User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಕನ್ನಡಿಯೊಳಗಣ ಬೊಟ್ಟು
 

ಎಸ್. ಗಂಗಾಧರಯ್ಯ

"ಅ ಪ್ಪ, ಇನ್ಯಾವತ್ತೂ ಅಮ್ಮ ಬರೋದೇ ಇಲ್ವಾ?"

"ಇಲ್ಲ ಮಗ"

"ಯಾವತ್ತೂ ಅಂದ್ರೆ ಯಾವತ್ತೂ?"

"ಇಲ್ಲಾ ಕಣಪ್ಪ"

"ಎಷ್ಟು ವರ್ಷ ಆದ್ರೂನೂ?"

"..................."

"ಅಪ್ಪ ಹೇಳಪ್ಪ, ಯಾಕಪ್ಪಾ ಸುಮ್ಮಕಾದೆ?"

ಅಪ್ಪನ ಮೌನ ಮಗ ಉಲ್ಲಾಸನೊಳಗೆ ಎಂಥದೋ ಅನುಮಾನ ಹುಟ್ಟಿಸಿ, ಅದು ಅಮ್ಮನ ಅಗಾಧ ನೆನಪನ್ನು ಅವನೊಳಗೆ ಉಕ್ಕಿಸಿ, ಅವನು ಅಳುವಿನ ಹೊಳೆಯನ್ನೇ ತುಟಿಯ ಮೇಲೆ ಕೂರಿಸಿಕೊಂಡು, ಅಪ್ಪನ ತೊಡೆಯ ಮೇಲಿಂದ ಎದ್ದು ಅವನ ಕೈಗಳಿಂದ ಬಿಡಿಸಿಕೊಂಡು, ಅವನತ್ತ ತಿರುಗಿ ಕೊರಳಿಗೆ ತೆಕ್ಕೆ ಬಿದ್ದು, "ಹೇಳಪ್ಪಾ ಅಮ್ಮ ಇನ್ನು ಬರೋದೇ ಇಲ್ವಾ?" ಮಾತುಗಳನ್ನು ಆಡುವಷ್ಟರಲ್ಲಿ ಅಳುವಿನ ಗಡಸು ಎಳೆಯೊಂದು ಎದ್ದೂ ಬಿದ್ದೂ ಆಡ ಹತ್ತಿದ ರಭಸಕ್ಕೆ ಬಾಗಿದ ಆ ಎಳೆಯ ಜೀವ ಅಪ್ಪನನ್ನು ಹಿಡಿದು ಅಲುಗಿಸಿತು. ಮಗನ ಮಾತುಗಳು ಸುಧಾಕರನನ್ನು ತಮಾಮ್ ಸಂಕಟದ ಸುಳಿಯೊಳಗೆ ಎತ್ತಿ ಕುಕ್ಕಿ, ಏನು ಹೇಳಬೇಕು, ಯಾವ ಮಾತುಗಳಿಂದ ಸಂತೈಸಬೇಕೆಂದು ತಿಳಿಯದೆ, "ನಮ್ಮನ್ನ ಬಿಟ್ಟು ಒಬ್ಬಳೇ ಯಾಕೆ ಹೋಗಿ ಬಿಟ್ಟೆ ಮರಿ, ಏನಂತ ಹೇಳಲಿ ತಾಯಿ ಈ ಕಂದಮ್ಮನಿಗೆ," ಅವನನ್ನು ಸುತ್ತಿ- ಸುತ್ತಿ ಸೂಡಾಡುತ್ತಿದ್ದ ಸಂಕಟವೆಂಬ ಆತ್ಮದ ಆರ್ತನಾದವೇನೋ ಎಂಬಂತೆ ತೆಕ್ಕೆ ಬಿದ್ದಿದ್ದ ಕಂದನನ್ನು ಮತ್ತೂ ಗಟ್ಟಿ ಹಿಡಿದು ಅಳುವಿನ ಜಲಪಾತವೇ ಆಗಿ ಬಿಟ್ಟ. ಆಗಲೇ ಗಾರಾಗಿದ್ದ ಆ ಎಳೆಯ ಜೀವಕ್ಕೆ ಅಪ್ಪನ ಅಂಥ ಅಳು ಮತ್ತೂ ಗಾಬರಿ ಹುಟ್ಟಿಸಿ, ಕಕ್ಕಾ- ಬಿಕ್ಕಿಯಾಗಿ ಅಪ್ಪನ ತೊಡೆಯಲ್ಲಿ ಮತ್ತೆ ಕುಸಿದು ಕೂತು, ಆ ಜಲಪಾತ ಮತ್ತೊಂದು ರಾಗವಾಗಿ ಬಿಟ್ಟಿತು. ಮುಗಿಲಲ್ಲಿ ಬೆಳಗುತ್ತಿದ್ದ ಹುಣ್ಣಿಮೆಗೆ ಮುನ್ನಾ ದಿನದ ಚಂದ್ರನಿಗೆ ಈ ಸಾವು ನೋವಿನ ಸೂತಕ ಸೋಕದಿರಲಿ ಎಂಬಂತೆ ಕಪ್ಪು ಮೋಡವೊಂದು ರಪ್ಪನೆ ಕವುಚಿಕೊಂಡು, ಒಂದರೆ ಕ್ಷಣ ಅವನ ಬೆಳಕಿನ ಪ್ರಭೆಯನ್ನು ಮಂಕಾಗಿಸಿತು. ಇದಾವುದರ ಪರಿವೆಯೇ ಇಲ್ಲದೆ ಅಲ್ಲಿ ಆ ಅಳುಗಳೆರಡೂ ಅನಾಥವಾಗಿ ರಾತ್ರಿಯ ನೀರವತೆಯಲ್ಲಿ ನೀರಾಗುತ್ತಾ, ಕೇಳಿದವರ ಎದೆಯಲಿ ಭಾರದ ಭಾವವಾಗುತ್ತಾ ಲೋಕದ ಅಸಂಖ್ಯ ನಿಟ್ಟುಸಿರುಗಳ ಖಾತೆಯಲ್ಲಿ ಜಮೆಯಾಗುತ್ತಿದ್ದವು.

ಹೆಂಡತಿ ಸಾರಿಕಾ ತೀರಿ ಹೋಗಿ ತಿಂಗಳು ಕಳೆದು, ಊರಿಗೆ ಬಂದು ವಾರವಾಗಿದ್ದರೂ ಅವತ್ತು ಬೆಳಿಗ್ಗೆಯಷ್ಟೇ ಮನೆಯ ಕಡೆ ಹೋಗುವ ಧೈರ್ಯ ಬಂದಿತ್ತು ಸುಧಾಕರನಿಗೆ. ಕಳೆದ ಒಂದು ವಾರದಿಂದ ಗೆಳೆಯನ ಮನೆಯಿಂದಲೇ ಮಗನನ್ನು ಸ್ಕೂಲಿಗೆ ಕಳಿಸುತ್ತಿದ್ದ ಸುಧಾಕರ ಇದು ಆಗುವ ಹೋಗುವ ಮಾತಲ್ಲ ಎಂಬುದನ್ನು ಮನಗಂಡು ಸಂಜೆಯ ಹೊತ್ತಿಗೆ ಊರಿನಿಂದ ಅಪ್ಪ- ಅಮ್ಮನಿಗೆ ಬರುವಂತೆ ಹೇಳಿ, ಒಲ್ಲದ ಮನಸ್ಸಿನಿಂದ ಮನೆಯ ಹತ್ತಿರ ಹೋಗಿದ್ದ. ಹಾಗೆ ಹೋದವನಿಗೆ ಅಂಗಳದ ತುಂಬಾ ಎಲ್ಲೆಲ್ಲೂ ಸಾರಿಕಾಳ ರೂಪವೇ ಎದುರಾಗಿ ಕಣ್ಣಿಗೆ ಕತ್ತಲು ಚೆಲ್ಲಿದಂತಾಗಿ ಗೇಟಿನ ಬಳಿಯೇ ಕುಸಿದು ಕೂತಿದ್ದ. ಅದನ್ನು ಕಂಡ ಅವರಿವರು ಒಬ್ಬನೇ ಒಳಗೆ ಹೋಗೋದು ಬೇಡ ಅಂತ ಬುದ್ಧಿವಾದ ಹೇಳಿ ಮತ್ತೆ ಗೆಳೆಯನ ಮನೆಗೆ ಸೇರಿಸಿದ್ದರು.

ಸಂಜೆ ಮನೆಗೆ ಹೋದಾಗ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಶೂನ್ಯದ ಅನುಭವವಾಗಿತ್ತು ಸುಧಾಕರನಿಗೆ. ಹೆಂಡತಿಯ ಸಾವಿನ ದಿನಕ್ಕಿಂತಲೂ ಸಂಕಟ ಉಮ್ಮಳಿಸಿ ಬಂದಿತ್ತು. ಮನೆಯ ಇಂಚಿಂಚಿನಲ್ಲೂ ಅವಳ ರೂಪ, ದನಿಗಳು, ಅವಳಿಟ್ಟ ವಸ್ತುಗಳು ನಿಂತಲ್ಲಿ ನಿಲ್ಲಲು ಬಿಡದೆ, ಕೂತಲ್ಲಿ ಕೂರಲು ಬಿಡದೆ ಎದೆಯ ನಡುವನ್ನಿಡಿದು ಹಿಂಡಿ ಬಿಟ್ಟಿದ್ದವು. ಅವಳ ಒಂದೊಂದು ವಸ್ತುಗಳು, ಅವಳು ಬಿಟ್ಟು ಹೋದ ಹೆಜ್ಜೆಗಳು, ಹಿಂದೆಂದಿಗಿಂತ ಹೆಚ್ಚು ಪ್ರಸ್ತುತವಾಗಿ, ಜಗದ ಕತ್ತಲೆಯೆಲ್ಲಾ ತನ್ನತ್ತಲೇ ಗುರಿಯಿಟ್ಟಿರುವಂತೆ ಅನಿಸಿ ತನ್ನಮ್ಮನ ಮಡಿಲಿನಲ್ಲಿ ಮತ್ತೆ ಮಗುವಾಗಿ ಬಿಟ್ಟಿದ್ದ. ತಿಂಗಳಿಗೇ ನವೆದು ನೂಲಿನಂತಾಗಿದ್ದ ಮಗನ ಮೈ ಪೂರಾ ತಡವುತ್ತಾ, ಕಣ್ಣೀರ ಒರೆಸುತ್ತಾ ಅವನ ಅಮ್ಮ ಅದೂ ಇದೂ ಹೇಳಿ ಸಂತೈಸುತ್ತಿದ್ದರೆ, ಅರೆ ಕಿವುಡ ಅಪ್ಪ ಮೌನವನ್ನೇ ಹಾಸಿ ಹೊದ್ದವನಂತೆ ಕಲ್ಲಾಗಿ ಬಿಟ್ಟಿದ್ದ. ಅಪ್ಪನ ಮೌನಕ್ಕಿಂತ ಸುಧಾಕರನನ್ನು ಹೆಚ್ಚು ಚಿಂತೆಗೀಡುಮಾಡಿದ್ದು, ಮನೆಗೆ ಬಂದಾಗಿನಿಂದ ಮಗನ ವರ್ತನೆ. ಅಮ್ಮ ಸತ್ತ ಅಷ್ಟೂ ದಿನಗಳಲ್ಲಿ ಒಮ್ಮೆಯೂ ಮಗನ ಅಂಥ ವರ್ತನೆಯನ್ನು ಕಂಡಿರದಿದ್ದ ಸುಧಾಕರ ನಿಜಕ್ಕೂ ಪಾತಾಳಕ್ಕಿಳಿದು ಹೋಗಿದ್ದ. ಹೆತ್ತಮ್ಮನನ್ನು ಮಣ್ಣು ಮಾಡುವ ಹೊತ್ತಿನಲ್ಲಿ ಕೂಡಾ ಸಿಕ್ಕ- ಸಿಕ್ಕಮಕ್ಕಳೊಡನೆ ನಗಾಡಿಕೊಂಡು ಆಟವಾಡುತ್ತಿದ್ದುದು, ಸುಧಾಕರನ ಎದೆಗೆ ಚೂರಿಯಿಂದ ಇರಿದು ಕೊಂಡ ಅನುಭವವವಾಗುತ್ತಿತ್ತು. ಕೊನೆಯ ಸರ್ತಿ ಅಮ್ಮನಿಗೆ ಪೂಜೆ ಮಾಡಲು ಬಂದಾಗ ನೆರೆದಿದ್ದ ಜನವೆಲ್ಲಾ ಗೋಳೋ ಅಂತ ಅಳುತ್ತಿದ್ದರೆ, ಅವನು ಮಾತ್ರ ಪೂಜೆ ಮುಗಿಯುತ್ತಲೇ ಮತ್ತೆ ಗೆಳೆಯರ ಗುಂಪಿನತ್ತ ಓಡಿಬಿಟ್ಟಿದ್ದ. ಅಯ್ಯೋ ನಿನ್ನ ಕೂಸಿಗೆ ಸಾವು ಕೂಡಾ ತಿಳಿಯುತ್ತಿಲ್ಲವಲ್ಲೇ ತಾಯೇ, ಅಂತ ಅಲ್ಲಿದ್ದ ತಾಯಂದಿರೆಲ್ಲಾ ಎದೆ ಬಿರಿಯುವಂತೆ ತಾರಕದಲ್ಲಿ ಸಂಕಟದ ಸೊಲ್ಲುಗಳನ್ನೆತ್ತಿ ಹಾಡಿದ್ದರು. ಮನೆಯೊಳಕ್ಕೆ ಹೆಜ್ಜೆ ಇಟ್ಟ ಕ್ಷಣದಿಂದ ಮಗ ಗರ ಬಡಿದಂತೆ ಕೂತು ಬಿಟ್ಟಿದ್ದ. ಆವತ್ತಿನವರೆಗೂ ಆಡಿರದಿದ್ದ ಕಣ್ಣೀರು ಅವನ ಕಣ್ಣಂಚುಗಳಲ್ಲಿ ಕೂತು ಇಣುಕತೊಡಗಿತ್ತು. ಆ ತುಂಬಿದ ಕಣ್ಣುಗಳಲ್ಲಿ ಇಡೀ ಮನೆಯನ್ನು ನಿಲುಕಿಸಿಕೊಳ್ಳುತ್ತಿದ್ದುದು, ಎಂಥ ಕಲ್ಲೆದೆಯನ್ನೂ ಕರಗಿಸಿಬಿಡುವಂತಿತ್ತು. ಮಗನ ಮೌನ, ಅವನೊಳಗೆ ದೀಡಾಗತೊಡಗಿದ್ದ ಸಂಕಟದ ತೀವ್ರತೆಯ ಅರಿವಾಗಿದ್ದೇ ತಡ ಸುಧಾಕರ ಅಮ್ಮನ ಮಡಿಲಿನಿಂದ ಎದ್ದವನೇ ಮಗನತ್ತ ಹೋಗಿದ್ದ. ಬಾಚಿ ತಬ್ಬಿ ಆಚೆ ಹೊರಟವನಿಗೆ ನಡುಮನೆಯ ಕನ್ನಡಿ ಎದುರಾಗಿ, ಅನಿವಾರ್ಯವೆಂಬಂತೆ ಅದನ್ನು ಇಣುಕಿದರೆ, ಅಲ್ಲಿ ಅದರೊಳಗೆ ಹೆಂಡತಿಯ ನಗು ಮೊಗದ ಬಿಂಬ ಕಂಡಂತಾಗಿ, ಇದೇನು ಕನಸೋ ನನಸೋ ಎಂಬುದೊಂದೂ ಅರಿಯದೆ ಗೊಂದಲಕ್ಕೊಳಗಾಗಿ, ಕೊರಳಿಗಾತಿದ್ದ ಮಗ ಉಲ್ಲಾಸನನ್ನು ಎತ್ತಿಕೊಂಡು ಆಚೆ ಬಂದಿದ್ದ. ಆ ಹೊತ್ತಿಗಾಗಲೇ ಮುಗಿಲಲ್ಲಿ ಚಂದ್ರನೂ ಮೂಡಿ ಚಂದದಿ ಆಡುತ್ತಿದ್ದ.

"ಸತ್ತೋರೆಲ್ಲಾ ಮತ್ತೆ ಮನೆಗೆ ಬರಲ್ಲವಂತೆ, ಅಲ್ಲೇ ಆಕಾಶದಾಗೆ ಚುಕ್ಕಿಗಳಾಗಿ ಅಲ್ಲಿಂದಲೇ ನಮ್ಮನ್ನೆಲ್ಲಾ ನೋಡ್ತಾರೇಂತ ಅಜ್ಜಿ ಹೇಳಿದ್ದು ನಿಜಾನಾ ಅಪ್ಪ?" ಅಳುವಿಗೆ ಅಲ್ಪ ವಿರಾಮ ಕೊಟ್ಟು ಅಪ್ಪನ ಗಲ್ಲ ಹಿಡಿದು ಕೇಳಿದ ಉಲ್ಲಾಸ.

"ಹೌದು ಕಂದ" ಮಗನ ತಲೆ ನೇವರಿಸುತ್ತಾ, ದಣಿದ ಮೈಯ್ಯನ್ನು ದಬ್ಬಾಡುತ್ತಿದ್ದ ದುಃಖದೊಳಗಿಂದಲೇ ಅಂದ ಸುಧಾಕರ.

"ಇಷ್ಟೊಂದು ಚುಕ್ಕಿಗಳೊಳಗೆ ಅಮ್ಮನ ಚುಕ್ಕಿ ಯಾವುದಪ್ಪ?" ಮಗ ಉಲ್ಲಾಸ ಮುಗಿಲಿಗೆ ಮುಖವಿಟ್ಟು, ಅಲ್ಲಿನ ಅಸಂಖ್ಯ ನಕ್ಷತ್ರಗಳೊಳಗೆ ತನ್ನ ಅಮ್ಮನದು ಯಾವುದೆಂದು ಹುಡುಕಲು ಯತ್ನಿಸಿ ಸೋತಂತೆ ಅಪ್ಪನನ್ನು ಕೇಳಿದ.

".................."

"ಹಂಗಾದ್ರೆ ಹೇಳಪ್ಪ ಅಮ್ಮಂಗೆ, ನಾನು ಇನ್ನು ಮೇಲೆ ಸರಿಯಾಗಿ ಊಟ ತಿಂಡಿ ತಿನ್ತೀನಿ, ಹೋಮ್ ವರ್ಕ್ ಮಾಡ್ತೀನಿ, ಯಾವುದಕ್ಕೂ ಹಠ ಮಾಡಲ್ಲ, ಅಂತ" ಅಪ್ಪನ ಮೌನ ಮಗುವಿನೊಳಗೆ ಅದಾವ ಭಾವವನ್ನು ನೆಟ್ಟಿತೋ ಮತ್ತೆ ತಾನೇ ಮಾತಾಡಿದ.

"ಆಯ್ತು ಹೇಳ್ತೀನಿ ಪುಟ್ಟ"

ಉಲ್ಲಾಸ ಮತ್ತೂ ಹತ್ತಿರಕ್ಕೆ ಬಂದು, ಕಣ್ಣೀರು ಇಳಿಯುತ್ತಿದ್ದ ಸುಧಾಕರನ ಕೆನ್ನೆಗೆ ಕೆನ್ನೆ ತಾಗಿಸಿಕೊಂಡು, ಹಾಗೇ ಎದೆಯತ್ತ ಜಾರಿ ಅವನ ಎದೆಯೊಳಗೆ ಮುಖವಿಕ್ಕಿ ಚಳಿಗೆ ಸುಂಟರಿಸಿಕೊಂಡ. "ಸಾರಿಕಾ ನಮ್ಮನ್ನೆಲ್ಲಾ ಅನಾಥ ಮಾಡಿ ಹೋಗಿ ಬಿಟ್ಯಲ್ಲೋ, ಯಾವ ಪಾಪ ಮಾಡಿದ್ವಿ ಮರಿ ನಾವು ಬದುಕಿಡೀ ನೀನಿಲ್ಲದೆ ಕಳೆಯೋಕೆ" ಎದೆಯ ಭಾವಗಳೆಲ್ಲಾ ಒಮ್ಮೆಲೇ ಚಿಮ್ಮಿದಂತೆ ಸುಧಾಕರನ ದುಃಖ ದುಮ್ಮಿಕ್ಕಿತು. ಅಪ್ಪನ ದುಃಖದ ಆವೇಗಕ್ಕೆ ಗಪ್ಪಾದ ಉಲ್ಲಾಸ ಮತ್ತೂ ಕುಗ್ಗಿ ಹಕ್ಕಿ ಮರಿಯಾದ.

ಅಯ್ಯೋ, ಈ ಲೋಕದ ಚಿಂತೆ ಎಂಬ ಸಂತೆಯೊಳಗೆ ನಿಮ್ಮಂತೆ ನಾನೂ ಅನಾಥನೇ, ಆದರೆ ಕೇಳಲು ಯಾರಿದ್ದಾರೆ ನನ್ನ ಅಳಲು ಎನ್ನುವಂತೆ, ಅವರಾಡುತ್ತಿದ್ದ ಮಾತುಗಳನ್ನೇ ಆವರೆವಿಗೂ ಆಲಿಸುತ್ತಿದ್ದಂತೆ ಪಕ್ಕದ ಮನೆಯ ಕಾಂಪೌಂಡಿನೊಳಗಿದ್ದ ಎರಡಾಳೆತ್ತರದ ಅಡಕೆ ಗಿಡದ ಮೇಲೊಂದು ಮರಿ ಗೂಬೆ ಕೂತು ಅವರತ್ತಲೇ ದೃಷ್ಟಿ ನೆಟ್ಟಿತ್ತು.

***

ಓದುವ ಕಾಲಕ್ಕೆ ಇಬ್ಬರೂ ಒಂದೇ ತರಗತಿಯಲ್ಲಿದ್ದರೂ ಎಂದೂ ಒಬ್ಬರನ್ನೊಬ್ಬರು ಮಾತನಾಡಿಸಿದವರಲ್ಲ. ಮುಂದೊಂದು ದಿನ ಬಾಳ ಬಂಡಿಯ ಚಕ್ರಗಳಾಗುತ್ತೇವೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಮದುವೆ ಆದ ಮೇಲೂ ಅಷ್ಟೆ, ಎಲ್ಲರಂತೆ ಲೆಕ್ಕ ಕೇಳಿದವಳಲ್ಲ. ನಾನು ಊರಿನವರ ಕಡೆ ಕೊಂಚ ಹೆಚ್ಚು ಧಾರಾಳವಾಗತೊಡಗಿದಾಗ ಸಣ್ಣದೊಂದು ಆತಂಕ ಅವಳೊಳಗಾಡುತಿದೆ ಅನಿಸಿದ ದಿನದಿಂದಲೇ, ಅವಳ ದುಡಿತದ ಚಿಕ್ಕಾಸನ್ನೂ ನಾನು ಬಯಸಲಿಲ್ಲ. ಅದ್ಯಾವುದೋ ದರಿದ್ರ ಕಾಲೇಜಿನ ಪಿರುಕ ಬುದ್ಧಿಯವನ ಕೈ ಕೆಳಗೆ ಒಲ್ಲದ ಮನಸ್ಸಿನಿಂದ ದುಡಿಯುತ್ತಿದ್ದ ಅವಳು ಯಾವತ್ತೂ ದುಡಿಮೆಯ ಫಲವನ್ನು ಖುಷಿಯಾಗಿ ಅನುಭವಿಸಲೇ ಇಲ್ಲ. ಚಿನ್ನದ ಬಗ್ಗೆ ಅಷ್ಟು ಒಲವಿರದಿದ್ದರೂ ಜೊತೆಗೆ ಕೆಲಸ

ಮಾಡುತ್ತಿದ್ದವರ ಭದ್ರತೆಯ ಮಾತಿಗೆ ಗಂಟು ಬಿದ್ದು ಅಗತ್ಯಕ್ಕಿಂತ ಹೆಚ್ಚು ಒಡವೆಗಳನ್ನು ಮಾಡಿಸಿಕೊಂಡಳೇ ಹೊರತು, ಅವುಗಳಲ್ಲಿ ಕೆಲವನ್ನು ಒಂದು ದಿನ ಕೂಡಾ ಹಾಕಿಕೊಳ್ಳದೆ ಹಾಗೇ ಹೋಗಿ ಬಿಟ್ಟಳು. ಆಕ್ಸಾಲಕ್ಕಾದರೂ ಒಂದು ದಿನ ಕೂಡಾ ಮಗನ ಮೇಲೆ ಕೈ ಮಾಡದ ಅವಳು, ಬಯಸಿ- ಬಯಸಿ ಹಡೆದ ಕಂದಮ್ಮನನ್ನು ಒಮ್ಮೆಯೂ ಕತ್ತೆತ್ತಿ ಕೂಡಾ ನೋಡಲಿಲ್ಲ.

ಅಷ್ಟಕ್ಕೂ ಎರಡನೆಯ ಮಗು ಬೇಡವೆಂದರೂ ಹೆಣ್ಣು ಪಾಪು ಬೇಕು ಅಂತ ಹಠಕ್ಕೆ ಬಿದ್ದದ್ದು ಅವಳೇ. ವಯಸ್ಸಾಗಲೇ ನಲವತ್ತರ ಹತ್ತಿರತ್ತಿರ ಇದ್ದುದರಿಂದ ಕಡೆಯ ಪಕ್ಷ ಒಳ್ಳೆಯ ಡಾಕ್ಟರಿಗೆ ತೋರಿಸೋಣವೆಂದರೂ ಹತ್ತಿರದ ಪರಿಚಯದವರೇ ಸಾಕೆಂದು ವಾದಿಸುತ್ತಾ ಗೆದ್ದದ್ದು ಅವಳೇ. ಮಗಳನ್ನೇನೋ ಹೆತ್ತಳು. ಆದರೆ ಅವಳೇ ಇಲ್ಲವಾದಳು. ಉದಾಸೀನದಿಂದಾಗಿ ಡಾಕ್ಟರ್ ಕೈಯ್ಯಾರೆ ಕೊಂದನೆಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿಯಾದರೂ, ಅವನ ವಿರುದ್ಧ ಚಕಾರವೆತ್ತದೆ ಎಲ್ಲರಂತೆ ಅವಳ ವಿಧಿಯನ್ನು ಹಳಿಯುತ್ತಾ, ಅವಳ ಆಯಸ್ಸೇ ಅಷ್ಟೆಂಬ ತೀರ್ಮಾನಕ್ಕೆ ಬಂದದ್ದು ನಿಜಕ್ಕೂ ಹೇಸಿಗೆ ಹುಟ್ಟಿಸುತ್ತಿದೆ. ಆ ಕ್ಷಣದಲ್ಲಿ ಅವಳ ಜೀವದ ಮುಂದೆ ಮತ್ತೆಲ್ಲವೂ ಏನೇನೂ ಆಗಿರಲಿಲ್ಲ, ಅಂತ ಅವರಿವರಿಗೆ ಸಮಜಾಯಿಸಿ ಕೊಟ್ಟರೂ ನನ್ನ ಒಳ ಮನಸ್ಸು ಮಾತ್ರ ಹೇಡಿತನಕ್ಕಾಗಿ ಅಣಕಿಸುತ್ತಿದೆ. ಸಮನಾಗಿ ದುಡಿಯುತ್ತಿದ್ದ ಅವಳು ಸಮನಾಗಿ ಬದುಕುವುದನ್ನು ಅಪರೂಪದ ಕನಸಿನಂತೆ ಕೊನೆಯ ಕ್ಷಣದವರೆಗೂ ಜತನದಿಂದ ಕಾಪಾಡಿಕೊಂಡು ಹಾಗೇ ಹೋಗಿ ಬಿಟ್ಟಳು. ತನಗಾಗಿ ಅನ್ನುವುದಕ್ಕಿಂತಲೂ ಗಂಡನಿಗಾಗಿ, ಮಗನಿಗಾಗಿ ಕಟ್ಟಬೇಕೆಂದಿದ್ದ ಮನೆಯ ಕನಸು ಅವಳೊಂದಿಗೆ ಅಳಿಸಿ ಹೋಯ್ತು. ಕ್ಷಣ ಕ್ಷಣಕೂ ಮನಸಿನ ಕಣ- ಕಣದಲೂ ಕುಳಿತು ಕಾಡುವ ಅವಳಿಲ್ಲದ ಬದುಕೊಂದನ್ನು ಬದುಕಬೇಕೆಂಬ ಆಳದ ನೋವಿಗಿಂತಲೂ ಘಾಸಿ ಮಾಡಿದ್ದು, ಅವಳ ಸಾವಿನ ನಂತರ ಅವಳ ಮನೆಯ ಕಡೆಯವರು ನಡೆದುಕೊಂಡ ರೀತಿ. ಹುಟ್ಟುತ್ತಲೇ ಅಮ್ಮನನ್ನು ತಿಂದುಕೊಂಡಿತು ಅನ್ನುವ ನೆಪವೊಡ್ಡಿ ಆಗಷ್ಟೇ ಕಣ್ಬಿಟ್ಟಿದ್ದ ಹಸುಗೂಸನ್ನು ಕೈಯ್ಯಿಂದ ಮುಟ್ಟಲೂ ಹಿಂಜರಿದದ್ದು, ಸಾವಾಗಿ ಇನ್ನೂ ವಾರ ಕಳೆಯುವ ಮುನ್ನವೇ ದುಡ್ಡು, ಒಡವೆಗಳ ವಿಚಾರದಲ್ಲಿ ತಕರಾರು ತೆಗೆದು ವಿನಾಕಾರಣ ಅನುಮಾನಿಸಿದ್ದು, ಮಾನವೀಯ ಸಂಬಂಧಗಳ ತಾಯಿ ಬೇರುಗಳನ್ನೇ ಹಿಡಿದು ಅಲುಗಿಸಿ ಬಿಟ್ಟಿದೆ. ಮಗ ಉಲ್ಲಾಸ ಅಕ್ಷರಶಃ ಅಮ್ಮನ ಮಗನೇ. ಅಮ್ಮ ಹೇಳಿದ್ದಕ್ಕೆಲ್ಲಾ ಹೂಂ ಅನ್ನುತ್ತಿದ್ದರೂ, ಊಟ ತಿಂಡಿ, ನಿದ್ದೆಯ ವಿಚಾರ ಬಂದಾಗ ಮಾತ್ರ, ಅಮ್ಮನಿಗೆ ದಿನಕ್ಕೊಂದು ಹೊಸ ಕಥೆಯ ಕರಾರಾಗಿ ಬಿಟ್ಟಿತ್ತು. ಇಂಥ ಈ ಕಂದ ಬದುಕಿಡೀ ಅಮ್ಮನ ಅಕ್ಕರೆಯ ಅಪ್ಪುಗೆಯಿಲ್ಲದೆ, ದಿನವೂ ನಿದ್ದೆಯ ಲೋಕಕ್ಕೆ ಎತ್ತಿ ಒಯ್ಯುವ ಅವಳ ಕಥೆಯಿಲ್ಲದೆ, ಅಯ್ಯೋ ದೇವರೇ......

***

ಹೀಗೆ ಸುಧಾಕರನ ದಣಿದ ಮನಸ್ಸನ್ನು ತಬ್ಬಿ ಹಿಡಿದ ಭೂತ ಕಾಲದ ನೆನಪಿನ ಹುತ್ತದಿಂದ ಥರಾವರಿ ನೆನಪುಗಳು ಮತ್ತೆ- ಮತ್ತೆ ಧುತ್ತನೆ ಎದ್ದು ಬಂದು ಬಕ್ಕಾ ಬಾರಲು ಬಾರಿಸತೊಡಗಿದವು. ಸುಧಾಕರನಿಗೆ ಕೂರುವುದು ಅಸಹನೀಯ ಅನಿಸಿ ಎದೆಗಾತು ಬಿದ್ದಿದ್ದ ಮಗ ಮಲಗಿರುವನೆಂದು ತಿಳಿದು, ಅವನಿಗೆ ಎಚ್ಚರವಾಗದ ರೀತಿಯಲ್ಲಿ ಮೆಲ್ಲಗೆ ಮೇಲೇಳಲು ಯತ್ನಿಸಿದ. ಅದಕ್ಕಾಗೆ ಕಾಯುತ್ತಿದ್ದವನಂತೆ ಮಗ, ಅಪ್ಪಾ ಅಂದ. ಆಗಷ್ಟೇ ಹುಟ್ಟಿದಂತಿದ್ದ ಚಂದ್ರ ಆಗಲೇ ನೆತ್ತಿಯ ಮೇಲಕ್ಕೆ ಬಂದಿದ್ದ. ದೂರದಲ್ಲಿ ಆಗೊಂದು ಈಗೊಂದು ವಾಹನಗಳ ಸದ್ದು ಬಿಟ್ಟರೆ, ಮತ್ತೆಲ್ಲದೂ ತಂಗಾಳಿಯದೇ ಕಾರುಬಾರು ನಡೆದಿತ್ತು.

"ನಿನಗಿನ್ನೂ ನಿದ್ದೆ ಬಂದಿಲ್ಲವ ಮಗನೆ?"

"ತಂಗಿ ಹುಟ್ಟಿದ್ರೆ ಮನೆಗೆ ಬರಬೇಡ ಅಂತ ಅಮ್ಮಂಗೆ ಅಂದದ್ದು ಬೇಕೂಂತ ಅಲ್ಲ ಅಪ್ಪ? ತಮ್ಮ ಆದ್ರೆ ಆಟ ಆಡ್ಬಹ್ದು ಅಂತ ಹಂಗಂದಿದ್ದೆ, ತಪ್ಪಾಯ್ತಪ್ಪ" ಮಗನ ಮಾತಿಗೆ ಏನೆಂದು ಉತ್ತರಿಸಬೇಕೆಂದು ತಿಳಿಯದ ಸುಧಾಕರ ಮಗನನ್ನು ಎತ್ತ್ತಿಕೊಂಡು ಮೆಲ್ಲಗೆ ಮೇಲೆದ್ದು ನಿಂತು ಸುತ್ತಲೂ ನೋಡಿದ. ಅವತ್ತು ಆಸ್ಪತ್ರೆಗೆ ಹೋಗುವಾಗ ಸ್ಕೂಲಿಗೆ ಹೊರಟು ನಿಂತಿದ್ದ ಉಲ್ಲಾಸ ಸಾರಿಕಾಳ ಸೆರಗಿಡಿದುಕೊಂಡು, "ನೀನು ತಂಗಿಯನ್ನ ತರೋದಾದ್ರೆ ತಿರುಗಿ ಮನೆಗೆ ಬರಬೇಡ, ನನಗೆ ತಮ್ಮ ಬೇಕು" ಅಂದದ್ದೇ ನಿಜವಾದಂತೆ ಅವಳು ತಿರುಗಿ ಬರಲೇ ಇಲ್ಲ, ಯೋಚಿಸಿದಂತೆಲ್ಲಾ ತಲೆ ಸುತ್ತಿ ಬಂದಂತಾಯ್ತು ಸುಧಾಕರನಿಗೆ. ನಿಂತಲ್ಲೇ ಕೊಂಚ ಹೊತ್ತು ನಿಂತ. ಆಚೆ ಮನೆಯ ಟೆರೇಸಿನ ಮೇಲೆ ಮಕ್ಕಳ ಹಿಂಡೊಂದನ್ನು ಕೂರಿಸಿಕೊಂಡು ಅಜ್ಜಿಯೊಂದು ಹೇಳಿಕೊಡುತ್ತಿದ್ದ ಅವಲಕ್ಕಿ- ಪವಲಕ್ಕಿ ಆಟದ ಪ್ರಾಸಗಳು ತಂಗಾಳಿಯ ಪಿಸು ಮಾತಿನಂತೆ ತೇಲಿ ಬರುತ್ತಿದ್ದವು.

"ಅಮ್ಮನ್ನ ನೋಡಾಕೆ ಹೋಗಾಕೆ ಆಗಲ್ವ ಅಪ್ಪ?" ಮಗನ ಪ್ರಶ್ನೆ ಟೆರೇಸಿನ ಮೆಟ್ಟಿಲುಗಳನ್ನಿಳಿಯುತ್ತಿದ್ದ ಸುಧಾಕರನ ಮನಸ್ಸಿಗೆ ಇನ್ನಿಲ್ಲದಂತೆ ನಾಟಿ, ಅವನ ತಲೆ ಕೂದಲೊಳಗೆ ಬೆರಳುಗಳನ್ನಾಡಿಸುತ್ತಾ ನಿಂತಲ್ಲೇ ನಿಂತು ಬಿಟ್ಟ.

"ಯಾವಾಗ ಹೋಗಾನ ಹೇಳಪ್ಪ?"

ಅಪ್ಪನ ಮೌನಕ್ಕೆ ಮಾತು ಮೂಡಿಸುವ ಸಲುವಾಗಿ ಎಂಬಂತೆ ಮತ್ತೆ ಕೇಳಿದ.

"ಹೋಗಾನಾ ಪುಟ್ಟಾ" ಇನ್ನೇನು ಆಗಲೋ- ಈಗಲೋ ಮಗನ ಅಳುವಿನ ಕೋಡಿಯೊಡದೇ ಬಿಡುತ್ತೆ ಅನ್ನುವುದನ್ನರಿತ ಸುಧಾಕರ ಮೌನ ಮುರಿದು ಅಂದ.

"ಪುಟ್ಟಿ ಹುಟ್ಟಿದಾಗ ಅಮ್ಮ ಅವಳ ಮುಖಾನೇ ನೋಡಲಿಲ್ಲವಂತೆ, ಅಂತ ಮಾತಾಡ್ಕಂತಾ ಇದ್ರು, ನಿಜವೇನಪ್ಪ. ಹಂಗಾದ್ರೆ ನಾನು ಹಂಗಂದಿದ್ದಕ್ಕೆ ಅಮ್ಮ ಹಂಗೆ ಮಾಡ್ತ?"

"ಇಲ್ಲಾ ಕಂದ, ಇಲ್ಲಾ ಮಗನೆ"

"ಹಂಗಾರೆ ಪುಟ್ಟೀನ ಕಂಡ್ರೆ ಅಮ್ಮನಿಗೆ ಬೇಜಾರಿಲ್ಲ, ಅಲ್ವೇನಪ್ಪಾ?"

ಮಗನ ಮಾತುಗಳು ಮುಗಿಯುವ ಹೊತ್ತಿಗೆ ಸುಧಾಕರ ಮಹಡಿಯ ಮೆಟ್ಟಿಲುಗಳನ್ನಿಳಿದು ಅರೆ ತೆರೆದಿದ್ದ ಬಾಗಿಲನ್ನು ದೂಡಿ ನಡು ಮನೆಯಲ್ಲಿದ್ದ.

ಸುಧಾಕರನ ಮನಸ್ಸು ಮತ್ತೆ ಕನ್ನಡಿಯತ್ತ ಎಳೆಯಿತು. ಆದರೆ ನೋಡುವ ಧೈರ್ಯವಾಗದೆ ಅಡುಗೆ ಮನೆಯತ್ತ ಹೆಜ್ಜೆ ಹಾಕತೊಡಗಿದಾಗ, "ಅಪ್ಪ ಅಲ್ಲಿ ನೋಡು ಅಮ್ಮನ ಹಣೆ ಬೊಟ್ಟು ಕನ್ನಡಿಯಲ್ಲಿ" ಹೆಗಲ ಮೇಲಿದ್ದ ಉಲ್ಲಾಸ ಅಲುಗಿಸಿ ಹೇಳಿದ ಮಾತುಗಳಿಗೆ ಸುಧಾಕರ ಕಲ್ಲಾಗಿದ್ದ.

ತುತ್ತು ತಿನ್ನುವಾಗಲೇ ಹತ್ತ ತೊಡಗಿದ ನಿದ್ದೆಯನ್ನು ಹತ್ತಿಕ್ಕಲಾಗದೆ, ಉಲ್ಲಾಸ ಅಪ್ಪನ ಶರ್ಟಿನ ಗುಂಡಿಗಾಗಿ ತಡಕಾಡಿದ. ಅವನಿಗದೊಂದು ರೂಢಿ. ಮಲಗುವ ಹೊತ್ತಲ್ಲಿ ಅಪ್ಪ ಇದ್ದರೆ ಅಪ್ಪನ ಶರ್ಟಿನ ಗುಂಡಿಯನ್ನು, ಅಮ್ಮ ಇದ್ದರೆ ಅಮ್ಮನ ನೈಟಿಯ ಗುಂಡಿಗಾಗಿ ತಡಕಾಡಿದನೆಂದರೆ, ಅವನಿಗೆ ನಿದ್ದೆ ಒತ್ತಿ ಬರುತ್ತಿದೆ ಅನ್ನುವುದರ ಸಂಕೇತ. ಇವನ ಇಂಥ ರೂಢಿಯನ್ನೇ ನೆಪಮಾಡಿಕೊಂಡು ಅದೆಷ್ಟು ನಾವು ಯಾವುದ್ಯಾವುದಕ್ಕೊ ಹೋಲಿಸಿಕೊಂಡು ನಕ್ಕಿದ್ದೆವು. ಸುಧಾಕರ ನೆನಪು ಮಾಡಿಕೊಂಡ.

"ಪಾಪು ಬಂದ ಮೇಲೆ ರಾಯರಿಗೆ ಈ ರೂಮಿನಲ್ಲಿ ಜಾಗವಿಲ್ಲ" ಇತ್ತೀಚೆಗೆ ಸಾರಿಕಾ ಆಗಾಗ ಛೇಡಿಸುತ್ತಿದ್ದ ಮಾತುಗಳು ಸುಧಾಕರ ರೂಮಿಗೆ ಹೆಜ್ಜೆ ಇಡುತ್ತಿದ್ದಂತೆ ಮರುದನಿಸಿದವು.

ಹಗಲಿನ ನೆನಪುಗಳಿಗಿಂತ ರಾತ್ರಿಯ ನೆನಪುಗಳು ಬಲು ಭೀಕರ ಅನಿಸತೊಡಗಿದವು ಸುಧಾಕರನಿಗೆ. ಅದು ಮದುವೆಯಾದ ಹತ್ತು ವರ್ಷಗಳಲ್ಲಿ ಸುಧಾಕರ ಅವಳಿಲ್ಲದ ಆ ಮನೆಯಲ್ಲಿ ಕಳೆಯುತ್ತಿರುವ ಮೊದಲ ಇರುಳು. ಅವತ್ತು ಅವಳು ಆಸ್ಪತ್ರೆಗೆ ಹೋಗುವಾಗ ಕಳಚಿಟ್ಟಿದ್ದ ವಾಚು ಹಾಗೇ ದಿಂಬಿನ ಪಕ್ಕದಲ್ಲೇ ಇದೆ. ಕಿಟಕಿಯ ದಿಂಡಿನ ಮೇಲೆ ಕುಡಿಯಲೆಂದು ಇಟ್ಟಿದ್ದ ನೀರಿನ ಬಾಟಲು ಇನ್ನೂ ಅಲ್ಲೇ ಇದೆ. ಹಿಂದಿನ ದಿನ ಮೌಲ್ಯಮಾಪನ ಮಾಡುತ್ತಿದ್ದ ಉತ್ತರ ಪತ್ರಿಕೆಗಳು ಹಾಸಿಗೆಯ ಒಂದು ಬದಿಯಲ್ಲಿ ಚದುರಿ ಬಿದ್ದಿವೆ. ಹೆಂಡತಿ ಮಲಗುತ್ತಿದ್ದ ಜಾಗ ಮಾತ್ರ ಖಾಲಿ- ಖಾಲಿ. ಸುಧಾಕರನೊಳಗೆ ಸಂಕಟದ ಸುಂಟರಗಾಳಿ ಎದ್ದಾಡಿತು. ಅಪ್ಪ ಅವತ್ತಿನಿಂದಲೂ ಮನೆ ಬದಲಾಯಿಸಿ ಬಿಡು ಮಗ ಅಂತ ಅನ್ನುವ ಮಾತುಗಳ ಮರ್ಮದ ಅರಿವಾಗಹತ್ತಿತು. ಇದ್ದರೆ ಅವಳಿದ್ದ ಮನೆಯಲ್ಲೇ ಬದುಕಬೇಕು, ಅಲ್ಲಿಂದ ಹೋದರೆ ಅವಳ ನೆನಪು ಮಸುಕಾಗಿ ಅವಳಿಗೆ ದ್ರೋಹ ಬಗೆದಂತಾಗಿ ಬಿಡುತ್ತೆ, ಅಂತ ಗಟ್ಟಿ ನಿರ್ಧಾರಕ್ಕೆ ಬಂದಿದ್ದ ಸುಧಾಕರನ ಮನಸ್ಸು ಯಾಕೋ ಇದ್ದಕ್ಕಿದ್ದಂತೆ ಹಳುಪುರಿ ಹೊಸೆಯ ಹತ್ತಿತು.

ಎಂದಿನಂತೆ ಅಂದು ಕಥೆ ಹೇಳು ಅಂತ ಕಾಡದ ಉಲ್ಲಾಸನನ್ನು ಆಗಲೇ ಚಿನ್ನದ ನಿದ್ದೆ ಎತ್ತಾಕಿಕೊಂಡು ಹೋಗಿತ್ತು. ಅಂಗಾತ ಮಲಗಿದ್ದ ಸುಧಾಕರ ಅವನನ್ನು ಎದೆಯ ಮೇಲೆ ಮಲಗಿಸಿಕೊಂಡಿದ್ದ. ಅವನ ಕೈ ಸುಧಾಕರನ ಶರ್ಟಿನ ಗುಂಡಿಯಿಂದ ಜಾರಿ ಹಾಸಿಗೆಯ ಮೇಲೆ ಬಿದ್ದಿತ್ತು. ಮನೆಯಂಥ ಮನೆಯೆಲ್ಲಾ ಮೌನದ ಕುಪ್ಪೆಯಾಗಿತ್ತು. ಹಾಗಾಗಿಯೇ ಉಲ್ಲಾಸನ ಎದೆ ಬಡಿತದ ಸದ್ದೂ ಸುಧಾಕರನಿಗೆ ಸಲೀಸಾಗಿ ಕೇಳುತ್ತಿತ್ತು. ಹಾಗಿರುವಾಗ ಅಂಥ ಕುಪ್ಪೆಯ ಕಂದಮ್ಮನ ತೊದಲು ನುಡಿಗಳಂತೆ, "ಕಟ್ಟಿದ ಗೂಡನ್ನು ಬಿಚ್ಚಿ ಒದರಿ ಬಿಟ್ಟೆಯಾ ಶಿವನೇ, ಬೆಳಿಯೋ ಬಳ್ಳಿಯ ಕುಡಿ ಚಿವುಟಿ ಬಿಟ್ಯಲ್ಲೋ", ಅಮ್ಮನ ಮಾತುಗಳು ನಡುಮನೆಯ ನಿಟ್ಟುಸಿರಾಗಿದ್ದರೆ, "ಸೊಸೆ ಸತ್ತರೆ ಮಗನಿಗೆ ಸೋಬ್ನ, ಮಗ ಸತ್ತರೆ ಮನೆಯೇ ಭಗ್ನ ಅಂತ ಮಾತು ಕೇಳಿಲ್ವ, ಏನೇನು ಆಗ್ಬೇಕು ಅಂತ ಇತ್ತೋ ಅದೆಲ್ಲಾ ಆಗಿ ಹೋಯ್ತು, ಇನ್ನು ಮುಂದೆ ಆಗ್ಬೇಕಾದ್ದರ ಬಗ್ಗೆ ಯೋಚಿಸಬೇಕು ಕಣವ್ವ..." ಅಪ್ಪನ ಸಾಂತ್ವನದ ಮಾತುಗಳು ಅನಾಮತ್ತು ಸುಧಾಕರನ ಎದೆಯೊಳಕ್ಕೇ ಧುಮ್ಮಿಕ್ಕಹತ್ತಿದ್ದರಿಂದಾಗಿ, ಅವನ ಕಣ್ಣುಗಳನ್ನು ಮಾಂತ್ರಿಕ ಸ್ಪರ್ಶದಿಂದ ಸವರಲೆಂದು ತುಂಬಾ ಹೊತ್ತಿನಿಂದಲೂ ಹೊಂಚು ಹಾಕುತ್ತಲೇ ಇದ್ದ ನಿದ್ರಾದೇವಿ ಮತ್ತೂ ಅದೆಷ್ಟೋ ಹೊತ್ತು ಕಾಯಬೇಕಾಗಿ ಬಂತು. ಮನೆಗೆ ಮತ್ತೆ ಮೌನದ ಗರ ಬಡಿಯಿತು. ಹೊತ್ತು ಕೂಡಾ ಅದಕ್ಕೇ ಕತ್ತು ಹಾಕಿತು.

***

"ನನಗೆ ತಂಗೀನೂ ಬೇಕು, ನೀನೂ ಬೇಕು

ಬೇಗ ಬಾರಮ್ಮ..."

ನಿದ್ದೆಯಲ್ಲಿ ಮಗು ಕನವರಿಸುತ್ತಿತ್ತು. ಅದು ಮಕಾಡೆ ಬಿದ್ದಿದ್ದ ಮೌನದ ಎದೆಯನ್ನೂ

ಇರಿಯುವಂತಿತ್ತು.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .