|
| ಅರಿಂದಮ್ ಚೌಧುರಿ, |
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್
|
ಅಮೆರಿಕದಲ್ಲಿ ನಟ ಶಾರುಖ್ ಖಾನ್ ಸುದೀರ್ಘ
ವಿಚಾರಣೆಗೊಳಗಾಗಿದ್ದಂತೂ ಭಾರೀ ದೊಡ್ಡ ಸುದ್ದಿಯಾಯಿತು. ಬಡತನ ಹಾಗೂ
ಅನಕ್ಷರತೆಯಂಥ ಸಮಸ್ಯೆಗಳು ದೇಶವನ್ನು ಕಾಡುತ್ತಿರುವಾಗ ವಿಮಾನ
ನಿಲ್ದಾಣವೊಂದರಲ್ಲಿ ಶಾರುಖ್ ಖಾನ್ ಅವರನ್ನು ಎರಡು ಗಂಟೆಗಳ ಕಾಲ
ವಶದಲ್ಲಿರಿಸಿ ವಿಚಾರಣೆ ನಡೆಸಿದ ಪ್ರಕರಣಕ್ಕೆ ಅಷ್ಟೊಂದು ಪ್ರಾಮುಖ್ಯತೆ
ನೀಡಬೇಕಾದ ಅಗತ್ಯವಿತ್ತೇ ಎಂಬ ಹಲವರ ಪ್ರಶ್ನೆಯಲ್ಲಿ ಹುರುಳಿಲ್ಲದೇ ಇಲ್ಲ.
ಆದರೆ ಇಂಥ ಸುದ್ದಿಗಳ ಬಗ್ಗೆ ನಾವು ಆಗಾಗ ಚರ್ಚಿಸುತ್ತಲೇ ಇರುತ್ತೇವೆ (ದ
ಸಂಡೆ ಇಂಡಿಯನ್ನಲ್ಲಂತೂ ಈ ಕುರಿತ ಸುದ್ದಿಗಳು ಪ್ರಕಟವಾಗದ ವಾರವೇ
ಇಲ್ಲವೆನ್ನಬಹುದು). ಆದರೆ ಶಾರುಖ್ನಂಥವರೂ ಆಗಾಗ ಸುದ್ದಿಯಾಗುತ್ತಾರೆ
ಏಕೆಂದರೆ ಅವರೂ ನಮ್ಮ ದೇಶದ ಮೇಲೆ ಹತ್ತು ಹಲವು ರೀತಿಗಳಲ್ಲಿ ಪರಿಣಾಮ
ಬೀರುತ್ತಾರೆ.
ಆದರೆ ಈ ಬಾರಿ ಶಾರುಖ್ನ ವಿಚಾರಣೆ ಮಾತ್ರ,
ಇದೇ ರೀತಿಯ ಅವಮಾನವನ್ನು ದಿನನಿತ್ಯವೂ ಅನುಭವಿಸುವ ಹಲವು ಸಾವಿರ ಜನರ
ಕುರಿತು ಚಿಂತಿಸುವಂತೆ ನನ್ನನ್ನು ಪ್ರೇರೇಪಿಸಿತು. ವೈಯಕ್ತಿಕವಾಗಿ
ಹೇಳಬೇಕೆಂದರೆ, ನನಗೆ ಈವರೆಗೂ ಇಂಥ ಸುದೀರ್ಘ ವಿಚಾರಣೆಯ
ಅನುಭವವಾಗಿಲ್ಲವಾದರೂ ಅಮೆರಿಕದಲ್ಲಿನ ವಿಮಾನ ನಿಲ್ದಾಣ ಸಿಬ್ಬಂದಿ
ಪ್ರಶ್ನಿಸುವ ರೀತಿ ಹಾಗೂ ಆ ಪ್ರಶ್ನೆಗಳ ಶೈಲಿಯೇ ನಾನು 'ತುರ್ತು ಅಗತ್ಯ
ಇದ್ದರೆ ಮಾತ್ರ ಅಮೆರಿಕ ಪ್ರಯಾಣ' ಎಂಬ ಕಟು ನಿರ್ಧಾರ ತೆಗೆದುಕೊಳ್ಳಲು
ಕಾರಣವಾಯಿತು. ಹಾಗೆ ಅಮೆರಿಕಕ್ಕೆ ತೆರಳಲೇಬೇಕಾದ ಅಂಥ ತುರ್ತು ಪರಿಸ್ಥಿತಿ
ಇತ್ತೀಚಿನ ವರ್ಷಗಳಲ್ಲಿ ನನಗೆ ಎದುರಾಗಿಲ್ಲ ಕೂಡಾ. 'ಅಮೆರಿಕನಿಸಂ' ನನಗೆ
ಹಿಡಿಸದೇ ಇರಲು ಮುಖ್ಯ ಕಾರಣ ಅವರ ದುರಾಶಾ ಪ್ರೇರಿತ ಐಹಿಕ ಸಂಸ್ಕೃತಿ.
ಅಷ್ಟೇ ಅಲ್ಲ, 9/11ರ ಘಟನೆಗಿಂತಲೂ ಎಷ್ಟೋ ಹಿಂದೆಯೇ ನಾನು ಅಮೆರಿಕಕ್ಕಿಂತ
ಯುರೋಪನ್ನೇ ಇಷ್ಟಪಡುತ್ತಿದ್ದೆ. ಅಮೆರಿಕ ತನ್ನ ಜಾಗತಿಕ ನಾಯಕತ್ವದ ಬಗ್ಗೆ
ಕೊಚ್ಚಿಕೊಂಡರೂ ಯುರೋಪಿಯನ್ನರಲ್ಲಿ ಇರುವಂಥ ಉನ್ನತ ಮಟ್ಟದ ಸಭ್ಯ ನಡವಳಿಕೆ
ಅವರಲ್ಲಿಲ್ಲ. ಅದಕ್ಕೆ ಅಮೆರಿಕದಲ್ಲಿ ನಡೆಯುತ್ತಿರುವ ನರಹತ್ಯೆ,
ಅತ್ಯಾಚಾರ, ಮಾದಕ ವ್ಯಸನ ಹಾಗೂ ಜನಾಂಗೀಯ ತಾರತಮ್ಯವೇ ಸಾಕ್ಷಿ. ಯುರೋಪಿಯನ್
ರಾಷ್ಟ್ರಗಳು ಕೂಡಾ ಅಮೆರಿಕದಂಥ ಭದ್ರತೆಯ ಸವಾಲುಗಳನ್ನೇ ಎದುರಿಸುತ್ತಿವೆ
ಹಾಗೂ ಆ ರಾಷ್ಟ್ರಗಳ ವಿಮಾನ ನಿಲ್ದಾಣದಲ್ಲಿ ಕೂಡಾ ಅದೇ ರೀತಿಯ
ಕಟ್ಟುನಿಟ್ಟಾದ ವಿಚಾರಣೆಗಳೂ ನಡೆಯುತ್ತವೆ. ಅವರೂ ಕೂಡಾ ಕೆಲವೊಮ್ಮೆ
ನಿಮ್ಮನ್ನು ಪ್ರತ್ಯೇಕ ವಿಚಾರಣೆಗೆ (ಮುಖ್ಯವಾಗಿ ಬ್ರಿಟನ್ನಲ್ಲಿ)
ಒಳಪಡಿಸುತ್ತಾರೆ. ಆದರೆ ಐರೋಪ್ಯ ರಾಷ್ಟ್ರಗಳ ವಿಮಾನ ನಿಲ್ದಾಣ ಸಿಬ್ಬಂದಿ
ವಿಚಾರಣೆ ನಡೆಸುವ ರೀತಿಯೇ ನಿಮ್ಮಲ್ಲಿ 'ಇಂಥ ತಪಾಸಣೆ ಈ ಕ್ಷಣದ ಅಗತ್ಯ;
ಭಯೋತ್ಪಾದನೆಯ ಮೂಲೋತ್ಪಾಟನೆಯೇ ಪ್ರಪಂಚದ ಗುರಿ; ನಮ್ಮನ್ನು ಹೋಲುವ ಅಥವಾ
ನಮ್ಮದೇ ಬಣ್ಣದ ವ್ಯಕ್ತಿಗಳೇ ಇಂಥ ವಿಧ್ವಂಸಕ ಕೃತ್ಯಗಳ
ರೂವಾರಿಗಳಾಗಿರುವುದರಿಂದ ನಮ್ಮ ಭವಿಷ್ಯದ ಭದ್ರತೆಯ ದೃಷ್ಟಿಯಿಂದಲೂ ಇಂಥ
ವಿಚಾರಣೆ ಅತ್ಯಗತ್ಯ' ಎಂಬ ಭಾವನೆ ಮೂಡಿಸಿಬಿಡುತ್ತದೆ.
ಇಂಥ ಪರಿಸ್ಥಿತಿಯನ್ನು ನಿಭಾಯಿಸಲು
ಯುರೋಪಿನ ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ತರಬೇತುಗೊಳಿಸಿರುವ ರೀತಿ
ನಿಜಕ್ಕೂ ಅದ್ಭುತ. ಅವರ ವಿನಯಶೀಲತೆ ಹಾಗೂ ವಿಚಾರಣೆ ನಡೆಸುವ ಸಭ್ಯತೆ ಯಾವ
ರೀತಿಯಲ್ಲೂ ನಿಮ್ಮನ್ನು ಅವಮಾನಿಸದು. ಆದರೆ ಅಮೆರಿಕದಲ್ಲಿನ ಪರಿಸ್ಥಿತಿ
ಇದಕ್ಕೆ ವ್ಯತಿರಿಕ್ತ. ನೀವೊಬ್ಬ ಆರೋಪಿ ಹಾಗೂ ತಾವು ಪ್ರಪಂಚದ ಯಜಮಾನರು
ಎಂಬ ದಾರ್ಷ್ಟ್ಯ ಅಮೆರಿಕದ ಸಿಬ್ಬಂದಿಯ ವರ್ತನೆಯಲ್ಲಿ ಕಂಡುಬರುತ್ತದೆ. ಅದೇ
ಕಾರಣಕ್ಕೇ ಅಬ್ದುಲ್ ಕಲಾಂ, ಇರ್ಫಾನ್ ಖಾನ್ ಹಾಗೆಯೇ ಶಾರುಖ್ ಖಾನ್ವರೆಗಿನ
ವ್ಯಕ್ತಿಗಳು ಅವಮಾನಕ್ಕೊಳಗಾಗಿದ್ದು ಯೂರೋಪ್ ಅಥವಾ ಇತರೆ ರಾಷ್ಟ್ರಗಳ
ವಿಮಾನ ನಿಲ್ದಾಣದಲ್ಲಲ್ಲ, ಬದಲಿಗೆ ಅಮೆರಿಕದಲ್ಲಿ. ಅದೇ ದಾರ್ಷ್ಟ್ಯದಿಂದಲೇ
ಮುನ್ನುಗ್ಗುವ ಅವರು ಶಾರುಖ್ನಂಥ ಸುಪರಿಚಿತ ವ್ಯಕ್ತಿಗಳನ್ನು ಎರಡು
ಗಂಟೆಗಳ ಕಾಲ ವಿಚಾರಣೆ ನಡೆಸುವಂಥ ಪ್ರಮಾದವನ್ನೂ ಎಸಗುತ್ತಾರೆ.
ಎಲ್ಲರಂತೆಯೇ ಶಾರುಖ್ ಕೂಡಾ ಸಾಮಾನ್ಯ ವಿಚಾರಣೆಗೆ ಒಳಗಾಗುವುದು
ಅಗತ್ಯವಾದರೂ ಹದಿನೈದು ನಿಮಿಷದೊಳಗೆ ಆತ ಯಾರು ಎಂಬುದು ಪತ್ತೆ ಹಚ್ಚಿ (ಪ್ರಪಂಚದ
ಯಾವುದೇ ಭಾಗದಲ್ಲಿ, ಅದರಲ್ಲೂ ಅತಿ ಹೆಚ್ಚು ಭಾರತೀಯರು ಕಾಣಸಿಗುವ
ಅಮೆರಿಕದಲ್ಲಿ ಭಾರತೀಯನೊಬ್ಬನ ವ್ಯಕ್ತಿವಿವರ ಪತ್ತೆ ಹಚ್ಚುವುದು ಅಷ್ಟೊಂದು
ಕಷ್ಟವಲ್ಲ) ಬಿಟ್ಟುಬಿಡಬಹುದು. ಎರಡು ಗಂಟೆಗಳ ಸುದೀರ್ಘ ವಿಚಾರಣೆ ಯಾವುದೇ
ಒಬ್ಬ ವ್ಯಕ್ತಿಗೆ ಅಂಥದ್ದರಲ್ಲೂ ಸುಲಭವಾಗಿ ಗುರುತು ಸಿಗುವ, ಜನಪ್ರಿಯ
ವ್ಯಕ್ತಿಯೊಬ್ಬನಿಗೆ ಅತ್ಯಂತ ಅವಮಾನಕಾರಿ ಅನುಭವ.
ಅಮೆರಿಕನ್ನರು ಪಾಲಿಸುತ್ತಾ ಬಂದಿರುವ
ಕಟ್ಟುನಿಟ್ಟಿನ ವಿಚಾರಣೆ ಹಾಗೂ ಬಿಗಿ ಭದ್ರತೆ ನಿಜಕ್ಕೂ ಯೋಗ್ಯವೇ. ಹಾಗೆಯೇ
ಅದು ಅಲ್ಲಿ 9/11ರಂಥ ಘಟನೆ ಮರುಕಳಿಸದಂತೆ ತಡೆದಿರುವುದೂ ನಿಜವೇ. ಆದರೆ
ಅಮೆರಿಕನ್ನರು ಕನಿಷ್ಠ ಸೌಜನ್ಯದ ಮೂಲ ಪಾಠವನ್ನು ಕಲಿಯಬೇಕಿದೆ; ಬುಷ್
ಉಳಿಸಿ ಹೋದ ಹೊಲಸು ಬಳುವಳಿಯನ್ನು ಕಿತ್ತೊಗೆದು ತಮ್ಮ ವ್ಯಕ್ತಿತ್ವದಲ್ಲಿ
ಆ ಸೌಜನ್ಯತೆಯನ್ನು ಬೆಳೆಸಿಕೊಳ್ಳಬೇಕಿದೆ. ಬಾರಕ್ ಒಬಾಮ ತಮ್ಮ ವೈಯಕ್ತಿಕ
ನೆಲೆಯಲ್ಲಿ ಈ ನಿಟ್ಟಿನಲ್ಲಿ ಉತ್ತಮ ಪ್ರಯತ್ನಗಳನ್ನೇ ಮಾಡುತ್ತಿದ್ದಾರೆ.
ಆದರೆ ಅದು ಇನ್ನೂ ಅವರ ಕೈಕೆಳಗಿನ ಅಧಿಕಾರಿಗಳ ವ್ಯಕ್ತಿತ್ವದಲ್ಲಿ
ಪ್ರತಿಫಲಿಸಿಲ್ಲ. ಅದೇ ಕಾರಣಕ್ಕೇ ಶಾರುಖ್ ಖಾನ್ ಅವರನ್ನು ಎರಡು ಗಂಟೆಗಳ
ಕಾಲ ವಿಚಾರಿಸುವುದು ಮಾತ್ರವಲ್ಲ್ಲ ಭದ್ರತೆಯ ದೃಷ್ಟಿಯಿಂದಲೇ ಅಲ್ಲಿನ
ಪೊಲೀಸರು ಹಾರ್ವರ್ಡ್ನ ಪ್ರಾಧ್ಯಾಪಕರೊಬ್ಬರ ಕೈಗೆ ಕೋಳ ತೊಡಿಸಲೂ
ಹಿಂಜರಿಯುವುದಿಲ್ಲ. ಅವರು ಹಾರ್ವರ್ಡ್ನ ಪ್ರೊಫೆಸರ್ ಎಂಬುದು ಆ ಪೊಲೀಸ್
ಸಿಬ್ಬಂದಿಗೆ ಗೊತ್ತೇ ಇರಲಿಲ್ಲ! ತಮ್ಮ ಅಧ್ಯಕ್ಷ ಕರಿಯ ಜನಾಂಗದ ವ್ಯಕ್ತಿಯೇ
ಆಗಿದ್ದರೂ ಕಪ್ಪು, ಕಂದು ಅಥವಾ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಅತಿ
ಕೆಟ್ಟದಾಗಿಯೇ ನಡೆಸಿಕೊಳ್ಳಬೇಕು ಎನ್ನುವ ಅಹಮಿಕೆ ಅವರದ್ದು.
ಆದರೆ ಅಮೆರಿಕನ್ನರ ಬಗ್ಗೆ ಇಷ್ಟೆಲ್ಲಾ
ಹೇಳುವ ಮೊದಲು ನಾವು ಭಾರತೀಯರು ನಮ್ಮ ಬಗ್ಗೆಯೇ ಚಿಂತಿಸುವ ಅಗತ್ಯ
ಸಾಕಷ್ಟಿದೆ. ಐತಿಹಾಸಿಕವಾಗಿ ದಲಿತರನ್ನು ಹಾಗೂ ಮುಸ್ಲಿಮರ ಬಗೆಗಿನ ನಮ್ಮ
ದೃಷ್ಟಿಕೋನ, ಅದರಲ್ಲೂ ಮುಖ್ಯವಾಹಿನಿ ಶಿಕ್ಷಣದಿಂದ ಆ ಸಮುದಾಯ
ದೂರವಾಗುವಲ್ಲಿ ನಮ್ಮ ಪಾತ್ರ... ಇವೆಲ್ಲಾ ನಿಜಕ್ಕೂ ಅವಮಾನಕಾರಿ.
ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದರೂ ಮುಸ್ಲಿಮರ ಕುರಿತ ತನ್ನ
ಧೋರಣೆಯನ್ನು ಬದಲಿಸಲು ಹಿಂದೇಟು ಹಾಕುತ್ತಿರುವ ಬಿಜೆಪಿ, ಈಗ ಜಿನ್ನಾ
ಕುರಿತು ಒಂದೆರಡು ಒಳ್ಳೆಯ ಮಾತುಗಳನ್ನಾಡಿದ ಒಂದೇ ಕಾರಣಕ್ಕೆ ಪಕ್ಷದ
ಹಿರಿಯ ನಾಯಕ ಜಸ್ವಂತ್ ಸಿಂಗ್ರನ್ನು ಉಚ್ಚಾಟನೆ ಮಾಡುವ ಮೂಲಕ ಜನತೆಗೆ
ತಪ್ಪು ಸಂದೇಶ ರವಾನಿಸುತ್ತಿದೆ.
ಎಲ್ಲಿಯವರೆಗೆ ಅಮೆರಿಕನ್ನರು ಮಾನವೀಯ
ಗುಣಗಳನ್ನು ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನನ್ನಂಥ ಹಲವರು
ಪ್ರವಾಸ ಅಥವಾ ಔದ್ಯಮಿಕ ಭೇಟಿಯ ಸಂದರ್ಭದಲ್ಲಿ ವಿನಾಕಾರಣ ಅವಮಾನಕ್ಕೆ
ಗುರಿಯಾಗಿ ಮುಜುಗರಕ್ಕೊಳಗಾಗುವುದಕ್ಕಿಂತ ಅಮೆರಿಕದಿಂದ ದೂರವಿರುವುದೇ ವಾಸಿ
ಎಂದು ನಿರ್ಧರಿಸಿಬಿಡುತ್ತಾರೆ. ಅಮೆರಿಕನ್ನರು ವಿಚಾರಣೆ ನಡೆಸುವುದು ಸರಿಯೇ;
ಆದರೆ ಅಂತಹ ವಿಧಾನದಲ್ಲಿ ಭಾರೀ ಸುಧಾರಣೆಗಳಾಗಬೇಕಿರುವುದು ಅತ್ಯಗತ್ಯ.
ತಮ್ಮ ಜನರಲ್ಲಿ ಒಂದಿಷ್ಟು ಸೌಜನ್ಯ ಹಾಗೂ ಮನುಷ್ಯರನ್ನು ಗೌರವಿಸುವ ಗುಣ
ಬೆಳೆಸಲು ಒಬಾಮ- ಕಪ್ಪು ಜನಾಂಗದ ಹಾರ್ವಡ್ ಪ್ರಾಧ್ಯಾಪಕ ಹಾಗೂ ಪೊಲೀಸರಿಗೆ
ನೀಡಿದಂತೆ- ಮತ್ತೊಂದಿಷ್ಟು ಔತಣಕೂಟಗಳನ್ನು ಏರ್ಪಡಿಸಬೇಕಾಗಬಹುದು.
ಸದ್ಯದಲ್ಲೇ ತೆರೆಕಾಣಲಿರುವ ಶಾರುಖ್ ಖಾನ್ ಚಿತ್ರದ ಪಾತ್ರ "ಮೈ ನೇಮ್ ಈಸ್
ಖಾನ್... ಆದರೆ ನಾನು ಭಯೋತ್ಪಾದಕನಲ್ಲ" ಎಂದು ಹೇಳಿದಂತೆ ಎಲ್ಲಾ ಖಾನ್ಗಳೂ
ಭಯೋತ್ಪಾದಕರಾಗಿರುವುದಿಲ್ಲ ಎಂಬುದನ್ನು ಅಮೆರಿಕನ್ನರು ಅರಿಯಬೇಕಿದೆ. |