User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಗುಣದೋಷ
ನನ್ನ ಅಜ್ಜಿಯ ಜಗತ್ತು

ಸ್ತ್ರೀ ಸಂವೇದನೆಯ ಸಮಾನಾಂತರ ಓದು

 
'ಭೂರಮೆ'ಯ ಸಿರಿಸೊಬಗುಗಳೂ ಮೇಳೈಸಿದ್ದರೆ ಕೃತಿ ಇನ್ನಷ್ಟು ಮಜಬೂತಾಗುತ್ತಿತ್ತು

'ನನ್ನ ಅಜ್ಜಿಯ ಜಗತ್ತು' - ರಜನಿ ನರಹಳ್ಳಿ ಅವರ ಪಳಗಿದ ಕೈ ಏನೋ ಎನ್ನುವಂಥ ಅಚ್ಚರಿ ಹುಟ್ಟಿಸುವ ಪ್ರಥಮ ಕೃತಿ. ಮೊಮ್ಮಗಳ ನೆನಪಿನ ಲೋಕದಿಂದ ಎದ್ದುಬರುವ ಅಜ್ಜಿಯ ಜೀವನಚಿತ್ರ ಇಲ್ಲಿದೆ. ಸ್ವಲ್ಪ ಉದಾರವಾಗಿ ನೋಡಿದರೆ ಇದು ಮಹಿಳಾ ಜಗತ್ತಿನ ಕಥೆಯೂ ಆಗಬಲ್ಲದು. ಇದರ ವಿಶೇಷವೆಂದರೆ, ಇದು ಕೇವಲ ಪಳೆಯುಳಿಕೆ ಅಜ್ಜಿಯೊಬ್ಬಳ ಜಗತ್ತಷ್ಟೇ ಆಗಿರದೆ, ನಮಗೆ-ನಿಮಗೆ ಪರಿಚಿತವಾಗಿರುವ ಮೂಲ ಗ್ರಾಮೀಣ ಸಂಸ್ಕೃತಿಯ ಜಗತ್ತೂ ಆಗಿರುವುದು. ನಾವು-ನೀವು ಬೆಳೆದ ಪರಿಸರ, ಕೌಟುಂಬಿಕ ವಾತಾವರಣ, ಸಂದುಹೋದ ದಿನಗಳು-ವ್ಯಕ್ತಿಗಳ ನಂಟಿನ ಹಂಬಲಗಳು, ರಜನಿ ಅವರ ಈ ಮೊದಲ ಕೃತಿಯ ಪುಟಗಳನ್ನು ತಿರುವಿದಂತೆ ನಮ್ಮೆದುರು ಹಾಜರಾಗುತ್ತವೆ. ಎಂದೇ ಈ ಜಗತ್ತು ಆಪ್ತ ಜಗತ್ತೂ ಆಗುತ್ತದೆ.

ವರ್ತಮಾನದ ನೆಲೆಯಲ್ಲಿ ನಿಂತು, ಬಾಲ್ಯಾವಲೋಕನದೊಂದಿಗೆ 'ಅಜ್ಜಿಯ ಜಗತ್ತು' ತೆರೆದುಕೊಳ್ಳುತ್ತದೆ. ಗತಕಾಲವನ್ನು, ಗತಕಾಲದ ವ್ಯಕ್ತಿ-ಸಾಮಾಜಿಕ ಸಂಬಂಧಗಳನ್ನು ನೋಡುವ ಈ ಕ್ರಮದಲ್ಲಿ ಎರಡು ಕಾಲಗಳ ಮುಖಾಬಿಲೆ, ಹೋಲಿಕೆ, ತೌಲನಿಕ ನೋಟ, ಅಂದು-ಇಂದುಗಳ ಸಂವಾದ, ವಿಮರ್ಶೆ ಸಹಜ. ರಜನಿ ಅವರ ಕೃತಿಯೂ ಈ ಮಾತಿಗೆ ಹೊರತಲ್ಲ. 'ನನ್ನ ಅಜ್ಜಿಯ ಜಗತು' ಗತಕಾಲದ ಜಗತ್ತನ್ನು ಒಂದು ಮುಖ್ಯಪಾತ್ರದೊಳಗಿಂದ ಬಿಂಬಿಸುತ್ತಲೇ ಇವತ್ತಿನ ಬದುಕಿನ ವಿಮರ್ಶೆಯ ನಿಕಶವೂ ಆಗುತ್ತದೆ. ಅಜ್ಜಿಯ ಜಗತ್ತನ್ನು, ಅವಳ ವ್ಯಕ್ತಿತ್ವವನ್ನು, ಅವಳ ಅಂತರಂಗದ ನೋವು-ಬೇಗುದಿಗಳನ್ನು ಚಿತ್ರಿಸುತ್ತಲೇ, ಇವತ್ತಿನ ಮಹಿಳೆಯ ಸ್ಥಾನಮಾನ, ಆಸೆ-ಹತಾಶೆ ಬದಲಾಗಬೇಕೆಂಬ ತುಡಿತ, 'ಬದಲಾಗದೇ ಮೊದಲಿನಂತೆಯೇ' ಇರುವ ಹತಾಶೆ ಮೊದಲಾದುವುಗಳ ಸಮಾನಾಂತರ ನಿರೂಪಣೆಯೂ ಆಗಿ ನಮ್ಮ ಪ್ರಜ್ಞೆಗೆ ತಾಕುತ್ತದೆ.

ಇಲ್ಲಿನ ಅಜ್ಜಿ ಕುಟುಂಬವತ್ಸಲೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತನ್ನ ಸ್ಥಾನಮಾನ ಏನೆಂಬುವುದನ್ನು, ತನ್ನ ಪಾತ್ರ ಏನೆಂಬುವುದನ್ನು ಚೆನ್ನಾಗಿ ಅರಿತವಳು. ತನ್ನ ಸಮಸ್ತ ಗುಣಶಕ್ತಿಗಳನ್ನು ತೇಯ್ದು ಕುಟುಂಬ ಬೆಳೆಸುವಲ್ಲಿ ಈ ಅಜ್ಜಿ ತೋರುವ ಕಾರ್ಯಕ್ಷಮತೆ, ಸಹನೆ, ಕ್ಷಮಾಗುಣ, ಪ್ರೀತಿ-ವಾತ್ಸಲ್ಯಗಳಿಂದಾಗಿ ತಾಯ್ತನದ ಮೂಲಮಾತೃಕೆಯಂತೆ ಕಾಣಿಸುತ್ತಾಳೆ. ಇವಳ ಪಾಲನೆ-ಪೋಷಣೆ, ಗಂಡ-ಮಕ್ಕಳು-ಮೊಮ್ಮಕ್ಕಳ ಪ್ರಪಂಚಕ್ಕೆ ಮಾತ್ರವಲ್ಲ, ಪಶುಪಕ್ಷಿ ಜಾನುವಾರುಗಳಲ್ಲೂ ಅಷ್ಟೇ ಅಕ್ಕರಾಸ್ಥೆ, ಅಷ್ಟೇ ಆಪ್ತ ಸಂಬಂಧ. ಇದು ಎಷ್ಟು ಆಪ್ತವೆಂದರೆ, ಸಮಷ್ಟಿ ಕುಟುಂಬದಲ್ಲೂ ಒಂಟಿ ಭಾವನೆ ಕಾಡಿದಾಗ, ದುಃಖ ಉಮ್ಮಳಿಸಿ ಬಂದಾಗ ಅಜ್ಜಿ ಅದನ್ನು ತೋಡಿಕೊಳ್ಳುವುದು ಕೊಟ್ಟಿಗೆಯಲ್ಲಿ ಹಸುಗಳೊಡನೆ. ಹಸು ಕರು ಹಾಕಿದಾಗ, ಬೆಕ್ಕು ಮರಿ ಹಾಕಿದಾಗ ಮೊಮ್ಮಗಳ ಬಾಣಂತನದಷ್ಟೇ ಮುಚ್ಚಟೆಯಿಂದ ಅವುಗಳ ಬಾಣಂತನದಲ್ಲಿ ಕರು-ಮರಿಗಳ ಲಾಲನೆ-ಪಾಲನೆಯಲ್ಲಿ ಅದೇ ಮುತುವರ್ಜಿ. ಹಿತ್ತಲಿನ ಹೂವು, ತರಕಾರಿ ಗಿಡಗಳೊಡನೆಯೂ ಅದೇ ಪ್ರೀತಿಯ ನಂಟು.

ಇಂಥ ಅಜ್ಜಿಯ ವ್ಯಕ್ತಿತ್ವವನ್ನು ಕಟ್ಟಿಕೊಡುವಾಗ ಲೇಖಕಿ ಭಾವುಕಿಯಾಗಿ ವಸ್ತುನಿಷ್ಠತೆಯನ್ನು ಮರೆಯುವುದಿಲ್ಲ ಎನ್ನುವುದು ಮುಖ್ಯ ಸಂಗತಿ. ಗೌರವ ಭಾವದ ಜೊತೆಗೇ ವಿಮರ್ಶಾತ್ಮಕ ದೃಷ್ಟಿಯೂ ಇದೆ. ಅಜ್ಜಿಗೆ ಗಂಡು ಮಕ್ಕಳ ಮೇಲಿನ ವಿಶೇಷ ಕಾಳಜಿ, ಗಂಡನ ಬಗೆಗಿನ ಪೂಜ್ಯ ಭಾವನೆ, 'ಹೆಣ್ಣು ಮಕ್ಕಳು ಹುಟ್ಟಿರುವುದೇ ಕೆಲಸ ಮಾಡುವುದಕ್ಕೆ' ಎಂಬ ನಂಬಿಕೆ- ಇವುಗಳನ್ನು ನಿರೂಪಿಸುವಾಗಲೂ ಸ್ತ್ರೀವಾದಿ ಚಿಂತನೆಗಿಂತ, ಅಜ್ಜಿಯೊಳಗಿನ ಪುರುಷ ಪ್ರಧಾನ ಸಮಾಜದ ಕಟುವಾಸ್ತವ ಪ್ರಜ್ಞೆಯನ್ನು ಗುರುತಿಸುವ ವಸ್ತುನಿಷ್ಠ ಧೋರಣೆಯನ್ನು ಕಾಣುತ್ತೇವೆ. ಹಾಗೆಯೇ ಯಾವುದೇ ಪರಿಸ್ಥಿತಿಯಲ್ಲಿ ರಾಜಿ ಮಾಡಿಕೊಳ್ಳುವ ಅಜ್ಜಿಯ ಅಸ್ಮಿತೆ, ಆತ್ಮಬಲಗಳನ್ನು ನಿರೂಪಿಸುವುದರಲ್ಲೂ ಅವಳ ಬದುಕಿನ ಗುರಿ, ಧ್ಯೇಯಗಳೇ ಎದ್ದುಕಾಣುತ್ತವೆ. ಕಷ್ಟ ಕಾರ್ಪಣ್ಯಗಳು ದೂರವಾಗಿ, ಮಕ್ಕಳ ಸಂಪಾದನೆಯೊಂದಿಗೆ ಮನೆಯೊಳಕ್ಕೆ ಆಧುನಿಕತೆ ಪ್ರವೇಶವಾದಾಗಲೂ ಜರಿಸೀರೆ, ಚಿನ್ನದ ಆಭರಣಗಳೂ ನಿರಾಭರಣ ತ್ಯಾಗಜೀವಿಯಾದ ಅವಳ ಪಾಲಿಗೆ ಸಂಕೋಲೆಯೇ. ನೈಟಿಯಂತೂ ಕೊನೆಗಾಲದ ಕಿರಿಕಿರಿಯೇ. ಮಕ್ಕಳ ಸಂಪಾದನೆ, ಆಧುನಿಕತೆ, ಈ ಎಲ್ಲಾ ಸಂಪತ್ತನ್ನೂ ಅಜ್ಜಿಯ ಕಾಲಬುಡಕ್ಕೆ ತಂದಿತಾದರೂ 'ಅವಳ ಕಣ್ಣುಗಳು ಮಾತ್ರ ಬೆಳಗಲಿಲ್ಲ'. ಅಜ್ಜಿಯ ಪ್ರೀತಿ-ವಾತ್ಸಲ್ಯಗಳ ಪ್ರಪಂಚವನ್ನು ಥಟ್ಟನೆ ಕಣ್ಮರೆಯಾಗಿಸುವ ಇವತ್ತಿನ ಕಟುವಾಸ್ತವ ನಮಗೆ ಹೀಗೆ ರಾಚುತ್ತದೆ. ಅಜ್ಜಿಯ ರಾಮನವಮಿ ಸಡಗರ, ಊರಿನ ರಾಮೋತ್ಸವ ಸಂಭ್ರಮ, ಸಂತೋಷಗಳೆಲ್ಲ ಈಗ ಯಾಂತ್ರಿಕವಾಗುತ್ತಿವೆ. ಸಮಷ್ಟಿ ಕುಟುಂಬವಾತ್ಸಲ್ಯ ಮರೆಯಾಗಿ ತಲೆಮಾರಿನ ಅಂತರ, 'ನನ್ನ ಮಧ್ಯಮ ವರ್ಗದ ಜೀವನವೇ ಕಡೇವರೆಗೂ' ಇಂಥ ಅಸ್ಮಿತೆಯ ಬಿಕ್ಕಟ್ಟುಗಳು, ವ್ಯಥೆಗಳು ಮೊಮ್ಮಗಳನ್ನೂ ಕಾಡಲಾರಂಭಿಸಿ 'ಆಧುನಿಕ ಸ್ತ್ರೀಯ' ಇವತ್ತಿನ ಮುಖ ಕಾಣಿಸಿಕೊಳ್ಳುತ್ತದೆ. ಒಂದೇ ಶತಮಾನದೊಳಗಣ ಮಹಿಳೆಯ ಬದುಕಿನ ಅಂತರಗಳ ಎರಡು ಪರಿ ನಮ್ಮನ್ನು ವಿಚಲಿತಗೊಳಿಸುತ್ತದೆ.

ಹೀಗೇ ಒಂದು ರೀತಿಯ ಎರಡು ತಲೆಮಾರಿನ ಹೆಣ್ಣಿನ ಸಮಾನಾಂತರ ಓದು ಆಗುವ 'ಅಜ್ಜಿಯ ಜಗತ್ತಿ'ನಲ್ಲಿ ಅಂದಿನ ಸ್ತ್ರೀ ಬದುಕಿನ ಉತ್ಸಾಹ, ಪ್ರೀತಿ, ವಾತ್ಸಲ್ಯ, ಮಮಕಾರಗಳ ಜೊತೆಗೆ ಇವತ್ತಿನ ಮಹಿಳೆಯ ವಿಷಾದ, ಖಿನ್ನತೆಯ ಎಳೆಗಳೂ ಸೇರಿಕೊಂಡು ವಿವಂಚನೆಯುಂಟುಮಾಡಿದರೂ ಇದನ್ನು ಮರೆಸುವಂಥ ಸಂತೋಷ-ಸಂಭ್ರಮಗಳೂ ಸಾಕಷ್ಟಿವೆ. ಅಜ್ಜಿಯ ಸೆರಗಿನ ವರ್ಣನೆ, ಅದರೊಳಗಿನ ಮೊಮ್ಮಕ್ಕಳ ಬೆಚ್ಚಗಿನ ಬದುಕು, ಹೊಳೆಯದಂಡೆ, ಓರಗಿತ್ತಿಯೊಡನೆ 'ವಾರ್‌ಗಿತ್ತಿ'ಯಾಗುವ ಪ್ರಸಂಗ, ಎಲ್ಲಕ್ಕಿಂತ ಮಿಗಿಲಾಗಿ ಅಜ್ಜಿಯ ಪಾಕಶಾಲೆ ಇಂಥ ಆಕರ್ಷಣೆಗಳು ಈ ಅಜ್ಜಿಯ ಜಗತ್ತನ್ನು ನಮ್ಮದಾಗಿಸುತ್ತವೆ. ಅಜ್ಜಿಯ ಹಾಲುಬಾಯಿ, ಕೆಂಡರೊಟ್ಟಿ, ಹುರುಳೀಕಟ್ಟಿನ ಸಾರು ನಮ್ಮ ಬಾಯಲ್ಲಿ ನೀರೂರಿಸುತ್ತವೆ.

'ನನ್ನ ಅಜ್ಜಿಯ ಜಗತ್ತು' ಭೂರಮೆ ಬಯಸಿ ಬಂದ ಕೊಡಗು. ಪ್ರಕೃತಿ ಸೌಂದರ್ಯದ ರುದ್ರರಮಣೀಯತೆಗೆ ಹೆಸರಾದ ಕೊಡಗು. ರಜನಿ ಅವರ ಇಲ್ಲಿನ ಬರವಣಿಗೆ ಕೌಟುಂಬಿಕ ಒಳಜಗತ್ತಿಗೆ ಸೀಮಿತಗೊಂಡಿರುವುದರಿಂದ ಆ ಪ್ರಾದೇಶಿಕ ಸಿರಿ-ಸೊಬಗುಗಳಿಂದ ಕೃತಿ ವಂಚಿತವಾದಂತೆ ಭಾಸವಾಗುತ್ತದೆ. ಪ್ರಾದೇಶಿಕ ಬೆಡಗು-ಬಣ್ಣಗಳೂ ಸೇರಿದ್ದರೆ 'ಅಜ್ಜಿಯ ಜಗತ್ತು' ಇನ್ನಷ್ಟು ಮಜಬೂತಾಗುತ್ತಿತ್ತು.

ಟಿಎಸ್‌ಐ

ಜಿ.ಎನ್. ರಂಗನಾಥ ರಾವ್

ಬೆಲೆ: ರೂ. 125

ಲೇ: ರಜನಿ ನರಹಳ್ಳಿ ಸುಮುಖ ಪ್ರಕಾಶನ ಬೆಂಗಳೂರು

 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .