User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 

ಇತರ ವಿಭಾಗಗಳು
 
ಲಂಗರು
ಶಾಂತಿದೂತ ‘ಅಲಿ ಭೂತ’

 

ಕೋಮುದಳ್ಳುರಿಯಲ್ಲಿ ಬೇಯುತ್ತಿರುವ ಕರಾವಳಿಯಲ್ಲಿ ’ಅಲಿ ಭೂತಾರಾಧನೆ’ ಸಹಬಾಳ್ವೆಯ ಭರವಸೆ ಮೂಡಿಸಿದೆ ಎನ್ನುತ್ತಾರೆ ಕೆ. ರಾಘವ ಶರ್ಮ

 

ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತವೃಂದ. ಎಲ್ಲರ ಮೊಗದಲ್ಲೂ ಭಯಮಿಶ್ರಿತ ಭಕ್ತಿ. ತಲೆ ತುಂಬಾ ಮಲ್ಲಿಗೆ ಮುಡಿದು ವಾತಾವರಣಕ್ಕೇ ಘಮ ತುಂಬಿದ್ದ ಹೆಂಗಳೆಯರು ಒಂದೆಡೆಯಾದರೆ, ಬುರ್ಖಾದೊಳಗೆ ಅವಿತಿದ್ದ ಬೆರಗುಗಣ್ಣುಗಳಿಂದ ಅಲ್ಲಿ ನಡೆಯುತ್ತಿದ್ದ ಧಾರ್ಮಿಕ ವಿಧಿವಿಧಾನಗಳನ್ನು ವೀಕ್ಷಿಸುತ್ತಾ, ದೈವದ ಮುಂದೆ ಕಷ್ಟ ಕಾರ್ಪಣ್ಯಗಳನ್ನು ನಿವೇದಿಸಿಕೊಳ್ಳಲು ಸರದಿಯಲ್ಲಿ ಕಾಯುತ್ತಿದ್ದ ಹೆಂಗಸರು ಇನ್ನೊಂದೆಡೆ. ಕೆಲವರು ಶಾಲು-ಬಿಳಿ ಪಂಚೆ ಧರಿಸಿ ಅತ್ತಿಂದಿತ್ತ ಓಡಾಡುತ್ತಾ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದರೆ, ಇನ್ನೂ ಹಲವರು ತಲೆಗೆ ’ಇಸ್ಲಾಂ ಟೋಪಿ’ ಧರಿಸಿ ಆತುರಾತುರವಾಗಿ ಓಡಾಡುತ್ತಾ ಎಲ್ಲಾ ಕೆಲಸಗಳನ್ನು ಸಾಂಗವಾಗಿ ನೆರವೇರಿಸುತ್ತಿದ್ದರು...

ಅದು ದಕ್ಷಿಣ ಕನ್ನಡದ ಆರಿಕ್ಕಾಡಿ ಎಂಬ ಸಣ್ಣ ಹಳ್ಳಿ. ಹಿಂದೂ- ಮುಸ್ಲಿಂ ಸಹಬಾಳ್ವೆಯ ಸಂಕೇತದಂತಿರುವ ಆ ಸ್ಥಳದಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದುದು ಅಲಿ ಭೂತ! ರೇಷ್ಮೆ ಪಂಚೆ ಹಾಗೂ ಸ್ಥಳೀಯ ಮುಸ್ಲಿಂ ಸಮುದಾಯ ಧರಿಸುವ ಮಾದರಿಯ ಬಂಗಾರದ ಟೊಪ್ಪಿಗೆ ತೊಟ್ಟಿದ್ದ ಆ ಭೂತ ಒಬ್ಬೊಬ್ಬರನ್ನೇ ಕರೆದು ಅವರ ಕಷ್ಟ- ಕಾರ್ಪಣ್ಯಗಳನ್ನು ಅತ್ಯಂತ ಆದರದಿಂದ ಆಲಿಸುತ್ತಿದ್ದುದನ್ನು ನೋಡುವುದೇ ಸೋಜಿಗ! ಹೌದು ಅಲ್ಲಿ ನಡೆಯುತ್ತಿದ್ದುದು ನೇಮೋತ್ಸವ.

ಕುಂಬ್ಳೆ ಸಮೀಪದ ಆರಿಕ್ಕಾಡಿ ಕಳೆದ ಹಲವಾರು ವರ್ಷಗಳಿಂದ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿರುವುದು ಮಾತ್ರವಲ್ಲ, ದಕ್ಷಿಣ ಹಾಗೂ ಉತ್ತರ ಭಾರತ ಮಂದಿಯನ್ನೂ ಆಕರ್ಷಿಸುತ್ತಿದೆ. ಇಲ್ಲಿ ಅಂಥ ವಿಶೇಷತೆ ಏನಿದೆ? ಈ ಕುತೂಹಲ ಮೂಡಿದಲ್ಲಿ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಿಕ್ಕಾಡಿಗೆ ಭೇಟಿ ನೀಡಿ. ಆ ಸಮಯದಲ್ಲಿ ಸೇರುವ ಜನಸಾಗರ ಆರಿಕ್ಕಾಡಿ ವಿಶೇಷತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ವರ್ಷಕ್ಕೊಂದು ಬಾರಿ ಆ ಹಳ್ಳಿಯಲ್ಲಿ ಊರ ಜಾತ್ರೆಯಂತೆಯೇ ನೆರವೇರುವ ನೇಮೋತ್ಸವ ಕರಾವಳಿಯ ’ಕೋಮು ಕಲುಷಿತ ಪರಿಸರ’ದಲ್ಲಿ ಹೊಸ ಭರವಸೆ ಹುಟ್ಟಿಸುತ್ತದೆ.

ಆ ಪ್ರದೇಶದಲ್ಲಿ ‘ಅಲಿ ಭೂತ’ದ ಆರಾಧನೆ ಹೆಚ್ಚಿನ ಮಹತ್ವ ಪಡೆದಿರುವುದರ ಜೊತೆಗೆ ಮುಸ್ಲಿಂ ಹಾಗೂ ಹಿಂದೂ ಸಮುದಾಯದ ಪ್ರತಿಬಿಂಬವಾಗಿ ನಿಲ್ಲುವ ದೈವ ಜನರ ದುಗುಡ ದುಮ್ಮಾನಗಳಿಗೆ ಪರಿಹಾರ ಒದಗಿಸಿ ಮನೆಮಂದಿಗೆ ಆತ್ಮೀಯ ಎಂದೆನಿಸಿಕೊಂಡಿದೆ. ಅದಿರಲಿ, ಈ ‘ಅಲಿ ಭೂತ’ ಯಾರು? ಇದು ಹಿಂದೂ-ಮುಸ್ಲಿಂ ಏಕತೆಯ ಸಂಕೇತ ಹೇಗೆ? ಇದಕ್ಕೆ ಆರಿಕ್ಕಾಡಿ ‘ಅಲಿ ಭೂತ’ ಆರಾಧನೆ ಕುರಿತು ಅಧ್ಯಯನ ಮಾಡಿರುವ ಕೇಳು ಮಾಸ್ಟರ್ ಅಗಲ್ಪಾಡಿ ಅವರು ಹೇಳುವುದು ಹೀಗೆ: "ಅಲಿ ಮೂಲತಃ ಒಬ್ಬ ಮುಸ್ಲಿಂ ಆಗಿದ್ದರೂ ಕೋಲದ ಸಂದರ್ಭದಲ್ಲಿ ಆತನ ಭೂತವನ್ನು ಆವಾಹನೆ ಮಾಡಿಕೊಳ್ಳುವ ವ್ಯಕ್ತಿ ಹಿಂದೂ. ವಿಶೇಷವೆಂದರೆ ಈ ಭೂತಕೋಲ ಪರಿಕಲ್ಪನೆ ಸಂಪೂರ್ಣವಾಗಿ ಹಿಂದೂ ಪದ್ಧತಿ ಅನ್ವಯ ಬೆಳೆದುಬಂದದ್ದು. ಹಾಗಿದ್ದರೂ ಭೂತಕೋಲದ ಇತರ ಪವಿತ್ರ ವಿಧಿವಿಧಾನಗಳೊಂದಿಗೆ ಅಲಿ ಭೂತ ನಮಾಜನ್ನೂ ಮಾಡುತ್ತದೆ. ಇದೇ ಅಲಿ ಭೂತದ ವೈಶಿಷ್ಟ್ಯ. ಇದರೊಂದಿಗೆ ಅಲಿ ಭೂತದ ವೇಷಭೂಷಣವೂ ಅದರ ಧರ್ಮವನ್ನು ನೆನಪಿಸುತ್ತದೆ. ಆವಾಹನೆಯಾದ ತಕ್ಷಣ ಅಲಿ ಭೂತ ಭಕ್ತರನ್ನು ತನ್ನ ಪೀಠದ ಸನಿಹಕ್ಕೆ ಕರೆಯುತ್ತದೆ. ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಳ್ಳಲು ಆಜ್ಞೆ ನೀಡುತ್ತದೆ".

ವೈಜ್ಞಾನಿಕ ಜಗತ್ತು ಭೂತಾರಾಧನೆಯನ್ನು ಮೌಢ್ಯ ಎಂದೆನ್ನಬಹುದು. ಆದರೆ ಕೋಮು ವೈಷಮ್ಯದಿಂದಾಗಿ ದಕ್ಷಿಣ ಕನ್ನಡದ ವಾತಾವರಣ ಉಸಿರುಗಟ್ಟಿಸುವಂತಾಗಿರುವಾಗ ಎರಡು ಧರ್ಮದ ಜನರನ್ನು ಬೆಸೆಯುವ ಇಂಥ ಆಚರಣೆ ಸೌಹಾರ್ದತೆಯ ಬೆಳಕಿಂಡಿಯಂತೆ ಕಾಣುತ್ತದೆ. ಇಲ್ಲಿ ದೇವರ ಹೆಸರಿನಲ್ಲಿ ಕಚ್ಚಾಡಿಕೊಳ್ಳುವ ಮಂದಿ ಭೂತದ ಹೆಸರು ಬಂದಾಗ ಮಾತ್ರ ಬೆಚ್ಚಿ ಬೀಳುತ್ತಾರೆ. ಇಲ್ಲಿನವರಿಗೆ ದೇವರ ಮೇಲಿನ ಭಕ್ತಿಗಿಂತ ಭೂತದ ಮೇಲಿನ ಭೀತಿಯೇ ಅಧಿಕವಾಗಿ ಕಂಡುಬರುವ ಪ್ರಕರಣಗಳೂ ಇಲ್ಲದಿಲ್ಲ. ಹೀಗೆ ಭಕ್ತಿ- ಭೀತಿಯ ಸಮ್ಮಿಶ್ರ ಛಾಯೆಯಲ್ಲಿ ‘ಹಿಂದೂ- ಮುಸ್ಲಿಂ’ ಸೌಹಾರ್ದದ ಸಂಕೇತವಾಗಿ, ಜನರನ್ನು ವೈಷಮ್ಯದ ಬೆಂಕಿಯಿಂದ ದೂರವಿಟ್ಟಿದೆ ಆರಿಕ್ಕಾಡಿಯ ‘ಅಲಿ ಭೂತ’.

"ಮುಸ್ಲಿಂ ಸಮುದಾಯದಲ್ಲಿ ಪ್ರಚಲಿತವಿರುವ ಪಾಡ್ದನವೊಂದರ ಪ್ರಕಾರ ಆರಿಕ್ಕಾಡಿ ಬಳಿ ನೆಲೆಸಿದ್ದ ‘ಅಲಿ’ ಎಂಬ ಮಂತ್ರವಾದಿ ಜನರ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದ. ಹೆಚ್ಚಾಗಿ ಮಹಿಳೆಯರ ಸಂಕಷ್ಟಗಳನ್ನು ದೂರಮಾಡುತ್ತಿದ್ದ ಅಲಿ ಕೊನೆಗೆ ನದಿಯೊಂದರ ಬಳಿ ಮೃತಪಟ್ಟ. ಆದರೆ ಮರಣಾನಂತರವೂ ಆತ ಜನರೊಂದಿಗಿದ್ದಾನೆ; ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದಾನೆ ಎಂದು ಜನರು ನಂಬಿದ್ದಾರೆ" ಎನ್ನುತ್ತಾರೆ ಜಾನಪದ ತಜ್ಞ ಡಾ. ಪುರುಷೋತ್ತಮ ಬಿಳಿಮಲೆ. "ಅಲಿಯ ಭಕ್ತರಲ್ಲಿ ಮಹಿಳೆಯರೇ ಅಧಿಕ. ಮುಸ್ಲಿಂ ಹಾಗೂ ಹಿಂದೂ ಮಹಿಳೆಯರು ಅಲಿಯನ್ನು ಆರಾಧಿಸುತ್ತಾರೆ" ಎನ್ನುತ್ತಾರೆ ಅವರು.

ತುಳುನಾಡು ಭೂತಾರಾಧನೆಗೆ ಪ್ರಸಿದ್ಧಿ. ಆರಿಕ್ಕಾಡಿಯಲ್ಲಿ ಇಂದು ನೆಲೆಗೊಂಡಿರುವ ‘ಅಲಿ ಭೂತ’ ಹಿಂದೂ- ಮುಸ್ಲಿಂ ಒಗ್ಗಟ್ಟು, ಸಹಕಾರಕ್ಕೆ ಸಾಕ್ಷಿಯಾಗಿ ನಿಂತಿದೆ. ಅಲ್ಲಿನ ಜನರ ಭಕ್ತಿ- ಭಾವಕ್ಕೆ ಸ್ಪಂದಿಸುತ್ತಿರುವುದು ಮಾತ್ರವಲ್ಲದೆ ಅವರನ್ನು ಸಮಸ್ಯೆಗಳಿಂದ ಸದಾ ಮುಕ್ತಿಗೊಳಿಸುತ್ತದೆ ಎಂದು ಅಲ್ಲಿನ ಜನರು ನಂಬಿದ್ದಾರೆ. "ಒಬ್ಬ ವ್ಯಕ್ತಿಯ ನಂಬಿಕೆಗಳನ್ನು ಪ್ರಶ್ನಿಸುವ ಹಕ್ಕು ನಮಗಿಲ್ಲದಿದ್ದರೂ, ಈ ನಂಬಿಕೆಗಳು ಕೋಮುಸೌಹಾರ್ದಕ್ಕೆ ನಾಂದಿ ಹಾಡಿರುವುದು ಗಮನಿಸಬೇಕಾದ ಅಂಶ. ಹಾಗೆಂದ ಮಾತ್ರಕ್ಕೆ ಇಲ್ಲಿನ ಪರಿಸರದಲ್ಲಿ ಕೋಮು ಗಲಭೆಗಳು ನಡೆಯುವುದೇ ಇಲ್ಲ ಎಂದಲ್ಲ. ಆದರೆ ‘ಅಲಿ ಭೂತ’ದ ಭಯ ಜನರನ್ನು ಹಿಂಸಾಚಾರ, ಗಲಭೆಗಳಿಂದ ದೂರ ಉಳಿಯುಂತೆ ಮಾಡಿವೆ. ಹಾಗಾಗಿಯೇ ಇಲ್ಲಿ ಕೋಮು-ಹಿಂಸಾಚಾರದಂತಹ ಘಟನೆಗಳು ಕಡಿಮೆಯಾಗಿವೆ. ಹಾಗೇ ‘ಅಲಿ ಭೂತ’ ಇಲ್ಲಿನ ಜನರಿಗೆ ಹೊಸ ಭರವಸೆಯಿದ್ದಂತೆ" ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ ಕುಂಬ್ಳೆ ಬಳಿಯ ಸೂರಂಬೈಲಿನ ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ.

ದಕ್ಷಿಣ ಕನ್ನಡದ ಮಂದಿಗೆ ಭೂತಾರಾಧನೆ ಹೊಸ ವಿಚಾರವೇನಲ್ಲ. ಇಲ್ಲಿನ ಪ್ರತಿಯೊಂದು ಪ್ರಾಂತ್ಯದಲ್ಲೂ ಒಂದೊಂದು ಭೂತವನ್ನು ಆರಾಧಿಸುತ್ತಾರೆ. ಅಂತೆಯೇ ಆರಿಕ್ಕಾಡಿಯ ಹಾಗೂ ಸುತ್ತಮುತ್ತಲಿನ ಜನ ‘ಅಲಿ ಭೂತ’ವನ್ನು ವಿಶೇಷವಾಗಿ ಆರಾಧಿಸುತ್ತಾರೆ. ಪಂಜುರ್ಲಿ, ಪಿಲಿಚಾಮುಂಡಿ, ರಕ್ತೇಶ್ವರಿ, ಜುಮಾದಿ, ವಿಷ್ಣುಮೂರ್ತಿ, ಕಲ್ಕುಡ ಕಲ್ಲುರ್ಟಿ, ಸೇರಿದಂತೆ ಹಲವಾರು ಭೂತಗಳ ಆರಾಧನೆಗೆ ದಕ್ಷಿಣ ಕನ್ನಡ ಮೂಲವಾಗಿದ್ದರೂ, ‘ಅಲಿ ಭೂತ’ದಿಂದಾಗಿ ಆರಿಕ್ಕಾಡಿ ಮಾತ್ರ ಪ್ರತಿವರ್ಷ ಸುದ್ದಿಯಾಗುತ್ತಲೇ ಇರುತ್ತದೆ. ಮಾರ್ಚ್ ಅಂತ್ಯದ ಅಥವಾ ಏಪ್ರಿಲ್ ತಿಂಗಳ ಆರಂಭದಲ್ಲಿ ಪರಿವಾರ ದೈವಗಳೊಂದಿಗೆ ನಡೆಯುವ ‘ಅಲಿ-ಭೂತ’ದ ವೈಭವ ಬಹು ಜನಪ್ರಿಯ. ಆ ಸಂದರ್ಭದಲ್ಲಿ ಕೇರಳ, ಕರ್ನಾಟಕ ಅಲ್ಲದೇ ಉತ್ತರ ಭಾರತದಿಂದಲೂ ಯಾತ್ರಾರ್ಥಿಗಳು ಆರಿಕ್ಕಾಡಿಗೆ ಬಂದು ಅಲಿ ಭೂತವನ್ನು ಆರಾಧಿಸುತ್ತಾರೆ. ಕಳೆದ ಮಾರ್ಚ್ ತಿಂಗಳ ಕೊನೆಯಲ್ಲಿ ನಡೆದ ನೇಮೋತ್ಸವಕ್ಕೆ ಸುಮಾರು 25 ಸಾವಿರ ಮಂದಿ ಸಾಕ್ಷಿಯಾಗಿದ್ದರು!

ತುಳುನಾಡಿನಲ್ಲಿ ಹಲವಾರು ದೈವಗಳು ಅಸ್ತಿತ್ವದಲ್ಲಿವೆ ಎಂದು ಜನರು ನಂಬಿರುವುದು ಮಾತ್ರವಲ್ಲ, ಆ ನಂಬಿಕೆಗೆ ತಕ್ಕಂತೆ ಅವುಗಳ ಆರಾಧನೆಯನ್ನೂ ಸಾಂಪ್ರದಾಯಿಕವಾಗಿ ನಡೆಸುತ್ತಲೇ ಬಂದಿದ್ದಾರೆ. ಪ್ರತಿಯೊಂದು ದೈವಕ್ಕೂ ಅದರದ್ದೇ ಆದ ವಿಶೇಷತೆ, ಹಿನ್ನೆಲೆಯಿದ್ದು; ತನ್ನ ಹೆಸರು, ಲಿಂಗ, ವೇಷ ಹಾಗೂ ಪೌರಾಣಿಕ ಹಿನ್ನೆಲೆಯಿಂದ ಅದು ಗುರುತಿಸಿಕೊಂಡಿದೆ. ಕರಾವಳಿ ಕರ್ನಾಟಕದಲ್ಲಿ ನೆಲೆಸಿರುವ ತುಳು ಭಾಷಿಕರು ತಮ್ಮ ಆದರ್ಶ ವ್ಯಕ್ತಿ, ನಾಯಕ, ಸ್ಥಳೀಯ ದೈವ-ದೇವತೆಗಳು, ಪ್ರಸಿದ್ಧ ಮನೆತನ ಮತ್ತು ತಮ್ಮ ದುಃಖ-ದುಮ್ಮಾನಗಳನ್ನು ಪಾಡ್ದನಗಳ ರೂಪದಲ್ಲಿ ದಾಖಲಿಸಿದ್ದಾರೆ.

ಡಾ. ಬಿಳಿಮಲೆ ಅವರು ಹೇಳುವಂತೆ, ಇಂದು ಆ ಹಳ್ಳಿಯಲ್ಲಿರುವ ಎಲ್ಲಾ ಧರ್ಮದ ಜನರೂ ಅಲಿ ಭೂತದ ಆರಾಧನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲಿ ಭೂತವನ್ನು ಆವಾಹನೆ ಮಾಡಿಕೊಳ್ಳುವ ವ್ಯಕ್ತಿ ನಲಿಕೆ, ಪರವ, ಪಂಬದ ಅಥವಾ ಇತರ ಯಾವುದೇ ಪರಿಶಿಷ್ಟ ಪಂಗಡಕ್ಕೆ ಸೇರಿದವನಾಗಿರುತ್ತಾನೆ. ಸಹಜವಾಗಿಯೇ ಆ ಪ್ರದೇಶದ ಆಡಳಿತ ಪ್ರಬಲ ವರ್ಗಗಳಾದ ಬಂಟ, ಮೊಗವೀರ, ಗೌಡ, ಬಿಲ್ಲವ ಮತ್ತು ಬ್ರಾಹ್ಮಣರಿಗೆ ಸೇರಿರುತ್ತದೆ. ಇನ್ನು ವಿಧಿ-ವಿಧಾನಗಳಿಗೆ ಬೇಕಾದ ಸಿದ್ಧತೆ ನಡೆಸುವ ಮತ್ತು

ಅಗತ್ಯ ವಸ್ತುಗಳ ಸಂಗ್ರಹಣೆಯಂತಹ ಇನ್ನಿತರ ಜವಾಬ್ದಾರಿಗಳನ್ನು ಇತರ ಪಂಗಡಗಳಿಗೆ ನೀಡಲಾಗುತ್ತದೆ. ಹೀಗಾಗಿ ಇದು ಎಲ್ಲಾ ಜಾತಿ, ವರ್ಗದವರೂ ಸಮಾನವಾಗಿ ಬೆರೆಯುವಂತಹ ಆಚರಣೆಯಾಗಿಬಿಟ್ಟಿದೆ.

ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಎಂದಾಕ್ಷಣ ಹಲವು ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮರಸ್ಯದ ಬೀಡು ಎನಿಸುತ್ತಿತ್ತು. ಆದರೆ, ಇತ್ತೀಚೆಗೆ ಹಲವು ಅಹಿತಕರ ಘಟನೆಗಳ ಫಲವಾಗಿ ಇಂದು ದಕ್ಷಿಣ ಕನ್ನಡ ಎಂದರೆ ಹಿಂಸಾಚಾರ, ದೊಂಬಿ, ಕೋಮುಗಲಭೆ ಎನಿಸಿಬಿಟ್ಟಿದೆ. ಇತ್ತೀಚೆಗೆ ಪಬ್ ದಾಳಿ ಘಟನೆಯ ನಂತರವಂತೂ ದಕ್ಷಿಣ ಕನ್ನಡ, ಮಂಗಳೂರು ಎಂದರೆ ಹೊರನಾಡಿನ ಜನ ಮೂಗುಮುರಿಯುವಂತಾಗಿದೆ.

"ದಕ್ಷಿಣ ಕನ್ನಡದ ಬಗ್ಗೆ ನೀವು ಏನೇ ಹೇಳಿ. ನಾನು ಮಾತ್ರ ಅಲಿ ಭೂತವನ್ನು ಬಹುವಾಗಿ ನಂಬಿದ್ದೇನೆ. ನಮ್ಮೆಲ್ಲರಿಗೆ ರಕ್ಷಣೆ ನೀಡುವ, ಅಭಿವೃದ್ಧಿ, ಸಂಪತ್ತು ಹಾಗೂ ಎಲ್ಲಾ ಸಮುದಾಯಗಳ ಪ್ರಗತಿಯನ್ನು ಬಯಸುವ ಅಲಿ ಭೂತವನ್ನು ನೋಡಲು ನಾನು ಆರಿಕ್ಕಾಡಿಗೆ ತಪ್ಪದೇ ಹೋಗುತ್ತೇನೆ. ನಾನು ಕಾಲೇಜು ಅಧ್ಯಯನ ಮಾಡುತ್ತಿದ್ದ ದಿನಗಳಿಂದ ಪ್ರತಿ ವರ್ಷ ಅಲ್ಲಿಗೆ ಹೋಗುತ್ತಿದ್ದೇನೆ. ಆ ದೈವ ಹಾಗೂ ದೇವರ ದಯೆಯಿಂದ ನಾನಿಂದು ಉತ್ತಮ ಸ್ಥಿತಿಯಲ್ಲಿದ್ದೇನೆ. ನಿಜ ಹೇಳಬೇಕೆಂದರೆ ಕೆಲವು ವಿಕೃತ ಮನಸ್ಸಿನವರನ್ನು ಬಿಟ್ಟರೆ ಇಲ್ಲಿನ ಯಾವೊಬ್ಬನ ನಡುವೆಯೂ ಭೇದ-ಭಾವ ಇರಲಿಲ್ಲ. ಇದೀಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮುದಾಯಗಳ ಮಧ್ಯೆ ಸಂಘರ್ಷ ತಂದಿಡುತ್ತಿದ್ದಾರಷ್ಟೇ. ಇದಕ್ಕೆ ತಕ್ಕಂತೆ ಮಾಧ್ಯಮಗಳೂ ಪ್ರಚಾರ ನೀಡುತ್ತವೆ" ಎನ್ನುತ್ತಾರೆ ಮಂಗಳೂರಿನ ಯೆಯ್ಯಾಡಿಯ ಸಾಜಿದಾ.

ಮೌಢ್ಯದ ಮಾತು ಅತ್ತ ಇರಲಿ. ಸದ್ಯ ಕರಾವಳಿಯಲ್ಲಿ ಕೋಮುವೈಷಮ್ಯ ಮರೆಯಾಗಲು ಇಂಥ ಇನ್ನಷ್ಟು ’ಸೌಹಾರ್ದ ಭೂತ’ಗಳು ಅವತಾರ ಎತ್ತಬೇಕು.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .