User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
 

ಅಕ್ಷರಬ್ರಹ್ಮರ 'ಅನಿಕೇತನ' ಕಥನ...

ಧೀಮಂತ ಬರಹಗಾರರು ನಾಡಿನ ಅಮೂಲ್ಯ ಆಸ್ತಿ. ಹೀಗಾಗಿಯೇ ಪಾಶ್ಚಾತ್ಯರಲ್ಲಿ 'ರೈಟರ್ಸ್ ಕಾರ್ನರ್'ಗಳು ಖ್ಯಾತ ಪ್ರವಾಸಿ ತಾಣಗಳೆನಿಸಿವೆ. ನಮ್ಮ ಸರ್ಕಾರ ಮಹಾಕವಿ ತಿರುವಳ್ಳುವರ್ ಹಾಗೂ ಸರ್ವಜ್ಞರ ಪ್ರತಿಮೆ ಸ್ಥಾಪಿಸಲು ಆಸಕ್ತಿ ತೋರಿದೆಯೇನೋ ಸರಿ. ಆದರೆ ನಮ್ಮ ಅಕ್ಷರ ಗಾರುಡಿಗರ ನಿವಾಸಗಳು ಕಾಲದ ಹೊಡೆತಕ್ಕೆ ಸಿಕ್ಕಿ ಮರೆಯಾಗುತ್ತಿರುವುದನ್ನು ಯಾರಾದರೂ ಗಮನಿಸಿದ್ದಾರೆಯೇ...? ಕೆ.ಆರ್. ಅರುಣ ಕುಮಾರ್ ವಿಶ್ಲೇಷಣೆ

ಅಂತೂ ವರ್ಷಗಳ ಹಗ್ಗ-ಜಗ್ಗಾಟದ ನಂತರ ಕನ್ನಡದ ನೆಲದಲ್ಲಿ 'ತಿರುವಳ್ಳುವರ್' ಪ್ರತಿಮೆ ಹಾಗೂ ತಮಿಳು ನೆಲದಲ್ಲಿ 'ಸರ್ವಜ್ಞ' ಪ್ರತಿಮೆಗಳು ಅನಾವರಣಗೊಂಡಿವೆ. ಕಾವೇರಿ ನೀರು, ಹೊಗೇನಕಲ್ ಹಾಗೂ ಗಡಿಯ ವಿಚಾರಗಳಲ್ಲಿ ಪರಸ್ಪರ ಕಚ್ಚಾಡಿಕೊಳ್ಳುತ್ತಲೇ ಕಾಲಕಳೆಯುತ್ತಿದ್ದ ಈ ಎರಡೂ ದಾಯಾದಿ ರಾಜ್ಯಗಳಿಗೆ ಇಂಥದ್ದೊಂದು ಬೆಳವಣಿಗೆಯ ಅವಶ್ಯಕತೆ ಇತ್ತು ಎಂದು ನಮ್ಮನ್ನು ನಾವು ಎಷ್ಟೇ ಸಂತೈಸಿಕೊಂಡರೂ ದಾರ್ಶನಿಕ ಕವಿಗಳಾದ ಸರ್ವಜ್ಞ, ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯ ಹಿಂದಿನ ರಾಜಕೀಯ ಲೆಕ್ಕಾಚಾರವೆಷ್ಟು? ಪ್ರಾಮಾಣಿಕ ಸಾಂಸ್ಕೃತಿಕ ಕಾಳಜಿ ಎಷ್ಟು? ಎಂಬೆರಡು ಪ್ರಶ್ನೆಗಳನ್ನು ನಿರ್ಲಕ್ಷಿಸುವುದು ಕಷ್ಟಸಾಧ್ಯ.

ಹಾಗೆಂದು ಇವೇನೂ ಉತ್ತರವೇ ಇಲ್ಲದ ಯಕ್ಷಪ್ರಶ್ನೆಗಳೇನಲ್ಲ. ನಮ್ಮ ಅಕ್ಷರ ಬ್ರಹ್ಮರ ಕುರಿತು ಸರ್ಕಾರ, ರಾಜಕೀಯ ಪ್ರತಿನಿಧಿಗಳು ಒಟ್ಟಾರೆ ನಮ್ಮ ಸಮಾಜ ಹೊಂದಿರುವ ಧೋರಣೆ, ಕಾಳಜಿಗಳನ್ನು ಒಮ್ಮೆ ಅವಲೋಕಿಸಿದರೆ ಸಾಕು ಸರ್ವಜ್ಞ ಹಾಗೂ ತಿರುವಳ್ಳುವರ್ ರೀತಿಯ ದಾರ್ಶನಿಕ ವ್ಯಕ್ತಿತ್ವಗಳನ್ನು ನಾವು ಹೇಗೆ ಅರ್ಥೈಸಿಕೊಂಡಿದ್ದೇವೆ ಎಂಬುದು ವೇದ್ಯವಾಗುತ್ತದೆ.

ತಮ್ಮ ಭಾಷೆಯನ್ನು ಕಟ್ಟಿದ ಸಾಹಿತಿಗಳು, ಕಲಾವಿದರ ಕುರಿತು ಪರದೇಶಗಳಲ್ಲಿ ಎಲ್ಲಿಲ್ಲದ ಗೌರವ. ಇಂಗ್ಲಿಷ್ ಭಾಷೆ ಹಾಗೂ ಸಂಸ್ಕೃತಿಯನ್ನು ತನ್ನ ಸಾಹಿತ್ಯದ ಮೂಲಕ ಸಮೃದ್ಧಗೊಳಿಸಿದ ಶೇಕ್ಸ್‌ಪಿಯರ್ ಇಂಗ್ಲೆಂಡ್ ಜನಸಾಮಾನ್ಯರ ಪಾಲಿಗೆ 'ದೇವರು ಕೊಟ್ಟ ವರ'. ಆ ಕಾರಣಕ್ಕಾಗಿಯೇ, ಶೇಕ್ಸ್‌ಪಿಯರ್ ಬಾಳಿ ಬದುಕಿದ ಮನೆ, ಆತನ ನಾಟಕಗಳ ಮೂಲಪ್ರತಿಗಳೂ ಸೇರಿದಂತೆ ಆತನದ್ದು ಎನ್ನಲಾದ ಪ್ರತಿಯೊಂದು ವಸ್ತುಗಳನ್ನೂ ಇಂದಿಗೂ ಜೋಪಾನವಾಗಿ ಇಡಲಾಗಿದೆ ಮಾತ್ರವಲ್ಲ, ಶೇಕ್ಸ್‌ಪಿಯರ್ ಮನೆ ಇಂದು ಇಂಗ್ಲೆಂಡಿನ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಹಾಗೆಯೇ ಚಿಲಿಯ ಹೆಮ್ಮೆಯ 'ಜನರ ಕವಿ' ಪಾಬ್ಲೋ ನೆರೂದನ ಮನೆ ಆತನ ಪ್ರತಿಯೊಂದು ವಸ್ತುವನ್ನೂ ಮುಂದಿನ ತಲೆಮಾರಿನ ಪಾಲಿನ ಬಳುವಳಿ ಎಂಬಂತೆ ಜೋಪಾನವಾಗಿ ಕಾದಿರಿಸಲಾಗಿದೆ. ಹೀಗೆ ಒಂದು ಸಮುದಾಯ ತನ್ನ ಹೆಮ್ಮೆಯ ಸುಪುತ್ರರಿಗೆ ಗೌರವ ತೋರುವ ಸಂಪ್ರದಾಯ, 'ಇತಿಹಾಸ ಪ್ರಜ್ಞೆ' ಬಹುತೇಕ ಮುಂದುವರಿದ ರಾಷ್ಟ್ರಗಳಲ್ಲಿ ಕಂಡುಬರುತ್ತದೆ.

ಇಂಥದೊಂದು ಸಂಪ್ರದಾಯ ನಮ್ಮಲ್ಲಿ ಇನ್ನೂ ಒಡಮೂಡಿಲ್ಲ. ಅಲ್ಲೊಂದು ಇಲ್ಲೊಂದು ನಿದರ್ಶನಗಳನ್ನು ಬಿಟ್ಟರೆ ನಮ್ಮದೆಲ್ಲಾ ನಿರ್ಲಕ್ಷ್ಯ ಪರಂಪರೆಯೇ. ಕುಪ್ಪಳ್ಳಿಯಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಮನೆಯನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಂಡು ಬರಲಾಗಿದೆ. ಬಹುಶಃ ಸರ್ಕಾರ ಸಾಹಿತಿಗಳ ವಿಚಾರದಲ್ಲಿ ಇಷ್ಟೊಂದು ಮುತುವರ್ಜಿಯಿಂದ ಮಾಡಿದ ಕೆಲಸ ಇದೊಂದೇ ಇರಬೇಕು. ಧಾರವಾಡದಲ್ಲಿರುವ ಕವಿ ದ.ರಾ. ಬೇಂದ್ರೆ ಅವರ ಮನೆಯನ್ನೂ ಚಿಕ್ಕಮಟ್ಟದಲ್ಲಿ ಸ್ಮಾರಕದಂತೆ ಕಾಪಾಡಿಕೊಂಡು ಬರಲಾಗಿದೆ. ಮಗ ವಾಮನ ಬೇಂದ್ರೆ ಆಸಕ್ತಿಯಿಂದಾಗಿ ಬೇಂದ್ರೆ ಕೃತಿಗಳು, ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಜೋಪಾನವಾಗಿ ಧಾರವಾಡದ ಅವರ ಮನೆಯಲ್ಲಿ ಕಾದಿಡಲಾಗುತ್ತಿದೆ. ಸರ್ಕಾರದಿಂದ ಅವರಿಗೆ ಯಾವ ಸಹಕಾರವೂ ದೊರೆತಿಲ್ಲ. ಬೇಂದ್ರೆ ಕುಟುಂಬವರ್ಗ ಹಾಗೂ ಅಭಿಮಾನಿಗಳ ಪ್ರೀತಿ ಅಭಿಮಾನದ ದೆಸೆಯಿಂದಾಗಿ ಇಂದು ಬೇಂದ್ರೆ ಹುಟ್ಟಿದ ಮನೆಯನ್ನು ವೀಕ್ಷಿಸುವ ಅವಕಾಶ ಸಾಹಿತ್ಯಾಸಕ್ತರ ಪಾಲಿಗಿದೆ. ಇನ್ನು 'ಪದ ಎಸೆದು ನಾದ ಹಿಡಿಯುತ್ತಿದ್ದ' ಪು.ತಿ. ನರಸಿಂಹಾಚಾರ್ ಅವರ ಮೇಲುಕೋಟೆಯಲ್ಲಿನ ಮನೆಯನ್ನು ಕೂಡಾ 'ಪುತಿನ ಟ್ರಸ್ಟ್' ಸ್ವಲ್ಪಮಟ್ಟಿಗೆ ಸ್ಮಾರಕವಾಗಲು ಯತ್ನಿಸುತ್ತಿದೆ.

ಆದರೆ ಎಲ್ಲಾ ಸಾಹಿತಿಗಳಿಗೂ ಈ ಅದೃಷ್ಟವಿಲ್ಲ. ಕನ್ನಡದ ಪ್ರಜ್ಞೆಯನ್ನು ವಿಸ್ತರಿಸಿದ, ಕನ್ನಡ ಸಂಸ್ಕೃತಿಗಾಗಿಯೇ ಶ್ರಮಿಸಿದ ಎಷ್ಟೋ ಹೆಸರಾಂತ ಸಾಹಿತಿಗಳ ಕನಿಷ್ಠ ನೆನಪು ಕೂಡ ಕನ್ನಡಿಗರಿಗೆ ಈಗ ಉಳಿದಿಲ್ಲ. ಎಲ್ಲೋ ಬೆರಳೆಣಿಕೆಯಷ್ಟು ಸಾಹಿತ್ಯದ ವಿದ್ಯಾರ್ಥಿಗಳು ಹಾಗೂ ಸಾಹಿತ್ಯ ಪ್ರೇಮಿಗಳ ಹೊರತಾಗಿ ಸಮಾಜದ ಬಹುತೇಕ ಜನತೆಗೆ ಗತಿಸಿದ ಕನ್ನಡ ಸಾಹಿತಿಗಳ ನೆನಪು ಕೂಡ ಇಲ್ಲ. ನಮ್ಮ ನಡುವೆಯೇ ಬಾಳಿ, ಬದುಕಿ ಕೊನೆಯುಸಿರೆಳೆದ ಹಿರಿಯ ಸಾಹಿತಿಗಳ ನೆನಪಿಗೋಸ್ಕರ ಅವರ ಮನೆಗಳನ್ನು ಸ್ಮಾರಕದಂತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರವೂ ಸೇರಿದಂತೆ ಯಾರೂ ಈವರೆಗೆ ಗಂಭೀರವಾಗಿ ಯೋಚಿಸಿಲ್ಲ.

ಸರ್ವಜ್ಞ, ತರಾಸು, ಆಲೂರು ವೆಂಕಟರಾಯರು, ಡಿವಿಜಿ, ಅನಕೃ, ವಿ.ಸೀ. ಕೈಲಾಸಂ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಶಿವರಾಮ ಕಾರಂತ ಹೀಗೆ ಕನ್ನಡದ ಹಿರಿಯ ಚೇತನಗಳು ಬಾಳಿ ಬದುಕಿದ ಮನೆಗಳು ಇಂದು ಯಾವ ಸ್ಥಿತಿಯಲ್ಲಿವೆ ಎಂದು ಹುಡುಕ ಹೊರಟ ಟಿಎಸ್‌ಐ ತಂಡಕ್ಕೆ ಕಂಡು ಬಂದ ದೃಶ್ಯಗಳು ಮೇಲಿನ ಹತಾಶ ಮಾತುಗಳಿಗೆ ಪುಷ್ಟಿ ನೀಡುತ್ತವೆ.

ಸರ್ವಜ್ಞನ ಪ್ರತಿಮೆಯನ್ನು ಚೆನ್ನೈನಲ್ಲಿ ಸ್ಥಾಪಿಸಿದ ಸಂಭ್ರಮಾಚರಣೆ ಇನ್ನೂ ಮಾಸಿಲ್ಲ. ಹಾಗಾದರೆ ಸರ್ವಜ್ಞನ ನೆನಪಿಗೆ ನಮ್ಮ ನಾಡಿನಲ್ಲಿ ಯಾವ ಸ್ಮಾರಕವಿದೆ ಎಂದು ಹುಡುಕ ಹೊರಟರೆ ಮತ್ತೊಂದಿಷ್ಟು ಸರ್ವಜ್ಞನ ಪ್ರತಿಮೆಗಳು ಹಲವೆಡೆ ಕಣ್ಣಿಗೆ ಬಿದ್ದವೇ ವಿನಾ ಆ ಕವಿಯ ಊರನ್ನು ಸ್ಮಾರಕವಾಗಿಸುವ ಯಾವ ಪ್ರಯತ್ನವೂ ಈವರೆಗೆ ಆಗಿಲ್ಲ. ಆತನಿಗೆ ಜನ್ಮ ನೀಡಿದ ಸ್ಥಳ ಎಂದು ಹೇಳಲಾದ ಹಾವೇರಿ ಜಿಲ್ಲೆಯ, ಹಿರೇಕೆರೂರು ತಾಲೂಕಿನ ಅಬ್ಬಲೂರು ಗ್ರಾಮ ಇಂದಿಗೂ ಶಿಲಾಯುಗದಲ್ಲಿಯೇ ತೆವಳುತ್ತಿದೆ. ರಸ್ತೆಯಂಥ ಮೂಲಸೌಕರ್ಯದಿಂದಲೂ ವಂಚಿತವಾದ ಆ ಗ್ರಾಮದಲ್ಲೂ ಒಂದು ಸರ್ವಜ್ಞನ ಪ್ರತಿಮೆ ತಲೆ ಎತ್ತಿ ನಿಂತಿದೆ. ಇಲ್ಲಿಗೆ ಭೇಟಿ ನೀಡಿದವರಿಗೆ ಇದು ಸರ್ವಜ್ಞನ ಹುಟ್ಟೂರು ಎಂದು ಗುರುತಿಸಲು ಇರುವ ಸ್ಮಾರಕವೆಂದರೆ ಅದೊಂದೇ. ಸರ್ವಜ್ಞನ ಜನ್ಮಸ್ಥಳದ ಅಭಿವೃದ್ಧಿಗೆ ರೂ. ೫ ಕೋಟಿ ಅನುದಾನ ನೀಡುವುದಾಗಿ ಸರ್ಕಾರ ನೀಡಿದ್ದ ಭರವಸೆಗಳು ಕಡತಗಳನ್ನು ದಾಟಿ ಹೊರಬಂದಿಲ್ಲ. 'ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ' ಸ್ಥಾಪಿಸುವ ಸರ್ಕಾರದ ಭರವಸೆ ಕೂಡ ಜನತೆಯ ಪಾಲಿಗೆ ಕನ್ನಡಿ ಗಂಟು!

'ಕನ್ನಡದ ಕುಲಪುರೋಹಿತ' ಎಂದೇ ಹೆಸರಾದ ಆಲೂರು ವೆಂಕಟರಾಯರು ಸಮಗ್ರ ಕರ್ನಾಟಕ ನಿರ್ಮಾಣ ಕಾರ್ಯದ ನೇತೃತ್ವ ವಹಿಸಿದವರು. ಆದರೆ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಅವರ ಮನೆಯ ಸ್ಥಿತಿ ಚಿಂತಾಜನಕವಾಗಿದೆ. ಕನ್ನಡಿಗರ ಸ್ವಾಭಿಮಾನವನ್ನು ಹೆಚ್ಚಿಸಲು ಪತ್ರಿಕೆಗಳನ್ನು ಅಸ್ತ್ರವಾಗಿ ಬಳಸಿಕೊಂಡ ವೆಂಕಟರಾಯರ ನೆನಪಿಗೆ ಅವರ ಮನೆಯನ್ನು ಪುನರುಜ್ಜೀವಗೊಳಿಸಬೇಕೆಂಬ ಸ್ಥಳೀಯರ ಕನಸು ಸದ್ಯಕ್ಕೆ ನನಸಾಗುವ ಯಾವ ಸಾಧ್ಯತೆಯೂ ಗೋಚರಿಸುತ್ತಿಲ್ಲ. 'ಆಲೂರು ವೆಂಕಟರಾಯ ಯುವಕ ಸಂಘ' ಎಂಬ ಸಂಘಟನೆಯನ್ನು ಹುಟ್ಟು ಹಾಕಿರುವ ಸ್ಥಳೀಯ ಯುವಕರು ಸರ್ಕಾರದ ಗಮನವನ್ನು ಇತ್ತ ಸೆಳೆಯುವ ನಿಟ್ಟಿನಲ್ಲಿ ತಮ್ಮ ಭಗೀರಥ ಪ್ರಯತ್ನವನ್ನು ಜಾರಿಯಲ್ಲಿಟ್ಟಿದ್ದಾರೆ. ಆದರೆ ಯಾವ ಪ್ರಯೋಜನವೂ ಈವರೆಗೆ ಆಗಿಲ್ಲ. "ಈ ಸಂಬಂಧ ಎಲ್ಲಾ ಅಧಿಕಾರಿಗಳನ್ನೂ ಭೇಟಿಯಾಗಿದ್ದೇವೆ. ಸಂಸದರಿಗೂ ಈ ಕುರಿತು ಮನವಿ ಮಾಡಿಕೊಂಡಿದ್ದೇವೆ. ಆದರೆ ಯಾರಿಗೂ ಈ ಬಗ್ಗೆ ಕಾಳಜಿ ಇಲ್ಲ" ಎಂದು ವಿಷಾದದಿಂದ ನುಡಿಯುತ್ತಾರೆ ಗ್ರಾಮದ ನಿವೃತ್ತ ಇಂಗ್ಲಿಷ್ ಉಪನ್ಯಾಸಕ ಡಿ.ಆರ್. ನಾಯಕ್.

ಕನ್ನಡ ಸಾಹಿತ್ಯ ಹಾಗೂ ಭಾಷೆಯ ವಿಚಾರದಲ್ಲಿ ಮಹತ್ವದ ಕೊಡುಗೆ ನೀಡಿದ ಡಾ. ವಿನಾಯಕ ಕೃಷ್ಣ ಗೋಕಾಕ್ ಅವರು ಆಡಿ, ಬೆಳೆದ ಮನೆ ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ಇದೆ. ಆ ಮನೆಯನ್ನು ಸ್ಮಾರಕವನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. "ಗೋಕಾಕ್ ಅವರು ಜನಿಸಿದ್ದು ಸ್ವಂತ ಮನೆಯಲ್ಲಿ ಅಲ್ಲ, ಬಾಡಿಗೆ ಮನೆಯಲ್ಲಿ. ಆದ್ದರಿಂದ ಬೇರೆ ಕಟ್ಟಡವೊಂದನ್ನು ನಿರ್ಮಿಸಿ ಅದನ್ನು ಕುಪ್ಪಳ್ಳಿಯ ಮಾದರಿಯಲ್ಲಿಯೇ ಅಭಿವೃದ್ಧಿ ಪಡಿಸುವ ಕುರಿತು ಪ್ರಯತ್ನಗಳು ನಡೆಯುತ್ತಿವೆ" ಎನ್ನುತ್ತಾರೆ 'ವಿ.ಕೃ. ಗೋಕಾಕ್ ಪ್ರತಿಷ್ಠಾನ'ದ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಗೋಕಾಕರ ಪುತ್ರಿ ಯಶೋದಾ ಭಟ್. ಗೋಕಾಕ್ ಜನ್ಮಶತಮಾನೋತ್ಸವದ ಪ್ರಸಕ್ತ ವರ್ಷದಲ್ಲಾದರೂ ಆ ಕಾರ್ಯಕ್ಕೆ ಚಾಲನೆ ನೀಡಲು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಮುಂದಾದೀತೇ ನೋಡೋಣ.

ಸಾಹಿತ್ಯವಲ್ಲದೇ ಹಲವು ಹತ್ತು ಕ್ಷೇತ್ರಗಳಲ್ಲಿ ವಿಹರಿಸಿದ್ದ ದೈತ್ಯ ಪ್ರತಿಭೆ ಶಿವರಾಮ ಕಾರಂತರದ್ದು ಇನ್ನೊಂದು ಕಥೆ. ಶಿವರಾಮ ಕಾರಂತರು ತಾವು ಹುಟ್ಟಿದ ಮನೆಯನ್ನು ೧೯೨೧ರಲ್ಲಿಯೇ ತ್ಯಜಿಸಿ, ಪರ್ಯಟನೆಯಲ್ಲಿಯೇ ಕಾಲ ಕಳೆಯುತ್ತಿದ್ದರು. ನಂತರ ಅವರ ಇಚ್ಛೆಗೆ ಅನುಸಾರವಾಗಿಯೇ ಆ ಮನೆಯನ್ನು ಅವರ ಸಹೋದರರ ಸುಪರ್ದಿಗೆ ಕೊಡಲಾಗಿತ್ತು. ಇಂದು ಆ ಮನೆಯಲ್ಲಿ ಕಾರಂತರ ಸಹೋದರರ ಮಕ್ಕಳು ವಾಸಿಸುತ್ತಿದ್ದಾರೆ. ಹಾಗೆಂದು ಕಾರಂತರನ್ನು ಅವರ ಅಭಿಮಾನಿಗಳು ನಡುನೀರಿನಲ್ಲಿ ಕೈಬಿಟ್ಟಿಲ್ಲ. ಅವರ ಹುಟ್ಟೂರು ಕೋಟಾಕ್ಕೆ ಸಮೀಪದಲ್ಲಿರುವ ಸಾಲಿಗ್ರಾಮದಲ್ಲಿ 'ಶಿವರಾಮ ಕಾರಂತ ಪ್ರತಿಷ್ಠಾನ'ವನ್ನು ಹುಟ್ಟುಹಾಕಲಾಗಿದ್ದು ಅಲ್ಲಿನ 'ಮಾನಸ' ಕಟ್ಟಡದಲ್ಲಿ ಕಾರಂತರಿಗೆ ಸೇರಿದ ಪ್ರತಿಯೊಂದು ವಸ್ತುವನ್ನೂ ಸಾಹಿತ್ಯಾಸಕ್ತರ ವೀಕ್ಷಣೆಗೆ ಇಡಲಾಗಿದೆ. "ಕೋಟಾ ಗ್ರಾಮದಲ್ಲಿ ಶಿವರಾಮ ಕಾರಂತ ಕಲಾ ಗ್ರಾಮ ನಿರ್ಮಾಣಕ್ಕೆಂದು ಸುಮಾರು ೨೦೦ ಎಕರೆ ಜಮೀನು ಸರ್ಕಾರದಿಂದ ಮಂಜೂರಾಗಿತ್ತು. ಸರ್ಕಾರವೂ ಆ ಕುರಿತು ಕಾಳಜಿ ಹೊಂದಿತ್ತು. ಆದರೆ, ಸಾಹಿತ್ಯ ಲೋಕದ ಪಟ್ಟಭದ್ರ ಹಿತಾಸಕ್ತಿಗಳು, ಚಿಲ್ಲರೆ ಲಾಬಿಗಳು ಇಂದಿಗೂ ಆ ಯೋಜನೆಯನ್ನು ಸಾಕಾರಗೊಳಿಸಲು ಅವಕಾಶ ಮಾಡಿಕೊಟ್ಟಿಲ್ಲ" ಎಂದು ಆಪಾದಿಸುತ್ತಾರೆ ಕಾರಂತರ ಆಪ್ತ ಕಾರ್ಯದರ್ಶಿಯಾಗಿದ್ದ ಮಾಲಿನಿ ಮಲ್ಯ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿಯೇ ಇರುವ ಹಲವು ಸಾಹಿತಿಗಳ ಮನೆಗಳ ಸ್ಥಿತಿಯಂತೂ ಶೋಚನೀಯವಾಗಿದೆ. ಕನ್ನಡದ ಹಿರಿಯ ಸಾಹಿತಿ, 'ವಿರಕ್ತ ರಾಷ್ಟ್ರಕ' ಡಿವಿಜಿ ಅವರ ಕುರಿತು ಮಾತನಾಡುವಾಗ "ನೆನೆದರೆ ನೆನೆ ಆ ನಮ್ಮಪ್ಪನ, ದೇವನಹಳ್ಳಿ ವೆಂಕಟರಾಮಯ್ಯ ಗುಂಡಪ್ಪನ" ಎಂಬ ತುಂಬು ಅಭಿಮಾನದ ಮಾತು ಕೇಳಿ ಬರುತ್ತದೆ. ನಗರದ ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದ ಬಳಿ ಇರುವ ಅವರ ಮನೆಯ ಎದುರಿನ ರಸ್ತೆಗೆ 'ಡಿವಿಜಿ ರಸ್ತೆ' ಎಂದು ನಾಮಕರಣ ಮಾಡಲಾಗಿದೆ. ಆದರೆ ಆ ಮಾರ್ಗದಲ್ಲಿಯೇ ಇದ್ದ ಅವರ ಮನೆ ಇಂದು ಉಳಿದಿಲ್ಲ. ಅವರ ಮನೆ ಇದೇ ರಸ್ತೆಯಲ್ಲಿ ಇತ್ತು ಎನ್ನುವುದಕ್ಕೆ ರಸ್ತೆಯ ಬದಿಯಲ್ಲಿರುವ 'ಡಿವಿಜಿ ರಸ್ತೆ' ಎಂಬ ಫಲಕವೊಂದೇ ನಮಗಿರುವ ಪುರಾವೆ. ಒಂದು ಕಾಲದಲ್ಲಿ ಚಿಂತಕರ ಚಾವಡಿಯಾಗಿದ್ದ, ಸರ್.ಎಂ. ವಿಶ್ವೇಶ್ವರಯ್ಯ, ಅನಕೃ, ರಾಜಾಜಿ ರೀತಿಯ ಮೇರು ವ್ಯಕ್ತಿತ್ವಗಳ ನಡುವಿನ ಸಂವಾದಕ್ಕೆ ಸಾಕ್ಷಿಯಾಗಿದ್ದ ಡಿವಿಜಿ ಅವರ ಮನೆ ಇಂದು 'ಸದರ್ನ್ ರೆಸಿಡೆನ್ಸಿ' ಎಂಬ ವಾಣಿಜ್ಯ ಮಳಿಗೆಯಾಗಿ ಮಾರ್ಪಾಟಾಗಿದೆ. ಮನೆಯ ಚಾವಡಿಯಲ್ಲಿ ಹಿರಿಯಜ್ಜನಂತೆ ಕುಳಿತು ತಮ್ಮ ಸಮಾನ ಮನಸ್ಕರೊಂದಿಗೆ ಹರಟೆ ಹೊಡೆಯುತ್ತಾ, ಆ ಹರಟೆಯಲ್ಲಿಯೇ ವೇದ, ಉಪನಿಷತ್ ಹಾಗೂ ಭಗವದ್ಗೀತೆಗಳು ತನ್ಮೂಲಕ, ಸಮಗ್ರ ಬದುಕಿನ ಕುರಿತು ಅತ್ಯಮೂಲ್ಯ ಒಳನೋಟಗಳನ್ನು ಹೊಮ್ಮಿಸುತ್ತಿದ್ದ ಡಿವಿಜಿ ಅವರ ಮನೆ ಇಂದು ಭೌತಿಕ ಉಪಭೋಗಿಗಳ ನೆಲೆಯಾಗಿದ್ದರೆ ಅದಕ್ಕೆ ಹೊಣೆ ಯಾರು? ಒಬ್ಬ ಲೇಖಕನಿಗೆ ಗೌರವ ಸಲ್ಲಿಸುವುದೆಂದರೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಕೈ ತೊಳೆದುಕೊಳ್ಳುವುದು, ಹೆಚ್ಚೆಂದರೆ ಪ್ರತಿಮೆ ಸ್ಥಾಪಿಸುವುದು ಎಂಬ ಮೂಢನಂಬಿಕೆಯಲ್ಲಿರುವ ಸರ್ಕಾರವೇ? ಅಥವಾ, ಸಾಹಿತಿಗಳು ಕೇವಲ ಸಾಹಿತ್ಯದ ವಿದ್ಯಾರ್ಥಿಗಳಿಗೆ, ಅವರ 'ಸಿಲೆಬಸ್'ಗಳಿಗೆ ಮಾತ್ರ ಮೀಸಲು ಎಂಬ ಸಮಾಜದ ಅಸಡ್ಡೆಯ ಮನೋಭಾವವೇ? "ನಾವೊಂದಿಷ್ಟು ಯುವಕರು ಡಿವಿಜಿ ಅವರ ಜೀವನದ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಬೇಕೆಂದು ಯೋಚಿಸಿದೆವು. ಆ ಪ್ರಯುಕ್ತ ಕೆಲವು ಜನರನ್ನು ಸಂದರ್ಶಿಸಿದಾಗ ಒಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂತು. ಅದೇನೆಂದರೆ, ವಿದ್ಯಾವಂತರೆನಿಸಿಕೊಂಡ ಈ ತಲೆಮಾರಿನ ಬಹುತೇಕ ಮಂದಿಗೆ ಡಿ.ವಿ.ಜಿ. ಎಂದರೆ ಯಾರು ಎನ್ನುವುದೇ ತಿಳಿದಿರಲಿಲ್ಲ" ಎನ್ನುತ್ತಾರೆ 'ಸಮಾಜ ಸೇವಕರ ಸಮಿತಿ'ಯ ರಾಜ್‌ಕುಮಾರ್.

ಇನ್ನು 'ಕಾದಂಬರಿ ಸಾರ್ವಭೌಮ' ಅ.ನ. ಕೃಷ್ಣರಾಯ (ಅನಕೃ) ಅವರು ಹುಟ್ಟಿ ಬೆಳೆದ ಮನೆಯನ್ನು ಬೆಂಗಳೂರಿನ ವಿ.ವಿ. ಪುರಂನಲ್ಲಿ ಹುಡುಕ ಹೊರಟ ಟಿಎಸ್‌ಐ ತಂಡಕ್ಕೆ ಆಘಾತಕಾರಿ ಪ್ರಸಂಗ ಎದುರಾಯಿತು. ಡಾ. ಅನಕೃ ರಸ್ತೆಯಲ್ಲಿನ ಒಂದು ಅಂಗಡಿಗೆ ತೆರಳಿ ಅಲ್ಲಿನ ಮಾಲೀಕರನ್ನು "ಅನಕೃ ಅವರ ಮನೆ ಯಾವುದು?" ಎಂದು ವಿಚಾರಿಸಿದಾಗ, "ಅನಕೃ? ಯಾರ್ರೀ ಅವರು? ನಾನು ಇಲ್ಲಿಗೆ ಬಂದು ೩೫ ವರ್ಷಗಳಾದವು. ಅಂಥ ಹೆಸರಿನ ಯಾರನ್ನೂ ನಾನು ಈವರೆಗೆ ಕಂಡಿಲ್ಲ, ಕೇಳಿಲ್ಲ" ಎಂಬ ಉತ್ತರ ಆ ಕಡೆಯಿಂದ ಬಂತು! ಅವರ ಅಂಗಡಿ ಇರುವ ರಸ್ತೆಗೆ ಅನಕೃ ಹೆಸರನ್ನೇ ಇಟ್ಟಿದ್ದಾರೆ ಎಂದು ನೆನಪಿಸಿದಾಗ, "ಇದು ಅನಕೃ ರಸ್ತೆ ಅಲ್ಲ ಸ್ವಾಮಿ "ಎ.ಎನ್.ಕೆ. ರೋಡ್" ಎಂದಾಗ ಬೇಸ್ತುಬೀಳುವ ಸರದಿ ನಮ್ಮದು! ತಮ್ಮ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಇನ್ನಿಲ್ಲದ ಮೆರಗು ತಂದ ಅನಕೃ ಅವರ ಮನೆ ಇದ್ದ ಸ್ಥಳ ಇಂದು ನಿರ್ಗತಿಕರ ಬೀಡು. ದಾರಿಹೋಕರು ಜಲಬಾಧೆ ತೀರಿಸಿಕೊಳ್ಳಲು ಇರುವ ಪಾಳುಬಿದ್ದ ಜಾಗ. ಆ ಆಸ್ತಿಗೆ ಸಂಬಂಧಿಸಿದಂತೆ ವಿವಾದವಿದ್ದು ಅದೀಗ ನ್ಯಾಯಾಲಯದ ಕಟಕಟೆ ಏರಿದೆ. ಅನಕೃರಂಥ ಸೃಜನಶೀಲ ಮನಸ್ಸೊಂದಕ್ಕೆ ಅಡಿಗಲ್ಲು ಹಾಕಿದ, ಅವರ ಅದೆಷ್ಟೋ ಕೃತಿಗಳನ್ನು ಪರೋಕ್ಷವಾಗಿ ಪ್ರಭಾವಿಸಿದ ಮನೆಯೊಂದು ಇಂದು ಸಂಪೂರ್ಣವಾಗಿ ಶಿಥಿಲಗೊಂಡು ಕನ್ನಡಿಗರ 'ನವೆಂಬರ್ ಕನ್ನಡಾಭಿಮಾನ'ವನ್ನೇ ಗೇಲಿ ಮಾಡುವಂತೆ ನಿಂತಿದೆ.

ಮೂಲತಃ ತಮಿಳು ಭಾಷಿಕರಾಗಿಯೂ, ಕನ್ನಡದ ರಂಗಭೂಮಿಗೆ ಹೊಸ ಆಯಾಮ ನೀಡಿದ ತ್ಯಾಗರಾಜ ಪರಮಶಿವ ಕೈಲಾಸಂ (ಟಿ.ಪಿ. ಕೈಲಾಸಂ) ಹುಟ್ಟಿ ಬೆಳೆದ 'ವೈಟ್‌ಹೌಸ್' ಇದ್ದದ್ದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ. (ಮಿಂಟೋ ಕಣ್ಣಿನ ಆಸ್ಪತ್ರೆಯ ಎದುರು). "ನಮ್ಮಪ್ಪ ಕಟ್ಟಿದ 'ವೈಟ್‌ಹೌಸ್'ನಲ್ಲಿ ನಾನೊಬ್ಬನೇ ಬ್ಲ್ಯಾಕ್ ಸ್ಪಾಟ್" ಎಂದು ಹಾಸ್ಯಚಟಾಕಿ ಹಾರಿಸುತ್ತಿದ್ದ ಕೈಲಾಸಂ ಅವರ ಬಾಲ್ಯದ ಮನೆ ಇಂದು 'ಮಧುವನ ಹೋಟೆಲ್ ಹಾಗೂ ರುಚಿತಾ ಲಾಡ್ಜ್' ಆಗಿ ಪರಿವರ್ತನೆಗೊಂಡಿದೆ. ತಾವು ಈಗ ಇರುವುದು 'ಆಧುನಿಕ ಕನ್ನಡ ನಾಟಕಗಳ ಹರಿಕಾರ ಟಿ.ಪಿ. ಕೈಲಾಸಂ' ಎಂಬ ಟಿಪಿಕಲ್ ವ್ಯಕ್ತಿಯ ಮನೆಯ ಮೇಲೆ ಎಂಬ ಅರಿವು ಅಲ್ಲಿರುವ ಬಹುತೇಕ ಮಂದಿಗೆ ಇಲ್ಲ. ಈ ಕುರಿತು ಅಲ್ಲಿನ ಗೂಡಂಗಡಿಯ ಮಾಲೀಕ ಕುಂದಾಪುರದ ಬಾಲಕೃಷ್ಣ ಭಟ್ ಅವರಲ್ಲಿ ವಿಚಾರಿಸಿದರೆ, "ಕೈಲಾಸಂ ಅಂದರೆ ಯಾರು ಅಂತ ನಂಗೆ ಗೊತ್ತಿಲ್ಲ ಸರ್. ಇದು ಯಾರ ಮನೆಯೋ ಏನೋ. ಈ ಲಾಡ್ಜ್‌ನ ಮಾಲೀಕರಿಗೂ ಈ ಜಾಗದ ನಿಜವಾದ ವಾರಸ್ದಾರ ಯಾರು ಎಂದು ಗೊತ್ತಿರಲಿಕ್ಕಿಲ್ಲ" ಎನ್ನುತ್ತಾರೆ. ಇದಕ್ಕಿಂತ ಪ್ರಾಮಾಣಿಕ ಉತ್ತರ ಇನ್ನೆಲ್ಲಿ ಸಿಕ್ಕೀತು!

ಕನ್ನಡಕ್ಕೆ 'ದುರ್ಗಾಸ್ತಮಾನ' ರೀತಿಯ ಕೃತಿ ನೀಡಿದ ತಳುಕು ರಾಮಸ್ವಾಮಯ್ಯ ಸುಬ್ಬರಾಯ (ತರಾಸು) ಅವರ ಮನೆ ಕೂಡ ಇಂದು ಅವಗಣನೆಗೆ ತುತ್ತಾಗಿದೆ. ಸರ್ಕಾರ ಬೊಗಸೆಗಟ್ಟಲೇ ಭರವಸೆಯನ್ನು ನೀಡಿದರೂ ಕೂಡ ಕಾಲ ಕಳೆದಂತೆ ತಳುಕು ಗ್ರಾಮದ ತರಾಸು ಅವರ ಮನೆ ಶಿಥಿಲಗೊಳ್ಳುತ್ತಲೇ ಸಾಗಿದೆ. ಸರ್ಕಾರ ನೀಡಿದ ಯಾವ ಹೇಳಿಕೆಯೂ ಈ ತಳುಕು ಗ್ರಾಮದ ತರಾಸು ಅವರ ಮನೆಯನ್ನು ಒಂದು ಸ್ಮಾರಕದ ಸ್ಥಿತಿಗೆ ತರುವಲ್ಲಿ ಸಫಲವಾಗಿಲ್ಲ.

ಗ್ರಂಥಾಲಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳ ನಡುವಿನ ಹಾವು-ಏಣಿ ಆಟದಿಂದ ಈ ಮನೆ ದಿನದಿನಕ್ಕೂ ಸೊರಗುತ್ತಿದೆ. ಚಿತ್ರದುರ್ಗಕ್ಕೆ ಭೇಟಿ ನೀಡಿದ ರಾಜಕಾರಣಿಗಳೆಲ್ಲರೂ ತರಾಸು ಅವರ ಮನೆಯನ್ನು ಜೀರ್ಣೋದ್ಧಾರ ಮಾಡುವ ಮಾತುಗಳನ್ನಾಡುತ್ತಾರೆ. ಆದರೆ ಈವರೆಗೆ ಯಾವ ಅಭಿವೃದ್ಧಿಯೂ ಆಗಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಕನ್ನಡದ ಮತ್ತೊಬ್ಬ ಮಹತ್ವದ ಲೇಖಕ ಹಾಗೂ ಕನ್ನಡ ಸಾಹಿತ್ಯ ವಿದ್ವಾಂಸ ವಿ. ಸೀತಾರಾಮಯ್ಯ ಅವರ ಮನೆ ಕೂಡ ಚಾಮರಾಜಪೇಟೆಯಲ್ಲಿಯೇ ಇದೆ. ಒಂದು ಕಾಲದಲ್ಲಿ ಚಿಂತಕರ ಚಾವಡಿಯಾಗಿದ್ದ ಡಾ. ವಿ.ಸೀ ಅವರ ಮನೆ ಈಗ ಅವರ ಮಕ್ಕಳಲ್ಲಿ ಹಂಚಿ ಹೋಗಿದೆ. ಒಂದು ಕಾಲದಲ್ಲಿ ವಿ.ಸೀ. ಅಧ್ಯಯನ ನಡೆಸುತ್ತಿದ್ದ ಕೋಣೆ ಇಂದು ಕಾರಿನ ಗ್ಯಾರೇಜ್ ಆಗಿ ರೂಪಾಂತರಗೊಂಡಿದೆ. ವಿ.ಸೀ ಅವರಿಗೆ ಸೇರಿದ ಪುಸ್ತಕಗಳು, ಭಾವಚಿತ್ರಗಳು, ಅವರು ಬಳಸುತ್ತಿದ್ದ ಮೈಸೂರು ಪೇಟ, ವಾಕಿಂಗ್ ಸ್ಟಿಕ್ ಎಲ್ಲವನ್ನೂ ಇಂದು 'ಬಿಎಂಶ್ರೀ ಪ್ರತಿಷ್ಠಾನ'ಕ್ಕೆ ಕೊಡುಗೆಯಾಗಿ ನೀಡಲಾಗಿದೆ. ವಿ.ಸೀ. ಹಿರಿಯ ಮಗ ವಿ.ಎಸ್. ಕೃಷ್ಣಮೂರ್ತಿ ಅವರಿಗೆ ತಮ್ಮ ತಂದೆಯ ಮನೆಯನ್ನು ಸ್ಮಾರಕದಂತೆ ಕಾಪಾಡಿಕೊಂಡು ಬರಬೇಕೆಂಬ ಇಚ್ಛೆ ಇದ್ದರೂ ಅದನ್ನು ಸಾಕಾರಗೊಳಿಸುವಷ್ಟು ಚೈತನ್ಯ ಇಲ್ಲ.

ಈ ಎಲ್ಲಾ ಲೇಖಕರಿಗೆ ಹೋಲಿಸಿದರೆ 'ಕನ್ನಡದ ಆಸ್ತಿ' ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ರೇ ತುಸು ಅದೃಷ್ಟವಂತರು ಎನ್ನಬಹುದು. ಬೆಂಗಳೂರಿನ ಗವಿಪುರಂನಲ್ಲಿರುವ 'ಮಾಸ್ತಿ ಮನೆ'ಯಲ್ಲಿ ಮಾಸ್ತಿ ಅವರಿಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವನ್ನೂ ಜೋಪಾನವಾಗಿ ಕಾದಿರಿಸಲಾಗಿದೆ. ಮಾಸ್ತಿ ಅಭಿಮಾನಿಗಳು ಹಾಗೂ ಅವರ ಕುಟುಂಬದ ಸದಸ್ಯರು ಅತ್ಯಂತ ಪರಿಶ್ರಮ ವಹಿಸಿ 'ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್' ಹುಟ್ಟು ಹಾಕುವ ಮೂಲಕ ಮಾಸ್ತಿಯವರ ನೆನಪನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೈಂಕರ್ಯದಲ್ಲಿ ತೊಡಗಿದ್ದಾರೆ. "ಸರ್ಕಾರದಿಂದ ನಯಾಪೈಸೆಯ ಸಹಾಯವನ್ನೂ ನಾವು ಸ್ವೀಕರಿಸಿಲ್ಲ. ಈ ಕುರಿತು ಒಮ್ಮೆ ಅಧಿಕಾರಿಯೊಬ್ಬರನ್ನು ಭೇಟಿಯಾದರೆ 'ಮಾಸ್ತಿ ಅವರ ಕೃತಿಗಳ ಕಾಪಿರೈಟನ್ನು ಸರ್ಕಾರಕ್ಕೆ ಬಿಟ್ಟುಕೊಡಿ. ಅವರ ಪುಸ್ತಕವನ್ನೂ ನಾವೇ ಅಚ್ಚು ಹಾಕಿಸುತ್ತೇವೆ' ಎಂದೆಲ್ಲಾ ತುಂಬಾ ಒರಟಾಗಿ ನಡೆದುಕೊಂಡರು. ಮಾಸ್ತಿ ಅವರ ನೆನಪನ್ನು ಹಾಗೂ ಅವರು ಕನ್ನಡಕ್ಕೆ ನೀಡಿದ ಕೊಡುಗೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮದು. ಮಾಸ್ತಿ ಪುಸ್ತಕಗಳ ಪುನರ್‌ಮುದ್ರಣಕ್ಕೆ ಹಣದ ಅವಶ್ಯಕತೆ ಸಾಕಷ್ಟಿದೆ. ಆದರೆ ನಮ್ಮ ಧ್ಯೇಯದೊಂದಿಗೆ ಯಾವುದೇ ರೀತಿಯ ರಾಜಿ ಇಲ್ಲ" ಎಂದು ಖಡಾಖಂಡಿತವಾಗಿ ಹೇಳುತ್ತಾರೆ ಟ್ರಸ್ಟ್‌ನ ಕಾರ್ಯಕಾರಿ ಖಜಾಂಚಿ, ಮಾಸ್ತಿ ಅವರ ಮೊಮ್ಮಗಳು, ಡಾ.ವಿ. ವಸಂತಶ್ರೀ.

"ಸರ್ಕಾರ ಎಂದರೆ ಸಕಲವನ್ನೂ ಬಲ್ಲ ದೇವರಲ್ಲ. ಅದು ಜನರ ಪರವಾಗಿ ಆಡಳಿತ ಮಾಡುವ ವ್ಯಕ್ತಿಗಳ ಸಮೂಹವಷ್ಟೇ. ಸಾಹಿತಿಗಳ ಮನೆಯನ್ನು ಸ್ಮಾರಕವಾಗಿಸಲು ಸರ್ಕಾರವನ್ನೇ ನೆಚ್ಚಿ ಕುಳಿತರೆ ಸಾಲದು. ಆ ಕುರಿತ ಅರಿವು ಮೊದಲು ನಮ್ಮ ಜನಸಾಮಾನ್ಯರಲ್ಲಿ ಮೂಡಬೇಕು. ತಮ್ಮ ಊರಿನ ಸಾಹಿತಿಯ ಮನೆಯನ್ನು ಅವರ ಹೆಸರಿನಲ್ಲಿ ಸ್ಮಾರಕವಾಗಿಸಬೇಕು ಎಂಬ ಕಾಳಜಿ ಮೊದಲು ಆ ಗ್ರಾಮದ ಜನತೆಯಲ್ಲಿ ಮೂಡಬೇಕು. ಆಗ ಮಾತ್ರ ಸರ್ಕಾರ ಆ ನಿಟ್ಟಿನಲ್ಲಿ ಕ್ರಿಯಾಶೀಲವಾಗಬಹುದು" ಎಂಬ ಅಭಿಪ್ರಾಯ 'ಬಿ.ಎಂ.ಶ್ರೀ. ಪ್ರತಿಷ್ಠಾನ'ದ ಕಾರ್ಯದರ್ಶಿ ಡಾ.ನಾ. ಗೀತಾಚಾರ‍್ಯ ಅವರದ್ದು.

ಇವು ಕೆಲವು ಉದಾಹರಣೆಗಳಷ್ಟೇ. ಇನ್ನೆಷ್ಟೋ ಸಾಹಿತಿಗಳು ವಿಸ್ಮೃತಿಗೆ ಸಂದು ದಶಕಗಳೇ ಕಳೆದಿವೆ. ಅವರ ಬೆರಳೆಣಿಕೆಯಷ್ಟು ಕೃತಿಗಳನ್ನು ಹೊರತುಪಡಿಸಿ ಆ ಸಾಹಿತಿಗಳು ಬೇರೆ ಯಾವ ರೀತಿಯಿಂದಲೂ ಇಂದಿನ ತಲೆಮಾರಿಗೆ ಲಭ್ಯರಿಲ್ಲ.

ಬೆಂಗಳೂರಿನಲ್ಲಿ ತಿರುವಳ್ಳುವರ್ ಹಾಗೂ ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆಯನ್ನು ಸ್ಥಾಪಿಸುವುದರ ಹಿಂದೆ ಉಭಯ ನಾಡುಗಳ ಸಾಂಸ್ಕೃತಿಕ ಕೊಡು-ಕೊಳ್ಳುವಿಕೆಯೇ ಪ್ರಮುಖ ಕಾಳಜಿಯಾಗಿದ್ದರೆ, ನಮ್ಮದೇ ಅಸಂಖ್ಯಾತ ಸಾಹಿತಿಗಳ ಕುರಿತು ಏಕೆ ಈ ಜಾಣಕುರುಡು? ಯಾವುದೇ ಒಂದು ಪ್ರಾಮಾಣಿಕ ಆಶಯ, ತಾತ್ವಿಕ ಅನಿವಾರ್ಯತೆಗಳಿಲ್ಲದ ಈ 'ಪ್ರತಿಮಾ ಸಂಸ್ಕೃತಿ' ಯಾವ ರೀತಿಯಲ್ಲಿ ಕನ್ನಡದ ಭಾಷೆಗೆ, ಸಂಸ್ಕೃತಿಗೆ ಪೂರಕ? ಉತ್ತರವನ್ನು ಸರ್ಕಾರದಿಂದ ಬಯಸುವಂತಿಲ್ಲ. ನಾವೇ ಕಂಡುಕೊಳ್ಳಬೇಕು.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .