|

ವಿಮರ್ಶೆಯ ವಿಮರ್ಶೆ ಕಷ್ಟ. ಒಪ್ಪುವ ಅಥವಾ
ತಿರಸ್ಕರಿಸುವ ಸರಳ ಪರಾಮರ್ಶೆಯಾಗುವ ಸಾಧ್ಯತೆಗಳೇ ಹೆಚ್ಚು. ಅರ್ಥಪೂರ್ಣ
ಸಂವಾದಕ್ಕೆ, ಹೊಸ ಒಳನೋಟಗಳಿಗೆ, ಪುನರ್‌ಮೌಲ್ಯಮಾಪನಕ್ಕೆ ಪ್ರಚೋದಿಸುವಂಥ,
ಪ್ರೇರೇಪಿಸುವಂಥ ವಿಮರ್ಶೆ ವಿರಳ. ಇಂಥ ಒಂದು ವಿರಳವಾದ ವಿಮರ್ಶಾ ಸಂಕಲನ
ಟಿ.ಪಿ. ಅಶೋಕ ಅವರ 'ಸಾಹಿತ್ಯ ಸಂಬಂಧ'. ಕಳೆದ ಮೂರು ದಶಕಗಳಿಂದ ವಿಮರ್ಶೆಯ
ವ್ಯವಸಾಯದಲ್ಲಿ ತೊಡಗಿರುವ ಅಶೋಕ ಇಲ್ಲಿಯವರೆಗೆ ಹತ್ತಕ್ಕೂ ಹೆಚ್ಚು ವಿಮರ್ಶಾ
ಲೇಖನಗಳ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ 'ಸಾಹಿತ್ಯ
ಸಂಬಂಧ'ದಲ್ಲಿ ಕವಿತೆ, ಕಥೆ, ಕಾದಂಬರಿ, ನಾಟಕ, ವಿಮರ್ಶೆ-ಚಿಂತನೆ
ಶೀರ್ಷಿಕೆಗಳ ಅಡಿಯಲ್ಲಿ ಮುವತ್ತೇಳು ಲೇಖನಗಳಿವೆ.
ಸಂಕಲನದ ಹೆಸರೇ ಧ್ವನಿಪೂರ್ಣವಾದದ್ದು.
ಸಾಹಿತ್ಯ-ವಿಮರ್ಶಕ, ಕೃತಿ-ಕೃತಿಕಾರ, ಸಾಹಿತ್ಯ-ಕಲೆ, ಸಾಹಿತ್ಯ-ಓದುಗ...
ಹೀಗೆ ವಿವಿಧ ನೆಲೆಗಳಲ್ಲಿ ಶ್ಲೇಶಾರ್ಥಗಳಲ್ಲಿ ಈ ಸಂಬಂಧವನ್ನು ಶೋಧಿಸುತ್ತಾ
ವಿಮರ್ಶಕನಾದವನು ಓದುಗನ ಅಭಿರುಚಿ ರೂಪಿಸುವುದರಲ್ಲಿ, ಓದುಗ-ಸಾಹಿತ್ಯ
ಸಂಬಂಧವನ್ನು ಸ್ಥಾಪಿಸುವುದರಲ್ಲಿ, ಅನುಸಂಧಾನಕಾರನೂ ಆಗಬೇಕಾದ
ಅಗತ್ಯ-ಮಹತ್ವಗಳನ್ನೂ ಈ 'ಸಾಹಿತ್ಯ ಸಂಬಂಧ' ತನ್ನದೇ ಆದ ವಿಶಿಷ್ಟ ಕ್ರಮದಲ್ಲಿ
ಸಾದರಪಡಿಸಿದೆ.
ವಿಮರ್ಶೆ-ಚಿಂತನೆಯ ಮೊದಲ ಲೇಖನ 'ವಿಮರ್ಶೆಯ
ಕಾರ್ಯ'. ಇದರಲ್ಲಿ ವಿಮರ್ಶೆಯ ಪರಿಕಲ್ಪನೆಯನ್ನೂ ಅದರ
ಕಾರ್ಯ-ಹೊಣೆಗಾರಿಕೆಗಳನ್ನೂ ನಿರ್ಮಮಕಾರದಿಂದ ಚರ್ಚಿಸಿರುವ ಅಶೋಕ, 'ಕೃತಿಯೊಂದನ್ನು
ಅನಾವರಣಗೊಳಿಸುವುದೇ ವಿಮರ್ಶೆಯ ಮುಖ್ಯಕಾರ್ಯ' ಹಾಗೂ 'ಒಳ್ಳೆಯ ಕೃತಿಗಳ
ವ್ಯಾಪಕ ಓದು, ಚರ್ಚೆಗಳನ್ನು ಪ್ರಚೋದಿಸಬೇಕು' ಎಂದು
ಕಾರ್ಯ-ಕಾರಣ-ಸಂಬಂಧಗಳನ್ನು ಖಚಿತಗೊಳಿಸಿದ್ದಾರೆ. ಸಂಕಲನದ ಲೇಖನಗಳು ಇದೇ
ಜಾಡಿನಲ್ಲಿ ಸಾಗುತ್ತ ಕೃತಿಯೊಳಗಿನಿಂದಲೇ ಅದರ ಮೌಲ್ಯ-ನಿರ್ಣಾಯಕ
ಮಾನದಂಡಗಳನ್ನು ಗುರುತಿಸುವ ಕಾರ್ಯ ಮಾಡುವ ಮೂಲಕ ವಿಮರ್ಶೆಯ ಮತ್ತೊಂದು
ಮುಖ್ಯಾಂಶವನ್ನು ಅನಾವರಣಗೊಳಿಸುತ್ತವೆ.
ಸಾಹಿತ್ಯ ಕೃತಿಯೊಂದನ್ನು ಅದರ ಸ್ವಂತ
ನೆಲೆಯಿಂದ ಅನಾವರಣಗೊಳಿಸುತ್ತಲೇ, ಕನ್ನಡ ಹಾಗೂ ಇತರ ಭಾರತೀಯ ಭಾಷೆಗಳ
ಕೃತಿಗಳೊಂದಿಗಿನ ಅದರ ಅಂತರಪಠ್ಯೀಯ (Iಟಿಣeಡಿ ಖಿexಣuಚಿಟiಣಥಿ)
ಸಂಬಂಧಗಳನ್ನು ಎತ್ತಿ ತೋರಿಸುವ ಮೂಲಕ ಹೊಸ ಹೊಳಹುಗಳನ್ನು ಕಾಣಿಸುವುದು
ಅಶೋಕರ ವಿಮರ್ಶೆಯ ಹೊಸ ಮಾರ್ಗವಾಗಿದೆ. ಅಂತರಪಠ್ಯೀಯ ಅಧ್ಯಯನ ತೌಲನಿಕ
ವಿಮರ್ಶೆಗಿಂತ ಹೇಗೆ ಭಿನ್ನ ಎಂಬುದು ಪ್ರತ್ಯೇಕ ಚರ್ಚೆಗೆ ಅರ್ಹವಾದರೂ ಅಶೋಕರ
ಅಂತರಪಠ್ಯೀಯತೆ ಮೌಲ್ಯಮಾಪನದ ನಿಕಶವಾಗದೇ ಕೃತಿ-ಕೃತಿಕಾರ, ಸಾಹಿತ್ಯ-ಸಮಾಜ,
ಸಮುದಾಯ ಚರಿತ್ರೆಗಳ ಅಸ್ಮಿತೆಯನ್ನೂ ಪರಸ್ಪರ ಸಂಬಂಧಗಳನ್ನೂ ಶೋಧಿಸುವ ಒಂದು
ನವ ವಿಧಾನವಾಗಿದೆ. ಸ್ಮೃತಿ ಮತ್ತು ಕೃತಿ, ಆಧುನಿಕ ಕನ್ನಡ ಕಾವ್ಯದಲ್ಲಿ ನಾನು,
ಗಂಗೆಯ ಮೂರು ಪ್ರತಿಮೆಗಳು, ವಿಭಜನೆಯ ಕಥೆಗಳು, ಕುವೆಂಪು: ಆಧುನಿಕತೆಯ
ಪ್ರಶ್ನೆ, ಕೆ.ವಿ. ಸುಬ್ಬಣ್ಣ ಅವರ ಅರೆಶತಮಾನದ ಅಲೆಬರಹಗಳು... ಮುಂತಾದ
ಲೇಖನಗಳು ಅಶೋಕರ ಅನಾವರಣ ಹಾಗೂ ಅಂತರಪಠ್ಯೀಯ ವಿಮರ್ಶಾ ವಿಧಾನಕ್ಕೆ ಮಾದರಿ
ಎನ್ನಿಸುವಂಥವು. ದೇವನೂರು ಮಹಾದೇವ: ವ್ಯಕ್ತಿ ಮತ್ತು ಕೃತಿ, ಲೇಖಕ ಮತ್ತು
ಕೃತಿ ಈ ಎರಡು ಸೃಜನಶೀಲ ವ್ಯಕ್ತಿ-ಶಕ್ತಿಗಳನ್ನು ಏಕಕಾಲಕ್ಕೆ
ಅನಾವರಣಗೊಳಿಸುವ ಅತ್ಯುತ್ತಮ ಲೇಖನ.
ಆಧುನಿಕ ಕನ್ನಡ ಕಾವ್ಯದಲ್ಲಿ 'ನಾನು'
ಲೇಖನದಲ್ಲಿ, ವಿವಿಧ ನೆಲೆಗಳಲ್ಲಿ ಅಸ್ಮಿತೆಯನ್ನು ಗುರುತಿಸುವ ಪ್ರಯತ್ನವಾಗಿ
ಕುವೆಂಪು, ಬೇಂದ್ರೆ, ಶಿವರುದ್ರಪ್ಪ, ಲಕ್ಷ್ಮಣರಾವ್, ಸಿದ್ಧಲಿಂಗಯ್ಯ ಮತ್ತು
ನಿಸಾರ್ ಅಹಮದ್ ಅವರ ಕವಿತೆಗಳ ಅಂತರಪಠ್ಯೀಯ ಅಧ್ಯಯನವಿದ್ದರೆ 'ವಿಭಜನೆಯ
ಕಥೆಗಳು' ಲೇಖನದಲ್ಲಿ ಹಸನ್ ಮಾಂಟೋ, ಅಮೃತಾ ಪ್ರೀತಂ, ರಾಜೀಂದರ್ ಸಿಂಗ್ ಬೇಡಿ
ಮತ್ತು ಕನ್ನಡದ ವೈದೇಹಿಯವರ ಕಥೆಗಳ ಅಂತರಪಠ್ಯೀಯ ಸಂಬಂಧಗಳ ವಿಮರ್ಶೆ ಇದೆ. ಈ
ಕಥೆಗಳ (ಮಾಂಟೋ: ತೋಬಾ ತೇಕ್ ಸಿಂಗ್, ಅಮೃತಾ ಪ್ರೀತಂ: ಪಿಂಜರ್, ಬೇಡಿ:
ಲಾಜವಂತಿ, ವೈದೇಹಿ: ಕ್ರೌಂಚಪಕ್ಷಿಗಳು) ಅಂತರಪಠ್ಯೀಯ ಅಧ್ಯಯನ ಕ್ರಮದಲ್ಲಿ
ಅನಾವರಣಗೊಳ್ಳುವ ರಾಷ್ಟ್ರ-ಪ್ರಭುತ್ವ, ವ್ಯಕ್ತಿ-ಸಮಾಜ-ಸಮುದಾಯ ಸಂಬಂಧಗಳು,
ರಾಜಕೀಯ-ಸಮಾಜಿಕ ಅಸ್ಮಿತೆಯ ಹೋರಾಟಗಳ ವಿರಾಡ್ರೂಪ, ಸಾಧಿಸುವ ಪರಿಣಾಮ
ವಿಚಲಿತಗೊಳಿಸುವಂಥಾದ್ದು. ಲಾಜವಂತಿ-ಕ್ರೌಂಚಪಕ್ಷಿಗಳನ್ನು
ಪಕ್ಕಪಕ್ಕದಲ್ಲಿಟ್ಟು ಪರಾಮರ್ಶಿಸುವಲ್ಲಿ ವೈದೇಹಿಯವರ ಕಥೆಯ ಪುನರ್‌ಸೃಷ್ಟಿಯೇ
ಆಗಿದೆ. ಈ ಪ್ರಕ್ರಿಯೆಯಲ್ಲಿ 'ಸತ್ಯಕ್ಕಿಂತ ಮಾನವೀಯ ಅನುಕಂಪ ದೊಡ್ಡದು'
ಎನ್ನುವ ಕತೆಗಾರ್ತಿಯ ನಿರ್ಣಯವನ್ನು ಎತ್ತಿ ತೋರಿಸುವುದಷ್ಟೇ ಆಗದೆ ಕಥೆ
ಹೇಳುವುದರ ಉದ್ದೇಶ ಮತ್ತು ಓದುಗರ ಮೌಲ್ಯಪ್ರಜ್ಞೆ ಬಗ್ಗೆ ಕೆಲವು
ಪ್ರಶ್ನೆಗಳನ್ನೂ ಎತ್ತುತ್ತದೆ.
ದೇವನೂರು ಮಹಾದೇವ ಅವರನ್ನೂ ಅವರ ಕೃತಿಗಳನ್ನೂ
ಕಥಿಸುತ್ತಲೇ ದೇವನೂರರ ಸಾಹಿತ್ಯದೊಂದಿಗೆ ಸಂವಹನಕ್ಕೆ ಅಶೋಕ ಅವರು ಒಂದು
ವೇದಿಕೆಯನ್ನು ನಿರ್ಮಿಸುತ್ತಾರೆ. ಈ ವೇದಿಕೆಯಲ್ಲಿ ಲೇಖಕ-ಕೃತಿ-ಸಹೃದಯರ
ನೆಲೆಗಳಿಂದ ಸಮುದಾಯ ಜೀವನಕ್ರಮ, ಶೀಲ-ಅಶ್ಲೀಲ, ಗಂಡು-ಹೆಣ್ಣಿನ ಪ್ರೀತಿ
ಸಂಬಂಧಗಳ ಚರ್ಚೆಯಾಗುತ್ತದೆ. ಈ ಮಂಥನದಲ್ಲಿ, "ಪ್ರೀತಿಯನ್ನು ಅರ್ಥಪೂರ್ಣ
ಜನಸಂಪರ್ಕವಾಗಿ" ಕಾಣುವ ದೇವನೂರರ ಪ್ರಬುದ್ಧತೆ ಮತ್ತು ಮಾನವಲೋಕದ
ಅಸಮಾನತೆಗಳು, ಗೋಡೆಗಳು ಮತ್ತು ಅಮಾನುಷಗಳ ದರ್ಶನ ಮಾಡಿಸಿ ಓದುಗರ
ಪ್ರಜ್ಞೆಗೊಂದು ಬೆಳಕಿನ ಕಿಡಿ ಮುಡಿಸುತ್ತಾರೆ.
ಕಂಬಾರರ 'ಕರಿಮಾಯಿ' ಮುಖೇನ ಪ್ರತಿಗಾಮಿತ್ವ,
ನಟ ನಾರಾಯಣಿಯ ಕ್ರೂರತೆಗಳು, ಶ್ರೀರಂಗರ ನಾಟಕಗಳು, ಕುವೆಂಪು ಕಾದಂಬರಿಗಳ
ವಿಮರ್ಶೆಗಳು- ಇಲ್ಲಿನ ನಿಲುವುಗಳೆಲ್ಲವೂ ಸಮ್ಮತವೆನಿಸದು, ಕೆಲವು
ಪ್ರಶ್ನಾರ್ಹವಾಗಿದ್ದು ಮತ್ತಷ್ಟು 'ಸಮಗ್ರ ಎಚ್ಚರ'ದ ಅಭ್ಯಾಸಕ್ಕೆ
ಆಸ್ಪದವೀಯುತ್ತದೆ.
ಟಿಎಸ್‌ಐ
ಜಿ.ಎನ್. ರಂಗನಾಥ ರಾವ್
ಬೆಲೆ: ರೂ. 210
ಲೇ: ಟಿ.ಪಿ. ಅಶೋಕ ,ಅಕ್ಷರ ಪ್ರಕಾಶನ, ಹೆಗ್ಗೋಡು
|