ಮಿ ಕ್ಲಿಫ್ಸ್ ವಿಯೆಟ್ನಾಂ'... ಮತ್ತಿತರ ಹಾಡುಗಳು ಶಾಂತಿ ಹಾಗು ಸಾಮುದಾಯಿಕ ದುಃಖವನ್ನು ಹೊರಹೊಮ್ಮಿಸುತ್ತಿದ್ದವು. ಇನ್ನು 1991ರಲ್ಲಿ ಕೂಡಾ 'ಐ ವಾನ ಕಿಲ್ ಸ್ಯಾಮ್' ಮತ್ತು 'ಬುಷ್ ಕಿಲ್ಲಾ' ಎಂಬ ಹಾಡುಗಳ ಮೂಲಕ ಜಾರ್ಜ್ ಡಬ್ಲ್ಯೂ ಬುಷ್ ಕುವೈತ್‌ಗೆ ಸೇನೆ ಕಳಿಸಿದ ನೀತಿಯ ವಿರುದ್ಧ ಕಲಾವಿದರು ದನಿ ಎತ್ತಿದರು. ಇನ್ನು ಬಹಿಷ್ಕೃತ ದಕ್ಷಿಣ ಆಫ್ರಿಕಾದ ಪಾಪ್ ಸಂಗೀತಕಾರರ ಗುಂಪೊಂದು ತಮ್ಮ ಸಂಗೀತದ ಮೂಲಕ ವರ್ಣದ್ವೇಷದ ಕೆಟ್ಟ ಸಂಪ್ರದಾಯವನ್ನು ಜಗತ್ತಿಗೇ ತೋರಿಸಿತು.

ಕೇಳುಗರಲ್ಲಿ ಕ್ರಾಂತಿಯ ಕಿಚ್ಚು ಮೂಡಿಸುವ ಶಕ್ತಿ ಸಂಗೀತಕ್ಕೆ ಇದೆ. ಹಿಪ್-ಹಾಪ್ ಸಂಗೀತ ಹಲವಾರು ಸಮಾಜ-ಸಂಸ್ಕೃತಿಯ ಮೇಲೆ ಗಾಢ ಪರಿಣಾಮ ಬೀರಿದೆ. ಸ್ವೀಡನ್‌ನಲ್ಲಿ, ವಲಸಿಗರು ಮತ್ತು ಕಾರ್ಮಿಕ ವರ್ಗದ ಯುವಕರ ಮನಸೆಳೆಯಲು ಸರ್ಕಾರೇತರ ಸಂಸ್ಥೆಗಳು ಗ್ರಾಫಿಟಿ (ಗೀಚು ಬರಹ) ಮತ್ತು ನೃತ್ಯವನ್ನು ಬಳಸಿಕೊಳ್ಳುತ್ತಿವೆ. ಬೊಲಿವಿಯಾ, ಚಿಲಿ, ಇಂಡೊನೇಷಿಯಾ, ನ್ಯೂಜಿಲ್ಯಾಂಡ್ ಮತ್ತು ನಾರ್ವೆಗಳಲ್ಲಿನ ಯುವಕರು ತಮ್ಮ ಹೊಸತನದ ಅಸ್ಮಿತೆಗಾಗಿ ಹಿಪ್-ಹಾಪ್ ನೃತ್ಯವನ್ನು ಬಳಸಿಕೊಳ್ಳುತ್ತಾರೆ. ಆಫ್ರಿಕಾ ಮತ್ತು ಫ್ರಾನ್ಸ್‌ನ ಕಲಾವಿದರು ಪರಿಸರ ಕಾಳಜಿ, ಮಾಧ್ಯಮ ನ್ಯಾಯಬದ್ಧತೆ, ಪೊಲೀಸ್ ವ್ಯವಸ್ಥೆ, ಜೈಲುಗಳ ಸಮಸ್ಯೆ ಇತ್ಯಾದಿ ವಿಷಯಗಳತ್ತ ಯುವಕರನ್ನು ಸೆಳೆಯಲು ಹಿಪ್-ಹಾಪ್ ಸೇರಿದಂತೆ ಇತರೆ ಆಧುನಿಕ ಸಂಗೀತ-ನೃತ್ಯಗಳನ್ನು ಬಳಸಿಕೊಳ್ಳುತ್ತಾರೆ.

ನೈಜೀರಿಯದಲ್ಲಿ ಮತ ಚಲಾವಣೆ ಹಕ್ಕು ನಿರಾಕರಣೆ, ಭ್ರಷ್ಟಾಚಾರ ಮತ್ತು ಯುವಜನರ ಮೇಲಿನ ದೌರ್ಜನ್ಯದಂಥ ವಿಷಯಗಳತ್ತ ಗಮನ ಸೆಳೆಯಲೆಂದೇ ಕಲಾವಿದ ಸೆಯೂನ್ ಕುಟಿ, ಆಫ್ರೋಬೀಟ್ ಎಂಬ ಕಲೆ ಸೃಷ್ಟಿಸಿದ. ಹಾಗೇ ಏಷ್ಯನ್ ಡಬ್ ಫೌಂಡೇಷನ್ ಕಳೆದ 15 ವರ್ಷಗಳಿಂದ ಹಾಡಿನ ಮೂಲಕ ಸಾಮಾಜಿಕ ಬದಲಾವಣೆಯ (ಏಷ್ಯಾ ಮೂಲದ ಬ್ರಿಟನ್ನರತ್ತ ಪೂರ್ವಗ್ರಹಪೀಡಿತ ಭಾವನೆ, ನಗರವಾಸಿ ಯುವಕರು ಗ್ಯಾಂಗ್‌ಗಳಾಗಿ ಪರಿವರ್ತನೆಗೊಳ್ಳುತ್ತಿರುವುದು... ಇತ್ಯಾದಿ) ವಿರುದ್ಧ ದನಿ ಮೂಡಿಸುತ್ತಿದೆ. ನ್ಯುನೊ ಸ್ಯಾಂಟೋಸ್ ವಲಸಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಗೀತದ ಮೂಲಕ ಪ್ರತಿಭಟಿಸಲು ಪ್ರಯತ್ನಿಸುತ್ತಿದ್ದಾರೆ. ಹಸಿರು ಕ್ರಾಂತಿ, ಪ್ರಸಕ್ತ ಇರಾನಿ ಆಡಳಿತ ವ್ಯವಸ್ಥೆ, ಮೆಕ್ಸಿಕೋ ಮಾದಕದ್ರವ್ಯ ಜಾಲ, ಬ್ರೆಜಿಲ್‌ನ ಸಾಮಾಜಿಕ ಅಶಾಂತಿ ಕುರಿತು ಹಲವಾರು ಸಂಸ್ಥೆಗಳು ಸಂಗೀತದ ಮೂಲಕ ಗಮನ ಸೆಳೆಯುತ್ತಿವೆ. ಒಟ್ಟಾರೆ ಸಾಮಾಜಿಕ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರುವಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ.

ಸಂಗೀತಕ್ಕೆ ಯಾವುದೇ ಬಗೆಯ ಸಂಸ್ಕೃತಿಗಾದರೂ ಹೊಂದಿಕೊಳ್ಳುವ ಗುಣ ಇರುವುದರಿಂದ ಅದರ ಆಳ ಮತ್ತು ವ್ಯಾಪ್ತಿ ಭೌಗೋಳಿಕ ಎಲ್ಲೆಯನ್ನು ಮೀರಿದ್ದು. ಎಲ್ವಿಸ್ ಪ್ರೆಸ್‌ಲಿ, ಪ್ಯಾಟ್ ಬೂನೆ ಅವರಿಂದ ಮೈಕೆಲ್ ಜಾಕ್ಸನ್‌ವರೆಗೂ ಹಲವಾರು ಕಲಾವಿದರು ತಮ್ಮ ನಾದಪ್ರತಿಭೆಯನ್ನು ಸಾಂಸ್ಕೃತಿಕ, ರಾಜಕೀಯ ಮತ್ತು ಪರಿಸರ ಕಾಳಜಿ ಕುರಿತು ಜನರಲ್ಲಿ ಅರಿವು ಮೂಡಿಸಲು ಬಳಸಿಕೊಂಡು ಬಂದಿದ್ದಾರೆ.

ಆರ್ಥಿಕವಾಗಿ ಕೂಡಾ ಸಂಗೀತ ಹಾಕಿದ ಬಂಡವಾಳಕ್ಕೆ ಮೋಸ ಮಾಡದು. ಹೀಗಾಗಿ ಈ ಕ್ಷೇತ್ರ ಯುವ ಜನರಿಗೆ ಅಚ್ಚುಮೆಚ್ಚು. ಶಾಂತಿಯುತ ಸಂದೇಶ ನೀಡಲು ಬಳಕೆಯಾಗುತ್ತಿರುವ ಸಂಗೀತ ಮಾಧ್ಯಮದಲ್ಲೂ ಕ್ರೌರ್ಯ, ಹಿಂಸಾಚಾರ ಪ್ರವೇಶಿಸುವ ಮೊದಲೇ ಜಗತ್ತು ಅದರ ಸಂದೇಶವನ್ನು ಅರಿಯಬೇಕಿದೆ. ಅಲ್ಲಿಯವರೆಗೂ ಸಂಗೀತ ನಾದದೊಂದಿಗಿನ ಕ್ರಾಂತಿಯ ಅಲೆ ಮುಂದುವರಿಯುತ್ತಿರಲಿ...

ಐಐಪಿಎಂ
'ಥಿಂಕ್ ಟ್ಯಾಂಕ್'

ಸಯನ್ ಘೋಷ್

ಕೃಷಿ: ಸಾಲ ಶೂಲ

ನೇಗಿಲ ಯೋಗಿಯ ಶೋಕ ರಾಗ

ದೇಶದಲ್ಲಿ ರೈತ ಆತ್ಮಹತ್ಯೆ ಮುಂದುವರಿಯುತ್ತಲೇ ಇರುವುದು ದುರದೃಷ್ಟಕರ

ಮಹಾರಾಷ್ಟ್ರ ಇಂದು ದೇಶದ ಆರ್ಥಿಕ ಶಕ್ತಿ ಕೇಂದ್ರ ಮತ್ತು ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈಯನ್ನು ರಾಜ್ಯದ ರಾಜಧಾನಿಯಾಗಿ ಹೊಂದಿರುವುದು ಮಹಾರಾಷ್ಟ್ರದ ಹೆಗ್ಗಳಿಕೆ. ಆದರೆ ವಿದರ್ಭದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸಿದಾಗ, ಅಲ್ಲಿನ ಆರ್ಥಿಕ ವ್ಯವಸ್ಥೆಯ ದ್ವಂದ್ವ ಅನಾವರಣಗೊಳ್ಳುತ್ತದೆ. ಮುಂಬೈನ ಗಗನಚುಂಬಿ ಕಟ್ಟಡಗಳ ವೈಭವದ ನಡುವೆ, ಸಾಲದ ಶೂಲದಲ್ಲಿ ಸಿಕ್ಕು ಬಸವಳಿಯುತ್ತಿರುವ ನಿರ್ಗತಿಕ ರೈತನ ಕಥೆಗೆ ಕೇಳುಗರೇ ಇಲ್ಲ. ದಿನೇ ದಿನೇ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳು ದೇಶದ ಕೃಷಿ ಕ್ಷೇತ್ರದ ದುರಂತಗಾಥೆಗೆ ಸಾಕ್ಷಿಯಾಗುತ್ತಲೇ ಇವೆ.

2006ರ ಒಂದು ವರ್ಷದಲ್ಲೇ ವಿದರ್ಭದ 1044 ರೈತರ ಆತ್ಮಹತ್ಯಾ ಪ್ರಕರಣ ಸರ್ಕಾರದ ಎಲ್ಲಾ ಪ್ರಯತ್ನವನ್ನು ನೀರಿನಲ್ಲಿ ಮಾಡಿದ ಹೋಮದಂತೆ ವ್ಯರ್ಥವಾಗಿಸಿತ್ತು. ಸರ್ಕಾರ ರೈತರ ಬೇಡಿಕೆಗಳನ್ನಾಗಲಿ, ಸ್ಥಳೀಯ ಸಂಸ್ಥೆಗಳ ಸಲಹೆಯನ್ನಾಗಲಿ ಪಡೆಯದೇ ಹಿಂದಿನಂತೆ ನಿರರ್ಥಕ ಪರಿಹಾರ ಯೋಜನೆಗಳನ್ನು ರೂಪಿಸಿ ಮತ್ತೊಮ್ಮೆ ಸೋತಿದೆ.

ಸಾವಿಗೆ ಶರಣಾದ ಒಟ್ಟು ರೈತರ ಸಂಖ್ಯೆಯ ವಿವರ ಸಿಗದಿದ್ದರೂ, ಅಧಿಕೃತ ಅಂಕಿ-ಅಂಶಗಳ ಪ್ರಕಾರ ಈವರೆಗೂ ಸತ್ತ ರೈತರ ಸಂಖ್ಯೆ 1920 (ವಿದರ್ಭದ ಒಟ್ಟು 3.2 ಮಿಲಿಯನ್ ಹತ್ತಿ ಬೆಳೆಗಾರರಲ್ಲಿ 2.8 ಮಿಲಿಯನ್ ರೈತರು ಸಾಲಪೀಡಿತರು). ದೇಶದ ಇತರೆ ಭಾಗಗಳಿಗಿಂತ ವಿದರ್ಭದಲ್ಲಿ ಹತ್ತಿ ಉತ್ಪಾದನಾ ವೆಚ್ಚ ಹೆಚ್ಚಿರುವುದೇ ಈ ದುಸ್ಥಿತಿಗೆ ಪ್ರಮುಖ ಕಾರಣ. ಇತರೆಡೆ ಹತ್ತಿ ಉತ್ಪಾದನಾ ವೆಚ್ಚ ಒಂದು ಕೆ.ಜಿ.ಗೆ ರೂ. 35ರಿಂದ ರೂ. 48 ತಗಲಿದರೆ, ವಿದರ್ಭದಲ್ಲಿ ಒಂದು ಕೆ.ಜಿ. ಹತ್ತಿ ಬೆಳೆಯಲು ಸುಮಾರು 70 ರೂ. ತಗಲುತ್ತದೆ. ಹತ್ತಿ ಬೆಳೆಗಾರರಲ್ಲಿ ಶೇ. 50ರಷ್ಟು ಮಂದಿ 20ರಿಂದ 45ರ ವಯೋಮಿತಿಯೊಳಗಿನವರು. ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರು ವಿದರ್ಭಕ್ಕೆ ರೂ. 3750 ಕೋಟಿಯ 'ಪ್ಯಾಕೇಜ್' ಘೋಷಿಸಿದ್ದರು, ಆ ಹಣದಲ್ಲಿ ಎಷ್ಟು ಪ್ರಮಾಣ ನಿಜವಾಗಿಯೂ ಸಂಕಷ್ಟದಲ್ಲಿರುವ ರೈತರಿಗೆ ತಲುಪಿದೆ ಎಂಬುದು ಪ್ರಶ್ನಾರ್ಹ. ಇಂಥ ಪರಿಸ್ಥಿತಿ ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ, ದೇಶದ ಪ್ರತಿ ರಾಜ್ಯದ ಸ್ಥಿತಿಯೂ ಇದೇ. ಕರ್ನಾಟಕದಲ್ಲಂತೂ ರೈತರ ಆತ್ಮಹತ್ಯೆ ಏರುತ್ತಲೇ ಇದೆ.

ಅರಣ್ಯ ನಾಶ, ಅಸಮರ್ಪಕ ನೀರಾವರಿ ಸೌಲಭ್ಯ ಮತ್ತು ಸರ್ಕಾರದ ಅತಂತ್ರ ಅಣೆಕಟ್ಟು ಯೋಜನೆಗಳಿಂದ ಅಂತರ್ಜಲ ಮಟ್ಟದಲ್ಲಿನ ಕುಸಿತ (250 ಅಡಿ) ಉಂಟಾಗಿದೆ. ಛತ್ತೀಸ್‌ಗಢದಲ್ಲಿ 1,500 ರೈತರು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಲು ಈ ಅಂಶ ಪ್ರಮುಖ ಪಾತ್ರ ವಹಿಸಿದೆ. ಇಂದಿಗೂ ರೈತಾಪಿ ವರ್ಗ ಮಳೆಯನ್ನು ಎಷ್ಟರ ಮಟ್ಟಿಗೆ ಅವಲಂಬಿಸಿದೆ ಎಂಬುದನ್ನು ಸಾಬೀತುಪಡಿಸಿದ ಘಟನೆ ಅದು. ಜೊತೆಗೆ ಅಂತರ್ಜಲ ಕಲುಷಿತಗೊಳ್ಳುತ್ತಿರುವ ಭಯಾನಕ ವರದಿಯನ್ನೂ ಕೇಂದ್ರ ಬಿಡುಗಡೆ ಮಾಡಿದ್ದು, ರೈತರನ್ನು ಕಂಗಾಲಾಗಿಸಿದೆ.

ಇತ್ತೀಚೆಗೆ ಆಂಧ್ರ ಪ್ರದೇಶದ ತೆಲಂಗಾಣ ಮತ್ತು ರಾಯಲಸೀಮಾ ಪ್ರದೇಶದಲ್ಲಿ ನಡೆದ 20 ರೈತರ ಆತ್ಮಹತ್ಯೆ ದೇಶವನ್ನೇ ತಲ್ಲಣಗೊಳಿಸಿತ್ತು. ಕುಗ್ಗಿದ ಜಲ ಮಟ್ಟ, ಕೊಳವೆ ಬಾವಿ ಮತ್ತು ನಲ್ಲಿ ನೀರು ವ್ಯವಸ್ಥೆಗಾಗಿ ಪಡೆದ ಸಾಲ ಹಿಂತಿರುಗಿಸಲಾಗದೆ ಆ ರೈತರು ಸಾವಿಗೆ ಶರಣಾಗಿದ್ದರು.

ಈ ಬಾರಿಯ ಅಸಮರ್ಪಕ ಮಳೆಯಿಂದಾಗಿ ದೇಶದ 626 ಜಿಲ್ಲೆಗಳಲ್ಲಿ 177 ಬರಪೀಡಿತ ಎಂದು ಘೋಷಿಸಿಕೊಂಡಿವೆ. ಸ್ವ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಬರದ ಬಾಧೆಯಿಂದ ಹೊರಬರಲು ರೈತರಿಗೆ ಎಲ್ಲಾ ರೀತಿಯ ಸಹಕಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ವಾಸ್ತವದಲ್ಲಿ ಇಂಥ ಹಲವಾರು ಭರವಸೆಗಳು, ಭರವಸೆಗಳಾಗಿಯೇ ಉಳಿದು ಬಿಡುತ್ತವೆ. ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಶೇ. 25ರಷ್ಟು ಪಾಲು ಕೃಷಿ ಕೊಡುಗೆಯಾದರೂ ಮೊದಲ ಪಂಚವಾರ್ಷಿಕ ಯೋಜನೆ ವೇಳೆ ಶೇ. 14.9ರಷ್ಟಿದ್ದ ಕೃಷಿ ಬಂಡವಾಳ, ಈಗ ಶೇ. 5.2ರಕ್ಕೆ ಇಳಿದಿದೆ. ಶೇ. 1.6ರಷ್ಟು ಇದ್ದ ಒಟ್ಟು ರಾಷ್ಟ್ರೀಯ ಉತ್ಪನ್ನದ ಕೃಷಿ ಬಂಡವಾಳದ ಪ್ರಮಾಣ ಈಗ ಶೇ. 1.3ಕ್ಕೆ ಇಳಿದಿದೆ. ಜಲಸಂಪನ್ಮೂಲ ಮತ್ತು ನೀರಾವರಿ ಯೋಜನೆಗಳಿಗೆ ಭಾರಿ ಪ್ರಮಾಣದಲ್ಲಿ ಹಣ ವ್ಯಯಿಸಲಾಗುತ್ತಿದೆ. ಆದರೂ, ಇಂದಿಗೂ ನಮ್ಮ ಕೃಷಿ ಮಳೆಯೊಂದಿಗಿನ ಜೂಜೇ ಸರಿ. ಅಂದಾಜಿನ ಪ್ರಕಾರ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಮಳೆಯ ಪ್ರಮಾಣದಲ್ಲಾಗುವ ವ್ಯತ್ಯಾಸದಿಂದ ದೇಶ ಬರ ಪರಿಸ್ಥಿತಿ ಎದುರಿಸುತ್ತಿದೆ. ಇದರಿಂದ ತತ್ತರಿಸಿ ಹೋಗುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ದೇಶದ

ಭವಿಷ್ಯದ ಮೇಲೆ ಇದರ ಪರಿಣಾಮ ಏನು ಎಂಬುದು ನಮಗೆಲ್ಲಾ ಗೊತ್ತು...

ಐಐಪಿಎಂ
'ಥಿಂಕ್ ಟ್ಯಾಂಕ್'

ಪಥಿಕೃತ್ ಪಾಯ್ನೆ 

 
 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .