User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಹೆಜ್ಜೆಗಳು
 

ನಿಮ್ಮ ಮುದ್ದು ನಾಯಿಯೊಳಗೊಂದು ತೋಳ ಇದೆ ಬಲ್ಲಿರಾ...

 
Prashantho Banerjee
ಪ್ರಶಾಂತೊ ಬ್ಯಾನರ್ಜಿ
ನುಡಿಚಿತ್ರ ಸಂಪಾದಕ
ದ ಸಂಡೆ ಇಂಡಿಯನ್

ಬಹಳ ದಿನಗಳ ಬಳಿಕ ದಿನಸಿ ಸಾಮಾನುಗಳನ್ನು ಹೊತ್ತು ತಂದಿದ್ದ 30ರ ಹರೆಯದ ಡಯಾನ್ ವೈಪಲ್ ಏದುಸಿರು ಬಿಡುತ್ತಿದ್ದಳು. ದಿನಸಿ ಸಾಮಾನುಗಳೊಂದಿಗೆ 'ಎಲಿವೇಟರ್' ಏರಿದ ಆಕೆಯನ್ನು ಬಿಟ್ಟರೆ ಆ ಎಲಿವೇಟರ್ ಖಾಲಿ ಇತ್ತು. ಅಕ್ಕಪಕ್ಕದ ಮನೆಯವರೊಂದಿಗಿನ ಸಂಬಂಧ ಅಷ್ಟಕ್ಕಷ್ಟೆ. ಅವರಿಗೂ ಅಷ್ಟೇ ಅಸಡ್ಡೆ. ಒಟ್ಟಾರೆ ವೈಪಲ್‌ಗೆ ಯಾರಿಂದಲೂ ಸಹಾಯ ದೊರೆಯುವಂತಿರಲಿಲ್ಲ. ಸ್ವಲ್ಪ ಸಮಯದ ನಂತರ ಯುವಕನೊಬ್ಬ ಇವಳಿದ್ದ ಎಲಿವೇಟರ್ ಏರಿದ. ಆತನ ಜೊತೆಗೆ ದೈತ್ಯ ಗಾತ್ರದ ನಾಯಿಗಳು. ಆ ರಾಕ್ಷಸ ರೂಪದ ನಾಯಿಗಳನ್ನು ನೋಡಿದ ವೈಪಲ್‌ಳ ಎದೆಬಡಿತ ಒಮ್ಮೆ ಸ್ತಬ್ಧವಾದಂತಾಯಿತು. ಆಕೆಯ ಒಳಗೆ ಹೆಪ್ಪುಗಟ್ಟುತ್ತಿದ್ದ ಭಯ ನಾಯಿಗಳ ಗಮನಕ್ಕೂ ಬಂದಿರಬೇಕು. ಅವು ಹೆಚ್ಚು ಆಕ್ರಮಣಶೀಲ ಮನೋಭಾವ ತೋರತೊಡಗಿದವು. ಆಗಲೇ ಕೋರೆಹಲ್ಲು ತೋರಿಸಲು ಆರಂಭಿಸಿದ್ದ ಆ ನಾಯಿಗಳ ಕ್ರೂರ ದೃಷ್ಟಿಯಿಂದ ದೂರವುಳಿಯಲು ವೈಪಲ್ ನಡೆಸಿದ ಯತ್ನಗಳು ಫಲ ಕಾಣಲಿಲ್ಲ. ಅದರ ಮಾಲೀಕ ನಾಯಿಗಳನ್ನು ಹದ್ದುಬಸ್ತಿಗಿಡಲು ಕೈಲಾದ ಪ್ರಯತ್ನ ಮಾಡಿದನಾದರೂ ಅವುಗಳ ರಕ್ತದಾಹದ ಎದುರು ಆತ ಸಂಪೂರ್ಣವಾಗಿ ಅಸಹಾಯಕನಾಗಿದ್ದ. ಕೊನೆಗೂ ನಾಯಿಗಳು ವೈಪಲ್ ಮೇಲೆ ಮುಗಿಬಿದ್ದು ಆಕೆಯ ದೇಹವನ್ನು ಅಕ್ಷರಶಃ ಹರಿದು ಹಾಕಿದ್ದವು. ನಾಯಿಗಳ ಮಾಲೀಕನನ್ನು ಜೈಲಿಗಟ್ಟಲಾಯಿತು. ಹಂತಕ 'ಪ್ರೆಸಾ ಕನರಿಯೊಸ್' ನಾಯಿಗಳಿಗೆ ಗುಂಡಿಕ್ಕಲಾಯಿತು.

ಒಂದು ವೇಳೆ ನಾಯಿಗಳು ನಿಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದರೆ, ಅವುಗಳನ್ನು ಮುದ್ದು ಮಾಡದೇ ನಿಮ್ಮ ದಿನಗಳೇ ಹೋಗುವುದಿಲ್ಲ ಎಂದಾದರೆ ಒಂದು ಸಂಗತಿಯನ್ನು ನಿಮಗೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಅದೇನೆಂದರೆ ನಿಮ್ಮ ಮುದ್ದಿನ ನಾಯಿಗಳು ಯಾವ ಸಮಯದಲ್ಲದಾದರೂ ನಿಮ್ಮ ಮೇಲೆರಗಬಹುದು ಎಂದು ನಿಮ್ಮ ಅಂತರಾತ್ಮಕ್ಕೆ ತಿಳಿದಿದ್ದರೂ ನೀವು ಅದನ್ನು ನಿರ್ಲಕ್ಷಿಸುತ್ತೀರಿ. ಅದು ಹೇಗಿದ್ದರೂ ನಿಮ್ಮ ಪಾಲಿಗೆ 'ಚೋ ಚ್ವೀಟ್'. 'ನಾವು ಸಾಕಿದ ನಾಯಿ ನಮ್ಮ ಮೇಲೆರಗುವುದೇ?' ಎಂಬ ಭಂಡ ವಿಶ್ವಾಸ ನಿಮ್ಮದು. ವಿಪರ್ಯಾಸವೆಂದರೆ, ಆ ಹಂತಕ 'ಪ್ರೆಸಾ ಕನರಿಯೋಸ್' ನಾಯಿಗಳ ಮಾಲೀಕ ಮರ್ಜೋರಿ ನೋಲರ್ ಕೂಡ ಇದೇ ಮಾತನ್ನು ಹೇಳಿದ್ದ. "ನನ್ನ ನಾಯಿಗಳು ಈ ರೀತಿಯಲ್ಲಿ ಆಕ್ರಮಣ ಮಾಡಬಲ್ಲವು ಎಂಬ ಸಂಗತಿ ಗೊತ್ತೇ ಇರಲಿಲ್ಲ. ಮನೆಯಲ್ಲೆಲ್ಲಾ ಪ್ರೀತಿಯಿಂದ ಓಡಾಡಿಕೊಂಡಿದ್ದ, ಮನೆಯ ಮಕ್ಕಳೊಂದಿಗೆ ಆಟವಾಡಿಕೊಂಡಿದ್ದ ನಾಯಿ ಏಕಾಏಕಿ ಈ ರೀತಿಯ ಗುಣವನ್ನು ಪ್ರದರ್ಶಿಸುತ್ತದೆ ಎಂದರೆ ನಂಬುವುದು ಹೇಗೆ?" ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದ.

ಈ ಸಂದರ್ಭಗಳಲ್ಲಿ ಕೆಲವು ವಿಚಾರಗಳನ್ನು ನಿಮ್ಮ ಗಮನಕ್ಕೆ ತರಲೇ ಬೇಕು. ನಾಯಿಗಳು ಸ್ವಭಾವತಃ ತೋಳಗಳು. ಶತ-ಶತಮಾನಗಳಿಂದ ಅವುಗಳನ್ನು ಪಳಗಿಸುತ್ತಾ ಮನುಷ್ಯ ನಿಧಾನವಾಗಿ ಅವುಗಳನ್ನು ತನ್ನ ಮನೆಯ ಸಾಕುಪ್ರಾಣಿಯನ್ನಾಗಿ ಪರಿವರ್ತಿಸಿದ. ನಾಯಿಗಳ ಪೂರ್ವಜರಾದ ತೋಳಗಳನ್ನು ನಮ್ಮ ಪೂರ್ವಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳತೊಡಗಿದರು. ಆಗ ಅಲೆಮಾರಿ ಜನಾಂಗವಾಗಿದ್ದ ನಮ್ಮ ಪೂರ್ವಿಕರಿಗೆ ತಮ್ಮ ಜಾನುವಾರುಗಳನ್ನು ಕಾವಲು ಕಾಯಲು ಇಂಥ ತೋಳಗಳ ಅವಶ್ಯಕತೆ ಇತ್ತು. ಸಿಕ್ಕ ಬೇಟೆಯಲ್ಲಿ ಸಾಕುತೋಳಗಳಿಗೂ ಒಂದು ಪಾಲು ಕಾದಿರಿಸಲಾಗುತ್ತಿತ್ತು. ಹೀಗೆ ಕೊಡು-ಕೊಳ್ಳುವಿಕೆಯಿಂದ ಮಾನವರು ಹಾಗೂ ತೋಳಗಳ ನಡುವೆ ಪರಸ್ಪರ ಅವಲಂಬನೆ ಸಾಧ್ಯವಾಯಿತು. ಆದರೆ ಇಂದಿಗೂ ಕೆಲವು ಜಾತಿಯ ನಾಯಿಗಳಲ್ಲಿ ಆ ಕ್ರೌರ್ಯ, ಹಂತಕ ಗುಣಗಳು ಹಾಗೆಯೇ ಉಳಿದು ಬಂದಿವೆ.

ನಿಜ ಹೇಳಬೇಕೆಂದರೆ ನಾಯಿಗಳಿಗೆ ನೀವು ಸ್ನೇಹಿತರಾಗುವುದು ಬೇಕಿಲ್ಲ. ಮುಂದಾಳುಗಳಾಗುವುದೊಂದೇ ಅವುಗಳ ಉದ್ದೇಶ. ಮನೆಗೆ ಒಂದು ನಾಯಿಮರಿಯನ್ನು ತಂದು ಒಮ್ಮೆ ಅದನ್ನು ಒಮ್ಮೆ ಕೂಲಂಕಷವಾಗಿ ಗಮನಿಸಿ ನೋಡಿ. ಮನೆಗೆ ಬಂದ ಕೂಡಲೇ ಅವುಗಳು ಮಾಡುವ ಕೆಲಸವೆಂದರೆ ಮಲಗಲು ಸ್ಥಳ ಹುಡುಕುವುದು. ಈ ನಾಯಕತ್ವ ಗುಣ ಅವುಗಳ ಒಳಗೆ ಎಷ್ಟು ಸರಾಗವಾಗಿ ಇಳಿದಿರುತ್ತದೆ ಎಂದರೆ, ಆ ಮನೆಯ ವ್ಯವಹಾರದಲ್ಲಿ ತಾನೂ ಮುಖ್ಯ ವ್ಯಕ್ತಿ ಎಂಬುದನ್ನು ನಾಯಿ ಅಲ್ಲಿ ನೆರೆದವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತದೆ. ಒಮ್ಮೆ ಆ ನಾಯಿಗೆ ನಾಯಕತ್ವ ಭಾವನೆ ಬೆಳೆದು ಬಲಿಷ್ಠಗೊಂಡಿದ್ದೇ ಆದರೆ ಅದನ್ನು ಜಾರಿಗೆ ತರಲು ಅದು ಯಾರ ಕೊರಳಿಗೆ ಬಾಯಿ ಹಾಕಲೂ ಹೇಸುವುದಿಲ್ಲ.

ಒಂದು ವೇಳೆ ನಿಮ್ಮಲ್ಲಿ 'ತಾಯ್ತನ' ತುಂಬಿ ತುಳುಕುತ್ತಿದ್ದರೆ ಅದಕ್ಕೂ ಒಂದು ಸಲಹೆ ಇದೆ. ದಯವಿಟ್ಟು ನಿಮ್ಮ ನಾಯಿಯನ್ನು ಮುದ್ದಿಸಬೇಡಿ. ಮುದ್ದಾಡಲು ಅದು ನಿಮ್ಮ ಮಗುವಲ್ಲ. ಹಾಗೊಂದು ವೇಳೆ ನಿಮಗೆ ಮುದ್ದಾಡಲೇ ಬೇಕೆಂದಿದ್ದರೆ ನಿಮ್ಮದೇ ಒಂದು ಮಗುವನ್ನು ಮಾಡಿಕೊಳ್ಳಿ. ನಾಯಿಯೊಳಗಿನ ತೋಳ ಇನ್ನೂ ಜೀವಂತವಾಗಿರುತ್ತದೆ. ಈ ಬಗ್ಗೆ ಮುಂದೆ ಎಂದಾದರೂ ಮಾತಾಡಿಯೇನು. ಈಗ ದೈತ್ಯ ನಾಯಿಗಳನ್ನು ಸಾಕುವುದು ಪ್ರತಿಷ್ಠೆಯನ್ನಾಗಿಸಿಕೊಂಡವರನ್ನು ಕುರಿತು ಕೆಲವು ಸಂಗತಿಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ.

ನಾನು ನನ್ನ ನಾಯಿ ರೊಟ್ಟೊವೈಲರ್ ಜೊತೆ ನಡೆದು ಹೋಗುತ್ತಿದ್ದೆ. ಆಗ ಎದುರಿಗೆ ಬಂದ ವ್ಯಕ್ತಿಯೊಬ್ಬ ನನ್ನ ನಾಯಿಯ ಬೆನ್ನು ತಟ್ಟುತ್ತಾ ನನ್ನೊಂದಿಗೆ ಮಾತಿಗೆ ನಿಂತ. "ನಾಯಿ ಜೋರಿದೆಯಾ?" ಎಂದು ಕೇಳಿದ. ನನಗೆ ಪ್ರಾರಂಭದಲ್ಲಿ ಅರ್ಥವಾಗಲಿಲ್ಲ. ಆತ ನಿಧಾನವಾಗಿ ತನ್ನ ಅನುಭವವನ್ನು ತೆರೆದಿಟ್ಟ. "ನಾನೂ ಕೂಡ ಒಂದು ಡಾಬರ್‌ಮನ್ ನಾಯಿಯನ್ನು ಸಾಕಿದ್ದೆ. ಆದರೆ ಅದು ತುಂಬಾ ಮೃದು ಸ್ವಾಭಾವದ ನಾಯಿಯಾಗಿತ್ತು. ಅದು ಬೊಗಳಿದ ಶಬ್ದವನ್ನೇ ನಾನು ಕೇಳಿರಲಿಲ್ಲ. ಸರಿ, ನನ್ನ ನಾಯಿಯನ್ನು ಆದಷ್ಟು ಆಕರ್ಷಕಗೊಳಿಸಲು ನಿರ್ಧರಿಸಿದೆ. ಅದನ್ನು ಆದಷ್ಟು ಆಕ್ರಮಣಶೀಲವನ್ನಾಗಿಸಲು ಅವಶ್ಯವಿರುವ ಎಲ್ಲಾ ತರಬೇತಿಗಳನ್ನೂ ನೀಡಿದೆ. ಅಲ್ವಾ ಸ್ವಾಮಿ, ಬೊಗಳದೇ, ಕಚ್ಚದೇ ಇರುವ ಡಾಬರ್‌ಮನ್ ನಾಯಿ ಇದ್ದು ಏನು ಪ್ರಯೋಜನ ನೀವೇ ಹೇಳಿ. ಒಮ್ಮೆ ರಾತ್ರಿ ನಾನು ಮನೆಗೆ ಹಿಂದಿರುವುದು ತುಸು ತಡವಾಗಿತ್ತು. ಗೇಟು ಬೀಗ ಹಾಕಿದ್ದರಿಂದ ಕಾಂಪೌಂಡ್ ಹಾರದೇ ಬೇರೆ ದಾರಿಯೇ ಇರಲಿಲ್ಲ. ಬಹುಶಃ ನಾಯಿಗೆ ನಾನು ಕಳ್ಳನಂತೆ ಕಂಡಿರಬೇಕು. ಓಡಿ ಬಂದು ನನ್ನ ಅಂಡಿಗೇ ಬಾಯಿ ಹಾಕಿತ್ತು!" ಎಂದು ಆತ ತನ್ನ ಮಾತುಗಳನ್ನು ತುಸು ಹೊತ್ತು ನಿಲ್ಲಿಸಿದ; ಅಂದಿನ ನೋವನ್ನು ಇಂದು ಅನುಭವಿಸುವವನಂತೆ! "ಈಗ ನಾನು ರೊಟ್ಟೊವೈಲರ್ ನಾಯಿ ತೆಗೆದುಕೊಳ್ಳಬೇಕೆಂದಿದ್ದೇನೆ" ಎಂದು ಮಾತುಕತೆಗೆ ಆತ ಅಂತ್ಯ ಹಾಡಿದ. ಆತನ ಮಾತು ಕೇಳುತ್ತಿರುವಂತೆಯೇ ನಾಯಿ ಆತನ ಇನ್ನೊಂದು ಅಂಡನ್ನು ಕಚ್ಚಬಾರದಿತ್ತೇ ಎಂಬ ಆಲೋಚನೆ ತಲೆಯಲ್ಲಿ ಸುಳಿದು ಹೋಯಿತು!

ದುರದೃಷ್ಟವಶಾತ್, ನಮ್ಮ ಸಮಾಜದ ಬಹುತೇಕ ಮಂದಿಗೆ ಈ ದೈತ್ಯ ನಾಯಿಗಳನ್ನು ಸಾಕುವುದೆಂದರೆ ಪ್ರತಿಷ್ಠೆಯ ಪ್ರಶ್ನೆಯಾದಂತಿದೆ. ಹೊಸ ಕಾರಿನಂತೆ, ಟ್ಯಾಟೂ ಹಾಕಿಸಿಕೊಳ್ಳುವಂತೆ, ಹೊಸ ಬೈಕ್ ಕೊಳ್ಳುವಂತೆ ಜನತೆ ದೈತ್ಯ ನಾಯಿಗಳನ್ನು ಕೊಳ್ಳುತ್ತಿದ್ದಾರೆ. ಡೈಯಾನ್ ಅವರನ್ನು ಹರಿದು ಹಾಕಿದ ನಾಯಿಗಳಾದ ಪ್ರೇಸಾಸ್ ಸೇರಿದಂತೆ ಪಿಟ್ ಬುಲ್ಸ್, ರೊಟ್ಟವೈಲರ್‍ಸ್ ಹಾಗೂ ಜರ್ಮನ್ ಶಫರ್ಡ್ ನಾಯಿಗಳು ಈವರೆಗೆ ಸಾಕಷ್ಟು ಸಾವು-ನೋವುಗಳಿಗೆ ಕಾರಣವಾಗಿವೆ. ಯಜಮಾನನ ಪಾತ್ರ ಅದಲು-ಬದಲು ಆದಂತೆ ಇಂಥ ಅವಘಡಗಳು ಸಂಭವಿಸುತ್ತಲೇ ಇರುತ್ತವೆ.

ಆದರೆ ಈ ಜಾತಿಯ ನಾಯಿಗಳು ಕೊಲೆಗಡುಕ ಜಾತಿಗಳಂತೂ ಅಲ್ಲವೇ ಅಲ್ಲ. ಆದರೆ ಸಾಮಾನ್ಯವಾಗಿ ದೈಹಿಕವಾಗಿ ಬಲಿಷ್ಠವಾಗಿರುವ ನಾಯಿಗಳು ಒಮ್ಮೆ ಅಡ್ಡದಾರಿ ಹಿಡಿದದ್ದೇ ಆದರೆ ಅವುಗಳಷ್ಟು ಅಪಾಯಕಾರಿ ಪ್ರಾಣಿಗಳು ಬೇರೆ ಇಲ್ಲ. ಇಂದು ದೈಹಿಕವಾಗಿ ಬಲಿಷ್ಠವಾಗಿರುವ ದೈತ್ಯ ನಾಯಿಗಳನ್ನೇ ಕೊಳ್ಳುವ ಹಾಗೂ ಸಾಕುವ ಪ್ರವೃತ್ತಿ ಸಮಾಜದಲ್ಲಿ ಹೆಚ್ಚುತ್ತಿದೆ ಎಂಬ ಕಳವಳಕಾರಿ ಸಂಗತಿಯೊಂದನ್ನು ಇತ್ತೀಚೆಗಿನ ಸಮೀಕ್ಷೆಯೊಂದು ಬಹಿರಂಗಪಡಿಸಿತ್ತು. ಜನತೆ ಇಂತಹ ನಾಯಿಗಳನ್ನು ಸ್ವಪ್ರತಿಷ್ಠೆಗೋಸ್ಕರ ಸಾಕುವುದೇ ಹೆಚ್ಚುತ್ತಿದೆ. ಇವರ್‍ಯಾರಿಗೂ ತಿಳಿಯದ ಒಂದು ಸಂಗತಿ ಎಂದರೆ, ಈ ದೈತ್ಯ ನಾಯಿಗಳ ಒಳಗಿನ ತೋಳಗಳನ್ನು ತೃಪ್ತಿಪಡಿಸಬೇಕೆಂದರೆ ಅವುಗಳಿಗೆ ಸಾಕಷ್ಟು ದೈಹಿಕ ಶ್ರಮ ನೀಡಬೇಕು. ದಿನಕ್ಕೆ ಕೇವಲ 20 ನಿಮಿಷಗಳ ಓಡಾಟದಿಂದ ಅವುಗಳ ಒಳಗಿನ ಹಿಂಸಾತೃಷೆಯನ್ನು ತಣಿಸುವುದು ಅಸಾಧ್ಯ. ಈ ನಾಯಿಗಳನ್ನು ಸಾಕುವ ಯಾರಿಗೂ ಇದರ ಪರಿವೆ ಇದ್ದಂತಿಲ್ಲ.

ನಾಯಿಗಳಿಗೆ ಅವುಗಳ ಸ್ಥಾನವನ್ನು ಮನವರಿಕೆ ಮಾಡಿಕೊಡುತ್ತಲೇ ಇರಬೇಕಾಗುತ್ತದೆ. ಎಲ್ಲರ ಊಟವಾದ ನಂತರ ಕೊನೆಗೆ ಅವುಗಳಿಗೆ ಊಟ ಹಾಕುವುದು, ಆಗಾಗ ಅವುಗಳನ್ನು ದಂಡಿಸುವುದರಿಂದ ನಾಯಿಗಳ ಕ್ರೋಧವನ್ನು ಹತ್ತಿಕ್ಕಬಹುದು.

ಅಲ್ಲೊಂದು ಇಲ್ಲೊಂದು ನಾಯಿಗಳು ಡಯಾನ್ ರೀತಿಯ ನತದೃಷ್ಟರನ್ನು ಬಲಿ ತೆಗೆದುಕೊಂಡಿರಬಹುದು. ಆದರೆ, ಮಾನವನ ಪಾಲಿಗೆ ಆಪದ್ಬಾಂಧವನಂತೆ ಒದಗಿ ಬಂದ ನಾಯಿಗಳ ನಿದರ್ಶನಗಳೂ ಸಾಕಷ್ಟಿವೆ. ಕಾಡ್ಗಿಚ್ಚು ಹರಡಿದ ಸಂದರ್ಭದಲ್ಲಿ ತನ್ನ ಯಜಮಾನನ ಕುಟುಂಬವನ್ನು ಸಕಾಲದಲ್ಲಿ ಎಚ್ಚರಿಸಿ ಅವರ ಪ್ರಾಣ ಉಳಿಸಿದ ನಾಯಿಯ ಉದಾಹರಣೆಯೂ ನಮ್ಮ ಮುಂದಿದೆ. ಅಷ್ಟೇ ಏಕೆ, ಸಂಜೆ ವಾಕ್ ಮಾಡುತ್ತಿರಬೇಕಾದರೆ ನನ್ನೊಂದಿಗೆ ನಾಯಿ ಇದ್ದರೆ ಆ ಮಟ್ಟಿಗೆ ನಾನು ಸುರಕ್ಷಿತ. ಮನೆಯ ಪ್ರಾಂಗಣದಲ್ಲಿ ನಾಯಿ ಮಲಗಿದೆ ಎಂದಾದರೆ ನನ್ನ ಕುಟುಂಬ ಕೂಡ ಸುರಕ್ಷಿತ. ಆದರೆ ನಾವು ನಾಯಿಯೊಂದಿಗೆ ಯಾವ ಬಗೆಯ ಸಂಬಂಧವನ್ನು ಇಟ್ಟುಕೊಂಡಿದ್ದೇವೆ ಎನ್ನುವುದರ ಮೇಲೆ ಉಳಿದೆಲ್ಲಾ ಸಂಗತಿಗಳು ನಿರ್ಧಾರವಾಗುತ್ತವೆ .

ಐಐಪಿಎಂ
ಥಿಂಕ್ ಟ್ಯಾಂಕ್\

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .