User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಸಂಪಾದಕೀಯ
ಮಧ್ಯಪ್ರಾಚ್ಯದೊಂದಿಗಿನ ಒಬಾಮ ಬಾಂಧವ್ಯ ಯಶಸ್ವಿಯಾದಲ್ಲಿ ಅದು ಜಗತ್ತಿನ ಪಾಲಿಗೆ ಅತಿ ದೊಡ್ಡ ಬದಲಾವಣೆ!
    
Arindam Choudhuri
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್

ಬಾರಕ್ ಒಬಾಮ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮತ್ತು 'ಬದಲಾವಣೆಯಲ್ಲಿ ಭರವಸೆ' ಎಂಬ ಐತಿಹಾಸಿಕ ಭಾಷಣ ಮಾಡಿ ಜಗತ್ತನ್ನೇ ರೋಮಾಂಚನಗೊಳಿಸಿದ ನಂತರ ಇಲ್ಲಿಯವರೆಗೆ ಜಾಗತಿಕ ಪರಿಸ್ಥಿತಿ ಹಿಂದಿನಂತೆಯೇ ಇತ್ತು. ವಾಸ್ತವವೇನೆಂದರೆ, ಪಾಶ್ಚಾತ್ಯ ಜಗತ್ತು ಹಾಗೂ ಭಾರತ, ಚೀನಾದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಬದಲಾವಣೆಯಿಂದ ತಮಗೂ ಲಾಭವಿದೆ ಎಂದು ಒಬಾಮ ಭಾಷಣವನ್ನು ಅರ್ಥೈಸಿಕೊಂಡವು. ಈ ರಾಷ್ಟ್ರಗಳಷ್ಟೇ ಅಲ್ಲ ಸಾಂಪ್ರದಾಯಿಕವಾಗಿ ಮುಕ್ತವಾಗಿರದ, ಉದಾರವಲ್ಲದ ರಾಷ್ಟ್ರಗಳೂ ಕೂಡಾ ತಮ್ಮಲ್ಲೇನಾದರೂ ಸಕಾರಾತ್ಮಕ ಬದಲಾವಣೆ ಸಾಧ್ಯವಾಗಬಲ್ಲುದೇ ಎಂಬ ದೂರದ ಆಶೆಯಲ್ಲಿದ್ದುದು ಅಚ್ಚರಿಯ ಸಂಗತಿಯೇನೂ ಅಲ್ಲ. ಆದರೆ ದಿನ ಕಳೆದಂತೆ ಒಬಾಮ ಅವರ ಸರ್ಕಾರ ಆಡಳಿತಕ್ಕೆ ಒಗ್ಗಿಕೊಂಡು ಈ ಎಲ್ಲಾ ರಾಷ್ಟ್ರಗಳು 'ಬದಲಾವಣೆಯ ಭಾಷಣ'ವನ್ನು ಮರೆಯತೊಡಗಿದ ವೇಳೆಯಲ್ಲೇ ನಿಜವಾದ ಬದಲಾವಣೆ ಕಾಣಿಸತೊಡಗಿದ್ದು...

ಇಲ್ಲ, ನಷ್ಟದಲ್ಲಿರುವ ಅಮೆರಿಕ ಕಂಪನಿಗಳಿಗೆ ಹಣಕಾಸು ನೆರವು ನೀಡುವ ಒಬಾಮ ಅವರ ನೀತಿಯ ಬಗ್ಗೆ ನಾನು ಮಾತನಾಡುತ್ತಿಲ್ಲ; ಹೊರಗುತ್ತಿಗೆಯ ಮೇಲೆ ಆತ ವಿಧಿಸಿದ ನಿರ್ಬಂಧದ ಬಗ್ಗೆ ಕೂಡಾ ನಾನು ಮಾತನಾಡುತ್ತಿಲ್ಲ. ಬದಲಾಗಿ ಇರಾನ್‌ನಲ್ಲಿ ಇದ್ದಕ್ಕಿದ್ದಂತೆ ಉಂಟಾದ ಬದಲಾವಣೆ, ಆ ಬಗೆಗಿನ ಸಂಘರ್ಷದ ಕುರಿತು ಹೇಳುತ್ತಿದ್ದೇನೆ.

ಇರಾನ್‌ನಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧಿಕಾರಾರೂಢ ಅಹಮದಿನೇಜಾದ್ ಅವರು ಶೇ. 62ರಷ್ಟು ಮತ ಪಡೆಯುವ ಮೂಲಕ ಸುಧಾರಣಾ ಪರ ಅಭ್ಯರ್ಥಿ ಮೀರ್ ಹುಸೇನ್ ಮೌಸವಿ ಅವರನ್ನು ಪರಾಭವಗೊಳಿಸಿದ್ದಾರೆ. ಆದರೆ ಫಲಿತಾಂಶ ಬಂದಾಗಿನಿಂದಲೂ ಟೆಹ್ರಾನ್‌ನಲ್ಲಿ ಹಿಂಸಾಚಾರ ನಡೆಯುತ್ತಿದೆ. ಅಲ್ಲಿನ ಮೂಲಭೂತವಾದಿ ಮತ್ತು ಉಗ್ರ ಸರ್ಕಾರದ ಬೆದರಿಕೆಯ ನಡುವೆಯೂ ಯುವ ಜನರು ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿರುವ ಬಗೆಗಿನ ವರದಿ ಪ್ರತಿಭಟನೆಗೆ ಕಾರಣ. ಅಲ್ಲಿನ ಜನರು ಬಹಿರಂಗವಾಗೇ ಸರ್ಕಾರದ ವಿರುದ್ಧ ಘೋಷಣೆ ಕೂಗತೊಡಗಿದ್ದಾರೆ. ಕೇವಲ ತಮ್ಮ ಪ್ರತಿಭಟನಾ ಸಾಮರ್ಥ್ಯವನ್ನಷ್ಟೇ ಪ್ರದರ್ಶಿಸುತ್ತಿಲ್ಲ; ಒಗ್ಗಟ್ಟಿನ ದನಿಯನ್ನೂ ಮೂಡಿಸಿದ್ದಾರೆ. ಇದೇ ವೇಳೆ ಪ್ರತಿಭಟನೆ ಹತ್ತಿಕ್ಕುವ ಸರ್ಕಾರದ ಯತ್ನದಲ್ಲಿ ನಡೆದ ಗುಂಡು ದಾಳಿಯಲ್ಲಿ ಮೃತಪಟ್ಟ ನೆದಾ ಸೊಲ್ತಾನ್ ಎಂಬ ಯುವತಿಯ ಪ್ರಕರಣ; ರಕ್ತದ ಮಡುವಿನಲ್ಲಿದ್ದ ಆಕೆಯ ಮೃತದೇಹದ ಚಿತ್ರಗಳು ಜಾಗತಿಕವಾಗಿ ಭಾರಿ ಚರ್ಚೆಗೆ ಕಾರಣವಾಗಿವೆ. ಸಮಕಾಲೀನ ಜಗತ್ತು ದ್ವೇಷಿಸುವಂತಹ ಅಲ್ಲಿನ ಪರಿಸ್ಥಿತಿಯಲ್ಲಿ ಬದಲಾವಣೆ ಉಂಟಾಗುತ್ತಿದೆ. ಅಲ್ಲಿನ ಯುವಜನರ ಪ್ರತಿಭಟನೆಯ ಚಿತ್ರಗಳು, ದ್ವೇಷದ ತಳಹದಿಯಲ್ಲೇ ರೂಪುಗೊಂಡ ಅಲ್ಲಿನ ಸರ್ಕಾರದ ಭಂಡತನ ಇವುಗಳ ವಿವರ ಅಂತರ್ಜಾಲದ ಮೂಲಕ ಜಗತ್ತಿನ ಎಲ್ಲರಿಗೂ ತಲುಪುತ್ತಿವೆ.

ಇರಾನ್‌ಗೆ ಪ್ರಬಲ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆ ಇದೆ. ಅಲ್ಲದೆ ಇತರ ಮೂಲಭೂತವಾದಿ ರಾಷ್ಟ್ರಗಳಲ್ಲಿಯಂತೆ ಇರಾನ್ ಯುವ ಜನರು ಪಾಶ್ಚಾತ್ಯ ಸಂಸ್ಕೃತಿಯನ್ನು ಅಷ್ಟೇನೂ ದ್ವೇಷಿಸುವುದಿಲ್ಲ. ಆದರೆ ಜನರ ಸ್ವಾತಂತ್ರ್ಯಕ್ಕೆ ಅವಕಾಶಕೊಡಲೊಲ್ಲದ ಅಲ್ಲಿನ ಸರ್ಕಾರ ಇರಾನಿಯನ್ನರ ಸಾಂಪ್ರದಾಯಿಕ ಉದಾರ ಮನೋಭಾವದ ಮೇಲೆ ದಶಕಗಳಿಂದಲೂ ತನ್ನ ಕರಿನೆರಳು ಬೀರಿದೆ. ಆದರೂ ಮೂಲಭೂತವಾದಕ್ಕೆ ಬಗ್ಗದ ಬಹಳಷ್ಟು ಯುವ ಇರಾನಿಯನ್ನರು ಕಳೆದ ಹಲವು ತಿಂಗಳಿಂದ ಒಬಾಮನತ್ತ ಕುತೂಹಲದಿಂದಿದ್ದಾರೆ. ಪಕ್ಷಪಾತರಹಿತ, ವಿಶ್ವಾಸಾರ್ಹ ಮತ್ತು 'ಅಮೆರಿಕ ಮಾದರಿ'ಗೆ ಭಿನ್ನ ಎನಿಸಿದ ಒಬಾಮ ಅವರ ಚಟುವಟಿಕೆಗಳು ಮಧ್ಯಪ್ರಾಚ್ಯದಲ್ಲಿ ಬದಲಾವಣೆ ತರಲಿವೆ ಎಂದು ಆಶಿಸಿದ್ದಾರೆ.

ಕೈರೋದಲ್ಲಿ ಒಬಾಮ ಮಾಡಿದ ಭಾಷಣವಂತೂ ಐತಿಹಾಸಿಕ ಎನಿಸಿತು. ತನ್ನ ಹಿಂದಿನ ಅಧ್ಯಕ್ಷರಂತೆ ಒಬಾಮ ಸಾರಾಸಗಟಾಗಿ ಇಸ್ರೇಲ್ ಪರ ವಕಾಲತ್ತು ವಹಿಸುವ ವ್ಯಕ್ತಿಯೂ ಅಲ್ಲ ಎಂಬುದನ್ನು ಇರಾನಿಯನ್ನರು ಕಂಡುಕೊಂಡಿದ್ದಾರೆ. ತಾನು ಕೂಡಾ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂಬ ಅಂಶವನ್ನು ಒಬಾಮ ಒತ್ತಿ ಹೇಳಿರುವುದು ಕೂಡಾ ಗಮನಾರ್ಹ. ಅಷ್ಟೇ ಅಲ್ಲ, ತಮ್ಮ ಸರ್ಕಾರಿ ಕೃಪಾಪೋಷಿತ ಮಾಧ್ಯಮಗಳು ಮತ್ತು ರಾಜಕೀಯ ನಾಯಕರು ಬಿಂಬಿಸಿರುವಷ್ಟು ಕೆಟ್ಟದಾಗೇನೂ ಅಮೆರಿಕ ಇಲ್ಲ ಎಂಬುದನ್ನೂ ಇರಾನಿಯನ್ನರು ಕಂಡುಕೊಂಡಿದ್ದಾರೆ; ಇದಕ್ಕೂ ಅಂತರ್ಜಾಲವೇ ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ಒಬಾಮ ಅವರ ಇಲ್ಲಿಯವರೆಗಿನ ಅತಿದೊಡ್ಡ ಯಶಸ್ಸೆಂದರೆ ಆತ ಸಾಮಾನ್ಯ ಜನರಿಗೂ ತಲುಪುತ್ತಿದ್ದುದು; ಅದರಲ್ಲೂ ಮುಖ್ಯವಾಗಿ ಯುವ ಜನರನ್ನು ತಲುಪುತ್ತಿದ್ದುದು. ಒಬಾಮ ಪ್ರಭಾವ ಎಷ್ಟಿದೆ ಎಂದರೆ ಈಗ ಇರಾನ್‌ನಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಕೇವಲ ಒಂದು ವರ್ಷದ ಹಿಂದೆ ಅಲ್ಲಿ ಊಹಿಸಲೂ ಸಾಧ್ಯವಿರಲಿಲ್ಲ. ಇಷ್ಟಾದರೂ, ಈಗ ನಡೆಯುತ್ತಿರುವ ಪ್ರತಿಭಟನೆಗಳು ಇರಾನ್‌ನಲ್ಲಿ ಶೀಘ್ರ ಬದಲಾವಣೆ ತರಲಾರವು ಎಂಬುದು ನಿಜ. ಹಾಗೆಯೇ, ಇರಾನಿನ ಬಹುಪಾಲು ಯುವಜನರು ದಿಢೀರನೇ ತಮ್ಮದೇ ರಾಷ್ಟ್ರದ ವಿರುದ್ಧ ತಿರುಗಿ ಬೀಳುತ್ತಾರೆ ಎಂದೂ ಹೇಳಲಾಗದು.

ಒಂದು ವೇಳೆ ಇವೆಲ್ಲಾ ಸಂಭವಿಸುತ್ತವೆ ಎಂದಿಟ್ಟುಕೊಂಡರೂ ಅವುಗಳಿಂದ ಜಾಗತಿಕ ಶಾಂತಿಗೆ ಅಂತಹ ಪ್ರಯೋಜನವೂ ಇಲ್ಲ. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಇಸ್ಲಾಂ ಮೂಲಭೂತವಾದವನ್ನು ಇರಾನ್ ಪೂರ್ಣವಾಗಿ ಒಪ್ಪಿಕೊಂಡಿಲ್ಲ ಎಂಬುದು ಜಗತ್ತಿಗೆ ಮನದಟ್ಟಾಗಿದ್ದು. ಇನ್ನೂ ಮುಖ್ಯವಾದ ಅಂಶವೆಂದರೆ, ಅಹಮದಿನೇಜಾದ್ ಅವರ ಸರ್ಕಾರ ಉಳಿಯಲು ರಾಷ್ಟ್ರದೊಳಗೆ ಕೆಲವು ಮೂಲಭೂತ ಬದಲಾವಣೆ ತರಬೇಕಾದುದು ಅತ್ಯಗತ್ಯ ಎಂಬುದು. ಈ ಬದಲಾವಣೆ ಇರಾನ್‌ನ ಮೂಲತತ್ವಕ್ಕೆ ಧಕ್ಕೆ ತಾರದು ಎಂಬುದಂತೂ ಸತ್ಯ.

ಇದಕ್ಕೆ ಪರ್ಯಾಯ ಎಂಬಂತೆ ಕೆಲವು ಸಾಮಾಜಿಕ ಸುಧಾರಣಾ ಕ್ರಮಗಳನ್ನು ಕೈಗೊಂಡಲ್ಲಿ ಮಧ್ಯಪ್ರಾಚ್ಯದ ಉದ್ದಗಲಕ್ಕೆ ಅನಗತ್ಯವಾಗಿ ಸೃಷ್ಟಿ ಮಾಡಲಾಗಿರುವ ಅಂತರವನ್ನು ಕಡಿಮೆ ಮಾಡಲು, ಆ ಮೂಲಕ ಜಾಗತಿಕ ಶಾಂತಿಯನ್ನು ಮತ್ತಷ್ಟು ಸುಭದ್ರವಾಗಿ ಸ್ಥಾಪಿಸಲು ಸಾಧ್ಯವಾಗುತ್ತದೆ. ಇದಲ್ಲದೆ, ಇರಾನ್‌ನ ಆಂತರಿಕ ವಿಚಾರಗಳಲ್ಲಿ ಕೈಹಾಕದಿರುವ ಜಾಣತನವನ್ನು ಒಬಾಮ ಪ್ರದರ್ಶಿಸುತ್ತಾರೆ ಎಂದು ಕೂಡಾ ನಾವು ಆಶಿಸಬಹುದು. ಅಮೆರಿಕದ ಹಿಂದಿನ ಅಧ್ಯಕ್ಷರುಗಳು ಇರಾಕ್‌ನ ಆಂತರಿಕ ವಿಚಾರದಲ್ಲಿ ಕೈಹಾಕಿ, ಆ ರಾಷ್ಟ್ರವನ್ನು ವಿಮೋಚನೆಗೊಳಿಸುವ ನೆಪದಲ್ಲಿ ಮತ್ತಷ್ಟು ಪ್ರಪಾತಕ್ಕೆ ದೂಡಿದ ಉದಾಹರಣೆ ಒಬಾಮ ಕಣ್ಣೆದುರೇ ಇದೆ. ಇಂತಹ ಬುದ್ಧಿಗೇಡಿ ನಿರ್ಧಾರವನ್ನು ಕೈಗೊಳ್ಳದೇ ಇರುವುದು ಒಬಾಮ ಪಾಲಿಗೆ ಅತಿ ಮುಖ್ಯ.

ಹಾಗೇನಾದರೂ ಆದಲ್ಲಿ ಈಗ ಸುಧಾರಣಾ ಪರ ಮತ್ತು ಸದುದ್ದೇಶಕ್ಕಾಗಿ ಬೀದಿಗಿಳಿದು ಪ್ರತಿಭಟನೆ ಮಾಡುವ ಇರಾನ್ ಜನತೆ ಭ್ರಮನಿರಸನಗೊಳ್ಳಲಿದ್ದಾರೆ. ಆಗ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಇರಾನ್‌ನಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಸದ್ಯವೇ ಬದಲಾವಣೆ ಕೈಗೊಳ್ಳುವಂತಹ ಒತ್ತಡಕ್ಕೆ ಇರಾನ್ ಸರ್ಕಾರ ಒಳಗಾಗಲಿದೆ. ಹೀಗಾಗಿ, ಮಧ್ಯಪ್ರಾಚ್ಯದೊಂದಿಗೆ ಅದರಲ್ಲೂ ಇರಾನ್‌ನೊಂದಿಗೆ ಒಬಾಮ ತನ್ನ ರಚನಾತ್ಮಕ ಬಾಂಧವ್ಯವನ್ನು ಮುಂದುವರಿಸಬೇಕಿದೆ. ಈ ಬಾಂಧವ್ಯ ಯಶಸ್ವಿಯಾದಲ್ಲಿ ಅದು ಒಬಾಮ ಜಗತ್ತಿಗೆ ನೀಡಿದ ಅತಿ ದೊಡ್ಡ ಬದಲಾವಣೆಯಾಗಲಿದೆ.

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .