User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಹೆಜ್ಜೆಗಳು
 

ದೀರ್ಘಾಯುಷ್ಯದ 'ಚೀನಾ ಮಾರ್ಗ'

 ದೀರ್ಘಾಯುಷ್ಯ ಗಳಿಸುವ ಕುರಿತು ನೂರಾರು ಪುಸ್ತಕಗಳನ್ನು ಓದಿದ ಮೇಲೂ ನಿಮ್ಮಲ್ಲಿ ಅನುಮಾನ ಉಳಿದಿದ್ದರೆ ಈ ಸಂಗತಿ ಓದಿ. ಇದನ್ನು ಓದಿ ಮುಗಿಸುವ ಹೊತ್ತಿಗೆ ದೀರ್ಘಾಯುಷ್ಯದ ಮೇಲಿನ ನಿಮ್ಮ ಕಲ್ಪನೆ ಬದಲಾಗಲೂಬಹುದು...
Prashantho Banerjee
ಪ್ರಶಾಂತೊ ಬ್ಯಾನರ್ಜಿ
ನುಡಿಚಿತ್ರ ಸಂಪಾದಕ
ದ ಸಂಡೆ ಇಂಡಿಯನ್

ಚೀನಾದ ಸರ್ಕಾರಿ ಅಧಿಕಾರಿ, 45 ವರ್ಷದ ಲಿಯಾಂಗ್ ತುಂಗ್ ತ್ಸಾಯ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ. ಆತನ ತಪಾಸಣೆ ನಡೆಸಿದ ವೈದ್ಯರು ಈತ ಬದುಕುವುದು ಕೇವಲ ಎರಡು ತಿಂಗಳು ಎಂದು ಕೈಚೆಲ್ಲಿದ್ದರು. ಲಿಯಾಂಗ್ ತುಂಗ್‌ನ ದೇಹ ಮಿತಿಮೀರಿದ ಲೈಂಗಿಕತೆ, ಕುಡಿತ ಹಾಗೂ ಮಾದಕ ವಸ್ತು ಸೇವನೆಯಿಂದ ಹರಿದ ಬಾಳೆ ಎಲೆಯಂತಾಗಿತ್ತು. ನ್ಯುಮೋನಿಯಾ ಹಾಗೂ ಗುಪ್ತ ಲೈಂಗಿಕ ರೋಗಗಳು ಲಿಯಾಂಗ್‌ನ ಆಯಸ್ಸನ್ನು ಇಂಚಿಂಚಾಗಿ ತಿನ್ನುತ್ತಿದ್ದವು. ಅತಿಯಾದ ಕುಡಿತದಿಂದ ಕರುಳು ಕುಲಗೆಟ್ಟಿತ್ತು. ಹೀಗೆ ಸರ್ವರೋಗಗಳಿಗೂ ತನ್ನ ಪುಟ್ಟ ದೇಹದಲ್ಲಿ ಆಶ್ರಯ ನೀಡಿದ್ದ ಟಿ.ಟಿ. ಲಿಯಾಂಗ್ ಅಂತೂ ಚೇತರಿಸಿಕೊಂಡ. ಆತ ಕೊನೆಯುಸಿರು ಎಳೆದದ್ದು 2002ರ ಆಗಸ್ಟ್ 17ರಂದು, ತನ್ನ 102ನೇ ವಯಸ್ಸಿನಲ್ಲಿ. ಅಂದರೆ ವೈದ್ಯರು ತನ್ನ ಸಾವಿನ ದಿನ ನಿಗದಿಪಡಿಸಿದ ಬರೊಬ್ಬರಿ 57 ವರ್ಷಗಳ ನಂತರ! ಲಿಯಾಂಗ್‌ನ ಈ ಪವಾಡಸದೃಶ ಚೇತರಿಕೆಯ ಹಿಂದಿನ ರಹಸ್ಯವೇನು? ಉತ್ತರ: ಚೀನಾದ ಸಾಂಪ್ರದಾಯಿಕ ಸಾಹಸಕಲೆ; 'ಥಾಯ್ ಚೀ ಶುನ್'. ತನ್ನ ಜೀವನಶೈಲಿಯೇ ತನ್ನ ಪಾಲಿಗೆ ಮೃತ್ಯುವಾಗಿದೆ; ಅದರ ಪರಿಹಾರಕ್ಕೆ ತಾನು ಮೊರೆ ಹೋಗಿರುವ ಇಂಗ್ಲಿಷ್ ವೈದ್ಯಕೀಯ ಪದ್ಧತಿಯೂ ತನ್ನ ಸಾವನ್ನು ಹತ್ತಿರವಾಗಿಸುತ್ತಿದೆ ಎಂಬ ಅರಿವುಂಟಾದದ್ದೇ ತಡ ಲಿಯಾಂಗ್ ಚೀನಾದ ಸಾಂಪ್ರದಾಯಿಕ 'ಥಾಯ್ ಚೀ'ಯನ್ನು ಗಂಭೀರವಾಗಿ ಅಭ್ಯಾಸ ಮಾಡತೊಡಗಿದ. ಕೇವಲ ಮೂರು ವರ್ಷಗಳಲ್ಲಿ ಲಿಯಾಂಗ್‌ನ ರೋಗಗಳೆಲ್ಲಾ ಮಾಯವಾದವು. ತನ್ನನ್ನು ಸಾವಿನ ಪಾಶದಿಂದ ರಕ್ಷಿಸಿದ 'ಥಾಯ್ ಚೀ'ಗೆ ತನ್ನೆಲ್ಲಾ ಬದುಕನ್ನು ಮುಡಿಪಾಗಿಟ್ಟ ಲಿಯಾಂಗ್ ಇತರರಿಗೂ ಆ ಕಲೆ ಕಲಿಸುತ್ತಾ, ಪ್ರಚುರಪಡಿಸುತ್ತಾ ತನ್ನುಳಿದ ಬದುಕನ್ನು ಕಳೆದ. ತನ್ನ 80-90ರ ಇಳಿ ವಯಸ್ಸಿನಲ್ಲೂ ಸದೃಢ ಆರೋಗ್ಯ, ಕ್ರಿಯಾಶೀಲತೆಗೆ ಜೀವಂತ ಉದಾಹರಣೆಯಾಗಿದ್ದ.

ಲಿಯಾಂಗ್‌ನಂತಹ ಉದಾಹರಣೆಗಳು ಚೀನಾದಲ್ಲಿ ಇನ್ನೂ ಸಾಕಷ್ಟು ದೊರೆಯುತ್ತವೆ. ಅವನು ತನ್ನ ಮಧ್ಯವಯಸ್ಸಿನಲ್ಲಿ ಅನುಭವಿಸಿದ ಸಂಕಟವಾಗಲೀ, ನಂತರ ಆತ ಸಾಧಿಸಿದ ದೀರ್ಘಾಯುಷ್ಯವಾಗಲೀ ಯಾವುದೂ ಅಲ್ಲಿ ಅಪರೂಪದ್ದಲ್ಲ. ಜಾಗತೀಕರಣದ ಈ ನವಯುಗದಲ್ಲಿ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತಿದೆ. ಜಗತ್ತು ಅವಕಾಶಗಳ ಆಗರವಾಗುತ್ತಿದೆ. ಲಾಭ ದೊರೆಯುತ್ತದೆ ಎಂದಾದರೆ ತಮ್ಮದೇ ಗೋರಿ ತೋಡಿಕೊಳ್ಳಲೂ ನಾವು ಸಿದ್ಧ. ಆದರೆ ಗಾಳಿಕುದುರೆ ಏರಿದ ನಮ್ಮಂಥವರ ಬದುಕಿಗೂ ಟಾಲ್‌ಸ್ಟಾಯ್ ಅವರ 'ಹೌ ಮಚ್ ಲ್ಯಾಂಡ್ ಡಸ್ ಎ ಮ್ಯಾನ್ ನೀಡ್' ಕಥೆಯ ನಾಯಕನ ಬದುಕಿಗೂ ಯಾವ ವ್ಯತ್ಯಾಸವೂ ಇಲ್ಲ. ನಾವೇ ಸೃಷ್ಟಿಸಿದ ಈ ಹೊಸ ಪಾಪಕೂಪದಲ್ಲಿ 30 ವರ್ಷ ವಯೋಮಾನವೆಂದರೆ ಅದು 60 ವರ್ಷಕ್ಕೆ ಸಮ ಎಂಬಂಥ ಸ್ಥಿತಿ ಇದೆ. ಈ ಎಲ್ಲಾ ಅಪಸವ್ಯಗಳ ನಡುವೆಯೂ ಆರೋಗ್ಯ ಹಾಗೂ ದೈಹಿಕ ಕ್ಷಮತೆಯ ಮೇಲೆ ಹೊಸ ಬೆಳಕು ಚೆಲ್ಲುವ ಪ್ರಾಚೀನ ದೀಪ್ತಿಗಳು ಅಲ್ಲಲ್ಲಿ ಗುಪ್ತವಾಗಿ ಉರಿಯುತ್ತಲೇ ಇವೆ. ಅವುಗಳ ಜಾಡಿನಲ್ಲಿ ಹೆಜ್ಜೆ ಹಾಕಿದವರು ಸುದೀರ್ಘ, ಆರೋಗ್ಯವಂತ ಹಾಗೂ ಸಮತೋಲಿತ ಬದುಕನ್ನು ತಮ್ಮದಾಗಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಚೀನಾದ ಮಣ್ಣಿನಲ್ಲಿ ಸಮೃದ್ಧವಾಗಿ ಬೆಳೆದ 'ತಾವೋ ವಾದ'ದ ಇನ್ನೊಂದು ಆವೃತ್ತಿಯೇ 'ಥಾಯ್ ಚೀ'. ತಾವೋ ವಾದಕ್ಕೆ ಮನುಷ್ಯನ ದೇಹದಲ್ಲಿ ಸುಪ್ತವಾಗಿ ಹರಿಯುವ ಶಕ್ತಿಯ ಕುರಿತು ಅಪರಿಮಿತ ನಂಬಿಕೆ. ಎಲ್ಲಿಯವರೆಗೆ ಮಾನವನ ಆಂತರಿಕ ಶಕ್ತಿ ಯಾವುದೇ ಅಡೆ ತಡೆ ಇಲ್ಲದೇ ಹರಿಯುತ್ತದೋ ಅಲ್ಲಿಯವರೆಗೆ ಮಾನವನ ದೈಹಿಕ, ಮಾನಸಿಕ ಆರೋಗ್ಯ ಸದೃಢವಾಗಿರುತ್ತದೆ ಎಂಬ ನಂಬಿಕೆಯ ನೆಲೆಯ ಮೇಲೆ ತಾವೋ ವಾದ ರೂಪುಗೊಂಡಿದೆ.

ತನ್ನ 80ನೇ ಇಳಿವಯಸ್ಸಿನಲ್ಲಿ "ನಾನು ನಿಮಗಿಂತ ಹೆಚ್ಚು ಊಟ ಮಾಡಬಲ್ಲೆ, ನಿಮಗಿಂತ ಹೆಚ್ಚು ಸಶಕ್ತವಾಗಿ ಲೈಂಗಿಕ ಕ್ರಿಯೆ ನಡೆಸಬಲ್ಲೆ. ಅಷ್ಟೇ ಏಕೆ ನಿಮಗಿಂತ ಚೆನ್ನಾಗಿ ಕಾದಾಡಬಲ್ಲೆ..." ಎಂದು ಹೆಮ್ಮೆಯಿಂದ ಘೋಷಿಸಿಕೊಳ್ಳಲು ಯಾರು ಇಚ್ಛಿಸುವುದಿಲ್ಲ? ಬ್ರೂಸ್ ಫ್ರ್ಯಾನ್ಸಿಸ್ ಅವರು ತಮ್ಮ ಗುರು ವಾಂಗ್ ಶು ಜಿನ್ 80ರ ವಯಸ್ಸಿನಲ್ಲಿ ಹೀಗೆ ಹೇಳುತ್ತಿದ್ದರು ಎಂದು 'ದ ಬಿಗ್ ಬುಕ್ ಆಫ್ ಥಾಯ್ ಚಿ' ಕೃತಿಯಲ್ಲಿ ನೆನಪಿಸಿಕೊಳ್ಳುತ್ತಾರೆ. ಮಾಸ್ಟರ್ ವಾಂಗ್ ತಮ್ಮೊಳಗೆ ಎಂದೆಂದೂ ಆರದ ಉತ್ಸಾಹದ ಬುಗ್ಗೆಗೆ ಥಾಯ್ ಚೀ ಕಾರಣ ಎನ್ನುತ್ತಿದ್ದರು. ದೀರ್ಘಾಯುಷ್ಯಕ್ಕೆ ನಮಗೆ ಸದ್ಯಕ್ಕೆ ದೊರೆಯುವ ಅಧಿಕೃತ ಉದಾಹರಣೆ ಎಂದರೆ, ಜೀನೆ ಕಾಮೆಂಟ್ ಎಂಬ ಫ್ರೆಂಚ್ ಮಹಿಳೆ. ಆಕೆ ತನ್ನ 122ನೇ ವಯಸ್ಸಿನಲ್ಲಿ ಅಂದರೆ 1997ರಲ್ಲಿ ಕೊನೆಯುಸಿರೆಳೆದಳು. ಆದರೆ ಚೀನಾ ಜನ ಹೇಳುವಂತೆ ಮಾಸ್ಟರ್ ಲಿ ಚಿಂಗ್ ಯೂನ್ (1677ರಲ್ಲಿ ಜನನ, 1933ರಲ್ಲಿ ಮರಣ) ಬದುಕಿದ್ದು ಒಟ್ಟು 256 ವರ್ಷ! ಕೊನೆಯವರೆಗೂ ಸದೃಢವಾಗಿ, ಆರೋಗ್ಯದಿಂದ ಬದುಕಿದ್ದ ಮಾಸ್ಟರ್ ಲೀಗೆ 14 ಜನ ಪತ್ನಿಯರಿದ್ದರಂತೆ. ಅವರ ದೀರ್ಘಾಯುಷ್ಯದ ಗುಟ್ಟು 'ಏಯ್ಟ್ ಬ್ರೊಕೇಡ್' ಎಂಬ ವ್ಯಾಯಾಮ ಪದ್ಧತಿ. 'ಥಾಯ್ ಚೀ' ಕಲೆಗೆ ಬುನಾದಿ ಹಾಕಿದ್ದೇ 'ಏಯ್ಟ್ ಬ್ರೊಕೇಡ್' ಎಂದು ಹೇಳಲಾಗುತ್ತದೆ. ಆದರೆ ಮಾಸ್ಟರ್ ಲೀ ಚಿಂಗ್ ವಯಸ್ಸಿನ ಕುರಿತು ಸಾಕಷ್ಟು ಗೊಂದಲಗಳಿವೆ. ಆತ 256 ವರ್ಷ ಬದುಕಿದ್ದ ಎಂಬುದಕ್ಕೆ ಸರಿಯಾದ ದಾಖಲೆಗಳಿಲ್ಲ. ಹಾಗೆಂದು, ದೀರ್ಘಾಯುಷ್ಯದಲ್ಲಿ 'ಥಾಯ್ ಚೀ' ಪಾತ್ರವನ್ನು ತಳ್ಳಿ ಹಾಕುವಂತಿಲ್ಲ. ಮಾಸ್ಟರ್ ಲೀ ಅವರ 98 ವರ್ಷದ ಶಿಷ್ಯ ಜನರಲ್ ಯಾಂಗ್ ಶೆನ್ ತಮ್ಮ ಪ್ರತಿಯೊಂದು ಹುಟ್ಟು ಹಬ್ಬವನ್ನೂ ಗುಡ್ಡಗಾಡು ಪ್ರದೇಶದಲ್ಲಿ ಮ್ಯಾರಥಾನ್ ಓಡುವ ಮೂಲಕ ಆಚರಿಸುತ್ತಾರೆ ಎಂದರೆ ಥಾಯ್ ಚೀ ಪ್ರಭಾವ ಎಂಥದ್ದಿರಬೇಕು ನೀವೇ ಯೋಚಿಸಿ!

ಯೋಗದಿಂದಾಗುವ ಲಾಭಗಳ ಕುರಿತು ಈ ಮುನ್ನ ಇದೇ ಅಂಕಣದಲ್ಲಿ ಚರ್ಚಿಸಿದ್ದೆ. 'ಥಾಯ್ ಚೀ' ಪದ್ಧತಿಗೂ 'ಯೋಗ'ಕ್ಕೂ ಸಾಕಷ್ಟು ಸಾಮ್ಯತೆ ಇದೆ. ಹಾಗೆ ನೋಡಿದರೆ, ಯೋಗ ಥಾಯ್ ಚೀ ಪದ್ಧತಿಗಿಂತಲೂ ಹೆಚ್ಚು ಪರಿಣಾಮಕಾರಿ. ಆದರೆ ಅಷ್ಟೇನೂ ದೈಹಿಕ ಶ್ರಮ ಬೇಡದ 'ಥಾಯ್ ಚೀ' ಯೋಗಕ್ಕಿಂತ ಸರಳ. ದೀರ್ಘಾಯುಷಿಗಳೂ, ಆರೋಗ್ಯವಂತರೂ ಆಗಿ ಬದುಕಬೇಕು ಎಂದು ಹಪಹಪಿಸುವವರಿಗೆ ತತ್ವಜ್ಞಾನಿಗಳು, ತಜ್ಞರು ಮೊದಲು 'ಥಾಯ್ ಚೀ'ಯನ್ನು ಸೂಚಿಸುತ್ತಾರೆ. ಆ ಆಸೆ ಯಾರಿಗೆ ತಾನೆ ಇರುವುದಿಲ್ಲ? ಅಲ್ಲವೇ?

ಐಐಪಿಎಂ
ಥಿಂಕ್ ಟ್ಯಾಂಕ್

ಹರಿವಿನ ಬದಿ

ನಕಲಿ ಗುರುಗಳಿದ್ದಾರೆ ಜಾಗ್ರತೆ!

ಹೀಲಿಂಗ್ ಮತ್ತು ಮಾರ್ಷಲ್ ಆರ್ಟ್ಸ್ (ಸಾಹಸ ಕಲೆ)ಗಳನ್ನು ಗುರುಗಳ ಮಾರ್ಗದರ್ಶನದಲ್ಲಿ ಕಲಿಯುವುದು ಒಳ್ಳೆಯದು. ಏಕೆಂದರೆ, ಅವು ಮನುಷ್ಯನ ಆರೋಗ್ಯ ಹಾಗೂ ಜೀವನಶೈಲಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹಲವಾರು ಜಟಿಲ ತಂತ್ರಗಳನ್ನು ಹೊಸದಾಗಿ ಕಲಿಯುತ್ತಿರುವವರು ಗುರುಗಳ ಮಾರ್ಗದರ್ಶನವಿಲ್ಲದೇ ಕಲಿಯಲು ಸಾಧ್ಯವಿಲ್ಲ.

ದುರದೃಷ್ಟವಶಾತ್, ಭಾರತ ಹಾಗೂ ಜಗತ್ತಿನ ಹಲವೆಡೆ ಕಲಿಸಿಕೊಡಲಾಗುತ್ತಿರುವ ಥಾಯ್ ಚೀ ಕಳಪೆ ಗುಣಮಟ್ಟದ್ದು. ಮಾರ್ಷಲ್ ಆರ್ಟ್‌ನ ಕಲಬೆರಕೆ. ಥಾಯ್ ಚೀಯಲ್ಲೂ ಹಲವು ಪ್ರಕಾರಗಳಿದ್ದು ಅವುಗಳನ್ನು ಯಂಗ್ ಕುಟುಂಬ ಶೈಲಿ, ವು ಕುಟುಂಬ ಶೈಲಿ ಹಾಗೂ ಚೆನ್ ಕುಟುಂಬ ಶೈಲಿ ಎಂದೆಲ್ಲಾ ಕರೆಯಲಾಗುಯತ್ತದೆ. ಆದರೆ ಬಹಳಷ್ಟು ಥಾಯ್ ಚೀ ಗುರುಗಳು ಅವುಗಳ ಬಗ್ಗೆ ಗಂಭೀರವಾದ ಅಧ್ಯಯನ ನಡೆಸದೇ ತೋರಿಕೆಯ ಥಾಯ್ ಚೀ ತಂತ್ರಗಳನ್ನು ಕಲಿಸುತ್ತಿದ್ದಾರೆ. ಇದರಿಂದ 'ಜಿನ್' ಎಂದು ಕರೆಯಲಾಗುವ ಅಂತಃಶಕ್ತಿ ಅದರ ವಿದ್ಯಾರ್ಥಿಗಳಲ್ಲಿ ಬೆಳೆಯಲು ಸಾಧ್ಯವೇ ಇಲ್ಲ. ಥಾಯ್ ಚೀ ಕಲಿಸುವ ಗುರುಗಳನ್ನು ಹುಡುಕುವ ಮೊದಲು 'ಥಾಯ್ ಚೀ' ಕುರಿತ ಪ್ರಾರಂಭಿಕ ಅಧ್ಯಯನ ಅತ್ಯವಶ್ಯಕ. ಥಾಯ್ ಚೀ ಹಾಗೂ ಅದು ಒದಗಿಸುತ್ತದೆ ಎನ್ನಲಾಗುವ ಅಂತಃಶಕ್ತಿ ಕುರಿತು ಅಸಂಬದ್ಧ ಬರಹಗಳೇ ಇಂದು ತುಂಬಿ ತುಳುಕುತ್ತಿದ್ದು, ಇದರಿಂದ ವಿದ್ಯಾರ್ಥಿ ಗೊಂದಲಕ್ಕೀಡಾಗುವ ಸಾಧ್ಯತೆಗಳಿವೆ. ಆದರೂ ಥಾಯ್ ಚೀ ಕುರಿತು ಕೆಲ ಉತ್ತಮ ಕೃತಿಗಳಿದ್ದು ಅವುಗಳಿಂದ ವಿದ್ಯಾರ್ಥಿಗಳು ಸಾಕಷ್ಟು ಸಹಾಯ ಪಡೆಯಬಹುದು. 'ಥಾಯ್ ಚೀ ಕ್ಲಾಸಿಕ್ಸ್' ಅಂಥ ಕೃತಿಗಳಲ್ಲಿ ಒಂದು. ಮೂವರು ಶ್ರೇಷ್ಠ ಗುರುಗಳು ರಚಿಸಿದ ಮೂರು 'ಕ್ಲಾಸಿಕ್'ಗಳನ್ನು ಈ ಕೃತಿ ಹೊಂದಿದೆ. ಥಾಯ್ ಚೀ ಕಲೆಗೆ ಬುನಾದಿ ಹಾಕಿದ ಗುರು ಮಾಸ್ಟರ್ ಚಾಂಗ್ ಸಾನ್-ಫೆಂಗ್ ಅವರ ಅಧ್ಯಾಯ ಕೂಡ ಇದರಲ್ಲಿದೆ.

'ಆರೋಗ್ಯಕ್ಕಾಗಿ ಹಾಗೂ ಆತ್ಮರಕ್ಷಣೆಗಾಗಿ ಥಾಯ್ ಚೀ', ಕೃತಿಯನ್ನು ರಚಿಸಿದವರು ಟಿ.ಟಿ. ಲಿಯಾಂಗ್. ಲೇಖಕರ ಸ್ವಾನುಭವದಿಂದ ಮೈತುಂಬಿಕೊಂಡಿರುವ ಈ ಕೃತಿ ಓದುಗರನ್ನು ಪ್ರಭಾವಿಸುವುದರಲ್ಲಿ ಎರಡು ಮಾತಿಲ್ಲ.

ಟಿಎಸ್‌ಐ

 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .