User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಶಿಕ್ಷಣ- ತರಬೇತಿ
 
ಸಾಧನೆಗೆ ಸಾಧಾರಣ ಅಂಕ ಅಡ್ಡಿಯಲ್ಲ
 

ಪಿಯು ಹಂತದಲ್ಲಿ ಶೇ. 60ರಷ್ಟು ಅಂಕವನ್ನೂ ಪಡೆಯದ ವಿದ್ಯಾರ್ಥಿಗಳು ಈಗ ಐಐಟಿ ಪ್ರವೇಶ ಪಡೆದಿದ್ದಾರೆ

 
ಆನಂದ್ ಕುಮಾರ್

'ಸೂಪರ್30' ಸಂಸ್ಥಾಪಕ

' ಸೂಪರ್ 3 0' ಸಂಸ್ಥೆಯ ಅಡಿ ಕಳೆದ ಏಳು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಅದ್ಭುತ ಅನುಭವ ನನಗೆ ದೊರೆತಿದೆ. ನಮ್ಮಲ್ಲಿ ಮಾರ್ಗದರ್ಶನ ಪಡೆದ 210 ವಿದ್ಯಾರ್ಥಿಗಳಲ್ಲಿ 182 ಮಂದಿ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ) ಪ್ರವೇಶ ಪಡೆದಿರುವುದು ಅತ್ಯುತ್ತಮ ಸಾಧನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇವರಲ್ಲಿ ಶೇ. 75ರಿಂದ 80ರಷ್ಟು ವಿದ್ಯಾರ್ಥಿಗಳು ಬಡ ಕುಟುಂಬಗಳಿಂದ ಬಂದವರು ಎಂಬ ಅಂಶ ಈ ಸಾಧನೆಯನ್ನು ಮತ್ತೂ ಗಣನೀಯವಾಗಿಸುತ್ತದೆ. ಐಐಟಿಯಂಥ ಅತಿ ಕಠಿಣ ತಾಂತ್ರಿಕ ಸ್ಪರ್ಧೆಯಲ್ಲಿ ಯಶಸ್ಸು ಪಡೆದ ವಿದ್ಯಾರ್ಥಿಗಳಲ್ಲಿ ಶೇ. 20ರಿಂದ 25ರಷ್ಟು ವಿದ್ಯಾರ್ಥಿಗಳು 10+2 ಪರೀಕ್ಷೆಯಲ್ಲಿ ಕನಿಷ್ಠ ಶೇ. 60 ಅಂಕಗಳನ್ನೂ ಪಡೆದಿರಲಿಲ್ಲ. ಆದರೆ ಐಐಟಿಯಂಥ ಕಠಿಣ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಚ್ಚರಿಯ ಸಾಧನೆಗೈದಿರುವುದೂ ಇವರೇ.

ಸೂಪರ್ 30ಯ ಯಶಸ್ಸು ಎರಡು ಅಂಶಗಳನ್ನು ಸಾಬೀತುಪಡಿಸುತ್ತದೆ. ಮೊದಲನೆಯದಾಗಿ ಸಾಧನೆ ಎಂಬುದು ವಿಶೇಷ ವರ್ಗದ ಸವಲತ್ತಲ್ಲ. ಕಠಿಣ ಪರಿಶ್ರಮ ಮತ್ತು ಪ್ರತಿಭೆ ಇದ್ದರೆ ಯಾರು ಬೇಕಾದರೂ ಯಶಸ್ಸಿನ ಸವಿ ಉಣ್ಣಬಹುದು. ಎರಡನೆಯದಾಗಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಅಥವಾ ಶೇ. 90ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಮಾತ್ರ ಪ್ರತಿಭಾವಂತರು ಎನ್ನುವ ದೃಷ್ಟಿಕೋನ ಸರಿಯಲ್ಲ. ಶೇ. 50-55ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳೂ ಶೇ. 90ರಷ್ಟು ಅಂಕಗಳನ್ನು ಪಡೆದವರಷ್ಟೇ ತೀಕ್ಷ್ಣಮತಿ ಹಾಗೂ ಬುದ್ಧಿವಂತರಾಗಿರುತ್ತಾರೆ ಎಂದು ನನ್ನ ಅನುಭವದಿಂದ ಹೇಳಬಲ್ಲೆ. ನಮ್ಮ ದೇಶದಲ್ಲಿ ಅಂಕಗಳ ಆಧಾರದಲ್ಲಿ ಪ್ರತಿಭೆಯನ್ನು ಅಳೆಯಲಾಗುತ್ತಿರುವುದು ನಿಜಕ್ಕೂ ದೊಡ್ಡ ದುರಂತ. ಬಹಳಷ್ಟು ಸಂದರ್ಭದಲ್ಲಿ ವಿದ್ಯಾರ್ಥಿಗಳು ಯಾವುದೋ ಒಂದು ವಿಷಯದ ಬಗ್ಗೆ ಆಳವಾದ ಒಲವು ಬೆಳೆಸಿಕೊಂಡು ಅದರಲ್ಲೇ ಮುಂದುವರೆಯಲು ಬಯಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಅವರು ಇತರ ವಿಷಯಗಳನ್ನು ಅಲಕ್ಷಿಸುತ್ತಾರೆ. ಈ ಕಾರಣದಿಂದ ಅವರು ಉಳಿದ ವಿಷಯಗಳಲ್ಲಿ ಕನಿಷ್ಠ ಅಂಕಗಳನ್ನು ಪಡೆಯುತ್ತಾರೆ. ಶ್ರೀನಿವಾಸ ರಾಮಾನುಜಂ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬರು. ಆದರೆ ಅವರು ಗಣಿತ ಬಿಟ್ಟು ಉಳಿದೆಲ್ಲ ವಿಷಯಗಳಲ್ಲೂ ನಪಾಸಾಗಿದ್ದರು. ಹಾಗಿದ್ದರೂ ಜಗತ್ತು ಅವರ ಪ್ರತಿಭೆಯನ್ನು ಗೌರವಿಸಿದೆ.

ದೃಢವಿಶ್ವಾಸ ಮತ್ತು ಬದ್ಧತೆ ಹೇಗೆ ಅನೇಕ ವಿದ್ಯಾರ್ಥಿಗಳ ಜೀವನವನ್ನೇ ಬದಲಾಯಿಸಿದೆ ಎನ್ನುವುದನ್ನು ನೋಡುವ ಅದೃಷ್ಟ ನಮ್ಮದು. ಆರು ಮತ್ತು ಏಳನೇ ತರಗತಿಗೆ ಶಾಲೆ ಬಿಟ್ಟಿದ್ದ ವಿದ್ಯಾರ್ಥಿಗಳು ಮತ್ತೆ ವಿದ್ಯಾರ್ಜನೆಗೆ ತೊಡಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಬರೆದು ಪಾಸಾಗಿರುವ ಉದಾಹರಣೆಗಳಿವೆ. ಅಂಥ ವಿದ್ಯಾರ್ಥಿಗಳು ನಮ್ಮ ಸೂಪರ್ 30ಗೆ ಸೇರಿದಾಗ ನಾವು ಅವರ ಪ್ರತಿಭೆಗೆ ಸಾಣೆ ಹಿಡಿದೆವು. ಫಲಿತಾಂಶ ನಮ್ಮೆಲ್ಲರ ಮುಂದಿದೆ. ಸುರೇಶ್ ರಾಮ್ ಎಂಬ ವಿದ್ಯಾರ್ಥಿಯ ಉದಾಹರಣೆಯನ್ನೇ ನೋಡಿ. ಆತನ ಹೆತ್ತವರು ಇಟ್ಟಿಗೆಗೂಡಿನಲ್ಲಿ ಕೆಲಸ ಮಾಡುವವರು. ಆತ ಹೇಗೋ ಮೆಟ್ರಿಕ್ ಪರೀಕ್ಷೆ ಪೂರ್ಣಗೊಳಿಸಿದ. ಈಗ ದೆಹಲಿಯ ಐಐಟಿಯಲ್ಲಿ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

ಭಾರತದಲ್ಲಿ ಪರೀಕ್ಷೆಯ ಅಂಕಗಳಿಗೆ ಅತೀವ ಪ್ರಾಶಸ್ತ್ಯ ಕೊಡಲಾಗುತ್ತಿದೆ. ತಮ್ಮ ಮಕ್ಕಳು ಅತಿ ಹೆಚ್ಚು ಶ್ರೇಣಿಯಲ್ಲಿ ಅಂಕಗಳನ್ನು ಪಡೆಯುವಂತೆ ಹೆತ್ತವರು ಒತ್ತಡ ಹೇರುತ್ತಾರೆ. ಇದರಿಂದ ಉತ್ತಮ ಶಾಲೆ-ಕಾಲೇಜಿನಲ್ಲಿ ಪ್ರವೇಶ, ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆಗಳಿರುವುದರಿಂದ ಇಂತಹ ಒತ್ತಾಯ ತಪ್ಪೆನ್ನಲೂ ಸಾಧ್ಯವಿಲ್ಲ. ಹಾಗಿದ್ದರೂ ಅಂಕಗಳೇ ಸರ್ವಸ್ವವಲ್ಲ.

ಆದರೆ ಎಳೆಯ ವಯಸ್ಸಿನಲ್ಲೇ ಮಕ್ಕಳ ನಿಜಪ್ರತಿಭೆ ಗುರುತಿಸಲು ಸೂಕ್ತ ವ್ಯವಸ್ಥೆಯೊಂದನ್ನು ಸೃಷ್ಟಿಸುವ ಅಗತ್ಯ ಈಗ ಇದೆ. ಇಂಥ ಪ್ರತಿಭಾವಂತರು ಇತರ ವಿಷಯಗಳ ತಲೆನೋವನ್ನು ಹಚ್ಚಿಕೊಳ್ಳದೆ ತಮ್ಮ ಆಸಕ್ತಿಯ ವಿಚಾರದಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಿಕೊಡಬೇಕು. ಇದರಿಂದ ಅತ್ಯುತ್ತಮ ಫಲಿತಾಂಶ ಪಡೆಯಬಹುದು. ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳಿ. ನಾನು ಎಳೆಯ ವಯಸ್ಸಿನಿಂದಲೇ ಗಣಿತದ ಕಡೆ ಆಕರ್ಷಣೆ ಬೆಳೆಸಿಕೊಂಡಿದ್ದೆ. ಅದೃಷ್ಟವಶಾತ್ ಮೆಟ್ರಿಕ್ಯುಲೇಷನ್ ಮುಗಿದ ಕೂಡಲೇ ನನಗೆ ಪಾಟ್ನಾ ಸೈನ್ಸ್ ಕಾಲೇಜಿನಲ್ಲಿ ಪ್ರವೇಶ ದೊರೆಯಿತು. ಅಲ್ಲಿ ನಾನು 'ರಾಮಾನುಜಂ ಗಣಿತ ಸಂಘ' ಹುಟ್ಟುಹಾಕಿದೆ. ಗಣಿತದಲ್ಲಿ ಆಸಕ್ತಿ ಇದ್ದವರಿಗೆ ನಾನು ತರಬೇತಿ ನೀಡುವ ಕೆಲಸ ಆರಂಭಿಸಿದ್ದು ಅಲ್ಲೇ. ಆ ಕಾಲದಲ್ಲಿ ನಾನು ಬರೆದ ಬಹಳಷ್ಟು ಸಂಶೋಧನಾ ಪ್ರಬಂಧಗಳು ಖ್ಯಾತ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. 19ರ ವಯಸ್ಸಿನಲ್ಲಿ ನಾನು ಬರೆದ 'ಆನ್ ಸ್ಕ್ವೇರಿಂಗ್ ಆಫ್ ಡಿಜಿಟ್ ಆಫ್ ಎ ನಂಬರ್' ಸಂಶೋಧನಾ ಪ್ರಬಂಧ ನನಗೆ ಖ್ಯಾತಿ ತಂದುಕೊಟ್ಟಿತ್ತು; ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಉನ್ನತ ಸಂಶೋಧನೆಗೆ ಆಹ್ವಾನವೂ ಬಂದಿತ್ತು. ಆದರೆ ಹಣದ ಕೊರತೆಯಿಂದಾಗಿ ಆ ಅವಕಾಶ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.

ರಷ್ಯಾ ಮತ್ತು ಚೀನಾಗಳಲ್ಲಿ ಎಳೆಯ ವಯಸ್ಸಿನಲ್ಲೇ ಪ್ರತಿಭಾವಂತರನ್ನು ಗುರುತಿಸುವ ಅತ್ಯುತ್ತಮ ವ್ಯವಸ್ಥೆ ಇದೆ. ಕಳೆದ 20 ಅಂತರ್ ರಾಷ್ಟ್ರೀಯ ಗಣಿತ ಒಲಿಂಪಿಯಾಡ್ ಸ್ಪರ್ಧೆಯಲ್ಲಿ ಚೀನಾ 17 ಬಾರಿ ಪ್ರಶಸ್ತಿ ಬಾಚಿರುವುದನ್ನು ಕಂಡಾಗಲೇ ಈ ವಿಚಾರ ಸಾಬೀತಾಗುತ್ತದೆ. ಈವರೆಗೆ ಗಣಿತದ ಒಲಿಂಪಿಯಾಡ್‌ನಲ್ಲಿ ಭಾರತದ ಪ್ರದರ್ಶನ ಸಪ್ಪೆಯಾಗೇ ಇದೆ.

ಸೂಪರ್ 30 ಈ ಸಮಸ್ಯೆಯನ್ನು ಅರ್ಥೈಸಿಕೊಂಡಿದೆ. ಈ ಕಾರಣದಿಂದಲೇ ನಾವು ಪ್ರತಿಭೆಗೆ ಪ್ರಾಶಸ್ತ್ಯ ಕೊಡುತ್ತೇವೆಯೇ ವಿನಾ ಅಂಕಗಳಿಗಲ್ಲ. ದ್ವಿತೀಯ ದರ್ಜೆಯಲ್ಲಿ ಪಾಸಾದವರೂ ಸೂಪರ್ 30ಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈಗ ಅವರೆಲ್ಲ ಐಐಟಿಯಲ್ಲಿ ಓದುತ್ತಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ಐಐಟಿಯಲ್ಲಿ ಉತ್ತೀರ್ಣರಾಗಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದಾರೆ. ಆರಂಭಿಕ ವೈಫಲ್ಯಗಳಿಂದಾಗಿ ಅವರು ವಿದ್ಯಾಭ್ಯಾಸ ತೊರೆದಿದ್ದಲ್ಲಿ ಅವರ ಜೀವನದ ದಿಕ್ಕೇ ಬದಲಾಗಿರುತ್ತಿತ್ತು. ಸೂಪರ್ 30 ಕಡು ಬಡತನವಿರುವ ಕುಟುಂಬಗಳಿಂದ ವಿದ್ಯಾರ್ಥಿಗಳನ್ನು ಆರಿಸಿಕೊಳ್ಳುತ್ತದೆ. ಇಟ್ಟಿಗೆ ಕೆಲಸಗಾರರು, ರಿಕ್ಷಾ ತುಳಿಯುವವರು, ಜಮೀನುರಹಿತ ರೈತರು, ರಸ್ತೆಬದಿ ಅಂಗಡಿಗಳನ್ನಿಟ್ಟುಕೊಂಡಿರುವವರು, ಮತ್ತಿತರ ಹಿನ್ನೆಲೆಯಿಂದ ಬಂದವರೇ ಹೆಚ್ಚು. ತಮ್ಮ ಮಕ್ಕಳು ಪ್ರಸಿದ್ಧ ತಂತ್ರಜ್ಞರಲ್ಲಿ ಒಬ್ಬರಾಗುತ್ತಿರುವ ನಂಬಲಸಾಧ್ಯ ವಾಸ್ತವವನ್ನು ಬೆರಗುಗಣ್ಣುಗಳಿಂದ ವೀಕ್ಷಿಸುತ್ತಿದ್ದಾರೆ ಅವರ ಹೆತ್ತವರು.

ಪ್ರತಿಭೆಗೆ ಎಲ್ಲೆ ಇಲ್ಲ. ಅದು ಎಲ್ಲರಲ್ಲೂ ಇದೆ. ನಾವು ಪ್ರತಿಭೆ ಗುರುತಿಸಿ ಅದನ್ನು ಬೆಳೆಸಬೇಕಷ್ಟೆ. ಸೂಪರ್ 30 ಕಳೆದ ಏಳು ವರ್ಷಗಳಿಂದ ಇದನ್ನೇ ಮಾಡಿಕೊಂಡು ಬರುತ್ತಿದೆ. ಅತ್ಯುತ್ತಮ ಫಲಿತಾಂಶವನ್ನೂ ಪಡೆದಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಬೋಧನೆ ಮತ್ತು ಪ್ರತಿಭೆಯ ಅನಾವರಣಕ್ಕೆ ಮುಕ್ತ ವಾತಾವರಣ ಕಲ್ಪಿಸಿಕೊಡಲಾಗಿದೆ. ತಮ್ಮ ಕುಟುಂಬದ ಹಣಕಾಸು ಸಮಸ್ಯೆಗಳು ವಿದ್ಯಾರ್ಥಿಗಳ ಪ್ರತಿಭೆಗೆ ಅಡ್ಡಗಾಲಾಗಬಾರದು. ಹಾಗೇನಾದರೂ ಇದ್ದಲ್ಲಿ ಸೂಪರ್ 30 ಅವರ ಮಾರ್ಗದರ್ಶನಕ್ಕೆ ಸಿದ್ಧವಿರುತ್ತದೆ. ಅವರ ಹಣದ ಅವಶ್ಯಕತೆಯನ್ನು ಪೂರೈಸಲು ನಮ್ಮಿಂದ ಸಾಧ್ಯವಾಗದೆ ಇರಬಹುದು, ಆದರೆ ಮಾರ್ಗದರ್ಶನಕ್ಕೆ ನಾವು ಸದಾ ಸಿದ್ಧ. ಎಳವೆಯಲ್ಲೇ ಪ್ರತಿಭೆ ಗುರುತಿಸುವ ಆವಶ್ಯಕತೆ ನನಗೀಗ ಅರ್ಥವಾಗುತ್ತಿದೆ. ಇನ್ನು ಮುಂದೆ ಪ್ಲಸ್ 2 ಹಂತಕ್ಕಿಂತ ಮೊದಲೇ ಪ್ರತಿಭಾನ್ವೇಷಣೆಗೆ ತೊಡಗಬೇಕು ಎಂದುಕೊಂಡಿದ್ದೇನೆ. ಒಬ್ಬ ವಿದ್ಯಾರ್ಥಿ ಶೇ. 90 ಅಂಕಗಳನ್ನು ಪಡೆಯದೇ ಹೋದರೆ ಏನಾಯಿತು. ಆತ ಸಚಿನ್, ಎಂ.ಎಫ್. ಹುಸೇನ್, ಎ.ಆರ್. ರೆಹಮಾನ್ ಅಥವಾ ಬಿಲ್ ಗೇಟ್ಸ್ ಆಗುವ ಅವಕಾಶ ಇದ್ದೇ ಇದೆ.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .