User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 

  ಅರಿಂದಮ್ ಚೌಧುರಿ ಪ್ರಸ್ತುತಪಡಿಸುವ

'ತಿನ್ನಿ, ತಿನ್ನಲು ಅವಕಾಶ ಕೊಡಿ' ಬಜೆಟ್


ಒಂದು ಕಡೆ ಭ್ರಷ್ಟಾಚಾರವನ್ನು ಸಲಹುತ್ತಲೇ ಮತ್ತೊಂದು ಕಡೆ ಮರುಗುವುದರಲ್ಲಿ ಅರ್ಥವಿಲ್ಲ. ಆ ಹಿನ್ನೆಲೆಯಲ್ಲಿ ಈ ಪರ್ಯಾಯ ಬಜೆಟ್ ಮೂಲಕ ದೇಶದ ಕಡುಬಡವರ ಕಷ್ಟ ದೂರ ಮಾಡುವ, ಹಾಗೇ ದೇಶದ ಅಭಿವೃದ್ಧಿ ದರವನ್ನು ಕೂಡ ಉತ್ತಮಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರ ಗಮನ ಸೆಳೆಯುತ್ತಿದ್ದೇವೆ.
 

 

ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ, ಜನ ಅದನ್ನು ಸತ್ಯವೆಂದು ಒಪ್ಪಿಕೊಳ್ಳುವುದು ಮಾತ್ರವಲ್ಲ, ಅದಕ್ಕೆ ತಕ್ಕಂತೆ ತಮ್ಮ ನಡವಳಿಕೆಯನ್ನೇ ಬದಲಿಸಿಕೊಂಡುಬಿಡುತ್ತಾರೆ ಎಂಬ ಮಾತಿದೆ. ಈ ಮಾತು ಜಗತ್ತಿನ ಯಾವ ಭಾಗದಲ್ಲಾದರೂ ನಿಜವಾಗಬಹುದು. ಆದರೆ, ಇದು ಭಾರತ; ಜಗತ್ತಿಗೆಲ್ಲಾ ಅನ್ವಯಿಸುವ ಲೆಕ್ಕವಿಲ್ಲದಷ್ಟು ಮಾತುಗಳನ್ನು ಸಾವಿರಾರು ವರ್ಷಗಳಿಂದ ಅಪ್ರಸ್ತುತಗೊಳಿಸುತ್ತ ಎಂತಹ ಪ್ರಖಾಂಡ ಪಂಡಿತರ ಲೆಕ್ಕಾಚಾರವನ್ನೂ ತಲೆಕೆಳಗು ಮಾಡುತ್ತಿರುವ ಖ್ಯಾತಿಯ ದೇಶ. ಹಾಗಾಗಿ ಇಲ್ಲಿ ಒಂದು ಸುಳ್ಳನ್ನು ನೂರಲ್ಲ, ಸಾವಿರ ಬಾರಿ ಹೇಳಿದರೂ ಜನ ಕ್ಯಾರೇ ಎನ್ನದೆ ಭುಜ ಕೊಡವಿಕೊಂಡು ಹೋಗುತ್ತಾರೆ.

ಸತತ ಒಂಬತ್ತನೇ ಬಾರಿಗೆ ಪರ್ಯಾಯ ಬಜೆಟ್ ಮಂಡನೆಯ ಸಂದರ್ಭದಲ್ಲಿ ಹಣಕಾಸಿನ ವಿಷಯ ಬಿಟ್ಟು ತತ್ವಜ್ಞಾನದ ಮಾತಾಡುತ್ತಿರುವುದಕ್ಕೆ ನಿಮಗೆ ಆಶ್ಚರ್ಯವಾಗಿರಬಹುದು. ಆದರೆ, 27 ವರ್ಷಗಳ ಬಳಿಕ ಮತ್ತೆ ಪೂರ್ಣಪ್ರಮಾಣದ ಬಜೆಟ್ ಮಂಡನೆ ಮಾಡಲಿರುವ ಪ್ರಣಬ್ ಮುಖರ್ಜಿ ಅವರಿಗೆ ಹೇಳಿದ ಮಾತುಗಳವು. 'ತಿನ್ನಿ, ತಿನ್ನಲು ಅವಕಾಶ ಕೊಡಿ ಬಜೆಟ್' ಎಂಬ ಶೀರ್ಷಿಕೆ ನೋಡುತ್ತಲೇ ಖಂಡಿತವಾಗಿಯೂ ನೀವು ಹುಬ್ಬೇರಿಸಿ ವಕ್ರ ನಗೆ ಬೀರಿರುತ್ತೀರಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ನಿಮ್ಮಲ್ಲಿ ಕೆಲವರಿಗೆ 2008ರ ಬಜೆಟ್ ಸಂದರ್ಭದಲ್ಲಿ ನಾನು ಬಜೆಟ್ ರದ್ದುಪಡಿಸಿ ಎಂದು ಬರೆದದ್ದು ನೆನಪಿರಬಹುದು. ಆದರೆ, ನನ್ನ ಮೇಲಿನ ತತ್ವಜ್ಞಾನದ ಮಾತು ಹಾಗೂ ಪರ್ಯಾಯ ಬಜೆಟ್ ಶೀರ್ಷಿಕೆಗಳಿಗೂ ಅರ್ಥ ಬರಬೇಕೆಂದರೆ ಭಾರತದಲ್ಲಿ ಆಡಳಿತ ನಿರ್ವಹಣೆ ಮತ್ತು ಆರ್ಥಿಕ ನೀತಿ ನಿರೂಪಣೆಗೆ ಸಂಬಂಧಿಸಿದ ಮೂಲಭೂತ ಸುಳ್ಳು ಮತ್ತು ಮೂಲ ಸತ್ಯದ ಅರಿವಾಗಬೇಕು.

ಮೂಲಭೂತ ಸುಳ್ಳು- ಸತ್ಯ

ಭಾರತದ ಮಟ್ಟಿಗೆ ನೂರಾರು ಬಾರಿ ಕೇಳಿರುವ ಮತ್ತು ಕೇಳುತ್ತಲೇ ಇರುವ ಮೂಲಭೂತ ಸುಳ್ಳು ಯಾವುದು ಹೇಳಿ? 1947ರಲ್ಲಿ ದೇಶ ಸ್ವಾತಂತ್ರ್ಯ ಗಳಿಸಿದಂದಿನಿಂದ ಈವರೆಗೆ ದೇಶದ ಆಡಳಿತಾರೂಢ ಸರ್ಕಾರಗಳು, ಸಚಿವರು ಇಲ್ಲಿನ ಬಡ ಜನತೆಯ ಉದ್ಧಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂಬುದಲ್ಲವೆ? ಈಗ ಕಾಂಗ್ರೆಸ್ ಮತ್ತು ಯುಪಿಎ ಜಪಿಸುತ್ತಿರುವ ಸರ್ವರನ್ನೂ ಒಳಗೊಳ್ಳುವ ಸಮಗ್ರ ಅಭಿವೃದ್ಧಿ ಎಂಬುದೇನೂ ಹೊಸ ಮಂತ್ರವಲ್ಲ. ಕಳೆದ 60 ವರ್ಷಗಳಿಂದ ದೇಶದ ಅಧಿಕಾರದ ಮೊಗಸಾಲೆಯಲ್ಲಿ, ರ್ಯಾಲಿ- ಆಂದೋಲನಗಳಲ್ಲಿ ಸದಾ ಪ್ರತಿಧ್ವನಿಸುತ್ತಲೇ ಬಂದಿರುವ ಹಳೇ ಬುಡಬುಡಿಕೆ ಅದು. ಹಾಗಾಗಿ, ಏನನ್ನು ಮಾಡದೆಯೂ ಬರಿ ಟೊಳ್ಳು ಭರವಸೆಗಳ ಮೇಲೆ ನಿರಂತರವಾಗಿ ಅಧಿಕಾರದ ಗದ್ದುಗೆಯನ್ನೇರಲು ನಮ್ಮ ಸರ್ಕಾರಗಳಿಗೆ ಆಧಾರವಾದದ್ದೇ ಈ ಮೂಲಭೂತ ಸುಳ್ಳು. 1947ರಲ್ಲಿ ಭಾರತ ಸುಮಾರು 250 ಮಿಲಿಯನ್ ಕಡುಬಡವರನ್ನು ಹೊಂದಿದ ದೇಶವಾಗಿತ್ತು. ಆದರೆ, ಜನ ಸಾಮಾನ್ಯರಿಗೆ ಸಮಾನ ಅವಕಾಶ ಮತ್ತು ಸಮಗ್ರ ಅಭಿವೃದ್ಧಿ ಜಪದ ಹೊರತಾಗಿಯೂ 60 ವರ್ಷಗಳ ಬಳಿಕ ಕಡುಬಡವರ ಸಂಖ್ಯೆ 350 ಮಿಲಿಯನ್ ದಾಟಿದೆ! ಹಾಗಾಗಿ ನೂರಾರು ಬಾರಿ ಪ್ರತಿಧ್ವನಿಯಂತೆ ಪುನರಾವರ್ತನೆಯಾಗುತ್ತಲೇ ಇರುವ ಮೂಲಭೂತ ಸುಳ್ಳೆಂದರೆ ಬಡವರ ಉದ್ಧಾರ ಮತ್ತು ಸಮಗ್ರ ಅಭಿವೃದ್ಧಿ!

ಇನ್ನು, ಈ ಮೂಲಭೂತ ಸುಳ್ಳನ್ನು ಮರೆಮಾಚಿ ಸಾವಿರಾರು ಬಾರಿ ಪುನರಾರ್ತನೆಯಾಗುತ್ತಲೇ ಇರುವ ಮೂಲಭೂತ ಸತ್ಯ ಯಾವುದು? ಬಡಜನತೆಗಾಗಿ ಸರ್ಕಾರಗಳು ವೆಚ್ಚ ಮಾಡುವ ಸಾವಿರಾರು ಕೋಟಿ ರೂ. ಹಣ ಅವರಿಗೆ ಸರಿಯಾಗಿ ತಲುಪುತ್ತಿಲ್ಲ ಎಂಬುದೇ ಆ ಸತ್ಯ. ಹೀಗೆ ಹೇಳುತ್ತಿದ್ದರೆ ನಿರಾಶಾವಾದಿಗಳಿಗೆ ಇದೊಂದು ರಗಳೆ ಎನಿಸಲೂಬಹುದು. ಆದರೆ, ಈ ಸಂಗತಿಗಳೇ ಪ್ರಸ್ತುತ ಭಾರತದ ಆಗು- ಹೋಗನ್ನು ಅರ್ಥಮಾಡಿಕೊಳ್ಳಲು ಸೂಕ್ತ ಮಾರ್ಗ. ಹಲವು ವರ್ಷಗಳ ಹಿಂದೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಒಮ್ಮೆ, ಬಡತನ ನಿರ್ಮೂಲನೆ ಮತ್ತು ಜನೋಪಕಾರಿ ಯೋಜನೆ- ಕಾರ್ಯಕ್ರಮಗಳಿಗೆ ಸರ್ಕಾರ ನೀಡುವ ಪ್ರತಿ ಒಂದು ರೂಪಾಯಿನಲ್ಲಿ 15 ಪೈಸೆಯಷ್ಟು ಕೂಡ ಅರ್ಹ ಫಲಾನುಭವಿಗಳನ್ನು ತಲುಪುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದರು. ಅಂದಿನಿಂದ ಈವರೆಗೆ ಭಾರತ ಸಾಕಷ್ಟು ಮುಂದೆ ಬಂದಿದೆ. ಹಾಗಾಗಿ, ಇವತ್ತು ರಾಜೀವ್ ಗಾಂಧಿಯವರ ಪುತ್ರ 'ಭಾವೀ ಪ್ರಧಾನಿ' ರಾಹುಲ್ ಗಾಂಧಿ, ಬಡವರಿಗಾಗಿ ಇರುವ ಸರ್ಕಾರದ ಕಾರ್ಯಕ್ರಮಗಳಿಗೆ ನೀಡುವ ರೂಪಾಯಿನಲ್ಲಿ ಐದು ಪೈಸೆ ಕೂಡ ಅರ್ಹರನ್ನು ತಲುಪುತ್ತಿಲ್ಲ ಎಂದು ವಿಷಾದ ವ್ತಕ್ತಪಡಿಸುತ್ತಾರೆ.

ಲಾಲ್ಗಢ ಪ್ರದೇಶವನ್ನು ಮಾವೋವಾದಿಗಳು ತಮ್ಮ ಹಿಡಿತಕ್ಕೆ ಪಡೆದುಕೊಂಡಿರುವುದು ಅಥವಾ ಒರಿಸ್ಸಾ, ಛತ್ತೀಸಗಢ, ಜಾರ್ಖಂಡ್, ಬಿಹಾರ, ಪಶ್ಚಿಮಬಂಗಾಳ ಮತ್ತು ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ಮಾವೋವಾದಿ ನಕ್ಸಲರು 'ಮುಕ್ತ ವಲಯ'ಗಳನ್ನು ನಿರ್ಮಿಸಿಕೊಂಡಿರುವುದನ್ನು ಗಮನಿಸಿದರೆ ಈ ಮೂಲಭೂತ ಸುಳ್ಳು ಮತ್ತು ಸತ್ಯದ ಶಕ್ತಿಯ ಅರಿವಾಗಬಹುದು.

2008ರ ಬಜೆಟ್ ಸಂದರ್ಭದಲ್ಲಿ ಬಜೆಟ್ ರದ್ದು ಮಾಡಿ ಎಂದು ಹೇಳಲೂ ಈ ಮೂಲಭೂತ ಸುಳ್ಳು ಮತ್ತು ಸತ್ಯದ ಹಿಂದಿನ ಇದೇ ಶಕ್ತಿಯೇ ಪ್ರೇರಣೆ. ಅದೇ ಕಾರಣಕ್ಕಾಗಿಯೇ ನಾನು ಈ ಬಾರಿ ತಮ್ಮ ವಸ್ತುನಿಷ್ಠ ಧೋರಣೆಗೆ ಹೆಸರಾಗಿರುವ ಪ್ರಣಬ್ ಮುಖರ್ಜಿಯವರಿಗೆ 'ತಿನ್ನಿ, ತಿನ್ನಲು ಅವಕಾಶ ಕೊಡಿ ಬಜೆಟ್' ಮಂಡನೆಗೆ ಮನವಿ ನೀಡುತ್ತಿದ್ದೇನೆ. ಹಾಗೇ, ವಾಸ್ತವಿಕವಾದ ಪ್ರಸ್ತಾವನೆ ಮತ್ತು ಪರಿಹಾರ ಕ್ರಮಗಳನ್ನು ನಿಮ್ಮ ಮುಂದಿಡುವ ಮುನ್ನ ಭಾರತದ ಆಡಳಿತದ ಕುರಿತ ಮತ್ತೊಂದು ಪ್ರಬಲ ಮತ್ತು ಅಷ್ಟೇ ಅಪಾಯಕಾರಿಯಾದ ಭ್ರಮೆಯನ್ನೂ ಕಿತ್ತೊಗೆಯುವುದು ಮುಖ್ಯ.

ಸರ್ವವ್ಯಾಪಿ ಭ್ರಷ್ಟಾಚಾರ

ಬಡವರಿಗಾಗಿ ವ್ಯಯಿಸುವ ಹಣ ಮತ್ತು ಸೌಕರ್ಯಗಳು ಅವರನ್ನು ತಲುಪುವಲ್ಲಿ ಏಕೆ ವಿಫಲವಾಗುತ್ತವೆ ಎಂದರೆ, ಎಲ್ಲಾ ವಿಶ್ಲೇಷಕರು, ಆರ್ಥಿಕ ತಜ್ಞರು, ರಾಜಕೀಯ ಪರಿಣತರು, ಪಂಡಿತರು ಮತ್ತು ಹೋರಾಟಗಾರರು ಸೇರಿದಂತೆ ಎಲ್ಲರೂ ಏಕಕಂಠದಿಂದ ಹೇಳುವ ಮಾತೆಂದರೆ ಭ್ರsಷ್ಟಾಚಾರವೇ ಎಲ್ಲಕ್ಕೂ ಮೂಲ ಕಾರಣ ಎನ್ನುವುದು. ಹಾಗೆ ನೋಡಿದರೆ ಈ ಒಮ್ಮತಾಭಿಪ್ರಾಯ ನಮ್ಮ ಸಮಾಜದಲ್ಲಿ ಕಳೆದ ಅರವತ್ತು ವರ್ಷಗಳಿಂದಲೂ ಒಡಕಿನ ದನಿಯಿಲ್ಲದೆ ಮುಂದುವರಿದುಕೊಂಡು ಬರುತ್ತಿದೆ. ಹಾಗಾದರೆ ಅಂತಹ ಅಭಿಪ್ರಾಯ ನಿಜವೇ ಆಗಿದ್ದರೆ, ಯಾವುದಾದರೂ ಪ್ರಬಲ ಸುಧಾರಣೆ ಅಥವಾ ಕ್ರಾಂತಿಕಾರಕ ಕ್ರಮಗಳ ಮೂಲಕ ಅದನ್ನು ತೊಲಗಿಸಿದರೆ ಸಾಮಾಜಿಕ ನ್ಯಾಯ ಮತ್ತು ಸಮಗ್ರ ಅಭಿವೃದ್ಧಿ ಎಂಬುದು ನಿಜವಾಗಬೇಕಲ್ಲವೆ? ಈ ಮಾತಿನ ಬಗ್ಗೆ ಯಾವುದೇ ಪ್ರಜ್ಞಾವಂತ ಮನುಷ್ಯ ಭಿನ್ನಾಭಿಪ್ರಾಯ ಹೊಂದಿರಲು ಸಾಧ್ಯವೇ ಇಲ್ಲ. ಹಾಗೆಂದ ಮಾತ್ರಕ್ಕೆ ಭ್ರಷ್ಟಾಚಾರ ತೊಲಗಿಸಿ ಎಂದು ಹೋರಾಟಗಾರರಂತೆ ಭಿತ್ತಿಪತ್ರ ಹಿಡಿದು ಘೋಷಣೆ ಕೂಗುವುದಾಗಲೀ, ಅಥವಾ ಮಾವೋವಾದಿಗಳಂತೆ ಭ್ರಷ್ಟಾಚಾರದ ಕಾರಣವೊಡ್ಡಿ ರಾಷ್ಟ್ರದ ವಿರುದ್ಧ ಬಂಡಾಯದ ಬಾವುಟ ಹಾರಿಸುವುದಾಗಲೀ ಸಮಸ್ಯೆಗೆ ಪರಿಹಾರವಾಗಲಾರದು.

ಅಂದು ತಮ್ಮ ಸರ್ಕಾರ ಮತ್ತು ಪಕ್ಷದಲ್ಲಿನ ಭ್ರಷ್ಟಾಚಾರದ ಕುರಿತು ವಿದೇಶಿ ಪತ್ರಕರ್ತನೊಬ್ಬನ ಪ್ರಶ್ನೆಗೆ ಇಂದಿರಾಗಾಂಧಿ ನೀಡಿದ ಖ್ಯಾತ ಪ್ರತಿಕ್ರಿಯೆ ನೆನಪಾಗುತ್ತಿದೆ. ದಿಟ್ಟತನಕ್ಕೆ ಹೆಸರಾಗಿದ್ದ ಇಂದಿರಾ ಅಂದು, ಭ್ರಷ್ಟಾಚಾರ ಎಂಬುದು ಜಾಗತಿಕ ವಿದ್ಯಮಾನ, ಭಾರತಕ್ಕಾಗಲೀ, ತನ್ನ ಸರ್ಕಾರ, ಪಕ್ಷಕ್ಕಾಗಲೀ ಸೀಮಿತವಾದದ್ದಲ್ಲ ಎನ್ನುವ ಮೂಲಕ ಪತ್ರಕರ್ತರ ಪ್ರಶ್ನೆಯನ್ನು ತಳ್ಳಿಹಾಕಿದ್ದರು. ಆ ಉತ್ತರದಿಂದ ಇಂದಿರಾ ತೀರಾ ಸಿನಿಕರಂತೆ ನಿಮಗೆ ಕಾಣಬಹುದು. ಆದರೆ, ಅದೇ ವಾಸ್ತವ. 2008ರ ನವೆಂಬರ್ನಲ್ಲಿ ಬಾರಕ್ ಒಬಾಮ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದಾಗ ಅವರ ಬಗ್ಗೆ ಇದ್ದ ಭರವಸೆ ಮತ್ತು ಅಭಿಮಾನವೆಲ್ಲಾ ಕೆಲವೇ ದಿನಗಳಲ್ಲಿ ಮಣ್ಣುಪಾಲಾಯಿತು. ಅದಕ್ಕೆ ಕಾರಣ; ಅವರು ಕರಿಯ ಜನಾಂಗದವರು ಎಂಬುದಲ್ಲ, ಬದಲಾಗಿ ಅವರು ತೆರವುಗೊಳಿಸಿದ ಸೆನೆಟ್ ಸ್ಥಾನವನ್ನು 'ಹರಾಜು' ಹಾಕಿದರು ಎಂಬ ಕಾರಣಕ್ಕೆ! ಹೌದು, ಇಲಿನಿಯೋಸ್ ಗವರ್ನರ್ ರಾಬ್ ಬ್ಲಾಗೋವಿಚ್ ಅವರು ಸೆನೆಟ್ ಸ್ಥಾನದ ಆಕಾಂಕ್ಷಿಗಳಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದಾಗ ಅವರನ್ನು ಎಫ್ಬಿಐ ಸಾಕ್ಷ್ಯಾಧಾರ ಸಹಿತ ಬಂಧಿಸಿತು. ಹಾಗೇ ಬ್ರಿಟಿಷ್ ಸಂಸತ್ನಲ್ಲಿ ನಡೆದ ಲೆಕ್ಕಪತ್ರ ಹಗರಣದ ಬಗ್ಗೆ ಕೂಡ ನೀವು ಕೇಳಿರಬಹುದು. ಅಲ್ಲಿನ ಸಂಸತ್ ಸದಸ್ಯರು ತಮ್ಮ ವೈಯಕ್ತಿಕ ಮೋಜು- ಮೇಜವಾನಿಗೆ ಸರ್ಕಾರದ ಹಣ ಬಳಸಿ ದೊಡ್ಡ ಅವ್ಯವಹಾರ ನಡೆಸಿದ್ದರು. ಅದು ಯಾವ ಮಟ್ಟಿಗೆ ಎಂದರೆ, ಒಬ್ಬ ಸಂಸದನಂತೂ ತನ್ನ ಸಂಗಾತಿಗೆ ಲೈಂಗಿಕ ಸಾಮಗ್ರಿ ಕೊಳ್ಳಲು ಕೂಡ ಸಾರ್ವಜನಿಕರ ತೆರಿಗೆ ಹಣವನ್ನು ಬಳಸಿದ್ದು ತನಿಖೆ ವೇಳೆ ಬಹಿರಂಗವಾಗಿತ್ತು.

ಜಪಾನಿನ ಎಷ್ಟು ಮಂದಿ ಪ್ರಧಾನಿಗಳು ಬೃಹತ್ ಭ್ರಷ್ಟಾಚಾರದ ಹಗರಣಗಳಲ್ಲಿ ಶಾಮೀಲಾಗಿದ್ದರು ಎಂಬುದನ್ನು ದೇವರೇ ಬಲ್ಲ. ಮೊನ್ನೆ-ಮೊನ್ನೆ ಮೇನಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋ ಮೊ-ಹ್ಯೂನ್ ಆತ್ಮಹತ್ಯೆಗೆ ಶರಣಾದರು. ಇನ್ನು ಚೀನಾದಲ್ಲಂತೂ ಪ್ರತಿವರ್ಷ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರು ಎನ್ನಲಾಗುವ ಕೆಲವು ಪಕ್ಷಗಳ ಕಾರ್ಯಕರ್ತರು, ಪದಾಧಿಕಾರಿಗಳನ್ನು ಗಲ್ಲಿಗೇರಿಸುವ ಮೂಲಕ ತಮ್ಮ ಸಾಮ್ರಾಜ್ಯದಲ್ಲಿ ಭ್ರಷ್ಟರಿಗೆ ಜಾಗವಿಲ್ಲ ಎಂಬ ಸಂದೇಶ ರವಾನೆಯ ಪ್ರಯತ್ನಗಳು ಆಚರಣೆಯಂತೆ ನಡೆಯುತ್ತಲೇ ಇರುತ್ತವೆ.

ಹಾಗಾಗಿ, ಭಾರತವನ್ನು ಆಳುವವರು ತೀರಾ ಸರಿಪಡಿಸಲಾಗದಷ್ಟು ಭ್ರಷ್ಟರು, ಹಾಗಾಗಿ ಭ್ರಷ್ಟಾಚಾರದಲ್ಲಿ ಈ ದೇಶಕ್ಕೆ ವಿಶಿಷ್ಟ ಸ್ಥಾನ ಎಂಬ ಗ್ರಹಿಕೆಯನ್ನು ಬಿಟ್ಟುಬಿಡಿ. ಮೇಲಿನ ಕೆಲವೇ ಉದಾಹರಣೆಗಳನ್ನು ಗಮನಿಸಿದರೂ, ಜಗತ್ತಿನಾದ್ಯಂತ ರಾಜಕಾರಣಿಗಳು ಭ್ರಷ್ಟರೇ ಎಂಬುದು ಮನವರಿಕೆಯಾಗದೇ ಇರದು. ಹಾಗಾಗಿ 'ತಿನ್ನಿ, ತಿನ್ನಲು ಅವಕಾಶ ಕೊಡಿ' ಎಂಬುದು ನಿಜವಾಗಿಯೂ ನೂರಕ್ಕೆ ನೂರರಷ್ಟು ಜಾಗತಿಕ ವಿದ್ಯಮಾನ. ಆದಾಗ್ಯೂ ಜಪಾನ್, ಅಮೆರಿಕ ಮತ್ತು ಬ್ರಿಟನ್ನಂತಹ ಹಲವು ದೇಶಗಳಲ್ಲಿ ಎಷ್ಟೋ ದಶಕಗಳ ಹಿಂದೆಯೇ ಬಡತನವನ್ನು ನಿರ್ಮೂಲನೆ ಮಾಡಲಾಗಿದೆ. ಹಾಗೇ 'ಈವರೆಗೆ' ತೃತೀಯ ಜಗತ್ತಿನ ರಾಷ್ಟ್ರಗಳೆನಿಸಿಕೊಂಡಿದ್ದ ದಕ್ಷಿಣ ಕೊರಿಯಾ ಹಾಗೂ ಚೀನಾದಲ್ಲಿ ಭ್ರಷ್ಟಾಚಾರ ಮತ್ತು ಬಂಡವಾಳಶಾಹಿ ಮೇಲುಗೈ ಸಾಧಿಸಿರುವುದೇನೋ ನಿಜ. ಆದರೆ ಈ ರಾಷ್ಟ್ರಗಳಲ್ಲಿ ಕೂಡ ನೂರಾರು ಮಿಲಿಯನ್ ಬಡಜನತೆಗೆ ಮೂಲಭೂತ ಸೌಕರ್ಯಗಳಾದ ಸಮಾನ ಶಿಕ್ಷಣ, ಆರೋಗ್ಯ ಸೇವೆ, ಜೀವನ ಭದ್ರತೆ ಕಲ್ಪಿಸಿಕೊಡುವಲ್ಲಿ ಅಲ್ಲಿನ ನಾಯಕರು ಪವಾಡಸದೃಶ ರೀತಿಯಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಷಯದಲ್ಲಿ ಭಾರತದ ಪಾಲಿನ ದುರಂತವೆಂದರೆ ಅದು ಅಮೆರಿಕ ಅಥವಾ ಜಪಾನ್ಗಳಿಗಿಂತ ಹಿಂದೆಬಿದ್ದಿದೆ ಎಂಬುದಲ್ಲ, ಬದಲಾಗಿ ಮಾನವಾಭಿವೃದ್ಧಿ ಸೂಚ್ಯಂಕದ ವಿಷಯದಲ್ಲಿ ಚೀನಾ ಮತ್ತು ದಕ್ಷಿಣ ಕೊರಿಯಾಗಳಿಂತ ತೀರಾ ಗಾವುದ- ಗಾವುದ ಹಿಂದುಳಿದಿದೆ ಎಂಬುದು!(ಕೋಷ್ಟಕ ನೋಡಿ)

ಚೀನಾ ಮತ್ತು ಪಶ್ಚಿಮ ಬಂಗಾಳದ ಕೆಂಪು

ಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿ ಭ್ರಷ್ಟ ನಾಯಕರು ತಮ್ಮ ಮಿತಿಗಳ ನಡುವೆಯೂ ಬಡವರಿಗೆ ಆರ್ಥಿಕ ಮತ್ತು ಜೀವನ ಭದ್ರತೆ ಒದಗಿಸುವಲ್ಲಿ ಯಶಸ್ವಿಯಾಗಿದ್ದರೆ, ಅಲ್ಲಿನದೇ ಘೋಷಣೆ- ವಾಗ್ಝರಿಯನ್ನು ಯಥಾವತ್ತು ಅನುಕರಿಸುವ ಭಾರತದ ಕೆಲವು ಭಾಗಗಳಲ್ಲಿ ಆದದ್ದು ಏನು? ಅದನ್ನು ತಿಳಿಯಲು ನೀವು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದರೆ ಸಾಕು, ಅದು ಏಕೆಂದು ತಿಳಿದುಬಿಡುತ್ತದೆ. ಚೀನಾದಂತೆ ಪಶ್ಚಿಮ ಬಂಗಾಳದಲ್ಲೂ ಎಷ್ಟೋ ದಶಕಗಳಿಂದ ಮಾರ್ಕ್ಸ್ವಾದಿಗಳು ಅಧಿಕಾರದಲ್ಲಿದ್ದಾರೆ. ಎರಡೂ ಕಡೆ ಸಮಾನ ಸಮಾಜದ ಆಶಯ ಮತ್ತು ದರ್ಪದ ಸಾಮ್ರಾಜ್ಯಶಾಹಿಯ ವಿರುದ್ಧ ಆಕ್ರೋಶಗಳೇ ಸಾರ್ವಜನಿಕ ಬದುಕಿನ ಹೆಗ್ಗಳಿಕೆ. ಎರಡೂ ಬದಿಯಲ್ಲಿ ತಮ್ಮ ವಿರುದ್ಧ ಪ್ರತಿಭಟನೆ- ಪ್ರತಿರೋಧಗಳನ್ನು ಬಲಪ್ರಯೋಗದ ಮೂಲಕ ಬಗ್ಗುಬಡಿಯುವಲ್ಲಿ ಕೂಡ ಕೇಡರ್ಗಳು ಹಿಂಜರಿದಿಲ್ಲ. ಅದರೆ, ಬಡವರ- ಜನ ಸಾಮಾನ್ಯರ ಬದುಕಿನ ಸ್ಥಿತಿಗತಿಯ ವಿಷಯಕ್ಕೆ ಬಂದರೆ ಮಾತ್ರ ಹೀಗೆ ತಮ್ಮನ್ನು ಪಶ್ಚಿಮ ಬಂಗಾಳದ ತಮ್ಮ ಕಾಮ್ರೇಡ್ಗಳಿಗೆ ಹೋಲಿಸುವುದನ್ನು ಸ್ವತಃ ಚೀನಾ ಕಾಮ್ರೇಡ್ಗಳೂ ವಿರೋಧಿಸುತ್ತಾರೆ. ಅದಕ್ಕಿಂತ ವಿಚಿತ್ರ ಸಂಗತಿ ಎಂದರೆ; ಭಾರತದಲ್ಲಿ 1947ರಿಂದ ಮುಕ್ತ ಮತ್ತು ತೋರಿಕೆಗಾದರೂ ನಿರ್ಭೀತಿಯ ಪತ್ರಿಕೋದ್ಯಮ ಎಂಬುದು ಚಾಲ್ತಿಯಲ್ಲಿದೆ. ಆದರೆ, ಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿ ತೀರಾ ಇತ್ತೀಚಿನ ವರೆಗೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಪ್ರತಿಯೊಂದನ್ನೂ ಸೆನ್ಸಾರ್ಗೆ ಒಳಪಡಿಸಲಾಗುತ್ತಿತ್ತು.

ಆದರೆ, ನನಗೆ ವೈಯಕ್ತಿಕವಾಗಿ ಅನ್ನಿಸುವುದೆಂದರೆ ಭಾರತವನ್ನು ಆಳುವವರು, ಆಳಿಸಿಕೊಳ್ಳುವವರು ಮತ್ತು ರಾಜಕೀಯ ಪಂಡಿತರು ಬಾಯಿ ಮಾತಿನ ಮಾತುಗಾರಿಕೆ, ಕಪಟತನ ಮತ್ತು ಇಬ್ಬಗೆಯ ನೀತಿಗಳಿಗೆ ಒಗ್ಗಿಹೋಗಿದ್ದರೆ, ದಕ್ಷಿಣ ಕೊರಿಯಾ ಮತ್ತು ಚೀನಾದಲ್ಲಿ ಭಾರೀ ಪ್ರಮಾಣದ ವಿದೇಶೀ ಬಂಡವಾಳಕ್ಕೆ ಅವಕಾಶ ಕೊಡುವ ಮೂಲಕ ಅಲ್ಲಿನ ಅಧಿಕಾರದ ಚುಕ್ಕಾಣಿ ಹಿಡಿದವರು ತಾವೂ ಹಣ ಮಾಡಿಕೊಂಡರು, ಲಕ್ಷಾಂತರ ಜನ ಬಡತನದಿಂದ ಮೇಲೆ ಬರಲೂ ನೆರವಾದರು. ಅದನ್ನು ನೋಡಿಯೇ ನನಗೆ 'ತಿನ್ನಿ, ತಿನ್ನಲು ಅವಕಾಶ ಕೊಡಿ' ಎಂಬ ಯೋಚನೆ ಬಂದದ್ದು. ಈಗ ಈ ಬಗ್ಗೆಯೇ ಯೋಚಿಸಿ; 'ಕಿತ್ತಾಡಿ, ಮತ್ತೆ ಕೈಜೋಡಿಸಿ, ತಿನ್ನಿ, ತಿನ್ನಲು ಅವಕಾಶ ಕೊಡಿ' ಎಂಬುದು ನಿಜವಾಗಿಯೂ ಭಾರತದಲ್ಲಿ ನಿತ್ಯ ನಡೆಯುತ್ತಿರುವುದೇ ಅಲ್ಲವೆ? ಹಾಗಾಗಿ ಇದು ಅಪ್ಪಟ ಭಾರತೀಯ ಮಾದರಿ! ಆರ್ಥಿಕ ಅಭಿವೃದ್ಧಿಯ ಲಾಭ ಬಡ ಜನತೆಗೆ ತಲುಪಬೇಕಾದರೆ ಭ್ರಷ್ಟಾಚಾರ ಎಂಬುದು ತೊಲಗಬೇಕು ಎಂಬ ನಾಗರಿಕರು ಹಾಗೂ ಹೋರಾಟಗಾರರ ಮಾತನ್ನು ನಾನು ಖಂಡಿತ ಒಪ್ಪುತ್ತೇನೆ. ಆದರೆ, ಜನ ಮೂಢನಂಬಿಕೆ ಅನುಸರಿಸಬಾರದು, ಗೃಹಿಣಿಯರು ಹಾದಿ ತಪ್ಪಬಾರದು ಎಂಬಂತಹ ಹೇಳಿಕೆಗಳಂತೆಯೇ ಭ್ರಷ್ಟಾಚಾರ ಎಂಬುದು ಇರಲೇಬಾರದು ಎಂಬ ಹೇಳಿಕೆ ಕೂಡ ಕಾಣುತ್ತದೆ. ಆದರೆ, ಕೆಲವು ಜನ ಮೂಢನಂಬಿಕೆಗಳನ್ನೇ ನಂಬುತ್ತಾರೆ, ಬಹಳಷ್ಟು ಗೃಹಿಣಿಯರು ವ್ಯಭಿಚಾರದ ಪ್ರಲೋಭನೆಯನ್ನು ಹತ್ತಿಕ್ಕುವುದು ಸಾಧ್ಯವಾಗುವುದಿಲ್ಲ, ಹಾಗೇ ಬಹುತೇಕ ರಾಜಕಾರಣಿಗಳು ಭ್ರಷ್ಟರಾಗಿಯೇ ಉಳಿಯುತ್ತಾರೆ! ಈ ಕಟುವಾಸ್ತವವನ್ನು ನಾವು ನಮ್ಮ ನೋವಿನ ನಡುವೆಯೂ ಅರ್ಥಮಾಡಿಕೊಂಡರೆ 'ತಿನ್ನಿ, ತಿನ್ನಲು ಅವಕಾಶ ಕೊಡಿ ಬಜೆಟ್' ಅನುಷ್ಠಾನಕ್ಕೆ ತರಲು ಪ್ರಣಬ್ ಮುಖರ್ಜಿ ಯಾವೆಲ್ಲಾ ವಾಸ್ತವಿಕ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಯೋಚಿಸಬಹುದು. ಉದ್ದನೆಯ ವಿವರ, ಕೋಷ್ಟಕ ಮತ್ತು ಅಂಕಿ-ಅಂಶಗಳನ್ನು ನೀಡುತ್ತಾ ನಿಮ್ಮ ಮತ್ತು ಪ್ರಣಬ್ ಅವರ ಸಮಯ ವ್ಯರ್ಥಮಾಡಲಾರೆ. ನಾವು ಒಂದು ಸಮಗ್ರ ಚಿತ್ರಣವನ್ನು ಗ್ರಹಿಸುವುದು ಸಾಧ್ಯವಾದರೆ ಉಳಿದ ಅಂಕಿ- ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಹಾಗಾಗಿ, ಈ ತಿನ್ನಿ ಮತ್ತು ತಿನ್ನಲು ಅವಕಾಶ ಕೊಡಿ ಬಜೆಟ್ನಲ್ಲಿ ಪ್ರಣಬ್ ಮುಖರ್ಜಿ ಅವರು ಹೇಗೆ ಮತ್ತು ಎಲ್ಲಿ ಹಣವನ್ನು ವ್ಯಯ ಮಾಡಬಹುದು ಮತ್ತು ಸಂಪನ್ಮೂಲ ಕ್ರೋಡೀಕರಣ ಹೇಗೆ ಎಂಬ ಬಗ್ಗೆ ಕೆಲವು ಅಂಶಗಳನ್ನು ಪಟ್ಟಿ ಮಾಡುತ್ತೇನೆ.

1. ಬಡವರ ಜನಗಣತಿ, ರಾಷ್ಟ್ರೀಯ ಮಾಹಿತಿಕೋಶ ಮತ್ತು ಬಯೋಮೆಟ್ರಿಕ್ ಕಾರ್ಡ್

ಇದೀಗ 2011ರ ಜನಗಣತಿಗೆ ಹೇಗೂ ಸರ್ಕಾರ ತಯಾರಿ ನಡೆಸಿದೆ. ಪ್ರಣಬ್ ಮುಖರ್ಜಿಯವರು ಈ ಕಾರ್ಯಕ್ಕೆ 2 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿ ಭಾರತೀಯ ಜನಗಣತಿ ರಿಜಿಸ್ಟ್ರಾರ್ ಅವರಿಗೆ ಕೂಡಲೇ ಗಣತಿ ಕಾರ್ಯ ಆರಂಭಕ್ಕೆ ಸೂಚನೆ ನೀಡಬೇಕು. ಜೊತೆಗೆ ದೇಶದ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಪ್ರತಿ ವ್ಯಕ್ತಿಯ ವೈಯಕ್ತಿಕ ವಿವರಗಳನ್ನು ಪಟ್ಟಿ ಮಾಡುವಂತೆಯೂ ಹೇಳಬೇಕು. ಆದರೆ, ಆ ಕಾರ್ಯ ಸುಲಭವಲ್ಲ, ಏಕೆಂದರೆ ಕಡುಬಡವರಲ್ಲಿ ಬಹುತೇಕ ಮಂದಿಗೆ ನಿರ್ದಿಷ್ಟ ವಿಳಾಸ ಎಂಬುದೇ ಇರುವುದಿಲ್ಲ. ಆದರೆ, ಇದಕ್ಕಿಂತಲೂ ಕಠಿಣ ಕಾರ್ಯಗಳನ್ನು ಮಾಡಿದ ಹೆಗ್ಗಳಿಕೆ ಭಾರತೀಯ ಜನಗಣತಿಯ ಇತಿಹಾಸಕ್ಕಿದೆ. ಹಾಗಾಗಿ ರಾಜ್ಯ ಮತ್ತು ಜಿಲ್ಲಾವಾರು ಆಧಾರದ ಮೇಲೆ ಈ ಮಾಹಿತಿ ಕಲೆ ಹಾಕುವುದು ಅಸಾಧ್ಯವೇನೂ ಅಲ್ಲ. ಯಾರು ನಿಜವಾದ ಬಡವರು ಮತ್ತು ಅವರು ಎಲ್ಲಿ ವಾಸವಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡರೆ ಅವರ ಬಡತನ ನಿವಾರಣೆಗೆ ಉಪಾಯಗಳನ್ನು ಯೋಚಿಸುವುದು ಸುಲಭ. ಆದಾಗ್ಯೂ ಇಲ್ಲೂ ಲೋಪಗಳಿರಬಹುದು, ಸೋರಿಕೆ ಆಗಬಹುದು. ಆದರೆ, ದೋಷಪೂರಿತವಾದರೂ ಸರಿ ದೇಶದ ಬಡವರ ಮಾಹಿತಿ ಕೋಶ ಹೊಂದುವುದು ಏನೂ ಇರದೇ ಇರುವುದಕ್ಕಿಂತ ವಾಸಿ.

ಹಾಗೇ ಈ ತಿನ್ನಿ, ತಿನ್ನಲು ಅವಕಾಶ ಕೊಡಿ ಬಜೆಟ್ನಲ್ಲಿ ಹಣಕಾಸು ಸಚಿವರು ಎರಡು ಸಾವಿರ ಕೋಟಿ ರೂಪಾಯಿ ಅನುದಾನ ನೀಡಿ ದೇಶದ ಎಲ್ಲಾ ಬಡವರಿಗೆ ಬಯೋಮೆಟ್ರಿಕ್ ಭಾವಚಿತ್ರ ಸಹಿತ ಮತದಾರರ ಗುರುತಿನ ಚೀಟಿ ನೀಡುವಂತೆ ಚುನಾವಣೆ ಆಯೋಗಕ್ಕೆ ಸೂಚನೆ ನೀಡಬೇಕು. ಈಗಾಗಲೇ ಸುಲಭಲಭ್ಯ ಸ್ಮಾರ್ಟ್ಕಾರ್ಡ್ ತಂತ್ರಜ್ಞಾನ ಬಳಸಿಕೊಂಡು ಆರೋಗ್ಯ ಇಲಾಖೆ ಪೈಲಟ್ ಪ್ರಾಜೆಕ್ಟ್ ಮೂಲಕ ಬಡವರಿಗೆ ಬಯೋಮೆಟ್ರಿಕ್ ಆರೋಗ್ಯ ವಿಮೆ ಕಾರ್ಡುಗಳನ್ನು ನೀಡಿ ಅವರಿಗೆ ಆಯ್ದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುತ್ತಿದೆ. ಆದರೆ, ಅಂತಹ ಕಾರ್ಡು ನೀಡಲು ವಿಳಾಸ ಅಗತ್ಯವೆಂಬ ಯಾವ ನಿರ್ಬಂಧವಿರಬಾರದು. ಈ ರೀತಿ ಮಾಡಿದರೆ; ನನ್ನ ಪ್ರಕಾರ ಸುಮಾರು 250 ಮಿಲಿಯನ್ ಭಾರತೀಯರು ಸ್ಮಾರ್ಟ್ ಬಯೋಮೆಟ್ರಿಕ್ ಕಾರ್ಡುಗಳನ್ನು ಪಡೆದುಕೊಂಡು ಸರ್ಕಾರದಿಂದ ಜಾರಿಗೆ ಬರುವ ಜನಪರ ಕಾರ್ಯಕ್ರಮ- ಯೋಜನೆಗಳ ಪ್ರಯೋಜನ ಪಡೆಯಲಿದ್ದಾರೆ. ಆದರೆ, ಇಲ್ಲೂ ಕೆಲವು ಅನರ್ಹರು ಈ ಸೌಲಭ್ಯಕ್ಕೆ ಭಾಜನರಾಗಿ, ಅರ್ಹರು ಹೊರಗುಳಿಯಬಹುದು ಎಂಬುದನ್ನೂ ತಳ್ಳಿ ಹಾಕಲಾಗದು. ಆದರೆ, ಯಾವುದರಲ್ಲೂ ಒಂದೇ ಬಾರಿಗೆ ಪರಿಪೂರ್ಣತೆ ಸಾಧಿಸಲು ಆಗದು ಅಲ್ಲವೆ?

2. ಎನ್ಆರ್ಇಜಿಎಗೆ ಮೂರು ಪಟ್ಟು ಹಣ ನಿಗದಿ ಮಾಡುವುದು

2009ರ ಚುನಾವಣೆಗೆ ಹಲವು ತಿಂಗಳ ಮೊದಲು ಪ್ರಣಬ್ ಮುಖರ್ಜಿ ತಾವು ಮಂಡಿಸಿದ್ದ ಮಧ್ಯಂತರ ಬಜೆಟ್ನಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 30,000 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಿದ್ದರು. ನಮ್ಮ 'ತಿನ್ನಿ, ತಿನ್ನಲು ಅವಕಾಶ ಕೊಡಿ' ಬಜೆಟ್ನಲ್ಲಿ ಎನ್ಆರ್ಇಜಿಎಸ್ಗೆ 90,000 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗುತ್ತದೆ, ಮಾತ್ರವಲ್ಲ ವರ್ಷಕ್ಕೆ ಒಂದು ಕುಟುಂಬಕ್ಕೆ ಕನಿಷ್ಠ 250 ದಿನಗಳ ಉದ್ಯೋಗ ನೀಡಲಾಗುತ್ತದೆ. ಹೀಗೆ ಮೂರು ಪಟ್ಟು ಹೆಚ್ಚಿನ ಹಣವನ್ನು ನಿಗದಿ ಮಾಡುವುದರಿಂದ ಸಾಕಷ್ಟು ಲಾಭಗಳಿವೆ. ಮೊದಲನೆಯದಾಗಿ, ಬಿಹಾರದ ಕೂಲಿ ಕಾರ್ಮಿಕರಿಗೆ ತಮ್ಮ ರಾಜ್ಯದಲ್ಲಿಯೇ ಕೈತುಂಬ ಕೆಲಸ ದೊರೆತಿದ್ದರಿಂದ ಪಂಜಾಬ್ ಹಾಗೂ ಹರಿಯಾಣಗಳ ಭೂಮಾಲಿಕರು ಈಗ ಕೂಲಿ ಕಾರ್ಮಿಕರು ಸಿಗದೆ ಪರಿತಪಿಸುತ್ತಿದ್ದಾರೆ. ಇದೇ ರೀತಿಯಲ್ಲಿ, ಈ ಯೋಜನೆ ಎಲ್ಲಾ ಕಡೆ ಯಶಸ್ವಿಯಾದರೆ ಹಳ್ಳಿಯಿಂದ ನಗರಕ್ಕೆ ವಲಸೆ ಹೋಗುವ ಜನರ ಪ್ರಮಾಣ ಗಣನೀಯವಾಗಿ ಕುಸಿಯುತ್ತದೆ. ನಗರ ಪ್ರದೇಶದಲ್ಲೂ ಕೂಲಿಕಾರ್ಮಿಕರು, ಮನೆಗೆಲಸದವರ ಕೊರತೆ ಕಾಣುತ್ತದೆ. ಪರಿಣಾಮ, ಬೇಡಿಕೆ ಹಾಗೂ ಸರಬರಾಜು ಸಿದ್ಧಾಂತದ ಪ್ರಕಾರ, ನಗರದ ಕೂಲಿ ಕಾರ್ಮಿಕರು, ಮನೆಗೆಲಸದವರ ವೇತನದಲ್ಲಿ ಹೆಚ್ಚಳ ಕಂಡುಬರುತ್ತದೆ ಮತ್ತು ಅವರ ಜೀವನ ಮಟ್ಟವೂ ಸುಧಾರಿಸುತ್ತದೆ. ಇದರಿಂದ ನಗರದ ಮೂಲಭೂತ ಸೌಕರ್ಯಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಆಗ ಸ್ಥಳೀಯ ರಾಜಕಾರಣಿಗಳು, ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಅವರ ಪಟಾಲಂ ಹೆಚ್ಚಿನ ಹಣ ಕಕ್ಕಬೇಕಾಗುತ್ತದೆ. ಅವರ ಕಪ್ಪು ಹಣ ಈ ರೀತಿಯಲ್ಲಾದರೂ ಹಳ್ಳಿಗಾಡಿನ ಜನರ ಕೈಸೇರುವುದರಿಂದ ಗ್ರಾಮೀಣ ಭಾಗದ ಜನರ ಆರ್ಥಿಕ ಮಟ್ಟವೂ ಕ್ರಮೇಣ ಸುಧಾರಿಸುತ್ತದೆ. ಇದರ ಜೊತೆಗೆ ಇನ್ನೊಂದು ಅಂಶವನ್ನೂ ಗಮನಿಸಬೇಕು. ಕೇವಲ 80 ದಿನಗಳ ಕೆಲಸದ ಭರವಸೆ ಕಳೆದ ಚುನಾವಣೆಯಲ್ಲಿ ಆ ಮಟ್ಟಿಗಿನ ಪವಾಡ ಮಾಡುತ್ತದೆ ಎಂದಾದರೆ 2014ರ ಲೋಕಸಭಾ ಚುನಾವಣೆಯಲ್ಲಿ ಸರ್ಕಾರಕ್ಕೆ ಇನ್ನೆಷ್ಟು ಲಾಭವಾಗಬಹುದು ಒಮ್ಮೆ ಯೋಚಿಸಿ! ಹಣ ನಿಗದಿ ಮಾಡುವಾಗ ಪ್ರಣಬ್ ಮುಖರ್ಜಿ ಒಂದು ವಿಚಾರದಲ್ಲಿ ಕಠಿಣ ನಿಲುವು ತಳೆಯಬೇಕು. ಅದೇನೆಂದರೆ, ನಿಗದಿಪಡಿಸಿದ ಹಣದಲ್ಲಿ ರೂ. 60,000 ಕೋಟಿ ಹಣವನ್ನು ಕಡ್ಡಾಯವಾಗಿ ಕಾಂಕ್ರೀಟ್ ರಸ್ತೆ, ಶಾಲಾ ಕಟ್ಟಡಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ನೀರಾವರಿ ಕಾಲುವೆಗಳ ನಿರ್ಮಾಣಕ್ಕೆಂದೇ ಮೀಸಲಿಡಬೇಕು. ಆದರೆ ಈ ಯೋಜನೆಯಲ್ಲಿ ಸಿಮೆಂಟ್ ಬಳಸುವಂತಿಲ್ಲ ಎಂಬ ಹಾಸ್ಯಾಸ್ಪದ ಷರತ್ತು ಇದೆ! ಯಾರಾದರೂ ಈ ಕುರಿತು ಮೊದಲೇ ಯೋಚಿಸಿದ್ದರೆ ಅವರು 'ತಿನ್ನಿ, ತಿನ್ನಲು ಅವಕಾಶ ಕೊಡಿ' ನೋಬಲ್ ಪ್ರಶಸ್ತಿಗೆ ಖಂಡಿತ ಅರ್ಹರು.

3. ಸರ್ವಶಿಕ್ಷಾ ಅಭಿಯಾನ ಹಾಗೂ ಮಧ್ಯಾಹ್ನದ ಬಿಸಿಯೂಟಕ್ಕೆ ನಾಲ್ಕು ಪಟ್ಟು ಹೆಚ್ಚು ಹಣ

2009ರ ಮಧ್ಯಂತರ ಬಜೆಟ್ ಈ ಎರಡೂ ಕಾರ್ಯಕ್ರಮಗಳಿಗೆಂದು ತಲಾ ರೂ.21,000 ಕೋಟಿ ನಿಗದಿಪಡಿಸಿತ್ತು. ಆದರೆ ನಮ್ಮ ಬಜೆಟ್ ನಾಲ್ಕರಷ್ಟು ಹೆಚ್ಚಿನ ಹಣವನ್ನು ಈ ಕಾರ್ಯಕ್ರಮಗಳಿಗಾಗಿ ಮೀಸಲಿಡಲಿದೆ. ಅಂದರೆ ಬರೋಬ್ಬರಿ ರೂ.80,000 ಕೋಟಿ. ಇದರ ಹಿಂದಿನ ಕಾರಣ ತುಂಬಾ ಸರಳ. ಎನ್ಆರ್ಇಜಿಎ ಯೋಜನೆ ಜಮೀನುರಹಿತ ಬಡ ಕಾರ್ಮಿಕರ ಹಸಿವು ನೀಗಿಸಿದರೆ ಸರ್ವಶಿಕ್ಷಾ ಅಭಿಯಾನ ಹಾಗೂ ಮಧ್ಯಾಹ್ನದ ಬಿಸಿಯೂಟದಂತಹ ಕಾರ್ಯಕ್ರಮಗಳು ಅವರ ಮಕ್ಕಳ ಹಸಿವು ನೀಗಿಸುವುದರ ಜೊತೆಗೆ ಶಿಕ್ಷಣವನ್ನೂ ನೀಡುತ್ತವೆ. ಅಕ್ಷರ ಕಲಿತ ಮಗು ಭವಿಷ್ಯದಲ್ಲಿ ಬಡತನದಿಂದ ಹೊರಬರಲು ಇರುವ ಸಾಧ್ಯತೆಗಳನ್ನು ಶೋಧಿಸುತ್ತದೆ. ವಾಸ್ತವವಾಗಿ, ಈ ಎರಡು ಯೋಜನೆಗಳನ್ನು ಕೇವಲ ಹತ್ತು ವರ್ಷಗಳ ಕಾಲ ಪರಿಣಾಮಕಾರಿಯಾಗಿ ಜಾರಿ ಮಾಡಿದರೆ ಸಾಕು ನಂತರ ಸರ್ಕಾರ ಅವುಗಳಿಗೆ ನಿಗದಿಪಡಿಸಿದ ಹಣದ ಪ್ರಮಾಣದಲ್ಲಿ ಇಳಿಕೆ ಮಾಡಬಹುದು. ಏಕೆಂದರೆ ಆ ಹೊತ್ತಿಗಾಗಲೇ ಕಾರ್ಯಕ್ರಮಗಳು ತಮ್ಮ ಪ್ರಸ್ತುತತೆ ಕಳೆದುಕೊಂಡಿರುತ್ತವೆ. ಹಾಗೆಯೇ, ಈ ಕಾರ್ಯಕ್ರಮಗಳು ಯಶಸ್ವಿಯಾಗಲು ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಾಗೂ ಶಿಕ್ಷಕರಿಗೆ ಉತ್ತೇಜಕ ಪ್ಯಾಕೇಜ್ಗಳನ್ನು ನೀಡಲು ಸರ್ಕಾರ ಮುಂದಾಗಬೇಕು. ಅಂದರೆ, ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಮಕ್ಕಳ ಶಿಕ್ಷಕರಿಗೆ ಹಾಗೂ ಮುಖ್ಯೋಪಾಧ್ಯಾಯರಿಗೆ ನಗದು ಬಹುಮಾನ ನೀಡುವ ನಿಟ್ಟಿನಲ್ಲಿ ಸರ್ಕಾರ ರೂ.10,000 ಕೋಟಿಗಳನ್ನು ನಿಗದಿಪಡಿಸಬೇಕು. ಫಲಿತಾಂಶ ಪ್ರಕಟವಾದ ನಂತರವಷ್ಟೇ ನಗದು ಬಹುಮಾನ ವಿತರಣೆಯಾಗಬೇಕು. ಹೀಗೆ ನೀಡಲಾಗುವ ಹಲವು ಲಕ್ಷಗಳ ನಗದು ಬಹುಮಾನ ಈಗ ಗಾಢ ನಿದ್ದೆಯಲ್ಲಿರುವ ಎಷ್ಟೋ ಶಿಕ್ಷಕರನ್ನು ಎಚ್ಚರಿಸಬಹುದು. ಈ ರೀತಿಯಲ್ಲಿ ಹೂಡಿಕೆಯಾಗುವ ಸರ್ಕಾರದ ಹಣ ಮುಂದಿನ ಕೆಲವೇ ವರ್ಷಗಳಲ್ಲಿ ಭಾರತದ ಲಕ್ಷಾಂತರ ವಿದ್ಯಾರ್ಥಿಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಗದಿ ಪಡಿಸಿದ ರೂ.80,000 ಕೋಟಿ ಹಣದಲ್ಲಿ ಹಣಕಾಸು ಸಚಿವರು ಕನಿಷ್ಠ ರೂ. 2000 ಕೋಟಿಯಷ್ಟು ಹಣವನ್ನು ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಳ ಕುರಿತು ದಾಖಲೆಗಳನ್ನು ಸಂಗ್ರಹಿಸಲು ಬಳಸಬೇಕು.

4. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಹತ್ತು ಪಟ್ಟು ಹೆಚ್ಚು ಹಣ

ಪರಿಶಿಷ್ಟ ಜಾತಿ- ಪಂಗಡ ಹಾಗೂ ಸಾಮಾನ್ಯ ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆಂದು ಸರ್ಕಾರ ಈಗ ರೂ. 1,700 ಕೋಟಿ ಮೀಸಲಿಟ್ಟಿದೆ. ಇದರ ಪ್ರಮಾಣ ಹತ್ತು ಪಟ್ಟು, ಅಂದರೆ ರೂ.17,000 ಕೋಟಿಯಷ್ಟಾದರೂ ಹೆಚ್ಚಳವಾಗಬೇಕು. ಕಾರಣ ಸರಳ: ಸರ್ವಶಿಕ್ಷಾ ಅಭಿಯಾನದ ದೆಸೆಯಿಂದಾಗಿ ಬಡಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಾರೆ. ಆದರೆ ಅವರ್ಯಾರಿಗೂ ಉನ್ನತ ಶಿಕ್ಷಣ ಹಾಗೂ ವೃತ್ತಿಶಿಕ್ಷಣ ಪಡೆಯಲು ಅವಶ್ಯವಿರುವಷ್ಟು ಆರ್ಥಿಕ ಸಂಪನ್ಮೂಲವಿರುವುದಿಲ್ಲ. ಹೆಚ್ಚಳವಾದ ವಿದ್ಯಾರ್ಥಿವೇತನದಿಂದಾಗಿ ಯಾವುದೇ ಬಡ ವಿದ್ಯಾರ್ಥಿ, ಆತ ಯಾವ ಜಾತಿಗೇ ಸೇರಿರಲಿ, ಉನ್ನತ ಶಿಕ್ಷಣದಿಂದ ವಂಚಿತನಾಗಲು ಸಾಧ್ಯವೇ ಇಲ್ಲ.

5. 'ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ'ಗೆ ಐದು ಪಟ್ಟು ಹೆಚ್ಚು ಹಣ

ಈ ಯೋಜನೆಗೆ ಮಧ್ಯಂತರ ಬಜೆಟ್ನಲ್ಲಿ ರೂ.12,000 ಕೋಟಿ ಅನುದಾನ ಮೀಸಲಿಡಲಾಗಿತ್ತು. ನಮ್ಮ 'ತಿನ್ನಿ, ತಿನ್ನಲು ಅವಕಾಶ ಕೊಡಿ' ಬಜೆಟ್ ಈ ಮೊತ್ತವನ್ನು ಐದು ಪಟ್ಟು; ಅಂದರೆ ರೂ.60,000 ಕೋಟಿಗೆ ಹೆಚ್ಚಿಸಲಿದೆ. ಹಣ ನಿಗದಿಪಡಿಸಿದ ಮೇಲೂ ಕೆಲವು ಅತ್ಯುತ್ತಮ ಕಾರ್ಯಕ್ರಮಗಳು ಜನರಿಗೆ ತಲುಪುವುದೇ ಇಲ್ಲವಾದ್ದರಿಂದ ನಾವು ಹಳೆಯ ಉಪಾಯಕ್ಕೇ ಮೊರೆ ಹೋಗಬೇಕು. ಅಂದರೆ ಉತ್ತೇಜಕ ಪ್ಯಾಕೇಜ್ಗಳನ್ನು ನೀಡುವುದು. ಇದರಿಂದ ನಮ್ಮ ಕೆಲವೊಂದು ಸಮಸ್ಯೆಗಳಿಗಾದರೂ ಪರಿಹಾರ ದೊರೆಯಬಹುದು. ರೂ. 5000 ಕೋಟಿ ಹಣವನ್ನು ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಹಾಗೂ ದಾದಿಯರಿಗೆ ನಗದು ಬಹುಮಾನ ನೀಡುವ ದಿಸೆಯಲ್ಲಿ ಮೀಸಲಿಡಬೇಕು. ಆದರೆ, ತಮಗೆ ನಿಗದಿಪಡಿಸಿದ ಗ್ರಾಮಗಳಲ್ಲಿಯೇ ಕನಿಷ್ಠ ಒಂದು ವರ್ಷಗಳನ್ನಾದರೂ ಪೂರೈಸಿದ್ದೇವೆ ಎಂಬುದಕ್ಕೆ ಅವರು ಸಾಕ್ಷ್ಯ ನೀಡಬೇಕೆಂಬ ಷರತ್ತನ್ನು ವಿಧಿಸಬೇಕು. ಎನ್ಆರ್ಇಜಿಎ ಕಾರ್ಯಕ್ರಮ ಎಷ್ಟೋ ಜನ ಬಡವರ ಹಸಿವು ನೀಗಿದರೆ, ಸರ್ವಶಿಕ್ಷಣ ಅಭಿಯಾನ ಅವರ ಮಕ್ಕಳಿಗೆ ಅಕ್ಷರಗಳನ್ನು ಕೊಡುತ್ತದೆ. ಇಂಥ ಒಂದು ಸಮುದಾಯಕ್ಕೆ ಉತ್ತಮ ಆರೋಗ್ಯ ಒದಗಿ ಬಿಟ್ಟರೆ ನಮ್ಮ ಭವಿಷ್ಯದ ಪಾಲಿಗೆ ಅದೇ ದೊಡ್ಡ ಆಸ್ತಿಯಾಗಬಹುದು.

6. ಮಾಹಿತಿ ಹಕ್ಕು ಕಾಯ್ದೆ ಜಾಗೃತಿಗೆ ರೂ. 5000 ಕೋಟಿ

ಭಾರತೀಯರ ನಡುವೆ ಚಿರಪರಿಚಿತವಾಗಿರುವ ಎಷ್ಟೋ ಕಂಪನಿಗಳು, ಉತ್ಪನ್ನಗಳು ಹಾಗೂ ಬ್ರಾಂಡ್ಗಳು ತಮ್ಮ ಜಾಹೀರಾತಿಗೆಂದು ಮಾಡುವ ವೆಚ್ಚ ವರ್ಷಕ್ಕೆ ರೂ. 100 ಕೋಟಿಯನ್ನೂ ಮೀರುವುದಿಲ್ಲ. ಮಾಹಿತಿ ಹಕ್ಕು ಕಾಯ್ದೆಯನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂಬುದನ್ನು ಕುರಿತು ಜನತೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಭವಿಷ್ಯದಲ್ಲಿ ಎಂತಹ ಪವಾಡ ಘಟಿಸಬಹುದು ನೀವೇ ಯೋಚಿಸಿ. ಜನರ ಅರಿವಿನ ಕೊರತೆಯಿಂದಾಗಿ ಈ ಕ್ರಾಂತಿಕಾರಿ ಕಾನೂನು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲವೆಂಬುದೇ ದುರದೃಷ್ಟಕರ ಸಂಗತಿ. ಆದರೆ, ಆರ್ಟಿಐ ಕುರಿತು ಅರಿವು ಮೂಡಿಸಲೆಂದೇ ರೂ.5000 ಕೋಟಿ ಹಣ ಮೀಸಲಿಟ್ಟರೆ ಅದರಿಂದ ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದು. ನಮ್ಮ ಪುಢಾರಿಗಳು ಅವರ ದುಷ್ಟ ಪಟಾಲಂ ಜಾಹೀರಾತಿನ ನೆಪದಲ್ಲಿ ಹಲವು ಕೋಟಿಗಳನ್ನು ನುಂಗಿ ನೀರು ಕುಡಿದರೂ, ಕೊನೆಗೆ ಇದರಿಂದ ಉತ್ತಮ ಫಲಿತಾಂಶವೇ ದೊರೆಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ!

ಹಣದ ಮೂಲ ಯಾವುದು?

ಈ ಬಾರಿಯ 'ತಿನ್ನಿ, ತಿನ್ನಲು ಅವಕಾಶ ಕೊಡಿ' ಬಜೆಟ್ನಲ್ಲಿ ಎರಡು ಲಕ್ಷ ಕೋಟಿ ಹೆಚ್ಚುವರಿ ಹಣವನ್ನು ನಿಗದಿಪಡಿಸಲಾಗಿದೆ. ಮೇಲ್ನೋಟಕ್ಕೆ ಅದು ದೊಡ್ಡ ಮೊತ್ತವಾಗಿ ಕಾಣುತ್ತದೆ. ಆದರೆ, ಒಮ್ಮೆ ಆ ಕುರಿತು ಯೋಚನೆ ಮಾಡಿ ನೋಡಿ, ನಮ್ಮ ಎಷ್ಟೋ ರಾಜಕಾರಣಿಗಳು ಹಾಗೂ ಉದ್ಯಮಿಗಳು ಬಹಿರಂಗಪಡಿಸಿದ ಖಾಸಗಿ ಸ್ವತ್ತೇ ಅದರ ಎರಡರಷ್ಟಿರುತ್ತದೆ. ಅದು ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ.2.5 ಭಾಗವನ್ನು ನಿರ್ಧರಿಸುತ್ತದೆ. ಅದೂ ಅವರಲ್ಲಿರುವ ಕಪ್ಪು ಹಣವನ್ನು ಹೊರತುಪಡಿಸಿ! ನಾನು ನನ್ನ ತಂದೆ ಡಾ. ಮಲಯ್ ಚೌಧುರಿ ಜೊತೆ ಹಲವು ವರ್ಷಗಳ ಹಿಂದೆ ಪ್ರಕಟಿಸಿದ್ದ 'ದ ಗ್ರೇಟ್ ಇಂಡಿಯನ್ ಡ್ರೀಮ್' ಪುಸ್ತಕವನ್ನು ನಿಮ್ಮಲ್ಲಿ ಕೆಲವರಾದರೂ ಓದಿರುತ್ತೀರಿ. ನಮ್ಮ ಕಾರ್ಪೊರೇಟ್ ಲಾಭಾಂಶ ಹಾಗೂ ಆರ್ಥಿಕ ಬೆಳವಣಿಗೆಗೆ ಯಾವುದೇ ರೀತಿಯ ಹಾನಿಯಾಗದ ರೀತಿಯಲ್ಲಿ ಸಂಪನ್ಮೂಲ ಕ್ರೋಡೀಕರಣ ಮಾಡುವುದು ಪ್ರಣಬ್ ಮುಖರ್ಜಿ ಅವರಿಗೆ ಎಷ್ಟು ಸುಲಭ ಎಂಬುದನ್ನು ನನ್ನ ಪುಸ್ತಕ ಓದಿದವರಿಗೆ ಸ್ಪಷ್ಟವಾಗುತ್ತದೆ. ನಮ್ಮ ಪ್ರಸಕ್ತ ತೆರಿಗೆ ವ್ಯವಸ್ಥೆ ಎಷ್ಟು ಗೊಂದಲದಿಂದ ಕೂಡಿದೆ ಎಂದರೆ ಮಿಲಿಯನ್ಗಟ್ಟಲೆ ಹಣ ಸಂಪಾದನೆ ಮಾಡುವ 'ಲಕ್ಷ್ಮೀ ಪುತ್ರ'ರು ತಮ್ಮ ಸಂಪಾದನೆಯಲ್ಲಿ ಚಿಲ್ಲರೆ ಹಣವನ್ನು ಮಾತ್ರ ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಜನಗಣತಿಯ ಆಧಾರದ ಮೇಲೆ ದೇಶದಲ್ಲಿರುವ ಬಡವರಿಗೆಲ್ಲರಿಗೂ ಬಯೋಮೆಟ್ರಿಕ್ ಕಾರ್ಡ್ಗಳನ್ನು ವಿತರಿಸಿದ ಮೇಲೆ ಮುಂದಿನ ಕಾರ್ಯಗಳೆಲ್ಲವೂ ಸರಾಗವಾಗಿ ನಡೆಯುತ್ತವೆ. ಈ ಬಯೋಮೆಟ್ರಿಕ್ ಕಾರ್ಡ್ಗಳನ್ನು ಹೊಂದದವರು ಯಾವ ರೀತಿಯ ಸಬ್ಸಿಡಿಗೂ ಅರ್ಹರಲ್ಲ ಎಂದು ಘೋಷಿಸಬೇಕು. ಆಗ ನಾವು ಮತ್ತು ನೀವು ಬಳಸುವ ಎಲ್ಪಿಜಿ ಸಿಲಿಂಡರ್ ಬೆಲೆ ರೂ.300ರಿಂದ ರೂ.600ಕ್ಕೆ ಏರಬಹುದು. ತಿಂಗಳಿಗೆ 300 ರೂಪಾಯಿ ನಿಮಗೆ ಹೆಚ್ಚಾಗುತ್ತದೆಯೇ? ಅಂದರೆ ಅದರರ್ಥ, ತಿಂಗಳಿಗೆ ನಮ್ಮ ಮಕ್ಕಳ ಶಿಕ್ಷಣದ ನೆಪದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಕೊಡುತ್ತಿರುವ ಹಣ ಹಲವು ನೂರು ರೂಪಾಯಿಗಳಿಂದ ಸಾವಿರ ರೂಪಾಯಿಗಳಿಗೆ ಏರಬಹುದು. ನಮ್ಮ ಕಾರುಗಳಿಗೆ ಬಳಸುವ ಪೆಟ್ರೋಲ್ ಬೆಲೆ ಕೂಡ ತುಸು ಹೆಚ್ಚಾಗಬಹುದು. ವಿದೇಶಗಳಿಗೆ ಹೋಗುವಾಗ ಹಲವು ಸಾವಿರ ಹೆಚ್ಚು ಭಾರ ನಮ್ಮ ಜೇಬಿನ ಮೇಲೆ ಬೀಳಬಹುದು. ಇದರಿಂದ ಅಂತಿಮವಾಗಿ ನಮ್ಮ ಅದೆಷ್ಟೋ ಅನವಶ್ಯಕ ವೆಚ್ಚಗಳಿಗೆ ಕಡಿವಾಣ ಬೀಳುತ್ತದೆ.

ಇದನ್ನು ಬೇರೆ ಮಾತುಗಳಲ್ಲಿ ವಿವರಿಸಬಹುದು. ಮೇಲೆ ವಿವರಿಸಿದ ಎಲ್ಲಾ ಪ್ರಮುಖ ಸಮಾಜಕಲ್ಯಾಣ ಕಾರ್ಯಕ್ರಮಗಳಿಗೆ ಈಗ ಸರ್ಕಾರ ನಿಗದಿಪಡಿಸಿರುವುದು ಒಟ್ಟು ರೂ.65,000 ಕೋಟಿ. ರಾಜೀವ್ ಗಾಂಧಿ ಅವರ ಲೆಕ್ಕಾಚಾರದ ಪ್ರಕಾರವೇ ರೂ.10,000 ಕೋಟಿಗಳು ಮಾತ್ರ ಬಡ ಜನತೆಯನ್ನು ತಲುಪುತ್ತದೆ. ಬಜೆಟ್ನಲ್ಲಿ ಹೇಳಿರುವುದೆಲ್ಲವನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗದಿದ್ದರೂ 'ತಿನ್ನಿ, ತಿನ್ನಲು ಅವಕಾಶ ಕೊಡಿ ಬಜೆಟ್' ಪ್ರಕಾರ ಪ್ರತಿವರ್ಷ ಕನಿಷ್ಠ ರೂ. 20,000 ಕೋಟಿಗಿಂತ ಹೆಚ್ಚು ಹಣ ಬಡವರ ಕೈಸೇರುತ್ತದೆ. ಒಂದು ವೇಳೆ ನಮ್ಮ ಈ ಬಜೆಟ್ನ ಶೇ.50ರಷ್ಟನ್ನು ಮಾತ್ರ ಅನುಷ್ಠಾನಕ್ಕೆ ತರಲು ಪ್ರಣಬ್ ಮುಖರ್ಜಿ ನಿರ್ಧರಿಸಿದರೆ ಏನಾಗಬಹುದು ಒಮ್ಮೆ ಕಲ್ಪಿಸಿಕೊಳ್ಳಿ. ಆಗಲೂ ಭಾರತದ ಬಡ ಬೋರೇಗೌಡನ ಪಾಲಿಗೆ ವರ್ಷಕ್ಕೆ ಒಂದು ಲಕ್ಷ ಕೋಟಿ ಇರುತ್ತದೆ ಮತ್ತು ಭ್ರಷ್ಟರಿಗೆ ಕೂಡ ಸಾಕಷ್ಟು ಖುಷಿಯಾಗುತ್ತದೆ!

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .