|
ಜಗತ್ತು: ಸಾಂಕ್ರಮಿಕ ರೋಗ ಜಾಗತಿಕ ಮಾರಿಗೆ ಅರಿವೇ ಮದ್ದು
ಇಂದಿನ ಆಧುನಿಕ ಜಗತ್ತು ಎಂಥಾ ರೋಗವನ್ನೂ ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಹೊಂದಿರುವುದರಲ್ಲಿ ಅನುಮಾನವಿಲ್ಲ

ಜಾಗತಿಕ ಆರ್ಥಿಕ ಕುಸಿತದಿಂದಾಗಿ ಒಂದೆಡೆ ಇಡಿ ಜಗತ್ತು ಇಂದು
ಆರ್ಥಿಕ ಹಿಂಜರಿತದ ಬಿಸಿ ಅನುಭವಿಸುತ್ತಿದ್ದರೆ, ಇನ್ನೊಂದೆಡೆ ಹಂದಿಜ್ವರ ಸರ್ವವ್ಯಾಪಿ ವ್ಯಾಧಿಯಾಗಿ
ಜಗತ್ತನ್ನೇ ಕಾಡತೊಡಗಿದೆ. ಪ್ರತಿಯೊಂದು ರಾಷ್ಟ್ರದಲ್ಲೂ ಈ ರೋಗ ಹರಡಿದ್ದು, ಜನಸಾಮಾನ್ಯರು
ಕಂಗಾಲಾಗಿದ್ದಾರೆ. ಆದರೆ ಈ ಸಾಂಕ್ರಾಮಿಕ ರೋಗದಿಂದ ಪಾರಾಗಲು ಬಹುತೇಕ ರಾಷ್ಟ್ರಗಳು ಕೈಗೊಂಡ
ಪರಿಹಾರ ಕ್ರಮಗಳು ಮಾತ್ರ ವಾಸ್ತವಕ್ಕೆ ದೂರವಾದವು ಎಂಬುದು ಮಾತ್ರ ವಿಪರ್ಯಾಸ.
ಈ ವೈರುಧ್ಯತೆಗೆ ಮೊದಲ ಉದಾಹರಣೆ ಬೇರೆ ಯಾರೂ ಅಲ್ಲ, ಅಮೆರಿಕದ
ಉಪಾಧ್ಯಕ್ಷ ಜೋ ಬಿಡೆನ್. ಸುರಂಗ ಮಾರ್ಗದಲ್ಲಿ ಪ್ರಯಾಣಿಸಬೇಡಿ; ಸಾರ್ವಜನಿಕ ಸಾರಿಗೆ ಬಳಸುವುದನ್ನು
ಸ್ವಲ್ಪ ದಿನ ನಿಲ್ಲಿಸುವುದು ಒಳ್ಳೆಯದು ಎಂದು ಅವರು ತಮ್ಮ ಕುಟುಂಬದ ಮಂದಿಗೆ ಸಲಹೆ ನೀಡಿದ್ದಾಗಿ
ಘೋಷಣೆ ಮಾಡಿದ್ದರು. ಹಾಗೇ ಯುರೋಪಿಯನ್ ಒಕ್ಕೂಟದ ಆರೋಗ್ಯ ಆಯುಕ್ತ ಆಂಡ್ರೌಲಾ ವ್ಯಾಸಿಲಿಯೊ ಅವರೂ
ಮೆಕ್ಸಿಕೊ ದೇಶಕ್ಕೆ ಪ್ರಯಾಣ ಬೆಳೆಸಬೇಡಿ ಎಂದೇ ತಮ್ಮ ಜನರಿಗೆ ಸಲಹೆ ನೀಡಿದ್ದರು. ಮೇಲ್ನೋಟಕ್ಕೆ ಈ
ಎಲ್ಲಾ ಸಲಹೆ-ಸೂಚನೆಗಳು ಹಂದಿಜ್ವರ ಹರಡುವುದನ್ನು ತಪ್ಪಿಸುವಲ್ಲಿ ಪರಿಣಾಮಕಾರಿ ಪಾತ್ರವಹಿಸಲಿವೆ
ಎಂದು ಅಂದುಕೊಂಡಿದ್ದರೂ, ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಂಶೋಧನೆ ನೀಡುವ ಸ್ಪಷ್ಟನೆಯಂತೆ, ವೈರಸ್
ಇಂದು ಜಗತ್ತಿನ ಉದ್ದಗಲ ಹರಡಿರುವುದರಿಂದ ಪ್ರಯಾಣ ಮಾಡದಂತೆ ಸೂಚನೆ ನೀಡುವುದರಲ್ಲಿ ಯಾವುದೇ
ಅರ್ಥವಿಲ್ಲ. ಹಾಗೇ ಈ ರೀತಿ ನಡೆದುಕೊಳ್ಳುವುದು ಅವೈಜ್ಞಾನಿಕ ಮತ್ತು ಇಂತಹಾ ಹೇಳಿಕೆಗಳಿಂದ ಜನರಲ್ಲಿ
ಗೊಂದಲ ಉಂಟಾಗುವುದೇ ಹೊರತು ಪರಿಹಾರ ಖಂಡಿತಾ ಸಾಧ್ಯವಿಲ್ಲ.
ಅಚ್ಚರಿಯೆಂದರೆ ಫ್ರಾನ್ಸ್ ಹಾಗೂ ಜಪಾನ್ ದೇಶಗಳೂ ಈ ಮಾರ್ಗವನ್ನೇ
ಅನುಸರಿಸುತ್ತಿವೆ. ಜೊತೆಗೆ ತಮ್ಮ ದೇಶದ ಜನರಿಗೂ ವಿಮಾನದ ಮೂಲಕ ಮೆಕ್ಸಿಕೋಗೆ ಪ್ರಯಾಣಿಸಬೇಡಿ ಎಂದೇ
ಸೂಚಿಸಿವೆ. ಅಷ್ಟಕ್ಕೂ ಈ ರೀತಿ ಸಂಚಾರ ತಡೆಹಿಡಿಯುವರಿಂದ ಸಮಸ್ಯೆಗಳು ಇನ್ನಷ್ಟು ಹೆಚ್ಚುತ್ತವೆ.
ಉದಾಹರಣೆಗೆ ಅಮೆರಿಕ-ಮೆಕ್ಸಿಕೋ ಗಡಿ ಭಾಗ ಮುಚ್ಚಿದ್ದರಿಂದ ಹಲವಾರು ಅಗತ್ಯ ವಸ್ತುಗಳ ಸರಬರಾಜು
ಸ್ಥಗಿತಗೊಂಡಿತು.
ಐಎಂಎಫ್ ಪ್ರಕಾರ ಹಂದಿಜ್ವರದಿಂದ ಈಗಾಗಲೇ 3 ಟ್ರಿಲಿಯನ್ ಡಾಲರ್
ನಷ್ಟವಾಗಿದೆ! ಹಾಗೇ ಇದು ಪ್ರವಾಸೋದ್ಯಮ ಕ್ಷೇತ್ರಕ್ಕೂ ಹಾನಿಯುಂಟು ಮಾಡಿದ್ದು, ಮುಖ್ಯವಾಗಿ ಪೂರ್ವ
ಮತ್ತು ಆಗ್ನೇಯ ಏಷ್ಯಾದಲ್ಲಿ 10 ಬಿಲಿಯನ್ ಡಾಲರ್‌ನಷ್ಟು ನಷ್ಟ ಎದುರಿಸಬೇಕಾಗಿದೆ. ಆದರೆ
ತಪ್ಪುನಿರ್ಧಾರಗಳ ದುರಂತ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಇಂಡೋನೇಷಿಯ ಮತ್ತು ಚೀನಾ ರಾಷ್ಟ್ರಗಳು
ಹಂದಿ ಮಾಂಸದಿಂದ ತಯಾರಿಸಿದ ತಿನಿಸು ಮಾರಾಟಕ್ಕೆ ನಿಷೇಧ ಹೇರಿವೆ. ಆದರೆ ಹಂದಿ ಮಾಂಸದಿಂದ
ತಯಾರಿಸಿದ ಖಾದ್ಯಗಳಿಂದ ಹಂದಿ ಜ್ವರ ಹರಡುವುದಿಲ್ಲ ಎಂಬ ಜಾಗತಿಕ ಸತ್ಯ ತಿಳಿದುಕೊಂಡ ಬಳಿಕವೂ ಈ
ನಿರ್ಧಾರ ಕೈಗೊಂಡಿರುವುದಕ್ಕೆ ಏನನ್ನಬೇಕೆಂದೇ ತಿಳಿಯುತ್ತಿಲ್ಲ! ವಿಚಿತ್ರವೆಂದರೆ ಹಂದಿ ಜ್ವರ
ಈಜಿಪ್ಟ್‌ನಲ್ಲಿ ಕಾಣಿಸಿಕೊಂಡಿಲ್ಲವಾಗಿದ್ದರೂ ಅಲ್ಲಿ ಹಂದಿಗಳ ಸಾಮೂಹಿಕ ಹತ್ಯೆಗೆ ಆದೇಶ
ಹೊರಡಿಸಲಾಗಿದೆ. ಇದು ಹಂದಿ ಮಾಂಸ ಉದ್ಯಮವನ್ನೇ ನೆಚ್ಚಿಕೊಂಡಿರುವ ಈಜಿಪ್ಟ್‌ನ ಕ್ರಿಶ್ಚಿಯನ್
ಸಮುದಾಯಕ್ಕೆ ಭಾರಿ ನಷ್ಟ ಉಂಟುಮಾಡಿದೆ. ಒಟ್ಟಾರೆ ಅವರು ಸರ್ಕಾರಿ ನಿರ್ಣಯದ ವಿರುದ್ಧ
ಪ್ರತಿಭಟಿಸಿದ್ದು ಅಂತಿಮವಾಗಿ ಮಾಲೀಕರಿಗೆ ಸರ್ಕಾರ ಸಹಾಯಧನ ನೀಡಲು ಒಪ್ಪಿಗೆ ನೀಡಿದೆ.
ನಿಜ ಹೇಳಬೇಕೆಂದರೆ ಇವೆಲ್ಲದಕ್ಕೆ ಇತಿಹಾಸವೇ ಉತ್ತಮ
ಮಾರ್ಗದರ್ಶಿಯಾಗಬಹುದು. ಏಕೆಂದರೆ ಕೆಲವು ವರ್ಷಗಳ ಹಿಂದೆ ಅಂದರೆ 2003ರಲ್ಲಿ ಸಾರ್ಸ್ ರೋಗದ
ಹಾವಳಿಯಿಂದ ಜಗತ್ತು ತತ್ತರಿಸಿ ಹೋಗಿದ್ದಾಗ ಅನಗತ್ಯ ಗೊಂದಲ, ತಪ್ಪು ಮಾಹಿತಿಯಿಂದಾಗಿ ಜಾಗತಿಕ
ಆರ್ಥಿಕತೆಗೆ ಅಪಾರ ಹಾನಿಯಾಗಿತ್ತು. ಇದರಿಂದಾಗಿಯೇ ಸುಮಾರು 40ರಿಂದ 60 ಬಿಲಿಯನ್ ಡಾಲರ್ ಹಣ
ನಷ್ಟವಾಗಿದ್ದರೂ, ಇತಿಹಾಸದಿಂದ ಇವರು ಪಾಠ ಕಲಿತಂತಿಲ್ಲ. ಒಟ್ಟಾರೆ ಇಂದಿನ ಈ ಸ್ಥಿತಿಯಿಂದ
ಭಯಭೀತಗೊಂಡಿರುವ ಹಲವು ರಾಷ್ಟ್ರಗಳು ತಮ್ಮ ಗಡಿ ಭಾಗವನ್ನು ಮುಚ್ಚಿದ್ದು ವ್ಯಾಪಾರ ಸಂಬಂಧಕ್ಕೆ
ತಾತ್ಕಾಲಿಕ ರಜೆ ಘೋಷಿಸಿಬಿಟ್ಟಿದ್ದಾರೆ.
ಇಂತಹಾ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಜಾಗೃತಿ ಮೂಡಿಸುವುದೇ ಉತ್ತಮ
ಪರಿಹಾರ ಸೂತ್ರ. ಹಂದಿಜ್ವರ ನಿವಾರಣೆಗೆ ಹಲವು ರಾಷ್ಟ್ರಗಳಲ್ಲಿ ಇಂದು ಅಗತ್ಯ ಔಷಧಿಗಳು ಇದ್ದರೂ,
ಸಹಕಾರದ ಕೊರತೆಯಿಂದ ಭೀತಿ ಎದುರಿಸುತ್ತಿವೆ. ಹಾಗೇ ಸಂಕೀರ್ಣ ವಾತಾವರಣ ಹಾಗೂ ಪರಿಸರದಿಂದಾಗಿ ಹೊಸ
ಮಾದರಿಯ ರೋಗಗಳು ಆವರಿಸುವುದು ಸಹಜ. ಇದಕ್ಕಾಗಿ ಔಷಧಿಗಳನ್ನು ಕಂಡುಹಿಡಿಯಲು ಸಾಕಷ್ಟು ಸಮಯವೂ ಬೇಕು
ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ. ಹಾಗಿದ್ದರೂ ಇಂದಿನ ಆಧುನಿಕ ಜಗತ್ತು ಎಂಥಾ
ಮಹಾಮಾರಿಯನ್ನೂ ಧೈರ್ಯದಿಂದ ಎದುರಿಸುವಂಥ ಸಾಮರ್ಥ್ಯ ಹೊಂದಿರುವುದರಲ್ಲಿ ಅನುಮಾನವಿಲ್ಲ. ಹಾಗಾಗಿ
ಅಧಿಕಾರಿಗಳು ಜನರಲ್ಲಿ ಸಂಶಯ ಅಥವಾ ಗೊಂದಲ ಮೂಡಿಸುವಂಥ ಯಾವುದೇ ಹೆಜ್ಜೆ ಮುಂದಿಡದೆ ವೈಜ್ಞಾನಿಕ
ಪರಿಹಾರಗಳ ಮೂಲಕ ಕ್ರಮ ಕೈಗೊಳ್ಳಬೇಕು. ಸಾಂಕ್ರಾಮಿಕ ರೋಗಗಳು ಹರಡುವುದನ್ನು ಊಹಿಸಲು ಯಾವತ್ತೂ
ಸಾಧ್ಯವಿಲ್ಲ; ಹಾಗಾಗಿ ಜಗತ್ತು ಇಂತಹಾ ಅನಿರೀಕ್ಷಿತಗಳಿಗೇ ತಯಾರಾಗಿಯೇ ಇರಬೇಕು.
ಐಐಪಿಎಂ
'ಥಿಂಕ್ ಟ್ಯಾಂಕ್'
ಸ್ರೇ ಅಗರ್ವಾಲ್
ಅಮೆರಿಕ: ಪಕ್ಷಪಾತ
ಪಾಕ್‌ಗೆ ನೆರವು; ಲಂಕೆಗೆ ಅಡ್ಡಗಾಲು
ಭಯೋತ್ಪಾದನಾ ವಿರೋಧಿ ಸಮರದಲ್ಲಿ ದ್ವಂದ್ವ ನೀತಿ ಮುಂದುವರಿಸಿದ ಅಮೆರಿಕ

- ಶ್ರೀಲಂಕಾ ಹಾಗೂ ಪಾಕಿಸ್ತಾನಗಳು
ಸಂಘರ್ಷಪೀಡಿತ ದೇಶಗಳೇ ಆದರೂ ಅವೆರಡೂ ರಾಷ್ಟ್ರಗಳಲ್ಲಿ ನಡೆಯುತ್ತಿರುವ
ಆಂತರಿಕ ಯುದ್ಧದ ಸ್ವರೂಪದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಸ್ವಂಯಕೃತ
ಅಪರಾಧದ ಫಲ ಎನಿಸಿದ 'ತಾಲಿಬಾನ್' ಸಂಘಟನೆಯನ್ನು ನಿರ್ಮೂಲನೆ ಮಾಡಲೇಬೇಕಾದ
ಅನಿವಾರ್ಯತೆಯಲ್ಲಿ ಪಾಕಿಸ್ತಾನ ಒಲ್ಲದ ಮನಸ್ಸಿನಿಂದ ಹೆಜ್ಜೆ
ಮುಂದಿಡುತ್ತಿದೆ; ಅತ್ತ ಶ್ರೀಲಂಕಾ, ಕಳೆದ ಹಲವು ದಶಕಗಳಿಂದ ತನಗೆ
ತಲೆನೋವಾಗಿ ಪರಿಣಮಿಸಿದ್ದ 'ಎಲ್‌ಟಿಟಿಇ' ಪ್ರತ್ಯೇಕವಾದಿ ಸಂಘಟನೆಯನ್ನು
ಅಕ್ಷರಶಃ ತೊಡೆದು ಹಾಕಿದೆ. ಈ ಎರಡೂ ರಾಷ್ಟ್ರಗಳ ಅಭಿವೃದ್ಧಿಗೆ
ಭಯೋತ್ಪಾದನೆಯಿಂದ ಸಾಕಷ್ಟು ಧಕ್ಕೆಯಾಗಿದೆ ಎಂಬುದರ ಬಗ್ಗೆ ಎರಡು ಮಾತಿಲ್ಲ.
ಓಲೈಸಿಯೋ, ಕೆಲವೊಮ್ಮೆ ಬೆದರಿಸಿಯೋ ಗಣನೀಯ ಪ್ರಮಾಣದಲ್ಲಿ ಜನಸಾಮಾನ್ಯರ
ಬೆಂಬಲ ಗಳಿಸುವ ಈ ಉಗ್ರರು ಅಂತಿಮ ಹಂತದಲ್ಲಿ, ಇದೇ ಅಮಾಯಕ ಜನರನ್ನು ತಮ್ಮ
ಶತ್ರು ಪಡೆಯ ವಿರುದ್ಧ ಗುರಾಣಿಯಂತೆ ಬಳಸುವುದಕ್ಕೂ ಹೇಸುವುದಿಲ್ಲ.
- ಈ ಎರಡೂ ರಾಷ್ಟ್ರಗಳಲ್ಲಿ ಅಪಾರ ಸಂಖ್ಯೆಯ
ನಾಗರಿಕ ಹತ್ಯೆಗಳಾಗಿವೆ; ಸಾವು-ನೋವುಗಳು ನಿರಂತರವಾಗಿ ಸಂಭವಿಸಿವೆ. ಆದರೆ,
ದಾಳಿ ನಡೆಸುವ ಪ್ರದೇಶದಲ್ಲಿ ಲಕ್ಷಾಂತರ ಅಮಾಯಕ ತಮಿಳರಿದ್ದಾರೆ ಎಂಬ ಕಾರಣ
ಮುಂದೊಡ್ಡಿ ಕೂಡಲೇ ಯುದ್ಧ ಸ್ಥಗಿತಗೊಳಿಸುವಂತೆ ಅಮೆರಿಕವು ಶ್ರೀಲಂಕಾ
ಸರ್ಕಾರದ ಮೇಲೆ ಒತ್ತಡ ಹೇರುತ್ತದೆ. ಆದರೆ ಯುದ್ಧ ಭೂಮಿಯಲ್ಲಿ ಸಿಲುಕಿ
ಪ್ರಾಣ ತೆರುತ್ತಿರುವ, ಯುದ್ಧದ ಕಾರಣದಿಂದ ನೆಲೆ ಕಳೆದುಕೊಂಡ ಸ್ವಾತ್
ಪ್ರಾಂತದ ಲಕ್ಷಾಂತರ ಜನರ ಬವಣೆ ಇದೇ ಅಮೆರಿಕ ಮತ್ತು ಅಂತರ್ ರಾಷ್ಟ್ರೀಯ
ಸಮುದಾಯಕ್ಕೆ ಕಾಣುವುದಿಲ್ಲ. ಇದಕ್ಕೆ ಬದಲಾಗಿ, ಭಯೋತ್ಪಾದನಾ ವಿರೋದ್ಧದ
ಕಾರ್ಯಾಚರಣೆಗಾಗಿ ಪಾಕಿಸ್ತಾನಕ್ಕೆ ಯಾವುದೇ ಮುಜುಗರವಿಲ್ಲದೇ ಧನಸಹಾಯ,
ಸೇನಾನೆರವು ನೀಡಲಾಗುತ್ತದೆ. ಪಾಕಿಸ್ತಾನಕ್ಕೆ ಈಗಾಗಲೇ 11 ಬಿಲಿಯನ್ ಡಾಲರ್‌ಗಳಷ್ಟು
ಧನಸಹಾಯ ಹಾಗೂ ಮಿಲಿಟರಿ ಸಹಕಾರವನ್ನು ಅಮೆರಿಕ ನೀಡಿದೆ. ಇದು ಸಾಲದೆಂಬಂತೆ,
ಇತ್ತೀಚೆಗಷ್ಟೇ ಅಮೆರಿಕದಲ್ಲಿ ಮಂಡಿಸಲಾದ ಕೆರ್ರಿ-ಲುಗಾರ್ ಮಸೂದೆ
ಪಾಕಿಸ್ತಾನಕ್ಕೆ ದೊರೆಯುತ್ತಿರುವ ಆರ್ಥಿಕ ಸಹಾಯವನ್ನು ಮುಂದಿನ ದಶಕಗಳಲ್ಲಿ
೧೪.೫ ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಿಸಲು ಅವಕಾಶ ನೀಡಿದೆ. ಅದೂ ಕಳೆದ
ವರ್ಷ ಅಂತರ್ ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪಾಕಿಸ್ತಾನಕ್ಕೆ
ನೀಡಿದ 7.6 ಬಿಲಿಯನ್ ಡಾಲರ್‌ಗಳನ್ನು ಹೊರತುಪಡಿಸಿ. ಇಷ್ಟೆಲ್ಲಾ ಹಣವನ್ನು
ಬಾಚಿಕೊಳ್ಳುತ್ತಿರುವ ಪಾಕಿಸ್ತಾನ ಏನಾದರೂ ಗಮನಾರ್ಹ ಸಾಧನೆ ಮಾಡಿದೆಯೇ?
ಎಂದು ಒಮ್ಮೆ ಕಣ್ಣು ಹಾಯಿಸಿದರೆ ನಿರಾಶೆಯಾಗದೇ ಇರದು. ತಾನೇ ಸೃಷ್ಟಿಸಿದ
ಪೆಡಂಭೂತದ ಗಾತ್ರವನ್ನು ದ್ವಿಗುಣಗೊಳಿಸಿದ್ದೇ ಪಾಕಿಸ್ತಾನದ ಈವರೆಗಿನ
ಸಾಧನೆ! ಆದರೆ ಇದೇ ಅಮೆರಿಕ ಶ್ರೀಲಂಕಾ ವಿಚಾರದಲ್ಲಿ ಬೇರೆಯದೇ ನಿಲುವು
ತಾಳುತ್ತದೆ. ಯುದ್ಧದಿಂದ ಬಳಲಿರುವ ಶ್ರೀಲಂಕಾ ಅಂತರ್ ರಾಷ್ಟ್ರೀಯ ಹಣಕಾಸು
ನಿಧಿ ಎದುರು ೧.೯ ಬಿಲಿಯನ್ ಡಾಲರ್‌ಗಳಷ್ಟು ಸಾಲಕ್ಕೆ ಮನವಿ ಸಲ್ಲಿಸಿದೆ.
ಆದರೆ, ಶ್ರೀಲಂಕಾದಲ್ಲಿ ಜರುಗುತ್ತಿರುವ ಮಾನವ ಹಕ್ಕು ಉಲ್ಲಂಘನೆಯ ಕಾರಣ
ನೀಡಿ ಅಮೆರಿಕ ಹಾಗೂ ಇಂಗ್ಲೆಂಡ್‌ಗಳೆರಡೂ ಈ ಸಾಲ ಮಂಜೂರಾತಿಯನ್ನು
ವಿರೋಧಿಸಿವೆ. ಅಮೆರಿಕದ ಈ ಇಬ್ಬಗೆ ನೀತಿಗೆ ಕಾರಣಗಳೇನು? ಪಾಕಿಸ್ತಾನದ
ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ನಿರ್ಗತಿಕರಾದ ಸ್ವಾತ್ ಪ್ರಾಂತದ
ಜನತೆಯ ಪುನರ್ವಸತಿಗಾಗಿ ಸುಮಾರು ೫ ಮಿಲಿಯನ್ ಡಾಲರ್‌ಗಳ ಧನಸಹಾಯ
ದೊರೆಯುತ್ತದೆ ಎನ್ನುವುದಾದರೆ ಅಷ್ಟೇ ಪ್ರಮಾಣದ ಆರ್ಥಿಕ ಸಹಾಯ ಶ್ರೀಲಂಕಾದ
ಸಂತ್ರಸ್ತ ತಮಿಳರಿಗೆ ಏಕೆ ನೀಡಬಾರದು? ಎಲ್‌ಟಿಟಿಇ ಸಂಘಟನೆಗಿಂತ ತಾಲಿಬಾನ್
ಉಗ್ರರೇ ಹೆಚ್ಚು ಅಪಾಯಕಾರಿ ಎಂದು ಅಮೆರಿಕ ಭಾವಿಸಿದೆಯೇ? ಆ ಕಾರಣಕ್ಕಾಗಿಯೇ
ಅಭಿವೃದ್ಧಿಯ ನೆಪದಲ್ಲಿ ಪಾಕಿಸ್ತಾನಕ್ಕೆ ಹಣದ ಹೊಳೆ ಹರಿಸುತ್ತಿದೆಯೇ? ಎಲ್‌ಟಿಟಿಇ
ವಿರುದ್ಧದ ಯುದ್ಧದಲ್ಲಿ ಹಿಂದೆಂದೂ ಕಾಣದಷ್ಟು ಸಾವು-ನೋವುಗಳಿಗೆ ಶ್ರೀಲಂಕಾ
ಸಾಕ್ಷಿಯಾಗಿದ್ದು ನಿಜ. ಆದರೆ, ಇದಕ್ಕಿಂತ ದುಪ್ಪಟ್ಟು ಸಾವು-ನೋವುಗಳಿಗೆ
ಕಾರಣವಾದ ಇರಾಕ್, ಯುಗೋಸ್ಲಾವಿಯಾ ಹಾಗೂ ಅಫ್ಘಾನಿಸ್ತಾನ ಯುದ್ಧಗಳಿಗೆ
ವೇದಿಕೆ ಸಜ್ಜುಗೊಳಿಸಿದ್ದೇ ಪಾಶ್ಚಾತ್ಯ ರಾಷ್ಟ್ರಗಳು. ಆ ರಾಷ್ಟ್ರಗಳಿಗೆ
ಶ್ರೀಲಂಕಾದ ಹಾನಿ ಕುರಿತು ಕಾಳಜಿ ವ್ಯಕ್ತಪಡಿಸುವ ನೈತಿಕತೆಯಾದರೂ ಎಲ್ಲಿದೆ?
ಶ್ರೀಲಂಕಾ ಹಾಗೂ ಎಲ್‌ಟಿಟಿಇ ನಡುವಿನ ಸಂಘರ್ಷ ಅಲ್ಲಿನ ಆರ್ಥಿಕತೆಯನ್ನು
ಸರ್ವನಾಶದಂಚಿಗೆ ದೂಡಿದೆ. ಒಂದು ವೇಳೆ ಶ್ರೀಲಂಕಾಕ್ಕೆ ಅಗತ್ಯವಾದ
ಸಾಲವನ್ನು ಐಎಂಎಫ್ ತಡೆಹಿಡಿದರೆ, ನಿರಾಶ್ರಿತರಿಗೆ ಸೂಕ್ತ ಪುನರ್ವಸತಿ
ಕಲ್ಪಿಸದಿರಲು ಶ್ರೀಲಂಕಾ ಸರ್ಕಾರಕ್ಕೆ ಉತ್ತಮ ಕಾರಣ ಸಿಕ್ಕಿದಂತಾಗುತ್ತದೆ.
ಅಮೆರಿಕ ಭವಿಷ್ಯದಲ್ಲಿ ಇದೇ ಬಗೆಯ ಪಕ್ಷಪಾತ ಧೋರಣೆ ಮುಂದುವರಿಸಿಕೊಂಡು
ಬಂದರೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ 'ಭಯೋತ್ಪಾದನೆ ವಿರುದ್ಧದ
ಯುದ್ಧ' ತನ್ನ ಅರ್ಥ ಕಳೆದುಕೊಳ್ಳಲಿದೆ. ಮಾತ್ರವಲ್ಲ, ಪ್ರಭಾಕರನ್ ಹಾಗೂ
ಮುಲ್ಲಾ ಒಮರ್ ತರಹದ ಭಯೋತ್ಪಾದಕರಿಗೆ ಅನಾಯಾಸವಾಗಿ 'ಆದರ್ಶ ವ್ಯಕ್ತಿ'ಗಳ
ಪಟ್ಟ ದೊರೆಯುತ್ತದೆ.
ಐಐಪಿಎಂ
'ಥಿಂಕ್ ಟ್ಯಾಂಕ್'
ಪಥಿಕೃತ್ ಪಾಯ್ನೆ
|