|
ಆಂಧ್ರಪ್ರದೇಶ: ಆಡಳಿತ
ಡಿಜಿಪಿ 'ಸ್ವಾಮಿ ನಿಷ್ಠೆ' ವಿವಾದ!
ಚು. ಆಯೋಗ, ಮಾಧ್ಯಮಗಳ ವಿರುದ್ಧ ಬಹಿರಂಗ ಯುದ್ಧ
'ನಿ ಷ್ಪಕ್ಷಪಾತ
ಮತ್ತು ಸ್ವಾತಂತ್ರ್ಯ' ನಾಗರಿಕ ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ
ಪ್ರತಿಯೊಬ್ಬರಿಗೂ ಅನ್ವಯವಾಗಲೇಬೇಕಾದ ಮಹತ್ವದ ಅಂಶಗಳೆನ್ನುವುದು ಲೋಕವಿದಿತ.
ಅಷ್ಟೇ ಅಲ್ಲ, ತಮ್ಮ ಹಕ್ಕು ಚಲಾವಣೆ ವ್ಯಾಪ್ತಿಗೂ ಒಂದು ಮಿತಿ ಇದೆ
ಎಂಬುದನ್ನು ಅರಿಯಬೇಕಾಗಿರುವುದು ನಾಗರಿಕ ಸೇವಕರ ಕರ್ತವ್ಯವೂ ಹೌದು. ಆದರೆ,
ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕ ಎಸ್‌ಎಸ್‌ಪಿ ಯಾದವ್ ಅವರಿಗೆ ಈ 'ಮಿತಿ'ಗಳೇ
ಅನ್ವಯವಾದಂತಿಲ್ಲ!
"ಪ್ರತಿಯೊಬ್ಬ ನಾಗರಿಕ ಸೇವಕನೂ ಸರ್ಕಾರಕ್ಕೆ
ನಿಷ್ಠನಾಗಿರಬೇಕು" ಎನ್ನುವುದು ಯಾದವ್ ಮಾತು. ಇದೇ 'ಸ್ವಾಮಿನಿಷ್ಠೆ'ಯಿಂದಲೇ
ಚುನಾವಣೆ ಬಳಿಕ ಅಧಿಕಾರದ ಗಾದಿಗೆ ಮರಳಿರುವ ಯಾದವ್, ಇದೀಗ ಚುನಾವಣಾ ಆಯೋಗ,
ಮಾಧ್ಯಮ, ವಿರೋಧ ಪಕ್ಷಗಳು ಮತ್ತು 'ಸ್ವಾಮಿನಿಷ್ಠೆ'ರಹಿತ ಹಿರಿಯ ಅಧಿಕಾರಿಗಳ
ವಿರುದ್ಧ ಬಹಿರಂಗ ಯುದ್ಧ ಸಾರಿರುವುದು ಹೊಸ ಸಂವೈಧಾನಿಕ ವಿವಾದಕ್ಕೆ
ಕಾರಣವಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಚುನಾವಣಾ ನೀತಿ
ಸಂಹಿತೆ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ತಮ್ಮನ್ನು ಡಿಜಿಪಿ
ಹುದ್ದೆಯಿಂದ ವಜಾಗೊಳಿಸಿದ್ದ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಪತ್ರ
ಬರೆದಿರುವ ಡಿಜಿಪಿ ಎಸ್‌ಎಸ್‌ಪಿ ಯಾದವ್ ರಾಜ್ಯದಾದ್ಯಂತ ಸಂಚಲನ
ಮೂಡಿಸಿದ್ದಾರೆ.
ಕಳೆದ ಚುನಾವಣೆ ಸಂದರ್ಭದಲ್ಲಿ, ಕಾಂಗ್ರೆಸ್
ಪಕ್ಷ ಮತ್ತು ಮುಖ್ಯಮಂತ್ರಿಗಳ ಕುರಿತು ಸಾರ್ವಜನಿಕವಾಗಿ ಪ್ರಶಂಸೆಗಳ
ಸುರಿಮಳೆಗೈದಿದ್ದ ಡಿಜಿಪಿ, 37,500 ಮಂದಿ ಪೊಲೀಸ್ ಪೇದೆಗಳ ನೇಮಕ ಮಾಡುವ
ಮೂಲಕ ದೇಶದಲ್ಲಿ ಯಾವುದೇ ಸರ್ಕಾರ ಮಾಡಿರದ ಅಭೂತಪೂರ್ವ ಕಾರ್ಯವನ್ನು
ಕಾಂಗ್ರೆಸ್ ಪಕ್ಷ ಮಾಡಿದೆ ಎಂದಿದ್ದರು. ಇದರ ಹೊರತಾಗಿ ಚುನಾವಣಾ ಆಯೋಗದ
ಅನುಮತಿ ಪಡೆಯದೇ ಸಿಂಗಾಪುರ್ ಪ್ರವಾಸ ಮುಗಿಸಿ ರಾಜ್ಯದಾದ್ಯಂತ ವಿವಾದಕ್ಕೆ
ಗ್ರಾಸವಾಗಿದ್ದರು.
ಪೊಲೀಸ್ ಸಿಬ್ಬಂದಿಗೆ ಅನುಕೂಲ ಕಲ್ಪಿಸಲು
ಮುಖ್ಯಮಂತ್ರಿಗಳು ಕೈಗೊಂಡ ಕಾರ್ಯಗಳ ಗುಣಗಾನ ಮಾಡಿದ ಭಾಷಣದ ವಿಡಿಯೋ
ತುಣುಕುಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಾಗಿತ್ತು. ರಾಜ್ಯದಲ್ಲಿ 'ಮುಕ್ತ
ಮತ್ತು ಪಾರದರ್ಶಕ ಚುನಾವಣೆ' ನಡೆಸುವ ದೃಷ್ಟಿಯಿಂದ ಆಯೋಗ ಯಾದವ್ ಅವರನ್ನು
ವಜಾಗೊಳಿಸಿ, ಎ.ಕೆ. ಮೊಹಾಂತಿ ಅವರನ್ನು ಪೊಲೀಸ್ ಮಹಾನಿರ್ದೇಶಕರಾಗಿ
ನೇಮಿಸಿತ್ತು.
ಆದರೆ, ದುರದೃಷ್ಟವೆಂದರೆ ವೈ.ಎಸ್. ರಾಜಶೇಖರ
ರೆಡ್ಡಿ ಮುಖ್ಯಮಂತ್ರಿಯಾಗಿ ಮರು ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಗಳೊಳಗೆ
ಯಾದವ್ ಮರಳಿ ಅದೇ ಹುದ್ದೆ ಏರಿದ್ದಾರೆ! ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡ
ತಕ್ಷಣ, ತಮ್ಮ ಹಳೆಯ ವಿವಾದಗಳನ್ನು ಕೆದಕಿರುವ ಯಾದವ್, ತಮ್ಮನ್ನು ಡಿಜಿಪಿ
ಹುದ್ದೆಯಿಂದ ತೆರವುಗೊಳಿಸಿರುವ ಕಾರಣ ಕೋರಿ ಮುಖ್ಯ ಚುನಾವಣಾ ಅಧಿಕಾರಿ ಐ.ವಿ
ಸುಬ್ಬರಾವ್ ಅವರಿಗೆ ಮೂರು ಪತ್ರಗಳನ್ನು ಬರೆದಿದ್ದಾರೆ.
"ರಾಜ್ಯ ಆಡಳಿತ ಇಲಾಖೆಯ ಪರವಾಗಿ, ಡಿಜಿಪಿ
ಪತ್ರದ ಕುರಿತು ಭಾರತೀಯ ಚುನಾವಣಾ ಆಯೋಗದ ಗಮನಕ್ಕೆ ತರುವುದು ನನ್ನ ಕರ್ತವ್ಯ.
ಈಗಾಗಲೇ ಡಿಜಿಪಿ ಪತ್ರದ ಕುರಿತು ಮುಖ್ಯಮಂತ್ರಿಯವರಿಗೂ ತಿಳಿಸಿದ್ದೇನೆ"
ಎನ್ನುತ್ತಾರೆ ಮುಖ್ಯ ಚುನಾವಣಾ ಅಧಿಕಾರಿ ಸುಬ್ಬರಾವ್.
"ಚುನಾವಣಾ ಆಯೋಗ ಒಂದು ಸಂವೈಧಾನಿಕ
ಪ್ರಾಧಿಕಾರ. ಅದು ತನ್ನ ನಿರ್ಧಾರಗಳ ಕುರಿತು ಯಾರಿಗೂ ವಿವರಗಳನ್ನು ನೀಡುವ
ಅಗತ್ಯವಿಲ್ಲ. ಆಯೋಗ ರಾಷ್ಟ್ರಪತಿಗೆ ಮಾತ್ರ ಉತ್ತರ ನೀಡಬಲ್ಲುದು. ಹಾಗಾಗಿ
ಡಿಜಿಪಿ ಪತ್ರಕ್ಕೆ ಉತ್ತರಿಸುವುದು ಸಮಂಜಸವಲ್ಲ" ಎನ್ನುತ್ತಾರೆ ಮಾಜಿ ಮುಖ್ಯ
ಚುನಾವಣಾ ಆಯುಕ್ತ ಜೆ.ಎಂ. ಲಿಂಗ್ಡೊ. ಮತ್ತೊಬ್ಬ ಮಾಜಿ ಚುನಾವಣಾ
ಆಯುಕ್ತರಾಗಿರುವ ಟಿ.ಎಸ್. ಕೃಷಮೂರ್ತಿ ಅವರ ಅಭಿಪ್ರಾಯವೂ ಭಿನ್ನವಾಗಿಲ್ಲ.
ಟಿಎಸ್‌ಐ ಜೊತೆ ಮಾತನಾಡಿದ ಅವರು, "ಮುಕ್ತ ಮತ್ತು ಪಾರದರ್ಶಕ ಚುನಾವಣೆಗೆ
ಪ್ರಾಶಸ್ತ್ಯ ನೀಡದ ಯಾವುದೇ ಅಧಿಕಾರಿಯನ್ನು ವರ್ಗಾಯಿಸುವ ಅಧಿಕಾರ
ಆಯೋಗಕ್ಕಿದೆ" ಎಂದು ಹೇಳುತ್ತಾರೆ. ಡಿಜಿಪಿ ನಿಲುವಿನ ಕುರಿತು ವಿರೋಧ
ಪಕ್ಷಗಳು ಕೂಡ ಸಿಡಿದೆದ್ದಿವೆ. ಡಿಜಿಪಿ 'ಪತ್ರ ಪ್ರಕರಣ'ಕ್ಕೆ ಮುಖ್ಯಮಂತ್ರಿ
ರಾಜಶೇಖರ ರೆಡ್ಡಿ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವುದು ವಿರೋಧ
ಪಕ್ಷಗಳ ಆರೋಪ. ಈ ನಡುವೆ, ಶಿಸ್ತುಪಾಲನಾ ಸಮಿತಿ ಜೊತೆಗೆ ಸಭೆ ನಡೆಸಿರುವ
ಚುನಾವಣಾ ಆಯೋಗ, ಡಿಜಿಪಿ ಯಾದವ್ ಅವರ ಸಂವಿಧಾನ ವಿರೋಧಿ ನಡವಳಿಕೆಯ ಕುರಿತು
ಕ್ರಮ ಕೈಗೊಳ್ಳಲು ಮುಂದಾಗಿದೆ.
ಟಿಎಸ್‌ಐ
ನರೇಶ್ ನುನ್ನಾ
ಅಸ್ಸಾಂ: ಮೂಲ ಸೌಕರ್ಯ
ಸ್ಟಿಲ್‌ವೆಲ್ ರಸ್ತೆ ಇತಿಹಾಸಕ್ಕೆ!
ಕೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್
ಸರ್ಕಾರಗಳಿದ್ದರೂ, ರಸ್ತೆ ನವೀಕರಣ ಮರೀಚಿಕೆ
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ದಕ್ಷಿಣ
ಏಷ್ಯಾದಲ್ಲಿ 'ಗೆಲುವಿನ ಇತಿಹಾಸ'ಕ್ಕೆ ಮುನ್ನುಡಿಯಾದ 'ಸ್ಟಿಲ್‌ವೆಲ್ ರಸ್ತೆ'
ನವೀಕರಣ ಯೋಜನೆ ಇದೀಗ ನೆನ ೆಗುದಿಗೆ
ಬಿದ್ದಿದೆ. ಅಸ್ಸಾಂ-ಚೀನಾ ಸಂಪರ್ಕವನ್ನು ಸುಲಭವಾಗಿಸುವ ಈ ರಸ್ತೆ,
ಅಸ್ಸಾಂನಿಂದ ಮ್ಯಾನ್ಮಾರ್ ಮೂಲಕ ಚೀನಾದ ಕುಮ್ಮಿಂಗ್‌ಗೆ ಸಂಪರ್ಕ
ಕಲ್ಪಿಸುತ್ತದೆ.
ಇತ್ತೀಚೆಗೆ ಗುವಾಹತಿಗೆ ಭೇಟಿ ನೀಡಿದ 'ಈಶಾನ್ಯ
ವಲಯ ಅಭಿವೃದ್ಧಿ ಸಚಿವಾಲಯ' ಸಚಿವ ಬಿ.ಕೆ. ಹಂಡೀಕ್, ಉಗ್ರರ
ಕಪಿಮುಷ್ಠಿಯಲ್ಲಿರುವ ಈ ರಸ್ತೆಯನ್ನು ಮತ್ತೆ ತೆರವುಗೊಳಿಸುವುದು ಕಷ್ಟಸಾಧ್ಯ.
ಕಚಿನ್ ಪ್ರದೇಶದುದ್ದಕ್ಕೂ ಹರಡಿರುವ 45 ಕಿ.ಮೀ, ಉದ್ದದ ಈ ರಸ್ತೆಯನ್ನು
ನವೀಕರಿಸುವ ಸ್ಥಿತಿಯಲ್ಲಿ ಮ್ಯಾನ್ಮಾರ್ ಸರ್ಕಾರ ಇಲ್ಲ ಎಂದಿದ್ದಾರೆ.
"ಈ ರಸ್ತೆ ದುರಸ್ತಿಗೆ ಇರುವ ಅಡ್ಡಿ ಆ
ಪ್ರದೇಶದಲ್ಲಿ ತಮ್ಮ ಹಿಡಿತ ಸ್ಥಾಪಿಸಿರುವ ಉಗ್ರರ ವಿರೋಧವೇ ಹೊರತು
ಮ್ಯಾನ್ಮಾರ್ ಸರ್ಕಾರದ ನಿರಾಸಕ್ತಿ ಅಲ್ಲ" ಎಂದೂ ಅವರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಸರ್ಕಾರ, ಕಲ್ದ ನದಿಯ
ಮೂಲಕ ಮಿಜೋರಾಂನಿಂದ ಮ್ಯಾನ್ಮಾರ್ ಸಂಪರ್ಕಿಸುವ ಪರ್ಯಾಯ ಸಂಚಾರ ಮಾರ್ಗ
ನಿರ್ಮಾಣಕ್ಕೆ ನಿರ್ಧರಿಸಿದ್ದು, ಈ ರಸ್ತೆ ಭಾರತಕ್ಕೆ ಹೊಸ ಬಂದರಿನ
ಸಂಪರ್ಕವನ್ನೂ ಕಲ್ಪಿಸಲಿದೆ ಎಂಬುದು ಹಂಡೀಕ್ ಅಭಿಪ್ರಾಯ.
ಸಚಿವರ ಈ ಹೇಳಿಕೆ ಹೊರಬೀಳುತ್ತಲೇ
ಎಚ್ಚೆತ್ತುಕೊಂಡ 'ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟ (ಎಎಎಸ್‌ಯು)'
ಸ್ಟಿಲ್‌ವೆಲ್ ರಸ್ತೆಯನ್ನು ಇತಿಹಾಸಕ್ಕೆ ಸೇರಿಸುವ ಪ್ರಸ್ತಾಪಕ್ಕೆ ತೀವ್ರ
ವಿರೋಧ ವ್ಯಕ್ತಪಡಿಸಿದೆ. ಟಿಎಸ್‌ಐ ಜೊತೆ ಮಾತನಾಡಿದ ಎಎಎಸ್‌ಯು ಸಲಹೆಗಾರ
ಸಮುಜ್ಜಾಲ್ ಭಟ್ಟಾಚಾರ್ಯ "ಎರಡು ವರ್ಷಗಳ ಹಿಂದೆ, ಸುಮಾರು 10,000 ಮಂದಿ
ಅಸ್ಸಾಂ ಕಡೆಯಿಂದ ಸ್ಟಿಲ್‌ವೆಲ್ ರಸ್ತೆಯಲ್ಲಿ ರ‍್ಯಾಲಿ ನಡೆಸಿ ರಸ್ತೆ ಪುನರ್
ಆರಂಭಕ್ಕೆ ಆಗ್ರಹಿಸಿದ್ದರು. ಮಿಜೋರಾಂ ರಸ್ತೆ ಪುನರ್ ಆರಂಭ ಸ್ವಾಗತಾರ್ಹ.
ಆದರೆ, ಜೊತೆಗೆ ಸ್ಟಿಲ್‌ವೆಲ್ ರಸ್ತೆಯನ್ನೂ ಸಂಚಾರಕ್ಕೆ
ಮುಕ್ತಗೊಳಿಸಿಕೊಡಬೇಕು" ಎನ್ನುವುದು ಭಟ್ಟಚಾರ್ಯ ಆಗ್ರಹ.
ಒಟ್ಟು 10,129 ಕಿ.ಮೀ ಉದ್ದದ ಈ ರಸ್ತೆಗೆ
ಅಮೆರಿಕದ ಜನರಲ್ ವಿನೆಗರ್ ಜೋಯ್ ಸ್ಟಿಲ್‌ವೆಲ್ ಅವರ ಹೆಸರಿಡಲಾಗಿದೆ. ಈ
ರಸ್ತೆ ನಿರ್ಮಾಣಕ್ಕೆ ಮುಂಚೆ ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ
ಮಿತ್ರಕೂಟಗಳು ಚೀನಾಕ್ಕೆ ಯುದ್ಧ ಸಾಮಗ್ರಿಗಳನ್ನು ವಿಮಾನಗಳ ಮೂಲಕವೇ ಸರಬರಾಜು
ಮಾಡುತ್ತಿದ್ದವು.
ಇದೀಗ ಮುಚ್ಚಿಹೋಗಿರುವ ಈ ರಸ್ತೆಯ ಪುನರಾರಂಭದ
ನಿಟ್ಟಿನಲ್ಲಿ ಎಎಎಸ್‌ಯು ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಕೇಂದ್ರ
ಸರ್ಕಾರಕ್ಕೆ ವಿಷಯ ಮನವರಿಕೆ ಮಾಡಲು ಮುಂದಾಗಿದೆ. ಕೈಗಾರಿಕಾ ಖಾತೆ ರಾಜ್ಯ
ಸಚಿವ ಪ್ರದ್ಯುತ್ ಬೊಡೋಲೊ ಕೆಲ ವರುಷಗಳಿಂದ ಈ ರಸ್ತೆ ವಿಚಾರವನ್ನು
ಮುಂದಿಟ್ಟುಕೊಂಡೇ ಅಧಿಕಾರ ಗದ್ದುಗೆ ಏರಿದ್ದಾರೆ. ಆದರೆ ಸಚಿವರಿಗೆ ಇನ್ನೂ
ಜ್ಞಾನೋದಯವಾಗಿಲ್ಲ. "ದೆಹಲಿ ಮತ್ತು ಗುವಾಹತಿ ಎರಡೂ ಕಡೆ ಕಾಂಗ್ರೆಸ್
ಸರ್ಕಾರವೇ ಇದ್ದರೂ, ರಾಜ್ಯ ಸರ್ಕಾರ ಈ ಕುರಿತು ಮೌನವಹಿಸಿದೆ. ಇದು ಕೇಂದ್ರ-
ರಾಜ್ಯದ ನಡುವಿನ ಭಿನ್ನಾಭಿಪ್ರಾಯಕ್ಕೆ ಸಾಕ್ಷಿ" ಎನ್ನುವ ಭಟ್ಟಾಚಾರ್ಯ,
ಸರ್ಕಾರ ಏಕೆ ದಿಟ್ಟ ನಿರ್ಧಾರ ಕೈಗೊಳ್ಳಲು ಮುಂದಾಗಲಿಲ್ಲ? ಎಂದು
ಪ್ರಶ್ನಿಸುತ್ತಾರೆ. ಅವರ ಪ್ರಶ್ನೆಯಲ್ಲಿ ಸತ್ಯವಿಲ್ಲದೇ ಇಲ್ಲ!
ಟಿಎಸ್‌ಐ
ಪ್ರಣಬ್ ಬೋರಾ
ಕರ್ನಾಟಕ: ವಿವಾದ
ಪ್ರತ್ಯೇಕ ವಿವಿ ಸ್ಥಾಪನೆ ಪ್ರಹಸನ
ಇರುವ ವಿವಿಗಳನ್ನೇ ಆರೋಗ್ಯಕರವಾಗಿ
ಉಳಿಸಿಕೊಳ್ಳಲಾಗದ ಸರ್ಕಾರ
ಮೈಸೂರು
ವಿಶ್ವವಿದ್ಯಾನಿಲಯದ
ಪತ್ರಿಕೋದ್ಯಮ ಅಧ್ಯಯನ ವಿಭಾಗ ಆರಂಭವಾಗಿ ದಶಕಗಳೇ ಉರುಳಿವೆ. ಆದರೆ, ಇಂದಿಗೂ
ಆ ವಿಭಾಗಕ್ಕೆ ಸುಸಜ್ಜಿತವಾದ ಸ್ಟುಡಿಯೋ, ಗ್ರಂಥಾಲಯ, ಅವುಗಳಿಗೆ ಸೂಕ್ತ
ಸಿಬ್ಬಂದಿ, ತಾಂತ್ರಿಕ ಸೌಕರ್ಯ ಎಂಬುದು ಮರೀಚಿಕೆಯೇ.
ಈ ಮಾತು ರಾಜ್ಯದ ಬಹುತೇಕ ವಿವಿಗಳ
ಪತ್ರಿಕೋದ್ಯಮ ವಿಭಾಗಗಳಿಗೂ ಅನ್ವಯಿಸದೇ ಇರದು. ಆದರೆ, ದುರಂತವೆಂದರೆ, ಇಂತಹ
ಕೊರತೆಗಳನ್ನು ಸರಿಪಡಿಸಿ ಇರುವ ವಿವಿ- ಕಾಲೇಜುಗಳ ಬೋಧನಾ ಸೌಕರ್ಯಗಳನ್ನು
ಉತ್ತಮಪಡಿಸುವ ಹೊಣೆಗಾರಿಕೆ ಮರೆತ ಸರ್ಕಾರಗಳು ಕಂಡ- ಕಂಡ ವಿಷಯಗಳಿಗೆಲ್ಲಾ
ಒಂದು ಪ್ರತ್ಯೇಕ ವಿವಿ ಸ್ಥಾಪಿಸುವ ಮಾತಾಡುತ್ತಿವೆ.
ವಿವಿ ಸ್ಥಾಪನೆ ಘೋಷಣೆ ಮಾಡಲು ರಾಜ್ಯ
ಸರ್ಕಾರದ ಮುಖ್ಯಮಂತ್ರಿಯಾದಿಯಾಗಿ ಸಚಿವರು- ಶಾಸಕರ ನಡುವೆ ಭಾರೀ ಸ್ಪರ್ಧೆಯೇ
ಏರ್ಪಟ್ಟಿದ್ದು, ಇತ್ತೀಚೆಗೆ ರಾಜ್ಯ ವಾರ್ತಾ ಮತ್ತು ಪ್ರಚಾರ ಸಚಿವರು
ರಾಜ್ಯದಲ್ಲಿ ಪ್ರತ್ಯೇಕ ಮಾಧ್ಯಮ ವಿವಿ ಸ್ಥಾಪಿಸುವ ಮಾತನಾಡಿದ್ದಾರೆ. ಅದಕ್ಕೂ
ಮುನ್ನ ಸರ್ಕಾರ 'ಸಂಸ್ಕೃತ ವೇದ ವಿಶ್ವವಿದ್ಯಾನಿಲಯ' ಸ್ಥಾಪಿಸುವುದಾಗಿ
ಘೋಷಿಸಿತ್ತು. ಆ ಬಗ್ಗೆ ಸಾರ್ವಜನಿಕರ ಆಶ್ಚರ್ಯ ಮತ್ತು ವಿರೋಧಗಳ ನಡುವೆಯೇ
ಒಂದೇ ವಾರದಲ್ಲಿ 'ಪ್ರತ್ಯೇಕ ಜಾನಪದ ವಿವಿ' ಆರಂಭಿಸುವುದಾಗಿ ಸ್ವತಃ
ಮುಖ್ಯಮಂತ್ರಿಗಳೇ ಘೋಷಿಸಿದರು. ಹೀಗೆ ಪುಂಖಾನುಪುಂಖವಾಗಿ ವಿವಿ ಸ್ಥಾಪನೆ
ಘೋಷಣೆಗಳು ಹೊರಬಿದ್ದದ್ದು ಇದೇನು ತಮಾಷೆಯೋ, ಪ್ರಹಸನವೋ ಎಂಬಂತೆ
ನಗೆಪಾಟಲಿಗೀಡಾಯಿತು.
ಒಂದೊಂದು ಸಮುದಾಯ, ವರ್ಗ ಮತ್ತು
ಹಿತಾಸಕ್ತಿಗಳನ್ನು ಸಂತೃಪ್ತಗೊಳಿಸಲು ರಾಜ್ಯದ ಬಿಜೆಪಿ ಸರ್ಕಾರ ಈ ಹಿಂದೆ
ಮಠ-ಮಂದಿರಗಳಿಗೆ ಅನುದಾನ, ಜಮೀನು ನೀಡಿ ಸಾರ್ವಜನಿಕ ಟೀಕೆಗೆ ಒಳಗಾಗಿತ್ತು.
ಇದೀಗ ಅದೇ ವರಸೆಯನ್ನು ವಿವಿ ಸ್ಥಾಪನೆ ಹೆಸರಲ್ಲಿ ಮುಂದುವರಿಸಿದೆ ಎಂಬ
ಸಾರ್ವಜನಿಕರ ಅನುಮಾನ ನಿಜವಾಗುವಂತೆ ಸರ್ಕಾರ ಎಲ್ಲಾ ವಿವಿಗಳ ಸ್ಥಾಪನೆ
ಘೋಷಣೆಯನ್ನೂ ಸಭೆ- ಸಮಾರಂಭಗಳಲ್ಲೇ ಮಾಡಿದೆ. ಇನ್ನೊಂದೆಡೆ "ಕೋಟಿಗಟ್ಟಲೆ
ಸುರಿದು ಪ್ರತ್ಯೇಕ ವಿವಿ ಸ್ಥಾಪನೆ ಮಾಡುವ ಬದಲು, ಇರುವ ವಿವಿಗಳಲ್ಲೇ 'ಸಂಸ್ಕೃತ
ಅಧ್ಯಯನ'ಕ್ಕೆ ಪೂರಕವಾದ ವ್ಯವಸ್ಥೆ ರೂಪಿಸುವುದು ಒಳ್ಳೆಯದು" ಎನ್ನುವುದು
ತಜ್ಞರ ವಾದ.
ಪ್ರಚಲಿತದಲ್ಲೇ ಇರದ ಭಾಷೆ ಎಂಬ ಕಾರಣಕ್ಕೆ
ಸಂಸ್ಕೃತ ಕಲಿಕೆಗೆ ವಿರೋಧ ವ್ಯಕ್ತವಾದರೆ, ಮತ್ತೊಂದು ಕಡೆ ಆ ಭಾಷೆಯಲ್ಲಿ
ದಾಖಲಾಗಿರುವ ಪುರಾತನ ಜ್ಞಾನದ ಕಾರಣದಿಂದ ಅದನ್ನು ಕಲಿಯುವುದು ಅವಶ್ಯ ಎಂಬ
ವಾದವೂ ಕೇಳಿಬರುತ್ತಿದೆ.
ಹಾಗೇ ಮಾಧ್ಯಮದಂತಹ ತೀರಾ ಸೀಮಿತ ಅವಕಾಶ ಮತ್ತು
'ಪ್ರಯೋಜನ'ದ ವಿಷಯ ಅಧ್ಯಯನಕ್ಕೆ ಪ್ರತ್ಯೇಕ ವಿವಿ ಸ್ಥಾಪನೆ ಪ್ರಸ್ತಾಪಕ್ಕಂತೂ
ಸ್ವತಃ ಮಾಧ್ಯಮ ವಲಯದಿಂದಲೇ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಕುರಿತು ಟಿಎಸ್‌ಐ
ಜೊತೆ ಮಾತನಾಡಿದ ಹಿರಿಯ ಪತ್ರಕರ್ತ ಶೈಲೇಶ್‌ಚಂದ್ರ ಗುಪ್ತಾ, "ಪತ್ರಿಕೋದ್ಯಮದಲ್ಲಿ
ಆಸಕ್ತಿ, ಬದ್ಧತೆ ಇಲ್ಲದವರು ಕೇವಲ ಉದ್ಯೋಗಾವಕಾಶಕ್ಕಾಗಿ ದೃಶ್ಯ ಮತ್ತು
ಮುದ್ರಣ ಮಾಧ್ಯಮಗಳತ್ತ ಕಾಲಿಡುತ್ತಿದ್ದಾರೆ. ನಮಗೆ ಪ್ರತ್ಯೇಕ ಮಾಧ್ಯಮ
ವಿಶ್ವವಿದ್ಯಾನಿಲಯದ ಅಗತ್ಯ ಖಂಡಿತವಾಗಿಯೂ ಇಲ್ಲ. ಇರುವ ಸೌಲಭ್ಯವನ್ನು
ಇನ್ನಷ್ಟು ಸುಧಾರಿಸಿ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರ ಪ್ರೋತ್ಸಾಹ
ನೀಡಬೇಕು" ಎಂದರು.
ಸರ್ಕಾರದ ವಿವಿ ಘೋಷಣೆಗಳ ಕುರಿತು ಅಭಿಪ್ರಾಯ
ವ್ಯಕ್ತಪಡಿಸಿರುವ ಬೆಂಗಳೂರು ವಿವಿ ಕುಲಪತಿ ಹಾಗೂ ಖ್ಯಾತ ಶಿಕ್ಷಣ ತಜ್ಞ
ಎಂ.ಎಸ್. ತಿಮ್ಮಪ್ಪ, 'ಸರ್ಕಾರ ವಿವಿಗಳನ್ನು ಸ್ಥಾಪನೆ ಮಾಡುವ ಬಗ್ಗೆ
ಅಭ್ಯಂತರವಿಲ್ಲ, ಆದರೆ ಪ್ರತ್ಯೇಕ ವಿವಿಗಳನ್ನು ಘೋಷಿಸುವ ಮೊದಲು ಈಗಾಗಲೇ
ಇರುವ ವಿವಿಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ಜೊತೆಗೆ ಪರಿಣತ ಬೋಧಕರ
ವ್ಯವಸ್ಥೆ ಕಲ್ಪಿಸಲಿ" ಎನ್ನುತ್ತಾರೆ.
ಹಾಗೇ, ವಿವಿಗಳಿಗೆ ನೀಡುವ ಅನುದಾನದಲ್ಲಿ
ವ್ಯಾಪಕ ಕಡಿತ ಮಾಡುವ ಸರ್ಕಾರಗಳೇ ಮತ್ತೊಂದೆಡೆ ಮತಬ್ಯಾಂಕ್ ಮೇಲೆ ಕಣ್ಣಿಟ್ಟು
ಅಥವಾ ಮಾಧ್ಯಮದ ಮಂದಿಯ ಮನವೊಲಿಸಲು ಇಂತಹ ಹೇಳಿಕೆ ನೀಡುತ್ತಿರುವ ಬಗ್ಗೆಯೂ
ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. "ಸರ್ಕಾರ ಹೊಸ
ಮತ್ತು ಪ್ರತ್ಯೇಕ ವಿವಿಗಳಿಗೆ ಮಾನ್ಯತೆ ನೀಡುವುದಾದರೆ ನೀಡಲಿ, ಆದರೆ
ಗುಣಮಟ್ಟ ಮತ್ತು ವ್ಯವಸ್ಥಿತ ಶಿಕ್ಷಣಕ್ಕೆ ಪೂರಕವಾಗುವಂತೆ ಅನುದಾನ
ಹೆಚ್ಚಿಸಬೇಕು. ಜೊತೆಗೆ ವಿವಿಗಳ ಕುಲಪತಿಗಳನ್ನು ನೇಮಿಸುವಾಗ ಅರ್ಹರನ್ನು
ಪರಿಗಣಿಸಬೇಕು" ಎನ್ನುವುದು ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಪ್ರೊ.
ರವಿವರ್ಮ ಕುಮಾರ್ ಅವರ ಸಲಹೆ.
ಒಟ್ಟಾರೆ, ಜಾತಿಗೊಂದು ಮಠ, ಮಠಕ್ಕೊಂದಿಷ್ಟು
ಸಾರ್ವಜನಿಕ ತೆರಿಗೆ ಹಣ ಸುರಿದು ಆರು ತಿಂಗಳ ಹಿಂದೆ ಮತಬ್ಯಾಂಕ್ ರಾಜಕಾರಣದ
ವಿರಾಟ್‌ಸ್ವರೂಪ ಪ್ರದರ್ಶಿಸಿದ್ದ ಸರ್ಕಾರ ಈಗ ವಿವಿ ಸ್ಥಾಪನೆ ವಿಷಯದಲ್ಲಿ ಆ
ಹಾದಿಯಲ್ಲಿ ಮತ್ತಷ್ಟು ಮುಂದೆ ಸಾಗುತ್ತಿರುವಂತಿದೆ.
ಟಿಎಸ್‌ಐ
ಚಿತ್ರಾ ಕರ್ಕೇರಾ |