|
ಅವು
1996ರ ದಿನಗಳು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಮಣ್ ಸತತ ಮೂರನೇ ಬಾರಿಯೂ
ಅನುತ್ತೀರ್ಣನಾದಾಗ ಅವರ ಮನೆಯವರು ಇನ್ನು ಈತನ ಓದಿನ ಕಥೆ ಮುಗಿಯಿತು
ಎಂದುಕೊಂಡಿದ್ದರು. ಸ್ವತಃ ರಮಣ್ ಕೂಡ ಕುಸಿದು ಕುಗ್ಗಿಹೋಗಿದ್ದರು. ತಾನು
ವೈದ್ಯನಾಗಬೇಕೆಂಬ ತನ್ನ ತಂದೆ- ತಾಯಿಗಳ ಕನಸನ್ನು ನನಸು ಮಾಡುವುದು ಇನ್ನು
ಸಾಧ್ಯವಿಲ್ಲ ಎಂದು ಅವರು ಅಂದುಕೊಂಡಿದ್ದರು. ಸರಿ, ಅಂತಹ ಸ್ಥಿತಿಯಲ್ಲಿ
ಪುಕ್ಕಟ್ಟೆ ಸಲಹೆ- ಸಾಂತ್ವನಗಳಿಗೇನೂ ಬರವಿರುವುದಿಲ್ಲವಲ್ಲ! ಸಂಬಂಧಿಗಳು-
ಸ್ನೇಹಿತರು ಹತ್ತಾರು ಸಲಹೆ ನೀಡಿದರು. ಇನ್ನು ಓದಿನ ಮಾತು ಬೇಡ, ಜೀವನಕ್ಕೆ
ಬೇರೆ ಏನಾದರೂ ದಾರಿ ನೋಡಿಕೊಳ್ಳುವುದೇ ಸರಿ ಎಂದೂ ಹೇಳಿದರು. ಆದರೆ, ರಮಣ್
ಹಠವಾದಿ. ತನ್ನ ಸರದಿ ಬಂದೇ ಬರುತ್ತದೆ, ತಾನೇನೆಂಬುದು ಎಲ್ಲರಿಗೂ
ಗೊತ್ತಾಗುತ್ತದೆ ಎಂದುಕೊಂಡರು. ಹೌದು, ಆ ಭರವಸೆ ನಿಜವಾಯಿತು. ನಾಲ್ಕನೇ
ಪ್ರಯತ್ನದಲ್ಲಿ ದ್ವಿತೀಯ ಪಿಯುಸಿ ಪಾಸು ಮಾಡಿಯೇಬಿಟ್ಟರು.
ಅದಾಗಿ 13 ವರ್ಷ ಕಳೆದಿದೆ. ಇಂದು ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಅವರು
ಸಲಹೆಗಾರರು. "ನಾನು ಉತ್ತಮ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಹಾಗಾಗಿ ನನ್ನ
ಶಾಲಾ ದಿನಗಳಲ್ಲಿ ನಾನು ಸದಾ ಆತಂಕಕ್ಕೊಳಗಾಗಿದ್ದೆ. ಆದರೆ, ನನ್ನ ಗುರಿ
ತಲುಪುವಲ್ಲಿ ಅದಾವುದೂ ನನ್ನನ್ನು ತಡೆಯಲಿಲ್ಲ. ನಿಮ್ಮ ಭೂತ ಕಾಲವನ್ನು ನೀವು
ಬದಲಾಯಿಸಲಾರಿರಿ, ಆದರೆ, ಕಠಿಣ ಪರಿಶ್ರಮ, ತಾಳ್ಮೆ ಮತ್ತು ದೃಢ ಸಂಕಲ್ಪದಿಂದ
ನಿಮ್ಮ ಭವಿಷ್ಯವನ್ನಂತೂ ರೂಪಿಸಿಕೊಳ್ಳಬಹುದು" ಎನ್ನುತ್ತಾರೆ ರಮಣ್.
ಶೈಕ್ಷಣಿಕ ಸೋಲು ಮತ್ತು ಅದು ತರುವ ಹತಾಶೆಯಿಂದ ಪಾರಾಗಲಾರದೆ
ಆತ್ಮವಿಶ್ವಾಸ ಕಳೆದುಕೊಳ್ಳುವ ವಿದ್ಯಾರ್ಥಿಗಳಿಗೆ ರಮಣ್ ಸಾಧನೆ ಒಂದು
ಅತ್ಯುತ್ತಮ ಮಾದರಿ. ತರಗತಿಯ ಇತರ ವಿದ್ಯಾರ್ಥಿಗಳೊಂದಿಗಿನ ಪೈಪೋಟಿಯಲ್ಲಿ
ಹಿಂದೆ ಬೀಳುವ ಮಕ್ಕಳಿಗೆ ಪೋಷಕರು ತೀರಾ ಅತಿ ಎನಿಸುವ ಒತ್ತಡ ಹೇರುವುದು,
ಬೆದರಿಸುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ಬದುಕಿನಲ್ಲಿ ಮುಂದೆ
ಎದುರಾಗಬಹುದಾದ ಸವಾಲುಗಳನ್ನು ಎದುರಿಸಲು ವ್ಯಕ್ತಿಗೆ ಅತ್ಯುತ್ತಮ
ಎನ್ನಬಹುದಾದ ಶೈಕ್ಷಣಿಕ ಹಿನ್ನೆಲೆ ಅನಿವಾರ‍್ಯ ಎಂಬುದು ಅವರ ಲೆಕ್ಕಾಚಾರ.
ಆದರೆ, ಈ ಬಗೆಯ ಯೋಚನೆ ಸರಿಯಲ್ಲ ಎಂಬುದನ್ನು ತಮ್ಮದೇ ಉದಾಹರಣೆಗಳ ಮೂಲಕ
ಸಾಬೀತು ಮಾಡಿರುವ/ ಮಾಡುತ್ತಿರುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ರಮಣ್
ಮಾತಲ್ಲೇ ಹೇಳುವುದಾದರೆ "ಯಾರೇ ಆಗಲೀ ಯಾವುದೇ ಒಂದು ಕೆಲಸ- ಕಾರ್ಯದ ಕಡೆ
ತನ್ನನ್ನು ತಾನು ಸಂಪೂರ್ಣ ಸಮರ್ಪಿಸಿಕೊಂಡರೆ ಯಾವ ಸಾಧನೆಯೂ ಅಸಾಧ್ಯವಲ್ಲ".
ಆಸ್ಕರ್ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಶಾಲಾ ದಿನಗಳಲ್ಲಿ
ತೀರಾ ಸಾಧಾರಣ ವಿದ್ಯಾರ್ಥಿ. ಆದರೆ, ಅವರು ಇಂದು ಇಡೀ ವಿಶ್ವವೇ ಆರಾಧಿಸುವ
ಸಂಗೀತ ಮಾಂತ್ರಿಕ. ಶೈಕ್ಷಣಿಕ ಹಿನ್ನಡೆ ತಮ್ಮ ಬದುಕಿನ ಅದಮ್ಯ ಆಸೆಯನ್ನು
ಹತ್ತಿಕ್ಕದಂತೆ ನೋಡಿಕೊಂಡು ಸತತ ಪರಿಶ್ರಮದಿಂದ ಸಂಗೀತವನ್ನು ಕಲಿತ ಕಾರಣ
ಅವರಿಂದು ತಮ್ಮ ಕಲೆಯ ಉತ್ತುಂಗಕ್ಕೇರಿದ್ದಾರೆ. ಹಾಗೆ ನೋಡಿದರೆ, ಮನುಷ್ಯ
ಯಶಸ್ಸು ಪಡೆಯುವುದು ತಾನು ಏನನ್ನು ನಂಬುತ್ತಾನೆಯೋ ಅದನ್ನು ಮಾಡುವುದರಲ್ಲಿಯೇ
ವಿನಾ ಇತರರು ಹೇಳಿದರು ಎಂಬ ಕಾರಣಕ್ಕೆ ಏನನ್ನಾದರೂ ಮಾಡುವುದರಿಂದಲ್ಲ
ಎಂಬುದಕ್ಕೆ ರೆಹಮಾನ್ ಜೀವಂತ ನಿದರ್ಶನ.
ಸಚಿನ್ ತೆಂಡೂಲ್ಕರ್ ಅವರ ರೋಚಕ ಕಥೆ ಕೂಡ ಇದಕ್ಕಿಂತ ಭಿನ್ನವಾಗೇನೂ ಇಲ್ಲ.
ಆಲ್ಬರ್ಟ್ ಐನ್‌ಸ್ಟೇನ್ ಅವರಂತೆ ಸಚಿನ್ ಕೂಡ ಒಬ್ಬ ಸಾಧಾರಣ
ವಿದ್ಯಾರ್ಥಿಯಾಗಿದ್ದವರೇ. ಇನ್ನು ಅಮೆರಿಕದ ಖ್ಯಾತ ವಿಜ್ಞಾನಿ ಥಾಮಸ್ ಆಲ್ವಾ
ಎಡಿಸನ್ ಕೂಡ ಶಿಕ್ಷಕರ ಬಾಯಲ್ಲಿ 'ದಡ್ಡ ಶಿಖಾಮಣಿ' ಎಂದು ಹೊಗಳಿಸಿಕೊಂಡವರೇ!
ಆದರೆ, ತಾವೇನು ಎಂದು ಜಗತ್ತಿಗೇ ತೋರಿಸಿಕೊಡುವಲ್ಲಿ ಮಾತ್ರ ಅವರು ಯಾರಿಗೂ
ಕಡಿಮೆಯಾಗಲಿಲ್ಲ. ಮೋಹನ್ ದಾಸ್ ಕರಮ್‌ಚಂದ್ ಗಾಂಧಿ, ವಿನ್‌ಸ್ಟನ್ ಚರ್ಚಿಲ್‌ರಂತಹ
ಇಡೀ ಜಗತ್ತಿನ ಇತಿಹಾಸವನ್ನೇ ಬದಲಿಸಿದ ಮಹಾನುಭಾವರು ಶಾಲೆಗಳಲ್ಲಿ
ಪ್ರತಿಭಾವಂತರೆಂದು ಶಹಬ್ಬಾಸ್ ಗಿಟ್ಟಿಸಿಕೊಂಡವರಾಗಿರಲಿಲ್ಲ.
ಹಾಗಂತ, ಶಾಲೆಗಳಲ್ಲಿ ಸಾಧಾರಣ, ಕಳಪೆ ಎನಿಸಿಕೊಂಡವರೆಲ್ಲಾ ಮಹಾನ್
ಸಾಧಕರಾಗಿ ಹೊರಹೊಮ್ಮಿದ್ದಾರೆ ಎಂದರ್ಥವಲ್ಲ. ಆದರೆ, ಒಂದು ಮಗುವಿನ
ಪ್ರತಿಭೆಯನ್ನು ಅಳೆಯಲು, ಭವಿಷ್ಯವನ್ನು ಗ್ರಹಿಸಲು ಕೇವಲ ಪಠ್ಯ-
ಪುಸ್ತಕಗಳಿಂದಾಗಲೀ, ಪರೀಕ್ಷೆಗಳಿಂದಾಗಲೀ ಅಥವಾ ಶಾಲಾ ದಿನಗಳಿಂದಷ್ಟೇ ಆಗಲೀ
ಸಾಧ್ಯವಿಲ್ಲ ಎಂಬುದಕ್ಕೆ ಇವರೆಲ್ಲ ನಿದರ್ಶನಗಳಾಗಿದ್ದಾರೆ, ನಮ್ಮ ಪರೀಕ್ಷಾ
ಪದ್ಧತಿಗಳ ಲೋಪ ಅಥವಾ ಮಿತಿಗಳಿಗೆ ಜೀವಂತ ಸಾಕ್ಷ್ಯಗಳಾಗಿದ್ದಾರೆ. ಅಂಕಗಳ
ಮೇಲೇ ಎಲ್ಲವೂ ನಿರ್ಧಾರಿತವಾಗುವ ಶೈಕ್ಷಣಿಕ ಪದ್ಧತಿಯಲ್ಲಿ ಸೋಲು ಎಂಬುದು
ಬಹಳಷ್ಟು ಬಾರಿ ವಿದ್ಯಾರ್ಥಿಗಳ ಮುಗ್ಧ ಮನಸ್ಸಿನ ಮೇಲೆ ಮಾಸದ ಬರೆ ಎಳೆದು
ಆತಂಕ- ಹತಾಶೆಯ ಮಡುವಿಗೆ ತಳ್ಳಿ ಬಿಡುತ್ತದೆ.
ಶೇ.60 ಅಂಕ ಪಡೆದ ವಿದ್ಯಾರ್ಥಿ ಜಗತ್ತನ್ನೇ ಗೆದ್ದಂತೆ ಎದೆಯುಬ್ಬಿಸಿ
ನಡೆಯುತ್ತಿದ್ದರೆ, ಆತನಿಗಿಂತ ಶೇ.1ರಷ್ಟು ಕಡಿಮೆ ಅಂಕ ಪಡೆದಾತ ಎರಡನೇ
ದರ್ಜೆಯವನಾಗಿ ಸಮಾಜದಿಂದ ತಿರಸ್ಕೃತ ಭಾವನೆಯಲ್ಲಿ ಕುಗ್ಗುತ್ತಾನೆ. ನಮ್ಮ
ಶಿಕ್ಷಣ ವ್ಯವಸ್ಥೆಯಲ್ಲಿನ ಇಂತಹ ಗಂಭೀರ ಲೋಪಗಳ ಬಗ್ಗೆ ಎಚ್ಚರಿಕೆ ನೀಡುವ
ಖ್ಯಾತ ಸಮಾಜಶಾಸ್ತ್ರಜ್ಞ ಸತ್ಯಮಿತ್ರ ದುಬೆ, "ನಮ್ಮ ಅಂಕ ಪದ್ಧತಿ ತಪ್ಪು.
ವರ್ಷವೆಲ್ಲಾ ಕಲಿತದ್ದನ್ನು 3 ಗಂಟೆಯಲ್ಲಿ ಪರೀಕ್ಷೆಗೊಡ್ಡುವುದು, ಮಾನವ ಸಹಜ
ತಪ್ಪುಗಳನ್ನೂ ಪರಿಗಣಿಸದೆ ಅಂಕಗಳನ್ನು ನೀಡುವುದು, ಆ ಅಂಕಗಳ ಆಧಾರದ ಮೇಲೆ
ವಿದ್ಯಾರ್ಥಿಯ ಅರ್ಹತೆ, ಭವಿಷ್ಯವನ್ನು ನಿರ್ಧರಿಸುವುದು ತೀರಾ ತಪ್ಪು ಕ್ರಮ.
ಹಾಗಾಗಿಯೇ ಇದೀಗ ಗ್ರೇಡಿಂಗ್ ಪದ್ಧತಿಯ ಬಗ್ಗೆ ನಾವು ಮಾತನಾಡುತ್ತಿದ್ದೇವೆ"
ಎನ್ನುತ್ತಾರೆ.
ಒಬ್ಬ ವಿದ್ಯಾರ್ಥಿ ಆತನ ಆಸಕ್ತಿಯ ವಿಷಯವೊಂದರಲ್ಲಿ ಹೆಚ್ಚಿನ ತಿಳಿವಳಿಕೆ
ಹೊಂದಿದ್ದು, ಇತರ ವಿಷಯಗಳಲ್ಲಿ ಉತ್ತಮ ಸಾಧನೆ ತೋರದೇ ಇರುವ ಸಾಧ್ಯತೆ ಹೆಚ್ಚು.
ಹಾಗಾದಾಗ ಉಳಿದ ವಿಷಯಗಳಲ್ಲಿನ ಸೋಲು ಆತನನ್ನು ಕಂಗೆಡಿಸಿ,
ಆತ್ಮವಿಶ್ವಾಸವನ್ನೇ ಹೊಸಕಿ ಹಾಕುತ್ತದೆ. ಹಾಗಾಗಿ ಇದೀಗ ಶೈಕ್ಷಣಿಕ ವಲಯ
ವಿದ್ಯಾರ್ಥಿಯ ಸಾಮರ್ಥ್ಯವನ್ನು ಅಳೆಯಲು ಬೇರೊಂದು ಪದ್ಧತಿಯನ್ನು
ಕಂಡುಕೊಳ್ಳುವ ಅಗತ್ಯವಿದೆ. ಆಗ ಮಾತ್ರ ಆಯಾ ವಿದ್ಯಾರ್ಥಿಯ ಸಾಮರ್ಥ್ಯ,
ಆಸಕ್ತಿಗೆ ತಕ್ಕ ಶಿಕ್ಷಣ ನೀಡುವುದು ಸಾಧ್ಯವಾಗಬಹುದು ಎಂಬ ಅಭಿಪ್ರಾಯ
ಹೊಂದಿದೆ.
ತೆಂಡೂಲ್ಕರ್ ಅವರಲ್ಲಡಗಿದ್ದ ಪ್ರತಿಭೆಯನ್ನು ಗುರುತಿಸಿ, ಅವರ ಹಿರಿಯಣ್ಣ
ಪ್ರೋತ್ಸಾಹ ನೀಡದೇ ಇದ್ದಿದ್ದರೆ ಬಹುಶಃ ಜಗತ್ತು ಕ್ರಿಕೆಟ್
ಮಾಂತ್ರಿಕನೊಬ್ಬನನ್ನು ಕಾಣುವುದು ಸಾಧ್ಯವಿರಲಿಲ್ಲ. ಆದರೆ, ಎಲ್ಲರೂ ಸಚಿನ್
ಅವರಷ್ಟು ಅದೃಷ್ಟವಂತರಾಗಿರುವುದಿಲ್ಲವಲ್ಲ? ಹಾಗಾಗಿ ಎಷ್ಟೋ ಮಂದಿ ಶೈಕ್ಷಣಿಕ
ಸೋಲು, ಇಷ್ಟವಿಲ್ಲದ ಕಲಿಕೆ, ತಿರಸ್ಕೃತ ಭಾವನೆಯಲ್ಲೇ ಬದುಕನ್ನು
ಕಳೆಯುತ್ತಾರೆ.
ಉತ್ತಮ ದರ್ಜೆ ವಿದ್ಯಾರ್ಥಿಗೆ ಉತ್ತಮ ನೌಕರಿ, ಆಕರ್ಷಕ ಕೆಲಸವನ್ನು
ನೀಡಬಹುದು. ಆದರೆ, ಬದುಕಿನಲ್ಲಿ ಅಂಕಗಳೇ ಸರ್ವಸ್ವವಲ್ಲ. ಮಕ್ಕಳ ಸುಪ್ತ
ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡಿ ಬೆಳೆಸುವುದು ಶಿಕ್ಷಕರ
ಕರ್ತವ್ಯ. ಆದರೆ, ದುರದೃಷ್ಟಕರ ಸಂಗತಿ ಎಂದರೆ, ನಮ್ಮ ವ್ಯವಸ್ಥೆಯಲ್ಲಿ
ಅಂಕಗಳಿಗೇ ಮಾನ್ಯತೆ ನೀಡಲಾಗುತ್ತಿದೆ. ತಮ್ಮ ಮಕ್ಕಳು ಅತ್ಯುತ್ತಮ ದರ್ಜೆ
ಪಡೆಯುವುದು ಬಹುತೇಕ ಎಲ್ಲ ಅಪ್ಪ- ಅಮ್ಮಂದಿರ ನಿದ್ದೆಗೆಡಿಸುವ ಮಟ್ಟಿಗಿನ
ಪ್ರಬಲ ಕನಸು. ಶಿಕ್ಷಕರು ಕೂಡ ಉತ್ತಮ ಅಂಕ ಪಡೆದವರೇ ತಮ್ಮ ಶಾಲಾ- ಕಾಲೇಜುಗಳ
ಹೆಗ್ಗಳಿಕೆ ಎಂಬಂತೆ ನಡೆದುಕೊಳ್ಳುತ್ತಾರೆ.
ಆದರೆ, ಅಷ್ಟೇನೂ ಉತ್ತಮವಲ್ಲದ ಶೈಕ್ಷಣಿಕ ಹಿನ್ನಲೆಯಿದ್ದರೂ ಹಲವರು
ದೇಶದಲ್ಲೇ ಅತ್ಯಂತ ಕಠಿಣ ಪರೀಕ್ಷೆಯಾದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ (ಐಎಎಸ್,
ಐಪಿಎಸ್, ಐಎಫ್‌ಎಸ್) ಯಶಸ್ವಿಯಾಗುತ್ತಾರೆ ಎಂಬುದನ್ನು ಮಾತ್ರ ಎಷ್ಟೋ ಮಂದಿ
ಮರೆತುಬಿಡುತ್ತಾರೆ. ಈಗಂತೂ ಭಾರತದ ಬಹುಪಾಲು ತಂದೆ- ತಾಯಿಗಳಿಗೆ ತಮ್ಮ
ಮಕ್ಕಳು ವಿಜ್ಞಾನವನ್ನೇ ಕಲಿತು ಮುಂದೆ ಎಂಜಿನಿಯರ್- ಡಾಕ್ಟರ್ ಆಗಬೇಕು ಎಂಬ
ಮಹದಾಸೆ. ಹಾಗಾಗಿ ಮಕ್ಕಳ ಮೇಲೆ ಸಹಜವಾಗೇ ಇನ್ನಿಲ್ಲದ ಒತ್ತಡ ಹೇರಲಾಗುತ್ತಿದೆ.
ಕೋಟಾ ಮೂಲದ 'ಕರಿಯರ್ ಪಾಯಿಂಟ್' ಉದ್ಯೋಗ ಮಾಗದರ್ಶಿ ಸಂಸ್ಥೆಯ ನಿರ್ದೇಶಕ
ಶೈಲೇಂದ್ರ ಮಹೇಶ್ರಿ ಟಿಎಸ್‌ಐ ಜೊತೆ ಮಾತನಾಡುತ್ತಾ, ವೈದ್ಯಕೀಯ ಮತ್ತು
ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹಿಂದಿನ
ಪರೀಕ್ಷೆಗಳ ಕಡಿಮೆ ಅಂಕಗಳು ತೊಡಕಾಗಲಾರವು ಎನ್ನುತ್ತಾರೆ. "ನಮ್ಮ
ಸಂಸ್ಥೆಯಲ್ಲೇ ಅಷ್ಟೇನು ಉತ್ತಮ ದರ್ಜೆ ಹೊಂದಿಲ್ಲದ ಹಲವು ವಿದ್ಯಾರ್ಥಿಗಳು
ಇದ್ದಾರೆ. ತೃತೀಯ ದರ್ಜೆ ಪಡೆದವರೂ ಇದ್ದಾರೆ. ಆದರೆ, ಅವರಾರಿಗೂ ಐಐಟಿಯಂತಹ
ಪ್ರತಿಷ್ಠಿತ ಶಿಕ್ಷಣ ಪೂರ್ಣಗೊಳಿಸುವಲ್ಲಿ ಸಮಸ್ಯೆಯಾಗಿಲ್ಲ. ಅದರಲ್ಲೂ
ಬಹಳಷ್ಟು ಮಂದಿ ಹಿಂದಿ ಮಾಧ್ಯಮದಿಂದ ಬಂದವರಿದ್ದಾರೆ. ಆದರೆ, ಕಳೆದ
ವರ್ಷದಿಂದ ಐಐಟಿಗಳಲ್ಲಿ ಪ್ರವೇಶ ಪರೀಕ್ಷೆಗೆ ಶೇ.60 ಅಂಕದ ಮಿತಿ ಜಾರಿಗೆ
ತಂದಿದೆ. ಆದರೆ, ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಂತಹ ಮಿತಿಗಳೇನೂ
ಇಲ್ಲದೆ ಕಡಿಮೆ ಅಂಕ ಪಡೆದವರು ಕೂಡ ಪ್ರವೇಶ ಪರೀಕ್ಷೆ ಬರೆಯಬಹುದು"
ಎನ್ನುತ್ತಾರೆ.
ಇಂದು ಹಿಂದೆಂದಿಗಿಂತಲೂ ಹೆಚ್ಚು ವೈವಿಧ್ಯಮಯವಾದ ಉದ್ಯೋಗಾವಕಾಶಗಳು
ವಿದ್ಯಾರ್ಥಿಗಳ ಮುಂದಿವೆ. ಇಂದು ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ,
ಮ್ಯಾನೇಜ್‌ಮೆಂಟ್, ಅರ್ಥಶಾಸ್ತ್ರ, ಸಮಾಜವಿಜ್ಞಾನ, ನಟನೆ, ಲಲಿತಕಲೆಗಳಿಗೆ
ಹೆಚ್ಚಿನ ಬೇಡಿಕೆ ಇದೆ.
ದೆಹಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಜೆ.ಎಲ್. ಶರ್ಮಾ ಪ್ರಕಾರ
"ಜಾಗತೀಕರಣದ ಬಳಿಕ ವಿವಿಧ ವಿಷಯಗಳ ಬೇಡಿಕೆ ಹಲವಾರು ಪಟ್ಟು ಹೆಚ್ಚಿದೆ. ಒಂದು
ಕಾಲದಲ್ಲಿ ಪ್ರಯೋಜನಕ್ಕೆ ಬರದವು ಎಂದುಕೊಂಡಿದ್ದ ಕೋರ್ಸುಗಳಿಗೆ ಕೂಡ ಇದೀಗ
ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ಇಂಗ್ಲಿಷ್ ಸಾಹಿತ್ಯ, ಹಿಂದಿ
ಐಚ್ಛಿಕದಂತಹ ವಿಷಯಗಳನ್ನು ಕಲಿಯಲು ಈ ಮೊದಲು ವಿದ್ಯಾರ್ಥಿಗಳು
ಹಿಂಜರಿಯುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಈ ವಿಷಯಗಳನ್ನು
ಕಲಿಯಲೂ ಈಗ ಮುಗಿಬೀಳುತ್ತಿದ್ದಾರೆ".
ಟಿಎಸ್‌ಐ
ಪ.
ವಿಜಯ್
ಪಾಸಾದ ಕೋಲಿವುಡ್
ಕನಸು!
ತಮಿಳು ಚಿತ್ರರಂಗದಲ್ಲಿ ಚಿತ್ರ ಸಾಹಿತಿ ಪ. ವಿಜಯ್ ಅವರದ್ದು ದೊಡ್ಡ
ಹೆಸರು. ತಮ್ಮ ಚಿತ್ರ ಸಾಹಿತ್ಯಕ್ಕೆ ಒಮ್ಮೆ ರಾಷ್ಟ್ರ ಪ್ರಶಸ್ತಿ ಪಡೆದ ಈ ಕವಿ
1993ರ ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾಗಿದ್ದರು ಎಂದರೆ ನೀವು
ನಂಬುತ್ತೀರಾ?
ತಮಿಳು ನಾಡಿನ ಕುಂಭಕೋಣಂ ಸಮೀಪದ ಹಳ್ಳಿಯೊಂದರಲ್ಲಿ ಜನಿಸಿದ ವಿಜಯ್ ತಮ್ಮ
ಶಾಲಾ ದಿನಗಳಲ್ಲಿಯೇ ಕವಿತೆಯ ಮೋಡಿಗೆ ಸಿಲುಕಿದ್ದರು. ವಿಧೇಯ
ವಿದ್ಯಾರ್ಥಿಯಾಗಿದ್ದ ವಿಜಯ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುತ್ತಾರೆ
ಎಂಬ ನಂಬಿಕೆ ಅವರ ಕುಟುಂಬ ವರ್ಗ ಹಾಗೂ ಸ್ನೇಹಿತರದ್ದು. ಪಿಯುಸಿಯಲ್ಲಿ ವಿಜಯ್
ಆಯ್ದುಕೊಂಡದ್ದು ಕಂಪ್ಯೂಟರ್ ಸೈನ್ಸ್. ಅವರ ತಂದೆಗೆ ವಿಜಯ್ ಅವರನ್ನು ಸಿವಿಲ್
ಎಂಜಿನಿಯರ್ ಮಾಡಬೇಕೆಂಬ ಆಸೆ. ಆದರೆ ಆದದ್ದೇ ಬೇರೆ. ಪಿಯುಸಿ ಫಲಿತಾಂಶ
ಪ್ರಕಟವಾದಾಗ ವಿಜಯ್ ಭೌತಶಾಸ್ತ್ರದಲ್ಲಿ ಅನುತ್ತೀರ್ಣರಾಗಿದ್ದರು.
"ತಮಿಳಿನಲ್ಲಿ 'ಮೇಷ್ಟ್ರು ಮಗ ದಡ್ಡ' ಎಂಬರ್ಥದ ನಾಣ್ಣುಡಿ ಒಂದಿದೆ.
ನಮ್ಮ ತಾಯಿ ಶಾಲಾ ಶಿಕ್ಷಕಿಯಾಗಿದ್ದರು. ಫಲಿತಾಂಶ ಪ್ರಕಟವಾದಾಗ
ಉತ್ತೀರ್ಣರಾದವರ ಪಟ್ಟಿಯಲ್ಲಿ ನನ್ನ ಹೆಸರು ಕಾಣಿಸದಿದ್ದಾಗ ಈ ಮೇಲಿನ ಮಾತು
ತಟ್ಟನೆ ನೆನಪಾಯಿತು. ಅಪ್ಪನ ಬೈಗುಳಗಳ ಶಾಸ್ತ್ರಕ್ಕೆ ತಯಾರಾಗಿಯೇ ಮನೆಯ
ಮೆಟ್ಟಿಲು ತುಳಿದಿದ್ದೆ. ಆದರೆ, ಅಪ್ಪನ ಪ್ರತಿಕ್ರಿಯೆ ನಾನು
ಅಂದುಕೊಂಡಂತಿರಲಿಲ್ಲ. ಆದರೆ 'ತಲೆಕೆಡಿಸಿಕೊಳ್ಳಬೇಡ ಹೋಗಲಿ ಬಿಡು' ಎಂದು
ಅವರೇ ನನ್ನನ್ನು ಸಂತೈಸಿದ್ದರು. ಅವರು ತೋರಿದ ಸ್ಥಿತಪ್ರಜ್ಞೆ ಹಾಗೂ ನೀಡಿದ
ಒತ್ತಾಸೆಯೇ ನನಗೆ ಇಂದಿಗೂ ದಾರಿ ದೀಪ" ಎನ್ನುತ್ತಾರೆ ವಿಜಯ್.
ಅಲ್ಲಿಗೇ ಕಲಿಕೆ ನಿಲ್ಲಿಸಿ ವಿಜಯ್ ತಮ್ಮ ಕನಸನ್ನು ಸಾಕಾರಗೊಳಿಸಲು ತಮಿಳು
ಚಿತ್ರರಂಗದ ತವರೂರು ಕೋಡಂಬಾಕಮ್ ಗಾಡಿಯೇರಿದರು. ಈಗ ವಿಜಯ್ ಒಬ್ಬ ಜನಪ್ರಿಯ
ಚಿತ್ರ ಸಾಹಿತಿ ಅಷ್ಟೇ ಅಲ್ಲದೆ, ತೆರೆ ಕಾಣಲಿರುವ ತಮಿಳು ಚಿತ್ರವೊಂದರಲ್ಲಿ
ನಾಯಕನ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ. ಜೊತೆಗೆ ಇನ್ನೊಂದು ತಮಿಳು
ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ!
"ನಿಜ ಹೇಳಬೇಕೆಂದರೆ, ಫೇಲಾದಾಗ ನನಗೆ ತುಂಬಾ ಬೇಸರವಾಗಿತ್ತು. ಆದರೆ ಆ
ಅಂಕಗಳು ಅಷ್ಟೊಂದು ಮುಖ್ಯವಲ್ಲವೇ ಅಲ್ಲ ಎಂಬುದು ನನ್ನ ಈಗಿನ ಅಭಿಪ್ರಾಯ.
ಆದ್ದರಿಂದ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಎಂಬ ಕಾರಣಕ್ಕೆ ಮಕ್ಕಳನ್ನು
ದಂಡಿಸಬಾರದು. ಜೀವನ ಪ್ರತಿಯೊಬ್ಬನಿಗೂ ಎರಡನೇ ಅವಕಾಶ ನೀಡುತ್ತಲೇ ಇರುತ್ತದೆ.
ಒಂದು ಬಾಗಿಲು ಮುಚ್ಚಿತೆಂದರೆ ಇನ್ನೊಂದು ಬಾಗಿಲಿಗಾಗಿ ಹುಡುಕಿ, ಖಂಡಿತಾ ಅದು
ನಿಮಗೆ ಸಿಗುತ್ತದೆ" ಎನ್ನುತ್ತಾರೆ ವಿಜಯ್.
ಬಾಲ್ಯದ ನೆನಪುಗಳು ಏಕೆ ವಿಜಯ್ ಅವರಲ್ಲಿ ಖುಷಿ ತರುವುದಿಲ್ಲ ಎಂಬ
ಪ್ರಶ್ನೆಗೆ ಉತ್ತರ ಸರಳ. ಒಮ್ಮೆ ವಿಜಯ್ ತಮ್ಮ ಪಿಯುಸಿ ಅಂಕಪಟ್ಟಿಯನ್ನು
ಕಳೆದು ಹಾಕುವ ಸಂಚು ಹೂಡಿದ್ದರಂತೆ! ಅದರ ಹಿಂದಿನ ಕಾರಣ ಏನಿರಬಹುದು ಎಂಬುದು
ಇನ್ನು ಗುಟ್ಟಾಗಿ ಉಳಿದಿಲ್ಲ ಬಿಡಿ!
(ಸುಂದರ ಬುದ್ಧನ್)
ಕುಶಾಲ್
ದೇವ್ ರಾತಿ
ಉದ್ಯಮ ಲೋಕದ
ಕನಸುಗಾರ
ಧೀರೂಬಾಯ್ ಅಂಬಾನಿ ಅವರಂತೆ, ಕುಶಾಲ್ ದೇವ್ ರಾತಿ ಕೂಡಾ ಕನಸುಗಳಿರುವುದೇ
ಸಾಕಾರಗೊಳಿಸಲು ಎಂದು ನಂಬುವವರು. ಶ್ರೀಮಂತನಾಗಬೇಕು ಎಂಬ ಕನಸು ಕುಶಾಲ್ ದೇವ್
ಅವರ ನಿತ್ಯ ಒಡನಾಡಿ!
28ರ ವಯಸ್ಸಿನಲ್ಲಿ ಸ್ವಂತ ಕಂಪನಿಯೊಂದನ್ನು ಆರಂಭಿಸುವ ಮೂಲಕ ಕುಶಾಲ್
ತಮ್ಮ ಕನಸನ್ನು ಸಾಕಾರಗೊಳಿಸಿದರು. ಆದರೆ ಕುಶಾಲ್ ಪಾಲಿಗೆ ಬದುಕು ಹೂವಿನ
ಹಾದಿಯಾಗಿರಲಿಲ್ಲ. ಮಗ ಎಂಜಿನಿಯರಿಂಗ್ ಓದಿ ಎಂಜಿನಿಯರ್ ಆಗಲಿ ಎಂಬುದು ಅವರ
ತಂದೆಯ ಕನಸಾಗಿತ್ತು. ಆದರೆ ಮಗನ ಆಸಕ್ತಿ ಇದ್ದಿದ್ದು ಮಾತ್ರ ಇಂಗ್ಲಿಷ್
ಸಾಹಿತ್ಯದ ಕಡೆಗೆ. ಅದೇ ಗೊಂದಲದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ
ಕುಶಾಲ್ ರಸಾಯನಶಾಸ್ತ್ರದಲ್ಲಿ ಅನುತ್ತೀರ್ಣರಾದರು. ಹಾಗೆ ಎಂಜಿನಿಯರ್ ಆಗಬೇಕು
ಎಂಬ ತಂದೆಯ ಆಸೆಗೆ ತೆರೆ ಬಿತ್ತು.
ನಂತರ ತಮ್ಮ ಮೊದಲ ಆಕರ್ಷಣೆ ಇಂಗ್ಲಿಷ್ ಸಾಹಿತ್ಯದೆಡೆಗೆ ವಾಲಿದರು. ಬಿಎ
(ಆನರ‍್ಸ್) ಇಂಗ್ಲಿಷ್‌ಗೆ ಪ್ರವೇಶವನ್ನೂ ಪಡೆದರು. ಅದೇ ಸಮಯದಲ್ಲಿ ಉದ್ಯಮ
ಸ್ಥಾಪನೆಗೆ ಮುಂದಾಗಿ ಸುಮಾರು 11 ಬಗೆಯ ಉದ್ಯಮ ಕ್ಷೇತ್ರಗಳಲ್ಲಿ ಪ್ರಯೋಗ
ನಡೆಸಿದರು.
ನೋಯ್ಡಾ ಸೆಕ್ಟರ್-18ರಲ್ಲಿರುವ ತಮ್ಮ ಕಚೇರಿಯಲ್ಲಿನ ನುಣುಪು ಮೈಯ
ಮೆತ್ತನೆಯ ಸೋಫಾದ ಮೇಲೆ ಕೂರುತ್ತಾ ಕುಶಾಲ್, "ನನಗೆ ನಿರಾಶೆಯಾಗಲೇ ಇಲ್ಲ.
ಬದಲಿಗೆ ಹೊಸ ಉದ್ಯಮದ ಬಗ್ಗೆ ಯೋಚನೆ ಮಾಡಲು ಶುರು ಮಾಡಿದೆ. ಆದರೆ ಕೈಯಲ್ಲಿ
ದುಡ್ಡಿರಲಿಲ್ಲ. ಹಾಗೆ ಒಂದು ಪ್ರತಿಷ್ಠಿತ ಖಾಸಗಿ ಬ್ಯಾಂಕೊಂದರಲ್ಲಿ
ಕೆಲಸಕ್ಕೆ ಸೇರಿದೆ. ನನ್ನ ಬಳಿ ಎಂಬಿಎ ಪದವಿಯೇನೂ ಇರಲಿಲ್ಲ. ಆದರೆ ನನ್ನ
ಮೆರಿಟ್‌ನ ಆಧಾರದ ಮೇಲೆ ಕೆಲಸ ಸಿಕ್ಕಿತು. ಆರು ತಿಂಗಳಲ್ಲಿ ಬಡ್ತಿಯೂ
ಸಿಕ್ಕಿತು. ಒಂದು ವರ್ಷದ ಬಳಿಕ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕೊಂದರಿಂದ
ಭಾರೀ ಸಂಬಳ ಸಿಗುವ ಕೆಲಸಕ್ಕೆ ಕರೆ ಬಂತು. ಆ ಅವಕಾಶವನ್ನು ಬಿಡಲು ನನ್ನಿಂದ
ಸಾಧ್ಯವಿರಲಿಲ್ಲ" ಎನ್ನುತ್ತಾರೆ.
ಆದರೆ ಕುಶಾಲ್ ತಲೆಯಲ್ಲಿ ಬೇರೆಯದೇ ಒಂದಷ್ಟು ಯೋಜನೆಗಳೂ ಇದ್ದವು.
ಸ್ವತಂತ್ರ ವಾಣಿಜ್ಯೋದ್ಯಮಿಯಾಗಬೇಕು ಎಂಬ ತಮ್ಮ ಕನಸಿನ ಸಾಕಾರಕ್ಕಾಗಿ ಮೂರು
ವರ್ಷಗಳ ಹಿಂದೆ ಆ ಕೆಲಸವನ್ನು ಬಿಟ್ಟರು. ಅಂದಿನಿಂದ ತಮಗೆ ಹಿಂತಿರುಗಿ
ನೋಡಬೇಕಾದ ಪ್ರಸಂಗವೇ ಎದುರಾಗಿಲ್ಲ ಎನ್ನುವ ಕುಶಾಲ್ "ಗುರಿಗೆ
ಬದ್ಧರಾಗಿದ್ದಲ್ಲಿ ಯಶಸ್ಸು ನಿಮ್ಮ ಬಳಿ ಬಂದೇ ತೀರುತ್ತದೆ" ಎನ್ನುತ್ತಾರೆ.
(ಅನಿಲ್ ಪಾಂಡೆ)
ಅನುರಾಗ್
ತಿವಾರಿ
ಗೆಲುವಿನ ಹಾದಿಯ
ರೋಚಕ ಪಯಣ
ಲಖನೌ ಮೂಲದ ಅನುರಾಗ್ ತಿವಾರಿ ದ್ವಿತೀಯ ಪಿಯುಸಿಯಲ್ಲಿ ಶೇ.48ರಷ್ಟು
ಅಂಕಗಳಿಸಿದಾಗ ಅನಪೇಕ್ಷಿತ ಟೀಕೆ ಹಾಗೂ ಸಲಹೆಗಳ ಮಹಾಪೂರವೇ ಹರಿದುಬಂದಿತ್ತಂತೆ.
ತಿವಾರಿ ಕೂಡಾ ಪ್ರೌಢಶಾಲೆಯಲ್ಲಿ ಗಳಿಸಿದ್ದ ಶೇ.55ರಷ್ಟಾದರೂ ಅಂಕ ದ್ವಿತೀಯ
ಪಿಯುಸಿಯಲ್ಲಿ ಏಕೆ ದೊರಕಲಿಲ್ಲ ಎಂಬ ದುಃಖ- ಬೇಗುದಿಯ ನಡುವೆ ಬಳಲಿ
ಹೋಗಿದ್ದರು. ಉತ್ತರ ಪ್ರದೇಶದ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಕ್ಯಾಷಿಯರ್
ಆಗಿದ್ದ ಅನುರಾಗ್ ತಿವಾರಿ ತಂದೆ ಬಳಿ ಮಗನಿಗೆ ಎಂಜಿನಿಯರ್ ಸೀಟು
ಕೊಡಿಸುವಷ್ಟು ಹಣವಿರಲಿಲ್ಲ. ಹಾಗೆ ಕಲಾ ವಿಭಾಗಕ್ಕೆ ತಿವಾರಿ ಸೇರ್ಪಡೆಯಾದರು.
"ಜನ ನಾನು ಜೀವನದಲ್ಲಿ ಮುಂದೆ ಬರುವುದೇ ಇಲ್ಲ ಎನ್ನುತ್ತಿದ್ದರು"
ಎನ್ನುತ್ತಾ ಹಿಂದಿನ ದಿನಗಳ ಮೆಲುಕು ಹಾಕುತ್ತಾರೆ ತಿವಾರಿ. ಆದರೂ ಅವರು ಒಂದು
ವರ್ಷದ ಕಂಪ್ಯೂಟರ್ ಪ್ರೋಗ್ರಾಮಿಂಗ್ ಡಿಪ್ಲೋಮಾಕ್ಕೆ ಸೇರಿದರು. ಮೊದಲಿಗೆ ಈ
ಡಿಪ್ಲೊಮಾ ತರಬೇತಿ ಕಬ್ಬಿಣದ ಕಡಲೆಯೆನಿಸುತ್ತಿತ್ತಂತೆ. ಹಿಂದಿ ಮಾಧ್ಯಮದ
ಹಿನ್ನೆಲೆಯಿಂದ ತಿವಾರಿಗೆ ತರಗತಿಯ ಪಾಠಗಳೂ ಕಷ್ಟವೆನಿಸುತ್ತಿದ್ದವಂತೆ. "ನಾನು
ಇಂಗ್ಲಿಷ್ ದಿನ ಪತ್ರಿಕೆಗಳನ್ನು ಹಾಗೂ ಇಂಗ್ಲಿಷ್ ವ್ಯಾಕರಣಕ್ಕೆ ಸಂಬಂಧಿಸಿದ
ಪುಸ್ತಕಗಳನ್ನು ಓದಲು ಶುರು ಮಾಡಿದೆ" ಎನ್ನುತ್ತಾರೆ ತಿವಾರಿ.
"ಕಡಿಮೆ ಅಂಕ ಎಂದಿಗೂ ನನ್ನ ಆತ್ಮವಿಶ್ವಾಸ ಧಕ್ಕೆ ತಂದಿಲ್ಲ್ಲ. ನಿಮಗೆ
ಅನುಭವ ಹಾಗೂ ಕೌಶಲ್ಯವಿದ್ದರೆ ಎಲ್ಲಾ ಅಡೆತಡೆಗಳೂ ಕುಸಿದು ಬೀಳುತ್ತವೆ"
ಎನ್ನುತ್ತಾರೆ ಈ 30 ವರ್ಷದ ಯುವಕ. ಜಗತ್ತಿನ ಪ್ರಮುಖ ತಂತ್ರಜ್ಞಾನ ಹಾಗೂ
ಔದ್ಯಮಿಕ ಹೊರಗುತ್ತಿಗೆ ಸಂಸ್ಥೆಗಳಲ್ಲಿ ಒಂದಾದ ಸ್ಟೀರಿಯಾ ಲಿಮಿಟೆಡ್‌ನ
ಭಾರತೀಯ ವಿಭಾಗದಲ್ಲಿ ತಿವಾರಿ ಈಗ ಇನ್‌ಫ್ರಾಸ್ಟ್ರಕ್ಚರ್ ಲೀಡರ್ ಆಗಿ ಕಾರ್ಯ
ನಿರ್ವಹಿಸುತ್ತಿದ್ದಾರೆ. ಭಾರತದಾದ್ಯಂತವಿರುವ ಸಂಸ್ಥೆಯ ಶಾಖೆಗಳಲ್ಲಿ 20
ತಂಡಗಳ ನೇತೃತ್ವ ತಿವಾರಿ ವಹಿಸಿಕೊಂಡಿದ್ದಾರೆ.
ಇಂದು ತಿವಾರಿ ಪ್ರಾಜೆಕ್ಟ್‌ಗಳಿಗಾಗಿ ಹಲವು ವಿದೇಶಿ ರಾಷ್ಟ್ರಗಳಿಗೆ
ಓಡಾಡುತ್ತಲೇ ಇರುತ್ತಾರೆ. "ನಿಮ್ಮ ಸೋಲಿನ ಬಗ್ಗೆ ಟೀಕೆ ಮಾಡಲು ಜನರಿಗೆ
ಅಧಿಕಾರವಿದೆ. ಆದರೆ ಆ ಮಾತುಗಳನ್ನೇ ನಿಮ್ಮ ಗೆಲುವಿಗೆ ಮೆಟ್ಟಿಲಾಗಿಸಿ"
ಎನ್ನುವ ತಿವಾರಿಗೆ ಕ್ರಿಕೆಟ್ ಎಂದರೆ ಅಚ್ಚುಮೆಚ್ಚು.
(ಪೂಜಾ ಅವಸ್ಥಿ)
ಡಿ.ಪಿ.
ಸಿಂಗ್
ಯಶಸ್ಸಿಗೂ
ಪರೀಕ್ಷೆಗೂ ಸಂಬಂಧವಿಲ್ಲ
ಆತ್ಮೀಯ ವ್ಯಕ್ತಿತ್ವ ಹಾಗೂ ನಯವಾದ ನುಡಿ ಕೆಲವೊಮ್ಮೆ ನಿಮ್ಮನ್ನು
ಮೋಸಗೊಳಿಸುತ್ತದೆ. ಡಿ.ಪಿ ಸಿಂಗ್, ಪಶ್ಚಿಮ ಬಂಗಾಳದ 24 ಪರಗಣಾಸ್‌ನ
ಹೆಚ್ಚುವರಿ ಪೊಲೀಸ್ (ಕೈಗಾರಿಕಾ ವಿಭಾಗ) ವರಿಷ್ಠಾಧಿಕಾರಿ.
ಈ ನೀಳಕಾಯದ ಪೊಲೀಸ್ ಅಧಿಕಾರಿ ಹೆಚ್ಚು ಮಾತನಾಡುವ ಪೈಕಿ ಅಲ್ಲ. ಆದರೆ
ಎಂಥವರನ್ನೂ ಮೋಡಿ ಮಾಡುವ ವ್ಯಕ್ತಿತ್ವ. ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದ
ಇವರು ಇಂದು ತಾವಿರುವ ಹುದ್ದೆಯಿಂದಲೇ ಖ್ಯಾತಿಯಾಗಿದ್ದಾರೆ. ಶಾಲಾ ದಿನಗಳಲ್ಲಿ
ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಡಿ.ಪಿ ಸಿಂಗ್ ಯುಪಿಎಸ್‌ಸಿ ಪರೀಕ್ಷೆ
ಉತ್ತೀರ್ಣರಾಗಲು ನಾಲ್ಕು ವರ್ಷ ಕಠಿಣ ಪರಿಶ್ರಮ ನಡೆಸಿದ್ದರು. ಪಿಯುಸಿಯಲ್ಲಿ
ಶೇ.59ರಷ್ಟು ಅಂಕಗಳಿಸಿದ ಈ ವಿದ್ಯಾರ್ಥಿ ನಂತರ ಭವಿಷ್ಯದಲ್ಲಿ ಪೊಲೀಸ್
ವರಿಷ್ಠಾಧಿಕಾರಿಯಾಗುತ್ತಾನೆ ಎಂದು ಬಹುಶಃ ಯಾರೂ ಎಣಿಸಿರಲಾರರು.
ತಮಗೆ ಸ್ಫೂರ್ತಿಯಾಗಿದ್ದು ಲಖನೌ ಸೈನಿಕ ಶಾಲೆಯ ಗೆಳೆಯರು ಎನ್ನುತ್ತಾರೆ
ಸಿಂಗ್. "ಅವರಲ್ಲಿ ಹಲವರು ತಮ್ಮ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ
ಹೇಳಿಕೊಳ್ಳುವಂಥ ಸಾಧನೆಗಳನ್ನೇನೂ ಮಾಡಿರಲಿಲ್ಲ. ಆದರೆ ಐಐಟಿ ಹಾಗೂ ನ್ಯಾಷನಲ್
ಡಿಫೆನ್ಸ್ ಅಕಾಡೆಮಿಗೆ ಸೇರುವಲ್ಲಿ ಅವರು ಯಶಸ್ವಿಯಾಗಿದ್ದರು. ಮುಂದಿನ
ಗುರಿಯನ್ನು ಏಕಮನಸ್ಕನಾಗಿ ಸಾಧಿಸುವ ಛಲವೇ ಯಶಸ್ಸಿನ ಸೂತ್ರ" ಎನ್ನುತ್ತಾ
ತಮ್ಮ ಯಶಸ್ಸಿನ ಪಯಣವನ್ನು ಚುಟುಕಾಗಿ ವಿವರಿಸುತ್ತಾರೆ ಈ ಮಿತಭಾಷಿ.
ನೀವು, ನಿಮ್ಮ ಆಯ್ಕೆಯ ಕ್ಷೇತ್ರಕ್ಕೆ ಕಾಲಿಟ್ಟಿರಿ ಎಂದರೆ ಯಾವ
ರೀತಿಯಲ್ಲಿ ಚುರುಕು ಹಾಗೂ ಶೀಘ್ರ ನಿರ್ಧಾರ ತೆಗೆದುಕೊಳ್ಳುವಿರಿ ಎಂಬುದರ
ಮೇಲೆ ನಿಮ್ಮ ಯಶಸ್ಸು ಅವಲಂಬಿತವಾಗಿರುತ್ತದೆ ಎಂದು ಅಭಿಪ್ರಾಯಪಡುವ ಸಿಂಗ್ "ವೃತ್ತಿಕ್ಷೇತ್ರದ
ಯಶಸ್ಸಿಗೂ ನೀವು ಶೈಕ್ಷಣಿಕ ಪರೀಕ್ಷೆಯಲ್ಲಿ ಹೇಗೆ ಬರೆದಿರಿ ಎಂಬುದಕ್ಕೂ
ಸಂಬಂಧವಿಲ್ಲ. ಅಂಕ ಎಂಬುದು ಏನೂ ಅಲ್ಲ. ನಿಮ್ಮಲ್ಲಿರುವ ಕೌಶಲ್ಯವನ್ನು ಯಾವ
ರೀತಿಯಲ್ಲಿ ಬಳಸಿಕೊಳ್ಳುತ್ತೀರಿ ಎಂಬುದು ಬಹುಮುಖ್ಯ" ಎನ್ನುತ್ತಾರೆ. ಈ
ಮಾತುಗಳಿಗೆ ಪುರಾವೆ ಬೇಕೆನಿಸಿದರೆ, ಡಿಪಿ ಸಿಂಗ್ ನಿಮ್ಮ ಕಣ್ಣ ಮುಂದೇ
ಇದ್ದಾರೆ.
(ಮಾಯಾಂಕ್ ಸಿಂಗ್)
ಶೂನ್ಯದಿಂದ ಸಾಧನೆ ಶಿಖರಕ್ಕೆ...
ಶಾಲಾ
ದಿನಗಳಲ್ಲಿ ಶೂನ್ಯ ಸಂಪಾದನೆ ಮಾಡಿದ ವಿದ್ಯಾರ್ಥಿಗಳು ವೃತ್ತಿಜೀವನದಲ್ಲಿ
ಯಶಸ್ಸಿನ ಮೇರು ಶಿಖರವೇರಿ ಸಾಧನೆ ಮಾಡಿರುವುದಕ್ಕೆ ಇತಿಹಾಸವೇ ಉತ್ತಮ ಸಾಕ್ಷಿ ಜಗತ್ತನ್ನೇ ಮೋಡಿಗೊಳಿಸಿದ- ಬದಲಾಯಿಸಿದ ಹಲವು ವ್ಯಕ್ತಿಗಳು ತಮ್ಮ
ಶೈಕ್ಷಣಿಕ ಜೀವನದಲ್ಲಿ ಸರಾಸರಿ ವಿದ್ಯಾರ್ಥಿಗಳಷ್ಟೇ ಆಗಿದ್ದರು. ವಿದ್ಯಾರ್ಥಿ
ಜೀವನದಲ್ಲೇ ಮಹೋನ್ನತ ಸಾಧನೆ ಮಾಡಿ ಭಾರೀ ಭರವಸೆ ಮೂಡಿಸುವಂಥ ವಿದ್ಯಾರ್ಥಿಗಳು
ತಮ್ಮ ವೃತ್ತಿ ಜೀವನದಲ್ಲಿ ವಿಫಲರಾದ ಕಥೆಯನ್ನೂ ನಾವು ಕೇಳಿದ್ದೇವೆ.
ಆದರೆ ಎಡಿಸನ್ ಅವರ ಕಥೆ ಹಾಗಿಲ್ಲ. ತಮ್ಮ ಸಂಶೋಧನೆಯಿಂದ ಜಗತ್ತನ್ನೇ
ತನ್ನೆಡೆಗೆ ಸೆಳೆದ ಮಹಾನ್ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ತಮ್ಮ
ಶಿಕ್ಷಕರಿಂದ 'ಪೆದ್ದ' ಎನಿಸಿಕೊಂಡಿದ್ದರು. ಅಲ್ಲದೆ 'ಈತನಿಗೆ ಕಲಿಯುವ
ಅರ್ಹತೆಯೇ ಇಲ್ಲ' ಎಂಬ ಟೀಕೆಯನ್ನೂ ಶಿಕ್ಷಕರಿಂದ ಅವರು
ಕೇಳಿದ್ದರು.ಗುರುತ್ವಾಕರ್ಷಣೆಯ ನಿಮಯಗಳು ಹಾಗೂ ಕ್ಯಾಲ್ಕುಲಸ್ ಎಂಬ ಅದ್ಭುತ
ಸಂಶೋಧನೆಗಳ ಮೂಲಕ ಭೌತಶಾಸ್ತ್ರ ಹಾಗೂ ಗಣಿತದ ಹರಿವಿನ ದಿಕ್ಕನ್ನೇ
ಬದಲಾಯಿಸಿದ ಮೇಧಾವಿ ಐಸಾಕ್ ನ್ಯೂಟನ್. ಅವರೂ ಕೂಡ 'ಸಾಧಾರಣ ವಿದ್ಯಾರ್ಥಿ'
ಎಂಬ ಹಣೆಪಟ್ಟಿಯಿಂದ ಬಿಡುಗಡೆ ಪಡೆದಿರಲಿಲ್ಲ.
ಶಾಲಾ ದಿನಗಳಲ್ಲಿ ಅಲ್ಬರ್ಟ್ ಐನ್‌ಸ್ಟೀನ್‌ನ್ನು ಬುದ್ಧಿವಂತ ಎಂದೂ ಯಾರೂ
ಕರೆದಿದ್ದಿಲ್ಲ! ಖ್ಯಾತ ಲೇಖಕ ಎಚ್.ಜಿ. ವೆಲ್ಸ್ ಹಾಗೂ ಯಶಸ್ವಿ ಉದ್ಯಮಿ
ರಿಚರ್ಡ್ ಬ್ರಾನ್ಸನ್ ಇಬ್ಬರೂ ಅರ್ಧಕ್ಕೇ ಶಾಲೆ ಬಿಟ್ಟವರು! ಆಸ್ಕರ್
ಪುರಸ್ಕೃತ ಎ.ಆರ್. ರೆಹಮಾನ್ ಔಪಚಾರಿಕ ಶಿಕ್ಷಣ ಪಡೆದವರಲ್ಲ. ಆದರೆ
ಸಂಗೀತದೆಡೆಗಿನ ಒಲವು ಇಂದು ಅವರನ್ನು ಜನಪ್ರಿಯಗೊಳಿಸಿದೆ.
ಅಸಾಮಾನ್ಯ ವಾಣಿಜ್ಯೋದ್ಯಮಿ ಹಾಗೂ ರಿಲೈಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ
ಧೀರೂಬಾಯ್ ಅಂಬಾನಿ ಕೂಡಾ ಔಪಚಾರಿಕ ಶಿಕ್ಷಣ ಪಡೆದವರಲ್ಲ.
ವಿಮಾನ ಕಂಡು ಹಿಡಿದ ರೈಟ್ ಸಹೋದರರನ್ನು ಶೈಕ್ಷಣಿಕ ಮಾನದಂಡಗಳ ಪ್ರಕಾರ
ಸುಶಿಕ್ಷಿತರು ಎನ್ನಲು ಸಾಧ್ಯವೇ ಇಲ್ಲ!
ಸಚಿನ್
ತೆಂಡೂಲ್ಕರ್ ಹೆಸರಿಲ್ಲದಿದ್ದರೆ ಈ ಪಟ್ಟಿ ಅಪೂರ್ಣ. ಸಚಿನ್ ತಮ್ಮ ದ್ವಿತೀಯ
ಪಿಯುಸಿಯಲ್ಲಿ ಫೇಲ್ ಆಗಿದ್ದರು! ಮೈಕ್ರೋಸಾಫ್ಟ್ ಸಂಸ್ಥಾಪಕ ಹಾಗೂ ಜಗತ್ತಿನ
ಅತಿ ಶ್ರೀಮಂತ ವ್ಯಕ್ತಿ, ಬಿಲ್ ಗೇಟ್ಸ್ ಕೂಡ ಅರ್ಧಕ್ಕೇ ಶಾಲೆ ಬಿಟ್ಟವರ
ಪಟ್ಟಿಗೇ ಸೇರಿದವರು!
(ವಿಕಾಸ್ ಕುಮಾರ್)
ಕನಕ್
ಗೊಗೋಯ್
ಅನ್ವೇಷಣೆಗೆ
ಅಂಕಪಟ್ಟಿ ಅಡ್ಡಿಯಲ್ಲ!
ಕನಕ್ ಗೊಗೋಯ್ ಹೆಸರಿನ ಜೊತೆಗೆ ಅವೆಷ್ಟೋ ನೂತನ ಪ್ರಯೋಗಗಳೂ ತಳುಕು
ಹಾಕಿಕೊಂಡಿವೆ. ನೀರು ಹಾಗೂ ನೆಲದ ಮೇಲೂ ಸಾಗುವಂಥ ಏರೋಬೋಟ್ ಕನಕ್ ಗೊಗೋಯ್
ಅವರ ಕನಸಿನ ಕೂಸು. ಗುವಾಹತಿಯ ಐಐಟಿ ಈ ಪ್ರಾಜೆಕ್ಟ್‌ನ್ನು ಸ್ವೀಕರಿಸುತ್ತೇವೆ
ಎಂಬ ಭರವಸೆ ನೀಡಿದ್ದರೂ ಸದ್ಯಕ್ಕೆ ಅದನ್ನು ಮುಂದೂಡುವ ನಿರ್ಧಾರ
ತೆಗೆದುಕೊಂಡಿದೆ.
ಕಳೆದ ಅಕ್ಟೋಬರ್‌ನಲ್ಲಿ ಗೊಗೋಯ್ ಅಪಾರ ಇಂಧನ ಕ್ಷಮತೆಯುಳ್ಳ ಸಂಪೀಡಿತ
ವಾಯು ವಾಹನ (ಕಂಪ್ರೆಸ್ಡ್ ಏರ್ ವೆಹಿಕಲ್)ವನ್ನು ಸಿದ್ಧ ಪಡಿಸಿದ್ದರು. ನೂತನ
ಪ್ರಯೋಗದ ಪ್ರಾತ್ಯಕ್ಷಿಕೆಗಾಗಿ ಶಿಕಾಗೋ ವಿಶ್ವವಿದ್ಯಾಲಯ ಗೊಗೋಯ್ ಅವರನ್ನು
ಆಹ್ವಾನಿಸಿತ್ತು.
ವೆಹಿಕ್ಯುಲಾರ್ ಟ್ರಾಫಿಕ್ ಮೂಲಕ (ಸ್ಪೀಡ್ ಬ್ರೇಕರ್‌ಗಳ ಮೇಲೆ ಕಾರು
ಚಲಿಸುವ ಮೂಲಕ ವಿದ್ಯುತ್ ಉತ್ಪಾದನೆ) ವಿದ್ಯುತ್ ಉತ್ಪಾದಿಸಬಲ್ಲಂಥ ನೂತನ
ವಿಧಾನವನ್ನೂ ಆ ಪ್ರಾತ್ಯಕ್ಷಿಕೆಯಲ್ಲಿ ಗೊಗಾಯ್ ತೋರಿಸಿಕೊಟ್ಟರು.
ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧೀನದ ಡಿಕ್ಸನ್
ಆಟಮ್ಸ್ ಎಂಬ ಸಂಸ್ಥೆ ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪಿಸುವುದಕ್ಕಾಗಿ ಗೊಗಾಯ್
ಅವರಿಗೆ ಧನ ಸಹಾನ ನೀಡಿತ್ತು. ಆದರೆ 60,000 ಚದರ ಮೀಟರ್ ಜಾಗ ನೀಡಲು ಅಸ್ಸಾಂ
ಸರ್ಕಾರ ವಿಫಲವಾಗಿರುವುದರಿಂದ ಆ ಪ್ರಯೋಗಾಲಯ ಸ್ಥಾಪಿಸಲು ಸಾಧ್ಯವಾಗಲಿಲ್ಲ.
ಹಲವು ಸಮಸ್ಯೆ, ಅಡೆತಡೆಗಳ ನಡುವೆಯೂ ತಾನು ಹಿಡಿದ ಕಾರ್ಯ ಸಾಧಿಸುವ
ಎದೆಗಾರಿಕೆ- ಆತ್ಮವಿಶ್ವಾಸ ಗೊಗೋಯ್ ಅವರದ್ದು.
ಸುಲಭವಾಗಿ ಸಿಗುವ ವಸ್ತುಗಳಿಂದ ಏನಾದರೂ ನೂತನ ಪ್ರಯೋಗ ಮಾಡಬಹುದೇ ಎಂಬುದು
ಗೊಗೋಯ್ ಅವರ ಹೊಸ ಆಲೋಚನೆ.
ಹತ್ತನೇ ತರಗತಿಯಲ್ಲಿ ತೃತೀಯ ದರ್ಜೆ ಅಂಕಗಳೊಂದಿಗೆ ಪಾಸಾಗಿ, ಹರ ಸಾಹಸ
ಪಟ್ಟರೂ ದ್ವಿತೀಯ ಪಿಯುಸಿ ಉತ್ತೀರ್ಣರಾಗುವಲ್ಲಿ ಸೋತ ಬಾಲಕನೊಬ್ಬ ಇಂದು ಹಲವು
ನೂತನ ಪ್ರಯೋಗಗಳ ಹರಿಕಾರನೆನಿಸಿಕೊಂಡಿದ್ದು ಹುಬ್ಬೇರಿಸುವಂಥದ್ದೇ.
ಪಿಯುಸಿಯಲ್ಲಿ ಅನುತ್ತೀರ್ಣರಾಗಿ ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಳ್ಳುವ
ವಿದ್ಯಾರ್ಥಿಗಳಿಗೆ ಇವರು ಭರವಸೆಯ ಆಶಾಕಿರಣವಾಗಿ ಕಾಣುತ್ತಾರೆ.
"ಅಂಕಗಳು ಮುಖ್ಯವೇ ಅಲ್ಲ ಎಂದೆನ್ನಲು ಸಾಧ್ಯವಿಲ್ಲ, ಏಕೆಂದರೆ ಜೀವನದಲ್ಲಿ
ಏನಾದರೊಂದು ಸಾಧನೆ ಮಾಡಬೇಕಾದಲ್ಲಿ ಈ ಅಂಕಗಳು ಅಡಿಪಾಯವಾಗುತ್ತವೆ. ಆದರೆ
ಶೈಕ್ಷಣಿಕ ದಾಖಲೆಗಳು ವಿದ್ಯಾರ್ಥಿಯ ನಿಜವಾದ ಸೃಜನಶೀಲತೆ ಅಥವಾ ಸಾಮರ್ಥ್ಯದ
ಪ್ರತಿಬಿಂಬವಾಗಲು ಸಾಧ್ಯವಿಲ್ಲ" ಎನ್ನುತ್ತಾರೆ ಗೊಗೋಯ್.
(ಪ್ರಣಬ್ ದೇಕಾ)
ರುಚಿ
ಮುಖರ್ಜಿ
"ಅಂಕಪಟ್ಟಿ
ನಂಬಿದ್ದರೆ ಮುಸರೆ ಎತ್ತಬೇಕಿತ್ತು!"
ಸದ್ಯ ಹೋಸ್ಟನ್‌ನಲ್ಲಿ ನೆಲೆಸಿರುವ ಮೂವತ್ತೊಂದು ವರ್ಷದ ರುಚಿ ಮುಖರ್ಜಿ
'ಟಿ.ವಿ ಏಷ್ಯಾ'ದ ವರದಿಗಾರ್ತಿ. ಜೊತೆಗೆ ಸ್ವಂತ ಆನ್‌ಲೈನ್ ಮಲ್ಟಿಮೀಡಿಯಾ
ಪ್ರೊಡಕ್ಷನ್ ಕಂಪನಿಯನ್ನೂ ನಡೆಸುತ್ತಿರುವ ರುಚಿ ಮುಖರ್ಜಿ ಪಾಲಿಗೆ
ವಿದ್ಯಾರ್ಥಿ ಜೀವನ ಅಷ್ಟೇನೂ ಮಧುರವಾಗಿರಲಿಲ್ಲ. ತಾವು ಓದಿದ್ದ ಲಖನೌನ
ಪಬ್ಲಿಕ್ ಸ್ಕೂಲ್‌ನಲ್ಲಿದ್ದ ತಾರತಮ್ಯ ಮನೋಭಾವ, ವೈಯಕ್ತಿಕ ನಿಂದನೆಗಳು
ಮತ್ತು ಶಿಕ್ಷಕರಲ್ಲಿ ಮಡುಗಟ್ಟಿದ್ದ ಅಸಹನೆ ರುಚಿ ಅವರ ವಿದ್ಯಾರ್ಥಿ
ಬದುಕನ್ನು ಅಕ್ಷರಶಃ ನರಕ ಸದೃಶವನ್ನಾಗಿಸಿತ್ತು. ತಮ್ಮ ಕಹಿ ಅನುಭವ ಹಾಗೂ
ತಮ್ಮನ್ನು ಬೆಂಬಿಡದೆ ಕಾಡಿದ ಅನಾರೋಗ್ಯದಿಂದಾಗಿ ರುಚಿ ದ್ವಿತೀಯ ದರ್ಜೆ
ಪಡೆಯಲೇ ಹರಸಾಹಸಪಡಬೇಕಾಯಿತು. 10ನೇ ತರಗತಿಯಲ್ಲಿ ಶೇ.70 ಗಳಿಸಿ ಕುಟುಂಬದ,
ಸಂಬಂಧಿಕರ ಗೌರವಕ್ಕೆ ಪಾತ್ರರಾಗಿದ್ದ ರುಚಿ ಮುಖರ್ಜಿ ದ್ವಿತೀಯ ಪಿಯುಸಿ
ಅಂಕಪಟ್ಟಿಯಲ್ಲಿ ಕೇವಲ ದ್ವತೀಯ ದರ್ಜೆ ಪಡೆದ ಸಾಧಾರಣ ವಿದ್ಯಾರ್ಥಿ!
"ನಾನ್ಯಾವತ್ತೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ನನ್ನ ಶಿಕ್ಷಕರ
ಅವಗಣನೆಯ ನಡುವೆಯೂ ನನ್ನೊಳಗಿನ ಆತ್ಮವಿಶ್ವಾಸವನ್ನು ಚಿವುಟಿ ಹಾಕಲು ನಾನು
ಅವಕಾಶ ಮಾಡಿಕೊಡಲೇ ಇಲ್ಲ. ಅವರ ಮನ್ನಣೆ ಏನಿದ್ದರೂ ತರಗತಿಯಲ್ಲಿ ಉತ್ತಮ ಅಂಕ
ಪಡೆಯುವ ವಿದ್ಯಾರ್ಥಿಗಳಿಗೇ ಮೀಸಲಾಗಿತ್ತು" ಎನ್ನುವ ರುಚಿ ನಮ್ಮ ಶಿಕ್ಷಣ
ಕ್ಷೇತ್ರದ ಕ್ರೌರ್ಯಕ್ಕೆ ಕನ್ನಡಿ ಹಿಡಿಯುತ್ತಾರೆ.
ರುಚಿ 6ನೇ ತರಗತಿಯ ನಂತರ ತಮ್ಮ ಶಾಲೆಯ ಕಹಿ ಅನುಭವಗಳನ್ನು ಗುಟ್ಟಾಗಿ
ಬರೆದಿಡುವ ಹವ್ಯಾಸ ಬೆಳೆಸಿಕೊಂಡಿದ್ದರು. ಹಾಗೆ ಬರೆದಿಟ್ಟದ್ದು ಒಮ್ಮೆ ಅವರ
ಸಹೋದರಿಯ ಗಮನಕ್ಕೆ ಬಂದಿತ್ತು. ರುಚಿ ಅವರಿಗಿದ್ದ ಪ್ರತಿಭೆ ಬೆಳಕಿಗೆ
ಬಂದದ್ದೇ ಹಾಗೆ. "ನನ್ನ ಸಹೋದರಿ ನನ್ನ ಪಾಲಿನ ಸ್ಫೂರ್ತಿ ಎಂದರೆ
ತಪ್ಪಾಗಲಾರದು. ನನ್ನ ಬರವಣಿಗೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ನನ್ನ
ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು ಆಕೆಯೇ" ಎನ್ನುತ್ತಾರೆ ರುಚಿ.
ಈ ಕುರಿತು ಮಾತನಾಡುತ್ತಾ ರುಚಿ "ನಾನು ಪಡೆದ ಅಂಕಗಳೇ ಬಾಳಿಗೆ
ಬುನಾದಿಯಾಗುತ್ತವೆ ಎಂದು ಕಾದು ಕುಳಿತಿದ್ದರೆ ನಾನೀಗ ಮನೆಯಲ್ಲಿ ಅಡುಗೆ
ಮಾಡುತ್ತಾ, ಮುಸುರೆ ತಿಕ್ಕುತ್ತಾ ಅದಕ್ಕೆ ಪ್ರತಿಯಾಗಿ ಬೈಗುಳ ತಿನ್ನುತ್ತಾ
ಕಾಲ ಕಳೆಯಬೇಕಿತ್ತು" ಎಂದು ನಗುತ್ತಾರೆ.
(ಪೂಜಾ ಅವಸ್ಥಿ)
ಸುನೀಲ್
ಸಾಳ್ವೆ
ಸೋಲುಗಳ ಸರದಾರ!
ವರದಿ ಮಾಡಲೆಂದು ಭೂಪಾಲ್‌ನ ವಿಧಾನಸಭೆಗೆ ಕಾಲಿಟ್ಟಾಗ ಸುನೀಲ್ ಸಾಳ್ವೆ
ಅಕ್ಷರಶಃ ನಡುಗುತ್ತಿದ್ದರು. ವಿಧಾನಸಭೆ ಮೆಟ್ಟಿಲನ್ನು ಹತ್ತುತ್ತಿದ್ದ
ಸುನೀಲ್ ಮೇಲೆ ದೃಷ್ಟಿಬಾಣಗಳ ಸುರಿಮಳೆ. ಅದಕ್ಕೆ ತಕ್ಕಂತೆ ಸುನೀಲ್ ಎದೆ
ಬಡಿತವೂ ಹೆಚ್ಚಿತ್ತು.
ಆದರೆ, ಆತಂಕದಲ್ಲಿಯೇ ಸಾರ್ವಜನಿಕ ಸಂಪರ್ಕ ಅಧಿಕಾರಿಯ ಕೋಣೆಯೊಳಗೆ
ಕಾಲಿಟ್ಟ ಸುನೀಲ್ ಅವರ ಎದೆಬಡಿತ ಪಿಆರ್‌ಓ ಅವರ "ಪ್ಲೀಸ್ ಒಳಗೆ ಬನ್ನಿ ಸರ್"
ಧ್ವನಿ ಕೇಳಿದ ಮೇಲೆಯೇ ನಿಯಂತ್ರಣಕ್ಕೆ ಬಂದದ್ದು. ಇಂತಹ ಆತ್ಮೀಯ
ಸ್ವಾಗತವನ್ನು ಸುನೀಲ್ ಖಂಡಿತಾ ನಿರೀಕ್ಷಿಸಿರಲಿಕ್ಕಿಲ್ಲ. ಕೆಲವು ದಿನಗಳ
ಹಿಂದೆಯಷ್ಟೇ ಇದೇ ವಿಧಾನಸಭೆಯ ನಾಲ್ಕನೇ ದರ್ಜೆಯ ನೌಕರನಾಗಿ ಕೆಲಸ
ನಿರ್ವಹಿಸುತ್ತಿದ್ದ ಸುನೀಲ್‌ಗೆ ಇಂದು ಅಲ್ಲಿನ ಸಾರ್ವಜನಿಕ ಸಂಪರ್ಕ
ಅಧಿಕಾರಿಯಿಂದ ಆತ್ಮೀಯ ಸ್ವಾಗತ! ಕಸ ಗುಡಿಸುತ್ತಾ, ಮೇಜು-ಕುರ್ಚಿಗಳ ಮೇಲಿನ
ದೂಳು ಒರೆಸುತ್ತಿದ್ದ ಚಪ್ರಾಸಿ ಸುನೀಲ್ ಇಂದು 'ಹಿತವಾದ' ಎಂಬ ಪ್ರತಿಷ್ಠಿತ
ಇಂಗ್ಲಿಷ್ ಪತ್ರಿಕೆಯ ವರದಿಗಾರರಾಗಿ ಬದಲಾಗಿದ್ದರು. ಈ ಬಾರಿಯೂ ಸುನೀಲ್
ವಿಧಾನಸಭೆಗೆ ಬಂದಿದ್ದರು; ಕಸ ಗುಡಿಸಲು ಅಲ್ಲ, ಬದಲಿಗೆ ವಿಧಾನಸಭಾ
ಕಲಾಪವನ್ನು ವರದಿ ಮಾಡಲು!
ಭೂಪಾಲ್‌ನ ಬಾರ್ಖೇಡಾದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವಾಗ ಸುನೀಲ್
ಪಾಲಿಗೆ ಅವರ ಭವಿಷ್ಯ ಕೇವಲ ಕಗ್ಗತ್ತಲು. ಮನೆಯ ವಾತಾವರಣ ಓದಿಗೆ
ಪೂರಕವಾಗಿರಲಿಲ್ಲ. ಸುನೀಲ್ ಶತಪ್ರಯತ್ನ ಮಾಡಿ 8ನೇ ತರಗತಿಯನ್ನು ಪೂರೈಸಿದರು.
ರಜೆಯಲ್ಲಿ ಸುನೀಲ್ ಎಂಪಿ ನಗರದ ಹೊಟೇಲೊಂದರಲ್ಲಿ 'ಸರ್ವರ್' ಆಗಿ ಕೆಲಸ
ಮಾಡುತ್ತಿದ್ದರು. ಆ ಹೊಟೇಲ್‌ನಲ್ಲಿಯೇ ಪರಿಚಯವಾದ ನಾಸೀರ್ ಭಾಯ್ ನಂತರ
ಸುನೀಲ್ ಅವರನ್ನು ಕಟ್ಟಡ ನಿರ್ಮಾಣಕ್ಕೆ ಕೂಲಿಯಾಗಿ ಸೇರಿಸಿದರು. ಆಗ ಸುನೀಲ್
ಅವರ ಒಂದು ದಿನದ ಸಂಪಾದನೆ ಸುಮಾರು 12 ರುಪಾಯಿಗಳು! ಆದರೆ ಎಷ್ಟೇ ಕಷ್ಟ
ಬಂದರೂ ಸುನೀಲ್ ತಮ್ಮ ವಿದ್ಯಾಭ್ಯಾಸವನ್ನು ಕೈ ಬಿಟ್ಟಿರಲಿಲ್ಲ.
1990ರಲ್ಲಿ ತಮ್ಮ 10ನೇ ತರಗತಿಯ ಪರೀಕ್ಷೆಯಲ್ಲಿ ಸುನೀಲ್ ನಪಾಸಾಗಿದ್ದರು.
ಮರುಪರೀಕ್ಷೆಯಲ್ಲಿ ಇಂಗ್ಲಿಷ್ ಹಾಗೂ ಗಣಿತ ಪರೀಕ್ಷೆ ಬರೆದ ಸುನೀಲ್ ಅದರಲ್ಲಿ
ಕೊನೆಗೆ ಉತ್ತೀರ್ಣರಾದರು. ಆದರೆ, ಆಸಕ್ತಿಯ ಪಿಯುಸಿ ವಿಜ್ಞಾನ ತರಗತಿಗೆ
ಸೇರಲಾಗದೆ ಸುನೀಲ್ ಶಾಸಕರೊಬ್ಬರ ಗೆಸ್ಟ್ ಹೌಸ್ ಒಂದರಲ್ಲಿ ದಿನಗೂಲಿ
ನೌಕರನಾಗಿ ಸೇರಿಕೊಂಡರು.
ಗೆಸ್ಟ್ ಹೌಸ್‌ನಲ್ಲಿ ಕೆಲಸ ಮಾಡುತ್ತಲೇ ಸುನೀಲ್ ವಿದ್ಯಾಭ್ಯಾಸ
ಮುಂದುವರಿಸಿದ್ದರು. ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಂಡು 1996 ಮತ್ತು
97ರ ಪರೀಕ್ಷೆ ಎದುರಿಸಿದರೂ ಇಂಗ್ಲಿಷ್ ಭಾಷೆಯಲ್ಲಿ ಹಿಡಿತವಿಲ್ಲದ ಕಾರಣ
ಸುನೀಲ್ ಎರಡೂ ಬಾರಿಯೂ ಅನುತ್ತೀರ್ಣರಾದರು. ಸತತ ಸೋಲುಗಳು ಎದುರಾದರೂ ಸುನೀಲ್
ಎದೆಗುಂದಲಿಲ್ಲ. ಬಿಡುವಿನ ವೇಳೆಯಲ್ಲಿ ಜೊತೆಗಿನ ನೌಕರರು ಇಸ್ಪೀಟ್ ಆಡುತ್ತಾ
ಕಾಲ ಕಳೆದರೆ ಸುನೀಲ್ ಇಂಗ್ಲಿಷ್ ಪುಸ್ತಕ ಓದುವುದರಲ್ಲಿ
ತಲ್ಲೀನರಾಗಿರುತ್ತಿದ್ದರು. 1998ರ ಪರೀಕ್ಷೆಯಲ್ಲಿ ಶೇ.55 ಅಂಕ ಪಡೆದು
ಉತ್ತೀರ್ಣರಾಗುವುದರೊಂದಿಗೆ ಸುನೀಲ್ ಪರಿಶ್ರಮಕ್ಕೆ ಕೊನೆಗೂ ಬೆಲೆ ಸಿಕ್ಕಿತು.
ತಮಗೆ ಕಬ್ಬಿಣದ ಕಡಲೆಯಾಗಿದ್ದ ಇಂಗ್ಲಿಷ್ ಭಾಷೆಯಲ್ಲಿ ಸುನೀಲ್ ಪಡೆದಿದ್ದು
ಶೇ.70 ಅಂಕಗಳು!
ಓದುವುದನ್ನು ಬಿಟ್ಟು ಕೆಲಸದ ಕಡೆ ಗಮನ ಕೊಡುವಂತೆ ಕುಟುಂಬದವರು ಒತ್ತಡ
ಹೇರುತ್ತಲೇ ಇದ್ದರೂ ಅಂತಹ ಮಾತುಗಳಿಗೆ ಸುನೀಲ್ ಸೊಪ್ಪು ಹಾಕಲಿಲ್ಲ. ಕೆಲಸ
ಹಾಗೂ ಓದಿನ ನಡುವೆ ಸಮಯ ಹೊಂದಿಸಿಕೊಳ್ಳುತ್ತಿದ್ದ ಸುನೀಲ್ ತಮ್ಮ ಕಠಿಣ
ಪರಿಶ್ರಮದಿಂದ ಇಂದು ವೃತ್ತಿಪರ ಪತ್ರಿಕೋದ್ಯಮಿಯಾಗಿ ಹೊರಹೊಮ್ಮಿದ್ದಾರೆ.
(ರಾಜು ಕುಮಾರ್)
ಟಿಎಸ್‌ಐ
|