User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ದೂರದೂರಿಂದ
 

ಪಾಕಿಸ್ತಾನ: ಭಯೋತ್ಪಾದನೆ

ಸ್ವಾತ್ ಸಂತ್ರಸ್ತರ ಪರದಾಟ

ಸಮರ ಆರಂಭವಾದ ಮೇಲೆ ಸಾವಿರಾರು ಮಂದಿ ವಲಸೆ ಹೋಗಿದ್ದಾರೆ

ತಾಲಿಬಾನ್ ದಾಳಿಯಿಂದ ಜೀವ ಉಳಿಸಿಕೊಳ್ಳುವ ಆತುರದಲ್ಲಿ ತಮ್ಮ ಊರನ್ನು ತೊರೆದು ಕಾಲ್ನಡಿಗೆಯಲ್ಲೇ ವಾಯುವ್ಯ ಗಡಿಪ್ರದೇಶದ ಮರ್ದಾನ್ ಗ್ರಾಮಕ್ಕೆ ತಲುಪಿದ್ದಾರೆ ಮೊಮಿನ್ ಖಾನ್. ಸ್ವಾತ್ ಕಣಿವೆಯ ಮಿಂಗೋರಾದ ಅಮನ್‌ಕೋಟ್ ನಿವಾಸಿಯಾಗಿರುವ 26ರ ಪ್ರಾಯದ ಮೊಮಿನ್ ಸತತ 6 ದಿನಗಳ ಕಾಲ ನಡೆದೇ ಈ ದೂರ ಕ್ರಮಿಸಿದ್ದಾರೆ. ಈಗ ಮೊಮಿನ್ ಖಾನ್ ಕರಾಚಿಯ ಕೇಂದ್ರ ಪ್ರಾಂತ ಸಾದರ್‌ನಿಂದ 40 ಕಿ.ಮೀ. ದೂರದ ಗಡಾಪ್ ನಗರದಲ್ಲಿರುವ 'ಸ್ವಾತ್ ಮುತಾಸರೀನ್ ಶಿಬಿರ'ದಲ್ಲಿ ತಂಗಿದ್ದಾನೆ. ಈ ಶಿಬಿರದಲ್ಲಿ ಸುಮಾರು 150 ಮಂದಿ ಸಂತ್ರಸ್ತರಿದ್ದಾರೆ. ಪ್ರತಿಯೊಬ್ಬರಲ್ಲೂ ಶೀಘ್ರ ತವರೂರಿಗೆ ವಾಪಾಸಾಗುವ ಕಾತರವಿದೆ. "ನಾನು ಮೇ 7ರಂದು ಹಳ್ಳಿ ಬಿಟ್ಟಿದ್ದೆ. ಮೇ 13ಕ್ಕೆ ಮರ್ದನ್ ತಲುಪಿದ್ದೇನೆ. ಆದರೆ ಮರ್ದನ್‌ನ ಸಂತ್ರಸ್ತ ಶಿಬಿರದಲ್ಲಿ ನನ್ನ ಕುಟುಂಬಕ್ಕಾಗಿ ಒಂದು ಡೇರೆ ಪಡೆಯುವುದೂ ಸಾಧ್ಯವಾಗಲಿಲ್ಲ. ಕರಾಚಿಗೆ ಬರುವ ವಿನಾ ಬೇರೆ ದಾರಿ ಇರಲಿಲ್ಲ" ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ ಮೊಮಿನ್ ಖಾನ್.

"ತಾಲಿಬಾನ್ ಹೇಗೆ ಸ್ವಾತ್ ಪ್ರವೇಶಿಸಿತು ಎಂದು ನನಗೆ ಗೊತ್ತೇ ಇಲ್ಲ. ಹಿಂದೆಂದೂ ನಾವು ಅವರನ್ನು ಕಂಡಿಲ್ಲ. ಅವರು ಅಫ್ಘಾನಿಸ್ತಾನ ಅಥವಾ ಭಾರತದಿಂದ ಬಂದಿರಬೇಕು. ಅವರು ಪಾಕಿಸ್ತಾನ ವಾಯುಸೇನೆಯ ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಕ್ ವಿಮಾನಗಳು ಅವರ ಮೇಲೆ ದಾಳಿ ನಡೆಸುತ್ತಿವೆ" ಎನ್ನುತ್ತಾರೆ ಅವರು.

ಹತ್ತು ವರ್ಷದ ಅಮ್ಜದ್ ಸ್ವಾತ್ ಕಣಿವೆಯ ಕೊಕಾರಿ ಗ್ರಾಮದ ನಿವಾಸಿ. ಶಿಬಿರದ ಇತರ ಮಕ್ಕಳ ಜೊತೆ ಓದುತ್ತಿದ್ದ ಪವಿತ್ರ ಕುರಾನ್‌ನನ್ನು ಪಕ್ಕಕ್ಕಿಟ್ಟು ಮಾತಿಗಿಳಿದ ಅಮ್ಜದ್ ಬಳಿಯೂ ಇಂತಹುದೇ ಕರುಣಾಜನಕ ಕಥೆ ಇತ್ತು. "ತಾಲಿಬಾನ್ ಮತ್ತು ಸೇನೆ ನಡುವಿನ ಸಂಘರ್ಷದಿಂದಾಗಿ ನಾವು ಇಲ್ಲಿಗೆ ಬಂದಿದ್ದೇವೆ. ಬಾಂಬ್ ದಾಳಿ ಭೀಕರವಾಗಿತ್ತು. ಒಬ್ಬ ಮಹಿಳೆ ಸೇರಿದಂತೆ ಮೂರು ಜನ ದಾಳಿಗೆ ಬಲಿಯಾದದ್ದನ್ನು ನಾನು ಕಣ್ಣಾರೆ ಕಂಡೆ" ಎಂದು ವಿವರಿಸುತ್ತಾನೆ ಅಮ್ಜದ್. ಆದಷ್ಟು ಬೇಗ ಊರಿಗೆ ಹಿಂತಿರುಗಬೇಕು ಎನ್ನುವುದು ಆತನ ಆಸೆ. "ಸ್ವಾತ್ ಕಣಿವೆಯಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲದೆ ಹೋದಲ್ಲಿ ನಾವು ಇಕ್ಕಟ್ಟಿಗೆ ಬೀಳುತ್ತೇವೆ. ನಾನು ವಾಪಸು ಹೋಗುವುದು ಹೇಗೆ?" ಎನ್ನುವ ಚಿಂತೆ ಆತನದು. 'ಸ್ವಾತ್ ಮುತಾಸರೀನ್ ಶಿಬಿರ' ಹೆಚ್ಚು ಜನಸಂಚಾರವಿಲ್ಲದ ಪ್ರದೇಶದಲ್ಲಿದೆ. ಸಂತ್ರಸ್ತರು ಪ್ರತಿಭಟನಾಕಾರರ ದಾಳಿಗೆ ಸಿಲುಕುವ ಭಯದಿಂದ ಶಿಬಿರಕ್ಕೆ ಪೊಲೀಸ್ ಮತ್ತು ಅರೆಸೇನಾಪಡೆಗಳ ಬಿಗಿಭದ್ರತೆ ನೀಡಲಾಗಿದೆ. ಆದರೆ ಇಲ್ಲಿನ ಜೀವನಮಟ್ಟ ಮಾತ್ರ ಶೋಚನೀಯ.

'ಸ್ವಾತ್ ಮುತಾಸರೀನ್ ಶಿಬಿರ'ದಲ್ಲಿ ನೆಲೆಸಿರುವ ಸಂತ್ರಸ್ತರಲ್ಲಿ ಶೇ. 10ರಷ್ಟು ಮಂದಿ ಉಸಿರಾಟಕ್ಕೆ ಸಂಬಂಧಿಸಿದ ಸೋಂಕುಗಳಿಂದ ಬಳಲುತ್ತಿದ್ದಾರೆ. "ರೈನೈಟಿಸ್ (ಮೂಗಿನ ಉರಿಯೂತ) ಸ್ಕೇಬೀಸ್ (ತುರಿ ಕಜ್ಜಿ) ಸೋಂಕುಗಳು ಇಲ್ಲಿನ ಮಕ್ಕಳು ಮತ್ತು ಹಿರಿಯರಲ್ಲಿ ಸಾಮಾನ್ಯವಾಗಿದೆ" ಎನ್ನುತ್ತಾರೆ ಕರಾಚಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ. ಜಮಾಲ್ ಅಹ್ಮದ್. ಆದರೆ ಸೋಂಕು ರೋಗ ಹರಡುವ ಸಾಧ್ಯತೆಗಳನ್ನು ಅವರು ತಳ್ಳಿ ಹಾಕಿದರು. "ಅತಿಸಾರದಂತಹ ಸೋಂಕು ರೋಗಗಳು ಹರಡದಂತೆ ನಾವು ಸಂತ್ರಸ್ತರಿಗೆ ಕ್ಲೋರಿನ್ ಗುಳಿಗೆಗಳನ್ನು ನೀಡುತ್ತಿದ್ದೇವೆ" ಎನ್ನುತ್ತಾರೆ. "ಹಾಗಿದ್ದರೂ 15ರಲ್ಲಿ ಒಬ್ಬ ರೋಗಿಗೆ ಸ್ನಾಯು ಸೆಳೆತ ಕಾಣಿಸಿಕೊಂಡಿರುವುದು ಅವರಿಗೆ ಕಳಪೆ ಆಹಾರ ನೀಡುತ್ತಿರುವುದಕ್ಕೆ ಸಾಕ್ಷಿ" ಎನ್ನುತ್ತಾರೆ ಅವರು.

"ನಾವು ಸ್ವಾತ್‌ಗೆ ಹಿಂದಿರುಗ ಬಯಸಿದ್ದೇವೆ. ಸ್ವಾತ್ ಕಣಿವೆಯನ್ನು ತಾಲಿಬಾನ್ ಮುಕ್ತವನ್ನಾಗಿಸಿರುವ ಬಗ್ಗೆ ಸರ್ಕಾರದ ಸೂಚನೆಗಾಗಿ ಕಾದು ಕುಳಿತಿದ್ದೇವೆ. ಸ್ವಾತ್‌ಗೆ ಮರಳಲು ನಮ್ಮಲ್ಲಿ ಹಣವಿಲ್ಲದಿದ್ದರೂ ಪರವಾಗಿಲ್ಲ. ನಾವು ಕಾಲ್ನಡಿಗೆಯಲ್ಲೇ ವಾಪಸಾಗಲು ಸಿದ್ಧ" ಎನ್ನುತ್ತಾರೆ ಮೊಮಿನ್ ಖಾನ್. ಶಿಬಿರದಲ್ಲಿ ಬಹಳಷ್ಟು ಮಂದಿ ಕೆಟ್ಟ ಆಹಾರ ಮತ್ತು ಬಿಸಿಲಿನ ಧಗೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸುತ್ತಾರೆ. "ಆರಂಭದ ಹತ್ತು ದಿನಗಳ ಕಾಲ ಅಲ್-ಖಿದ್‌ಮತ್ ತಂಡ ನೀಡುತ್ತಿದ್ದ ಆಹಾರ ಚೆನ್ನಾಗೇ ಇತ್ತು. ಆದರೆ ಈಗ ಸಿಂಧ್ ಸರ್ಕಾರ ನೀಡುತ್ತಿರುವ ಸಸ್ಯಾಹಾರಿ ಆಹಾರದಲ್ಲಿ ಕ್ರಿಮಿ-ಕೀಟಗಳು ಬಿದ್ದಿರುತ್ತವೆ" ಎನ್ನುತ್ತಾರೆ ಸ್ವಾತ್‌ನ ಮಿನ್‌ಗೋರಾ ನಿವಾಸಿಯಾಗಿರುವ 25ರ ಪ್ರಾಯದ ಬರ್ಕಾತ್ ಅಲಿ. ಆದರೆ ಅಧಿಕಾರಿಗಳಿಗೆ ಈ ಬಗ್ಗೆ ದಿವ್ಯನಿರ್ಲಕ್ಷ್ಯ.

"ನಮ್ಮ ಮನೆ ಆಹಾರದಲ್ಲೂ ಹುಳುಗಳು ಸಿಗುತ್ತವೆ. ಸಂತ್ರಸ್ತರಿಗೆ ಉತ್ತಮ ಗುಣಮಟ್ಟದ ಆಹಾರ ವಿತರಿಸಲು ಕೈಲಾದ ಪ್ರಯತ್ನಗಳನ್ನು ಮಾಡಿದ್ದೇವೆ" ಎನ್ನುತ್ತಾರೆ ಕಂದಾಯ ಇಲಾಖೆಯ ಅಧಿಕಾರಿ ಇಮ್ದಾದ್ ಹುಸೇನ್. ಆದರೆ "ಇಂತಹ ಕೆಟ್ಟ ಆಹಾರ ತಿನ್ನುವುದು ಹೇಗೆ" ಎಂದು ಪ್ರಶ್ನಿಸುತ್ತಾರೆ ಬರ್ಕಾತ್. ಹೀಗಾಗಿ ಬಹುತೇಕ ಸಂತ್ರಸ್ತರು ನಗರದ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಮನೆಯಲ್ಲಿ ತಂಗಲು ಬಯಸಿದ್ದರಲ್ಲಿ ಆಶ್ಚರ್ಯವೇನಿಲ್ಲ. "ಮಲಕಂಧ್ ಪ್ರಾಂತದಲ್ಲಿ ತಾಲಿಬಾನ್‌ಗಳ ವಿರುದ್ಧ ಸಮರ ಆರಂಭವಾದ ಮೇಲೆ ಸುಮಾರು 60,000 ಮಂದಿ ಕರಾಚಿಗೆ ವಲಸೆ ಬಂದಿದ್ದಾರೆ" ಎನ್ನುತ್ತಾರೆ ಸಿಂಧ್‌ನ ಅವಾಮಿ ನ್ಯಾಷನಲ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಅಮೀನ್ ಖಟಕ್.

"ಬಹುತೇಕರು ತಮ್ಮ ಬಂಧುಗಳು ಹಾಗೂ ಸ್ನೇಹಿತರ ಮನೆಗಳಲ್ಲಿ ನೆಲೆಸಿದ್ದಾರೆ. ತಾಲಿಬಾನ್ ಸದಸ್ಯರು ಇವರ ನಡುವೆ ನುಸುಳಿಕೊಳ್ಳುವುದು ಬೇಡವೆಂದು ನಾವು ಎಲ್ಲಾ ಸಂತ್ರಸ್ತರ ವಿವರ ದಾಖಲಿಸಿಕೊಳ್ಳುತ್ತಿದ್ದೇವೆ. ನಂತರ ಈ ದಾಖಲೆ ಪಟ್ಟಿಯನ್ನು ಸರ್ಕಾರಕ್ಕೆ ರವಾನಿಸುತ್ತಿದ್ದೇವೆ" ಎನ್ನುತ್ತಾರೆ ಖಟಕ್.

"ಸ್ವಾತ್‌ನಲ್ಲಿ ಈ ಸಂತ್ರಸ್ತರಿಗೆ ಸೇರಿದ ತೋಟಗಳು ಮತ್ತು ಗುಡಿ ಕೈಗಾರಿಕೆಗಳಿವೆ. ಹೀಗಾಗಿ ಇವರು ಮರಳಿ ಕಣಿವೆಗೆ ಹೋಗಲಾರರು ಎನ್ನುವ ಮಾತಿಗೆ ಅರ್ಥವಿಲ್ಲ" ಎನ್ನುತ್ತಾರೆ ಅಮೀನ್ ಖಟಕ್.

ಟಿಎಸ್‌ಐ

ಶಾಹೀದ್ ಹುಸೇನ್

ಇರಾನ್: ದೊಂಬಿ

ಬಾಹ್ಯ ಶಕ್ತಿ ಕೈವಾಡದ ಶಂಕೆ

ಪ್ರತಿಭಟನೆ ಕ್ಷೀಣವಾಗಿದ್ದರೂ ಪ್ರಕ್ಷುಬ್ಧತೆಯ ಕಾವು ಇಳಿದಿಲ್ಲ

ಬಹಳ ಹಿಂದೆ, ಅಂದರೆ 1979ರಲ್ಲಿ ಶಾ ರೆಜಾ ಪೆಹ್ಲಾವಿ ಅವರ ಉಚ್ಛಾಟನೆ ನಂತರ ಇರಾನ್ ಪ್ರಕ್ಷುಬ್ಧವಾಗಿದ್ದು ಇದೇ ಮೊದಲು. ಕಳೆದ ವಾರವಿಡೀ ಇರಾನ್ ಪ್ರತಿಭಟನೆ ಮತ್ತು ದೊಂಬಿಗಳ ಆಗರವಾಗಿತ್ತು. ಎಲ್ಲಕ್ಕೂ ಮೂಲ ಇರಾನ್ ಚುನಾವಣಾ ಫಲಿತಾಂಶ. ಮೌಸವಿ ಪರ ಬೆಂಬಲಿಗರು ಹಸಿರು ಪಟ್ಟಿ ಕಟ್ಟಿಕೊಂಡು ಬೀದಿಗಿಳಿದು ಚುನಾವಣಾ ಫಲಿತಾಂಶದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಆರಂಭದಲ್ಲಿ ತೀವ್ರ ಸ್ವರೂಪದ ಪ್ರತಿಭಟನಾ ಮೆರವಣಿಗೆಗಳು ನಡೆದಿದ್ದವು. ಇದೀಗ ಪ್ರತಿಭಟನೆಗಳಲ್ಲಿ ಭಾಗವಹಿಸುವವರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಾ ಬಂದಿದ್ದರೂ ಪ್ರಕ್ಷುಬ್ಧತೆಯ ಕಾವು ಇನ್ನೂ ಇಳಿದಿಲ್ಲ.

ಕೊನೆಗೆ ಪರಮೋಚ್ಛ ನಾಯಕ ಅಯತೊಲ್ಲ ಖಮೇನಿ ಅವರು ಶುಕ್ರವಾರದ ಪ್ರಾರ್ಥನೆಯ ನೇತೃತ್ವ ವಹಿಸಿ, ನಂತರ ಜನರನ್ನುದ್ದೇಶಿಸಿ ಮಾತನಾಡಿದರು. ಖಮೇನಿ ಅವರಿಗೆ ನಗರ ಭಾಗಗಳಲ್ಲೂ ವ್ಯಾಪಕ ಪ್ರಭಾವವಿದೆ. ಪಾಶ್ಚಾತ್ಯ ಮಾಧ್ಯಮಗಳಿಗೆ ಇದು ಸಹಿಸಲಾಗುತ್ತಿಲ್ಲ. ಫಲಿತಾಂಶಕ್ಕೆ ಖಮೇನಿ ಬೆಂಬಲ ದೊರಕಿದ್ದೇ ತಡ, ಮೌಸವಿ ಹಾಗೂ ಅವರ ಬೆಂಬಲಿಗರು ಜಾಗೃತರಾದರು. ಹಾಗಾಗಿ ವಾರಾಂತ್ಯದಲ್ಲಿ ಟೆಹರಾನ್ ಶಾಂತವಾಗಿತ್ತು. ಶನಿವಾರದಂದು ಆಜಾದಿ ಚೌಕದಲ್ಲಿ ಸೇರಿದ್ದ ಸಣ್ಣ ಗುಂಪೊಂದರ ಮೇಲೆ ಬಸಿಜ್ ಪಡೆಗಳು ದಾಳಿ ನಡೆಸಿದವು. ಈ ಕಾರ್ಯಾಚರಣೆಯಲ್ಲಿ 20 ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡದ್ದಲ್ಲದೆ, ಸುಮಾರು 500 ಮಂದಿ ಬಂಧನಕ್ಕೊಳಗಾದರು. ಭಯೋತ್ಪಾದಕರು ಮತ್ತು ವಿಧ್ವಂಸಕರು ಪ್ರತಿಭಟನಾಕಾರರ ಗುಂಪಿನಲ್ಲಿ ಸೇರಿ ದೊಂಬಿ ನಡೆಸುತ್ತಿದ್ದಾರೆ ಎಂಬುದು ಪೊಲೀಸರ ಹೇಳಿಕೆ.

ಈಗ ಇದು ಅಹಮದಿನೇಜಾದ್ ಮತ್ತು ಮೌಸವಿ ನಡುವಿನ ಹೋರಾಟವಾಗಿ ಉಳಿದಿಲ್ಲ. ಈ ಹೋರಾಟದ ಹಿಂದೆ ಕಾಣದ ಕೈ ಆಟವಾಡುತ್ತಿದೆ. ಪ್ರತಿಭಟನೆಗಳಿಗೆ ಬಹುತೇಕ ಬೆಂಬಲ ಮತ್ತು ಹಣಸಹಾಯ ಬಂದಿದ್ದು ಅಲಿ ರಾಫ್ಸಂಜಾನಿ ಮೂಲದಿಂದ. ಎಂಟು ವರ್ಷಗಳ ಕಾಲ ಆಡಳಿತದ ಚುಕ್ಕಾಣಿ ಹಿಡಿದಿದ್ದ ಮಾಜಿ ಅಧ್ಯಕ್ಷ ಅಲಿ ರಾಫ್ಸಂಜಾನಿ ಅವರನ್ನು ಕಳೆದ ಬಾರಿಯ ಚುನಾವಣೆಯಲ್ಲಿ ಅಹಮದಿನೇಜಾದ್ ಸೋಲಿಸಿದ್ದರು. ರಾಫ್ಸಂಜಾನಿ ತಮ್ಮ ಅಧಿಕಾರದ ಅವಧಿಯಲ್ಲಿ ಬಡವರ ಉದ್ಧಾರಕ್ಕಾಗಿ ಶ್ರಮಿಸುವ ಬದಲು ವೈಯಕ್ತಿಕ ಹಿತಾಸಕ್ತಿಗಳ ಕಡೆಯೇ ಗಮನ ಹರಿಸಿದ್ದರು.

ಅಹಮದಿನೇಜಾದ್ ಪ್ರಭಾವವನ್ನು ಅಡಗಿಸುವ ಮೂಲಕ ರಾಫ್ಸಂಜಾನಿ ಅವರು ಖಮೇನಿಗೆ ತಮ್ಮ ಪ್ರಭಾವದ ಸೂಚನೆ ನೀಡಬಯಸಿದ್ದರು. ಖಮೇನಿ ಅವರಿಗೆ ವಾಗ್ದಂಡನೆ ನೀಡಬಹುದಾದ 'ಅಸೆಂಬ್ಲಿ ಆಫ್ ಸೀನಿಯರ‍್ಸ್' (ಹಿರಿಯರ ಸಭೆ)ನ ನಾಯಕ ತಾನು ಎಂಬುದನ್ನೂ ಖಮೇನಿಗೆ ಗೊತ್ತು ಮಾಡಲು ರಾಫ್ಸಂಜಾನಿ ಮುಂದಾಗಿದ್ದರು. ಅಷ್ಟೇ ಅಲ್ಲ, ಬೀದಿ ಬೀದಿಗಳಲ್ಲಿ ದೊಂಬಿ ಎಬ್ಬಿಸಿ ರಕ್ತ ಹರಿಸಿದ ಪ್ರತಿಭಟನೆಯಲ್ಲಿ ನಿಷೇಧಿತ ಮುಜಾಹಿದೀನ್-ಇ-ಖಲ್ಕ್ ಸಂಘಟನೆಯ ಕೈವಾಡವಿರುವುದನ್ನೂ ಶಂಕಿಸಲಾಗಿದೆ. ಬ್ರಿಟಿಷ್ ನಿಯಂತ್ರಿತ ಏಜೆಂಟರ ತಪ್ಪೊಪ್ಪಿಗೆಗಳೂ ಇದನ್ನು ಸಾಬೀತುಪಡಿಸಿವೆ. ಈ ಸಂಘಟನೆಯ ಬಹಳಷ್ಟು ಕಾರ್ಯಕರ್ತರು ಬ್ರಿಟನ್‌ನ ಅಡಗುತಾಣಗಳಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳು ಇರಾನ್‌ನಲ್ಲಿ ಪ್ರಭುತ್ವ ಬದಲಾವಣೆಗೆ ಹಣಕಾಸು ನೆರವು ಒದಗಿಸುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಇರಾನ್‌ನ ಪರಮಾಣು ಕಾರ್ಯಕ್ರಮಗಳ ಮೇಲೆ ಕಣ್ಣಿಡಲು ಮತ್ತು ಮುಸ್ಲಿಂ ಧರ್ಮಗುರುಗಳನ್ನು ವಿರೋಧಿಸುವ ಕ್ರಾಂತಿಕಾರಿ ಪಡೆಗಳಿಗೆ ಬೆಂಬಲ ನೀಡಲು 2007ರಲ್ಲಿ ಅಮೆರಿಕ ಹಣ ಮಂಜೂರು ಮಾಡಿದೆ. ಈ ಸಂಬಂಧ ಸುಮಾರು 400 ಮಿಲಿಯ ಡಾಲರ್‌ಗಳನ್ನು ಮಂಜೂರು ಮಾಡುವ ಸಂಸತ್ತು ಮತ್ತು ಸೆನೆಟ್ ಸದಸ್ಯರ ಬೇಡಿಕೆಗೆ ಮಾಜಿ ಅಧ್ಯಕ್ಷ ಬುಷ್ ಅವರು ಸಮ್ಮತಿಸಿದ್ದರು.

ಈ ನಡುವೆ ಇರಾನ್‌ನ ಕನಿಷ್ಠ 50 ಕ್ಷೇತ್ರಗಳಲ್ಲಿ ಪಟ್ಟಿಯಲ್ಲಿದ್ದ ಒಟ್ಟು ಮತದಾರರಿಗಿಂತ ಹೆಚ್ಚು ಮತಗಳು ಚಲಾವಣೆಯಾಗಿವೆ ಎನ್ನುವುದನ್ನು ಇರಾನ್‌ನ ಚುನಾವಣಾ ಆಯೋಗವೇ ಒಪ್ಪಿಕೊಂಡಿದೆ. ಆದರೆ ಈ ವ್ಯತ್ಯಾಸ ಸುಮಾರು 3 ಮಿಲಿಯಗಳಷ್ಟೇ ಆಗಿರುವುದರಿಂದ ಇದರಿಂದ ಅಂತಿಮ ಫಲಿತಾಂಶದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಆಯೋಗ ಸಮರ್ಥಿಸಿಕೊಂಡಿದೆ. ಅಲ್ಲದೆ ಇರಾನ್‌ನಲ್ಲಿ ಮತದಾರರು ತಮ್ಮ ಹೆಸರು ದಾಖಲಾದ ಮತಗಟ್ಟೆಯಲ್ಲೇ ಮತ ಚಲಾಯಿಸುವ ಅಗತ್ಯವಿಲ್ಲ. ಇತರ ಮತಗಟ್ಟೆಗಳಿಗೆ ಹೋಗಿ ಮತ ಚಲಾಯಿಸುವ ಅವಕಾಶವಿದೆ. ಹೀಗಾಗಿ ಇಂತಹ ವ್ಯತ್ಯಾಸಗಳು ಸಾಮಾನ್ಯ. ಕಳೆದ ವಾರಾಂತ್ಯ ಹಾಗೂ ಈ ವಾರದ ಆರಂಭದಲ್ಲಿ ಇರಾನ್‌ನಲ್ಲಿ ಶಾಂತಿ ನೆಲೆಸಿತ್ತು.

ಮೌಸವಿ ಈಗ ದ್ವಂದ್ವದಲ್ಲಿದ್ದಾರೆ. ಅತ್ತ ಮಾರಣಹೋಮಕ್ಕೂ ಇಳಿಯುವಂತಿಲ್ಲ, ಇತ್ತ ಪ್ರತಿಭಟನೆಯಿಂದ ಹಿಂಜರಿಯಲೂ ಸಾಧ್ಯವಿಲ್ಲದ ಇಕ್ಕಟ್ಟಿಗೆ ಸಿಲುಕಿದ್ದಾರೆ. ರಾಫ್ಸಂಜಾನಿ ಪ್ರತಿಕ್ರಿಯೆಯನ್ನು ಕಾದು ನೋಡಬೇಕಿದೆ.

ಟಿಎಸ್‌ಐ

ಸೌರಭ್ ಕುಮಾರ್ ಶಾಹಿ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .