User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಬಣ್ಣದ ಲೋಕ
 
 

ಸೂಪರ್ ಕಿಸ್ಸರ್ ಅಕ್ಷಯ್

ಅಕ್ಕಿ ಡಾರ್ಲಿಂಗ್ ಭಾರತದ ಮಾದಕ ತಾರೆ! ಅಲ್ಲವೇ ಮತ್ತೆ? 'ಕಂಬಖ್ತ್ ಇಶ್ಕ್'ನಲ್ಲಿ ಈ ತುಂಟನಿಗೆ ಚುಂಬನದ ಸವಿಯುಣಿಸಿರೋ ಮಾಜಿ ಬಾಂಡ್ ಗರ್ಲ್ ಡೇನಿಸ್ ರಿಚಡ್ಸ್ ಪ್ರಕಾರ ಅಕ್ಷಯ್ ಮಾದಕ ತಾರೆ. ಈ ಚಿತ್ರದಲ್ಲಿ ಸಿಲ್ವಸ್ಟರ್ ಸ್ಟಲೋನ್ ಮತ್ತು ಬ್ರಾಂಡನ್ ರೌತ್‌ನಂತಹ ಹಾಲಿವುಡ್ ನಟರಿದ್ದರೂ ನಮ್ಮ ಆಕ್ಷನ್ ಹೀರೋ ಅಕ್ಷಯ್‌ನನ್ನೇ ಹಾಡಿ ಹೊಗಳುತ್ತಿದ್ದಾಳೆ ಈ ಹಾಲಿವುಡ್ ಬಾಲೆ! ಜೊತೆಗೆ ಆತನನ್ನು 'ಸೂಪರ್ ಕಿಸ್ಸರ್' ಎಂದು ಬೇರೆ ಕರೆದಿದ್ದಾಳೆ. ಇದು ಬರೋಬ್ಬರಿ ಹೊಗಳಿಕೆಯೇ ಬಿಡಿ!

ನ್ಯೂಯಾರ್ಕ್ ನಖರಾ

ನಟ ನೀಲ್ ನಿತಿನ್ ಮುಖೇಶ್‌ಗೆ 'ನ್ಯೂಯಾರ್ಕ್' ಚಿತ್ರದಲ್ಲಿ ತಾರತಮ್ಯದಿಂದ ರೋಸಿ ಹೋಗಿರೋ ಮುಸ್ಲಿಂ ಯುವಕನ ಪಾತ್ರ. ವಾಸ್ತವದಲ್ಲೂ ನೀಲ್ ಇಂತಹುದೇ ಮುಜುಗರ ಎದುರಿಸಿದ್ದಾರೆ. ಚಿತ್ರೀಕರಣಕ್ಕೆಂದು ನ್ಯೂಯಾರ್ಕ್‌ಗೆ ಬಂದಿಳಿದಾಗ ವಿಮಾನ ನಿಲ್ದಾಣದ ಅಧಿಕಾರಿಗಳು ನೀಲ್ ಭಾರತೀಯನೆಂದು ಒಪ್ಪಲೇ ತಯಾರಿರಲಿಲ್ಲ. ಕೊನೆಗೂ ಆ ಅಧಿಕಾರಿಗಳೆದುರು ತಾನು ಭಾರತೀಯ ನಟನೆಂದು ಸಾಬೀತುಮಾಡಿದ ನೀಲ್‌ಗೆ ಒಳ್ಳೇ ಅನುಭವಾಗಿರುವುದೂ ನಿಜವೇ. ಹೊಸ ಚಿತ್ರದ ನಟನೆಗೆ ಪೂರ್ವತಯಾರಿ ಸಿಕ್ಕಿತಲ್ಲವೇ... ಇನ್ಯಾತಕ್ಕೆ ಚಿಂತೆ?

ಎಡವದಿರು ಬೆಡಗೀ...

ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ 'ಪ್ಯಾರ್ ಇಂಪಾಸಿಬಲ್' ಚಿತ್ರೀಕರಣಕ್ಕಾಗಿ ಬ್ಯಾಂಕಾಕ್‌ಗೆ ಹಾರಿದ್ದಳು. ಅಲ್ಲಿ ಬಿಡುವಿನ ವೇಳೆ ಚಿತ್ರೀಕರಣಕ್ಕಾಗಿ ಹಾಕಿದ್ದ ಸೆಟ್‌ನ ನಾಲ್ಕನೇ ಮಹಡಿಯಿಂದ ಕೆಳಗಿರುವ 40 ಅಡಿ ಆಳದ ಈಜುಕೊಳಕ್ಕೆ ಧುಮುಕಿಯೇ ಬಿಟ್ಟಳು. ಇದರಿಂದ ಪ್ರೇರಣೆ ಸಿಕ್ಕ ಸಹನಟ ಉದಯ್ ಚೋಪ್ರಾ ಕೂಡ ಧುಮುಕಿ ಮೈ-ಕೈ ಗಾಯ ಮಾಡಿಕೊಂಡ. ಈಕೆಗೆ ಸಹನಟರ ಜೊತೆಗಿನ ವಿವಾದಗಳು ಕಾಡುತ್ತಲೇ ಇರುತ್ತದೆ. ಹೀಗಾಗಿ ಸ್ವಲ್ಪ ನೋಡಿಕೊಂಡು ಹೆಜ್ಜೆ ಇಡಬೇಕೇ ಬೆಡಗೀ...

ಹಾಲಿವುಡ್‌ಗೂ ತಪ್ಪದ ಅತ್ತೆ-ಸೊಸೆ ಜಗಳ

ಮೊದಲ ಪತ್ನಿ ಜೆನ್ನಿಯನ್ನು ಬಿಟ್ಟ ನಟ ಬ್ರಾಡ್‌ಪಿಟ್ ಏಂಜಲಿನಾಳನ್ನು ಕಟ್ಟಿಕೊಂಡ. ಆದರೆ ಆತನ ಅಮ್ಮ ಜೇನ್‌ಗೆ ಇದು ಎಳ್ಳಷ್ಟೂ ಹಿಡಿಸಿಲ್ಲ. "ಜೆನ್ನಿಫರ್ ಆನಿಸ್ಟನ್ ಸದ್‌ಗೃಹಿಣಿ. ಆದರೆ ಜ್ಯೂಲಿಯದು ತದ್ವಿರುದ್ಧ ಜೀವನ ಶೈಲಿ. ಆಕೆ ನನಗೆ ಹಿಡಿಸುತ್ತಲೇ ಇಲ್ಲ" ಎಂದು ಮಗನ ತಲೆತಿನ್ನಲು ಶುರು ಹಚ್ಚಿದ್ದಾಳೆ ಅಮ್ಮ ಜೇನ್. ಅತ್ತೆಯ ಪ್ರೇಮದ ಆಸರೆ ಸಿಗದಿದ್ದಲ್ಲಿ ಏಂಜಲಿನಾ ಜ್ಯೂಲಿ ಎಷ್ಟು ದಿನ ಪತಿಯನ್ನು ಸೆರಗಿಗೆ ಕಟ್ಟಿಕೊಂಡಾಳು?

ಬಂದಳೋ, ಬಂದಳೋ ಮೇಘನಾ...

ಮತ್ತೊಬ್ಬ ನವತಾರೆ ಕನ್ನಡದ ಮಣ್ಣಿನಲ್ಲಿ ಬೆಳಗುವ ಕನಸು ಕಾಣುತ್ತಿದ್ದಾಳೆ. ಹೆಸರು ಮೇಘನಾ ರಾಜ್. ಈಕೆಗೆ ಕಲಾ ಕುಟುಂಬದ ಹಿನ್ನೆಲೆ ಇದೆ. ಅಂದರೆ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಮಗಳು. 'ಪೊಲ್ಲಾದವನ್' ತಮಿಳು ಚಿತ್ರದ ರಿಮೇಕ್ 'ಪುಂಡ' ಚಿತ್ರದಲ್ಲಿ ನಟ ಯೋಗೀಶ್‌ಗೆ ನಾಯಕಿಯಾಗಿದ್ದಾಳೆ ಮೇಘನಾ. ಜೊತೆಯಲ್ಲೇ ಹೆಸರಿಡದ ಮತ್ತೊಂದು ಚಿತ್ರದಲ್ಲೂ ಯೋಗೀಶ್‌ಗೆ ಈಕೆಯೇ ನಾಯಕಿ. ಹಾಗೆಂದು ಮೇಘನಾಗೆ ಇದು ಚೊಚ್ಚಲ ಚಿತ್ರವೇನಲ್ಲ. ಈಗಾಗಲೇ ತಮಿಳು ಮತ್ತು ತೆಲುಗು ಚಿತ್ರರಂಗಗಳ ತಲಾ ಒಂದೊಂದು ಚಿತ್ರಗಳಲ್ಲಿ ನಟಿಸಿದ್ದಾಳೆ. ಅಪ್ಪ-ಅಮ್ಮನನ್ನು ಮೀರಿಸೋ ಕಲಾವಿದೆಯಾಗುವಳೇ? ಅನ್ಯಭಾಷೆಯಲ್ಲಿ ಸೈ ಎನಿಸಿಕೊಂಡ ಮೇಲೆ ಸ್ಯಾಂಡಲ್‌ವುಡ್‌ನಲ್ಲಿ ಮನ್ನಣೆ ಸಿಗುವುದರಲ್ಲಿ ಸಂದೇಹ ಬೇಡ ಎನ್ನುವಿರಾ?

ಶರ್ಮಿಳಾ ಶಾಪಿಂಗ್

ಶರ್ಮಿಳಾ ಮಾಂಡ್ರೆಗೆ ಗ್ಲಾಮರಸ್ ಇಮೇಜ್ ಸಾಕಾಗಿ ಹೋಗಿದೆ! ಅದೇ ಮಿನಿಸ್ಕರ್ಟ್, ಬಿಕಿನಿ ಶೈಲಿಯ ಧಿರಿಸುಗಳನ್ನು ಧರಿಸಿ ಸುಸ್ತಾಗಿರುವ ಶರ್ಮಿಳಾ ಕನಿಷ್ಠ ಒಂದಾದರೂ ಗ್ಲಾಮರ್ ರಹಿತ ಪಾತ್ರ ಕೊಡಪ್ಪಾ... ಅಂತ ನಿತ್ಯ ದೇವರ ಬಳಿ ಬೇಡುವುದೇ ಆಗಿತ್ತು. ದೇವರಿಗೂ ಈ ಗೊಣಗಾಟ ಕೇಳಿ ಸಾಕಾಗಿತ್ತೇನೋ, ಶರ್ಮಿಳಾಗೆ ವಿಜಯ್ ನಾಯಕತ್ವದ 'ಚಿರುತ' ಚಿತ್ರದಲ್ಲಿ ನಾಯಕಿ ಪಾತ್ರ ಸಿಕ್ಕೇ ಬಿಡ್ತು. ಅಂತೂ ಖುಷಿಯಿಂದ ಕುಣಿದಾಡುತ್ತಿರುವ ಶರ್ಮಿಳಾ ಈಗ ಹತ್ತಿಬಟ್ಟೆಯ ಸೀರೆಗಾಗಿ ಬೆಂಗಳೂರಿನ ಎಲ್ಲಾ ಶಾಪಿಂಗ್ ಕೇಂದ್ರಗಳನ್ನು ತಡಕಾಡುತ್ತಿದ್ದಾಳೆ. "ಕಲಾಸಿಪಾಳ್ಯಂನ ಗಲ್ಲಿಗಳಲ್ಲಿ ತಿರುಗಾಡುವ ಬಡ ಹೆಣ್ಣುಮಕ್ಕಳಂತೆಯೇ ಕಾಣಬೇಕು, ಆದರೆ ಮುಖದಲ್ಲಿ ಸಿನಿಮಾ ತಾರೆಯ ಕಳೆಯೂ ಇರಬೇಕೆಂದರೆ ಸುಮ್ಮನೆಯೆ? ಅದಕ್ಕೂ ಪ್ರತಿಭೆ ಬೇಕು" ಎನ್ನುವುದು ಶರ್ಮಿಳಾ ಉವಾಚ. ಭಲೇ ಮಾಂಡ್ರೆ!

ಇಂಗ್ಲಿಷ್ ಚಿತ್ರದಲ್ಲಿ ಕಲಾಕಾರ

ಕಿರಿತೆರೆ ಹಾಗೂ ಹಿರಿತೆರೆಗಳೆರಡರಲ್ಲೂ ಯಶಸ್ಸಿನ ಅಲೆಯಲ್ಲಿ ಮೆರೆಯುತ್ತಿರುವ ಹುಡುಗ ಹರೀಶ್ ರಾಜ್. ತಾನೇ ನಿರ್ದೇಶಿಸಿದ 'ಕಲಾಕಾರ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಶಬ್ದ ಮಾಡಲಿಲ್ಲವಲ್ಲ ಎನ್ನುವ ಕೊರಗು ಇದ್ದೇ ಇದೆ. ಆದರೆ ಒಳ್ಳೇ ವಿಮರ್ಶೆಗಳು ಬಂದಿರುವುದು ಹರೀಶ್‌ಗೆ ಕೊಂಚ ಸಮಾಧಾನ ನೀಡಿದೆ. ಹೀರೋ ಆಗುವ ಕನಸಿನಿಂದ ಸಿಕ್ಕ ಸಿಕ್ಕ ಸಿನಿಮಾಗಳಲ್ಲಿ ನಟಿಸಲು ಹರೀಶ್ ಸಿದ್ಧನಿಲ್ಲ. ಆತ ನಟಿಸಿದ 'ದ್ವೀಪ', 'ತಾಯಿ ಸಾಹೇಬ' ಮತ್ತು 'ಕಾನೂರು ಹೆಗ್ಗಡತಿ' ಅಥವಾ 'ಬನದ ನೆರಳು' ಚಿತ್ರಗಳೇ ಈ ಹುಡುಗನ ಭಿನ್ನ ನಿಲುವಿಗೆ ಸಾಕ್ಷಿ. ಇದೀಗ ಸ್ವರೂಪ್ ಕಾಂಚಿ ನಿರ್ದೇಶನದ ಇಂಗ್ಲಿಷ್ ಚಿತ್ರವೊಂದು ಹರೀಶ್ ಮಡಿಲಿಗೆ ಬಿದ್ದಿದೆ. 'ಬ್ಯಾಂಗ್ಲೂರ‍್ಡ್' ಎನ್ನುವ ಈ ಚಿತ್ರದಲ್ಲಿ ಹರೀಶ್ ವಿದೇಶದಿಂದ ಮರಳಿದ ಹುಡುಗನ ಪಾತ್ರ ನಿರ್ವಹಿಸುತ್ತಿದ್ದಾರೆ.

 ಎನ್. ಕೆ. ಸುಪ್ರಭ, ನೇಹಾ ಸರೀನ್ 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .