|
ಬಿಎಸ್‌ಎಫ್: ಆಟಾಟೋಪ
ಇಲ್ಲಿ ಭಾರತದ ಗಡಿ ಹರಾಜಿಗಿದೆ! 'ಪ್ರಜಾಪೀಡಕ' ಪಡೆಯಾಗಿ ಮಾರ್ಪಾಟಾಗಿರುವ ಬಿಎಸ್‌ಎಫ್

ಗಡಿ ರಕ್ಷಣಾ ಪಡೆಯನ್ನು (ಬಿಎಸ್‌ಎಫ್)
'ದೊಡ್ಡ ರಕ್ಷಣಾ ಪ್ರಹಸನ' ಪಡೆ ಎಂದು ಮರುನಾಮಕರಣ ಮಾಡಬೇಕಾಗಿ ಬಂದಿದೆಯೇ?
ಪಶ್ಚಿಮ ಬಂಗಾಳ-ಬಾಂಗ್ಲಾದೇಶ ಗಡಿ ಪ್ರದೇಶದ ಬಿಎಸ್‌ಎಫ್ ಯೋಧರು
ನಡೆದುಕೊಳ್ಳುವ ರೀತಿಯನ್ನು ಗಮನಿಸಿದರೆ ಮೇಲಿನ ಈ ಅನ್ವರ್ಥ ನಾಮದಲ್ಲಿ
ಹುರುಳಿಲ್ಲದಿಲ್ಲ ಎಂದೆನಿಸದೇ ಇರುವುದಿಲ್ಲ. ಅಲ್ಲಿನ ಗ್ರಾಮಸ್ಥರು ಬಿಎಸ್‌ಎಫ್
ಯೋಧರನ್ನು 'ಪ್ರಜಾಪೀಡಕರು' ಎಂದೇ ಕರೆಯುತ್ತಾರೆ. ಹಳ್ಳಿಗರ ಮೇಲೆ ಅವರು
ನಡೆಸುವ ದೌರ್ಜನ್ಯ, ಅತ್ಯಾಚಾರಗಳು ಮತ್ತು ಯುವಕರ ಕಗ್ಗೊಲೆಗಳಿಗೆ ಅವರು
ನೀಡುವ ಹುರುಳಿಲ್ಲದ ಕಾರಣಗಳಿಂದಾಗಿ ಅವರಿಗೆ ಈ ಅನ್ವರ್ಥ ನಾಮ ಒದಗಿ ಬಂದಿದೆ.
ಇದು ಸಾಲದೆಂಬಂತೆ, ರಾಷ್ಟ್ರದ ರಕ್ಷಣೆ ಮಾಡುವ ಗುರುತರ ಹೊಣೆ ಹೊತ್ತಿರುವ
ಬಿಎಸ್‌ಎಫ್ ಒಂದೊಂದೇ ಕಿಲೋಮೀಟರ್ ಭೂಮಿಯನ್ನು ಬಾಂಗ್ಲಾದೇಶದ ಮಡಿಲಿಗೆ
ಹಾಕುತ್ತಿದೆ.
ಈ ಅನಧಿಕೃತ 'ಭೂದಾನ' ಜಲಂಗಿ ಪ್ರದೇಶದಲ್ಲಿ
ತುಂಬ ಗುಪ್ತವಾಗಿ ನಡೆಯುತ್ತಿದೆ. ಆ ಪ್ರದೇಶದಲ್ಲಿ ಹರಿಯುತ್ತಿರುವ ಪದ್ಮ ನದಿ
ಈ ಸ್ಥಳದಲ್ಲಿ ಹರಿವಿನ ದಿಕ್ಕನ್ನು ಬದಲಿಸುತ್ತಾ ಪೂರ್ವದಿಂದ ಪಶ್ಚಿಮದೆಡೆಗೆ
ಹರಿಯುತ್ತದೆ. ಗ್ರಾಮದ ನಕಾಶೆ ಪ್ರಕಾರ ಕಳೆದ 10-15 ವರ್ಷಗಳಲ್ಲಿ ಆ ನದಿ
ಐದರಿಂದ ಹದಿನೈದು ಕಿಲೋಮೀಟರ್‌ನಷ್ಟು ಪಶ್ಚಿಮದೆಡೆಗೆ ಸರಿದಿದೆ. ಅದಕ್ಕೆ
ಪೂರಕವಾಗಿ ಬಿಎಸ್‌ಎಫ್ ತನ್ನ ಕ್ಯಾಂಪನ್ನು ಪೂರ್ವದ ಭೂ-ಪ್ರದೇಶದೆಡೆಗೆ
ಸಾಗಿಸುವುದರ ಬದಲು, ಪಶ್ಚಿಮಕ್ಕೆ ಸರಿಯುತ್ತಾ ಕ್ರಮೇಣ ಆ ಪ್ರದೇಶವನ್ನು
ಬಾಂಗ್ಲಾದ ವಶಕ್ಕೆ ಒಪ್ಪಿಸುತ್ತಿದೆ. ಇಷ್ಟು ಸಾಲದೆಂಬಂತೆ ಅವರ ಶನಿದೃಷ್ಟಿ
ಗ್ರಾಮಸ್ಥರ ಜಮೀನಿನ ಮೇಲೂ ಬಿದ್ದಿದ್ದು ಕೆಲವೊಮ್ಮೆ ಸರ್ಕಾರದ ಬೆಲೆಗೆ,
ಇನ್ನೂ ಕೆಲವೊಮ್ಮೆ ಒತ್ತಾಯಪೂರ್ವಕವಾಗಿ ಗ್ರಾಮಸ್ಥರ ಜಮೀನನ್ನು ಬಿಎಸ್‌ಎಫ್
ವಶಪಡಿಸಿಕೊಳ್ಳುತ್ತಿದೆ.
ಬಿಎಸ್‌ಎಫ್ ಪಡೆಗೆ ಅಲ್ಲಿನ ಜನ
'ಪ್ರಜಾಪೀಡಕರು' ಎಂಬ ಬಿರುದನ್ನು ಸುಮ್ಮನೇ ದಯಪಾಲಿಸಿಲ್ಲ. ಅವರನ್ನು ಹಾಗೆ
ಕರೆಯಲು ಸಾಕಷ್ಟು ಪುರಾವೆಗಳಿವೆ. ಜಲಂಗಿಯ ಗೊಷಪುರದ ಜಮಾಲ್ ಮೊಂದಲ್ ಎಂಬ
ರೈತನ ಜಮೀನು ಪದ್ಮ ನದಿಯ ಒಳಹರಿವಿನಲ್ಲಿ ಮುಳುಗಡೆ ಆಗಿದ್ದ ಕಾರಣ
ಪದ್ಧತಿಯಂತೆ ಜಮಾಲ್ ನದಿಯ ಪೂರ್ವ ಪಾತ್ರದಲ್ಲಿ ಹೊಸದಾಗಿ ಸೃಷ್ಟಿಯಾಗಿದ್ದ
ಭೂ-ಪ್ರದೇಶವನ್ನು ತಮ್ಮ ಕೃಷಿ ಚಟುವಟಿಕೆಗೆ ಬಳಸಿಕೊಂಡಿದ್ದರು.
ಜಾನುವಾರುಗಳೊಂದಿಗೆ ನದಿ ದಾಟಲು ಕಳೆದ ಮೂರು ವರ್ಷಗಳಿಂದ ಬಿಎಸ್‌ಎಫ್ ಪಡೆ
ಅವಕಾಶ ಮಾಡಿಕೊಡುತ್ತಿಲ್ಲ. ಮಾತ್ರವಲ್ಲ ಅವರನ್ನು ಮಾನಸಿಕ ಹಾಗೂ ದೈಹಿಕ
ಹಿಂಸೆಗೆ ಒಳಪಡಿಸಲಾಗುತ್ತಿದೆ. ಜಮಾಲ್‌ನ ನೆರೆ ಮನೆಯ ರೈತ ಕೂಡ ತನ್ನ
ಎಮ್ಮೆಗಳನ್ನು ನದಿಯ ಮತ್ತೊಂದು ದಡಕ್ಕೆ ಸಾಗಿಸಲು ಬಿಎಸ್‌ಎಫ್‌ನ ಹುಂಡಿಗೆ
ರೂ. 21000 ದಕ್ಷಿಣೆ ಸುರಿದಿದ್ದಾರೆ.
ಜಲಂಗಿಯ ಗಡಿ ಭಾಗದ ಮುರ್ಷಿದಾಬಾದ್
ಬಾಂಗ್ಲಾದೇಶಕ್ಕೆ ಅಕ್ರಮ ಪಶು ಸಾಗಾಣಿಕೆ ಮಾಡುವುದರಲ್ಲಿ ಕುಖ್ಯಾತ.
ಬಾಂಗ್ಲಾದೇಶದಲ್ಲಿ ಒಂದು ಹಸುವಿಗೆ ಭಾರತದ ದುಪ್ಪಟ್ಟು ಬೆಲೆ (ರೂ. 44000)
ದೊರೆಯುತ್ತದೆ. ಹೀಗಾಗಿ ಅಕ್ರಮ ಸಾಗಣಿಕಾ ಜಾಲ ಬಿಹಾರದ ಭಗಲ್‌ಪುರ ಮಾರ್ಗವಾಗಿ
ಹರಿಯಾಣದವರೆಗೂ ತನ್ನ ಕರಾಳ ಹಸ್ತ ಚಾಚಿದೆ. ಈ ಮಾರ್ಗ ಭಾರತೀಯ ಯುವತಿಯರ
ಮಾರಾಟ ಜಾಲಕ್ಕೂ ಬಳಕೆಯಾಗುತ್ತಿದೆ. ಹಾಗೆ ನೋಡಿದರೆ ಒಂದು ರಾಷ್ಟ್ರದ ರಕ್ಷಣಾ
ಪಡೆಯಾಗಿ ಬಿಎಸ್‌ಎಫ್ ಇಂಥ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಮುರಿದುಕೊಂಡು
ಬೀಳಬೇಕಾಗಿತ್ತು. ಆದರೆ ಆಗುತ್ತಿರುವುದೇ ಬೇರೆ. ಅಲ್ಲಿ ಭವ್ಯ ಭಾರತದ
ಗಡಿಯನ್ನೇ ಹರಾಜಿಗೆ ಇಡಲಾಗುತ್ತಿದೆ ಎಂಬ ವದಂತಿಯೂ ಇದೆ! ಅತಿ ಹೆಚ್ಚು
'ಕಪ್ಪ ಕಾಣಿಕೆ' ಸಲ್ಲಿಸಿದವರಿಗೆ ಆರು ತಿಂಗಳುಗಳ ಕಾಲ ಅಕ್ರಮ ಸಾಗಣಿಕೆಯ
ಪರವಾನಗಿ ನೀಡಲಾಗುತ್ತಿದೆ. ಆತ ತನ್ನ ವ್ಯಾಪಾರದ ಇಂತಿಷ್ಟು ಪಾಲನ್ನು
ಕಾಲಕಾಲಕ್ಕೆ ಬಿಎಸ್‌ಎಫ್ ಔಟ್‌ಪೋಸ್ಟ್‌ಗೆ ತಲುಪಿಸಿದರಾಯ್ತು ಅಷ್ಟೇ!
ನಿಗದಿತ ಪಾಲನ್ನು ನೀಡಲು ನಿರಾಕರಿಸಿದವರು ಹಾಗೂ ಕೊಡಲಾಗದವರ ಮೇಲೆ ಬಿಎಸ್‌ಎಫ್
ಅಮಾನುಷವಾಗಿ ದೌರ್ಜನ್ಯವೆಸಗುತ್ತದೆ.
ಇಲ್ಲಿ ಅವ್ಯಾಹತವಾಗಿ ಸಾಗುತ್ತಿರುವ ಮಾನವ
ಹಕ್ಕು ಉಲ್ಲಂಘನೆಗೆ ಹಾಗೂ ದೇಶದ ಭೂಮಿಯನ್ನು ಬಾಂಗ್ಲಾದೇಶದ ಸುಪರ್ದಿಗೆ
ಬಿಟ್ಟು ಕೊಡುತ್ತಿರುವುದಕ್ಕೆ ಯಾವುದೇ ಅಡ್ಡಿ-ಆತಂಕಗಳು ಇಲ್ಲದೇ ಬಿಎಸ್‌ಎಫ್
ದಿನ ದಿನಕ್ಕೂ "ದೊಡ್ಡ ರಕ್ಷಣಾ ಪ್ರಹಸನವಾಗಿ" ಮಾರ್ಪಾಟಾಗುತ್ತಿದೆ
ಎಂಬುದರಲ್ಲಿ ಎರಡು ಮಾತಿಲ್ಲ.
ಟಿಎಸ್‌ಐ
ಸಿ.ಎಸ್. ಭಟ್ಟಾಚಾರ್ಜಿ
ಕೇರಳ: ಕಳ್ಳಸಾಗಣೆ
ದೇವರ ನಾಡಿನಲ್ಲಿ 'ಅಕ್ರಮ ಸಲಗ'! ಕಾನೂನಿನ ಅಡಿ ನುಸುಳಿ ಆನೆಗಳ ಕಳ್ಳಸಾಗಣೆ ಮಾಡುವ ದಂಧೆಕೋರರು

ಚಿನ್ನ, ವಜ್ರ, ಮಾದಕ ದ್ರವ್ಯಗಳು ಅಥವಾ
ಇನ್ನಿತರ ಬೆಲೆ ಬಾಳುವ ವಸ್ತುಗಳ ಕಳ್ಳಸಾಗಣೆ ಬಗ್ಗೆ ಕೇಳಿದ್ದೀರಿ. ಆದರೆ
'ಬೃಹತ್' ಕಳ್ಳಸಾಗಣೆಯ ಬಗ್ಗೆ ಕೇಳಿದ್ದೀರಾ? ಕೇರಳದಲ್ಲಿ ಈ ಪ್ರಶ್ನೆ
ಕೇಳಿದರೆ ಥಟ್ಟನೆ ಬರುವ ಉತ್ತರ: ಆನೆ ಕಳ್ಳಸಾಗಾಣಿಕೆ!
ಹೌದು, ಕೇರಳ ರಾಜ್ಯದಲ್ಲಿ ಇದೀಗ ಆನೆ
ಕಳ್ಳಸಾಗಾಣಿಕೆ ಲಕ್ಷಾಂತರ ರೂಪಾಯಿಗಳಿಸುವ ಬೃಹತ್ ದಂಧೆಯಾಗಿ ಮಾರ್ಪಟ್ಟಿದೆ.
ದೊಡ್ಡ ಗಾತ್ರದ ಆನೆಗಳು ಅಲ್ಲಿ ರೂ. 30 ಲಕ್ಷಕ್ಕೂ ಹೆಚ್ಚಿನ ಬೆಲೆಗೆ
ಮಾರಾಟವಾಗುತ್ತಿವೆ. "ಆನೆ ಕಳ್ಳಸಾಗಣೆ ಖಂಡಿತ ಸುಲಭದ ಕೆಲಸವಲ್ಲ. ಆದರೆ
ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುವ ದಂಧೆ ಅದು" ಎನ್ನುತ್ತಾರೆ ಕಳ್ಳಸಾಗಣೆ
ವಿರೋಧಿಸುವ ಆನೆ ಮಾಲೀಕರೊಬ್ಬರು.
ಇತರ ರಾಜ್ಯಗಳಿಂದ ಆನೆಗಳನ್ನು ಖರೀದಿಸಲು
ಕೇರಳ ರಾಜ್ಯ ನಿರ್ಬಂಧ ವಿಧಿಸಿದೆ. ಆದರೆ, ಪ್ರತಿ ಕಾನೂನಿನ ಅಡಿ ನುಸುಳಲೂ
ಅವಕಾಶ ಇದ್ದೇ ಇರುತ್ತಲ್ಲವೇ? ಹೀಗಾಗಿ ಆನೆ ಖರೀದಿ ನಿರ್ಬಂಧದಲ್ಲೂ
ಕಳ್ಳಸಾಗಣೆದಾರರು ಇದೇ ತಂತ್ರ ಅನುಸರಿಸುತ್ತಿದ್ದಾರೆ. ಆನೆ ವ್ಯಾಪಾರಿಗಳು
ನೆರೆರಾಜ್ಯಗಳಿಂದ ದೊಡ್ಡ ಗಾತ್ರದ ಆನೆಗಳನ್ನು ಅದು ಹೇಗೋ ರಾಜ್ಯಕ್ಕೆ ತರುವ
ಮೂಲಕ ವನ್ಯಜೀವಿ ಇಲಾಖೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಹಣ
ಗಳಿಸುತ್ತಿದ್ದಾರೆ.
ಬಿಹಾರ, ಒರಿಸ್ಸಾ ಮತ್ತು ಆಂಧ್ರಪ್ರದೇಶಗಳಿಂದ
ರೂ. 5 ಲಕ್ಷಕ್ಕೂ ಕಡಿಮೆ ಬೆಲೆಗೆ ಖರೀದಿಸಿದ ಆನೆಗಳನ್ನು ಕೇರಳದಲ್ಲಿ ಸುಮಾರು
ರೂ. 40 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ. ಕೇರಳದಲ್ಲಿ ಆನೆಗಳಿಗೆ ಭಾರಿ
ಬೇಡಿಕೆ ಇರುವುದರಿಂದ ಸಲಗದ ಮೌಲ್ಯ ಹೆಚ್ಚುತ್ತಲೇ ಇದೆ.
ಈ ಮೊದಲು ಸರ್ಕಾರ ಕಳ್ಳಸಾಗಣಿಕೆ ತಡೆಯಲು
ಮತ್ತು ಅಕ್ರಮ ಆನೆ ಪತ್ತೆ ಹಚ್ಚಲು ಪ್ರತಿ ಆನೆಗೂ ಮೈಕ್ರೋಚಿಪ್ ಅಳವಡಿಸುವಂತೆ
ಆನೆ ಮಾಲೀಕರಿಗೆ ಸೂಚನೆ ನೀಡಿತ್ತ್ತು. ಆದರೆ, ರಂಗೋಲಿಯಡಿ ನುಸುಳುವ
ಚಾಣಾಕ್ಷ ವ್ಯಾಪಾರಿಗಳು ಕಳ್ಳಸಾಗಣೆಯಿಂದ ಖರೀದಿಸಿದ ಆನೆಗಳನ್ನು ಈಗಾಗಲೇ
ಮೃತಪಟ್ಟ ಆನೆಗಳ ಹೆಸರಿನಲ್ಲಿ ನೋಂದಾಯಿಸುತ್ತಿದ್ದಾರೆ! ಅಷ್ಟೇ ಅಲ್ಲ,
ವನ್ಯಜೀವಿ ಇಲಾಖೆಯ ಪಶುವೈದ್ಯರ ನೆರವಿನಿಂದ ಆನೆಗಳಿಗೆ ನಕಲಿ ಮೈಕ್ರೋಚಿಪ್‌ಗಳನ್ನು
ಅಳವಡಿಸುತ್ತಾರೆ. ಈ ಕಾರ್ಯಕ್ಕೆ ವೈದ್ಯರಿಗೆ ಒಂದು ಲಕ್ಷ ರೂ. ನೀಡಲಾಗುತ್ತದೆ
ಎಂಬ ಆರೋಪಗಳೂ ಕೇಳಿಬರುತ್ತಿವೆ. ಮೈಕ್ರೋಚಿಪ್ ಅಳವಡಿಸಿದ ಬಳಿಕ ಅಕ್ರಮ
ಆನೆಗಳು 'ಸಕ್ರಮ' ಆಗಿಬಿಡುತ್ತವೆ!
ಈ ಮುನ್ನ, ಎಲ್ಲಾ ಆನೆಗಳಿಗೂ ಮೈಕ್ರೋಚಿಪ್
ಅಳವಡಿಸಲು ಒಂದು ವರ್ಷದ ಗಡುವು ನೀಡಲಾಗಿತ್ತು. ಆದರೆ, ವ್ಯಾಪಾರಿಗಳು ಹಿರಿಯ
ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಈ ಗಡುವಿನ ಅವಧಿಯನ್ನು ಮತ್ತೊಂದು ವರ್ಷ
ಮುಂದೂಡುವಂತೆ ಮಾಡಿದ್ದಾರೆ. ಕಳೆದ ಮೂರು ವರ್ಷದಿಂದ ಈ ಮುಂದೂಡಿಕೆ
ನಡೆಯುತ್ತಲೇ ಇದೆ. ಈ ಗಡುವನ್ನು ಎಷ್ಟು ವರ್ಷ ಮುಂದೂಡಲಾಗುತ್ತದೆಯೋ, ಅಷ್ಟು
ವರ್ಷ ಆನೆಗಳ ಕಳ್ಳಸಾಗಣೆದಾರರಿಗೆ ಕೇರಳ ರಾಜ್ಯ ಸ್ವರ್ಗವಾಗಿ ಮಾರ್ಪಾಡಾಗಲಿದೆ.
ನೆರೆರಾಜ್ಯಗಳಿಂದ ವಾಹನಗಳ ಮೂಲಕ ಅಥವಾ ರಹಸ್ಯ
ಮಾರ್ಗಗಳ ಮೂಲಕ ಆನೆಗಳನ್ನು ಕೇರಳಕ್ಕೆ ಕರೆತಂದು, ಮೈಕ್ರೋಚಿಪ್‌ಗಳನ್ನು
ಅಳವಡಿಸುವವರೆಗೆ ಅವುಗಳನ್ನು ರಹಸ್ಯ ತಾಣದಲ್ಲೇ ಇರಿಸಲಾಗುತ್ತದೆ. ಕೇರಳದಲ್ಲಿ
ದೇವಾಲಯ, ಸಾಂಪ್ರದಾಯಿಕ ಹಬ್ಬ ಇನ್ನಿತರ ಕಾರ್ಯಕ್ರಮಗಳಲ್ಲಿ ಆನೆಗಳ ಪಾತ್ರ
ಬಹುಮುಖ್ಯ. ಹಾಗಾಗಿಯೇ ಅಲ್ಲಿ ಆನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಈ
ಬೇಡಿಕೆ ಸಲಗ ಕಳ್ಳಸಾಗಣೆಗೆ ದಾರಿ ಮಾಡಿಕೊಟ್ಟಿದೆ. ಕಳ್ಳಸಾಗಣೆಯನ್ನು
ಕಟ್ಟುನಿಟ್ಟಾಗಿ ತಡೆಯುವ ಜವಾಬ್ದಾರಿ ವನ್ಯಜೀವಿ ಇಲಾಖೆಯ ಮೇಲಿದೆ. ಆದರೆ
ಬೇಲಿಯೇ ಎದ್ದು ಹೊಲ ಮೇಯ್ದರೆ? ಆನೆಗಳ ಕಳ್ಳಸಾಗಾಣಿಕೆಗೆ ಕೊನೆ ಇಲ್ಲವೇನೋ...
ಟಿಎಸ್‌ಐ
ಅನು ವಾರಿಯರ್
ಅಸ್ಸಾಂ: ರಂಗಭೂಮಿ
ರಂಗಭೂಮಿಗೂ 'ಸೆನ್ಸಾರ್' ಕಾಟ ಅಶ್ಲೀಲ ಭಿತ್ತಿಪತ್ರ ಪ್ರದರ್ಶನಕ್ಕಾಗಿ ನಾಟಕ ಕಂಪನಿಗಳ ವಿರುದ್ಧ ಕಟುಟೀಕೆ

ವರ್ಷಕ್ಕೆ ಮೂರ‍್ನಾಲ್ಕು ಚಿತ್ರಗಳಷ್ಟೇ
ಬಿಡುಗಡೆಯಾಗುತ್ತಾ ದಶಕಗಳಿಂದ ನರಸತ್ತಂತಿರುವ ಅಸ್ಸಾಂ ಚಿತ್ರೋದ್ಯಮ
ಕುಂಟುತ್ತಾ ಸಾಗಿದ್ದರೆ, ಇಲ್ಲಿನ ರಂಗಭೂಮಿ ಮಾತ್ರ ಪ್ರಬುದ್ಧವಾಗಿ ಬೆಳೆದಿದೆ.
ರಾಜ್ಯದಲ್ಲಿ ರಂಗಭೂಮಿ ಸ್ವಾವಲಂಬಿ ಹಾಗೂ ಲಾಭದಾಯಕ ಉದ್ಯಮವಾಗಿ
ಬೆಳೆಯುತ್ತಿದೆ ಎಂದರೆ ತಪ್ಪಾಗದು. ಈಗಾಗಲೇ ಜನಮನ್ನಣೆ ಗಳಿಸಿರುವ 'ಟೈಟಾನಿಕ್',
'ಲೇಡಿ ಡಯಾನಾ' ಮತ್ತು 'ಬೆನಜೀರ್'ನಂತಹ ನಾಟಕಗಳ ತಾಂತ್ರಿಕ ನೈಪುಣ್ಯತೆ ಹಾಗೂ
ಗುಣಮಟ್ಟ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಹೆಸರು ಮಾಡಿದ ಇದು ಅಸ್ಸಾಂ
ರಂಗಭೂಮಿಯ ಮೌಲ್ಯಕ್ಕೆ ಹಿಡಿದ ಕನ್ನಡಿ. ಆದರೆ, 2009ರ ನಾಟಕ ಪ್ರದರ್ಶನ
ತಿರುಗಾಟಕ್ಕೆ ಸಿದ್ಧತೆ ನಡೆಸುತ್ತಿರುವ ರಾಜ್ಯದ ಸುಮಾರು 25 ನಾಟಕ ಕಂಪನಿಗಳು
ಇದೀಗ ವಿವಾದಕ್ಕೆ ಗುರಿಯಾಗಿವೆ. ಟಿಕೆಟ್ ಮಾರಾಟವಾಗಬೇಕು ಎಂಬ ಸ್ವಾರ್ಥದಿಂದ
ಕಂಪನಿಗಳು ರಾಜ್ಯದಾದ್ಯಂತ ಅಶ್ಲೀಲ ಭಿತ್ತಿಪತ್ರಗಳನ್ನು ಪ್ರಕಟಿಸಿವೆ ಎಂಬ
ಆರೋಪಗಳು ಎಲ್ಲೆಡೆ ಕೇಳಿಬರುತ್ತಿದೆ.
ರಾಜ್ಯದಾದ್ಯಂತ 'ಅರೆ ಬೆತ್ತಲೆ' ನಟಿಯರ
ಚಿತ್ರಗಳನ್ನೊಳಗೊಂಡ ಭಿತ್ತಿಪತ್ರಗಳನ್ನು ಪ್ರಕಟಿಸಿರುವುದರ ವಿರುದ್ಧ
ಸ್ಥಳೀಯ ಯುವ ಸಂಘಟನೆಯಾದ 'ಅಸ್ಸಾಂ ಜಾತ್ಯತೀತವಾದಿ ಯುವ ಛಾತ್ರ
ಪರಿಷತ್'(ಎಜೆವೈಸಿಪಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. "ಈ ತಿಂಗಳ
ಆರಂಭದಲ್ಲೇ ನಾವು ಈ ಬಗ್ಗೆ ಸಭೆ ಕರೆದು, ಅಶ್ಲೀಲ ಭಿತ್ತಿಪತ್ರಗಳನ್ನು
ತೆಗೆಯುವಂತೆ ಕೇಳಿಕೊಂಡಿದ್ದೇವೆ" ಎನ್ನುತ್ತಾರೆ ಎಜೆವೈಸಿಪಿ ನಲ್ಬಾರಿ ಘಟಕದ
ಮುಖ್ಯಸ್ಥ ದಿಲ್ಜಿತ್ ಬರ್ಮನ್. ಅಷ್ಟೇ ಅಲ್ಲ, ನಾಟಕ ಉದ್ಯಮವನ್ನು ಸರ್ಕಾರದ
ಸುಪರ್ದಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿರುವ ಅವರು, "ಈ ರಂಗಭೂಮಿ ತಂಡಗಳು
ಕೆಲವು ಕುಟುಂಬಗಳ ನಿಯಂತ್ರಣದಲ್ಲಿರುವುದರಿಂದ ರಂಗಭೂಮಿ ಒಂದು ಉದ್ಯಮವಾಗಿ
ಬೆಳೆದಿದೆ ಎನ್ನುವುದೂ ಕಷ್ಟಸಾಧ್ಯ. ವರ್ಷವಿಡೀ ಗಾಣದೆತ್ತಿನಂತೆ ದುಡಿಯುವ
ರಂಗಕರ್ಮಿಗಳಿಗೆ ಒಪ್ಪೊತ್ತಿನ ಊಟಕ್ಕೆ ಸಾಲುವಷ್ಟು ಹಣವೂ ಸಿಗುವುದಿಲ್ಲ"
ಎನ್ನುತ್ತಾರೆ ದಿಲ್ಜಿತ್. ಕಳೆದ ವರ್ಷದ ನಾಟಕ ಪ್ರದರ್ಶನಗಳ ಸಂದರ್ಭವೂ ಕತೆಗೆ
ಪೂರಕವಲ್ಲದ ಅಶ್ಲೀಲ ದೃಶ್ಯಗಳನ್ನು ಮಧ್ಯೆ ತುರುಕಲಾಗಿತ್ತು ಎಂದು ಎಜೆವೈಸಿಪಿ
ಆರೋಪಿಸಿದೆ. ಕೊಹಿನೂರ್, ಹೆಂಗೂಲ್, ಭಾಗ್ಯದೇವಿ, ಬೊರ್ಡೋಯ್ಸಿಲಾ, ರಾಜ್
ತಿಲಕ್ ಮೊದಲಾದ ಕೆಲವು ಪ್ರಮುಖ ಸಂಸ್ಥೆಗಳ ಭಿತ್ತಿಪತ್ರಗಳ ಮೇಲೆ ಎಜೆವೈಸಿಪಿ
ಅಪವಾದ ಹೊರಿಸಿದೆ. ಆದರೆ ನಾಟಕ ಕಂಪನಿಗಳ ಮಾಲೀಕರು ಮಾತ್ರ ವ್ಯತಿರಿಕ್ತ
ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. "ಹಗಲಿರುಳು ದುಡಿದು ತಣ್ಣಗೆ
ಮಲಗುವ ಜನಸಾಮಾನ್ಯರನ್ನು ರಂಗಭೂಮಿಯತ್ತ ಸೆಳೆಯುವ ಉದ್ದೇಶದಿಂದ ನಾವು
ನಾಟಕಗಳಲ್ಲಿ ಕೆಲವು ಆಕರ್ಷಣೆಗಳನ್ನು ನೀಡಲಾರಂಭಿಸಿದ್ದೇವೆ" ಎನ್ನುವುದು
ಹಲವು ವರ್ಷಗಳಿಂದ ಈ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಭಾಗ್ಯದೇವಿ ನಾಟಕ
ಕಂಪನಿಯ ಮಾಲೀಕ ಸುಬೋಧ್ ಮಜುಂದಾರ್ ಅವರ ಅಭಿಪ್ರಾಯ.
ಇನ್ನೊಂದು ಜನಪ್ರಿಯ ನಾಟಕ ಕಂಪನಿಯಾದ
'ಅಬಹನ್'ನ ಮಾಲೀಕ ಕೃಷ್ಣ ರಾಯ್ ಮಾತ್ರ ಇಂತಹ ವಿವಾದಗಳಿಗೆ ಆಹಾರವಾಗಲು ಸುತರಾಂ
ಸಿದ್ಧರಿಲ್ಲ. "ನಾವು ಸಾಮಾಜಿಕ ಕಳಕಳಿಯನ್ನು ಗಮನದಲ್ಲಿಟ್ಟುಕೊಂಡೇ ನಾಟಕ
ಪ್ರದರ್ಶನಗಳನ್ನು ಮಾಡುತ್ತಿದ್ದೇವೆ. ನಮ್ಮ ಭಿತ್ತಿಪತ್ರಗಳು ಸಹ ಅದನ್ನೇ
ಬಿಂಬಿಸುತ್ತವೆ" ಎನ್ನುತ್ತಾರೆ ಕೃಷ್ಣ ರಾಯ್. 'ಕೊಹಿನೂರ್' ನಾಟಕ ಕಂಪನಿಯ
ಮಾಲೀಕ ರತನ್ ಲಹಕರ್ ಪ್ರಕಾರ, "ಭಿತ್ತಿಪತ್ರಗಳಲ್ಲಿ ಪ್ರಕಟಿಸಿದ ಅಶ್ಲೀಲ
ಚಿತ್ರಗಳು ನಾಟಕದೊಳಗೆ ಇರುವುದಿಲ್ಲ. ಅವನ್ನು ಪ್ರಚಾರಕ್ಕಾಗಿ ಮಾತ್ರ
ಬಳಸಿಕೊಳ್ಳಲಾಗುತ್ತಿದೆ!"
ಈ ನಡುವೆ, ರಂಗತಂಡಗಳು ಅಶ್ಲೀಲ ನಾಟಕಗಳನ್ನು
ಪ್ರದರ್ಶಿಸದೆ ಇರುವಂತೆ ತಡೆಯಲು ಎಜೆವೈಸಿಪಿ ಸ್ವತಃ ಕಾರ್ಯಪ್ರವೃತ್ತವಾಗಿದೆ.
"ರಂಗ ತಂಡಗಳು ತಿರುಗಾಟಕ್ಕೆ ಹೊರಡುವ ಮೊದಲು ನಡೆಸುವ ಅಭ್ಯಾಸದ ವೇಳೆಯಲ್ಲೇ
ನಾವು ನಾಟಕಗಳನ್ನು ವೀಕ್ಷಿಸಿ, ಅದರಲ್ಲಿರುವ ಅಶ್ಲೀಲ ದೃಶ್ಯಗಳನ್ನು
ತೆಗೆದುಹಾಕುವಂತೆ ಒತ್ತಾಯಿಸುತ್ತೇವೆ" ಎನ್ನುತ್ತಾರೆ ಬರ್ಮನ್. ಒಟ್ಟಿನಲ್ಲಿ
ಇಡೀ ಜಗತ್ತೇ ಅಭಿವ್ಯಕ್ತಿ ಸ್ವಾತಂತ್ರದ ಕುರಿತು ಧ್ವನಿ ಎತ್ತುತ್ತಿದ್ದರೆ,
ಇತ್ತ ಅಸ್ಸಾಂ ಮಾತ್ರ ಹೊಸ ಮಾದರಿಯ ಸೆನ್ಸಾರ್ ಹೊರೆಯನ್ನು ಹೊತ್ತುಕೊಳ್ಳಲು
ಸಿದ್ಧವಾಗುತ್ತಿದೆ.
ಟಿಎಸ್‌ಐ
ಮೊನಾಲಿಸಾ ಗೊಗೋಯ್
|