|
|
ಪ್ರಸೂನ್ ಮಜುಂದಾರ್ |
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್
|
ಚೀನಾದ ನಕಲಿ ಔಷಧ ಜಾಲ ಪ್ರಕರಣ
ಮಾಧ್ಯಮಗಳಲ್ಲಿ ಭಾರಿ ಸುದ್ದಿಗೆ ಗ್ರಾಸವಾಗುತ್ತಿದೆ. ಚೀನಾದ ಕಂಪನಿಗಳು
ತಮ್ಮ ನಕಲಿ ಔಷಧಗಳಿಗೆ 'ಮೇಡ್ ಇನ್ ಇಂಡಿಯಾ' ಎಂಬ ಹಣೆಪಟ್ಟಿ ಹಚ್ಚಿ
ಆಫ್ರಿಕಾ ಉಪಖಂಡಗಳಲ್ಲಿ ಮಾರಾಟ ಮಾಡುತ್ತಿರುವ ವಿಚಾರ ವ್ಯಾಪಕ ಚರ್ಚೆಗೆ
ಗುರಿಯಾಗಿದೆ. ನೈಜೀರಿಯಾದ ಔಷಧ ನಿಯಂತ್ರಣ ಘಟಕ 'ಮೇಡ್ ಇನ್ ಇಂಡಿಯಾ'
ಹಣೆಪಟ್ಟಿ ಹೊಂದಿದ್ದ ಮಲೇರಿಯಾ ನಿಯಂತ್ರಕ ಔಷಧಗಳ ದೊಡ್ಡ ದಾಸ್ತಾನೊಂದನ್ನು
ಪತ್ತೆಹಚ್ಚಿ ಅದು ನಕಲಿ ಎಂದು ಸಾರಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಆದರೆ ಈ ಔಷಧಗಳು ಭಾರತದ ಬದಲಾಗಿ ಚೀನಾದಲ್ಲಿ ತಯಾರಾಗಿದ್ದವು. ಭಾರತದ ಮಾನ
ತೆಗೆಯುವಂಥ ಚೀನಾದ ದುರುದ್ದೇಶ ನಮ್ಮ ಅಧಿಕಾರಶಾಹಿ ವಲಯದಲ್ಲಿ ತೀವ್ರ
ಅಸಮಾಧಾನವನ್ನೂ ಹುಟ್ಟುಹಾಕಿತ್ತು. ವಿಪರ್ಯಾಸವೆಂದರೆ ಇದೇ ಅಧಿಕಾರಶಾಹಿ,
ನಮ್ಮ ಆಂತರಿಕ ಮಾರುಕಟ್ಟೆಯಲ್ಲಿ ಅಕ್ಷರಶಃ ರುದ್ರತಾಂಡವವಾಡುತ್ತಿರುವ ನಕಲಿ
ಔಷಧಗಳ ಕುರಿತು ಚಕಾರವೆತ್ತಿಲ್ಲ.
ಭಾರತದ ಆಂತರಿಕ ಮಾರುಕಟ್ಟೆಯಲ್ಲಿ
ಚಾಲ್ತಿಯಲ್ಲಿರುವ ನಕಲಿ ಔಷಧ ಜಾಲ ಸುಮಾರು 400 ಬಿಲಿಯನ್ ವಹಿವಾಟಿನ
ಉದ್ಯಮ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಭಾರತ ಕಾನೂನುಬದ್ಧವಾದ ಜಾಗತಿಕ
ಔಷಧ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ ಪೇಟೆಂಟ್ ಹೊಂದಿರುವ ಔಷಧ
ಮಾರಾಟ ಮಾಡುವಂತಹ ಪ್ರಮುಖ ರಾಷ್ಟ್ರಗಳಲ್ಲೊಂದು. ಆದರೆ ಈ
ಹೆಗ್ಗಳಿಕೆಯೊಂದಿಗೆ, ಜಾಗತಿಕವಾಗಿ ಹಬ್ಬಿರುವ ನಕಲಿ ಔಷಧ ಜಾಲದಲ್ಲೂ
ಭಾರತದ ಪಾಲಿದೆ ಎಂಬುದು ದುರಂತ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ
ಸಂಸ್ಥೆ (ಓಇಸಿಡಿ) ಹೊರತಂದಿರುವ ವರದಿಯನ್ವಯ, ವಿಶ್ವದಾದ್ಯಂತ
ಪೂರೈಕೆಯಾಗುವ ಶೇ. 75ರಷ್ಟು ನಕಲಿ ಔಷಧಗಳ ಮೂಲ ಭಾರತ. ಅಸ್ಸೋಚಾಮ್ (ಎಎಸ್‌ಎಸ್‌ಓಸಿಎಚ್‌ಎಎಮ್)
ನಡೆಸಿದ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಮಾರಾಟವಾಗುವ ಶೇ. 20ರಷ್ಟು
ಔಷಧಿಗಳು ನಕಲಿ! ಇನ್ನೂ ಅಚ್ಚರಿ ಹುಟ್ಟಿಸುವ ವಿಚಾರವೆಂದರೆ ಸರ್ಕಾರಿ
ಆಸ್ಪತ್ರೆಗಳಲ್ಲಿ ಲಭ್ಯವಿರುವ ಶೇ. 38ರಷ್ಟು ಔಷಧಿಗಳೂ ನಕಲಿ!
ಕ್ಷಣ ಮಾತ್ರದಲ್ಲಿ ಅಪಾರ ಹಣ ಗಳಿಸುವ
ಮಾರ್ಗವಾಗಿರುವುದರಿಂದ ಇದೊಂದು ಆಕರ್ಷಣೀಯ ಉದ್ಯಮ. ಇದೇ ಕಾರಣಕ್ಕೆ
ಕೆಮಿಸ್ಟ್‌ಗಳು, ಆಗಷ್ಟೇ ಔಷಧ ಉದ್ಯಮಕ್ಕೆ ಕಾಲಿಟ್ಟ ಔಷಧೋತ್ಪನ್ನ ತಯಾರಕರು
ಈ ಕಾನೂನುಬಾಹಿರ ಕೃತ್ಯದಲ್ಲಿ ತೊಡಗುತ್ತಾರೆ. ನಕಲಿ ಔಷಧಗಳನ್ನು ಅತ್ಯಂತ
ಕಡಿಮೆ ಖರ್ಚಿನಲ್ಲಿ ಉತ್ಪಾದಿಸಲು ಸಾಧ್ಯವಾಗುವುದರಿಂದ ಅವುಗಳಿಗೆ
ಗ್ರಾಹಕರನ್ನು ಹುಡುಕುವುದು ಅಷ್ಟೇನೂ ಕಷ್ಟವಲ್ಲ. ಯಾವುದೇ ದೇಶದ
ಆರ್ಥಿಕವಾಗಿ ಹಿಂದುಳಿದ ವರ್ಗ ಈ ಜಾಲದ ಸುಲಭ ಬಲಿಪಶು. ಏಕೆಂದರೆ,
ಮೊದಲನೆಯದಾಗಿ ಅವರಿಗೆ ಈ ನಕಲಿ ಔಷಧಗಳ ದುಷ್ಪರಿಣಾಮಗಳ ಬಗ್ಗೆ
ತಿಳಿದಿರುವುದಿಲ್ಲ. ಎರಡನೆಯದಾಗಿ, ಅವರಲ್ಲಿ ದುಬಾರಿ ವೆಚ್ಚದ ಸೂಕ್ತ
ಔಷಧಿಗಳನ್ನು ಕೊಳ್ಳುವ ಸಾಮರ್ಥ್ಯವಿರುವುದಿಲ್ಲ.
ನಕಲಿ ಔಷಧಗಳು ಆರ್ಥಿಕವಾಗಿ
ದುರ್ಬಲವಾಗಿರುವ ಬಡವರ್ಗಕ್ಕೆ ಮಾತ್ರ ಪ್ರಾಣಾಂತಿಕವಾಗಿಲ್ಲ. ಬದಲಿಗೆ
ಎಲ್ಲಾ ಸೌಲಭ್ಯಗಳಿದ್ದು, ಅತ್ಯುತ್ತಮ ಆರೋಗ್ಯ ಸೇವೆಯನ್ನು ಪಡೆಯುವ
ಸಾಮರ್ಥ್ಯವಿರುವ ವರ್ಗಕ್ಕೂ ಇದು ಹೆಮ್ಮಾರಿಯಾಗಿ ಪರಿಣಮಿಸಿದೆ. ಏಕೆಂದರೆ
ತಾವು ತೆಗೆದುಕೊಳ್ಳುತ್ತಿರುವ ಔಷಧ ಅಸಲಿಯೋ ಅಥವಾ ನಕಲಿಯೋ ಎಂಬುದರ ಜ್ಞಾನ
ರೋಗಿಗಳಿಗಿಲ್ಲದಿರುವುದು. ಈಗ ನಕಲಿ ಔಷಧ ಉದ್ಯಮ ಬೆಳೆಯುತ್ತಿರುವ
ವೇಗವನ್ನು ಗಮನಿಸಿದರೆ ಮುಂದೊಂದು ದಿನ ಸಂಪೂರ್ಣ ಮಾರುಕಟ್ಟೆಯೇ
ನಕಲಿಗಳಿಂದ ತುಂಬಿ ಹೋಗಬಹುದು. ಈಗ ರಾಜ್ಯ ಮತ್ತು ಕೇಂದ್ರದಲ್ಲಿರುವ ಔಷಧ
ನಿಯಂತ್ರಣ ವ್ಯವಸ್ಥೆ ಅಷ್ಟೊಂದು ಸಮರ್ಪಕವಾಗಿಲ್ಲ. ಇಷ್ಟೊಂದು ವ್ಯಾಪಕವಾಗಿ
ನಕಲಿ ಔಷಧ ಜಾಲ ಹರಡಿದ್ದರೂ ಕೆಲವೇ ಕೆಲವು ರಾಜ್ಯಗಳಷ್ಟೇ ಔಷಧ ಪರೀಕ್ಷೆಗೆ
ಪ್ರಯೋಗಾಲಯಗಳನ್ನು ಸ್ಥಾಪಿಸಿವೆ. 1982ರಲ್ಲಿ ಡ್ರಗ್ ಆಂಡ್ ಕಾಸ್ಮೆಟಿಕ್ಸ್
ಕಾನೂನನ್ನು ಜಾರಿಗೆ ತಂದ ಬಳಿಕ ಈವರೆಗೂ ಒಂದೇ ಒಂದು ನಕಲಿ ಔಷಧ ಪತ್ತೆ
ಪ್ರಕರಣಗಳಿಗೆ ಗಮನಾರ್ಹ ಎನ್ನುವಂತಹ ಶಿಕ್ಷೆಯಾಗಿಲ್ಲ. ಕೆಲವು ಅಸಲಿ ಔಷಧ
ಕಂಪನಿಗಳೇ ಸ್ವಂತ ಆಸಕ್ತಿಯಿಂದ ತಮ್ಮ ವಿತರಣಾ ಜಾಲಗಳನ್ನು ಆಗಿಂದಾಗ್ಗೆ
ಪರಿಶೀಲಿಸುತ್ತಿರುತ್ತವೆ. ಈ ಅಕ್ರಮ ತಡೆಯಬೇಕಾದರೆ ಎಲ್ಲಾ ಹಂತಗಳಲ್ಲೂ
ಗುಣಮಟ್ಟ ಪರೀಕ್ಷಿಸುವ ಪದ್ಧತಿಯನ್ನು ಮತ್ತೆ ಅಳವಡಿಸಿಕೊಳ್ಳಬೇಕು.
ಈಗ ಚೀನಾ ಮಾಡಿರುವ ತಪ್ಪನ್ನು ಯಾವುದೇ
ರೀತಿಯಿಂದಲೂ ಒಪ್ಪಿಕೊಳ್ಳಲಾಗದು. ಆದರೆ ಇದನ್ನೇ ಸೂಕ್ತ
ಸಂದರ್ಭವನ್ನಾಗಿಸಿಕೊಂಡು ಭಾರತ ಆಂತರಿಕ ಮಾರುಕಟ್ಟೆಯಲ್ಲಿ ಹರಡಿರುವ ನಕಲಿ
ಔಷಧ ಜಾಲವನ್ನು ಮಟ್ಟ ಹಾಕಬೇಕಿದೆ. ಯಾವ ರೀತಿಯಿಂದ ನೋಡಿದರೂ ಈ ನಕಲಿ ಔಷಧ
ಜಾಲ ಸಮಾಜದ ದಾರಿ ತಪ್ಪಿಸುತ್ತಿರುವುದಂತೂ ನಿಜ. ಆರೋಗ್ಯ ರಕ್ಷಣೆಯ
ವಿಷಯಕ್ಕೆ ಸಂಬಂಧಿಸಿದಾಗ
ಅದೊಂದು ಕ್ಷಮಿಸಲಾರದ ಅಪರಾಧವೂ ಹೌದು. ಈ
ಹಿನ್ನೆಲೆಯಲ್ಲಿ ಔಷಧ ನಿಯಂತ್ರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು
ಈಗಿನ ತುರ್ತು.
ಐಐಪಿಎಂ
'ಥಿಂಕ್ ಟ್ಯಾಂಕ್'
|