|
ನನ್ನ ಪ್ರೀತಿಯ ಕೆರೊಲಿನ್
ನ್ಯೂಸ್ಟೆಡ್ ಅಬೆ, ಆಗಸ್ಟ್ 1812
ನೀನು ನನ್ನನ್ನು ಅಗಲುವ ಸಮಯದವರೆಗೂ ನಾನು
ಕಣ್ಣೀರು ಸುರಿಸಿರಲಿಲ್ಲ. ಕಣ್ಣೀರು ಹಾಕುವುದು ನನಗೂ ಇಷ್ಟವಿಲ್ಲ ಎಂಬುದು
ನಿನಗೂ ಗೊತ್ತು. ನಿನ್ನನ್ನು ನನ್ನಿಂದ ಅಗಲಿಸಿದ ಕಲಹವನ್ನು, ಮನಸ್ತಾಪವನ್ನು
ಈ ಎಲ್ಲಾ ತಲ್ಲಣಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ನಾನು
ಇಲ್ಲಿಯವರೆಗೆ ಆಡಿದ ಮಾತುಗಳು, ಮಾಡಿದ ಕಾರ್ಯಗಳು ನನಗೆ ನಿನ್ನ ಕುರಿತು
ಇರುವ ಭಾವನೆಯನ್ನು ಸಮಗ್ರವಾಗಿ ಹಿಡಿದಿಡಲು ಅಶಕ್ಯ. ನಿನ್ನೆಡೆಗಿನ ನನ್ನ
ಪ್ರೀತಿಯನ್ನು ಸಾಬೀತುಪಡಿಸಲು ನನ್ನಲ್ಲಿ ಇನ್ನಾವುದೇ ಪುರಾವೆಗಳೂ ಇಲ್ಲ.
ನಾನು ಸದಾ ಬಯಸಿದ್ದು ನಿನ್ನ ಸಂತೋಷವನ್ನೇ
ಎಂಬುದಕ್ಕೆ ಆ ಪರಮಾತ್ಮನೇ ಸಾಕ್ಷಿ. ನಾನು ನಿನ್ನನ್ನು ತೊರೆಯುವಾಗ ಅಥವಾ
ನಿನ್ನ ತಾಯಿ ಹಾಗೂ ಪತಿಯೆಡೆಗಿನ ಕರ್ತವ್ಯನಿಷ್ಠೆಯಿಂದ ನೀನೇ ನನ್ನಿಂದ
ದೂರವಾಗುವಾಗ ನಾನು ನೀಡಿದ ಭಾಷೆ, ವಾಗ್ದಾನಗಳಲ್ಲಿನ ಸತ್ಯವನ್ನು ನೀನು
ಗುರುತಿಸಬೇಕು. ನಿನಗೆ ಪವಿತ್ರ ಎನಿಸುವ ಯಾವುದೇ ವಿಚಾರಕ್ಕಿಂತ ಹೆಚ್ಚಿನ
ಸಂಗತಿ ಯಾವ ರೀತಿಯಿಂದಲೂ ನನ್ನ ಹೃದಯದಲ್ಲಿ ಸ್ಥಾನ ಪಡೆಯುವುದು ಅಸಾಧ್ಯ.
ನನ್ನ ಆತ್ಮೀಯ ಹಾಗೂ ಅತ್ಯಂತ ಪ್ರೀತಿಯ ಗೆಳತಿ,
ನನ್ನೊಳಗಿನ ಎಲ್ಲಾ ಭಾವನೆಗೂ ಮಾತಿನ ನ್ಯಾಯ ಒದಗಿಸಲು ನನಗೆ
ಸಾಧ್ಯವಾಗುತ್ತಿಲ್ಲ. ಮಾತಿಗೆ ಇದು ಸಮಯವೂ ಅಲ್ಲ. ನನ್ನ ವೇದನೆ ನಿನ್ನ
ಕಲ್ಪನೆಯನ್ನೂ ಮೀರಿದ್ದು. ಆದರೆ ಅದನ್ನು ಅನುಭವಿಸುತ್ತಲೇ ಒಂದು ರೀತಿಯ
ಧನ್ಯತೆ ಹಾಗೂ ವಿಷಾದನೀಯ ಸಂತಸವನ್ನು ನಾನು ಕಾಣುತ್ತಿದ್ದೇನೆ. ನಾನೀಗ
ಭಾರವಾದ ಹೃದಯದೊಂದಿಗೆ ನಿನ್ನನ್ನು ಅಗಲುತ್ತಿದ್ದೇನೆ. ಈ ಮುಸ್ಸಂಜೆಯಲ್ಲಿನ
ನನ್ನ ಸಾರ್ವಜನಿಕ ಉಪಸ್ಥಿತಿ ಇಂದಿನ ಘಟನೆಗಳಿಂದ ಉದ್ಭವವಾಗಬಹುದಾದ
ಗಾಳಿಮಾತುಗಳಿಗೆ ಮಂಗಳ ಹಾಡಬಹುದು. ನಿನ್ನ ಪಾಲಿಗೆ ನಾನು ಇಂದು
ನಿರ್ಲಿಪ್ತನಂತೆ, ತಣ್ಣನೆಯ ವ್ಯಕ್ತಿಯಂತೆ ಕಂಡುಬಂದರೆ ಉಳಿದವರಿಗೂ ನಾನು
ಹಾಗೆಯೇ ಕಾಣಬಹುದು. ನಿನ್ನ ತಾಯಿಗೆ ಕೂಡ. ಆ ಮಹಾತಾಯಿಗಾಗಿ ಅಲ್ಲವೇ ನಾವು
ಇಷ್ಟೊಂದು ತ್ಯಾಗಕ್ಕೆ, ಬಲಿದಾನಕ್ಕೆ ಸಿದ್ಧವಾಗಿರುವುದು? ನನ್ನ ಪಾಲಿಗಂತೂ
ಈ ತ್ಯಾಗಕ್ಕೆ ಸಾಟಿಯೇ ಇಲ್ಲ. ನಮ್ಮ ತ್ಯಾಗದ ಆಳ-ಅಗಲ ಅವರ ಗ್ರಹಿಕೆಗೆ ಅಷ್ಟು
ಸುಲಭಕ್ಕೆ ನಿಲುಕುವುದಿಲ್ಲ ಬಿಡು.
"ನಿನ್ನನ್ನು ಪ್ರೀತಿಸುವುದಿಲ್ಲ ಎಂದು ಭಾಷೆ
ಕೊಡುತ್ತೇನೆ ಎಂಬುದು ತುಂಬಾ ಹಳೆಯ ವಾಗ್ದಾನ ಕೆರೊಲಿನ್. ಆದರೆ, ಒಂದು
ಉತ್ತಮ ಉದ್ದೇಶಕ್ಕೆ ಕೆಲವೊಂದು ರಿಯಾಯಿತಿಗಳು ಬೇಕು. ಹಾಗೆಯೇ, ನಿನ್ನ
ಸಮ್ಮುಖದಲ್ಲಿ ನಡೆಯುವ ಪ್ರತಿಯೊಂದಕ್ಕೂ- ಅದು ನನ್ನ ಹೃದಯದ ತಳಮಳವಿರಬಹುದು,
ನಿನ್ನೊಳಗಿನ ನೋವಿರಬಹುದು- ಸ್ಪಂದಿಸುವ ಗುಣವನ್ನು ಕಾಯ್ದಿಟ್ಟುಕೊಳ್ಳುವುದು
ಅವಶ್ಯಕ. ನಿನ್ನ ಮೇಲಿನ ಆ ಪರಮಾತ್ಮನ ಕೃಪೆ ಎಂದಿಗೂ ಬತ್ತದಿರಲಿ.
ಈ ವ್ಯಂಗ್ಯದ ಮಾತುಗಳು ಕೇವಲ ನನ್ನ ಅತ್ಯಂತ
ಆತ್ಮೀಯ ಕೆರೊಲಿನ್‌ಗೆ ಮಾತ್ರ. ಅವುಗಳ ಗುರಿ ನಿನ್ನ ತಾಯಿಯಲ್ಲ ಮತ್ತು ಈ
ಜಗತ್ತಿನಲ್ಲಿ ನಿನಗಿರುವ ಇನ್ನಿತರ ಸಂಬಂಧಗಳಿಗಲ್ಲ. ಒಂದು ಕಾಲದಲ್ಲಿ ನೀನು
ನನ್ನವಳಾಗಿದ್ದೆ ಎಂಬ ಸವಿನೆನಪಿಗಿಂತ ಹೆಚ್ಚಿನ ಸಂತೋಷ, ಸಮಾಧಾನವನ್ನು ನನ್ನ
ಈ ಜೀವಕ್ಕೆ ಜಗತ್ತಿನ ಬೇರೆ ಯಾವ ಸಂಗತಿ ತಾನೆ ತಂದೀತು? ನಿನಗೋಸ್ಕರ
ನನ್ನೆಲ್ಲಾ ಸಂತಸಗಳನ್ನೂ ತ್ಯಾಗ ಮಾಡಲು ಮೊದಲೆಂದಿಗಿಂತ ಈಗಲೇ ಹೆಚ್ಚು ನಾನು
ಸಿದ್ಧನಿದ್ದೇನೆ. ನಿನಗಿಂತ ಹೆಚ್ಚು ಮುಖ್ಯವಾದ ಸಂಗತಿ ನನಗೆ ಬೇರೊಂದಿಲ್ಲ.
ಇದೆಲ್ಲದರಿಂದ ದೂರವಿರಬೇಕೆಂಬ ನನ್ನ ಉದ್ದೇಶವೇ ಈಗ
ಅಪಾರ್ಥಕ್ಕೀಡಾಗುತ್ತಿದೆಯೇ? ಇವುಗಳನ್ನೆಲ್ಲಾ ಮುಂಚಿತವಾಗಿಯೇ ತಿಳಿದ
ವ್ಯಕ್ತಿಯೊಬ್ಬರಿದ್ದರೆ ನನಗೆ ಅದೊಂದು ಸಂಗತಿಯೇ ಅಲ್ಲ. ನಿನಗೆ, ಕೇವಲ ನಿನಗೆ
ಮಾತ್ರ ಅವು ಋಣಿಯಾಗಿವೆ. ನಾನು ಈ ಹಿಂದೆ ಮಾತ್ರವಲ್ಲ ಈಗಲೂ ನಿನ್ನವನು,
ಸಂಪೂರ್ಣವಾಗಿ ನಿನ್ನವನು. ನಿನ್ನಿಷ್ಟದಂತೆ ಎಲ್ಲಿಯಾದರೂ, ಯಾವಾಗಲಾದರೂ,
ಹಾಗೂ ಹೇಗಾದರೂ ನಿನ್ನ ಮಾತುಗಳನ್ನು ಪರಿಪಾಲಿಸಲು, ಗೌರವಿಸಲು, ಪ್ರೇಮಿಸಲು
ಹಾಗೂ ನಿನ್ನೊಂದಿಗೆ ರೆಕ್ಕೆ ಬಿಚ್ಚಿಕೊಂಡು ಹಾರಲು ನಾನು ಸಿದ್ಧನಿದ್ದೇನೆ.
ನಿನ್ನದೇ ಕನವರಿಕೆಯಲ್ಲಿ,
ಬೈರನ್
|