|
ಬಡ ರಾಷ್ಟ್ರದಿಂದ ಪ್ರಬಲ ರಾಷ್ಟ್ರವಾಗುವತ್ತ
ದಾಪುಗಾಲಿಡುತ್ತಿರುವ ಭಾರತದ ಸಾಧನೆಯ ಕುರಿತು ತಮ್ಮ ಅಭಿಪ್ರಾಯ?
ಇದು ನಿಜಕ್ಕೂ ಅತ್ಯದ್ಭುತ ಸಾಧನೆ.
ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿ ಹೇಗೆ ಒಂದಕ್ಕೊಂದು ಪೂರಕವಾಗಿ ಸಾಗಬೇಕು
ಎಂಬುದಕ್ಕೆ ಭಾರತ ಒಂದು ಮಾದರಿ. ನನ್ನ ಪ್ರಕಾರ ಭಾರತ 'ಖರೀದಿಸುವ
ಸಾಮರ್ಥ್ಯದ ಸಮತೋಲನ' (ಪಿಪಿಪಿ) ಹೊಂದಿದ ನಾಲ್ಕನೇ ಅತಿದೊಡ್ಡ ರಾಷ್ಟ್ರ.
ಜಗತ್ತು ಇಂದು ಎದುರಿಸುತ್ತಿರುವ ಬಹಳಷ್ಟು ಸಮಸ್ಯೆಗಳಿಗೆ -ಅದು
ವಾಣಿಜ್ಯವಿರಲಿ, ಅಭಿವೃದ್ಧಿ ಇರಲಿ, ಹವಾಮಾನ ಏರುಪೇರಿರಲಿ ಹಾಗೂ ಆರ್ಥಿಕ
ಸಂಗತಿಗಳೇ ಇರಲಿ- ಸೂಕ್ತ ಉತ್ತರ ಭಾರತದಲ್ಲಿದೆ.
ಭಾರತಕ್ಕೆ ಹೊರಗುತ್ತಿಗೆ ನೀಡುವ ವಿಚಾರದಲ್ಲಿ
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆತಂಕವಿದೆಯೇ?
ನನ್ನ ಪ್ರಕಾರ ಭಾರತದ ಹೊರಗುತ್ತಿಗೆ ಉದ್ಯಮ
ಜಾಗತಿಕ ವಾಣಿಜ್ಯ ವ್ಯವಸ್ಥೆಯ ಪಾಲಿಗೆ ಒದಗಿ ಬಂದ ವರದಾನ. ಬ್ರಿಟನ್ನ ಕೆಲವು
ಕಂಪನಿಗಳ ಕಾರ್ಯದಕ್ಷತೆ ಹೆಚ್ಚಿಸುವ ಹಾಗೂ ಆ ಮೂಲಕ ಯಶಸ್ವಿಯಾಗುವ
ನಿಟ್ಟಿನಲ್ಲಿ ನಾವು ಹೊರಗುತ್ತಿಗೆಯ ಸಹಕಾರ ಪಡೆಯುತ್ತಿದ್ದೇವೆ. ನಮ್ಮ
ಕಂಪನಿಗಳನ್ನು ಹೊರಗುತ್ತಿಗೆಗೆ ಸೀಮಿತಗೊಳಿಸುವ ಮೂಲಕ ಅವುಗಳ ಸಾಮರ್ಥ್ಯವನ್ನು
ಮೊಟಕುಗೊಳಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂಬುದು ನನ್ನ ಅಭಿಪ್ರಾಯ.
ಹೊರಗುತ್ತಿಗೆಯು ವ್ಯಾವಹಾರಿಕ ತಂತ್ರದ ಒಂದಂಶವಾದಾಗ ಮಾತ್ರ ಅದು ಬ್ರಿಟನ್
ಅಥವಾ ಇನ್ನಿತರ ಕಂಪನಿಗಳಿಗೆ ಲಾಭದಾಯಕವಾಗಬಲ್ಲದು. ಬ್ರಿಟನ್ನಲ್ಲಿಯೇ
ಬಹಳಷ್ಟು ದೊಡ್ಡ ಭಾರತೀಯ ಹೊರಗುತ್ತಿಗೆ ಕಂಪನಿಗಳಿವೆ. ಸ್ಕಾಟ್ಲ್ಯಾಂಡ್ನ ಅತಿ
ದೊಡ್ಡ ಖಾಸಗಿ ಸಂಸ್ಥೆ ಭಾರತೀಯ ಮೂಲದ್ದೇ.
ಜಾಗತಿಕ ಆರ್ಥಿಕ ಹಿಂಜರಿತದ ಪ್ರಸಕ್ತ ಸಂದರ್ಭದಲ್ಲಿ
ವಿದೇಶಿ ಕಂಪನಿಗಳಿಗೆ ನಿರ್ಬಂಧ ಹೇರುವ ಹಾಗೂ ಹೊರಗುತ್ತಿಗೆ ನಿಷೇಧಿಸುವ
ಒತ್ತಡದಲ್ಲಿ ಎಲ್ಲಾ ಸರ್ಕಾರಗಳೂ ಇವೆ. ಇಂಥ ಸನ್ನಿವೇಶವನ್ನು ಬ್ರಿಟನ್ ಹೇಗೆ
ಎದುರಿಸುತ್ತಿದೆ?
ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ
ಪ್ರತಿಯೊಬ್ಬರೂ ಹೊರಗುತ್ತಿಗೆ ಕುರಿತು ವಿಶೇಷ ಕಾಳಜಿ ಹೊಂದಿರುತ್ತಾರೆ.
ಸರ್ಕಾರದ ದೃಷ್ಟಿಯಲ್ಲಿ, ಕಡಿಮೆ ವೆಚ್ಚದ, ಕಡಿಮೆ ಕೌಶಲ್ಯ ಬೇಡುವ
ಕೆಲಸಗಳಿಗೋಸ್ಕರ ಸ್ಪರ್ಧಿಸುವುದು ಉತ್ತಮ ಆರ್ಥಿಕತೆಯ ಲಕ್ಷಣವಲ್ಲ. ಬ್ರಿಟಿಷ್
ಆರ್ಥಿಕತೆಯ ಭವಿಷ್ಯ ಅದರಲ್ಲಿ ಇಲ್ಲ. ಹೆಚ್ಚಿನ ಮೌಲ್ಯವುಳ್ಳ ಕಾರ್ಯ ಮಾಡುವ
ಮೂಲಕ ಮಾತ್ರ ನಾವು ಒಂದು ರಾಷ್ಟ್ರವಾಗಿ ಹಾಗೂ ಒಂದು ಆರ್ಥಿಕತೆಯಾಗಿ
ಬದುಕುಳಿಯಲು ಸಾಧ್ಯ ಎಂಬ ಅಂಶವನ್ನು ಗಮನದಲ್ಲಿಡಬೇಕು.
ಭಯೋತ್ಪಾದನೆ ವಿರೋಧಿ ಸಮರಕ್ಕೆ ದಕ್ಷಿಣ ಏಷ್ಯಾ
ಅಂತಿಮ ಕಣವಾಗಿ ಮಾರ್ಪಟ್ಟಿದೆ. ದಕ್ಷಿಣ ಏಷ್ಯಾದಲ್ಲಿ ಈಗ ಪರಸ್ಪರ
ಸಾಮ್ಯತೆಯುಳ್ಳ ಆದರೆ ವಿಭಿನ್ನ ಸ್ವರೂಪದ ಎರಡು ಸನ್ನಿವೇಶಗಳಿವೆ. ಒಂದು
ಪಾಕಿಸ್ತಾನ, ಮತ್ತೊಂದು ಶ್ರೀಲಂಕಾ. ಪಾಕಿಸ್ತಾನದ ಭಯೋತ್ಪಾದನೆ ಕುರಿತ
ಪಾಶ್ಚಾತ್ಯ ದೃಷ್ಟಿಕೋನದಲ್ಲಿ ಸಾಕಷ್ಟು ವ್ಯತ್ಯಾಸವಿದೆ ಎಂದು ನಿಮಗೆ
ಭಾಸವಾಗುವುದಿಲ್ಲವೇ?
ಭಯೋತ್ಪಾದನೆಯನ್ನು ಯಾವ ಕಾರಣಕ್ಕೂ
ಒಪ್ಪಿಕೊಳ್ಳುವಂತಿಲ್ಲ. ಯಾವ ಬೆಲೆ ತೆತ್ತಾದರೂ ಅದನ್ನು ಬಗ್ಗುಬಡಿಯಲೇ ಬೇಕು.
ಆದರೆ, ನಮ್ಮ ಗುರಿ ತಲುಪಲು ಸೂಕ್ತ ತಂತ್ರಗಾರಿಕೆಯ ಜೊತೆಗೆ ಪರಿಣಾಮಕಾರಿ
ಯೋಜನೆ ಬೇಕಾಗುತ್ತದೆ. ಶ್ರೀಲಂಕಾದ ವಾಸ್ತವಕ್ಕೂ ಪಾಕಿಸ್ತಾನದ ವಾಸ್ತವಕ್ಕೂ
ತುಂಬಾ ವ್ಯತ್ಯಾಸವಿದೆ. ಒಂದು ಕಡೆ ಸರಿ ಎನಿಸಿದ್ದು ಇನ್ನೊಂದು ಕಡೆ
ತಪ್ಪಾಗಿರುವ ಸಾಧ್ಯತೆ ಇದೆ. ಶ್ರೀಲಂಕಾದಲ್ಲಿ ನಿಮ್ಮೆದುರು ಒಂದು
ಅಲ್ಪಸಂಖ್ಯಾತ ಜನಾಂಗವಿದೆ ಮತ್ತು ಕಳೆದ ಹಲವು ದಶಕಗಳಿಂದ ಬಹುಸಂಖ್ಯಾತ
ಸಿಂಹಳೀಯರ ಜೊತೆಗಿನ ಅದರ ಬಾಂಧವ್ಯ ಅಷ್ಟೊಂದು ಮಧುರವಾಗಿಲ್ಲ. ಎಲ್ಟಿಟಿಇ
ಕಳೆದ 20 ವರ್ಷಗಳಿಂದ ತನ್ನ ಉದ್ದೇಶ ಸಾಧನೆಗೆ ಬಳಸಿದ್ದು ಕೇವಲ ಹಿಂಸಾಮಾರ್ಗ.
ಎಲ್ಟಿಟಿಇ ಸಂಘಟನೆಯನ್ನು ನಿರ್ಮೂಲನೆಗೊಳಿಸಬೇಕು ಎಂಬ ಬಗ್ಗೆ ಎರಡು ಮಾತಿಲ್ಲ.
ಶ್ರೀಲಂಕಾ ಸರ್ಕಾರದ ಕಾರ್ಯಾಚರಣೆ ಸಂದರ್ಭದಲ್ಲಿ ಸಂಭವನೀಯ ನಾಗರಿಕ ಹಾನಿಯ
ಪ್ರಮಾಣವನ್ನು ತಗ್ಗಿಸುವುದು ನಮ್ಮ ಬಹುಮುಖ್ಯ ಕಾಳಜಿಯಾಗಿತ್ತು.
ಪಾಕಿಸ್ತಾನದಲ್ಲಿ ನೆಲೆ ನಿಂತಿರುವ ಅಲ್-ಖೈದಾ ಹಾಗೂ ತಾಲಿಬಾನ್ಗಳ ವಿರುದ್ಧ
ಎಷ್ಟು ಸಾಧ್ಯವೋ ಅಷ್ಟು ಕಠಿಣ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ
ಜರ್ದಾರಿ ನೇತೃತ್ವದ ಸರ್ಕಾರದ ಮೇಲೆ ನಾವು ಒತ್ತಡ ಹೇರುತ್ತಿದ್ದೇವೆ. ಭಾರತ
ಸರ್ಕಾರದ ಆಕಾಂಕ್ಷೆ ಕೂಡ ಇದೇ ಎಂದು ನನ್ನ ಭಾವನೆ. ಪಾಕಿಸ್ತಾನಕ್ಕೆ
ಸಂಬಂಧಿಸಿದಂತೆ, ಅಲ್ಲಿನ ನಾಗರಿಕ ಸಮಾಜ ಎದುರಿಸುತ್ತಿರುವ ಭಯೋತ್ಪಾದನೆಯ
ಆತಂಕದ ಪ್ರಮಾಣ ತುಂಬಾ ಹೆಚ್ಚಿನದು. ಅದನ್ನು ನಿಗ್ರಹಿಸುವುದೂ ಕೂಡಾ ಅಷ್ಟೇ
ಕಠಿಣ.
ಸಾರ್ವತ್ರಿಕ ಚುನಾವಣೆಯ ನಂತರ ಭಾರತದಲ್ಲಿ
ಅಸ್ತಿತ್ವಕ್ಕೆ ಬಂದಿರುವ ನೂತನ ಸರ್ಕಾರದಿಂದ ನೀವು ಏನನ್ನು
ನಿರೀಕ್ಷಿಸುತ್ತೀರಿ?
ಡಾ. ಮನಮೋಹನ್ ಸಿಂಗ್ ಅವರ ನಾಯಕತ್ವದಲ್ಲಿ
ನೂತನ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು ಸಂತಸದ ವಿಚಾರ.
ಆರ್ಥಿಕತೆಯ ನಿಯಂತ್ರಿತ ಉದಾರೀಕರಣದ ಕುರಿತಾದ ಡಾ. ಮನಮೋಹನ್ ಸಿಂಗ್ ಅವರ
ದೃಷ್ಟಿಕೋನ ಇಂದಿನ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಸರಿಯಾದ ಪಥದಲ್ಲಿ
ಮುನ್ನಡೆಯುತ್ತಿದೆ. ಇನ್ನು ನಿರೀಕ್ಷೆಗಳಿಗೆ ಸಂಬಂಧಪಟ್ಟಂತೆ ಹೇಳುವುದಾದರೆ,
ನನಗನ್ನಿಸುವಂತೆ ಅವರು ಶೈಕ್ಷಣಿಕ ಕ್ಷೇತ್ರದ ಕಡೆಗೆ ಇನ್ನೂ ಹೆಚ್ಚಿನ ಗಮನ
ಹಾಗೂ ಪ್ರಾಧಾನ್ಯತೆ ನೀಡಬೇಕಾಗಿದೆ. ಏಕೆಂದರೆ ಭಾರತದ ಅತಿದೊಡ್ಡ
ಶಕ್ತಿಯೆಂದರೆ ಅದರ ಯುವಜನತೆ. ಉಳಿದ ದೇಶಗಳಿಗೆ ಹೋಲಿಸಿದರೆ ದುಡಿಯುವ
ವರ್ಗಗಳಲ್ಲೂ ಅವರ ಪ್ರಾಬಲ್ಯ ಅಧಿಕ. ಈ ಹಿನ್ನೆಲೆಯಲ್ಲಿ ಭಾರತದ ಯುವಜನತೆಗೆ
ಸೂಕ್ತ ಶೈಕ್ಷಣಿಕ ನೆರವು ದೊರೆತರೆ ಭವಿಷ್ಯದಲ್ಲಿ ಅವರು ಜಾಗತಿಕ ಮಟ್ಟದ
ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಾರೆ.
ಟಿಎಸ್‌ಐ
|