User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಅಂಕದ ಪರದೆ
 
 

ಪಾಕಿಸ್ತಾನ: ಸುಭದ್ರತೆ

ತಾಲಿಬಾನ್ ನಾಶ ಪಾಕ್‌ಗೆ ನಿರ್ಣಾಯಕ

ಇದೇ ಮೊದಲ ಬಾರಿಗೆ ಪಾಕಿಸ್ತಾನ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ

ಭಾರತದ ನೆರೆಯ ಈ ಅಪಾಯಕಾರಿ ರಾಷ್ಟ್ರ ಬಹುಶಃ ಸುದ್ದಿ ಮಾಡದ ದಿನವೇ ಇಲ್ಲ. ಅಂತರ್ ಕಲಹ, ಡೋಲಾಯಮಾನ ಆರ್ಥಿಕ ಪರಿಸ್ಥಿತಿ ಹಾಗೂ ಸಾಮಾಜಿಕ ಬಿಕ್ಕಟ್ಟು ಇವೆಲ್ಲದರ ಜೊತೆಗೆ ಹಲವು ಪ್ರಾಂತಗಳಲ್ಲಿ ಪ್ರಬಲವಾಗುತ್ತಿರುವ ಪ್ರತ್ಯೇಕತಾವಾದವೂ ಪಾಕಿಸ್ತಾನದ ಅಸ್ಥಿರತೆಗೆ ಮುಖ್ಯ ಕಾರಣವಾಗಿದೆ. ಹಾಗೆ ನೋಡಿದರೆ, ಪಾಕಿಸ್ತಾನದಲ್ಲಿನ ಪ್ರತ್ಯೇಕತಾವಾದಕ್ಕೆ ಅರ್ಧ ಶತಮಾನಕ್ಕೂ ಮಿಕ್ಕ ಇತಿಹಾಸವಿದೆ. 1950ರಲ್ಲೇ ಈ ಕೂಗು ಕೇಳಿಬಂತು; ಅದರ ಪ್ರಥಮ ಫಲಿತಾಂಶವೆಂಬಂತೆ 1971ರಲ್ಲಿ ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ಪ್ರತ್ಯೇಕವಾಯಿತು. ಕಳೆದ ದಶಕದಲ್ಲಂತೂ ಪಾಕಿಸ್ತಾನದ ಹಲವು ಪ್ರಾಂತಗಳಲ್ಲಿ ಪ್ರತ್ಯೇಕತಾವಾದ ತಾರಕಕ್ಕೇರಿತ್ತು. ಸಂಪನ್ಮೂಲ ಹಂಚಿಕೆಯಲ್ಲಿ ಸರ್ಕಾರ ತೋರಿದ ತಾರತಮ್ಯ ನೀತಿಯನ್ನು ಖಂಡಿಸಿ ಸಿಂಧ್ ಪ್ರಾಂತದಲ್ಲಿ ಜನ ಭುಗಿಲೆದ್ದಿದ್ದರು. ಬಲೂಚಿಸ್ತಾನದಲ್ಲಿ ಪ್ರತಿಭಟನೆ, ಚಳವಳಿಗಳು, ಬಹಿರಂಗ ಸಭೆ- ಮೆರಣಿಗೆಗಳು ನಡೆದವು. ಗಡೀಪಾರಾಗಿದ್ದ ಅತುಲ್ಲ ಮೆಂಗಲ್ ಎಂಬ ಬಲೂಚಿಸ್ತಾನ್ ನಿವಾಸಿ 2004ರಲ್ಲಿ ಪ್ರತ್ಯೇಕ ಬಲೂಚಿಸ್ತಾನದ ಕಲ್ಪನೆಯನ್ನು ಜನರ ಮನದಲ್ಲಿ ಬಿತ್ತುವಲ್ಲಿ ಯಶಸ್ವಿಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸುತ್ತದೆ. ಇನ್ನು ಪಂಜಾಬ್ (ಪಶ್ಚಿಮ ಪಂಜಾಬ್)ಗೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ನೀಡಬೇಕೇ ಎಂಬುದರ ಬಗ್ಗೆ ಕೂಡಾ ಚರ್ಚೆ ನಡೆದಿವೆ. ಆಂತರಿಕವಾಗಿ ತಾರತಮ್ಯ ನೀತಿ ಹೊರಗಿನ ಕೈಗಳು ಕೂಡಾ ಪ್ರತ್ಯೇಕತಾ ಚಳವಳಿಗಳನ್ನು ಪ್ರೋತ್ಸಾಹಿಸುತ್ತಲೇ ಬಂದಿವೆ. ಭದ್ರತೆಗೆ ಸಂಬಂಧಿಸಿದ ಪಾಕಿಸ್ತಾನದ ರಾಷ್ಟ್ರೀಯ ಪರಿಷತ್ತು ಬಲೂಚಿ ಪ್ರತ್ಯೇಕತಾವಾದಿಗಳಿಗೆ ನೆರವು ಹಾಗೂ ಪ್ರೋತ್ಸಾಹ ನೀಡಿದ ಬ್ರಿಟಿಷ್ ಗುಪ್ತಚರ ಇಲಾಖೆಯ ಮಧ್ಯಪ್ರವೇಶವನ್ನು ಕಟುವಾಗಿ ಖಂಡಿಸಿತ್ತು. ಅಮೆರಿಕ ಸೇನೆಯ ಲೆಫ್ಟಿನಂಟ್ ಕರ್ನಲ್ ರಾಲ್ಫ್ ಪೀಟರ‍್ಸ್ ವಾಯುವ್ಯ ಗಡಿಭಾಗವನ್ನು (ನಾರ್ತ್ ವೆಸ್ಟರ್ನ್ ಫ್ರಾಂಟಿಯರ್ ಪ್ರೊವಿನ್ಸ್) ಪಾಕಿಸ್ತಾನದಿಂದ ಬೇರ್ಪಡಿಸಿ ಅಫ್ಘಾನಿಸ್ತಾನಕ್ಕೆ ಸೇರಿಸಬೇಕು ಎಂಬುದನ್ನು ಒತ್ತಿ ಹೇಳಿದ್ದರು. ಅಮೆರಿಕದ ಕೇಂದ್ರ ಗುಪ್ತಚರ ಇಲಾಖೆ (ಸಿಐಎ) ಹಾಗೂ ಇಸ್ರೇಲ್‌ನ ಗುಪ್ತಚರ ಇಲಾಖೆ 'ಮೊಸಾದ್'ಗೆ ಕೂಡಾ ಬಲೂಚಿ ಪ್ರತ್ಯೇಕತಾವಾದಿಗಳೊಂದಿಗೆ ಸಂಬಂಧವಿತ್ತು ಎಂಬ ಆರೋಪಗಳಿವೆ.

ಪ್ರತ್ಯೇಕತಾವಾದ ಹಾಗೂ ಸೇನಾ ಆಡಳಿತದ ನಡುವೆಯೂ ವಿಚಿತ್ರವಾದ ಸಂಬಂಧಗಳಿವೆ. ಸ್ವತಂತ್ರಗೊಂಡ ಆರು ದಶಕಗಳಲ್ಲಿ ಪಾಕಿಸ್ತಾನ ಸುಮಾರು ಅರ್ಧದಷ್ಟು ಕಾಲ ಸೇನಾ ಆಡಳಿತವನ್ನೇ ಕಂಡಿದೆ. ಪ್ರತಿ ಬಾರಿ ಹೀಗಾದಾಗಲೂ ಪಾಕಿಸ್ತಾನ ಅಪಾರ ಬೆಲೆಯನ್ನೇ ತೆತ್ತಿದೆ. ಜನರಲ್ ಯಾಹ್ಯಾ 'ಆಳ್ವಿಕೆ' ವೇಳೆ ಬಾಂಗ್ಲಾದೇಶವನ್ನು ಪಾಕ್ ಕಳೆದುಕೊಂಡಿತು. ಜಿಯಾ-ಉಲ್-ಹಕ್ ಆಡಳಿತದ ಸಂದರ್ಭದಲ್ಲಿ ಸಿಯಾಚಿನ್ ಕೈ ಬಿಟ್ಟು ಹೋಯಿತು. ಇನ್ನು ಮುಷರ್ರಫ್ ಕಾಲದಲ್ಲಿ ಅಫ್ಘಾನಿಸ್ತಾನದ ನಂಬಿಕೆ ಕಳೆದುಕೊಂಡಿತು. ಆದರೆ ಈಗ ಒಂದಿಷ್ಟು ಭರವಸೆ ಮೂಡಿದೆ. ಪ್ರತ್ಯೇಕತಾವಾದ ಸಂಪೂರ್ಣವಾಗಿ ಮಾಯವಾಗದೇ ಹೋದರೂ, ಪ್ರಜಾಪ್ರಭುತ್ವ ವ್ಯವಸ್ಥೆ ಹಂತ-ಹಂತವಾಗಿ ಸಕ್ರಿಯಗೊಳ್ಳುವ ಸೂಚನೆ ಮೂಡಿದೆ. ಬೆನಜೀರ್ ಭುಟ್ಟೊ ಹತ್ಯೆಯ ಬಳಿಕ ಹಾಗೂ ರಾಷ್ಟ್ರೀಯ ರಾಜಕೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಜನಪ್ರಿಯತೆ ಮತ್ತು ಅವುಗಳ ದುರ್ಬಲ ಪ್ರತ್ಯೇಕತಾವಾದವನ್ನು ಮೀರಿ ಬೆಳೆಯುತ್ತಿರುವುದು ಈ ಭರವಸೆ ಮೂಡಿಸಿದೆ. ಸ್ವಾತ್ ಕಣಿವೆ ಹಾಗೂ ವಾಯುವ್ಯ ಗಡಿ ಪ್ರದೇಶಗಳಲ್ಲಿರುವ ತಾಲಿಬಾನಿಗಳ ವಿರುದ್ಧ ಪಾಕಿಸ್ತಾನ ತನ್ನ ಕಾರ್ಯಾಚರಣೆ ತೀವ್ರಗೊಳಿಸಿದಂತೆ ಜನರೂ ಕೂಡಾ ಪ್ರಾಂತೀಯವಾದ ಬಿಟ್ಟು ರಾಷ್ಟ್ರೀಯತೆಗೆ ಬೆಂಬಲ ನೀಡಲು ಮುಂದಾಗುತ್ತಾರೆ.

ತಾಲಿಬಾಲಿ ಮುಖಂಡ ಬೈತುಲ್ಲಾ ಮೆಹ್ಸೂದ್ ವಿರುದ್ಧ ತೀವ್ರ ಸೇನಾ ದಾಳಿಗೆ ಸಿದ್ಧವಾಗಿರುವ ಪಾಕಿಸ್ತಾನ ಪ್ರತ್ಯೇಕತೆಯ ಕೂಗನ್ನು ಪಾಕಿಸ್ತಾನ ನೆಲದಿಂದ ಮಾತ್ರವಲ್ಲ ಜನ ಮಾನಸದಿಂದಲೂ ಕಿತ್ತೊಗೆಯುವಂತೆ ಕಾಣುತ್ತಿದೆ. ತಾಲಿಬಾನಿಗಳ ಗೋಣು ಮುರಿಯುವುದು ಇತರೆ ಸಮೂಹ ನಾಶಕ ಸಂಘಟನೆಗಳ ಧೈರ್ಯವನ್ನೂ ಉಡುಗಿಸುತ್ತದೆ. ತಾಲಿಬಾನಿಗಳನ್ನು ಬೇರು ಸಮೇತ ಕಿತ್ತೊಗೆಯಬೇಕು, ಪ್ರಜಾಪ್ರಭುತ್ವ ಸ್ಥಾಪಿಸಬೇಕು, ಕೇಂದ್ರೀಕೃತ ಹಾಗೂ ತಾರತಮ್ಯರಹಿತ ನೀತಿ ಜಾರಿಯಾಗಬೇಕೆಂಬ ನಿಶ್ಚಿತ ಗುರಿ ಇಲ್ಲದೇ ಹೋದರೆ ವಿದೇಶೀ ಆರ್ಥಿಕ-ಸೇನಾ ನೆರವು ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಹತ್ತಿಕ್ಕುತ್ತವೆಯೇ ವಿನಾ ಶಾಶ್ವತ ಪರಿಹಾರ ಅಸಾಧ್ಯ ಎಂಬುದನ್ನು ಇತಿಹಾಸವೇ ಸಾಕ್ಷೀಕರಿಸುತ್ತದೆ. ಬಹುಶಃ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎಂದೆನಿಸುತ್ತದೆ. ಆದರೆ ಗುರಿ ತಲುಪುತ್ತದೆಯೇ?!

ಐಐಪಿಎಂ
'ಥಿಂಕ್ ಟ್ಯಾಂಕ್'

ಅಕ್ರಂ ಹಕ್

ರಾಜಕೀಯ: ಮಹಿಳಾ ಮೀಸಲಾತಿ

ಇನ್ನೂ ಒಂದು ಹೆಜ್ಜೆ ಮುಂದಿಡಿ...

ಮಹಿಳೆಯರಿಗೆ ಟಿಕೆಟ್ ನೀಡಲು ಪಕ್ಷಗಳೇ ಮುಂದಾಗಬೇಕು

ಹಳೆ ನಾಟಕ ಮತ್ತೆ ರಂಗವೇರಿದೆ. ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರಕ್ಕಾಗಿ ಕಾಯುತ್ತಿದ್ದ ಎಲ್ಲರಿಗೂ ಮತ್ತೆ ಮೀಸಲಾತಿಯ ಪರ ಹಾಗೂ ವಿರುದ್ಧ ವಾದ ಕೇಳುವ ಅವಕಾಶ ಬಂದಿದೆ. ಆದರೆ ಈ ಬಾರಿ ಸಂಸತ್ತಿನಲ್ಲಿ ಮಹಿಳಾ ಸಂಸದರ ಸ್ಥಾನ 61ಕ್ಕೆ ಏರುವ ಮೂಲಕ ಪುರುಷ-ಮಹಿಳಾ ಸರಾಸರಿ ಕೊಂಚ ಸುಧಾರಿಸಿದೆ. ಸ್ವಾತಂತ್ರ್ಯದ ಬಳಿಕ ಅತೀ ಹೆಚ್ಚು ಮಹಿಳಾ ಸಂಸದರನ್ನು ಕಂಡ ಚುನಾವಣೆ ಇದು.

ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯದ ಸರಾಸರಿ ಇದೇ ಮೊದಲ ಬಾರಿ ಎರಡಂಕಿಗೆ ಅಂದರೆ ಶೇ. 10ಕ್ಕೆ ಏರಿದೆ. ಆದರೆ ಕಳೆದ 13 ವರ್ಷಗಳಿಂದ ಭಾರತೀಯ ಮಹಿಳೆ ಬಯಸುತ್ತಿರುವ ಶೇ.33ರಷ್ಟು ಮೀಸಲಾತಿಗೆ ಈ ಶೇ.10ರಷ್ಟು ಪ್ರಾತಿನಿಧ್ಯವನ್ನು ಹೋಲಿಸುವುದೂ ಅಸಾಧ್ಯ. ಹೆಚ್ಚೆಂದರೆ ಈ ಪ್ರಾತಿನಿಧ್ಯ ನಮ್ಮನ್ನು ಅಭಿವೃದ್ಧಿ ಹೊಂದಿದ ದೇಶಗಳ ಮಹಿಳಾ ಪ್ರಾತಿನಿಧ್ಯದ ಸಮೀಪಕ್ಕೆ ಕೊಂಡೊಯ್ಯಬಹುದು. ಅಲ್ಲಿನ ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯ ಶೇ. 15ರಷ್ಟಿರುತ್ತದೆ. ಅಷ್ಟೊಂದು ಜನಸಂಖ್ಯೆ ಇಲ್ಲದ (ಅಂದರೆ ಮಹಿಳಾ ಜನಸಂಖ್ಯೆಯೂ ಕಡಿಮೆಯೇ ಇರುವ) ಆ ದೇಶಗಳಲ್ಲಿ ಶೇ. 15ರಷ್ಟು ಪ್ರಾತಿನಿಧ್ಯ ಉತ್ತಮ ಸೂಚನೆಯೇ.

ಭಾರತದ ಒಟ್ಟು ಮಹಿಳಾ ಜನಸಂಖ್ಯೆ ಹಾಗೂ ಪ್ರಸ್ತುತ ನಮ್ಮ ಸಂಸತ್ತಿನಲ್ಲಿನ ಮಹಿಳಾ ಪ್ರಾತಿನಿಧ್ಯವನ್ನು ತಾಳೆ ನೋಡಿದಾಗ ಪರಿಸ್ಥಿತಿಯ ವಿಷಮತೆ ಅರಿವಾಗಬಹುದು. ನಮ್ಮ ದೇಶದ 50 ಕೋಟಿ ಮಹಿಳೆಯರಿಗೆ ಪ್ರತಿನಿಧಿಗಳಾಗಿ ಸಂಸತ್ತಿನಲ್ಲಿ ಕೇವಲ 61 ಮಂದಿ ಮಹಿಳಾ ಸಂಸದರಿದ್ದಾರೆ. ಅಂದರೆ ದೇಶದ ತಲಾ 81 ಲಕ್ಷ ಮಹಿಳೆಯರಿಗೆ ಒಬ್ಬ ಮಹಿಳಾ ಪ್ರತಿನಿಧಿ!

ಪ್ರಸ್ತುತ 61 ಸಂಸದೆಯರಿಗೆ ಪ್ರಾತಿನಿಧ್ಯ ಸಿಕ್ಕಿತಲ್ಲ ಎಂದು ಬೀಗುವಂತಿಲ್ಲ. ಏಕೆಂದರೆ ವಿಷಯದ ಒಳಹೊಕ್ಕು ನೋಡಿದರೆ ಬಹುತೇಕ ಮಹಿಳಾ ಸಂಸದರಿಗೆ ಟಿಕೆಟ್ ಸಿಕ್ಕಿದ್ದೇ 'ಕುಟುಂಬ ರಾಜಕಾರಣ'ದ ಹಿನ್ನೆಲೆಯಲ್ಲಿ. ಇಲ್ಲದಿದ್ದಲ್ಲಿ ಅವರ ಕಾರ್ಯವನ್ನು ಗುರುತಿಸಿ, ಅವರಿಗೆ ಟಿಕೇಟ್ ನೀಡುವಂತಹ ಸಾಧ್ಯತೆ ತೀರಾ ಕಡಿಮೆ ಇತ್ತು. ಅದೂ ಅಲ್ಲದೆ ಈ ಮಹಿಳಾ ಸಂಸದರು ಕೇವಲ ರಾಜಕೀಯ ದಾಳಗಳಾಗಿ ಬಳಕೆಯಾಗಿದ್ದೇ ಹೆಚ್ಚು. ಅದೂ ಅಲ್ಲದೆ ಸಂಸತ್ತಿನಲ್ಲಿ ಅವರ ಹಾಜರಾತಿಯೂ ಕಡಿಮೆಯೇ. ಕೊಂಚ ಬದಲಾವಣೆ ಎಂಬಂತೆ, ಈ ಬಾರಿಯ ಬಹುತೇಕ ಮಹಿಳಾ ಸಂಸದರೆಲ್ಲಾ ಪದವೀಧರರು. ಅವರಲ್ಲಿ ಸ್ನಾತಕ್ಕೋತ್ತರ ಪದವಿ ಗಳಿಸಿದ ಸಂಸದರೂ ಕೆಲವರಿದ್ದಾರೆ. ಈಗ ಆಯ್ಕೆಯಾಗಿರುವ ಬಹುತೇಕ ಪುರುಷ ಸಂಸದರಿಗೆ ಹೋಲಿಸಿದರೆ, ಮಹಿಳಾ ಸಂಸದರ ಕಡೆಯಿಂದ ಇದೊಂದು ಸಕಾರಾತ್ಮಕ ಬೆಳವಣಿಗೆಯೇ.

ಈ ಮಸೂದೆಯ ಪ್ರಥಮ ಹಂತವಾಗಿ ಮಹಿಳೆಯರಿಗೆ ಪಂಚಾಯಿತಿ ಮಟ್ಟದಲ್ಲಿ ಮೀಸಲಾತಿ ನೀಡಿರುವುದು ಗಮನಾರ್ಹ. ಈ ಕ್ರಮ ಉತ್ತಮ ಫಲಿತಾಂಶಗಳನ್ನೂ ನೀಡಿದೆ. ಆದರೆ ಲೋಕಸಭೆಯಲ್ಲಿ ಈ ಮಸೂದೆ ಎಂದು ಅಂಗೀಕಾರವಾದೀತು ಎಂಬುದಕ್ಕಿಂತ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ತೋರಿಸಲಿವೆಯೇ ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ. ಪ್ರತಿ ರಾಜಕೀಯ ಪಕ್ಷಗಳೂ ಒಂದಷ್ಟು ಸೀಟುಗಳನ್ನು ಮಹಿಳೆಯರಿಗಾಗಿ ಮೀಸಲಿಡುವುದು ಉತ್ತಮ. ಬ್ರಿಟನ್‌ನ ಲೇಬರ್ ಪಕ್ಷವು ತನ್ನ ಗೆಲ್ಲಬಲ್ಲ ಸ್ಥಾನಗಳ ಅರ್ಧದಷ್ಟನ್ನು ಮಹಿಳೆಯರಿಗಾಗಿ ಮೀಸಲಿಡಲು ಸ್ವಯಂ ನಿರ್ಧಾರ ಕೈಗೊಂಡಿದೆ. ಭಾರತದಲ್ಲಿ ಈ ರೀತಿಯ ದಿಟ್ಟ ನಿರ್ಧಾರ ತೆಗೆದುಕೊಂಡು ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಕಾರಾತ್ಮಕ ಪ್ರಯತ್ನಗಳು ನಡೆಯಬೇಕಿವೆ.

ಈ ಬಾರಿ, ನಮ್ಮ ಒಟ್ಟಾರೆ ರಾಜಕೀಯ ಪಕ್ಷಗಳಲ್ಲಿ ಮಹಿಳಾ ಪ್ರಾತಿನಿಧ್ಯವಿದ್ದದ್ದು ಸರಾಸರಿ ಶೇ.6.88ರಷ್ಟು ಮಾತ್ರ. ಅಂದರೆ ಸಿಪಿಐ ಅಭ್ಯರ್ಥಿಗಳಲ್ಲಿ ಶೇ.7ರಷ್ಟು ಮಾತ್ರ ಮಹಿಳೆಯರಿದ್ದಾರೆ. ಅದೇ ರೀತಿ ಕಾಂಗ್ರೆಸ್, ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕ್ರಮವಾಗಿ ಶೇ.10, ಶೇ.11 ಹಾಗೂ ಶೇ.6ರಷ್ಟಿದ್ದವು. ಈ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುವ ಬದಲು ಹಾಗೂ ಈ ನಿಟ್ಟಿನಲ್ಲಿ ಮತ್ತದೇ ಹಳೆಯ ರಾಜಕೀಯ ಲೆಕ್ಕಾಚಾರ ಹಾಕುವ ಬದಲು, ರಾಜಕಾರಣಿಗಳು ಈ ಮಸೂದೆಯ ಹಿಂದಿನ ಚಿಂತನೆಗೆ ಬೆಂಬಲ ನೀಡಬೇಕಿದೆ. ಮೊದಲು ತಮ್ಮ ಪಕ್ಷದೊಳಗೇ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ದೊರಕುವಂತೆ ಮಾಡಿದರೆ, ತದನಂತರ ಮಹಿಳಾ ಮೀಸಲಾತಿಗಾಗಿ ಒಂದು ಪ್ರತ್ಯೇಕ ಕಾನೂನು ಜಾರಿಗೊಳಿಸುವ ಅಗತ್ಯ ಇಲ್ಲ.

ಐಐಪಿಎಂ
'ಥಿಂಕ್ ಟ್ಯಾಂಕ್'

ಸ್ರೇ ಅಗರ್‌ವಾಲ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .