User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 ಸಾಕ್ಷಿಪ್ರಜ್ಞೆ
ಸಿಪಿಎಂ ಬಗ್ಗುಬಡಿವ ಅತ್ಯುತ್ತಮ ಅವಕಾಶ ಕಳೆದುಕೊಳ್ಳುವ ಹಾದಿಯಲ್ಲಿ 'ದೀದಿ'...

 ಆಪರೇಷನ್ ಕಮಲ: ಹೇಸಿಗೆ ಪಡಬೇಕು, ನಾಚಿ ನರಳಬೇಕು

'ಸಾಕ್ಷಿಪ್ರಜ್ಞೆ' ಇಂದಿನ ಸಾಮಾಜಿಕ- ರಾಜಕೀಯ ಮತ್ತು ಸಾಂಸ್ಕೃತಿಕ ಆಗು- ಹೋಗುಗಳ ಬಗ್ಗೆ ನಾಡಿನ ಹಿರಿಯ ಚಿಂತಕರ ಗ್ರಹಿಕೆ- ಒಳನೋಟಗಳನ್ನು ಬಿಂಬಿಸುವ ಹೊಸ ಸಂದರ್ಶನ ಮಾಲಿಕೆ. ಕನ್ನಡದ ಸಾಕ್ಷಿಪ್ರಜ್ಞೆಯಂತಿರುವ ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅವರ ಸಂದರ್ಶನದೊಂದಿಗೆ ಈ ಮಾಲಿಕೆಯನ್ನು ಆರಂಭಿಸುತ್ತಿದ್ದೇವೆ. 77ರ ಹರೆಯದ ಅನಂತಮೂರ್ತಿಯವರು ದಶಕಗಳಿಂದ ಕನ್ನಡದ ಮಹತ್ವದ ಲೇಖಕರಾಗಿ ಅಷ್ಟೇ ಅಲ್ಲ, ಸಾಮಾಜಿಕ, ರಾಜಕೀಯ ಚಿಂತಕರಾಗಿಯೂ ಗುರುತಿಸಿಕೊಂಡಿದ್ದಾರೆ. ಸಮಾಜವಾದಿ ಯುವಜನ ಸಭಾ ಕಾಲದಿಂದಲೂ ಹಲವು ರಾಜಕೀಯ, ಸಾಮಾಜಿಕ ಹಾಗೂ ಪರಿಸರ ಚಳವಳಿಗಳ ಪ್ರಮುಖ ದನಿಯಾಗಿದ್ದಾರೆ. 'ಸಂಸ್ಕಾರ'ದಿಂದ ಈವರೆಗಿನ ತಮ್ಮ ಬರಹ- ಚಿಂತನೆಗಳಲ್ಲಿ ಸದಾ ಭಾರತೀಯ ಸಮಾಜದ 'ಅಂತಃಸಾಕ್ಷಿ' (ಕ್ರಿಟಿಕಲ್ ಇನ್‌ಸೈಡರ್) ಆಗಿರುವ ಅವರು ಆ ಕಾರಣಕ್ಕಾಗಿಯೇ ಹಲವು ಬಾರಿ ವಿವಾದ- ಆರೋಪಗಳಿಗೂ ತುತ್ತಾದವರು. ಅನಂತಮೂರ್ತಿಯವರೊಂದಿಗೆ ಶಶಿ ಸಂಪಳ್ಳಿ ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ

ನ್ನಡ ಭಾಷೆ ಮತ್ತು ಸಾಹಿತ್ಯದ ಮುಂದಿನ ದಾರಿಯ ಕುರಿತು ನಿಮ್ಮ ಯೋಚನೆ ಏನು?

ನಗರವಾಸಿ ಮಧ್ಯಮ ವರ್ಗದ ಮನೆಗಳಲ್ಲಿ ಹುಟ್ಟುವ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದುವುದರಿಂದ ಇಂತಹ ಮನೆಗಳಿಂದ ಕನ್ನಡವನ್ನು ಬಳಸಬಲ್ಲ, ಬೆಳೆಸಬಲ್ಲ ಓದುವ ವರ್ಗವಾಗಲೀ, ಬರೆಯುವ ಜನರಾಗಲೀ ಮುಂದೆ ಬರಲಾರರು ಎಂಬ ಅನುಮಾನ ನನ್ನದು. ಕನ್ನಡ ಉಳಿದು ಬೆಳೆಯಬೇಕಾದರೆ ಸಾಮಾನ್ಯ ಶಾಲೆಗಳಲ್ಲಿ ಎಲ್ಲ ಮಕ್ಕಳನ್ನೂ ಸಮಾನರೆಂದು ಕಾಣುವ ಕಲಿಕೆ ಪ್ರಾರಂಭವಾಗಬೇಕು. ಬಡ ಕುಟುಂಬದಿಂದ ಹುಟ್ಟಿ ಬರುವ ಮಕ್ಕಳಿಂದ ಶ್ರೀಮಂತ ಕುಟುಂಬದ ಮಕ್ಕಳು ಕಲಿಯುವುದು ಬಹಳ ಇದೆ. ಈಗ ದುಡ್ಡಿರುವವರ ಮಕ್ಕಳು ಆತ್ಮೀಯವಾಗಿ ಏನನ್ನೂ ಕಲಿಯದೆ, ತಮ್ಮ ವಾರಿಗೆಯ ಇತರ ಮಕ್ಕಳ ಜೊತೆ ಸಂಸರ್ಗವಿಲ್ಲದೆ ಬಡವಾಗುತ್ತ ಇದ್ದಾರೆ. ಸಮಾನ ಶಿಕ್ಷಣ ಎಲ್ಲರಿಗೂ ಸಿಕ್ಕಾಗ, ಎಲ್ಲರಿಗೂ ಸಮಾನ ಇಂಗ್ಲಿಷ್ ಶಿಕ್ಷಣವೂ ಸಿಕ್ಕಾಗ ಮುಂದಿನ ಜನಾಂಗದಲ್ಲಾದರೂ ಏರು- ಪೇರುಗಳು ಕಡಿಮೆಯಾಗಿ ನಾವೆಲ್ಲರೂ ಒಂದು ಸಮುದಾಯವೆಂಬ ನಿಜ ಅರ್ಥದ ರಾಷ್ಟ್ರೀಯ ಭಾವನೆ ಹುಟ್ಟುತ್ತದೆ ಎಂದು ನನ್ನ ದೃಢವಾದ ನಿಲುವು.

ಭಾಷೆಗೆ ಅನ್ನ ಕೊಡುವ ಶಕ್ತಿಯೂ ಬೇಕು. ಇಲ್ಲವಾದರೆ ಯಾವ ಭಾಷೆಯನ್ನೂ ನಾವು ಒತ್ತಾಯಪೂರ್ವಕವಾಗಿ ಕಲಿಸಲಾಗದು ಎಂಬ ವಾದಕ್ಕೆ ನೀವೇನೆನ್ನುತ್ತೀರಿ?

ಈಗ ಅನ್ನ ಬೆಳೆಯುವವರ ಭಾಷೆ ಕನ್ನಡ; ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಉಣ್ಣುವವರ ಭಾಷೆ ಇಂಗ್ಲಿಷ್. ಎಂತಹ ಇಂಗ್ಲಿಷ್? ತನ್ನ ನೆಲದ ವಾಸನೆ ಕಳೆದುಕೊಂಡು ನಿರ್ಗಂಧಿಯಾದ ಯಾವ ಕಸುವೂ ಇಲ್ಲದ ಇಂಗ್ಲಿಷ್. ಆ ಭಾಷೆಗೆ ಹುಟ್ಟಿದವರಿಗೆ ಅರ್ಥವಾಗಲು, ನಾವು ಆಡುವ ಇಂಗ್ಲಿಷನ್ನು ಎರಡೆರಡು ಬಾರಿ ಆಡಿ ತೋರಿಸಬೇಕಾಗುತ್ತದೆ.

ಕಲಿಕಾ ಮಾಧ್ಯಮದ ವಿಷಯದಲ್ಲಿ ಇರುವ ಗೊಂದಲ ಮತ್ತು ಸರ್ಕಾರದ ನಿಷ್ಕ್ರಿಯತೆ ಬಗ್ಗೆ?

ಯಾವ ಗೊಂದಲವೂ ಇರಲ್ಲ 'ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣದ ನೀತಿ ಕಡ್ಡಾಯವಾದಾಗ'. ನಮ್ಮ ರಾಜ್ಯಾಂಗದ ಪ್ರಕಾರವಾದರೂ ಹುಟ್ಟಿದ ಮಕ್ಕಳೆಲ್ಲರೂ ಸಮಾನರು. ಬೆಳೆದ ನಾವು ಅದೂ- ಇದೂ ಆಗಿ ಮಹನೀಯರಾಗಿರಬಹುದು. ಆದರೆ ಎಲ್ಲ ಮಕ್ಕಳು ಒಂದೇ ಎಂದು ತಿಳಿದು, ಎಲ್ಲ ಮಕ್ಕಳು ಒಂದೇ ಬಗೆಯ ಶಾಲೆಗೆ ಹೋಗತಕ್ಕದ್ದೆಂಬುದು ಕಡ್ಡಾಯವಾದಾಗ, ಮಾಧ್ಯಮ ಯಾವುದಿರಬೇಕೆಂಬ ಪ್ರಶ್ನೆಯೇ ಇರುವುದಿಲ್ಲ.

ಹೊಸ ತಲೆಮಾರಿನ ಯುವಕರಲ್ಲಿ ಸ್ವಂತಿಕೆ ಎಂಬುದು ಕಡಿಮೆ, ಹಾಗೇ ವೈಚಾರಿಕತೆ ಎಂಬುದು ಮರೆಯಾಗುತ್ತಿದೆ ಎಂಬ ಮಾತಿದೆ. ತಾವು ಏನಂತೀರಿ?

ಸಾರಾ- ಸಗಟಾಗಿ ಹೀಗೆ ಹೇಳುವಂತಿಲ್ಲ. ದಿಢೀರನೆ ಶ್ರೀಮಂತರಾಗುವುದು ಕೆಲವರಿಗೆ ಸಾಧ್ಯವಾಗುವುದರಿಂದ ಬಹಳ ಯುವಕರು ತಾವು ಹಾಗಾಗದಿದ್ದರೆ ನಿಷ್ಪ್ರಯೋಜಕರು ಎಂಬ ಭಾವನೆಯಿಂದ ನರಳಬಹುದು. ಇನ್ನು ಇದು ಕೊನೆಯಾದೀತು. ಭ್ರಮಾತ್ಮಕವಾದ ಬಂಡವಾಳಶಾಹಿ ವ್ಯವಸ್ಥೆ ಜಗತ್ತಿನಲ್ಲಿ ಎಲ್ಲೆಲ್ಲೂ ಕುಸಿಯುತ್ತ ಇದೆ. ಇದರಿಂದ ನಮ್ಮ ಒಳಬಾಳು ಬೆಳೆಯುವುದಕ್ಕೆ ಅಗತ್ಯವಾದ ವ್ಯವಧಾನ ಎಲ್ಲರಲ್ಲೂ ಕೊಂಚವಾದರೂ ಕಾಣಿಸಿಕೊಂಡೀತು. ಸರಳವಾದ ಜೀವನಕ್ರಮಕ್ಕೆ ಬೆಲೆಯಿಲ್ಲದೇ ಹೋದರೆ ಜ್ಞಾನಕ್ಕೂ, ಕಲಾಸಾಧನೆಗೂ ಬೆಲೆಯಿಲ್ಲದೆ ಹೋಗುತ್ತದೆ. ಕಾಯುವ ಗುಣ- ಎರಡು ಅರ್ಥಗಳಲ್ಲೂ; ನಮ್ಮ ಭಾವನಾಲೋಕಕ್ಕೆ ಅಗತ್ಯ. ಆಗ ವೈಚಾರಿಕತೆ ಬೆಳೆಯುತ್ತದೆ. ಈಚೆಗೆ ಕನ್ನಡದಲ್ಲಿ ಬರೆಯುತ್ತ ಇರುವ ಕೆಲವು ಕಥೆಗಾರರು, ಕವಿಗಳು ನನ್ನಲ್ಲಿ ಭರವಸೆ ಹುಟ್ಟಿಸಿದ್ದಾರೆ.

ನೀವು ಬರವಣಿಗೆ ಆರಂಭಿಸಿದ ಸಂದರ್ಭದಲ್ಲಿ ಇಡಿಯಾಗಿ ಕನ್ನಡದ ಹೊಸ ತಲೆಮಾರಿನ ಸೃಜನಶೀಲ ಮನಸ್ಸುಗಳೆಲ್ಲ ಯಾವ ಗುಂಪುಗಾರಿಕೆಯಿಲ್ಲದೆ ಒಂದಾಗಿ, ಚರ್ಚೆ, ಸಂವಾದ, ಹೋರಾಟಗಳ ಮೂಲಕ ಪರಸ್ಪರ ಬೆಳೆದಿರಿ. ಆದರೆ, ಇಂದು ಕನ್ನಡದ ಹೊಸ ತಲೆಮಾರಿನ ಬರಹಗಾರರಲ್ಲಿ ಗುಂಪುಗಾರಿಕೆಯೇ ಹೆಚ್ಚಾಗಿದೆ ಅಲ್ಲವೆ?

ಗುಂಪುಗಾರಿಕೆ ಅಗತ್ಯವಾಗುವುದು ಮೀಡಿಯೋಕರ್ ಆದ, ಅಲ್ಪವಾದ ಪ್ರತಿಭೆಯುಳ್ಳವರಿಗೆ. ಈ ಗುಂಪುಗಳೂ ಬಹಳ ಕಾಲ ಉಳಿಯುವುದಿಲ್ಲ. ಎಲ್ಲ ಕಾಲದಲ್ಲೂ ಸ್ವಾರ್ಥಮೂಲವಾದ ಗುಂಪುಗಳು ಇದ್ದೇ ಇರುತ್ತವೆ. ಜೊತೆಗೇ, ಸಮುದಾಯದಲ್ಲಿ ಒಬ್ಬನಾಗಿ, ಒಬ್ಬಳಾಗಿ, ಹೀಗಿರುವಂತೆಯೇ ಏಕಾಕಿಯೂ ಆಗಿ ಆತ್ಮ ವಿಮರ್ಶೆಯಲ್ಲಿ ಬೆಳೆಯುವ ಪ್ರತಿಭೆಗಳೂ ಇರುತ್ತವೆ. ನಮ್ಮ ಆತುರದ ಮೀಡಿಯಾಗಳಿಗೆ ಇಂತಹ ಪ್ರತಿಭೆಗಳು ತಕ್ಷಣ ಕಾಣುವುದಿಲ್ಲ. ಅಂತಹ ಪ್ರತಿಭೆಗಳ ಜೊತೆ ಇಂದಿಗೂ ನಾನು ಸಂಬಂಧ ಉಳಿಸಿಕೊಂಡಿದ್ದೇನೆ.

ನಾವು ಬೆಳೆಯುವ ಕಾಲದಲ್ಲಿ 'ಪ್ರಜಾವಾಣಿ'ಯಂತಹ ಪತ್ರಿಕೆಗಳೂ ನಮ್ಮ ಜೊತೆ ಇದ್ದವು; ಇದು ನಮ್ಮ ಪುಣ್ಯ.

ಇವತ್ತು ಬರೆಯುತ್ತಿರುವ ಹೊಸ ತಲೆಮಾರಿನವರ ಸಾಹಿತ್ಯ ಕುರಿತು ಹೇಳಿ...

ನಾನು ಈಚೆಗೆ ಒಂದು ಕಥೆ ಓದಿದೆ: ಅಮರೇಶ್ ನುಗಡೋಣಿಯವರ 'ಸವಾರಿ'. ಹಾಗೆಯೇ ಗೆಳೆಯರೊಬ್ಬರು ಹೇಳಿದರೆಂದು ಪ್ರಹ್ಲಾದ ಅಗಸನಕಟ್ಟೆಯವರ 'ಮನದ ಮುಂದಣ ಮಾಯೆ' ಓದಿದೆ. ಕುಂವೀಯವರನ್ನು ಓದುತ್ತ ಇದ್ದೇನೆ. ನನಗೆ ಇವರೆಲ್ಲರೂ ತುಂಬ ಇಷ್ಟವಾಗಿದ್ದಾರೆ. ನಾನು ತಡವಾಗಿ ಇವರನ್ನು ಓದುತ್ತ ಇರುವುದು. ಹೀಗೇ ಹಲವರು ನನಗೆ ಇನ್ನೂ ಗೊತ್ತಿಲ್ಲದೆ ಇರುವವರು ಇರಬಹುದು. ಹೀಗೆ ಹೆಸರು ಹೇಳುವುದೂ ಸಾಹಿತ್ಯದ ರಾಜಕೀಯವಾಗಿಬಿಡಬಹುದು... ಕೆಲವರು ಕೆಲಕಾಲದಲ್ಲಿ ಮುಖ್ಯರಾಗುತ್ತಾರೆ; ಈಗ ಮುಖ್ಯರಾಗಿ ಕಾಣದವರು ಮುಂದೆ ಮುಖ್ಯರಾಗಿ ಕಾಣಬಹುದು.

ಮಹತ್ವದ ಕೃತಿಗಳ ಮೂಲಕ ಭಾರತೀಯ ಸಮಾಜ ಮತ್ತು ಪರಂಪರೆಯ ಕುರಿತು ಬಹಳ ಮುಖ್ಯವಾದ ತಾತ್ವಿಕ ಪ್ರಶ್ನೆಗಳನ್ನು ಎತ್ತಿದವರು ನೀವು... ಹೊಸ ತಲೆಮಾರಿನವರ ಬಹುಪಾಲು ಸಾಹಿತ್ಯ ಕೇವಲ ಮನರಂಜನೆಯ ಮಟ್ಟಕ್ಕೆ ಸೀಮಿತವಾಗುತ್ತಿರುವುದರಿಂದ ಈಗ ಸಾಹಿತ್ಯದ ಗಟ್ಟಿತನ ಮತ್ತು ತಾತ್ವಿಕತೆಯ ಪ್ರಶ್ನೆ ಮತ್ತೆ ಅಲ್ಲಲ್ಲಿ ಚರ್ಚೆಗೆ ಬರುತ್ತಿದೆ. ನಿಮ್ಮ ಅಭಿಪ್ರಾಯ ಏನು?

ನನಗೇ ನಾನು ಹರಟಿಕೊಂಡಂತೆ ಇರುವ ಮೇಲಿನ ಮಾತುಗಳಲ್ಲಿ ನಿಮಗೆ ಉತ್ತರವಿದೆ. ಮನಸ್ಸನ್ನು ಬೆಳೆಸುವುದೇ ರಂಜನೆಯೂ ಆಗುವುದು ಒಳ್ಳೆ ಸಾಹಿತ್ಯದ ಲಕ್ಷಣ. ನಾನು ಬರೆಯುವುದು ಗಟ್ಟಿಯೋ ಟೊಳ್ಳೊ ನನಗೇ ಗೊತ್ತಿರುವುದಿಲ್ಲ- ನಾನು ಗೌರವಿಸುವ ಮನು ಚಕ್ರವರ್ತಿಯಂಥವರು ನನಗೆ ಹೇಳುವ ತನಕ. ಹಿಂದೆ ನಿಷ್ಠುರ ಪ್ರಾಮಾಣಿಕತೆಯ ಜಿ.ಎಚ್. ನಾಯಕರಂಥವರು ಮೈಸೂರಿನ ದಿನಗಳಲ್ಲಿ ನನ್ನನ್ನೇ ನಾನು ಕಾಣುವ ಕನ್ನಡಿಯಂತೆ ಇದ್ದರು. ಆದರೆ ನನಗೆ ಪ್ರಿಯರಾದ ಇಂತಹ ಓದುಗರು ಹೇಳುವುದನ್ನೂ ನಾನು ಒಪ್ಪುವ ಅಥವಾ ಒಪ್ಪದ ಎಚ್ಚರ ತಪ್ಪದಂತೆ ಸ್ವೀಕರಿಸುತ್ತೇನೆ. ನಾನು ಬರೆಯುವ ಎಲ್ಲವುದಕ್ಕೂ ಇದು ತನ್ನದು ಎಂಬಂತೆ ಮಿಡಿಯಬಲ್ಲವರಾಗಿದ್ದವರು ಗೆಳೆಯ ಸುಬ್ಬಣ್ಣ. ಅವರಿಗಾಗಿಯೇ ನಾನು ಬರೆಯುತ್ತ ಇದ್ದೇನೋ ಎಂದು ಹಿಂದೆ ಅನ್ನಿಸುತ್ತ ಇತ್ತು. ನನ್ನ ತಾತ್ವಿಕ ಪ್ರಶ್ನೆಗಳ ಮೂಲ ಸುಬ್ಬಣ್ಣನವರ ಕಾಳಜಿಗಳಿಗೆ ನಾನು ಮಿಡಿಯುವುದರಿಂದಲೂ ಬಹುತೇಕ ಹುಟ್ಟಿಕೊಳ್ಳುತ್ತ ಇದ್ದವು. ನನಗೆ ವಿರೋಧಿಗಳು ಇದ್ದಾರೆ; ವೈರಿಗಳು ಇಲ್ಲ- ಕನ್ನಡ ಲೋಕದಲ್ಲಿ.

ನಮ್ಮ ಕಾಲದ ಕನ್ನಡದ ಪ್ರಮುಖ ವಸಾಹತೋತ್ತರ ಚಿಂತಕರಲ್ಲಿ ತಾವೂ ಒಬ್ಬರು. ದೇಸೀವಾದ ಹಾಗೂ ಕೋಮುವಾದಗಳ ನಡುವಿನ ಗೆರೆ ಮುಸುಕಾಗುತ್ತಿರುವ ಇಂದಿನ ಸಂದರ್ಭದಲ್ಲಿ ನಮ್ಮ 'ದೇಸಿತನ'ಕ್ಕೆ ಹೊಸ ಪರಿಭಾಷೆಯ ಅವಶ್ಯಕತೆ ಇದೆ ಎನಿಸುವುದಿಲ್ಲವೇ?

ಈ ದೇಸಿತನಕ್ಕಾಗಿಯೇ ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣ ಎಲ್ಲ ಮಕ್ಕಳಿಗೂ ಸಿಗಬೇಕೆಂದು ನಾನು ಹಂಬಲಿಸುವುದು. ಕಾಂಕ್ರೀಟಾದ ಕಾರ್ಯಕ್ರಮಗಳು ಇದಕ್ಕೆ ಅಗತ್ಯ. ಉದಾಹರಣೆಗೆ; ಗಣಿಗಾರಿಕೆ ಮಾಡಿ ಅದಿರು ಮಾರುವುದು ಕಾನೂನು ಬಾಹಿರವಾಗಬೇಕು. ರೈತರ ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ವ್ಯವಸಾಯಕ್ಕೇ ಉಪಯೋಗಿಸಬೇಕು. ನಮ್ಮ ಎಲ್ಲ 'ಅಭಿವೃದ್ಧಿ' ಯೋಜನೆಗಳಿಗೂ ತಳಪಾಯ ಸರ್ವೋದಯ ತತ್ವವಾಗಿರಬೇಕು. ನಾವು ಸ್ಥಳೀಯರಾಗಿ ಉಳಿದಿದ್ದೇ ಇಡೀ ಪ್ರಪಂಚದ ಎಲ್ಲ ವಿಚಾರಗಳಿಗೂ ಮುಕ್ತ ಮನಸ್ಸಿನಿಂದ ಸ್ಪಂದಿಸಬೇಕು. ಹೆಗೆಲ್ ಹೇಳುತ್ತಾನೆ: ಖಿಡಿuಣh is ಛಿoಟಿಛಿಡಿeಣe. ನಮ್ಮ ಅಂತರಂಗದ ಎಲ್ಲ ಅಸ್ಪಷ್ಟ ವಿಚಾರಗಳು ನೈಜನೆಲೆಯಲ್ಲಿ ಪ್ರತ್ಯಕ್ಷವಾಗುವಷ್ಟು ಮಾತ್ರ ನಿಜ ಎಂಬ ಸಂಕಲ್ಪದಲ್ಲಿ ನಮ್ಮ ಎಲ್ಲ ಕೆಲಸಗಳನ್ನೂ ನಾವು ಮಾಡಬೇಕು. ಬರವಣಿಗೆ ಬಗ್ಗೆಯೂ ಇದು ನಿಜ; ಕೃಷಿಯ ಬಗ್ಗೆಯೂ ನಿಜ. ಕನ್ನಡದ ಹಿತ್ತಲಲ್ಲೇ ಉಳಿದುಬಿಟ್ಟಿರುವ ಅಸಂಖ್ಯಾತರು ವಿದ್ಯಾವಂತರಾದಾಗ ಈ ದೇಸಿ ಎನ್ನುವುದು ಜ್ಞಾನಾರ್ಜನೆಯ ಸೈನ್ಯದಂತೆ ಇರುತ್ತದೆ. ಫ್ರಾನ್ಸ್, ಇಟಲಿಗಳ ಹಾಗೆ ಕರ್ನಾಟಕವೂ ಒಂದು ಭಾರತೀಯ ಕ್ಷೇತ್ರವಾಗುತ್ತದೆ.

ಕರ್ನಾಟಕದ ಮಟ್ಟಿಗಂತೂ ಕಳೆದ ಒಂದು ದಶಕದಿಂದ ಹಿಂದೂ ರಾಷ್ಟ್ರೀಯತೆಯನ್ನು ಬೆಂಬಲಿಸದ ಮತ್ತು ಅದನ್ನು ವಿರೋಧಿಸುವವರೆಲ್ಲಾ ರಾಷ್ಟ್ರ ವಿರೋಧಿಗಳು ಮತ್ತು ಕೆಲವೊಮ್ಮೆ ನಕ್ಸಲ್ ಬೆಂಬಲಿಗರು ಎಂಬಂತೆ ಬಿಂಬಿಸಲಾಗುತ್ತಿದೆ. ಈ ಬಗ್ಗೆ ಹೇಳಿ..

ಜನರ ಮೇಲಿನ ಪ್ರೀತಿಯಿಲ್ಲದವನು ದೇಶದ್ರೋಹಿ. ದ್ವೇಷ ಸಾಧನೆಗೆ ನೆವಗಳನ್ನು ಹುಡುಕುವ ಹಿಂದುತ್ವ ಮಾನವ ಧರ್ಮಕ್ಕೆ ವಿರೋಧಿಯಾದ ವಿಕೃತ ಮನಸ್ಸಿನದು. ಅವರು ಒಂದೋ ರೋಗಿಗಳು; ಅಥವಾ ನಮ್ಮ ದೇಶವನ್ನು ಇನ್ನಷ್ಟು ಒಡೆಯುವವರು. ದ್ವೇಷದ ತಾಲಿಬಾನರು ಪಾಕಿಸ್ತಾನವನ್ನೆ ನಾಶ ಮಾಡುತ್ತ ಇದ್ದಾರೆ. ದ್ವೇಷದ ಹಿಂದುತ್ವವಾದಿಗಳು ಭಾರತದ ನಾಗರಿಕತೆಯನ್ನು ನಾಶ ಮಾಡುವವರಾಗುತ್ತಾರೆ. ಇವರು ಕೇಸರಿ ತೊಟ್ಟ ನಾಸ್ತಿಕರು; ಕೊಲ್ಲುವುದರಲ್ಲಿ ಖುಷಿಯಿರುವಾತ ಹೇಗೆ ಆಸ್ತಿಕನಾದಾನು? ದೇವರು ಇದ್ದಾನೆ ಎಂದು ನಂಬುವ ನಮ್ಮ ದಾಸರು ವಚನಕಾರರು, ಅವನು ಇದ್ದಾನೊ ಇಲ್ಲವೊ ಎಂದು ತಳಮಳದಲ್ಲಿ ಹುಡುಕುವ ಈ ಕಾಲದವರು ಮಾತ್ರ ನಮ್ಮ ಭಾರತೀಯ ನಾಗರಿಕತೆಯ ನೈಜ ವಾರಸುದಾರರು. ನಕ್ಸಲರು ಈ ವ್ಯವಸ್ಥೆಯನ್ನು ವಿರೋಧಿಸಿ, ಇನ್ನಷ್ಟು ಹೆಚ್ಚು ಕ್ರೂರವಾದ ವ್ಯವಸ್ಥೆಯನ್ನು ಕಟ್ಟಲು ಹವಣಿಸುವವರು- ಸ್ಟಾಲಿನ್, ಮಾವೋ, ಹಿಟ್ಲರ್, ಬುಷ್- ಈ ಎಲ್ಲರೂ ಮಾನವ ದ್ವೇಷಿಗಳು.

ಇಂದು ಭಾರತದಲ್ಲಿ ರಾಷ್ಟ್ರ ಪರಿಕಲ್ಪನೆಯನ್ನೇ ಕೆಲವು ಸಂಘಟನೆಗಳು ಹೈಜಾಕ್ ಮಾಡುತ್ತಿವೆ ಎನಿಸುವುದಿಲ್ಲವೆ? ಒಂದು ವಿಕೃತ ಅಥವಾ ವಿಕಲ ರಾಷ್ಟ್ರೀಯತೆಯೇ ಪ್ರಧಾನ ಧಾರೆಯಾಗುತ್ತಿದೆ... ಅಲ್ಲಿ ದೇಶದ ಭಿನ್ನ ಸಂಸ್ಕೃತಿ- ಭಿನ್ನ ನಂಬಿಕೆಯ ಧರ್ಮ- ಸಮುದಾಯಗಳಿಗೆ ಅವಕಾಶವಿಲ್ಲದಂತಾಗುತ್ತಿದೆ...

ಹಾಗೇನೂ ಆಗಿಲ್ಲ. ಬಿಜೆಪಿ ಮತ ದ್ವೇಷದ ರಾಜಕಾರಣವನ್ನೆ ಮುಂದುವರಿಸಿದರೆ ಮಣ್ಣು ಮುಕ್ಕುತ್ತದೆ. ಇದು ಅವರಲ್ಲಿ ಇರುವ ಕೆಲವು ಪ್ರಜ್ಞಾವಂತರಿಗೆ ಈಗಾಗಲೇ ಗೊತ್ತಾಗಿದೆ. ಅವರಿಗೆ ನಮ್ಮ ಪ್ರಜಾತಂತ್ರದಲ್ಲಿ ಅವಕಾಶವಿರುವುದು ಅವರು ಒಂದು ಪರ್ಯಾಯವನ್ನು ಪ್ರತಿನಿಧಿಸುವ ಕನ್ಸರ್ವೇಟಿವ್ ಪಕ್ಷವಾಗಿ ಬೆಳೆದಾಗ.

ಕರ್ನಾಟಕದ ಮಟ್ಟಿಗಂತೂ ಕೆಲವು ಸಂಶೋಧಕ- ಸಾಹಿತಿಗಳೂ ಸೇರಿದಂತೆ ಬಹುಸಂಖ್ಯಾತ ಸಾಹಿತ್ಯ ಮತ್ತು ಪತ್ರಿಕಾ ವಲಯ ಅಂತಹ 'ವಿಕಲ ರಾಷ್ಟ್ರೀಯವಾದ'ದ ಪರವಾಗಿಯೇ ಕೆಲಸ ಮಾಡುತ್ತಿದೆಯಲ್ಲವೆ?

ಡಾ. ಚಿದಾನಂದ ಮೂರ್ತಿಗಳು ಮಾತ್ರ ಒಳ್ಳೆಯ ಸಂಶೋಧಕರಾಗಿ ಇದ್ದವರು. ಈಗ ಅವರ 'ಸಂಶೊಧನೆಗಳೆಲ್ಲವೂ' ರಾಜಕೀಯವಾದ ಭ್ರಮೆಗಳನ್ನು ಬೆಂಬಲಿಸುವ ವಸ್ತು ನಿಷ್ಠವಲ್ಲದ ಪತ್ರಿಕಾ ಹೇಳಿಕೆಗಳು. ಉಳಿದವರು ನನ್ನ ಪ್ರಕಾರ ನಗಣ್ಯರು. ಹಲವು ಪತ್ರಿಕೆಗಳು ವ್ಯಾಪಾರೀ ಉದ್ಯಮಗಳು. ಸದ್ಯದ ಲಾಭದ ಮೇಲೆ ಕಣ್ಣಿಟ್ಟು ಮಾತಾಡುವ ಮಾಧ್ಯಮಗಳು. ಅವರದು ಸೋಗಿನ ರಾಷ್ಟ್ರೀಯತೆ. ಅಥವಾ ಜಾಹೀರಾತು ಹೆಚ್ಚಿಸುವ ರಾಷ್ಟ್ರೀಯತೆ.

ನಮ್ಮ ಕಾಲದ ಬಹುದೊಡ್ಡ ಸಮಸ್ಯೆ ಭಯೋತ್ಪಾದನೆ. ಒಂದು ದೇಶ, ಸಮುದಾಯದ ವಿರುದ್ಧ ಹೊರಗಿನವರಿಂದ ನಡೆಯುವ ದಾಳಿಗಿಂತ ದೇಶದ ಒಳಗೇ, ಒಂದು ಸಮುದಾಯದ ಒಳಗೇ ಭಯೋತ್ಪಾದಕ ಶಕ್ತಿಗಳು ಬಲಶಾಲಿಯಾಗುತ್ತಿರುವುದು ಆತಂಕದ ಸಂಗತಿ. ಆ ಹಿನ್ನೆಲೆಯಲ್ಲಿ ನಮ್ಮ ಸಾಮಾಜಿಕ- ರಾಜಕೀಯ ವ್ಯವಸ್ಥೆಯ ಪಾತ್ರದ ಬಗ್ಗೆ ಹೇಳಿ...

ಹಿಂಸೆಯ ಎಡ- ಬಲ ಎನ್ನುವ ನನ್ನ ಒಂದು ಲೇಖನದಲ್ಲಿ ಈ ಬಗ್ಗೆ ಬರೆದಿದ್ದೇನೆ. 'ಬಲಪಂಥೀಯರ' ಹಿಂಸೆಗಳೆಲ್ಲವೂ ಭೂತಕಾಲನಿಷ್ಠೆಯವು. ಎಡಪಂಥೀಯರಾದ ನಕ್ಸಲರ ಹಿಂಸೆ ಭವಿಷ್ಯದಲ್ಲಿ ಕಟ್ಟುವ ರಾಜ್ಯಕ್ಕಾಗಿ. ತಾಲಿಬಾನರ ಹಿಂಸೆಯಂತೂ ಸತ್ತ ಮೇಲೆ ಸಿಗುವ ಸ್ವರ್ಗ ಸುಖಕ್ಕಾಗಿ. ಖಿಡಿuಣh is ಛಿoಟಿಛಿಡಿeಣe ಎಂದು ತಿಳಿದು, ಇಲ್ಲಿ ಸಲ್ಲುವವನು ಅಲ್ಲಿಯೂ ಸಲ್ಲುವನಯ್ಯ ಎಂದು ವಚನಕಾರರಂತೆ ನಂಬುವವರು ಈ ಆತಂಕವನ್ನು ನಿವಾರಿಸುವ ಉಪಾಯಗಳನ್ನು ರಾಜಕೀಯವಾಗಿಯೂ ಹುಡುಕುತ್ತ ಇರುತ್ತಾರೆ.

ರಾಜಕಾರಣ ಎಂಬುದು ಇಂದು ಆರ್ಥಿಕ ಬಲಾಢ್ಯರ ಸ್ವತ್ತಾಗುತ್ತಿದೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಾಗುವ ಪರಿಣಾಮಗಳು? ಪರ್ಯಾಯ ಚಳವಳಿಗಳು, ಪ್ರತ್ಯೇಕತಾವಾದಿ ಹೋರಾಟಗಳ ಹಿನ್ನೆಲೆಯಲ್ಲಿ...

ಪರಿಸರ ರಕ್ಷಣೆಯ ಚಳವಳಿ, ಮೇಧಾ ಪಾಟ್ಕರ್ ಚಳವಳಿ- ಇವೂ ರಾಜಕೀಯ ಚಳವಳಿಗಳೇ. ನಾವು ಸತ್ಯವೆಂದು ತಿಳಿದುದಕ್ಕಾಗಿ ಮಾತಾಡಲು ಅಂಜದಿರುವುದೂ ರಾಜಕೀಯ ಚಳವಳಿಯೇ. ನಮ್ಮ ಜಿ. ರಾಜಶೇಖರ ಅವರಂಥವರನ್ನು ಯಾವ ಗಣಿಕಾರ ಕೊಳ್ಳಬಲ್ಲ ಹೇಳಿ? ಅವರು ಈಗ ಕೊಂಡು ಅಧಿಕಾರಕ್ಕೆ ತಂದವರೆಲ್ಲ ಅವರ ಮಕ್ಕಳಿಗೂ ಮುಂದೊಂದು ಕಾಲದಲ್ಲಿ ಮುಜುಗರ ತರಬಹುದೆಂಬ ಭರವಸೆ ನನಗೆ ಇದೆ.

ಇಂದಿನ ರಾಜಕೀಯ ಮತ್ತು ಸಾಮಾಜಿಕ ಅಪಾಯಗಳ ಹಿನ್ನೆಲೆಯಲ್ಲಿ ಚುನಾವಣಾ ವ್ಯವಸ್ಥೆಯಲ್ಲಿನ ಗಂಭೀರ ದೋಷಗಳು ಮತ್ತು ನ್ಯಾಯಾಂಗದ ಲೋಪಗಳ ಪಾತ್ರ ಏನು?

ಎಲ್ಲರೂ ಕಡ್ಡಾಯವಾಗಿ ವೋಟು ಹಾಕಬೇಕಾದ, ನನ್ನ ಆಯ್ಕೆಗೆ ಈಗ ಯಾವ ಅಭ್ಯರ್ಥಿಯೂ ಇಲ್ಲವೆಂದೇ ನಕಾರಾತ್ಮಕ ವೋಟ್ ಹಾಕಲು ಅವಕಾಶವಿರುವ ಬದಲಾವಣೆಗಳು ಆಗಬೇಕು.

ಭಾರತದ ಇಂದಿನ ಸ್ಥಿತಿಯಲ್ಲಿ, ನಮ್ಮ 'ಸಮಾಜವಾದಿ ಗಣತಂತ್ರ' ವ್ಯವಸ್ಥೆಯ ಕನಸು ನನಸಾಗಿದೆ ಎನಿಸುತ್ತದೆಯೆ?

ನನಸಾಗುವ ದಿಕ್ಕಿನಲ್ಲಿ ಎಡವುತ್ತಲೋ ಮುಗ್ಗರಿಸುತ್ತಲೋ ಈ ತನಕ ಇದ್ದೆವು; ಈಗ ಮಂಕಾಗಿದ್ದೇವೆ. ಆದರೆ, ಈ ಚುನಾವಣೆ ನನ್ನಲ್ಲಿ ಮತ್ತೆ ಭರವಸೆ ತಂದಿದೆ.

ಕಳೆದ ಬಜೆಟ್‌ನಲ್ಲಿ ನಮ್ಮ ಮುಖ್ಯಮಂತ್ರಿಗಳು ಸಾರ್ವಜನಿಕ ತೆರಿಗೆ ಹಣವನ್ನು ಕೆಲವೇ ಕೆಲವು ಜಾತಿ- ಜನಾಂಗಗಳಿಗೆ ಸೀಮಿತವಾದ ಮಠ- ಮಾನ್ಯಗಳಿಗೆ ಹಂಚಿದರು. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ಸಾರ್ವಜನಿಕ ಹಣದ ಬಳಕೆ- ವೆಚ್ಚ ಪಾರದರ್ಶಕವಾಗಿಲ್ಲ, ಉತ್ತರದಾಯಿತ್ವ ಇಲ್ಲ...

ಇದು ಹೇಸಿಗೆ ಹುಟ್ಟಿಸುವ ಕೆಲಸ, ಮಾತ್ರವಲ್ಲ; ಮಠಗಳಿಗೆ ಜನರಲ್ಲಿ ಅಷ್ಟೋ- ಇಷ್ಟೋ ಇದ್ದ ಪಾವಿತ್ರ್ಯದ ಭಾವನೆಯನ್ನೂ ನಾಶಮಾಡುವ ಕೆಲಸ. ಯಾರೂ ಕಾಸಿಗೆ ಕೈಯೊಡ್ಡುವ ಮಠಗಳನ್ನು ಅಂತರಂಗದಲ್ಲಿ ಗೌರವಿಸುವುದಿಲ್ಲ.

ಕರ್ನಾಟಕ ಸರ್ಕಾರ ಇದೀಗ ಸಂಸ್ಕೃತ ಮತ್ತು ವೇದ ಅಧ್ಯಯನ ವಿವಿ ಸೇರಿದಂತೆ ಮಾಧ್ಯಮ ವಿವಿ, ಜಾನಪದ ವಿವಿ ಹೀಗೆ ಮನಸ್ಸಿಗೆ ತೋಚಿದ್ದಕ್ಕೆಲ್ಲಾ ವಿವಿ ಮಾಡಲು ಹೊರಟಿದೆಯಲ್ಲ?

ವೇದಗಳು ಆಳವಾದ ಅಧ್ಯಯನಕ್ಕೆ ಅರ್ಹವಾದವು. ಈ ಕೆಲಸ ಹಲವು ಶಿಸ್ತುಗಳಲ್ಲಿ ಇನ್ನೊಂದು ಶಿಸ್ತು ಎಂಬಂತೆ ಈಗಿರುವ ನಮ್ಮ ಯೂನಿವರ್ಸಿಟಿಗಳಲ್ಲೇ ನಡೆಯಬೇಕು. ಅದಕ್ಕಾಗಿಯೇ ಇನ್ನೊಂದು ಯೂನಿವರ್ಸಿಟಿ ಹುಟ್ಟಿಕೊಂಡರೆ ತಮ್ಮ ಉಳಿವಿಗಾಗಿ ಅವು ಬಿಸಿನೆಸ್ ಸ್ಟಡೀಸನ್ನು ಪ್ರಾರಂಭಿಸುತ್ತವೆ. ಕೇರಳದ ಸಂಸ್ಕೃತ ವಿಶ್ವವಿದ್ಯಾಲಯ ಕಾಮರ್ಸ್ ಕೋರ್ಸ್‌ಗಳನ್ನು ನಡೆಸಬೇಕಾಗಿ ಬಂತು.

ರಾಜಕೀಯವಾಗಿ ಕರ್ನಾಟಕ ಕಳೆದ ಒಂದು ದಶಕದಲ್ಲಿ ಸಾಕಷ್ಟು ಅಧಃಪತನ ಕಂಡಿದೆ. ಇತ್ತೀಚಿನ 'ಆಪರೇಷನ್ ಕಮಲ'ದಂತಹ ಸಂವಿಧಾನ- ಅವಹೇಳನಕಾರಿ ಬೆಳವಣಿಗೆಯೂ ಸೇರಿ... ಇದನ್ನು ಹೇಗೆ ವಿಶ್ಲೇಷಿಸುತ್ತೀರಿ?

ವಿಶ್ಲೇಷಿಸಲು ಹೋಗಬಾರದು; ಹೇಸಿಗೆ ಪಡಬೇಕು; ನಮ್ಮದೇ ತಪ್ಪು ಎಂಬಂತೆ ನಾಚಿ ನರಳಬೇಕು.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .