ಬಾಲ್ಯದಿಂದಲೇ
ನಟನೆಯಲ್ಲಿ ತೊಡಗಿಸಿಕೊಂಡವರು ನೀವು. ಇದು ಹೇಗೆ ಸಾಧ್ಯವಾಯಿತು?
ಅಭಿನಯದ ಆಸಕ್ತಿ ಹೇಗೆ ಬೆಳೆಯಿತು ಎಂದೇ
ನೆನಪಿರದ ಚಿಕ್ಕ ವಯಸ್ಸಿನಿಂದ ನಾನು ನಟನೆಯಲ್ಲಿ ತೊಡಗಿಸಿಕೊಂಡಿದ್ದೆ.
ನಟನಾವೃತ್ತಿ ಆರಂಭವಾದದ್ದು 'ಕಾಡು' ನಾಟಕದಿಂದ. ಆಗ ನನಗೆ 12 ವರ್ಷ. ನಂತರ
'ಮಾನು', 'ಮಲೆನಾಡಿನ ಚಿತ್ರಗಳು', 'ಹೆಜ್ಜೆಗಳು', 'ಜೇನುಗೂಡು',
'ದೊಡ್ಡಮನೆ' ಮೊದಲಾದ ಧಾರವಾಹಿಗಳಲ್ಲಿ ನಟಿಸಿದ್ದೆ. 'ಚುಕ್ಕಿ ಚಂದ್ರಮ'
ಸಿನಿಮಾದಲ್ಲಿ ನಟಿಸಿದಾಗ ನಾನು 10ನೇ ತರಗತಿಯಲ್ಲಿದ್ದೆ.
ಧಾರವಾಹಿ ಮತ್ತು ಸಿನಿಮಾದಲ್ಲಿ ಸಹನಟರಾಗಿದ್ದ
ದಿನಗಳು?
ಚೆನ್ನಾಗೇ ಇದ್ದವು. ನಾನು ಯಾವುದನ್ನೂ
ಪೂರ್ವತಯಾರಿ ಅಥವಾ ವ್ಯವಸ್ಥಿತವಾಗಿ ಮಾಡಿಲ್ಲ. ಅವಕಾಶಗಳು ಸಿಗುತ್ತಾ ಹೋದವು.
ನಾನು ನಟಿಸುತ್ತಾ ಹೋದೆ. ಈ ನಡುವೆ ಎರಡು ವರ್ಷಗಳ ಕಾಲ ಶೈಕ್ಷಣಿಕ ಬಿಡುವು
ತೆಗೆದುಕೊಂಡಿದ್ದೆ. ಕಾಲೇಜು ಓದು ಮುಗಿದ ಕೂಡಲೇ ಮತ್ತೆ ಕಿರುತೆರೆಯಲ್ಲಿ
ತೊಡಗಿಸಿಕೊಂಡೆ. ಇದೇ ಸಂದರ್ಭದಲ್ಲಿ 'ಚಂದ್ರ ಚಕೋರಿ' ಚಿತ್ರದಲ್ಲಿ ಸಹನಟನಾಗಿ
ನಟಿಸಿದೆ. 'ಆದಿ', 'ಅಯ್ಯ' ಹೀಗೆ ಇನ್ನೂ ಕೆಲವು ಚಿತ್ರಗಳಲ್ಲಿ ಸಣ್ಣ ಪುಟ್ಟ
ಪಾತ್ರ ಮಾಡಿದ್ದೆ.
ಸಿನಿಮಾ ಹೀರೋ ಆದಾಗ?
ತುಂಬಾ ಖುಷಿಯಾಗಿತ್ತು. 'ಗಿರಿ' ಚಿತ್ರದಲ್ಲಿ
ಪರಿಪೂರ್ಣ ನಾಯಕನಾದೆ. ಈ ಚಿತ್ರ ಕಮರ್ಷಿಯಲ್ ಯಶಸ್ಸು ಕಾಣದಿದ್ದರೂ ಉತ್ತಮ
ವಿಮರ್ಶೆಗಳು ದೊರೆತಿದ್ದವು.
ನಂತರ ನೀವು ನಟಿಸಿದ 'ಬೈ2' ತಮಿಳು ಚಿತ್ರದಲ್ಲಿ
'ಅಭಯ್' ಅಂತ ಹೆಸರು ಬದಲಾಯಿಸಿದ್ದಿರಿ? ಅದೃಷ್ಟದ ಹುಡುಕಾಟದಿಂದ ಹೆಸರು
ಬದಲಾಯಿಸುವುದರಲ್ಲಿ ನಂಬಿಕೆ ಇದೆಯೆ?
ಖಂಡಿತಾ ಇಲ್ಲ. ಸಂಖ್ಯಾಶಾಸ್ತ್ರ ಅಥವಾ
ಜ್ಯೋತಿಷ್ಯಾನುಸಾರ ಹೆಸರು ಬದಲಾವಣೆಯಿಂದ ಸಿನಿಮಾ ಗೆಲ್ಲಿಸಲು ಸಾಧ್ಯವಿಲ್ಲ.
ತಮಿಳಿನಲ್ಲಿ 'ಕಿಟ್ಟಿ' ಅನ್ನೋ ಹೆಸರು ಇರುವುದಿಲ್ಲ ಮತ್ತು ವಿಚಿತ್ರವಾಗಿ
ಕಾಣಿಸುತ್ತದೆ ಎಂದು ನಿರ್ದೇಶಕರು 'ಅಭಯ್' ಅಂತ ಹೆಸರು ಬದಲಾಯಿಸಿಕೊಳ್ಳುವಂತೆ
ಸೂಚಿಸಿದರು. ನಾನು ಅದಕ್ಕೆ ಒಪ್ಪಿದೆ. ನಂತರ ಆ ಹೊಸ ಹೆಸರನ್ನು
ಮುಂದುವರಿಸಲಿಲ್ಲ.
ಹಾಗಿದ್ದರೆ ನಿಮ್ಮ ನಿಜ ಹೆಸರೇನು? ಕಿಟ್ಟಿ ಅಥವಾ
ಕೃಷ್ಣ? ನಿಮ್ಮ ಹೆಸರಿನ ಮುಂದೆ ಶ್ರೀನಗರ ಹೇಗೆ ಬಂತು?
ನನ್ನ ನಿಜ ಹೆಸರು ಕೃಷ್ಣ. ಸಾಮಾನ್ಯವಾಗಿ
ಕೃಷ್ಣ ಅನ್ನೋ ಹೆಸರಿರುವವರಿಗೆಲ್ಲ ಕಿಟ್ಟಿ ಎಂದೇ ಅಡ್ಡಹೆಸರು ಇರುತ್ತದೆ.
ಹಾಗೇ ನನಗೂ ಅದೇ ಅಡ್ಡಹೆಸರು ಬಂತು. ಮನೆಯವರು, ಸ್ನೇಹಿತರೆಲ್ಲ ಕಿಟ್ಟಿ ಎಂದೇ
ಕೂಗುತ್ತಿದ್ದರು. ಹಾಗಾಗಿ ಅದೇ ಶಾಶ್ವತವಾಯಿತು. ಧಾರವಾಹಿಗಳಲ್ಲಿ
ನಟಿಸಲಾರಂಭಿಸಿದಾಗ ಆಗಲೇ ಹಲವರು 'ಕಿಟ್ಟಿ'ಗಳು ಇದ್ದರು. ಅವರ ನಡುವೆ
ನನ್ನನ್ನು ಗುರುತಿಸುವ ವಿಧಾನವಾಗಿ ನನ್ನ ಹೆಸರಿನ ಮುಂದೆ 'ಶ್ರೀನಗರ' ಬಂತು.
'ಇಂತಿ ನಿನ್ನ ಪ್ರೀತಿಯ' ಗಲ್ಲಾ ಪೆಟ್ಟಿಗೆಯಲ್ಲಿ
ಗೋತಾ ಹೊಡೆದರೂ ಉದ್ಯಮ ನಿಮ್ಮನ್ನು ಗುರುತಿಸಿತು.
ಖಂಡಿತಾ. 'ಇಂತಿ ನಿನ್ನ ಪ್ರೀತಿಯ' ಚಿತ್ರ
ನನ್ನ ಸಿನಿಮಾ ಜೀವನದ ಅತೀ ಮುಖ್ಯ ಚಿತ್ರ. ಆದರೆ ಜನರು ಈ ಕಥಾವಸ್ತುವನ್ನು
ಜೀರ್ಣಿಸಿಕೊಳ್ಳಲಿಲ್ಲ. ನಿಜ ಹೇಳಬೇಕೆಂದರೆ ನಾವು ಈ ಚಿತ್ರದಲ್ಲಿ
ತೋರಿಸಿದ್ದೆಲ್ಲವೂ ವಾಸ್ತವವೇ ಆಗಿತ್ತು. ನನಗೆ ಈ ಸಿನಿಮಾ ತುಂಬಾ
ಇಷ್ಟವಾಗಿತ್ತು.
ಕುಡಿತ ಮತ್ತು ಅದರ ಪರಿಣಾಮವೇ ಚಿತ್ರದ ತುಂಬಾ
ವ್ಯಾಪಿಸಿದ್ದು ಸರಿಯೇ?
ನಿಜ ಹೇಳಬೇಕೆಂದರೆ ವಾಸ್ತವದಲ್ಲಿ ಆಗೋದು ಅದೇ.
ಆದರೆ ಒಂದು ಸಿನಿಮಾವಾಗಿ ನೋಡಿದಾಗ ಜನ ಇಂತಹ ವಿಪರೀತಗಳನ್ನು
ಸ್ವೀಕರಿಸುವುದಿಲ್ಲ. ಹೌದು, ಕುಡಿತದ ಸನ್ನಿವೇಶಗಳು ಕಡಿಮೆ ಇರಬೇಕಿತ್ತು.
'ಇಂತಿ ನಿನ್ನ ಪ್ರೀತಿಯ' ಚಿತ್ರದಲ್ಲಿ ನಿಮ್ಮ
ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈ ಪಾತ್ರದ ನಟನೆಗಾಗಿ ನೀವು
ವಿಶೇಷ ತಯಾರಿ ಮಾಡಿಕೊಂಡಿದ್ದಿರಾ?
ಹೌದು, ಸುಮಾರು ಮೂರು ತಿಂಗಳು ಕುಡುಕರನ್ನು
ಪರಿಶೀಲಿಸಿದ್ದೆವು. ಕಲಾಸಿಪಾಳ್ಯಂನ ವೈನ್‌ಸ್ಟೋರ್‌ಗಳಿಗೆ ಹೋಗಿ ಸುಮ್ಮನೆ
ಕುಳಿತು ಅಲ್ಲಿನ ಪರಿಸರವನ್ನು ಗಮನಿಸಿದ್ದೆವು. ಕುಡುಕರ ಹಾವಭಾವಗಳು ಮತ್ತು
ನಡವಳಿಕೆಗಳನ್ನು ಅಭ್ಯಾಸ ಮಾಡಿದ್ದೆ. ಆ ಮೂಲಕ ನೈಜ ಅಭಿನಯ ನೀಡುವುದು ನನ್ನ
ಆಶಯವಾಗಿತ್ತು.
ನಂತರ ನೀವು ನಟಿಸಿದ್ದ 'ಜನುಮದ ಗೆಳತಿ' ಚಿತ್ರವೂ
ಗೆಲ್ಲಲಿಲ್ಲ. ಕಾರಣವೇನು?
ಆ ಚಿತ್ರ ಸೋತಿರೋದಿಕ್ಕೆ ನನಗೆ ಸ್ವಲ್ಪವೂ
ಬೇಜಾರಿಲ್ಲ. ಒಳ್ಳೇ ಚಿತ್ರವನ್ನು ಜನರು ಒಪ್ಪಿಕೊಳ್ಳದಿದ್ದಲ್ಲಿ
ದುಃಖವಾಗುತ್ತೆ. ಹಾಕಿದ ಶ್ರಮ ವ್ಯರ್ಥವಾಯಿತಲ್ಲ ಎಂದುಕೊಳ್ಳುತ್ತೇನೆ. ಆದರೆ
'ಜನುಮದ ಗೆಳತಿ'ಯಂತಹ ಚಿತ್ರ ಸೋತರೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.
ಹಾಗಿದ್ದರೆ ಅಂತಹ ಸಿನಿಮಾದಲ್ಲಿ ನಟಿಸುವುದೇಕೆ?
ಸಿನಿಮಾ ಒಪ್ಪಿಕೊಳ್ಳುವಾಗ ಚಿತ್ರಕಥೆ
ಕೇಳಿರುತ್ತೇವೆ. ಅದು ಚೆನ್ನಾಗಿರುತ್ತದೆ. ಆದರೆ ಸಂಭಾಷಣೆ, ತಂತ್ರಜ್ಞಾನ
ಎಲ್ಲಾ ಸೇರಿಕೊಂಡು ಅದನ್ನು ಉತ್ತಮ ಚಿತ್ರವಾಗಿ ಪ್ರಸ್ತುತ ಪಡಿಸುವುದು
ನಿರ್ದೇಶಕರ ಕೈಯಲ್ಲಿದೆ.
ಹೀಗೆ ಸಾಲು ಸಾಲಾಗಿ ಚಿತ್ರಗಳು ಸೋತು
ಹೋಗುತ್ತಿದ್ದಂತೆ ನಿಮ್ಮ ಆಯ್ಕೆ ಮತ್ತು ತಯಾರಿಯಲ್ಲಿ ಏನಾದರೂ
ಬದಲಾವಣೆಯಾಗಿದೆಯೆ?
ಹಾಗೇನೂ ಇಲ್ಲ. ನಿರ್ದೇಶಕರು ಬಂದು ಚಿತ್ರಕಥೆ
ಹೇಳುತ್ತಾರೆ. ಚೆನ್ನಾಗಿದೆ ಅಂತ ಅನಿಸಿದ್ರೆ ಒಪ್ಪಿಕೊಳ್ಳುವೆ. ಇಲ್ಲ ಅಂದರೆ
ಬದಲಾವಣೆಗೆ ಕೋರುತ್ತೇನೆ. ನಮ್ಮದೇ ತಂಡವಾಗಿದ್ದರೆ ಪರಿಚಿತ
ನಿರ್ದೇಶಕರಾಗಿದ್ದರೆ ಜೊತೆಯಲ್ಲೇ ಕುಳಿತು ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದು.
ಆದರೆ ಇತರರ ಜೊತೆ ಅದು ಸಾಧ್ಯವಿಲ್ಲ. ಈಗೀಗ ಬಂದ ಕೆಲ ಹುಡುಗರಂತೂ ತಮ್ಮ
ಚಿತ್ರಕಥೆಯಲ್ಲಿ ಸಣ್ಣ ಬದಲಾವಣೆಗೂ ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ.
ಹಾಗಿರುವಾಗ "ಆಗಲ್ಲ" ಎಂದು ಬಿಡುತ್ತೇನೆ.
'ಸವಾರಿ' ಗೆದ್ದಿದೆ? ಕೊನೆಗೂ ಒಂದು ಯಶಸ್ವೀ ಚಿತ್ರ
ಕೊಟ್ಟಿದ್ದಕ್ಕೆ ನೆಮ್ಮದಿ ಇದೆಯೆ?
ಖಂಡಿತಾ. ಇದು ನನಗೆ ತುಂಬಾ ಖುಷಿ ಕೊಟ್ಟ
ಚಿತ್ರ. ಚಿತ್ರ ಪೂರ್ಣವಾದ ಮೇಲೆ ಅದನ್ನು ನೋಡಿದಾಗಲೇ ನಮಗೆ ಅದು ಹೇಗೆ
ಬಂದಿದೆ ಎಂದು ತಿಳಿಯುವುದು. ನಾವು ನಿರ್ದೇಶಕರು ಹೇಳಿದಂತೆ ನಟಿಸಿರುತ್ತೇವೆ.
ಆದರೆ ಒಟ್ಟು ಚಿತ್ರ ಹೇಗೆ ಬಂದಿದೆ ಅಂತ ಗೊತ್ತಾಗುವುದು ಕೊನೆಯಲ್ಲಿ.
'ಸವಾರಿ' ನೋಡಿದಾಗ ನನಗೆ ತುಂಬಾ ಖುಷಿಯಾಗಿತ್ತು. ಜನರೂ ಮೆಚ್ಚಿಕೊಂಡಿದ್ದಾರೆ.
ನಿಮ್ಮ ಮತ್ತೊಂದು ಚಿತ್ರ 'ಒಲವೇ ಜೀವನ ಲೆಕ್ಕಾಚಾರ'
ಕಳೆದ ವಾರ ಬಿಡುಗಡೆಯಾಗಿದೆ. ಪ್ರತಿಕ್ರಿಯೆ ಹೇಗಿದೆ?
ಒಳ್ಳೇ ಪ್ರತಿಕ್ರಿಯೆ ಬಂದಿದೆ. ನಾಗತಿಹಳ್ಳಿ
ಚಂದ್ರಶೇಖರ್ ಮೊದಲೇ ನಮಗೆ ಮೇಷ್ಟ್ರು ಆಗಿದ್ದೋರು. ಅವರ ಜೊತೆ ಕೆಲಸ ಮಾಡಿದ
ಅನುಭವ ಸೊಗಸಾಗಿತ್ತು. ಚಿತ್ರಮಂದಿರಕ್ಕೆ ಬಂದ ಜನರಿಗೆ ಮೋಸವಾಗದು.
'ಮಳೆ ಬರಲಿ ಮಂಜು ಇರಲಿ' ಹೇಗಿದೆ? ಚಿತ್ರೀಕರಣ
ಅನುಭವ ಹೇಳಿ...
ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸಿದ್ದೆವು.
-8 ಡಿಗ್ರಿ ಸೆಲ್ಷಿಯಸ್ ವಾತಾವರಣದಲ್ಲಿ ನಾವು ಕೆಲಸ ಮಾಡಬೇಕಾಗಿತ್ತು.
ಸಿಕ್ಕಾಪಟ್ಟೆ ಚಳಿಗಾಳಿ. ಈ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಸರಳ
ಪ್ರೇಮಕಥೆಯಾಗಿದ್ದರೂ ಹಲವಾರು ತಿರುವುಗಳಿವೆ.
ಮುಂದಿನ ಚಿತ್ರಗಳು ಯಾವುವು?
ಒಂದು ಚಿತ್ರ ಅಕ್ಟೋಬರ್‌ನಲ್ಲಿ ಸೆಟ್ಟೇರಲಿದೆ.
ಮತ್ತೊಂದು ಮುಂದಿನ ವರ್ಷ ಫೆಬ್ರುವರಿಯಲ್ಲಿ ಆರಂಭವಾಗಲಿದೆ. ಬಹುಶಃ ನಾನು
ಮತ್ತೊಮ್ಮೆ ಸೂರಿ ನಿರ್ದೇಶನದಲ್ಲಿ ಅಭಿನಯಿಸುವ ಸಾಧ್ಯತೆ ಇದೆ.
ನಟನೆಯನ್ನೇ ವೃತ್ತಿಯಾಗಿಸಿಕೊಳ್ಳಲು ಕಾರಣವೇನು?
ಅಭಿನಯವನ್ನೇ ವೃತ್ತಿಯನ್ನಾಗಿಸುವ ಉದ್ದೇಶ
ಅಥವಾ ಗುರಿ ಏನೂ ನನಗಿರಲಿಲ್ಲ. ಚಿಕ್ಕಂದಿನಿಂದಲೇ ಮಾಡಿಕೊಂಡು ಬಂದ ಕೆಲಸವಿದು.
ಭವಿಷ್ಯದಲ್ಲಿ ವೃತ್ತಿ ಬದಲಾವಣೆಯ ಯೋಚನೆ ಇಲ್ಲ. ಏನಿದ್ದರೂ ಕಿರುತೆರೆ ಮತ್ತು
ಹಿರಿತೆರೆಗಳ ನಡುವೆಯೇ ಜೀವನ.
ಇಂದು ಚಿತ್ರರಂಗದಲ್ಲಿ ಸಾಕಷ್ಟು ನವನಟರಿದ್ದಾರೆ.
ಇವರ ನಡುವೆ ನಿಮ್ಮ ಸ್ಥಾನ?
ಚಿತ್ರರಂಗದಲ್ಲಿ ಹೊಸಬರಿಗೆ ಅವಕಾಶ ಸಿಗುವುದು
ಒಳ್ಳೆಯ ಬೆಳವಣಿಗೆ. ಒಳ್ಳೇ ಅನುಭವ ಹಾಗೂ ಪ್ರತಿಭೆ ಇದ್ದವರು ಬಂದರೆ
ಸಿನಿಮಾರಂಗವೂ ಬೆಳೆಯುತ್ತದೆ. ಸ್ಪರ್ಧೆಯ ಭಯ ಏನೂ ನನಗಿಲ್ಲ. ನಮ್ಮ ಕೆಲಸ
ನಾವು ಮಾಡಿಕೊಂಡು ಹೋಗೋದು ಅಷ್ಟೆ.
ಇನ್ನೂ ಪೂರ್ಣವಾಗದ ನಿಮ್ಮ ಕನಸು?
ನನಗೆ ಕನಸುಗಳೇ ಇಲ್ಲ (ನಗು). ನನಗೆ ಕನಸು
ಬಿದ್ದು ಸಾಕಷ್ಟು ದಿನಗಳಾದವು. ಒಳ್ಳೇ ಚಿತ್ರದ ಭಾಗವಾಗಿರಬೇಕು ಎನ್ನುವುದೇ
ನನ್ನ ಗುರಿ.
ಸಿನಿಮಾ ನಟನಾಗಿದ್ದರಿಂದ ಲಾಭ?
ನಾಲ್ಕು ಜನರಿಂದ ಗುರುತಿಸಿಕೊಂಡಿರೋದು.
ನಿಮ್ಮ ಅವ್ಯಕ್ತ ಭಯ?
ನನ್ನ ಹೊಸ ಚಿತ್ರ ಬಿಡುಗಡೆ ಆಗುವಾಗಲೆಲ್ಲ
ಅವ್ಯಕ್ತ ಭಯ ಕಾಡುತ್ತಿರುತ್ತದೆ.
ಚಿತ್ರೀಕರಣಕ್ಕೆ ಮುನ್ನ ಹೇಗೆ ಸಿದ್ಧರಾಗುತ್ತೀರಿ?
ಚಿತ್ರೀಕರಣಕ್ಕೆ ಮೊದಲು ನನ್ನ ಪಾತ್ರ ಮತ್ತು
ಹಾವಭಾವಗಳ ಬಗ್ಗೆ ಸಾಕಷ್ಟು ಚರ್ಚಿಸಿರುತ್ತೇವೆ. ಚಿತ್ರೀಕರಣದ ದಿನ ನೇರ
ಚಿತ್ರೀಕರಣ ಸ್ಥಳಕ್ಕೆ ಹೋಗಿ ಹೇಳಿದ ಸನ್ನಿವೇಶವನ್ನು ನಟಿಸೋದು.
ಯಶಸ್ವೀ ಚಿತ್ರತಾರೆ ಆಗಬೇಕೆಂದರೆ?
ಪ್ರತಿಭೆ ಮತ್ತು ಅದೃಷ್ಟ ಬೇಕು.
ನಿಮಗಿದೆಯೆ?
ಅದೃಷ್ಟವಿಲ್ಲದೆ ಇರುತ್ತಿದ್ದರೆ ನಾನು
ಚಿತ್ರನಟನಾಗುತ್ತಲೇ ಇರಲಿಲ್ಲ. ಹಾಗೆಯೇ ಪ್ರತಿಭೆ ಇಲ್ಲದೆ ಇರುತ್ತಿದ್ದರೆ
ನಾನು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ .
ಟಿಎಸ್‌ಐ