User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಪ್ರತಿಧ್ವನಿ
ಓದುಗರ ಪತ್ರ
 

ಕಂಪನಿಗಳಿಗೆ ಹಣ ಮುಖ್ಯ, ಜನರಲ್ಲ...

'ಜಲಯುದ್ಧ' (ಸತೀಶ್ ಚಪ್ಪರಿಕೆ) ಮುಖಪುಟ ಲೇಖನ ಆಡಳಿತ ವ್ಯವಸ್ಥೆಯ ಬೇಜವಾಬ್ದಾರಿ ನೀರು ವಿತರಣೆ ನಿರ್ವಹಣೆಯ ಯಥಾವತ್ ಚಿತ್ರಣ ನೀಡಿದೆ. ಸರ್ಕಾರದ ಅಸಡ್ಡೆ ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸುವ ಸಾಧ್ಯತೆ ಇದೆ. ನಮ್ಮ ರಾಜ್ಯ ಸರ್ಕಾರ ಈಗಾಗಲೇ ಮೂರು ನಗರಗಳ ನೀರು ಪೂರೈಕೆ ನಿರ್ವಹಣೆಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ವಹಿಸಿಕೊಟ್ಟಿದೆ. ಹಂತ-ಹಂತವಾಗಿ ನೀರಿನ ಮೇಲಿನ ಹಕ್ಕು ಬಿಟ್ಟುಕೊಡಬೇಕಾಗುವ ಸ್ಥಿತಿ ಎದುರಾಗಿದೆ ಎಂಬುವುದಕ್ಕೆ ಇದು ನಿದರ್ಶನ. ಆದರೆ ನಮ್ಮ ಆಡಳಿತಗಾರರಿಗೆ ಈ ಅರಿವು ಇದ್ದಂತಿಲ್ಲ! 40 ವರುಷಗಳ ಹಿಂದೆ ಅಮೆರಿಕದ ಕೊಚಬಾಂಬ ಗ್ರಾಮದ ನೀರಿನ ನಿರ್ವಹಣೆ ಗುತ್ತಿಗೆಯನ್ನು ಫ್ರಾನ್ಸ್ ಮೂಲದ ಕಂಪನಿಗೆ ವಹಿಸಿಕೊಡಲಾಗಿತ್ತು. ಅಲ್ಲಿಯ ಪ್ರಜೆಗಳು ಸರ್ಕಾರದ ನೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿರುವುದು ಇದೀಗ ಇತಿಹಾಸ. ಬಹುರಾಷ್ಟ್ರೀಯ ಕಂಪನಿಗಳಿಗೆ ಜನರ ಬದುಕಿಗಿಂತ ಹಣವೇ ಮುಖ್ಯ ಎನ್ನುವ ಸಂಗತಿ ಅರ್ಥಮಾಡಿಕೊಳ್ಳುವ ವಿವೇಚನೆ ಸರ್ಕಾರಕ್ಕಿಲ್ಲವೇ?

ರೇ.ಚ. ರೇವಡಿಗಾರ
ಸಿಂದಗಿ

ಖಾಸಗೀಕರಣ ಖಂಡನೀಯ

ಉತ್ತಮ ಮುಖಪುಟ ಲೇಖನ ಒದಗಿಸಿದ ಟಿಎಸ್ಐಗೆ ಧನ್ಯವಾದ. ನೀರಿನ ಖಾಸಗೀಕರಣದಂಥ ಗಂಭೀರ ವಿಚಾರಗಳು ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುವುದೇ ಇಲ್ಲ. ಆದರೆ ಸಮಗ್ರ ಮಾಹಿತಿಯೊಂದಿಗೆ ಟಿಎಸ್ಐ ಹೊರತಂದ ಅದ್ಭುತ ಲೇಖನ ಸಮಾಜ-ಸರ್ಕಾರದ ಕಣ್ತೆರೆಸುವಂತಿದೆ. ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಖಾಸಗೀಕರಣ ಒಂದು ಶಾಪವಿದ್ದಂತೆ. ಖಾಸಗೀಕರಣದ ಕಬಂಧ ಬಾಹುಗಳಲ್ಲಿ ಆಂತರಿಕ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗುವುದರಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಸಂಕಷ್ಟಕ್ಕೆ ತುತ್ತಾಗುತ್ತವೆ. ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಮೇಲ್ವರ್ಗ-ಕೆಳವರ್ಗದ ನಡುವಿನ ಅಂತರವೂ ಬಹಳಷ್ಟಿದೆ. ಪ್ರತಿಯೊಂದು ವಿಷಯಗಳನ್ನು ಖಾಸಗಿಯವರ ಕೈಗೆ ನೀಡಿದರೆ ಈ ಕಂದಕ ಇನ್ನಷ್ಟು ಹೆಚ್ಚುತ್ತದೆ. ಪ್ರಸ್ತುತ ಸಮಾಜದ ಎಲ್ಲಾ ಹುಳುಕುಗಳ ನೇರ ಪ್ರಹಾರಕ್ಕೆ ತುತ್ತಾಗಿ ತುತ್ತಿನ ಚೀಲ ತುಂಬಲೂ ಪರದಾಡುವ ಬಡವರು, ಕುಡಿಯುವ ನೀರಿಗೂ ಪರದಾಡಬೇಕಾದ ದುಸ್ತರ ಸ್ಥಿತಿ ನಿರ್ಮಾಣವಾಗಲಿದೆ. ಸರ್ಕಾರಕ್ಕೆ ನಿಜವಾಗಿಯೂ ಜನಪರ ಕಾಳಜಿ ಇದ್ದರೆ ಇಂಥ ನಿರ್ಧಾರಗಳನ್ನು ಕೈಗೊಳ್ಳುವಾಗ ಜನಸಾಮಾನ್ಯರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು. ನೀರಿನ ಖಾಸಗೀಕರಣ ಜನವಿರೋಧಿ ಮತ್ತು ಖಂಡನೀಯ.

ಕೆ.ಎನ್. ಮಾಲತಿ
ಹುಬ್ಬಳ್ಳಿ

ಸಾಧನೆಗೆ ಹಲವು ದಾರಿ

'ಸಿಪಿಎಂ ಬಗ್ಗು ಬಡಿವ ಅತ್ಯುತ್ತಮ ಅವಕಾಶ ಕಳೆದುಕೊಳ್ಳುವ ಹಾದಿಯಲ್ಲಿ 'ದೀದಿ'...'(ಅರಿಂದಮ್ ಚೌಧುರಿ) ಸಂಪಾದಕೀಯ ಅರ್ಥಪೂರ್ಣವಾಗಿತ್ತು. ಎಡರಂಗದ ದಮನಕಾರಿ ನೀತಿಯಿಂದ ಕಂಗೆಟ್ಟ ಜನತೆ ದಿಟ್ಟ, ನೇರ, ಕ್ರಿಯಾಶೀಲ ವ್ಯಕ್ತಿತ್ವದ ಮಮತಾ ಬ್ಯಾನರ್ಜಿ ಅವರನ್ನು ಆರಿಸಿರುವುದು ಅಲ್ಲಿನ ಮತದಾರನ ಪ್ರಬುದ್ಧತೆಗೆ ಹಿಡಿದ ಕೈಗನ್ನಡಿ. ಸಂಪಾದಕೀಯದಲ್ಲಿ ಹೇಳಿರುವಂತೆಯೇ ತೀರಾ ಭಾವನಾತ್ಮಕ ಮತ್ತು ಸೂಕ್ಷ್ಮಮನಸ್ಸಿನ ಮಮತಾ ಸಿಪಿಎಂನ ಲಜ್ಜೆಗೇಡಿತನದ ಆಡಳಿತವನ್ನು ಎದುರಿಸಲು ಸಿದ್ಧರಾಗಬೇಕಿದೆ. ಆದರೆ ಮಮತಾ ಪಾಲಿಗೆ ರೈಲ್ವೆಗಿಂತ ಗ್ರಾಮೀಣಾಭಿವೃದ್ಧಿ ಖಾತೆ ದೊರೆಯುತ್ತಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು. ಹಳ್ಳಿ ಜನರ ಬದುಕಿನಲ್ಲಿ ಆಕೆ ನಿಜವಾದ 'ದೀದಿ' ಆಗುತ್ತಿದ್ದರು ಎನ್ನುವುದರಲ್ಲಿ ಅಚ್ಚರಿಯಿಲ್ಲ. ಓರ್ವ ಜನಪ್ರತಿನಿಧಿಯಾಗಿ ಅಭಿವೃದ್ಧಿ ಪೂರಕವಾದ ಯೋಜನೆಗಳನ್ನು ರೂಪಿಸಲು ಆಕೆಗೆ ಸಾಕಷ್ಟು ಸಮಯವಿದೆ. ಈ ನಿಟ್ಟಿನಲ್ಲಿ ಮಮತಾ ಪ್ರಯತ್ನಿಸಬೇಕಿದೆ. ಬಹುಶಃ ಟಿಎಸ್ಐಯ ಈ ಸಂಪಾದಕೀಯ ಮಮತಾ ಸಾಧನೆಯ ಹಾದಿಗೆ ದಾರಿದೀಪವಾಗಬಲ್ಲುದು.

ಎಚ್. ಆನಂದಕುಮಾರ್
ಚಿತ್ರದುರ್ಗ

ಭರವಸೆಗಳಲ್ಲೇ ಕಾಲ ಕಳೆದ ಸರ್ಕಾರ

'ವರ್ಷದ ಕೂಸಿಗೆ ಬಂಡಾಯದ ಬರೆ' (ಶಶಿ ಸಂಪಳ್ಳಿ) ವಿಶೇಷ ವರದಿ ಸಕಾಲಿಕ. ಯಾವುದೇ ಸಿದ್ಧಾಂತದ ನೆಲೆಗಟ್ಟಿಲ್ಲದೇ ಕೇವಲ ಅಧಿಕಾರದ ದುರಾಸೆಯಿಂದ ಗಾದಿ ಹಿಡಿದ ಯಾವುದೇ ಪಕ್ಷದಿಂದ ಜನಸಾಮಾನ್ಯ ಇದಕ್ಕಿಂತ ಹೆಚ್ಚೇನು ಬಯಸಲು ಸಾಧ್ಯ? ಈವರೆಗೆ 'ತಮ್ಮದು ಶಿಸ್ತಿನ ಪಕ್ಷ, ತಾವು ಶಿಸ್ತಿನ ಸಿಪಾಯಿ'ಗಳೆಂದು ಡಂಗುರ ಸಾರಿದ ಬಿಜೆಪಿಯ ಗುಟ್ಟು ರಟ್ಟಾಗಲು ಮೂಲ ಕಾರಣ ರೆಡ್ಡಿಗಳೇ ಎನ್ನುವುದು ದುರದೃಷ್ಟ. ಅಧಿಕಾರ ಕೈಯಲ್ಲಿ ಇಲ್ಲದೇ ಇರುವಾಗ ಎಲ್ಲವೂ ಶಿಸ್ತಿನ ಪಕ್ಷಗಳೇ ಎಂಬುದು ಶತದಡ್ಡನಿಗೂ ಅರ್ಥವಾಗುವ ಸತ್ಯ. ಅಧಿಕಾರದ ಗದ್ದುಗೆ ಹಿಡಿದಾಗ ಮಾತ್ರ ಈ ಶಿಸ್ತಿನ ಸಿಪಾಯಿಗಳ ಗುಟ್ಟು ರಟ್ಟಾಗುತ್ತದೆ. ಪಕ್ಷದ ಆಂತರಿಕ ಬಿಕ್ಕಟ್ಟು ಒಮ್ಮೆಲೆ ಸ್ಫೋಟಗೊಳ್ಳುವಲ್ಲಿ ಮುಖ್ಯಮಂತ್ರಿ ಅವರ 'ಕುಟುಂಬ ರಾಜಕಾರಣ'ದ ಪಾಲೂ ಇದೆ ಎನ್ನುವುದು ಸೂಕ್ಷ್ಮವಾಗಿ ಕಂಡುಬರುವ ವಿಚಾರ. ಮುಖ್ಯಮಂತ್ರಿಗಳು ಹೋದಲ್ಲೆಲ್ಲಾ ಅಭಿವೃದ್ಧಿಯ ಮಂತ್ರ ಜಪಿಸುತ್ತಿದ್ದಾರೆ. ಆದರೆ ಅವರ ಸಚಿವ ಸಂಪುಟ ಪರಸ್ಪರರ ಕಾಲು ಎಳೆಯುವುದರಲ್ಲೇ ಕಾಲ ತಳ್ಳುತ್ತಿದೆ. ಈ ಮಧ್ಯೆ ಸರ್ಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಾ ಸಂಭ್ರಮಿಸುತ್ತಿರುವ ಸರ್ಕಾರಕ್ಕೆ, ಈ ಒಂದು ವರ್ಷದ ಅವಧಿಯಲ್ಲಿ ತಾನು ಮಾಡಿದ ಸಾಧನೆ ಏನು? ಎಂಬುದರ ಅರಿವು ಮಾತ್ರ ಇದ್ದಂತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಇಡೀ ವರ್ಷ ಕೇವಲ ಭರವಸೆಗಳನ್ನು ನೀಡುತ್ತಲೇ ದಿನ ಕಳೆದ ಸರ್ಕಾರವೆಂಬ ಕೀರ್ತಿ ಪ್ರಸಕ್ತ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಸಲ್ಲುವುದರಲ್ಲಿ ಅನುಮಾನವೇ ಇಲ್ಲ.

ರಾಘವೇಂದ್ರ ಗೌಡ
ಮಂಗಳೂರು

ಜಾಣ ಕುರುಡು

'ಯಾರಿಗೂ ಬೇಡವಾದವರು' (ಜುಬೇರ್ ಎ. ದಾರ್) ವಿಶೇಷ ವರದಿ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವಲ್ಲಿ ಸಫಲವಾಗಿದೆ. ಹದಿಮೂರು ವರ್ಷಗಳ ಕಾಲ ಬಂಡುಕೋರರ ವಿರುದ್ಧ ಹೋರಾಡಿರುವ ಮಾಜಿ ಉಗ್ರರ ಭವಿಷ್ಯ ಕತ್ತಲೆಯ ಕೂಪದಲ್ಲಿ ನರಳುವುದನ್ನು ಇನ್ನಾದರೂ ಸರ್ಕಾರ ಅರಿಯಬೇಕು. ಕಾಶ್ಮೀರಿ ಉಗ್ರಗಾಮಿಗಳನ್ನು ಹತ್ತಿಕ್ಕಲು ಮಾಜಿ ಬಂಡುಕೋರರನ್ನು ಬಳಸಿಕೊಂಡು, ಬಳಿಕ ಅವರ ಕುಟುಂಬಗಳತ್ತ ಗಮನಹರಿಸದ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಈಗಾಗಲೇ ನೂರಾರು ಕುಟುಂಬಗಳು ಬೀದಿಪಾಲಾಗಿವೆ. ಉಗ್ರಗಾಮಿಗಳಿಂದ ಹತರಾದ ಎಷ್ಟೋ ಬಂಡುಕೋರರ ಪತ್ನಿಯರು ವಿಧವೆಯರಾಗಿ ಸಮಾಜದಿಂದ ಬಹಿಷ್ಕೃತ ಬದುಕು ನಡೆಸುತ್ತಿದ್ದಾರೆ. ಕನಿಷ್ಠ ಸೌಜನ್ಯಕ್ಕಾದರೂ ಸರ್ಕಾರ ಇವರ ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಒದಗಿಸುವ ಜವಾಬ್ದಾರಿ ಹೊರಬೇಕಿದೆ. ಸರ್ಕಾರಿ ನೌಕರಿಯ ಆಮಿಷ ತೋರಿಸಿ ಮಾಜಿ ಬಂಡುಕೋರರನ್ನು ಬಳಸಿಕೊಂಡ ಸರ್ಕಾರ ಅವರ ಕುಟುಂಬಗಳನ್ನು ನಿರ್ಲಕ್ಷಿಸಿರುವುದು ಮತ್ತಷ್ಟು ಭಯೋತ್ಪಾದಕ ಕೃತ್ಯಗಳಿಗೆ ಪ್ರೋತ್ಸಾಹ ನೀಡಿದಂತೆ ಅಲ್ಲವೇ? ತಮ್ಮ ಬಂಧು-ಮಿತ್ರರೆನ್ನದೆ ಉಗ್ರರನ್ನು ದಮನ ಮಾಡಿದ ಈ ಮಾಜಿ ಬಂಡುಕೋರರ ನೂರಾರು ಕುಟುಂಬಗಳು ಕತ್ತಲಿನಿಂದ ಬೆಳಕಿನತ್ತ ಸಾಗಲು ಸರ್ಕಾರವೇ ದೀಪ ಹಚ್ಚಬೇಕಿದೆ.

ರಮೇಶ
ಕಂಚೀಪುರ

ಹಕ್ಕುಗಳನ್ನೂ ಖರೀದಿಸಬೇಕೆ?

'ಶಿಕ್ಷಣದ ಸುತ್ತಾ, ಡೊನೇಷನ್ ಹುತ್ತ' (ಪ್ರಸೂನ್ ಮಜುಂದಾರ್) ಅಂಕಣ ಬರಹ ಪ್ರಸ್ತುತ ದುಬಾರಿಯಾಗಿರುವ ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿದೆ. ಜೊತೆಗೆ ಮುಖ್ಯವಾಗಿ ವೃತ್ತಿಪರ ಕೋರ್ಸ್ಗಳ 'ವ್ಯಾಪಾರೀಕರಣ'ವನ್ನು ಅರ್ಥಪೂರ್ಣವಾಗಿ ವಿವರಿಸಿದೆ. ವೃತ್ತಿಪರ ಕೋರ್ಸ್ಗಳ ಸ್ಥಿತಿ ಎಷ್ಟು ಹೀನಮಟ್ಟಕ್ಕೆ ತಲುಪಿದೆಯೆಂದರೆ ಇಲ್ಲಿ ದುಡ್ಡು ಕೊಟ್ಟು ಸೀಟು ಪಡೆದುಕೊಳ್ಳುವ ಅಭ್ಯರ್ಥಿಗಳೇ ಮುಖ್ಯವಾಗುತ್ತಾರೆಯೇ ವಿನಾ ಪ್ರತಿಭಾವಂತ ಅಭ್ಯರ್ಥಿಗಳಿಗೆ ಬೆಲೆಯೇ ಇಲ್ಲದಾಗಿದೆ. ಇತ್ತೀಚೆಗೆ ಕುಟುಕು ಕಾರ್ಯಾಚರಣೆ ಮೂಲಕ ವೃತ್ತಿಪರ ಕಾಲೇಜುಗಳ ಬಣ್ಣ ಬಯಲಾಗಿದೆ (ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಬೇಡಿಕೆ ಇಟ್ಟಷ್ಟು ಡೊನೇಷನ್ ನೀಡುವುದನ್ನು ನಿಷೇಧಿಸಲಾಗಿದೆ). ಈ ಮೂಲಕ ಡೊನೇಷನ್ ಪಿಡುಗು ವ್ಯಾಪಕವಾಗಿ ಹಬ್ಬಿದೆ ಎಂಬುದು ಸಾಬೀತಾಗಿದೆ. ಈಗ ಗುಣಮಟ್ಟದ ಶಿಕ್ಷಣ ಕೇವಲ ಶ್ರೀಮಂತರ ಸ್ವತ್ತಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜೊತೆಗೆ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯ ನಿರ್ಲಕ್ಷ್ಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. 'ನಮ್ಮದೇ ದೇಶದಲ್ಲಿ ನಮ್ಮದೇ ಮೂಲಭೂತ ಹಕ್ಕುಗಳನ್ನು ಡೊನೇಷನ್ ಮೂಲಕ 'ಖರೀದಿಸುವ' ಅನಿವಾರ್ಯತೆ ಸೃಷ್ಟಿಯಾಗಿರುವುದು ನಾಚಿಕೆಗೇಡಿನ ಸಂಗತಿ' ಎನ್ನುವ ಲೇಖಕರ ಮಾತು ನೂರಕ್ಕೆ ನೂರು ಸತ್ಯ. ಈ ಡೊನೇಷನ್ ದಂಧೆಯನ್ನು ತಡೆಗಟ್ಟುವ ಮೂಲಕ ಉತ್ತಮ ಶಿಕ್ಷಣ ವ್ಯವಸ್ಥೆಗೆ ಮುನ್ನುಡಿ ಬರೆಯುವ ಮಹತ್ತರ ಜವಾಬ್ದಾರಿ ಇದೀಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮೇಲಿದೆ.

ಸಿ.ವಿ. ಅರವಿಂದ
ಬೆಂಗಳೂರು

ತಾನೇ ಹೆಣೆದ ಬಲೆಯೊಳಗೆ

'ಹೊರಗುತ್ತಿಗೆ ಉದ್ಯಮ ಜಾಗತಿಕ ಆರ್ಥಿಕತೆಗೆ ವರದಾನ' (ರಿಚರ್ಡ್ ಸ್ಟ್ಯಾಗ್) ಸಂದರ್ಶನ ಬರಹ ಅಮೂಲ್ಯ ಒಳನೋಟಗಳನ್ನು ನೀಡುವಂತಿತ್ತು. ಜಾಗತೀಕರಣದ ಹೆಸರಿನಲ್ಲಿ ಅಮೆರಿಕ ತಾನು ಹೆಣೆದ ಬಲೆಯಲ್ಲಿ ತಾನೇ ಸಿಲುಕಿ ನರಳುತ್ತಿದೆ. ಜಾಗತಿಕ ವಾಣಿಜ್ಯ ಕ್ಷೇತ್ರವನ್ನು ಮನಬಂದಂತೆ ಬಳಸಿಕೊಳ್ಳುತ್ತಿದ್ದ ಅಮೆರಿಕ ಇಂದು ತಾನೇ ಅಸಹಾಯಕನಂತೆ ಕುಳಿತಿದೆ. ಈ ಅಸಹಾಯಕತೆ ಯಾವ ಮಟ್ಟ ತಲುಪಿದೆ ಎಂದರೆ ತನ್ನ ವ್ಯವಹಾರಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ತಾನೇ ರೂಪಿಸಿದ ಕಾನೂನುಗಳನ್ನು ಹಿಂಪಡೆಯಲು ಕೂಡ ಅದಕ್ಕೆ ಸಾಧ್ಯವಾಗುತ್ತಿಲ್ಲ. ಕುಸಿಯುತ್ತಿರುವ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವ ಸಲುವಾಗಿ ಭಾರತಕ್ಕೆ ಈವರೆಗೆ ನೀಡಿದ್ದ ಹೊರಗುತ್ತಿಗೆಯನ್ನು ಹಿಂಪಡೆಯಲು ನಿರ್ಧರಿಸಿದ ಅಮೆರಿಕ ತನ್ನ ನಿರ್ಧಾರದಿಂದ ತಾನೇ ಕೈ ಸುಟ್ಟುಕೊಂಡಂತಿದೆ. ರಿಚರ್ಡ್ ಸ್ಟ್ಯಾಗ್ ಅವರು ಸಂದರ್ಶನದಲ್ಲಿ ಹೇಳುವಂತೆ ಭಾರತದ ಹೊರಗುತ್ತಿಗೆ ಕ್ಷೇತ್ರ ಭಾರತಕ್ಕೆ ಮಾತ್ರವಲ್ಲ, ಹೊರದೇಶಗಳಿಗೂ ಲಾಭದಾಯಕವೇ. ಆರ್ಥಿಕ ಹಿಂಜರಿತದಿಂದ ಈಗಾಗಲೇ ಅರೆಜೀವವಾಗಿರುವ ಪಾಶ್ಚಾತ್ಯ ರಾಷ್ಟ್ರಗಳು ಭಾರತದ ಹೊರಗುತ್ತಿಗೆ ಕ್ಷೇತ್ರದ ಸಹಾಯವಿಲ್ಲದಿದ್ದರೆ ಇನ್ನಷ್ಟು ಅವನತಿಯತ್ತ ಸರಿಯುವುದು ನಿಶ್ಚಿತ. ಆ ಮಟ್ಟಿಗೆ ಭಾರತದ ಹೊರಗುತ್ತಿಗೆ ಕ್ಷೇತ್ರ ಸುರಕ್ಷಿತ ಎನ್ನುವುದು ಗಮನಾರ್ಹ.

ಆರತಿ
ಬೆಂಗಳೂರು

ಮಾತು ಬೇಡ, ಕಾರ್ಯ ಬೇಕು

'ಕೊನೆಗೂ ಬದಲಾದ ದೊಡ್ಡಣ್ಣನ ನಿಲುವು' (ಸೌರಭ್ ಕುಮಾರ್ ಶಾಹಿ) ಅಮೆರಿಕದ ನವೀನ ಮುಖಗಳನ್ನು ಅನಾವರಣ ಮಾಡುವಂತಿದೆ. ಬುಷ್ ಆಡಳಿತಾವಧಿಯಲ್ಲಿ ದುರಹಂಕಾರಿಯಂತೆ ವರ್ತಿಸಿದ್ದ ಅಮೆರಿಕ ಒಬಾಮ ಆಡಳಿತಾವಧಿಯಲ್ಲಿ ಸಂವೇದನಾಶೀಲ ರಾಷ್ಟ್ರವಾಗಿ ಬದಲಾಗಲು ಪ್ರಯತ್ನಿಸುತ್ತಿದೆ. ಇದಕ್ಕೆ ಆರ್ಥಿಕ ಹಿಂಜರಿತದ ಹೊಡೆತವೂ ಕಾರಣವಿರಬಹುದು. ಆದರೆ ಮುಸ್ಲಿಂ ರಾಷ್ಟ್ರಗಳ ಕಣ್ಣಲ್ಲಿ ದೊಡ್ಡ ಖಳನಾಯಕನಾಗಿದ್ದ ಅಮೆರಿಕ ತುಸು ತಡವಾಗಿಯಾದರೂ ತನ್ನ ಇಮೇಜು ಬದಲಿಸಿಕೊಳ್ಳುವ ಸೂಚನೆ ನೀಡುತ್ತಿರುವುದು ನಿಜಕ್ಕೂ ಸ್ವಾಗತಾರ್ಹ. ಒಬಾಮ ಇಸ್ರೇಲ್ನ ದಾರ್ಷ್ಟ್ಯವನ್ನು ಪ್ರಶ್ನಿಸಿರುವುದು, ಇರಾಕ್ನಲ್ಲಿರುವ ಸೇನೆಯನ್ನು ಕೆಲವೇ ವರ್ಷಗಳಲ್ಲಿ ಹಿಂಪಡೆವ ಮಾತನಾಡಿರುವುದು ಮುಸ್ಲಿಂ ರಾಷ್ಟ್ರಗಳಿಗೆ ವಿಭಿನ್ನ ಸಂದೇಶ ನೀಡಿದೆ. ಒಬಾಮ ಅವರ ಎಲ್ಲಾ ಕಳಕಳಿಯ ಮಾತುಗಳು ಕಾರ್ಯರೂಪಕ್ಕೆ ಬರಬೇಕು. ಆಗ ಮಾತ್ರ ಜಾಗತಿಕ ವಲಯದಲ್ಲಿ ಏನಾದರೂ ಸಕಾರಾತ್ಮಕ ಬೆಳವಣಿಗೆ ನಿರೀಕ್ಷಿಸಬಹುದು.

ಆರ್. ಗೌರಿ
ದಾವಣಗೆರೆ

ಮಾಡಿದ್ದುಣ್ಣೋ ಮಹರಾಯ

'ಶಾಂತಿಯ ಮಾತು ಬಹುದೂರ' (ಶಾಹಿದ್ ಹುಸೇನ್) ಲೇಖನ ಧಾರ್ಮಿಕ ಮೂಲಭೂತವಾದದಿಂದ ನರಳುತ್ತಿರುವ ಪಾಕಿಸ್ತಾನದ ಜನರ ನೈಜ ಬದುಕನ್ನು ಅನಾವರಣಗೊಳಿಸಿದೆ. ನಿತ್ಯ ಭಯೋತ್ಪಾದನಾ ಚಟುವಟಿಕೆಗಳಿಂದ ಪ್ರಾರಂಭವಾಗುವ ಇಲ್ಲಿನ ಜನಸಾಮಾನ್ಯರ ಬದುಕಿನ ಕುರಿತು ಊಹಿಸಿದಾಗ ವಿಷಾದ ಮೂಡುತ್ತದೆ. ನೂರಾರು ಸಾವು-ನೋವುಗಳು, ಅಪರಾಧಗಳು, ರಕ್ತದ ಹೊಳೆ ಹರಿಸಲು ಕಾರಣವಾಗುವವರು ರಾಜಾರೋಷದಿಂದ ಮೆರೆಯಲು ಕಾರಣ ಅಲ್ಲಿನ ಸರ್ಕಾರ ಈ ಹಿಂದೆ ತಾಳಿದ ಮೃದು ಧೋರಣೆ ಎಂದರೂ ತಪ್ಪಾಗದು. ವೀಕ್ಷಕರೆದುರು ಮೊಸಳೆ ಕಣ್ಣೀರು ಸುರಿಸುವ ಪಾಕ್ ಬುದ್ಧಿಯನ್ನು ಕಂಡಾಗ ಮಾಡಿದುಣ್ಣೋ ಮಹರಾಯ ಎನ್ನುವ ಗಾದೆ ಮಾತು ನೆನಪಾಗುತ್ತದೆ. ಮೇಲ್ನೋಟಕ್ಕೆ ಭಯೋತ್ಪಾದನೆಯ ವಿರುದ್ಧ ಸಮರ ಎನ್ನುವ ಪಾಕ್ ಸರ್ಕಾರ, ನಿಜವಾಗಲೂ ಭಯೋತ್ಪಾದನಾ ವಿರೋಧಿ ನಿಲುವು ತಾಳಿದೆಯೇ ಎನ್ನುವ ಅನುಮಾನವಿದೆ. ಅಲ್ಲಿನ ಜನರಿಗೆ ಶಾಂತಿಯುತ ನೆಮ್ಮದಿಯ ಬದುಕಿನ ದಾರಿ ಕಲ್ಪಿಸಿಕೊಡುವುದು ತಮ್ಮ ಮುಂದಿರುವ ಮಹತ್ವದ ಸವಾಲು ಎನ್ನುವುದನ್ನು ಪಾಕ್ ಸರ್ಕಾರ ಅರಿಯಲಿ.

ಶ. ಜಗದೀಶ,
ಗದಗ

'ನೀಲಿ ಚಿನ್ನ'ದ ಕೊಳ್ಳೆ ತರವಲ್ಲ

'ಜಲಯುದ್ಧ' (ಸತೀಶ್ ಚಪ್ಪರಿಕೆ) ಮುಖಪುಟ ಲೇಖನ ಅರ್ಥಗರ್ಭಿತವಾಗಿತ್ತು. ಜೀವಜಲಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಗಮನಿಸಿದರೆ ಭವಿಷ್ಯದಲ್ಲಿ ನೀರು 'ನೀಲಿ ಚಿನ್ನ'ವಾಗುವುದರಲ್ಲಿ ಸಂದೇಹವೇ ಇಲ್ಲ. ಜೀವಜಲವನ್ನು ಖಾಸಗೀಕರಣ ಮಾಡುವ ಸರ್ಕಾರದ ನಿರ್ಧಾರ ಜನವಿರೋಧಿ. ಖಾಸಗೀಕರಣವಾದರೆ ಜೀವಜಲ ನಿಜವಾದ 'ನೀಲಿ ಚಿನ್ನ'ವಾಗಿ, ಜನಸಾಮಾನ್ಯರಿಗೆ ಮತ್ತು ಕೆಳ ಮಧ್ಯಮ ವರ್ಗದವರಿಗೆ 'ಚಿನ್ನ'ವಾಗುವುದರಲ್ಲಿ ಎರಡು ಮಾತಿಲ್ಲ. ಅಮೂಲ್ಯ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆಯುವುದು ತರವಲ್ಲ. ಅದು ಹಣ ಮಾಡುವ ದಂಧೆಯಾಗಿ ಪರಿವರ್ತನೆಗೊಂಡಲ್ಲಿ ಪೆಟ್ರೋಲ್ನ್ನು ಹೇಗೆ ನಾವು ಬಂಕರ್ಗಳಲ್ಲಿ ಪಡೆಯುತ್ತೇವೆಯೋ, ಹಾಗೆಯೇ ನೀರನ್ನೂ ಬಂಕರ್ಗಳಲ್ಲಿ ಪಡೆಯುವ ಕಾಲ ಬಂದರೆ? ಆಡಳಿತ ವರ್ಗ ಈ ನಿಟ್ಟಿನಲ್ಲಿ ಗಮನಹರಿಸಬೇಕು. ನಮ್ಮ ದೇಶದಲ್ಲಿ ಖಂಡಿತ ನೀರಿನ ಕೊರತೆಯಿಲ್ಲ. ಅನಗತ್ಯ ನೀರು ಪೋಲಾಗುವುದನ್ನು ತಪ್ಪಿಸುವುದರ ಜೊತೆಗೆ ಜಲಮಾಲಿನ್ಯ ತಡೆಗಟ್ಟಿದಲ್ಲಿ ಅಗತ್ಯವಾಗಿರುವಷ್ಟು ನೀರು ಸಂಗ್ರಹಿಸಬಹುದು. ಸರ್ಕಾರ ಖಾಸಗೀಕರಣದ ಬದಲು ಜಲಸಂಪನ್ಮೂಲಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಲಿ. ಹನಿಗೂಡಿದರೆ ಹಳ್ಳ ಎಂಬ ಸತ್ಯವನ್ನು ಜನರಿಗೆ ತಿಳಿಯಪಡಿಸಲಿ. ಆಗ ಮಾತ್ರ ಜೀವಜಲ 'ನೀಲಿ ಚಿನ್ನ' ಆಗುವುದನ್ನು ತಪ್ಪಿಸಬಹುದು.

ಲಿಯಾಖತ್ ಅಲಿ ಹಿರೆಕುಂಬಿ ಹರಿಹರ

 

ರೂ . 3,000 ಬಹುಮಾನ ಗೆದ್ದವರು

ಸುರಕ್ಷಿತ ಬದುಕು ಕಲ್ಪಿಸಿ

'ಯಾರಿಗೂ ಬೇಡವಾದವರು' (ಜುಬೇರ್ ಎ. ದಾರ್) ವಿಶೇಷ ವರದಿ ಸರ್ಕಾರದ ಕಣ್ತೆರೆಸುವಂತಿತ್ತು. ಜಮ್ಮು-ಕಾಶ್ಮೀರದ ಮಾಜಿ ಬಂಡುಕೋರರು ತಮ್ಮ ಹಳೆಯ ದುಷ್ಕೃತ್ಯಗಳನ್ನು ಕೈಬಿಟ್ಟು ಸಾಮಾನ್ಯ ಬದುಕು ಅಪೇಕ್ಷಿಸಿ ಸರ್ಕಾರದ ನೆರವು ಕೋರುತ್ತಿರುವುದು ಸಹಜವೇ. ಆದರೆ, ಇವರಿಗೆ ಉತ್ತಮ ಬದುಕು ಕಲ್ಪಿಸುವ ಕುರಿತು ಸರ್ಕಾರ ಭರವಸೆ ನೀಡುತ್ತಿದ್ದರೂ ಈವರೆಗೆ ನೆರವೇರಿಸಿಲ್ಲ. ಮಾಜಿ ಬಂಡುಕೋರರು ಹಣಕಾಸು ನೆರವು ಪಡೆದಿದ್ದಾರೆ, ಆದರೆ ಅವರ ಪಾಲಿಗೆ ಸುರಕ್ಷಿತ ಬದುಕು ಇನ್ನೂ ಮರೀಚಿಕೆ. ಕೆಲವರು ತಮ್ಮ ಕುಟುಂಬಗಳನ್ನೂ ಲೆಕ್ಕಿಸಿದೆ ಜೀವ ಬಿಟ್ಟಿದ್ದಾರೆ. ಇಂದಿಗೂ ಕತ್ತಲ ಕೂಪದಲ್ಲಿ ಬದುಕು ಸಾಗಿಸುವ ಆ ಕುಟುಂಬಗಳಲ್ಲಿ ಒಂದಿಷ್ಟೂ ಭರವಸೆಗಳು ಉಳಿದಿಲ್ಲ. ಅದೆಷ್ಟೋ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಮತ್ತು ಸುರಕ್ಷಿತ ಬದುಕು ನೀಡುವ ಕನಿಷ್ಠ ಸೌಜನ್ಯವನ್ನೂ ಸರ್ಕಾರ ತೋರಿಲ್ಲ. ಮಾಜಿ ಬಂಡುಕೋರರ ಕುಟುಂಬಗಳಿಗೆ ಸುರಕ್ಷಿತ ಬದುಕು ಒದಗಿಸುವುದು ನಮ್ಮ ಸರ್ಕಾರದ ಮುಂದಿರುವ ಪ್ರಮುಖ ಆದ್ಯತೆಯಾಗಬೇಕಿದೆ.

ಮಾಯಾಂಕ್
(ಇ-ಮೇಲ್ ಮೂಲಕ)

 

ಶಿಕ್ಷಣದ ಹರಾಜು ಸಲ್ಲದು

' ಶಿಕ್ಷಣದ ಸುತ್ತಾ ಡೊನೇಷನ್ ಹುತ್ತ' (ಪ್ರಸೂನ್ ಮಜುಂದಾರ್) ಬರಹ, ಶಿಕ್ಷಣ ಕೂಡ ಶ್ರೀಮಂತರ ಸ್ವತ್ತಾಗಿದೆ ಎಂಬುವುದನ್ನು ಸಾಬೀತುಪಡಿಸಿದೆ. ಹಾಗಾಗಿ ಪ್ರತಿಯೊಬ್ಬರೂ ಬದುಕಿನಲ್ಲಿ ಶಿಕ್ಷಣದ ಹೊರೆಯನ್ನು ಸಾಲದ ಮೂಲಕವಾದರೂ ಇಳಿಸಿಕೊಳ್ಳುವ ಮಟ್ಟಕ್ಕೆ ತಲುಪಿದ್ದಾರೆ. ಆದರೆ ಸಾಲ ಪಡೆಯುವುದೂ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದು ಗಮನಾರ್ಹ. ಓರ್ವ ಪ್ರತಿಭಾವಂತ ವಿದ್ಯಾರ್ಥಿ ಪ್ರತಿಭೆ ಹಾಗೂ ಪರಿಶ್ರಮವನ್ನು ಮುಂದಿಟ್ಟುಕೊಂಡು ಅನರ್ಹ ಅಥವಾ ಪ್ರಭಾವಿ ವಿದ್ಯಾರ್ಥಿಯ ಎದುರು ಜ್ಞಾನದ ಹೋರಾಟಕ್ಕಿಳಿಯಬೇಕಾಗಿರುವುದು ದುರದೃಷ್ಟ. ಕಠಿಣ ನಿಯಮಗಳನ್ನು ಜಾರಿಗೊಳಿಸುವುದರ ಮೂಲಕ ಇಂಥ ಡೊನೇಷನ್ ದಂಧೆಯನ್ನು ನಿಯಂತ್ರಿಸಬಹುದು. ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು. ಅದನ್ನು ಹರಾಜು ಮಾಡುವ ನೈತಿಕ ಹಕ್ಕು ಯಾರಿಗೂ ಇಲ್ಲ.

ನಿರ್ಮಲ್ ಕರ್ಮಾಕರ್
ಅಸ್ಸಾಂ

 

ಕಠ ಿಣ ಕ್ರಮ ಕೈಗೊಂಡಿಲ್ಲವೇಕೆ?

' ಸಿಪಿಎಂ ಬಗ್ಗುಬಡಿವ ಅತ್ಯುತ್ತಮ ಅವಕಾಶ ಕಳೆದುಕೊಳ್ಳುವ ಹಾದಿಯಲ್ಲಿ 'ದೀದಿ'...' (ಅರಿಂದಮ್ ಚೌಧುರಿ) ಸಂಪಾದಕೀಯದ ಮೂಲಕ ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ನೆಲಕಚ್ಚಿದ ಬಗೆಯನ್ನು ಚೆನ್ನಾಗಿ ವಿವರಿಸಿದ್ದಾರೆ. ಈ ಹೀನಾಯ ಸೋಲಿಗೆ ಸಿಪಿಎಂ ಕಾರಣವೇ ಹೊರತು, ಇನ್ಯಾರಲ್ಲ. ಈಗ ಜನತೆ ಎಚ್ಚೆತ್ತಿದ್ದಾರೆ. ಲಾಲ್ಗಢವನ್ನು ತಮ್ಮ ನಿಯಂತ್ರಣಕ್ಕೆ ಒಳಪಡಿಸಿಕೊಂಡ ಮಾವೋವಾದಿಗಳು ಸ್ಥಳೀಯ ಬುಡಕಟ್ಟು ಜನರ ನೆರವಿನಿಂದ ರಕ್ತದ ಹೊಳೆ ಹರಿಸುತ್ತಿದ್ದಾರೆ. ಇಲ್ಲಿನ ಪೊಲೀಸ್ ಠಾಣೆಗಳು ಕೂಡ ಮಾವೋವಾದಿಗಳ ಹಿಡಿತದಲ್ಲಿವೆ. ಈ ಸಂಬಂಧ ನನ್ನಲ್ಲಿ ಎರಡು ಮಹತ್ವದ ಪ್ರಶ್ನೆಗಳು ಮೂಡುತ್ತಿವೆ. ಒಂದು, ಏಕೆ ಸರ್ಕಾರ ಈವರೆಗೆ ಮಾವೋವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ? ಇನ್ನೊಂದು, ಬುಡಕಟ್ಟು ಜನರೇ ಸರ್ಕಾರ ವಿರುದ್ಧ ಏಕೆ ತಿರುಗಿ ಬೀಳುತ್ತಿದ್ದಾರೆ? ಸಂಪಾದಕೀಯದಲ್ಲಿ ಹೇಳಿರುವಂತೆಯೇ ಮಮತಾ ಬ್ಯಾನರ್ಜಿ ರೈಲ್ವೆ ಖಾತೆಯನ್ನು ಏಕೆ ಆರಿಸಿಕೊಂಡಿದ್ದಾರೆ? ಖಂಡಿತವಾಗಿಯೂ ಈ ಖಾತೆ ಆಕೆ ಪರಿಣಾಮಕಾರಿಯಾದ ಜನಪರ ಕಾಳಜಿಗಳಿಗೆ ವೇದಿಕೆಯಾಗುತ್ತದೆ ಎಂಬುವುದರಲ್ಲಿ ನಂಬಿಕೆಯಿಲ್ಲ.

ಆರ್ . ನಿರ್ಮಲ್ರಾಜ್
ತಮಿಳುನಾಡು

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .