|
ಸರಿಯಾಗಿ ಎರಡು ದಶಕಗಳ ಹಿಂದೆ, ಅಂದರೆ 1989ರಲ್ಲಿ, ಬರ್ಲಿನ್ ಗೋಡೆಯನ್ನು ನೆಲಸಮ ಮಾಡಲಾಯಿತು. ಸಾಮಾನ್ಯ ಜನರೇ ಸ್ವ-ಇಚ್ಛೆಯಿಂದ
ಮುಂದೆ ಬಂದು ಬರ್ಲಿನ್ ಗೋಡೆಯನ್ನು ಕೆಡವುತ್ತಿದ್ದ ಸಂದರ್ಭದಲ್ಲಿ ಇದೇ ಮುಂದೆ
ಕಮ್ಯುನಿಸ್ಟ್ ಕನಸುಗಳ ಮೂರ್ತ ರೂಪದಂತಿದ್ದ ಸೋವಿಯತ್ ಗಣರಾಜ್ಯದ ಅಧಃಪತನಕ್ಕೆ
ನಾಂದಿ ಹಾಡುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಈ ಘಟನೆ ನಡೆದ ಕೇವಲ ಎರಡು ವರ್ಷಗಳ ನಂತರ ಜಾಗತಿಕ
ಮಟ್ಟದಲ್ಲಿ ಬಲಿಷ್ಠವಾಗಿ ಬೆಳೆದು ನಿಂತಿದ್ದ ಸೋವಿಯತ್ ಗಣರಾಜ್ಯ (ಯುಎಸ್‌ಎಸ್‌ಆರ್) ಯಾರೂ ಊಹಿಸಲಾಗದ ರೀತಿಯಲ್ಲಿ ಪತನಗೊಂಡಿತು.
ಅಂದು ರಷ್ಯಾದಲ್ಲಿ ಕೇಳಿಬರುತ್ತಿದ್ದ ವಿಷಾದದ ಚರಮಗೀತೆ ಇಂದು ಸಿಪಿಐ(ಎಂ) ಕಚೇರಿಗಳ ಪ್ರಾಂಗಣದಿಂದಲೂ ಕೇಳಿ ಬರುತ್ತಿದೆ.
15ನೇ ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ
ನೀಡಿದ್ದ ಸಿಪಿಐ(ಎಂ)
61 ಸ್ಥಾನಗಳಿಂದ 24 ಸ್ಥಾನಗಳಿಗೆ
ಕುಸಿದಾಗಲೂ ಪಕ್ಷದ ಪಾಲಿಗೆ ಮುಂಬರುವ ದುರಂತ ಸ್ಪಷ್ಟವಾಗಿರಲಿಲ್ಲ. ರಾಜ್ಯದ 294 ಲೋಕಸಭಾ
ಕ್ಷೇತ್ರಗಳಲ್ಲಿ ಸುಮಾರು 200 ಕ್ಷೇತ್ರಗಳಲ್ಲಿ ಸಿಪಿಐ(ಎಂ) ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ತೋಡಿದ್ದ
ಖೆಡ್ಡಾದಲ್ಲಿ ಮುಗ್ಗರಿಸಿ ಬಿದ್ದಿತ್ತು. ಇದರೊಂದಿಗೆ 32 ವರ್ಷಗಳಿಂದ
ಸಂಪೂರ್ಣ ಪಶ್ಚಿಮ ಬಂಗಾಳವೇ ತನ್ನ ಪಕ್ಷದ 'ಕೆಂಪುಕೋಟೆ' ಎಂದು ಬೀಗುತ್ತಿದ್ದ ಎಡ ಪಕ್ಷಗಳ ಭ್ರಮೆ ಹರಿಯುವ
ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.
2011ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳದ 13ನೇ ವಿಧಾನಸಭಾ
ಚುನಾವಣೆ ಸಿಪಿಐ(ಎಂ) ಅಧಿಪತ್ಯದ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ
ಮೊಳೆಯಾಗಲಿದೆ.
ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಲಾಲ್‌ಗಢ ಬಳಿಯ ಖೆಜೂರಿ ಹಾಗೂ ಧರಮ್‌ಪುರ್
ಪ್ರಾಂತಗಳು ಕುದಿವ ಲಾವರಸವನ್ನು ಒಡಲೊಳಗೆ ಬಚ್ಚಿಟ್ಟುಕೊಂಡ
ಅಗ್ನಿಪರ್ವದಂತಾಗಿದ್ದವು. ಜನಸಾಮಾನ್ಯರ ಪಕ್ಷ ಎಂದು ತನ್ನನ್ನು ತಾನೇ
ಬಣ್ಣಿಸಿಕೊಳ್ಳುತ್ತಿದ್ದ ಸಿಪಿಐ(ಎಂ) ಹೇಗೆ ದೌರ್ಜನ್ಯವನ್ನೇ ಬಂಡವಾಳವನ್ನಾಗಿಸಿಕೊಂಡು, ಜನಸಾಮಾನ್ಯರ ಆಶೋತ್ತರಗಳ ಸಮಾಧಿಯ ಮೇಲೆ ತನ್ನ
ಕನಸಿನ ಸೌಧ ಕಟ್ಟಿಕೊಂಡಿತ್ತು ಎಂಬುದನ್ನು ಖಾಸಗಿ ಸುದ್ದಿ ವಾಹಿನಿಯೊಂದು
ಇತ್ತೀಚೆಗಷ್ಟೇ ಅನಾವರಣಗೊಳಿಸಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಡರಂಗ ಹೀನಾಯ ಸೋಲು ಕಾಣದಿದ್ದರೆ
ಬಹುಶಃ ಈ ಯಾವ ಸಂಗತಿಯೂ ಬೆಳಕಿಗೆ ಬರುತ್ತಿರಲಿಲ್ಲವೇನೋ.
ಜೂನ್ 8ರಂದು
ಪ್ರಾರಂಭವಾದ ಪಶ್ಚಿಮ ಬಂಗಾಳದ ಜನರ ದಂಗೆಯ ದಾವಾನಲ ಮುಂದಿನ ನಾಲ್ಕು ದಿನಗಳ
ಕಾಲ ಅವ್ಯಾಹತವಾಗಿ ಮುಂದುವರಿಯಿತು. ಸಿಪಿಐ(ಎಂ) ತನ್ನ ಆಡಳಿತಾವಧಿಯಲ್ಲಿ ಅನುಸರಿಸಿದ ದಮನಕಾರಿ
ಮಾರ್ಗ, ಭ್ರಷ್ಟಾಚಾರ ಹಾಗೂ ಕುಟುಂಬ ವ್ಯಾಮೋಹವನ್ನು ಪ್ರತಿಭಟಿಸಿ
ನಂದಿಗ್ರಾಮ ಹಾಗೂ ಖೆಜೂರಿ ಗ್ರಾಮಗಳ ಜನತೆ ಬಂಡಾಯದ ಬಾವುಟ ಹಾರಿಸಿದ್ದರು. ಜನ ಸಾಮಾನ್ಯರ ಆಕ್ರೋಶಕ್ಕೆ ಖೆಜೂರಿಯಲ್ಲಿದ್ದ
ಸಿಪಿಐ(ಎಂ)ನ
ಕಚೇರಿಗಳು ಹಾಗೂ ಪಕ್ಷದ ಹಲವು ಮುಖಂಡರ ಮನೆಗಳು ಉರಿದು ಭಸ್ಮವಾದವು. ಗಾಂಧೀವಾದದ ಪರಂಪರೆ ಇರುವ ಈ ಪ್ರಾಂತಗಳು 1999ರ ನಂತರ
ಸಿಪಿಐ(ಎಂ) ಪಕ್ಷದ ಸ್ಥಳೀಯ ನಾಯಕರ ಪಾಳೇಗಾರಿಕೆಗೆ
ಸಾಕ್ಷಿಯಾದವು. ಅವರ ಹಿಡಿತ ಎಷ್ಟರ ಮಟ್ಟಿಗೆ ಹೆಚ್ಚಿತೆಂದರೆ, ಉಳಿದ ಯಾವ ರಾಜಕೀಯ ಪಕ್ಷವೂ ಇಲ್ಲಿ ಪಾರದರ್ಶಕ
ಆಡಳಿತದ ಕುರಿತು ಧ್ವನಿ ಎತ್ತುವಂತಿರಲಿಲ್ಲ. ನಂದಿಗ್ರಾಮ ಪ್ರಕರಣದ ಸಂದರ್ಭದಲ್ಲಿಯಂತೂ ಇಲ್ಲಿ
ವಿಫುಲವಾಗಿ ಬೆಳೆದಿದ್ದ ಸಿಪಿಐ(ಎಂ) ಸಶಸ್ತ್ರ ದಳದ ಬಂದೂಕುಗಳು ಎಡೆಬಿಡದೇ ಗುಂಡಿನ
ಮಳೆಗರೆಯುತ್ತಿದ್ದವು. ಪಕ್ಷದ ಬಾಡಿಗೆ ಹಂತಕರು ಹಾಗೂ ಸಶಸ್ತ್ರ ದಳದ ನೆಲೆವೀಡು 'ಜನನಿ
ಬ್ರಿಕ್ ಕಿಲ್ನ್' ಕೂಡ ಇಲ್ಲೇ ಇದೆ.
ಜನತೆಯ ಬಂಡಾಯದಿಂದಾಗಿ ಕಾನೂನುಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ ಅಪಾರ
ಪ್ರಮಾಣದ ಶಸ್ತ್ರಾಸ್ತ್ರಗಳು ಬೆಳಕಿಗೆ ಬಂದವು. ಟಿಎಸ್‌ಐ ಜೊತೆ ಮಾತನಾಡಿದ ಪೂರ್ವ ಮಿಡ್ನಾಪುರದ
ಪೊಲೀಸ್ ವರಿಷ್ಠಾಧಿಕಾರಿ ಪಲ್ಲಬ್ ಕಾಂತಿ ಘೋಷ್,
"ಖೆಜೂರಿ ಪ್ರಾಂತದಲ್ಲಿ 5 ರಿವಾಲ್ವರ್, 12 ಬಂದೂಕು, 21 ಮಾರಕಾಸ್ತ್ರಗಳು ಹಾಗೂ 6 ದೇಸೀ
ಬಂದೂಕುಗಳನ್ನು ವಶಪಡಿಸಿಕೊಳ್ಳಲಾಯಿತು. ಇದರ ಜೊತೆಗೆ 1566 ಸುತ್ತು
ಗುಂಡು ಹಾಗೂ 99 ದೇಸೀ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಯಿತು" ಎನ್ನುತ್ತಾರೆ.
"ಪಕ್ಷದ ನಾಯಕರು ಹೊಂದಿದ ಅಕ್ರಮ
ಶಸ್ತ್ರಾಸ್ತ್ರಗಳಿಗೆ ಹೋಲಿಸಿದರೆ ಈಗ ದೊರೆತಿರುವುದು ಏನೂ ಅಲ್ಲ" ಎಂಬ ಅಭಿಪ್ರಾಯ ಅಲ್ಲಿನ ಗ್ರಾಮಸ್ಥರದು. ಪೊಲೀಸ್ ವರಿಷ್ಠಾಧಿಕಾರಿ ಘೋಷ್ ಕೃಪಾಕಟಾಕ್ಷ ಕೂಡ
ಸಿಪಿಐ(ಎಂ) ಪಕ್ಷದ ನಾಯಕರ ಮೇಲಿದೆ ಎಂಬ ಆರೋಪವೂ
ಕೇಳಿಬರುತ್ತಿದೆ. ಪಲಟಿಯಾಲ, ಕಾಲಗೆಚ್ಚಿಯಾದಲ್ಲಿದ್ದ ಸಿಪಿಐ(ಎಂ) ಪಕ್ಷದ ಕಚೇರಿಯ ಮೇಲೆ ದಾಳಿ ಮಾಡಿದವರು ಯಾರೂ
ಮಾವೋವಾದಿಗಳಲ್ಲ ಎಂಬುದು ಇಲ್ಲಿ ಗಮನಾರ್ಹ. ಹೀಗೆ ದಾಳಿಗೊಳಗಾದ ಕಚೇರಿಗಳ ಪ್ರಾಂಗಣದಲ್ಲಿ
ಗ್ರಾಮ ಪಂಚಾಯ್ತಿಯಲ್ಲಿ ಇರಬೇಕಾದ ಪಡಿತರ ಚೀಟಿಗಳು, ಎನ್‌ಆರ್‌ಇಜಿಎ ಫಲಾನುಭವಿಗಳ ಗುರುತಿನ ಚೀಟಿಗಳು
ಅರೆಬರೆ ಸುಟ್ಟ ಸ್ಥಿತಿಯಲ್ಲಿ ಬಿದ್ದಿದ್ದವು. ಸತತ ದಾಳಿಗಳಿಂದ ಕಂಗೆಟ್ಟ ಸಿಪಿಐ(ಎಂ) ತನಗೆ ಸೇರಿದ ಸುಮಾರು 60
ಕಚೇರಿಗಳನ್ನು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ವಶಪಡಿಸಿಕೊಂಡಿದ್ದಾರೆ
ಎಂದು ಹುಯಿಲೆಬ್ಬಿಸಿದೆ.
ಹಾಗಾದರೆ ಈ ಎಲ್ಲಾ ದಾಳಿಗಳ ಹಿಂದೆ ಯಾರ ಕೈವಾಡವಿದೆ? ಪಂಚಾಯತ್ ಸಮಿತಿಯ ಮಾಜಿ ಸಭಾಪತಿ ಹಿಮಾಂಶು ದಾಸ್
ಅವರ ಸಹೋದರ ಸುಧಾಂಶು ದಾಸ್ ಹಾಗೂ ಸಿಪಿಐ(ಎಂ) ಪಕ್ಷದ ಇನ್ನೊಬ್ಬ ನಾಯಕ ಮಖನ್ ಪಾಂಡ ಅವರ ಸಹೋದರ
ಸ್ವಪನ್ "ನಮ್ಮ
ಮನೆಗಳ ಮೇಲೆ ದಾಳಿ ಮಾಡಿದವರು ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು. ಕೊನೆಗೂ ನಮ್ಮ ಸಹಾಯಕ್ಕೆ ಬಂದಿದ್ದು ತೃಣಮೂಲ
ಕಾಂಗ್ರೆಸ್‌ನ ಕಾರ್ಯಕರ್ತರು" ಎನ್ನುತ್ತಾರೆ.
"ನಮ್ಮ ಮನೆಯನ್ನು ನೆಲಸಮಗೊಳಿಸುವಾಗ ಅದಕ್ಕೆ
ಕುಮ್ಮಕ್ಕು ನೀಡುತ್ತಿದ್ದವರು ಸಿಪಿಐ(ಎಂ) ನಾಯಕರಾದ ಕಮಲೇಶ್ ಮಾಲ್, ಲಾಲು ಮಾಲ್" ಎಂದು ಆರೋಪಿಸುತ್ತಾರೆ ಮಖನ್ ಪಾಂಡ ಅವರ ಸಹೋದರ.
"ಪಕ್ಷದ ನಾಯಕರಾಗಿ ಹಿಮಾಂಶು, ಪ್ರಶಾಂತ ಹಾಗೂ ನಿರಪದ ಸಾಕಷ್ಟು ಅಪರಾಧಗಳಲ್ಲಿ
ಭಾಗಿಯಾಗಿದ್ದು ನಿಜ. ಇವರಿಂದ ಹಲ್ಲೆಗೊಳಗಾದ ಹಾಗೂ ಸಾವಿಗೀಡಾದ ಅಮಾಯಕರೆಷ್ಟೋ. ಈಗ ಇವರೆಲ್ಲಾ ತಮ್ಮ ತಪ್ಪಿಗೆ ಬೆಲೆ
ತೆರುತ್ತಿದ್ದಾರೆ" ಎಂದು ಮಖನ್ ಅವರ ಸಹೋದರ ಪ್ರಾಮಾಣಿಕವಾಗಿ
ಒಪ್ಪಿಕೊಳ್ಳುತ್ತಾರೆ. ಟಿಎಸ್‌ಐ ಜೊತೆ ಮಾತನಾಡಿದ ಓರ್ವ ವೃದ್ಧ ಮಹಿಳೆ,
"ದಾಳಿಯಲ್ಲಿ ಪಾಲ್ಗೊಂಡಿದ್ದವರು ಕೆಲವರು ಲೋಕಸಭಾ
ಚುನಾವಣೆಗೂ ಮೊದಲು ಪಕ್ಷದ ಕಚೇರಿಗೆ ಆಗಾಗ ಬರುತ್ತಿದ್ದರು. ಆದರೆ ಆಗ ಪರಿಸ್ಥಿತಿ ಹೇಗಿತ್ತು ಎಂದರೆ, ನಾವು ಅಪರಿಚಿತರೊಂದಿಗೆ ಮಾತನಾಡುವಂತಿರಲಿಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ. ನಾವೀಗ ಯಾವ ಭಯವೂ ಇಲ್ಲದೇ ಮುಕ್ತವಾಗಿ
ಮಾತನಾಡಬಹುದು" ಎಂದು ಸಮಾಧಾನದ ನಿಟ್ಟುಸಿರು ಬಿಡುತ್ತಾರೆ. ಹೆಸರು ಹೇಳಲು ಇಚ್ಛಿಸದ ಸಿಪಿಐ(ಎಂ)ನ
ಕೆಲವು ಕಾರ್ಯಕರ್ತರು "ಸಿಪಿಎಂನ
ಸಶಸ್ತ್ರ ದಳದ ನೇತೃತ್ವ ವಹಿಸಿದ್ದವರು ಹಿಮಾಂಶು ದಾಸ್. ಪ್ರಶಾಂತ ಮೈತಿ, ಬಿಜನ್ ರಾಯ್, ರಬಿಉಲ್ ಇಸ್ಲಾಂ ಹಾಗೂ ಮಖನ್ ಪಾಂಡ- ಹಿಮಾಂಶು ಅವರ ಬೆಂಬಲಿಗರು" ಎಂಬ ರಹಸ್ಯವನ್ನು ಬಹಿರಂಗಪಡಿಸುತ್ತಾರೆ.
ಖೆಜೂರಿಯ ಕಮಲೇಶ್ ಮೈತಿ, "ಸಿಪಿಐ(ಎಂ) ನಾಯಕರ ಮಾತಿಗೆ ನಾವು ಎದುರಾಡುವಂತಿರಲಿಲ್ಲ. ನಂದಿಗ್ರಾಮ ಸಂಘರ್ಷದ ಸಂದರ್ಭದಲ್ಲಿ ಬಾಡಿಗೆ
ಹಂತಕರನ್ನು ಬಳಸಿಕೊಳ್ಳುತ್ತಿದ್ದವರು ಕೂಡ ಅವರೇ" ಎನ್ನುತ್ತಾರೆ.
"ನಮ್ಮ ಜಮೀನುಗಳೆಲ್ಲಾ ದಶಕಗಳ ಹಿಂದೆಯೇ ಅವರ
ಪಾಲಾಗಿದ್ದವು. ಆ ಜಮೀನುಗಳನ್ನು ಗುತ್ತಿಗೆದಾರರಿಗೇ ಕೊಡುವುದಾಗಿ ಅವರು
ನಮ್ಮನ್ನು ಹೆದರಿಸುತ್ತಿದ್ದರು. ನಂತರ ಅವರು ಕೇಳಿದಷ್ಟು ಹಣ ನೀಡಿ, ಸಿಪಿಐ(ಎಂ) ಪಕ್ಷಕ್ಕೇ ಬೆಂಬಲ ನೀಡುವುದಾಗಿ ಮುಚ್ಚಳಿಕೆ
ಬರೆದುಕೊಟ್ಟ ಮೇಲೆ ನಮ್ಮ ಜಮೀನನ್ನು ಹಿಂದಿರುಗಿಸುತ್ತಿದ್ದರು" ಎನ್ನುವ ತಪನ್ ಮೈತಿಗೆ ಈಗ ಎಲ್ಲಿಲ್ಲದ ಸಮಾಧಾನ. ಸಿಪಿಐ(ಎಂ) ಬೇರೆಯವರ ಜಮೀನುಗಳನ್ನು ಅನಧಿಕೃತವಾಗಿ
ವಶಪಡಿಸಿಕೊಂಡಿರುವುದನ್ನು ಪಕ್ಷದ ಪೂರ್ಬಾಚರ ಸಮಿತಿಯ ಕಾರ್ಯದರ್ಶಿ ಬಿಮಲ್
ಕುಮಾರ್ ಮೈತಿ ಕೂಡ ಒಪ್ಪಿಕೊಳ್ಳುತ್ತಾರೆ.
ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಒಬ್ಬೊಬ್ಬರಾಗಿ ಪಕ್ಷವನ್ನು
ತ್ಯಜಿಸುತ್ತಿರುವುದರಿಂದ ಸಿಪಿಐ(ಎಂ)ನ
ಬುನಾದಿಯೇ ಅಲುಗಾಡುತ್ತಿದೆ. ಸಿಪಿಐ(ಎಂ)ನ
ಪ್ರಸಕ್ತ ಸ್ಥಿತಿ ಹೇಗಿದೆ ಎಂಬುದನ್ನು ಖೆಜೂರಿಯ ಅಂಗಡಿ ಮಾಲಿಕರೊಬ್ಬರ
ಮಾತುಗಳಲ್ಲಿಯೇ ಕೇಳಬೇಕು. "ಪ್ರಾರಂಭದಲ್ಲಿ
ತರಗತಿಯಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಇದ್ದ. ಪರೀಕ್ಷೆಯಲ್ಲಿ ಸಹಜವಾಗಿಯೇ ಆತನಿಗೆ ಪ್ರಥಮ
ಸ್ಥಾನ. ಆದರೆ ಈಗ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ" ಎಂದು ಅವರು ವ್ಯಂಗ್ಯವಾಗಿ ಹೇಳುತ್ತಾರೆ. ಬಂಡಾಯದ ಯಶಸ್ಸು ಲಾಲ್‌ಗಢದ ಮೂಲೆ- ಮೂಲೆಗೆ ವ್ಯಾಪಿಸಿತು. 'ಪೊಲೀಸ್
ದೌರ್ಜನ್ಯ ವಿರುದ್ಧದ ಜನರ ಸಮಿತಿ' ಪೊಲೀಸ್ ಮುಕ್ತ ಪ್ರದೇಶ ಎಂದು ಘೋಷಿಸಿದ್ದ ಧರಮ್‌ಪುರದಲ್ಲಿ
ಪಕ್ಷದ ಬಿನ್‌ಪಿರ್ ವಿಭಾಗೀಯ ಸಮಿತಿಯ ಕಾರ್ಯದರ್ಶಿ ಅನುಜ್ ಪಾಂಡೆ ಅವರ ಎರಡು
ಸುಸಜ್ಜಿತ ಮಹಡಿ ಮನೆಗಳಿವೆ. ಅಲ್ಲಿ ಉಸಿರುಗಟ್ಟಿಸುವ ಬಡತನವನ್ನು ಹಂಗಿಸುವಂತೆ
ತಲೆ ಎತ್ತಿ ನಿಂತಿದ್ದ ಈ ಮನೆಗಳ ಮೇಲೆ ಸುಮಾರು 5000 ಮಂದಿಯ
ಗುಂಪೊಂದು ದಾಳಿ ಮಾಡಿತು. ಅನುಜ್ ತಲೆತಪ್ಪಿಸಿಕೊಂಡರು. ಜನರ ಆಕ್ರೋಶದ ಉರಿಗೆ ಮನೆಗಳು ಬಲಿಯಾಗುತ್ತಿದ್ದರೆ
ಅನುಜ್ ಅವರ ಚಿಕ್ಕಪ್ಪ ಭಯಭೀತರಾಗಿ ಮನೆಯಲ್ಲಿ ಅಡಗಿ ಕುಳಿತಿದ್ದರಂತೆ. ಗುಂಪಿನಲ್ಲಿದ್ದ ಕೆಲವರು ತಮಗೆ ತೊಂದರೆ
ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ ಮೇಲೆಯೇ ಆ ವೃದ್ಧ ಮನೆಯಿಂದ ಹೊರಗೆ
ಕಾಲಿಟ್ಟದ್ದು.
"ತಮ್ಮ ಪಕ್ಷಕ್ಕೆ ಸೇರಲಿಲ್ಲ ಎಂಬ ಒಂದೇ ಒಂದು
ಕಾರಣಕ್ಕೆ 'ಜಾರ್ಖಂಡ್
ಮುಕ್ತಿ ಮೋರ್ಚಾ'ದ
ಕಾರ್ಯಕರ್ತ ದಿನು ಖಿಲಾರಿ ಅವರನ್ನು ಅಪಹರಿಸಿದ ಅನುಜ್‌ನ ಗೂಂಡಾಗಳು ಅವರಿಗೆ
ನೀಡಬಾರದ ಚಿತ್ರಹಿಂಸೆ ನೀಡಿದರು. ಕೆಲವು ದಿನಗಳ ಬಳಿಕ ಪಕ್ಕದ ಕಾಡಿನಲ್ಲಿ ಖಿಲಾರಿ
ಅವರ ಶವ ಪತ್ತೆಯಾಯಿತು. ಇಂದ್ರಜಿತ್ ಸಾಹಿಸ್ ಅವರನ್ನು ಕೊಂದಿದ್ದೂ ಅನುಜ್
ಗೂಂಡಾಗಳೇ" ಎಂದು ಅನುಜ್ ಅವರ ಸಹೋದರ ಒಪ್ಪಿಕೊಳ್ಳುತ್ತಾರೆ. ಕೊನೆಗೆ ಈ ಗೂಂಡಾಗಳನ್ನು ಸಂಹರಿಸಿದ್ದು
ಮಾವೋವಾದಿಗಳು ಎಂದು ಧರಮ್‌ಪುರ ಗ್ರಾಮಸ್ಥರು ಹೇಳುತ್ತಾರೆ. ಜೂನ್
16ರಂದು ಜರುಗಿದ ಬೃಹತ್ ರ‍್ಯಾಲಿಯಲ್ಲಿ 15000ಕ್ಕೂ
ಹೆಚ್ಚು ಬುಡಕಟ್ಟು ಜನಾಂಗದವರು ಭಾಗವಹಿಸಿದ್ದರು. ಲಾಲ್‌ಗಢ ಬಜಾರ್ ಬಳಿ ನೆರೆದಿದ್ದ ಅವರ ಮೊಗದಲ್ಲಿ
ಚಿಮ್ಮುತ್ತಿದ್ದ ವಿಜಯೋತ್ಸಾಹಕ್ಕೆ ಸಿಪಿಐ(ಎಂ)ನ 'ಕೆಂಪು
ಕೋಟೆ'ಯನ್ನೇ
ಪುಡಿಗುಟ್ಟಿಸುವ ಸಾಮರ್ಥ್ಯವಿತ್ತು.
ಟಿಎಸ್‌ಐ |