User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
 
ಪತ್ರ ಚರಿತ್ರೆ
1ನೇ ಜೇಮ್ಸ್‌ಗೆ ಫ್ರ್ಯಾನ್ಸಿಸ್ ಬೇಕನ್ ಪತ್ರ
 

ಫ್ರ್ಯಾನ್ಸಿಸ್ ಬೇಕನ್ ಎಂದೇ ಪ್ರಸಿದ್ಧರಾಗಿದ್ದ ವಿಸ್ಕೌಂಟ್ ಸೇಂಟ್ ಆಲ್ಬನ್ಸ್ ಅವರನ್ನು 'ಆಧುನಿಕ ಕಾಲದ ತೀಕ್ಷ್ಣಮತಿ' ಎಂದೇ ಕರೆಯಲಾಗುತ್ತಿತ್ತು. ಬ್ರಿಟನ್ ರಾಣಿ ವಿಕ್ಟೋರಿಯಾಗೆ ಆಪ್ತ ಸಲಹೆಗಾರನಾಗಿದ್ದ ಬೇಕನ್ ನಂತರ ಆಕೆಯ ಉತ್ತಾರಾಧಿಕಾರಿ 1ನೇ ಜೇಮ್ಸ್ ಆಡಳಿತದಲ್ಲಿ ಸಾಲಿಸಿಟರ್ ಜನರಲ್, ಅಟಾರ್ನಿ ಜನರಲ್, ಲಾರ್ಡ್ ಕೀಪರ್ ಹಾಗೂ ಲಾರ್ಡ್ ಛಾನ್ಸಲರ್ ಮುಂತಾದ ಜವಾಬ್ದಾರಿಗಳನ್ನೂ ನಿರ್ವಹಿಸಿದರು. ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ ಲಂಚ ಪ್ರಕರಣವೊಂದರಲ್ಲಿ ಸಿಲುಕಿದ ಬೇಕನ್ ತನ್ನ ಎಲ್ಲಾ ಸ್ಥಾನಮಾನ ತ್ಯಜಿಸಬೇಕಾಯಿತಲ್ಲದೆ 40,000 ಫೌಂಡ್ ದಂಡ ನೀಡಬೇಕಾಯಿತು. 'ಟವರ್ ಆಫ್ ಲಂಡನ್' ಸೆರೆಮನೆಯಲ್ಲಿದ್ದಾಗ ಆತ ದೊರೆ 1ನೇ ಜೇಮ್ಸ್‌ಗೆ ಬರೆದ ಪತ್ರ ಇದು.

ಮಹಾಪ್ರಭುಗಳ ಅನುಗ್ರಹಕ್ಕೆ

1611 ಏಪ್ರಿಲ್,

ಟವರ್ ಆಫ್ ಲಂಡನ್ ,

ದುರಂತಗಳನ್ನೇ ಉಸಿರಾಡುತ್ತಾ ಬದುಕಿರುವ ನನ್ನ ಪಾಲಿಗೆ ಭವಿಷ್ಯದ ಕುರಿತ ಭರವಸೆಗಳಿಗಿಂತ ಭೂತಕಾಲದ ಸ್ಮೃತಿಗಳೇ ಆಹ್ಲಾದಕರ. ತಮ್ಮ ಅಧೀನದಲ್ಲಿ ನಾನು ಸೇವೆ ಸಲ್ಲಿಸಿದ ಪ್ರತಿಯೊಂದು ಕ್ಷಣವೂ ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣಗಳು ಎಂದರೆ ಉತ್ಪ್ರೇಕ್ಷೆಯಾಗಲಾರದು. ಈ ಮಾತನ್ನು ಈ ಮೊದಲೂ ನಾನು ತಮ್ಮಲ್ಲಿ ಅರುಹಿದ್ದೆ. ನಾನೊಂದು ಸಣ್ಣ ಪಾತ್ರೆಯಂತೆ ಇದ್ದೆ; ಕರುಣೆಯ ಸಾಗರದಂತಿದ್ದ ಮಹಾಪ್ರಭುಗಳು ಕರುಣಿಸಿದ್ದನ್ನು ಸಾಧ್ಯವಾದಷ್ಟು ತುಂಬಿಕೊಳ್ಳುವ ಹಂಬಲದಲ್ಲಿ ಇರುತ್ತಿದ್ದೆ. ಅವೆಲ್ಲಾ ನನ್ನ ಲೌಕಿಕ ಬದುಕಿನ ಅತ್ಯಂತ ಸಂತಸದ ಕ್ಷಣಗಳು. ತಮ್ಮ ಸೇವೆಯಲ್ಲಿದ್ದ 19 ವರ್ಷಗಳ ಸಮೃದ್ಧ ಜೀವನದಲ್ಲಿ ಸಾಕಷ್ಟು ಸಂತೋಷದಾಯಕ ಕ್ಷಣಗಳಿವೆ. ಕೇಡುಗಾಲದಲ್ಲೂ ಸಂತಸ ಅರಸುವ ವ್ಯಕ್ತಿ ನಾನು. ನನ್ನ ಮೇಲೆ ಹೊರಿಸಲಾಗಿರುವ ಯಾವ ಅಪರಾಧಗಳೂ ಮಹಾ ಪ್ರಭುಗಳಿಗೆ ಸಂಬಂಧಿಸಿದ್ದಲ್ಲ. ಅದೂ ಅಲ್ಲದೇ, ಈಗ ಖಳನಾಯಕನಂತೆ ಬಿಂಬಿತವಾಗಿರುವ ತಮ್ಮ ಈ ಸೇವಕನ ಕುರಿತು ಮಹಾಪ್ರಭುಗಳ ಮನದಲ್ಲಿ ಯಾವ ಗೊಂದಲವೂ ಇರಲಿಕ್ಕಿಲ್ಲ ಎಂಬ ದೃಢ ನಂಬಿಕೆ ನನ್ನದು.

ನನ್ನ ದುರಂತ ಕಥಾನಕ ಹೇಳಿದಷ್ಟೂ ಮುಗಿಯುವುದಿಲ್ಲವಾದ್ದರಿಂದ ಅದಕ್ಕೆ ಹೊಸದಾಗಿ ಏನಾದರೂ ಸೇರಿಸುವ ಅಗತ್ಯವೂ ಇಲ್ಲ. ಈವರೆಗೆ ನಾನು ಏನಾಗಿದ್ದೆನೋ ಅದು ಮಹಾಪ್ರಭುಗಳು ನೀಡಿದ ಭಿಕ್ಷೆ. ನಾನು ತಮ್ಮ ಸಾಮ್ರಾಜ್ಯದ ಮುಖ್ಯ ಅಧಿಕಾರಿಗಳಲ್ಲಿ ಒಬ್ಬನಾಗಿದ್ದುದು ಕೂಡ ತಮ್ಮ ಕೃಪಾಶೀರ್ವಾದದಿಂದಾಗಿಯೇ. ಹಲವಾರು ಸಮಿತಿ, ಸಭೆಗಳಲ್ಲಿ ತಮ್ಮ ಹಸ್ತ ಬಹಳಷ್ಟು ಬಾರಿ ನನ್ನ ಭುಜ ಸವರಿತ್ತು. ನಾನು ತಮಗೆ ಅಷ್ಟು ಹತ್ತಿರವಾಗಿದ್ದೆ. ತಮ್ಮ ಕೃಪಾಕಟಾಕ್ಷ ನನ್ನ ಮೇಲಿತ್ತು. ಮಹಾಪ್ರಭುಗಳ ಚಿತ್ರವನ್ನು ಲೋಹದ ಮೇಲೆ ಅಲ್ಲ, ಬದಲಿಗೆ ನನ್ನ ಎದೆಯ ಮೇಲೆಯೇ ಕೊರೆದುಕೊಂಡಿರುವೆ. 19 ವರ್ಷಗಳ ಸೇವಾವಧಿಯಲ್ಲಿ ನಾನು ಒಮ್ಮೆಯೂ ಮಹಾಪ್ರಭುಗಳ ಕೋಪಕ್ಕೆ ಗುರಿಯಾಗಿದ್ದಿಲ್ಲ. ನನ್ನ ಅಧೋಗತಿಯನ್ನು ವಿವರಿಸುವ ಏಕಮಾತ್ರ ಉದ್ದೇಶದಿಂದ ಗತಕಾಲದಲ್ಲಿ ಕಳೆದು ಹೋದ ಈ ಎಲ್ಲಾ ಸಂಗತಿಗಳನ್ನೂ ತಮ್ಮೆದುರು ಅರುಹ ಬೇಕಾಯಿತು.

ನನಗೆ ಈ ದುರ್ಗತಿ ಒದಗಿ ಒಂದೂವರೆ ವರ್ಷವಾಯಿತು. ತಮ್ಮ ಆಪ್ತ ವಲಯದಲ್ಲಿರುವ ಯಾರಿಗೂ ಈ ದುರ್ಗತಿ ಒದಗುವುದು ಮಹಾಪ್ರಭುಗಳಿಗೆ ಸಹ್ಯವಾಗುವುದಿಲ್ಲ ಎಂಬುದನ್ನು ನಾನು ಬಲ್ಲೆ. ಭವಿಷ್ಯದ ಕುರಿತು ನಾನು ಅಷ್ಟಾಗಿ ಚಿಂತಿಸುತ್ತಿರಲಿಲ್ಲವಾದ್ದರಿಂದ ನನ್ನ ಆಸ್ತಿ ಪ್ರಮಾಣವೂ ಚಿಕ್ಕದು. ನನ್ನ ಪಿತ್ರಾರ್ಜಿತ ಆಸ್ತಿಗಿಂತ ತುಸು ಹೆಚ್ಚು ಅಷ್ಟೇ.

ನನಗೆ ಪವಾಡದಲ್ಲಿ ಗಾಢ ನಂಬಿಕೆ. ಅದಕ್ಕಿಂತ ಹೆಚ್ಚಿನ ನಂಬಿಕೆ ಮಹಾಪ್ರಭುಗಳಾದ ತಮ್ಮ ಕಾರುಣ್ಯದಲ್ಲಿದೆ. ತಮ್ಮ ಆಶ್ರಯದಲ್ಲಿದ್ದ ಈ ಬಡಪಾಯಿ ಈಗ ಇಂಥ ದುಸ್ಥಿತಿಯಲ್ಲಿ ಬದುಕುವುದನ್ನು ತಾವು ಇಚ್ಛಿಸುವುದಿಲ್ಲ ಎಂಬುದನ್ನು ನಾನು ಬಲ್ಲೆ.

ನನ್ನ ಈ ಕರುಣಾಜನಕ ಸ್ಥಿತಿಯನ್ನು ನೋಡಿದ ಬಳಿಕವಾದರೂ ಆ ದೇವರು (ನನ್ನ ಒಳ್ಳೆಯ ಹಾಗೂ ಕೆಟ್ಟ ಕ್ಷಣಗಳಲ್ಲಿ ಆ ಪರಮಾತ್ಮ ನನಗೆ ದಾರಿ ತೋರಿದ್ದರೂ, ದುರಹಂಕಾರದಿಂದ ಕೃತಘ್ನನಾಗಿದ್ದ ನಾನು ಅವುಗಳನ್ನು ಗಮನಿಸಲಿಲ್ಲ ಎಂದು ಕಾಣುತ್ತದೆ) ತಮ್ಮ ಮನಸ್ಸು ಪರಿವರ್ತಿಸುತ್ತಾನೆ ಎಂಬ ಭರವಸೆ ನನ್ನದು. ತಮ್ಮ ಎಲ್ಲಾ ಅನುಕಂಪಕ್ಕೂ ಹಂಬಲಿಸಿ ನಿಂತಿರುವ ನಾನು, ಕೆಲವು ಮಾತುಗಳನ್ನು ಹೇಳಿ ಈ ಪತ್ರ ಕೊನೆಗೊಳಿಸಲು ತಮ್ಮ ಅನುಮತಿ ಪಡೆಯುತ್ತೇನೆ. ನನ್ನ ಸರ್ವಶಕ್ತ ಪ್ರಭುವೇ ನನಗೆ ಸಹಾಯ ಮಾಡಿ. ಇಲ್ಲಿಯವರೆಗೆ ದೊಡ್ಡ ಮಹಲಿನಲ್ಲಿ ಓಡಾಡಿಕೊಂಡಿದ್ದ ನನ್ನನ್ನು ಈ ವಯಸ್ಸಿನಲ್ಲಿ ಸೆರೆಮನೆಯಲ್ಲೇ ಕೊಳೆಯುವಂತೆ ಮಾಡಬೇಡಿ. ನನ್ನ ಸ್ಥಿತಿಯ ಕುರಿತು ತಮ್ಮಲ್ಲಿ ಅನುಕಂಪವಿರಲಿ. ಸ್ವರ್ಗದಲ್ಲಿರುವ ಆ ಪರಮಾತ್ಮನ ಕರುಣೆ ಅನುಗಾಲವೂ ಮಹಾಪ್ರಭುಗಳ ಮೇಲಿರಲಿ. ಸಮೃದ್ಧತೆ ಸದಾಕಾಲ ತಮ್ಮ ಪಾಲಿಗಿರಲಿ. ಮಹಾಪ್ರಭುಗಳ ಸೇವಕ ಹಾಗೂ ತಮ್ಮ ಅನುಗ್ರಹಕ್ಕೆ ಕಾದಿರುವ,

ಫ್ರ್ಯಾನ್ಸಿಸ್ ಸೇಂಟ್ ಆಲ್ಬನ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .